ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು. ಸಿಕ್ಕಿರೋನು ಫಾರಿನ್ ವರ. ಮದುವೆಯಾದ ಮಗಳು ಹರಿಣಿಯನ್ನು ಫರಿನ್ಗೆ ಹಾರಿಸಿಕೊಂಡು ಹೋಗುವವನಿದ್ದ ಹುಡುಗ ಕಂಪ್ಯೂಟರ್ ಎಂಜಿನೀಯರ್. ಮೊದಲ ಭೇಟಿಯಲ್ಲೇ ಸಭ್ಯನಂತೆ ತೋರಿ ಮನೆಸೆಳೆದಿದ್ದ ಅವನು ನನ್ನ ಕಥೆ ಕಾದಂಬರಿಗಳನ್ನು ಓದಿದ್ದಾನಂತೆ. ಸಾಹಿತ್ಯ ಸಂಗೀತ ಒಲವಿರುವವರೆಲ್ಲಾ ಮೃದು ಹೃದಯಿಗಳು ಎಂಬುದು ನನ್ನ ನಂಬಿಕೆ. ನಾನು ನಿಮ್ಮ ಫ್ಯಾನ್ ಸಾರ್ ಅಂದಾಗ ಎದೆ ಉಬ್ಬಿತ್ತು. ನಮ್ಮ ಹುಡುಗಿಯ ಜೊತೆ ನಾನೂ ಅವನಿಗೆ ಇಷ್ಟವಾಗುವಂತೆ ಭಾಸವಾದಾಗ ಪಕ್ಕೆಗಳಲ್ಲಿ ರಕ್ಕೆಗಳು ಮೂಡಿದ್ದವು. ‘ನೀವು ಅನ್ಯಾಯ ಅಕ್ರಮಗಳನ್ನು ಸ್ಟ್ರಾಂಗ್ ಆಗಿ ವಿರೋಧಿಸಿ ಬರಿತೀರಾ ಸಾರ್… ಐ ಲೈಕ್ ಇಟ್’ ಅಂದಾಗ ಅವನು ನನ್ನ ಬರಹಗಳನ್ನು ಖಂಡಿತ ಓದಿದ್ದಾನೆ ಎನ್ನುವುದನ್ನು ಪುರಾವೆ ಸಿಕ್ಕ ಖುಷಿ. ಆದರೇನು ವರದಕ್ಷಿಣೆ ಕೇಳಿಯಾನೆಂಬ ದಿಗಿಲೇ ಲಾವಾರಸವಾಗಿ ಎದೆ ತುಂಬಿಕೊಂಡಿತ್ತು
‘ಬರೆದಂತೆ ಬದುಕಿರೋದಯ್ಯ ನಮ್ಮ ಮೂರ್ತಿ, ಸರ್ಕಾರಿ ನೌಕರನಾದ್ರೂ ಅವರೆಂದೂ ಲಂಚ ಮುಟ್ಟಿದೋರಲ್ಲ ಮಿಸ್ಟರ್ ಸುಂದರ್… ಬಡತನವನ್ನು ಈಗ್ಲೂ ಸ್ಟ್ರಾಂಗ್ ಆಗೇ ಎದುರಿಸ್ತಿದಾರೆ’ ಸ್ನೇಹಿತ ಗೋಪಾಲ ಸೂಕ್ಷ್ಮವಾಗಿ ವರ ಸುಂದರನಿಗೆ ಅವನ ಮನೆಯವರಿಗೆ ಜೀವನ ದರ್ಶನ ಮಾಡಿಸಿದ್ದು ಸುಂದರನ ತಂದೆ ಕೂಡ ಎಕ್ಸುಕ್ಯುಟಿವ್ ಎಂಜಿನಿಯರ್ ಆಗಿ ರಿಟೈರ್ಡ್ ಆದವರು ಎಂದ ಮೇಲೆ ಬಡತನವನ್ನೆಂದೊ ಮರೆತವರು. ಸಂಬಂಧ ಒಪ್ಕೋತಾರಾ ಎಂಬ ಒಳಗುದಿ ಅವರು ಹೆಚ್ಚು ಗುಂಜಾಡದೆ ಒಂದೇ ಮಾತಿನಲ್ಲಿ ವರದಕ್ಷಿಣೆ ವರೋಪಚಾರ ಎಂತದೂ ಬೇಡ, ಒಳ್ಳೆ ಛತ್ರದಲ್ಲಿ ಗ್ರಾಂಡ್ ಆಗಿ ಮದುವೆ ಮಾಡಿ ಕೊಟ್ರಾಯ್ತು. ನಮ್ಮ ಕಡೆ ಬಂಧು ಬಳಗ ಜಾಸ್ತಿ ಎಲ್ಲಾ ಬರ್ತಾರೆ ಅಂದ್ರೂ ಅವರ ಮಾತಿನಲ್ಲಿ ಎಚ್ಚರಿಸುವ ಧಾಟಿಯಿತ್ತು.
ಹುಡುಗ ಒಪ್ಪಲು ಹುಡುಗಿ ಇಂಗ್ಲಿಷ್ ಎಂ.ಎ. ಮಾಡಿಕೊಂಡಿರೋದು ಪ್ಲಸ್ ಪಾಯಿಂಟ್. ಜೊತೆಗೆ ಅವರಮ್ಮನಂತೆ ಎತ್ತರವಾಗಿ ಬೆಳ್ಳಗೆ ಲಕ್ಷಣವಾಗಿದ್ದಳು. ಕೊರತೆ ಎಂದರೆ ನಾನು ದುಡ್ಡು ಮಾಡುವವನಲ್ಲ ಸಾಲ ಮಾಡುವವನೂ ಅಲ್ಲ. ಮದುವೆ ಎಂದರೆ ಹುಡುಗಾಟವೆ ಎಂಬ ಭಯ. ನನ್ನ ಹೆಂಡತಿ ನೋಡುವುದಕ್ಕೂ ಮೊದಲೇ ಒಪ್ಪಿಬಿಟ್ಟಿದ್ದಳು. ಕೆನಡಾದಲ್ಲಿದಾನೆ ಎಂದ ಮೇಲೆ ಅವನು ಒಪ್ಪಿದರೆ ಹರಿಣಿ ಪುಣ್ಯ ಕಣ್ರಿ ಎಂದವಳ ಚಡಪಡಿಕೆ. ಹುಡುಗ ಎಣ್ಣೆಗೆಂಪಿನವನಾದರೂ ಸ್ಮಾರ್ಟ್. ಹೆಣ್ಣಿನ ಬುದ್ದಿವಂತಿಕೆ ಇರೋದು ಸೌಂದರ್ಯದಲ್ಲಿ, ಗಂಡಿನ ಸೌಂದರ್ಯ ಇರೋದು ಅವನ ಬುದ್ಧಿವಂತಿಕೆಯಲ್ಲಿ ಎಂಬ ಮಾತಿಗೆ ತಕ್ಕ ಜೋಡಿ. ಭವಿಷ್ಯಾಲ್ಲಿ ನಾವೂ ಅಮೇರಿಕಾನ ನೋಡಬಹುದು ಕಣ್ರಿ ಎಂದಿವಳ ವರಾತ. ನೋಡ್ರಿ ವರದಕ್ಷಿಣೆ ತೊಗೊಳ್ಳೋ ಅವಿವೇಕಿಗೆ ನನ್ನ ಮಗಳನ್ನು ಕೊಡೋಲ್ಲ ಅಂತ ಬಂದ ಎರಡು ಸಂಬಂಧಗಳನ್ನು ಒದ್ಕೊಂಡ್ರಿ… ಈ ಪುಣ್ಯಾತ್ಮ ವರದಕ್ಷಿಣೆ ಕೇಳ್ತಾ ಇಲ್ಲ. ಈಗ ನೀವು ಹಿಂದೇಟ್ ಹಾಕಿದ್ರೋ… ತನ್ನ ಹೊಟ್ಟೆಯಲ್ಲಿನ ಸಿಟ್ಟನ್ನೆಲ್ಲಾ ಒಟ್ಟಿಗೆ ಸೇರಿಸಿ ಸುಟ್ಟು ಬಿಡುವಂತೆ ನೋಡಿದ್ದಳು ಮಡದಿ.
ವರೋಪಚಾರ, ದುಬಾರಿ ಛತ್ರದಲ್ಲಿ ಲಗ್ನ ಅದರ ಖರ್ಚು ಕಡೆಮೆಯೆಂದರೂ ಮೂರು ಲಕ್ಷ ಕೈಯಲ್ಲಿಟ್ಟುಕೊಂಡಿರಬೇಕು. ಎಷ್ಟು ಜನ ಬರುತ್ತಾರೋ? ನಿಭಾಯಿಸೋದ್ಹೇಗೆ ಎಂದೆಲ್ಲಾ ಹೊಯ್ದಾಡುವ ನನ್ನನ್ನು ಅರ್ಥ ಮಾಡಿಕೊಳ್ಳುವ ಒಂದು ಜೀವಿಯೂ ಜಗತ್ತಿನಲ್ಲಿ ಇದ್ದಂತೆ ತೋರುತ್ತಿಲ್ಲ. ಮಗಳಾಗಲೆ ಫಾರಿನ್ ಕನಸಲ್ಲಿ ತೇಲಾಡುತ್ತಿದ್ದಳು. ಅವಳ ತಾಯಿಯೂ ಅದೇ ಮೋಜು. ಅವರ ಬಳಿ ದುಸರಾ ಮಾತಾಡುವಂತಿಲ್ಲ. ಯಾರ ಬಳಿಯಾದರೂ ಸರಿ ನನ್ನ ಪರಿಸ್ಥಿತಿ ಹೇಳಿಕೊಳ್ಕೋಣವೆಂದು ನಾಲಿಗೆ ಒದ್ದೆ ಮಾಡಿಕೊಳ್ಳುವ ಮೊದಲೆ ನಾನು ಬಾಯಿ ಬಿಡದಂತೆ ಪ್ರತಿಕ್ರಿಯೆಗಳು ಬೆನ್ನಂಟುತ್ತಿದ್ದವು. ‘ಸುಮ್ಮನಿರಪ್ಪ ಸಾಕು. ಅದ್ಯಾವನೋ ಎಣ್ಣೆ ಬಂದ ಕಾಲ್ದಾಗ ಕಣ್ಣು ಮುಚ್ಕೊಂಡನಂತೆ… ಸಾಲವೋ ಸೋಲವೋ ಮಾಡಿ ಮದುವೆ ಮಾಡಬೇಕ್ರಿ’ ಎಂಬ ದಬಾವಣೆ. ‘ಅಲ್ಲಯ್ಯಾ ನಿನ್ನಂಗೆ ಆ ದೇವಯ್ಯನೂ ಎಫ್.ಡಿ.ಸಿ. ಮೊನ್ನೆ ಮಗಳ ಮದುವೆ ಹೆಂಗ್ ಮಾಡ್ಡ ವಾಹ್! ಯಾವ ಡೀಸಿನೂ ಮಾಡಾಕಿಲ್ಲ ಅಷ್ಟು ಮೋಪಾಗಿ ಮಾಡ್ದ. ಸಹೋದ್ಯೋಗಿಯೊಬ್ಬನ ಕೀಟಲೆ.
‘ಅವನು ಲಂಚಕೋರ, ಅವನ್ಗೂ ನನಗೂ ಕಂಪೇರ್ ಮಾಡ್ಬೇಡಿ.’ ನನ್ನದು ಆರ್ತನಾದ.
‘ಅಲ್ಲೋ ಮಾರಾಯ. ಈಗ ಕೆಲಸವಾದ್ರೆ ಸಾಕಂತ ಜನವೇ ಲಂಚ ಕೋಡೋಕೆ ರೆಡಿಯಾಗೇ ಬರ್ತಾರೆ. ತೊಗೊಳ್ದೆ ಇದ್ದದ್ದು ನಿನ್ನ ತಪ್ಪು’
“ಹೋಗ್ರಯ್ಯ. ನಾನೇ ಬೇರೆ ನನ್ನ ಪ್ರಿನ್ಸಿಪಲ್ಸೇ ಬೇರೆ” ರೇಗುತ್ತಿದ್ದೆ. ಹೋಗ್ಲಿ ಬಿಡಪ್ಪಾ ಬ್ಯಾಂಕಲ್ಲಿ ಎಷ್ಟು ಮಡಗಿದಿ ಅದನ್ನಾರು ಹೇಳು? ಎಂಬ ವಿಚಾರಣೆ ಬೇರೆ. ಇವರ ಮಾತಿಗೆಲ್ಲಾ ಏನು ಹೇಳೋದು. ತಿಂಗಳ ಕೊನೆಗೆ ವೆಂಕಟೇಶರಾವ್ ಇಲ್ಲವೆ ಇಸ್ಮಾಯಿಲ್ ಹತ್ತಿರ ಕನಿಷ್ಟ ಐನೂರಾದ್ರೂ ಸಾಲ ಮಾಡದಿದ್ದರೆ ಸಂಸಾರ ರಥ ಸಾಗುತ್ತಿರಲಿಲ್ಲ. ನನ್ನ ಕೈಹಿಡಿತ ಎಲ್ಲದಕ್ಕೂ ಲೆಕ್ಕಾಚಾರ. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕೆಂಬ ನಿಯಮಗಳಿಂದಾಗಿ ಹೆಂಡತಿ ಮಕ್ಕಳ ದೃಷ್ಟಿಯಲ್ಲಿ ನಾನೊಬ್ಬ ಕೆಲಸಕ್ಕೆ ಬಾರದವ. ಸಂಬಂಧಿಗಳ ದೃಷ್ಟಿಯಲ್ಲಿ ಜಿಪುಣಾಗ್ರೇಸರ. ಪ್ರೆಸೆಂಟೇಶನ್ ಎಲ್ಲಿ ಕೊಡಬೇಕಾಗುತ್ತೋ ಅಂತ ರಕ್ತ ಸಂಬಂಧಿಗಳ ಮದುವೆ ಮುಂಜಿಗಳಿಗೂ ಚಕ್ಕರ್ ಹಾಕ್ತಾನೆ ಭೂಪ ಎಂಬ ತಾತ್ಸಾರ. ಅವನು ಯಾರಿಗೆ ಏನು ಸಹಾಯ ಮಾಡಿದ್ನಪ್ಪ? ಜೀವಮಾನದಲ್ಲಿ ಒಬ್ಬರಿಗೆ ಒನ್ ಬೈಟು ಕಾಫಿ ಕುಡಿಸಿದ ಗಿರಾಕಿಯಲ್ಲ – ಆಫೀಸಿನವರಿಗೂ ಕೋಪ. ಹಾಗಂತ ನಾನೂ ಯಾರ ಬಳಿಯೂ ಕಾಫೀ ಕುಡಿದವನಲ್ಲ ತೊಂದರೆ ಕೊಟ್ಟವನಲ್ಲ. ಕಾನೂನು ಮರೆತು ಕೆಲಸ ಮಾಡಿದವನಲ್ಲ ಎಂಜಲ ಕಾಸಿಗೆ ಕೈಯೊಡ್ಡಿದವನಲ್ಲ. ನನ್ನದು ವಿಶೇಷ ವ್ಯಕ್ತಿತ್ವ ಅಂತ ನಾನಂದುಕೊಂಡಿದ್ದೇನಷ್ಟೇ.. ಯಾರ ಮೆಚ್ಚಿಗೆಗಾಗಿಯೋ ಪ್ರಾಮಾಣಿಕನಾದವನಲ್ಲ. ಯಾವುದೋ ಪ್ರಶಸ್ತಿ ಗಿಟ್ಟಿಸುವ ಸಲುವಾಗಿ ಬರಹಗಾರನಾದವನಲ್ಲ. ಬಡತನವೇ ನನ್ನ ಗುರು. ಜೀವಾನುಭವವೇ ನನ್ನ ಬಂಡವಾಳ. ಅನ್ಯಾಯ ಅಕ್ರಮ ಜಾತಿ ಮತ ಮೌಢ್ಯಗಳ ವಿರುದ್ಧ ಸಿಡಿಯೋದು ಜಯಮಾನ. ಇಂತಹ ಸ್ವಭಾವ ಇರುವ ಯಾವನೋ ಬರಹಗಾರನಾಗಲು ಸಾಧ್ಯ. ಆದವರೂ ಅಂಥವರೇ ಎಂಬುದು ನನ್ನ ನಂಬಿಕೆ. ‘ಬರಹಗಾರರೇನ್, ಸಾಚಾ ಅಲ್ಲ ಬಿಡ್ರಿ ಪಕ್ಕಾ ಕ್ರಿಮಿನಿಲ್‍ಗಳಿದಾರೆ. ಎಸಿ ರೂಮಲ್ಲಿ ಕೂತು ಹಸಿವಿನ ಬಗ್ಗೆ ಬರಿತಾರೆ. ಎಂ.ಎಲ್.ಸಿ. ಯಾಗಲು ರಾಜಕಾರಣಿಗಳ ಕಾಲು ಹಿಡಿತಾರೆ. ರಮ್ ಕುಡಿತಲೇ ಕುಡಿತ ಕೆಟ್ಟದ್ದು ಅಂತ ರೊಮ್ಯಾಂಟಿಕ್ ಆಗಿ ಕವನ ಗೀಚ್ತಾರೆ. ಅಗ್ದಿ ಡೇಂಜರಸ್ ಜನ’. ಬರಹಗಾರನಾಗಲು ತಿಣುಕಿ ಸೋತ ಪಾಟೀಲ ಬೇಕೆಂದೇ ಆಗಾಗ ನನ್ನ ಎದುರು ಪ್ರವಚನ ಮಾಡುತ್ತಾನೆ. ನಾನೇನು ಜಗಳಕ್ಕಿಳಿಯುವುದಿಲ್ಲ ಜಗಳ ಮಾಡೋದು ಸಾಹಿತಿಯಾದವನ ‘ಸ್ಟೇಟಸ್’ ಕಡಿಮೆ ಮಾಡುತ್ತದೆಂದು ನಂಬಿದವ.
ನನ್ನ ಜನಾಂಗದವರಿಗೆ ನನ್ನ ಮೇಲೆ ಪ್ರೀತಿಯಿಲ್ಲ. ಇತರೆಯವರಿಗೂ ನಾನು ಬೇಕಿಲ್ಲ. ಯಾವುದೇ ಜಾತಿ ಮತ ಪಂಥಕ್ಕೆ ಸೇರಿದವನಲ್ಲವೆಂದು ಭಾಷಣ ಬಿಗಿವ ನಾನೆಂದರೆ ಕೆಲವರಿಗೆ ಅಲರ್ಜಿ. ‘ಮಗಳನ್ನು ಯಾವ ಜಾತಿಯೋನ್ಗೆ ಕೊಡ್ತಾನೋ ನೋಡೋಣ ಇರ್ರಿ’ ಎಂದು ಒಡಹುಟ್ಟಿದ ಅಣ್ಣನೇ ಆಡಿಕೊಳ್ಳುತ್ತಾನೆಂತಲೂ ನನಗೆ ಗೊತ್ತು. ಯಾರೇನಾದರೂ ಆಡಿಕೊಳ್ಳಲಿ ಎಂದು ನನ್ನ ಪಾಡಿಗೆ ಬರೆದುಕೊಂಡಿದ್ದವನಿಗೆ ಈಗ ಉಭಯ ಸಂಕಟ. ಹಣದ ಮುಗ್ಗಟ್ಟು. ಮದುವೆ ಗಡಿಬಿಡಿ ಮೂರು ಲಕ್ಷ ಕೊಡೋರು ಯಾರೆಂಬ ಹೊಯ್ದಾಟ, ಬ್ಯಾಂಕಿನಲ್ಲಿ ಆಪದ್ಧನವಾಗಿ ನಲವತ್ತು ಸಾವಿರದಷ್ಟು ಬಹಳ ಕಷ್ಟಪಟ್ಟು ಹೆಂಡತಿ ಮಕ್ಕಳ ಕಣ್ಣುತಪ್ಪಿಸಿ ಉಳಿಸಿರೋದಷ್ಟೇ ನನ್ನ ಚರ ಸ್ಥಿರ ಆಸ್ತಿ. ಗೊತ್ತಾಗಿದ್ದರೆ ಮಗ ಬೈಕ್ ಕೊಡಿಸಪ್ಪಾ ಅಂತ ಪ್ರಾಣ ಹಿಂಡುತ್ತಿದ್ದ. ಈಗಲೂ ಹಿಂಡುತ್ತಾನೆ ‘ಅಫಿಶಿಯಲ್ಸ್‍ಗೆ ಲೋನ್ ಬೇಸಿಸ್ ಮೇಲೆ ಕೊಡ್ತಾರೆ. ಇನ್ಸ್ಟಾಲ್ಮೆಂಟ್ ಮೇಲೆ ತೀರಿಸೋಕೆ ಈಯಪ್ಪನಿಗೇನ್ ಧಾಡಿ. ಅವರಮ್ಮನ ಬಳಿ ನನಗೆ ಕೇಳುವಂತೆಯೇ ರೋಪ್ ಹೊಡಿತಿರ್ತಾನೆ. ‘ಅಪ್ಪ ಕಾಲೇಜ್ ಓದುವಾಗ ಅವರಿಗೆ ಎರಡು ಪ್ಯಾಂಟು ಎರಡು ಶರಟು. ಬರಿಗಾಲಲ್ಲಿ ಹೋಗ್ತಿದ್ರಂತೆ. ಕಾಲಲ್ಲಿ ಚಪ್ಪಲಿ ಕೈನಲ್ಲಿ ವಾಚ್ ಕೂಡಾ ಇದ್ದಿರಲಿಲ್ವಂತೆ ಕಣೋ ಫೂಲ್’ ಮಗಳಾಡುವ ಮಾತಲ್ಲಿ ನನ್ನ ಬಗೆಗಿನ ಹೆಮ್ಮೆಗಿಂತ ಅನಾದರದ ಅನುಕಂಪವೂ ಮಿಕ್ಸ್ ಆಗಿ ಮರೆಮಾಚಿರುತ್ತದಷ್ಟೆ. ಹೀಗೆ ಎಲ್ಲರ ಮಾತು ಮನವನ್ನರಿಯುವ ಸಂವೇದನಾ ಶಕ್ತಿ ಪಡೆದಿದ್ದರಿಂದಾಗಿಯೇ ನಾನು ಸಾಹಿತಿಯಾದನೆಂಬ ಸಂತೋಷ ಬಿಟ್ಟರೆ ಉಳಿದಂತೆ ನಾನುಂಡ ನೋವಿನ ಪಾಲೇ ಹೆಚ್ಚು. ನಾನು ಪ್ರಾಮಾಣಿಕವಾಗಿ ಬದುಕಿರೋದೆ ಅಪರಾಧವೆಂಬಂತೆ ವಿಚಿತ್ರವಾಗಿ ನೋಡುವವರೂ ಉಂಟು, ‘ಅವನು ಯಾರ ಹತ್ತಿರಾನೂ ಬಿಡಿಗಾಸೂ ಮುಟ್ಟೋದಿಲ್ಲರೀ’ ಪಕ್ಕದ ಸಹೋದ್ಕೋಗಿ ಪಿಸುಗುಟ್ಟುತ್ತಾನೆ. ‘ಹೋಗ್ಲಿ ಕೆಲಸ ಮಾಡ್ಕೋಡ್ತಾನೇನ್ರಿ?’ ಕಂಟ್ರಾಕ್ಟರನ ಪ್ರಶ್ನೆ. ‘ಎಲ್ಲಾ ಡೀಟೆಲ್ಸು ಸರಿಯಾಗಿದ್ದರೆ ನಿಮಿಷಾನೂ ತಡ ಮಾಡೋನಲ್ಲ ಅಂತಿಟ್ಕೊಳಿ’ ಇವನ ಕುಹಕು. ‘ಬೋಗಸ್ ಇರೋದ್ಕೆ ಅಲ್ವೆ ಲಂಚ ಕೊಡೋದು. ಈ ಕಾಲದಲ್ಲಿ ದುಡ್ಡು ಮುಟ್ಟೋದಿಲ್ಲ ಅಂತಾನಂದ್ರೆ ಇವನಿಗೇನ್ ಹುಚ್ಚು ಗಿಚ್ಚೇನ್ರಿ?’
‘ಡೋಂಟ್ ವರಿ ಸಾರ್. ಇವನು ಏನೇ ಕೊಕ್ಕೆ ಇಟ್ಟರೂ ಸೈನ್ ಮಾಡೋರು ಸಾಹೇಬರಲ್ವೆ?’
‘ಇವನು ಸುಮ್ನಿರ್ತಾನೇನ್ರಿ?’ ಕಂಟ್ರಾಕ್ಟರನ ಹಪಹಪಿಕೆ. ‘ಸುಮ್ನಿರ್ದೆ ಏನ್ ತಾನೆ ಮಾಡ್ತಾನೆ. ಆರ್ಡಿನರಿ ಗುಮಾಸ್ತ’ ಇಬ್ಬರೂ ನಗುತ್ತಾರೆ. ಕೇಳಿಸದಿದ್ದರೂ ಅರ್ಥವಾಗುತ್ತದೆ.
‘ತಾನು ಸಾಚಾ ಅಂತ ಬೇರೆಯರನ್ನು ಕೀಳಾಗಿ ಕಾಣೋದಾಗ್ಲಿ ಹಂಗಿಸೋದಾಗ್ಲಿ ಮಾಡೋ ತಾಕತ್ತಿಲ್ಲ. ತೀರಾ ಉರಿದ್ರೆ ಒಂದು ಕಥೇ ಬರಿತಾನಷ್ಟೆ ಮತ್ತೊಬ್ಬನ ಒಗ್ಗರಣೆ. ಇವರೆಲ್ಲಾ ಆಡಿಕೊಳ್ಳೋದು ನನಗೂ ಗೊತ್ತಿದೆ. ಹಾಗಂತ ಈ ವ್ಯವಸ್ಥೆಯನ್ನು ವಿರೋಧಿಸಲು ಅಸಾಧ್ಯವಾದರೂ ಇಂತಹ ವ್ಯವಸ್ಥೆಯ ನಡುವೆಯೂ ಪ್ರಾಮಾಣಿಕವಾಗಿರಲಂತೂ ಸಾಧ್ಯ ಅನ್ನೋದನ್ನು ಸಾಬೀತು ಮಾಡಿದ ಹೆಮ್ಮ ನನಗಿದೆ. ಇನ್ನೇನು ಇರೋದು ಮೂರು ವರ್ಷ ಸರ್ವಿಸು. ರಿಟೈರ್ ಆಗಿ ಬಿಟ್ಟರೆ ಸಾಕಪ್ಪ ಅನ್ನಿಸಿದೆ. ಇವಳಿಗೇನೋ ದಿಗಿಲು. ‘ಒಂದು ಒಡವೇ ಆಸ್ತಿಯೇ ಹಿರಿಯರ ಕಾಲದ ಮುರುಕಲ ಮನೆ ಬಿಟ್ರೆ ಇನ್ನೇನ್ ಗತಿ ಇದೇರಿ ನಮಗೆ? ಮದುವೆಗೆ ಬಂದಿರೋ ಮಗಳು ಎಂಜಿನಿಯರಿಂಗ್ ಓದೋ ಮಗ… ನೀವು ಬೇಗ ರಿಟೈರ್ ಆಗಿ ಬಿಟ್ರೆ ನಮ್ಮ ಗತಿ ಏನ್ರಿ? ಹೆಂಡತಿಯಲ್ಲಿನ ಅಭಧ್ರತೆಯು ಹೆಪ್ಪು ಗಟ್ಟಿ ಮಾತುಗಳಾದಾಗ ನನ್ನಲ್ಲೂ ನಡುಕ ಉಂಟಾಗುವುದಿದೆ.
* * *
ಇಷ್ಟು ದಿನ ಹೇಗೋ ನನಗೆ ಸರಿ ತೋಚಿದಂತೆ ಬದುಕಿದೆ. ಈಗ ಹೊಸ ಸಂಬಂಧ ಹೊಸ ಜನರ ಒಡನಾಟ. ದುಡ್ಡಿನ ಧಾವಂತ ಒಂದೇ ಸಮನೆ ಕರಳು ಕಿವುಚಿದಂತೆ ಅವರ್ಣನೀಯ ಸಂಕಟ. ಅಫೀಸಿನಲ್ಲಿ ಕೆಲಸ ಮಾಡಲೂ ಮನಸಿಲ್ಲ. ಅನಾಥ ಪ್ರಜ್ಞೆ ಕಾಡುತ್ತದೆ. ಜವಾನ ಪೋಸ್ಟ್ ತಂದಿಟ್ಟು ಹೋದ. ಕೆ.ಜಿ.ಐ.ಡಿ. ಕಛೇರಿಯಿಂದ ನನ್ನ ಹೆಸರಿಗೊಂದು ಪತ್ರ ಬಂದಿದೆ! ಕವರನ್ನು ಒಡೆದು ನೋಡಿದರೆ ಆಶ್ಚರ್ಯ ಆನಂದ ಏಕಕಾಲದಲ್ಲಿ ಹೆಗಲೇರುತ್ತದೆ. ಕೆ.ಜಿ.ಐ.ಡಿ. ರಿಕವರಿ ನಿಲ್ಲಿಸಿ ಎಂಬ ಅದೇಶವದು. ನನಗೀಗ ಐವತ್ತೈದು ವರ್ಷ ಎಂಬುದನ್ನೇ ಮರೆತು ಬಿಟ್ಟಿದ್ದೇನಲ್ಲ ಎಂಬ ಕೌತುಕದೊಂದಿಗೆ ಅಷ್ಟೊಂದು ವಯಸ್ಸಾಗಿ ಬಿಟ್ಟಿತೆ ಎಂಬ ಖಿನ್ನತೆಯೂ ಕಾಡುತ್ತದೆ. ‘ಏನೋ ಅದು ಲೆಟರ್ ಯಾರ್ದೋ? ನೆಂಟರದೇನೋ?’ ಹತ್ತಿರ ಬಂದ ಗೋಪಾಲ ಕೆ.ಜಿ.ಐ.ಡಿ. ಆಫೀಸಿನಿಂದ ಬಂದ ಪತ್ರ ನೋಡಿ ಹಿಗ್ಗಿದ.
‘ಅಲ್ಲ ಸಾರ್ ನಿಮಗೆ ಐವತ್ತೈದು ವರ್ಷ ಅಂದರೆ ನಂಬೋಕೆ ಆಗೋದಿಲ್ವೆ?’ ಇಸ್ಮಾಯಿಲ್ಗೆ ಆಶ್ಚರ್ಯ. ‘ನೋಡಿದಿರೇನ್ರಿ ಮೂರ್ತಿ, ಮಗಳ ಮದುವೆಗೆ ಹೇಗೋ ದುಡ್ಡು ಅಡ್ಜೆಸ್ಟ್ ಆಯ್ತಲ್ಲ’ ವೆಂಕಟೇಶರಾವ್‍ಗೆ ಇನ್ನಿಲ್ಲದ ಹರ್ಷ.
‘ಇನ್ನೂ ಒಂದೂವರೆ ವರ್ಷವಾದ್ರೂ ಬೇಕಲ್ಲ ರಾವ್. ನನ್ಗೆ ಯಾರ್ ಕೊಡೋರಿದಾರೆ ಹೇಳಿ? ಕೊಟ್ಟರೂ ಅದನ್ನ ತೀರಿಸೋದು ಹೇಗೆ…’ ನನ್ನ ಪೇಚಾಟ. ಅವರಿಗೆ ನನ್ನ ಜೀವನ ಶೈಲಿ ಗೊತ್ತು. ಸುಮ್ನೆ ತಲೆ ಕೆಡಿಸ್ಕೋಬೇಡಿ ಮೂರ್ತಿ. ಸಂಬಂಧವನ್ನು ತೋರಿಸಿದ ದೇವರು ಮಾರ್ಗನೂ ತೋರಿತ್ತಾನೆ’ ಅನ್ನುತ್ತಾರೆ. ಎಲ್ಲರೂ ಧೈರ್ಯ ಹೇಳೋರೆ. ಕೊಡೋದು ಯಾರು? ಅದೂ ಬಡ್ಡಿ ಇಲ್ಲದೆ ದುಡ್ಡು ಕೊಡೋ ಪುಣ್ಯಾತ್ಮ ಈ ಕಾಲದಲ್ಲಿ ಯಾರು ಸಿಗ್ತಾರೆ? ನನ್ನದು ಬಗೆ ಹರಿಸಲಾಗದ ಸಮಸ್ಯೆ ಅನ್ನಿಸುವಾಗ ತಲೆಯ ನರಗಳು ಸಿಡಿಯುತ್ತವೆ. ನನ್ನ ಬಗ್ಗೆ ನನಗೇ ಮರುಕ. ಮನೆಯಲ್ಲಂತೂ ಯಾರ ಬಳಿಯೂ ನನ್ನ ತರ್ಲೆ ತಾಪತ್ರಯವನ್ನು ಹಂಚಿಕೊಳ್ಳುವಂತಿಲ್ಲ. ಯಜಮಾನನಾದ ನಾನೇ ಕಂಗಟ್ಟರೆ ಅವರ ಸ್ಥಿತಿ ಏನಾಗಬೇಡ ಎಂಬ ಅರಿವು ನನಗಿದೆ. ಮರುದಿನ ಆಫೀಸಿಗೆ ಬಂದಾಗ ವೆಂಕಟೇಶರಾದ್ ನೀಡಿದ ಸಲಹೆ ನನಗೆ ಹಿಡಿಸಿತು. ‘ಮೂರ್ತಿ, ಒಂದೂವರೆ ಲಕ್ಷದಷ್ಟು ಪಾರ್ಶಿಯಲ್ ವಿಥ್ ಡ್ರಾ ಮಾಡ್ಕೊಂಡು ಬಿಡಿ. ಇನ್ನು ಕೆಜಿಐಡಿಯಿಂದ ಒಂದೂವರೆ ಲಕ್ಷದಷ್ಟಾದ್ರೂ ಬರುತ್ತೆ. ಅಲ್ಲಿಗೆ ಸಾಲವಿಲ್ಲದೆ ಮದುವೆಗೆ ಹಣ ಅಡ್ಜಸ್ಟ್ ಆದಂತಾಗೋಲ್ವೆ’. ಅವರು ಕ್ಯಾಲುಕ್ಯುಲೇಶನ್ ಮಾಡಿ ತೋರಿಸ್ತಾರೆ. ಕಥೆ ಬರೆಯೋದೊಂದು ಬಿಟ್ಟರೆ ಬಾಕಿ ವಿಷಯದಲ್ಲಿ ವ್ಯವಹಾರ ಜ್ಞಾನದಲ್ಲಿ ನಾನು ಎಳಸು. ಇದೆಲ್ಲಾ ನನಗೆ ಏಕೆ ಹೊಳೆಯುವುದಿಲ್ಲವೆನ್ನಿಸಿ ನಾಚಿಕೆಯಾಗುತ್ತದೆ. ‘ಸರಿ ನಡೀರಪಾ ಕೆಜಿಐಡಿ ಆಫೀಸಿಗೆ ಹೋಗಿ ಬರೋಣ. ಅಲ್ಲಿಗೆ ನಾವೇ ಹೋಗದಿದ್ದರೆ ನಿಮ್ಮ ಕೆಲಸ ಬೇಗ ಆಗೋದಿಲ್ಲ ಆಂತ ಇಸ್ಮಾಯಿಲ್ ಗಂಟು ಬೀಳುತ್ತಾನೆ. ಎಂದೂ ಬೇರೆ ಕಛೇರಿಗೆ ಹೋಗದ ನಾನು ಅಂದು ಹೊರಟೆ. ಅಲ್ಲಿ ಕೇಳುವವರೇ ದಿಕ್ಕಿಲ್ಲ. ಯಾರಿಗೂ ನಮ್ಮನ್ನು ತಲೆ ಎತ್ತಿ ನೋಡುವಷ್ಟು ಪುರುಸೂತ್ತಿಲ್ಲ. ಅಷ್ಟೊಂದು ಬಿಜಿ, ಇಷ್ಟೊಂದು ನಿಯತ್ತಾಗಿ ದುಡಿದರೂ ದೇಶವೇಕೆ ಹಿಂದೆ ಉಳಿದಿದೆ ಎಂಬ ಜಿಜ್ಞಾಸೆ ಕಾಡಿತು. ಇಸ್ಮಾಯಿಲ್ ಒಬ್ಬ ಗುಮಾಸ್ತನ ಮುಂದೆ ಕರೆದೊಯ್ದು ನಿಲ್ಲಿಸಿದ ವಿಷಯವನ್ನು ವಿಷದೀಕರಿಸಿ. ಆತ ಏನೋ ಬರೆಯುತ್ತಲೇ ಇದ್ದ! ‘ಸರಿ ಚೆಕ್ ಕಳಿಸ್ತೀವಿ ಹೋಗಿ’ ಆತ ಗದರಿಸಿದ.
‘ಇವರ ಮಗಳ ಮದುವೆ ಅರ್ಜೆಂಟಾಗಿ ದುಡ್ಡುಬೇಕಿದೆ. ತಾವು ಯಾವಾಗ ಕಳಿಸ್ತೀರಾ?’ ಇಸ್ಮಾಯಿಲ್ ಬೇಡುವ ಪರಿ ಕಾಡಿದ. ‘ರೆಕಾರ್ಡ್ಸ ನೋಡಬೇಕು ಟ್ಯಾಲಿ ಮಾಡಬೇಕು. ಒಂದು ತಿಂಗಳಾದ್ರೂ ಆಗುತ್ತೆ ಆತ ಗೊಣಗಿದ.
‘ಅದಕ್ಕೆಲ್ಲಾ ತಿಂಗಳು ಯಾಕ್ರಿ? ನಾನೂ ಗುಮಾಸ್ತ ನನಗೂ ಕೆಲಸ ಗೊತ್ತಿದೆ. ಒಂದೆರಡು ದಿನದಲ್ಲಿ ಮಾಡಿ ಕೊಡಬಹುದು’ ನಾನೀಗ ಪ್ರವೇಶಿಸಿದೆ.
‘ಏನ್ ನಿಮ್ಮ ಒಬ್ಬರದೇನು ಕೆಲ್ಸ. ಮಸ್ತು ಪೆಂಡಿಂಗ್ ಐತೆ. ಎಲ್ಲರೂ ಅರ್ಚೆಂಟ್ ಮಾಡಿದ್ರೆ ಹೆಂಗ್ರಿ?’. ಆತ ಅಲಕ್ಷ್ಯವಾಗಂದ. ‘ಸರಿ ಸಾರ್. ಯಾವಾಗ್ ಬರ್ಲಿ ಅದನ್ನಾದ್ರೂ ಹೇಳಿ’ ನಾನೇ ಮೃದುವಾದೆ. ‘ನೀವ್ಯಾಕ್ರಿ ಬರೋದು? ಎಲ್ಲಾ ನೆಟ್ಟಿಗಿದ್ರೆ ನಾವೇ ನಿಮ್ಮ ಅಡ್ರೆಸ್ಗೆ ಚೆಕ್ ಕಳಿಸ್ತೀವಿ’ ಗುಡುಗಿದವನೇ ನೀವಿನ್ನು ಹೋಗಿ ಎಂಬಂತೆ ಫೈಲುಗಳಲ್ಲಿ ಸಮಾಧಿಯಾದ. ‘ಸ್ವಲ್ಪ ಬೇಗ ಮಾಡಿಕೊಡಿ ಸಾ… ತುಂಬಾ ಒಳ್ಳೇರು ಲಂಚ ಗಿಂಚ ಮುಟ್ಟೊರಲ್ಲ ತೊಂದರೆನಲ್ಲಿದ್ದಾರೆ’ ಇಸ್ಮಾಯಿಲ್ ಗುಣಗಾನ ಮಾಡಿದ. ಆತ ಕೇಳಿಸದವನಂತಿದ್ದ.
ಹೊರ ಬರುವಾಗ ಇಸ್ಮಾಯಿಲ್ ಅಂದ, ‘ಸಾರ್ ಒಂದು ಮಾತು ಹೇಳ್ತೀನಿ ಬೇಜಾರ್ ಮಾಡ್ಕೋಬೇಡಿ. ಬರಿ ಒಣ ಮಾತಲ್ಲಿ ಕೆಲಸವಾಗೋಲ್ಲ ಬರೋದು ಒಂದುವರೆ ಲಕ್ಷ ಒಂದ್ ಐನೂರು ಕೊಡಿ ಎಲ್ಲಾ ಸರಿ ಮಾಡಿಬಿಡ್ತೀನಿ’ ನನಗೆ ರೇಗಿತು.
‘ನನ್ನ ದುಡ್ಡು ತಗೊಳ್ಳೊಕೆ ನಾನು ಲಂಚ ಕೊಡಬೇಕೇನಯ್ಯಾ! ಅದ್ಯಾವಾಗ ಕಳಿಸ್ತಾನೋ ಕಳಿಸ್ಲಿ ಬಿಡು’ ಅಂದೆ. ನನ್ನ ಜೋರು ದನಿಗೆ ಕಛೇರಿಯಲ್ಲಿದ್ದ ಕಣ್ಣುಗಳೆಲ್ಲಾ ನಮ್ಮನ್ನೇ ನುಂಗುವಂತೆ ನೋಡಿದವು. ‘ಹಾಗಲ್ಲಾ. ಈ ಕಾಲದಾಗೆ ನಿಮ್ಮಂಗಿದ್ರೆ…’ ರಾಗ ಎಳೆದ ಇಸ್ಮಾಯಿಲ್. ನಾನು ಮಾತನಾಡದೆ ದುಡುದುಡು ಮೆಟ್ಟಿಲುಗಳನ್ನಿಳಿದೆ.
ಕಛೇರಿಗೆ ಬರುವಷ್ಟರಲ್ಲೇ ವೆಂಕಟೇಶರಾವ್ ಜಿಪಿಎಫ್ ಫಾರಂಗಳೆನ್ನೆಲ್ಲಾ ಭರ್ತಿ ಮಾಡಿಕೊಂಡು ಕೂತಿದ್ದರು. ನನ್ನಿಂದ ಸಹಿ ಪಡೆದು ಸಾಹೇಬರಿಂದಲೂ ಸಹಿ ಹಾಕಿಸಿ ಅಂದೇ ಡಿಸ್ಪ್ಯಾಚ್ಗೆ ಕೊಟ್ಟು ಬಿಟ್ಟರು. ಒಬ್ಬರಿಗೆ ಒಳ್ಳೇದು ಮಾಡುವುದರಲ್ಲಿ ಎಂದೂ ನಿಧಾನ ಮಾಡಬಾರದೆಂದು ಅವರ ಪಾಲಿಸಿ. ಕೆ.ಜಿ.ಐ.ಡಿ. ಆಫೀಸಿನಲ್ಲಿ ನಡೆದದ್ದನ್ನು ಕೇಳಿ ಮುಗಳ್ನಕ್ಕರು. ‘ನಾಳೆ ಜಿಪಿಎಫ್ ಹಣ ಸಮಯಕ್ಕೆ ಸರಿಯಾಗಿ ಬರಬೇಕಂದ್ರೆ ಅಲ್ಲೂ ಕೈ ಬಿಚ್ಚಬೇಕು. ಈಗ ಎ.ಜಿ. ಕಛೇರಿಯಲ್ಲೂ ಎಂಜಲು ತಿನ್ನೋರಿದ್ದಾರೆ’ ಅವರೆಂದಾಗ ನನ್ನ ಎದೆ ದಸಕ್ ಅಂದಿತು.
ವಾರ ಕಳೆದ ಮೇಲೆ ಕೆಜಿಐಡಿ ಆಫೀಸಿನಿಂದ ಪತ್ರ ಬಂತು. ಎಲ್ಲರು ನನ್ನ ಮೇಜನ್ನು ಸುತ್ತುವರೆದರು. ಚೆಕ್ ಬದಲು ಆಕ್ಷೇಪಣಾ ಪತ್ರ! ೧೯೭೩ರಲ್ಲಿ ಏಪ್ರಿಲ್ ಮೇ ತಿಂಗಳಿನಲ್ಲಿ ಹಣ ರಿಕವರಿಯಾದ ಬಗ್ಗೆಕೂಡಲೇ ಸ್ಟೇಟ್ಮೆಂಟ್ ಕೇಳಿದ್ದರು. ‘ಕಳಿಸಿದ್ರಾಯ್ತು ಬಿಡಿ’ ಎಂದರು ರಾವ್. ನನಗೋ ಉಗುಳು ನುಂಗುವುದೂ ಕಷ್ಟವಾಯಿತು. ‘ಸಾರ್, ೧೯೭೩ರಲ್ಲಿ ನಾನು ಗುಬ್ಬರ್ಗದ ಆಪೀಸಿನಲ್ಲಿ ಕೆಲಸ ಮಾಡ್ತಿದ್ದೆ ಅಂದೆ. ‘ಆಯ್ತು ಬಿಡ್ರಿ. ಕರೆಸ್ಪಾಂಡೆನ್ಸ್ ಮಾಡಿ ಅಲ್ಲಿಂದಲೇ ರಿಕವರಿ ಸ್ಟೇಟ್ಮೆಂಟ್ ತರಿಸೋಣ’ ಮೇನೇಜರ್ ಶೈಲಿಯಲ್ಲಿ ಉತ್ತರಿಸಿದರು.
‘ನೀವು ಅಲ್ಲಿಗೆ ಬರ್ದು ಅವರು ಕಳ್ಸಿ ಇದೆಲ್ಲಾ ಆಗೋದಿಲ್ಲಾ ಸಾ. ದುಡ್ಡು ಕೊಡದಿದ್ದಕ್ಕೆ ಏನೋ ಒಂದು ಅಬ್ಜಕ್ಷನ್ ಜಡ್ದ ನೋಡಿ’ ಇಸ್ಮಾಯಿಲ್ ನಕ್ಕ. ನಾನು ಅಂಗಾರಾದೆ.
‘ಅಬ್ಜಕ್ಷನ್ ಅಟೆಂಡ್ ಮಾಡಿದರಾಯಿತು ಬಿಡ್ರಿ’ ಅಂದೆ. ಆ ದಿನವೇ ಗುಲ್ಬರ್ಗ ಕಛೇರಿಗೆ ಬರೆದಿದ್ದೂ ಆಯಿತು. ಒಂದೆರಡು ದಿನವಾದ ಮೇಲೆ ಮೇನೇಜರ್ ರಾವ್ ಹತ್ತಿರ ಕರೆದು ಕೂರಿಸಿಕೊಂಡರು. ‘ಮಗಳ ಮದುವೆ ಹತ್ತಿರ ಬರ್ತಾ ಇದೆ. ನೀವೇ ಒಂದ್ಸಲ ಗುಲ್ಬರ್ಗಕ್ಕೆ ಹೋಗಿ ಸ್ಟೇಟ್ಮೆಂಟ್ ತರೋದು ವಾಸಿ’ ಅಂದರು.
‘ಅವರಾಗಿ ಕಳಿಸೋಲ್ಲ ಅಂತಿರಾ?’ ಹತಾಶನಾಗಿ ಕೇಳಿದೆ. ‘ಮೂವತ್ತುಉ ವರ್ಷದ ಹಿಂದಿನ ಡಿಟೇಲ್ಸ್ ಎಲ್ಲಾ ನೋಡಿ ಕಳಿಸ್ತಾರೆ ಅನ್ನೋ ಭರವಸೆ ನನಗಿಲ್ಲ. ನೀವೇ ಹೋಗಿ ಬಂದು ಬಿಡಿ.’ ಒತ್ತಡ ತಂದರು. ದೂರದ ಪ್ರಯಾಣ ಹೆಚ್ಚು ಕಮ್ಮಿಯಾಗುವ ಬಿಪಿಯ ಒತ್ತಡ. ಬೇರೆ ದಾರಿಯಿಲ್ಲದೆ ಬಸ್ ಏರಿದೆ.
ಗುಲ್ಬರ್ಗ ಬಸ್ ನಿಲ್ದಾಣದಲ್ಲಿ ಇಳಿದಾಗ ಹಿಂದಿನಂತೆ ಎಲ್ಲೆಲ್ಲೂ ಹಿಂದಿ ಅಕ್ಷರಗಳೇ ಕಾಣಲಿಲ್ಲ. ಕನ್ನಡದ ಅಕ್ಷರಗಳು ಬೋರ್ಡುಗಳು ಬಣ್ಣದ ಜಾಹಿರಾತುಗಳು ಕನ್ನಡ ಸಿನಿಮಾ ಪೋಸ್ಟರ್ ಗಳು ಕಂಡಾಗ ಕಣ್ಣಿಗೆ ಹಿತವೆನಿಸಿತು. ಮಹಡಿ ಏರಿ ಕಛೇರಿಗೆ ಹೋದೆ. ಅಲ್ಲೂ ಎಲ್ಲಾ ಸಖತ್ ಬಿಜಿ. ಟೈಪಿಸ್ಟ್ ಭೀಮಣ್ಣ ಆಗ ನನಗೆ ಗೆಳೆಯ. ಅವನೇನಾದರೂ ಕಂಡಾನೇನೋ ಎಂದು ಕಣ್ಣಾಡಿಸಿದೆ. ಅವನ ಜಾಗದಲ್ಲಿ ಬೇರೆಯವನಿದ್ದ ಗಡ್ಡ ಮೇನೇಜರ್ ಬಳಿ ಹೋಗಿ ಸಲಾಂ ಹೊಡೆದೆ. ನಾನೇ ಕುರ್ಚಿ ಎಳೆದುಕೊಂಡು ಕೂತು ಪರಿಚಯ ಹೇಳಿಕೊಂಡೆ. ಬಂದ ಕಾರಣ ತುರ್ತು ಪರಿಸ್ಥಿತಿ ಎಲ್ಲವನ್ನು ಹಿಂದಿ ಮಿಶ್ರಿಶ ಕನ್ನಡದಲ್ಲಿ ನಿವೇದಿಸಿಕೊಂಡೆ. ಆತ ಗಡ್ಡ ನೀವುತ್ತಾ ನಕ್ಕ. ‘ತೀಸ್ ಸಾಲ್ ಕಾ ರೆಕಾರ್ಡ್ಸ ಸರ್ಚ್ ಕರ್‍ನಾ ಬೋತ್ ಮುಸ್ಕಿಲ್ ಕಾಮ್ ಯಾರ್’ ಎಂದು ಗೊಣಗುತ್ತಾ ಗುಮಾಸ್ತರೊಬ್ಬರನ್ನು ಕರೆದು ವಿಷಯ ತಿಳಿಸಿದ. ‘ಐಸೀ… ಒಂದು ವಾರ ಬಿಟ್ಟು ಬನ್ನಿ. ಅದೆಲ್ಲಿ ಹಾಕಿದಾರೋ ಹುಡಕಬೇಕು’ ಆತ ಗೊಣಗಾಡಿದ. ‘ಹಂಗಂದ್ರೆ ಹೆಂಗೆ ಸಾರ್… ನಾನೊಂದು ವಾರ ಇಲ್ಲೇ ಇರ್ಲಿಕ್ಕೆ ಸಾಧ್ಯವೇ?’ ನಾನೂ ಗೊಣಗಾಡಿದೆ.
‘ಬೇಕು ಅಂದ್ರೆ ಅವಶ್ಯ ಇರಬೇಕ್ರಿ’ ಅವನೆಂದ. ಭೂಮಿಗಿಳಿದ ಅನುಭವವಾಯಿತು. ಅಷ್ಟರಲ್ಲಿ ಮತ್ತೊಂದು ಟೈಪಿಂಗ್ ಮಿಶನ್ ಮೇಲೆ ಕೂತ ಭೀಮಣ್ಣ ಕಂಡ. ದೇವರನ್ನೇ ಕಂಡಂತಾಯಿತು ಅವನ ಬಳಿ ಓಡಿದೆ. ಅವನೋ ಗುರುತಿಸಲು ಸ್ವಲ್ಪ ಸಮಯವನ್ನೇ ತೆಗೆದುಕೊಂಡಾಗ ನನಗೂ ಒಳಗೇ ಕೋಪ. “ಇಷ್ಟು ಬೇಗ ದೋಸ್ತನ್ನ ಮರೆತುಬಿಟ್ಯಲ್ಲೋ’. ನಾನೋ ಮೂರ್ತಿ ಕತೆಗಿತೆ ಬರೀತಿದ್ನಲ್ಲೋ” ಮುನಿದುಕೊಂಡೆ. ಕಣ್ಣರಳಿಸಿ ನೋಡಿದ.
‘ಅರೆ ನಿನ್ನವ್ನ… ಎಷ್ಟೊಂದು ದಪ್ಪ ಆಗಿಯಲ್ಲೋ. ನಾ ಹೆಂಗೆ ಪತ್ತೆ ಹಚ್ಚಲಿಕ್ಕೆ ಸಾಧ್ಯವೋ ದೋಸ್ತ! ಭೇಷ್ ಅದಿಯೇನಪ್ಪಾ ಎಷ್ಟು ಮಂದಿ ಮಕ್ಕಳು? ಶಾದಿಗೀದಿ ಮಾಡ್ದೋ ಹೆಂಗೆ? ಏನ್ ಸೀಮೆ ಧಾಟಿ ಬಂದಿಯಲ್ಲೋ ಬರಿ ಟ್ರಾನ್ಸ್ ಫರ್ರಾ ? ಪ್ರಮೋಶನ್ನ ಮ್ಯಾಲೆ ಬಂದ್ಯಾ? ಇಲ್ಲಿ ಯಾರಿಗೆ ಕೊಕ್ ಕೊಟ್ಟೆಯೋ? ಪ್ರಶ್ನೆಗಳ ಸುರಿಮಳೆಗೈದ. ಅವನು ಬದಲಾಗಿಲ್ಲವೆನ್ನಿಸಿ ನಿಡುಸುಯ್ದೆ. ಬಂದ ಕಾರಣ ಹೇಳಿದೆ. ಇಲ್ಲಿನ ಗುಮಾಸ್ತನಿಂದ ಸಿಕ್ಕ ರಿಪ್ಲೇನೂ ಹೇಳಿದೆ. ‘ಅಂವಾ ಬರೋಬದ್ರಿ ಹೇಳಾನೆ. ನೀ ಎಂತಾ ಬದ್ಮಾಶ ಅದಿಯೋ ಮೂವತ್ತು ವರ್ಷದ್ದು ರೆಕಾರ್ಡ್ ಏನ್ ಕಿಸೆದಾಗೆ ಇರ್ತಾತೇನು? ತಲಾಶ್ ಮಾಡಬೇಕಾಗ್ತದಾ’ ಅವನ ಮಾತು ಕೇಳಿ ಕ್ಷಣ ಉಸಿರೇ ನಿಂತಿತು.
‘ಹಂಗಂದ್ರೆ ಹೆಂಗೋ ಭೀಮ್ಯಾ. ನೀ ನಮ್ಮೋನಾಗಿ ಇಲ್ಲಿ ಇದ್ದೂ ಏನ್ ಬಂತೋ ಉಪೇಗಾ? ನಿನ್ನ ಕೈಲಿ ಅಷ್ಟು ಮಾಡಿಸೋಕೆ ಆಗೋದಿಲ್ವೇನು’ ಬೇಸರಿಸಿದೆ.
‘ಡೋಂಟ್ ವರಿ ದೋಸ್ತ… ಚಾ ಕುಡಿದು ಬರೋಣ ನಡೀ’ ಏಳಿಸಿಕೊಂಡು ಹೊರಟೇ ಬಿಟ್ಟ ‘ಚಾ’ಜೋಡಿ ಬಿಸ್ಕತ್ ತಿನ್ನೋವಾಗ ನನ್ನ ಮನೆ ಕಥೆಯೆಲ್ಲಾ ಹೇಳಿದೆ. ನಿನ್ನ ಫ್ಯಾಮಿಲಿ ಹೆಂಗೈತೋ ಭೀಮ್ಯಾ ಅಂತಲೂ ಕೇಳಿದೆ. ಕುಲು ಕುಲು ನಕ್ಕು ‘ಏಕ್ ಧಂ ಫಸ್ಟ್ ಕ್ಲಾಸ್’ ಅಂದ. ‘ಮಕ್ಕಳೇನ್ ಓತ್ತಾ ಅವರೆ?’ ವಿಚಾರಿಸಿದೆ. ಒಂದು ಕ್ಷಣ ಮೌನ ವಹಿಸಿದವ ಅಂದ. ‘ಆ ತಕಲೀಫೇ ಇಲ್ ನೋಡ್ ನಮ್ಗೆ. ನಾನು ನನ್ನಾಕಿ ಆರಾಮ್ ಇದೀವಿ’ ನನ್ನ ಮೋರೆ ಸಣ್ಣಗಾಯಿತು. ಅವನು ಮಾತ್ರ ಹುರುಪಿನಲ್ಲಿದ್ದ. ಏನೇನೋ ಹಳೇ ವಿಷಯಗಳನ್ನು ಅಗಿಯಲಾರಂಭಿಸಿದ. ನಾನು ಅವನು ಹರೇದಲ್ಲಿ ನರ್ಸ್ ಒಬ್ಬಳ ಮೊಹಬ್ಬತ್ತಲ್ಲಿ ಒದ್ದಾಡಿದ್ದು ಆಕೆಗೆ ‘ಕಿಸ್’ ಕೊಡೋಕೆ ಕಾಂಪಿಟೇಶನ್ಗೆ ರಗಡ ರೊಕ್ಕ ಖರ್ಚು ಮಾಡಿದ್ದು ಆಕಿ ತಿಂದುಂಡು ಕೂಡಿಸಿದ್ದೆಲ್ಲಾ ತಗೊಂಡು ಕಡೀಗೆ ಕೈ ಕೊಟ್ಟು ಸೇಠ್ ಒಬ್ಬನ ಕಾರಲ್ಲಿ ಸುತ್ತೋವಾಗ ಬೆಪ್ಪರಾಗಿದ್ದು ಹೇಳುತ್ತಲೇ ಇದ್ದ. ನಾನೇ ಅವನ ಪ್ಲಾಶ್ ಬ್ಯಾಕ್ಗೆ ಕತ್ತರಿ ಹಾಕಿದೆ. ‘ಹೋಗೋಣ ನಡಿಯೋ… ಲೇಟಾತು’ ಅಂತ ಜಬರಿಸಿದೆ. ‘ಈಗೇನ್ ಮಾಡ್ತಿಯಲೆ ಆಫೀಸಿಗೆ ಹೋಗಿ… ನಡಿ ಮನೆಗೆ ಹೋಗಿ ಉಂಡು ಬರೋಣ’ ಬಲವಂತವಾಗಿ ಮನೆಗೆ ಎಳೆದೊಯ್ದು ಹೆಂಡತಿಗೆ ಖಾಸಾ ದೋಸ್ತು ಅಂತ ಪರಿಚಯಿಸಿದ. ಊಟದ ಮಧ್ಯೆಯೂ ಆವನ ಮಾತಿಗೆ ಫುಲ್ಸ್ಟಾಪ್ ಎಂಬುದಿಲ್ಲ. ‘ನಮಲ್ಲಿ ಒಬ್ಬಳು ಕ್ಲರ್ಕ್ ಇದ್ದಳಲ್ಲಾ ಸುಮಿತ್ರಾ ಅಂತ. ಈಗಲೂ ನಿನ್ನ ಕತಿ ಕಾದಂಬರಿ ಅಂದ್ರೆ ಜೀವಾ ಬಿಡ್ತಾಳೆ. ಪತ್ರಿಕೆನಾಗೆ ನಿನ್ನ ತಸ್ವೀರ್ ಬಂದ್ರೆ ಕಿತ್ತು ಇಟ್ಕಂತಾಳೆಲೆ. ಸಬ್ ಆಫೀಸಿನಾಗವ್ಳೆ ಒಮ್ಮೆ ನೋಡಿಯೇನ್ ಆಕೀನಾ… ಅವಳಿಗೆ ಲಗ್ನವೇ ಆಗಿಲ್ಲ ಮಾರಾಯ’ ಕುಶಾಲು ಮಾಡಿದ. ನನಗೂ ಬಂದಿರುವ ಕೆಲಸವೇ ಆಗುತ್ತಿಲ್ಲವೆಂಬ ತಳಮಳ. ‘ಹೋಗ್ಲಿ ಈಗಾರ ಪಗಾರ್ ಮೇಲೆ ಎಕ್ಸಟ್ರಾ ಕಮಾಯಿ ಮಾಡ್ತಿದಿಯೋ ಇಲ್ವೋ? ಅದೇ ನಿನ್ನ ಓಲ್ಡ್ ಪ್ರಿನ್ಸಿಪಲ್ನಾಗೆ ಬಿದ್ದು ಬರಬಾದ್ ಆದ್ಯೋ?’ ಗೇಲಿಗಿಳಿದ. ಕುಪಿತನಾಗಿ ದಿಟ್ಟಿಸಿದೆ- ‘ಆತು ಬಿಡೋ ನಿನ್ನಂತೋರು ನಮ್ಮ ದೇಶಕ್ಕೆ ಅವಶ್ಯ ಬೇಕಾಗ್ಯದೆ. ಕೀಪ್ ಇಟ್ ಅಪ್’ ಅಂದ. ‘ದಣಿದು ಬಂದೀಯ ಮಧ್ಯಾಹ್ನ ಬಿಸಿಲು ಬೇರೆ ಅಗ್ದಿ ಅದೆ. ರೆಸ್ಟ್ ತಗೋ ನಾಳೆ ಆಫೀಸಿಗೋದ್ರಾತು’ ಪಾನ್ ಜಿಗಿಯುತ್ತಾ ಕೂತ. ನಾನು ಅವನ ಉಪಚಾರಕ್ಕೆ ಮಣಿಯಲಿಲ್ಲ. ‘ಮೊದ್ಲು ನಡಿಯಲೆ ಸುವ್ವರ್’ ಅಂತ ಹೊರಡಿಸಿಕೊಂಡು ಹೊರಟೆ.
ಆಫೀಸಿನಲ್ಲಿ ಆ ಗುಮಾಸ್ತನೇ ಕಾಣಲಿಲ್ಲ ‘ರಜಾ ಹಾಕಿದಾನ್ರಿ’ ಅಂದರು ಗಡ್ಡದ ಮೇನೇಜರ್. ‘ಮತ್ತಿಗೇನೋ ಗತಿ?’ ಕಂಗಾಲಾದೆ. ‘ಯಾಕ್ ವಿಚಾರ ಮಾಡ್ತಿಯಲೆ ನಾವಿಲ್ಲೇನು. ನಾಳೆ ಬರ್ತಾನ್ ತಗಾ. ‘ಟೈಪ್ ಕುಟ್ಟತೊಡಗಿದ ಭೀಮಣ್ಣ ನನಗೋ ತೂಕಡಿಕೆ. ಪ್ರಯಾಣದ ಆಯಾಸ ಬಿಸಿಲಿನ ತಾಪ ಬೇರೆ ಎಲ್ಲವನ್ನೂ ಸೈರಿಸಿಕೊಂಡೆ. ಸಂಜೆ ಒತ್ತಾಯ ಮಾಡಿ ಸಿನಿಮಾಕ್ಕೆ ಎಳೆದೊಯ್ದ. ತೀರಂದಾಜ್ ಟಾಕೀಸ್ ನವೀಕರಿಸಿದಂತೆ ಕಂಡಿತು. ಮನೆಯಲ್ಲಿ ಸಿಹಿ ಮಾಡಿಸಿದ. ಅದೆಲ್ಲಾ ಪ್ರೀತಿಯನ್ನು ಭರಿಸಲೇಬೇಕಾಯಿತು. ಮರುದಿನ ಗುಮಾಸ್ತನ ಬರುವಿಕೆಗಾಗಿ ಇಬ್ಬರೂ ಕಾದೆವು. ಲೇಟಾದರೂ ಬಂದ ಮಹಾನುಭಾವ. ಮತ್ತೆ ಹೊಸದಾಗಿ ಪರಿಚಯಿಸಿದ ಭೀಮಣ್ಣ. ಮೂವತ್ತು ವರ್ಷ ಪುರಾನಾ ಅಕ್ವಿಟೆನ್ಸ್ ಎಲ್ಲಿ ಬಿದ್ದಾವೋ. ಆ ಧ್ಯೂಳದಾಗೆ ಯಾರ್ ತಲಾಶ್ ಮಾಡ್ಯಾರ್ರಿ ಸರಾ. ರೆಕಾರ್ಡ್ ರೂಮ್ ಬ್ಯಾರೆ ನೆಟ್ಟಗೆ’ ಮೇಂಟೇನ್ ಮಾಡಲ್ರಿ’ ಆತ ರಾಗ ಎಳೆದ. ‘ನೀವು ಕೀಲಿ ಕೈ ಕೊಡ್ರಿ ಸಾರ್… ನಾ ಹುಡುಕುತ್ತೀನಿ’ ದೀನನಾದೆ. ಅವನು ಭೀಮಣ್ಣನ ಮೋರೆ ನೋಡಿದ. ‘ಕೂಡಲೋ ಬಾಂಚೋದು. ಅವರೂ ನಿನ್ನಂಗೆಯಾ ಆಫೀಷಿಯಲ್ಲು. ಇಲ್ಲಎದ್ದು ಬಂದು ತಲಾಶ್ ಮಾಡು.’ ಭೀಮಣ್ಣ ರಾಂಗ್ ಆದಾಗ ಅವನು ಕೀ ಎಸೆದ.
ರೆಕಾರ್ಡ್ ರೂಮ್ ಬಾಗಿಲು ತೆರೆದಾಗ ಗಬ್ಬುನಾತ ರಾಚಿಕೊಂಡು ಬಂತು. ಕೈಯಿಟ್ಟಲ್ಲಿ ಧೂಳು ಜೇಡನ ಪೊರೆಗಳು, ಜಿರಲೆಗಳ ದಂಡು ಹೆಸರು ಪರಿಚಯವಿಲ್ಲದ ಕ್ರಿಮಿಕೀಟಗಳೂ ಕಂಡವು. ಯಾವುದನ್ನು ಈಯರ್ ವೈಸ್ ಕಟ್ಟಿ ಇಟ್ಟಿಲ್ಲ. ಹೇಗೆಂದರೆ ಹಾಗೆ ಬಿಸಾಡಿದ್ದಾರೆ. ‘ತಿಪ್ಪೆ ಒಳ್ಗೆ ಹೆಂಗಪಾ ತಲಾಶ್ ಮಾಡ್ತಿ?’ ಘಾಟಿಗೆ ಶೀತ ಭೀಮಣ್ಣ ‘ನೊ ಅದರ್ ವೇ…’ ಎನ್ನುತ್ತಾ ಕಾರ್ಯ ಪ್ರವೃತ್ತನಾದೆ. ಕೆಲವು ಪೇಪರ್ಗಳಂತೂ ಮುಟ್ಟಿದರೇನೆ ಹರಿದು ಹೋಗುವಷ್ಟು ಹಳತಾಗಿದ್ದವು. ಬಿಸಿಲ ಬೇಗೆಗೆ ಬೆವರಿನ ಸ್ನಾನವೂ ನಡೆಯಿತು. ಅಸಹ್ಯ ವಾಸನೆ. ಕೆದಕಾಡಿದಂತೆ ಸತ್ತ ಇಲಿ ಜಿರಲೆ ಜರಿಹುಳುಗಳ ಅವಶೇಷಗಳೂ ಕೈಗೆ ಸಿಕ್ಕವು. ಆಕ್ವಿಟೆನ್ಸ್ ಗಳು ಮಾತ್ರ ಸಿಗಲಿಲ್ಲ. ಮಧ್ಯಾಹ್ನವಾಯಿತು. ಊಟಕ್ಕೆ ಕೂರುವಾಗ ಎಷ್ಟು ಕೈ ತೊಳೆದರೂ ಸಮಾಧಾನವಾಗದೇ ಚಮಚದಲ್ಲಿಯೇ ಊಟ ಮಾಡಿದೆ.
ಮತ್ತೆ ಧೂಳಿನಲ್ಲಿ ತಡಕಾಟ, ನಾವೇ ಈಗ ಕ್ರಮವಾಗಿ ಜೋಡಿಸಿದೆವು. ‘ನಡಿಯೋ ನಾಳೆ ಹುಡುಕಿದ್ರಾತು. ಲಗಾನ್ ಪಿಚ್ಚರ್ ಮಸ್ತ್ ಐತೆ ನೋಡಾನ’ ಭೀಮಣ್ಣ ಹಿಂಸೆ ಮಾಡಿದ. ‘ಬೇಡ ಬಂದೇ ನವಾಜ್ ದುರ್ಗಕ್ಕಾರ ಹೋಗಿ ಬರೋಣ ನಡಿ’ ಅಂದೆ.
ಮರುದಿನ ಮತ್ತೆ ರೆಕಾರ್‍ಡ್ ರೂಮ್ ವಾಸ. ಚೇಳುಗಳು ಕಂಡರೂ ಹಿಂಜರಿಯಲಿಲ್ಲ. ಭೀಮಣ್ಣ ಅರ್ಜೆಂಟ್ ಟೈಪಿಂಗ್ ಅದೆ ಅಂತ ಜಾಗ ಬಿಟ್ಟ. ಸತತವಾಗಿ ಮೂರುದಿನ ತಡಕಾಡಿದ ಮೇಲೆ ೧೯೭೩ ರ ಮೇ ಏಪ್ರಿಲ್ ಸಂಬಳ ಮಾಡಿರುವ ಬಟವಾಡೆ ವುಸ್ತಕ ಸಿಕ್ಕಾಗ ಮಗಳ ಮದುವೆಯಾದಷ್ಟೇ ಖುಷಿಯಾಯಿತು. ಅಲ್ಲೇ ವೆರಿಫೈ ಮಾಡಿದೆ, ನೂರ ಎಪ್ಪತ್ತೈದು ರೂಪಾಯಿ ರಿಕವರಿಯಾಗಿತ್ತು. ಅವತ್ತೇ ನಾನೇ ಕೂತು ಸ್ಟೇಟ್ಮೆಂಟ್ ತಯಾರಿಸಿದೆ. ಭೀಮಣ್ಣ ಖುದ್ ಹೋಗಿ ಸಾಹೇಬರ ಸಹಿ ಮಾಡಿ ತಂದ. ‘ಹೆಂಗಾರ ಆಗವಲ್ದ್ಯಾಕೆ ಇದು ಇಟ್ಕೋ ಎಂದು ಭೀಮಣ್ಣ ಅಕ್ವಿಟೆನ್ಸ್‍ನ ಆ ಪೇಜುಗಳನ್ನೂ ಮೂರು ನಾಲ್ಕು ಜೆರಾಕ್ಸ್ ಕಾಫಿ ಮಾಡಿಸಿ ಕೈಗಿತ್ತ ‘ಮದುವೆಗೆ ತಪ್ಪದೇ ಬಾರೋ ಹೆಂಡ್ತೀನು ಕರ್ಕೊಂಡು ಬಾರಲೆ ಮತ್ತೆ’ ಎಂದವನ ಕೈ ಹಿಡಿದು ಹನಿಗಣ್ಣಾದೆ. ‘ಬರ್ದೆ ಇರ್ತಿನೇನಲೇ… ಹೆಂಗೋ ದುರ್ಗದ ಏಳು ಸುತ್ತಿನ ಕ್ವಾಟೆ ನೋಡಿಲ್ಲ ನೋಡಿದಂಗೂ ಆಯ್ತದೆ’ ಅಂದ ಬಸ್ ಹತ್ತಿದೆ. ಸೀಟಲ್ಲಿ ಕೂತು ಅವನತ್ತ ನೋಡಿದಾಗ ಅವನ ಕಣ್ಣಂಚಿನಲ್ಲಿ ನೀರಿತ್ತು.
* * *
ಆಫೀಸಿಗೆ ಬಂದಾಗ ನನ್ನ ರೆಕಾರ್‍ಡ್ ರೂಮಿನ ಅನುಭವ ಹೇಳಿ ನಕ್ಕವರೇ ಬಹಳ ಜನ. ನನಗಾಗಲೇ ನೆಗಡಿ ಶುರುವಾಗಿತ್ತು ‘ಇದನ್ನ ಮುದ್ದಾಂ ಕಳಿಸೋದು ಬ್ಯಾಡ. ನಾವೇ ಹೋಯ್ದು ಕೊಡೋಣ’ ಅಂದ ಇಸ್ಮಾಯಿಲ್. ಕೆಜಿಐಡಿ ಆಫೀಸಿಗೆ ಹೋಗಿ ಸದರಿ ಗುಮಾಸ್ತನ ಕೈಗೆ ಒಪ್ಪಿಸಲು ಹೋದರೆ, ‘ಟಪಾಲ್ ಸೆಕ್ಷನ್ ಗೆ ಕೊಡ್ರಿ…. ಸಾಹೇಬರ ಸಹಿಯಾಗಿ ಬರ್‍ಲಿ’ ಅಂದ. ಹಾಗೆ ಮಾಡಿದೆವು. ‘ಈಗ್ಲಾದ್ರೂ ಹೇಳಿ ಸಾರ್… ಚೆಕ್ ಯಾವಾಗ್ ಸಿಗುತ್ತೆ.’ ನಯವಾಗೇ ಕೇಳಿದೆ.
‘ವಾರವಾದರೂ ಬೇಕು’ ಅಂದ.
ನನಗೆ ಪಿತ್ತ ನೆತ್ತಿಗೇರಿತು. ‘ನೋಡಿ ಸಾರ್, ನಾನು ಒಂದು ಮಾತು ಹೇಳ್ತೀನಿ. ನನ್ನ ಸರ್ವೀಸ್ ನಲ್ಲೇ ನಾನೆಂದೂ ಲಂಚ ಮುಟ್ಟಿಲ್ಲ ಯಾವನ್ಗೂ ಕೊಟ್ಟಿಲ್ಲ ಕೊಡೋದೂ ಇಲ್ಲ…. ನೀವು ನನ್ನ ಹತ್ತಿರ ಎಕ್ಸ್ ಪೆಕ್ಟ್ ಮಾಡ್ಲೂಬೇಡ್ರಿ’ ತಟಾರನೆ ಅಂದು ಬಿಟ್ಟೆ. ಆವನು ಅಷ್ಟಕ್ಕೆ ದೊಡ್ಡ ರಂಪ ಮಾಡಿಬಿಟ್ಟ ‘ನಾನೆಲ್ಲಿ ನಿಮ್ಗೆ ಲಂಚ ಕೇಳ್ದೆ…? ಮರ್ಯಾದೆಯಿಂದ ಮಾತಾಡ್ರಿ ನೀವೊಬ್ಬರೆ ಸಾಚಾ ಉಳಿದವರೆಲ್ಲಾ ಲಂಚಕೋರರು ಅಂತ ತಿಳಿದಿದ್ದೇರೇನು? ಹಾಂ? ಗುಮಾಸ್ತರು ಅಂದ್ರೆ ಏನಂತ ತಿಳ್ಕೊಂಡಿದಿರಿ’ ಬಾಯೋ ಬಾಯಿ ಮಾಡಿದ. ಅಲ್ಲಿದ್ದವರೆಲ್ಲಾ ನನ್ನನ್ನು ನುಂಗುವಂತೆ ನೋಡುವವರೆ. ಸಾಹೇಬನಿಂದ ಕರೆ ಬಂತು. ಒಳ ಹೋದೆವು. ಪರಿಸ್ಥಿತಿ ಹೇಳಿಕೊಂಡರೆ ಆತ ಮುಖ ಗಂಟಿಕ್ಕಿದ.
‘ನೀವು ಒಬ್ಬ ಸರ್ಕಾರಿ ನೌಕರರಾಗಿ ಹಿಂಗೆಲ್ಲ ಮಾತಾಡ್ಬಾರ್ದು ಅನ್ನೋ ಸೆನ್ಸ್ ಕೂಡಾ ನಿಮಗಿಲ್ಲವಲ್ರಿ. ಆತ ನಿಮ್ಮನ್ನ ಲಂಚ ಕೇಳಿದನೇನ್ರಿ?’ ಗಟ್ಟಿಸಿ ಕೇಳಿದ. ‘ಅದು ಹಾಗಲ್ಲ ಸಾರ್ ಏನೋ ಟೆನ್ಷನ್ ನಲ್ಲಿ…’ ನಾನೇ ಮೆತ್ತಗಾದೆ. ‘ಸರಿ ನೀವು ಹೋಗಿ… ಚೆಕ್ ಬರುತ್ತೆ’ ಆತ ಗುಡುಗಿದ.
‘ಸಾರ್ ಇವರು ಕತೆ ಬರೀತಾರೆ ಸಾ… ದೊಡ್ಡ ಸಾಹಿತಿಗಳು, ಪೇಪರ್ನಾಗೆ ಇವರ ಹೆಸರು ಬರ್ತೇತೆ. ಮೂರ್ತಿರಾವ್ ಅಂತ ನೋಡಿಲ್ಲೇನ್ ನೀವು’ ಇಸ್ಮಾಯಿಲ್ ಹೆದುರಿಸಲು ನೋಡಿದ ‘ಅಫೀಸಿನಾಗೆ ಕುಂತು ಕತೆ ಬರೆಯೋರೆಲ್ಲಾ ಒಳ್ಳೆ ಕತೆಗಾರ್ರು ಆಗಲ್ಲ. ಬೆಸ್ಟ್ ಕ್ಲರ್ಕು ಆಗಲ್ಲ. ಮೋರ್ ಒವರ್ ಇವರೆಲ್ಲಾ ಏನ್ರಿ ಮಾಡ್ತಾರೆ? ನನ್ನ ಮೇಲೂ ಒಂದು ಕತೆ ಬರೀಲಿ. ಈಗ್ಯಾರ್ರಿ ಕಥೆ, ಕಾದಂಬರಿ ಓದ್ತಾರೆ… ಹೆದರಿಸ್ತಿರೇನ್ರಿ… ಗೊ ಔಟ್ ಐ ಸೆ’ ಸಾಹೇಬ ಎನ್ನುವ ಖದೀಮ ಗದರಿಸಿಬಿಟ್ಟ. ಸಾಹಿತ್ಯ ಸಂಸ್ಕೃತಿ ಇಲ್ಲದ ಜನರ ಎದುರು ನಾನೆಂದೂ ಸಾಹಿತಿ ಎಂದು ಬಾಯಿ ಬಿಟ್ಟವನಲ್ಲ. ನಾನು ಬರೆದಿದ್ದರ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳುವಾಗ ಸಾಹಿತಿ ಎಂದು ಹೇಳಿಕೊಳ್ಳಲೂ ಭಯ ಪಡುವವನು. ಈ ಹುಡುಗ ಇಸ್ಮಾಯಿಲ್ ಎಂತ ಕೆಲಸ ಮಾಡಿಬಿಟ್ಟ ಎಂದು ನೊಂದುಕೊಂಡು ಹೊರಬಂದೆ. ‘ಸಾರ್, ಈ ನನ್ಮಗನಿಗೆ ಗಾಂಚಲಿ ಜಾಸ್ತಿ ಸಾರ್. ಲಂಚ ತಿಂದು ತಿಂದು ಕೊಬ್ಬಿದಾನೆ ಫೂಲ್’ ಇಸ್ಮಾಯಿಲ್ ಅಂದ. ‘ಅವನಲ್ಲಯ್ಯ…ಫೂಲ್ ನೀನು’ ನಿಟುಸಿರೊಂದು ಹೊರ ಬಂತು ನನ್ನಿಂದ.
ವಾರದಲ್ಲಿಯೇ ಕೆಜಿಐಡಿ ಕವರ್ ಬಂತು! ಎಲ್ಲರೂ ನನ್ನನ್ನು ಸುತ್ತುವರೆದರು. ಮತ್ತೊಂದು ಕ್ವಯರಿ ಹಾಕಿದ್ದ ಗುಮಾಸ್ತ? ಗುಲ್ಬರ್ಗ ಟ್ರಜರಿಯಿಂದ ರಿಕವರಿ ಆದ ಬಗ್ಗೆ ಪುರಾವೆ ಒದಗಿಸಬೇಕಂತೆ. ಇದು ಅನಾವತ್ಯಕವೆಂದು ಹೇಳಿದರೆ ಕೇಳೋರು ಯಾರು? ಸೀದಾ ಎಂ.ಎಲ್.ಎ. ಕಾಣು ಅಂದರು. ವೆಂಕಟಾಚಲ ಅವರಿಗೆ ಈಗ ಪತ್ರ ಬರಿ ಅಂದರು ಹೋಗ್ಲಿ ಬಿಸಾಕಿ ಬಿಡ್ರಿ ಐನೂರೊ ಸಾವಿರಾನೋ ಅಂತಲೂ ತಿಳಿ ಹೇಳಿದರು. ‘ಇಂಪಾಸಿಬಲ್’ ಎಂದು ರಜಾ ಅರ್ಜಿ ಬರೆದು ನೇರ ಗುಲ್ಬರ್ಗ ಬಸ್ ಹತ್ತಿದೆ. ಯಾವ ಸರ್ಕಾರ ಬಂದರೇನು ಎಷ್ಟು ಮಂದಿ ಮಂತ್ರಿಗಳಿದ್ದರೇನು ಅಫ್ಜಲಪುರ ಚಿಂಚೋಳಿ ಷಹಪುರ ಎಲ್ಲಾ ಧೂಳಿನಮಯ. ಜನ ಅವರ ಕಚ್ಚೆಪಂಚೆ ಅಂಗಿ ಪಗಡಿಯ ಒರಿಜನಲ್ ಬಣ್ಣ ಎಲ್ಲಾಮಾಯ. ಅವೇ ಕಡಪಾ ಕಲ್ಲು ಹೊದ್ದಿಸಿದ ಹಳೆ ಮನೆಗಳು ಗಲ್ಲಿಗಳು. ದೊಡ್ಡ ದೊಡ್ಡ ಬಿಲ್ಡಿಂಗ್ ಗಳು ಕಾಣಬೇಕೆಂದರೆ ಗುಲ್ಬರ್ಗಕ್ಕೆ ಬಂದಿಳಿಯಬೇಕೆನಿಸಿತು.
ಭೀಮಣ್ಣ ನನ್ನನ್ನು ನೋಡಿ ದಂಗಾದ. ಆದರೂ ಮತ್ತದೇ ಸ್ನೇಹದಿಂದ ನೆರವಿಗೆ ನಿಂತ. ನನ್ನೊಂದಿಗೆ ಟ್ರಜರಿ ಅಫೀಸಿಗೂ ಆಲೆದ. ಕೆಜಿಐಡಿಯವರ ಲೆಟರ್ ತೋರಿಸಿ ನನ್ನ ಆಳಲನ್ನು ತೋಡಿಕೊಂಡೆ. ‘ನಿಮಗೇನ್ ಹುಚ್ಚುಗಿಚ್ಚೇನ್ರಿ?’ ಆಲ್ಲಿನ ಅಕೌಂಟೆಂಟ್ ಒಮ್ಮಲೆ ಸಿಡಿದು ಬಿದ್ದ ‘ಮೂವತ್ತು ವರ್ಷ ರೆಕಾರ್ಡ್ಸ ನಾ ಯಾರ್ ಯಾವ ದಫ್ತರ್ ನಾಗಿಟ್ಟಿರ್ತಾರ್ರಿ ಸಾಹೇಬ್ರಾ.. ರೂಲ್ಸ್ ಗೊತ್ತದೋ ಇಲ್ಲೋ ನಿಮ್ಗೆ! ಅಲ್ಲಿಂದ ಬಂದಿರಲ್ರಿ… ಹಾಂ. ದಸ್ ಸಾಲ್ಕೆ ಬಾದ್ ಸುಟ್ಟೂಹಾಕಬೋದು ಹೌದಿಲ್ಲೋ?’ ‘ಆದ್ರೂ ಇದು ಅಕೌಂಟ್ಸ್ ಮ್ಯಾಟರ್ ಸಾರ್… ಪ್ಲೀಸ್ ಹೆಲ್ಪ್ ಮಿ ಸಾರ್’ ಅಂಗಲಾಚಿದೆ.
‘ಮುಂಜಾನೆನೇ ಎಂಥ ಗಿರಾಕಿ ಹಿಡ್ಕೊಂಬಂದೀರಿ ಭೀಮಣ್ಣ ಸಾಹೇಬ್ರೆ’ ನಗಾಡಿದ. ಅಂವಾ. ‘ನೀನು ಹೊರಗಡೆ ಇರು… ನಾನು ಇವನ್ನ ತಾಜಾ ಮಾಡ್ತೀನಿ’ ಅಂದ ಭೀಮಣ್ಣ ಒತ್ತಾಯ ಮಾಡಿ ಹೊರಗೆ ಕಳಿಸಿದ. ಹತ್ತು ನಿಮಿಷ ಕಾಯುವುದರಲ್ಲೇ ಜೀವ ಹಣ್ಣಾಯಿತು. ಭೀಮಣ್ಣ ತರಾತುರಿ ಬಂದವನೆ ಪತ್ರ ಕೈಗಿಟ್ಟ ೧೯೭೩ ರಲ್ಲಿ ಹಣ ಕಟಾಯಿಸಲಾದ ಸ್ಟೇಟ್ಪಮಂಟ್’ ಅದಕ್ಕೆ ಟ್ರಜರಿ ಆಫೀಸರರ ಸುಹಿಯೂ ಬಿದ್ದಿದೆ! ಒಳ್ಳೆಯವರು ಇನೂ ಜಗತ್ತಿನಲ್ಲಿ ಇದ್ದಾರಲ್ಲ ಎಂದು ತಬ್ಬಿದೆ. ‘ಪುಗುಟ್ ಕೆಲಸ ಮಾಡಿಕೊಡ್ಲಿಕೆ ಅಂವಾ ಏನ್ ನಂ ಕಾಕಾ ಮಗ್ನಾ ಎರಡು ನೂರು ಕೈಗಿಟ್ಟು ಸಲಾಂ ಹೊಡೆದೆ ಬಂದೀನಿ’ ಭೀಮಣ್ಣ ಅಂದಾಗ ವಿಚಿತ್ರ ಸಂಕಟ ಪಟ್ಟೆ ‘ಏನು! ಲಂಚ ಕೊಟ್ಯಾ? ಕೊಡು ಆಂತ ನಿನಗೆ ಯಾವ ಬೋಳಿ ಮಗ ಹೇಳಿದ್ನೋ’ ಕೂಗಾಡಿದೆ. ‘ಕೂಗಾಡಬೇಡ. ಎಲ್ಡು ಏಟು ಹೊಡೆಯಂಗಿದ್ರೆ ಹೊಡಿ ಮಾರಾಯ. ನಿನ್ನಂಗೆ ಹಠ ಹಿಡಿದು ಕುಂತ್ರೆ ಕೆಲಸ ಆದಾವೇನು. ಅರ್ಜೆಂಟ್ ಬ್ಯಾರೆ ಮಾಡ್ತಿ ಕಾಲಕ್ಕೆ ತಕ್ಕಂತೆ ಹೆಜ್ಜೆ ಹಾಕೋದ್ನ ಕಲಿಬೇಕು ಕಣೋ. ನನಗೇ ತಿಳಿಹೇಳಿದ, ರೇಗಿದರೂ ಸುಧಾರಿಸಿಕೊಂಡೆ. ಅವನಿಗೆ ಎರಡು ನೂರು ಕೊಡಲು ಹೋದೆ. ‘ನನ್ಗೆ ಅವ್ಮಾನ್ ಮಾಡ್ತಿಯೇನ್. ದೋಸ್ತಿ ಅಂದ್ರೆ ನಿಂದಿಷ್ಟೆ ಏನ್…’ ಗದ್ಗದಿತನಾದ. ಅವನ ಪತ್ರ ತಂದ ಕ್ಷಣದಲ್ಲಿ ಉಂಟಾದ ನಾನು ಗೆದ್ದನೆಂಬ ಭಾವನೆ ಈಗ ಸತ್ತು ಹೋಗಿತ್ತು. ರಾತ್ರಿಯೇ ಬಸ್ ಹತ್ತಿದೆ.
ಪುನಃ ನಾನೂ ಇಸ್ಮಾಯಿಲ್ ಕೆಜಿಐಡಿ ಆಫೀಸಿಗೆ ಹೋಗಿ ತಂದ ದಾಖಲೆ ಒಪ್ಪಿಸಿದೆವು. ‘ವಾರ್‍ದಾಗೆ ಚೆಕ್ ಬರ್ತೇತೆ ಹೋಗ್ರಿ’ ಮತ್ತದೇ ಉತ್ತರ ಬಂತು. ಸಾಹೇಬನ ಬಳಿ ಹೋಗೋಣ ಎಂದರೆ ಇಸ್ಮಾಯಿಲ್ ಬೇಡವೆಂದ. ‘ನಾನ್ ಯಾವಾಗ ಬರ್‍ಲಿ ಸಾರ್’ ಮತ್ತದೇ ಗುಮಾಸ್ತನನ್ನು ಕೇಳಿದೆ. ‘ನೀವ್ಯಾಕ್ ಬರ್ತಿರ್ರಿ… ರಿಜಿಸ್ಟರ್ಡ್ ಪೋಸ್ಟ್ನಾಗೆ ಕಳಿಸ್ತೀವಿ’ ಅದೇ ಒರಿಜಿನಲ್ ಬಿಗಿ ಆವನದು. ಈಚೆ ಬಂದೆವು.
‘ಮದುವೆ ಹತ್ತಿರದಾಗೈತಿ. ನೀವು ಹಿಂಗ್ ಆಡಿದ್ರೆ ಹೆಂಗ್ರಿ ಸಾ. ಗುಲ್ಬರ್ಗಕ್ಕೆ ಎರಡು ಸಲ ಹೋಗಿ ಬಂದ್ರಿ ಸಾವಿರಾರು ರೂಪಾಯಿ ಖರ್ಚಾತು. ಮೈ ಕೈ ನೋವು ಬೇರೆ. ಇಲ್ಲೇ ಐನೂರು ಬಿಸಾಡಿದ್ರೆ ಕೆಲ್ಸ ಆಗೋದು. ಈಗ್ಲೂ ಅಷ್ಟೇ ಹೇಳ್ತೀನಿ ಕೇಳಿ… ವಾರಗಟ್ಟಲೆ ಸತಾಯಿಸ್ತಾನೆ. ಇವನು. ತಾನೇ ಇಟ್ಕಂಡು ಫೋಸ್ಟ್ ಮಾಡಿದೀನಿ ಅಂತಾನೆ… ಏನ್ ಮಾಡ್ತೀರಿ ಸಾ? ಈಗ ನೂರು ರೂಪಾಯಿ ನನಗೆ ಕೂಡಿ. ನೀವೇನ್ ಹೋಗಿ ಕೊಡೋದು ಬ್ಯಾಡ. ನಾನೇ ಹೋಗಿ ತಾಜಾ ಮಾಡ್ತೀನಿ. ನಾಳೆ ನಾನೇ ನಿಮ್ಮ ಕೈಗೆ ಚೆಕ್ ತಂದು ಕೊಟ್ಟರಾತಿಲ್ಲೋ ಕ್ಯಾ ಸಾಬ್ ತುಮ್ಸೆ ! ಕಾಲಕ್ಕೆ ತಕ್ಕಂತೆ ಹೆಜ್ಜೆಹಾಕೋದನ್ನ ಕಲಿಬೇಕು ಸಾಬ್’ ಇಸ್ಮಾಯಿಲ್ ನಕ್ಕ. ನಾನು ನಗಲಿಲ್ಲ ಯೋಚನೆಗೆ ಬಿದ್ದೆ. ನಾನೀಗ ನೂರು ರೂಪಾಯಿ ಕೊಡದೆ ನಿರಾಕರಿಸಿದರೂ ನನ್ನ ಮೇಲಿನ ಅಭಿಮಾನದಿಂದ ಇಸ್ಮಾಯಿಲ್ಲೇ ತನ್ನ ಕೈನಿಂದ ಕೊಟ್ಟು ನಾಳೆ ಚೆಕ್ ತಂದು ಕೊಡುತ್ತಾನೆ ಅನ್ನಿಸಿದಾಗ ನನ್ನಿಂದಾಗಿ ಇತರರಿಗೆ ತೊಂದರೆಯಾದ ಮೇಲೆ ನಾನು ಬದುಕಿದ್ದೂ ಎಂತ ಉಪಯೋಗವೆನ್ನಿಸಿತು. ನೂರು ರೂಪಾಯಿ ಅವನ ಕೈಗೆ ಒಪ್ಪಿಸಿದೆ. ಗುಲ್ಬರ್ಗದಲ್ಲೇ ‘ನಾನು’ ಸತ್ತು ಹೋಗಿದ್ದರಿಂದ ಮತ್ತೊಮ್ಮೆ ಸಾಯುವ ಪ್ರಮೇಯವಿರಲಿಲ್ಲ.
*****