ಅವರು ನಮ್ಮವರಲ್ಲ

ಅವರು ನಮ್ಮವರಲ್ಲ

ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ. ಏನಪ್ಪಾ, ಇವತ್ತು ಬೆಳಿಗ್ಗೇನೇ ಏನು ಗ್ರಹಚಾರ ಕಾದಿದೆಯೋ ಎಂದು ಮನದಲ್ಲೇ ಭಯ ಪಟ್ಟುಕೊಂಡು, ನೋಟು ಬುಕ್ ಹಾಗೂ ಪೆನ್ನು ಹಿಡಿದು ಸಾಹೇಬರ ರೂಂ ಹೊಕ್ಕಿದೆ. ಸಾಹೇಬರು ಫೋನಿನಲ್ಲಿ ಮಾತಾದುತ್ತಿದ್ದರು. ಫೋನು ಕೆಳಗಿಡದೆ ನಮಸ್ಕರಿಸುವ ಹಾಗಿಲ್ಲ. ಆ ವಿಶಾಲವಾದ ರೂಮಿನ ಸುತ್ತಲೂ ಕಣ್ಣಾಡಿಸಿ, ಎಲ್ಲವೂ ಯಾವಾಗಲೂ ನೋಡುವಾಗಿನ ದೃಶ್ಯಗಳೇ. ಸಾಹೇಬರು ಕುಳಿತ ಪುಶ್ಬ್ಯಾಕ್ ರೂಟೇಟಿಂಗ್ ಚೆಯರ್, ಚಯರಿನ ಬೆನ್ನಿಗೆ ತೂಗಿ ಹಾಕಿದ ಪಿಂಕ್ ಬಣ್ಣದ ಟವಲ್, ಹಸಿರು ಮಕಮಲ್ ಬಟ್ಟೆ ಹಾಕಿ, ಅದರ ಮೇಲೆ ಗ್ಲಾಸು ಹಾಕಿದ ವಿಶಾಲವಾದ ಮೇಜು, ಮೇಜಿನ ಮೂಲೆಯಲ್ಲಿ ಸಾಹೇಬರ ನಾಮಫಲಕ. ಎಡಬದಿಯಲ್ಲಿ ಪೋನು, ಹಾಗೂ ಫೈಲು ಹಾಕುವ ಟ್ರೇ. ಮೇಜಿನ ಮುಂಭಾಗದಲ್ಲಿ ಆದೇಶಕ್ಕೆ ಕಾಯುತ್ತಿರುವ ಪೈಲುಗಳ ರಾಶಿ. ಎದುರಿಗೆ ಸಾರ್ವಜನಿಕರು ಕುಳಿತುಕೊಳ್ಳಲು ಮರದ ಮೂರು ಕುರ್ಚಿಗಳು. ಸಾಹೇಬರು ಕುಳಿತ ಚಯರ್‌ನ ಹಿಂಬದಿಯ ಮೇಲೆ ಚೆನ್ನಾಗಿ ಪಾಲಿಶ್ ಮಾಡಿದ ಹಾಗೂ ಈಗಲೂ ಜೀವಂತವಿರುವಂತೆ ಕಾಣುವ ಸತ್ತ ಕಾಡುಕೋಣದ ತಲೆಯ ನವೀಕೃತ ರೂಪ. ಸಾಹೇಬರು ಫೋನಿನಲ್ಲಿ ಮಾತಾಡುತ್ತಿರುವಂತೆ, ಒಮ್ಮೆ ನನ್ನತ್ತ ದೃಷ್ಟಿ ಹಾಯಿಸಿದರು. ಅದನ್ನೇ ಕಾಯುತ್ತಿದ್ದ ನಾನು ತಟ್ಪನೇ ಕೈ ಎತ್ತಿ ನಮಸ್ಕರಿಸಿದೆ. ಮಾತು ಮುಗಿಸಿ ಫೋನು ಕೆಳಗಿಟ್ಟ ಸಾಹೇಬರು ನನ್ನನ್ನೇ ನೋಡುತ್ತಾ ಒಂದು ನಗು ನಕ್ಕರು. ಈ ಮೊದಲು ಇಷ್ಟೊಂದು ಸುಂದರ ನಗು ಸಾಹೇಬರು ನಕ್ಕದು ನಾನು ನೋಡಿಲ್ಲ. ಏನೋ ಅಪಾಯ ಕಾದಿದೆ ಎಂದು ಅರಿವಾಯಿತು.

“ನೋಡ್ರೀ ಅಧೀಕ್ಷಕರೇ, ಪ್ರತಿ ವರ್ಷದಂತೆ ಈ ವರ್ಷವೂ ನಾವು ವರ್ಗಾವಣೆ ಮಾಡಬೇಕಾಗುತ್ತದೆ. ಲೀಸ್ಟ್ ಪರಿಶೀಲಿಸಿದಾಗ ನಿಮ್ಮ ಹೆಸರು ಮೇಲೆ ಇದೆ. ಸುಮಾರು ಹತ್ತು ವರ್ಷದಿಂದ ವರ್ಗಾವಣೆಯಾಗದೇ ಒಂದೇ ಕಡೆ ಅದೂ ಮಂಗಳೂರಿನಲ್ಲೇ ಲಂಗರು ಹಾಕಿದ್ದೀರಲ್ಲಾ?” ಕೊಂಕು ಮಿಶ್ರಿತ ಅವರ ಮಾತು ಇಷ್ಟವಾಗದಿದ್ದರೂ, ವಿಷಯ ಸತ್ಯವಾದುದರಿಂದ ಉಗುಳು ನುಂಗಿಕೊಂಡು ಸುಮ್ಮನೇ ನಿಲ್ಲಬೇಕಾಯಿತು. “ಸರಿ, ನೀವು ಹೋಗಿ” ಅಂದರು ಸಾಹೇಬರು. ನಿಧಾನವಾಗಿ ಸಾಹೇಬರ ರೂಮಿನಿಂದ ಹೊರಬಂದು ನನ್ನ ಸೀಟಿನಲ್ಲಿ ಕುಳಿತೆ. ಆಂದು ಬೆಳಗ್ಗಿನ ತಿಂಡಿ ಕಾಫಿ ರುಚಿಸಲಿಲ್ಲ. ಮಧ್ಯಾಹ್ನ ಕೊರಗಪ್ಪನ ಹೋಟೇಲಿನ ಮೀನು ಸಾರು ಊಟವೂ ಇಷ್ಟವಾಗಲಿಲ್ಲ. ರಾತ್ರಿ ಸಪ್ಪೆ ಮೋರೆ ಹಾಕಿ ಮನೆ ತಲುಪಿದಾಗ ಹೆಂಡತಿಗೆ ಆಫೀಸಿನಲ್ಲಿ ಏನೋ ಅನಾಹುತ ಆಗಿದೆ ಎಂದು ಅರಿವಾಯಿತು. ರಾತ್ರಿ ಊಟ ಮುಗಿದು ಮಲಗುವ ಕೋಣೆಗೆ ಬಂದು ಬಾಗಿಲು ಹಾಕಿದ ಮೇಲೆ ಹೆಂಡತಿಯ ವಿಚಾರಣೆ ಶುರುವಾಯಿತು. ಮಕ್ಕಳಿಬ್ಬರೂ ಮಲಗಿದ್ದರು.

“ಏನೂ ಇಲ್ಲಾ, ಮಾರಾಯ್ತಿ, ಈ ವರ್ಷ ನನಗೆ ವರ್ಗಾವಣೆ ಇದೆ ಎಂದು ಸಾಹೇಬರು ಹೇಳಿದ್ದಾರೆ ಅಷ್ಟೇ” ವಿಷಯವನ್ನು ನೇರವಾಗಿ ಬಚ್ಚಿಟ್ಟೆ. ಅವಳು ನಕ್ಕು ನನ್ನ ಭುಜ ಅಲ್ಲಾಡಿಸುತ್ತ ಅಂದಳು. ‘ಅಲ್ಲಾರಿ ವರ್ಗಾವಣೆಯಾದರೆ ಯಾಕೆ ಹೆದರುತ್ತೀರಿ? ಯಾವ ಊರೇ ಆಗಲಿ, ಮನುಷ್ಯರಿದ್ದಾರೆ ತಾನೆ? ಮಕ್ಕಳಿಗೆ ಒಳ್ಳೆಯ ಶಾಲೆ ಸಿಕ್ಕಿದರೆ ಸಾಕು. ನಾವು ಒಳ್ಳೆಯವರಾದರೆ ಊರೇ ಒಳ್ಳೆಯದು’ ಅವಳು ನನ್ನ ಪುಕ್ಕಲುತನ ಓಡಿಸಲು ಧೈರ್ಯ ತುಂಬಿದಳು.

“ಅದಲ್ಲಾ ಮಾರಾಯ್ತಿ, ನೋಡು ಮಳೆಗಾಲ ಬೇರೆ, ಬಾಡಿಗೆ ಮನೆ ಹುಡುಕಬೇಕು. ಮನೆ ಶಾಲೆಯ ಪಕ್ಕ ಇರಬೇಕು. ಶಾಲೆಯಲ್ಲಿ ಮಕ್ಕಳಿಗೆ ಸೀಟು ಸಿಗಬೇಕು. ಮನೆ ಸಾಮಗ್ರಿ ಸಾಗಿಸಲು ಲಾರಿ ಹುಡುಕಬೇಕು ಬರೇ ಲಾರಿ ಸಿಕ್ಕಿದರೆ ಸಾಲದು. ಮೇಲೆ ಟಾರ್ಪಲ್ ಹಾಕಬೇಕು. ಇಲ್ಲದಿದ್ದರೆ ಎಲ್ಲಾ ಮನೆ ಸಾಮಗ್ರಿ ಹಾಳಾಗುತ್ತದೆ. ಸಮಸ್ಯೆ ಒಂದಾ ಎರಡು? ಎಲ್ಲಾ ನಾನೊಬ್ಬನೇ ಮಾಡಬೇಕು!” ನಾನಂದೆ.

“ಹೆದರಬೇಡಿ ನಿಮ್ಮೊಟ್ಟಿಗೆ ನಾನಿದ್ದೇನೆ. ಜೊತೆ ಜೊತೆಯಾಗಿ” ಸಿನೀಮಿಯ ರೀತಿಯಲ್ಲಿ ಅಂದಳು ಕಿವಿ ಹಿಂಡುತ್ತಾ.

ಕೆಲವು ದಿವಸ ಕಳೆಯಿತು. ಎಂದಿನಂತೆ ಕಛೇರಿಯಲ್ಲಿ ಕುಳಿತಿದ್ದಾಗ, ಪೇದೆ ಪ್ರಭಾಕರ ವರ್ಗಾವಣೆ ಆದೇಶವನ್ನು ತಂದುಕೊಟ್ಟ. ನನಗೆ ಕುಂದಾಪುರಕ್ಕೆ ವರ್ಗಾವಣೆಯಾಗಿತ್ತು. ಇಲ್ಲಿಯವರೆಗೆ ಹಿರಿಯರ ಮನೆ, ಆರು ಕಿ.ಮೀ. ದೂರದೊಳಗೆ ಕಛೇರಿ ಹಾಗೂ ಮನೆ ಎದುರಿನ ಆಟದ ಮೈದಾನ ಮೂರೇ ಗೊತ್ತಿದ್ದ ನನಗೆ ಗೊತ್ತು ಗುರಿಯಿಲ್ಲದ ಕುಂದಾಪುರ ದೊಡ್ಡ ಅಂಡಮಾನ ದ್ವೀಪದಂತೆ ಕಂಡಿತು. ಯಾರಾದರೂ ಪರಿಚಯದವರು, ಮಿತ್ರರು, ಸಂಬಂಧಿಕರು ಕುಂದಾಪುರದಲ್ಲಿ ಇರಬಹುದೇ ಎಂದು ಯೋಚಿಸಿದೆ. “ತಾನು- ತನ್ನದು” ಎಂಬ ಸಿದ್ಧಾಂತದವನಾದ ನನಗೆ ಪರಿಚಿತರು ಸಿಗುವುದು ಹೇಗೆ? ಕಛೇರಿಯ ಸಿಬ್ಬಂದಿಗಳೇ ಗತಿ ಎಂದು ನಿರ್ಣಯಕ್ಕೆ ಬಂದೆ. ಕಛೇರಿಯಿಂದ ಬಿಡುಗಡೆ ಹೊಂದಿ ಸಹನೌಕರರೊಂದಿಗೆ ಸ್ವೀಟ್ ಖಾರ ಮುಗಿಸಿ ಕಾಫಿ ಮುಗಿಸಿ, ಮನೆಗೆ ಬಂದಾಗ ಮನಸ್ಸು ಭಾರವಾಗಿತ್ತು. ಏನೋ ಕಳೆದುಕೊಂಡ ಅವ್ಯಕ್ತ ನೋವು. ಇನ್ನು ಹತ್ತು ದಿವಸ ಜೊಯಿನಿಂಗ್ ಟೈಂ ಇದೆ. ಈ ಹತ್ತು ದಿವಸದಲ್ಲಿ, ಶಾಲೆ, ಮನೆ, ಲಾರಿ, ಟಾರ್ಪಲ್, ಕೂಲಿ ಹುಡುಕಬೇಕು. ಮಕ್ಕಳ ಶಾಲೆಯ ಟಿ.ಸಿ. ತೆಗೆಯಬೇಕು. ಮನೆ ಸಾಮಗ್ರಿ ಪ್ಯಾಕ್ ಮಾಡಲು ಗೋಣಿ, ಹಗ್ಗ, ರಟ್ಪು, ಬಾಕ್ಸ್ ಎಲ್ಲಾ ಖರೀದಿಸಬೇಕು. ಮಳೆ ಶುರುವಾಗಿದೆ. ಶಾಲೆ ಶುರುವಾಗಿ ಒಂದು ವಾದವಾಗಿದೆ. ಅಯ್ಯೋ, ಇದೆಲ್ಲಾ ನನ್ನ ಕರ್ಮ ನಾನೇ ಓಡಿಯಾಡಬೇಕು. ಈ ಸರಕಾರಿ ಕೆಲಸ ಮಾಡುವುದಕ್ಕಿಂತ, ಸಂತೆಯಲ್ಲೇ ಒಂದಿಷ್ಟು ಎಳೆ ನೀರು ಮಾರಿದ್ದರೆ ಒಳ್ಳೇದಿತ್ತು ಎಂದೆನಿಸಿತು. ಸರಕಾರಿ ಕೆಲಸ ದೇವರ ಕೆಲಸ ಅಲ್ಲ, ಸೈತಾನನ ಕೆಲಸ ಎಂದು ದೇವರಿಗೆ ಮನದಲ್ಲೇ ಶಪಿಸಿದೆ. ‘ನೋಡಿ, ಆಲೋಚಿಸುತ್ತಾ ಕುಳಿತರೆ ಸಮಸ್ಯೆ ಬೆಳೆಯುತ್ತಾ ಹೋಗುತ್ತದೆ. ಹೇಗೂ ಹತ್ತು ದಿನ ಪುರುಸೊತ್ತು ಇದೆ. ಒಮ್ಮೆ ಕುಂದಾಪುರಕ್ಕೆ ಹೋಗಿ ಶಾಲೆ, ಬಾಡಿಗೆ ಮನೆ ಎಲ್ಲಾ ನೋಡಿ ಬನ್ನಿ. ಮನೆ ಮಾತ್ರ ಶಾಲೆಯ ಪಕ್ಕ ಇರಲಿ, ಮಕ್ಕಳು ಸಣ್ಣವರು. ಬೆಳಿಗ್ಗೆ, ಸಂಜೆ ರಸ್ತೆ ದಾಟಲು ಕಷ್ಟವಾಗಬಾರದು ನೆನಪಿರಲಿ’ ಅಂದಳು. ಮುಖ ಸಿಂಡರಿಸಿ ಅವಳನ್ನೊಮ್ಮೆ ನೋಡಿದೆ. ಅವಳ ಮುಖದಲ್ಲಿ ನನ್ನ ಬಗ್ಗೆ ಯಾವುದೇ ಸಹಾನುಭೂತಿ ಕಂಡು ಬರಲಿಲ್ಲ.

ನಾಲ್ಕು, ದಿನ ಆರಾಮವಾಗಿ ಮನೆಯಲ್ಲೇ ಕಳೆದ. ಇನ್ನು ಬಿದ್ದುಕೊಂಡರೆ ಕೆಲಸ ಕೆಡುತ್ತದೆ ಎಂದು ತೀರ್ಮಾನಿಸಿ, ಐದನೇ ದಿನ ಕುಂದಾಪುರಕ್ಕೆ ಹೊರಟೆ. ಕುಂದಾಪುರ ತಲುಪಿದ ನಾನು ನೇರವಾಗಿ ರಿಕ್ಷಾ ಮಾಡಿಕೊಂಡು, ನನ್ನ ಹೊಸ ಕಛೇರಿಗೆ ತಲುಪಿದೆ. ಮೇನೇಜರ್ ಮೈಸೂರಿನವರಾದ್ದರಿಂದ ಪರಿಚಯವಿರಲಿಲ್ಲ. ಸ್ವಪರಿಚಯ ಮಾಡಿಕೊಂಡೆ. ಅವರಿಗೆ ತುಂಬಾ ಸಂತೋಷವಾಯಿತು. ‘ನಿಮ, ಬಗ್ಗೆ ತುಂಬಾ ಕೇಳಿದ್ದೇನೆ, ನೀವು ತುಂಬಾ ಹಾರ್ಡ್‌ವರ್ಕರ್ ಅಂತ. ಒಳ್ಳೇದೇ ಆಯಿತು ಬಿಡಿ. ಇಲ್ಲಿ ಎಕೌಂಟ್ ಸೆಕ್ಷನ್ ಖಾಲಿಯಿದೆ. ಸದ್ಯಕ್ಕೆ ಒಬ್ಬಳು ಗುಮಾಸ್ತೆ ನೋಡಿಕೊಳ್ಳುತ್ತಾಳೆ. ಅಂದ ಹಾಗೆ ಯಾವಾಗ ಬರುತ್ತೀರಿ?’ ಮೇನೇಜರ್‌ಗೆ ಅವರ ಕಛೇರಿಯ ಸಮಸ್ಯೆಯಾದರೆ ನನಗೆ ಬಾಡಿಗೆ ಮನೆಯ, ಶಾಲೆಯ ಸಮಸ್ಯೆ ತಲೆಯಲ್ಲಿ ತಿರುಗುತ್ತಿತ್ತು . “ಒಂದು ವಾರದೊಳಗೆ ಡ್ಯೂಟಿ ರಿಪೋರ್ಟ್ ಮಾಡುತ್ತೇನೆ” ಎಂದು ಉತ್ತರಿಸಿ ಅಲ್ಲಿಂದ ಸಿಬ್ಬಂದಿಗಳ ಹಾಲಿಗೆ ಬಂದೆ. ಕೆಲವು ಸಿಬ್ಬಂದಿಗಳ ಅಲ್ಪ ಸ್ವಲ್ಪ ಪರಿಚಯವಿದ್ದು, ಇನ್ನು ಕೆಲವರ ಪರಿಚಯ ಮಾಡಿಕೊಂಡೆ. ಬಾಡಿಗೆ ಮನೆ ಬಗ್ಗೆ ವಿಚಾರಿಸಿದೆ. ಸರಕಾರಿ ವಸತಿಗೃಹ ೧೦ ಕಿ.ಮೀ. ದೂರದಲ್ಲಿದೆ. ಆದರೂ ಖಾಲಿಯಿಲ್ಲ. ಖಾಸಗಿ ಮನೆಗಳು ಹತ್ತಿರದಲ್ಲಿ ಸಿಗುವುದು ಕಷ್ಟ ಎಂದರು. ಈಗಾಗಲೇ ವರ್ಗಾವಣೆಯಾಗಿ ಬಂದ ಪೇಯೊಬ್ಬನು, ಬಾಡಿಗೆ ಮನೆ ಸಿಗದೆ ರಜೆ ಹಾಕಿ ಊರಿಗೆ ಹೋಗಿದ್ದಾನೆ ಎಂದು ಕೂಡಾ ಹೇಳಿ ನನ್ನಲ್ಲಿ ಇನ್ನಷ್ಟು, ಭೀತಿ ಹುಟ್ಟಸಿದರು. ತಲೆ ಕೆಳಗೆ ಹಾಕಿಕೊಂಡು, ದೂರದಲ್ಲಿದ್ದ ಖಾಲಿ ಕುರ್ಚಿಯಲ್ಲಿ ಕುಳಿತೆ.

‘ನಮಸ್ಕಾರ ಸಾರ್’

ತಲೆ ಎತ್ತಿ ನೋಡಿದೆ. ಸುಮಾರು ೨೫ ವರ್ಷ ಪ್ರಾಯದ ಸ್ಫುರದ್ರೂಪಿ ಹುಡುಗಿ. ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡೆಬೇಕೆನ್ನುವ ರೂಪ. ಏನು? ಎಂಬಂತೆ ಅವಳ ಮುಖ ನೋಡತೊಡಗಿದೆ.

“ನಾನು ವೈದೇಹಿ. ಇಲ್ಲಿ ಎಕೌಂಟ್ಸ್ ನೋಡುತ್ತಿದ್ದೇನೆ ಸಾರ್” ಎಂದಳು.

“ನಿಮ್ಮ ಊರು ಯಾವುದು?”

“ಇದೇ ಊರು ಸಾರ್. ಇಲ್ಲಿಯೇ ಹುಟ್ಟಿ ಬೆಳೆದದ್ದು, ಕೆಲಸಕ್ಕೆ ಸೇರಿದ್ದು. ನಮ್ಮ ಮನೆ ಆ ಕಾನ್ವೆಂಟ್ ಶಾಲೆ ಇದೆಯಲ್ಲ ಸಾರ್ ಅದರ ಪಕ್ಕದ ಮನೇನೇ. ನಮ್ಮ ತಂದೆ ಪಕ್ಕದ ದೇವಸ್ಥಾನದ ಅರ್ಚಕರು ಸಾರ್” ಒಂದೇ ಸಮನೆ ತನ್ನ ಬಯೋಡಾಟಾ ಬಿಚ್ಚಿಟ್ಟಳು. ಪರವಾಗಿಲ್ಲ ನನ್ನ ಸಹಾಯಕಿ ಚೂಟಿ ಇದ್ದಾಳೆ ಎಂದು ಗೊತ್ತಾಯಿತು. ಈಗ ನನ್ನ ಬೇಳೆ ಬೇಯಬೇಕಾದು, ಇವಳಿಂದಲೇ. ಮೊದಲ ಪೀಠಿಕೆ ಹಾಕಿದೆ. ನೋಡಮ್ಮ, ನಿನ್ನಿಂದ ನನಗೊಂದು ಉಪಕಾರ ಆಗಬೇಕು. ನನಗೆ ಎರಡು ಮಕ್ಕಳು. ದೊಡ್ಡವ ೧ನೇ ತರಗತಿ. ಸಣ್ಣವಳನ್ನು ಎಲ್‌ಕೆಜಿಗೆ ಹಾಕಬೇಕು. ಕಾನ್ವೆಂಟಿನಲ್ಲಿ ಎರಡು ಸೀಟು ಮಾಡಿಸಿ ಕೊಡಬೇಕು. ಮತ್ತೆ ಹತ್ತಿರದಲ್ಲಿ ಎಲ್ಲಾದರೂ ಒಂದು ಬಾಡಿಗೆ ಮನೆ ಸಿಗಬಹುದಾ?’ ಬಹಳ ನಿರೀಕ್ಷೆ ಇಟ್ಟುಕೊಂಡು ಅವಳ ಮುಖ ನೋಡಿದೆ. ಅವಳು ನಕ್ಕಳು. ಆ ನಗುವಿನಲ್ಲಿ ಮುಗ್ಧತೆ ಇತ್ತು. ಅದೇ ರೀತಿ ವಿಷಯವನ್ನು ಗ್ರಹಿಸಿಕೊಳ್ಳುವ ತಾಕತ್ತೂ ಇತ್ತು.

“ಬನ್ನಿ ಸಾರ್ ಕಾನ್ವೆಂಟಿಗೆ ಹೋಗಿ ಮೊದಲು ಮಕ್ಕಳಿಗೆ ಸೀಟು ಮಾಡಿಸುವಾ” ಅವಳು ಬರಬರನೆ ಮೇನೇಜರ್ ಕೋಣೆ ಹೊಕ್ಕು ಹೊರಗೆ ಹೊಗಲು ಅನುಮತಿ ಪಡೆದು ನನ್ನ ಎದುರು ನಿಂತು ಕೊಂಡಳು. ಏನೋ! ಇವತ್ತು ಎದ್ದ ಗಳಿಗೆ ಒಳ್ಳೇದಿದೆ ಎಂದು ಮನದಲ್ಲೇ ಭಾವಿಸಿಕೊಂಡು, ಆಟೋ ಹತ್ತಿ ಕಾನ್ವೆಂಟಿಗೆ ಹೋದೆವು. ವೈದೇಹಿ ನನ್ನ ಪರವಾಗಿ ಮುಖ್ಯೋಪಾಧ್ಯಾಯಿನಿಯವರೊಂದಿಗೆ ಮಾತಾಡಿ, ಅರ್ಜಿ ಫಾರಂ ಪಡೆದು, ತುಂಬಿಸಿ ನನ್ನ ಸಹಿ ಪಡೆದರು. ಸೀಟು ಖಾತ್ರಿ ಮಾಡಿಸಿ ಕೊಟ್ಟಳು. ಪರವಾಗಿಲ್ಲ ಹುಡುಗಿ, ತುಂಬ ಚೂಟಿ ಇದ್ದಾಳೆ. ಸರಿಯಾದ ವ್ಯಕ್ತಿಯನ್ನೇ ಹಿಡಿದಿದ್ದೇನೆ ಎಂದು ಗೊತ್ತಾಯಿತು ಅವಳಿಗೆ ಧನ್ಯವಾದ ಹೇಳಿದೆ. “ಬಿಡಿ ಸಾರ್ ಇದರಲ್ಲೇನು ಮಹಾ. ಆಗುವ ಸಹಾಯ ಮಾಡಿದೆ” ಎಂದಳು. ಇನ್ನು ಬಾಡಿಗೆ ಮನೆ ವಿಚಾರಿಸಿದೆ. ‘ಇದು ಸ್ವಲ್ಪ ಕಷ್ಟದ ಕೆಲಸ. ಆದರೂ ಪ್ರಯತ್ನಿಸುತ್ತೇನೆ. ನಾಳೆ ಶನಿವಾರ ಕಛೇರಿ ಕೆಲಸ ಇದೆ. ನಾಡಿದ್ದು ಭಾನುವಾರ, ಫ್ರೀ ಇದ್ದೇನೆ. ಏನಾದರೂ ಮಾಡಿ ಹುಡುಕುತ್ತೇನೆ. ನೀವು ಈಗ ಊರಿಗೆ ಹೋಗಿ ರೆಸ್ಟ್‌ ತಕೊಳ್ಳಿ ಸಾರ್. ಸೋಮವಾರ ಬನ್ನಿ ಸಾರ್” ಅಂದಳು. ನನಗೆ ವೈದೇಹಿ ಮೇಲೆ ಸಂಪೂರ್ಣ ಭರವಸೆ ಇತ್ತು. ಅವಳು ಮನೆ ಹುಡುಕಿ ಕೊಡುತ್ತಾಳೆ ಎಂದು ಕೂಡಾ ಖಾತ್ರಿಯಾಯಿತು. ಫೋನು ನಂಬ್ರ ವಿನಿಮಯ ಮಾಡಿಕೊಂಡು ನಾನು ಅವಳಿಂದ ವಿದಾಯ ಹಾಡಿದೆ. ಎರಡು ದಿನ ಆರಾಮವಾಗಿ ಮನೆಯಲ್ಲಿ ಕಳೆದೆ. ಭಾನುವಾರ ರಾತ್ರಿ ವೈದೇಹಿಯಿಂದ ಫೋನು ಬಂತು. ‘ಸಾರ್, ನಾಳೆ ಬೆಳಿಗ್ಗೆ ಬನ್ನಿ, ಮೂರು ಮನೆ ಹುಡುಕಿ ಇಟ್ಟಿದ್ದೇನೆ’ ಅಂದಳು. ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. “ನೋಡೇ ನನ್ನ ಕಾರುಬಾರು” ಹೆಂಡತಿ ಎದುರು ಮೀಸೆ ತಿರುವಿದೆ.

ಸೋಮವಾರ ನಾನು ಕುಂದಾಪುರಕ್ಕೆ ಬಂದೆ. ಗುರುವಾರ ನಾನು ಕೆಲಸಕ್ಕೆ ಹಾಜರಾಗಲೇ ಬೇಕು. ಅದರೊಳಗೆ ಮನೆ ಹುಡುಕಿ, ಮನೆ ಸಾಮಗ್ರಿ ಸಾಗಿಸಿ, ಕುಟುಂಬ ಸಮೇತ ನೆಲೆಯೂರಬೇಕು. ಇವತ್ತು ಯಾವುದಾದರೊಂದು ಮನೆಯನ್ನು, ಆಯ್ಕೆ ಮಾಡುವುದು. ಠೇವಣಿ ಎಷ್ಟು ಕೇಳುತ್ತಾರೋ ಎಂಬ ಅಳುಕು ಬೇರೆ. ಕುಂದಾಪುರ ಬಸ್‌ಸ್ಟ್ಯಾಂಡಿನಿಂದ ನೇರ ವೈದೇಹಿಯ ಮನೆಗೆ ರಿಕ್ಷಾದಲ್ಲಿ ಬಂದೆ. ಅವಳು ಅವಳ ತಂದೆ, ತಾಯಿ, ತಮ್ಮ, ತಂಗಿಯರ ಪರಿಚಯ ಮಾಡಿಸಿದಳು. ವೈದೇಹಿಯ ಅಣ್ಣನಿಗೆ ಹೋಟೆಲಿದೆ. ರಸ್ತೆಗೆ ತಾಗಿ ಹೊಟೆಲಿದ್ದರೆ ಆದೇ ಕಟ್ಟಡದ ಹಿಂದುಗಡೆ ಮನೆ. ಕಛೇರಿಗೆ ತಡವಾಗಬಹುದೆಂದು ಹೇಳಿ ಮೇನೇಜರ್‌ರವರ ಅನುಮತಿ ಹಿಂದಿನ ದಿನವೇ ಪಡೆದು ಬಂದಿದ್ದಳು. ರಿಕ್ಷಾ ಮಾಡಿಕೊಂಡು ಮೊದಲ ಮನೆ ನೋಡಲು ಹೋದೆವು. ಅದೊಂದು ಒಂದಸ್ತಿನ ಮನೆ. ಮನೆಗೆ ಸುತ್ತಲೂ ಕಲ್ಲಿನ ಕಾಂಪೌಂಡು. ವಿಶಾಲವಾದ ಗೇಟು. ಗೇಟು ತೆರೆದೊಡನೆ ನಾಯಿಯ ಘರ್ಜನೆ ಎಡಬಿಡದೆ ಕೇಳಿಬಂತು. ಮನೆಯ ಪಕ್ಕದಲ್ಲೇ ನಾಯಿಗಾಗಿಯೇ ಕಬ್ಬಿಣದ ಸರಳುಗಳಿಂದ ಒಂದು ರೂಮು ಕಟ್ಟಿದ್ದರು ಅದರೊಳಗೆ ದೊಡ್ಡ ನಾಯಿ ಕಟ್ಟಿ ಹಾಕಿದ್ದರು. ಕಾಟುನಾಯಿ ಅಲ್ಲವೆಂದು ಮೊದಲ ನೋಟದಲ್ಲೇ ಗೊತ್ತಾಯಿತು. ಅದರ ಘರ್ಜನೆಯ ಜೋರು ಎಷ್ಟಿತ್ತೆಂದರೆ ಎಂತಹ ಗಂಡೆದೆಯಾದರೂ ಒಮ್ಮೆ ಅಧೀರನಾಗಲೇಬೇಕು. ನಾಯಿಯ ಘರ್ಜನೆಗೆ ಏನೋ? ಒಬ್ಬಳು ವಯಸ್ಸಾದ ಮುದುಕಿ ಮನೆ ಬಾಗಿಲು ತೆರೆದು ಏನು ಎಂಬಂತೆ ನಮ್ಮನ್ನು ನೋಡಿದಳು. ವೈದೇಹಿ ಮುಖದಲ್ಲಿ ಅನಗತ್ಯ ನಗು ತುಂಬಿಕೊಂಡು “ಬಾಡಿಗೆಗೆ ಮನೆ ಇದೆ ಎಂದು ಯಾರೋ ಹೇಳಿದರು” ಅಂದಳು. “ಬನ್ನಿ” ಎಂದು ಆ ಹೆಂಗಸು ಒಳಗೆ ಕರೆದು ಕುಳಿತುಕೊಳ್ಳಲು ಹೇಳಿದಳು.

“ನೋಡಿ ಮೇಲಂತಸ್ತು ಖಾಲಿ ಇದೆ. ಆದರೆ ನಮ್ಮದು ಕೆಲವು ಕಂಡೀಷನ್ ಇದೆ” ಅಂದಳು. ನಾನು ವೈದೇಹಿಯ ಮುಖ ನೋಡಿದೆ. ವೈದೇಹಿ ಮುದುಕಿಯ ಮುಖವನ್ನು ‘ಏನು’ಎಂಬಂತೆ ನೋಡಿದಳು.

“ನೋಡಿ ಸಣ್ಣ ಕುಟುಂಬ ಇರಬೇಕು. ಗಂಡ, ಹೆಂಡತಿ, ಎರಡು ಮಕ್ಕಳು ಅಷ್ಟೇ. ಜಾಸ್ತಿ ನೆಂಟರು, ಸಂಬಂಧಿಕರು ಬರುವುದು, ಹೋಗುವುದು ಕೂಡದು. ಮನೆಯ ಯಜಮಾನನಿಗೆ ಕುಡಿಯುವ ಹವ್ಯಾಸ ಇರಕೂಡದು. ನಾನು ಒಬ್ಬಳೇ ಇರುವುದು. ಮನೆಯ ಒಡತಿಯ ಬಗ್ಗೆಯೂ ಸ್ವಲ್ಪ ಕಾಳಜಿ ವಹಿಸಬೇಕು. ನನ್ನ ಆರೋಗ್ಯ ಸರಿಯಿಲ್ಲ. ನಾನೆಲ್ಲಾದರೂ ನೆಂಟರಿಷ್ಟರ ಮನೆಗೆ ಹೋದರೆ ನಮ, ನಾಯಿಯ ಆರೈಕೆ ಮಾಡಬೇಕು. ನಾನು ಮತ್ತೊಮ್ಮೆ ವೈದೇಹಿಯ ಮುಖ ನೋಡಿದೆ. ನನ್ನ ಮುಖದ ಅಸಮಾಧಾನ ವೈದೇಹಿಗೆ ಅರ್ಥವಾಯಿತು. ಅವಳು ಹೆಂಗಸಿಗೆ ಕಾಣದಂತೆ ನನಗೆ ಕಣ್ಣು ಮಿಟುಕಿಸಿ ಸುಮ್ಮನಿರಿ ಎಂದು ಸಂಜ್ಞೆ ಮಾಡಿದಳು. “ಆಗಬಹುದು ನಿಮ್ಮ ಶರ್ತ ನಮಗೆ ಒಪ್ಪಿಗೆ ಇದೆ. ಇವರಿಗೆ ಎರಡೇ ಮಕ್ಕಳು. ಸಣ್ಣ ಕುಟುಂಬ” ವೈದೇಹಿ ನನ್ನ ಪರವಾಗಿ ವಕಾಲತ್ತು ಮಾಡಿದಳು. ಹೆಂಗಸು ಮಾತು ಮುಂದುವರಿಸಿದಳು, ಇನ್ನೊಂದು ಶರ್ತ ಇದೆ ಎಂದಳು. “ಹೇಳಿ” ಅಂದಳು ವೈದೇಹಿ. ನನಗೆ ಆ ಹೆಂಗಸು ಶರ್ತ ವಿಧಿಸಿದ್ದು ಇಷ್ಟವಾಗಲಿಲ್ಲ. ನನ್ನ ಕುಟುಂಬದ ಕಾಳಜಿ ವಹಿಸಲು ಕಷ್ಟಸಾಧ್ಯವಿರುವಾಗ, ಇನ್ನು ಹೆಂಗಸಿನ ಬಗ್ಗೆ ಗಮನ ಹರಿಸಲು ಇವಳೇನು ನನ್ನ ಹಿಂದಿನ ಜನ್ಮದಲ್ಲಿ ತಾಯಿಯಾಗಿದ್ದಳೇ? ಇದಲ್ಲದೆ ಅವಳ ನಾಯಿಯ ಬಗ್ಗೆಯೂ ಕಾಳಜಿ ವಹಿಸಬೇಕೆಂದರೆ” ನಾನು ಮುಖ ಗಂಟಿಕ್ಕಿ ನೆಲ ನೋಡುತ್ತಿದ್ದೆ. “ನೋಡಿ, ನಾನು ವಯಸ್ಸಾದವಳು, ರಾತ್ರಿ ಹೊತ್ತು ಕಾಂಪೌಂಡಿನಲ್ಲಿ ತಿರುಗಾಡಲು ಆಗುವುದಿಲ್ಲ. ಒಬ್ಬಳೇ ಇರುವುದು. ರಾತ್ರಿ ಎಂಟು ಗಂಟೆಗೆ ಗೇಟಿನ ಬೀಗ ಹಾಕಿ ನಾಯಿ ಬಿಟ್ಟು ಮಲಗಿ ಬಿಡುತ್ತೇನೆ. ೮ ಗಂಟೆಯ ಒಳಗೆ ಮನೆ ಸೇರಬೇಕು. ಇದು ಕಡ್ಡಾಯ.

ಈ ಶರ್ತಕ್ಕೆ ಒಪ್ಪುವುದು ಕಷ್ಟಸಾಧ್ಯವೆಂದು ವೈದೇಹಿಗೂ ಗೊತ್ತು. ಸಾರ್ವಜನಿಕರ ಒಡನಾಟ ನಮ್ಮ ಇಲಾಖೆಯಲ್ಲಿ ಜಾಸ್ತಿ ಇರುವುದರಿಂದ ಸರಿಯಾಗಿ ೫:೩೦ ಕ್ಕೆ ಕಛೇರಿ ಮುಚ್ಚುವುದು ಅಸಾಧ್ಯ. ಕೆಲವೂಮ್ಮೆ, ೮ ಗಂಟೆ ಕಛೇರಿಯಲ್ಲೇ ಆಗುವುದಿದೆ. ಮೊದಲಿನ ಶರ್ತವೇ ನನಗೆ ಇಷ್ಟವಿಲ್ಲದ್ದು. ಈ ಶರ್ತ ಮಾತ್ರ ನನ್ನನ್ನು ಕೆರಳಿಸಿತು. “ಬರುತ್ತೇನೆ” ಎಂದು ಎದ್ದು ಹೊರನಡೆದೆ. ವೈದೇಹಿ ಮೌನವಾಗಿ ನನ್ನೊಡನೆ ನಡೆದು ಬಂದಳು. ಶರ್ತವೇ ಒಪ್ಪಿಗೆಯಾಗಲಿಲ್ಲವಾದ್ದರಿಂದ ಮನೆ ನೋಡುವ ಪ್ರಶ್ನೆಯೇ ಇಲ್ಲವಾಯಿತು.

ವೈದೇಹಿ ೨ನೇ ಮನೆಯ ವಿಳಾಸವನ್ನು ರಿಕ್ಷಾದವನಿಗೆ ತೋರಿಸಿದಳು. ಆ ಮನೆ ಗದ್ದೆಯ ಮಧ್ಯದಲ್ಲಿತ್ತು. ಹೊಸ ಮನೆ. ಇದುವರೆಗೆ ಯಾರೂ ಬಾಡಿಗೆಗೆ ಬಂದಿಲ್ಲ. ಆದರೆ ಮುನ್ಸಿಪಾಲಿಟಿ ನಲ್ಲಿ ನೀರು ೧ ಫರ್ಲಾಂಗು ದೂರದಲ್ಲಿದ್ದು, ಮನೆಯೆದುರಿನ ಬಾವಿ ನೀರೇ ಗತಿಯಾಗಿತ್ತು. ಶಾಲೆಯು ಮನೆಯಿಂದ ಸುಮಾರು ೪ ಫರ್ಲಾಂಗು ದೂರ ಇದ್ದುದರಿಂದ ನಮಗೆ ಈ ಮನೆ ಇಷ್ಟವಾಗಲಿಲ್ಲ. ಆದರೆ ವೈದೇಹಿ ಒಂದು ಒಳ ದಾರಿ ತೋರಿಸಿದಳು. ಅದು ೧ ಫರ್ಲಾಂಗು ದೂರ. ಇದು ಕಾಲು ದಾರಿಯಾಗಿದ್ದು ವಾಹನ ಬರುವ ರಸ್ತೆಯಲ್ಲ. ಆದರೆ ಮಧ್ಯದಲ್ಲಿ ಒಂದು ತೋಡು ಇದ್ದು ಒಂದು ಮರದ ಸಂಕ ಹಾಕಿರುತ್ತಾರೆ. ಈ ಸಂಕಕ್ಕೆ ಹಾಕಿದ ಹಲಗೆ ಕುಂಬಾಗಿ ಅದರ ಮೇಲೆ ಮಕ್ಕಳು ನಡೆದು ಬರುವುದು ಅಪಾಯದ ವಿಷಯ. ಬದಲಾಗಿ ಮಳೆಗಾಲವಾದ್ದರಿಂದ ಸಂಕದ ಹಲಗೆವರೆಗೆ ನೀರು ತುಂಬಿ ಹರಿದು ಹೋಗುತ್ತಿತ್ತು. ಈ ಕಟ್ಟಡದ ಯಜಮಾನ ಬೈಕಿನಲ್ಲಿ ಮನೆ ತೋರಿಸಲು ಓಡಿ ಬಂದ. ಆದರೆ ಮನೆ ಇಷ್ಟವಾಗಿದ್ದು ದಾರಿಯ ವ್ಯವಸ್ಥೆ ಇಲ್ಲವಾದುದರಿಂದ ನಾನು ಮನೆ ನೋಡದೆ ಹಿಂದಿರುಗಿದೆ. ಇಷ್ಟು ಹೊತ್ತಿಗೆ ಮಧ್ಯಾಹ್ನವಾಗಿತ್ತು. ಹತ್ತಿರದ ಹೊಟೇಲಿನಲ್ಲಿ ಊಟ ಮಾಡಿ ೩ನೇ ಮನೆ ನೋಡಲು ರಿಕ್ಷಾದಲ್ಲಿ ಹೊರಟೆವು. ಇದೊಂದು ಹಂಚಿನ ಮನೆ, ಆದರೆ ಒಂದು ನಮೂನೆಯ ಬಡವರ ಕೇರಿಯಂತೆ ಕಾಣುತ್ತಿತ್ತು. ಕೇರಿಗೆ ಕಾಲಿಡುವಾಗಲೇ ಮೀನಿನ ವಾಸನೆ ಗಾಳಿಯಲ್ಲಿ ಅಲೆ ಅಲೆಯಾಗಿ ತೇಲಿ ಬರುತ್ತಿತ್ತು. ಒಂದು ಮೈದಾನದಂತಹ ಜಾಗದಲ್ಲಿ ೨೦-೩೦ ಹಂಚಿನ ಮನೆಗಳು ಒಂದಕೊಂದು ತಾಕಿಕೊಂಡಿದ್ದವು. ಅಲ್ಲಲ್ಲಿ ಸಿಂಬಳ ಸುರಿಸುವ ಮಕ್ಕಳು ಆಟವಾಡುತ್ತಾ, ಜಗಳ ಮಾಡುತ್ತಾ ರಾಶಿ ಬಿದ್ದಿದ್ದರು. ಹೆಂಗಸರು ಮನೆಯ ಅಂಗಳದಲ್ಲಿ ಓಡಾಡುತ್ತಾ ಮೀನು ಒಣಗಿಸುವ ಕೆಲಸದಲ್ಲಿ ನಿರತರಾಗಿದ್ದರು. ಕೆಲವು ಹೆಂಗಸರು ಬೈಗಳನ್ನು ರವಾನಿಸಿಕೊಳ್ಳುತ್ತಿದ್ದರು. ಕೆಲವು ಗಂಡಸರು ವಾಲಿಕೊಂಡು ಅತ್ತಿತ್ತ ನಡೆದಾಡುತ್ತಿದ್ದರು. ಈ ವಾತಾವರಣದಲ್ಲಿ ಮಕ್ಕಳು ಬೆಳೆದರೆ ಮುಂದೆ ನನ್ನ ಕೈಗೆ ಸಿಗುವುದಿಲ್ಲ ಎಂದು ಖಾತ್ರಿಯಾಯಿತು.

“ವೈದೇಹಿ, ಈ ಪರಿಸರ ಸರಿಯಿಲ್ಲ. ನಾವು ಹಿಂದೆ ಹೋಗುವಾ” ನಾನೆಂದೆ. “ಹೇಗೂ ಬಂದಾಯಿತು, ಮನೆ ನೋಡಿ ಹೋಗುವಾ ಸರ್” ಅಂದಳು. ಬಾಪೂಜಿ ಉಡುಗೆಯಲ್ಲಿದ್ದ ಮನೆಯ ಯಜಮಾನ ವಾಲುತ್ತಾ ಬಂದ. ಅವನ ವಕ್ರನಗೆ, ಕೆಂಪು ಕಣ್ಣು, ಎಣ್ಣೆ ಕಾಣದ ಕೂದಲ ರಾಶಿ, ವೀಳ್ಯೆದೆಲೆ ಜಗಿದುಕೊಂಡು ಕೆಂಪಗಾದ ಬಾಯಿ, ಹಲ್ಲು ಎಲ್ಲವೂ ಒಂದು ರೀತಿಯ ವಿಚಿತ್ರ ಅನುಭವ. ಅಲ್ಲದೆ ಭಯ. ಕೀಯನ್ನು ಬೀಗಕ್ಕೆ ಸಿಕ್ಕಿಸಲು ತಡಕಾಡುತ್ತಿದ್ದ. ಅವನ ಕೈಯಿಂದ ಕೀ ತೆಗೆದು ಬೀಗ ತೆರೆದು ಮನೆ ನೋಡಿದೆವು. ಮನೆ ತೊಂದರೆಯಿಲ್ಲ. ತೊಂದರೆಯೆಲ್ಲಾ ಜನರದ್ದು ಮತ್ತು ಪರಿಸರದ್ದು.

‘ನಾಳೆ ಬರುತ್ತೇನೆ’ ಎಂದು ಹೇಳಿ ಅಲ್ಲಿಂದ ಜಾಗ ಖಾಲಿ ಮಾಡಿದೆವು. ಮತ್ತೆ ತಿರುಗಿ ಆ ಕೇರಿಗೆ ಹೋಗಲಿಲ್ಲ. ಸಂಜೆಯಾಯಿತು. ಮನೆಯ ನೆನಪಾಯಿತು. ಇನ್ನೂ ಎರಡು ದಿನ ಇದೆ. ಗುರುವಾರ ಕರ್ತವ್ಯಕ್ಕೆ ಹಾಜರಾಗಬೇಕು. ಈಗಾಗಲೇ ಟಿಸಿ. ತೆಗೆದದ್ದರಿಂದ ೧೫ ದಿವಸದ ಮಕ್ಕಳ ಶಾಲೆ ಹೋಯಿತು. ತಲೆಯಲ್ಲಿ ಆಲೋಚನೆ ತುಂಬಿ ಹೋಯಿತು. ನಾನು ಮಂಕಾದೆ. ದೂರದಲ್ಲಿ ನಿಂತು ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊರಿಡ ವೈದೇಹಿ ಅಂದಳು. “ನೀವೇನೂ ಗಾಬರಿಯಾಗಬೇಡಿ ಸರ್. ಎಲ್ಲಾ ಸರಿಯಾಗುತ್ತದೆ. ಬಹುಶಃ ಇದೆಲ್ಲಾ ಒಳ್ಳೆಯದಕ್ಕೆ ಆಗುವುದು” ಅಂದಳು. “ಹೌದು, ಕೊನೆಗೆ ಸಮಾಧಾನಕ್ಕೆ ನಾವು ಹೀಗೆಯೇ ಹೇಳಬೇಕು ತಾನೆ? ಇಲ್ಲದಿದ್ದರೆ ಹುಚ್ಚು ಹಿಡಿಯುತ್ತದೆ” ಅಂದೆ. ಏನೋ ಆಲೋಚಿಸುತ್ತಿದ್ದ ವೈದೇಹಿ ತಟ್ಟನೆ ಅಂದಳು. “ಸಾರ್ ಒಂದು ಒಳ್ಳೆಯ ಮನೆ ಇದೆ. ಶಾಲೆಯ ಪಕ್ಕನೇ ಇದೆ. ಅದು ಬೇರೆ ಯಾರದ್ದೂ ಅಲ್ಲ. ನನ್ನ ಚಿಕ್ಕಮ್ಮನದು. ದೊಡ್ಡ ಹಂಚಿನ ಮನೆಯನ್ನು ಎರಡು ಭಾಗ ಮಾಡಿ ಎರಡು ಕುಟುಂಬಗಳಿಗೆ ಬಾಡಿಗೆ ಕೊಟ್ಟಿದ್ದಾರೆ. ಇಬ್ಬರೂ ಬ್ಯಾಂಕಿನವರು. ಒಬ್ಬರಿಗೆ ವರ್ಗಾವಣೆಯಾಗಿದೆ. ಅವರು ಮನೆ ಖಾಲಿ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ನಾನು ಇವತ್ತು ವಿಚಾರಿಸಿ ನಿಮಗೆ ಪೋನ್ ಮಾಡುತ್ತೇನೆ” ಅಂದಳು ವೈದೇಹಿ. ಕೋಲೆಬಸವನಂತೆ ತಲೆಯಾಡಿಸಿ, ಮಂಗಳೂರಿಗೆ ಬಂದೆ. ರಾತ್ರಿ ವೈದೇಹಿಯ ಪೋನು ಬಂತು. ಮನೆ ಖಾಲಿಯಿದ ಆದರೆ ಚಿಕ್ಕಮ್ಮ ಊರಲ್ಲಿ ಇಲ್ಲ. ಮದುವಗೆಂದು ಬೆಂಗಳೂರಿಗೆ ಹೋಗಿದ್ದಾರೆ. ಬುಧವಾರ ಬರುತ್ತಾರೆ. ನೀವು ಬುಧವಾರ ಬೆಳಿಗ್ಗೆ ಬನ್ನಿ ಸಾರ್ ಅಂದಳು. ಚಿಕ್ಕಮನ ಮನೆ ಅಂದ ಮೇಲೆ ಸಿಕ್ಕೇ ಸಿಗುತ್ತದೆ ಎಂಬ ಭರವಸೆಯೊಂದಿಗೆ ಹೆಂಡತಿ ಮಕ್ಕಳೊಂದಿಗೆ ಆರಾಮವಾಗಿ ಒಂದು ದಿನ ಕಳೆದೆ. ಬುಧವಾರ ಬೆಳಿಗ್ಗೆ ಕುಂದಾಪುರ ತಲುಪಿ ವೈದೇಹಿ ಮನೆಗೆ ಹೋದೆ. ವೈದೇಹಿಯ ಮನೆಯ ಹಿಂಬದಿ ಅವಳ ಚಿಕ್ಕಮ್ಮನ ಮನೆ. ವೈದೇಹಿಗೆ ಚಿಕ್ಕಪ್ಪ ಇಲ್ಲವೆ ಎಂಬ ಸಂಶಯ ಬಂತು……… ‘ಏನು ವೈದೇಹಿ ಎಲ್ಲದಕ್ಕೂ, ಚಿಕ್ಕಮ್ಮ…….. ಚಿಕ್ಕಮ್ಮ ಎಂದು ಹೇಳುತ್ತೀಯಲ್ಲಾ ಚಕ್ಕಪ್ಪ ಏನು ಮಾಡುತ್ತಾರೆ ಎಂದು ಕೇಳಿದೆ. ಬಿಡಿ ಸಾರ್ ಚಿಕ್ಕಪ್ಪನದು ಸಣ್ಣ ಗೂಡಂಗಡಿ ಇದೆ. ಎಲ್ಲಾ ಕಾರುಬಾರು ಚಿಕ್ಕಮ್ಮನದೇ. ಅವರು ಹೇಳಿದರೆ ಮುಗಿಯಿತು. ಅದು ಸುಗ್ರೀವಾಜ್ಞೆ.’ ವೈದೇಹಿ ನಗಾಡುತ್ತಾ ಅಂದಳು. ತೊಂದರೆಯಿಲ್ಲಾ ಹುಡುಗಿ, ಜುಟ್ಟಿಗೇ ಕೈ ಹಾಕುತ್ತಾಳೆ ಎಂದು ಮನಸ್ಸಿನಲ್ಲೇ ಅಂದುಕೊಂಡೆ. ಇಬ್ಬರೂ ಚಿಕ್ಕಮ್ಮನ ಮನೆಗೆ ಹೋದೆವು. ನಾನು ವರಾಂಡದಲ್ಲಿ ಕುಳಿತೆ. ವೈದೇಹಿ ಮನೆಯೊಳಗೆ ಹೋಗಿ ಸ್ವಲ್ಪ ಹೊತ್ತಿನ ನಂತರ ಒಂದು ದಢೂತಿ ಹೆಂಗಸಿನೊಂದಿಗೆ ಪ್ರತ್ಯಕ್ಷ ಆದಳು. “ನಾನು ಬೆಂಗಳೂರಿನಿಂದ ಇವತ್ತು ಬಂದೆ. ನೀವು ಮನೆ ನೋಡಿ ಬನ್ನಿ. ಇಷ್ಟವಾದ ಮೇಲೆ ಬಾಡಿಗೆ ವಿಷಯ ಮಾತಾಡುವ” ಎಂದು ಹೆಂಗಸು ಹೇಳಿದಳು. ಅವರ ನೇರ ಮಾತು ಇಷ್ಟವಾಯಿತು. ವೈದೇಹಿಯೊಂದಿಗೆ ಮನೆ ನೋಡಿದೆ. ಶಾಲೆಗೆ ಬಹಳ ಹತ್ತಿರ ಇದೆ. ೧೦೦ ಮೀಟರು ದೂರವೂ ಇಲ್ಲ. ಸಣ್ಣ ಹಂಚಿನ ಮನೆ. ವೈದೇಹಿ ಬೀಗ ತೆರೆದು ಎಲ್ಲಾ ಕೋಣೆಗಳನ್ನು ತೋರಿಸಿದಳು. ಇಪ್ಟೆಲ್ಲಾ ಆಗುವಾಗ ಪಕ್ಕದ ಮನೆಯ ಹೆಂಗಸು ತನ್ನ ಎರಡು ಸಣ್ಣಮಕ್ಕಳೆಂದಿಗೆ ಹೊರಗೆ ಬಂದರು. ವೈದೇಹಿಯನ್ನು ನೋಡಿ ನಕ್ಕರು. ಬಹುಶಃ ವೈದೇಹಿ ಪರಿಚಯ ಇರಬೇಕು. ವೈದೇಹಿ ಹೆಂಗಸಿನೆಡೆಗೆ ತಿರುಗಿ ಅಂದಳು.

“ಇವರು ನಿಮ್ಮ ನೆರೆಕೆರೆಯಾಗಿ ಬರುತ್ತಾರೆ.”

‘ಬನ್ನಿ, ಬನ್ನಿ. ಬಹಳ ಸಂತೋಷ. ಎಷ್ಟು ಮಕ್ಕಳು?’ ನಗುತ್ತಾ ಹೆಂಗಸು ಕೇಳಿತು.

“ಎರಡು” ಅಂದೆ.

‘ನಮಗೂ ಸಣ್ಣ ಫ್ಯಾಮಿಲಿ ಬಂತಲ್ಲಾ ಅಂತ ಕುಶಿ. ನನ್ನ ಮಕ್ಕಳಿಗೂ ಆಡಲು ಜೊತೆ ಸಿಕ್ಕಿದ ಹಾಗಾಯಿತು’ ಅಂದರು.

“ಹ್ಞೂಂ” ಎಂದು ತಲೆಯಾಡಿಸಿದೆ.

ಮನೆ ಒಪ್ಪಿಗೆ ಆಯಿತು. ಇನ್ನು ಬಾಡಿಗೆ, ಠೇವಣಿ ಬಗ್ಗೆ ಮಾತನಾಡಬೇಕು. ತಡ ಮಾಡಿದರೆ ಬೇರೆ ಯಾರಾದರೂ ಬಂದು ಬಿಟ್ಬಾರು ಎಂಬ ಭಯ ಬೇರೆ.

‘ವೈದೇಹಿ ನಿಮ್ಮ, ಚಿಕ್ಕಮ್ಮನ ಹತ್ತಿರ ಬಾಡಿಗೆ, ಠೇವಣಿ ಬಗ್ಗೆ ಮಾತಾಡಿ ಬರುವಾ. ನಾಳೆನೇ ಫ್ಯಾಮಿಲಿ ತರುತ್ತೇನೆ’ ಎಂದೆ.

ಚಿಕ್ಕಮ್ಮನ ಮನೆಗೆ ಹೋದಾಗ ಚಿಕ್ಕಮ್ಮ ಬ್ಯಾಂಕಿಗೆ ಕೆಲಸಕ್ಕೆ ಹೋಗಿಯಾಗಿತ್ತು. ಸೀದಾ ರಿಕ್ಷಾ ಮಾಡಿಕೊಂಡು ಬ್ಯಾಂಕಿಗೆ ಹೋದೆವು. ವೈದೇಹಿ ಮನೆ ಕೀ ಕೊಟ್ಟು ಬಂದಳು.

‘ಮನೆ ಒಪ್ಪಿಗೆಯಾಯಿತು. ಬಾಡಿಗೆ ಹಾಗೂ ಠೇವಣಿ ಬಗ್ಗೆ ವಿಚಾರಿಸಲು ಬಂದೆವು.’

೫,೦೦೦ ರೂಪಾಯಿ ಠೇವಣಿ ಹಾಗೂ ೫೦೦ ರೂಪಾಯಿ ಬಾಡಿಗೆಗೆ ಬಾಯಿ ಒಪ್ಪಂದ ಆಯಿತು. ಠೇವಣಿ ಹಣ ತಂದಿಲ್ಲವಾದ್ದರಿಂದ ನಾಳೆ ಬೆಳಿಗ್ಗೆ ಠೇವಣಿ ಕೊಟ್ಟು ಮನೆ ಕೀ ತೆಗೆದುಕೊಳ್ಳುತ್ತೇನೆ ಅಂದೆ. ಹೇಗೂ ನಾಳೆ ಕೆಲಸಕ್ಕೆ ಹಾಜರಾಗಲು ಕೊನೆಯ ದಿನ.

‘ನಾನು ಇವತ್ತು ಅಗ್ರಿಮೆಂಟು ರೆಡಿ ಮಾಡಿ ಇಡುತ್ತೇನೆ. ನೀವು ನಾಳೆ ಬೆಳಿಗ್ಗೆ ಬನ್ನಿ. ದಿನವೂ ಒಳ್ಳೇದಿದೆ. ಏನೂ ತೊಂದರೆಯಿಲ್ಲ.’ ಹೆಂಗಸು ದೇಶಾವರಿ ನಗೆ ಬೀರುತ್ತಾ ಅಂದಳು. ಸಂತೋಷ ತಡೆಯದೇ ಎರಡೂ ಕೈ ಎತ್ತಿ ಮುಗಿದು, ಅವರಿಂದ ಬೀಳ್ಕೊಟ್ಟು ರಸ್ತೆಗೆ ಬಂದೆ. “ಈಗ ಸಂತೋಷಾನ ಸಾರ್” ಅಂದಳು ವೈದೇಹಿ. “ಸಂತೋಷಮ್ಮ, ನಿಮ್ಮ ಶ್ರಮಕ್ಕೆ ಪ್ರತಿಫಲ ಸಿಕ್ಕಿತು. ತುಂಬಾ ತೊಂದರೆ ತೆಗೆದುಕೊಂಡಿರಿ. ನಿಮ್ಮಿಂದ ತುಂಬಾ ಉಪಕಾರವಾಯಿತು” ಅಂದೆ. ವೈದೇಹಿಯಿಂದ ವಿದಾಯ ಹೇಳಿ ಮಂಗಳೂರು ಬಸ್ಸು ಹತ್ತಿ ಮನೆಗೆ ಬಂದೆ. ಮನೆ ಸಿಕ್ಕಿದ ವಿಷಯ ಹೆಂಡತಿಗೆ ಹೇಳಿ, ಅವಳಿಂದ ‘ಶಹಬಾಸ್ ಗಿರಿ’ ಗಿಟ್ಟಿಸಿಕೊಂಡೆ.

ಮರುದಿನ ಗುರುವಾರ. ಹೊಸ ಕಛೇರಿಗೆ ಹೋಗಿ ಕರ್ತವ್ಯಕ್ಕೆ ಹಾಜರಾಗಬೇಕು. ಹೊಸ ಜನರು, ಹೊಸ ಕಡತಗಳು, ಹೊಸ ಕಂಟ್ರಾಕ್ಟುದಾರರು, ಸಿಬ್ಬಂದಿಗಳು ಎಲ್ಲವೂ ಹೊಸತು. ನೀಟಾಗಿ ಷೇವ್ ಮಾಡಿಕೊಂಡೆ. ಮದುವೆ ಸಮಾರಂಭಗಳಿಗೆ ತಗೆದಿರಿಸಿದ ಉದ್ದ ತೋಳಿನ ಶರ್ಟ್‌ ಹಾಗೂ ಉಲ್ಲನ್ ಪ್ಯಾಂಟು ಹಾಕಿದೆ. ಇನ್‌ಶರ್ಟ್‌ ಮಾಡಿ ಬೆಲ್ಟ್‌ ಸಿಕ್ಕಿಸಿದೆ. ಅತಿಯಾಗಿ ಷೂ ಪಾಲಿಶ್ ಮಾಡಿ ಶೂ ಅನ್ನು ಕಾಲಿಗೆ ಸಿಕ್ಕಿಸಿ ಕನ್ನಡಿ ಮುಂದೆ ನಿಂತ. ಬಿಳಿ ಬಣ್ಣ, ಮೀಸೆ ಗಡ್ಡ ಸಂಪೂರ್ಣ ಶೇವ್ ಮಾಡಿದ ದುಂಡಗಿನ ಮುಖ, ಉದ್ದ ಮೂಗು, ಬೈತಲೆ ಹಾಕಿ ಬಾಚಿದ ಕ್ರಾಪ್, ಇದಕ್ಕೆಲ್ಲಾ ಕಲಶವಿಟ್ಟಂತೆ ಆ ನಗು! ಕಚೇರಿಯಲ್ಲಿ ನನ್ನ ಸಹೋದ್ಯೋಗಿಗಳು ನನ್ನನ್ನು ‘ಹೀರೊ’ ಎಂದು ಕರೆಯುತ್ತಿದ್ದರು. ನನ್ನ ಹುರುಪು ನೋಡಿದ ಹೆಂಡತಿ ‘ಥೇಟ್ ರಾಜಕುಮಾರ್’ ಎಂದು ಅಂದಳು. ಜಂಬ ಮತ್ತು ಗತ್ತು ಹೊತ್ತು ಕೊಂಡು ಕುಂದಾಪುರ ಬಸ್ಸು ಹತ್ತಿದೆ. ಡಿಪೋಸಿಟ್ ಹಣವನ್ನು ಜೊತೆಯಲ್ಲಿ ತಗೆದುಕೊಂಡು ಹೋಗಲು ಮರೆಯಲಿಲ್ಲ. ಬಸ್‌ಸ್ಟ್ಯಾಂಡಿನಿಂದ ಇಳಿದು ವೈದೇಹಿಯ ಮನೆಗೆ ಹೋದೆ.

ವೈದೇಹಿ ಇರಲಿಲ್ಲ. ಕಚೇರಿಗೆ ಹೋಗಿದ್ದಳು. ಅವಳ ಚಿಕ್ಕಮ್ಮನ ಮನೆಗೆ ನಾನೇ ಹೋದೆ. ಮನೆಯ ಬೆಲ್ಲು ಒತ್ತಿದೆ. ದಪ್ಪ ಮೀಸೆಯ ಠೆಣಪ ದಢೂತಿ ಮಧ್ಯ ವಯಸ್ಸಿನವರು ಬಾಗಿಲು ತೆರೆದರು. ಮುಖದಲ್ಲಿ ನಗೆಯಿಲ್ಲ. ತೀರಾ ನಿರಾಸಕ್ತಿಯಿಂದ ‘ಏನು?’ ಎಂಬಂತೆ ನನ್ನ ಮುಖ ನೋಡಿದರು.

‘ವೈದೇಹಿಯ ಚಿಕ್ಕಮ್ಮ ಬೇಕಿತ್ತು’ ಅಂದೆ.

‘ಅವಳಿಲ್ಲ ಏನು ವಿಷಯ’ ಒರಟು ಸ್ವರದಲ್ಲಿ ಕೇಳಿದರು.

ಪ್ಯಾಂಟಿನ ಕಿಸೆಯಲ್ಲಿ ಜಾಗ್ರತೆಯಾಗಿ ತಗೆದಿಟ್ಟ ೫,೦೦೦ ರೂಪಾಯಿಗಳನ್ನು, ಹೊರ ತಗೆದು ಅವರಿಗೆ ತೋರಿಸುತ್ತಾ ಹೇಳಿದೆ. ‘ಈ ಡೆಪಾಸಿಟ್ ಹಣ ಅವರಿಗೆ ಕೊಟ್ಟು ಬಿಡಿ. ಮನೆಯ ಕೀ ಕೊಟ್ಟರೆ ನಾನು ಕೆಲಸದವರನ್ನು ಬಿಟ್ಟು ಕ್ಲೀನ್ ಮಾಡಿಸುತ್ತೇನೆ’ ಎಂದೆ.

‘ಇಲ್ಲರೀ, ನಾನು ವೈದೇಹಿಯ ಚಿಕ್ಕಪ್ಪ. ಆ ಮನೆಯನ್ನು ನಾನು ಮೊದಲೇ ಬೇರೆಯವರಿಗೆ ಬಾಡಿಗೆಗೆ ಕೊಟ್ಟು ಆಗಿದೆ. ಮುಂಗಡ ಹಣವನ್ನೂ ಪಡೆದು ಎಗ್ರಿಮೆಂಟು ಮಾಡಿಸಿದ್ದೆ. ನನ್ನ ಹೆಂಡತಿಗೆ ಹೇಳಲು ಮರೆತಿದ್ದ. ಬಹುಶಃ ಅವಳಿಗೆ ಗೊತ್ತಿರಲಿಲ್ಲ.’

ನಾನು ಆಶ್ಚರ್ಯದಿಂದ ಅವರ ಮುಖ ನೋಡಿದೆ. ಅವರು ಮನೆಯೊಳಗೆ ಹೋಗಲು ತವಕಿಸುತ್ತಿದ್ದರು. ಹಣ ಹಿಡಿದ ಕೈ ನಡುಗುತ್ತಿತ್ತು. ನಾನು ಹೊರಗೆ ಬಂದು ಕಚೇರಿಗೆ ಹೊರಟೆ.

ಕಚೇರಿಗೆ ಬಂದಾಗ ವೈದೇಹಿ ಕೆಲಸ ಮಾಡುತ್ತಿದ್ದಳು. ನಡೆದ ವಿಷಯ ಹೇಳಿದೆ. “ಯಾಕೆ ಹೀಗಾಯಿತು ವೈದೇಹಿ” ಎಂದು ಕೇಳಿದೆ. ಸ್ವಲ್ಪ ಹೊತ್ತು ಮೌನವಾದ ವೈದೇಹಿ ಎದುರು ಬಂದು ಬಾಗಿ ನನ್ನ ಕಿವಿಯಲ್ಲಿ ಪಿಸುಗುಟ್ಟಿದಳು.

“ನೋಡಿ ಸರ್, ನಿನ್ನ ಸಂಜೆ ಕಚೇರಿಯಿಂದ ಚಿಕ್ಕಮ್ಮ, ಮನೆಗೆ ಬರುವಾಗ ನಮ್ಮ ಕಚೇರಿಯ ಯಾರೋ ಸಿಕ್ಕಿದ್ದರಂತೆ. ಅವರು ಹೊಸ ಅಧೀಕ್ಷಕರ ಬಗ್ಗೆ ಹೇಳಿದರಂತೆ. ಮತ್ತು ತಮ್ಮ ಹೆಸರು ಹೇಳಿದರಂತೆ. ರಾತ್ರಿ ನನ್ನನ್ನು ಮನೆಗೆ ಕರೆದು ದಬಾಯಿಸಿದರು. ನೋಡುವಾಗ ನಮ್ಮ ತರವೇ ಇದ್ದಾರೆ. ನನಗೆ ಸ್ವಲ್ಬವೂ ಸಂಶಯವೇ ಇರಲಿಲ್ಲ. ಮೇಲಾಗಿ ನೀನು ಕರೆದುಕೊಂಡು ಬಂದ ಮೇಲೆ ನಮ್ಮವರಲ್ಲದೆ ಬೇರೆ ಯಾರು ಬರುತ್ತಾರೆ ಎಂದು ಕೊಂಡೆ. ಹೀಗೆ ಮಾಡುವುದಾ ನೀನು?’ ಅಂದರು. ನಾನು ಎಷ್ಟು ದಮ್ಮಯ್ಯ, ಹಾಕಿದರೂ ಅವರು ಮನಸ್ಸು ಬದಲಿಸಲಿಲ್ಲ.

ನಾನು ಅಲ್ಲಿಯೇ ಇದ್ದ ಕುರ್ಚಿಯ ಮೇಲೆ ಕುಳಿತೆ. ಹೃದಯವನ್ನು ಯಾರೋ ಬಲವಾಗಿ ಹಿಂಡಿದಂತೆ ಆಯಿತು. ಮೇಜಿನ ಕೆಳಗೆ ಕೈಗಳನ್ನಿಟ್ಬು ತಲೆಯನ್ನು ಕೈಗಳ ಮೇಲೆ ಅಡ್ಡ ಹಾಕಿದೆ. ಅಳು ತಡೆಯಲಾಗಲಿಲ್ಲ. ಒಂದು ಕ್ಷಣ, ವೈದೇಹಿ ನನ್ನ ಭುಜ ಕುಲುಕಿದಳು. ನಾನು ಅವಳ ಮುಖ ನೋಡಿದೆ. ಅವಳ ಮುಖದಲ್ಲಿ ರೋಷ ಇತ್ತು. ತನ್ನ ಕೈಯಲ್ಲಿದ್ದ ಪೆನ್ನನ್ನು ಮೇಜಿನ ಮೇಲೆ ಕುಕ್ಕಿದಳು.

‘ಏಳಿ ಸಾರ್, ಏನೋ ಭೂಕಂಪ ಆದ ಹಾಗೆ ಮಾಡುತ್ತೀರಲ್ಲಾ? ಜೀವನ ಇಲ್ಲಿಗೆ ಮುಗಿಯಲಿಲ್ಲ. ಜಗತ್ತು ವಿಶಾಲವಾಗಿದೆ. ಅದೃಷ್ಟದ ಬಾಗಿಲು ಒಂದು ಕಡೆ ಮುಚ್ಬಿದರೆ, ಇನ್ನೊಂದು ಕಡೆ ತರೆದುಕೊಂಡಿರುತ್ತದೆ. ಹುಡುಕುವ ಧೈರ್ಯ, ಸಹನೆ, ತಾಳ್ಮೆ ಬೇಕು. ಬನ್ನಿ ಹೋಗುವಾ. ಬೇರೆ ಕಡೆ ಬಾಡಿಗೆಗೆ ಮನೆ ಹುಡುಕಿ ಕೊಡುತ್ತೇನೆ’ ಎಂದು ನನ್ನ ಉತ್ತರಕ್ಕೂ ಕಾಯದೆ ನನ್ನ ಕೈ ಹಿಡಿದು ಎಳಕೊಂಡು ಹೊರಗೆ ನಡೆದಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಿತನುಡಿ
Next post ಸಾರ್‍ಥಕ

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…