ಶಿಶುಗಿಳಿಯಂತ ಹಸುಗೂಸ
ಏನೇ ಕಾರಣ ವಿರಲಿ
ಅನ್ಯರು ಅವರು ಯಾರೇ ಇರಲಿ ಎಂತಹವರಿರಲಿ
ಅವರ ತೆಕ್ಕೆಗೆ ಸರಿಸಿ
ಹಾಲು, ಹಣ್ಣು ಉಣಿಸಿ
ನುಡಿಗಲಿಸಿ, ನಡೆಗಲಿಸಿ
ಸಾಕುವ ವ್ಯವಸ್ಥೆ ಮಾಡಿದ ಮಾತ್ರಕ್ಕೆ
ಪ್ರೀತಿ ಕೊಟ್ಟಂತಾಗುವುದೇ?
ನಸುಕಿಗೆ ಎದ್ದ ಪಕ್ಷಿಗಳು
ಇದ್ದಲ್ಲಿಯೇ ಕೂಟ ನಡೆಸಿ
ಗೋಷ್ಠಿ ಕಲರವವ ನಡೆಸುವಂತೆ
ಆಡುವರು ಪುಟ್ಟ ಪುಟ್ಟ ಮಕ್ಕಳು
ಓಣಿಯೊಳಗೆ.
ಅರೆಕ್ಷಣ ಕಣ್ತಪ್ಪಿದರೆ ಸಾಕು
ಆತಂಕಪಡುವ, ಕೂಗಿ ಕರೆವ
ಹುಡುಕಿ ಬರುವ
ಹೆತ್ತವರ ಉಲಿಗೆ ಸ್ಪಂದಿಸಿ
ಹಾರುತ್ತಾ ಹೋಗಿ
ತೆಕ್ಕೆಯನು ಸೇರಿ
ಮುದ್ದುಗರೆಯಲಿ ತೇಲಿ ಮುಳುಗುವ
ಓರಗೆಯ ಮಕ್ಕಳನ್ನು
ಪರಿತ್ಯಕ್ತನಂತೆ
ಒಂಟಿ ಒಂಟಿಯಾಗಿ
ನಿಂತು ನೋಡುವ ಮಗುವ ನೋಡಿ
ಚೂರಿಯಾಡಿಸಿದಂತಾಗುವುದು ಕರುಳಿನಲಿ.
ಅಡವಿಗೆ ತೆರಳಿ
ಕಣ್ಣಿ ಹರಿವುದನೆ ಕಾದು
ಜಗ್ಗಿ ಎಳೆದರೂ… ಅಡ್ಡಗಟ್ಟಿದರೂ… ಬಗ್ಗದೆ
ಅಂಬಾ! ಎಂದು ಮೊರೆಯುತ್ತಾ
ಓಡೋಡಿ ಬಂದು
ಕೊಟ್ಟಿಗೆಯ ಹೊಕ್ಕು
ಕಂದನ ಬಾಯಿಗೆ ಕೆಚ್ಚಲನ್ನೊಡ್ಡಿ ನಿಂತು
ವಾತ್ಸಲ್ಯಪೂರದಲಿ
ಮೈ ಪೂರ ನೆಕ್ಕಿ
ತಣಿವ ತಾಯಿ ಹಸುವ ನೆನಪಿಗೆ ತರುವಳು
ಕಂದನನು ನೋಡಲು ಬರು ಅಮ್ಮ.
ಹಾಯ್! ಹಾಯ್!
ಮೂರು ಕಡೆಗಳಲಿ
ನೋವಿನ ಮಡುಗಳನು ಸೃಜಿಸಿ
ಜೀವ ಹಿಂಡುವ ಸ್ಥಿತಿಯು
ಯಾರಿಗೂ ಬರದಿರಲಿ! ಯಾರಿಗೂ ಬರದಿರಲಿ!!
*****