ಕರೀಮನ ಪಿಟೀಲು

ಕರೀಮನ ಪಿಟೀಲು

ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ ನೆನೆಯುತ್ತಾರೆ. ಒಂದು ಸಲವಲ್ಲ, ನೂರೆಂಟು ಸಲ ಆ ಪಿಟೀಲುವಾದನ ಕೇಳಬೇಕೆನ್ನುತ್ತಾರೆ. ಆ ಪಿಟೀಲನ್ನು ಅವನು ಎಲ್ಲಿಂದ ದೊರಕಿಸಿದನೊ! ಊರವರೆಲ್ಲ ಕರೀಮನನ್ನು ಈ ವಿಷಯದ ಬಗ್ಗೆ ಕೇಳುತ್ತಾರೆ. ಅವನು ಯಾರಿಗೂ ಉತ್ತರ ಕೊಟ್ಟಿಲ್ಲ. ಅವನಿಗೆ ಉತ್ತರ ಕೊಡುವಷ್ಟು ಮನಸೂ ಆಗುವದಿಲ್ಲ. ಕೇಳಿದಾಗ ಅವನು ದೊಡ್ಡದಾಗಿ ನಿಟ್ಟುಸಿರು ಬಿಡುತ್ತಾನೆ.

ಆ ಊರು ದೊಡ್ಡ ಪಟ್ಟಣವಾಗಿದ್ದರೆ ಕರಿಮನ ಅದ್ಭುತ ಶಕ್ತಿ ಎಲ್ಲರಿಗೂ ಗೊತ್ತಾಗಿ ಅವನ ಕೀರ್ತಿ ಹರಡಬಹುದದಾಗಿತ್ತು! ಅವನು ಆಕಾಶವಾಣಿಯ ತಾರಾಗಣದಲ್ಲಿ ಒಬ್ಬನಾಗಬಹುದಿತ್ತು! ಆ ಕರೀಮನಿದ್ದ ಊರು ಸಣ್ಣದಾಗಿತ್ತು. ಅದು ಇತ್ತ ಹಳ್ಳಿಯೂ ಆಗಿರಲಿಲ್ಲ. ಆತ್ತ ದೊಡ್ಡ ಪಟ್ಟಣವೂ ಆಗಿರಲಿಲ್ಲ. ಆ ಊರಲ್ಲಿ ಕಲಾಭಿರುಚಿಯುಳ್ಳ ರಸಿಕ ಸಿರಿವಂತರು ಮಾತ್ರ ಅನೇಕರಿದ್ದರು.

ಊರಿಗೆ ಶ್ರೀಮಂತರಾದ ರಾವಬಹಾದ್ದೂರ ರಾಜಾರಾಮರಂತೂ ಎಲ್ಲ ಕಲೆಗಳಲ್ಲಿಯೂ ಆಸಕ್ತಿಯುಳ್ಳವರು. ಎಷ್ಟೊ ಸಂದರ್‍ಭಗಳಲ್ಲಿ ಕರೀಮನನ್ನು, ತಮ್ಮ ಮನೆಗೆ ಕರೆಯಿಸಿಕೊಂಡು ಅವನ ಕೊಳಲವಾದನ ಕೇಳಿದ್ದರು. ಆದರೆ ಇತ್ತಿತ್ತಲಾಗಿ ಅವನು ಬಾರಿಸುವ ಪಿಟೀಲುವಾದನ ಮಾತ್ರ ಅವರು ಕೇಳಿದ್ದಿಲ್ಲ. ಕರೀಮನ ಕೊಳಲವಾದನವಿದ್ದ ಹೊತ್ತಿನಲ್ಲಿಯೇ, ಪಿಟಲನ್ನು ಬಾರಿಸಲು ಫಕೀರನೆಂಬೊಬ್ಬ ಮತ್ತೊಬ್ಬನು ಅವರ ಮನೆಗೆ ಬರುತ್ತಿದ್ದನು.

ಫಕೀರನು ಪಿಟೀಲನ್ನು ಕಲಿಸಿ ತನ್ನ ಸ್ವಂತ ಬುದ್ಧಿಯಿಂದ, ಚಿಕ್ಕವನಿರುವಾಗಲೆ ಸಂಗೀತ ಕಚೇರಿಗಳಿಗೆ ಅನೇಕ ಸಲ ಭೆಟ್ಟಿ ಕೊಡುತ್ತಿದ್ದುದರಿಂದ, ಅವನಿಗೆ ಸಂಗೀತದ ಗುಂಗು ಬಹಳಿತ್ತು. ಮೊದಲು ಮನೆಯಲ್ಲಿಯೆ ಎಲ್ಲಿಯದೊ ತಂತಿಯನ್ನು ತಂದು, ಯಾವ ಕಟ್ಟಿಗೆ ತುಂಡಿಗೊ ಕಟ್ಟಿ, ಏನಾದರೂ ಹೇಗಾದರೂ ಬಾರಿಸುತ್ತಿದ್ದನು. ಅವನ ತಾಯಿ ಈ ಹುಚ್ಚು ಮಗನನ್ನು ನೋಡಿ ಬೈಯುತ್ತಿದ್ದಳು. ಅವನ್ನೆಲ್ಲ ಬಿಡಿಸಿ, ಕೂಲಿ ಮಾಡಿ ಹೊಟ್ಟೆ ತುಂಬಿ ಕೊಳ್ಳಲು ಅವನಿಗೆ ಹುರುಪು ಕೊಡುತ್ತಿದ್ದಳು.

ಫಕೀರನು ದೊಡ್ಡವನಾದ. ಅವನೇನು ಶಾಲೆಯಲ್ಲಿ ಕಲಿಯಲಿಲ್ಲ. ಆದರೆ ಸಂಗೀತದ ಗುಂಗನ್ನು ಮಾತ್ರ ಬಿಡಲಿಲ್ಲ. ಯಾರಾದರೂ ಊರಲ್ಲಿ ಸಂಗೀತದ ಸಭೆ ಏರ್‍ಪಡಿಸಿದರೆ ಅವನು ಅಲ್ಲಿಗೆ ತಪ್ಪದೇ ಹೋಗುತ್ತಿದ್ದನು. ತನ್ನ ಕೂಲಿಯ ನೆನಪೂ ಅವನಿಗೆ ಇರುತ್ತಿರಲಿಲ್ಲ.

ಆ ಊರಿಗೆ ಒಬ್ಬ ಹೊಸ ಸರಕಾರಿ ಡಾಕ್ಟರರು ಆಗಮಿಸಿದ್ದರು. ಫಕೀರನು ಅವರ ಮರ್‍ಜಿ ಸಂಪಾದಿಸಿ, ಅದರಲ್ಲಿಯ ನೌಕರಿಗಾಗಿ ನೆಲೆಸಿದನು. ಡಾಕ್ಟರರ ಮಗಳು ಸುಧಾರಿಸಿದವಳು. ಅವಳಿಗೆ ಸಂಗೀತವನ್ನು ಕಲಿಸಲು ಒಬ್ಬ ಸಂಗೀತ ಗುರುಗಳು ಅಲ್ಲಿಗೆ ಬರುತ್ತಿದ್ದು, ಅವರು ಸಂಜೆ ಏಳು ಗಂಟೆಗೆ ಅಲ್ಲಿಗೆ ಬರುವ ವೇಳೆ. ಆ ವೇಳೆಗೆ ಫಕೀರನ ಕೆಲಸವೆಲ್ಲವೂ ಮುಗಿದು ಅವನು ತನ್ನ ಮನೆಗೆ ಹೋಗಬಹುದಾಗಿತ್ತು. ಆದರೆ ಹಲವು ಕೆಲಸಗಳ ನೆಪವೊಡ್ಡಿ ಅವನು ಅಲ್ಲಿಯೆ ಇರುತ್ತಿದ್ದ. ಅವನಿಗೆ ಸಂಗೀತದ ಊಟ ಬೇಕಾಗಿರುತ್ತಿತ್ತು.

ಒಂದು ತಿಂಗಳ ಕೊನೆಗೆ ಡಾಕ್ಟರರು ಫಕೀರನ ಪಗಾರ ಕೊಡಲು ಕರೆದರು. ಅವನು ರೂಪಾಯಿಗಳನ್ನು ಇಸಗೊಳ್ಳಲಿಲ್ಲ. ಡಾಕ್ಟರರಿಗೆ ಆಶ್ಚರ್‍ಯವಾಯಿತು. “ಇದೇನು? ಪುಕ್ಕಟೆಯಾಗಿ ಇಲ್ಲಿ ದುಡಿಯುವೆಯಾ? ನಿನ್ನ ಸಂಸಾರ ಹೇಗೆ ಸಾಗುವದು?” ಎಂದು ಕೇಳಿದರು.

“ರಾಯರೆ, ಈ ಬಾರಿ ನನಗೊಂದು ಪಿಟೀಲು ಕೊಡಿಸಿರಿ” ಎಂದು ಮಾರುತ್ತರ ಕೊಟ್ಟ. ಅಷ್ಟು ಹೇಳಬೇಕಾದರೆ ಅವನ ಮೈಯೆಲ್ಲ ನಡುಗುತ್ತಿತ್ತು.

ಡಾಕ್ಟರು ಅಚ್ಚರಿಯಿಂದ ಸ್ತಂಭಿಭೂತರಾದರು. ಅದರಲ್ಲಿಯೇ ಅವರ ಕುತೂಹಲವೂ ಕೆರಳಿದಂತಾಯಿತು. ಒಂದೆರಡು ದಿನಗಳ ನಂತರ ತಮ್ಮ ಮಗಳ ಪಿಟೀಲನ್ನೆ ಅವನಿಗೆ ಬಹುಮಾನವಾಗಿ ಕೊಟ್ಟು ಬಿಟ್ಟರು.

ಆ ಪಿಟೀಲು ಕಂಡಕೂಡಲೆ ಫಕೀರನು ಹಿರಿಹಿರಿ ಹಿಗ್ಗಿದನು. ಅದನ್ನು ದೇವರಂತೆ ಪೂಜಿಸಬೇಕೆಂದು ಅವನಿಗೆನಿಸುತ್ತಿತ್ತು. ಮೊದಲ ದಿನ ಅದನ್ನು ಊರ ಹೊರಗಿನ ತನ್ನ ಚಿಕ್ಕದಾದ ಗುಡಿಸಲಲ್ಲಿ ತಂದಿಟ್ಟಾಗಂತೂ ಅವನ ಉತ್ಸಾಹಕ್ಕೆ ಮೇರೆಯೇ ಇರಲಿಲ್ಲ. ರಮಜಾನ ಮತ್ತು ಈದ ಹಬ್ಬದಲ್ಲಿಯೂ ಅವನಿಗೆ ಇಷ್ಟು ಚೈತನ್ಯ ಬಂದಿರಲಿಲ್ಲ. ಆ ಪಿಟೀಲನ್ನು ತಂದ ಬಾರಿಸಿಯೇ ಬಾರಿಸಿದನು. ಆ ಗುಡಿಸಲಿನಲ್ಲಿ ಓಡಾಡುವ ಮೂವತ್ತು ವರ್ಷದ ಹೆಂಡತಿ ಅವನ ಹುಚ್ಚುತನವನ್ನು ನೋಡಿ ಸಿಟ್ಟಿನಿಂದ ಕೆಂಡಕಾರಿದರೂ, ಅದು ಅವನಿಗೆ ತಾಕಲೇ ಇಲ್ಲ.

ಕರೀಮನು ರಾವಬಹದ್ದೂರ ರಾಜಾರಾಯರ ಉದಾರ ಅಶ್ರಯಂದದಿ ಬೇಗನೆ ಪ್ರಸಿದ್ದಿಯನ್ನು ಪಡೆದ. ತನ್ನದೂಂದು ವೃಂದವಾನವನ್ನು ಮಾಡಿ ಊರಲ್ಲಿ ಎಲ್ಲಕಡೆಗೂ ತನ್ನ ಸಂಗೀತ ಕಾರ್‍ಯಕ್ರಮ ಏರ್ಪಡಿಸುತ್ತಿದ್ದ. ಮದುವೆ ಮುಂತಾದ ಸಮಾರಂಭಗಳಲ್ಲಿಯಂತೂ ಕರೀಮನ ವೃಂದವಾದನ ಕಾರ್ಯಕ್ರಮವು ನಿಶ್ಚಿತವಾಗಿ ಇರುತ್ತಿತ್ತು.

ಒಬ್ಬ ಪಿಟೀಲು ವಾದಕನಾಗಿ ಫಕೀರನು ಕರೀಮನ ಸಂಗೀತಗುಂಪಿಗೆ ಸೇರಿದುದು ಡಾಕ್ಟರರ ವಶೀಲಿಯಿಂದಲೆ. ಡಾಕ್ಟರರು ತಮ್ಮ ಮನೆಯಲ್ಲಿ ನಡೆದ ವಿಚಿತ್ರ ಚಾಕರನ ಪ್ರಸ್ತಾಪವನ್ನು ರಾವಬಹದರರ ಎದುರು ಎತ್ತಿದರು. ಅವನ ಪಿಟೀಲುವಾದನದ ಹುಚ್ಚನ್ನೂ ಬಣ್ಣಿಸಿದರು. ರಾವಬಹದ್ದೂರ ರಾಜಾ ರಾವರಿಗೂ ಸಂಗೀತವೆಂದರೆ ಹುಚ್ಚು, ಕೂಡಲೇ ಫಕೀರನಿಗೆ ಕರೆಬಂದಿತು. ಸಂಗೀತ ಗುಂಪಿಗೆ ಅವನನ್ನು ಸೇರಿಸಿಯೂ ಆಯಿತು.

ಗುಣಿಯು ಗುಣವನ್ನು ಬೇಗ ಕಂಡುಹಿಡಿಯುವನಲ್ಲವೆ? ಕರೀಮನು ಫಕೀರನ ಕಲಾಕೌಶಲ್ಯವನ್ನು ತಿಳಿಯಲು ಬಹಳದಿನ ಹಿಡಿಯಲಿಲ್ಲ. ಅವನು ಪಿಟೀಲನ್ನು ಬಾರಿಸುವ ಕಲೆಯು ಅಲ್ಲಾನ ಕೃಪೆಯಿಂದ ಬಂದು, ಹುಟ್ಟುಗುಣವಾಗಿದೆಯೆಂದು ಅವನಿಗೆ ಮನದಟ್ಟಾಯಿತು. ಅವನಿಂದ ತನ್ನ ವೃಂದವಾದನಕ್ಕೆ ವಿಶೇಷ ಕಳೆಗಟ್ಟುತ್ತಿದೆಯೆಂಬ ಸತ್ಯವನ್ನು ಅರಿತನು. ಕರೀಮನನ್ನು ತನ್ನ ಮನೆಗೆ ಕರೆಯಿಸಿ, ಅವನಿಗೆ ಪಿಟೀಲನ್ನು ಬಾರಿಸಲು ಹೇಳುತ್ತಿದ್ದನು. ಅವನು ಬಾರಿಸುವಾಗ, ತಾನೊಬ್ಬನೇ ಕುಳಿತು ಸಂಗೀತದ ಅಮೃತ ಸಮಯವನ್ನು ಅನುಭವಿಸುತ್ತಿದ್ದನು.

ಒಂದು ಸಲ ಸಂಗೀತಕಚೇರಿ ಮುಗಿದನಂತರ, ಫಕೀರನ ಪಿಟೀಲುವಾದನವನ್ನು ಕೂಡಿದ ಜನರೆಲ್ಲ ಹೊಗಳಿತು. ಅನೇಕ ಜನರು ಅದ್ಭುತವಾಗಿ ಬಾರಿಸಿದ ಫಕೀರನನ್ನು ಕಾಣಬೇಕೆಂದು, ಗಾಯಕರು ಕುಳಿತ ಪೀಠದೆಡೆಗೆ ನುಗ್ಗ ಹತ್ತಿದರು. ಪೀಠದಮೇಲೆ ನಿಂತ ಕರೀಮನು, ಫಕೀರನನ್ನು ಹೊಗಳುವ ಅನೇಕ ತಲೆಗಳನ್ನು ನೋಡಿದನು. ಆಗ ಅವನ ಶಾಂತಿಸಾಗರದಂತಿದ್ದ ಮನಸ್ಸು ಒಮ್ಮೆಲೆ ಅಲ್ಲೋಲ ಕಲ್ಲೋಲವಾಯಿತು! ಫಕೀರನ ವಿಶೇಷವಾದ ಶಕ್ತಿ ಅವನಿಗೆ ಗೊತ್ತಿದ್ದರೂ, ಕರೀಮನು ತನಗಿಂತಲೂ ಹೆಚ್ಚು ಜನರಲ್ಲಿ ಕೀರ್ತಿಪಡೆಯುವದು ಬೇಕಾಗಿರಲಿಲ್ಲ.

ಫಕೀರನು ಇಂತಹ ಹೊಗಳಿಕೆಗಳನ್ನು ಎಂದೂ ಬಯಸಿರಲಿಲ್ಲ. ಅವನಿಗೇನೋ ವಿಚಿತ್ರವೆನಿಸಿತು. ಕರೀಮನಿಗೆ ಬಿಟ್ಟಿಯಾಗಿ ಆಮೇಲೆ ಜನಜಂಗುಳಿಯಿಂದ ಪಾರಾಗಿ ಹೋಗಬೇಕೆಂದು ಹೋದನು. ‘ಹೋಗಿ ಬರುವೆ’ನೆಂದು ಹೇಳಿದರೂ ಕರೀಮನು ಯಾವುದೂ ಪ್ರತ್ಯುತ್ತರ ಕೊಡಲಿಲ್ಲ. ಅವನ ಸಲಾಮಿಗೆ ಪ್ರತಿಸಲಾಮನ್ನು ಕೊಡಲಿಲ್ಲ.

ಜನಸಂದಣಿಯ ಗಲಭೆ ಕೇಳುತ್ತಿದೆ. ಅದರಲ್ಲಿ ಕರೀಮನ ಕೆಂಗಣ್ಣಿನ ಮುಖ ಎದ್ದು ಕಾಣುತ್ತಿದೆ. ಫಕೀರ ಪಿಟೀಲನ್ನು ಬಾರಿಸುತ್ತಾನೆ. ಒಮ್ಮೆಲೆ ಜನರೆಲ್ಲ ಸ್ತಬ, ಕರೀಮನ ಕೊಂಕುನೋಟ ಮಾತ್ರ ಹಾಗೆಯೆ. ಅವು ಫಕೀರನ ಎದೆಯನ್ನು ಚುಚ್ಚುತ್ತವೆ.

ಮನೆಯಲ್ಲಿ ಮೇಲಿಂದ ಮೇಲೆ ಬೈಗಿನಿಂದ ಬೆಳಗಿನವರೆಗೂ ಅದೇ ಚಿತ್ರ. ‘ಅಯ್ಯೋ’ ಎಂದು ಉಸಿರ್‍ಗರೆದು ಕೈ ಬೀಸಿದ. ಹತ್ತಿರದಲ್ಲಿಯೆ ಇಟ್ಟ ಪಿಟೀಲಿನ ತಂತಿಗಳು ಒಮ್ಮೆಲೆ ‘ಝುಮ್ಽಽ’ ಎಂದು ಸಪ್ಪಳ ಮಾಡಿದವು. ಒತೊಟ್ಟಿಗೆ ರಾಸಿಯಾಗಿ ನಿಂತ ನೀರು ತೆರೆಗಳಿಂದ ತೀವ್ರವಾಗಿ ತಿಳಿಯಾದಂತೆ ಅವನ ಮನಸ್ಸಿಗೆ ಭಾಸವಾಯಿತು. ಪಿಟೀಲು ಹೃದಯದರಸಿಯಾಗಿತ್ತು.

“ಅಯ್ಯೊ, ನಾನು ಸಾಯುತ್ತೇನೆ. ಉಶ್ಯಽಽ ಎಂದು ನರಳುವ ಧ್ವನಿ ಕೇಳಿಸಿತು.

ಫಕೀರನ ಹೆಂಡತಿಗೆ ೩-೪ ದಿನಗಳಿಂದಲೂ ಜ್ವರವಿದ್ದವು. ಆದರೆ ಅವಳ ಕಾಳಜಿಯನ್ನು ಅವನು ತೆಗೆದುಕೊಂಡಿರಲೇ ಇಲ್ಲ. “ಜ್ವರ ಹೇಗಿವೆ?” ಎಂದು ಅದನ್ನು ಒಂದು ಸಲವಾದರೂ ಕೇಳಿರಲಿಲ್ಲ. ಫಕೀರನ ರೀತಿಯು ಬೇರೆಯದಾಗಿತ್ತು. ಅವನು ಯಾವುದಕ್ಕೂ ವಿಶೇಷ ಕಾಳಜಿಮಾಡಿದವನಲ್ಲ. ಮೊದಲೆ ಅವನ ಸಂಸಾರ ಬಡತನದ್ದು. ಅದರಲ್ಲಿಯೂ ಅವನ ಇಂಥ ವಿಚಿತ್ರ ಸ್ವಭಾವದ ಮೂಲಕ ಆ ಸಂಸಾರ ಮತ್ತಿಷ್ಟು ಹರಕಾಗಿತ್ತು. ತನ್ನ ಚಿಂತೆ ಅತಿ ಯಾದಾಗ ಪಿಟೀಲನ್ನು ಬಾರಿಸುತ್ತ ಕುಳಿತನೆಂದರೆ ಅವನಿಗೆ ಯಾರದೂ ಅರಿವು ಇರುತ್ತಿರಲಿಲ್ಲ. ಹೆಂಡತಿ ಅವನ ಈ ವಿಚಿತ್ರ ವರ್‍ತನೆಗೆ ಬೇಸತ್ತು ಹೋಗಿದ್ದಳು. ಡಾಕ್ಟರರ ಮನೆಯಲ್ಲಿಯೇ ಕೆಲಸ ಮಾಡುತ್ತಿದ್ದರೂ ಅವರನ್ನು ಭೆಟ್ಟಿಯಾಗಿ, ಅವರಿಗೆ ಹೆಂಡತಿಯ ಜ್ವರದ ಬಗ್ಗೆ ಹೇಳಿರಲಿಲ್ಲ. ಹೆಂಡತಿಯೂ ಗಂಡನ ಪರೀಕ್ಷೆ ಮಾಡಬೇಕೆಂದು ತನ್ನ ಜ್ವರದ ತಾಪವನ್ನು ಸಹಿಸಿ ೨-೩ ದಿನ ಕೆಲಸ ಮಾಡಿದಳು. ನಾಲ್ಕನೆಯ ದಿನವೇ ಉರಿಯನ್ನು ತಾಳಲಾರದೇ ಚಿಟ್ಟನೆ ಚೀರಿದಳು.

ಆ ಚಿರುದನಿ ಫಕೀರನ ಎದೆಯನ್ನು ಸೀಳಿಬಿಟ್ಟಿತು. ಕಕ್ಕಾವಿಕ್ಕಿಯಾಗಿ ಅವಳ ಹತ್ತಿರ ಓಡಿಬಂದ. ಅವಳ ಮೈದಡವಿ “ಏನು, ಏನದು?” ಎಂದು ಕೇಳಿದ. ಅವಳು ವಿಶೇಷವಾಗಿ ಯಾವ ಮೂತನಾಡಲಿಲ್ಲ. — “ನಾನ್ ಸಾಯುವಕಾಲ ಸಮೀಪ ಬಂತು” ಎಂದು ಮಾತ್ರ ಅಂದಳು. ಫಕೀರನು ಅವಳ ತಲೆಯನ್ನು ತನ್ನ ತೊಡೆಯ ಮೇಲೆ ಇರಿಸಿಕೊಂಡ. ಹಾಗೆಯೇ ಅವಳ ಕೂದಲುಗಳು ಸರಿಪಡಿಸುತ್ತಿದ್ದ, ೪-೫ ಬಿಳಿ ಕೂದಲುಗಳು ಅವನ ಕೈಯಲ್ಲಿ ತಾನಾಗಿಯೇ ತೊಡವಿಕೊಂಡು ಬಂದವು. ಅವುಗಳನ್ನು ಒಂದೇ ಸವನೆ ನಿರೀಕ್ಷಿಸಿದ. ಅವನ ಆ ನೋಟ ಅನೇಕ ಮಾತುಗಳನ್ನು ಹೇಳುತ್ತಿದ್ದವು.

ಅಹುದು, ಅವನಿಂದ ಅವಳಿಗೆ ಏನು ಸುಖವಾಯಿತು? ಅವಳು ಬೇಡಿದಂಥ ಯಾವ ವಸ್ತುಗಳನ್ನೂ ಅವನು ತಂದು ಕೊಡಲಿಲ್ಲ. ಅವಳಿಗೆ ಒಂದು ಸಲವಾದರೂ ಸಂತೋಷದಿಂದ ಒಂದು ಸೀರೆಯನ್ನು ತರಿಸಲಿಲ್ಲ ಅವಳನ್ನು ಕೂಡಿಸಿಕೊಂಡು ಬಹಳ ಹೊತ್ತಿನವರೆಗೆ ಎಂದೂ ಮಾತನಾಡಲಿಲ್ಲ. ಮಕ್ಕಳನ್ನು ಆಡಿಸುವ ಸುಯೋಗವಂತೂ ಎಂದೂ ಬರಲಿಲ್ಲ. ಮತ್ತೆ ಆ ಮುರುಕು ಗುಡಿಸಲು ಹಾಗೆಯೇ ಉಳಿಯಿತು.

ಅದೆ ಆ ಕರೀಮನ ಸ್ಥಿತಿ ಹೇಗಿದೆ? ತನ್ನ ಉದ್ಯೋಗದಿಂದ ಒಂದು ಹೆಸರು ಗಳಿಸಿಕೊಂಡಿದ್ದಾನೆ. ಗುಡಿಸಲಿನ ಧಂಟಿನ ಗೋಡೆ ಹೋಗಿ, ಇಟ್ಟಂಗಿ ಗೋಡೆಯಾಯಿತು; ಇಟ್ಟಂಗಿ ಗೋಡೆ ಹೋಗಿ ಕಲ್ಲಿನ ಗೋಡೆಯಾಯಿತು. ಎಂಥ ವಿಜೃಂಬಣೆಯ ಸಂಸಾರ ಅವರು! ಹೆಂಡತಿ ಮಕ್ಕಳು ಒಂದೇ ಸಮನೆ ಆ ದೂರ ಬಂಗಲೆ ಯಲ್ಲಿ ನಲಿಯುತ್ತಿದ್ದಾರೆ! ಅವನು ಬಾರಿಸುವ ಗಾಯನ ಒಂದೇಸಮನೆ ಕೇಳುತ್ತಿದ್ದಾರೆ. ಅಹುದು, ಎಂಥ ದೊಡ್ಡ ಮನೆ!! ಆ ಮನೆ ಹೆಜ್ಜೆ ಇಡುತ್ತ ಊರ ಮೇಲೆ ಹಾಯ್ದು… ಫಕೀರನ ಕಣ್ಣಿನ ಹತ್ತಿರವೇ ಬಂದಿತು!

ಆದರೆ ಫಕೀರನ ಕಣ್ಣೆದುರು ಬಿಳಿಗೂದಲುಗಳು ಇದ್ದವು. ತೊಡೆಯ ಮೇಲೆ ಹೆಂಡತಿ ಒಂದೇ ಸವನೆ ನರಳುತ್ತಿದ್ದಳು. ಚಳಿಯಿಂದ ಮುಡಿಕೊಂಡಿದ್ದಳು. ತನ್ನ ಸಂಸಾರದ ಅರಿವು ತನಗಾಗಿ “ನಡೆ ಡಾಕ್ಟರರ ಕಡೆಗೆ ಹೊಗೋಣ” ಎಂದನು.

ಒಂದು ಝಟಕವನ್ನು ಬಾಡಿಗೆಗೆ ಗೊತ್ತು ಮಡಿಕೊಂಡು ದವಾಖಾನೆಗೆ ಹೊರಟನು. ದವಾಖಾನೆಯ ಬಾಗಿಲಿಗೆ ಹೋಗಿ ಡಾಕ್ಟರರಿಗೆ ನಮಸ್ಕಾರ ಮಾಡುವಷ್ಟರಲ್ಲಿಯೆ, ಡಾಕ್ಟರರು ಅವನನ್ನು ಕರೆದು ಒಂದು ಸುದ್ದಿ ಹೇಳಿದರು- “ಈ ಊರಿಂದ ನಾಳೆಯೆ ಹೊರಡಬೇಕು. ಬೇರೆ ಊರಿಗೆ ನನಗೆ ವರ್‍ಗವಾಗಿದೆ. ಅಷ್ಟರಲ್ಲಿ ನಿನ್ನದೊಮ್ಮೆ ಪಿಟೀಲುವಾದನ ಆಗಬೇಕು ಶಾರದಮ್ಮ ಕೇಳಬೇಕೆನ್ನುತ್ತಾಳೆ.”

ಫಕೀರನು ಕೈ ಜೋಡಿಸಿಕೊಂಡು ತಲೆಕೆಳಗೆ ಹಾಕಿಕೊಂಡು ಹಾಗೆಯೇ ನಿಂತುಬಿಟ್ಟ. ಸ್ವಲ್ಪ ಹೊತ್ತಿನ ನಂತರ “ನನ್ನ ಹೆಂಡತಿ…….” ಹೀಗೆನ್ನುವಷ್ಟರಲ್ಲಿ ಆ ಹೆಂಗಸು ಬಾಗಿಲನ್ನು ಸಮೀಪಿಸುತ್ತ ದೊಪ್ಪನೆ ಕೆಳಗೆ ಬಿದ್ದಳು.

ಜವಾನರು, ಕಂಪೌಂಡರು ಅವಳನ್ನು ಎತ್ತಿ ಮೇಜಿನ ಮೇಲೇ ಮಲಗಿಸಿದರು. ಎಲ್ಲ ಕಡೆಗೂ ಸ್ತಬ್ದತೆ! ಗಾಬರಿ!! ಫಕೀರನು ನಿಂತಲ್ಲಿಯೆ ನಿಂತಿದ್ದನು. ಹಲವುನಿಮಿಷಗಳ ನಂತರ ಆ ಹೆಂಗಸನ್ನು ಮನೆಗೆ ಕರೆದೊಯ್ಯಲಾಯಿತು.

“ಫಕೀರ ಇಷ್ಟು ದಿನವಾದರೂ ನನಗೇಕೆ ಹೇಳಲಿಲ್ಲ? ವಿಷಮ ಜ್ವರ! ನಾಡಿ ಚೆನ್ನಾಗಿಲ್ಲ….” ಡಾಕ್ಟರರು ಸ್ವಲ್ಪ ತಡೆದರು. ಆಮೇಲೆ ಫಕೀರನಿಗೆ ಸಮಾಧಾನದ ಮಾತು ಹೇಳಿದರು. “ಕಾಳಜಿಮಾಡು, ಚೆನ್ನಾಗಿ ಔಷಧ ಕೊಡಿಸು. ನನ್ನ ತರುವಾಯ ಬರುವ ಡಾಕ್ಟರರಿಗೂ ಹೇಳುತ್ತೇನೆ.”

ಫಕೀರನು ಏನೂ ಮಾತಾಡಲಿಲ್ಲ!

ಅಂದು ಅಮವಾಸ್ಯೆಯ ಕಗ್ಗತ್ತಲೆಯ ರಾತ್ರಿ. ಒಂದೇ ಸವನೆ ನರಳುತ್ತಿದ್ದಾಳೆ. ಫಕೀರನು ಯಾವ ರೀತಿಯ ಉಪಚರಿಸಿದರೂ ಸಮಾಧಾನವಿಲ್ಲ. ಒಮ್ಮೆಲೆ ಅವಳು ಒಂದು ಸಂಗತಿಯನ್ನು ಕೇಳಿದಳು “ನಿಮಗೆ ನೆನಪಿದೆಯೆ? ನಮಗೊಂದು ಸಣ್ಣ ಮಗು ಇತ್ತು…..” ಅವಳಿಗೆ ಬಹಳ ಹಳೆಯ ಸುಖದ ಜೀವ ನೆನಪಾಯಿತು. ಅದೆ ಸಂಗತಿಯನ್ನೇ ಮತ್ತೆ ಬಣ್ಣಿಸಿದಳು. “ಆ ನದಿಯ ದಂಡೆಯ ಮೇಲಿನ ಅಡವಿಯಲ್ಲಿ ಅದನ್ನು ಆಡಿಸುತ್ತಿದ್ದೆವು. ಆ ಅಡವಿಯಿಂದ ತಿರುಗಿ ಬರುವಾಗ ಒಮ್ಮೊಮ್ಮೆ ಕತ್ತಲು ಬಹಳಾಗುತ್ತಿತ್ತು. ನೀವು ಆಗ ದೆವ್ವದ ಕತೆ ಹೇಳಿ ಮತ್ತಿಷ್ಟು ಹೆದರಿಸುತ್ತಿದಿರಿ.”

ಫಕೀರನಿಗೆ ಯಾವ ನೆನಪೂ ಬೇಗ ಆಗಲಿಲ್ಲ. ಮಗುವು ಯಾವ ಕಾಲದಲ್ಲಿ ಇತ್ತೊ ಏನೊ ಎಂಬುವಂತಾಗಿತ್ತು ಅವನಿಗೆ. ಈಗಾಗಲೇ ಅವನು ಮೂವತ್ತು ವರ್ಷದ ಮುದುಕನಾಗಿದ್ದ! ಅವನಿಗೆ ಒಂದು ಮಗುವಾದುದು, ಆ ಮಗುವು ೪-೫ ತಿಂಗಳಲ್ಲಿಯೇ ಸ್ವರ್ಗವಾಸಿಯಾದುದು ಯಾವುದರ ಸ್ಮರಣೆಯೂ ಅವನಿಗೆ ತೀವ್ರ ಬರಲಿಲ್ಲ. ತಾನು ತನ್ನ ಹೆಂಡತಿಯ ಸಂಗಡ ಚೇಷ್ಟೆ ಮಾಡಿದುದರ ನೆನಪೂ ಅವನಿಗೆ ವಿಶೇಷವಾಗಿರಲಿಲ್ಲ. ಪಿಟೀಲಿನ ಹುಚ್ಚಿನಲ್ಲಿ ಸಂಸಾರದ ಅನೇಕ ಸಂಗತಿಗಳನ್ನು ಮರೆತುಬಿಡುತ್ತಿದ್ದ. ಅವನೇನೂ ನೆನಪುಮಾಡಿಕೊಳ್ಳುವಂತೆ ಹೊರಗೆ ನೋಡಿದ. ಭಯಂಕರ ಕತ್ತಲೆ, ಆ ಕತ್ತಲೆ ಅವನನ್ನು ಹೆದರಿಸಿತು ಹೆಂಡತಿ ಇನ್ನೂ ಮಾತನಾಡುತ್ತಲೆ ಇದ್ದಳು’ “ನಾನು ಹೆದರಿದಾಗ ನೀವು ಪಿಟೀಲನ್ನು ಬಾರಿಸಿ……..”

ಫಕೀರನು ಪಿಟೀಲನ್ನು ನೋಡಿದ. ಆ ರಾತ್ರಿಯೆ ಡಾಕ್ಟರರು ಪಿಟೀಲನ್ನು ಬಾರಿಸಲು ತಮ್ಮ ಮನೆಗೆ ಕರೆದಿದ್ದರು.

ಹೆಂಡತಿಯ ಹತ್ತಿರ ಪಿಟಿಲನ್ನು ತಂದು ಒಂದು ಅಪೂರ್‍ವವಾದ ರಾಗ ಬಾರಿಸಲು ಪ್ರಾರಂಭಿಸಿದ. ಮಿಣಿಮಿಣಿ ದೀಪದ ಬೆಳಕಿನಲ್ಲಿ ಎರಡೇ ವ್ಯಕ್ತಿಗಳು ಕಾಣುತ್ತಿವೆ. ಸಂಗೀತದ ನಾದವು ಸುತ್ತಲಿನ ವಾತಾವರಣದಲ್ಲಿ ರೆಕ್ಕೆಗೊಂಡು ಹಾರಿತು. ಆ ಸಂಗೀತದ ಗುಂಗಿನಲ್ಲಿ ಫಕೀರನು ತಲ್ಲೀನನಾದನು. ಹೆಂಡತಿಯ ನರಳುವಿಕೆಯು, ಸಂಕಟವು ಕರಗಿಹೋದವು. ಆ ಗಾನದ ನಿರ್‍ಮಲವಾದ ನೀರ ತೆರೆಗಳಲ್ಲಿ ತೇಲಿ, ಪಿಟೀಲನ್ನು ಒಂದೇ ಸವನೆ ಬಾರಿಸಿದ. ಆ ಶಾಂತಿ! ಆ ಸುಖ! ಫಕೀರನು ಎಂದೂ ಅನುಭವಿಸಿರಲಿಲ್ಲ.

ಕಣ್ದೆರೆದು ನೋಡುತ್ತಾನೆ-ಮೂಡಣದ ದಿಗಂತದಲ್ಲಿ ಸೂರ್‍ಯಕಮಲ ಅರಳಿತ್ತು! ಹೆಂಡತಿ ಸುಖವಾಗಿ ನಿದ್ರೆ ಹೋಗಿದ್ದಳು. ಅದು ಸುದೀರ್ಘವಾದ ಸುಖವಾದ ನಿದ್ರೆಯೆ ಆಗಿತ್ತು!!

ಗುಡಿಸಲಿನ ಸುತ್ತು ಮುತ್ತಲಿದ್ದ ಮುದುಕಿಯರು ಹಿರಿಯರು ಮನೆಯ ಹತ್ತಿರ ನೆರೆದರು. ಮುಂದಿನ ಕಾರ್‍ಯವನ್ನೆಲ್ಲ ನೆರವೇರಿಸಿದರು.

ನದಿಯ ತೀರದಲ್ಲಿ ಅವಳ ಹೆಣವನ್ನು ಹುಗಿಯುತ್ತಿರುವಾಗ, ಫಕೀರನಿಗೆ ತನ್ನ ಮಗುವಿನ ನೆನಪಾಯಿತು. ಆ ನದಿಯ ಸಮೀಪದಲ್ಲಿಯೆ ಅಡವಿ ಇದ್ದಿತು. ಆದರೆ ಈಗ ಏನು? ಜೀವನವು ಹೇಗೆ ಹೋಯಿತು? ಮಗುವಿಲ್ಲ, ಆ ಹೆಂಡತಿ ಇಲ್ಲ, ಜನರು ಬದುಕಿರುವದಾದರೂ ಏತಕ್ಕೆ? ದೇಹಗಳನ್ನು ಮಣ್ಣು ಪಾಲು ಮಾಡಲಿಕ್ಕೆ? ಮಣ್ಣು ಪಾಲಾಗಬೇಕಾದರೆ ಇಷ್ಟು ದಿನವಾದರೂ ಏಕೆ ಬದುಕಿ ಇರಬೇಕು? ಹೆಂಡತಿ ಮಗುಗಳಂತೆ ತಾನೂ ಬಯಲಾಗಬಹುದಿತ್ತಲ್ಲ?

ಜೀವನದ ಸಮಸ್ಯೆಗಳೆಲ್ಲ ಅವನ ತಲೆಯಲ್ಲಿ ಸುಳಿದಾಡಲು ಪ್ರಾರಂಭಿಸಿದುವು. ಆ ವಿಚಾರಗಳು ಮುಂದೆ ಮುಂದೆ ಸಾಗಿದ ಹಾಗೆಲ್ಲ ಅವನ ನಡೆಗಳು ಮಂದಮಂದವಾಗಿ ಮನೆಯ ಕಡೆ ತೆರಳಿದವು. ಅವನ ಜೊತೆಗಿದ್ದವರು ದಾರಿಯಲ್ಲಿ ಅಲ್ಲಲ್ಲಿ ಕರಗಿದರು.

“ಈ ಹೊತ್ತು ಸಂಜೆ ಬರಬೇಕು” ಕರೀಮನು ದಾರಿಯಲ್ಲಿಯೇ ಫಕೀರನನ್ನು ತಡೆದು ಹೇಳಿದ. ಫಕೀರ ಕತ್ತೆತ್ತಿ ನೋಡಿದ. ಕರೀಮ ಕುಲುಕುಲು ನಗುತ್ತ ಅವನನ್ನು ಮಾತನಾಡಿಸಿದನು.

ಫಕೀರನಿಗೆ ಉತ್ತರ ಕೊಡಲು ಸ್ವಲ್ಪವೂ ಮನಸ್ಸಾಗಲಿಲ್ಲ. “ಮಾತನಾಡಿಸಬೇಡ” ಎಂದು ಬಿರುಗಣ್ಣುಗಳಿಂದ ಅವನನ್ನು ನೋಡಿದ. ಅವನ ಎದುರು ನಿಲ್ಲುವದಾಗದೆ, ಒಮ್ಮೆಲೆ ಅಲ್ಲಿಂದ ಹುಚ್ಚೆದ್ದು ಓಡಲು ಪ್ರಾರಂಭಿಸಿದ.

ಕರೀಮನು ಕಕ್ಕಾವಿಕ್ಕಿಯಾಗಿ ಅವನನ್ನು ನೋಡುತ್ತ ನಿಂತ.

ಫಕೀರನು ಓಡುತ್ತಿರುವುದನ್ನು ನೋಡಿ ಹಲವು ನಾಯಿಗಳು ಬೆನ್ನುಹತ್ತಿದವು. ಓಣಿಯಲ್ಲಿಯ ಹುಡುಗರು ನಾಯಿಗಳನ್ನು ಕಂಡು, ಒದರುತ್ತ ಕಲ್ಲು ಒಗೆಯಹತ್ತಿದರು. ಓಡಿಹೋಗುವ ಮನುಷ್ಯನನ್ನು ನೋಡಿ ಬಿದ್ದು ಬಿದ್ದು ನಗಹತ್ತಿದರು.

ಕರೀಮನು ಈ ದೃಶ್ಯವನ್ನೆಲ್ಲ ನೋಡಿ ದಿಗ್ಭ್ರಾಂತನಾದ! ತನ್ನ ಸಂಗೀತ ಮೇಳ ಒಳ್ಳೆಯದಾಗಬೇಕಾಗಿದ್ದರೆ, ಫಕೀರನ ಅವಶ್ಯಕತೆ ಇದೆಯೆಂದು ಅವನಿಗೆ ಅನಿಸಿತ್ತು. ಅಂತೆಯೆ ತನ್ನ ದುರಭಿಮಾನವನ್ನು ಮರೆತು, ಅವನಿದ್ದ ಓಣಿಯ ಕಡೆಗೆ ಹೊರಟಿದ್ದ. ಆದರೆ ಫಕೀರ ಹೀಗೇಕೆ ಮಾಡಿದ ? ತನ್ನ ಅಸೂಯೆಯ ನೆನಪು ಕರೀಮನಿಗೆ ಒಮ್ಮೆಲೆ ಆಯಿತು.

ಫಕೀರನಿಗೆ ಮನೆಯೆಲ್ಲ ಮನವೆಲ್ಲ ಶೂನ್ಯವಾಗಿತ್ತು. ಗುಡಿಸಲಲ್ಲಿ ಗಾಳಿಯು “ಹೋಽಽ” ಎಂದು ಅಳುತ್ತಿತ್ತು. ಆ ಕರಾಳ ರೂಪಗಳು ತನ್ನನ್ನು ತಿನ್ನಲು ಬರುತ್ತವೇನೋ ಎನಿಸುತ್ತಿತ್ತು. ಫಕೀರನೊಬ್ಬನೇ ಅಲ್ಲಿ ಕುಳಿತುಕೊಂಡು ‘ಗೊಳೋ’ ಎಂದು ಅತ್ತನು.

ಬಾಗಿಲಿನ ಬಳಿಯಲ್ಲಿ ನಿಂತ ಕರೀಮನು ಇವನ್ನೆಲ್ಲ ನೋಡಿ ಗಾಬರಿಯಾದನು. ಒಳಗೆ ಬಂದವನೆ ಫಕೀರನ ತಲೆಯನ್ನು ತನ್ನ ಎದೆಗೆ ಅವುಚಿ ಕೊಂಡ. ತನ್ನ ಅಪರಾಧವನ್ನು ಮನ್ನಿಸಬೇಕೆಂದು ಕೇಳಿಕೊಳ್ಳುವವರಂತೆ ಅವನನ್ನು ಬಿಗಿಯಾಗಿ ಅಪ್ಪಿಕೊಂಡ.

“ಕರೀಮ, ನಾನು ಇನ್ನು ಬರೋದಿಲ್ಲ. ಪಿಟೀಲನ್ನು ನಿನಗೇ ಕೊಡುತ್ತೇನೆ. ಇಂದೆ ನಾನು ಕೊನೆಯದಾಗಿ ಬಾರಿಸುವೆ.”

ಫಕೀರನು ಪಿಟೀಲನ್ನು ತೆಗೆದುಕೊಂಡ. ತನ್ನ ಹೆಂಡತಿಯ ಮುಂದೆ ಬಾರಿಸಿದ ರಾಗವನ್ನು ಮತ್ತೆ ಬಾರಿಸಲು ಪ್ರಾರಂಭಿಸದ. ಅವನ ಕಣ್ಣುಗಳಲ್ಲಿ ನೀರು ತುಂಬಿ ತುಳುಕಾಡಿದವು. ಅವು ಮೆಲ್ಲನೆ ಪಿಟೀಲಿನ ಮೇಲೆ ಬೀಳಹತ್ತಿದವು. ಕರೀಮನು ಬಹಳ ಕುತೂಹಲದಿಂದ ಅದನ್ನು ಕೇಳಿದನು. ಅವನ ತಲೆಯ ಮೇಲೆ ಕೈಯಿಟ್ಟು ಅವನನ್ನು ರಮಿಸುವಾಗಲೆಲ್ಲ ಅಂತಃಕರಣವು ಉಕ್ಕೇರಿ ಬರಹತ್ತಿತು. ಕಣ್ಣೀರು ಗಲ್ಲಗಳ ಮೇಲೆ ಹನಿಹನಿಯಾಗಿ ಉದುರುತಲೆ ಇದ್ದವು.

ಫಕೀರನು ಎಂದೋ ಸ್ವರ್‍ಗವಾಸಿಯಾಗಿ ಹೋದ. ಅವನ ಪಿಟೀಲು ಮಾತ್ರ ಉಳಿದಿದೆ. ಕರೀಮನು ಅದನ್ನು ಹಿಡಿದನೆಂದರೆ ಫಕೀರನ ಜೀವನವೆಲ್ಲ ಅವನಿಗೆ ನೆನಪಾಗುತ್ತದೆ. ದುಃಖದಾಹವನ್ನೆಲ್ಲ ಪಿಟೀಲಿನ ರಾಗದಲ್ಲಿ ತೇಲಿಸಿ ಬಿಡುತ್ತಾನೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೩೪
Next post ರಾಮನಿಲ್ಲದ ನಾಡಿನಲಿ

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…