Home / ಕವನ / ಕವಿತೆ / ವಿಧವೆಯ ತುಳಸೀ ಪೂಜೆ

ವಿಧವೆಯ ತುಳಸೀ ಪೂಜೆ

ಗದಗು
ತಾ|| ೨೫-೧೦-೧೯೩೫

ಶ್ರೀಕಾಂತ

ಎಂದೂ ಇಲ್ಲದೆ ಅಕಸ್ಮಿಕವಾಗಿ ನಾನಿಂದು ಓಲೆ ಬರೆಯುತ್ತಿರುವದನ್ನು ಕಂಡು ನಿನಗೆ ಸೋಜಿಗವಾಗಬಹುದು; ಎಂದು ನಿನಗನಿಸಬಹುದು. ಗೆಳೆಯಾ ಹಾಗೆ ಭಾವಿಸಬೇಡ ನೀನು ವಿಧವಾ ವಿವಾಹವನ್ನು ಮಾಡಿಕೊಂಡೆಯೆಂದು ನಾನು ನಿನ್ನಗೆಳೆತನವನ್ನು ಹರಿದು ಕೊಂಡೆ. ಕಂಡ ಕಂಡವವರೆದುರಿನಲ್ಲಿ “ಶ್ರೀಕಾಂತ ಧರ್‍ಮವನ್ನು ಹಾಳು ಮಾಡಿದ. ಬ್ರಾಹ್ಮಣ ಸಮಾಜಕ್ಕೆ ಕಲಂಕವನ್ನು ತಂದ” ಎಂದು ಕಿರುಚಿ ಕೊಂಡೆ. ಶಾಸ್ತ್ರದ ಗಂಧ ಕೂಡ ಗೊತ್ತಿಲ್ಲದೆ. “ಶಾಸ್ತ್ರ-ಶಾಸ್ತ್ರ ವೆಂದು ಬೊಗಳಿ ಅಡುಗುಲಜ್ಜಿಯರ ಕಡೆಯಿಂದ ನಮ್ಮ ಕಿಟ್ಟೂ ಬಲು ಧರ್‍ಮಿಷ್ಟ ನೋಡಿರೆ” ಎಂದೆನಿಸಿಕೊಂಡ ಉತ್ತರ ಕುಮಾರನು ನಾನು! ಕಿಟ್ಟೂ ನಾನೆಷ್ಟು ಸಂಭಾವಿತನೆಂಬುದು ನಿನ್ನಾಕೆಗೆ ಗೊತ್ತುಂಟು. ನಿನ್ನ ಮದುವೆ ಇನ್ನೂ ಆಗಿರಲಿಲ್ಲ. ಆಗೊಂದು ದಿನ ಓಣಿಯಲ್ಲಿ ಹಾಯ್ದು ಹೋಗುವಾಗ ನಿನ್ನಾಕೆ ಒಬ್ಬಳೇ ಇರುವದನ್ನು ಕಂಡು ಭಾರೀ ಕೆಮ್ಮು ಬಂದವರ ಹಾಗೆ ಕೆಮ್ಮಿದನ್ನು ಅವಳು ನಿನಗೆ ಹೇಳದೆ ಇರಲಿಕ್ಕಿಲ್ಲ. ನಾನು ಇದುವರೆಗೆ ಬೂದಿಮುಚ್ಚಿದ ಕೆಂಡದ ಹಾಗೆ ಒಳಗಿಂದೊಳಗೆ ಎಷ್ಟು ಘಾತಕಿಯಾಗಿದ್ದೇನೋ ದೇವರೇ ಬಲ್ಲ. ಆದ್ದರಿಂದ ಗೆಳೆಯಾ ಬುದ್ಧಿ ಬಂದಿದೆ. ಸುಧಾರಣೆಯ ಅವಶ್ಯವಾಗಿದೆಯೆಂದು ತೋರುತ್ತಿದೆ. ನಿನ್ನನ್ನು ದುರಭಿಮಾನದಿಂದೆ ತಿರಸ್ಕರಿಸಿದುದಕ್ಕಾಗಿ ನಿನ್ನಲ್ಲಿ ಕ್ಷಮೆಯನ್ನು ಯಾಚಿಸಬೇಕೆನ್ನುತ್ತಿದ್ದೇನೆ. ನನ್ನ ಇಚ್ಛೆಯನ್ನು ಪೂರ್‍ತಿಗೊಳಿಸುವಿಯಷ್ಟೇ? ಬುದ್ಧಿ ಬಂದುದಕ್ಕೆ ಪ್ರಮಾಣವೆಂದರೆ, ದೀಪಾವಳಿಯ ಉಡುಗೋರೆಯೆಂದು ಕಳಿಸಿದ ಈ ಚಿತ್ರ! ನಮ್ಮ ನೆರೆಮನೆಯ ನರ್‍ಮದಾಬಾಯೀ ಗಂಡ ತೀರಿಕೊಂಡದ್ದು ನಿನಗೆ ಗೊತ್ತಿರಲಿಕ್ಕಿಲ್ಲ. ಇಲ್ಲಿಯ ಸುದ್ದಿ ಗೊತ್ತಾಗುವ ಬಗೆಯಾದರೂ ಯೇನು? ಅವಳ ಗಂಡ ತೀರಿಕೊಂಡು ಮೂರು ವರ್‍ಷಗಳಾದವು. ಪಾಪ ಸಾತ್ವಿಕಳು. ಓದುಬರಹ ಕಲಿತ ಹುಡಿಗೆ ಕೇಶಮುಂಡನಕ್ಕೆ ಒಪ್ಪದ್ದರಿಂದ ಅತ್ತೆಯ ಮನೆಯವರು ಹೊರಗೆ ಹಾಕಿದ್ದಾರೆ. ಸಕೇಸಿಯರೆಂದರೆ ಅಪವಿತ್ರರೆಂದು ನಮ್ಮವರ ಭಾವನೆ. ಕೇಶಮುಂಡನ ಮಾಡಿಸುವದೆಂದರೆ ಪಾಪಾಚರಣೆ ಮಾಡಲು ಲಾಯಸೆನ್ಸ ಕೊಟ್ಟ ಹಾಗೆಯೋ ಏನೊ? ನಾನು ಕಾಣೆ ಇದೇ ನೋಡು ಸಕೇಶಿಯನ್ನು ಅಸ್ಪೃಶ್ಯಳಂತೆ ಭಾವಿಸುವ ಅವರ ಅತ್ತೆಯ ಮನೆಯಲ್ಲಿ ಅವರಜ್ಜನ ಶ್ರಾದ್ಧದ ದಿವಸ ಹುಲಕೋಟಿಯ ಗೋದಾವರಿಯನ್ನು ಅಡಿಗೆಗೆ ಕರಿಸಿದ್ದರು. ಹಾಯ್‌… ಹಾಯ್‌… ಅವಳು ಪಂಢರಪುರಕ್ಕೆ ಹೋಗಿ ನಾಲ್ಕು ಸಲ ಗುಪ್ತವಾಗಿ ದೇವರಿಗೆ ಶಿಶು ದಾನ…ಮಾಡಿಬಂದ ಸಂಗತಿ ಇಡೀ ಊರಿಗೆಲ್ಲ ಗೊತ್ತು! ಅದೆಕೇನು ಲಾಯಸೆನ್ಸು ಒಂದಿದೆಯಲ್ಲ ಕೆಂಪುಸೀರೆ! ಅಂದು ನಾನು ಬ್ರಾಹ್ಮಣನಾಗಿ ಹೋಗಿದ್ದೆ. ಗೋದಾವರಿ ಬಡಿಸಿದ ಅಡಿಗೆ ಯೆಂದರೆ ಒಂದು ತುತ್ತು ನಮ್ಮೆಲ್ಲರಿಗೂ ಹೆಚ್ಚು ಹೋಗುವದು. ಒಳ್ಳೇ ಚಲುವೆಯಾದ ಅಮ್ಮ! ಹಾಸ್ಯ ಬೀಸ್ಯ ಚನ್ನಾಗಿ ಗೊತ್ತು. ಅವಳಿಗೆ… ನಮಗೂ ಗೊತ್ತು! ಅಂದಮೇಲೆ ಕೇಳುವದೇನು! ಅಕೆಯ ವರ್‍ಣನೆ ಮಾಡುವ ಉದ್ದೇಶ ನನ್ನದಲ್ಲ. ನಮ್ಮ ಸಮಾಜದ ಸ್ಥಿತಿ ಹೀಗಿದೆಯೆಂಬದನ್ನು ತಿಳಿಸಿದೆ. ಮನೆಬಿಟ್ಟು ಹೊರಗೆ ಹಾಕಿದಂದಿನಿಂದ ನರ್‍ಮದಾಬಾಯಿ ಬೇರೊಂದು ಕಡೆ ಒಂದು ಚಿಕ್ಕಮನೆ ತೆಗೆದುಕೊಂಡು ಇರತೂಡಗಿದಳು. ಹೊಲಿಗೇ ಕೆಲಸ ಮಾಡಿ ಹೊಟ್ಟೆ ತುಂಬಿಕೊಳ್ಳುವಳು. ತುಳಸೀ ಪೂಜೆ ಯೆಂದರೆ ಅವಳಿಗೆ ತುಂಬಾ ಪ್ರಿತಿ. ಹೆನ್ನರಡು ಬಾಲಿಕೆ ಇದ್ದ ಲಾಗಾಯಿತು ಅವಳಿಗೆ ಅವರ ತಾಯಿ ಈ ಪೂಜೆಯ ಅಭ್ಯಾಸ ಮಾಡಿಸಿ ಬಿಟ್ಟಿದ್ದಳು. ಹಳ್ಳದ ದಂಡೆಯಮೇಲಿನ ಮರದ ಅಡಿಯಲ್ಲಿ ತುಳಸಿಕಟ್ಟೆ ಇದೆ. ಅಲ್ಲಿ ಅವಳು ನಿತ್ಯವೂ ಹೋಗುತ್ತಿದ್ದಳು. ಒಂದು ದಿನ ನಾನು ಕೆಲವು ಸನಾತನಿಗಳ ಟೋಳಿಯೊಂದಿಗೆ ನದಿಯಿಂದ ಬರುತ್ತಿದ್ದೆ. ನಾವೆಲ್ಲರೂ ಹಣೆಗೆ ಭವ್ಯವಾಗಿ ನಾಮವನ್ನು ಬಡಿದುಕೊಂಡು (ಅದೊಂದು ಮಡಿಯ ಟ್ರೇಡ್‌ ಮಾರ್‍ಕ) ನೀರಿನ ಥಾಲಿಯನ್ನು ಹಿಡಿದುಕೊಂಡು ಬರುತ್ತಿದ್ದೆವು. ತುಳಸೀಪೂಜೆಗಾಗಿ ನರ್ಮದಾಬಾಯಿ ನಿಂತದ್ದು ಕಂಡಿತು. ಎಲ್ಲರೂ ಅವಳಿಗೆ ಹತ್ತುವಂತೆ ಅಭದ್ರ ಮಾತುಗಳನ್ನು ನಮ್ಮೊಳಗೆ ಆಡ ತೊಡಗಿದೆವು. ಅವಳು ಯಾವುದನ್ನು ಲೆಕ್ಕಿಸಲಿಲ್ಲ. ನಾವು ಅಷ್ಟಕ್ಕೇ ಬಿಡಲಿಲ್ಲ.

“ಸಕೇಶಿಯಾಗಿ ತುಳಸಿಯನ್ನು ಮುಟ್ಟಿಲಿಕ್ಕೆ ನಾಚಿಕೆ ಬರುವಲ್ಲದೆ? ಮಡಿಹೆಂಗಸರೂ ಮುತ್ತೈದೆಯರೂ ಅದನ್ನು ಹೇಗೆ ಮುಟ್ಟಬೇಕು? ಎಂದು ಗದ್ದರಿಸಿದೆವು. ನಾನೊಂದು ಹೆಜ್ಜೆ ಮುಂದೆಯೇ ಹೋದೆ. ಗೆಳೆಯಾ ಈ ನೀಚನಿಗೆ ಅದೂ ಒಂದು ಆನಂದವೆನಿಸಬೇಕೆ? ಅವಳನ್ನು ಸ್ಪರ್‍ಶಿಸಿ ಕೆಳಕ್ಕೆ ತಳ್ಳಿದೆ. ಅವಳ ಕೈಯಲ್ಲಿಯ ಪೂಜೆಯ ತಟ್ಟೆ ಕೆಳಗುರುಳಿತು. ಅವಳು ಎಷ್ಟು ದುಃಖಿಸಿರಬಹುದು? ನಾವು ಹೊರಟು ಹೋದೆವು. ಅವಳು ಮಾತ್ರ ಅಂದು ಅಲ್ಲಿಂದ ಏಳಲಿಲ್ಲ. ಇಡೀ ದಿವಸ ಉಪವಾಸದಿಂದ ಕಣ್ಣೀರು ಹರಿಸುತ್ತ ಕುಳಿತುಕೊಂಡಿದ್ದಳು. ನನಗೆ ಸಂಜೆಯ ಮುಂದೆ ಈ ಸಂಗತಿ ತಿಳಿಯಿತು ಅದೇಕೋ ಕೆಡಕೆನಿಸಿತು. ಅಂದು ಸಂಜೆ ಊಟವೇ ರುಚಿಸಲಿಲ್ಲ. “ನಾನು ಮಾಡಿದ್ದು ಒಳಿತೋ” ಎಂಬ ಪ್ರಶ್ನೆಯು ಕಂಣುಮುಂದೆ ಬಂದು ಕುಣಿಯಹತ್ತಿತು. ಮನಸ್ಸಿಗೆ ಶಾಂತತೆಯಿಲ್ಲ. ಒಂದು ಹಳೇ ‘ಸಮಾಜ’ ಪತ್ರಿಕೆ. ನಮ್ಮ ಕೋಣೆಯಲ್ಲಿ ಬಿದ್ದಿತ್ತು. ಓದುತ್ತ ಕುಳಿತೆ. “ವಿಧವೆಯೆರ ಗೋಳು” “ಇತ್ತೀಚೆಗಿನ ಸನಾತನಿಗಳು” ಎಂಬೆರಡು ಲೇಖನಗಳನ್ನು ಓದಿದೆ ನನ್ನ ಮೇಲೆ ಬರೆದಿರಲಿಕ್ಕಿಲ್ಲವಷ್ಟೇ ಎಂಬ ಕಲ್ಪನೆ ಬಂದವು. ಅವು ನನ್ನ ಹೃದಯಕ್ಕೆ ಬಾಣ ಚುಚ್ಚಿದಹಾಗೆ ಏಟು ಕೊಟ್ಟವು. ಅಂದಿನ ರಾತ್ರಿಯೆಂದರೆ ನನ್ನ ಜೀವನದಲ್ಲಿ ಮಾರ್‍ಪಾಟು ಮಾಡಿದ ರಾತ್ರಿ. ಮನುಷ್ಯತ್ವವನ್ನು ತಂದುಕೊಟ್ಟ ರಾತ್ರಿ! ಬೆಳಗಾದ ಬಳಿಕ ಮುಖಮಾರ್‍ಜನಾದಿಗಳನ್ನು ತೀರಿಸಿಕೊಂಡು ಹಳ್ಳದ ಕಡೆಗೆ ನಡದೆ. ಅವಳಿನ್ನೂ ಅಲ್ಲಿಯೇ ಇದ್ದಳು. ತುಳಸೀ ದೇವಿಗೆ ಭಕ್ತಿ ಪೂರ್‍ವಕವಾಗಿ ಬೇಡಿಕೊಳ್ಳತೊಡಗಿದಳು. ಆಗಂತೂ ನನ್ನ ಪಾಪದ ಬಗ್ಗೆ ನನಗೆ ಬಹಳ ಕನಿಕರವೆರಿಸಿತು. ಹೋದವನೇ ಅವಳ ಕಾಲಿಗೆ ಬಿದ್ದೆ. ನಾನು ಅತ್ಯಾಚಾರ ಮಾಡಿದವನಾಗಿದ್ದರೂ ಅವಳಿಗೆ ಕೋಪವಿಲ್ಲ. ವಿನಯ ಪೂರ್‍ವಕವಾಗಿ ಕ್ಷಮಿಸಿದಳು. ಅವಳ ಆ ತುಳಸೀದೇವಿಯ ಮಹಿಮೆ ದೊಡ್ಡದು ನೋಡು. ಅಕಸ್ಮಾತ್‌ ಸೂರ್ಯೋದಯದ ದೃಶ್ಯವನ್ನು ತೆಗೆಯಬೇಕೆಂದು ಬಂದ ಫೋಟೊಗ್ರಾಫರನೊಬ್ಬನು ನಮ್ಮ ಈ ದೃಶ್ಯವನ್ನು ಕಂಡು ಫೋಟೋ ತೆಗೆದುಕೊಂಡು ಬಿಟ್ಟನು. ನನಗೂ ಅದರಿಂದ ಕೆಡಕೆನಿಸಲಿಲ್ಲ. ಸ್ಮಾರಕವಿರಬೇಕೆಂದು ತಿಳಿದು ನಾನೂ ಕೆಲವು ಪ್ರತಿಗಳನ್ನು ತೆಗೆಸಿಕೊಂಡೆ. ಅವನ್ನೇ ಈಗ ನಿನಗೆ ಕಳಿಸಿರುವೆನು.

ಇರಲಿ ಇನ್ನು ಮೊದಲಿನ ಕಿಟ್ಟೂ ನಾನೆಂದು ತಿಳಿಯಬೇಡ. ಎಂದಿನಂತೆ ನಿನ್ನ ಹೊಸ ಹೊಸ ವಿಚಾರಗಳನ್ನು ತಿಳಿಸುತ್ತಾ ಇರಬೇಕು. ನನ್ನ ಮೇಲಿನ ಸಿಟ್ಟನ್ನು ಮರೆತು ಮೊದಲಿನಂತೆ ಪ್ರೇಮವನ್ನು ತೋರು. ಇಷ್ಟೇ ನನ್ನ ಬೇಡಿಕೆ.

ನಿನ್ನ ಪ್ರೇಮಾಭಿಲಾಷಿ
“ಕಿಟ್ಟು”
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...