ಭಾಗ – ೨
ಸುಂದರಿ ಮಡಗಾನ್‌ಳಿಂದ ಆಕರ್ಷಿತನಾದ ಕವಿ W B Yeats ಕಾವ್ಯಜೀವನವನ್ನು ಪ್ರೇಮ ರಮಣೀಯತೆಯ ಹಿನ್ನೆಲೆಯಿಂದಲೇ ಪ್ರಾರಂಭಿಸಿದ. ಆತನ ಸಾಹಿತ್ಯ ಬದುಕನ್ನು ನಾಲ್ಕು ಅವಧಿಗೆ ವಿಂಗಡಿಸಬಹುದು. ಮೊದಲನೆಯದು ರೊಮ್ಯಾಂಟಿಕ ಫೇಸ್, ಎರಡನೇಯದು ಸಾಮಾಜಿಕ ವಾಸ್ತವವಾದ ಮತ್ತು ವಿಡಂಬನಾ ಕವಿತ್ವದ ಕಾಲ. ಮೂರನೇಯದು ಭ್ರಾಮಕ ವಿಶನರಿ ಫೇಸ್. ನಾಲ್ಕನೇಯದು ನಿಶ್ಯಬ್ದ ವಿದಾಯ ಸೂಚಿಸುವುದು. ಪ್ರೇಮ ಕವನಗಳನ್ನು ರೋಮ್ಯಾಂಟಿಕ ಅವಧಿಯಲ್ಲಿ ೧೮೮೫ ರಿಂದ ೧೯೦೩ರವರೆಗೆ ಬರೆದ ಕವಿ ಮುಂದೆ ವಾಸ್ತವಿಕತೆ ಮತ್ತು ವಿಡಂಬನೆಯ ಕವಿತೆಗಳ ಬರೆದ. ಆ ಅವಧಿಯ ಕವಿತೆ Easter 1916.
೨೦ನೇ ಶತಮಾನದ ಆರಂಭದ ದಿನಗಳಲ್ಲಿ ಹಲವಾರು ವಿಚಾರಗಳು ಐರ್‍ಲೆಂಡಿನಲ್ಲಿ ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹಣಾಹಣಿಗೆ ಬಿದ್ದಿದ್ದವು. ಸ್ವಾತಂತ್ರ್ಯವಾದಿಗಳು Home Rule for Ireland ಎಂಬ ಚುನಾವಣಾ ಪ್ರಣಾಳಿಕೆಯನ್ನು ೧೯ ಶತಮಾನದ ಉತ್ತರಾರ್ಧದಲ್ಲಿಯೇ ಅಳವಡಿಸಿಕೊಂಡಿದ್ದರು. ಅದು ಮೊದಲ ಮಹಾಯುದ್ಧದ ಕಾಲ. ಐರ್‍ಲೆಂಡಿನ ಹಿರಿಯ ರಾಜಕೀಯ ನಾಯಕರು ಸ್ವಾತಂತ್ರ್ಯ ಹೋರಾಟಕ್ಕೆ ಜರ್ಮನಿಯ ಸಹಕಾರದೊಂದಿಗೆ Easter Monday 1916 ರಂದು ಎಲ್ಲ ಐರಿಶ್ ನಾಯಕರು ಹಾಗೂ ಕೆಲವು ಗುಂಪುಗಳು ಸೇರಿ ಐರ್‍ಲೆಂಡ ಸರ್ವ ಸ್ವತಂತ್ರವೆಂದು ಘೋಷಿಸಿಕೊಂಡರು. ಬ್ರೀಟಿಷ್ ಸೇನೆ ಹಲವು ನಾಯಕರನ್ನು ಸೆರೆಹಿಡಿಯಿತು. ಅದರಲ್ಲಿ ೧೬ ಜನ ಗುಂಡಿಕ್ಕಿ ಕೊಂದಿತು. ಈ ಇಸ್ಟರ ದಂಗೆ ಯೇಟ್ಸನನ್ನು ಬಹಳ ಕಾಡಿತು. ಆತನ ಐರಿಶ ರಾಜಕೀಯ ನೀತಿ ಕುರಿತ ಆತನ ದೃಷ್ಟಿಕೋನ ಬದಲಿಸಿತು. ಅದನ್ನಾತ Easter 1916 ಕವನದಲ್ಲಿ ನೋವಿನಿಂದ ತೋಡಿಕೊಳ್ಳುತ್ತಾನೆ.
“A Romantic Ireland is dead and gone
It is with O’Leary in the grave” ಶ್ರೇಷ್ಟ ನಾಯಕರ ಸಾವಿನೊಂದಿಗೆ ಐರಿಶ ರಾಷ್ಟ್ರೀಯತೆಯ ವೈಭವಯುತ ದಿನಗಳು ಮುಗಿದವು ಕಳಪೆ ರಾಜಕೀಯ ದೃಷ್ಟಿಕೋನದ, ಮೌಲ್ಯರಹಿತ ಹೊಸ ನಾಯಕರನ್ನು ಆತ ಮೆಚ್ಚುವುದಿಲ್ಲ. ದೇಶಭಕ್ತಿಯ ಹಿಂಸಾತ್ಮಕ ಸಿದ್ದಾಂತಗಳು ಆತನನ್ನು ಕಾಡುತ್ತವೆ. ಆದಾಗ್ಯೂ ಈ ಕವನ ದೇಶಕ್ಕೋಸ್ಕರ ಪ್ರಾಣ ತ್ಯಾಗ ಮಾಡಿದ ಉದಾತ್ತ ನಾಯಕರ ಕುರಿತು ಬರೆದ ಅವರ ನಾಯಕತ್ವದ ಗುಣ ಸಾರುವ ಕವನ ಅವರಿಗೊಂದು ಶ್ರದ್ಧಾಂಜಲಿ ಅರ್ಪಿಸುವ ಅಪೂರ್ವತೆಯೂ ಇಲ್ಲಿದೆ. ಜೊತೆಯಲ್ಲಿ ಯೇಟ್ಸ ಮೆಚ್ಚದ ಕೆಲವು ಡೋಂಗಿ ನಾಯಕರು ಹೇಗೆ ಮುಂಚೂಣಿಯ ಸ್ಥಾನದಲ್ಲಿ ಮಿಂಚಿದರು. ವಿಧೂಷಕರಾಗಿದ್ದವರು ಹುತಾತ್ಮ ವೀರರಾದರು ಎಂಬುದುನ್ನು ಆತ ವಿಡಂಬಿಸುತ್ತಾನೆ. ಅದಲ್ಲದೇ ಇತಿಹಾಸ ಮತ್ತು ಅದರ ಕೀರ್ತಿ, ಬದುಕಿನ ಸಂಕಷ್ಟಗಳೊಂದಿಗೆ ಆತ್ಮರ್ಪಣೆಯ ವಿಸ್ತೃತತೆಯನ್ನು ಪರೀಕ್ಷಿಸುತ್ತಾನೆ. ಹಾಗಾಗಿ ಕವನ ವಾಸ್ತವವಾದದ ಜೊತೆಗೆ ದೂರದೃಷ್ಟಿತ್ವದ ಕಲ್ಪನೆಗಳೊಂದಿಗೆ ಕೊನೆಗೊಳ್ಳುತ್ತದೆ. ಕೊನೆಯಲ್ಲಿ ಕವಿ ಹಿಂಸೆಯನ್ನು ವಿರೋಧಿಸುತ್ತಾನೆ. “To trouble the living stream” ಎನ್ನುವಲ್ಲಿ ನಾಯಕರ ಉದಾತ್ತ ತ್ಯಾಗ ಮನೋಭಾವವನ್ನು ಬಣ್ಣಿಸಿಯೂ ಹಿಂಸೆ ಉಂಟುಮಾಡುವ ವಿಮುಖ ಜೀವನ ಪಾಠವನ್ನು ಎತ್ತಿ ಹೇಳುತ್ತಾನೆ.
ಐರ್‍ಲೆಂಡಿನ ಇಸ್ಟರ ದಂಗೆ ರಷ್ಯಾದ ಬೊಲ್ಸೆವಿಕ್ ಕ್ರಾಂತಿ, ಹಾಗೂ ಜಾಗತಿಕ ಯುದ್ಧಗಳು ಯೇಟ್ಸ್ ಮೇಲೆ ಗಾಢ ಪರಿಣಾಮ ಬೀರಿದ್ದವು. ಆತನ The second coming ಈ ದ್ವಂದ್ವಗಳ ವಿಚಲಿತತೆಯ ಹಿನ್ನೆಲೆಯಲ್ಲಿ ಒಡಮೂಡಿದ ಕವನ. ಕವನವನ್ನು ಮೂರು ಹಂತಗಳಲ್ಲಿ ವಿಂಗಡಿಸಬಹುದು. ಮೊದಲನೆಯ ನುಡಿಯಲ್ಲಿ ಕವಿ ಜಗತ್ತನ್ನು ಅವಲೋಕಿಸುತ್ತಾನೆ. ಅದರ ಮುಂದಿನ ಭವಿಷ್ಯ ಗೃಹಿಸುವ ಆತ ಆತಂಕಕ್ಕೆ ಒಳಗಾಗುತ್ತಾನೆ. ಮೀತಿಮೀರಿದ ಹಿಂಸೆ, ಮಾನವ ಮೌಲ್ಯಗಳ ಅಧಃಪತನ, ಸದ್ ನಂಬಿಕೆಗಳ ಕೊರತೆ, ಎಲ್ಲ ಕಡೆಗಳಲ್ಲಿ ವಿಜೃಂಬಿಸುತ್ತಿರುವ ದುಷ್ಟತನ ಇವುಗಳು ಕವಿಯ ಕಾಡುತ್ತವೆ. ಎರಡನೇಯ ನುಡಿಯಲ್ಲಿ ಜಗತ್ತಿನ ಭವಿಷ್ಯ ದುಃಸ್ವಪ್ನದ ದುರಂತ ರೂಪ ಪಡೆಯುವುದನ್ನು ನರಸಿಂಹ ರೂಪ ಕಲ್ಪನೆ ಮೂಲಕ ಕವಿ ಕಟ್ಟಿಕೊಡುತ್ತಾನೆ. ಸಿಂಹ ದೇಹದ ನರಮುಖದ ಆ ದೈತ್ಯ ಮರಭೂಮಿಯಿಂದ ಎದ್ದೇಳುತ್ತಿದ್ದಾನೆ. ಕೊನೆಯ ಐದು ಸಾಲುಗಳಲ್ಲಿ ಕವಿ ಅಶುಭ ಸಂಗತಿಗಳ ಊಹಿಸುತ್ತಾನೆ. ಕ್ರೈಸ್ತ ಯುಗದ ಅವನತಿ ಅದರ ತತ್ವ ಸಿದ್ಧಾಂತಗಳಿಗೆ ತದ್ವಿರುದ್ಧ ಹೊಸ ಯುಗದ ಹುಟ್ಟು ಇವುಗಳ ಕವಿ ಊಹಿಸುತ್ತಾನೆ. ಯೇಟ್ಸ್ ಗೃಹಿಸುವ ಸಂಗತಿ ಎಂದರೆ ಪ್ರತಿ ೨೦೦೦ ವರ್ಷಗಳಿಗೆ ನಾಗರೀಕತೆಯ ಚಕ್ರವೂ ಬದಲಾಗುತ್ತಾದೆ. ಪ್ರಾರಂಭದ ಹಂತ ಹಿಂಸೆ, ಸುಮಾರು ಸಾವಿರ ವರ್ಷಕ್ಕೆ ತನ್ನ ವೈಭವದ ಉತ್ತುಂಗವೇರುವ ನಾಗರೀಕತೆ ಪುನಃ ಅವನತಿಯ ಕಡೆ ಹೊರಳುವುದು ತನ್ನದೇ ಮೌಲ್ಯದ ನೆಲೆಯಲ್ಲಿನ ಗೊಂದಲ ವಿಘಟನೆ ಹಾಗೂ ಒಡಕಿನ ಕಾರಣಗಳಿಂದ. ಈ ಕವನ ಈ ಹಿನ್ನೆಲೆಯಲ್ಲಿಯೇ ಕಟ್ಟಲ್ಪಟ್ಟಿದೆ.
ಆತನ ಇನ್ನೊಂದು ಕವನ Sailing to Byzantium. ಸುಮಾರು ೧೯೨೫ರಲ್ಲಿ ಕವಿ ಮೆಡಟರೇನಿಯನ್ ದೇಶಗಳತ್ತ ತನ್ನ ಪ್ರಯಾಣ ಕೈಗೊಂಡು ಗ್ರೀಕ ಮತ್ತು ಇಟಾಲಿಯನ್ ಕಲೆಯ ವಿಸ್ತೃತ ನೆನಪುಗಳೊಂದಿಗೆ ಐರ್‍ಲೆಂಡಿಗೆ ಮರಳಿದ. ಇದು ಆತನ ಮೇಲೆ ನಾಗರೀಕತೆಯ ಸ್ಥೂಲ ಅಧ್ಯಯನಕ್ಕೆ ಹುರಿದುಂಬಿಸಿತು.Sailing to Byzantium ಕವಿತೆ ಕವಿಯ ಕಲ್ಪನೆಯೊಂದಿಗೆ ಹೆಣೆದ ಇತಿಹಾಸದ ಭ್ರಾಮಕ ಗೃಹಿಕೆ. ಐರ್‍ಲೆಂಡ ಕುರಿತ ಕವಿಯ ನಿರಾಸಕ್ತಿ ತಿರಸ್ಕಾರದೊಂದಿಗೆ ಕವನ ಪ್ರಾರಂಭವಾಗುತ್ತದೆ. `No country for old man’ ಅಲ್ಲಿ ಹಳೆಯ ಜನರಿಗೆ ಸ್ಥಾನವಿಲ್ಲ. `The young in one another’s arm’ ಆತನ ಪ್ರಕಾರ ಈಗ ಐರ್‍ಲೆಂಡ ಬರೀಯ ವಿಷಯಾಸಕ್ತರ ಗೂಡು. ಅಲ್ಲಿ ಆತ ಬರೀಯ ಅಪಹಾಸ್ಯಕ್ಕೆ ಇಡಾಗಬಲ್ಲ ವಿಹ್ಹಲಿತ ಕಾಗೆಯಂತೆ. ಮಾಂಸ ಮದಿರೆಗಳೆ ಅಲ್ಲಿಯ ಆಸಕ್ತಿಗಳು. ಅದಕ್ಕಾತ ಅಲ್ಲಿಂದ ಆತ್ಮದ ಭವ್ಯತೆ ಸಾಮ್ರಾಜ್ಯ, ಶಾಶ್ವತತೆಯ ವ್ಯೂಹದೆಡೆಗೆ ಪಯಣಿಸುತ್ತಾನೆ. ದೇವನ ಪವಿತ್ರ ಅಗ್ನಿಯಲ್ಲಿ ಹೊಳೆಯುತ್ತಿರುವ ಸಂತರಲ್ಲಿ ಆತ ಐಹಿಕ ಆಕಾಂಕ್ಷೆಗಳಿಂದ ಬಳಲುತ್ತಿರುವ ತನ್ನ ಆತ್ಮವನ್ನು ಸ್ವೀಕರಿಸುವಂತೆ ವಿನಂತಿಸುತ್ತಾನೆ. ಅದನ್ನು ಪರಿಶುಧ್ದಗೊಳಿಸಿ ಶಾಶ್ವತತೆಯ ವ್ಯೂಹದಲ್ಲಿ ನೆಲೆನಿಲ್ಲುವಂತೆ ಮಾಡಲು ಬೇಡಿಕೊಳ್ಳುತ್ತಾನೆ. ದೇಹದಿಂದ ಬಿಡುಗಡೆಗೊಂಡ ತಾನೆಂದೂ ಮರಳಿ ಪುನರ್ ಭೌತಿಕ ಜನ್ಮಕ್ಕೆ ಬರಲಾರೆನೆಂದು ಶಪಥಗೈಯುತ್ತಾನೆ. ಬದಲಿಗೆ ಪಾರಮಾರ್ಥಿಕದ ರಸಸಿದ್ಧಿಯ ಅಗ್ನಿಯ ಕುಲುಮೆಯಲ್ಲಿ ಬೆಂದು ಪರಿಪಾಕಗೊಂಡ ಬಂಗಾರದ ಹಕ್ಕಿಯಾಗಿ ರೂಪಾಂತರಗೊಳ್ಳಬೇಕೆಂದು ಬಯಸುತ್ತಾನೆ ಕವಿ. ಭೂತ ವರ್ತಮಾನ ಭವಿಷ್ಯದ ಅಲೌಕಿಕದ ಕೀರ್ತಿಯನ್ನು ನಿರಂತರ ಹಾಡುವ ಯೋಗ ತನಗೆ ದೊರಕುವುದೆಂಬ ಆಶಾವಾದ ಕವಿಯದು. ಅದರೊಂದಿಗೆ ಬಂಗಾರದ ಹಕ್ಕಿ ಕಲೆಯ ಪ್ರತೀಕ. ಕಲೆಗಾರ ತನ್ನ ಕಲೆಯ ಮೂಲಕ ಶಾಶ್ವತ ಸ್ಥಾನ ಪಡೆಯುತ್ತಾನೆ. ಒಟ್ಟಾರೆ ಕವಿತೆ ಐಹಿಕದಿಂದ ಪಾರಮಾರ್ಥಿಕದೆಡೆಗೆ ಕೊಂಡೊಯ್ಯುವ ಕವನ.
೧೮೬೫ರಲ್ಲಿ ಜನಿಸಿದ William Butler Yeats ೧೮೮೨ರಲ್ಲಿ ತನ್ನ ಮೊದಲ ಕವನ ಸಂಕಲನ ರಚಿಸಿದ. ಆತನ ಬದುಕಿನಲ್ಲಿ ಐರ್‍ಲೆಂಡಿನ ಡಬ್ಲಿನ್ ಮತ್ತು ಲಂಡನ ಗುರುತರ ಪರಿಣಾಮ ಬೀರಿದ ಸ್ಥಳಗಳು. ಡಬ್ಲಿನ್ ಆತನಿಗೆ ತನ್ನ ದೇಶದಲ್ಲಿ ಸ್ರ್ಯಾತಂತ್ರ್ಯಕ್ಕೋಸ್ಕರ ನಡೆದ ರಾಜಕೀಯ ಹೋರಾಟದತ್ತ ಆತನ ಚಿತ್ತವನ್ನು ಸೆಳೆದರೆ ಲಂಡನ್ ಸಾಹಿತ್ಯ ಜಗತ್ತಿನ ಮಹಾನ್ ನಾಯಕರನ್ನು ಆತನಿಗೆ ಪರಿಚಯಿಸಿತು. ಮುಖ್ಯವಾಗಿ ಎಜ್ರಾ ಪೌಂಡ್, ಅರ್ಥರ ಸ್ಯಮನ್, ಟ್ಯಾಗೋರ್ ಮತ್ತು ಉಪನಿಷತ್ತುಗಳ ನಿಕಟವರ್ತಿಯಾದ. ಬಾಲ್ಯದಲ್ಲಿ ಐರ್‍ಲೆಂಡಿನ ಸಾಂಸ್ಕೃತಿಕ ಉಜ್ಜೀವನ ಸಂಗತಿಗಳಲ್ಲಿ ತೊಡಗಿಸಿಕೊಂಡ Dublin ನಲ್ಲಿ Abbey theatre ನ್ನು ಸಂಸ್ಥಾಪಿಸಿ ತನ್ನ ಹಲವು ಗೆಳೆಯರಿಗೆ ಐರಿಶ ಜಾನಪದ ಕಥಾ ಕೋಶ ಆಧಾರಿತ ನಾಟಕಗಳ ಬರೆಯುವಂತೆ ಹುರಿದುಂಬಿಸಿದ. ತಾನು ಕೂಡ ಐರಿಶ ದಂತಕಥೆ ಆಧರಿಸಿ ಬರೆದ ನಾಟಕಗಳು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಅರ್ಥ ನೀಡಿದವು. ಸತತ ಕ್ರೀಯಾಶೀಲನಾಗಿದ್ದ ಯೇಟ್ಸ್ ೧೯೩೯ ಜನವರಿ ೨೬ರಂದು ಪ್ರಾನ್ಸನಲ್ಲಿ ಮರಣ ಹೊಂದಿದ. ಸಹೋದರ ಹಾಗೂ ಮಕ್ಕಳು ಯೇಟ್ಸ್‌ನ ಮೃತದೇಹವನ್ನು ಐರ್‍ಲೆಂಡಿಗೆ ತಂದು ಜನವರಿ ೨೮ರಂದು ಅಂತ್ಯ ಸಂಸ್ಕಾರ ನೇರವೇರಿಸಿದರು.
*****