ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ, ಅದೇ ರೀತಿ ಸೆಂಟ್ರಿಸ್ಟನನ್ನು ಬಲಪಂಥದವರು ಮತ್ತು ಎಡಪಂಥದವರು ಕೂಡ. ಈತನನ್ನು ಒಂದಲ್ಲ ಒಂದು ದಿನ ತಮ್ಮ ಕಡೆಗೆ ಒಲಿಸಿಕೊಳ್ಳಬಹುದು ಎಂಬ ಆಸೆ ಎರಡೂ ಗುಂಪಿನವರಿಗೆ ಇರುವುದೇ ಇದಕ್ಕೆ ಕಾರಣ. ಆದರೆ ಅಪಾಯವಿಲ್ಲವೆಂಬ ಕಾರಣದಿಂದ ಮಾತ್ರ ನಾನು ಅಗ್ನೋಸ್ಟಿಕನೂ ಸೆಂಟ್ರಿಸ್ಟನೂ ಆದೆನೆಂದು ಹೇಳಿದರೆ ನನಗೆ ನಾನೇ ಅನ್ಯಾಯ ಮಾಡಿಕೊಂಡಂತಾಗುತ್ತದೆ. ವಾಸ್ತವವಾಗಿ ನನಗೆ ಈ ಎರಡು ಪದಗಳ ಅರ್ಥ ಗೊತ್ತಾದ್ದೇ ಬಹಳ ತಡವಾಗಿ. ಅಗ್ನೋಸ್ಟಿಕ್ ಎಂಬ ಪದವನ್ನು ಮೊದಲು ಬಳಸಿದವನು ಥಾಮಸ್ ಹಕ್ ಸ್ಲಿ ಯೆಂದು ತಿಳಿದೆ. ಥಾಮಸ್ ಹಕ್ ಸ್ಲಿ ಯೆಂದರೆ ಜೀವ ವಿಜ್ಞಾನಿಯಾಗಿ ಹೆಸರು ಗಳಿಸಿದ ಜೂಲಿಯನ್ ಮತ್ತು ಲೇಖಕನಾಗಿ ಹೆಸರು ಗಳಿಸಿದ ಆಲ್ಡಸ್ ಹಕ್ ಸ್ಲಿಯರ ಅಜ್ಜ- ಸ್ವತಃ ಹೆಸರಾಂತ ಜೀವವಿಜ್ಞಾನಿ. ದೇವರೆಂಬ ಸಂಗತಿ ನಮ್ಮ ಪ್ರಜ್ಞೆಗೆ ನಿಲುಕದ ಸಂಗತಿಯೆಂದು ಅವನ ಮತ. ಇದು ನನಗೆ ಕಾಲೇಜಿನಲ್ಲಿ ಓದುತ್ತಿರುವಾಗ ಗೊತ್ತಾದ್ದು. ಇನ್ನು ಸೆಂಟ್ರಿಸ್ಟ್ ಎಂಬ ಪದ-ಬಹಳ ಕಾಲದ ತನಕ ಈ ಇಂಗ್ಲಿಷ್ ಪದದ ಕರ್ತೃ ನಾನೇ ಎಂದು ತಿಳಿದುಕೊಂಡಿದ್ದೆ. ಆದರೆ ಒಂದು ದಿನ ಯಾವುದೋ ಪತ್ರಿಕೆಯ ಸಂಪಾದಕೀಯದಲ್ಲಿ ಇದೇ ಪದ ನಾನು ತಿಳಿದುಕೊಂಡ ಅರ್ಥದಲ್ಲೇ ಬಳಕೆಯಾದದ್ದು ನೋಡಿದೆ. ಒಮ್ಮೆ ಕಂಡ ವ್ಯಕ್ತಿನಂತರ ಮತ್ತೆಮತ್ತೆ ದಾರಿಯಲ್ಲಿ ಸಿಗುವಂತೆ, ಈ ಪದ ಮುಂದೆ ಬಹಳ ಬಳಕೆಯಲ್ಲಿರುವಂತೆ ಅನಿಸಿ, ಒಂದು ತರದ ನಿರಾಸೆಯುಂಟಾಗದೆ ಇರಲಿಲ್ಲ.
ಆದರೆ ನಾನೇಕೆ ಇದನ್ನೆಲ್ಲ ಹೇಳಬೇಕು? ಈ ಕತೆ – ಎಂದರೆ ನಾನೀಗ ಹೇಳ ಹೊರಟಿರುವ ಸಂಗತಿ – ನನಗೆ ಸಂಬಂಧಿಸಿದ್ದಲ್ಲ; ರಾಮನ್ ನಾಯರಿಗೆ ಸಂಬಂಧಿಸಿದ್ದು. ರಾಮನ್ ನಾಯರ್ ಕತೆಯಲ್ಲಿ ನನ್ನ ಪಾತ್ರವೇನೂ ಇಲ್ಲ; ಏನಾದರೂ ಇದ್ದರೆ ಅದು ಬರಿಯ ಪ್ರೇಕ್ಷಕನ ಪಾತ್ರ. ಆದರೂ ಪ್ರೇಕ್ಷಕನಿಲ್ಲದೆ ಪಾತ್ರವಿಲ್ಲ. ಆ ಮಟ್ಟಿಗೆ ಪ್ರೇಕ್ಷಕನೂ ಕೂಡ ಪ್ರಧಾನವಾಗುತ್ತಾನೆ. ಇರಲಿ, ಈಗ ರಾಮನ್ ನಾಯರ ಸಂಗತಿ ಹೇಳುತ್ತೇನೆ. ನಾಯರ್ ಮತ್ತು ನಾನು ಒಂದೇ ಶಾಲೆಯಲ್ಲಿ ಓದಿದವರು. ಐದೋ ಆರೋ ಕ್ಲಾಸಿನಲ್ಲಿ ಆತ ಓದು ನಿಲ್ಲಿಸಿದ. ಇಂದಿನ ಪರಿಭಾಷೆಯಲ್ಲಿ ಹೇಳುವುದಾದರೆ ಡ್ರಾಪ್ ಔಟ್ ಆದ. ಈ ಬಗ್ಗೆ ಹಲವು ಆರ್ಥಿಕ ಸಾಮಾಜಿಕ ಹಾಗೂ ಚಾರಿತ್ರಿಕ ಕಾರಣಗಳಿಂದಾಗಿ ನನಗೆ ಬಹಳ ಪಶ್ಚಾತ್ತಾಪವಿದೆ. ಯಾಕೆಂದರೆ ರಾಮನ್ ಬಹಳ ಬುದ್ಧಿವಂತ ಹುಡುಗನಾಗಿದ್ದನೆಂದು ನನ್ನ ನೆನಪು. ಅವನು ಮುಂದೆ ಓದುವುದು ಸಾಧ್ಯವಿರುತ್ತಿದ್ದರೆ ಏನೇನೋ ಆಗಿ ಬಿಡಬಹುದಾಗಿತ್ತು ಅನಿಸುತ್ತದೆ. ಈಗಲೂ ಅವನನ್ನು ಕಂಡಾಗ ಒಂದು ತರದ ಅಪರಾಧಿ ಭಾವನೆ ನನ್ನ ಒಳಗೊಳಗೇ ಹೊರಳುತ್ತದೆ ಎಂಬುದನ್ನಿಲ್ಲಿ ಹೇಳದಿರಲಾರೆ. ರಾಮನ್ ಡ್ರಾಪೌಟಾದರೆ ನಾನೇಕೆ ಅಪರಾಧಿ ಯಾಗಬೇಕು ಎಂಬುದಕ್ಕೆ ನನಗೆ ಸರಿಯಾದ ಉತ್ತರವಿಲ್ಲ. ನನಗೂ ಇದಕ್ಕೂ ಯಾವ ಸಂಬಂಧವೂ ಇಲ್ಲ.
ಡ್ರಾಪೌಟ್ ಎಂಬುದು ಅವನ ಸನ್ನಿವೇಶವನ್ನು ಸರಿಯಾಗಿ ಚಿತ್ರಿಸುವ ಪದವಲ್ಲ. ಈ ಪದ ಚಿತ್ರಿಸುವುದು ಒಂದು ರೀತಿಯ ಉದ್ದೇಶರಾಹಿತ್ಯವನ್ನು, ಮಂಕುತನವನ್ನು, ಅನಾಥಭಾವವನ್ನು. ರಾಮನ್ ನಲ್ಲಿ ಇದು ಯಾವುದೂ ಇರಲಿಲ್ಲ. ಆ ಶಾಲೆಯನ್ನು ತ್ಯಜಿಸಿದ್ದು ಹೊಲವನ್ನು ನೋಡಿಕೊಳ್ಳುವುದಕ್ಕೆಂದು. ಉದ್ದೇಶರಾಹಿತ್ಯ, ಮಂಕುತನ ಹಾಗೂ ಅನಾಥಭಾವ ಆವರಿಸಿದ್ದು ಕಾಲೇಜಿಗೆ ಹೋದ ನನಗೆ. ನಾನು ಪೇಟೆಯ ಬೀದಿಗಳಲ್ಲಿ ಸಿನಿಮಾ ಪೋಸ್ಟರುಗಳನ್ನು ನೋಡುತ್ತ ಅಲೆಯುತ್ತಿದ್ದಾಗ ರಾಮನ್ ನಾಯರ್ ಮಣ್ಣಿನೊಂದಿಗೆ ತನ್ನ ಸಂಬಂಧವನ್ನು ಖಚಿತಗೊಳಿಸುತ್ತಿದ್ದ. ಡಿಗ್ರಿ ಮುಗಿಸಿ ನಾನು ಊರಿಗೆ ಮರಳುವ ಹೊತ್ತಿಗೆ, ಊರಿಗೆ ಸಾಕಷ್ಟು ಅಪರಿಚಿತನಾಗಿಬಿಟ್ಟಿದ್ದೆ. ನಮ್ಮದೇ ಕಂಗಿನ ತೋಟದಲ್ಲಿ ನಡೆಯುವುದು ಕೂಡ ಹೊಸ ಅನುಭವದಂತೆ ಆಗಿ ಬಿಟ್ಟಿತ್ತು. ಆ ತಂಗಾಳಿ, ಆ ಜೀರುಂಡೆಗಳ ಧ್ವನಿ, ಆ ಸೋಗೆಗಳ ನೆರಳು, ಆ ತೊಟ್ಟಿಕುವ ಹನಿಗಳು ನಗರದಲ್ಲೆಲ್ಲಿ? ಹಿಂದೆ ಕೆಲಸದಾಳುಗಳ ಜತೆ ನಾಟಿ, ಅಗೆತಗಳಿಗೆ ಸೇರುತ್ತಿದ್ದವನು (ಕೆಲವೊಮ್ಮೆ ತೀರ ಮೋಜಿಗೋಸ್ಕರ) ಈಗ ಕೇವಲ ಮೇಲ್ತನಿಖೆಯ ಪಾತ್ರಧಾರಿ. ಕೆಲಸದಾಳುಗಳೂ ಹಾಗೆಯೇ – ನನ್ನನ್ನು ಪೂರ್ತಿಯಾಗಿ ಸ್ವೀಕರಿಸಲು ತಯಾರಿಲ್ಲ. ನನ್ನನ್ನು ಕಂಡರೆ ಕೆಲಸದ ಮಧ್ಯೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದವರು ತಟ್ಟನೆ ಎದ್ದು ಬಿಡುತ್ತಾರೆ. ಅವರ ಗೊಳ್ಳನೆ ನಗೆ ನಿಂತುಹೋಗುತ್ತದೆ. ಈ ಬಗ್ಗೆ ನಾನೇನೂ ಮಾಡುವಂತಿಲ್ಲ.
ಮತ್ತೆ ನನ್ನ ಕುರಿತಾಗಿಯೇ ಹೇಳಿಕೊಳ್ಳುತ್ತಿರುವೆ! ರಾಮನ್ ನಾಯರಿಗೆ ಚಿಕ್ಕದರಲ್ಲೇ ಮದುವೆ ಯಾಯಿತೆಂದು ತೋರುತ್ತದೆ. ಕುಟುಂಬದಿಂದ ಬೇರೆ ಯಾಗಿ ಅವನು ತನ್ನದೇ ಹೊಲ ಮನೆಗಳನ್ನು ಮಾಡಿಕೊಂಡ. ಆದರೆ ಇದೇನೂ ಅಷ್ಟು ಸುಲಭವಾಗಿ ನಡೆಯಲಿಲ್ಲ. ಅವನಿಗೆ ಬಂದ ಹೊಲಗದ್ದೆಗಳು ಒಕ್ಕಲು ಹಕ್ಕಿನವು. ಆಗ ಭೂ ಸುಧಾರಣೆಯ ಸಂಧಿಕಾಲ. ಕಮ್ಯೂನಿಸಮ್ಮಿನ ಬಿರುಗಾಳಿ ಊರಲ್ಲೆಲ್ಲ ಬೀಸುತ್ತಿತ್ತು. ಅದಕ್ಕೆ ಎಷ್ಟೋ ಮಂದಿ ಜಮೀನ್ದಾರರು ಕೊಚ್ಚಿ ಹೋದರು. ಆದರೆ ಕೆಲವರು ಮಾತ್ರ ಆಸೆ, ಆಮಿಷ, ಬೆದರಿಕೆ, ದೊಂಬಿ ಮುಂತಾದ ವಿವಿಧ ರೀತಿಗಳಿಂದ ಇದನ್ನು ಎದುರಿಸಿ ಬಂಡೆಯಂತೆ ಉಳಿದುಕೊಂಡರು. ರಾಮನ್ ನಾಯರ್ ಕಮ್ಯೂನಿಸ್ಟನಾಗಿ ಬಿಟ್ಟಿದ್ದಾನೆ ಎಂಬ ಸುದ್ದಿ ಕೇಳಿಬಂತು. ಯಾಕೆಂದರೆ ಊರಿನಲ್ಲೀಗ ಮುಖ್ಯವಾಗಿ ಎರಡೇ ಎರಡು ಪಂಗಡಗಳು-ಕಮ್ಯೂನಿಸ್ಟರು ಮತ್ತು ಅಲ್ಲದವರು. ಈ ಅಲ್ಲದವರಲ್ಲಿ ಕಾಂಗ್ರೆಸಿಗರು, ಪ್ರಜಾಸೋಶಲಿಸ್ಟರು, ಸೋಶಲಿಸ್ಟರು ಮುಂತಾದ ಒಳಪಂಗಡಗಳಿದ್ದರೂ ಕಮ್ಯೂನಿಸಮ್ಮಿನ ವಿರೋಧಿಗಳಾಗಿ ಅವರೆಲ್ಲರೂ ಒಂದೇ ಎಂಬ ನಂಬಿಕೆ ಯಿತ್ತು. ಭೂಸುಧಾರಣೆಯ ಮುಂಬೆಳಗಿನ ಕಾರಣ ರಾಮನ್ ನಾಯರ್ ಕಮ್ಯೂನಿಸ್ಟನಾದನೇ ಅಥವಾ ಅದಕ್ಕೇ ಮೊದಲೇ ಆತನಿಗೆ ಆ ಒಲವುಗಳಿದ್ದವೇ ಯಾರಿಗೆ ಗೊತ್ತು? ಅದೊಂದೂ ಮುಖ್ಯವಲ್ಲ. ಆತ ಕಮ್ಯೂನಿಸ್ಟ್ ಪಾರ್ಟಿಯ ಸಕ್ರಿಯ ಸದಸ್ಯನಾದ್ದು, ಸಂಘಟಕನಾಗಿ ಜಾಥಾಗಳಲ್ಲಿ ಭಾಗವಹಿಸಿದ್ದು, ಚಳುವಳಿಗಳಲ್ಲಿ ಸೇರಿದ್ದು, ವಿರೋಧಿಗಳೊಂದಿಗೆ ವಾಗ್ವಾದ ಮಾಡಿದ್ದು ಮುಖ್ಯ. ಸಾಧಾರಣವಾಗಿ ರಾಜಕೀಯ ಸಂಗತಿಗಳಿಂದ ದೂರವಿದ್ದ ನನ್ನ ತಂದೆಯ ಚರ್ಚಿಗಳಲ್ಲೂ ರಾಮನ್ ನಾಯರ ಹೆಸರು ಆಗಾಗ ಬರುತ್ತಿತ್ತು. ಆ ಕಾಲದಲ್ಲಿ ರಾಜಕೀಯ ಬೇರೆ ಜನಜೀವ ಬೇರೆ ಎಂಬ ಪ್ರತ್ಯೇಕತೆ ಮಾಯವಾಗತೊಡಗಿದ್ದೇ ಇದಕ್ಕೆ ಕಾರಣವಿದ್ದೀತು. ರಾಮನ್ ನಾಯರ್ ಹೊಲಮನೆ ತನಗೆ ಒಕ್ಕಲುತನದ ಹಕ್ಕಿನಿಂದ ಸೇರಿದ್ದೆಂದು ಲ್ಯಾಂಡ್ ಟ್ರಿಬ್ಯೂನಲ್ ಗೆ ಮನವಿ ಮಾಡಿದ್ದು ದೊಡ್ಡ ಗುಲ್ಲಾಯಿತು. ಎಲ್ಲರೂ ಹಾಗೆ ಮನವಿ ಮಾಡುತ್ತಿದ್ದ ಕಾಲದಲ್ಲಿ ರಾಮನ್ ಮಾಡಿದೇ ಯಾಕೆ ಗುಲ್ಲಾ ಗಬೇಕೆಂಬುದು ಆಶ್ಚರ್ಯ. ರಾಮನ್ ಉಳುಮೆ ಮಾಡುತ್ತಿದ್ದ ಜಾಗದ ಒಡೆಯನೂ ಒಬ್ಬ ನಾಯರೇ. ಹಲವು ವರ್ಷ ಈ ತಿಕ್ಕಾಟ ನಡೆದು ಉಳುವವನೇ ಹೊಲದೊಡೆಯನಾದ.
ಕೋರ್ಟು ಕಚೇರಿಗಳಿಗೆ ಎಡತಾಕುವ ಈ ಸಂದರ್ಭದಲ್ಲೂ ರಾಮನ್ ತನ್ನ ಹೊಲವನ್ನು ಹಾಳುಗೆಡವಲಿಲ್ಲ. ಹಗಲೂ ರಾತ್ರಿ ಎಂಬಂತೆ ದುಡಿದ. ಸ್ವಂತ ಒಳ್ಳೆ ಕೆಲಸಗಾರನಾದ ರಾಮನ್ ಯಾವುದಕ್ಕೂ ಯಾರನ್ನೂ ಆಶ್ರಯಿಸುವ ಅಗತ್ಯವಿರಲಿಲ್ಲ. ಒಮ್ಮೆ ಗದ್ದೆಗಳಲ್ಲಿ ಬತ್ತ ಹಾಕಿದರೆ ಇನ್ನೊಮ್ಮೆ ತರಕಾರಿಯನ್ನೋ ಮತ್ತೊಂದನ್ನೋ ಹಾಕುತ್ತಿದ್ದ. ಒಂದು ವರ್ಷ ಒಂದು ಗದ್ದೆಯಲ್ಲಿ ಬತ್ತ, ಇನ್ನೊಂದು ವರ್ಷ ತಂಬಾಕು-ಹೀಗೆ ರೊಟೇಶನ್ ಪದ್ಧತಿಯನ್ನೂ ಉಪಯೋಗಿಸುತ್ತಿದ್ದ. ಅವನ ಹೊಲ ಗದ್ದೆಗಳು ಸುತ್ತು ಮುತ್ತಲ ವಠಾರದಿಂದ ಪ್ರತ್ಯೇಕವಾಗಿ ಹಸಿರು ಹಸಿರಾಗಿ ಕಾಣಿಸುತ್ತಿದ್ದವು. ಒಮ್ಮೆ ನಾನು ಅವನ ಹೊಲಗಳ ಬದಿಯಿಂದ ಎಲ್ಲಿಗೋ ಹೋಗುತ್ತ ಅಲ್ಲಿ ಬೆಳೆದ ತರಕಾರಿಗಳನ್ನು ನೋಡಿದೆ. ದೊಡ್ಡ ದೊಡ್ಡ ಆನೆ ಗಾತ್ರದ ಕುಂಬಳ, ಸೌತೆಕಾಯಿಗಳು ನೆಲದಲ್ಲಿ ಸುಖವಾಗಿ ಮಲಗಿದ್ದುವು. ಚಪ್ಪರಗಳಿಂದ ಹಾಗಲ, ಪಡುವಲಗಳು ತೊನೆಯುತ್ತಿದ್ದವು. ಗದ್ದೆಯಲ್ಲೆ ತೋಡಿದ ಬಾವಿಯಿಂದ ರಾಮನ್ ನೀರೆತ್ತಿ ಈ ಗಿಡಗಳಿಗೆ ಹಾಕುತ್ತಿದ್ದ. ಅವನು ಅಂಗಿ ತೊಟ್ಟಿರಲಿಲ್ಲ. ಸೊಂಟಕ್ಕೆ ಒಂದು ಅಡ್ಡ ಮುಂಡು ಅಷ್ಟೆ. ಮೈ ಕಂಚಿನಂತೆ ಮಿರುಗುತ್ತಿತ್ತು. ಆದಿ ಮಾನವನಂತೆ ಭೂಮಿಯ ರಹಸ್ಯಗಳನ್ನು ತಾನೇ ಪ್ರಥಮ ಬಾರಿಗೆ ಗುರುತಿಸಿದಂತೆ ಅವನಿದ್ದ. ರಾಮನ್ ನನ್ನನ್ನು ನೋಡಲಿಲ್ಲ. ಅವನನ್ನು ನೋಡುತ್ತ ಒಂದು ಕ್ಷಣ ನಾನೇ ಅಲ್ಲಿ ನಿಂತೆ.
ಇದೇ ಸೌತೆಕಾಯಿಗಳು ಹಸುರಾಗಿ ಮೈದುಂಬಿದ ಮೇಲೆ ನಮ್ಮ ಮನೆಗೂ ಬರುತ್ತವೆಂದು ನನಗೆ ಗೊತ್ತು. ತಂದೆಯೇ ರಾಮನ್ ನಾಯರನ್ನು ಎಲ್ಲಾದರೂ ಕಂಡು ನಾಲ್ಕು ಮಣ ಸೌತೆಗೆ ಆರ್ಡರ್ ಮಾಡಿರುತ್ತಾರೆ. ಆತ ಕಾಯಿಗಳನ್ನು ಒಂದೇ ಹೊರೆಯಲ್ಲಿ ಒಂದು ಮುಂಜಾನೆ ಹೊತ್ತು ತಂದು ಮನೆಯಲ್ಲಿಳಿಸಿ ಹೋಗುತ್ತಾನೆ. ನಾಲ್ಕು ಮಣ! ಅಷ್ಟು ಭಾರವನ್ನು ತಲೆ ಹೊರೆಯಲ್ಲಿ ಹೊರುವವರು ಹೆಚ್ಚು ಮಂದಿಯಿಲ್ಲ. ಹಾಗೆ ಯತ್ನಿಸೆ ಬಿದ್ದು ಬೆನ್ನಹುರಿ ಮುರಿದುಕೊಂಡು ಜೀವ ಪರ್ಯಂತ ನರಳಿದವರನ್ನು ನಾನು ನೋಡಿದ್ದೇನೆ. ಆದರೆ ರಾಮನ್ ಗೆ ಇದೊಂದೂ ಲಕ್ಷ್ಯವಿಲ್ಲ. ಪ್ರತಿವರ್ಷ ತಂಬಾಕಿನ ಸಪ್ಲೈ ಕೂಡ ಇವನಿಂದಲೇ ಆಗಬೇಕು. ಎಂದರೆ ಆತ ತಂಬಾಕಿನ ಬೆಳೆ ಮಾಡಿದ ವರ್ಷ. ನನ್ನ ತಂದೆ ಯಾವ ಚಟವೂ ಇಲ್ಲದವರಿಗೆ ತಂಬಾಕಿನ ಚಟ ಅಂಟಿಕೊಂಡಿತ್ತು. ಕಾಫ಼ಿ ಚಹಾ ಅಭ್ಯಾಸ ಆದವರು ವಿಮರ್ಶಿಸುವ ಹಾಗೆ ಅವರು ತಂಬಾಕಿನ ತರಗತಿಗಳನ್ನು ಅದರ ಸೂಕ್ಷ್ಮಗಳನ್ನು, ವಿಮರ್ಶಿಸಬಲ್ಲವರಾಗಿದ್ದರು. ರಾಜಕೀಯವಾಗಿ ಅವರಿಗೆ ಕಮ್ಯೂನಿಸ್ಟರೆಲ್ಲ ಶತ್ರುಗಳು. ಆದರೆ ತಂಬಾಕು ರಾಮನ್ ನಾಯರ್ ಬೆಳಿಸಿ ಹದ ಮಾಡಿದ್ದೇ ಆಗಬೇಕು. ಈ ವ್ಯವಹಾರಕ್ಕೆ ಏನು ಹೇಳಬೇಕೋ ಗೊತ್ತಾಗುವುದಿಲ್ಲ. ಆದರೆ ಒಂದಂತೂ ನಿಜ. ರಾಮನ್ ತಂಬಾಕಿನ ಕಟ್ಟುಗಳನ್ನು ತಂದು ಚಾವಡಿಯಲ್ಲಿ ಬಿಚ್ಚಿದರೆ ಅದರ ಘಾಟು ಘಂ ಎಂದು ಎಲ್ಲಕಡೆ ಹರಡುತ್ತಿತ್ತು. ಆಹಾ! ಅಹಹ! ಎಂಬ ಉದ್ಗಾರಗಳು ಅಲ್ಲಿದ್ದವರ ಬಾಯಿಂದ ಹೊರಡುತ್ತವೆ. (ನನಗೆ ಮಾತ್ರ ತಂಬಾಕು ಸೇರುತ್ತಿರಲಿಲ್ಲ. ಅದ್ದರಿಂದಲೇ ನಾನು ಊರಿನಲ್ಲಿದ್ದೂ ಊರಿನವನಾಗದೆ ಇದ್ದೇನೆ!) ಇಂಥ ತಂಬಾಕನ್ನು ಸ್ಯಾಂಪಲ್ಲಿಗೆಂದು ರುಚಿ ನೋಡಿ ತಲೆ ಗಿರ್ರನೆ ಸುತ್ತ ತೊಡಗಿ ಕುಳಿತಲ್ಲೇ ಮಲಗಿದವರೂ ಇದ್ದಾರೆ!
ಎಂದರೆ ರಾಮನ್ ನಾಯರ್ ಉಳುವವನೇ ಹೊಲದೊಡೆಯ ಎಂಬ ನೀತಿಯನ್ನು ಕೇವಲ ನೀತಿಗಾಗಿ ನಂಬಿದವನಲ್ಲ. ಅದನ್ನು ಕಾರ್ಯರೂಪದಿಂದ ಸಮರ್ಥಿಸಿದವನು. ಪಾರ್ಟಿಯಲ್ಲಿ ಅವನ ಸ್ಥಾನವೇನಿತ್ತೂ ನನಗೆ ತಿಳಿಯದು. ರಾಮನ್ ನಾಯರ್ ಸ್ವಂತ ದುಡಿಯುವ ವ್ಯಕ್ತಿ ಯಾದ್ದರಿಂದ ಪಾರ್ಟಿಯ ಸಕ್ರಿಯ ಕಾರ್ಯಕರ್ತನಾಗಿ ದಿನ ವ್ಯಯಿಸುವುದು ಅವನಿಗೆ ಸಾಧ್ಯವಿರಲಿಲ್ಲ. ಭೂಸುಧಾರಣೆಯೇ ಮುಂತಾದ ಕಾರ್ಯಕ್ರಮಗಳಲ್ಲಿ ಈಗ ಕಾಂಗ್ರೆಸ್ ಸರಕಾರವೇ ಆಸಕ್ತಿ ತೋರಿಸಿದ್ದರಿಂದ ಪಾರ್ಟಿಯ ಅಬ್ಬರವೂ ತುಸು ಕಡಿಮೆಯಾಗಿತ್ತೆಂದು ಹೇಳಬಹುದು. ಕೇವಲ ಸಿದ್ಧಾಂತ ಎಷ್ಟು ಮಂದಿಯನ್ನು ಎಷ್ಟು ಕಾಲ ಆಕರ್ಷಿಸಬಲ್ಲುದು? ಹೆದ್ದಾರಿಯ ಉದ್ದಕ್ಕೂ ಊರಿರುತ್ತಿದ್ದ ಕೆಂಪು ಝಂಡಾಗಳು ಗಾಳಿ ಮಳೆಗೆ ನೆನದು ತಾಜಾ ಬಣ್ಣವನ್ನು ಕಳೆದುಕೊಂಡದ್ದಲ್ಲದೆ ಗಾಳಿಗೆ ಹರಿದು ಚಿಂದಿಯಾದುವು. ಇದನ್ನು ತೆಗೆದು ಹೊಸ ಝಂಡಾ ಅಲ್ಲಿ ಊರಲು ಯಾರೂ ಉತ್ಸಾಹ ತೋರಲಿಲ್ಲ. ರಾಮನ್ ನಾಯರ್ ಮಹಾ ಕರ್ಮಯೋಗಿಯಂತೆ ತನ್ನ ಅಧ್ವಾನದಲ್ಲಿ ನಿರತನಾಗಿದ್ದ. ಮೊದಲು ತಪ್ಪದೆ ದಿನಪತ್ರಿಕೆಯನ್ನು ತರಿಸಿ ಓದುತ್ತಿದ್ದವನು ಈಗ ಓದುತ್ತಿದ್ದನೋ ಇಲ್ಲವೋ. ಯಾವ ರಾಜಕೀಯದಲ್ಲೂ ಅವನಿಗೆ ಉತ್ಸಾಹವಿದ್ದಹಾಗೆ ತೋರಲಿಲ್ಲ. ಅಸೆಂಬ್ಲಿ ಚುನಾವಣೆ ಬಂತು, ಹೋಯಿತು. ದೊಡ್ಡ ನೆರೆ ಬಂದು ಕೆಸರು ಮಣ್ಣನ್ನು ಎತ್ತಿ ಹಾಕುವಂತೆ ತನ್ನ ಗುರುತುಗಳನ್ನು ಬಿಟ್ಟಿತು.
ಹೀಗಿರುತ್ತ ಇದ್ದಕ್ಕಿದ್ದಂತೆ ರಾಮನ್ ನಾಯರ್ ಸನ್ಯಾಸಿಯಾಗಿಬಿಟ್ಟನೆಂದರೆ ಅದನ್ನು ನಂಬುವುದಾದರೂ ಹೇಗೆ? ಯಾರು ನಂಬಲಿ, ಬಿಡಲಿ ಅವನಂತೂ ಹಾಗಾದುದು ನಿಜ. ಕಾಷಾಯ ವಸ್ತ್ರ ಧರಿಸಿ ಓಡಾಡುವುದನ್ನು ನಾನೇ ಕಣ್ಣಾರೆ ನೋಡಿದೆ. ನನ್ನಂತೆ ಊರ ಹಲವರು ನೋಡಿದರು. ಕಾಷಾಯ ಬಣ್ಣದ ಲುಂಗಿ, ಅದೇ ಬಣ್ಣದ ನಿಲುವಂಗಿ, ಅದರದೇ ರುಮಾಲು; ಹೆಗಲಿನಲ್ಲಿ ತೂಗು ಹಾಕಿದ ಜೋಳಿಗೆ. ಆ ಜೋಳಿಗೆಯಲ್ಲೇನಿತ್ತೆಂಬುದು ಅವರವರ ಊಹೆಯಂತೆ. ಹಣೆಗೆ ತ್ರಿಪುಂಡ್ರ, ಕಾಲಿಗೆ ಚಪ್ಪಲಿಯಲ್ಲ, ಬರಿಗಾಲು. ಕೈಯಲ್ಲೊಂದು ಬಡಿಗೆ, ಇದನ್ನು ಊರುವ ಬದಲು (ಬಡಿಗೆ ಊರಿ ನಡೆಯುವ ವಯಸ್ಸಲ್ಲ ಅವನದು) ಕಂಕುಳಲ್ಲಿ ಕೂಡೆಯ ಜತೆ ಇರಿಸಿಕೊಳ್ಳುತ್ತಿದ್ದ. ಇದು ತನಕ ವೀಳೆಯ ಹಾಕುತ್ತಿದ್ದ ರಾಮನ್ ಅದು ಬಿಟ್ಟು ಬೀಡಿ ಸೇದತೊಡಗಿದ್ದ. ಗಡ್ಡ , ತಲೆಗೂದಲು ಹುಲುಸಾಗಿ ಬೆಳೆದು ಸಾಕ್ರ ಟೀಸನಂತೆ ಅಥವಾ ಬೈಬಲಿನ ಕಥಾ ಪಾತ್ರಗಳಂತೆ ಕಾಣಿಸುತ್ತಿದ್ದ. (ಸಾಕ್ರೆಟೀಸನ ಬಗ್ಗೆ ಇದು ನನ್ನ ಸ್ವಂತ ಕಲ್ಪನೆ; ಬೈಬಲಿನ ಕಥಾ ಪಾತ್ರಗಳ ಬಗ್ಗೆ ಹಾಲಿವುಡ್ ಸಿನಿಮಾಗಳಿಂದ ನನಗೆ ಅಲ್ಪ ಸ್ವಲ್ಪ ಗೊತ್ತು.)
ಕಮ್ಯೂನಿಸಂ ಮತ್ತು ಸನ್ಯಾಸ! ಇದೆಂಥ ಮಾರ್ಪಾಟು! ದಕ್ಷಿಣಧ್ರುವದಿಂದ ಉತ್ತರ ಧ್ರುವಕ್ಕೆ ಒಂದೇ ಜಿಗಿತ ಹೇಗೆ ಸಾಧ್ಯ? ಅಥವಾ ಇದು ಏಕ್ ದಮ್ ಅದ ಮಾರ್ಪಾಟು ಅಲ್ಲವೋ? ಕಮ್ಯೂನಿಸಂ ಮತ್ತು ಸನ್ಯಾಸ…..ಇವೆರಡರಲ್ಲಿ ಯಾವುದು ಸ್ಥಾಯೀ ಭಾವ? ಯಾವುದು ಸಂಚಾರೀ ಭಾವ? ಈತ ಸನ್ಯಾಸವನ್ನು ಬಿಟ್ಟು ಮತ್ತೆ ಕಮ್ಯೂನಿಸ್ಟನೂ ಕೃಷಿಕನೂ ಆಗುವನೆ? ಕಮ್ಯೂನಿಸ್ಟನಾಗುವ ಮೊದಲು ಈತನಲ್ಲಿ ಸನ್ಯಾಸತ್ವದ ಬೀಜವಿತ್ತೆ? ಆ ಬೀಜ ಹಲವು ವರ್ಷ ನಿದ್ದೆ ಹೋಗಿದ್ದು ಈಗ ಯಾವುದೋ ತೇವಕ್ಕೆ ತೆರೆದುಕೊಂಡು, ಮೊಳಕೆಯೊಡೆದು, ಇವನನ್ನು ಆಕ್ರಮಿಸಿ, ಗಡ್ಡಮೀಸೆಯ ಫಲಪುಷ್ಪಗಳಾಗಿ ಪ್ರಕಟಗೊಂಡಿತೆ? ಇನ್ನು ಮುಂದೆ ಯಾವನೇ ಸನ್ಯಾಸಿಯನ್ನೂ ಮೊದಲಿನಂತೆ ನಿರ್ಲಿಪ್ತಭಾವದಿಂದ ನೋಡುವುದು ಸಾಧ್ಯವೆ? ಯಾವ ಜಟಾಜೂಟದ ಹಿಂದೆ ಏನು ನಿಗೂಢತೆ ಅಡಗಿದೆ ಯೆಂದು ಹೇಳುವುದು ಹೇಗೆ?
ರಾಮನ್ ನಾಯರ್ ಈಗ ಮನೆಬಿಟ್ಟು ಊರೂರು ಅಲೆಯ ತೊಡಗಿದ್ದ -ಪಾದ ಯಾತ್ರೆ. ಸುತ್ತಮುತ್ತಲ ಪವಿತ್ರ ಸ್ಥಳಗಳಾದ ಕೊಲ್ಲೂರು, ಶೃಂಗೇರಿ, ಸುಬ್ರಹ್ಮಣ್ಯ, ಧರ್ಮಸ್ಥಳಗಳನ್ನು ಮಾತ್ರವಲ್ಲದೆ ಗುರುವಾಯೂರು, ತಿರುಪತಿ, ಮಂತ್ರಾಲಯವೇ ಮೊದಲಾದ ದೂರದ ಕ್ಷೇತ್ರಗಳನ್ನೂ ಅವನು ಆಗಿಂದಾಗ್ಗೆ ಸಂದರ್ಶಿದುತ್ತಿದ್ದನೆಂದು ಪ್ರತೀತಿ. ಇದೇನು, ಈ ನಮ್ಮೂರು ಇನ್ನೊಬ್ಬ ಶಂಕರನನ್ನು ಯಾವ ಮುನ್ಸೂಚನೆಯನ್ನೂ ಕೊಡದೆ ಸೃಷ್ಟಿಸಿ ಬಿಟ್ಟಿತೆ? ಎಷ್ಟಾದರೂ ಕಾಲಡಿ ಇಲ್ಲಿಗೆ ಅಷ್ಟೇನೂ ದೂರವಲ್ಲ – ಇದೂ ವಿಶ್ವಾಮಿತ್ರನ ಸೃಷ್ಟಿಗೆ ಸೇರಿದ ಜಾಗ. ಕರಾವಳಿಯ ಈ ಕೆಂಪು ಮಣ್ಣಿನಲ್ಲೇನೋ ವಿಶೇಷವಿರಬೇಕು. ಆದರೆ, ರಾಮನ್ ಯಾವ ಸಿದ್ಧಾಂತದ ಪ್ರಚಾರಕ್ಕೂ ಹೊರಟುದಲ್ಲ. ಅವನು ಸಂಚರಿಸುತ್ತಿದ್ದುದು ಮೌನಿಯಾಗಿ. ಮಾತಿನ ಮೇಲೆ ಬೇಸರ ಬಂದು ಮಾತು ಬಿಟ್ಟವನಂತೆ. ಅವನ ದಿನಚರಿ ಹೀಗಿತ್ತು. ಬೆಳಗ್ಗಿನಿಂದ ಮಧ್ಯಾಹ್ನದ ತನಕ, ಮಧ್ಯಾಹ್ನದಿಂದ ಸಂಜೆಯ ತನಕ ನಡೆಯುವುದು. ಸಂಜೆಯಾದಾಗ ಸಿಕ್ಕಿದ ಬಸ್ಸ್ಟಾಂಡಿನಲ್ಲೋ ಶಾಲೆ ಅಂಗಡಿಗಳ ಜಗುಲಿಯಲ್ಲೋ ತಂಗುವುದು. ಆರಂಭದಲ್ಲಿ ಅವನು ಸ್ವಂತ ಅಡಿಗೆ ಮಾಡಿಕೊಳ್ಳುತ್ತಿದ್ದ; ನಂತರ ಹೋಟೆಲುಗಳಲ್ಲಿ ಏನಾದರೂ ತಿನ್ನತೊಡಗಿದ. ದಿನಕ್ಕೆ ತುಸು ಹೊತ್ತು ಭಿಕ್ಷೆ ಬೇಡುತ್ತಿದ್ದ! ಭಿಕ್ಷೆ! ಕಮ್ಯೂನಿಸ್ಟನೂ ಕೃಷಿ ಕಾರ್ಮಿಕನೂ ಆದ ರಾಮನ್ ನಾಯರ್ ಈಗ ಭಿಕ್ಷುಕನಾಗಿ! ಈ ಮಾರ್ಪಾಟಿನ ಕೆಮಿಸ್ಟ್ರಿ ನನ್ನ ಜಿಜ್ಞಾಸೆಗೆ ನಿಲುಕದ್ದು.
ತನ್ನ ಸಂಚಾರಾಪಧಿಯಲ್ಲಿ ಕೆಲವು ಬಾರಿ ನಮ್ಮ (ತನ್ನ) ಊರಿಗೂ ಬರುತ್ತಿದ್ದ. ಮನೆಗೆ ಹೋಗಿ ಹೆಂಡತಿ ಮಕ್ಕಳ ಭೇಟಿ ಮಾಡುತ್ತಿದ್ದರೂ ಇರಬಹುದು. ಊರ ಚಹಾದಂಗಡಿಗೂ ಬಂದು ಒಂದಷ್ಟು ಹೊತ್ತು ಕುಳಿತು ಹೋಗುತ್ತಿದ್ದ. ಈಗ ಅವನ ದೇಹಾರೋಗ್ಯ ಮೊದಲಿನಂತಿರಲಿಲ್ಲ. ಆ ಬಲಿಷ್ಟವಾದ ಮಾಂಸ ಖಂಡಗಳು, ಮೈಯ ಕಂಚಿನ ಬಣ್ಣ, ಕಣ್ಣುಗಳ ಪ್ರಕಾಶ-ಒಂದೂ ಇಲ್ಲ. ಅವನ ದೇಹ ಕೃಶವಾಗಿದ್ದು, ಕಣ್ಣುಗಳು ಬೇಸಿಗೆಯ ಬಾವಿಯಂತೆ ಆಳಕ್ಕೆ ಹೋಗಿದ್ದುವು. ಗಡ್ಡ ಮೀಸಗಳಲ್ಲಿ ಅಲ್ಲಲ್ಲಿ ಬಿಳಿ ಕೂದಲುಗಳು ಅವನ ವಯಸ್ಸನ್ನು ಒಮ್ಮೆಲೆ ಹೆಚ್ಚಿಸಿ ಬಿಟ್ಟಿದ್ದುವು.
ಇತ್ತ ಅವನ ಹೊಲ ಮನೆಗಳೇನಾದುವು? ಏನಾಗಬಹುದೋ ಹಾಗೆಯೇ ಆದುವು- ಹುಲ್ಲು ಕಳೆ ಬೆಳೆಯತೊಡಗಿದುವು. ಅವನ ಹೆಂಡತಿ ಮಕ್ಕಳು ತಮ್ಮಿಂದೆಷ್ಟು ಸಾಧ್ಯವೋ ಅಷ್ಟು ದುಡಿದು ಬದುಕಲು ಬೇಕಾದ ಕನಿಷ್ಠ ಉತ್ಪತ್ತಿ ತೆಗೆಯುತ್ತಿದ್ದರು, ಅಷ್ಟೆ. ಆದರೆ ಆ ಸುಪ್ರಸಿದ್ಧ ತಂಬಾಕು, ರಕ್ಕಸ ಸೌತೆಗಳು ಎಲ್ಲ ಪುರಾಣದಷ್ಟು ಹಿಂದೆ ಸರಿದುವು. ಈಗ ರಾಮನ್ ವಿಷಯದಲ್ಲಿ ಯಾರಿಗೂ ಅಸೂಯಯಿಲ್ಲ ಅವನ ಹೊಲಗದ್ದೆಗಳು ಯಾರಿಗೂ ಹೊಟ್ಟೆ ಕಿಚ್ಚನ್ನು ಉಂಟು ಮಾಡುವುದಿಲ್ಲ ಹಿಂದಿನ ಧಣಿಗಳು ಕೂಡ ಅವನನ್ನು ಕ್ಷಮಿಸಿದ್ದಾರೆ. ಯಾರಾದರೂ ರಾಮನ್ ನ ಮಾತೆತ್ತಿದರೆ. “ತ್ಜ್ ತ್ಜ್ ತ್ಚ ಎಷ್ಟೊಳ್ಳೆ ಮನುಷ್ಯ! ಏನಾಗಿ ಹೋದ! ” ಎಂಬ ಕನಿಕರದ ಮಾತುಗಳು ಅವರ ಬಾಯಿಂದ ಬರುತ್ತವೆ.
ರಾಮನ್ ಸನ್ಯಾಸಿಯಾದ್ದು ಹೇಗೆಂಬುದರ ಬಗ್ಗೆ ಅನೇಕ ಥಿಯರಿಗಳಿದ್ದವು. ಅವನಿಗೆ ಭಯಂಕರವಾದ ಕಾಯಿಲೆಯೊಂದು ಅಂಟಿಕೊಂಡಿದ್ದು ಅದರ ನಿವಾರಣೆ ಗೋಸ್ಕರ ಸನ್ಯಾಸಿಯಾಗಬೇಕಾಯಿತು ಎಂಬುದು ಒಂದು, ಹೆಂಡತಿ ಮಕ್ಕಳೊಡನೆ ಜಗಳವಾದ್ದು ಇನ್ನೊಂದು, ಯಾವುದೋ ಒಂದು ಶಕ್ತಿ ಯನ್ನು ಒಲಿಸಿಕೊಳ್ಳಲು ಮಂತ್ರ, ಮಾಟ ಮಾಡಿ ಹೀಗಾಯಿತು ಎಂಬುದು ಮತ್ತೊಂದು, ವಿರೋಧಿಗಳು ಯಾರೋ ಅವನಿಗೆ ಕೈ ವಿಷ ಹಾಕಿದರು, ಮಾಟ ಮಾಡಿದರು ಎಂಬುದು ಮಗುದೊಂದು. ಒಮ್ಮೆ ಊರ ಕಮ್ಯೂನಿಸ್ಟ್ ಮುಖಂಡರೊಬ್ಬರನ್ನು ನಾನು ಕೇಳಿದೆ:
“ರಾಮನ್ ನಾಯರ್ ಹೀಗಾದರಲ್ಲ. ಇದಕ್ಕೇನೆನ್ನುತ್ತೀರಿ?”
ಅದಕ್ಕೆ ಅವರೆಂದರು :
“ಪಾರ್ಟಿಗೂ ಅವನಿಗೂ ಏನೇನೂ ಸಂಬಂಧವಿಲ್ಲ.”
“ಪಾರ್ಟಿಯ ಸಕ್ರಿಯ ಸದಸ್ಯರಾಗಿರಲಿಲ್ಲವೆ ಅವರು?”
“ಹಾಗೇನೋ ಇಲ್ಲ, ನನ್ನ ಜಮೀನಿನ ರಕ್ಷಣೆಗೆ ಪಾರ್ಟಿಯ ಬೆಂಬಲ ಅವರಿಗೆ ಅಗತ್ಯವಾಗಿತ್ತು ಆಗ. ಆದ್ದರಿಂದ ನಮ್ಮ ಜತೆ ಇರುತ್ತಿದ್ದರು. ಇಂಥವರು ಎಷ್ಟೋ ಮಂದಿ ಇರುತ್ತಾರೆ, ನಾವದಕ್ಕೆ ತಲೆ ಕೆಡಿಸಿಕೊಳ್ಳಲಾಗುತ್ತದೆಯೇ?”
೦ ೦ ೦
ರಾಮನ್ ನಾಯರ್ ಸನ್ಯಾಸಿ ಯಾದ್ದು ಸುದ್ದಿಯಾದಂತೆ ಆತ ಗೃಹಸ್ಥಾಶ್ರಮಕ್ಕೆ ಹಿಂತಿರುಗಿದ್ದು ಸುದ್ದಿಯಾಗಲಿಲ್ಲ. ಊರಿನ ಸಾಮಾಜಿಕ ಸಂದರ್ಭದಲ್ಲಿ ಅವನೇನೂ ಮಹತ್ವದವನಾಗಿರಲಿಲ್ಲ. ಆದ್ದರಿಂದಲೇ ರಾಮನ್ ಹೋದರೇನು ಬಂದರೇನು ಎಂದು ಊರು ಗ್ರಹಿಸಿರಬೇಕು. ವ್ಯಕ್ತಿಯ ಪ್ರಾಧಾನ್ಯವನ್ನು ಕೇವಲ ಅವನ ಒಳಗಿನ ಶಕ್ತಿಯೊಂದೇ ನಿರ್ಧರಿಸುವುದಲ್ಲ : ಹೊರಗಿನ ಶಕ್ತಿಗಳೂ ನಿರ್ಧರಿಸುತ್ತವೆ. ಹೇಗಿದ್ದರೂ ರಾಮನ್ ನಾಯರ್ ಸುದ್ದಿಯಲ್ಲಿರಲಿಲ್ಲ. ಅವನನ್ನು ಮರೆತು ಊರು ಮುಂದುವರಿದಿತ್ತು. ಇಡೀ ಊರು ವಿದ್ಯುದೀಕರಣವಾದ್ದರಿಂದ ಹೊಲಗಳಲೆಲ್ಲ ಪಂಪ್ ಸೆಟ್ಟುಗಳು ಬಂದಿದ್ದುವು. ಭೊತದ ಗುಡಿಗಳಂತೆ ಅಲ್ಲಲ್ಲಿ ಪಂಪ್ ಸೆಟ್ಟಿನ ಗುಡಿಗಳು. ಇವುಗಳ ಸದ್ದೇ ಸದ್ದು. ಹೊಸ ಸೀಮೆಗೊಬ್ಬರ, ಬೀಜ, ಕೃಷ್ತಿ ವಿಧಾನಗಳ ಪ್ರಚಾರ ನಡೆದಿತ್ತು. ಹಸಿರೆಲೆ ಗಿಡಗಳು, ಕೋ ಕೋ ಗಿಡಗಳು. ಹೀಗೆ ಏನೇನೋ. ನಾನು ಈ ಕ್ರಾಂತಿಯಲ್ಲಿ ಪಾಲುಗಾರನಾಗಿ ಪಂಪುಸೆಟ್ಟನ್ನು ಸ್ಥಾಪಿಸಿ, ಹೊಸತಾಗಿ ಒಂದಷ್ಟು ಕೋಕೋ ಗಿಡಗಿಳನ್ನು ಹಾಕಿಸಿದೆ. ಇಂಥ ಸನ್ನಿವೇಶದಲ್ಲಿ ರಾಮನ್ ನಾಯರ್ ಕಾಷಾಯ ವಸ್ತ್ರಗಳನ್ನು ತ್ಯಜಿಸಿ ಹಳೆಯ ದಿರುಸಿಗೆ ಮರಳಿದ್ದ. ಮತ್ತೆ ತನ್ನ ಹೊಲಗಳಲ್ಲಿ ದುಡಿಮೆ ಆರಂಭಿಸಿದ್ದ. ಆದರೆ ಒಮ್ಮೆ ಕಳೆದುಕೊಂಡ ಯೌವನವಾಗಲಿ, ದೇಹಶಕ್ತಿಯಾಗಲಿ, ಉತ್ಸಾಹವಾಗಲಿ ಮರಳಿಮೊದಲಿನಂತೆ ಬರುತ್ತದೆಯೆ? ರಾಮನ್ ನ ಈಗಿನ ದುಡಿಮೆ ಯಾಂತ್ರಿಕವಾಗಿತ್ತು. ಮೊದಲಿನಂತೆ ಬೆಳೆ ತೆಗೆಯುವ ಪ್ರಯತ್ನವನ್ನೇನೋ ಮಾಡಿದ್ದು ಆದರೆ ತನ್ನನ್ನು ತಿರಸ್ಕರಿಸಿ ಹೋದವನನ್ನು ಭೂಮಿಯು ತಿರಸ್ಕರಿದಂತಿತ್ತು. ಇದು ಹಿಂದಿನಂತೆ ಹಸಿರೊಡೆಯಲಿಲ್ಲ. ಕಳೇ ಮುಳ್ಳು ಗಿಡಗಳು ಅವನ ಗೈರುಹಾಜರಿಯಲ್ಲಿ ನೆಲವನ್ನು ತಮ್ಮ ಸ್ವಾಧೀನ ಮಾಡಿಕೊಂಡಿದ್ದವು. ಈಗ ಅವು ’ಒಮ್ಮಿಂದೊಮ್ಮೆಲೆ ಎದ್ದು ಹೋಗಲಾರವು.
ರಾಮನ್ ತಂಬಾಕು ಹಾಕಿದ. ತರಕಾರಿ ಹಾಕಿದ. ಮೊದಲಿನಂತೆ ಅವನ್ನು ಊರವರಿಗೆ ಮಾರಲು ಯತ್ನಿಸಿದ. ಕೆಲವರು ಅಭ್ಯಾಸಬಲದಿಂದ ಕೊಳ್ಳುತ್ತಿದ್ದರು. ಅಂಥವರಲ್ಲಿ ನಾವೂ ಸೇರಿದ್ದೆವು. ರಾಮನ್ ನ ತಂಬಾಕಿಗೆ ಮೊದಲಿನ ಖಾರವಿರದಿದ್ದರೂ ತಂದೆ ಸುಮ್ಮನೆ ಇರಲಿ ಪಾಪ ಎಂಬ ಧೋರಣೆಯಿಂದಲೋ ಏನೋ ಅದನ್ನೇ ಖಾಯಸು ಮಾಡುತ್ತಿದ್ದರು. ರಾಮನ್ ಮೊದಲಿನಂತೆ ನಾಲ್ಕು ಮಣದ ತಲೆಹೊರೆಯನ್ನು ಹೊರಲಾರ. ಮೊದಲಿನ ಉತ್ಸಾಹದ ಮಾತುಕತೆ ಕೂಡ ಅವನಲ್ಲಿರಲಿಲ್ಲ ಎಂದರೆ ಮೌನಿಯೆಂದಲ್ಲ. ಎಷ್ಟು ಬೇಕೋ ಅಷ್ಟು ಮಾತು. ಹೆಚ್ಚಿಲ್ಲ, ಕಡಿಮೆಯಿಲ್ಲ. ಎಲ್ಲರಂತೆ ಅವನೂ ಊರ ಕೆಲವು ಹೋಟೆಲುಗಳಿಗೆ ಹೋಗಿ ಚಹಾ ಕುಡಿದು ಬೀಡಿ ಸೇದಿ ಬರುತ್ತಿದ್ದ. ಈತ ಒಮ್ಮೆ ಕಮ್ಯೂನಿಸ್ಟನಾಗಿದ್ದ, ಒಮ್ಮೆ ಸನ್ಯಾಸಿಯಾಗಿದ್ದ! ಎಂಬ ಕುತೂಹಲ ಜನ ತೋರಿಸಲಿಲ್ಲ. ರಾಮನ್ ನ್ ಮಾತೇನು”? ಖೂನಿ ಮಾಡಿ ಹತ್ತು ಹದಿನಾಲ್ಕು ವರ್ಷ ಸೆರೆಮನೆಯಲ್ಲಿದ್ದು ಮರಳಿ ಬಂದವರೂ ನಮ್ಮ ಊರಿನಲ್ಲಿದ್ದಾರೆ. ಅವರ ಬಗ್ಗೆಯೂ ಜನರ ಧೋರಣೆ ಒಂದೇ. ಸ್ವಲ್ಪದಿನ ಕುತೂಹಲ ತೋರಿಸುತ್ತಾರೆ. ಜೇಲಿನಲ್ಲಿ ಏನೇನು ಮಾಡುತ್ತಿದ್ದೆ ಎಂದು ವಿಚಾರಿಸುತ್ತಾರೆ. ಅದಕ್ಕೆ ಆ ವ್ಯಕ್ತಿ ಬೇಕಾದ ಉತ್ತರ ಕೊಡುತ್ತಾನೆ. ಈ ಉತ್ತರದಲ್ಲಿ ವಿಶೇಷವೇನೂ ಇರುವುದಿಲ್ಲ; ಯಾಕೆಂದರೆ ಇಲ್ಲಿ ಮಾಡುವಂತೆ ಅಲ್ಲೂ ಆತ ಏನೋ ಅಧ್ವಾನ ಮಾಡಿರುತ್ತಾನೆ. ಕುತೂಹಲ ಇಲ್ಲಿಗೆ ಮುಗಿಯುವುದು.ನಂತರ ಆತನನ್ನು ನೆಂಟರ ಮನೆಗೆ ನಾಲ್ಕು ದಿನ ಹೋಗಿ ಇದ್ದು ಬಂದವನನ್ನು ಸ್ವೀಕರಿಸುವಂತೆ ಜನ ಸ್ವೀಕರಿಸುತ್ತದೆ. ಆತ ಮತ್ತೆ ಅದೇ ಕ್ಷೌರದಂಗಡಿ, ಕಳ್ಳಿ ನಂಗಡಿ, ಚಹಾದಂಗಡಿ ಸುತ್ತುತ್ತ ಊರಿಗೆ ಹೊಂದಿಕೊಳ್ಳುತ್ತಾನೆ. ಹದಿನಾಲ್ಕು ವರ್ಷದ ಕಾರಾಗೃಹವಾಸ! ಹದಿನಾಲ್ಕು ವರ್ಷ ಹೆಂಡತಿ ಮಕ್ಕಳಿಂದ ಬೇರ್ಪಡೆ! ಇದನ್ನು ಊರು ಸುಳ್ಳು ಮಾಡಿಬಿಡುತ್ತದೆ!
ಇರಲಿ, ನನಗೆ ರಾಮನ್ ನಾಯರೊಂದಿಗೆ ಉಂಟಾದ ಒಂದು ವೈಯಕ್ತಿಕ ಅನುಭವನ್ನು ವಿವರಿಸಿ ಈ ವೃತ್ತಾಂತವನ್ನು ನಿಲ್ಲಿಸುವೆ. ಒಂದು ಮುಸ್ಸಂಜೆ ರಾಮನ್ ನಮ್ಮ ಮನೆಗೆ ಬಂದ. ತುಸು ಸೌತೆ ಬೆಳೆದದ್ದಿದೆ, ಬೇಕೋ ಎಂದು ವಿಚಾರಿಸಲು. ತಂದೆಯವರು ಮನೆಯಲ್ಲಿಲ್ಲದ್ದರಿಂದ ನಾನೇ ಅವನ ಜತೆ ಮಾತುಕತೆ ನಡೆಸಬೇಕಾಯಿತು. ಸೌತೆ ಕೊಳ್ಳುವುದೆಂದು ನಿರ್ಧರಿಸಿದೆ. ತನಗೆ ಹೊರೆ ಹೊರುವುದು ಕಷ್ಟವಾಗುತ್ತಿದೆಯೆಂದೂ, ಮರುದಿನ ಆಳುಗಳನ್ನು ಕಳಿಸಿದರೆ ಒಳ್ಳೆಯದೆಂದೂ ರಾಮನ್ ತಿಳಿಸಿದ. ನಾನು ಸರಿಯೆಂದೆ. ನಂತರ ಹಲವು ಕಾಲದಿಂದ ನನ್ನ ಮನಸ್ಸಿನಲ್ಲಿದ್ದ ಒಂದು ಸಂಗತಿಯನ್ನು ಆತನೊಂದಿಗೆ ಕೇಳಬೇಕೆಂದಿನಿಸಿತು. ಒಂದು ಕಾಲದಲ್ಲಿ ನಾವು ಒಂದೇ ಶಾಲೆಗೆ ಹೋದವರಾದರೂ ಅನೇಕ ಕಾರಣಗಳಿಂದ ನಮಗಿಬ್ಬರಿಗೆ ಸಲಿಗೆ ಬೆಳೆದಿರಲಿಲ್ಲ. ಆದ್ದರಿಂದ ಹೇಳಿದೆ-
“ರಾಮನ್ ನಾಯರ್, ನಿಮ್ಮೊಡನೆ ಒಂದು ಸಂಗತಿ ವಿಚಾರಿಸೋಣವೆಂದು ತುಂಬಾ ದಿನದಿಂದ ಅನಿಸಿದೆ. ಇದು ಸ್ವಲ್ಪ ವೈಯಕ್ತಿಕ ವಿಷಯ, ಕೇಳಲೆ?”
“ಓಹೋ ಅದಕ್ಕೇನು ಕೇಳಿ” ಎಂದ ರಾಮನ್, ತುಸು ನಗುತ್ತ.
ನೀವು ಒಂದು ಕಾಲದಲ್ಲಿ ಕಮ್ಯೂನಿಸ್ಟರಾಗಿದ್ದೀರಿ. ಅದೂ ಎಲ್ಲರಂತಲ್ಲ. ಪಾರ್ಟಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರು. ನಂತರ ಇದ್ದಕ್ಕಿದ್ದಂತೆ ಎಲ್ಲಾ ಬಿಟ್ಟು ಸನ್ಯಾಸಿಗಳಂತೆ ಊರೂರು ಸುತ್ತ ತೊಡಗಿದಿರಿ. ಈಗ ಮತ್ತೆ ಊರಿಗೆ ಮರಳಿದ್ದೀರಿ. ಇದೇಕೆ ಹೀಗಾಯಿತು?”
“ಕಮ್ಯೂನಿಸ್ಟನಾಗಿದ್ದು ಸನ್ಯಾಸಿಯಾದೆನೇಕೆ ಎಂಬುದೇ ನಿಮ್ಮ ಮುಖ್ಯ ಸಂದೇಹವಲ್ಲವೆ?”
“ಹೌದು. ಕಮ್ಯೂನಿಸ್ಟರು ಭೌತಿಕವಾದಿಗಳು. ಸನ್ಯಾಸವೆಂದರೆ ತದ್ವಿರುದ್ಧ.”
“ಕಮ್ಯೂನಿಸ್ಟರು ಸನ್ಯಾಸಿಗಳಾಗಬಾರದೆಂದು ಎಲ್ಲೂ ಹೇಳಿಲ್ಲವಲ್ಲ!”
ಇದು ಹುಂಬವಾದವೇ ಅಥವಾ ಇನ್ನೇನಾದರೋ ಎಂದು ನನಗೆ ಕಸಿವಿಸಿಯಾದ್ದನ್ನು ಗಮನಿಸಿ ರಾಮನ್ ನಕ್ಕು ಹೇಳಿದ:
“ನಿಜ. ಹಲವು ವರ್ಷ ನಾನು ಕಮ್ಯೂನಿಸ್ಟನಾಗಿದ್ದುದು ನಿಜ. ಭೌತಿಕವಾದಿಯೂ ಆಗಿದ್ದೆ. ಹೊಲಮನೆ, ವ್ಯವಸಾಯ-ಇವೇ ನನ್ನ ಪ್ರಪಂಚವಾಗಿತ್ತು. ಇವುಗಳಾಚೆ ಏನೊಂದೂ ಇರಲಿಲ್ಲ. ನನ್ನ ದೈಹಿಕ ಶಕ್ತಿಯ ಸಂಪೂರ್ಣ ಉಪಯೋಗಮಾಡಿ ದುಡಿದೆ. ಮಣ್ಣಿನಿಂದ ಒಬ್ಬ ಮನುಷ್ಯ ಎಷ್ಟು ಬೆಳೆ ತೆಗೆಯಬಹುದೋ ಅಷ್ಟನ್ನು ತೆಗೆದೆ. ಅದರಲ್ಲೊಂದು ಸುಖವಿತ್ತು. ಆದರೆ ಆ ಸುಖಕ್ಕೂ ಮಿತಿಯಿದೆ. ಆ ಮಿತಿ ಭೌತಿಕವಾದದ ಮಿತಿ.”
“ಎಂದರೆ ಕಮ್ಯೂನಿಸಮ್ಮಿನ ಮಿತಿ.”
“ಹಾಗೂ ಹೇಳಬಹುದು. ಪ್ರತಿದಿನ, ಪ್ರತಿ ವರ್ಷ ಅದೇ ದುಡಿತ ಅದೇ ಬೆಳೆ. ನಾನು ಯಂತ್ರವಾಗಿಬಿಟ್ಟಿದ್ದೆ. ರಾಕ್ಷಸಯಂತ್ರ, ಮಹಾನಗರಗಳಲ್ಲಿ ನೀವು ನೋಡಿರಬಹುದಾದಂಥ ಮೆಶಿನು. ಈ ಸಂದರ್ಭದಲ್ಲಿ ನನಗೊಬ್ಬ ಮಾಂತ್ರಿಕನ ದರ್ಶನವಾಯಿತು.”
“ಮಾಂತ್ರಿಕನೆ?”
ಹೌದು. ಆತನೊಬ್ಬ ನಾಡಾಡಿ. ಅದೇನೋ ಶಕ್ತಿಯೊಂದನ್ನು ಕೈವಶ ಮಾಡಿಕೊಂಡಿದ್ದ. ಗಾಳಿಯಿಂದ ತನಗೆ ಬೇಕಾದ್ದನ್ನು ಸೃಷ್ಟಿಸುತ್ತಿದ್ದ. ಹಾಲು, ಹಣ್ಣು, ಹಣ, ಏನು ಬೇಕಾದರೂ.”
“ನಿಮಗದರಲ್ಲಿ ನಂಬಿಕೆ ಇದೆಯೆ?”
“ನನ್ನ ನಂಬಿಕೆ ಮುಖ್ಯವಲ್ಲ. ಆತ ಮಾಡುತ್ತಿದ್ದುದು ಕಣ್ಣು ಕಟ್ಟಾಗಿದ್ದಿರಬಹುದು. ನನಗೂ ಅಂಥ ಸಂದೇಹ ಬರದಿರಲಿಲ್ಲ. ಅದನ್ನವನಿಗೆ ಹೇಳಿದೆ. ಬೇಕಾದರೆ ನೀನೇ ಪ್ರಯೋಗ ಮಾಡಿ ನೋಡು ಎಂದ. ಆದರೆ ಇದೆಲ್ಲ ನಾನೀಗ ಹೇಳಿದಷ್ಟು ಸುಲಭವಾಗಿ ನಡೆಯಲಿಲ್ಲ ನಿಜಕ್ಕೂ. ನಾನೇ ಅವನ ಹಿಂದೆ ಬಿದ್ದೆನೆಂದರೂ ಸರಿ. ಅವನ ಜತೆ ಎದ್ದು ನಡೆದೆ. ಅವನ ಶಿಷ್ಯನಂತೆ ಇದ್ದೆ. ಒಂದು ದಿನ ನನ್ನ ಆಗ್ರಹ ತಾಳಲಾರದೆ ಆ ಶಕ್ತಿಯನ್ನು ಒಲಿಸಿಕೊಳ್ಳುವ ವಿಧಾನವನ್ನು ನನಗೆ ಉಪದೇಶ ಮಾಡಿದ.”
“ಆಮೇಲೆ?”
” ನಾನು ಒಲಿಸಿಕೊಳ್ಳಲು ಯತ್ನಿಸಿದೆ.”
“ಒಲಿಯಿತೆ?”
“ಇಲ್ಲ. ಆದರೆ ಒಂದು ಮಾತ್ರ ನನಗೆ ಮನದಟ್ಟಾಯಿತು. ಆದೆಂದರೆ ಈ ಲೋಕದಲ್ಲಿ ಕೇವಲ ಭೌತಿಕ ಶಕ್ತಿ ಮಾತ್ರ ಇರುವುದಿಲ್ಲ; ಪಾರಲೌಕಿಕ ಶಕ್ತಿಗಳೂ ಇವೆ ಎಂದು.”
“ಇದನ್ನು ನಮ್ಮ ತತ್ವಶಾಸ್ತ್ರ ಪುರಾಣಗಳು ಕೂಡ ಹೇಳುತ್ತವೆಯಲ್ಲ?”
“ನಾನು ಅದೊಂದನ್ನು ಓದಿದವನಲ್ಲ.”
“ರಾಮನ್ ನಾಯರ್, ಸನ್ಯಾಸ ಬಿಟ್ಟು ಊರಿಗೆ ಮರಳಬೇಕೆಂಬ ಪ್ರೇರಣೆ ಹೇಗಾಯಿತು?”
“ಆ ದಿಕ್ಕಿನಲ್ಲಿ ನನ್ನ ಸಾಧನೆ ಒಂದು ಮಿತಿಗಿಂತ ಆಚೆ ಹೋಗಲಿಲ್ಲ. ಒಂದು ರೀತಿಯಲ್ಲಿ ಓದು ಮುಂದುವರಿಸಿದ ನೀವೇ ಭಾಗ್ಯವಂತರು!”
“ಯಾಕೆ?”
“ಮನುಷ್ಯ ತನ್ನ ಮಿತಿಗಳನ್ನು ದಾಟಬೇಕು…..” ಎಂದೇನೋ ಹೇಳತೊಡಗಿದ. ಮಾತು ಹೀಗೆಯೇ ಸ್ವಲ್ಪ ಹೊತ್ತು ಸಾಗಿತು. ತಟ್ಟನೆ ರಾಮನ್ ನಾಯರ್ ನ ದೃಷ್ಟಿ ನನ್ನ ಪಕ್ಕಕ್ಕೆ ಹೊರಳಿತು.
“ಇಲ್ಲಿ ಇಷ್ಟು ಹೊತ್ತು ಇನ್ನೊಬ್ಬರು ಕುಳಿತಿದ್ದರಲ್ಲ, ಅವರೇನಾದರು?” ಎಂದು ಕೇಳಿದ.
ಅಲ್ಲಿದ್ದವರು ನಾವಿಬ್ಬರೇ. ನನಗೊಂದೂ ಅರ್ಥವಾಗದೆ ಅವನ ಮುಖವನ್ನೇ ನೋಡಿದೆ. ರಾಮನ್ ನಾಯರ್ ಎದ್ದು ನಿಂತ. “ಅವರೊಂದಿಗೆ ನಾನು ಮಾತಾಡಬೇಕಾಗಿದೆ” ಎಂದವನೇ ಬಿರುಸಾಗಿ ಹಜ್ಜೆ ಹಾಕುತ್ತ ನಮ್ಮ ಮನೆ ಹಿಂದಿನ ಕಾಡು ದಾರಿಯಲ್ಲಿ ಹೊರಟು ಹೋದ.
ನಂತರ ಭೇಟಿಯಾದಾಗ ಎಂದೂ ನಾವು ಈ ಪ್ರಸ್ತಾಪವನ್ನು ಎತ್ತಿಲ್ಲ.