Home / ಕವನ / ಕವಿತೆ / ನಾವಿದ್ದೇವೆಲ್ಲ ಯಾಕೆ?

ನಾವಿದ್ದೇವೆಲ್ಲ ಯಾಕೆ?

ಚಿತ್ರ: ವಿಕಿ ಇಮೇಜಸ್
ಚಿತ್ರ: ವಿಕಿ ಇಮೇಜಸ್

ಸತ್ತ ದನವ ತಿಂದೂ ತಿಂದೂ
ನಾವಿನ್ನೂ ಸತ್ತಿಲ್ಲವಲ್ಲ ಯಾಕೆ?
ಯುಗಯುಗಗಳಿಂದಾ ಪಾಂಡವರಂತೇ…
ಹಗೆಗಳಾಗಿ, ಬದುಕಿದ್ದೇವೆಲ್ಲ ಯಾಕೆ?
*

ಹೊಲೆಗೇರಿಲಿದ್ದು,
ಯುಗಯುಗಗಳಿಂದಾ
ಸತ್ತ ದನವೇ ನಮಗಾಯಿತಲ್ಲ ಯಾಕೆ?
ಕರೆಬಾನಿಲಿ ಮುಳುಗೆದ್ದರೂ,
ಇವ್ರಿನ್ನು ಸತ್ತಿಲ್ಲವಲ್ಲ ಯಾಕೇ?
*

ಊರ ಹೊರಗಟ್ಟಿದರೂ
ಸತ್ತ ದನವ ತಿನ್ನಲಿಟ್ಟರೂ
ನಮ್ಮ ಮನೆ, ಮಠಗಳಿಗೆ ಬೆಂಕಿಟ್ಟರೂ…
ನಮ್ಮ ಬಗ್ಗೆ, ಪ್ರೀತಿ ಬುಗ್ಗೆ, ಬತ್ತಿಲ್ಲವಲ್ಲ ಯಾಕೇ??
*

ಇಶ್ಟೊಂದು ವರ್ಷದಿ,
ಎಶ್ಟೊಂದು ಹರ್ಷದಿ,
ಈ ನಿಮ್ಮ ಕೂಡಿ, ಕಿತ್ತಾಡಿ, ಜೈಲು ಕಂಡರೂ…
ಇನ್ನು ಜೊತೆಗಿದ್ದೇವೆಲ್ಲ ಯಾಕೇ??
*

ಒಂಭತ್ತು ತಿಂಗಳು ಹೊತ್ತು,
ಕಡುಕಶ್ಟದಲಿ ಹೆತ್ತು,
ಹೊಟ್ಟೆ, ಬಟ್ಟೆ, ನೆತ್ತಿ ಕಟ್ಟಿ,
ವಿದ್ಯೆ, ಬುದ್ಧಿ ಕಲಿಸಿ,
ಓಟು ಹಾಕಿ – ನಿಮ್ಮನ್ನೆಲ್ಲ ಸಾಕಿ, ಸಲ್ವಿ,
ಮಂತ್ರಿ ಮಾಡಿದ್ದೇವಲ್ಲ ಯಾಕೇ??
*

ಈ ಮನೆ, ಮಠಗಳ
ಈ ಕೋಟೆ ಕೊತ್ತಲಗಳ
ಈ ಗುಡಿ ಗೋಪುರಗಳ
ಈ ಕೆರೆ, ಕುಂಟೆ, ಕಾಲುವೆ, ಡ್ಯಾಮುಗಳ ಕಟ್ಟಿ… ಕಟ್ಟಿ…
ಇನ್ನು ಹೊಲೆಮಾದಿಗರಾಗಿ,
ಉಳಿದಿವಲ್ಲ ಯಾಕೇ??
*

ಈ ನಿಮ್ಮ ಮಕ್ಕಳು, ಮೊಮ್ಮಕ್ಕಳನು ಎತ್ತಿ ಮುದ್ದಾಡಿ,
ಈ ನಿಮ್ಮ ಹೊಲ, ಗದ್ದೆ, ತೋಟಗಳನು ಉತ್ತಿ, ಭಿತ್ತಿ ಕಣಗಳ ಮಾಡಿ,
ಧವಸ, ಧಾನ್ಯಗಳ ಕೇರಿ, ತೂರಿ, ಹಸನು ಮಾಡಿ,
ಮೂಟೆ, ಮೂಟೆ, ಕಾಳು, ಕಡಿಗಳ ಹೊತ್ತು,
ಗುಮ್ಮೆ, ಗರ್ಸೆ, ಟಿಕ್ಕೆ, ಕಣಜಗಳ ತುಂಬಿದೆವಲ್ಲ ಯಾಕೇ?
*

ಏನೆಲ್ಲ ಬಹಿಷ್ಕಾರಗಳ ಮಧ್ಯೆ-
ಈ ನಮ್ಮ ನಾಡು, ನುಡಿ, ಸಂಸ್ಕೃತಿಯ ಉಳಿಸಿ, ಬೆಳೆಸಿದ್ದು ಯಾಕೇ?
ಈ ಗಿಡ, ಮರ, ಬಳ್ಳಿ, ಹಣ್ಣು, ಹೂವು, ವಂಶ, ಊರು ಬೆಳೆಸಿದ್ದು ಯಾಕೇ??
ನಿಮ್ಮೊಂದಿಗೆ ಕೂಡಿ ಬಾಳುವ ಹಂಬಲ,
ನಿಮ್ಮಂತಾಗಲು ಹೋಗಿ, ಹೋಗಿ,
ಇನ್ನು ಇಲ್ಲೇ ಹೊಲೆಗೇರಿಲಿದ್ದೇವೆಲ್ಲ ಯಾಕೆ?!
*

ಏನೆಲ್ಲ ಕಟ್ಟಿ, ಬೆಳೆಸಿ, ಉಳಿಸಿದ ನಾವು-
ಈಗ ಈ ಊರುಕೇರಿಯನು ಒಂದು ಮಾಡಿ,
ಮುರಿದ ಮನೆ, ಮನಗಳ, ಹಸನಾಗಿ, ಹೊಸದಾಗಿ,
ಮತ್ತೆ ಮತ್ತೆ ಕಟ್ಟಬಲ್ಲೆವೆಂಬಾ ಕೆಚ್ಚು, ಸಾಹಸ, ನಮ್ಮಲಿದೆಯಲ್ಲ ಯಾಕೇ??
ಈ ಹಳೇ ಸೂರ್‍ಯ, ಚಂದ್ರ, ನಕ್ಷತ್ರ ರಾಶಿಗಳನ್ನೆಲ್ಲ…
ಗುಡಿಸಿ, ಕುಪ್ಪೆ ಮಾಡಿ, ‘ಮಾದ್ಗಿಂಟ್ಲಿ’ ಕಟ್ಟಬಲ್ಲೆವು!!
ಈ ಭೂಮಿ, ಆಕಾಶದ ತುಂಬೆಲ್ಲ, ಹೊಸ ದೀಪಗಳ ಹಚ್ಚಬಲ್ಲೆವು!
*

‘ಯಾರಂದರು ನಮಗೆ? ನಾವಿಲ್ಲವೆಂದು?
ಸತ್ತ ದನವ ತಿಂದು ತಿಂದೂ…
ಎಂದೋ… ಸತ್ತಿರುವೆವೆಂದೂ…’
‘ಈ ನಮ್ಮ ಹೊಲಗೇರಿಲಿಂದು…
ಹಂದಿ, ನಾಯಿ, ಕತ್ತೆ, ಕುದುರೆ, ಇಲಿ, ಹೆಗ್ಗಣ, ನೊಣಗಳಂತೇ…
ಸತ್ತು ಸತ್ತು… ಬಿದ್ದಿರುವೆವೆಂದೂ…’
*

ಈಗೀಗ-ಸತ್ತ ದನವ ತಿನ್ನುವುದು ಕೈಬಿಟ್ಟು,
ಹೊಲೆಗೇರಿಲಿ… ಬದುಕುವುದಾ ಬಿಟ್ಟು,
ನಿಮ್ಮಕ್ಕ ಪಕ್ಕದಲ್ಲೇ ಬದುಕುವುದ ಕಲಿತ್ತಿದ್ದೇವೆ!
ಈಗೀಗ ಜಾತಿ, ಭೇದ ಮಾಡುವರನ್ನು, ಹುಡುಕುತ್ತಿದ್ದೇವೆ!
ನವರಂಧ್ರಗಳಿಗೆ, ಕೆತ್ತಿಕೆತ್ತಿ… ಬಗಣೆಗೂಟಗಳ ಬಡಿಯಲು,
ನಾವಿದ್ದೇವಲ್ಲ ಸಾಕೇ??
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...