ಹಳ್ಳಿ…

ಹಳ್ಳಿ…

ಬಂಗಾರ ಬಣ್ಣದ ಕಾರು, ವೇಗವಾಗಿ… ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ? ಅತ್ಯಾಕರ್ಷಕವಾದ ಸ್ಪಿಯರಿಂಗ್, ಮೃದುವಾದ ಗೇರುಗಳು, ಚಾಲಕನ ರಕ್ಷಣೆಗೆಂದೇ ಏರ್‍ಬ್ಯಾಗ್ ಕಂಡು, ರೆಕ್ಕೆ ಬಂದ ಹಕ್ಕಿಯಾಗಿ, ಲೆಕ್ಕತಪ್ಪಿದ ವೇಗದಲ್ಲಿ ಕಾರು ಓಡಿಸತೊಡಗಿದ. ಅದಕ್ಕಿಂತ ವೇಗವಾಗಿ ತನ್ನ ಮನಸ್ಸು ಓಡುತ್ತಿತ್ತು.

ಬಹಳ ವರ್ಷಗಳ್ಮೇಲೆ ತಾಯ್ನಾಡಿಗೆ ಬರುತ್ತಿದ್ದ. ಸ್ವರ್ಗ ಭೂಮಿಗಿಳಿದಷ್ಟು ಖುಷಿ ಅವನಲ್ಲಿತ್ತು. ತಾನುಟ್ಟಿ ಬೆಳೆದ ಮನೆಗೆ, ಕಾಲಿಡುವ ಭಾಗ್ಯವ ನೆನೆದ ‘ಸಣ್ಣಕುಲ್ಡಣ್ಣ’ ಉರುಫ್ ಡಾ|| ಸಂತಪೀಟರ್ ಪುಲಕಿತನಾದ.

ಕೋಟಿ, ಕೋಟಿ, ರೂಪಾಯಿ ಇದ್ದಾಗ ಆಗ್ದ ಸಂತೋಷಕ್ಕಿನ್ನ ಮಿಗಿಲು, ಮುಗಿಲಲ್ಲಿ ತೇಲಿದ್ದ. ತಾನುಟ್ಟಿ ಬೆಳ್ದ ಹಳ್ಳಿ, ಮನೆ, ನೆರೆಹೊರೆ ಸ್ವರ್ಗಸಮಾನ! ಹಳ್ಳಿಕಡೆ ಕರುಳು ಎಳೀತಿತ್ತು. ಹೆಂಡ್ತಿ ಮಕ್ಕಳೊಟ್ಗೆ, ಅಮೆರಿಕಾದಿಂದ ರಜಾದ ಮೇಲೆ, ಮಜವಾಗಿದ್ದು ಹೋಗಬೇಕೆಂಬ ಉದ್ದೇಶದಿಂದಲೇ… ವರ್ಷದಿಂದ ಯೋಚಿಸಿ, ಕೊನೆಗೆ ಹೊರಟು ಬಂದಿದ್ದೇ ದೊಡ್ಡ ಪವಾಡವೆನಿಸಿತ್ತು!

ದಿನ ಬೆಳಗಾದ್ರೆ ಸಾಕು… ಯಾಂತ್ರಿಕ ದುಡಿಮೆಯಿಂದ, ಬೇಸತ್ತ ಜೀವಕ್ಕೆ, ಹಿತವೆನಿಸಿತ್ತು. ಅದೇ… ಬಂಗ್ಲೆ, ಆಸ್ಪತ್ರೆ, ರೋಗಿಗಳು, ಸಂಶೋಧನೆ, ಪ್ರಯೋಗ, ಸೆಮಿನಾರುಗಳು, ಮೀಟಿಂಗ್‌ಗಳ ಒತ್ತಡದ ಗೂಡಲ್ಲಿ ಹೆಂಡ್ತಿ ಮಕ್ಕಳೂ ಕೂಡ… ನಿಗೂಢರೆಂಬಂಥಾ… ತುರ್ತು ಪರಿಸ್ಥಿತಿಯಿಂದ, ಮೊತ್ತ ಮೊದಲ ಸಲವೆಂಬಂತೆ… ಬಿಡುಗಡೆಯ ಬೇಡಿ ಕಳಚಿ, ಹೊರಟು ಬಂದ್ದಿದ್ದೀಗ… ಬಹಳ ನಿರುಮಳೆನ್ಸಿತ್ತು!

ಮೂವತ್ತು ದಿನಗಳು ಅಬ್ಬಾ! ಅಂದರೆ… ಒಂದು ತಿಂಗಳು ಕಾಲ, ತನ್ನಳ್ಳಿಯ ಪರಿಸರದಲ್ಲಿ… ಅದೂ ಬಾಲ್ಯದ ಗೆಳೆಯರೊಟ್ವಿಗೆ, ತೃಪ್ತಿಯಿಂದಿರಬೇಕೆಂಬಾ ಮಹಾದಾಲೋಚನೆಯಲ್ಲೇ, ಕಾರು ಅದಷ್ಟಕ್ಕೆ ಅದೇ… ವೇಗವಾಗಿ ಓಡುತ್ತಿತ್ತು! ಹಳ್ಳಿ ಎಷ್ಟೊಂದು ಬದಲಾಗಿ ಮುಂದುವರ್‍ದಿರಬಹುದೆಂದೂ ಯೋಚಿಸತೊಡಗಿದಾಗಲೆಲ್ಲ… ಈ ರಸ್ತೆಯ ತಗ್ಗುದಿನ್ನೆಗಳು, ಥೂ ಹೊರದೇಶದ ರಸ್ತೆಗಳಿಗೆ, ಇಲ್ಲಿನ ರಸ್ತೆಗಳಿಗೆ, ಎಷ್ಟೊಂದು ವ್ಯತ್ಯಾಸ? ನಮ್ಮಲ್ಲಿ ಇನ್ನು ಬದಲಾಗದ ರಸ್ತೆಗಳು! ರಸ್ತೆಗಳು ಅಭಿವೃದ್ಧಿಯ ಸಂಕೇತ. ಓಬಿರಾಯನ ಕಾಲದ, ಹದಗೆಟ್ಟ ರಸ್ತೆಗಳಿವೆ. ಅಶೋಕನ ಕಾಲದಲ್ಲಿ… ರಸ್ತೆ ಬದಿಗೆ ಸಾಲುಸಾಲಾಗಿ… ಎರಡು ಕಡೆಗಳಲ್ಲಿ ನೇರಳೆ, ಹತ್ತಿ, ಹಲಸು, ಮಾವು, ಬೇವು, ಹುಣಿಸೆ, ಆಲದ, ರಾಗಿಯ ಬೆಳ್ವಿನಾ… ಮರಗಳೂ ಸೊಂಪು… ಸೊಂಪಾಗಿ, ಬೆಳೆದು ನಿಂತಿದ್ದ ನೆನೆದ.

ಸಾವಿರಾರು ವರ್ಷಗಳಿಂದ ಹೆಮ್ಮರಗಳಾಗಿ, ಹೆದರಿಕೆ ಬರುವಂತೆ, ಬೆಳೆದು ದಾರಿಹೋಕರಿಗೆ, ಪಶುಪಕ್ಷಿಗಳಿಗೆ, ಮಳೆ, ಗಾಳಿ, ಬಿಸ್ಲಿಗೆ… ನೆರಳು ನೀಡಿದ ಸಾಲುಮರಗಳ ರಸ್ತೆ ಬರಲಿಲ್ಲ. ಇನ್ನು ಕಾಣಲಿಲ್ಲವಲ್ಲಾ… ಎಂಬ ಕಳವಳದಲ್ಲೇ… ಕಾರು ಓಡಿಸತೊಡಗಿದ್ದ. ಬಹೂಪಯೋಗಿ, ಪ್ರಗತಿಯ ಹೆಸರಿನಲಿ, ಮಾರಣಹೋಮ ಮಾಡಿರುವುದಕ್ಕೆ ಮಮ್ಮಲ ಮರುಗಿದ. ಇತ್ತ ಪ್ರಗತಿನೂ ಇಲ್ಲ, ಅತ್ತ ಮರ, ಗಿಡ, ಬಳ್ಳಿ, ಹಣ್ಣು ಹಂಪಲು, ಪರಿಸರನೂ ಇಲ್ಲವೆಂಬ ಕೊರಗು ಕರುಳ ಹಿಂಡಿತು. ಮರಳಿ ಹೊರದೇಶದ ನೆನಪು ತಂತು.

ತನ್ನನ್ನು ತಾನು ಸಂತೈಸಿಕೊಂಡು, ಕಾರಿನ ವೇಗ ಆಕ್ಷಣ ತಗ್ಗಿತು. ತಾನೇ ಉದ್ದೇಶಪೂರ್ವಕವಾಗಿ ತಗ್ಗಿಸಿದ. ಹೆಂಡ್ತಿ ಮಕ್ಕಳಿಬ್ದರು ಸುಖವಾಗಿ ನಿದ್ರಿಸುವುದು, ದಡಲ್ ಬಡಲ್… ಎತ್ತೆತ್ತಿ ಹಾಕುವ… ರಸ್ತೆಯಿಂದ ಅಡ್ಡಿಯಾಗಬಾರದೆಂದು, ಕಾರನ್ನು ಡೆಡ್‌ಸ್ಲೋ ಮಾಡಿ, ಮರಳ ಗಾಡಿನ ರಸ್ತೆಗೆ ತಂದ. ಸಾಲು ಸಾಲು ಮರಗಳು ಮುಗಿಲ ಮಾರಿಗೆ, ರಾಗ ರತಿಯಂತೆ, ಮೈಮರೆತು ತೊನೆಯುತ್ತಿದ್ದ, ಕಾಲ ನೆನೆದ.

ರಸ್ತೆಯ ಇಕ್ಕೆಲಗಳಲ್ಲಿ, ಆಗ ನಡೆದು ಹೋಗುತ್ತಿದ್ದ, ಹಿತವಾದ ಅನುಭವಕ್ಕೆ, ಜಾರಿದ. ಹಸಿದ ಹೊಟ್ಟೆಯಲ್ಲಿ ಮರಕೋತಿಯಾಡಿದ ನೆನಪು. ಬಚ್ಚಿಟ್ಟುಕೊಂಡು ಕಾಡುವ ನೆನಪು, ಕಳ್ಳ ಪೊಲೀಸ್ ಆಟ, ಬಕ್ಣ ತುಂಬಾ ಹಣ್ಣುಗಳನ್ನು ಆರ್‍ಸಿ ಆರ್‍ಸಿ ತುಂಬ್ಸಿಗೊಂಡಿದ್ದು ಸಾಲದೆ, ಆಸೆಯಲಿ, ಅಂಗಿ ಬಟ್ಟೆಯಲ್ಲಿ, ಆರ್‍ಸಿ ಹಾಕ್ಕೊಂಡು ಮನೆ ತಲುಪುತ್ತಿದ್ದ, ಪರಿ ಏನೆಲ್ಲ ನೆನಪುಗಳು ಒತ್ತರ್‍ಸಿಕೊಂಡು… ಬರತೊಡಗಿದವು.

ತನ್ನಳ್ಳಿಯ ದಾರಿಯಿದೆಂದು ಖಾತ್ರಿ ಮಾಡಿಕೊಂಡ. ಆದರೆ ಸಾಲು ಸಾಲು ಮರಗಳಿಲ್ಲ. ಯಾರನ್ನು ಕೇಳಲಿ? ಎಲ್ಲವೂ ಇಲ್ಲಿ ಬಟಾಬಯಲು, ಉರಿ ಉರಿ ಬಿಸಿಲು, ಬಿಸಿ ಗಾಳಿ ಮುಖಕ್ಕೆ ರಾಚುತ್ತಿತ್ತು.

ಬೆಳ್ಳಂಬೆಳಿಗ್ಗೆ… ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ… ಬಂದಿಳಿದಾಗಲೇ ಕಾರು, ಕಾರಿನ ಜೊತೆ ಐದಾರು ಜನ ಫ್ರೆಂಡ್ಸ್ ಇದ್ದರು. ‘ನ್ಯೂಬ್ರಾಂಡ್ ಕಾರು, ನನಳ್ಳಿಗೆ ಹೋಗಿ ಬರಲು ಯಾಕ್ರೋ ಇಂಥಾ ಕಾರು? ನಾವೆಲ್ಲ ಎತ್ತಿನ ಬಂಡಿ, ಸೈಕಲ್, ಟ್ರ್ಯಾಕ್ಟರ್, ಟೈರ್ ಬಂಡಿಗಳಲ್ಲಿ… ಅಡ್ಡಾಡಿದವ್ರು, ಅದೂ ಸಾನೇ ವರುಸುಗಳ್ಮೇಲೆ ಹೋಗುತ್ತಿರುವೆ ಎಂದು ಪೀಟರ್ ತನ್ನ ಹಳೆತನವನ್ನು ನೆನಪಿಸಿದ.

‘ನೀನೀಗ ಸಣ್ಣಕುಲ್ಡಣ್ಣನಲ್ಲಪ್ಪಾ? ದೇಶ ವಿದೇಶಗಳ ಡಾಕ್ಬರ್! ವಿಶ್ವದಲ್ಲೇ ಖ್ಯಾತಿವೆತ್ತ ಡಾಕ್ಟರ್. ನಮ್ಮ ಹಳ್ಳಿ ಕಡೆ, ಸರಿ ಹೊಂದುವ ಹೊಚ್ಚ… ಹೊಸ ಕಾರನ್ನೇ ನಿನ್ಗೆ ನಾವೆಲ್ಲ… ಗಿಫ್ಟಾಗಿ ನೀಡಿದ್ದೇವೆ. ಇಟ್ಸ್ ಅವರ್ ಪ್ಲೆಜರ್, ಟೆನ್ಶನ್ ಇಲ್ದೆ ನೀ ಹೋಗಿಬಾ! ಬಹಳ ವರ್ಷಗಳ ಮೇಲೆ, ನಮ್ಮೂರಿಗೆ ಬಂದೀಯಾ…’ ಎಂದು ಫ್ರೆಂಡ್ಸ್… ಕೈಕೈ ಕುಲುಕಿದ್ದನ್ನು ನೆನೆದ.

ಕೆಂಧೂಳ ಕೈಲಾಸಕ್ಕೆ ಹಾರುತ್ತಿದೆಯೆಂದ್ಮೇಲೆ… ತಿಂದುದ್ದೆಲ್ಲ ಕಾರಿಕೋ ಬೇಕೆಂಬಷ್ಟು ಹೇಲ್‌ಜೋರ್‍ನಿ ಮಡ್ಸುವಾಸ್ನೇ ಬಂದ್ರೆ… ನನ್ನಳ್ಳಿ ಬಂದಿತೆಂದೇ ಅರ್ಥ. ಬಯಲುದೆಸೆಗೆ ಯೀ ದೇಶ್ದಲ್ಲಿ… ಪರಿಹಾರವಿಲ್ಲವೆಂದ್ಮೇಲೆ… ಪರಿಸ್ಥಿತಿ ಯೆಶ್ಟು… ಗಂಭೀರವೆನಿಸಿತು. ಮೂಗ್ಹಿಡಿದು… ಹಳ್ಳಿದಾಟಿ, ಒಂದರ್ಧ ಕಿಲೋಮೀಟರ್ ದಾಟ್ದ್ರೆ ಕೇರಿ! ಕೇರಿಯ ಆರಂಭಕ್ಕೆ ಮನೆ.

ಕೇರಿಯೆಂದ್ರೆ; ಕೊಳೆಗೇರಿ, ತಿಪ್ಪೇಗುಂಡಿ, ತಗ್ಗುದಿನ್ನೆ… ಬಯಲು ದೆಸೆಗೆಂದು… ಮೀಸಲಿಟ್ಟಿರುವ ಸಂಧುಗೊಂದಲದಲ್ಲಿ… ಅದೇ ತಾನುಟ್ಟಿ ಬೆಳೆದ, ಐವತ್ತು ಕಲ್ಲು ಮಣ್ಣಿನ ಹಳೇಮನೆಗಳು. ಕೇರಿಗೆ ಆಹ್ವಾನಿಸಲೆಂಬಂತೆ, ಹತ್ತಾರು ನಾಯಿಕುನ್ನಿಗಳ ಬೀಡು. ತಾನುಟ್ಟಿ ಬೆಳೆದ, ಮನೆಯೆಂದು, ಅಂದಾಜಿಸಿ ಕಾರು ನಿಲ್ಸಿದ ರಭಸಕ್ಕೆ ಹೆಂಡ್ತಿ ಮಕ್ಳು ಎಚ್ಚರಗೊಂಡರು. ಎಲ್ಲರೂ ಕಾರಿನಿಂದಿಳಿದರು. ಭೂಮಿಗಿಳಿದಂತಾಯಿತು. ನರಕ ದರ್ಶನವಾದಂತಾಯಿತು.

ಕೇರಿಜನರು ವಿಹ್ವಲರಾಗಿ ಕಾರಿನಿಂದಿಳಿದವರಿಗೆ ಯಿರ್ವೆಯಂಗೇ ಮುತ್ತಿಕೊಂಡರು, ಊರು ಕೇರಿಯನ್ನು ಜನ್ರನ್ನು ಕಂಡು, ಸಂತಪೀಟರ್ ಕುಸಿದ. ಹಾದಿತಪ್ಪಿ ಬಂದಿರುವೆನೋ… ಏನೋ ಎಂಬ ಚಿಂತೆ ಶುರುವಾಯಿತು. ಬದಲಾಗದ ಸ್ಥಿತಿಗತಿಗೆ ಮರುಕಗೊಂಡ. ಅದೇ ಕೆದರಿದ ತಲೆಗಳು. ಎಣ್ಣೆಕಾಣದ ಕೂದಲು, ಹರಕು ಬಟ್ಟೆ, ತಿರುಕರಪಾಡು, ಗುಳಿಬಿದ್ದ ಕಣ್ಣು, ಅಸ್ಜಿಪಂಜರದಂತೆ ದೇಹ ಕಂಡು, ಸುಡುಗಾಡಿನಿಂದ ಎದ್ದೆದ್ದು… ಬಂದವರಂತೆ ಕಂಡರು! ಊರೋ ಸುಡುಗಾಡೋ… ಆ ಕ್ಷಣ ತಿಳಿಯದಾಯಿತು. ಮನೆಗಳೋ ಹರಕು, ಮುರುಕು. ಭೂಕಂಪಕ್ಕೋ, ಸುನಾಮಿಗೋ ತತ್ತರಿಸಿದಂತೆ… ಕೊಳ್ಳೆ ಹೊಡೆದ ಸ್ಥಿತಿಯಂತೆ… ಊರುಕೇರಿ ಕಣ್ಣಿಗೆ ಒಮ್ಮೆಲೆ ರಾಚಿತು. ಇದೇನು ಕೇರಿಯೋ… ನರಕದ ಹೆಬ್ಬಾಗಿಲೋ… ಮೇಲೆ ಕೆಳಗೆ ನೋಡಿದರು.

ಆಕ್ಷಣ ಬಾಯಿ ಬಾಯಿ… ಒಣಗಿ. ಕೈಕಾಲು ಸೋತು. ಬಂದ ತಪ್ಪಿಗೆ, ಕಾರಿಗೆ ಆನಿ ನಿಂತ! ಕನ್ನಡಕ ಸರಿಪಡಿಸಿಕೊಂಡ.

‘ಯಾರು ಬೇಕು ಸ್ವಾಮಿಽ…’ ಮುದುಕಪ್ಪ, ತನ್ನ ಕನ್ನಡಕ ಸರಿಪಡಿಸಿಕೊಂಡು. ಕೇಳಿದ ವ್ಯಕ್ತಿ, ತ್ವಗಲು ಎಮಿಕೆ, ಮಾತ್ರ ಹೊತ್ತಿದ್ದ. ಬಾಗಿದ ಬೆನ್ನಿಗೆ ಕೋಲು ಆಧಾರ ಕಂಡು ಬಂದು, ಕೇಳಿದ ಪ್ರಶ್ನೆಗೆ ಯಾರೆಂದು ಹೇಳಬೇಕೆಂದು ಕಂಗಾಲಾಗಿ ಡಾ|| ಪೀಟರ್ ನಿಂತ.

ಗಾಜು ಸರಿಪಡಿಸಿಕೊಂಡು, ಮುದುಕಪ್ಪ ‘ನೀವೆಲ್ಲಿಂದ ಬಂದ್ರೀ? ಯೇನು ಬೇಕಾಗಿತ್ತು?’ ಮತ್ತೂ ಪಶ್ನಿಸಿದವುಗಳಿಗೆ, ಉತ್ತರಗಳಿಲ್ಲವೆಂಬಂತೆ ಕಾರಿನಿಂದಿಳಿದವರು… ಗರಬಡಿದಂತೆ ಕೇರಿಗರನ್ನು ನೋಡುತ್ತಲೇ… ನಿಂತಿದ್ದರು.

ಮಕ್ಳುಮರಿ ಕಾರನ್ನು ಮುಟ್ಟುವುದೋ ಬೇಡವೋ ಎಂಬಂತೆ ಹೆದರಿ ನಿಂತಿರುವುದನ್ನು ಕಂಡು, ‘ಯೇ ಅಲ್ಲೇನು ಕೆಲ್ಸ? ಅಲ್ಲಿಗೇನು ವೋಗ್ತೀರಿ?! ಯಿಲ್ಲಿ ಬರ್ರೋಽ….’ ಎಂದು ಕೇರಿಯ ಮುದುಕಿ, ಸಣ್ಣಪುಟ್ಟ ಮಕ್ಕಳನ್ನು ಬಿಡದೆ, ಗದರಿದಳು.

‘ನಾವು ಹೊರದೇಶದಿಂದ ಬಂದೀವಿ. ಇಲ್ಲಿ ರಾಜಪ್ಪ, ರಂಗಣ್ಣನವ್ರ ಮನೆಗಳೆಲ್ಲಿ?’ ಡಾ|| ಸಂತಪೀಟರ್ ಮುದುಕಪ್ಪನ ಮೆತ್ತಗೆ ಕೇಳಿದ. ಮುದುಕಪ್ಪನಿಗೆ ಇವರ ಮಾತು, ಕತೆ, ಹಿನ್ನಲೆ… ಏನೊಂದೂ ಅರ್ಥವಾಗಲಿಲ್ಲ.

‘ಸ್ವಾಮಿ, ನೀವು ನೊಡ್ದ್ರೆ… ವಳ್ಳೆ ರಾಜ ರಾಣಿ ಯಿದ್ದಂಗಿದ್ದೀರಿ. ಅವ್ರ್ನ ತಗೊಂಡು ಯೇನಾ ಮಾಡೀರಿ ಬುದ್ಧಿ…?! ಅವ್ರು ಯಂಡ್ರು ವೂರುಗಳ ಸೇರ್‍ಕೊಂಡ್ರು’ ಮುದುಕಪ್ಪ ಉಸಿರು ಬಿಗಿ ಹಿಡಿದು ಮಾತಾಡಿದ.

ಡಾ|| ಸಂತಪೀಟರ್, ಕರ್ಚೀಫ್‌ನಿಂದ ಕಣ್ಣೀರು ಒರಿಸಿಕೊಂಡಿದ್ದು ಕಂಡು… ಕೇರಿಗರು ಸಪ್ಪೆ ಮೋರೆ… ಮಾಡಿಕೊಂಡು, ಮುದುಕಪ್ಪ, ‘ನಾವೇನನ್ನ ತಪ್ಪು ಮಾತಾಡಿದ್ವ ಬುದ್ಧಿ? ಬ್ಯಾಸ್ರ ಮಾಡ್ಕೋಬ್ಯಾಡ್ರಿ. ನಮ್ ಮಾತುಗಳೇ ಯಿಂಗೇ… ಅಂದಂಗೆ ನೀವ್ಯಾರು ಅಂತಾನೇ… ಹೇಳಿಲ್ಲವಲ್ಲಾ? ಎಂದ. ‘ನಾನು ಡಾ|| ಸಂತ ಪೀಟರ್ ಅಂತಾ ಯಜಮಾನ್ರೇ… ಇವಳು ನನ್ನೆಂಡ್ತಿ ಡಾ|| ಮೇರಿ ಅಂತಾ, ಮಕ್ಳು ಇಬ್ಬರೂ ಡಾಕ್ಟರ್‌ಗಳು.

‘ಅಂಗೆಂದ್ರೆ ನಮ್ಗೇನು ತಿಳಿದೀತು ಬುದ್ಧಿ…? ಅಕ್ಸರ ಕಲಿತವರಲ್ಲ ಬುಡ್ರೀ…’ ಎಂದು ಮುದುಕಪ್ಪ ಮುಖಸಪ್ಪಗೆ ಮಾಡಿಕೊಂಡು, ಎರಡು ಹೆಜ್ಜೆ ಹಿಂದೆ ಸರಿದು, ನಿಂತವನ ಹತ್ತಿರ, ಇವರೇ ಹೋಗಿ ನಿಂತು:

‘ಯಜಮಾನ್ರೇ ನೀವ್ಯಾರು? ಅಂತಾ… ನನ್ಗೆ ಗೊತ್ತಾಗಲಿಲ್ಲ?’ ಡಾ|| ಸಂತಪೀಟರ್… ಮುದುಕಪ್ಪನನ್ನು ಅಕ್ಕರೆಯಿಂದ ಪ್ರಶ್ನಿಸಿದ.

‘ನಾನೇ ಬುದ್ಧೀ… ದೊಡ್ಡಕುಲ್ಡುನ ಮಗ… ದೊಡ್ಡ ಮಾರೆಪ್ಪ ಅಂತಾ… ನನ್ನ ಮೊಮ್ಮಕ್ಳು.. ಮರಿಮೊಮ್ಮಕ್ಳು… ಇವೆಲ್ಲ ಬುದ್ಧಿ… ಎಂದು, ಬೊಟ್ಟು ಮಾಡಿ, ತೋರ್‍ಸಿದ, ಸಮುದ್ರದ ಅಲೆಗಳು… ದಡಕ್ಕೆ ಬಂದು ಅಪ್ಪಳಿಸುವಂತೆ… ಹೃದಯಕ್ಕೆ ಮುದುಕಪ್ಪನ ಮಾತುಗಳು ಅಪಳಿಸಿದವು. ಡಾ|| ಸಂತಪೀಟರ್ ಅತ್ಲುಕೊತ್ಲು ಆದ.

‘ನಾನೂ ಸಣ್ಣಕುಲ್ಡನ ದೊಡ್ಡಮಗ. ಅಮೆರಿಕದಿಂದ ಬಂದಿದ್ದೇನೆ.’ ಡಾ|| ಸಂತಪೀಟರ್‍ನ ಮಾತುಗಳು, ಕೇರಿಗರ ಕಣ್ಣುಗಳನ್ನು ತೇವಗೊಳಿಸಿದವು.

‘ಅವುದಾ ನಮ್ ಸಣ್ಣಕುಲ್ಡುನ ಮಗನೇನು?’ ಜನ ಉದ್ಗಾರ ತೆಗೆದ್ರು.

‘ವಂದೇ ಕರುಳಕುಡಿಗಳು ನಾವು ನೀವು…! ಮನೆಗೆ ಬರ್ರೀ… ತಮ್ಮಾ ನೀ ಯೇನೋ ಆಗ ಸಂತ… ಪಟ್ರುಕಲ್ಲು… ಯೇನೇನೋ… ಅಂದಿಯಲ್ಲಾ’ ಮುದುಕಪ್ಪ ‘ನಗ್ಸೆಟ್ಗೆ’ ಮಾಡಿದ.

‘ಹೌದಣ್ಣೋ ಆ ದೇಶದಲ್ಲಿ ನನ್ನ ಹೆಸ್ರು.. ಜಾತಿ, ಮತ, ಧರ್ಮ.. ಯೆಲ್ಲ ಬದ್ಲು ಮಾಡಿಕೊಂಡ್ವಿ’ ಎಂದು ಖುಷಿಯಿಂದ, ಪೀಟರ್ ತನ್ನ ದೊಡ್ದಪ್ಪನ ಮಗನ ಹತ್ತಿರ ಹೇಳಿಕೊಂಡ.

‘ನಮ್ಮ ಅಪ್ಪ-ಅಮ್ಮಂಗೆ ವುಟ್ಟಿ, ಯಾರ್‍ದೋ ಹೆಸ್ರೇಳ್ದಂದ್ರೆ ವಾಕ್ರಿಕೆ! ರಕ್ಕಕ್ಕಾಗಿಯಿದೆಲ್ಲ ಯಾಕ್ಬೇಕು? ವುಪ್ಸಾಸ ಸತ್ರು… ನಮ್‌ತನ ಬಿಡುಬಾರ್‍ದು ಅನ್ನೋನು… ನಾ…’ ಮುದುಕಪ್ಪ ಮುಖ ಸಿಂಡ್ರಿಸಿಕೊಂಡು, ಕೆಂಡಮಂಡಲವಾದ.

‘ಬಿಸಿಲು ಬಂದಂಗೆ ಕೊಡೆ ಹಿಡಿಬೇಕು. ಈ ಹಳ್ಳೀಲಿ ನಿಮ್ಮಂಗೆ ಕೈಕಟ್ಟಿ ಬಿದ್ದಿದ್ರೆ… ನಾನೂ ದನ, ಕರು, ಕಾದೂ ಸಂಬಳ ದುಡಿಯಬೇಕಾಗಿತ್ತು. ಈಗ ಸ್ವಂತ ಆಸ್ಪತ್ರೆ, ನನ್ಹೆಂಡ್ತಿ ಮಕ್ಳು ಡಾಕ್ಟರುಗಳು. ಇದೆಲ್ಲ ಈ ಹಳ್ಳಿ ಬಿಟ್ಟಿದ್ದಕ್ಕಲ್ಲವೇ?’ ಪೀಟರ್, ಕೇರಿಗ್ರ ಮುಂದೆ; ದೊಡ್ಡದಾಗಿ ಹೇಳುತ್ತಾ ಹೋದ…

ಮುದುಕಪ್ಪನ ಮುನೆಯತ್ತಿರ ಬಂದು, ಎಲ್ಲರೂ ಕುಳಿತರು. ಮುದುಕರ ಬಾಯಿಯಂಗೆ ಮನೆ ಅಲ್ಲಲ್ಲಿ ಬಿದ್ಹೋಗಿತ್ತು.

‘ಬಂದ್ರಿಕೆ, ಲಕ್ಕಿ ಸೊಪ್ಪು, ಕತ್ತಾಳೆ ಪಟ್ಟೆ, ಕೆಸ್ರು.. ಮಣ್ಣು… ಕಲ್ಸಿ ಮೇಲ್ ಮುದ್ದೆ ಹಾಕಿ, ಸಾಪ್ ಮಾಡಿಕೊಳ್ಳಬಹುದಲ್ಲಾ?’ ಎಂದು ಸಂತ ಪೀಟರ್, ಮನೆಯ ಸ್ಥಿತಿಗತಿಗೆ ಪ್ರತಿಕ್ರಿಯೆ ನೀಡಿದ.

‘ವಟ್ಟಿಗೆ ಯಿಟ್ಟಿಲ್ಲಾ, ಜುಟ್ಟಿಗೆ ಮಲ್ಲಿಗೆ ವುವ್ವು ಯಾಕೆ? ಯೀ ಮನೆಯಂಗೆ ಬಿದ್ದೋಗಾಕೆ ಐತೋ… ಅಂಗೇ ನಾವು ಬಿದ್ಬೋಗರಲ್ಲವೇನು ತಮ್ಮಾ?’ ದೊಡ್ಡ ಮಾರೆಣ್ಣ ಬಲು… ಹತಾಸೆಯಿಂದ ನುಡಿದ.

‘ಮೂಲೆ ಮನೆ ಸಂತೋಷಕುಮಾರ…. ಊರಾಗಳ ಪಂಪಾಪತಿ, ಹುಸೇನಿ… ಈಗೆಲ್ಲಿದ್ದಾರೆ’ ಕುತೂಹಲಭರಿತನಾಗಿ, ತನ್ನ ಬಾಲ್ಯದ ಗೆಳೆಯರನ್ನು ಪೀಟರ್ ಕೇಳಿದ.

‘ಕೇರಿಗ್ರ ಸ್ಥಿತಿಗತಿ, ಹಾಸಿ ವದ್ಕಂಬಂಗಿರುವಾಗ, ಯಿನ್ನು ಊರಾಗ್ಳಾರ ಗತಿ. ಗಂಗಮ್ಮನೇ ಗತಿ’ ಎಂದು ನಿಟ್ಬುಸಿರಿಟ್ಟು, ದೊಡ್ಡ ಮಾರೆಣ್ಣ ಆಕಾಶನೊಮ್ಮೆ ನೋಡಿದ.

‘ಹೌದು… ಸ್ವಲ್ಪ ವಿವ್ರಿಸಿ… ಏನಂತಾ… ಹೇಳಣ್ಣಾ… ಕೇಳ್ತೀನಿ’ ಎಂದು ಪೀಟರ್ ಒತ್ತಾಯಿಸಿದ.

‘ಮನುಗಂಡು ಕತೀನೇ ಐತಿ, ಯೀಗೇಳ್ತೀನಿ… ಮದ್ಲೂ… ತಿನ್ನಾಕೆ. ಕುಡಿಯಾಕೆ ಸೇದಾಕೆ ತರಿಸು ತಮ್ಮಾ! ಕಣ್ಣು ಕಣ್ಣೇ ಮಬ್ಬಾಗಿ, ಕಿವಿ ಕಿವಿ ಸಬ್ರಾಗಿ, ನಿತ್ರಾಣಕೆ ಬಿದ್ದೀನಿ… ತರಿಸು ಆಮೇಲೆ ಯೇಳ್ತೀನಿ’ ಎಂದು ಅಣ್ಣ ಉಸಿರಿಲ್ದವನಂತೆ ಅಂಗಲಾಚಿದ.

ತಕ್ಷಣನೆ ಪೀಟರ್ ದಿಡಿಗ್ಗನೆದ್ದು: ಕಾರಿನಿಂದ ಬ್ರೆಡ್, ಬಿಸ್ಕತ್ತು, ಚಾಕಲೇಟುಗಳು, ಹಣ್ಣು ಹಂಪಲು, ಸಿಹಿತಿನಿಸು, ಬಟ್ಟೆಬರೆಗಳ ಗಂಟು, ಮೂಟೆಗಳನ್ನು ಇಳಿಸಿಕೊಂಡು, ಗಂಟು ಬಿಚ್ಚಿದ. ಸುತ್ತ ಮುತ್ತ ನಿಂತಿದ್ದ ಮಕ್ಕಳು, ಮರಿ, ಮುದುಕ ಮುಪ್ಪರಿಗೆಲ್ಲ ತಂದಿದ್ದನ್ನೆಲ್ಲ ಹಂಚಲು ತಿನ್ನಲು, ಹೇಳಿದ.

ಐವತ್ತು ಟೀ, ಕಾಫಿ, ಟೇಬಲ್, ಗಣೇಶ ಬೀಡಿಗಳ ಕಟ್ಟುಗಳನ್ನು ಅಂಗಡಿ ಮಲ್ಲಣ್ಣನವರ ಮನೆಯಿಂದ ತರಿಸಿಕೊಟ್ಟ. ಹಸಿದ ಹೆಬ್ಬುಲಿಗಳಂತೆ ಮೆದ್ರು.. ಜನರ ಮುಖದಲ್ಲಿ ಆಗ ಹೊಸಕಳೆ, ಜಿನುಗಿದ್ದ ಕಂಡು, ಪೀಟರ್ ಖುಷಿಗೊಂಡ.

ದೊಡ್ದ ಮಾರೆಣ್ಣ, ಟೇಬಲ್ ಬೀಡಿಗೆ, ಬೆಂಕಿ ಕಡ್ಡಿಗೀರಿ, ಬುಸು, ಬುಸು ರೈಲು ಹೊಗೆ ಬಿಟ್ಟಂಗೆ ಬಿಟ್ಟು, ಎರಡ್ಮೂರು ದಮ್ಮೆಳೆದು, ಉತ್ತೇಜಿತನಾಗಿ ಕಥೇ ಆರಂಭಿಸಿದ…

ಯೀಗ್ಗೆ ಮೂವತ್ತು ವರುಸಗಳ ಕೆಳ್ಗೆ… ನಮ್ಮೂರು ಯೇಳಳ್ಗೇ ಯೆಸ್ರುವಾಸಿಯಿತ್ತಾ? ವೂರು ಕೇರಿ ಯಂಗೆ ವಂದಿತ್ತು ಆಗ! ಯೀ ವೂರುಕೇರಿ ವಂದಿದ್ರೆ ಬ್ರಹ್ಮಾಂಡವನ್ನೇ ನಡುಗಿಸಬಹುದು. ವಿದೇಶದವ್ರ್ನ ಮೀರಿಸಬಹುದು.

ನಮ್ಮೂರ ಸುತ್ತಮುತ್ತಲಿನ… ವಲ, ಗದ್ದೆ, ತೋಟ, ಬಾವಿ, ಕೆರೆ, ಕುಂಟೆ, ಕಾಲುವೆಗಳು, ಯಾವಾಗ್ಲೂ ಧಿಮ್ಮೆನಿಸ್ಳೆಂಗೆ! ನೂರಾರು ಮೂಟೆ ಬಿಳಿಜೋಳ, ಗೋಧಿ, ನೆಲಗಡ್ಲೆ-ಗುರಾಳು, ಕುಸುಮೆ, ರಾಗಿ, ನೆಲ್ಲು, ನವಣೆ, ಉಳ್ಳಾಗಡ್ಡೆ, ಬದನೆಕಾಯಿ, ಹಸಿಮೆಣಸಿನಕಾಯಿ, ಬೆಳೆದು, ದಾನ, ಧರ್ಮ ಪೂಜೆ, ನೈವೇದ್ಯ ಎಲ್ಲಾ ಜಂಭ್ರಗಳೂ ನಡೀತಾ, ವೂರು ಕೇರಿಯೊಳಗೆ, ಬಂಗಾರದ ವಗೆಯಾಡುತ್ತಿತ್ತು. ಬೆಳ್ಳಿ, ಬಂಗಾರ, ಮುತ್ತು, ರತ್ನ, ವಜ್ರ, ವೈಢೂರ್ಯಗಳಂತೆ ಫಳಾ ಫಳಾ ಹೊಳೆವ ನವಿಲು, ಸಾರಂಗ, ಕೋಗಿಲೆ, ಗಿಣಿ, ಪಾರಿವಾಳ, ಗುಬ್ಬಿ, ಕಾಗೆ, ಹದ್ದುಗಳಿದ್ದವು… ಅಬ್ಬಾ ಸಾಲು ಸಾಲು, ಹಿಂಡಿಂಡು ಹಾರುವ, ಹಾಡುವ ಸಂಭ್ರಮ ಹಕ್ಕಿಪಕ್ಕಿಗಳು, ದನಕರು ಕುರಿಮೇಕೆಗಳು! ಯೀಗೆಲ್ಲಿ, ತಮ್ಮಾ? ನಮ್ ಮಾದಿಗರು ಮೈಮುರ್‍ದು ಸಂಬ್ಳ ದುಡಿಯೋದು, ಕೈಬಿಟ್ರು, ಯೀ ವಕ್ಲಿಗ್ರು ಮೆಲ್ಲಗೆ ಹಳ್ಳಾಯಿಡಿದ್ರು ನೋಡು. ತಿನ್ನಾಕೆ ಕೂಳಿಲ್ಲ. ವುಡಾಕೆ ಬಟ್ಟಿಲ್ಲ. ಯಿರಾಕೆ ಮನೆ, ಮಠವಿಲ್ಲ. ಯೀಗ ಗೂಬೆ, ಗಿಡುಗಗಳು, ರಿಜಲು ಬೇಲಿಗಳು, ಹಾಳುಬಿದ್ದ ಕೊಂಪೆಗಳು, ಕೆರೆ ಕುಂಟೆ, ಹಳ್ಳಕೊಳ್ಳ, ಬಾವಿಗಳೂ ಬತ್ತಿದವು! ಮಳೆ ಬೆಳೆಯಿಲ್ಲ. ಯಿದೇ ಟೈಮಿನಾಗೆ ಓಸಿ, ಮಟ್ಕಾ, ಲಾಟರಿ, ಸಿನಿಮಾಗಳೂ ಬಂದ್ವು. ರೈತರೆಲ್ಲ ಅತ್ತ ತಿರುಗಿದ್ರು. ಇಸ್ಪೀಟ್ ಎಲೆ, ಅಡಿಕೆ, ಪಾನು, ಜರ್ದಾ, ಕುಡಿತ, ಬಾಯಿಸವಿಗೆ ಬಿದ್ರು. ಕೈಕೆಸ್ರಾಗ್ದೆ ಬಾಯಿಗೆ ಬಿರಿಯಾನಿ ಎಂದ್ರು, ದಡೇವುಗಟ್ಲೆ ಬೆಳ್ಳಿ, ಬಂಗಾರ, ನಗನಾಣ್ಯಾ ಹಾಳಾತು. ಹೊಲಗದ್ದೆ ತೋಟಗಳು ಆಂಧ್ರದ ರೆಡ್ಡಿಗಳಿಗೆ, ಪಠಾಣ್ರಿಗೆ ಒತ್ತೆಯಿಟ್ರು ನಿನ್ನ ಜೆತೆಗಾರ್ರು ಐದಾರು ಜನ್ರು ಏಡ್ಸ್ ರೋಗಕ್ಕೆ ಬಲಿಯಾದ್ರು. ಕಾಫೀ, ಟೀ, ಕುಡಿಯಾಕೇನು? ಉಚ್ಚೆ ವೊಯ್ಯಾಕೆ ಬಳ್ಳಾರಿ, ಚಳ್ಳಕೆರೆ ಅಂದ್ರೆ… ವಗುತ್ನ ಯಂಗೆ ನಡೆಯುತ್ತೆ ತಮ್ಮ? ಅಳ್ಳಿ, ಆಳಾತು. ಭೂಮಿ ಬಡವಾಯ್ತು! ನೀರಿನ ರೋಗರುಜಿನಗಳು ಮುತ್ತಿದವು. ಮಿದ್ಲುಜ್ವರ, ಚಿಕನ್ ಗುನ್ಯಾ, ಮಲೇರಿಯಾ, ಟಿಬಿ, ಯೇಡ್ಸು, ಯಮುಕೆ ಸವೇದು ಏನೇನೋ… ಬಂದಿವೆಯೆಂದು’ ಮುದುಕಪ್ಪ ಬಾಯ್ಬಿಟ್ಟ…

‘ಇವೆಷ್ಟೇ ಕಾರಣಗಳೆ ಬೇರೆ ಕಾರಣಗಳಿವೇ ಯೋಚಿಸಿ ಹೇಳಣ್ಣಾ?’ ಡಾ|| ಸಂತಪೀಟರ್, ದೊಡ್ಡ ಮಾರೆಣ್ಣನ ಎದೆ ಮೇಲೆ, ಕುಳಿತ. ದೊಡ್ಡ ಮಾರೆಣ್ಣ ಮತ್ತು ಆತನ ಸುತ್ತ ಮುತ್ತ ಕುಳಿತಿದ್ದ ಜನ್ರು ಕ್ಷಣ ಭೂಮ್ಯಾಕ್ಕಿಳಿದಂತೆ ಕಂಡುಬಂದರು.

‘ಬಾಳ ಬಾಳ ವರುಸಗಳ ಕೆಳ್ಗೆ ಯೇನೇನೋ ಆಗಿರ್‍ತಾವೆ… ನಮ್ಗೆ ನೆಪ್ಪಿರಲ್ಲ… ತಮ್ಮಾ’ ಅಂತಾ, ಪ್ರಸವ ವೇದನೆ ಅನುಭವಿಸಿ, ಮೇಲೆ ಕೆಳಗೆ ನೋಡಿದ.

‘ಯೀಗ ನೆಪ್ಪಾಯ್ತು ನೋಡು…. ಮಟಮಟ ಮಧ್ಯಾಹ್ನದ ವತ್ತು…. ನಮ್ಮೂರು ಕೆಲ್ಸೇರು ಸಿದ್ಧಮ್ಮ, ವೂರೊಳ್ಗೆ ವೋಗಿ ಮುದ್ದೆ, ಚಟ್ನಿ, ರೊಟ್ಟಿ, ಬಾನನ ಬೇಡ್ಕೊಂಡು ತಿಂಬಾಳು. ಅದೆಷ್ಟು ವರುಸಗಳಿಂದಿದ್ದವಳು. ಯಲ್ರುಗೂ ಗೊತಿದ್ದ ಮಾತೈತಿ. ವಂದು ದಿನ ವೇಮನ ರೆಡ್ಡಿ ಮನೆ ಮುಂದೆ ಸಂಗಿನೊತ್ತಿನಿಂದ

‘ಅಮ್ಮೋ ತಾಯಿ… ಸಾವುಕಾತೀಽ… ಮುದ್ದೆ ಬಾನ ನೀಡಮ್ಮೋ… ಮುಂಜಾಲಿದ್ದ ಉಪಾಸಿದ್ದೀನಿ! ಮೂರು ದಿನಾಯ್ತು…! ಗೌಡುಸಾನೀ… ಯೇನನ್ನಿದ್ರೆ… ಕೊಡ್ರೀ ತಾಯಿ… ಯೆಂದು ಸಿದ್ಧಮ್ಮ, ಅಂಗಲಾಚಿದಳು…

‘ನಮ್ಮೂರಾಗ ಹುಣಸೇಕಾಯಿ ತೊಕ್ಕುನ ಮುದ್ದೆಗಡುತ್ರ ಕೊಡೋ ದಾನಿಗಳ ವೂರು… ಗುಬ್ಬಿ, ಪಾರಿವಾಳಕೆ, ಕೆಂಪಿರುವೆ, ಕಟ್ಟಿರುವೆ ಸಾಲು-ಸಾಲ್ಗುಳ್ಗೆಲ್ಲ… ಸಕ್ರೆ ಗೋಧಿ, ಕಡ್ಲೆ, ಬೆಂಡು, ಬತ್ತಾಸಿಟ್ಟು ಸಾಕಿದ ಕೈಗಳು ಯಿವ್ರುವು. ಆವತ್ತು ವೇಮನ ರೆಡ್ಡಿಗೆ ಯೇನು ಸಿಟ್ಟು ಬಂತೋ… ಏನೋ… ಬಿಳಿ ಜ್ವಾಳದ ಅಸೀ ಸಪ್ಪೆ ದಂಟು ತಗಂಡು, ಸಿದ್ದಮ್ಮನ ಬೆನ್ನ ಮೈಮೇಲೆ ಬಾಸೇಳು ಮೂಡಂಗೆ, ಭೇಷ್ ಬಾರ್ಸಿಬಿಟ್ಟ, ಯೆಷ್ಟು ಜನ್ರು ಯೇಳಿದ್ರು ಕೇಳವಲ್ಲ. ಬಿಡ್ಸಿಗೊಂಡ್ರು ಬಿಡವಲ್ಲ. ಅಂಗೆ ವಡಿಬಡಿ ಮಾಡಿಬಿಟ್ಟ.

‘ನಾಯ್ನ ಬಡಿಯೋಕೆ ಬಣ್ಣದ ಕೋಲೇಕೆ?’ ಅಂದ್ರು ಕೇಳಿಲ್ಲಾ… ಸಿದ್ಧಮ್ಮ ಮೂರು ದಿನ ಅತ್ತು ಕರೆದು, ಸಿಡಿಸಾಪ್ಸಿದ್ಲು… ನೀಸತ್ತಲ್ಲಿ ಕತ್ತೆ ವಳ್ಳೀಲಿ… ಯೀ ವೂರು ಆಳಾಗಿ ನಿಸತ್ರಾಗ್ಲೀ, ಯೆದ್ದ ಮನೆಗ್ಳು ಬಿದ್ದೋಗ್ಲಿ, ಬಿದ್ದ ಮನೆಗ್ಳು ಯೆದ್ದಾಳ್ದಂಗಿರ್‍ಲೀ… ಯೀ ವೂರ್‍ಗೆ ಬರುಬಾರ್‍ದು ಬರ್‍ಲಿ…’ ಮಣ್ಣು ತೂರಿ, ಲಟಿಕೆ ಮುರಿದು, ವೂರು ಕಟ್ಟೆ ಮೇಲೆ… ಉಪಾಸ ವ್ರತ ಕೈಗೊಂಡು ವರುಗಿದ್ಲು, ನಾವು ಮಣ್ಣು ಮಾಡಿ, ಕೈ ತೊಳದುಕೊಂಡ್ವಿ.

ಯಿನ್ನೊಂದು ಕತೆ, ನೆಪ್ಪಾತು! ಇದು ಭೇಷೈತಿ ಕೇಳು ತಮ್ಮ… ನಮ್ಮ ದುರುಗಮ್ಮ ಗುಡಿ ಪೂಜಾರಿ, ಅದೇ ದೇವ್ರು ಬರೋ ಯಲುಗಣ್ಣನಿಗೆ, ಪ್ರತಿ ಮಂಗಳವಾರ ರಾತ್ರಿಕೆ ಮೈದುಂಬಾದು, ಸುತ್ತೇಳು ಅಳ್ಳಿಗೇ ಗೊತ್ತು. ಆವತ್ತು ಮಂಗ್ಳವಾರ ರಾತ್ರಿ, ಅತ್ತು ಗಂಟೆ ವತ್ತಿನಾಗೆ, ಯಲುಗಣ್ಣನಿಗೆ ದುರುಗಮ್ಮ ತಾಯಿ, ಮೈದುಂಬಿ ಬಂದ್ಲು! ಕಟಾಕಟಾ ಅಲ್ಲಲ್ಲು ಕಡೀತಾ… ಕುತ್ತಿಗೇನಾ ಅತ್ತ ಇತ್ತ ವರುಳಿಸ್ತಾ ‘ಆ‌ಆಽ… ವುವುಽ… ಮಾಡ್ತಾ ಕೇಕೆ ಆಕ್ತಾ ನೆಲ್ಕೆ, ಮೈಗೆ ಚಾಟಿಯಿಂದಾ… ಬಡುಕ್ಕೊಂತಾ ಕೇರಿ ದಾಟಿ, ಬಸ್ವಿ ಗಂಗಮ್ನಕ್ಕನ ಗುಡಿಸ್ಲು ಮುಂದೆ, ಲೈಟ್ ಕಂಬದ ಬೆಳಕಿಗೆ, ಚಾಟಿಯಿಂದ ‘ಚಟ್-ಚಟ್… ಪಟ್-ಪಟ್…’ ಬಡ್ಕೊಂತಾಯಿದ್ದ. ಜನಂಭೋ ಜನಾ ಅಲ್ಲಿತ್ತು. ಅಲ್ಲಿಗೆ ವೂರಾಗ್ಳ ಸಿನ್ನರೆಡ್ಡಿ ಬಂದೋನೇ… ದೇವ್ರ ಪೂಜಾರಿ ಅಂಬ್ದಂಗೆ… ಬಡಿಯತೊಡಗಿದ. ಜನ್ರು ‘ಅಲ್ಲಿ’ಗಳು ಲೊಚಗುಟ್ಟಿದಂಗೆ, ಲೊಚಗುಟ್ಟಿಗೊಂತ… ನೋಡ್ತಾ ನಿಂತಿದ್ರು.

‘ಲೋ… ತಾಯ್ಮೇಲೆ ಕೈಮಾಡ್ದೆ… ನೀ ಆಳಾಗಿ, ನಿನ್ ಯೆಂಡ್ತಿ ಮಕ್ಳು ನೆಗ್ದು ಬೀಳ್ಟಾರೆ, ವಂಶ ನಿರ್ವಂಶವಾಗಿ… ಗಂಜಿ ನೀರಿಗೂ ಗತಿಯಿಲ್ದಂಗಾಗ್ತೀಯಾ… ವೋಗ್ಲೋ… ನನ್ ಮಹಿಮೆಯೇನೆಂಬುದು ನೋಡುವಂತೆಲೋ…’ ಬಡ್ಸಿಗೊಂಡ, ದುರುಗಮ್ಮ ಪೂಜಾರಿ, ಮೈಕೈ ಮಕ ಮಾರೆಗಳ್ನ ಮುಟ್ಟಿ ಮುಟ್ಟಿ ನೋಡ್ಕೊಂತಾ… ಬುಸುಗುಟ್ಟಿಕ್ಯಾಂತಾ ನಿಂತಿದ್ದ!!

‘ಕಳ್‌ಸೂಳೇ ಮಗ್ನೇ ಮತ್ತೆ ಮಾತಾಡ್ತಿಯಾ? ಸತ್ತ ದನಾ ತಿನ್ನೋ… ಮಾದಿಗ ಮುಂಡೇ ಮಕ್ಳೇ… ನಿಮ್ಗೆ ದೇವ್ರೇಗೆ ಬರ್‍ತಾಳೆಲೇ?’ ಯೆಂದು, ತಿರುಗಿ ಬಂದು, ಸಿನ್ನ ರೆಡ್ಡಿ ತನ್ನ ಅಳೇ ಕಾಲ್ಮರಿಗಳ್ಳನ ತಗೊಂಡು, ಅರಿದೋಗಂಗೆ ಕೆಳಾಕೆ ಕೆಡವಿ, ಉಳ್ಳುಳ್ಳಾಡ್ಸಿ ವದ್ದ! ವಬ್ರೂ ಬಿಡ್ಸಿಕೊಳ್ಳಲಿಲ್ಲ.

‘ದೇವ್ರ ಮೇಲೆ ಮಾಡಿದ ನಿನ್ನ, ಕೈಕಾಲು ಕತ್ರಿಸಾ…! ಯೀ ವೂರು ಕೇರ್ಗಾ ದೆವ್ವ ಬಡ್ಲೀ, ಸುಡುಗಾಡಾಗಿ ವೋಗ್ಲೀ… ಸರ್ವನಾಶವಾಗೀ ಗೂಬೆ, ಹದ್ದು, ಬಂದು ಕೂಡ್ಲಿ ಕಪ್ಪಲಕ್ಕ, ನರಿ, ತೋಳ, ಹೇಸರಗತ್ತೆಗಳು ವೋಡಾಡ್ಲಿ’ ಯೆಂದು ಮಣ್ಣು ತೂರಿ, ಕ್ಯಾಕರ್‍ಸಿ ವುಗಿದು, ದಿಂಡರಿಕಿ ಕಟ್ಟಿ, ವೂರು-ಕೇರಿ ತುಂಬಾ… ಮೂರು ಉಳ್ಕೆ ಉಳ್ಳಿದ.

‘ಯಾರ್ ನಾಲ್ಗೆ ಮೇಲೆ ಯೇನ್ ಮಚ್ಚೆ ಯಿರುತ್ತೊ… ಏನೋ ನುಡಿದ ವಚನ ನಿಜವಾಯ್ತು ಶಾಪಗಳು ನಿಜವಾದುವು. ಬಹಳ ಯಿಂದೆ ನಾವು ಮಾಡಿದ ಪಾಪಗಳು ನಮ್ಮ ಮಕ್ಳಿಗೋ ಮೊಮ್ಮಕ್ಳಿಗೋ ತಟ್ಟುತ್ತಿದ್ದವಂತೆ! ಯೀಗ ನಮ್ಮ ಪಾಪಗಳ್ನ ನಾವೇ ಅನುಭವ್ಸಿ ಹೋಗ್ಬೇಕು’ ಮಾರೆಣ್ಣ… ವಿಷಾದದಿಂದ ನುಡಿದ.

ಡಾ|| ಸಂತ ಪೀಟರ್‍ನ ತಲೆ ದಿಮ್ಮೆಂದಿತು. ತಲೆ ತಲೆ ಕೊಡವಿಕೊಂಡು… ಮೇಲೆದ್ದ. ಹುಚ್ಚನಂತೆ ತನ್ನ ಬಾಲ್ಯ ಸ್ನೇಹಿತ ಶಿವಮೂರ್ತಿ ಸ್ವಾಮಿ; ಮನೆ ಕಡ್ಗೆ ಹೆಜ್ಜೆ ಹಾಕಿದ. ಆತನ ವಿವರ ಕೇಳಲು, ಏನೂ ಲಭ್ಯವಾಗಲಿಲ್ಲ. ಅವರ ಮನೆ ಮುಂದೆ ಜಿಬ್ಬೆಣ್ಣಿನ ಮರ ದೊಡ್ಡದಾಗಿ ಬೆಳೆದಿತ್ತು. ಅದರ ಹಣ್ಣುಗಳಿಗೆ ಮಾರು ಹೋಗಿ ಕಲ್ಲು ಒಗೆದು ಅದು ಮನೆ ಮಾಲೀಕನ ತಲೆಗೆ ಬಿದ್ದು, ರಂಪಾಟವಾಗಿದ್ದ ನೆನೆದ. ಆದರೆ ಮರವೀಗ ನೆಲಸಮವಾಗಿತ್ತು!! ದುರುಗಮ್ಮನ ಗುಡಿ ಮುಂದೆ, ದೆವ್ವದಂಥಾ ಮೂರು ಬೇವಿನ ಮರಗಳಿದ್ದವು! ಬೆಳದಿಂಗಳ ಬೆಳಕಿನಲ್ಲಿ, ರಾತ್ರಿಯೆಲ್ಲಾ ಜೋಕಾಲಿ ಆಡುತ್ತಾ… ಕೇಕೆ ಹಾಕಿದ್ದ ನೆನೆಯುತ್ತಾ… ಕುಂಟೆ ಬಯಲು ಕಡೆ ನಡೆದ, ತಂಗಡಿ ಗಿಡಗಳ ಕಾದಿಟ್ಟ ಅರಣ್ಯವೀಗ ಕಡೆದಿಟ್ಟ ಅರಣ್ಯವಾಗಿದೆ! ಕೈಗೆಟುಕವಷ್ಟು ಕಡ್ದುರೆ, ಬಿಕ್ಕೆ, ಲೇಬಿ, ಕಾರೆ, ಕೌಳೆ, ತೊಂಡೆ, ಪಾಪಸಿ ಏನೆಲ್ಲ ಮರಗಿಡಬಳ್ಳಿಗಳಿಲ್ಲ! ಎಲ್ಲಾ ಬಟಾಬಯಲು. ಜರ್ಜರಿತನಾದ. ಒಡೆದು ಹೋದ ಕುಂಟೆ, ಯೀಗ… ಗಂಟು ಮೊರೆ ಮಾಡಿ, ಕಟ್ಟಲಾರದ ಸ್ಥಿತಿಗೆ ಮರುಗಿದ.

‘ರವ್ವಾಟು’ ದೂರ ನಡೆದ. ನಿತ್ಯ ನೂತನೆ, ಪಾವನೆ! ಗಂಗೆ-ಯಮುನೆಯಂತೆ, ಝುಳು… ಝಳು… ಕಲರವ ಧ್ದನಿಗೊಡಿಸಿ ತನ್ನಳ್ಳಿಯ ಜನ, ದನಗಳ ತೊಳೆ, ತೊಳೆದು, ತಬ್ಬಿ ಉಬ್ಬೀಬ್ಬಿ… ಬೋರ್‍ಗರೆದು, ಸಂಗಮ ಕ್ಷೇತ್ರವಾಗಿ, ಹರಿಯುತ್ತಿದ್ದ ಸಿಟ್ಟೇರಹಳ್ಳ… ಗುಂಡೇರಹಳ್ಳಗಳಿಂದು ಬತ್ತಿ ಹೋಗಿ, ಮರುಭೂಮಿಯಾಗಿರುವುದ ಕಂಡು, ಕುಸಿದು ಕುಳಿತ!

ಮರಳ ತಡಿಯ ಮೇಲಿಂದ, ತಣ್ಣನೆ ಗಾಳಿ ಬೀಸಿದಾಗಲೇ… ಡಾ|| ಸಂತಪೀಟರಿನಿಗೆ, ಎಚ್ಚರವಾಗಿದ್ದು. ಅದೆಷ್ಟು ಹೊತ್ತು ಕುಳಿತಿದ್ದನೋ… ಯೇನೋ… ಅರಿವಿಗೆ ಬರದಷ್ಟು ಹೊತ್ತು, ಕುಳಿತೇ ಇದ್ದ!!

ಹಾಲುಗೆನ್ನೆಯ ಹಸುಗೂಸಿನವನಿದ್ದಾಗ, ಕಳದುಕೊಂಡು, ಓದು, ಬುದ್ಧಿ, ಬೆಳವಣಿಗೆ ಕುಂಠಿತಗೊಂಡ ದೃಶ್ಯ ಕಣ್ಣೆದುರಿಗೆ, ಮೆರವಣಿಗೆ ಹೊರಟಿತು. ಅದರ ಹಿಂದೆ, ಹೊಟ್ಟೆ ಬಟ್ಟೆಗೆ, ದಿನಗೂಲಿಗೆ ಅಮ್ಮ ಕಣ್ಣೀರಿಟ್ಟಾಗ, ತಾನು ಜೀತವಿದ್ದ ಮನೆಯಿಂದ ರಾತೋರಾತ್ರಿ ಓಡಿ, ಪಟ್ಟಣ ಸೇರಿ, ಹಗಲು ರಾತ್ರಿ ದುಡಿದು ಓದಿ, ಮೆರಿಟ್ ಸ್ಕಾಲರ್‌ಶಿಪ್ ಗಳಿಸಿ, ಉನ್ನತ ವ್ಯಾಸಂಗಕ್ಕಾಗಿ ಅಮೇರಿಕಾ ಸೇರಿಕೊಂಡು. ವೈದ್ಯಕೀಯ ಪದವಿಯಲ್ಲಿ ರ್‍ಯಾಂಕ್ ಪಡೆದು, ವಿದೇಶದಲ್ಲೇ ಉಳಿದಿದ್ದು ನೆನೆದಾಗ, ಕಣ್ಣೀರು ಕಪಾಳ ಕಂಡವು. ತನ್ನ ಹೆತ್ತಮ್ಮ… ತಮ್ಮ ಸತ್ತರೆ, ಬಂಧು ಬಳಗದಾ ಕರೆಗೂ… ಊರಿಗೆ ಬರದೆ. ತನ್ನ ಮಾದರಿ, ವಿಶ್ವವಿಖ್ಯಾತಿಯಾಗಬೇಕೆಂಬಾ ಹಂಬಲವೊಂದೇ, ತನ್ನಳ್ಳಿಯಿಂದ ದೂರ, ದೂರ… ಮಾಡಿದ್ದಕ್ಕೆ ಯೀಗ ಮಮ್ಮಲ ಮರುಗುತ್ತಾ… ಮನೆ ತಲುಪಿದ… ಎಲ್ಲರೂ ಪೀಟರನನ್ನು ಜೇನಿನಂತೇ… ಮುತ್ತಿದರು…

‘ಈ ಹಳ್ಳಿ, ರೋಗ… ರುಜಿನಗಳ ಆಗರವಾಗಿದೆ! ಬರದ ನಾಡಾಗಿದೆ. ಇಲ್ಲಿದ್ದು ಎಲ್ಲ… ದೇಶ ವಿದೇಶಕೆ, ಹಳ್ಳಿಯನ್ನು ಎತ್ತರಿಸೋಣ, ಬಡಬಗ್ಗರ… ಏಳ್ಗೆಗಾಗಿ ಶ್ರಮಿಸೋಣ…’ ಎಂದು ಒಕ್ಕೊರಲಿನಿಂದ, ಕೂಗಿ ವೀಸಾ… ಪಾಸ್ಪೋರ್‍ಟು… ಎಲ್ಲ ವಿದೇಶಿ… ದಾಖಲಾತಿಗಳನ್ನು… ಗಾಳಿಗೆ ತೂರಿದರು. ಇಡೀ ಊರುಕೇರಿ, ಇವರ ನಿರ್ಧಾರವನ್ನು, ಸ್ವಾಗತಿಸಿತು.
*****
ಈ ಪುಸ್ತಕದ ಕೊನೆಯ ಕಥೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೇಡು
Next post ರಾತ್ರಿ

ಸಣ್ಣ ಕತೆ

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…