ಶೇಷನ್-ಅವಶೇಷನ್!

ಶೇಷನ್-ಅವಶೇಷನ್!

ಇಂದು ಟಿ.ಎನ್. ಶೇಷನ್ ಹೆಸರು ಅತ್ಯಂತ ಪ್ರಸಿದ್ಧರ ಪಟ್ಟಿಗೆ ಸೇರಿದೆ. ಅಷ್ಟೇ ಅಲ್ಲ, ನಮ್ಮ ದೇಶದ ಕೊಳಕನ್ನು ಕತ್ತರಿಸಿಹಾಕುವ ಕಲಿಯಂದೇ ಅನೇಕರು ನಂಬಿದ್ದಾರೆ. ಚುನಾವಣೆಯ ವಿಧಿವಿಧಾನಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ಪ್ರಜಾಪ್ರಭುತ್ವವನ್ನು ರಕ್ಷಿಸುವ ರೂವಾರಿಯಂತೆ ವಿಜೃಂಭಿಸಲ್ಪಡುತ್ತಿರುವ ಶೇಷನ್ ಅವರು ನಿಜಕ್ಕೂ ಪ್ರಜಾಪ್ರಭುತ್ವವಾದಿಯೆ ಎಂಬ ಪ್ರಶ್ನೆಯನ್ನು ಒಮ್ಮೆಯಾದರೂ ಹಾಕಿಕೊಳ್ಳುವ ಇಚ್ಚೆ ಅನೇಕರಿಗೆ ಇದ್ದಂತಿಲ್ಲ. ಸ್ವತಃ ಶೇಷನ್ ಅವರೇ ಈ ಪ್ರಶ್ನೆಯನ್ನು ಎದುರಿಸಿದಂತೆ ಕಾಣುವುದಿಲ್ಲ.

ನಮ್ಮ ದೇಶದ ದೊಡ್ಡ ದೌರ್ಬಲ್ಯವೆಂದರೆ ವೈರುಧ್ಯಗಳನ್ನು ಒಳ ಹೊಕ್ಕು ಅರ್ಥಮಾಡಿಕೊಳ್ಳದ ಏಕಮುಖ ನಿಲುವಿನ ಒತ್ತಡ. ಇಂಥ ಒತ್ತಡದಿಂದ ಹೊರಬಂದು ಒಳನೋಟ ಬೀರಿದಾಗ ವೈರುಧ್ಯಗಳಲ್ಲಿ ಹುಟ್ಟುವ ಸತ್ಯ ಗೋಚರವಾಗುತ್ತದೆ. ಮೇಲ್ನೋಟಕ್ಕೆ ಪ್ರಜಾಪ್ರಭುತ್ವವಾದಿಯಂತೆ ಕಾಣುವ ವ್ಯಕ್ತಿಯಲ್ಲಿರುವ ಸರ್ವಾಧಿಕಾರಿ ನೆಲೆಗಳನ್ನೂ, ಬದಲಾವಣೆಯ ಹರಿಕಾರನಂತೆ ಕಾಣುವ ವ್ಯಕ್ತಿಯ ಒಳಗಿನ ಸಾಂಪ್ರದಾಯಿಕತೆಯನ್ನೂ ಸರಿಯಾಗಿ ಗ್ರಹಿಸದೆ ಇದ್ದರೆ ವ್ಯಕ್ತಿ ವೈಭವೀಕರಣದಲ್ಲಿ ನಿಜ ಮೌಲ್ಯಗಳ ವಂಚನೆ ನಡೆಯುತ್ತದೆ.

ಶೇಷನ್ ಅವರ ಬಗ್ಗೆ ಬರೆಯುವಾಗಲೇ ಇಷ್ಟೆಲ್ಲ ಹೇಳಲು ಕಾರಣವಿದೆ. ಬಹುಶಃ ಭಾರತದ ಯಾವ ಅಧಿಕಾರಿಗೂ ಸಿಕ್ಕಿದ ಪ್ರಚಾರ ಶೇಷನ್ ಅವರಿಗೆ ಸಿಕ್ಕಿದೆ. ತಮಗೆ ತಾವೇ ಅಮಿತಾಬ್ ಬಚ್ಚನ್ ಅವರ ಜನಪ್ರಿಯತೆಗೆ ಹೋಲಿಸಿ ಕೊಳ್ಳುವ ಶೇಷನ್ ಅವರಲ್ಲಿ ಆತ್ಮವಿಶ್ವಾಸ ಮತ್ತು ಆತ್ಮರತಿ ಎರಡೂ ಮನೆ ಮಾಡಿರುವುದನ್ನು ಗಮನಿಸಬೇಕು. ಹಾಗೆ ನೋಡಿದರೆ ಈ ವ್ಯಕ್ತಿ, ವೈರುಧ್ಯಗಳ ಒಂದು ಮೊತ್ತವೇ ಆಗಿದ್ದಾರೆ. ವೈರುಧ್ಯಗಳನ್ನು ಒಡೆದು ಹೊರಬರುವ ಅಂತರ್‌ ಶೋಧವನ್ನು ಒಳಗೊಳ್ಳದೆ ಬಾಹ್ಯಪ್ರದರ್ಶನದಲ್ಲಿ ಅಂತಃಶಕ್ತಿಯನ್ನು ಹಾಳುಮಾಡಿಕೊಳ್ಳುತ್ತಿರುವ ಇವರ ವ್ಯಕ್ತಿತ್ವದ ಮುಖವನ್ನು ಗುರುತಿಸುವ ಬದಲು ಏಕಮುಖ ವೈಭವೀಕರಣ ನಡೆಯುತ್ತಿದೆ. ಒಬ್ಬ ವ್ಯಕ್ತಿ ಒಳ್ಳೆಯ ಕೆಲಸ ಮಾಡಿದಾಗ ಹೊಗಳಲೇಬೇಕು. ಶೇಷನ್ ಅವರ ಕೆಲವು ಕ್ರಮಗಳು ಹೊಗಳಿಕೆಗೆ ಅರ್ಹವಾಗಿವೆ. ಅದರಲ್ಲಿ ಅನುಮಾನವೇ ಇಲ್ಲ. ಆದರೆ ಈ ವ್ಯಕ್ತಿಯನ್ನು ನಾಡಿನ, ನಾಳೆಯ ಅವತಾರ ಪುರುಷನನ್ನಾಗಿ ಮಾಡಿಬಿಡುತ್ತಾರೇನೊ ಎಂಬ ಕಳವಳವುಂಟಾಗುವಷ್ಟು ಪ್ರಚಾರ ನಡೆಯುತ್ತಿದೆ. ಜೊತೆಗೆ ಅವರೇ ಪ್ರಚಾರ ಪ್ರಿಯತೆಯ ಉಸುಕಿನಲ್ಲಿ ಸಿಕ್ಕಿಕೊಂಡಂತೆ ಕಾಣಿಸುತ್ತದೆ.

ಶೇಷನ್ ಅವರ ವೈರುಧ್ಯಗಳನ್ನು ಗಮನಿಸಿ : ಅವರು ಚನ್ನಾಗಿ ಮಾತನಾಡುವ ಭಾಷೆಗಳಲ್ಲಿ ಇಂಗ್ಲೀಷ್ ಮತ್ತು ಸಂಸ್ಕೃತಗಳಿಗೆ ಅಗ್ರಸ್ಥಾನ. ಅವರು ಪತ್ರಿಕಾಗೋಷ್ಠಿಯಲ್ಲಿ ಉಲ್ಲೇಖಿಸುವ ವಿಚಾರಗಳು ಇಂಗ್ಲೀಷ್ ಲೇಖಕರು ಮತ್ತು ಸಂಸ್ಕೃತ ಲೇಖಕರಿಗೆ ಸಂಬಂಧಿಸಿರುತ್ತವೆ. ಹೀಗೆ ಆಧುನಿಕ ಮತ್ತು ಪ್ರಾಚೀನ ಭಾಷೆಗಳ ಹಿಡಿತವಿರುವ ಶೇಷನ್ ಅವರಿಗೆ ಈ ಎರಡೂ ಭಾಷೆಗಳು ಭಾರತದ ವರ್ಗ ಮತ್ತು ವರ್ಣ ವ್ಯವಸ್ಥೆಯ ಮೇಲ್‌ಸ್ತರದ ಸ್ಥಾನ ಪಡೆದು, ಜನಸಾಮಾನ್ಯರ ಆಶಯಗಳಿಗೆ ಸ್ಪಂದಿಸದ, ಜನಸಾಮಾನ್ಯರ ಸಂವೇದನೆಗಳಿಗೆ ಒತ್ತಾಸೆಯಾಗದ, ಪಂಡಿತವಲಯ ಕೇಂದ್ರಿತವಾದ, ಪಾಮರ ದೂರವಾದ ನಿಲುವಿಗೆ ಸಾಧನವಾಗಿವೆಯೆಂಬುದನ್ನು ಪ್ರಾಸಂಗಿಕವಾಗಿ ನೆನೆಯಬಹುದಾಗಿದೆ. ಇನ್ನು ಶೇಷನ್ ಅವರು ತಮ್ಮನ್ನು ಹೋಲಿಸಿಕೊಳ್ಳಲು ಇಚ್ಚೆಪಡುವ ಇಬ್ಬರು ವ್ಯಕ್ತಿಗಳೆಂದರೆ ಪುರಾಣದ ಭೀಷ್ಮ ಮತ್ತು ಸಮಕಾಲೀನ ಸಿನಿಮಾ ಹೀರೋ ಅಮಿತಾಬ್ ಬಚ್ಚನ್! ಅಮಿತಾಬ್‌ಗೂ ಭೀಷ್ಮಾಚಾರ್ಯರಿಗೂ ಸಂಬಂಧವೇ ಇಲ್ಲವೆನ್ನುವಷ್ಟು ದೂರದ ವ್ಯಕ್ತಿತ್ವಗಳನ್ನು ಒಟ್ಟಿಗೇ ಆರೋಪಿಸಿಕೊಂಡು ಆನಂದ ಪಡುವವರ ಮನೋಧರ್ಮವನ್ನು ಗುರುತಿಸುವುದು ಅಗತ್ಯ. ಭಗವದ್ಗೀತೆಯಿಂದ ಪುಂಖಾನುಪುಂಖವಾಗಿ ಉಲ್ಲೇಖಗಳನ್ನು ನೀಡುವ ಶೇಷನ್ ಅವರಿಗೆ ಅಮಿತಾಬ್‌ರೊಂದಿಗೆ ಗುರುತಿಸಿಕೊಳ್ಳುವ ಚಟವೂ ಇರುವ ವೈರುಧ್ಯವನ್ನು ನಾವು ಸರಿಯಾಗಿ ಗ್ರಹಿಸಬೇಕು. ಒಂದು ಪುರಾಣ ಪಾತ್ರ- ಅದೂ ಗೌರವಾನ್ವಿತ ಪರಾಣ ಪಾತ್ರ. ಅಧಿಕಾರದಲ್ಲಿದ್ದವರಿಗೆಲ್ಲ ಬುದ್ಧಿ ಹೇಳುವಂಥ ಎತ್ತರದ ಸ್ಥಾನದಲ್ಲಿದ್ದ ಪಾತ್ರ. ಇನ್ನೊಂದು ಯಾವುದೇ ಪಾತ್ರಗಳನ್ನು ಅಭಿನಯಿಸುತ್ತ ಹೆಸರು ಮಾಡಿದ ಜೀವಂತ ಪಾತ್ರ. ಶೇಷನ್ ಅವರ ಆತ್ಮರತಿ ಎಷ್ಟಿದೆಯೆಂದರೆ, ಅವರು ತಪ್ಪಿಯೂ ತಮ್ಮನ್ನು ಪುರಾಣದ ರಾಜರೊಂದಿಗೆ ಹೋಲಿಸಿಕೊಳ್ಳುವುದಿಲ್ಲ. ರಾಜರಿಂದಲೂ ಗೌರವಾನ್ವಿತರಾದ ಶ್ರೀಕೃಷ್ಣ ಅಥವಾ ಭೀಷ್ಮಾಚಾರ್ಯರಿಗೆ ಮಾತ್ರ ಹೊಲಿಸಿಕೊಳ್ಳುತ್ತಾರೆ. ಹೋಲಿಕೆಯಲ್ಲೂ ಆಚಾರ್ಯ ಸ್ಥಾನದಲ್ಲಿರಬಯಸುವ ಇವರಿಗೆ ಭಗವದ್ಗೀತೆಯ ಬಾಯಿಪಾಠವೂ ಅನುಕೂಲಕ್ಕೆ ಬರುತ್ತದೆ. ಆದರೆ, ಅದಷ್ಟೇ ಇದ್ದರೆ ‘ಪ್ರಬುದ್ಧ ಪುರೋಹಿತ’ನಾಗಿ ಪರ್‍ಯಾವಸಾನವಾಗಬಹುದಿತ್ತು. ಆದ್ದರಿಂದ ಇಂಗ್ಲಿಷ್ ಇವರ ನೆರವಿಗೆ ಬಂದಿದೆ. ಅಮಿತಾಬ್ ಅವರ ಇಮೇಜ್ ಆಕರ್ಷಣೀಯವಾಗಿ ಕಂಡಿದೆ. ಅಂದರೆ ಸಾಂಪ್ರದಾಯಿಕತೆ ಮತ್ತು ಆಧುನಿಕತೆಗಳ ವೈರುಧ್ಯದಲ್ಲಿ ಆಧುನಿಕತೆ ಒಳ ಆವರಣವೂ ಸಾಂಪ್ರದಾಯಿಕ ನೆಲೆಗಳು ಒಳಹೂರಣವೂ ಆಗಿರುವ ವ್ಯಕ್ತಿ ಈ ಶೇಷನ್ ಎಂಬ ಅಂಶವನ್ನೂ ನಾವು ನೆನಪಿನಲ್ಲಿಡಬೇಕು.

ನನ್ನ ಮಾತಿಗೆ ಒಂದು ನಿದರ್ಶನ ಕೊಡ ಬಯಸುತ್ತೇನೆ, ಇತ್ತೀಚೆಗೆ ಕಾಂಚಿಯ ಪರಮಾಚಾರ್‍ಯರ ನಿಧನವಾದಾಗ ಶ್ರೀ ಟಿ. ಎನ್. ಶೇಷನ್ ನಡೆದುಕೊಂಡ ರೀತಿಯನ್ನು ಕೇವಲ ವೈಯಕ್ತಿಕ ಎಂದು ಕೈಬಿಡಬಹುದೆಂದು ನನಗೆ ಅನ್ನಿಸುವುದಿಲ್ಲ. ಕೇಂದ್ರ ಸರ್ಕಾರವನ್ನೂ ಅಲುಗಾಡಿಸುವ ಶಕ್ತಿಯುಳ್ಳ ವ್ಯಕ್ತಿಯೆಂದೇ ಪ್ರಸಿದ್ಧವಾಗುತ್ತ ಚುನಾವಣಾ ಕಮೀಷನರ್ ಹುದ್ದೆಗೆ ಎಂದೂ ಇಲ್ಲದ ಐಡೆಂಟಿಟಿಯನ್ನು ತಂದುಕೊಟ್ಟಿರುವ ಶೇಷನ್ ಅವರೇ ಆ ಸ್ಥಾನವನ್ನು ಅವಹೇಳನಗೊಳಿಸಿದ ಕೆಲಸವನ್ನೂ ಮಾಡಿದ್ದಾರೆ. ತಮ್ಮ ಸ್ವಂತ ಮನೆಯಲ್ಲಿ ಸಂಭವಿಸಿದ ಮರಣದ ಸಂದರ್ಭದಲ್ಲಿ ಸಾಂಪ್ರದಾಯಿಕ ಆಚರಣೆಗಳಲ್ಲಿ ತೊಡಗಿ ತಮಗೆ ಸರಿಕಂಡಂತೆ ವರ್ತಿಸುವ ಹಕ್ಕು ಶೇಷನ್ ಅವರಿಗೆ ಇದ್ದೇ ಇದೆ. ಆದರೆ ಮಠಾಧಿಪತಿಯೊಬ್ಬರು ನಿಧನರಾದಾಗ ಅವರು ಎಷ್ಟೇ ದೊಡ್ಡವರಿರಲಿ ಮತ್ತು ತಾವು ಎಷ್ಟೇ ನಿಷ್ಠ ಭಕ್ತರಾಗಿರಲಿ ತಾವೊಬ್ಬ ಅತ್ಯುನ್ನತ ಅಧಿಕಾರಿಯೆಂಬ ಸ್ಥಾನ ಗೌರವವನ್ನು ಒತ್ತೆ ಇಡುವ ಅಗತ್ಯ ಕಾಣುವುದಿಲ್ಲ. ಭಾರತದ ಒಂದು ಉನ್ನತ ಹುದ್ದೆಯಾದ ಚುನಾವಣಾ ಕಮಿಷನರ್ ಸ್ಥಾನದಿಂದಲೇ ಅವರು ಅಲ್ಲಿಗೆ ಹೋಗಿ ಸ್ವಾಮಿಗಳಿಗೆ ಗೌರವ ಸೂಚಿಸಿ ಬರುವ ಸ್ವಾತಂತ್ರ್ಯ ಅವರಿಗೆ ಇದ್ದೇ ಇದೆ. ಆದರೆ ಅವರು ಹಾಗೆ ಮಾಡಲಿಲ್ಲ. ಎದ್ದು ಕಾಣುವ ಜನಿವಾರ ಮತ್ತು ಲಾಠಿಯ ಮೂಲಕ ಕಾಣಿಸಿಕೊಂಡು ತಮ್ಮ ವ್ಯಕ್ತಿತ್ವದ ನೈಜ ನೆಲಯೊಂದನ್ನು ‘ಪ್ರಾಮಾಣಿಕವಾಗಿ’ ಪ್ರಕಟಿಸಿದರು. ಯಾಕೆಂದರೆ ಜನಿವಾರ ಮತ್ತು ಲಾಠಿಗಳು ಶೇಷನ್ ವ್ಯಕ್ತಿತ್ವದ ಭಾಗವಾಗಿಯೇ ಇದೆ. ಅದನ್ನು ಅವರು ಮುಚ್ಚಿಡಲಿಲ್ಲ ಎನ್ನುವುದೇ ಒಂದು ಮೆಚ್ಚುಗೆಯ ಸಂಗತಿ! (ಆಮೇಲೆ ಹೇಗಿದ್ದರೂ ಅಮಿತಾಬ್ ಆಕರ್ಷಣೆ ಇದ್ದೇ ಇದೆ.)

ಪ್ರಜಾಪ್ರಭುತ್ವದ ಶುದ್ದೀಕರಣಕ್ಕೆ ಬದ್ಧವಾದ ಏಕೈಕ ಶಕ್ತಿಯೆಂಬಂತೆ ಪ್ರಚಾರ ಪಡೆಯುತ್ತಿರುವ ಶೇಷನ್ ಅವರು ನಾವೆಲ್ಲ ಮೆಚ್ಚುವಂಥ ಕೆಲವು ಕೆಲಸಗಳನ್ನು ಖಂಡಿತ ಮಾಡಿದ್ದಾರೆ. ಆ ಬಗ್ಗೆ ಅನುಮಾನವೇ ಇಲ್ಲ. ಆದರೆ ದೇಶದ ‘ಅವತಾರ ಪುರುಷನ ಪಟ್ಟಕ್ಕೆ’ ಸ್ಪರ್ಧಿಯಾದವರೊಬ್ಬರನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳದೆ ವೈಯಕ್ತಿಕ ಒತ್ತಡಗಳಿಂದ ಹುಟ್ಟುವ ಅತಿರೇಕಗಳನ್ನು ವಿಜೃಂಭಿಸಿ ತಾತ್ಕಾಲಿಕ ರೋಚಕತೆಗೆ ನಾವು ಮತ್ತು ನಮ್ಮ ಮಾಧ್ಯಮಗಳು ಕಾರಣವಾಗುತ್ತಿದ್ದೇವೆಯೇ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳದಿದ್ದರೆ ಆತ್ಮವಂಚನೆಯ ಅಪಾಯ ತಪ್ಪಿದ್ದಲ್ಲ. ಆದ್ದರಿಂದಲೇ ವೈರುಧ್ಯ ಹಾಗೂ ವಿರೋಧಾಭಾಸಗಳ ಸ್ಥಿತಿಯ ಕಡೆಗೆ ನಾನು ಗಮನ ಸೆಳೆಯುತ್ತಿದ್ದೇನೆ. ಈಗ ಮತ್ತೊಂದು ಅಂಶಕ್ಕೆ ಬರೋಣ. ಪ್ರಜಾಪ್ರಭುತ್ವದ ಮೂಲ ಮೌಲ್ಯವೆಂದರೆ ಪರಸ್ಪರ ಗೌರವ ಮತ್ತು ಸಂವಾದ. ಆದರೆ ಶೇಷನ್ ಅವರ ವ್ಯಕ್ತಿತ್ವದಲ್ಲಿ ಇದಕ್ಕೆ ಜಾಗವಿದೆಯೇ?

ತಮ್ಮ ಜೊತೆಗೆ ನೇಮಿಸಿದ ಇನ್ನಿಬ್ಬರು ಚುನಾವಣಾ ಆಯುಕ್ತರ ಬಗ್ಗೆ ಪತ್ರಿಕಾಗೋಷ್ಠಿಗಳಲ್ಲಿ ಅವರು ಆಡುತ್ತ ಬಂದಿರುವ ಮಾತುಗಳು ಆಸೌಜನ್ಯದ ಅತಿಗೆ ತಲುಪಿವೆ. ಒಬ್ಬರನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ, ಇನ್ನೊಬ್ಬರನ್ನು ಮೂತ್ರಸ್ಥಾನಗಳ ಬಳಿಯೂ ನೋಡಿರುವುದಾಗಿ ಹೇಳಿದ ಶೇಷನ್ ಅವರು ಪ್ರಜಾಪ್ರಭುತ್ವದ ಮೂಲ ಪಾಠವನ್ನು ಅಳವಡಿಸಿಕೊಂಡಿದ್ದಾರೆಯೇ ಎಂಬ ಅನುಮಾನ ಬಂದರೆ ಆಶ್ಚರ್ಯವಲ್ಲ. ಇಬ್ಬರು ಅಧಿಕ ಆಯುಕ್ತರನ್ನು ನೇಮಿಸಿದ ಸರ್ಕಾರಕ್ಕೆ ವಿರುದ್ಧವಾಗಿ ವರ್ತಿಸುವುದು ಬೇರೆ. ನೇಮಕಗೊಂಡು ಬಂದ ಅಧಿಕಾರಿಗಳನ್ನು ಅಸೌಜನ್ಯದಿಂದ ನಡೆಸಿಕೊಳ್ಳುವುದು ಬೇರೆ. ಸರ್ಕಾರಕ್ಕೆ ಎದುರಾಗಿ ನಿಂತಾಗ ನಾವೆಲ್ಲ ಸಂತೋಷಪಡೋಣ, ಮೆಚ್ಚೋಣ. ಆದರೆ ತನ್ನಂಥ ಅಧಿಕಾರಿಗಳನ್ನು ಅವಹೇಳನ ಮಾಡುವ ಅತಿರೇಕವು ಆರೋಪಿತ ಶ್ರೇಷ್ಟತೆಯ ನಲೆಯಿಂದ ಹುಟ್ಟಿದೆಯೆಂಬುದನ್ನು ಮರೆಯದಿರೋಣ. ಇದು ನೈಜ ಶ್ರೇಷ್ಠತೆಯ ನೆಲೆಯಲ್ಲ. ಹುಸಿ ಶ್ರೇಷ್ಠತೆಯ ನೆಲೆ. ಆದ್ದರಿಂದಲೇ ಅದಕ್ಕೆ ಅನ್ಯರ ಸ್ಥಾನ-ಮಾನಗಳನ್ನು ಗೌರವಿಸುವ ಸೌಜನ್ಯವಿರುವುದಿಲ್ಲ.

ಇತ್ತೀಚೆಗೆ ಪತ್ರಿಕಾಗೋಷ್ಠಿಯೊಂದರಲ್ಲಿ ನಡೆದ ಘಟನೆಯನ್ನೂ ನಾವು ಗಮನಿಸಬಹುದು. ತಮ್ಮ ಕಾರ್ಯದರ್ಶಿಯ ಕೈಬರಹವನ್ನು ಅವಹೇಳನ ಮಾಡಿ ಹತ್ತು ನಿಮಿಷದಲ್ಲಿ ಟೈಪ ಮಾಡಿಕೊಂಡು ಬರಲು ಆಜ್ಞಾಪಿಸಿದ ಶೇಷನ್ ಅವರ ಆಡಳಿತದ ‘ಬಿಗಿಯನ್ನು’ ಪ್ರಶಂಸೆ ಮಾಡಲಾಗುತ್ತಿದೆ. ಪತ್ರಕರ್ತರ ಎದುರಿಗೆ ಆಡಳಿತದ ಬಿಗಿಯನ್ನು ಶೇಷನ್ ಅವರು ‘ಪ್ರದರ್ಶನ’ ಮಾಡುವ ಶೈಲಿಗೆ ಇದೊಂದು ಉದಾಹರಣೆ ಮಾತ್ರ.

ಇಲ್ಲೀವರೆಗೆ ಶೇಷನ್ ಅವರ ವೈಯಕ್ತಿಕ ಅತಿರೇಕಗಳನ್ನು ಮಾತ್ರ ಹೇಳಿ ಅವರ ‘ದಿಟ್ಟ ಕ್ರಮಗಳನ್ನು ಹಿನ್ನಲೆಗೆ ಸರಿಸುತ್ತಿದ್ದೇನೆಂದು ಭಾವಿಸಬೇಕಾಗಿಲ್ಲ.
ಯಾವುದನ್ನು ವೈಯಕ್ತಿಕ ಎಂದು ಕರೆಯಬಹುದೊ ಅದು ಕೇವಲ ವೈಯಕ್ತಿಕವಲ್ಲ, ಸಾಮಾಜಿಕವೂ ಹೌದು ಎಂಬುದಕ್ಕೆ ಈಗ ಉಲ್ಲೇಖಿಸಿರುವ ಸಂದರ್ಭಗಳು ಸಾಕ್ಷಿಯಾಗಿವೆ. ವೈಯಕ್ತಿಕ-ಸಾಮಾಜಿಕ ವ್ಯಕ್ತಿತ್ವವಾಗಿ ವೈರುಧ್ಯ ಮತ್ತು ವಿರೋಧಾಭಾಸಗಳನ್ನು ಹೇಗೆ ಇವರು ಒಳಗೊಂಡಿದ್ದಾರೆಂಬುದನ್ನು ನಾವು ಖಂಡಿತ ಮರೆಯುವಂತಿಲ್ಲ. ವೈಯಕ್ತಿಕ ವೈಪರೀತ್ಯಗಳನ್ನು ವಿಜೃಂಭಿಸುತ್ತ, ಪ್ರಜಾಸತ್ತಾತ್ಮಕವಲ್ಲದ ನಡವಳಿಕೆಯನ್ನು ಮನ್ನಿಸಬೇಕಾಗಿಲ್ಲ.

ಪ್ರಜಾಪ್ರಭುತ್ವವನ್ನು ಚುನಾವಣೆಯ ಶುದ್ಧೀಕರಣದ ಮೂಲಕ ಉಳಿಸ ಬಯಸುವ ಶೇಷನ್ ಅವರು ಎಷ್ಟು ಅಪ್ರಜಾಸತ್ತಾತ್ಮಕವಾಗಿ ನಡೆದುಕೊಳ್ಳುತ್ತಾರೆಂದರೆ ತಾವೇ ಒಂದು ಗಡವು ಹಾಕಿ ಸರ್ಕಾರವೂ ಸೇರಿದಂತೆ ಎಲ್ಲರೂ ಅದಕ್ಕೆ ಅಧೀನರಾಗಿ ನಡೆದುಕೊಳ್ಳಬೇಕೆಂದು ಆದೇಶಿಸುತ್ತಾರೆ. ಚರ್ಚೆ ಮತ್ತು ಸಂವಾದವನ್ನು ಅವರು ಎಂದೂ ಇಷ್ಟಪಡುವುದಿಲ್ಲ. ಮತದಾರರಿಗೆ ಗುರುತಿನ ಕಾರ್ಡ್ ಆದರ್ಶವನ್ನು ಯಾರೂ ಅಲ್ಲಗಳೆಯುವುದಿಲ್ಲವಾದರೂ ಸಾಧ್ಯತೆಗಳ ಬಗ್ಗೆ ಸಂವಾದವೇ ಬೇಡವೆ ? ಪತ್ರಿಕಾಗೋಷ್ಠಿಗಳಲ್ಲಿ ತುಂಬಾ ಸುಂದರವಾಗಿ ಕಾಣುವ ಶೇಷನ್ ಅವರ ಪ್ರಕಟಣೆಗಳು ಅನುಷ್ಠಾನದ ಸಂದರ್ಭದಲ್ಲಿ ಏನಾಗಬಹುದೆಂದು ಚರ್ಚೆ ಮಾಡುವ ಹಕ್ಕು, ಅಧಿಕಾರ, ಯಾರಿಗೂ ಇಲ್ಲವೆ? ಕಡೇಪಕ್ಷ ತಾಂತ್ರಿಕವಾಗಿಯಾದರೂ ಜನತೆಯ ಪ್ರತಿನಿಧಿಯಾದ ಸರ್ಕಾರದ ಜೊತೆ ಸಂವಾದಕ್ಕೆ ಮುಂದಾಗಬೇಡವೆ ? ಇದು ಪ್ರಜಾಸತ್ತಾತ್ಮಕವೆ? ‘ಅವತಾರದ ಕಲ್ಪನೆ’ಯಲ್ಲಿ ಮಾತ್ರ ಸಂವಾದ-ಚರ್ಚೆ ಇರುವುದಿಲ್ಲ. ಯಾಕೆಂದರೆ ಅವತಾರವಾಗುವುದೇ ‘ಧರ್ಮ ಸಂಸ್ಥಾಪನಾರ್ಥಾಯ’. ಅಲ್ಲಿ ಏನಿದ್ದರೂ ಏಕಮುಖ ಕ್ರಿಯೆ. ಸಂವಾದದ ಬದಲು ಸಮಾರೋಪ, ಶೇಷನ್ ಅವರ ಸುಂದರ ಪ್ರಕಟಣೆಗಳು ಸಂವಾದವನ್ನಂತೂ ದೂರ ಮಾಡಿವೆ. ಸಮಾರೋಪವಾದರೂ ಆದೀತೆ ? ನಮ್ಮ ವ್ಯವಸ್ಥೆಯಲ್ಲಿ ಅದೂ ಕಷ್ಟವೇ. ಹಾಗಿದ್ದರೆ ಕೇವಲ ಸುಂದರ ಸುದ್ದಿಗಳಾಗಿ ಸಮಾರೋಪಗೊಳ್ಳಬಹುದೆ? – ಇಂಥ ಪ್ರಶ್ನೆ ಕಾಡಿಸುವಾಗಲೇ ಎರಡು ತಾತ್ವಿಕ ನೆಲೆಗಳು ಗೋಚರವಾಗುತ್ತವೆ.

ಮೊದಲನೆಯದು -ಶೇಷನ್ ಅವರ ಮೂಲಕ ನೌಕರಶಾಹಿಯ ಮೇಲು ಗೈಯನ್ನು ನಾವು ಕಾಣುತ್ತಿದ್ದೇವೆ. ಎರಡನೆಯದು -ಪ್ರಜಾಪ್ರಭುತ್ವದ ದುರ್ಬಲ ಸಂದರ್ಭವೊಂದು ನಮ್ಮೆದುರಿಗಿದೆ. ಈ ಎರಡೂ ನೆಲೆಗಳು ಪರಸ್ಪರ ಸಂಬಂಧವನ್ನು ಪಡೆದಿವೆ. ಎಲ್ಲಿ ಜನಪ್ರತಿನಿಧಿಗಳು ನಿಜವಾದ ಪ್ರತಿನಿಧಿಗಳಾಗದೆ ಪ್ರಜಾಪ್ರಭುತ್ವದ ತಾಂತ್ರಿಕತೆಯನ್ನು ನಂಬಿ ಮತ್ತೆಲ್ಲ ಮುಖ್ಯ ಮೌಲ್ಯಗಳನ್ನು ದುರ್ಬಲಗೊಳಿಸಿ ಅಧಿಕಾರಕ್ಕಷ್ಟೇ, ಅಂಟಿಕೊಂಡಿರುತ್ತಾರೋ ಅಂಥ ಕಡೆ ನೌಕರ ಶಾಹಿ ವಿಜೃಂಭಿಸುತ್ತದೆ. ಮರೆಯಲ್ಲಿ ನೌಕರಶಾಹಿಯ ಈ ಐತಿಹಾಸಿಕ ವೈಪರೀತ್ಯದ ಸಂಕೇತವಾಗಿ ಶೇಷನ್ ಅವರು ನನಗೆ ಕಾಣಿಸುತ್ತಾರೆ. ಜನಪ್ರತಿನಿಧಿಗಳು ಪ್ರಜಾಪ್ರಭುತ್ವವನ್ನು ಒಂದು ಅಣಕದ ಸ್ಥಾನಕ್ಕೆ ತಳ್ಳಿದ್ದರ ಫಲವಾಗಿ ಶೇಷನ್‌ಗಳು ಹುಟ್ಟುತ್ತಾರೆ. ನೌಕರಶಾಹಿ ಮತ್ತು ಸರ್ವಾಧಿಕಾರಿ ಗುಣಗಳೊಂದಿಗೆ ವಿಜೃಂಭಿಸುತ್ತ, ಪ್ರಜಾಪ್ರಭುತ್ವದ ರಕ್ಷಕರೆಂಬ ಹುಸಿ ಹೆಸರನ್ನು ಪಡೆಯುತ್ತಾರೆ.

ಅದೆಷ್ಟೇ ಅದ್ಭುತವಾಗಿರಲಿ, ನೌಕರಶಾಹಿಯ ಮೇಲುಗೈ ಪ್ರಜಾ ಪ್ರಭುತ್ವದ ಅವಹೇಳನವೆಂದೇ ಅರ್ಥ. ಇದು ಏಕಕಾಲಕ್ಕೆ ಜನಪ್ರತಿನಿಧಿಗಳ ಜನವಿರೋಧಿ ನೆಲೆಯ ವ್ಯಾಖ್ಯಾನವೂ ಹೌದು, ನೌಕರಶಾಹಿಯ ಸರ್ವಾಧಿಕಾರಿ ಸೂಕ್ಷ್ಮಗಳ ಸಂಚಾರವೂ ಹೌದು. ದುರ್ಬಲ ರಾಜಕೀಯ ಕೇಂದ್ರವಿದ್ದಾಗ ನೌಕರಶಾಹಿಯ ಮೇಲುಗೈ ಸಾಧ್ಯವಾಗುತ್ತದೆ. ನೌಕರ ಶಾಹಿಯ ಮೇಲುಗೈ ಎನ್ನುವುದೇ ಮೂಲತಃ ಪ್ರಜಾಪ್ರಭುತ್ವ ವಿರೋಧಿ ನೆಲೆಯಾಗಿದೆ.

ಆದರೆ ನಮ್ಮ ಸಂದರ್ಭ ಎಷ್ಟು ಬರಗಾಲವನ್ನು ಎದುರಿಸುತ್ತಿದೆಯೆಂದರೆ ಸರ್ಕಾರದ ಅಧಿಕಾರವನ್ನು ಪ್ರಶ್ನಿಸುವುದೂ ಒಂದು ಯಾಂತ್ರಿಕ ಕ್ರಿಯೆಯಾಗಿದೆ. ಆಳುವ ವರ್ಗದ ಆಳಾಗಿರುವ ಅಧಿಕಾರಿಗಳ ತಂಡ ತುಂಬಿರುವಾಗ ಚುನಾವಣಾ ಆಯೋಗದ ಅಧಿಕಾರವನ್ನು ಮನವರಿಕೆ ಮಾಡಿಕೊಡುವಷ್ಟರ ಮಟ್ಟಿಗೆ ಶೇಷನ್ ಅವರನ್ನು ಯಾರಾದರೂ ಪ್ರಶಂಸಿಸಬೇಕು. ಚುನಾವಣೆಯ ಪ್ರಕ್ರಿಯೆಯನ್ನು ಪರಿಶುದ್ಧಗೊಳಿಸುವ ಪ್ರಯತ್ನಗಳನ್ನು ಮೆಚ್ಚಲೇಬೇಕು. ಆದರೆ ಈ ಪ್ರಯತ್ನಗಳು ಪ್ರಜಾಸತ್ತಾತ್ಮಕವಾಗಿಲ್ಲದಿದ್ದಾಗ ಆಗುವ ಅಪಾಯಗಳು ಅಪಾರ. ಜನರಲ್ಲಿ ನೌಕರಶಾಹಿಯ ವೈಭವೀಕರಣ ಮತ್ತು ಸರ್ವಾಧಿಕಾರಿ ಸೂಕ್ಷ್ಮಗಳ ಮೆಚ್ಚುಗೆ ಬೆಳೆಯುವುದಕ್ಕೆ ಶೇಷನ್ ಶೈಲಿ ಅವಕಾಶ ಮಾಡಿ ಕೊಡುತ್ತ ಆಳದಲ್ಲಿ ಅಪ್ರಜಾಸತ್ತಾತ್ಮಕವಾಗುವ ಅಪಾಯವನ್ನು ನಾವು ಮರೆತು ಮಾತನಾಡಬಾರದು. ಹಳಿ ತಪ್ಪಿದ ಹೊಗಳಿಕೆಯೂ ಅಪಾಯಕಾರಿಯಾಗಬಲ್ಲದು. ವ್ಯಕ್ತಿ ವೈಪರೀತ್ಯಗಳ ವೈಭವೀಕರಣದಲ್ಲಿ ಸತ್ಯಗಳು ಸತ್ತು ಹೋಗಬಲ್ಲವು.

ಕೊನೆಯದಾಗಿ ಒಂದು ಮಾತು : ಶೇಷನ್ ಅವರು ತಮ್ಮ ಕ್ರಿಯೆಗಳ ಮೂಲಕ ಒಂದು ಸೈದ್ಧಾಂತಿಕ ‘ಸಂಘರ್ಷ’ದ ನೆಲೆಗೆ ತಲುಪಿದರೆ ದೇಶಕ್ಕೆ ಒಳ್ಳೆಯದನ್ನು ಮಾಡಿದಂತಾಗುತ್ತದೆ. ವ್ಯಕ್ತಿ ವೈಪರೀತ್ಯದಲ್ಲಿ ಸಂಘರ್ಷವನ್ನು ಜಗಳದ ಮಟ್ಟಕ್ಕೆ ಇಳಿಸಿದರೆ ಇತಿಹಾಸ ಕ್ಷಮಿಸುವುದಿಲ್ಲ. ಈ ಘಟ್ಟದಲ್ಲಿ ಇಂಥ ಮಾತುಗಳು ಅನೇಕರಿಗೆ ರುಚಿಸದಿರಬಹುದು. ಆದರೆ ಸೈದ್ಧಾಂತಿಕ ಸಂಘರ್ಷದ ಪ್ರಬುದ್ಧತೆಯನ್ನು ತರದಿದ್ದರೆ ಶೇಷನ್ ಅವರ ಪ್ರಯತ್ನಗಳು ಪತ್ರಿಕಾಗೋಷ್ಠಿಯ ಪ್ರದರ್ಶನ ಪ್ರಿಯತೆಯಾಗಿ ಪರ್ಯಾವಸಾನವಾಗುವ ಅಪಾಯವನ್ನಂತೂ ನಾನು ಕಂಡಿದ್ದೇನೆ. ಈ ಅಪಾಯದ ನನ್ನ ಕಾಣ್ಕೆ ಸುಳ್ಳಾಗಲಿ ಎಂದು ನಾನೇ ಹಾರೈಸುತ್ತೇನೆ. ಯಾಕೆಂದರೆ ಪ್ರಜಾಪ್ರಭುತ್ವ ಉಳಿಯಬೇಕಲ್ಲ! ಜೊತೆಗೆ ಶೇಷನ್ ಕೇವಲ ಅವಶೇಷನ್ ಆಗಬಾರದಲ್ಲ!
*****
೧೩-೦೨-೧೯೯೪

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಯಣ
Next post ಹಾಡಿನಂದದ ರೂಪ

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…