ಕನ್ನಡ ಎಂ.ಎ. ನಲ್ಲಿ ಮೈಸೂರು ಯೂನಿವರ್ಸಿಟಿಯಲ್ಲಿಯೇ ಪ್ರಥಮ ಬ್ಯಾಂಕ್ ಸಿಕ್ಕಾಗ ನನಗಾದ ಆನಂದ ಅಪರಿಮಿತ. ಒಟ್ಟು ಎಂಟು ಬಂಗಾರದ ಪದಕಗಳು ನನಗೆ ಲಭಿಸಿದ್ದವು. ಈ ಒಂದು ರಾಂಕ್‌ಗಾಗಿ. ಇದೇ ಮೊದಲ ಬಾರಿಯೇನೂ ನಾನು ರಾಂಕ್ ಬಂದದ್ದಲ್ಲ. ಬಿ.ಎ.ನಲ್ಲಿ ಇದೇ ಪ್ರಥಮ ರಾಂಕ್ ಸಿಕ್ಕಿತ್ತು. ಆದರೆ ಬಂಗಾರದ ಪದಕ ಒಂದೇ ಸಿಕ್ಕಿದ್ದುದು.
ಪದವಿ ಪ್ರದಾನ ಸಮಾರಂಭದ ದಿನ ರಾಜ್ಯಪಾಲರು ಪದಕ, ಪದವಿಗಳನ್ನು ನೀಡಿದಾಗ, ಆ ಒಂದು ಅತ್ಯುನ್ನತ ಗಳಿಗೆಗಾಗಿ ಕಾದಿದ್ದ ನನಗೆ ಜೀವನದಲ್ಲಿ ಸಾಧಿಸಲಾರದ್ದೇನೋ ಸಾಧಿಸಿದ್ದೇನೆಂಬ ಭ್ರಮ. ಸಮಾರಂಭ ಮುಗಿದ ನಂತರ, ವೈಸ್ ಛಾನ್ಸ್‌ಲರ್‌ರ ಛೇಂಬರ್‌ಗೆ ನನ್ನನ್ನು ವಿಶೇಷವಾಗಿ ಆಹ್ವಾನಿಸಿದ ಕುಲಪತಿಗಳಾದ ರಾಜ್ಯಪಾಲರು ಬೆನ್ನು ತಟ್ಟಿ ನನ್ನ ಸಾಧನೆಯನ್ನು ಪ್ರಶಂಸಿಸಿದಾಗ ಉಬ್ಬಿಹೋಗಿದ್ದೆ.
ಅದೇ ದಿನವೇ ಅನಂತರ ಸಿಕ್ಕ ಕನ್ನಡದ ಪ್ರೊಫೆಸರ್ ನನ್ನ ‘ತುಂಗೋತ್ರಿ’ ಕವನ ಸಂಕಲನದ ಕವಿತೆಗಳನ್ನು ಓದಿ, “ಖಂಡಿತ ನಿನಗೆ ಒಳ್ಳೆಯ ಭವಿಷ್ಯವಿದೆ” ಎಂದಿದ್ದರು. ಅದೇ ಪ್ರೊಫೆಸರ್ ರಾಮಾಯಣದ ಸತ್ಯಾಸತ್ಯತೆಗಳನ್ನು ನಿರೂಪಿಸಿ ರಚಿಸಿದ್ದ ಕಾದಂಬರಿ ‘ಕಾಂಡ’ಕ್ಕೆ ತಮ್ಮ ಅಭಿಪ್ರಾಯ ಸೂಚಿಸುತ್ತಾ, “ಶಿವನ ಮೂರನೆಯ ಕಣ್ಣನ್ನು ಕಂಡು ಹಿಡಿದ ನಿನ್ನ ಮೂರನೆಯ ಕಣ್ಣಿಗೆ ಅವನಿಗಿಂತ ಹೆಚ್ಚಿನ ತೀಕ್ಷ್ಣತೆಯಿದೆ” ಎಂದಿದ್ದರು. ಅದರ ಮುಖಪುಟ ಚಿತ್ರ ರಚನೆಗೆ “ನೀನು ಬರೀ ಸಾಹಿತಿಯಲ್ಲ, ಚಿತ್ರಕಾರನೂ ಸಹ” ಎಂದೂ, “ರಿಯಲಿ ಯು ವಿಲ್ ಬಿಕಂ ಎ ಗ್ರೇಟ್ ಕ್ರಿಯೇಟೀವ್ ಆರ್ಟಿಸ್ಟ್” ಎಂದು ಹೇಳಿ ಉತ್ತೇಜನ ನೀಡಿದ್ದವರು ಇಂಗ್ಲೀಷ್ ಪ್ರೊಫೆಸರ್, ಅದೇ ದಿನ ‘ತುಂಗೋತ್ರಿ’ಯ ಅಪ್ರಕಟಿತ ಹಸ್ತಪ್ರತಿಯನ್ನು ಅವರಿಗೆ ಕೊಟ್ಟು ಮುನ್ನುಡಿ ಬರೆಯಲು ಕೇಳಿಕೊಂಡು ಊರಿಗೆ ಹೊರಟಿದ್ದೆ.
ಶಿವಮೊಗ್ಗಕ್ಕೆ ಹೊರಡುವ ಬಸ್‌ಗೆ ಇನ್ನು ಅರ್ಧ ಗಂಟೆ ಕಾಲಾವಕಾಶವಿತ್ತು. ಪದಕಗಳಿದ್ದ ಸೂಟ್ಕೇಸನ್ನು ಯಾರಾದರೂ ಕದ್ದಾರೆಂಬ ಭಯದಿಂದ ಪದೇ ಪದೇ ಮುಟ್ಟಿ ನೋಡುತ್ತಾ ಸೀಟ್ ಹಿಡಿದು ಕುಳಿತಿದ್ದೆ. ಅನಿರೀಕ್ಷಿತವಾಗಿ ನನ್ನ ಹಳೆಯ ಡಿಗ್ರಿ ಫ್ರೆಂಡ್ ಗಿರೀಶ್ ಕಾಣಿಸಿಕೊಂಡ. ಕಿಟಕಿಯ ಪಕ್ಕ ಕುಳಿತಿದ್ದ ನಾನು, ಬಸ್ಸಿಗಾಗಿ ಕಾಯುತ್ತ ನಿಂತಂತೆ ನಿಂತಿದ್ದ ಅವನನ್ನು ಕೂಗಿದೆ. ಮೊದಲ ಕೂಗು ಬಹುಶಃ ಅವನಿಗೆ ಕೇಳಿಸಲಿಲ್ಲವೋ ಏನೋ. ಆಗಲೇ ರಾತ್ರಿ ಹತ್ತು ಗಂಟೆಯಾಗಿತ್ತು. ನನಗೂ ಅನುಮಾನವಾಯಿತು. ನಿಜವಾಗಿಯೂ ಅವನು ಗಿರೀಶನೋ ಅಥವಾ ಮತ್ತಾರೋ ಎಂದು. ಏಕೆಂದರೆ ನಾನು ಅವನನ್ನು ಕಡೇ ಬಾರಿಗೆ ಕಂಡಿದ್ದು ಸಹ್ಯಾದ್ರಿ ಕಾಲೇಜಿನಲ್ಲಿ ಬಿ.ಎ. ಮುಗಿಸಿದ್ದಾಗ, ಮುಂದೆ ಅವನು ಎಲ್ಲಿದ್ದಾನೆ, ಏನು ಮಾಡುತ್ತಿದ್ದಾನೆ ಎಂಬ ಯಾವುದೂ ತಿಳಿದಿರಲಿಲ್ಲ.
‘ಗಿರೀಶ್’ – ಕೂಗಿದೆ ಮತ್ತೊಮ್ಮೆ.
ಸದ್ಯ ತಿರುಗಿದ. ಬಸ್‌ನ ಎಲ್ಲಾ ಕಿಟಕಿಗಳನ್ನೂ ನೋಡಿ, ನಗುಮೊಗದ ನನ್ನನ್ನು ನೋಡಿಯೂ ನೋಡದವನಂತೆ ಅಥವಾ ಗುರುತು ಸಿಗದೆಯೋ, ಸುಮ್ಮನೆ ನಿಂತೆ ಇದ್ದ. ಮಗದೊಮ್ಮೆ ‘ಗಿರಿ’ ಎಂದೆ. ನನ್ನನ್ನು ಪುನಃ ದೃಷ್ಟಿಸಿ, ಕ್ಷಣಕಾಲದ ನಂತರ ಹಳದಿ ಹಲ್ಲನ್ನು ಪ್ರದರ್ಶಿಸಿ ಹತ್ತಿರ ಬಂದ. “ಹಲೋ ಕೆಂಡಗಯ್ಯ” ಎಂದು ಆಶ್ಚರ್ಯದಿಂದೆಂಬಂತೆ ಉದ್ಗರಿಸಿದ. ಅದು ಕೃತಕ ಎಂದನಿಸಿತು.
ಕುಶಲೋಪರಿಯಾಯಿತು. ಅವನೂ ಶಿವಮೊಗ್ಗಕ್ಕೆ ಹೋಗಬೇಕಾಗಿದ್ದದ್ದನ್ನು ಹೇಳಿದಾಗ, ದಾರಿ ಸವೆಸಲು ಸದ್ಯ ಜೊತೆಗಾರ ಸಿಕ್ಕನಲ್ಲ ಎಂಬ ಸಮಾಧಾನ.
ಅದೇ ಬಸ್ಸಿಗೆ ಹತ್ತಿ ಬಂದ. ನನ್ನ ಪಕ್ಕದ ಸೀಟನ್ನು ತೋರಿಸಿದರೂ ನಯವಾಗಿ ತಿರಸ್ಕರಿಸಿ ನನ್ನ ಹಿಂದಿನ ಸೀಟಲ್ಲಿ ಕುಳಿತ. ನನಗೆ ಮುಖದ ಮೇಲೆ ಹೊಡೆದ೦ತಾಯಿತು. ಇನ್‌ಫೀರಿಯಾರಿಟಿ ಕಾಂಪ್ಲೆಕ್ಸ್ ಜಾಗೃತವಾಯಿತು.
ಮಾತು ಮುಂದುವರೆಯಿತು. ಆತ ಶಿವಮೊಗ್ಗದಲ್ಲಿಯೇ ಬಿಸಿನೆಸ್ ಮಾಡುತ್ತಿದ್ದಾನೆಂದು ತಿಳಿಯಿತು. ಮದುವೆಯೂ ಆಗಿದ್ದಾನಂತೆ. ಕಟ್ಟಾ ಸಂಪ್ರದಾಯವಾದಿ. ಡಿಗ್ರಿ ಓದುತ್ತಿದ್ದಾಗ ಅರ್ಥಶಾಸ್ತ್ರಜ್ಞರ ಚಿಂತನೆಗಳು ಅರ್ಥವಾಗದೇ ನನ್ನ ದುಂಬಾಲು ಬಿದ್ದು ಹೇಳಿಸಿಕೊಳ್ಳುತ್ತಿದ್ದವ ಈಗ ನನ್ನನ್ನು ಮುಟ್ಟಿಸಿಕೊಳ್ಳಲೂ ಹಿಂಜರಿಯುತ್ತಿದ್ದಾನಲ್ಲ- ಎನಿಸಿತು.
ಬಸ್ಸು ಇನ್ನೂ ನಿಂತಿತ್ತು. “ಯಾವಾಗ ಹೊರಡುತ್ತಪ್ಪಾ ಈ ಬಸ್ಸು. ಈ ರಾತ್ರಿಯಲ್ಲೂ ಸಿಕ್ಕಾಪಟ್ಟೆ ಸಖೆ ಆಗುತ್ತೆ” ದೀರ್ಘ ಉಸಿರು ಎಳೆದು ಬೇಸರ ವ್ಯಕ್ತಪಡಿಸಿದ. “ಬಸ್ಸಲ್ಲಿ ಇಷ್ಟು ಜನರಿದ್ದಾರೆ. ಅವರ ಉಸಿರೇ ಸಾಲದೇ ವಾತಾವರಣ ಬಿಸಿಯಾಗಲು” ನಾನು ಪ್ರತಿಕ್ರಿಯಿಸಿದೆ. “ಹೀಗೇ ಇನ್ನೂ ಒಂದರ್ಧ ಗಂಟೆ ಬಸ್ಸು ನಿಂತೇ ಇದ್ದರೆ ಈ ಬೆವರಿನ ವಾಸನೆಗೆ ಉಸಿರು ಕಟ್ಟುತ್ತೋ ಏನೋ? ಇಷ್ಟು ಜನ ಇದ್ದಾರೆ, ಯಾರಾರು ಮೈ ತೊಳೆದು ಎಷ್ಟೆಷ್ಟು ದಿನ ಆಗಿರುತ್ತೋ?” ಆ ಮಾತು ನನ್ನನ್ನೇ ಚುಚ್ಚುತ್ತಿದೆ ಎಂಬ ಅರಿವಾಯಿತು ನನಗೆ. ಅವನ ಮುಖವನ್ನು ದೃಷ್ಟಿಸಿ ನೋಡಿದಾಗ ಅವನು ಏನೋ ಪ್ರಮಾದವಾಯಿತೆಂದುಕೊಂಡಂತೆ ಮುಖಭಾವ ಮಾಡಿ, ಇತ್ತೀಚೆಗೆ ಸರಿಯಾಗಿ ನಲ್ಲೀಲಿ ನೀರು ಬರ್ತಿಲ್ವಲ್ಲ. ಅದುಕ್ಕಂದೆ” ಎಂದು ತನ್ನನ್ನು ಸಮರ್ಥಿಸಿಕೊಂಡ, ವಾಸ್ತವವಾಗಿ ಆ ರೀತಿಯ ತೊಂದರೆಯೇನೂ ಅಲ್ಲಿರಲಿಲ್ಲ. ನನ್ನಲ್ಲಿ ಮೌನ ಮನೆ ಮಾಡಿತು. ಅವನು ನಿದ್ದೆ ಮಾಡುವವನಂತೆ ಕಣ್ಣು ಮುಚ್ಚಿದ. ಬಸ್ಸೂ
ಹೊರಟಿತು. ನಾನು ಸೂಟ್ಕೇಸನ್ನು ಮುಟ್ಟಿ ಪದಕಗಳು ಇರುವುದನ್ನು ಖಚಿತಪಡಿಸಿಕೊಂಡ. ಏಕೋ ಏನೋ ಎಷ್ಟು ಹೊತ್ತಾದರೂ ನನಗೆ ನಿದ್ರೆ ಬರಲೇ ಇಲ್ಲ. ಶ್ರೀಮಂತರಿಗೆ ನಿದ್ರೆ ಬರುವುದಿಲ್ಲವಂತೆ ಹತ್ತಿರ ಹಣವಿದ್ದರೆ! ನಾನೂ ಶ್ರೀಮಂತನೇ ತಾನೇ? ನನ್ನ ಬಳಿ ಎಂಟು ಚಿನ್ನದ ಪದಕಗಳಿವೆ. ಪಕ್ಕದಲ್ಲಿ ಅಷ್ಟು ಮೌಲ್ಯ ಇದ್ದರೆ ರಾತ್ರಿ ಪ್ರಯಾಣಕ್ಕೆ ನಿದ್ರೆ ಹೇಗೆ ಬರಬೇಕು? ಆದರೆ ಅದಕ್ಕಿಂತ ಮುಖ್ಯವಾಗಿ ಗಿರೀಶನ ಮಾತುಗಳು ನನ್ನನ್ನು ಕೊರೆಯುತ್ತಿದ್ದವು. ಅವನ ಈ ವರ್ತನೆಗೆ ಕಾರಣವೇನು? ಮಾತನಾಡಿಸದಿದ್ದರೇ ಚೆನ್ನಾಗಿತ್ತೇನೋ ಅನ್ನಿಸಿತು. ನಂತರ ಕಣ್ಣು ಮುಚ್ಚಲು ನಿರ್ಧರಿಸಿದೆ. ಇನ್ನು ಮುಂದೆ ಅವನೇ ಮಾತನಾಡಿಸಿದರೂ ನಿದ್ದೆ ಮಾಡುತ್ತಿರುವವನಂತೆ ನಟಿಸಬೇಕೆಂದು ಮಲಗಿದೆ. ಯಾವಾಗ ನಿದ್ರೆ ಬಂದಿತ್ತೋ, ಎಚ್ಚರವಾದಾಗ ಶಿವಮೊಗ್ಗದಲ್ಲಿದ್ದೆವು!
`ಸೂಟ್‌ಕೇಸ್’ ಎಂದು ಗಾಬರಿಯಾಗಿ ಅಂದಾಗ ಅಲ್ಲಿದ್ದವರೆಲ್ಲ ನನ್ನತ್ತ ತಿರುಗಿದರು. ನಂತರ ಸೀಟ್ ಕೆಳಕ್ಕೆ ಜಾರಿ ಹೋಗಿದ್ದದು ಸಿಕ್ಕಾಗ ನಾನು ಆತಂಕ ಪಟ್ಟಿದ್ದಕ್ಕೆ ನನಗೇ ನಾಚಿಕೆಯೆನಿಸಿತು.
ಬೆಳಕಾಗಲು ಇನ್ನೂ ಒಂದೂವರೆ ಗಂಟೆ ಬೇಕು. ಅಲ್ಲಿಯವರೆಗೂ ಏನು ಮಾಡುವುದು? ಮನೆಗೆ ಹೋಗಲು ಆ ಕತ್ತಲಲ್ಲಿ ಅಸಾಧ್ಯ. ಇಷ್ಟೊಂದು ಬಂಗಾರ ತನ್ನಲ್ಲಿರುವಾಗ, ಆ ನೆನಪು ಬರುತ್ತಿದ್ದಂತೆಯೇ, ಅದು ಸೀಟ್ ಕೆಳಗೆ ಇದ್ದದ್ದು ನೆನಪಾಗಿ ಏನಾದರೂ ಪ್ರಮಾದ ವಾಗಿದೆಯೋ ಎಂಬ ಸಂಶಯವೂ ಬಂದಿತು. ಜೊತೆಗೆ ಯಾಕೋ ಸೂಟ್ಕೇಸಿನ ತೂಕ ಕಡಿಮೆಯಾಗಿದೆ ಎನಿಸಿತು. ಗಿರಿಗೆ ಮಾತ್ರ ಈ ವಿಷಯ ಗೊತ್ತಿತ್ತು. ಅಂದರೆ ಅವನೇ ಹೀಗೆ ಮಾಡಿರಬಹುದೇ? ತೆಗೆದು ನೋಡೇ ಬಿಡೋಣವೆಂದರೆ ಹತ್ತಿರದಲ್ಲೇ ಗಿರೀಶ್ ಇದ್ದಾನೆ. ನನ್ನ ವರ್ತನೆ ಸಮಂಜಸವೆನಿಸಲಾರದು ಎಂದು, ಆತಂಕವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದೆ.
ನಗರದಲ್ಲೇ ಮನೆಯಿದ್ದುದರಿಂದ ಅವನು ಆಟೋ ಕರೆದು ಹೊರಟು ನಿಂತ. ನನ್ನನ್ನೂ ಕರೆಯುತ್ತಾನೇನೋ ಅಂದುಕೊಂಡಿದ್ದೆ. ಬೆಳಕಾಗುವವರೆಗೆ ನಾನು ಹಳ್ಳಿಗೆ ಹೋಗಲಿಕ್ಕಾಗದೆಂಬ ವಿಷಯ ಅವನಿಗೂ ಹೇಳಿದ್ದೆ. ಆದರೆ ಆತ ಕರೆಕೊಡದೆ ‘ಬತ್ತೀನಿ’ ಎಂದು ಆಟೋದಲ್ಲಿ ಕುಳಿತು ಹೇಳಿದಾಗ ಶೇಕ್‌ಗೆಂದು ಕೈ ನೀಡಿದೆ. ಅವನು ತಡವರಿಸುವಷ್ಟರಲ್ಲಿ ಆಟೋ ಮುಂದೆ ಹೋಗಿತ್ತು. ಆತ ಉದ್ದೇಶಪೂರ್ವಕವಾಗಿಯೇ ಕೈ ನೀಡಲು ತಡಮಾಡಿದನೆನಿಸಿ ರಾತ್ರಿಯ ನೆನಪುಗಳು ಧಾರಾಳವಾಗಿ ನುಗ್ಗಿ ಬಂದವು. ಜೊತೆಯಲ್ಲಿಯೇ ನನ್ನ ಮೈಯ ಕಪ್ಪು ಬಣ್ಣ ಬಹಳ ಬೇಸರ ತಂದಿತು. ನನ್ನ ಜಾತಿಯ ಬಗ್ಗೆ ಒಂದಿಷ್ಟು ಬೈದುಕೊಂಡ. ನನಗೆ ಜಾತಿ ವಿಷಯ ಬಂದಾಗಲಂತೂ ವಿಪರೀತ ಸಿಟ್ಟು ಬರುತ್ತಿತ್ತು, ಅದರಿಂದಾಗಿಯೇ ಮಾಸ್ಟರ್ ಡಿಗ್ರಿಗೆ ಅಪ್ಲಿಕೇಷನ್ ಹಾಕಿದಾಗ, ಜಾತಿಗಾಗಿ ಮೀಸಲಿದ್ದ ಕಾಲಂನಲ್ಲಿ ‘ಜಾತ್ಯಾತೀತ’ ಎಂದು ಬರೆದಿದ್ದೆ. ಪ್ರವೇಶ ಕೊಡುವ ಮುನ್ನ ನನ್ನ ಅರ್ಜಿ ವಜಾ ಮಾಡುತ್ತೇವೆಂದು ಅಧಿಕೃತವಾಗಿ ಬಂದ ವರದಿಗೆ, ಟೆನ್ನನ್ ತಡೆಯಲಾರದೇ, ‘ಇಟ್ ಈಸ್ ಎ ಸೆಕ್ಯೂಲರ್ ಸ್ಟೇಟ್ ಸರ್, ಅಫ್ ಕೋರ್ಸ್, ನಾನು ಎಸ್.ಸಿ. ಆದರೂ ಆ ಸೌಲಭ್ಯಗಳು ನನಗೆ ಬೇಕಾಗಿಲ್ಲ’ ಎಂದೆಲ್ಲಾ ವಾದ ಮಾಡಿ ಎಸ್ ಛಾನ್ಸ್‌ಲರ್‌ರಿಂದಲೇ ಪರ್ಮಿಷನ್ ತಂದಿದೆ, ನನ್ನ ಜಾತಿಗೆಂದೇ ಮೀಸಲಾಗಿದ್ದ ಸ್ಕಾಲರ್‌ಶಿಪ್‌ಗಳ ಬದಲಾಗಿ ಮೆರಿಟ್ ಸ್ಕಾಲರ್ ಮಾತ್ರ ಪಡೆಯುತ್ತಿದ್ದೆ. ಅಷ್ಟಕ್ಕೂ ನಾನೇನೂ ಶ್ರೀಮಂತನೆಂದೇನೂ ಅಲ್ಲ. ಆದರೆ ಸ್ವಾಭಿಮಾನ ಅಡ್ಡಿಯಾಗುತ್ತಿತ್ತು.
ಸ್ವಲ್ಪ ಹೊತ್ತು ಕಲ್ಲು ಬೆಂಚಿನ ಮೇಲೆ ಕುಳಿತೆ- ಬೆಳಕಾಗಲಿ ಎಂದು ಸೂಟ್‌ಕೇಸನ್ನು ತೆಗೆದು ಪದಕಗಳು ಸರಿಯಾಗಿವೆಯೇ ಎಂದು ಖಾತ್ರಿಪಡಿಸಿ ಕೊಳ್ಳಬೇಕೆಂಬ ತವಕ ಅತಿಯಾಯಿತು. ಯೂರಿನಲ್ಸ್‌ನತ್ತ ಹೆಜ್ಜೆ ಹಾಕಿದೆ. ರೂಂನ ಒಳಹೋಗಿ ಬೀಗ ತೆಗೆದು ನೋಡಿದೆ. ಸದ್ಯ! ಎಲ್ಲವೂ ಸರಿಯಾಗಿತ್ತು. ಶಾಸ್ತ್ರಕ್ಕೆ ಮೂತ್ರ ವಿಸರ್ಜಿಸಿ ಹೊರ ಬರುವಾಗ, ಸೂಟ್‌ಕೇಸಿನ ಬೀಗ ಸರಿಯಾಗಿದೆಯೇ ಎಂದು ಆಗಲೇ ನೋಡಿದ್ದರೆ ಇಷ್ಟೆಲ್ಲಾ ಆತಂಕದ ಸಮಸ್ಯೆಯೇ ಇರುತ್ತಿರಲಿಲ್ಲವೆನಿಸಿ ನನ್ನ ಅಜ್ಞಾನದ ಬಗ್ಗೆ ನನಗೆ ನಾಚಿಕೆಯೆನಿಸಿತು. ಅಷ್ಟರಲ್ಲಿ ಬಸ್‌ಸ್ಟ್ಯಾಂಡ್ ಹೋಟೆಲ್ಲಿನ ಬಾಗಿಲು ತೆರೆದದ್ದು ಕಂಡೆ. ಕಾಫಿ ಹೀರುತ್ತಾ ಬೆಳಕಾಗಿಸಿದೆ.
ಊರಿಗೆ ಹೊರಡುವ ಸಿದ್ಧತೆಯಲ್ಲಿದ್ದಾಗ ರವಿಕುಮಾರನ ನೆನಪು ಬಂದಿತು. ಅವನು ಬ್ಯಾಚುಲರ್ ಡಿಗ್ರಿಯಲ್ಲಿ ತುಂಬಾ ಇಂಟಿಮೇಟ್ ಆಗಿದ್ದವನು. ನಾನು ಕನ್ನಡವನ್ನು ಮೇಜರ್ ಆಗಿ ತೆಗೆದುಕೊಂಡಿದ್ದರೆ ಅವನು ಇಂಗ್ಲಿಷ್ ತೆಗೆದುಕೊಂಡಿದ್ದ. ಲಿಟರೇಚರ್‌ನಲ್ಲಿ ಕಡಿಮೆ ಅಂಕಗಳು ಬಂದಿದ್ದರಿಂದ ಪಿ.ಜಿ.ಗೆ ಸೀಟ್ ಸಿಕ್ಕಿರಲಿಲ್ಲ.
ಅವನಿಗೆ ಮಾತನಾಡಿಸಿಕೊಂಡು, ಈ ಮೆಡಲ್ ನೆಲ್ಲಾ ತೋರಿಸಿ ನನ್ನ ಪ್ರತಿಭೆಯನ್ನು ಹೊಗಳಿಸಿಕೊಳ್ಳಬೇಕೆಂಬ ಚಪಲ ಜಾಸ್ತಿಯಾಗಿ ಬಿ.ಬಿ. ಸ್ಟ್ರೀಟ್‌ನತ್ತ ನಡೆದೆ. ನಾನು ಅಲ್ಲಿಗೆ ಹೋದಾಗ ಆರೂವರೆಯಾಗಿತ್ತು. ಮನೆಯಲ್ಲಿರಲಿಲ್ಲ ಆತ. ಹೊಳೆಗೆ ಸ್ನಾನಕ್ಕೆ ಹೋಗಿದ್ದಾನೆಂದು ತಿಳಿದು ಅಲ್ಲಿಗೇ ಸೂಟ್‌ಕೇಸ್ ಹಿಡಿದೇ ಹೊರಟೆ.
ಅವನು ನೀರಿನಲ್ಲಿ ಮುಳುಗಿ ಮುಳುಗಿ ಸ್ನಾನ ಮಾಡುತ್ತಿದ್ದ ಪರಿಯನ್ನು ವೀಕ್ಷಿಸುತ್ತಾ, ಅವನ ಬಟ್ಟೆ ಇರಿಸಿದ್ದಲ್ಲಿ ಕುಳಿತೆ. ನನ್ನ ‘ತುಂಗೋತ್ರಿ’ ಕವನ ಸಂಕಲನಕ್ಕೆ ಪ್ರೇರಣೆಯಾದ, ಕಾವೇರಿ ಮಡಿಲಲ್ಲೂ ಆಕರ್ಷಣೆ ಕಳೆದುಕೊಳ್ಳದ ತುಂಗೆಯ ಬಗ್ಗೆ ಅಭಿಮಾನ ಉಕ್ಕಿತು. ಯೋಚಿಸುತ್ತಲೇ ಮನಸ್ಸು ಶೂನ್ಯದಲ್ಲಿ ದೃಷ್ಟಿ ನೆಟ್ಟಿತು.
ರವಿಕುಮಾರ್ ತನ್ನ ಸ್ನಾನ ಮುಗಿಸಿ, ಬಹುಶಃ ಅನಿರೀಕ್ಷಿತವಾಗಿ, ನನ್ನನ್ನು ಕಂಡು ಆಶ್ಚರ್ಯ ಪಡಬಹುದೆಂದು ಕಲ್ಪಿಸುತ್ತಿದ್ದಂತೆಯೇ ಅವನೇ ನನ್ನನ್ನು ಆಶ್ಚರ್ಯಗೊಳಿಸಲೆಂದು ಮರೆಯಿಂದ ಬಂದು ನನ್ನ ಕಣ್ಣು ಮುಚ್ಚಿದಾಗ `ರವಿ….?’ ಎಂದು ಬಿಡಿಸಿಕೊಂಡೆ. ಅವನು ಮುಗ್ಧನಂತೆ ನಗುತ್ತ ಪಕ್ಕಕ್ಕೆ ಕುಳಿತಾಗ, ನನ್ನನ್ನು ಒರಗಿಯೇ ಇದ್ದ. ಅವನ ಹೃದಯ ವೈಶಾಲ್ಯತೆಗೆ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯದೇ ಮೂಢನಾದೆ. ಗಿರೀಶನ ನೆನಪನ್ನು ರವಿಯೊಂದಿಗೆ ಹಂಚಿಕೊಂಡೆ. ನಂತರ ಆ ಪದಕಗಳನ್ನೆಲ್ಲಾ ಕಂಡು, ದಾನಿಗಳ ಹೆಸರನ್ನು ಓದುತ್ತಾ ಅವನು ಪಡುತ್ತಿದ್ದ ಆನಂದ, ಖಂಡಿತ ಅವುಗಳ ಒಡೆಯನಾದ ನನಗೂ ಇರಲಿಲ್ಲ. ಎರಡು ವರ್ಷಗಳ ನಂತರ ಕಂಡ ಅವನನ್ನು ಭಾವುಕನಾಗಿ ಅಪ್ಪಿಕೊಳ್ಳಬೇಕೆಂಬ ಬಯಕೆಯನ್ನು ಹತ್ತಿಕ್ಕಿದೆ. ನಾವು ಒಟ್ಟಿಗೇ ಇದ್ದಾಗ ನಾವೇ ನಿರೂಪಿಸಿದ್ದ ‘ವರ್ಗವಾದ’ವನ್ನು ನೆನಪಿಸಿ, “ನೀನು ಮೊದಲನೇ ಗುಂಪಿಗೇ ಸೇರಿದೆ. ಆದರೆ ನಾನು?” ಎಂದು ದೀರ್ಘ ಉಸಿರರೆದ. (ಮೊದಲನೇ ವರ್ಗ: ಕೆಳವರ್ಗದಲ್ಲಿ ಹುಟ್ಟಿ ಬೆಳೆದು ಮೇಲ್ವರ್ಗ ತಲುಪುವುದು. ಎರಡನೇ ವರ್ಗ: ತಮ್ಮ ಸ್ಥಿತಿಯನ್ನು ಅದೇ ವರ್ಗದಲ್ಲಿ ಕಾಯ್ದಿರಿಸಿಕೊಳ್ಳುವುದು. ಮೂರನೇ ವರ್ಗ: ಉತ್ತಮ ವರ್ಗದಿಂದ ಕೆಳವರ್ಗಕ್ಕೆ ಇಳಿಯುವುದು.) ನಮ್ಮ ವರ್ಗ ವಾದದ ಬಾಲಿಶ ಅರ್ಥಕ್ಕೆ ನಾನು ನಕ್ಕೆ.
ರವಿಯ ಮನೆಗೆ ಬರುವಷ್ಟರಲ್ಲಿ ಅವರಮ್ಮ ಕಾಫಿ ತಯಾರಿಸಿದ್ದರು. ನನ್ನನ್ನು ಮೊದಲಿನಿಂದಲೂ ಬಲ್ಲ ಅವರು ನನ್ನ ಸಾಧನೆ ಕೇಳಿ ಪ್ರಶಂಸಿಸಿದರು. ಅದೇ ವೇಳೆಯಲ್ಲಿ ಮಗನನ್ನು ತೆಗಳಲೂ ಮರೆಯಲಿಲ್ಲ. ಆದರೆ ನಾನೇ ಮಧ್ಯೆ ಬಾಯಿ ಹಾಕಿ ಸಮಾಧಾನಿಸಿದೆ.
ಹೀಗೇ ಮಾತು ಮುಂದುವರಿಯುತ್ತಿದ್ದಂತೆಯೇ, ಸಾಹಿತ್ಯದ ಜನಪ್ರಿಯ ಪ್ರಕಾರವನ್ನು ರೂಢಿಸಿಕೊಂಡು ಪತ್ರಿಕೆಗಳಿಗೆ ಕಥೆ ಕವನ ಬರೆಯುತ್ತಿದ್ದ ನನ್ನ ಇನ್ನೊಬ್ಬ ಹಳೆಯ ಫ್ರೆಂಡ್ ‘ಸಂಪ’ (ಪೂರ್ಣ ಹೆಸರು ಸಂಪಂಗಿ ರಾಮಯ್ಯ) ಅಲ್ಲಿಗೆ ಬಂದ. ನನ್ನನ್ನು ಅನಿರೀಕ್ಷಿತವಾಗಿ ಕಂಡು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಂತೆಯೇ, “ಏನಯ್ಯ ಹೇಳಿ ಕಳಿಸಿ ಕರುಸ್ಕಂಡಂಗ ಬಂದಿಟ್ಟಲ್ಲ” ಎಂದು ನನ್ನ ಸಂತಸವನ್ನು ವ್ಯಕ್ತಪಡಿಸಿದೆ. ಪದಕಗಳನ್ನು ವೀಕ್ಷಿಸಿದ ನಂತರ ಸಾಹಿತ್ಯದತ್ತ ವಿಷಯ ಹರಿಯಿತು. ಆಗ,
ಸಂಪ : ನಿನ್ನ ಹಾಗೆ ಕ್ಲಾಸಿಕಲ್ (ಶ್ರೇಷ್ಠ) ಸಾಹಿತ್ಯ ಕೃಷಿ ನನ್ನಿಂದಾಗಲ್ಲಪ್ಪಾ, ನನ್ನದು ಏನಿದ್ದರೂ ಪಾಪ್ಯುಲರ್‌ಗೇ ಸೀಮಿತ. ಯಾಕೆಂದರೆ ಪತ್ರಿಕೆಗಳ ಜೀವಾಳವೇ ಅದಲ್ಲವೇ? ಬೇಗ ಹೆಸರು ಗಳಿಸಬೇಕೆಂದರೆ ಈಗ ಇರುವ ಸುಲಭೋಪಾಯ ಈ ಜನಪ್ರಿಯ ಸಾಹಿತ್ಯ ಬರೆಯೋದು.
ನಾನು : ನೀನು ಏನೇ ಹೇಳು ಸಂಪಾ, ಈ ಜನಪ್ರಿಯ ಸಾಹಿತ್ಯ ಆ ಪತ್ರಿಕೆಯ ಮುಂದಿನ ಸಂಚಿಕೆ ಬರುವವರೆಗೆ ಮಾತ್ರ ಓದಿಸಿಕೊಂಡಿರುತ್ತೆ. ಆದರೆ ಉತ್ತಮ ಸಾಹಿತ್ಯ ಶತಮಾನಗಳಷ್ಟು ದೀರ್ಘಾಯುಸ್ಸನ್ನೂ ಹೊಂದಿರಬಲ್ಲುದು. ಆದ್ದರಿಂದ ನಾನು ನನ್ನ ಪ್ರೀಸಿಯಸ್ ಟೈಂನ ಜನಪ್ರಿಯ ಸಾಹಿತ್ಯ ಬರೆಯುವುದಿರಲಿ, ಓದಲೂ ಬಳಸುವುದಿಲ್ಲ.
ಸಂಪ : ಆದರೆ ಹೆಸರು ಗಳಿಸಕ್ಕೆ ಬಹಳ ಪ್ರಯಾಸ ಪಡಬೇಕಾಗುತ್ತೆ ನೀವು.
ನಾನು: ನಿಧಾನಕ್ಕೆ ಗಳಿಸಿದ ಹೆಸರು ಬಹಳ ಕಾಲ ಉಳಿಯುತ್ತೆ. ಆದರೆ ನಿಮ್ಮಂತವರು, ಹಾಗಂದೆ ಅಂತ ಬೇಜಾರಾಗ್ಬೇಡ, ಬಹಳ ಬೇಗ ಮುಂದೆ ಬಂದು ಅದಕ್ಕಿಂತಲೂ ಬೇಗ ಹಿಂದೆ ಸರಿಯುತ್ತೀರಾ.
ಜೊತೆಗೆ ಶೇಕ್ಸ್‌ಪಿಯರ್, ವರ್ಡ್‌ವರ್ತ್, ಏಲಿಯೆಟ್ ಮುಂತಾದವರನ್ನು ಆಧಾರವಾಗಿರಿಸಿಕೊಂಡು ವಿವರಿಸಿದೆ. ಕನ್ನಡದಷ್ಟೇ ಇಂಗ್ಲಿಷ್ ಪರಿಶ್ರಮವಿದ್ದ ನನ್ನ ಮುಂದೆ ಆತ ಸೋಲೊಪ್ಪಲೇ ಬೇಕಾಯಿತು. ಕೊನೆಯದಾಗಿ, “ಸ್ಟಾಕ್ ಇಮೇಜ್ಸ್‌ನ ಬಿಟ್ಟು ವೈಡ್ ವ್ಯೂನಲ್ಲಿ ಥಿಂಕ್ ಮಾಡಿ ಬರೆ” ಎಂದು ಸಜೆಸ್ಟ್ ಮಾಡಿ ಹಳ್ಳಿಗೆ ಹೊರಡಲು ಮೇಲೆದ್ದೆ.
ಒಂಬತ್ತೂವರೆಗೆ ನಮ್ಮೂರಿಗೆ `ಶ್ರೀನಿವಾಸ’ ಬಸ್ ಇತ್ತು.
ಊರಲ್ಲಿ ಬಸ್ ಇಳಿಯುತ್ತಿದ್ದಂತೆಯೇ ನನ್ನ ಏನೋ ಸಾಧಿಸಿದ್ದೇನೆಂಬ ಗರ್ವ ಜಾಸ್ತಿಯಾಯಿತು. ಊರವರಿಗೆಲ್ಲಾ ನನ್ನ ಸಾಧನೆಯ ಬಗ್ಗೆ ಪತ್ರಿಕೆಯಿಂದಲೋ, ರೇಡಿಯೋ ದಿಂದಲೊ ಹೇಗೋ, ತಿಳಿದು ಎಲ್ಲರೂ ನನ್ನತ್ರ ಅಭಿಮಾನದಿಂದ ನೋಡುತ್ತಿದ್ದಾರೆಂದೆನಿಸಿತು. ತಲೆ ತಗ್ಗಿಸಿ ಗಂಭೀರ ಹೆಜ್ಜೆ ಹಾಕಿದೆ ಮನೆಯತ್ತ.
ಬಸವಣ್ಣನ ದೇವಸ್ಥಾನದ ಮುಂದೆಯೇ ನಮ್ಮ ಮನೆಗೆ ಹೋಗಬೇಕಾಗಿತ್ತು. ದೇವಾಲಯದ ಪಕ್ಕಕ್ಕೇ ಗೌಡರ ಮನೆ.
ಗೌಡರ ಮಗ ರೇಣುಕೇಶ್ವರಯ್ಯ ನನ್ನ ಕ್ಲಾಸ್‌ಮೇಟ್ ಪ್ರೈಮರಿ ಸ್ಕೂಲಲಿ, ಮಿಡ್ಲಸ್ಕೂಲ್ ಪಾಸಾಗಲಿಲ್ಲ. ನನ್ನನ್ನು ಕಂಡು, “ಏನು ಕೆಂಡಗಯ್ಯ…. ಇದೇನಾ ಬರ್ತಾ….?” ಎಂದ ನಾನು ಹೌದೆಂದು ನಗು ಬೀರಿ ತಲೆಯಾಡಿಸಿದೆ. ನನ್ನ ಪದಕಗಳನ್ನೆಲ್ಲಾ ಇವನಿಗೆ ತೋರಿಸಬೇಕು. ಆತ ಊರಿನವರಿಗೆಲ್ಲಾ ನನ್ನ ಬಗ್ಗೆ ಹೇಳಿ ಹೊಗಳುವಂತೆ ಮಾಡುತ್ತಾನೆ ಎಂದೆನ್ನಿಸಿ ಮಾತು ಮುಂದುವರಿಸಬೇಕೆನ್ನುವಷ್ಟರಲ್ಲಿ ಆತ ಎಮ್ಮೆಗಳನ್ನು ಮೇಯಲು ಕಾಡಿಗೆ ಹೊಡೆಯಲೆಂದು ಕೊಟ್ಟಿಗೆಗೆ ಹೋಗಿ ಮರೆಯಾದ. ನಾನು ಸುಮ್ಮನೆ ನಡೆಯುತ್ತಿದ್ದೆ. “ಕೆಂಡಗಯ್ಯಾ…. ನಮ್ಮೊಂದು ಎಮ್ಮ ಸತ್ತೋಗೈತೆ. ನಿಮ್ಮಪ್ಪಂಗೆ ಯೋಳು ಬಂದು ತಗೀಲಿ….” ಎಂದಾಕ್ಷಣ ನನ್ನ ಸಿಟ್ಟು ನೆತ್ತಿಗೇರಿತ್ತು. ನೆನ್ನೇನೆ ಸತ್ತೋಗಿತ್ತು. ದೇವರಿಗೆಲ್ಲಾ ವಾಸ್ಎನ ವೊಡಿತೈತೆ, ಜಲ್ದು ತಗೊಂಡೋಗಕ್ಕೆ ಯೋಳಯ್ಯಾ… ಏನು…. ಮರ್ತುಗಿರ್ತು ಬಿಟ್ಯಾ ಆಮ್ಯಾಲೆ… ಏನು…..”
‘ಅಯೋಗ್ಯ ನನ್ಮಗುನ್ ತಂದು. ಅ ಅಂದ್ರೆ ಊ ಅನ್ನಕ್ಕೆ ಬರಲ್ಲ ನನ್ನ ಮ್ಯಾಲೇ ದರ್ಪ ತೋರುಸ್ತಾನೆ. ಈ ನನ್ಮಕ್ಕಳಿಗೆ ಸರ್ಯಾಗಿ ಬುದ್ದಿ ಕಲುಸ್ಬೇಕು’ ಎಂದು ಮನದಲ್ಲೇ ಬೈದುಕೊಳ್ಳುತ್ತಾ ತಿರುಗಿಯೂ ನೋಡದೇ ಬಿರುಸಾಗಿ ನಡೆದೆ.
ಅಪ್ಪ ಮನೆಯಲ್ಲೇ ಇದ್ದರು. ಕೆಲವು ದನ ಎಮ್ಮೆ ಚರ್ಮಗಳು ಬಿಸಿಲಲ್ಲಿ ಒಣಗುತ್ತಿದ್ದವು. ಅಣ್ಣನೊಬ್ಬ ಚರ್ಮವನ್ನು ಕತ್ತರಿಸಿ ಚಪ್ಪಲಿ ಹೊಲೆಯುತ್ತಿದ್ದ. ನಾವು ಚರ್ಮದ ಬಾರಿಕೋಲು, ನೊಗಸುತ್ತು ಇವನ್ನೆಲ್ಲಾ ಊರವರಿಗೆ ‘ಸೇವೆ’ಯ ರೂಪದಲ್ಲಿ ಕೊಡಬೇಕಿತ್ತು. ಪ್ರತಿಫಲವಾಗಿ ಸುಗ್ಗಿಯಲ್ಲಿ ಒಂದು ಭತ್ತದ ಪೆಂಡಿಯನ್ನು ಕೊಡುತ್ತಿದ್ದರು. ಮಳೆ ಬೆಳೆ ಇಲ್ಲದಿದ್ದರೆ ಅದಕ್ಕೂ ಕುತ್ತು.
ಅಮ್ಮ ನನ್ನನ್ನು ಕಂಡು ಹೊರಬಂದಳು. ಸಂತಸದಿಂದ ಸ್ವಾಗತಿಸಿದಳು. ಆದರೆ ನಾನು ನಗುವ ಸ್ಥಿತಿಯಲ್ಲಿರಲಿಲ್ಲ. ಮನಸ್ಸು ಮೀನು ಹಿಡಿಯಲು ತುಂಗೋತ್ರಿಯಲ್ಲಿ ಹಕ್ಕಿ ಮುಳುಗಿದಾಗ ಉಂಟಾಗುವ ಅಲೆಯಂತಾಗಿತ್ತು. ಇವರಿಗೆಲ್ಲಾ ಏನಾದರೂ ಒಂದು ಗತಿ ಕಾಣಿಸಿ ಈ ಕ್ಷುದ್ರ ‘ಶೂದ್ರ’ ಸಂಪ್ರದಾಯವನ್ನು ನಾಶಪಡಿಸಲೇಬೇಕೆನಿಸಿತು. ಅಂಬೇಡ್ಕರ್, ಗಾಂಧಿ ನೆನಪಾದರು.
ಒಳಹೋಗಿ ಸೂಟ್‌ಕೇಸನ್ನು ಸಿಟ್ಟಿನಿಂದ ನೆಲಕ್ಕೆ ಎಸೆದೆ. ನನಗೆ ಬೇಕಾದಂತೆ ಅದು ಬೀಳಲಿಲ್ಲವಾದ್ದರಿಂದ ಕಾಲಿನಿಂದ ಝಾಡಿಸಿ ಒದೆದು ಮೂಲೆ ಸೇರಿಸಿ ಅದರ ಮೇಲೇ ಕುಳಿತೇ ಬಿಳೀ ಪ್ಯಾಂಟು ಸಗಣಿ ನೆಲಕ್ಕೆ ತಗುಲಿ ಕೊಳೆಯಾಗದಿರಲೆಂದು. ‘ನಾನು ಡಬಲ್ ಡಿಗ್ರಿ ಹೋಲ್ಡರ್, ಐ.ಎ.ಎಸ್. ಆಫೀಸರ್ ಆಗಿ ಹೀಗೇ ಬೇಕಾದರೆ ಬಂಗಾರದ ಪದಕಗಳ ಮೇಲೆ ಸವಾರಿ ಮಾಡಬಹುದು. ಆದರೆ…. ಆದರೆ…. ಶತಶತಮಾನಗಳಿಂದ ನನ್ನ ಒಡ ಹುಟ್ಟಿದ ಜನರಿಗೆಲ್ಲಾ ನಾನು ಅದೇ ಗತಿ ಕಾಣಿಸಲು ಅಶಕ್ತ, ನಿಸ್ಸಹಾಯಕ ಎನಿಸಿ ಸುಮ್ಮನೆ ಕಣ್ಣು ಮುಚ್ಚಿದೆ.
ಅನುಭವದ ತೀವ್ರತೆ ಅತಿಯಾದಾಗ ಹೊರಹೊಮ್ಮುವ ತೀಕ್ಷ್ಣ ಕಾವ್ಯ ನನ್ನ ಕೈಗೆಟುಕಲೇಯಿಲ್ಲ
*****
(ಜುಲೈ ೧೯೮೭)