ಊರಾಚೆ ಪಡಕಾನೆ ಇಟ್ಟೌನೆ ಮುನಿಯ-
ಬಲ್ ಜಿಪ್ಣ ಪಡಕಾನೆ ಯೆಜಮಾನ ಮುನಿಯ.
ಮನೇ ತಾಕ್ ಯಾರೋದ್ರು ಬೆದರ್‍ತಾನಾ ಮುನಿಯ-
ಯಾರ್ ಬಿಕ್ಸೆ ಬೇಡ್ತಾರ್ ಅಂತ್ ಎದರ್‍ತಾನಾ ಮುನಿಯ-
ಊರಾಚೆ ಪಡಕಾನೆ ಯೆಜಮಾನ ಮುನಿಯ-
ನಂ ಮುನಿಯ! ನಂ ಮುನಿಯ! ಜಿಪ್ಣ ನಂ ಮುನಿಯ! ೧
ಮನೇ ತಾಕ್ ಯಾರ್ ಬರ್‍ಲಿ ಕೂಗ್ತಾನ್ ಔನ್ ಕಿರ್‍ಲಿ-
ಬಂದೋರ್‍ಗೆ ಕೇಳೋಹಂಗ್ ಕೂಗ್ತಾನ್ ಆ ಮುನಿಯ
ಮನೆಯೋರ್‍ನ ಬೊಯ್ಯೋ ಹಂಗ್ ಕೂಗ್ತಾನ್ ಆ ಮುನಿಯ:
‘ಬೋರಯ್ಯ ತಂದ್ ಕೊಟ್ಟ ತಕೊಂಡೋದ್ ನೂರ?
ಮನೇಗ್ ಬೇರ್ ಆಕ್ಬೇಕಿನ್ ಮಂಗ್ಳೂರೆಂಚ್ ಸೂರ!
ತಕ್ಕೊಂಡೋದ್ ಮಕ್ಳಿನ್ನಾ ಬಡ್ಡಿ ಕೊಡ್ದಿರ್‍ಲಿ-
ಉಪ್ಗೂನೆ ವುಳಿಗೂನೆ ಕಾಸ್ ಎಲ್ಲಿಂದ್ ತರ್‍ಲಿ?
ಪರಪಂಚ ಕೆಟ್ಟೋಯ್ತು -ಬಲ್ ಪೂರ ಓಯ್ತು-
ಇಂಗಿದ್ರೆ ನಾವೆಲ್ಲ ಬಾಳ್ ಬದಕಿದಂಗಾಯ್ತು!
ತಕ್ಕೊಂಡೋರ್ ತಕ್ಕೊಂಡಂಗ್ ತಿನ್ಕಂಡ್ ಓಗ್ತಿರ್‍ಲಿ-
ಗಂಟ್ಟೆಲ್ಲ ಕಟ್ಟೋಯ್ತು ಇವ್ರತ್ರ ವೊರ್‍ಲಿ!
ಕಟ್ಬೇಕ್ ಇನ್ ಮಂಡೀಗೆ ಸಾವರದೆಂಟ್ ನೂರು!
ಮತ್ಬೇರೆ ಬ್ಯಾಂಕ್ಗಿನ್ನು ಎರಡ್ಸಾವರದ್ ನೂರು!
ಎಲ್ಲಿಂದ ತರಬೇಕೋ ದೇವರ್‍ಗೇ ಬೆಳಕು!
ಮಿಕ್ಕೋರೀಗ್ ಏನ್ ಗೊತ್ತು ಈ ಚೋಳಿನ್ ಚಳಕು!
ಕೇಳ್ದೋರಿಗ್ ಕೊಟ್ತಂದ್ರೆ ಅಸಲೇನೆ ಸ್ವಾಆ!
ಇನ್ನಾರನ್ ಕೇಳ್ಬೇಕೊ ಬಡ್ಡಿ? ಹ್ಹ್! ಹ್ಹ್! ಹ್ಹ್!
ತಕ್ಕೊಂಡೋರ್ ತೆರದಿರ್‍ಲಿ ಬೇಗ್ಬೇಗ ತಂದು
ಸತ್ತಾರ ವೋಯ್ತೀನಿ ವಿಸಗಿಸ ತಿಂದು! ೨
ಯೆಂಡದಂಗಡಿ ಮುನ್ಯಣ್ಣ! ಪಡಕಾನೆ ಮುನ್ಯ!
ಏನ್ ಏಳ್ಲಿ ನೀ ಕೊಡ್ಸೋ ಬಲ್ಬಲೆ ಪುನ್ಯ!
ಬೇಡಿದೋರ್‍ಗೆ ನೀಡ್ದಿದ್ರೆ ಪಾಪಾಂತ್ ಅಂದ್ರೆ
ಬೇಡೋಕ್ಕೂ ಮುಂಚೇನೆ ಬಾಕ್ಲ್ ಇಕ್ತ ಬಂದ್ರೆ
ಏನ್ ಏಳ್ಲಿ ಮುನ್ಯಣ್ಣ ನೀ ಕೊಡ್ಸೊ ಪುನ್ಯ!
ಜಿಪುಣಾಂದ್ರೆ ನಿನ್ ಬಿಟ್ರೆ ಬೇರಿಲ್ಲ ಮುನ್ಯ! ೩
*****