ಶೂದ್ರ

ಶೂದ್ರ

ನಿಧಾನವಾಗಿ ಮೆಟ್ಟಲು ಹತ್ತಿಕೊಂಡು ಮೂರನೆ ಮಾಳಿಗೆಯ ತನ್ನ ಮನೆಯೆದುರು ಬಂದು ನಿಂತವನಿಗೆ ಎದೆಯ ಉಬ್ಬಸದಿಂದ ಮೈನಡುಗಿದಂತೆನಿಸಿ, ತೊಡೆಯ ಸಂದುಗಳು ಕಂಪಿಸಿದವು. ಢಗೆಯ ರಭಸ ಹೆಚ್ಚಾಗಿ ಮೆಟ್ಟಲಿನ ದಂಡೆಗೆ ಕೈಕೊಟ್ಟು ನಿಂತುಕೊಂಡ. ಕೆಮ್ಮು ಮತ್ತೆ ಮತ್ತೆ ಬಂದಿತು. ಜೊತೆಗೆ ದಪ್ಪ ಕಫ, ಸಿಗರೇಟು ತರಲು ತಾನು ಈ ಹೊತ್ತು ಕೆಳಗೆ ಹೋಗಬಾರದಿತ್ತು. ಈ ಸಿಗರೇಟಿನ ಚಟವೀಗ ಅತಿಯಾಗಿಬಿಟ್ಟಿದೆಯಲ್ಲ; ಪ್ರಾಯ ಇಳಿಯುತ್ತಿರುವಾಗ, ಆರೋಗ್ಯ ಕೆಡುತ್ತಿರುವಾಗ, ತನ್ನ ಮೇಲೆ ಅವನಿಗೇ ಕನಿಕರ ಬಂದು ನೋವಿನ ನಗೆಯನ್ನು ಮುಖದಲ್ಲಿ ತಂದುಕೊಂಡ. ತಾನು ನಕ್ಕದ್ದನ್ನು ಯಾರೂ ಕಂಡಿಲ್ಲವೆಂದು ಖಾತ್ರಿಯಾಗಿ ಎದುರಲ್ಲಿ ನೋಡಿದಾಗ ಅವನ ಮನೆಯ ಬಾಗಿಲಿನಲ್ಲಿ ಅವನ ಹೆಂಡತಿಯ ಹೆಸರು ಕಂಡಿತು. ಕಿಸೆಯಿಂದ ಕೀಲಿಕೈ ತೆಗೆದು ಬಾಗಿಲ ಹತ್ತಿರ ಹೋದಾಗ ಒಮ್ಮೆಲೆ ನಿಂತುಕೊಂಡ. ಏನೋ ಅವನನ್ನು ಹಿಂದಕ್ಕೆ ಜಗ್ಗಿದಂತಾಯಿತು. ಇಂದು, ಆ ಮನೆ ತನ್ನದಲ್ಲ, ಅದರೊಳಗೆ ತನ್ನವರು ಯಾರೂ ಇಲ್ಲ. ತಾನು ಆ ಮನೆಗೆ ಪರಕೀಯ ಎಂಬ ಭಯವಾಯಿತು. ಈ ಭಯ ಇಂದೇ ಏಕೆ ಹುಟ್ಟಿಕೊಂಡಿತು. ತಿಳಿಯಲಿಲ್ಲ. ಮನುಷ್ಯನಿಗೆ ಭಯ ಏಕೆ ಆಗುತ್ತದೆ?

ಆ ಮನೆಯೊಳಗೆ ಮೌನದ ಭೂತವಿದೆ. ಕೆಲವು ಕಾಲದಿಂದ ಅದು ವಾಸಿಸುತ್ತಿದೆ. ಏಕಾಕಿಯಾದ ತನಗೆ ಅದನ್ನು ಹೊರದಬ್ಬಲು ಶಕ್ತಿಯಿಲ್ಲ. ಅದರೊಂದಿಗೆ ತಾನೂ ಕರಗಿ ಹೋಗಿದ್ದೇನೆ. ತನ್ನ ಅಸ್ತಿತ್ವವನ್ನು ಕಳಕೊಳ್ಳುವಷ್ಟು, ತಾನು ಉಸಿರುಕಟ್ಟಿ ನಿರ್‍ಜೀವವಾಗುವಷ್ಟು. ಅವನ ಹೆಂಡತಿ ಹಗಲಿನಲ್ಲಿ ಇರುವುದಿಲ್ಲ. ನೌಕರಿಗೆ ಹೋಗಿರುತ್ತಾಳೆ. ಸಂಜೆಯ ತನಕ, ಕೆಲವೊಮ್ಮೆ ರಾತ್ರಿಯ ತನಕ. ಅವನು ಮಾತ್ರ ಮನೆಯಲ್ಲಿ ಒಬ್ಬನೇ ಬಿದ್ದು ಕೊಂಡಿರುತ್ತಾನೆ. ನೌಕರಿ ಬಿಟ್ಟ ಈ ಹತ್ತು ವರ್ಷಗಳಿಂದ. ನೌಕರಿಯನ್ನು ಎಲ್ಲಿಯೂ ಶಾಶ್ವತವಾಗಿ ಅವನಿಂದ ಮಾಡಲಾಗಲಿಲ್ಲ. ಅವನ ಮನಸ್ಸಿನ ಸ್ಥಿತಿಯ ನೌಕರಿಗೆ ಒಗ್ಗುವಂಥಾದ್ದಾಗಿರಲಿಲ್ಲ. ಅದಕ್ಕಾಗಿ ಎರಡು ಮೂರು ಸಾರಿ ಹಣ ಒದಗಿಸಿ ಉದ್ಯೋಗಕ್ಕೆ ಹಾಕಿದ. ಹಳೆಯ ಕಾರೊಂದು ತಗೊಂಡ. ಪ್ಲಾಸ್ಟಿಕ್ಕಿನ ಚೀಲಗಳನ್ನು ತಯಾರಿಸುವ ಪ್ರಯತ್ನದಲ್ಲಿ ಕೈ ಸುಟ್ಟುಕೊಂಡು ಮನೆ ಸೇರಿದ. ಕಾರು ಈಗಲೂ ಇದೆ.

ಆ ಮನೆಗಾಗಿ ಅವರಿಬ್ಬರೂ ಹಣ ಕೂಡಿಸಿದ್ದರು. ದೊಡ್ಡಮನೆ. ನಾಲ್ಕು ಕೋಣೆಗಳು ಬಾಲ್ಕನಿ, ಎರಡು ಸ್ನಾನಗೃಹಗಳು, ಈಗ ಕೋಟಿ ಲೆಕ್ಕದ ಆಸ್ತಿ, ೧೫ ವರ್ಷಗಳ ಹಿಂದೆ ಬುಕ್ ಮಾಡಿದ್ದಾಗ ಉತ್ಸಾಹವಿತ್ತು. ಬದುಕಿನ ಭವಿಷ್ಯದಲ್ಲಿ ಅತಿಯಾದ ನಂಬಿಕೆಯಿತ್ತು. ದಾಂಪತ್ಯದಲ್ಲಿ ಆಸಕ್ತಿ, ಹೆಂಡತಿಯಲ್ಲಿ ಪ್ರೇಮವಿತ್ತು. ಆದರಿಂದಾಗಿ ಅವಳ ಹೆಸರಿನಲ್ಲಿ ಮಾಡಿದ ಮನೆಯದು, ತನ್ನದು-ಅವಳದು ಅಷ್ಟೆ.

ಆದರೆ ಈಚೆಗೆ ಬೆಳೆದುಕೊಂಡ ಅನಾಸಕ್ತಿಯಿಂದ ಈಗ ಕ್ಷಣಕ್ಕಾಗಿ ಆ ಮನೆ ತನ್ನದಲ್ಲ ಎನ್ನುವಂತಾಗಿ ಅಂಜಿಕೆಯಾಯಿತು. ಕೈಯಲ್ಲಿದ್ದ ಸಿಗರೇಟಿನ ತುಂಡನ್ನು ನೆಲಕ್ಕೆ ಹಾಕಿ ತುಳಿದ. ಕೀಲಿಕೈ ತಿರುಗಿಸಿ ಬಾಗಿಲು ತೆರೆದ. ಸ್ವಲ್ಪ ಹೊತ್ತು ಹಿಂದೆ ಬಿಟ್ಟು ಹೋದ ಮನೆ. ಬೆಳಿಗ್ಗೆ ಹೆಂಡತಿ ಕೆಲಸಕ್ಕೆ ಹೋದ ಕ್ಷಣದಿಂದ ಒಂಟಿಯಾಗಿ ಕುಳಿತುಕೊಂಡ ಕೋಣೆಗಳು. ಹೀಗೆಯೆ ಕೆಲವು ವರ್‍ಷಗಳಿಂದ ವ್ಯರ್‍ಥವಾಗಿ, ಏಕಾಕಿಯಾಗಿ ನೆಲೆಸಿದ ಈ ಮನೆಯ ಭಿತ್ತಿಗಳಲ್ಲಿ ಗಂಡ-ಹೆಂಡಿರ ಜಗಳದ, ಬದುಕಿನ ಸ್ವಪ್ನಗಳು ನಿರಾಶೆಯ ನಿಟ್ಟುಸಿರನ್ನು ಬಿಟ್ಟ ಸದ್ದುಗಳು ಅವಿತುಕೊಂಡಿರುವ ಕಲ್ಪನೆಯಾಗಿ ಮೈ ಬಿಸಿಯಾಯಿತು. ಹಾಗೆ ಇಂಥಾ ಪ್ರಸಂಗಗಳಲ್ಲಿ ಅವನು ಒಬ್ಬನೇ ಇದ್ದಾಗ ಮನಸ್ಸನ್ನು ಕಾಡಿ, ಭಯ ಹುಟ್ಟಿಸಿದ ವಿಚಾರಗಳು ಎಷ್ಟೊ. ಅದರಲ್ಲಿ ತಾನು ಅರ್‍ಥಹೀನ ಬದುಕನ್ನು ಬಾಳಿದನೆಂಬ ಕೊರಗು. ತನ್ನಿಂದ ಏನೂ ಸಾಧ್ಯವಾಗಲಿಲ್ಲ. ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು, ದೊಡ್ಡ ಕಂಪನಿಯ ಹುದ್ದೆ ಪಡೆದು ಸಾಧಿಸಿದ್ದು ಏನೂ ಇಲ್ಲ. ಪೂಜಾಪಾಠದ ಬ್ರಾಹ್ಮಣನಾಗಿ ಯವ್ವನದ ದಿನಗಳಲ್ಲಿ ಮಾಡಿದ ಒಂದು ಕೆಲಸ ಅವನ ಬದುಕಿನಲ್ಲಿ ಈವರೆಗೂ ಸವಾಲಾಗಿ ನಿಂತಿತ್ತು. ಶೂದ್ರ ಜಾತಿಯ, ಕಲಿತ, ಉದ್ಯೋಗಸ್ಥ ಹೆಣ್ಣನ್ನು ಪ್ರೀತಿಸಿ ತಾಯಿ-ತಂದೆಯ ಒಪ್ಪಿಗೆಯನ್ನು ಪಡೆಯದೆ, ಕುಲವೃತ್ತಿ ಕುಲಧರ್‍ಮವನ್ನು ಮೀರಿ ಮದುವೆಯಾದದ್ದು-ಬಹುಶಃ ತಪ್ಪೆಂದು ಮದುವೆಯಾದ ಆರೇಳು ವರ್‍ಷಗಳ ನಂತರವೆ ಹೊಳೆದದ್ದು. ಆಕೆಯಿಂದ ಮಗುವಿನ ಮುಖ ನೋಡಲು ಉತ್ಸುಕಗೊಂಡ ಹೃದಯಕ್ಕೆ ಹೆಂಡತಿಯ ಒಂದೊಂದೆ ಗರ್‍ಭಪಾತದ ಆಘಾತವಾಗುತ್ತಿದ್ದಾಗಲೆಲ್ಲ ತನ್ನ ಮನಸ್ಸಿಗೆ ನೆಮ್ಮದಿ ಏಕಿಲ್ಲವೆಂದು ತಿಳಿಯುತ್ತಿತ್ತು. ಕುಲದ, ಹಿರಿಯರ ಶಾಪದ ಕಾರಣದಿಂದ ತನ್ನ ವೀರ್‍ಯ ಗಟ್ಟಿಯಾಗಿ ನಿಲ್ಲಲಿಲ್ಲ. ಅವಳ ಹೊಟ್ಟೆಗೆ ಯಾರೋ ಮುನಿದಿರುವುದರಿಂದ ಗರ್‍ಭ ಒಡೆಯುತ್ತದೆ. ಒಂದಲ್ಲ, ಎರಡಲ್ಲ, ಹಲವು ಸಾರಿ, ಎಲ್ಲ ಪ್ರಯತ್ನ ನಡೆಸಿಯಾಯಿತು. ಎಲ್ಲ ರೀತಿಯ ವೈದ್ಯಕೀಯ ಚಿಕಿತ್ಸೆಯಾಯಿತು; ಖರ್‍ಚಾಯಿತು. ವಂಶ ಬೆಳೆಯಲು ಒಂದು ಕುಡಿ ಹುಟ್ಟಲಿಲ್ಲ. ಊರಿನ ತಾಯಿ-ತಂದೆಗಳ ಕ್ಷಮೆ ಯಾಚಿಸಿಯಾಯಿತು. ದೈವ-ದೇವರಿಗೆ ಹರಕೆ ಹೇಳಿಯಾಯಿತು. ಆದರೂ ಮುಖ ಭಂಗ, ಸೋಲು ಏಕೆ ಹೀಗೆ? ತನ್ನ ಹಣೆಯಲ್ಲಿ ತಂದೆಯಾಗುವ ಭಾಗ್ಯವಿಲ್ಲ. ತನಗೆ ಗತಿಯಿಲ್ಲ-ಜೀವನ್ಮುಕ್ತಿಯಿಲ್ಲ. ಅವಳ ಹೊಟ್ಟೆ ಬರೇ ಬಂಜರು ಭೂಮಿ. ಅದರಲ್ಲಿ ಬೀಜ ಬೆಳೆಯದು. ಅವಳು ನೋವನ್ನು, ಪರಿತಾಪವನ್ನು ಹೊಟ್ಟೆಯೊಳಗೇ ಇಟ್ಟುಕೊಂಡು ದಿನೇ ದಿನೇ ಸಣ್ಣದಾಗುತ್ತಿದ್ದಾಳೆ.

ಎಷ್ಟೋ ಸಾರಿ ಅವರಿಬ್ಬರಲ್ಲಿ ಮಾತುಕತೆ ನಿಂತು ಹೋಗಿರುತ್ತದೆ. ಸ್ಮಶಾನ ಮೌನಕ್ಕೆ ಆಶ್ರಯ ಕೊಟ್ಟ ಈ ಮನೆ ಈ ಬದುಕು ಏಕೆ….ದಣಿದು, ದುಡಿದು ಬಂದ ಅವಳನ್ನು ಒಲವಿನಿಂದ ಸಂತೈಸಲು ಎಷ್ಟೋ ಸಾರಿ ಮನಸ್ಸು ಒಪ್ಪುವುದಿಲ್ಲ. ಹಿಂದೆ ಕೆಲಸದಿಂದ ಇಬ್ಬರೂ ಬೇಗ ಬಂದು ಸ್ವಾಗತಿಸಲು ಯಾರು ಮೊದಲು ಯಾರು ಮೊದಲು ಎಂಬ ಪೈಪೋಟಿ ನಡೆಯುತ್ತಿತ್ತು. ಬಂದ ನಂತರ ತೋಳ ತೆಕ್ಕೆಗಳಲ್ಲಿಯೆ ಮನೆಯ ಎಲ್ಲಾ ಕೆಲಸಗಳನ್ನು ಮುಗಿಸುತ್ತಿದ್ದರು. ಈಗ ಒಂದು ಆತಂಕ. ಅವಳೊಂದು ಕೋಣೆಯಲ್ಲಿ, ತಾನೊಂದು ಕೋಣೆಯಲ್ಲಿ ಪುಸ್ತಕ ಪತ್ರಿಕೆಗಳನ್ನು ತೆರೆದು ಓದುತ್ತ, ದೂರದರ್ಶನದ ಕಾರ್ಯಕ್ರಮಗಳನ್ನು ವ್ಯಗ್ರ ಮನಸ್ಸಿನಿಂದ ನೋಡುತ್ತ, ನಿಷ್ಠುರ ಯೋಚನೆಗಳಿಗೆ ಬುದ್ದಿಯನ್ನು ತೆರೆದು, ಸಂಬಂಧವನ್ನು ಈಗ ದೂರಗೊಳಿಸಿ ದಿನಕಳೆಯುವ ದುರ್‍ದೆಶೆಗೆ ಕಾರಣ ತಾವು ನಿರ್‍ವೀಯರೆಂದಲ್ಲವೆ…. ಪಕ್ಕದ ಮನೆಯಲ್ಲಿ ಹತ್ತು ವರ್ಷಗಳಲ್ಲಿ ಮೂರು ಮಕ್ಕಳು ಹುಟ್ಟಿ, ಬೆಳೆದು ‘ಅಂಕಲ್’ ಎಂದು ಕರೆಯುತ್ತ ಎಲ್ಲ ಕೋಣೆಗಳಲ್ಲಿ ತಿರುಗಾಡಿ ಕುಣಿದಾಗ ಅವನ ಗಂಡಸ್ತನಕ್ಕೆ ಪ್ರಶ್ನೆ ಹಾಕಿದಂತೆ ಭಾಸವಾಗಿ, ಆಡುವ ಮಕ್ಕಳ ಮುದ್ದುತನದಿಂದ ಹುಟ್ಟಿದ ಸಂತೋಷದ ಮೇಲುನಗೆಯ ಹಿಂದೆ ಇಣುಕು ಹಾಕುವ ನೋವನ್ನು ಹೇಳಲು ಸಾಧ್ಯವಾಗುವುದಿಲ್ಲ. ಅವುಗಳು ಹೊರಟು ಹೋದ ಮೇಲೆ ಸಿಟ್ಟು ಹೆಡೆಯೆತ್ತಿ ಹೆಂಡತಿಗೆ ‘ಒಂದು ಮಗುವನ್ನು ಹಡೆಯಲು ಆಗದ ನೀನು ಎಂಥಾ ಹೆಣ್ಣು’ ಎಂದು ಬೈದು, ಅವಳಿಗಾದ ಮರ್‍ಮಘಾತದಿಂದ ಕಣ್ಣಲ್ಲಿ ಹರಿದು ಬಂದ ನೀರಧಾರೆಯನ್ನು ಒರಸುವ ಪೌರುಷವೂ ಇಂಗಿ ಹೋಗುತ್ತದೆ.

ನೀವು ಷಂಡರು. ಮಕ್ಕಳನ್ನು ಹುಟ್ಟಿಸುವ ಗಟ್ಟಿ ವೀರ್‍ಯ ನಿಮ್ಮಲ್ಲಿ ಇಲ್ಲದಿದ್ದರೆ ಪಾಪ ನನಗೆ’ ಎಂದು ಅವಮಾನಗೊಂಡ ಹೆಂಡತಿ ಹೇಳುವ ಸತ್ಯವನ್ನು ಸಹಿಸಲಾರದೆ ಅವನ ಒಳಗಿರುವ ಕ್ರೂರ ಪುರುಷ ಅವಳ ನಯವಾದ ಕೆನ್ನೆಗೆ ಎರಡೇಟು ಬಿಗಿದಾಗ ಮಾತ್ರ ಮನೆ ಕುರುಕ್ಷೇತ್ರವಾಗುತ್ತದೆ.

‘ದಿನವೀಡಿ ಮನೆಯಲ್ಲಿ ಬಿದ್ದುಕೊಂಡರೆ ಇದೇ ಎಲ್ಲ…. ಮನಸ್ಸು ಸಾಯುತ್ತದೆ. ದುಷ್ಟ ವಿಚಾರಗಳು ಬರುತ್ತವೆ. ಹೃದಯ ಕ್ರೂರವಾಗುತ್ತದೆ’ ಎಂದು ಅವಳು ಖಂಡಿಸಿ ಮಾತಾಡಿದಾಗ ಸಿಟ್ಟು ಅವನ ಸಂಯಮ ಮೀರಿ ತಾನು ಪ್ರೀತಿಸಿ ತಂದ ಹೆಣ್ಣು, ಏಳೆಂಟು ವರ್ಷಜೊತೆ ಬಾಳಿ ಕಷ್ಟ-ನಷ್ಟಗಳಲ್ಲಿ ಸಮವಾಗಿ, ಬಹುಶಃ ಹೆಚ್ಚಾಗಿ ಭಾಗಿಯಾದವಳು ಎಂಬ ದಾಕ್ಷಿಣ್ಯವೂ ಬರಲಾರದೆ, ಅವಳ ಬೆನ್ನು ಮೋಕ್ಷವಾಗುವುದು’ ಗುದ್ದನ್ನು ಸಹಿಸಲಾರದೆ, ಒಮ್ಮೆ ತಾನು ತುಂಬ ಪ್ರೀತಿಸಿದ ಗಂಡನ ಈ ಪಶುತ್ವಕ್ಕೆ ಹೇಸಿಕೊಳ್ಳುತ್ತಾಳೆ.

‘ವೃತ್ತಿ ನಿಮಗೇನೂ ಇಲ್ಲ. ನಿಮ್ಮಂಥ ಶಿಕ್ಷಿತರು ಹೀಗೆ ಹೆಂಡತಿಯನ್ನು ದುಡಿಸಿ, ಮನೆಯ ಮೂಲೆಯಲ್ಲಿ ಸಿಗರೇಟು, ವಿಸ್ಕಿ ಕುಡಿಯುತ್ತ ಬಿದ್ದಿರವುದು ನನ್ನ ಹಣೆ ಬರಹ. ಗುದ್ದು ತಿನ್ನುವುದಂತೂ ನನ್ನ ಕರ್‍ಮ. ನಾನೇ ಏನೋ ತಪ್ಪು ಮಾಡಿದ್ದೇನೆ. ಅದಕ್ಕೆ…ಹೀಗೆ.’

ಹಣೆ ಬಡಿದುಕೊಂಡು ಅವಳನ್ನುವ ಕಟು ಮಾತುಗಳು ಅವನನ್ನು ಚುಚ್ಚಿ ದುರ್‍ಬಲಗೊಳಿಸುತ್ತವೆ. ಇನ್ನು ಇವಳ ಹಣ ಬೇಡ, ಸಿಗರೇಟು, ವಿಸ್ಕಿ, ಊಟ, ಮನೆ ಯಾವುದೂ ಬೇಡವೆಂದು ತೀರ್‍ಮಾನಿಸಿ ಮತ್ತೆ ಹೋಗಿ ಬೀಳುವುದು ಶರಾಬಂಗಡಿಯಲ್ಲಿ. ರಾತ್ರಿಯ ಒಂದೆರಡು ಗಂಟೆಯ ಕಾಲದಲ್ಲಿ ಪಕ್ಕದ ಮನೆಯವನನ್ನು ಕರಕೊಂಡು ಬಾರಿನಲ್ಲಿ ಹುಡುಕಿ, ಕುಡಿದು ಎಚ್ಚರ ತಪ್ಪಿ ಮೇಜಿನ ಮೇಲೆ ಒರಗಿರುವವನನ್ನು ಟ್ಯಾಕ್ಸಿಗೆ ಹಾಕಿ ಮನೆಗೆ ತಂದ ಹೆಂಡತಿಯನ್ನು ಮತ್ತೆ ಕೆಲವು ದಿವಸ ಎದುರಿಸುವ ಧೈರ್‍ಯವಾಗುತ್ತಿರಲಿಲ್ಲ.

ಕಾಲ ಸರಿಯುತ್ತಿದ್ದಂತೆ ಅವನ ಮನಸ್ಸಿನ ಕೊರಗು ವೃದ್ಧಿಸುತ್ತಿತ್ತು. ಇಷ್ಟು ದೊಡ್ಡ ಮನೆಗೆ ವಾರಸದಾರರಿಲ್ಲ. ತಾವಿಬ್ಬರೂ ಮುದುಕರಾಗಿ ಒಬ್ಬೊಬ್ಬರೆ ಸಾಯುತ್ತೇವೆ. ಯಾವ ರೀತಿಯಲ್ಲಾದರೂ…. ಕಾಯಿಲೆಯಿಂದ, ಮನೋರೋಗದಿಂದ. ‘ಅಪ್ಪ’ ಎಂದು ಅಕ್ಕರೆಯನ್ನು ತೋರುವ, ಕೂಗುವ ಮಕ್ಕಳಿಲ್ಲದಿರುವುದು ಕರ್‍ಮಫಲ, ಯಾವ ತಪ್ಪಿಗೋ ಈ ಶಿಕ್ಷೆ ಸಿಕ್ಕಿದೆ. ತಪ್ಪಿನ ನೆನಪಾದಾಗ ತಾನು ಶೂದ್ರ ಹೆಣ್ಣನ್ನು ಮದುವೆಯಾದ ಸಂದರ್‍ಭದ, ಅನಂತರ ಹಿರಿಯರನ್ನು ದೂರ ಬಿಟ್ಟು ಜೀವನ ನಡೆಸುವ ರೀತಿಯ ಕಾರಣ ಹೊಳೆದು ತಾನೂ ಶೂದ್ರನಾಗಿದ್ದೇನೆಯೇ ಎಂದು ಗಾಬರಿಯಾಗುವುದು. ತಾನು ಅವಳೊಡನೆ ತಿನ್ನುವ ಮಾಂಸ, ಮೀನು, ಕಲಿತುಕೊಂಡ ಸೆರೆ, ಸಿಗರೇಟುಗಳ ಚಟ…ಮತ್ತೆ ಮತ್ತೆ ಮನಸ್ಸು ಬುದ್ಧಿಗಳನ್ನು ಆವರಿಸಿ ಸ್ತಿಮಿತವನ್ನು ಕೆಡಿಸುವುದು.

ಮಕ್ಕಳಿಲ್ಲದ, ಸ್ವಂತ ಮಕ್ಕಳ ಮುದ್ದು ಮಾತುಗಳನ್ನು ಕೇಳುತ್ತ ಸ್ವರ್‍ಗಸುಖದಲ್ಲಿ ಬದುಕಿನ ಇತರ ಕಾಳಜಿಗಳನ್ನು ಮರೆಯುವ ಪುಣ್ಯವಿಲ್ಲದ ಬಾಳಿನ ವ್ಯರ್‍ಥತೆ ದಿನೇ ದಿನೇ ಬೆಳೆಯುತ್ತಿದ್ದುದನ್ನು ಕಂಡು ಹೆದರಿಕೆ ಹೆಚ್ಚುತ್ತಿತ್ತು. ಆ ಹೆದರಿಕೆಯಿಂದ ದೂರ ಸರಿಯಲು ತನ್ನಲ್ಲಿ ವೃತ್ತಿ, ಉದ್ಯೋಗ ವಿಲ್ಲದಿರುವುದು ಅವನಲ್ಲಿ ಹತಾಶತೆಯನ್ನು ಉಂಟು ಮಾಡಿತ್ತು. ಇದೆಲ್ಲ ತನ್ನಿಂದ ಇನ್ನು ಸಾಧ್ಯವಿಲ್ಲ. ಮುಂಗೋಪ, ನಿರಾಶೆ, ನಿಶ್ಯಕ್ತಿಗಳು ಹೆಚ್ಚುತ್ತಿರುವಾಗ ಮನುಷ್ಯ ಉಪಯುಕ್ತವಾದ ಏನನ್ನು ಮಾಡಬಲ್ಲ. ಈ ನಡುವೆ ಅವನು ಕಂಡ ದಾರಿಯೊಂದೇ….ಸಿಗರೇಟು, ದಿವಸಕ್ಕೆ ಒಂದೆರಡಾವರ್‍ತಿ ವಿಸ್ಕಿ, ಮನೆಯ ಕೋಣೆಗಳ ಆವರಣದಲ್ಲಿ ಬಿಗಿಯಾದ ಮೌನ.

ತನ್ನ ಮಲಗುವ ಕೋಣೆಯಲ್ಲಿ ಅವನ ಆರಾಮ ಕುರ್‍ಚಿ ದಾರಿ ಕಾಯುತ್ತಿತ್ತು. ಈ ಕುರ್‍ಚಿಯೆ ಈಗ ಆಸರೆ, ಆದರಿಂದ ಎದ್ದು ಪಕ್ಕದ ಮೆತ್ತನೆಯ ಮಂಚದಲ್ಲಿ ಮಲಗಿಕೊಳ್ಳಲು ಸುಸ್ತು. ಈ ಕುರ್‍ಚಿಗೂ ಅವನಿಗೂ ಯಾವ ಜನ್ಮದ ಋಣಾನು ಬಂಧವೋ…. ಸಂಬಂಧವೊ….. ಒಮ್ಮೊಮ್ಮೆ ಈ ಕುರ್ಚಿಯಲ್ಲಿ ಒರಗಿಕೊಂಡು ಹಾಗೇ ಸಾಯುವ ಯೋಚನೆ ಬಂದು ಸುಖವಾಗುವುದು. ತುಟಿಯ ಕೊನೆಯಲ್ಲಿ ನಗು ಮೂಡುವುದು.

ಇಂದು ಆ ಕುರ್‍ಚಿಯ ಬಳಿ ಬರುವ ಮೊದಲು ಹೊರಕೋಣೆಯ ಗಡಿಯಾರ ಮಧುರವಾಗಿ ಆರು ಸಲ ಬಡಿಯಿತು. ಆಗ ತನ್ನ ಪ್ರತಿದಿನದ ಪೆಗ್ಗಿನ ನೆನಪಾಯಿತು. ನಿನ್ನೆ ವಿಶೇಷವಾದ ಜ್ವರ ಮತ್ತು ಕಫ ಇದ್ದುದರಿಂದ ಕುಡಿದಿರಲಿಲ್ಲ. ಗಂಟಲು ಒಣಗಿದಂತಿತ್ತು. ಸಿಗರೇಟಿನ ಸಂಖ್ಯೆಯೂ ಕಡಿಮೆಯಾಗಿತ್ತು. ಡಾಕ್ಟರು ಸಿಗರೇಟು, ಸೆರೆ ತುಂಬ ಹಾನಿಕಾರಕವೆಂದು ಮತ್ತೆ ಎಚ್ಚರಿಸಿದ್ದರು. ಯಕೃತ್ತು ಉಬ್ಬಿದೆ, ಎದೆಯಲ್ಲಿ ಕಫ ಗಟ್ಟಿ ಕಟ್ಟಿದ ಸಂಗತಿಯನ್ನು ಮುದ್ದಾಮು ಹೇಳಿದ್ದರು. ಆದರೆ ಮನಸ್ಸಿನ ಅಶಾಂತಿಗೆ, ಜೀವ ಹಿಂಡುವ ರೋಗಕ್ಕೆ ಯಾವ ಮದ್ದು? ತನ್ನ ಹೆಂಡತಿ ಒಂದು ಮಗನನ್ನು ಕೊಟ್ಟು ನನ್ನನ್ನು ಈ ನಿರಂತರ ವ್ಯಥೆಯಿಂದ ಉಳಿಸಬಹುದಿತ್ತು. ಬ್ರಹ್ಮನಿಗೆ ಅದು ಇಷ್ಟವಿಲ್ಲ. ಅವನೂ ಪಕ್ಷಪಾತಿ. ಅವನು ಶೋಕೇಸಿನ ಹತ್ತಿರ ಬಂದು ಬಾಗಿಲು ತೆರೆದ. ವಿಸ್ಕಿಯ ಬಾಟಲಿಗೆ ಕೈಹಾಕುವಾಗ ಪಕ್ಕದ ಭಾವಚಿತ್ರ ಕಂಡಿತು ಮೃದುವಾಗಿ ನಗುವ ಎಳೆ ಮುಖ. ದೃಷ್ಟಿಯಲ್ಲಿ ಉಲ್ಲಾಸದಿಂದ ಕಾಂತಿ ಮಿಂಚಿತು. ಒಂದೇ ಸವನೆ ಆ ಮಗುವನ್ನು ನೋಡಿ ಮೈಮರೆತ. ಹಂಡತಿಯ ತಂಗಿಯ ಮೂರನೆಯ ಮಗು, ತಾವು ಪರಸ್ಪರ ಒಪ್ಪಿ ದತ್ತಕ್ಕೆ ಹಿಡಿದ ಮಗು.

ಆಗಲೆ ನೆನಪಿನ ಒಂದು ಸೆರೆ ನಿಧಾನವಾಗಿ ಮನಸ್ಸಿನಲ್ಲಿ ಸ್ಪುಟವಾಗಿ, ಮಗುವಿನ ಚಿತ್ರದ ಕನ್ನಡಿಯೊಳಗೆ ಕಾಣಿಸಿಕೊಂಡಿತು. ಕೆಲವು ವರ್ಷಗಳ ಹಿಂದೆ. ಹೆಂಡತಿಯ ತಂಗಿ ಈ ಮನೆಯಲ್ಲಿ ಉಳಿದು ಕೊಂಡಿದ್ದಳು. ಸುಂದರ ರೂಪ, ಮೈಗೆ ಉಷಾರಿಲ್ಲವೆಂದು ಒಮ್ಮೆ ಎರಡು ದಿನ ರಜೆ ಹಾಕಿ ವಿಶ್ರಮಿಸುತ್ತಿದ್ದಾಗ ಅವಳ ಮೇಲಿನ ಆಸಕ್ತಿ ಹೆಚ್ಚಿತ್ತು. ಮೈ ಮನಗಳ ಹುಚ್ಚು ಆಶೆ, ಇಬ್ಬರ ಮನಸ್ಸನ್ನೂ ಕಾಡಿತ್ತು. ಅವನಿಗೊಂದು ದೂರದ ಆಶೆ ಕೂಡ. ಅವನು ಕೇಳಿದ್ದ ‘ನನಗೊಂದು ಮಗು ಕೊಡು’ ಅವಳು ದಿಭ್ರಮೆಗೊಂಡು ನಿರಾಕರಿಸಿದ್ದಳು.

‘ನಿನ್ನ ಅಕ್ಕ ಬಂಜೆ…ಅವಳು ನನಗೆ ಮಗು ಕೊಡುವುದು ಈ ಜನ್ಮದಲ್ಲಿ ಸಾಧ್ಯವಿಲ್ಲ.’ ಅವಳು ಹೇಸಿದ್ದಳು. ಅವಳ ಭವಿಷ್ಯಕ್ಕೆ ಹೆದರಿ. ಅವನು ಪ್ರಜ್ಞೆಯಿಲ್ಲದೆ ಹಿಡಿಯಲು ಬಂದಾಗ ಜಾರಿಕೊಂಡು ಬಾಗಿಲ ತೆರೆದು ತಾಯಿ ಮನೆಗೆ ಓಡಿಬಿಟ್ಟಿದ್ದಳು. ಹೆಂಡತಿಗೆ ಇದರ ಸುಳಿವಾಗಿ ತಂಗಿಗೆ ಮದುವೆ ಯಾಗುವವರೆಗೂ ಮತ್ತೆ ಬರಲು ಬಿಟ್ಟಿರಲಿಲ್ಲ.

ಈ ಹುಡುಗ ಅವಳ ಮಗ. ಇಲ್ಲಿಯೇ ಬೆಳೆದಿದ್ದಾನೆ. ಶಾಲೆಯ ಕಾರಣದಿಂದ ತಾಯಿ ಮನೆಯಲ್ಲಿ ಇದ್ದಾನೆ. ನನ್ನದು ಅವನಲ್ಲಿ ಏನೂ ಇಲ್ಲ. ಇನ್ನೆರಡು ವರ್ಷಗಳಲ್ಲಿ ಮೆಟ್ರಿಕ್ ಮುಗಿಸುತ್ತಾನೆ. ಅವಳಿಗೆ ಅವನಲ್ಲಿ ಆಸೆಯಿದೆ, ಪ್ರೀತಿಯಿದೆ. ಆದರೆ ಒಮ್ಮೊಮ್ಮೆ ಆ ಹುಡುಗನಿಗೂ ಸತ್ಯಸಂಗತಿ ತಿಳಿದಿದೆ ಎಂದು ನೆನೆದಾಗ, ಅವನ ಒಲವು ಅವನ ತಾಯಿ ತಂದೆಗಳ ಕಡೆಗೆಯೆ ಹೆಚ್ಚು ಎಂದು ಕಂಡಾಗ ಆತೀವ ನೋವಾಗುತ್ತದೆ. ಅಳುತ್ತ ‘ಅವನು ನಮ್ಮ ಮಗನಲ್ಲ. ನನ್ನ ನಿಮ್ಮ ರಕ್ತವಲ್ಲ ಶಾಲೆಯ ರಜಾದಿನಗಳಲ್ಲೂ ಬರುವುದಿಲ್ಲ. ನಮಗೆ ಅವನಲ್ಲಿ ಅಧಿಕಾರವಿಲ್ಲ. ಅವನಿಗೆ ನಮ್ಮಲ್ಲಿ ಮೋಹವಿಲ್ಲ. ನಾವು ಮೋಹ ಮಾಡಿ ಮೋಸ ಹೋಗುತ್ತೇವೆ’ ಎಂದು ಹಲುಬುವಳು, ಅವಳ ಮಾತು ಸತ್ಯ. ಖಚಿತ, ಕಾನೂನಿನಿಂದ ಅವನು ನಮ್ಮದನ್ನು ಪಡೆಯಬಹುದು. ಆದರೆ ನಮ್ಮ ಪ್ರೀತಿಗೆ ಅವನು ಹಕ್ಕುದಾರನಲ್ಲ.

ಆ ಭಾವಚಿತ್ರದಿಂದ ದೃಷ್ಟಿ ಸರಿಸಿದಾಗ ಕಣ್ಣುಕತ್ತಲೆ ಬಂದಂತಾಯಿತು. ಅವನೆದುರು ಅಂಧಕಾರ ಹರಡಿ ಏನೂ ಕಾಣಿಸದಂತಾಯಿತು. ಎದೆಯಲ್ಲಿ ನೋವು ಕಾಣಿಸಿಕೊಂಡಿತು. ನಿಧಾನವಾಗಿ ನಿಯಂತ್ರಿಸಿಕೊಂಡು ವಿಸ್ಕಿಯ ಬಾಟಲಿಯನ್ನು ಹೊರತೆಗೆದು ಕುರ್‍ಚಿಯ ಬಳಿಗೆ ಸಾಗಿದ. ಎದುರಿನ ಟೀಪಾಯಿಯಲ್ಲಿ ಒಂದು ಗ್ಲಾಸು, ಸೋಸಿದ ನೀರು ಇರಿಸಿದ. ಸಿಗರೇಟಿನ ಪೊಟ್ಟಣ, ಕಡಲೆಯಕಾಳುಗಳು, ವೈಟರ್ ಫ್ಯಾನ್ ಹಾಕಿ ಕುರ್‍ಚಿಯಲ್ಲಿ ಒರಗಿ ದೀರ್‍ಘವಾಗಿ ಉಸಿರು ಬಿಟ್ಟ, ಹಾಯೆನಿಸಿತು. ಗ್ಲಾಸಿಗೆ ಮೊದಲ ಪೆಗ್ ಸುರಿಸಿ ನೀರು ಹಾಕಿ, ಸಿಗರೇಟು ಹಚ್ಚಿದ. ಇಂದು ಮನಸ್ಸು ತುಂಬ ಭಾರವಿದ್ದಂತೆ ಬೆಳಗಿನಿಂದ ಅನಿಸತೊಡಗಿತ್ತು. ಮಧ್ಯಾಹ್ನ ಫ್ರಿಜ್ಜಿನಲ್ಲಿಟ್ಟಿದ್ದ ಮೊಸರನ್ನ ಉಂಡು ಒಂದಿಷ್ಟು ಮಲಗುವ ಪ್ರಯತ್ನ ನಡೆಸಿದ್ದ. ನಾಲ್ಕರ ಸುಮಾರಿಗೆ ಎದ್ದು ಸಿಗರೇಟಿಗೆ ಹುಡುಕಿದಾಗ ಖಾಲಿ ಪಕೇಟು ಸಿಕ್ಕಿತು. ಅದಕ್ಕಾಗಿ ಅಂಗಿ ಧರಿಸಿಕೊಂಡು ಕೆಳಗೆ ಹೊರಟಿದ್ದ. ಮೊದಲೊಮ್ಮೆ ಬಾಲ್ಕನಿಗೆ ಬಂದು ಚೌಕಿದಾರನನ್ನು ಕರೆಯುವ ಇಚ್ಛೆಯಾಗಿತ್ತು. ಆದರೂ ಆಯಾಸವೆನಿಸಿದರೂ ತಾನೇ ಹೋಗಿದ್ದ. ಈ ದಿನಗಳಲ್ಲಿ ಪ್ರಾಯಕ್ಕೆ ಮೊದಲೆ ಅಶಕ್ತ, ಮುದುಕ, ದುರ್‍ಬಲನಾಗುತ್ತಿದ್ದುದು ಅವನ ಗಮನಕ್ಕೆ ಬರುತ್ತಿತ್ತು. ಮಾನಸಿಕವಾಗಿ ಕೊರತೆಯ ಅನುಭವ ಅವನನ್ನು ಕೊರೆಯುವುದು ಸ್ಪಷ್ಟವಾಗಿತ್ತು. ತಾನಿನ್ನು ಯಾವ ಲೆಕ್ಕದಲ್ಲಿಯೂ ಸಮರ್‍ಥನಾಗಿಲ್ಲ. ತನ್ನ ಬದುಕಿನ ದುಸ್ಥಿತಿ, ನಿರುಪಯುಕ್ತತೆ ಅವನ ಅಂತಃಕರಣವನ್ನು ಕರಗಿಸಿ ಕ್ಷೀಣಿಸಿತ್ತು.

ಗ್ಲಾಸನ್ನು ಎತ್ತಿ ಒಂದೊಂದೆ ಗುಟುಕುಗಳನ್ನು ಚಪ್ಪರಿಸಿ ನುಂಗಿದ ಕಡಲೆಯ ಹರುಳು ಬಾಯಲ್ಲಿ ಹೊರಳಾಡಿ ಅವನ ಹಲ್ಲುಗಳ ದೌರ್‍ಬಲ್ಯವನ್ನು ನೆನಪು ಮಾಡಿಕೊಟ್ಟಿತು. ತಾನು ಎಲ್ಲ ರೀತಿಯಿಂದಲೂ ಕ್ಷಯಿಸುತ್ತಿದ್ದೇನೆ. ಶರೀರ ಬಿದ್ದು ಹೋಗುವ ಸಿದ್ಧತೆಯನ್ನು ಮಾಡುತ್ತಿದೆ ಎಂಬ ಗುಮಾನಿಯಿಂದ ತುಸು ಭಯವಾಯಿತು. ಅದರ ನಿವಾರಣೆಗೆಂಬಂತೆ ಸಿಗರೇಟು ಉರಿಸಿ, ಹೊಗೆಯನ್ನು ಸುರುಳಿ ಸುರುಳಿಯಾಗಿ ಬಿಟ್ಟ. ಎರಡನೆಯ ಪೆಗ್ಗಿನ ಗುಟುಕುಗಳು ಗಂಟಲಿನಲ್ಲಿ ಇಳಿಯುತ್ತಿದ್ದಂತೆ ಹೊಗೆಯ ಸುರುಳಿ ಹೆಬ್ಬಾವಿನ ಆಕಾರವನ್ನು ಪಡೆದು ಸಂಕುಚನಗೊಳ್ಳಹತ್ತಿತ್ತು. ಅದರ ಸುತ್ತಿನಲ್ಲಿ ಒಂದು ಕ್ಷೀಣ ಜಂತು ಸಿಕ್ಕುಕೊಂಡು ವಿಲವಿಲ ಒದ್ದಾಡುವಂತೆ ಕಂಡಿತು. ಆ ತುಚ್ಚ ಜಂತು ಅವನ ರೂಪವನ್ನು ಪಡೆದು ಅಸಹಾಯಕವಾಗಿ ಬಡಿದಾಡಿತು. ಅವನು ಗಾಬರಿಯಿಂದ ಆ ಹೊಗೆಯನ್ನು ಚದರಿಸಲು ಯತ್ನಿಸಿದ. ಆದರೆ ಹೊಗೆ ದಟ್ಟವಾಗಿ ಹರಡಿಕೊಂಡಿತು.

ಮತ್ತೆ ಒಂದೇ ಸವನೆ ಕೆಮ್ಮು, ಕುಡಿದದ್ದನ್ನು ಕಾರುವ ಅಸಹ್ಯ ಕೆಮ್ಮು ಜೊತೆಗೆ ಎದೆಯಲ್ಲಿ ನೋವು. ಇವೆಲ್ಲ ತನ್ನನ್ನು ಒಯ್ಯಲು ಬಂದವುಗಳು. ಕುರ್‍ಚಿಯ ಕಾಲನ್ನು ಗಟ್ಟಿಯಾಗಿ ಹಿಡಿದು ಕೆಮ್ಮಿದ. ಬಾಯಿಯಿಂದ ರಕ್ತ ಚಿಮ್ಮಿದಂತೆನಿಸಿ ಭಯಭೀತನಾದ. ಕಣ್ಣಿಂದ ಅಸಹನೆಯ ನೀರು ಬಂದಿತು.

ಒಮ್ಮೆಲೆ ಅವನಿಗೆ ಮನೆ ಗುಯಿಂಗುಟ್ಟಿದಂತೆ, ಉಸಿರು ಕಟ್ಟಿದಂತೆ ಆಗಿ ಕಂಗಾಲಾದ. ಅಲ್ಲಿಯ ಪ್ರತಿಯೊಂದು ವಸ್ತುಗಳು ನಕ್ಕವು. ಮಾತಾಡಿದವು-

‘ನಿನ್ನ ರಸಾಯನ ಶಾಸ್ತ್ರದ ವಿದ್ಯೆ ಪ್ರಯೋಜನಕ್ಕೆ ಬರಲಿಲ್ಲ’.

‘ನಿನ್ನ ನೌಕರಿ ಒಂದಲ್ಲ, ಎರಡಲ್ಲ ನಾಲ್ಕಾರು ಕೈ ಬಿಟ್ಟವು ಒಂದರಲ್ಲಿಯೂ ಹೊಂದಿಕೊಳ್ಳುವ ಮನೋಬಲ ನಿನಗೆ ಬರಲಿಲ್ಲ.’

‘ನಿನ್ನ ವೀರ್‍ಯ ಹೆಪ್ಪುಗಟ್ಟಿತು. ಹೆಂಡತಿಗೊಂದು ಮಗುಕೊಡಲು ನಿನಗಾಗಲಿಲ್ಲ.’

‘ಅವಳು ನಿನ್ನೊಡನೆ ಯಾತನೆ ಪಟ್ಟಳು. ನಿನಗಾಗಿ ದುಡಿದು ಶಕ್ತಿ ಮೀರಿ ನೋಡಿಕೊಂಡಳು. ನಿನ್ನಿಂದ ಅವಳಿಗೆ ಸುಖಶಾಂತಿ ಸಿಗಲಿಲ್ಲ. ಬದಲು ನಿನ್ನನ್ನು ಮದುವೆಯಾಗಿ ತನ್ನಿಂದ ತಪ್ಪಾಗಿದೆ ಎಂದು ಪಾಪಭೀರುವಾಗಿ ಇಷ್ಟು ವರ್‍ಷ ನೋವನ್ನು ಮೌನವಾಗಿ ಸಹಿಸಿದಳು.’

‘ಅವಳ ತಂಗಿಯನ್ನು ಕೆಡಿಸುವ ಆಶೆಯಾಯಿತು ನಿನಗೆ.’

‘ಒಬ್ಬ ತಂದೆಯಾಗುವ ಭಾಗ್ಯ ನಿನಗಿಲ್ಲ. ಶಕ್ತಿ ನಿನ್ನಲ್ಲಿಲ್ಲ’ ‘ನೀನು ಕಂಪನಿ, ನೆರೆಕರೆಯವರೊಡನೆ ಜಗಳಾಡಿದೆ. ನಿಷ್ಠುರ ಕಟ್ಟಿಕೊಂಡೆ. ಈಗ… ನಿನಗೆ ಮಿತ್ರರಿಲ್ಲ..’

‘ನೀನು ಜೀವನದಲ್ಲಿ ಮಾಡಿದ್ದೇನು…ಸಾಧಿಸಿದ್ದೇನು?’ ಅವನು ಸಿಟ್ಟಿನಿಂದ ಎದ್ದ. ಕಾಲು ಬಲ ಕಳಕೊಂಡು ನಡುಗಿತು. ಕೈಗೆ ಸಿಕ್ಕಿದ ಒಂದೆರಡು ವಸ್ತುಗಳನ್ನು ನೆಲಕ್ಕೆ ಅಪ್ಪಳಿಸಿದ. ಗ್ಲಾಸಿಗೆ ಇನ್ನಷ್ಟು ವಿಸ್ಕಿ ಸುರಿದು ಹೊರ ಕೋಣೆಗೆ ಮಾಲುತ್ತ ಬಂದ. ಟೀಪಾಯಿಯ ಮೇಲಿನ ಪತ್ರಿಕೆಗಳಿಗೆ ಕೈ ಹಾಕಿದ. ಕಣ್ಣಿಗೆ ಕತ್ತಲು ಕಂಡಿತು. ಸ್ವಿಚ್ ಹಾಕಿ ಬೆಳಕು ಮಾಡಿದ. ಗ್ಲಾಸಿನದನ್ನು ಗುಟುಕರಿಸಿ ಸಮಯ ನೋಡಿದ. ಹೆಂಡತಿ ಬರುವ ಹೊತ್ತಾಗ ಹತ್ತಿದೆ. ಎದೆಯ ಬಡಿತ ಹೆಚ್ಚಾಯಿತು. ಮನಸ್ಸಿನ ಉದ್ವೇಗ ಇಮ್ಮಡಿಸಿತು. ಹೊಟ್ಟೆಯೊಳಗೆ ಅಸಹ್ಯ ಸಂಕಟವಾಯಿತು. ಅವಳ ಹೆದರಿಕೆಗಿಂತ ಅವಳಲ್ಲಿ ಮರುಕವುಂಟಾಯಿತು. ಹತಭಾಗ್ಯ ಆಯೋಗ್ಯ ನಾನು ಅವಳಿಗೊಂದು ಮಗು ಕೊಡುವ ಪುರುಷತ್ವ ತನ್ನಲಿಲ್ಲ. ದತ್ತ ಪಡೆದ ಮಗನನ್ನು ತನ್ನದೆಂದು ಸ್ವೀಕರಿಸಲು ಮನಸ್ಸು ಈವರೆಗೂ ಒಪ್ಪಿರಲಿಲ್ಲ. ಇಂದು ಅವಳಿಗೆ ‘ನನ್ನ ಚಿತೆಗೆ ದತ್ತು ಪುತ್ರ ಬೆಂಕಿ ಕೊಡುವುದು ಬೇಡ, ಊರಿನಿಂದ ತಂದೆ ಬರಲಿ’ ಎಂದು ಖಂಡಿತವಾಗಿ ಹೇಳಿಬಿಡಬೇಕೆಂದು ನಿರ್‍ಧರಿಸಿದ. ಅವಳ ಹೊಟ್ಟೆಯಲ್ಲಿ ತನ್ನ ಬೀಜ ಉಳಿಯದಿರಲು ತನ್ನ ಅಪರಾಧವೆ ಕಾರಣ. ತಾನು ಸನಾತನ ಬ್ರಾಹ್ಮಣನಾಗಿ, ಹಿರಿಯರ ಮಾತು ಮೀರಿ ಬೆಳಿಸಿದ ಹೆಣ್ಣ ಸಂಬಂಧಕ್ಕೆ ಬಿದ್ದ ಶಾಪವಿದು. ನಿಶ್ಚಯ ಎಂದು ಅವನ ಮನಸ್ಸು ಮತ್ತೆ ಮತ್ತೆ ಹೇಳಿತು. ಆ ವಿಚಾರ ತಲೆಗೇರಿ ತಲೆ ತಿರುಗಿ ಕೊಂಡಂತಾಯಿತು.

ಆಗ ಕರೆಗಂಟೆ ಬಾರಿಸಿತು. ಮೊದಲು ಅವನಿಗೆ ಹಿಡಿದ ಗುಂಗಿನಿಂದಾಗಿ ಕೇಳಿಸಲಿಲ್ಲ, ಸ್ವಲ್ಪ ಹೊತ್ತಿನ ನಂತರ ತಿಳಿದು ಏಳುವ ಪ್ರಯತ್ನ ಮಾಡಿದ. ಗ್ಲಾಸಿನಲ್ಲಿ ಇದ್ದುದನ್ನು ಬಗ್ಗಿಸಿದ. ಒಂದು ಸಿಗರೇಟು ಹಚ್ಚಿದ. ಏಳುವಾಗ ಕಾಲು ನೆಲದಲ್ಲಿ ಉಳಿಯಲಿಲ್ಲ. ಮೈ ಆಯ ತಪ್ಪಿ ತೂರಾಡಿತು, ತಲೆಯಲ್ಲಿ ಸುತ್ತುವ ಚಕ್ರದ ಗತಿ ತೀವ್ರವಾಯಿತು. ಬಾಗಿಲವರೆಗೆ ಹೇಗಾದರೂ ಬಂದು ಕದ ಸರಿಸಿದ, ಮೈ ಉರುಳುವುದೆಂದು ಖಾತ್ರಿಯಾಯಿತು.

ಒಳಹೊಕ್ಕ ಹೆಂಡತಿ ಬಾಗಿಲು ಮುಚ್ಚಿ ಅವನನ್ನು ಬಿಗಿ ಹಿಡಿದು ದಿವಾನಿನತ್ತ ಎಳಕೊಂಡು ಬಂದು ಒರಗಿಸಿದಳು.

‘….ಚಿತೆಗೆ ಅವನು ಬೆಂಕಿ ಕೊಡುವುದು ಬೇಡ…’ ಎಂದು ಆತ ಬಡಬಡಿಸಿದಾಗ ಹೆಂಡತಿ ನಿಂತುಕೊಂಡಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನ ಅಭಿಮಾನದಿ
Next post ಕನ್ನಡ ಪ್ರೇಮ

ಸಣ್ಣ ಕತೆ

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…