ಬಾರಯ್ಯಾ ಎನ್ನ ಎದೆಗೆ ಎದೆ ಗುಡಿಯ ಪೀಠಕ್ಕೆ
ಬಾರಯ್ಯಾ ಎನ್ನ ಎದೆಗೆ || ಪ ||
ಕತ್ತಲು ಬೆಳಕಾಟ ಇನ್ನೆಷ್ಟು ದಿನವಯ್ಯಾ
ಚಿತ್ತವೂ ಮಸಕೂ ಮಸಕಾಗಿದೆ
ಏಳಂತೆ ಬೀಳಂತೆ ಅಳುವಂತೆ ನಗುವಂತೆ
ಅಂತಿಂತು ನೀನಂತೂ ದೂರವಾದೆ || ೧ ||
ಹಸಿವಾಗಿ ಬಾಯಾರಿ ತಪನಂತೆ ತಪಿಸುತ್ತ
ಹಸಗೆಟ್ಟು ಉಂಡುಂಡು ಸಾಕಾಗಿದೆ
ನಂಬೀಕೆ ಬೇರೆಲ್ಲ ಅಲುಗಾಡಿ ಹೊರಬಿದ್ದು
ಕೂದಾಲ ಎಳೆಯಾಗೆ ಟುಕು ಎನುತಿದೆ || ೨ ||
ರಾತ್ರೆಲ್ಲ ರಾಮಾಯ್ಣ ಹಗಲೆಲ್ಲ ಭಾರತ
ಸೀತೆಗು ಕೋತಿಗು ಮಾತಾಗಿದೆ
ತಾಯಿ ತಂದೇ ಎಂದು ತಂದಾನಾ ಹಾಡಲು
ತಂತಿ ಎಳೆಯಾಗೆ ಬೇಸೂರಾಗಿದೆ || ೩ ||
ಅಳ್ಳಳ್ಳಿ ಬುವ್ವಾಗಿ ಏಸೊಂದು ದಿನವಿರಲಿ
ಕೊಳ್ಳಿ ದೆವ್ವದ ಕುಣಿತ ಸಾಕಾಗಿದೆ
ತೊಗಲೆದ್ದು ಬಡದೀತು ತಟಮಟ ತಮ್ಮಟ
ತಾರಮ್ಮಯ್ಯಂಬಂತೆ ತೂತಾಗಿದೆ || ೪ ||
*****