ವಿರೇಚನೆ

ವಿರೇಚನೆ

ಚಿತ್ರ: ಗರ್‍ಡ್ ಆಲ್ಟಮನ್

ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ ಮಬ್ಬಾಗುತ್ತಿದೆ, ಕೆಲಸ ನಿಧಾನವಾಗುತ್ತಿದೆ — ಎಂಬೆಲ್ಲ ರೋಗಲಕ್ಷಣಗಳನ್ನು ಹೇಳಿದ ಮೇಲೆ, ಡಾಕ್ಟರರೊಬ್ಬರು ಅವನ ಹೊಟ್ಟೆಯನ್ನು ಅಲ್ಲಲ್ಲಿ ಒತ್ತಿನೋಡಿ ಭೇದಿಗೆ ಔಷಧಿ ಕೊಟ್ಟಿದ್ದರು. ಅದನ್ನು ರಾತ್ರಿ ಊಟವಾದ ಮೇಲೆ ಸೇವಿಸಿ, ಧಾರಾಳ ನೀರು ಕುಡಿದು ಮಲಗಬೇಕೆಂದೂ, ಮಾರನೆದಿನ ಭೇದಿಯಾಗುವ ಮೊದಲು ಆಹಾರ ತೆಗೆದುಕೊಳ್ಳ ಬಾರದು ಎಂದೂ ಹೇಳಿದ್ದರು.

ರಾತ್ರಿ ಬಹಳ ಹೊತ್ತು ನಿದ್ರೆ ಬರಲಿಲ್ಲ. ಸೆಕೆಯ ದಿನಗಳಾದ್ದರಿಂದ ಸೊಳ್ಳೆಗಳು ಜೋರಾಗಿದ್ದವು. ಟೇಬಲ್ ಫ಼್ಯಾನ್ ಬರೇ ಎಡಬದಿಗಷ್ಟೇ ರಕ್ಷಣೆ ಕೊಡುತ್ತಿತ್ತು. ಇದರ ಗುಟ್ಟು ತಿಳಿದ ಸೊಳ್ಳೆಗಳು ಅವನ ಬಲಬದಿಯಿಂದ ಆಕ್ರಮಿಸುತ್ತಿದ್ದುವು. ಈತ ಕೈ ತರುವಷ್ಟರಲ್ಲಿ ಅವು ಎಟುಕದ ದೂರಕ್ಕೆ ಓಡುತ್ತಿದ್ದವು. ಕೈಗೆ ಸಿಕ್ಕಿದ ಸೊಳ್ಳೆಗಳನ್ನು ತಿಕ್ಕಿಯೇ ಗೋಡೆ ರಕ್ತಮಯವಾಗಿತ್ತು. ಮಗ್ಗಲು ಹೊರಳಿದಾಗ ಅಡಿಗೆ ಸಿಕ್ಕಿ ಇನ್ನು ಕೆಲವು ಹಾಸಿಗೆಯಲ್ಲಿ ಸೇರಿಹೋಗಿದ್ದವು. ಸೊಳ್ಳೆಗಳು ಕಡಿದಲ್ಲಿ, ಕೂತಲ್ಲಿ, ಮೈ ಪರಚಿ ಕೊಳ್ಳಬೇಕೆನ್ನುವ ಅನುಭವ.

ನಸುಕಿನಲ್ಲಿ ಒಂದು ಕನಸು ಕಾಣಿಸಿತು, ಕನಸಿನಲ್ಲಿ ರಾಮರಾವಿನ ವಿಚಾರಣೆ ನಡೆಯುತ್ತಿತ್ತು. ತಾಲೂಕಾಫ಼ೀಸಿನ ಎದುರಿಗಿದ್ದ ವಿಶಾಲವಾದ ಅಂಗಳದಲ್ಲಿ ಕೆಲವು ಜನ ಸೇರಿದ್ದರು. ನ್ಯಾಯಾಧಿಪತಿಯಾಗಿ ಡೆಪ್ಯೂಟಿ ಕಲೆಕ್ಟರರು ಎಲ್ಲರಿಗಿಂತ ಎತ್ತರವಾಗಿ ಕುಳಿತಿದ್ದರು. ತಹಶೀಲ್ದಾರರು, ಮಣೆಗಾರರೇ ಮೊದಲಾದ ಅಧಿಕಾರಿಗಳು ಅವರ ಎಡಬಲಕ್ಕೆ ಕುಳಿತಿದ್ದರು. ಹೆಡ್ ಗುಮಾಸ್ತೆ ಕ್ರಿಸ್ಟೋಫ಼ರ್ ರಾಮರಾವಿನ ಬಗ್ಗೆ ಇರುವ ಆರೋಪವನ್ನು ಓದಿ ಹೇಳಿದ. ಆರೋಪಿ ರಾಮರಾವು ಆಫ಼ೀಸಿನಲ್ಲಿ ನಿದ್ದೆ ಮಾಡುತ್ತಿದ್ದನೆಂಬುದು ಆರೋಪ. ತಾ. 5-5-1975 ನೇ ಸೋಮವಾರ ಮಧ್ಯಾಹ್ನ ಎರಡು ಗಂಟೆಯಿಂದ ಎರಡು ಗಂಟೆ ಐದು ನಿಮಿಷಗಳವರೆಗೆ ಲೆಕ್ಕದ ದಫ಼್ತರುಗಳನ್ನೆ ದಿಂಬಾಗಿಟ್ಟುಕೊಂಡು ಆರೋಪಿ ನಿದ್ದೆ ಮಾಡಿದ್ದಕ್ಕೆ ಸರಕಾರದ ಪರವಾಗಿ ಸಾಕ್ಷಿ ಯಿದೆ ಎಂದು ಹೇಳಿ ಕ್ರಿಸ್ಟೋಫ಼ರ್ ಮದ್ದಳೆಯಂತೆ ಬಕ್ಕವಾಗಿದ್ದ ತನ್ನ ತಲೆಯನ್ನು ಸವರಿಕೊಂಡ, ವಿಚಾರಣೆ ಮುಂದರಿಯಿತು.

“ಆರೋಪವನ್ನು ಒಪ್ಪಿಕೊಳ್ಳುತ್ತೀಯೋ ಹೇಗೆ?”

“……………….”

“ವಯಸ್ಸು?”

“ಮೂವತ್ಮೂರು.”

“ಮದುವೆ”

“ಆಗಿಲ್ಲ.”

“ಯಾಕಾಗಿಲ್ಲ?”

“…………..”

ಡೆಪ್ಯೂಟಿ ಕಲೆಕ್ಟರರು ಇದನ್ನು ನೋಟ್ ಮಾಡಿಕೊಳ್ಳುವಂತೆ ಹೆಡ್ ಗುಮಾಸ್ತೆಗೆ ನಿರ್ದೇಶಿಸಿದರು.

“ಎಲ್ಲಿ ವಾಸವಾಗಿದ್ದಿ?”

“ವಿಶಾಲಾಕ್ಷಮ್ಮನ ಮನೆಯಲ್ಲಿ.”

“ಯಾರು ಈ ವಿಶಾಲಾಕ್ಷಮ್ಮ?”

“ಸರ್ಕಲ್ ಇನ್ ಸ್ಪೆಕ್ಟರ್ ಗುಡ್ಡಪ್ಪ ಇದ್ದನಲ್ಲ, ಅವನ ವಿಧವೆ.”

“ಆಕೆಗೂ ನಿಮಗೂ ಏನು ಸಂಬಂಧ?”

“ಸಂಬಂಧ ಏನೂ ಇಲ್ಲ. ಆಕೆಯ ಮನೆ ಮಾಳಿಗೆಯಲ್ಲಿ ನಾನೊಂದು ರೂಮು ಬಾಡಿಗೆಗೆ ಮಾಡಿಕೊಂಡಿದ್ದೇನೆ, ಅಷ್ಟೆ.”

“ಅಕ್ಷಮ್ಮನಿಗೆ ಹೆಣ್ಮಕ್ಕಳಿದ್ದಾರೆಯೆ?”

“ಒಬ್ಬಳಿದ್ದಾಳೆ ಸಾರ್, ಕುಸುಮ ಅಂತ.”

“ವಯಸ್ಸು?”

“ಇಪ್ಪತ್ತು ಅನ್ನುತ್ತಾರೆ ವಿಶಾಲಾಕ್ಷಮ್ಮ. ಇಪ್ಪತ್ತೆರಡಿರಬಹುದು ಎಂತ ನನ್ನ ಊಹೆ.”

“ಅಂಥ ಊಹೆಗೆ ಕಾರಣ?”

“………”

“ಮದುವೆಯಾಗಿಲ್ಲ?”

“ಇಲ್ಲ.”

ಕ್ರಿಸ್ಟೋಫ಼ರ್ ಇದನ್ನು ನೋಟ್ ಮಾಡಿಕೊಂಡ, ಆಮೇಲೆ ಸರಕಾರದ ಪರವಾದ ಸಾಕ್ಷಿಯನ್ನು ಕರೆದರು. ಯಾರು ಈ ಸಾಕ್ಷಿ ಎಂದು ರಾಮರಾವು ನೋಡಿದರೆ ಗರಿಗರಿ ಬಟ್ಟಿ ಹಾಕಿಕೊಂದು, ಟೈ ಧರಿಸಿ ಟ್ರಿಮ್ಮಾಗಿದ್ದ ರಂಗಣ್ಣ ಮುಂದೆ ಬಂದ. ಇದನ್ನು ಕಂಡು ರಾಮರಾವಿಗೆ ಸಿಟ್ಟುಬಂತು. ಎಲ್ಲಿ ಹೋದರಲ್ಲಿ ಇದ್ದಾನಲ್ಲ ಈ ಶನಿ ಎಂದು ಮನಸ್ಸಿನಲ್ಲೇ ಶಾಪಹಾಕಿದ.

“ಹೆಸರು?”

“ರಂಗಣ್ಣ”

“ಆರೋಪಿಯ ಪರಿಚಯವಿದೆಯೆ?”

“ಇದೆ”

“ಹೇಗೆ?”

“ಇಬ್ಬರೂ ಒಂದೇ ಆಫ಼ೀಸಿನಲ್ಲಿ ಕೆಲಸ ಮಾಡಿಕೊಂಡಿದ್ದೇವೆ. ಒಂದೇ ಮನೆಯಲ್ಲಿ ವಾಸ.”

“ವಿಶಾಲಾಕ್ಷಮ್ಮನ ಮನೆಯಲ್ಲಿ?”

“ಹೌದು.”

“ಒಂದೇ ರೂಮು?”

“ಅಲ್ಲ, ಪಕ್ಕದ ರೂಮು.”

“ಆರೋಪಿಯು ತಾ. ೫-೫-೧೯೭೫ ನೇ ಸೋಮವಾರ ಲೆಕ್ಕದ ದಫ಼್ತರುಗಳನ್ನೆ ದಿಂಬಾಗಿ ಇಟ್ಟುಕೊಂಡು ಮಧ್ಯಾಹ್ನ ಎರಡು ಗಂಟೆಯಿಂದ ಐದು ನಿಮಿಷಗಳ ವರೆಗೆ ನಿದ್ದೆ ಮಾಡಿದ್ದ ಎಂಬುದು ಗೊತ್ತೆ?”

“ಗೊತ್ತು.”

“ಹೇಗೆ ಗೊತ್ತು?”

“ನಾನು ನೋಡಿದ್ದೆ.”

“ಆದರೆ ನಿದ್ದೆ ಮಾಡುತ್ತಿದ್ದನೇ ಇಲ್ಲವೇ ಎಂಬುದು ಹೇಗೆ ಗೊತ್ತು?”

“ಗರಗಸದಂಥ ಗೊರಕೆಯ ಸದ್ದು ಕೇಳಿಸುತ್ತಿತ್ತು.”

ಆಮೇಲೆ ನ್ಯಾಯಾಧೀಶರು ತಮ್ಮ ಎಡಬಲ ಒಕ್ಕರಿಸಿದ್ದ ಅಧಿಕಾರಿಗಳೊಂದಿಗೆ ಗುಟ್ಟಾಗಿ ಸ್ವಲ್ಪ ಹೊತ್ತು ಮಾತಾಡಿದರು. ಅವರೆಲ್ಲರೂ ಜೋರಾಗಿ ತಮ್ಮ ತಮ್ಮೊಳಗೆ ವಾದಿಸತೊಡಗಿದರು. ಆರೋಪಿಗೆ ಎಷ್ಟು ಛಡಿಯೇಟು ಹಾಕಬೇಕು ಎಂಬುದುರಲ್ಲಿ ಭಿನ್ನಾಭಿಪ್ರಾಯವಿದ್ದಂತೆ ತೋರಿತು. ಒಬ್ಬರು ನೂರೆಂದರೆ ಇನ್ನೊಬ್ಬರು ಇನ್ನೂರು ಎನ್ನುತ್ತಿದ್ದರು. ಕೊನೆಗೆ ಎಷ್ಟೆಂದು ತೀರ್ಮಾನವಾಯಿತೋ ರಾಮರಾವಿಗೆ ಸ್ಪಷ್ಟವಾಗಲಿಲ್ಲ. ಆದರೆ ಪೊರಕೆ ಹಿಡಿದ ಒಬ್ಬ ದಪ್ಪ ಹೆಂಗಸು ತನ್ನ ಕಡೆಗಾಗಿ ಬರುತ್ತಿರುವುದಂತೂ ಅವನಿಗೆ ಸ್ಪಷ್ಟವಾಗಿ ಕಾಣಿಸಿತು. ಅದು ವಿಶಾಲಾಕ್ಷಮ್ಮನೇ ಇರಬಹುದು ಎಂದೆನಿಸಿ ಭಯವಾಯಿತು.

ವಾಸ್ತವಕ್ಕೂ ಕಿಟಕಿಯ ಹೊರಗೆ ವೆರಾಂಡಾದಲ್ಲಿ ಒಬ್ಬ ಹೆಂಗಸು ಪೊರಕೆ ಹಿಡಿದು ನಿಂತು ಇವನ ಕಡೆ ನೋಡುತ್ತಿದ್ದಳು. ಆಕೆ ಕೆಲಸದ ಹೆಂಗಸು ಎಂದು ಗೊತ್ತಾಯಿತು, ರಾಮರಾವಿಗೆ ಈಗಲೇ ಏಳಲು ಮನಸ್ಸಿರಲಿಲ್ಲ.

“ಈ ದಿನ ಗುಡಿಸೋದು ಬೇಡ.” ಎಂದ. ಪ್ರತಿ ರವಿವಾರ ಬೆಳಿಗ್ಗೆ ಬಂದು ಕಸಗುಡಿಸಿ ಹೋಗುವವಳು ಈ ಮಾತು ಕೇಳಿ ಖುಷಿಯಿಂದ ಹೊರಟುಹೋದಳು. ಈಗಾಗಲೆ ಕೋಣೆಯಲ್ಲಿ ಸಾಕಷ್ಟು ದೂಳು ತುಂಬಿತ್ತು. ಬೀಡಿ ಸಿಗರೇಟು ತುಂಡುಗಳು ನೆಲದಲ್ಲಿ ಧಾರಾಳ ಬಿದ್ದುಕೊಂಡಿದ್ದವು.

ಅಕಸ್ಮಾತ್ ಅವನ ಲಕ್ಶ್ಯ ತನ್ನ ಹೊಟ್ಟೆಯ ಕಡೆಗೆ ಹರಿಯಿತು. ಅದು ಗಟ್ಟಿಯಾಗಿ ಬಾತುಕೊಂಡಿತ್ತು. ಮರುಕ್ಷಣವೇ ತಾನು ಹಿಂದಿನ ರಾತ್ರಿ ಭೇದಿಗೆ ಔಷಧ ತೆಗೆದುಕೊಂಡಿದ್ದು ನೆನಪಾಯಿತು. ಬೆಳಗಿನ ಜಾವದಲ್ಲಿ ಕಂಡ ಕನಸಿಗೆ ಈ ಔಷಧಿಯೇ ಕಾರಣವೆಂದೆನಿಸಿತು. ಕನಸಿನಲ್ಲಿ ಕೆಲವು ಅಸಂಬದ್ಧಗಳಿದ್ದುದು ಅವನ ಗಮನಕ್ಕೆ ಬಂತು. ಮೊದಲನೆಯದಾಗಿ ಆತ ಆಫ಼ೀಸಿನಲ್ಲಿ ಎಂದೂ ನಿದ್ದೆ ಮಾಡಿದ್ದಿರಲಿಲ್ಲ. ಆಯಾಸದಿಂದ ಕೆಲವೊಮ್ಮೆ ಕಣ್ಣುಮುಚ್ಚಿ ಕುಳಿತುಕೊಂಡದ್ದುಂಟು. ಎರಡನೆಯದಾಗಿ ವಿಶಾಲಾಕ್ಷಮ್ಮ ತನ್ನೊಂದಿಗೆ ಸಿಟ್ಟಿಗೇಳುವುದಕ್ಕೆ ಯಾವ ಕಾರಣವೂ ಇರಲಿಲ್ಲ. ತಿಂಗಳ ಬಾಡಿಗೆಯನ್ನು ಅವನು ಕಾಲಕಾಲಕ್ಕೆ ಸರಿಯಾಗಿ ಸಂದಾಯಿಸುತ್ತಿದ್ದ. ಮುಂಗಡವಾಗಿ ಕೊಟ್ಟ ಮೂರು ತಿಂಗಳ ಹಣ ಬೇರೆ ಆಕೆಯೊಂದಿಗೆ ಇತ್ತು. ಕುಸುಮಳನ್ನು ಕಂಡರೆ ಅವನಿಗೆ ಒಂದು ಥರ ಮೈಬಿಸಿಯಾಗುತ್ತಿದ್ದರೂ ಅವಳೊಂದಿಗೆ ಎಂದಿಗೂ ಕೆಟ್ಟದಾಗಿ ವರ್ತಿಸಿರಲಿಲ್ಲ ಎಷ್ಟಾದರೂ ಕನಸು ಕನಸೇ ಎಂದುಕೊಂಡ.

ಆದರೆ ಕನಸಿಗೂ ಒಂದು ಅರ್ಥವಿದೆ ಎಂದು ಅವನು ಕೇಳಿದ್ದ. ಅದು ತನ್ನ ಮಾನಸಿಕ ಕ್ಷೋಭೆಯ ಪ್ರತೀಕವಾಗಿರಬಹುದು. ಅಥವಾ ಇನ್ನು ಮುಂದೆ ಬಂದೊದಗ ಬಹುದಾದ ಆಪತ್ತಿನ ಮುನ್ಸೂಚನೆ ಯಾಗಿರಬಹುದು. ಕ್ರಿಸ್ಟೋಫ಼ರ್ ನ ಬಕ್ಕತಲೆ ಯನ್ನು ಎಲ್ಲರೂ ಚೇಷ್ಟೆ ಮಾಡುತ್ತಿದ್ದರು. ಆದರೆ ರಾಮರಾವು ತಪ್ಪಿಯೂ ಹಾಗೆ ಮಾಡಿರಲಿಲ್ಲ. ಬದಲಾಗಿ, ಒಮ್ಮೆ ಆಫ಼ೀಸಿನಲ್ಲಿ ಕ್ರಿಸ್ಟೋಫ಼ರ್ ನ ಮುಂದೆ ಇವರೆಲ್ಲಾ ಉದ್ದಕೂದಲು ಫ಼್ಯಾಶನನ್ನು ಹೊಗಳಿ ಮಾತಾಡುತ್ತಿರಬೇಕಾದರೆ, ರಾಮರಾವು ಆತುರದಿಂದ ಬಕ್ಕತಲೆಯ ಹಲವು ಗುಣಗಳನ್ನು ಕೊಂಡಾಡಿದ್ದ. ಕ್ರಿಸ್ಟೋಫ಼ರ್ ನ ಸಾಂತ್ವನಕ್ಕೆ ಬೇಕಾಗಿ ಹೇಳಿದ ಈ ಮಾತನ್ನು ಆತ ಅಪಾರ್ಥ ಮಾಡಿಕೊಂಡಾಗ ರಾಮರಾವಿಗೆ ಅತ್ಯಂತ ಆಶ್ಚರ್ಯವಾಗಿತ್ತು. ಇದೇ ರೀತಿ, ಬೇಕಂತಲೇ ರಂಗಣ್ಣನನ್ನು ಎದುರು ಹಾಕಿಕೊಳ್ಳುವ ಪ್ರಸಂಗ ಬಂತು. ರಾಮರಾವು ವಿಶಾಲಾಕ್ಷಮ್ಮನ ಮನೆಗೆ ಬಂದ ಕೆಲವೇ ತಿಂಗಳುಗಳಲ್ಲಿ ಪಕ್ಕದ ಕೋಣೆ ಖಾಲಿ ಆಗಿತ್ತು. ಈ ಸಂಗತಿಯನ್ನು ಅವನು ನೆಲೆಯಿಲ್ಲದೆ ಅಲೆಯುತ್ತಿದ್ದ ರಂಗಣ್ಣನಿಗೆ ತಿಳಿಸುವ ಅಧಿಕಪ್ರಸಂಗ ಮಾಡಿದ. ರಂಗಣ್ಣ ಬಂದವನೇ ಕುಸುಮಳನ್ನು ರಾಮರಾವಿನ ಕೈಯಿಂದ ಜಾರಿಸಿದ.

ಕಣ್ಣುಮುಚ್ಚಿದಾಗಲೆಲ್ಲ ರಾಮರಾವಿಗೆ ಕುಸುಮಳ ರೂಪು ಕಣ್ಣಿಗೆ ಕಟ್ಟುತ್ತಿತ್ತು. ಆಕೆ ತೆಳ್ಳಗಿನ ನಸುಗೆಂಪು ಹುಡುಗಿ, ಅವಳಿಗೆ (ರಾಮರಾವಿನ ಪ್ರಕಾರ) ಉದ್ದವಾದ ನಾಸಿಕವೂ, ಚಂಚಲವಾದ ಕಣ್ಣುಗಳೂ, ಗುಂಗುರುಕೂದಲೂ ಇದ್ದವು. ಆದರೆ ಎಷ್ಟು ಬಾರಿ ಪರೀಕ್ಷೆಗೆ ಕೂತರೂ ಆಕೆ ಸ್ಕೂಲ್ ಫ಼ೈನಲ್ ಮುಗಿಸಿರಲಿಲ್ಲ. ಇಂಥ ಅನುಕೂಲ ವಾದ ಸಂದರ್ಭದಲ್ಲಿ ರಾಮರಾವು ಬಂದು ಸೇರಿಕೊಂಡದ್ದು. ವಿಶಾಲಾಕ್ಷಮ್ಮ ಒಂದುದಿನ ಅವನ ಕೋಣೆಗೆ ಬಂದು ಮಂಚದಲ್ಲಿ ಅವನ ಬಳಿಯೇ ಕುಳಿತುಕೊಂಡು, ತನ್ನ ಮುದ್ದುಮಗಳು ಹೇಗಾದರೂ ಪರೀಕ್ಷೆ ಪಾಸು ಮಾಡುವಂತೆ ಸಹಾಯ ಮಾಡಬೇಕೆಂದೂ ತಾಲೂಕಾಫ಼ೀಸಿನಲ್ಲೊ ಬೇರೆಲ್ಲೊ ಒಂದು ಕೆಲಸ ಕೊಡಿಸಬೇಕೆಂದೂ ಅವನ ಕೈಹಿಡಿದು ಕೇಳಿಕೊಂಡರು. ರಾಮರಾವಿನ ಪಾಠದ ಪರಿಣಾಮವೋ, ಕುಸುಮಳ ಅದೃಷ್ಟವೋ, ಆಕೆ ಪರೀಕ್ಷೆಯಲ್ಲಿ ಪಾಸಾದಳು. ಈ ಮಧ್ಯೆ ತನ್ನ ಮನೆಯವರು ಮದುವೆಗಾಗಿ ನಡೆಸುತ್ತಿದ್ದ ಎಲ್ಲ ಪ್ರಯತ್ನಗಳನ್ನೂ ರಾಮರಾವು ಭಂಗಗೊಳಿಸುತ್ತಲೇ ಬಂದ.

ಆಗಲೇ ಒಕ್ಕರಿಸಿದ್ದು ರಂಗಣ್ಣ, ಆತ ಬಂದದ್ದೆ ರಾಮರಾವಿನ ಗ್ರಹಗತಿಗಳು ಬದಲಾದುವು. ರಂಗಣ್ಣ ಯಾವಾಗಲೂ ಒಳ್ಳೆ ಗರಿಗರಿ ಬಟ್ಟೆ ಹಾಕಿಕೊಳ್ಳುತ್ತಿದ್ದ. ಆದು ಯಾವ ರೀತಿಯಲ್ಲಿಯೋ, ನಾಳೆಯ ಫ಼್ಯಾಶನ್ ಯಾವುದು ಎಂಬುದು ರಂಗಣ್ಣನಿಗೆ ನಿನ್ನೆಯೇ ಗೊತ್ತಾಗಿಬಿಡುತ್ತಿತ್ತು. ಪೇಟೆಗೆ ಬೆಲ್ ಬಾಟಮ್ ಬರುವುದಕ್ಕೆ ಮೊದಲೇ ರಂಗಣ್ಣ ಅದನ್ನು ಹಾಕಿಕೊಳ್ಳುತ್ತಿದ್ದ. ಪೇಟೆಗೆ ಜೀನ್ಸ್ ಬರುವ ಮೊದಲೇ ರಂಗಣ್ಣನಿಗೆ ಅದು ಬರುತ್ತಿತ್ತು. ಮೊತ್ತಮೊದಲು ಶೋಲೆ ಜಾಕೆಟ್ ಧರಿಸಿದವ ರಂಗಣ್ಣ. ಕತ್ತಿನ ತನಕ ಕೂದಲು ಬಿಟ್ಟು ಕೆಳಕ್ಕೆ ಬಾಚಿಕೊಳ್ಳುತ್ತಿದ್ದ. ಅವನ ಸೊಂಟದ ಬಳಿಯ ಜೇಬಿನಲ್ಲಿ ಸದಾ ಒಂದು ಪುಟ್ಟ ಬಾಚಣೆಗೆ.

ರಾಮರಾವಿಗೆ ಬರೇ ನೆನಪುಳು ಉಳಿದವು. ಕುಸುಮಳಿಗೆ ಪಾಠ ಹೇಳುತ್ತ ಅನೇಕ ದಿನಗಳನ್ನು ಅವಳ ಸಾಮೀಪ್ಯದಲ್ಲಿ ಕಳೆದದ್ದು ; ಪಾಠ ನಡೆಯುತ್ತಿರುವಗ ಕುಸುಮಳ ಮುಖ ರಂಗೇರುತ್ತಿದ್ದುದು, ಅತ್ಯಂತ ವೇಗದಲ್ಲಿ ತನ್ನ ಎದೆ ಹೊಡೆದು ಕೊಳ್ಳುತ್ತಿದ್ದುದು. ಆದರೂ ಒಂದೇ ಒಂದು ದಿನ ಕೂಡ ಅವಳ ಕೈಯನ್ನು ಸ್ಪರ್ಶಿಸದೆ ಇದ್ದದ್ದು; ತನ್ನ ಕಾಲುಗಳು ಅವಳ ಕಾಲಿನ ಕಡೆಗೆ ಧಾವಿಸುತ್ತಿದ್ದರೂ ತಡೆಹಿಡಿದದ್ದು. “ಕುಸುಮಾ, ಸಿನಿಮಾಕ್ಕೆ ಹೋಗೋಣವೆ?” ಎಂದು ಒಮ್ಮೆ ಯಾದರೂ ಕೇಳದೆ ಇದ್ದದ್ದು. ’ಕುಸುಮಾ ಐ ಲವ್ ಯೂ’ ಎಂದು ಒಮ್ಮೆಯಾದರೂ ಹೇಳದೆ ಇದ್ದದ್ದು……ರಾಮರಾವು ತಾನು ಏನೇನು ಮಾಡಬೇಕೆಂದಿದ್ದನೋ ಅದನ್ನೆಲ್ಲ ಈಗ ರಂಗಣ್ಣ ತನ್ನೆದುರೇ ಮಾಡುತ್ತಿರುವುದನ್ನು ಕಂಡು ಕನಲದ, ಕಾತರಿಸಿದ, ಕ್ಷೀಣಿಸಿದ.

ರಂಗಣ್ಣನನ್ನು ಇಲ್ಲಿಂದ ಹೊರಗೆ ಹಾಕುವ ಉಪಾಯಗಳಿವೆಯೊ ಎಂದು ರಾಮರಾವು ಹಲವು ಬಾರಿ ಚಿಂತಿಸಿದ್ದುಂಟು. “ಇಂಥ ಕೊಂಪೆಯಲ್ಲಿ ಯಾಕಿರ್ತೀರ ರಂಗಣ್ಣ? ಒಂದು ಪ್ರತ್ಯೇಕ ಮನೆ ಮಾಡಿಕೊಳ್ಳಬಾರದೆ?” ಎಂದು ಒಮ್ಮೆ ಕೇಳಿದ. “ಒಂದು ಮೋಟರ್ ಸೈಕಲ್ ತೆಗೊಳ್ಳಿ ಸಾರ್. ನಿತ್ಯ ಹಳ್ಳಿಗೆ ಹೋಗಿ ಬರಬಹುದಲ್ಲ? ಅಯ್ಯೋ ಈ ಹೊಟೆಲ್ ಊತ ಸಾಕೋಸಾಕು” ಎಂದು ಇನ್ನೊಮ್ಮೆ ಸೂಚಿಸಿದ. “ರಂಗಣ್ಣನಿಗೆ ಅವನ ಮಾವನ ಮಗಳೊಂದಿಗೆ ಮದುವೆ ನಿಶ್ಚಯವಾಗಿದೆ” ಎಂದು ವಿಶಾಲಾಕ್ಷಮ್ಮನ ಬಳಿ ಸುಳ್ಳೇ ಹೇಳಿ ನೋಡಿದ.

ಇದೇ ಸಂದರ್ಭದಲ್ಲಿ ರಾಮರಾವಿಗೆ ಅಜೀರ್ಣವೇ ಮುಂತಾದ ವ್ಯಾಧಿಗಳು ಕಾಣಿಸಿಕೊಂಡದ್ದು. ದಿನೇ ದಿನೇ ಸಣಕಲಾಗತೊಡಗಿದ. ಆಫ಼ೀಸಿನ ಕೆಲಸ ಕುಂಠಿತ ವಾಯಿತೆ? ಲೆಕ್ಕ ಮಾಡುವಾಗ ತಪ್ಪಿತೆ? ಅಧಿಕಾರಿಗಳ ನಿರ್ದೇಶಗಳು ಮರೆತು ಹೋದವೆ? ಆಫ಼ೀಸಿಗೆ ಮುಟ್ಟಲು ತಡವಾಯಿತೆ? ಆಫ಼ೀಸಿಂದ ಹೊರಡುವುದು ಸ್ವಲ್ಪ ಬೇಗ ಆಯಿತೆ? ಇರಬಹುದು. ಇವೆಲ್ಲಕ್ಕೂ ಭೇದಿಯೊಂದೇ ಮಾರ್ಗವೆಂದು ಡಾಕ್ಟರರು ಹೇಳಿದರು.

ರಾಮರಾವು ತಲೆದಿಂಬಿಗೆ ಆತುಕೊಂಡು ಒಂದು ಬೀಡಿ ಹಚ್ಚಿ ಸೇದತೊಡಗಿದ. ಚಹಾಕ್ಕೆ ಹೋಗುವಂತಿರಲಿಲ್ಲ. ತಿಂದಿ ತಿನ್ನುವಂತಿರಲಿಲ್ಲ. ಹೊಟ್ಟೆಯಾದರೋ ಗಾಳಿ ಹಾಕಿದ ಕಾಲ್ಚೆಂಡಿನಂತೆ ಗಟ್ಟಿಯಾಗಿ ಊದಿಕೊಂಡಿತ್ತು. ಇನ್ನೇನು ಮಾಡುವುದೆಂದು ತಿಳಿಯದೆ ಇಷ್ಟದೈವವನ್ನು ನೆನಸಿಕೊಳ್ಳುತ್ತಿದ್ದ ಕಾಲದಲ್ಲಿ ಮಾಳಿಗೆಯ ಮೆಟ್ಟೆಲು ಏರುವ ಸದ್ದು ಕೇಳಿಸತೊಡಗಿತು. ರಂಗಣ್ಣ ಬೆಳಗಿನ ಉಪಾಹಾರ ತಿಂದು ಬರುತ್ತಿರಬಹುದು ಎನಿಸಿತು. ಬೆಳಗ್ಗೆ ಅವನ ಮುಖ ನೋಡಬಾರದು ಎಂದು ಕಣ್ಣುಮುಚ್ಚಿ ಕುಳಿತುಕೊಂಡ. ಬಾಗಿಲು ತಟ್ಟಿದ ಸದ್ದಾಯಿತು. ಎಲಾ ಇವನ ಎಂದುಕೊಳ್ಳುತ್ತಿರುವಷ್ಟರಲ್ಲಿ ’ರಾಮರಾಯರೇ, ರಾಮರಾಯರೇ’ ಎಂದು ಕರೆಯುತ್ತಿರುವುದು ಕೇಳಿಸಿತು.

ಆಫ಼ೀಸಿನ ಏನೋ ಕೆಲಸ ಮಾಡಿಸಿಕೊಳ್ಳಲು ಬಂದ ಜನರಾಗಿರಬಹುದು ಎಂದೆನಿಸಿತು. ರಾಮರಾವಿಗೆ ಅಂದು ಯಾರನ್ನೂ ನೋಡುವ ಮನಸ್ಸಿರಲಿಲ್ಲ. ಆದರೂ ಬಾಗಿಲು ಬಡಿಯುವ ಸದ್ದನ್ನು ತಡೆಯಲಾರದೆ ಎದ್ದು ಹೋಗಿ ಬಾಗಿಲು ತೆರೆದು ನೋಡಿದರೆ ತನ್ನೂರಿನ ಮದುವೆ ಮರಿಯಪ್ಪ ನಿಂತಿದ್ದ. ಐದಡಿ ಎತ್ತರದ ವ್ಯಕ್ತಿ, ಬೂದುಗುಂಬಳದಂತೆ ಉರುಟಾದ ಮುಖ. ನಕ್ಕು ಕೈ ಜೋಡಿಸಿ ವಂದಿಸುತ್ತಾ ಒಳಹೊಕ್ಕ. “ಹೀಗೇ ನೋಡಿ ಹೋಗೋಣ ಅಂತ ಬಂದೆ” ಎಂದ. “ನಿಮ್ಮ ಅಪ್ಪ ಹೇಳಿದ್ದರು. ಎಲ್ಲಾದರೂ ಒಳ್ಳೆ ಹುಡುಗಿಯರಿದ್ದರೆ ಹೇಳಿ, ಅಂತ. ಇದೋ ಇಲ್ಲಿವೆ ಕೆಲವು ತೊಳಿದ ಮಾವಿನ ಹಣ್ಣಿನಂತೆ ಫ಼್ರೆಶ್ಶಾಗಿ. ಹೇಗೊ ಪೇಟೆಗೆ ಬರುವವನಿದ್ದೆ. ತೋರಿಸೋಣ ಅಂತ ನಿಮ್ಮ ರೂಮು ಹುಡುಕಿ ಬಂದೆ. ಅಹಹಾ ಎಷ್ಟು ಚಲೋ ರೂಮು. ” ಎನ್ನುತ್ತಾ ಚೀಲದೊಳಗಿಂದ ಒಂದು‌ಆಲ್ಬಂ ಹೊರತೆಗೆದ. ಒಂದೊಂದೇ ಪುಟ ಮಗುಚುತ್ತಾ ಅದರಲ್ಲಿದ್ದ ಫೋಟೋಗಳನ್ನು ತೋರಿಸಿದ. ಆಯಾ ಹುಡುಗಿಯರ ಹೆಸರು. ಕುಲಗೋತ್ರಗಳನ್ನೂ ಸೌಂದರ್ಯವನ್ನೂ ವಿವರಿಸತೊಡಗಿದ. ವಿವರಿಸುತ್ತ ರಾಮರಾವಿನ ಕಡೆಗೆ ಆಗಾಗ ಕಣ್ಣು ಮಿಟುಕಿಸುತ್ತಿದ್ದ. ಇವನನ್ನು ಒದ್ದೋಡಿಸಬೇಕೆಂದಿನಿಸಿತು.

“ಒಟ್ಟು ಎಷ್ಟಾಯಿತು?” ಎಂದ.

ಮರಿಯಪ್ಪ ಅರ್ಥವಾಗದೆ ಮಿಕಮಿಕ ನೋಡಿದ. ರಾಮರಾವು ಬೇಸರದಿಂದ, “ಸರಿ ಈಗ ಹೋಗಯ್ಯ, ಆಮೇಲೆ ಎಂದಾದರೂ ಮಾತಾಡೋಣವಂತೆ.” ಎಂದ.

“ಸಾರ್, ಒಂದೈದು ರೂಪಾಯಿ ಇದ್ದರೆ…..”

ರಾಮರಾವು ಅವನ ಕೈಗೆ ಐವತ್ತು ಪೈಸೆ ಹಾಕಿದ. ಆತ ಇನ್ನೇನು ಹೊರಡ ಬೇಕು ಅನ್ನುವಷ್ಟರಲ್ಲಿ ಮತ್ತಿಬ್ಬರು ಪ್ರವೇಶಿಸಿದರು. ವಾಸು ಮತ್ತು ಕೃಷ್ಣಯ್ಯ, ವಾಸು ಇಸ್ಟೀಟು ಎಲೆಗಳನ್ನು ಕಲಸುತ್ತಲೇ ಬಂದ. ಮುಂದೆ ಆಗುವುದನ್ನು ಊಹಿಸಿ ಕೊಂಡ ಮದುವೆ ಮರಿಯಪ್ಪ ಮುಂದಿಟ್ಟ ಕಾಲನ್ನು ಹಿಂದಕ್ಕೆಳೆದ. “ಹಲೋ” ಎಂದ ವಾಸು. “ಹೇಗಿದ್ದೀ?” ಎಂದ ಕೃಷ್ಣಯ್ಯ. “ಏಳಯ್ಯ, ಇನ್ನೂ ಬಿದ್ಕೊಂಡಿದ್ದೀಯಲ್ಲ ಹಾಸಿಗೆಯಲ್ಲಿ! ” ಎಂದು ಅವರು ಹಾಸಿಗೆಯಿಂದ ಚದ್ದರ ತೆಗೆದು ದೂಳು ತುಂಬಿದ ನೆಲದಲ್ಲಿ ಹಾಸಿದರು. ಮರಿಯಪ್ಪ ಮುಂದೆ ಬಂದು ಅವರಿಗೆ ಸಹಾಯ ಮಾಡಿದ.

“ರಮ್ಮಿ ಯಾದರೆ ನಾನಿದ್ದೇನೆ.” ಎಂದ ಮರಿಯಪ್ಪ. ಇದು ಕೇಳಿ ರಾಮರಾವಿಗೆ ಕೆರಳಿತು. “ಬ್ರಿಜ್” ಎಂದ. ಸರಿ, ಎಂದಾಯಿತು ಮರಿಯಪ್ಪನದು. “ರಮ್ಮಿಯೇ ಆಗಲಿ” ಎಂದ ಕೃಷ್ಣಯ್ಯ, ಶಾಪಹಾಕುತ್ತ ರಾಮರಾವು ಅವರೊಂದಿಗೆ ಕುಳಿತ.

ತೊಡೆಗಳ ಮೇಲೆ ಹೊಟ್ಟೆಯನ್ನೇರಿಸಿ ಕುಳಿತುಕೊಂಡ ಮರಿಯಪ್ಪ ಎಲೆಗಳನ್ನು ಮಿಂಚಿನಂತೆ ಕಲೆಸಿ ಹಾಕಿದ. ನಂತರ ಬೆರಳನ್ನು ನಾಲಿಗೆಯಲ್ಲಿ ಅದ್ದುತ್ತಾ ಎಲೆಗಳನ್ನು ಶೇಖರಿಸಿದ. ಎಲ್ಲರ ಕೈಯಲ್ಲೂ ಒಂದೊಂದು ಬೀಸಣಿಗೆಯಂತಹ ರಚನೆ ಸಿದ್ಧವಾಯಿತು. ಎಲ್ಲರೂ ಆಟದಲ್ಲಿ ಮಗ್ನರಾದಂತೆ ಕೋಣೆಯ ತುಂಬ ಬೀಡಿ ಸಿಗರೇಟುಗಳ ಹೊಗೆ ತುಂಬಿತು. ಮರಿಯಪ್ಪ ಧಾರಾಳವಾ‌ಅಗಿ ಸಿಗರೇಟುಗಳನ್ನು ದೋಚುತ್ತಿದ್ದ. ಆಟದ ಮಧ್ಯೆ ವಾಸು ಮತ್ತು ಕೃಷ್ಣಯ್ಯರ ಪರಿಚಯ ಮಾಡಿಕೊಂಡ. ಅವರ ಕುಲ ಗೋತ್ರ ವಿಚಾರಿಸಿದ. “ಇನ್ನೂ ಮದುವೆಯಾಗಿಲ್ಲವೆ?” ಎಂದು ಕೇಳಿದ. “ನಿಮಗೊಂದು ತೋರಿಸುತ್ತೇನೆ ಆಮೇಲೆ” ಎಂದ.

ಈ ಮಧ್ಯೆ ಭೇದಿಯ ಯಾವ ಲಕ್ಷಣಗಳೂ ಕಾಣಿಸಿದೆ ರಾಮರಾವಿಗೆ ಔಷಧಿಯ ಮೇಲೆಯೇ ಅಪನಂಬಿಕೆಯುಂಟಾಗತೊಡಗಿತು. ಬೆಳಗ್ಗಿನ ಉಪಾಹಾರ ಆಗಿರಲಿಲ್ಲ. ಮಧ್ಯಾಹ್ನದ ಅನ್ನಕ್ಕೂ ಸಂಚಕಾರವಾಗಬಹುದು ಎನಿಸಿತು. ಆದರೇನು, ಹಸಿವಿನ ಸುಳಿವೇ ಇರಲಿಲ್ಲ. ಇದ್ದರೆ ಹೀಗಿರಬೇಕಯ್ಯ ದೇವತೆಗಳ ಹಾಗೆ —–ಎಂದು ತನಗೇ ಅಂದುಕೊಂಡ. ಆದರೂ ಕೊಳಕಾದ ಹೆಂಗಸಿನಂತೆ ಚಡಪಡಿಕೆ, ಎಲ್ಲೋ ಒಂದು ಸಂಕಟ. ಇಸ್ಟೀಟಾಟ ಎಂದು, ಮದುವೆ ಮಾಡಿಸ್ತೇನೆಂದು, ಇತರರ ಖಾಸಗಿ ಜೀವನ ವನ್ನು ಹೀಗೆ ಪ್ರವೇಶಿಸುವ ಖದೀಮರನ್ನು ಸುಟ್ಟುಬಿಡಬೇಕೆನ್ನುವ ತಣ್ಣಗಿನ ಬೆಂಕಿ, ಅಕಸ್ಮಾತ್ ದೃಷ್ಟಿ ಹೊರಹಾಯ್ದಿತು. ಬೆಳಗಿನ ಸ್ನಾನ, ಉಪಾಹಾರ ಮುಗಿಸಿ ಟ್ರಿಮ್ಮಾಗಿ ಬಟ್ಟೆ ಹಾಕಿಕೊಂದು ರಂಗಣ್ಣ ವೆರಾಂಡಾದಲ್ಲಿ ತಿರುಗಾಡುವುದು ಕಾಣಿಸಿತು. ಆತ ಕೆಳಗೆ ಹಿತ್ತಲಲ್ಲಿ ಅಡ್ಡಾಡುತ್ತಿರುವ ಕುಸುಮಳನ್ನು ದೃಷ್ಟಿಸಲು, ಆಕೆಯ ದೃಷ್ಟಿಗೆ ಬೀಳಲು, ಹೀಗೆ ಅಡ್ಡಾಡುತ್ತಿದ್ದಾನೆಂಬುದು ರಾಮರಾವಿಗೆ ಗೊತ್ತು. ಹೊಟ್ಟೆಯಲ್ಲಿ ಹುಳಿ ಹಿಚುಕಿ, ಉಪ್ಪು ಖಾರ ಹಾಕಿ ಒಗ್ಗರಣೆ ಕೊಟ್ಟಂತಾಯಿತು.

“ರಂಗಣ್ಣ!” ಎಂದು ಕರೆದ.

ರಂಗಣ್ಣ ಕಿಟಿಕಿಯ ಬಳಿ ಬಂದು, “ಏನಯ್ಯ?”
ಎಂದು ತನ್ನ ಕರ್ಕಶ ಸ್ವರ ದಲ್ಲಿ ಅಸಹನೆಯಿಂದ ಕೇಳಿದ.

“ಸ್ವಲ್ಪ ಇಲ್ಲಿ ಕೂತಿರಿ. ಒಂದೈದು ನಿಮಿಷ.”

ರಂಗಣ್ಣ ಮನಸ್ಸಿಲ್ಲದ ಮನಸ್ಸಿನಿಂದ ಒಳಗೆ ಬಂದು ರಾಮರಾವು ತೆರವು ಮಾಡಿದ ಜಾಗದಲ್ಲಿ ಕೂತ. ಕೂಡಲೆ ಮದುವೆ ಮರಿಯಪ್ಪ ಅವನನ್ನು ಗುರುತು ಮಾಡಿಕೊಂಡ. ರಾಮರಾವು ಹೊರಗೆ ಬಂದುನಿಂತ. ಕೆಳಗೆ ಹಿತ್ತಲಲ್ಲಿ ವಿಶಾಲಾಕ್ಷಮ್ಮ ಕುಕ್ಕರಗಾಲಲ್ಲಿ ಕೂತು ಕೊಳೆಬಟ್ಟೆಗಳನ್ನು ಸಾಬೂನಿನ ನೀರಿನಲ್ಲಿ ಅದ್ದುತ್ತಿದ್ದಳು. ಕುಸುಮ ತೆಂಗಿನ ಮರಕ್ಕೆ ಆತುನಿಂತು ತಲೆಬಾಚಿಕೊಳ್ಳುತ್ತಿದ್ದಳು. ರಂಗಣ್ಣನ ಸ್ಥಾನ ದಲ್ಲೀಗ ರಾಮರಾವು ಬಂದದ್ದನ್ನು ಗಮನಿಸಿ. ಆಕೆ ಮನೆಯ ಬದಿಗೆ ಸರಿದು ಮರೆಯಾದಳು. ಇದನ್ನು ಕಂಡು ರಾಮರಾವಿಗೆ ಅತ್ಯಂತ ಕಸಿವಿಸಿಯಾಯಿತು. ಈ ಕೂಡಲೆ ಇಲ್ಲಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಂದುಕೊಂಡ. ಆದರೆ ಅವನ ನೇರ ಕೆಳಗೆ ವಿಶಾಲಾಕ್ಷಮ್ಮ ದೊಡ್ಡ ಗಾತ್ರದಲ್ಲಿ ಕುಳಿತಿದ್ದಳು. ನಿಷ್ಕಳಂಕಾಳದ ಆಕೆ ತಮ್ಮ ಕೆಲಸದಲ್ಲಿ ಎಷ್ಟು ಮಗ್ನರಾಗಿದ್ದರೆಂದರೆ, ಉಟ್ಟೆಸೀರೆ ಅಸ್ತವ್ಯಸ್ತವಾದದ್ದೂ ಅವರ ಗಮನಕ್ಕೆ ಬರಲಿಲ್ಲ. ಕೊನೆಗೆ ಮರೆಯಿಂದ ಕುಸುಮಳೇ “ಅಮ್ಮ!” ಎಂದು ಎಚ್ಚರಿಸಬೇಕಾಯಿತು.

ಆದರೆ ಅಷ್ಟರಲ್ಲಿ ಇದೆಲ್ಲದರಲ್ಲೂ ಜುಗುಪ್ಸಗೊಂಡ ರಾಮರಾವು ಬೀಡಿಯೊಂದನ್ನು ಹಚ್ಚಿಕೊಂಡು ವೆರಾಂಡಾದ ಕೊನೆಯಲ್ಲಿದ್ದ ಪಾಯಿಖಾನೆಯೊಳಗೆ ಹೋಗಿ ಕುಳಿತಿದ್ದ. ಹೀಗೆ ಎಷ್ಟು ಹೊತ್ತು ಕುಳಿತರೂ ಭೇದಿಯಾಗದೆ ನಿರಾಶನಾಗಿ ಮರಳಿ ಕೋಣೆಗೆ ಬಂದ. ಕೋಣೆಯಲ್ಲಿ ಆಟ ನಿಶ್ಶಬ್ದವಾಗಿ ಸಾಗುತ್ತಿತ್ತು.

ಇವರನ್ನು ಎಬ್ಬಿಸುವುದು ಹೇಗೆ ಎಂದು ಚಿಂತಿಸತೊಡಗಿದ. ಈಗ ಮುಂದೆ ಧಾವಿಸಿ ಎಲ್ಲಾ ಇಸ್ಪೇಟೆಲೆಗಳನ್ನು ದೋಚಿ ನಾಶಮಾಡಿಬಿಟ್ಟರೆ ಹೇಗೆ ಎಂದುಕೊಂಡ. “ಸ್ವಲ್ಪ ಚಹಾ ತರಿಸಯ್ಯ” ಎಂದ ವಾಸು. “ತಿನ್ನುವುದಕ್ಕೇನಾದರೂ ಸಿಗುತ್ತದೆ ಯೇನು?” ಎಂದ ಮರಿಯಪ್ಪ. ಅಷ್ಟರಲ್ಲಿ ಇಬ್ಬರು ಯುವಕರು ಧಡಧಡನೆ ಮೆಟ್ಟಲೇರಿ ಬಂದರು. ಬರುತ್ತಲೇ, “ರೆಡಿಯಾಗಿದ್ದೀರಾ ಸಾರ್? ” ಎಂದು ಕೂಗಿಕೊಂಡರು. ಇದನ್ನು ಕೇಳಿದೊಡನೆಯೇ ರಾಮರಾವಿಗೆ ಒಂದುಕ್ಷಣ ಮೂರ್ಛೆ ಬಂದಂತಾಯಿತು. ಈ ಯುವಕರು ಸ್ಥಳೀಯ ಸಾಹಿತ್ಯ ಸಮಾಜದ ಕಾರ್ಯಕರ್ತರಾಗಿದ್ದರು. ಹತ್ತು ದಿನಗಳ ಹಿಂದೆ ಬಂದು, “ನಮ್ಮ ಸಮಾಜದ ದಶವಾರ್ಷಿಕೋತ್ಸವದಲ್ಲಿ ಭಾಗವಹಿಸಬೇಕು. ಸಮಾಜ ಮತ್ತು ಸಾಮಾನ್ಯ ಮನುಷ್ಯ ಎಂಬ ಬಗ್ಗೆ ಮಾತಾಡಬೇಕು” ಎಂದು ಪೀಡಿಸಿ, ಒಪ್ಪದಿದ್ದರೂ ಒಪ್ಪಿದ್ದೀರೆಂದು ಹೇಳಿ ಹೋಗಿದ್ದರು.

“ನಿಮ್ಮನ್ನು ಕರಕೊಂಡು ಹೋಗೋಣ ಅಂತ ಬಂದೆವು.”

“ಕೆಳಗೆ ಆಟೋ ನಿಲ್ಲಿಸಿದ್ದೇವೆ.”

“ಎಲ್ಲರೂ ಕಾಯುತ್ತಿದ್ದಾರೆ ಸಾರ್”

“ಮಂತ್ರಿಗಳು ಬಂದಾಯಿತು ಸಾರ್”

“ಇನ್ನು ಹತ್ತೇ ನಿಮಿಷ.”

“ಬಟ್ಟೆ ಬದಲಾಯಿಸುತ್ತೀರಾ, ಇಲ್ಲಾ…..”

ರಾಮರಾವು ಏನೋ ಹೇಳುವುದಕ್ಕೆ ಬಾಯಿ ತೆರೆದು, ನಂತರ ಸುಮ್ಮನಾದ. ಇಸ್ಪೀಟಾಟಗಾರರು “ಹೋಗಿ ಬಾರಯ್ಯ, ವಿಷ್ ಯೂ ಗುಡ್ ಲಕ್, ಕಂಗ್ರಾಚುಲೇಷನ್ಸ್ ” ಎಂದು ಸ್ವಲ್ಪ ಹಾಯಾಗಿ ಕುಳಿತರು. ಇಷ್ಟರಲ್ಲಿ ಸಮಾಜದ ಯುವಕರು ರಾಮರಾವಿನ ಎಡಬಲ ರಟ್ಟೆಗಳನ್ನು ಹಿಡಿದುಕೊಂಡು ಕೆಳಗೆ ಇಳಿಯ ತೊಡಗಿದ್ದರು.

ಸಭಾಂಗಣದಲ್ಲಿ ಸಾಮಾನ್ಯ ಮನುಷ್ಯರೂ, ವೇದಿಕೆಯಲ್ಲಿ ಅಸಾಮಾನ್ಯ ಮನುಷ್ಯರೂ ಕೂತಿದ್ದರು. ವೇದಿಕೆಯಲ್ಲಿ ಕೂತರೀತಿ ಅರ್ಧವೃತ್ತಾಕಾರದಲ್ಲಿತ್ತು. ಅಲ್ಲಿ ಸುಮಾರು ಹತ್ತು ಹದಿನೈದು ಮಂದಿ ಇದ್ದರು. ಎರಡನೇ ವ್ರುತ್ತದಲ್ಲಿ ಖಾಲಿಯಿದ್ದ ಕುರ್ಚಿಯೊಂದರಲ್ಲಿ ರಾಮರಾವನ್ನು ಕೂಡಿಸಿದರು. ರಾಮರಾವು ತಲೆಯನ್ನು ಸ್ವಲ್ಪ ಹುದುಗಿಸಿ ಯಾರಿಗೂ ಕಾಣದಂತೆ ಕುಳಿತುಕೊಂಡ. ಬೆಳಿಗ್ಗೆ ಎದ್ದು ಬಟ್ಟೆ ಬದಲಾಯಿಸುವುದಿರಲಿ, ಮುಖ ಕೂಡ ತೊಳೆದಿರಲಿಲ್ಲ ಅವನು. ಅವನ ಆಚೀಚೆ ಕುಳಿತ ಆಢ್ಯರು ಸಂಶಯದಿಂದ ನೋಡಿದರು. ಅವರ ಮೂಗಿನ ಹೊಳ್ಳೆಗಳು ಅರಳುವುದು ಅವನಿಗೆ ಗೋಚರಿಸಿತು.

ಇಂಥ ಸಮಾರಂಭಕ್ಕೆ ತನ್ನನ್ನು ಯಾಕೆ ಆಮಂತ್ರಿಸಿದರು ಎಂಬುದು ಅವನಿಗೆ ಬಿಡಿಸಲಾರದ ಸಮಸ್ಯೆ ಯಾಗಿತ್ತು. ತನಗೂ ಸಾಹಿತ್ಯ ಸಮಾಜಕ್ಕೂ ಯಾವುದೇ ವಿಶೇಷ ಸಂಬಂಧವಿರಲಿಲ್ಲ. ಹೀಗೆ ಹೇಳಿದಾಗ, ಅವನನ್ನು ಮೊದಲಬಾರಿಗೆ ಒಪ್ಪಿಸಲು ಬಂದ ಕಾರ್ಯದರ್ಶಿ ಹೇಳಿದ್ದು. “ನಾವು ಹೊಸ ಪ್ರತಿಭೆಯನ್ನು ಹುಡುಕಿಕೊಂಡು ಹೋಗುತ್ತೇವೆ” ಎಂದು, ನೀವು ನಮ್ಮದೊಂದು ಸಭೆಯಲ್ಲಿ ಒಂದು ಪ್ರಶ್ನೆ ಹಾಕಿದಿರಲ್ಲ, ಸಾರ್. ಸಾಹಿತ್ಯ ಅಂದರೆ ಏನು , ಅಂತ. ಆಗಲೇ ನಾವು ನಿಮ್ಮನ್ನು ಬುಕ್ ಮಾಡಿದವು. ಏಕೆಂದರೆ ನಿಮಗೆ ಮೂಲಭೂತವಾದ ಕಾಳಜಿಯಿದೆ.” ಯಾವುದೋ ಒಂದು ರವಿವಾರ ಸಂಜೆ ಬೀದಿಯಲ್ಲಿ ಸುಮ್ಮನೆ ನಡೆದು ಹೋಗುತ್ತಿದ್ದವನು “ಎಲ್ಲರಿಗೂ ಸುಸ್ವಾಗತ.” ಎಂಬ ದೊಡ್ಡ ಫಲಕ ನೋಡಿ, ಏನು ನಡೆಯುತ್ತಿದೆ ನೋಡೋಣ ಎಂದು ಒಂದು ಕಟ್ಟಡದ ಮಾಳಿಗೆಯನ್ನೇರುವ ಧೈರ್ಯ ಮಾಡಿದ್ದ. ಪ್ರವೇಶಿಸುವ ಮುನ್ನವೇ, ಬನ್ನಿ ಬನ್ನಿ ಎಂದು ಕರೆದು ಕುಳ್ಳಿರಿಸಿದರು. ಒಳಗಿದ್ದವರು ಹತ್ತೋ ಹನ್ನೆರಡೋ ಮಂದಿ , ಕೆಲವು ಪರಿಚಿತ, ಕೆಲವು ಅಪರಿಚಿತ ಮುಖಗಳು. ಅವರಲ್ಲಿ ಒಬ್ಬ ಏನೇನೋ ಮಾತಾಡುತಿದ್ದ. ಸುಮಾರು ಒಂದು ಗಂಟಿ ಮಾತಾಡಿದ. ಸಾಹಿತ್ಯಕ್ಕೆ ಸಂಬಂಧಿಸಿ ಎಂದು ಗೊತ್ತಾಯಿತು. ಅವನ ಮಾತು ಮುಗಿದು ಈಗ ಪ್ರಶ್ನೆಗಳನ್ನು ಕೇಳಬಹುದು ಎಂದಾಯಿತು. ಕಾರ್ಯದರ್ಶಿ ಒತ್ತಾಯಿಸಲು ಸುರುಮಾಡಿದ ಮೇಲೆ ದಾಕ್ಷಿಣ್ಯದಿಂದ ರಾಮರಾವು ಆ ಪ್ರಶ್ನೆ ಕೇಳಿದ್ದು. ಇದೊಂದೇ ಕಾರಣದಿಂದ ಇವರು ತನ್ನನ್ನು ಘನಮಂತ್ರಿಗಳು ವಿದ್ವಾಂಸರೂ ಪಾಲ್ಗೊಳ್ಳುವ ಸಮಾರಂಭದಲ್ಲಿ ಮಾತಾಡಲು ಕರೆದರೇ ಎಂಬ ಬಗ್ಗೆ ಅವನು ಅನುಮಾನಿಸಿದ. ಈ ಸಮಾರಂಭ “…..ಮತ್ತು ಸಾಮಾನ್ಯ ಮನುಷ್ಯ” ಎಂಬ ವಿಷಯಗಳ ಬಗ್ಗೆ, ಎಂಬುದು ಈಗ ನೆನಪಾಯಿತು.

ರಾಮರಾವು ಬಂದು ಕುಳಿತಾಗ ಕಾರ್ಯದರ್ಶಿ ಸ್ವಾಗತ ಭಾಷಣ ಮಾಡುತ್ತಿದ್ದ. ಅದಾದ ಮೇಲೆ ಘನಮಂತ್ರಿಗಳಿಂದ ಉದ್ಘಾಟನೆ. ಅವರು ಎಲ್ಲ ಮಂತ್ರಿಗಳಂತೆ ಆಳವಾದ ಗಂಭೀರ ಸ್ವರದಲ್ಲಿ ಮಾತಾಡಿದರು. ಮುಖ್ಯವಾಗಿ, ಸಾಮಾನ್ಯ ಮನುಷ್ಯ ಎಂದರೆ ಯಾರು, ಏನು ಎಂಬ ಬಗ್ಗೆ ವಿವರಿಸಿದರು. ’ಸಾಮಾನ್ಯ ಮನುಷ್ಯನನ್ನು ನಾವು ಹುಡುಕಿಕೊಂಡು ಹೋಗಬೇಕಾದ್ದಿಲ್ಲ. ಆತ ನಮ್ಮ ಬಳಿಯೇ ನಮ್ಮ ನಡುವೆಯೆ ಇದ್ದಾನೆ’ ಎಂದು ಅರ್ಥಪೂರ್ಣವಾಗಿ ಹೇಳಿದರು. ಈ ಸಾಮಾನ್ಯ ಮನುಷ್ಯನ ಜವಾಬ್ದಾರಿಗಳು ಏನೇನು ಎಂಬುದನ್ನು ವಿವರಿಸಿದರು. ’ಆತ ದೇಶ ತನಗಾಗಿ ಏನು ಮಾಡಬಲ್ಲುದು ಎಂದು ಕೇಳದೆ, ತಾನು ದೇಶಕ್ಕಾಗಿ ಏನು ಮಾಡಬಲ್ಲೆ ಎಂದು ಕೇಳಿಕೊಳ್ಳಬೇಕು’, ಎಂದರು. ಉದಾಹರಣೆಗೆ, ತಾವು ತಮ್ಮ ಕುಟುಂಬ ಸಮೇತ ಅಮೆರಿಕಾ ದೇಶದಲ್ಲಿ ವಿಹರಿಸುತ್ತಿರುವಾಗ….. ಆದರೆ ಈ ಮಾತು ಭಯಂಕರವಾದ ಚಪ್ಪಾಳೆಯಲ್ಲಿ ಮುಳುಗಿದ್ದರಿಂದ ಕೇಳಿಸಲಿಲ್ಲ.

ಅನಂತರ ಮಂತ್ರಿಗಳು ಏನು ಹೇಳಿದರೋ ರಾಮರಾವಿಗೆ ಸ್ಪಷ್ಟವಾಗಲಿಲ್ಲ. ಕಾರಣ ಇದುತನಕ ಏಕಶಿಲೆಯಂತೆ ನಿರ್ಲಿಪ್ತವಾಗಿದ್ದ ಅವನ ಹೊಟ್ಟೆ ಈಗ ಬುಡದಿಂದಲೆ ತೊಳಸಲು ಆರಂಭವಾಯಿತು. ಕುಳಿತಲ್ಲೇ ಹೊರಳಿದ. ಹೊಟ್ಟೆಯನ್ನು ಗಟ್ಟಿಯಾಗಿ ಎರಡೂ ಕೈಗಳಿಂದ ಅದುಮಿಕೊಂಡ. ಚಳಿಯೂ ಸೆಕೆಯೂ ಸರ್ತಿಯ ಮೇಲೆ ಆವರ್ತಿಸುವಂತೆ ತೋರಿತು. ಮುಖದ ಮೇಲೆ ಬೆವರ ಹನಿಗಳು ಮೂಡಿದವು. ಯಾರಿಗೂ ಸಂಶಯ ಬಾರದಂತೆ ಇಲ್ಲಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ಯೋಚಿಸತೊಡಗಿದ. ಎರಡನೆ ಸಾಲಿನಲ್ಲಿ ಕುಳಿತದ್ದರಿಂದ ಎಲ್ಲರಿಗೂ ಅವನು ಕಾಣಿಸುತ್ತಿರಲಿಲ್ಲ. ಈತ ಹೀಗೆ ಕಸಿವಿಸಿಗೊಳ್ಳುತ್ತಿರುವುದನ್ನು ಬದಿಗೆ ಕುಳಿತ ಪಂಡಿತರೊಬ್ಬರು ಗಮನಿಸಿದರು. ರಾಮರಾವು ಅವರ ಕಡೆ ನೋಡಿ ನಸುನಕ್ಕ. ಅವರು ಹುಬ್ಬುಗಂಟಿಕ್ಕಿದರು. ಏನೋ ಕೈಸನ್ನೆ ಮಾಡಿದ. ಅವರು ಇನ್ನೊಂದು ಬದಿಗೆ ಮುಖ ತಿರುವಿದರು. ಇದೇ ಸಂದರ್ಭವೆಂದು ರಾಮರಾವು ಬಗ್ಗಿಕೊಂಡೇ ಈಚೆಗೆ ಬಂದ. ಆಚೇಚೆ ನೋಡಿದ. ಕಾರ್ಯಕರ್ತರೀಗ ಹಿಡಿದುಬಿಟ್ಟರೆ ಏನು ಮಾಡುವುದು ಎಂದು ತಿಳಿಯಲಿಲ್ಲ. ಆದರೆ ಎಲ್ಲರೂ ಮಂತ್ರಿಮಹಾಶಯರ ಭಾಷಣದಲ್ಲಿ ತಲ್ಲೀನರಾಗಿದ್ದರು. ಹೊರಗೆ ಪ್ರವೇಶದ್ವಾರದಲ್ಲಿ ಕೆಲವು ಪೊಲೀಸರು ನಿಂತಿರುವುದು ಕಂಡುಬಂತು. ಸಂಶಯ ಬಾರದಂತೆ ರಾಮರಾವು ಅವರತ್ತ ನೋಡಿ ತಲೆದೂಗಿ ನಸುನಕ್ಕು, ಒಂದು ಸೆಲ್ಯೂಟ್ ಹೊಡೆದು ಹೊರಕ್ಕೆ ಧಾವಿಸಿದ, ಹೊರಮುಖವಾಗಿ ಕಟ್ಟಿದ್ದ ಧ್ವನಿವರ್ಧಕದಿಂದ ಭಾಷಣ ಬೆನ್ನಟ್ಟಿ ಬರುತ್ತಿತ್ತು.

“ಆಟೋ” ಎಂದು ಅರಚಿದ.

ಇವನನ್ನು ಎರಡಡಿ ಎತ್ತರಕ್ಕೆ ಹಾರಿಸುತ್ತ ಕೆಟ್ಟದಾದ ರೋಡಿನ ಮೇಲೆ ನಿಧಾನವಾಗಿ ಆಟೋ ಸಾಗಿತು. ಅಂಥ ಒಂದೊಂದು ಹಾರಾಟಕ್ಕೂ ತನ್ನ ಹೊಟ್ಟೆ ಈಗ ಸಿಡಿಯುತ್ತಿದೆ ಎಂದು ಅವನಿಗೆ ಹೆದರಿಕೆಯಾಯಿತು. ಮನೆ ತಲುಪಿದೊಡನೆ ಆಟೋದವನಿಂದ ಚಿಲ್ಲರೆಗೂ ಕಾಯದೆ. ಮೆಟ್ಟಲುಗಳನ್ನು ಎರಡೆರಡರಂತೆ ಏರಿ ಶೌಚಗೃಹದ ಕಡೆಗೆ ಧಾವಿಸಿದ. ಹಾಗೆ ಧಾವಿಸುತ್ತಿರುವಾಗ ತನ್ನ ಕೋಣೆಯಲ್ಲಿ ಒಕ್ಕರಿಸಿದ್ದವರತ್ತ ದೃಷ್ಟಿಹಾಯಿಸಲೂ ಅವನಿಗೆ ವ್ಯವಧಾನವಿರಲಿಲ್ಲ.

ಪಾಯಿಖಾನೆಯ ಒಳಗಿಂದ ಚಿಲಕ ಹಾಕಿತ್ತು. ಒದ್ದು ಬಿಡಬೇಕೆಂಬಷ್ಟು ಸಿಟ್ಟು ಬಂತು. “ರಂಗಣ್ಣಾ” ಎಂದು ಕೂಗಿದ, ಒಳಗಿಂದ ಉತ್ತರ ರೂಪದಲ್ಲಿ ಒಂದು ಸಣ್ಣ ಕೆಮ್ಮು. “ಹೊರಗೆ ಬಾರಯ್ಯ”, ಎಂದು ಕೂಗಿದ. ಒಳಗಿಂದ ಇನ್ನೊಂದು ಕೆಮ್ಮು. ರಾಮರಾವಿನ ಜಠರದಲ್ಲೋ ಭಯಂಕರವಾದ ಅಂತರ್ಯುದ್ಧ ನಡೆಯುತ್ತಿತ್ತು. ಹೊಟ್ಟೆಯೊಂದನ್ನು ಬಿಟ್ಟು ಉಳಿದ ಅಂಗಾಂಗಗಳೆಲ್ಲ ಒಮ್ಮೆಲೆ ಶಕ್ತಿಹೀನವಾದಂತೆನಿಸಿತು. ಬೆಳಗಿನಿಂದ ಹೊಟ್ಟೆಗೆ ಯಾವ ಆಹಾರವೂ ಹೋಗಿಲ್ಲವೆಂಬುದು ನೆನಪಾಯಿತು.

ಆದರೆ ಇಂಥ ತುರ್ತುಪರಿಸ್ಥಿತಿಯಲ್ಲಿ ನಿಷ್ಕ್ರಿಯನಾಗಿ ನಿಲ್ಲುವುದು ಸಾಧ್ಯವೆ? ಅವನ ಮುಂದಿರುವುದು ಈಗ ಒಂದೇ ಒಂದು ದಾರಿ. ಬಂದ ವೇಗದಲ್ಲೇ ಕೆಳಗೆ ಧಾವಿಸಿದ. ಕೆಳಗೆ ವಿಶಾಲಾಕ್ಷಮ್ಮ ಮತ್ತು ಮನೆಯವರು ಉಪಯೋಗಿಸುವ ಇನ್ನೊಂದು ಪಾಯಿಖಾನೆಯಿತ್ತು. ಸ್ನಾನದ ಕೋಣೆಯ ಮೂಲಕ ಪ್ರವೇಶ ಅದಕ್ಕೆ. ಶರವೇಗದಲ್ಲಿ ಬಂದ ರಾಮರಾವಿಗೆ ಸ್ನಾನದ ಕೋಣೆಯ ಬಾಗಿಲು ಮುಕ್ಕಾಲಂಶ ಮುಚ್ಚಿದ್ದೇನೋ ಕಂಡಿತು. ಆದರೆ ಬಾಗಿಲ ಮೇಲಿಂದ ಹೊರಗಡೆಗೆ ತೂಗು ಹಾಕಿದ ಲಂಗ ಮಾತ್ರ ಕಾಣಲಿಲ್ಲ. ಅಥದಾ ಕಂಡೂ ಅದನ್ನು ಅಲಕ್ಷಿಸಿದನೋ ಏನೋ. ಬಾಗಿಲು ಪೂರ್ಣವಾಗಿ ಮುಚ್ಚುತ್ತಿರಲಿಲ್ಲವಾದ್ದರಿಂದ, ಮತ್ತೆ ಮುಚ್ಚಿದ್ದರೆ ತೆರೆಯುತ್ತಿರಲಿಲ್ಲವಾದ್ದರಿಂದ, ಒಳಗೆ ಸ್ನಾನಮಾಡುವವರು ಒಂದು ನಿಶಾನೆಯನ್ನು ಇಳಿಬಿಡುವುದು ಪದ್ಧತಿಯಾಗಿತ್ತು.

ರಾಮರಾವು ಬಾಗಿಲು ದೂಡಿದ ರಭಸಕ್ಕೆ ಒಳಗೆ ಏನೋ ದೊಡ್ಡದಾದ್ದು, ಬೆತ್ತಲೆಯಾದ್ದು ಬಿದ್ದಂತಾಯಿತು. ಕರ್ಣಕಠೋರವಾಗಿ ಕಿರುಚುವ ಶಬ್ದ ಕೇಳಿಸಿತು. ರಾಮರಾವು ಒಂದು ಕ್ಷಣ ದಿಗ್ಭ್ರಮೆಯಿಂದ ನೋಡಿದ. ಮಾರನೆ ಕ್ಷಣ ಆತ ಮಾಳಿಗೆಯ ಮೇಲಿದ್ದ.

ಮಧ್ಯಾಹ್ನದ ನಿಶ್ಶಬ್ದತೆ ಯನ್ನು ಸೀಳಿಕೊಂಡು ಬಂದ ಹೆಂಗಸಿನ ಆರ್ತನಾದಕ್ಕೆ ಇಸ್ಪೇಟಾಟಗಾರರು ಮನಸ್ಸಿಲ್ಲದ ಮನಸ್ಸಿನಿಂದ ಎದ್ದರು. ರಾಮರಾವು ಮೇಲೆ ಧಾವಿಸುತ್ತಿರುವುದಕ್ಕೂ ರಂಗಣ್ಣ ಪಾಯಿಖಾನೆಯ ಬಾಗಿಲು ತೆರೆದು ಹೊರಗೆ ಇಣುಕುವುದಕ್ಕೂ ಸರಿಹೋಯಿತು. ರಾಮರಾವು ಅವನ ರಟ್ಟೆ ಹಿಡಿದು ಈಚೆಗೆ ಹಾಕಿ ಒಳಹೊಕ್ಕು ಚಿಲಕ ಹಾಕಿಕೊಂಡ.

ಹೊರಗಿಂದ “ಯಾರು?” , “ಏನು?”, “ಎಲ್ಲಿ?” ಎಂದು ಜನರು ಗಟ್ಟಿಯಾಗಿ ಮಾತಾಡಿಕೊಳ್ಲುವ ಸದ್ದು ಕೇಳಿಸುತ್ತಿತ್ತು. “ಅಮ್ಮಾ!” ಎನ್ನುವ ಅತ್ಯಂತ ಮೋಹಕವಾದ ಸ್ವರ. “ವಿಶಾಲಾಕ್ಷಮ್ಮ!” ಎನ್ನುವ ಅತ್ಯಂತ ಕರ್ಕಶವಾದ ಸ್ವರ. ಹೆಂಗಸೊಂದು ಗೋಳಿಡುತ್ತಿರುವ ಭಾರವಾದ ಸ್ವರ. ಹೊರಗೆ ಜನ ಸೇರುತ್ತಿರುವಂತೆ ತೋರಿತು. ಸ್ವಲ್ಪವೇ ಸಮಯದಲ್ಲಿ ಅವರು ದಬದಬನೆ ಬಾಗಿಲನ್ನು ಬಡಿಯತೊಡಗಿದರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಳಹದಿ
Next post ಅಂದು – ಇಂದು

ಸಣ್ಣ ಕತೆ

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…