ಆ ರಾತ್ರಿ

ಆ ರಾತ್ರಿ

ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು.

ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು ತೋರಿಸಿದವು!

ಸುಧಾ ಕಸಪೊರಕೆಯಿಂದ ಕಸ ಗೂಡಿಸುತ್ತಿದ್ದಳು. ಅವಳನ್ನು ನೋಡಿ “ಏನು ಇನ್ನೂ ಕಸ ಉಡುಗುವುದೇ ಮುಗಿದಿಲ್ಲವೇ?” ಎಂದು ವಸಂತ ಕೇಳಿದ.

“ಈಗಿನ್ನು ಎರಡು ಗಂಟೆ” ಸುಧಾ ಈ ರೀತಿ ಉತ್ತರ ಕೊಟ್ಟಾಗಲೇ ವಸಂತನಿಗೆ ಇನ್ನೂ ವೇಳೆ ಇದೆಯೆಂಬುದರ ಸ್ಮರಣೆ ಬಂದಿತು.

ಅಹುದು; ರೈಲು ನಾಲ್ಕು ಗಂಟೆಗೆ ಬರುವುದು. ರೈಲು ನಿಲ್ದಾಣದಿಂದ ಮನೆಗೆ ಬರಲು ಅರ್ಧ ತಾಸು ಹಿಡಿಯುವುದು. ಟಾಂಗಾ ನಾಲ್ಕು ವರೆ ಗಂಟೆಗೆ ಮನೆಗೆ ಬರುವುದು. ಇನ್ನೂ ಎರಡೂವರೆ ತಾಸು!

“ಏನೇ ಆಗಲಿ, ಬೇಗ ಮುಗಿಸಿಬಿಡು. ಅವರು ಬಂದಮೇಲೆ ಹಾಸುತ್ತ ಕೂಡುವುದೇ? ಕುಮಾರನೊಬ್ಬನು ಕೈಬಿಡಬೇಕಲ್ಲ?”

“ಹೂಂ! ಮುಗಿಸುತ್ತೇನೆ. ಏನೋ ಕಾರಣ, ಕುಮಾರ ಮಲಗಿದ್ದಾನೆ. ಅಂತೇ ಇಷ್ಟೆಲ್ಲ ಕೆಲಸ ಮಾಡಲು ಅನುಕೂಲ”.

“ಏನೋ ಕಾರಣ ಏಕೆ? ಯಾರಾದರೂ ಬರುವವರಿದ್ದರೆ ಕೂಸು ಬಹಳ ಹೊತ್ತು ಮಲಗಿಕೊಳ್ಳುತ್ತವೆ!”

“ಇವೆಲ್ಲ ನೀವು ನಂಬುತ್ತೀರಿ?” ಸುಧಾ ನಗುತ್ತ ಜಮಖಾನೆಯನ್ನು ತೆಗೆದುಕೊಂಡು ಹೊರಗೆ ಹೋದಳು. ವಸಂತ ತನ್ನ ಕೋಣೆಯಲ್ಲಿಯೇ ಇನ್ನೂ ಏನೇನೋ ಮಾಡುತ್ತಿದ್ದನು.

ಛಟ್! ಛಟ್”!!

ಜಮಖಾನೆ ಝಾಡಿಸುವುದರ ಸಪ್ಪಳ ಕೇಳಬಂತು. ಕೂಡಲೇ ಸುಧಾ ವಸಂತನ ಕೋಣೆಯಲ್ಲಿ ಕಂಡಳು. “ಅಯ್ಯೋ! ಬಂದೇ ಬಿಟ್ಟರು! ನನ್ನ ಕೆಲಸ ಇನ್ನೂ ಹಾಗೇ ಇದೆ!”

ವಸಂತ ಬಹಳ ಅಚ್ಚರಿಯಿಂದ ಖುರ್ಚಿಯಿಂದ ಎದ್ದು “ನಿಜವೆ? ನಿಜವೆ?? ನಿಜವೆ??” ಎಂದು ಕೇಳಿದನು.

ವಸಂತನ ಮಾತು ಮುಗಿಯುವಷ್ಟರಲ್ಲಿಯೆ ಸುಧಾ ಒಳಗೆ ಮಾಯವಾದಳು.

“ಏನ್ರಿ ವಸಂತರಾವ್! ಜಮಖಾನೆಯ ಧೂಳಿಯಿಂದ ನಮ್ಮನ್ನು ಸ್ವಾಗತಿಸಿದಿರಲ್ಲಾ?”

ಈಶ್ವರನ್ನನ ಮಾತಿನ ಅರ್ಥ ವಸಂತನಿಗೆ ಕೂಡಲೇ ಆಯಿತು. ಇಬ್ಬರೂ ನಕ್ಕರು.

“ಈಶ್ವರನ್, ಈಗ ಎರಡೂವರೆ ಗಂಟೆ! ರೈಲು ಇಷ್ಟು ಬೇಗ ಬಂದು ಬಿಟ್ಟಿತೇ?”

“ಹೃದಯವೊಂದು ಕೇಳಬೇಕಲ್ಲ?”

ಇಬ್ಬರೂ ಒಬ್ಬರೊಬ್ಬರ ಕೈಕುಲುಕಿ ಬಹಳ ಹರ್ಷದಿಂದ ನಕ್ಕರು.

“ನಿಮ್ಮ……ಇವರು …… ..ಎಲ್ಲಿ ?” ವಸಂತ ಕುತೂಹಲದಿಂದ ಪ್ರಶ್ನೆ ಕೇಳುತ್ತಿರುವಾಗಳೇ, ಈಶ್ವರನ್ ಹೇಳಿದ “ಓಹೋ! ಅವರು ಈಗಾಗಳೇ ಅಡುಗೆ ಮನೆಯನ್ನು ಸೇರಿದ್ದಾರೆ. ಅವರೇನು ಹೆಂಗಸರು! ನಮ್ಮನ್ನು ಬಿಟ್ಟು ನಮ್ಮ ಪಾಲಿನ ಉಂಡಿಗಳನ್ನು ತಿನ್ನುತ್ತಿರಬಹುದು!” ಮತ್ತೆ ಇಬ್ಬರೂ ಗಹಗಹಿಸಿ ನಕ್ಕರು!

“ಅಲ್ಲ, ಅಕ್ಕನಿಗೆ ನಮ್ಮ ಸುಧಾಳ ಪರಿಚಯ ಮಾಡಿಕೊಡಬೇಕು!”

“ನೀನೇನು ಚಿಂತಿಸಬೇಡ ಅವಳು ಕಲ್ಲನ್ನು ಸಹ ಮಾತನಾಡಿಸುವವಳು!”

ನಗುತ್ತ ಎಲ್ಲ ಮಾತುಕತೆ ಸಾಗಿದವು. ಒಳಗೆ ಹೋಗಿ ಉಂಡಿಗಳನ್ನು ನುಂಗುವದಾಯಿತು. ಉಪ್ಪಿಟ್ಟನ್ನು ತಿನ್ನುವದಾಯಿತು. ಚಹವನ್ನು ಕುಡಿಯುವದಾಯಿತು. ತುಟಿಗಳನ್ನು ಒರೆಸಿಕೊಂಡು ತಾಂಬೂಲ ಸೇವನೆ ಸಾಗಿತು. ಮನೆತನದ ಕ್ಷೇಮ ಸಮಾಚಾರದ ಮಾತುಕತೆಗಳೂ ಆರಂಭವಾದವು.

ಕೋಣೆಯಲ್ಲಿ ಊದಿನ ಕಡ್ಡಿಗಳನ್ನು ಹಚ್ಚಿದ್ದರು. ಕಡ್ಡಿಗಳಿಂದ ಹೊಗೆ ಮೇಲೆ ಹೋಗಿ ಅನೇಕ ಆಕಾರಗಳನ್ನು ತಳೆದು ಮಾಯವಾಗುತ್ತಿತ್ತು. ಆ ಹೊಗೆ ಎಲ್ಲ ಕಡೆಗೂ ಸುವಾಸನೆಯನ್ನು ಪಸರಿಸಿತ್ತು.!

ಈಶ್ವರನ್ ಮತ್ತು ವಸಂತರ ಮಾತು ಕತೆಗಳು ಅನೇಕ ರೂಪಗಳನ್ನು ತಾಳುತ್ತಿದ್ದವು. ಸ್ನೇಹದ ಪರಿಮಳ ಆನಂದನನ್ನು ದಯಪಾಲಿಸಿತ್ತು!

ನಡುವೆ ಅಕ್ಕ ಬಂದು ಉಮೇಶನನ್ನು ಕೊಟ್ಟು “ಹೋಗೋಣವೇನು?” ಎಂದು ಸೊನ್ನೆ ಮಾಡಿದಳು.

ಹೆಂಡತಿಯ ಸೂಚನೆಯಿಂದ ಒಮ್ಮೆಲೆ ಎಚ್ಚರಾದಂತಾಗಿ ಈಶ್ವರನ್ ಹೇಳಿದ “ಹೌದು ವಸಂತ; ನಾವೀಗ ಹೊರಡಬೇಕು”

“ಛೆ, ಈ ದಿನ ನಿಮ್ಮನ್ನು ಬಿಡುವುದು ಸಾಧ್ಯವೇ ಇಲ್ಲ.”

“ಇಲ್ಲ ನನಗೆ ಬಹಳ ಕೆಲಸಗಳಿವೆ, ಬಿಟ್ಟುಬಿಡು”

“ರವಿವಾರ! ಸೂಟಿ!!…….. ಈ ದಿನ ಏನು ಕೆಲಸಮಾಡಬಾರದು”

“ವಸಂತ, ನನಗೆಲ್ಲಿಯ ರವಿವಾರ?…….. ಸರಕಾರಿ ಕೆಲಸವೆಂದರೆ ಹೀಗೆಯೆ. ಹಗಲು ರಾತ್ರಿ ಕೆಲಸ! ಬಿಡವೇ ಇರುವ ಹಾಗಿಲ್ಲ”

“ನೀನು ಏನೇ ಅನ್ನು ಈಶ್ವರನ್! ನಾನು ನಿನ್ನನ್ನು ಬಿಡುವುದು ಸಾಧ್ಯವೇ ಇಲ್ಲ. ಈಗ ನನ್ನ ಪರವಾನಗೆ ಅಲ್ಲದೆ, ಒಳಗಿನ ಪರವಾನಗೆಯೂ ಬೇಕು. ಈಗ ನಾನೊಬ್ಬನೇ ಇಲ್ಲ.”

“ಒಳಗಿನ ಪರವಾನಗೆ ಅಲ್ಲದೇ, ನಿಮ್ಮ ರಾಜಕುಮಾರನ ಅಪ್ಪಣೆಯೂ ಬೇಕಲ್ಲ.”

ಒಳಗೆ ಕುಮಾರ ಅಳಹತ್ತಿದನು!

ಎಲ್ಲರೂ ಒಳಗಿನ ಸಭೆಯಲ್ಲಿ ಕೂಡಿ, ಊರಿಗೆ ಹೊರಡಬಾರದೆಂಬ ನಿರ್ಣಯಕ್ಕೆ ಬಂದರು.

ರಾತ್ರಿ ಊಟವಾದ ಮೇಲೆ ಈಶ್ವರನ್ ಮತ್ತು ವಸಂತ ಒಂದು ಕೋಣೆಯಲ್ಲಿ ಮಲಗಿದರು. ತಮ್ಮ ಹಿಂದಿನ ಜೀವನವನ್ನೆಲ್ಲ ನೆನೆಯಿಸಿ ಕೊಂಡರು. ಕಾರೋಜದಲ್ಲಿ ಅಭ್ಯಾಸ ಮಾಡುವಾಗ ಇದೇ ರೀತಿಯಾಗಿ ಅವರು ಒಂದೇ ಕೋಣೆಯಲ್ಲಿ ಇದ್ದವರು; ಕೂಡಿ ಓದಿದ್ದವರು; ಕೂಡಿ ನಲಿದವರು; ಕೂಡಿ ಓದಿದವರು……. ಈಗ ಎಷ್ಟು ಆನಂದ!!

ಅಕ್ಕಾ ಮತ್ತು ಸುಧಾ ಬೇರೆ ಕೋಣೆಯಲ್ಲಿ ಮಲಗಿದರು. ಅವರಿಬ್ಬರದೂ ಹೊಸ ಪರಿಚಯ. ಆದರೂ ಹತ್ತಿರದ ಬಳಗದವರಂತೆ ಮಾತನಾಡಿದರು.

ರಾತ್ರಿ ಒಮ್ಮೆಲೆ ಉಮೇಶ ಕೆಮ್ಮಹತ್ತಿದನು. ಕೆಮ್ಮು ಸ್ಟಲ್ಪ ಜೋರಾಗಿಯೇ ಬಂದಿತು. ಆ ಕೆಮ್ಮಿನಿಂದ ಸುಧಾ ಎಚ್ಚತ್ತಳು. “ಯಾಕೆ ? ಕೆಮ್ಮುತ್ತಿದೆಯಲ್ಲ??” ಎಂದು ಕೇಳಿ ಮಗುವನ್ನು ಉಪಚರಿಸಿದಳು. ನೀಲಗಿರಿ ಎಣ್ಣೆ ತಂದು, ಎದೆಗೆಲ್ಲ ಸವರಿದಳು. ಅರ್ಧ ತಾಸಿನ ನಂತರ ಕೆಮ್ಮು ಕಡಿಮೆಯಾದಂತಾಗಿ ಉಮೇಶ ಮಲಗಿದ. ಅಕ್ಕ ಮತ್ತು ಸುಧಾ ಇಬ್ಬರೂ ನಿದ್ರೆಹೋದರು.

ಆ ರಾತ್ರಿ ಜಮಖಾನೆಯ ಮೇಲೆ ಮಲಗಿದ್ದರೂ, ಗಾಢ ನಿದ್ರೆ ಅವರನ್ನು ಆವರಿಸಿತು.!

ಈಶ್ವರನ್ ಊರಿಗೆ ಹೋದ ಮೇಲೆ, ೫-೬ ದಿನಗಳಲ್ಲಿಯೇ ಉಮೇಶನಿಗೆ ಗುಣವಾಯಿತು. ಅವನು ಎದ್ದು ಆಡತೊಡಗಿದನು.

ಮುಂಜಾನೆ ಹತ್ತು ಗಂಟೆ! ಅಂಚೆಯವನು ಟಪಾಲು ಒಗೆದು ಹೋದನು. ಈಶ್ವರನ್ ಒಂದೊಂದೇ ಪತ್ರವನ್ನು ತೆಗೆದು ನೋಡುತ್ತಿದ್ದ. ಹಾಗೆ ಒಂದು ಪತ್ರವನ್ನು ನೋಡುತ್ತಲೆ, ಅವನ ಮುಖ ಒಮ್ಮೆಲೆ ಖಿನ್ನವಾಯಿತು.

“ಏನು ಅದು? ಯಾರ ಪತ್ರ? ಮುಖ ಹೀಗೇಕೆ ಮಾಡಿದಿರಿ?” ಅಕ್ಕಾ ಒಮ್ಮೆಲೆ ಪಶ್ನೆಗಳ ಸುರಿಮಳೆಗರೆದಳು.

“ನಾನು ಈದಿನ ರಾತ್ರಿ ಹೋಗಿ, ಬೆಳಿಗ್ಗೆ ಬರುವೆ!”

“ಎಲ್ಲಿಗೆ ಹೋಗುವಿರಿ?”

“ವಸಂತನ ಪತ್ರ ಬಂದಿದೆ ”

“ಯಾರಿಗೆ ಏನಾಗಿದೆ?”

“ಕುಮಾರನಿಗೆ ಕೆಮ್ಮು ಜ್ವರ ಬಹಳವಂತೆ!”

“ಪಾಪ! ನಾವು ಮೊನ್ನೆ ಹೋದಾಗ ಎಷ್ಟು ಆಟವಾಡುತ್ತಿತ್ತು!” ವಾತ್ಸಲ್ಯದಿಂದ ಅಕ್ಕಾ ನುಡಿದಳು.

ವಸಂತನಿಗೂ ಈಶ್ವರನ್‌ಗೂ ಹತ್ತು ಮೈಲು ಅಂತರ! ಈಶ್ವರನ್ ಅದೇ ರಾತ್ರಿ ವಸಂತನ ಕಡೆಗೆ ಹೋಗಿ ಕುಮಾರನನ್ನು ನೋಡಿಕೊಂಡು ಬಂದನು. ಈಶ್ವರನ್ ಬಾಗಿಲಲ್ಲಿ ಕಾಲಿಡುತ್ತಲೆ ಅಕ್ಕ ಕೇಳಿದಳು. “ಹೇಗಿದೆ ಮಗು?” ಎಂದು.

“ವಸಂತ ಗಾಬರಿ ಮನುಷ್ಯ! ಕೆಮ್ಮಿನ ಜೊತೆಗೆ ಸ್ವಲ್ಪ ನೆಮೋನಿಯಾ ಕೂಡಿಕೊಂಡಿದೆ! ಬೇಗ ಗುಣವಾಗಬಹುದೆಂದು ಡಾಕ್ಟರ ಹೇಳಿದ್ದಾರೆ. ಆದರೂ ಕಾಳಜಿಯಿಂದ ಇರಬೇಕು. ಇಕೋ ಏನಾದರೂ ಪತ್ರ ಬಂದರೆ, ನನಗೆ ತಿಳಿಸು.”

“ಮತ್ತೆ ನೀನೇ ಇರುವಾಗ…?”

“ಇಲ್ಲ, ನಾಳಿನಿಂದ ನಾನು ಫಿರತಿಮೇಲೆ ಹೋಗಬೇಕು. ೧೫-೨೦ ದಿನ ಬರಲಿಕ್ಕಿಲ್ಲ….”

ಈಶ್ವರನ್ ಫಿರತಿಮೇಲೆ ಹೋದನು. ಅವನು ತನ್ನ ಕೆಲಸ ಮುಗಿಸಿ ಕೊಂಡು ತಿರುಗಿ ಬರುವಷ್ಟರಲ್ಲಿಯೇ, ಕುಮಾರನ ಸುದ್ದಿಯನ್ನು ಕೇಳಿ, ವಜ್ರಾಘಾತವಾದಂತಾಯಿತು. ಮಮ್ಮಲನೇ ಮರುಗಿದನು.

ಈಶ್ವರನ್ ಮತ್ತು ಅಕ್ಕ ಕೂಡಿ, ವಸಂತನ ಮನೆಗೆ ಹೋದರು ಕುಮಾರನಿಗೆ ಬಂದ ಕೆಮ್ಮು ಜೋರಾಗಿ, ಮಗುವಿನ ಜೀವವನ್ನು ತೆಗೆದು ಕೊಂಡು ಹೋಗಿದ್ದಿತು. ಹಗಲು ರಾತ್ರಿ ಕೆಮ್ಮಿ ಸಂಕಟಪಟ್ಟ ಮಗುವಿನ ಸುದ್ದಿಯನ್ನು ಕೇಳಿ ಈಶ್ವರನ್ ಮತ್ತು ಅಕ್ಕ ಬಹಳ ದುಃಖಬಟ್ಟರು.

ಸುಧಾ ಏನೂ ಮಾತನಾಡಲಿಲ್ಲ. ಬಿಕ್ಕಿ ಬಿಕ್ಕಿ ಅತ್ತಳು. ಅಕ್ಕ ಅಲ್ಲಿಯೇ ೨-೩ ದಿನ ನಿಂತುಕೊಂಡು, ಸುಧಾಳನ್ನು ಸಂತೈಸಿದಳು. ಸುಧಾ ಒಂದೇ ಸಮನೆ ದುಃಖಪಟ್ಟಳು. ಏನೂ ಮಾತನಾಡಲಿಲ್ಲ!!

ಈ ಘಟನೆ ಸಂಭವಿಸಿ ಹಲವು ದಿನಗಳು ಉರುಳಿದವು. ದಿನಗಳು ದುಃಖವನ್ನು ತಾನೇ ಮರೆಮಾಡಿದವು.

ಒಂದು ದಿನ ಬೆಳೆಗಿನಲ್ಲಿ ವಸಂತನು ಅತ್ಯಾನಂದದಿಂದ ಒಂದು ಪತ್ರವನ್ನು ಕೈಯಲ್ಲಿ ಹಿಡಿದುಕೊಂಡು ಒಳಗೆ ಬಂದನು. ಅವನಿಂದ ಒಂದು ಕ್ಷಣ ಮಾತುಗಳೇ ಅವನ ಬಾಯಿಂದ ಹೊರಡದಾದವು.

“ನೋಡು ಸುಧಾ, ಈಶ್ವರನ್ ಅಮೇರಿಕೆಗೆ ಹೋಗುವನಂತೆ! ಸರಕಾರದವರು ಕಳಿಸುವರಂತೆ!”

ಸುಧಾ ಮುಗುಳುನಗೆ ನಕ್ಕಳು!

“ಈಶ್ವರನ್ನನದು ಸುದೈವ! ಅವನ ಜಾಣತನ ನನಗೆ ಗೊತ್ತಿತ್ತು! ಕಾಲೇಜದಲ್ಲಿಯೆ ನಾನು ಭವಿಷ್ಯ ಹೇಳಿದೆ. ಇನ್ನೇನು ಅವನು ಶಿಕ್ಷಣ ಖಾತೆಯಲ್ಲಿ ದೊಡ್ಡ ಇನಸ್ಪೆಕ್ಟರ ಆಗಬಹುದು.”

ಸುಧಾ ಮತ್ತೆ ಮುಗುಳುನಗೆ ನಕ್ಕಳು!

“ನಾನು ಮುಂಬೈವರೆಗೂ ಹೋಗಿ ಕಳಿಸಿಬರುತ್ತೇನೆ. ನೀನೂ ಬರುವಿ ಏನು?”

ಸುಧಾ ಸುಮ್ಮನಿದ್ದಳು!!!

ವಸಂತ ಮಾತು ಬದಲಿಸಬೇಕಾಯಿತು. “ಏಕೆ ಸುಧಾ ಎಷ್ಟು ಸುಮ್ಮನಿರುವಿಯಲ್ಲ?”

“ಅವರು ಅಮೇರಿಕೆಗೆ ಹೋದರೆ ನಮಗೇನು?”

“ಗೆಳೆಯ ಹೋದರೆ ಆನಂದವಿಲ್ಲವೆ? ಛೀ ಹುಚ್ಚಿ, ನಿನಗೆ ಸ್ನೇಹ ಅಂದರೇನೆ ಗೊತ್ತಿಲ್ಲ. ನನ್ನ ಜಾತಿ ಬೇರೆ, ಅವನ ಜಾತಿ ಬೇರೆ. ನನ್ನ ವಿಷಯ ಬೇರೆ, ಅವನ ವಿಷಯ ಬೇರೆ. ನನ್ನ ಆಶೆ ಬೇರೆ, ಅವನ ಆಶೆ ಬೇರೆ. ಆದರೂ ಅವನು ನಮ್ಮನ್ನು ಎಷ್ಟು ಹಚ್ಚಿಕೊಂಡಿದ್ದಾನೆ.?”

“ಗಂಡಸರದು ನಮಗೆ ಏನೂ ಗೊತ್ತಿಲ್ಲ. ನೀವು ಹೋಗಿ ಬನ್ನಿ”

ಸುಧಾಳ ಮಾತುಗಳನ್ನು ಕೇಳಿ, ವಸಂತನಿಗೆ ನಿರುತ್ಸಾಹವಾಯಿತು. ರಾತ್ರಿ ಏಕಾಂತದಲ್ಲಿ ಅವಳನ್ನು ರಮಿಸುತ್ತ ಮೃದುವಾಗಿ ಮಾತನಾಡಿಸಿದ ವಸಂತ- “ಸುಧಾ ಹೀಗೇಕೆ ಮಾಡುತ್ತಿರುವೆ?”

“ನಾನೇನು ಮಾಡಿದ್ದೇನೆ ನಿಮಗೆ? ಬೇಕಾದರೆ ಹೋಗಿರಿ ಎಂದು ಆಗಳೇ ಹೇಳಿರುವೆ.”

“ಹಾಗಲ್ಲ……?”

“ನೀನು ನನ್ನ ಬಗ್ಗೆ ಚಿಂತಿಸುವುದೇ ಇಲ್ಲ. ಕುಮಾರನ ಬಗ್ಗೆಯೂ ಹಾಗೆಯೇ ಮಾಡಿದಿರಿ. ಮೊದಲನೆಯ ಸಲ ಅವರು ಇಲ್ಲಿಗೆ ಬಂದಾಗ, ನೀವು ನನ್ನನ್ನು ಬಿಟ್ಟು ಏಕೆ ಮಲಗಿದಿರಿ?”

ಸುಧಾ ಒಮ್ಮೆಲೆ ಬಿಕ್ಕಿ ಬಿಕ್ಕಿ ಅಳಹತ್ತಿದಳು.

ಆ ಅಳುವನ್ನು ಕೇಳಿದಕೂಡಲೆ, ವಸಂತನ ಎದೆ ನಡುಗಿತು. ಅವನು ಹೆಚ್ಚಿಗೆ ಮಾತನಾಡಲಿಲ್ಲ.

ತಾನು ಮತ್ತು ಈಶ್ವರನ್ ಕೂಡಿ ಒಂದು ನದಿಯಾಗಿ ಹರಿದಂತೆ, ತಮ್ಮ ಹೆಂಡತಿಯರೂ ಇರಬೇಕೆಂಬ ಮನಸ್ಸು ಗೆಳೆಯರದು ಆಗಿದ್ದಿತು. ಆದರೆ ಸುಧಾಳ ಮಾತು ಕೇಳಿದ ಕೂಡಲೇ….? ಸುಧಾಳ ಅಳುವಿನ ಅರ್ಥ ವಸಂತನಿಗೆ ಚನ್ನಾಗಿ ಆಗಲಿಲ್ಲ. ಅದು ಅವಳ ಅತಿ ಪ್ರೇಮದ ಚಿಹ್ನವಾಗಿದ್ದಿತೋ ಅಥವಾ ತನ್ನ ಗೆಳೆಯನ ಬಗ್ಗೆ ಮತ್ಸರದ ಗುರುತಾಗಿದ್ದಿತೋ ವಸಂತನಿಗೆ ತಿಳಿಯಲಿಲ್ಲ. ಸುಧಾ ಎಂದಿಗೂ ಈ ರೀತಿಗಾಗಿ ಅತ್ತಿದ್ದಿಲ್ಲ.

ವಸಂತ ತಾನೊಬ್ಬನೇ ಮುಂಬೈಗೆ ಹೋದನು. ವಿಮಾನ ನಿಲ್ದಾಣದಲ್ಲಿ ಭಾರವಾದ ಹೃದಯದಿಂದ ಇಬ್ಬರೂ ಅಗಲಿದರು. ಈಶ್ವರನ್ ಅಮೇರಿಕೆಯಿಂದ ತನ್ನ ಅನುಭವಗಳನ್ನೆಲ್ಲ ಬರೆದು ಕಳುಹಿಸುವುದಾಗಿ ಹೇಳಿದ. ವಸಂತ ಅವುಗಳನ್ನು ತಾನು ಕೆಲಸಮಾಡುವ ದಿನಪತ್ರಿಕೆಯಲ್ಲಿ ಪ್ರಕಟಸುವದಾಗಿ ಉತ್ತೇಜನವಿತ್ತು ಮಾತನಾಡಿದ. “ನೋಡೋಣ, ಒಂದು ವರ್ಷದಲ್ಲಿ ಅಂಚೆಖಾತೆಗೆ ಎಷ್ಟು ಪ್ರೊತ್ಸಾಹನ ಕೊಡುವಿ?”

“ನೀನೂ ಹಾಗೆಯೇ ಮಾಡಬೇಕು. ನಿನ್ನ ಸಮಾಚಾರ ಬರೆ. ಬರಿ ನಿನ್ನದಲ್ಲ!…… ನಿಮ್ಮವರದೂ ಬರೆಯಬೇಕು. ಮರೆತೀಯಾ ಮತ್ತೆ!” ಈಶ್ವರನ್ ಕೈಯೆತ್ತಿ ಕುಲುಕುಲು ನಗುತ್ತ ಹೇಳಿದ. ವಿಮಾನವು ಆಕಾಶದಲ್ಲಿ ಹಾರಿತು!

ಅಕ್ಕ, ಉಮೇಶ ವಸಂತ ಮತ್ತು ಇನ್ನಿತರರು ಹಾರಿ ಹೋಗುವ ವಿಮಾನವನ್ನು ನಿಟ್ಟಿಸಿ ನೋಡಿಯೇ ನೋಡಿದರು.

* * *

“ನೋಡು ಸುಧಾ, ವಸಂತ ತಿರುಗಿ ಬಂದ ಮೇಲೆ ಗ್ಯಾಝಟೆಡ್ “ಆಫೀಸರ ಆಗುತ್ತಾನೆ!”

“ಅದನ್ನೇ ಕೇಳಿ ಸಂತೋಷಪಡಿರಿ ನೀವು. ನಿಮ್ಮ ಗಾಡಿ ಹಿಂದೆಯೂ ಇಲ್ಲ ಮುಂದೆಯೂ ಇಲ್ಲ.”

“ಹಾಗಲ್ಲ ಸುಧಾ, ಸಂತೋಷ ಪಡಬೇಕಾದಾಗ ಪಡಲೇಬೇಕು. ನೋಡು, ಅವರ ಹಳ್ಳಿಯಲ್ಲಿ ಗುಡಾರ ಚೆನ್ನಾಗಿ ನೇಯುವರಂತೆ. ಹೋಗುವ ಮುಂದೆ ಒಂದನ್ನು ಕೊಟ್ಟಿದ್ದಾನೆ, ನೋಡು.”

ವಸಂತ ಗುಡಾರ ಬಿಚ್ಚಿ ತೋರಿಸಿದ. ಸುಧಾ ಮನಸ್ಸಿಲ್ಲದವರಂತೆ, ಅದರ ಕಡೆಗೂ ನೋಡಿದಳು.

ಟ್ರಂಕಿನಿಂದ ಮತ್ತೆ ಸಾಮಾನುಗಳನ್ನು ಉತ್ಸಾಹದಿಂದ ತೆರೆಯುತ್ತ, ವಸಂತ ಹೇಳಿದ “ಅಕ್ಕ ನಿನ್ನ ಸಲುವಾಗಿ ಈ ಬ್ಲೌಜ ಪೀಸ ಕೊಟ್ಟಿದ್ದಾಳೆ; ಮುಂಬೈ ಫ್ಯಾಶನ್ನಿನವು.”

ಸುಧಾಳ ನೋಟ ಬದಲಾಯಿತು. ಆ ಬಟ್ಟೆಗಳನ್ನು ಅವಳು ತುಚ್ಛ ಮಾಡಿ ಬಿಟ್ಟಳು. “ನಾವೇನು ಭಿಕಾರಿಗಳೇ?… ಕೊಳ್ಳಲಿಕ್ಕೆ ಬರುತ್ತಿದ್ದಿತಲ್ಲ.?”

ಸುಧಾಳ ಮಾತು ವಸಂತನ ಮನಸ್ಸಿಗೆ ಏನೂ ರುಚಿಸಲಿಲ್ಲ. ಛೀ, ಸುಧಾ, ಬಡತನ, ದೊಡ್ಡಸ್ತಿಕೆ ಇವುಗಳನ್ನು ತೆಗೆದುಕೊಂಡು ಏನು ಮಾಡುವಿ? ಮುಖ್ಯ ಅವರು ನಮ್ಮ ಬಗ್ಗೆ ಎಷ್ಟು ಅಭಿಮಾನ ಪಡುತ್ತಾರೆ, ಇದನ್ನು ನೋಡು…. ಅಕ್ಕ ತಾವಾಗಿಯೇ ಇಲ್ಲಿಗೆ ಬರುವವರಿದ್ದರು….”

“ಏನಂದಿರಿ?” ಸುಧಾ ಚಕಿತಳಾಗಿ ಸರಕ್ಕನೇ ಕೇಳಿದಳು.

“ಅಕ್ಕ ಬರುವವರಿದ್ದರು. ಆದರೆ ಮನೆಯಲ್ಲಿ ಕೆಲಸ ಬಿದ್ದದ್ದರಿಂದ….”

“ಈಗಂತೂ ಬರಲಿಲ್ಲವಲ್ಲ…………!!” ಸುಧಾ ನಿಟ್ಟಿಸುರು ಬಿಟ್ಟು ಆಡಿದ ಮಾತುಗಳು ಅಕ್ಕಳ ಬಗ್ಗೆ ಇರುವ ಅಸಮಾಧಾನ ಒಡೆದು ಕಾಣುತ್ತಿತ್ತು.

ಸುಧಾಳಿಗೆ ಯಾವುದೇ ವೇದನೆ ಒಮ್ಮೆಲೇ ಉಂಟಾಯಿತು. ಆದಿನ ತಲೆ ಬಹಳ ಹೊಡೆಯತೊಡಗಿತು. ಕೆಲಸ ಮಾಡದಂತವಳಾಗಿ ಮಧ್ಯಾಹ್ನದಲ್ಲಿ ಮಲಗಿಕೊಂಡುಬಿಟ್ಟಳು.

ವಸಂತ ಅವಳ ತಲೆ ಒತ್ತಿದ! ನೀಲಗಿರಿ ಎಣ್ಣೆಯನ್ನಾದರೂ ಹಚ್ಚ ಬೇಕೆಂದು, ಅವನು ಎದ್ದು ಹೋಗಿ ಬಾಟ್ಲಿಯನ್ನು ತೆಗೆದುಕೊಂಡು ಬಂದ. ಆ ಬಾಟ್ಲಿಯನ್ನು ನೋಡಿದ ಕೂಡಲೆ ಸುಧಾ “ಬೇಡ ಬೇಡ” ಎಂದು ಚೀರಿಕೊಂಡಳು !

ವಸಂತನಿಗೆ ಅರ್ಥವಾಗದ ಹಾಗಾಯಿತು. ಸುಧಾಳ ಸ್ವಭಾವನ್ನು ನೋಡಿ ಹೌಹಾರಿದನು. ಅವಳನ್ನು ಬೇಕಾದಷ್ಟು ರಮಿಸಿದನು. ಆದರೆ ಅವಳು ತನ್ನ ಮನೋಗತವನ್ನು ಹೇಳಲೇ ಇಲ್ಲ.

ಸುಧಾ ಎಷ್ಟು ಮನಬಿಚ್ಚಿ ಮಾತನಾಡುತ್ತಿದ್ದಳು. ಆದರೆ ಈಗಿನ ಅವಳ ಮನಸ್ಥಿತಿಯನ್ನು ನೋಡಿದರೆ ವಸಂತನಿಗೆ ಹೇಗೋ ಅನಿಸುತ್ತಿತ್ತು. ಮದುವೆಯಾಗಿ ಐದು ವರ್ಷವಾಗಿಲ್ಲ. ಇಷ್ಟರಲ್ಲಿ ಬಾಳಿನ ಕಹಿ ಫಲವನ್ನು ಹೇಗೆ ತಿನ್ನಬೇಕು? ಸುಧಾಳ ಮನಸ್ಸಿಗೆ ತ್ರಾಸವಾಗಬಾರದೆಂದು ವಸಂತ ಆದಷ್ಟು ಅವಳ ಹೇಳಿಕೆಯಂತೆಯೆ ನಡೆಯುತ್ತ ಹೋದ.

ಹಲವು ದಿನಗಳ ತರುವಾಯ ಅಕ್ಕ ಏನೂ ಸುದ್ದಿಯನ್ನು ತಿಳಿಸದೆ ವಸಂತನ ಮನೆಗೆ ಬಂದಳು!

ಸುಧಾ ಯಾವ ರೀತಿಯಿಂದಲೂ ಅವಳನ್ನು ಸ್ವಾಗತಿಸಲಿಲ್ಲ. ಅವಳ ಮಾತೂ ಕಡಿಮೆ ಇದ್ದವು. ವಸಂತನೊಬ್ಬನೇ ಹೆಚ್ಚಾಗಿ ಮಾತನಾಡಿದನು.

ಈಶ್ವರನ್‌ನ ಪತ್ರ ಬಂದುದರಿಂದ ಅಕ್ಕ ಇವರಲ್ಲಿ ಹಲವುದಿನ ಇದ್ದು ಹೋಗಲು ಬಂದಿದ್ದಳು.

ಮಧ್ಯಾಹ್ನ ಊಟವಾದ ಮೇಲೆ ಅಕ್ಕ ಮತ್ತು ಸುಧಾ ಒಂದೇ ಕೋಣೆಯಲ್ಲಿ ಕುಳಿತುಕೊಂಡಿದ್ದರು.

ಉಮೇಶ ಪುಟ್ಟ ಪಾದಗಳನನ್ನಿಡುತ್ತ ಆಟವಾಡುತ್ತಿದ್ದ. ಅಕ್ಕ ಅವನನ್ನು ಆಡಿಸುತ್ತಿದ್ದಳು. ಆದರೆ ಸುಧಾಳ ಲಕ್ಷ ಹೊರಗೇ ಇದ್ದಿತು.

ಹೊರಗೆ ಹಿತ್ತಲದಲ್ಲಿ ಒಂದು ಬೆಕ್ಕು ಓಡಾಡುತ್ತಿತ್ತು. ಅದು ಒಂದೇ ಸವನೆ ಕೆಟ್ಟಧ್ವನಿ ತೆಗೆದು ಒದರುತ್ತಿತ್ತು!

“ಪಾಪ ! ಆದರೆ ಮರಿಗಳನ್ನು ಒಂದು ಬಾವುಗ ನಿನ್ನೆ ಎತ್ತಿಕೊಂಡು ಹೋಯಿತು.” ಎಂದು ಅದನ್ನು ನೋಡಿದವರೊಬ್ಬರು ಕನಿಕರದಿಂದ ಅಂದರು “ತಾಯಿಯ ಹೃದಯ! ಪಾಪ! ಎಷ್ಟು ಅಳುತ್ತಿದೆ” ಎಂದು ಮತ್ತೆ ನುಡಿದರು.

ಸುಧಾಳ ಕಣ್ಣುಗಳಲ್ಲಿ ನೀರೊಡೆದವು. ಕುಳಿತಲ್ಲಿಯೇ ಸುಧಾ ಅಳ ಹತ್ತಿದಳು! ವಸಂತ ಅಕ್ಕ ಎಲ್ಲರೂ ಮಾತನಾಡಿಸಿದರು. ಅವಳು ಉತ್ತರಕೊಡಲಿಲ್ಲ. ಅವಳ ದುಃಖ ಹೆಚ್ಚಾಗಿ, ಅವಳ ಹೃದಯ ಹಾರುತ್ತಿತ್ತು.

ಅಕ್ಕ ಅದೇ ದಿನ ಸಂಜೆ ಊರಿಗೆ ಹೋಗಿಬಿಟ್ಟಳು? ವಸಂತನಿಗೆ ಖೇದವೆನಿಸಿತು!

ಈಶ್ವರನ್ ಅಮೇರಿಕೆಯಿಂದ ಅಲ್ಲಿನ ತನ್ನ ಅನುಭಗಳನ್ನೆಲ್ಲ ಕಾಗದದಲ್ಲಿ ಬರೆಯುತ್ತಿದ್ದ. ಅವುಗಳನ್ನು ವಾರಕ್ಕೊಮ್ಮೆ ವಸಂತ ದಿನಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದ. ಆ ಪತ್ರಗಳನ್ನೆಲ್ಲ ಓದುವ ಮುಂದೆ ವಸಂತನಿಗೆ ಆನಂದವೆನಿಸುತ್ತಿತ್ತು.!

ಅಕ್ಕ ಊರುಬಿಟ್ಟು ಹೋದ ಮರುದಿನ ಈಶ್ವರನ್‌ನ ಪತ್ರ ಬಂದಿತು. ಪಾಕೀಟನ ಮೇಲೆ “ಸಂಪೂರ್ಣವಾಗಿ ಆತ್ಮೀಯ” ಎಂದು ಬರೆದಿದ್ದಿತು. ಬಹಳ ಅಚ್ಚರಿಪಟ್ಟು, ಆ ಪತ್ರವನ್ನು ತೆರೆದು ವಸಂತ ಸಂಪೂರ್ಣವಾಗಿ ಓದಿದ.

ಸ್ವಚ್ಛವಾದ ಆಕಾಶದಲ್ಲಿ ಒಮ್ಮೆಲೇ ಮೋಡಗಳು ಕವಿಯುವವು. ಬಿರುಗಾಳಿ ಬೀಸುವುದು, ಪೃಥ್ವಿಯ ಮುಖದ ಆಕಾರವೇ ಬದಲಾಗುವದು! ವಸಂತನ ಸ್ಥಿತಿಯೂ ಈ ರೀತಿಯದಾಯಿತು! ಅವನಿಗೆ ಏನು ಮಾಡ ಬೇಕೋ ತಿಳಿಯದಾಯಿತು!

ತನ್ನ ಮನಸ್ಸಿಗೆ ಆನಂದವಾಗಬೇಕೆಂದು ಅಕ್ಕ ವಸಂತನ ಮನೆಗೆ ಬಂದಿದ್ದಳು. ಅಕ್ಕಳಿಗೆ ತಂದೆ-ತಾಯಿಗಳಿಲ್ಲ. ತವರುಮನೆಯೂ ಇಲ್ಲ. ಮಾವನ ಮನೆಯಲ್ಲಿದ್ದು ಬೆಳೆದವಳು ಏನೋ ಸುದೈವದಿಂದ ಅವಳಿಗೆ ಉತ್ತಮ ನೌಕರಿಯಲ್ಲಿದ್ದ ಜಾಣ ಪತಿಯು ದೊರಕಿದನು. ಆದರೆ ಇವರ ವಿವಾಹ ಮನಸ್ಸಿಗೆ ಬಾರದಿದ್ದುದರಿಂದ, ಈಶ್ವರನ್ನನ ತಂದೆ-ತಾಯಿಗಳಿಗೆ ಸೊಸೆಯನ್ನು ಕಂಡರೆ ಆಗುತ್ತಿರಲಿಲ್ಲ. ಅವರ ಕಾಟವನ್ನು ತಪ್ಪಿಸಿಕೊಳ್ಳಲು ವಸಂತನ ಮನೆಗೆ ಬಂದಿದ್ದಳು.

ಪತ್ರದ ಸಂಗಡವೇ ಈಶ್ವರನ್ ನೂರು ರೂಪಾಯಿಯ ಚಕ್ಕನ್ನು ಇಟ್ಟಿದ್ದನು. ಆದರೆ ಅಕ್ಕ ಬಂದು ತನ್ನ ಮನೆಯಲ್ಲಿ ಇರುವದೆಂದರೆ, ಸುಧಾಳ ಮನಸ್ಸಿಗೆ ಬರುವಹಾಗಿಲ್ಲ.

ವಸಂತನಿಗೆ ಏನೂ ತೋಚದಾಯಿತು! ತನ್ನ ಈ ನಡತೆಯಿಂದ ಈಶ್ವರನ್ ಏನು ತಿಳಿದುಕೊಳ್ಳುವನೋ! ಗೆಳೆತನದ ಗೋಪುರವು ಕಳಚಿ ಒಮ್ಮೆಲೆ ತಲೆಯ ಮೇಲೆ ಬಿದ್ದಂತಾಯಿತು!… ಏನೇ ಆದರೂ, ಸುಧಾಳ ಇಚ್ಛೆಯಂತೆ ಇರುವುದೇ ಅವನಿಗೆ ಒಳಿತೆಂದು ತೋರಿತು.

ಹಾ! ಹಾ! ಎಂಬುವಷ್ಟರಲ್ಲಿ ಒಂದು ವರುಷ ಉರುಳಿಹೋಯಿತು. ಈಶ್ವರನ್ ಪರದೇಶದಿಂದ ಮರಳಿ ಬಂದನು. ವಿಮಾನ ನಿಲ್ದಾಣದಲ್ಲಿಯೆ ವಸಂತನ ಮುಖವನ್ನು ನೋಡಿ ಸಂತಸಪಡುವನೆಂದು ತಿಳಿದುಕೊಂಡಿದ್ದ. ಆದರೆ ಅಲ್ಲಿ ವಸಂತ ಬಂದಿರಲೇ ಇಲ್ಲ. ಆಗ ಈಶ್ವರನ್ ಮುಂಬೈಯಿಂದಲೇ ಒಂದು ಕಾಗದ ಬರೆದ ತಾನು ತನ್ನ ಹಳ್ಳಿಗೆ ಹೋಗಿ ಮುಂದೆ ವಸಂತನ ಭೆಟ್ಟಿಗಾಗಿ ಬರುವ ದಿನಾಂಕ ಮತ್ತು ವೇಳೆಯನ್ನು ತಿಳಿಸಿದ.

ಆ ಪತ್ರದ ಸುದ್ದಿ ಕೇಳಿದ ಕೂಡಲೇ ಸುಧಾ ಹೇಳಿದಳು. “ನೀವು ಮನೆಯಲ್ಲಿ ಇರಬಹುದು. ನಾನು ನನ್ನ ತವರೂರಿಗೆ ಹೊರಟುಹೋಗುತ್ತೇನೆ !”

“ಹುಚ್ಚಿಯ ಹಾಗೆ ಹೀಗೇಕೆ ಮಾಡುವಿ ಸುಧಾ? ನಿನಗೇನೂ ತಿಳಿಯುವದಿಲ್ಲ. ಪರದೇಶದಿಂದ ಬಂದಿದ್ದಾನೆ. ಅವನನ್ನು ಭೆಟ್ಟಿಯಾಗಬಾರದೇ?”

“ನಿಮಗೆ……. ಹೆಂಗಸರ ಮನಸ್ಸು……. ತಿಳಿಯುವುದಿಲ್ಲ….” ಸುಧಾ ಅಳಹತ್ತಿದಳು.

“ಅವರ ಸುದ್ಧಿ ಕೇಳಿದ ಕೂಡಲೇ, ಹೀಗೇಕೆ ಅಳುವಿ? ನಿನಗೆ ಆಗಿದೆಯಾದರೂ ಏನು?” ವಸಂತ ಸ್ವಲ್ಪ ಧೈರ್ಯದಿಂದಲೇ ಕೇಳಿದ.

ಸುಧಾ ಅಳುತ್ತ ಹೇಳಿದಳು “ಅವರಿಗೆ ಮಗುವಿದೆ…… ಅವರು ದೊಡ್ಡವರು…… ನಮ್ಮ ಕುಮಾರ!!”

“ಏನಾದರೊಂದನ್ನು ನೆನೆದು ಏನು ಮಾಡುವೆ? ಆಗಿದ್ದೆಲ್ಲ ಆಗಿ ಹೋಗಿದೆ. ದೇವರ ದಯೆಯಿದ್ದರೆ ಎಲ್ಲವೂ ದೊರೆಯುವುದು.”

“ಇಲ್ಲ ನಿಮಗೆ ತಿಳಿಯುವದಿಲ್ಲ” ಅಳುತ್ತಲೆ ಸುಧಾ ಹೇಳಿದಳು.

ಎರಡು ಮೂರು ದಿನ ಸಂದವು. ಈಶ್ವರನ್ ಬರುವ ದಿನ ಸಮೀಪಿಸಿತು. ಮರುದಿನವೇ ಈಶ್ವರನ್ ವಸಂತನ ಕಡೆಗೆ ಬರುವವನು. ಎಲ್ಲವನ್ನೂ ಸ್ಪಷ್ಟವಾಗಿ ಮೊದಲೇ ಹೇಳಿಬಿಡಬೇಕೆಂದು ವಸಂತ ಬೆಳಗಿನಲ್ಲಿ ಸುಧಾಳಿಗೆ ಹೇಳಿದ “ನಾಳೆಯೇ ಈಶ್ವರನ್ ಬರಬಹುದು”

“ನಿಶ್ಚಿತವಾಗಿಯೂ?”

ಹೌದು, ಪತ್ರ ಬಂದಿದೆ. ಬರುವವರಿಗೆ ಬೇಡವೆನ್ನಲು ಹೇಗೆ ಆಗುವುದು?”

“ನಾನು ಇಂದೇ ಹೊರಡುವೆ!” ನಿಶ್ಚಾಯಾತ್ಮಕ ಧ್ವನಿಯಲ್ಲಿ ಸುಧಾ ಹೇಳಿದಳು.

“ಈಶ್ವರನ್ ಅಕ್ಕ ಇಲ್ಲಿಗೆ ಬಂದಾಗ, ನಾನೊಬ್ಬನೇ ಮನೆಯಲ್ಲಿ ಸೊಸೆಯಂತೆ ಇರಬೇಕೆ?” ಸಿಟ್ಟಿನಿಂದ ವಸಂತ ನುಡಿದನು.

“ನನಗೇನು ಗೊತ್ತಿಲ್ಲ. ಬೇಕಾದರೆ ನೀವೂ ಬನ್ನಿರಿ.”

ಸುಧಾಳ ಮಾತನ್ನು ಕೇಳಿ ವಸಂತನಿಗೆ ಮತ್ತಷ್ಟು ಸಿಟ್ಟು ಬಂದಿತು. “ಇಲ್ಲಿ ನೀನು ಇರಲೇ ಬೇಕು. ನನ್ನ ಮಾತನ್ನು ಕೇಳಲೇಬೇಕು.”

“ಏಕೆ? ನನ್ನನ್ನು ಕಟ್ಟಿ ಹಾಕುತ್ತೀರಾ?” ಸುಧಾ ಧ್ವನಿಯನ್ನು ಏರಿಸಿ ಮಾತನಾಡಿದಳು.

ವಸಂತನಿಗೆ ತಡೆದುಕೊಳ್ಳುವದಾಗಲಿಲ್ಲ, “ಏನೆನ್ನುತ್ತೀ ಸುಧಾ. ಯಾರ ಮುಂದೆ ಮಾತನಾಡುತ್ತೀ?” ವಸಂತ ಸಿಟ್ಟಿನಿಂದ ಕೆನ್ನೆಯ ಮೇಲೆ ಹೊಡೆದನು.

ಹಾವು ಓಡಿಹೋಗಿ ಸುರುಳಿ ಸುತ್ತಿಕೊಳ್ಳುವಂತೆ, ಸುಧಾ ಹಾಸುಗೆಯ ಮೇಲೆ ಉರುಳಿದಳು!

ಕಣ್ಣೀರಿನಿಂದ ಹಾಸುಗೆಯನ್ನು ತೋಯಿಸಿದಳು. “ನಾನು ಪಾಪಿ!… ಇಲ್ಲ, ಅವಳ ಮುಖ ನೋಡಲಾರೆ! ….ಇದೇ ದಿನ ಹೋಗಬೇಕು!…….. ಅಯ್ಯೋ ತಲೆಶೂಲೆ!….”

ಅವಳಾಡುವ ಆ ಮಾತುಗಳನ್ನು ಕೇಳಿ, ವಸಂತನ ಹೃದಯ ಕರುಣೆಯಿಂದ ಕರಗಿ ನೀರಾಯಿತು. ಹೆಣ್ಣು ಜೀವಕ್ಕೆ ಎಷ್ಟು ತ್ರಾಸಕೊಡುತ್ತಿರುವೆನಲ್ಲಾ ಎಂಬುದರ ಅರಿವುಂಟಾಯಿತು. ಅವಳನ್ನು ಸಮಾಧಾನ ಮಾಡುವುದೇ ತನ್ನ ಆದ್ಯ ಕರ್ತವ್ಯ ಎಂದು ತಿಳಿದುಕೊಂಡನು.

ಸುಧಾ ತಲೆಶೂಲೆ ಎಂದ ಕೂಡಲೆ, ಅವಳ ತಲೆಯನ್ನು ಮೆಲ್ಲಗೆ ಒತ್ತ ಹತ್ತಿದನು. ನೀಲಗಿರಿ ಬಾಟ್ಲಿ ತೆಗೆದುಕೊಂಡು, ಅದರ ಎಣ್ಣೆಯಿಂದ ಅವಳ ನರಗಳನ್ನು ತಿಕ್ಕಹತ್ತಿದನು.

ನೀಲಗಿರಿ ಎಣ್ಣೆಯ ವಾಸನೆ ಬಡಿದ ಕೂಡಲೇ, ಅವಳು ಎಚ್ಚತ್ತು, ವಸಂತನ ಕೈಯಲ್ಲಿರುವ ಬಾಟ್ಲಿಯನ್ನು ಹಿಡಿದು ದೂರ ಚೆಲ್ಲಿದಳು. ಕೋಣೆಯ ತುಂಬ ಕಾಜಿನ ಚೂರು!

ವಸಂತ ತನ್ನ ಸಂಸಾರದ ಕಾಜಿನ ಚೂರುಗಳನ್ನು ಕಂಡನು !! ಒಳ ಗೊಳಗೇ ಮನಸ್ಸು ಅತಿ ಖಿನ್ನವಾಯಿತು.

ಸುಧಾ ಬಡಬಡಿಸುತ್ತಿದ್ದಳು. “ಆ ರಾತ್ರಿ ಜೋರಾಗಿ ಕೆಮ್ಮಿತು!”

ಅವಳು ಬಡಬಡಿಸುವ ಮಾತುಗಳನ್ನು ಕೇಳಿ ವಸಂತ ಎಚ್ಚತ್ತು ಸುಧಾಳ ಮೈದಡವಿ ಮಾತನಾಡಿಸಿದ- “ಯಾರ ಸುದ್ದಿ ಹೇಳುವಿ ಸುಧಾ?”

“ನೀಲಗಿರಿ ಎಣ್ಣೆ ಹಚ್ಚಿದೆವು!!”

“ಯಾರಿಗೆ ಸುಧಾ?”

“ಕೆಮ್ಮು ಬಂದಿರುವ ಕೂಸನ್ನು…….. ಆಯ್ಯೋ…….. ಕುಮಾರ!!” ಸುಧಾಳ ಕಣ್ಣು, ಕಂಬನಿಯಿಂದ ತುಂಬಿಕೊಂಡವು.

ಕುಮಾರನ ಸಾವು, ಸುಧಾಳ ಹೃದಯವನ್ನು ಕೊರೆಯುತ್ತಿದೆಯೆಂದು ವಸಂತ ತಿಳಿದುಕೊಂಡನು. ತನ್ನ ಗೆಳೆಯನ ಮಗನಾದ ಉಮೇಶನನ್ನು ಕಂಡಾಗ, ಅವಳಿಗೆ ಮತ್ತಷ್ಟು ಮನಸ್ತಾಪವಾಗುತ್ತಿದೆಯೆಂದೂ ಅವನಿಗೆ ಅನಿಸಿತು. ಸುಧಾಳ ವಿರುದ್ಧ ಹೋದರೆ, ಅವಳ ಮನಸ್ಸಿಗೆ ಸಮಾಧಾನವಾಗುವುದು ಶಕ್ಯವೇ ಇಲ್ಲ. ಆದ್ದರಿಂದ ಊರನ್ನು ಬಿಡುವುದೇ ಹಿತವೆಂದು ತೋರಿತು.

ಐದಾರು ದಿವಸಗಳ ಬಿಡುವಿನ ಚೀಟಿ ಬರೆದು ಆಫೀಸಿಗೆ ಕಳಿಸಿದ. ಆ ದಿನ ಸಂಜೆಯ ಹೊರಡುವ ಸಿದ್ಧತೆಯನ್ನು ಮಾಡಿದ. ಎಲ್ಲ ಸಾಮಾನುಗಳನ್ನು ಕಟ್ಟುವುದು ಮುಗಿಯಿತು. ಟಾಂಗಾ ಮನೆಯ ಮುಂದೆ ಬಂದು ನಿಂತಿತು.

ಮನೆಯ ಬಾಗಿಲು ಇಕ್ಕುವಾಗ, ವಸಂತನಿಗೆ ಮತ್ತೊಂದು ವಿಷಯ ನೆನಪಾಯಿತು. ತಾವು ಹೊರಟುಹೋದಾಗ, ಈಶ್ವರನ್‌ನಿಗೆ ಹೇಗೆ ಸುದ್ದಿ ಗೊತ್ತಾಗಬೇಕು? ಅದಕ್ಕಾಗಿ ಕ್ಷಮಾಪಣೆಯ ಒಂದು ಚೀಟಿಯನ್ನು ಬರೆದು, ಬಾಗಿಲದ ಕೊಂಡಿಯಲ್ಲಿ ಸಿಗಿಸಿದನು.

ಇನ್ನು ಟಾಂಗಾ ಹೊರಡುವುದರಲ್ಲಿತ್ತು. ಆದರೆ ಅಷ್ಟರಲ್ಲಿ ಅದರೆದುರು ಮತ್ತೊಂದು ಟಾಂಗಾ ಬಂದು ನಿಂತಿತು.

“ಹೆಲೋ ವಸಂತ! ಎಂಬ ಕೂಗು ಕೇಳಿಸಿತು. ವಸಂತ ಮತ್ತು ಸುಧಾ ಇಬ್ಬರೂ ಬೆಚ್ಚಿಬಿದ್ದರು!

ಜೇಲಿನಿಂದ ಓಡಿಹೋಗುವ ಕೈದಿಗಳು ಅಧಿಕಾರಿಗಳ ಕೈಯಲ್ಲಿ ಸಿಕ್ಕಾಗ, ಆಗುವ ಪರಿಸ್ಥಿತಿಯಂತೆ ಅವರಿಬ್ಬರಿಗೂ ವಿಚಿತ್ರ ಅನುಭವವಾಯಿತು. ಮುಖ ಪೆಚ್ಚಿನಿಂದ ಕಪ್ಪಿಟ್ಟಿತು!!

“ವಸಂತ, ನನ್ನನ್ನು ಸ್ವಾಗತಿಸಲು ಹೊರಟಿದ್ದಿರೇನು? ನನ್ನ ಹೃದಯ ನಿಲ್ಲಲಿಲ್ಲ. ಬೇಗ ಬಂದುಬಿಟ್ಟಿದ್ದೇನೆ. ನೋಡು.”

ಈಶ್ವರನ್‌ನ ಮಾತಿನಲ್ಲಿ ತುಂಬ ಉತ್ಸಾಹವಿತ್ತು. ಮುಖದಲ್ಲಿ ಎಳ ನಗೆ ಸೂಸುತ್ತಿತ್ತು.

ಟಾಂಗಾದಿಂದ ಸಾಮಾನುಗಳು ಕೆಳಗೆ ಬಂದವು! ಮನೆಯ ಬಾಗಿಲದ ಕೀಲಿ ತೆಗೆಯಿತು!! ಚೀಟಿಯು ಕೆಳಗೆ ಬಿದ್ದಿತು!!!

“ಸಾಮಾನು! ಕೀಲಿ! ಚೀಟಿ! ಎಲ್ಲವೂ ಈಶ್ವರನ್ ಅವರಿಗೆ ಬಹಳ ಸಂಶಯ ಉಂಟುಮಾಡಿದವು! ” ಏನಿದು ವಸಂತ? ನನ್ನ ಮೇಲೆ ಸಿಟ್ಟೆ?” ಈಶ್ವರನ್ ನೇರವಾಗಿ ವಸಂತನಿಗೆ ಕೇಳಿದ.

ವಸಂತನೂ ಸ್ಟಷ್ಟವಾಗಿ ಎಲ್ಲವನ್ನು ಹೇಳಿದ. ಆದರೆ ಈಶ್ವರನ್ ಆ ಮಾತುಗಳನ್ನು ಕೇಳಿ, ಸುಧಾಳ ಬಗ್ಗೆ ವೈಮನಸ್ಸುತಾಳಲಿಲ್ಲ.

ಸುಧಾಳ ಬಳಿಗೆ ಹೋಗಿ, ಈಶ್ವರನ್, ಅವಳಿಗೆ ತಂದಿರುವ ಸೀರೆ ಮುಂತಾದ ಸಾಮಾನುಗಳನ್ನು ತೆರೆದು ತೋರಿಸಿದ. ತನ್ನ ಮತ್ತು ವಸಂತನ ಸ್ನೇಹದ ಹಳೆಯ ಕತೆಯನ್ನೆಲ್ಲ ಹೇಳಿದ. ಅಮೇರಿಕೆಯ ಪ್ರವಾಸದ ಸುದ್ದಿಗಳನ್ನೆಲ್ಲ ಹೇಳಿದ. ಎಲ್ಲರೂ ದುಂಡಾಗಿ ಕುಳಿತು ಕೇಳಿದರು.

ಆ ಮಾತು ಈ ಮಾತು ಎಲ್ಲಾ ಮುಗಿದ ಮೇಲೆ, ಸುಧಾ ವಿರಾಮದಿಂದ ಕುಳಿತಿರುವಾಗ, ಈಶ್ವರನ್ ಹೇಳಿದ- “ನಮ್ಮಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಬೇಕು!”

ಸುಧಾಳಿಗೆ ಬಹಳ ಖೇದವೆನಿಸಿತು.

ಈಶ್ವರನ್ ಆಡಿದ ಅಂತಃಕರಣದ ಮಾತುಗಳನ್ನು ಕೇಳಿ ಸುಧಾಳಿಗೆ ಕೆಡುಕೆನಿಸಿತು! ರಾತ್ರಿ ಮಲಗುವಾಗ ಒಮ್ಮೆಲೆ ಸುಧಾ ಅಕ್ಕಳನ್ನು ಬಿಗಿಯಾಗಿ ಅಪ್ಪಿಕೊಂಡುಬಿಟ್ಟಳು. “ಆಕ್ಕ, ನಿಮಗೆ ತ್ರಾಸು ಕೊಟ್ಟಿದ್ದೇನೆ. ನನ್ನನ್ನು ಕ್ಷಮಿಸಿ” ಎಂದು ಅತ್ತಳು.

“ಏನ್ರಿ ಸುಧಾ. ನಿಮ್ಮನ್ನು ನಾನು ಯಾವಾಗಲೂ ತಪ್ಪು ತಿಳಿದು ಕೊಂಡಿಲ್ಲ”

“ನಾನು ಪಾಪಿ ! ನಮ್ಮ ಕೂಸನ್ನು ನೀವೇ ಕೊಂದಿರೆಂದು ಹೇಳಿದೆ! ನಿಮ್ಮ ಉಮೇಶನ ಕೆಮ್ಮು – ಆ ದಿನ ರಾತ್ರಿ ನಿಮ್ಮ ಉಮೇಶನ ಕೆಮ್ಮು- ನನ್ನ ಕುಮಾರನಿಗೆ ಹತ್ತಿ, ಅವನನ್ನು ಕೊಂದಿತೆಂದು ತಿಳಿದೆ!…. ಅಯ್ಯೋ ಕ್ಷಮಿಸಿ. ನಿಮ್ಮನ್ನು ಉಪವಾಸ ಊರಿಗೆ ಕಳಿಸಿದೆ… ಅಕ್ಕಾ, ನೀವು ನನಗೆ ನಿಜವಾಗಿಯೂ ಅಕ್ಕ!” ಸುಧಾ ಆ ರಾತ್ರಿಯ ಎಲ್ಲ ಸುದ್ದಿಗಳನ್ನು ಮನ ಬಿಚ್ಚಿ ಹೇಳಿದಳು.

ಇಬ್ಬರ ಮನಸ್ಸುಗಳು ಸ್ವಚ್ಛವಾದವು. ಆ ರಾತ್ರಿ ಕತ್ತಲೆ ಇದ್ದರೂ, ಗಾಢವಾದ ಕತ್ತಲೆ ಇದ್ದರೂ, ಅವರಿಗೆ ಎಲ್ಲೆಡೆಗೂ ಬೆಳಕು ಕಂಡಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಾಲಿಸಿ
Next post ಯಾರಿಗೂ ಬರದಿರಲಿ! ಯಾರಿಗೂ ಬರದಿರಲಿ!!

ಸಣ್ಣ ಕತೆ

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…