ಇರವಿಗೂ ಅರಿದೇನು? ಇರವೆ ಅರಿದರಿದು; ಮೇ-
ಣಿದುವೆ ಅದ್ಭುತರಮ್ಯ ಶ್ರೀವಿಭೂತಿ!
ಕಂಡುದನೆ ಕೊನೆಯೆಂದು ಕಣ್ಣು ಬಣ್ಣಿಸುತಿತ್ತು.
ಅರಿವು ಒಡನುಡಿಯಿತ್ತು ‘ನೇತಿ ನೇತಿ’.
ಒಂದು ಕಿಡಿಕಣದಲ್ಲು ಮಿಡಿದು ಮಿಳ್ಳಿಸುತಿರುವ
ಇರವಿನಾಲದ ಬೀಜವದಕು ಕಿರಿದು.
ಹಬ್ಬಿರುವ ಹೂಬಳ್ಳಿ ಬ್ರಹ್ಮಾಂಡಮಂಡಲವು
ಅರಿವಿನಂಕೆಯೊಳಿರುವದದಕು ಹಿರಿದು!
ಇರವು ಆಕೃತಿಗೊಳ್ಳುತಿಹುದೆ ಚೆನ್‌ಚೆಲುವು.
ಅರಿವಿನಲ್ಲರಗಿದುದೆ ಅದರ ಬಾಳ್ ಬಲವು.
ಚೆಲುವು ಬಲಗೊಂಡು ಬಿಡುತಿರುವ ನನೆಗೊನೆಯು-
ಬಳ್ಳಿವಳ್ಳಿಯ ಒಲವೆ-ತಾಯ್ತವರುಮನೆಯು.
*****