ಜುಡಾಸ್

ಜುಡಾಸ್

“ಪೀಟರ್”
“ಪ್ರಭು”
“ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ….”

ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ ಹಿಂದೆ ಹಿಂದೆ ಬರುತ್ತಿದ್ದರು. ಆರಿಸಿಬಂದ ಜನ ಯೇಸು ತನ್ನ ಪ್ರೇಮಪ್ರಸಾರಕ್ಕಾಗಿ ಹುಡುಕಿ ತಂದ ಹನ್ನೆರಡು ವಿಭೂತಿ ಪುರುಷರು, ಒಬ್ಬನಿಗೊಬ್ಬ ಯಾವ ವಿಷಯದಲ್ಲೂ ಕಡಿಮೆಯಿಲ್ಲ. ಯೇಸುವಿನಲ್ಲಿ ಸಂಪೂರ್ಣವಾಗಿ ತಮ್ಮನ್ನು ತಾವೇ ಅರ್ಪಣಮಾಡಿಕೊಂಡಿದ್ದವರು, ಸ್ವಾರ್ಥತ್ಯಾಗದಲ್ಲಿ ನಿಸ್ಸಿಮರು. ಯೇಸುವಿನೊಂದಿಗೆ ನೂರಾರು ಬಗೆಯ ಸಂಕಟಗಳ ಮೂಸೆಯಲ್ಲಿ ಹಾದು ಬಂದವರು. ತಮಗಾಗಿ ಯಾವುದನ್ನೂ ಬಯಸದವರು. ಯೇಸುಕ್ರಿಸ್ತನ ಮುಖದಲ್ಲಿ ಹನ್ನೆರಡು ಮಹಾನದಿಗಳ ನೀರನ್ನು ತುಂಬಿಸಿಕೊಂಡ ಮಹಾಸಾಗರದ ಗಾಂಭೀಟ್ಯವಿತ್ತು. ನೂರು ನಕ್ಷತ್ರಗಳ ಬೆಳಕುಹೊತ್ತ ರಾತ್ರಿಯ ಆಕಾಶದ ಸೊಬಗಿತ್ತು, ಹತ್ತು ದಿಕ್ಕಿಗೂ ಬೆಳಕಿನ ಕಿರಣ ಚಾಚಿದ ಹಗಲಿನ ಓಜಸ್ಸಿತ್ತು. ಸರ್ವಸ್ವವನ್ನೂ ತ್ಯಾಗಮಾಡಿ, ಸರ್ವಸ್ವವನ್ನೂ ಪಡೆದ ಮಹಾಯೋಗಿಯ ತೇಜವಿತ್ತು. ಪ್ರಪಂಚವನ್ನೇ ತನ್ನ ಪ್ರೇಮದಿಂದ ಬಾಚಿ ತಬ್ಬಿಕೊಂಡ ಅವನ ಧ್ವನಿಯಲ್ಲಿ ಮಾಧುರ್‍ಯ ಮಿಳಿತವಾಗಿ ಹೋಗಿತ್ತು. ಅವನ ಮಾತು ಕೇಳಲು ಯಾವಾಗಲೂ ಸಿದ್ದವಾಗಿರುತ್ತಿದ್ದ ಶಿಷ್ಯರು, ಯೇಸುವಿನ ಮಾತು ಅರ್ಧಕ್ಕೇ ನಿಂತುಹೋಗಲು ಅವನ ಕಡೆಗೇ ಎವೆಯಿಕ್ಕದೆ ನೋಡಿದರು. ತಾಯಿಹಸು ಕರುವನ್ನು ನೆಕ್ಕುತ್ತಿದ್ದುದನ್ನು ನಿಲ್ಲಿಸಿದೊಡನೆಯೇ ಕರು ತಾಯಿಯ ಕಡೆ ನೋಡಿ ಬೇಡಿ ಎದುರು ನೋಡುವಂತೆ, ಯೇಸುವಿನ ಮುಖವನ್ನೇ ಎಲ್ಲರೂ ನೋಡಿದರು. ಮುಂದಿನ ಮಾತಿಗಾಗಿ ಕಾದರು.

ಯೇಸು ಏಕೋ ಆ ವಾಕ್ಯ ಪೂರೈಸಲೇ ಇಲ್ಲ. ಮೌನವಾಗಿ ಮುಂದೆ ಮುಂದೆ ಹೆಜೆಯಿಡುತ್ತಾ ನಡೆದ. ಹಿಂದೆಂದೂ ಇಲ್ಲದುದು ಇಂದು ತಲೆ ತಗ್ಗಿತ್ತು. ಏನೋ ಚಿಂತ-ಯಾವುದೋ ಮೋಡದನೆರಳು ಮುಸುಕಿದಂತೆ-ಮುಖದಲ್ಲಿ ಕೊಂಚ ಕಳವಳ, ಶಿಷ್ಯರಿಗೆ ಈ ಮಾತು ಹೇಳಲೋ ಬೇಡವೋ ಎಂದು ಕೊಂಚ ಯೋಚನೆ. ಹೇಳಿದರೂ ಅವರಿಗೆ ಅದು ಸರಿಯಾಗಿ ಅರಿವಾಗುವುದೇ ಎನುವ ಸಂದೇಹ. ಹೇಳಿದಮೇಲೆ ಅದರಿಂದ ಅವರಲ್ಲೇನಾದರೂ ಹೇಡಿತನ ಬಂದರೆ ಎನುವ ಶಂಕೆ. ಹೇಳಿದರೂ ಏನು ಪ್ರಯೋಜನವೆನ್ನುವ ನಿರಾಸಕ್ತಿ. ಹೇಳಿಬಿಟ್ಟರೆ ವಾಸಿ ಹೇಗಾದರೂ ಆಗಲಿ ಎನುವ ಒತ್ತಡ. ಎಲ್ಲಕ್ಕೂ ಜತೆಯಾಗಿ ಒಂದು ಅನುಮಾನ ತಾನೇನೋ ಇದುವರೆಗೂ ಅವರ ಭಕ್ತಿ ಪ್ರೇಮ ಪಡೆದುದು ನಿಜ. ಅವರಿಗೆ ತನ್ನ ಶಕ್ತಿಯಲ್ಲಿ ಸಾಕಷ್ಟು ನಂಬಿಕೆಯಿತ್ತು. ಆದರೆ ಆ ನಂಬಿಕೆ ಎಲ್ಲಿಯವರೆಗೂ ಎಳೆಯುವುದೋ ಯಾರಿಗೆ ಗೊತ್ತು? ಅದನ್ನು ಶಕ್ತಿ
ಮೀರಿ ಹಿಂಜಿದರೆ, ತಂತಿ ಯಾವಾಗ ಮುರಿದುಹೋದೀತೋ? ನಂಬಿಕೆ ಹುಟ್ಟಿಸಲೆಂದು ತಾನು ಮಾಡಿದುದೆಲ್ಲ ಒಂದೊಂದು ಬಾರಿ ನಿಷ್ಪಲವಾಗಿರಲಿಲ್ಲವೇ? ತಾನು ರೋಗಿಗಳನ್ನೆಲ್ಲ ಬರಿಯ ಕೈಯಿಂದ ಮುಟ್ಟಿ ನಂಬಿಕೆಯ ಬಲದಿಂದ ಗುಣಪಡಿಸಲಿಲ್ಲವೇ? ಇಷ್ಟಾದರೂ ತೊನ್ನು ರೋಗಿಯ ಹತ್ತಿರ ಹೋಗಲು ಜಾನ್ ಹಿಂಜರಿಯಲಿಲ್ಲವೇ? ತಾನು ಪೀಟರನನ್ನು ಹತ್ತಿರ ಬರಮಾಡಿಕೊಂಡಾಗ ನೀರಿನಮೇಲೆ ನಡೆದುಬರಲಿಲ್ಲವೇ? ಆದರೂ ಪೀಟರನಿಗೆ ಅನುಮಾನ ನದಿಯ ದಂಡೆಯಮೇಲೆ ಶಿಬಿರ ಹೂಡಲು ಹೆದರಿಕೆ ಯಾಗಿ, ಅಲ್ಲಿ ಬೇಡವೆನ್ನಲಿಲ್ಲವೇ? ನಂಬಿಕೆಯಿದ್ದರೂ ಅದರ ಹಿಂದೆ ಕೊಂಚ ಸಂದೇಹ, ಶಂಕೆ, ಅನುಮಾನವಿದ್ದಂತಿತ್ತು. ತಾನು ದೇವರ ಮಗನೆಂದು ಪೀಟರನಿಗೆ, ಜೇಮ್ಮನಿಗೆ ತೋರಿಕೊಡಲು ಆಗೊಂದು ದಿನ ಬೆಟ್ಟದಮೇಲೆ ಹತ್ತಿನಿಂತು ಮಿಂಚಾಗಬೇಕಾಗಿತ್ತು. ತನ್ನ ಜತೆಗೆ ತನ್ನ ತಂದೆ ಸ್ವರ್ಗದಲ್ಲಿರುವ ದೇವದೇವನನ್ನೂ ಕರೆತರಬೇಕಾಯಿತು. ಇಷ್ಟೆಲ್ಲಾ ಆದರೂ ಅವರ ಹೃದಯಗಳಲ್ಲಿ ಒಡಕಿಲ್ಲದ ಸಂಪೂರ್‍ಣ ನಂಬಿಕೆ ಬಂದಿರಲಿಲ್ಲ. ಜುಡಾಸ್ ಒಬ್ಬನೇ ತನ್ನ ಹನ್ನೆರಡು ಶಿಷ್ಯರಲ್ಲಿ ಒಮ್ಮೆಯಾದರೂ ಶಂಕೆ ಪಡೆದವನು. ಅವನು ಎಲ್ಲರಿಗಿಂತಲೂ ಚಿಕ್ಕವನು. ಎಲ್ಲರಿಂತಲೂ ಕೊನೆಯಲ್ಲಿ ತನ್ನ ಬಳಿ ಬಂದವನು. ಆದರೆ ಅವನ ನಂಬಿಕೆ ಅಚಲವಾದುತಿತ್ತು. ತಾನು ಹೇಳಿದ ಮಾತೊಂದಕ್ಕೂ ಅನುಮಾನವನ್ನಂಟಿಸುತ್ತಿರಲಿಲ್ಲ. ಆಗ ತನ್ನ ಮಾತನ್ನು, ತನ್ನ ಬೋಧನೆಯನ್ನು ಕೇಳಲು ನಾಲ್ಕು ಸಾವಿರ ಮಂದಿ ಕೂಡಿದಾಗ, ಅವರೆಲ್ಲರಿಗೂ ಕೊಡಲು ಆಹಾರವಿಲ್ಲ. ಇರುವುದು ಮೂರೇ ರೊಟ್ಟಿಯೆಂದು ಉಳಿದೆಲ್ಲ ಶಿಷ್ಯರೂ ಕಳವಳಪಟ್ಟು ಒದ್ದಾಡಿದ್ದರು. ಎಲ್ಲರನ್ನೂ ಹಾಗೆಯೇ ಕಳುಹಿಸಿಬಿಡುವದೆಂದು ತೀರ್ಮಾನಿಸಿಕೊಂಡೂ ಇದ್ದರು. ತನಗೆ ತಿಳಿಯದಂತೆ, ತನಗೆ ತಿಳಿಸದಂತೆ ಅವರನ್ನು ಸಾಗಹಾಕಲು ಯತ್ನಿಸಿದ್ದರು. ಆಗ ಕೊಂಚವಾದರೂ ಸಂದೇಹಪಡದೆ, ಕೊಂಚವಾದರೂ ಕಳವಳಪಡದೆ ಶಾಂತನಾಗಿದ್ದವನೆಂದರೆ ಜುಡಾಸ್ ಒಬ್ಬನೇ. ಬೋಧನೆ ಪೂರ್ತಿ ಮುಗಿಯುವವರೆಗೂ ಅಲುಗಾಡದೆ ಕುಳಿತು ಕೇಳಿದ. ಅದು ಮುಗಿದೊಡನೆಯೇ ಎಂದಿನಂತೆಯೇ ಸಮಾಧಾನದಿಂದ, ಶಾಂತಿಯಿಂದ, ಕೊಂಚವಾದರೂ ಒದ್ದಾಟವಿಲ್ಲದೆ ತನ್ನ ಬಳಿ ಬಂದು ನಮಸ್ಕರಿಸಿದ. ಜೋಳಿಗೆಯಲ್ಲಿದ್ದ ಮೂರು ರೊಟ್ಟಿಯನ್ನು ತನ್ನ ಮುಂದೆ ಇಟ್ಟು ಕೈ ಜೋಡಿಸಿದ್ದ. ಆಗ ತಾನು, “ಜುಡಾಸ್, ಎಲ್ಲರಿಗೂ ಒಂದೊಂದು ರೊಟ್ಟಿ ಕೊಡು” ಎಂದಾಗ ಸಂಕೋಚ ಸ್ವಲ್ಪವೂ ಇಲ್ಲದೆ ಅಚಲಭಕ್ತಿಯಿಂದ, ದೃಢನಂಬಿಕೆ ಯಿಂದ, ನಟ್ಟ ವಿಶ್ವಾಸದಿಂದ ಒಬ್ಬೊಬ್ಬರಿಗಾಗಿ ರೊಟ್ಟಿ ಕೊಟ್ಟ, ಆ ನಂಬಿಕೆಯೇ ಮೂರುರೊಟ್ಟಿಯನ್ನು ಮೂವತ್ತು ಸಾವಿರ ಮಾಡಿತ್ತು, ಜುಡಾಸನ ಹೃದಯದ ಈ ಅಚಲತೆ ಉಳಿದವರಿಗಿರಲಿಲ್ಲ. ಅನುಮಾನ, ಸಂದೇಹ ಮನುಷ್ಯನಿಗೆ ಸಹಜ. ಯಾವ ಹೃದಯವೇ ಆಗಲಿ ಒಮ್ಮೆಮ್ಮೆಯಾದರೂ ಹಿಂದೇಟು ಹಾಕದಿರುತ್ತಿರಲಿಲ್ಲ. ತನಗೇ ಎಷ್ಟೋಬಾರಿ ತನ್ನಲ್ಲಿ, ತನ್ನ ತತ್ವದಲ್ಲಿ ತನ್ನ ತಂದೆ-ದೇವದೇವನಲ್ಲಿ ಅನುಮಾನ ತೋರಿರಲಿಲ್ಲವೇ? ತನ್ನನ್ನು ದೇವರು ಮಾನವ ಕಲ್ಯಾಣಕ್ಕಾಗಿ ಕಳುಹಿಸಿದ್ದರೆ ಮಾನವರೇಕೆ ತನ್ನ ವಿರುದ್ಧ ಏಳುವರೆಂದು ಬೇಸರವಾಗಿರಲಿಲ್ಲವೇ? ಈ ಮಾನವರು ಸಾಮಾನ್ಯ ಮಾತನ್ನು ಅರ್ಥಮಾಡಿಕೊಳ್ಳದವರು, ತತ್ವ ಹೇಗೆ ತಿಳಿಯುವರು ಎಂದು ಸಂದೇಹ ಪಟ್ಟಿರಲಿಲ್ಲವೇ? ತಮ್ಮ ಒಳಿತು ಅರಿಯದ ಇವರಿಗೆ ಒಳ್ಳೆಯದು ಸಾಧ್ಯವೇ ಎಂದು ತನ್ನ ಕಾರ್ಯದಲ್ಲಿಯೇ ನಿರಾಸೆ ಬಂದಿರಲಿಲ್ಲವೇ?-ನಿಜ. ಅವುಗಳೆಲ್ಲ ಹಲವು ಕ್ಷಣಗಳಕಾಲ ಬಂದವು ಮಾತ್ರ. ವಿಶಾಲವಾದ ಆಕಾಶದಲ್ಲಿ ಅಲ್ಲೊಂದು ಇಲ್ಲೊಂದು ಕರಿಮೋಡದ ಚೂರುಗಳು ಎಸೆದಿದ್ದಂತೆ. ಆದರೆ ಅಷ್ಟು ನಿಜ. ತನಗೂ ಆ ದೌರ್ಬಲ್ಯವಿತ್ತು. ಈ ದೌರ್ಬಲ್ಯ ಉಳಿದವರಿಗೂ ಸಾಮಾನ್ಯ, ಸಹಜ. ಆದರೆ ಈ ಬಗೆಯ ನಿರಾಸೆ, ಶಂಕೆ ಒಮ್ಮೆಯಾದರೂ ಜುಡಾಸನಲ್ಲಿ ತೋರಿರಲಿಲ್ಲ. ಅದೇ ಆಶ್ಚರ್ಯ. ತಾನು ಅವರೊಂದಿಗೆ ಹಡಗಿನಲ್ಲಿ ಬಂದಾಗ, ಜುಡಾಸನ ತೊಡೆಯಮೇಲೆ ತಲೆಯಿಟ್ಟು ಮಲಗಿದ್ದ. ಹಡಗಿನಲ್ಲಿ ತನ್ನ ಉಳಿದ ಶಿಷ್ಯರೂ ಬಂದಿದ್ದರು. ಅವರೆಲ್ಲರ ಸತ್ವದ ಪರೀಕ್ಷೆಗೇ ಎನುವಂತೆ ಸಾಗರದಲ್ಲಿ ಮಹಾಪ್ರಳಯ ಎದ್ದಂತೆ ಬಿರುಗಾಳಿ ಬೀಸಿತು. ಪ್ರಪಂಚ ಇದುವರೆಗೂ ನಮ್ಮನ್ನು ಕಟ್ಟಿಹಾಕಿತ್ತು. ಅದರಮೇಲೀಗ ಸೇಡುತೀರಿಸಿಕೊಳ್ಳುತ್ತೇವೆ. ಕಟ್ಟುಗಳನ್ನು ಕಿತ್ತೆಸೆದು ಪ್ರಪಂಚವನ್ನೇ ನುಂಗಿಬಿಡುತ್ತೇವೆಂದು ಸಾಗರದ ನೀರಿನ ಅಲೆಗಳು ದಂಗೆಯೆದ್ದಿದ್ದುವು. ಹಡಗು ಗಾಳಿಯಲ್ಲಿ ತೇಲಾಡುವ ಪಟದಂತೆ ಮುಗ್ಗುರಿಸುತ್ತಿತ್ತು. ಒದ್ದಾಡುತ್ತಿತ್ತು. ಆಗ ಉಳಿದ ಶಿಷ್ಯರೆಲ್ಲಾ ಮಲಗಿದ್ದ ತನ್ನನ್ನು ಎಬ್ಬಿಸಿ ತನಗೆ ತನ್ನ ಪ್ರಾಣಭಯ ಹೇಳಿಕೊಂಡಿದ್ದರು. ಹಡಗು ಮುಳುಗಿಹೋಗುತ್ತದೆ. ತಮ್ಮ ಪ್ರಾಣಗಳೆಲ್ಲಾ ಈಗಲೋ ಆಗಲೋ ಸಾಗರದ ಪಾಲಾಗಿಬಿಡುತ್ತವೆಂದು ಗೋಳುಗರೆದಿದ್ದರು. ಆಗ ಜುಡಾಸ್ ಮಾತ್ರ ಎಂದಿನಂತೆಯೇ ಕುಳಿತಿದ್ದ. ತಾನು ಆಗ ಅವರನ್ನುದ್ದೇಶಿಸಿ “ಓ ನಂಬಿಕೆಯಿಲ್ಲದವರೇ, ಏಕೆ ಹೀಗೆ ಕುಗ್ಗುವಿರಿ? ಪ್ರಾಣಕ್ಕೇಕೆ ಹೆದರುವಿರಿ?” ಎಂದು ಹೇಳಿದ್ದ. ಆಗ ಕೊಂಚ ಹೊತ್ತಾದಮೇಲೆ ಸಾಗರ ಮತ್ತೆ ಶಾಂತವಾಗಿತ್ತು. ಹೊರಗೆ ಬಿರುಗಾಳಿಯಿದ್ದರೂ ಜುಡಾಸನ ಮನಸ್ಸು ಶಾಂತವಾಗಿತ್ತು. ಅವನ ಈ ಅಚಲನಂಬಿಕೆ ಉಳಿದವರಿಗಿರಲಿಲ್ಲ. ಅಂತೆಯೇ ಈಗ ಈ ಮಾತನ್ನು ಎಲ್ಲರಿಗೂ ಹೇಳಲೋ ಜುಡಾಸನೊಬ್ಬನಿಗೇ ಹೇಳಲೋ ಎಂದು ಯೇಸು ಯೋಚಿಸುತ್ತಿದ್ದ. ಶಿಷ್ಯರೆಲ್ಲ ಅರೆಮುಗಿದ ಮಾತು ಪೂರ್ಣವಾಗಲೆಂದು ಕಾದರು. ದಾರಿ ಹಿಂದೆ ಹಿಂದೆ ಸಾಗುತ್ತಿತ್ತು.

ಶಿಷ್ಯರೆಲ್ಲ ಯೇಸುವಿನ ಹಿಂದೆ ತಲೆತಗ್ಗಿಸಿ ಬರುತ್ತಿದ್ದರು. ಎಂದೂ ಇಲ್ಲದುದು ಇಂದು ತಮ್ಮ ಗುರು, ಯೇಸುಕ್ರಿಸ್ತ ತಲೆಯೆತ್ತದೆ ಗಾಢವಾಗಿ ಚಿಂತಿಸುತ್ತಾ ಮುಂದೆಹೋಗುತ್ತಿದ್ದಾನೆ. ಏನೋ ಹೇಳಬೇಕೆಂದಿದ್ದವನು ಅರ್ಧದಲ್ಲಿಯೇ ತಡೆದುಬಿಟ್ಟ. ಏನು ಯೋಜನೆಯೋ, ಏನು ತಡೆಯೋ, ಏನು ಸಂದೇಹವೋ ಯಾರಿಗೆ ತಾನೇ ಗೊತ್ತು. ಪ್ರತಿಯೊಬ್ಬ ಶಿಷ್ಯನಿಗೂ ತಾನೇ ಯೇಸುವನ್ನು ಸಂಪೂರ್ಣವಾಗಿ ಅರಿತುಕೊಂಡಿರುವವನು, ತಾನೇ ಯೇಸುವಿನ ಪಟ್ಟಶಿಷ್ಯನೆನ್ನುವ ಭಾವನೆ. ಹಿಂದೊಮ್ಮೆ ಈ ಮಾತಿಗೇ ಕೊಂಚ ಅಸಮಾಧಾನ ತೋರಿತ್ತು. ಜಾನನಿಗೂ ಜೇಮ್ಮನಿಗೂ ಕೊಂಚ ತಿಕ್ಕಾಟ ಹತ್ತಿತ್ತು. ಆಗಲೇ ಯೇಸು ಅವರಿಗೆ ಹೇಳಿದ್ದ-“ಮೊದಲಿಗನು ಕೊನೆಯವನಾಗುವನು, ಕೊನೆಯವನು ಮೊದಲಿಗನಾಗುವನು. ಏಕೆಂದರೆ ಸ್ವರ್ಗಸಾಮ್ರಾಜ್ಯ ಒಂದು ಮನೆಯ ಯಜಮಾನನಂತೆ. ತನ್ನ ತೋಟದಲ್ಲಿ ಕೆಲಸಮಾಡಲು ಯಜಮಾನ ಸೇವಕರನ್ನು ಹುಡುಕಿಕೊಂಡುಹೊರಟ. ಮೊದಲ ಗಂಟೆಯಲ್ಲಿ ಸಿಕ್ಕಿದವರನ್ನು ಗೊತ್ತು ಮಾಡಿ ತನ್ನ ತೋಟಕ್ಕೆ ಕಳಿಸಿದ. ಎರಡನೆಯ ಗಂಟೆಯಲ್ಲಿ ಮತ್ತೆ ಕೆಲವರನ್ನು ಗೊತ್ತುಮಾಡಿದ. ಹೀಗೆಯೇ ಐದು ಗಂಟೆಯವರೆಗೂ ಗೊತ್ತುಮಾಡಿದ. ಆರನೆಯ ಗಂಟೆಯಾದೊಡನೆಯೇ ಎಲ್ಲರಿಗೂ ಅವರ ಭತ್ಯ ಕೊಟ್ಟು ಕಳಿಸುವಾಗ ಕೊನೆ ಯವರಿಂದ ಆರಂಭಿಸಿ ಎಲ್ಲರಿಗೂ ದಿನದ ಕೂಲಿ ಕೊಟ್ಟ. ಆಗ ಮೊದಲ ಗಂಟೆಯಲ್ಲಿ ಬಂದವರು ಕೊಂಚ ತಂಟೆಹೂಡಿದರು. ಆದರೆ ಆತ ಅವರಿಗೆ ಇಷ್ಟೇ ಹೇಳಿದ. ಅವರಿಗೆ ಗೊತ್ತುಮಾಡಿದಷ್ಟು ಕೂಲಿ ಅವರಿಗೆ ಕೊಟ್ಟಾಗಿದೆ. ಉಳಿದವರಿಗೆಷ್ಟು ಕೊಟ್ಟರೆನ್ನುವ ಮಾತು ಅವರಿಗೇಕೆ? ಅಂತೆಯೇ ಕೊನೆಯವನು ಮೊದಲಿಗನಾಗಬಹುದು. ಮೊದಲಿಗ ಕೊನೆಯವನಾಗಬಹುದು” ಎಂದು ಯೇಸು ಬುದ್ದಿ ಹೇಳಿದ್ದ. ಯೇಸುವಿನ ಬಳಿಗೆ ಬಂದವರಲ್ಲಿ ಕೊನೆಯವನು ಜುಡಾಸ್, ಮೊದಲು ಬಂದವನು ಪೀಟರ್. ಈ ಮಾತಿನಿಂದ ಪೀಟರನಿಗೆ ಕೊಂಚ ಅಸಮಾಧಾನವಾಯಿತು. ಈ ಪಿಳ್ಳೆ ಜುಡಾಸ್ ನನಗಿಂತ ದೊಡ್ಡವನಾಗುವನೇ ? ನನಗೆ ತಿಳಿಯದುದು ಅವನಿಗೇನುತಾನೇ ತಿಳಿದಿದೆ ಎಂದು ಮನಸ್ಸಿನಲ್ಲೇ ಅಂದುಕೊಂಡಿದ್ದ. ಅವನ ಈ ಒಳಮಾತಿನ ಮರ್ಮ ತಿಳಿದೋ ಏನೋ ಯೇಸು ಮತ್ತೆ ಹೇಳಿದ್ದ. ಎಲ್ಲ ತನಗೆ ತಿಳಿದಿದೆಯನ್ನುವವನಷ್ಟು ಮೂರ್‍ಖ ಮತ್ತಾರೂ ಇಲ್ಲ. ತಿಳಿದಿದ್ದರೂ ತೋರ್ಪಡಿಸಿಕೊಳ್ಳದ ಅಹಂಕಾರರಹಿತ ತಿಳಿವೇ ನಿಜವಾದ ಅರಿವು, ಉಳಿದವರಿಗೆ ನಾನು ಮೇಲೆಂದಿರುವವನ ಮನಸ್ಸು ನಿಜಕ್ಕೂ ಕೀಳು. ಕ್ರಿಸ್ತನ ಈ ಮಾತಿನಿಂದ ಪೀಟರನಿಗೆ ಬಹಳ ನಾಚಿಕೆಯಾಗಿತ್ತು. ಇಷ್ಟೆಲ್ಲಾ ಆದರೂ ಪ್ರತಿ ಶಿಷ್ಯನಿಗೂ ತಾನು ಯೇಸುವನ್ನು ಚೆನ್ನಾಗಿ ಅರಿತುಕೊಂಡಿರುವೆನೆನ್ನುವ ಅಭಿಪ್ರಾಯ. ಹೀಗಾಗಿ ಒಬ್ಬೊಬ್ಬ ಒಂದೊಂದು ರೀತಿಯಲ್ಲಿ ಯೋಚಿಸಲಾರಂಭಿಸಿದ. ಮೂರುದಿನಗಳು! ಅದಾದ ಮೇಲೆ-ಅದಾದ ಮೇಲೇನು? ಪ್ರಭು ಏನೋ ಹೇಳಲುಹೊರಟು ನಿಲ್ಲಿಸಿಬಿಟ್ಟಿದ್ದ. ಮೂರು ದಿನವಾದ ನಂತರ ಜೆರೂಸಲೆಂ ನಗರ ಸೇರುತ್ತೇವೆ. ಅದೇ ಇರಬೇಕೆಂದು ಜಾನ್ ಯೋಚಿಸಿದ. ಮೂರು ದಿನಗಳು ಕಳೆದ ಮೇಲೆ ಯೇಸು ಎಂತಹುದೋ ಪವಾಡ ಮಾಡಬಹುದೆಂದು ಪೀಟರನ ಯೋಚನೆ. ಮೂರು ದಿನಗಳ ಮೇಲೆ ಜೆರೂಸಲೆಂ ನಮ್ಮದಾಗುವುದು. ನಾವು ಎಲ್ಲರನ್ನೂ ಯೇಸುವಿನ ಬೋಧನೆಗೆ ತರುವೆನೆಂದು ಜೇಮ್ಸ್, ಹೀಗೆಯೇ ಒಬ್ಬೊಬ್ಬರು ಒಂದೊಂದು ಬಗೆಯಾಗಿ ಯೋಚಿಸುತ್ತಿದ್ದರು.

ಜುಡಾಸ್ ಯೇಸುವಿನ ಪಕ್ಕದಲ್ಲಿ ಜೋಳಿಗೆ ಹಿಡಿದುಕೊಂಡು ಬರುತ್ತಿದ್ದ. ಯಾವಾಗಲೂ, ಯಾವುದಕ್ಕೂ ಮಾತನಾಡದ ಅಂತರ್ಜಿವಿ ಅವನು ಬಂದಯೋಚನೆಗಳನ್ನೆಲ್ಲಾ ಮನಸ್ಸಿನಲ್ಲೇ ಇಟ್ಟುಕೊಂಡು ಮತ್ತೆ ಮತ್ತೆ ಒರೆಹಚ್ಚುವವನು. ಯೇಸುವಿನೊಂದಿಗೆ ಕಳೆದ ಕೆಲವು ವರ್ಷಗಳಲ್ಲಿ ಅವನ ಯೌವನದ ಕಾವೆಲ್ಲಾ ತಣ್ಣಗಾಗಿತ್ತು. ಈಗ ಕಾವಿರಲಿಲ್ಲವೆಂದಲ್ಲ. ಈಗ ನಸು ಬೆಚ್ಚಗಿತ್ತು ಕಲ್ಪನೆ. ಮನಸ್ಸು ಹೂವಿನ ಬಣ್ಣ ಬಿಟ್ಟು ಹಣ್ಣಿನ ತಿರುಳಾಗುತ್ತಿತ್ತು. ಯೇಸುವಿನ ಬೋಧನೆಯಲ್ಲಿ ತನ್ನಿಂದಾದಷ್ಟನ್ನು ಅರಗಿಸಿಕೊಂಡಿದ್ದ. ಉಳಿದುದನ್ನು ಅರಿತುಕೊಳ್ಳಲು ಪ್ರಯತ್ನಿಸುತ್ತಿದ್ದ. ಈಗಲೂ ಯೇಸು ಮಾತನಾಡದೆ ಅರ್ಧಕ್ಕೇ ನಿಲ್ಲಿಸಿ ಬಿಟ್ಟಾಗ ಅವನ ಮುಖ ದಿಟ್ಟಿಸಿ ನೋಡಿದ. ಯಾವಾಗಲೂ ಶಾಂತವಾಗಿರುತ್ತಿದ್ದ ಹಸುಗೂಸಿನ ಮುಖದಷ್ಟು ತಿಳಿಮುಖದಲ್ಲಿ ಒಂದು ನೆರಳು ಮಲಗಿದ್ದಂತೆ ತೋರಿತು. ಯೇಸುವಿನ ಯೋಚನೆ ಏನಿರಬಹುದೆಂದು ಕೊಂಡು ತಾನೂ ಕಲ್ಪಿಸಿಕೊಳ್ಳಲು ಹತ್ತಿದ. ಮರುದಿನ ಮೂರು ದಿನದ ನಂತರ ಜೆರೂಸಲೆಂ ಸೇರುತ್ತೇವೆ. ಆಮೇಲೆ? ಆಮೇಲೇನು? ಅದು ಬಗೆಹರಿಯದ ಪ್ರಶ್ನೆ, ಆಮೇಲೆ ಏನೋ ಕಾದಿದೆ. ಯೇಸು ಇದುವರೆಗೂ ಹೇಳುತ್ತಿದ್ದುದು ಈಗ ಮುಗಿದುಹೋದೀತೇ? ನಾನು ಜೆರೂಸಲೆಂ ಸೇರಿದರೆ ಸಾಕು, ನನ್ನ ಕಾರ್ಯ ಮುಗಿದಂತೆ ಎಂದು ಯೇಸು ಹಿಂದೊಮ್ಮೆ ಹೇಳಿದುದು ನೆನಪಾಯಿತು. ಅಂದರೆ ತನ್ನ ಕೆಲಸ ಪೂರ್ಣವಾದ ಮೇಲೆ ತಮ್ಮ ಪ್ರಭು ತಮ್ಮನ್ನು ಬಿಟ್ಟು-ಛೆ! ಛೆ! ಇರಲಾರದು! -ಆದರೆ ಅದೇನಾದರೂ ಸತ್ಯವಾದರೆ ತಮ್ಮ ಪ್ರಭುವನ್ನುಳಿದು ತಾವು ಇರುವುದು ಹೇಗೆ ತಾನೇ ಸಾಧ್ಯ? ಅದು ಅಸಾಧ್ಯ. ಅದು ತನ್ನಿಂದಂತೂ ಆಗದಮಾತು ಎಂದುಕೊಂಡ ಜುಡಾಸ್. ಹೃದಯ ಯಾಕೋ ಎಂದೂ ಇಲ್ಲದುದು ಬಿರುಸಾಗಿ ಬಡಿದುಕೊಳ್ಳುತ್ತಿತ್ತು. ಏನೋ ಒಂದು ಬಗೆಯ ವಿಹ್ವಲತೆ, ಕಳವಳ, ಹಿಂದೆಂದೂ ಹಾಗಾಗಿರಲಿಲ್ಲ. ಯೇಸುವಿನ ಜತೆಗೆ ಬರುವ ದಿನದ ಹಿಂದಿನ ದಿನ ಹಾಗಾಗಿತ್ತು. ಅನಿರ್‍ವಚನೀಯವಾದ ಒಂದು ಚಿಂತೆ, ರೂಪವಿಲ್ಲದ ಒಂದು ವೇದನೆ, ಕಾರಣವಿಲ್ಲದ ಒಂದು ಬೇಸರದ ತ್ರಿವೇಣಿ ಸಂಗಮವಾಗಿತ್ತು ಹೃದಯ. ಆಗ ಯೇಸುವಿನ ಜತೆಗೆ ತಾನು ಬಂದು ಬಿಟ್ಟಿದ್ದ. ಈಗ ಮತ್ತೆ ಅದೇ ರೀತಿ ಹೃದಯದಲ್ಲಿ ಕೊರಗು, ಅಶಾಂತಿ, ಅಸಮಾಧಾನ, ಮಳೆಬರುವ ಮೊದಲು ಮೋಡ ಮಸುಕಿದಂತ ಅಪೂರ್‍ವ ಮೌನ. ಈ ಮೌನದ ಮಹಾಗರ್ಭದಲ್ಲಿ
ಅಶಾಂತಿಯ ಅಗಾಧತೆ ಸಿಡಿಯಲು ಸಿದ್ದವಾದಂತಿತ್ತು!

ಇದ್ದಕ್ಕಿದ್ದಂತೆ ಯೇಸು ಮಾತನಾಡಿದ. ಎಲ್ಲರೂ ತಮ್ಮ ಯೋಚನೆಗಳಿಗೆ ತಡೆಹಾಕಿ ಕೇಳಲಾರಂಭಿಸಿದರು. –
“ಪೀಟರ್”
“ಪ್ರಭು”
“ಇನ್ನು ಮೂರು ದಿನಗಳು ಮಾತ್ರ, ಪೀಟರ್. ಅನಂತರ-”
“ಅನಂತರ ಏನು ಪ್ರಭು?”
“ಅನಂತರ-ಹೂವು ಹಣ್ಣಾಗುತ್ತದೆ”

ಜುಡಾಸ್ ಒಮ್ಮೆಗೇ ನಡುಗಿದ. ಹಾಗಿದ್ದರೆ-ತಾನೆಂದು ಕೊಂಡುದು ನಿಜ. ಹೂವು ಒಮ್ಮೆ ಹಣ್ಣಾದ ಮೇಲೆ ಬಹುಕಾಲ ಅದು ಮರಕ್ಕೆ ಅಂಟಿಕೊಳ್ಳದು. ತೊಟ್ಟಿನ ಆಧಾರ ಅದಕ್ಕೆ ಬೇಕಿಲ್ಲ! ಎಂದ ಮೇಲೆ-ತೊಟ್ಟಿನ ಗತಿ?

ಪೀಟರನಿಗೆ ಯೇಸುವಿನ ಮಾತು ಅರ್ಥವಾಯಿತೋ ಇಲ್ಲವೋ ಸುಮ್ಮನೆ ನಡೆಯುತ್ತಿದ್ದ. ಮತ್ತೆ ಪ್ರಶ್ನೆ ಕೇಳಲಿಲ್ಲ. ಯೇಸು ಕೊಂಚ ಕಾಲ ಮತ್ತೆ ಮೌನವಾಗಿದ್ದವನು ತಿರುಗಿ ಮಾತಾಡಲಾರಂಭಿಸಿದ.

“ಹಣ್ಣಾದರೇ ಹೂವಿನ ಜನ್ಮ ಸಾರ್ಥಕ. ಆ ಹಣ್ಣು ಕೆಳಗುರುಳುತ್ತದೆ. ಅದರೆ ಬಲಿತ ಬೀಜಗಳು ಚೆಲ್ಲಿ ನೂರಾರು ಸಸಿಗಳೇಳುತ್ತವೆ. ನೂರಾರು ಮರಗಳಾಗುತ್ತವೆ. ಸಾವಿರಾರು ಹೂಗಳಾಗುತ್ತವೆ. ಒಂದು ಹೋಗಿ ಲಕ್ಷವಾಗುತ್ತದೆ.”

ಯೇಸು ತಾನೊಬ್ಬ ಹೋಗಿ ಲಕ್ಷ ಯೇಸುಕ್ರಿಸ್ತರ ಸೃಷ್ಟಿಗೆ ದಾರಿಮಾಡಿಕೊಡುವನು. ಆದರೆ ಹೋದ ಯೇಸುವಿನ ವಿಯೋಗ ಹೇಗೆ ತಾನೇ ತಡೆಯುವದಂದು ಒದ್ದಾಡಿದ ಜುಡಾಸ್.

“ಪೀಟರ್, ಇಲ್ಲಿ ಕೊಂಚ ಹೊತ್ತು ಕುಳಿತುಕೊಳ್ಳೋಣ”

ಯೇಸುವಿನ ಸುತ್ತಲೂ ಅವನ ಶಿಷ್ಯರು ಕುಳಿತರು. ಯೇಸು ಅವರಿಗೆ ಹೇಳಲಾರಂಭಿಸಿದ.

“ಇನ್ನು ಮೂರು ದಿನದನಂತರ ನಾನು ನನ್ನ ಸ್ಥಾನಕ್ಕೆ ಹಿಂದಿರುಗುತ್ತೇನೆ. ನನ್ನನ್ನು ಇಲ್ಲಿಗೆ ಕಳುಹಿಸಿದ, ಸ್ವರ್ಗದಲ್ಲಿರುವ ನನ್ನ ತಂದೆ ದೇವ ದೇವ ನನ್ನನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಾನೆ. ನನ್ನ ಈ ಮಾತಿನಿಂದ ನಿಮಗೆ ದುಃಖವಾಗಿದೆ. ಆದರೆ ನನಗೆ ಬೇರೆ ಮಾರ್ಗವೇ ಇಲ್ಲ. ನಾನು ಹೋಗಿ ನಿಮಗೆ ಶಾಂತಿ ನೀಡುವವನನ್ನು ಕಳುಹಬೇಕು. ಕೊಂಚ ಕಾಲದಲ್ಲೇ ನಿಮ್ಮ ಬಳಿಯಿಂದ ಹೊರಟು ಹೋಗುವೆನು. ಕೊಂಚ ಕಾಲದಲ್ಲೇ ನಿಮ್ಮ ಬಳಿ ಬರುವೆನು.”

ಯೇಸುವಿನ ಕೊನೆಯಮಾತು ಎಲ್ಲರನ್ನೂ ತಬ್ಬಿಬ್ಬಾಗಿಸಿತು. ಕೊಂಚ ಕಾಲದಲ್ಲಿ ಹೋಗುವೆನು, ಕೊಂಚಕಾಲದಲ್ಲೇ ಬರುವೆನು ಎಂದರೆ ಏನರ್ಥವೆಂದು ಎಲ್ಲರ ಮನಸ್ಸಿನಲ್ಲಿ ಸಂದೇಹ, ಈ ಸುದೇಹವನ್ನರಿತು ಯೇಸು ಮತ್ತೆ ಹೇಳಲಾರಂಭಿಸಿದ.

“ಜೆರೂಸಲೆಂನಲ್ಲಿರುವ ರಾಜ ಪೈಲೇಟನಿಗೆ ನಾನು ಒಪ್ಪಿಸಲ್ಪಡುತ್ತೇನೆ. ನನ್ನ ಶತ್ರುಗಳ ಕೈಗೆ ಕೊಡಲ್ಪಡುತ್ತೇನೆ. ನನ್ನ ಶತ್ರುಗಳು ನನ್ನನ್ನು ಗೇಲಿಮಾಡುತ್ತಾರೆ. ನನ್ನನ್ನು ಬಯ್ಯುತ್ತಾರೆ. ನನ್ನನ್ನು ಇನ್ನಿಲ್ಲದ ರೀತಿಯಲ್ಲಿ ಗೋಳಾಡಿಸುತ್ತಾರೆ. ನನ್ನನ್ನು ಕೊಲ್ಲುತ್ತಾರೆ. ಆದರೆ ಮತ್ತೆ ಮೂರೇ ದಿನದಲ್ಲಿ ನಾನು ಸಾವಿನಿಂದ ಎದ್ದು ಬರುತ್ತೇನೆ” ಎಂದು ಯೇಸು ಮತ್ತೆ ಮೌನತಾಳಿದ.

ಶತ್ರುಗಳ ಕೈಗೆ ಕೊಡಲ್ಪಡುತ್ತೇನೆಂದು ಯೇಸು ಹೇಳಲು ಎಲ್ಲರೂ ನಡುಗಿದರು. ತಮ್ಮ ಪ್ರಭುವನ್ನು ಕಾಪಾಡಲು ತಾವು ಹನ್ನೆರಡು ಮಂದಿಯೂ ಇರಲು ಶತ್ರುಗಳ ಕೈಗೆ ಯೇಸುವನ್ನು ಕೊಡುವವರಾದರೂ ಯಾರು? ಅಂತಹ ದ್ರೊಹ ನಡೆಸುವವರು ಯಾರು? ಈಗಲೇ ತಿಳಿದು ಬಿಟ್ಟರೆ ಆತನಿಲ್ಲದಂತೆ ಮಾಡಿಬಿಡಬಹುದೆಂದು ಶಿಷ್ಯರು ಯೋಚಿಸಿದರು. ಯೇಸು ಬೋಧಿಸಿದ್ದ ಅಹಿಂಸೆ ಆ ಕ್ಷಣದಲ್ಲಿ ಮರೆತುಹೋಗಿತ್ತು.

“ಆದರೆ ನನ್ನ ಪ್ರಯಾಣದಿಂದ ನೀವು ಯಾರೂ ಮರುಗಬೇಕಾದಿಲ್ಲ. ನನ್ನಲ್ಲಿ ನಂಬಿಕೆಯಿಟ್ಟವರಲ್ಲಿ ನಾನು ಯಾವಾಗಲೂ ಇರುತ್ತೇನೆ ನನ್ನಲ್ಲಿ ಉಳಿದವರು ಯಾವಾಗಲೂ ನನ್ನವರೇ, ನನ್ನ ಕೊಂಬೆಯಲ್ಲಿ ಬಿಟ್ಟ ಹನ್ನೆರಡು ಹಣ್ಣುಗಳು ನೀವು ನಿಮ್ಮಲ್ಲಿ ನಾನು ಯಾವಾಗಲೂ ಇರುತ್ತೇನೆ. ಆದರೆ ಸಂಪೂರ್ಣವಾಗಿ ನನ್ನಲ್ಲಿ ನಂಬುಗೆಯನ್ನಿಡಿ. ಅದಿಲ್ಲದಿದ್ದರೆ ನೀವು ಉಳಿಯುವುದು ಕಷ್ಟಸಾಧ್ಯ.”

ಯೇಸು ಮಾತು ಮುಗಿಸಿ ನಸುನಕ್ಕ. ಆ ನಗೆಯಲ್ಲಿ ಎಲ್ಲರಿಗೂ ಒಂದು ಅಪೂರ್ವ ಕಾಂತಿ ತೋರಿತು. ಅದರ ಹಿಂದೆ ಅಡಗಿದ್ದ ಅಪಾರ ನೋವಿನ ನಿಶ್ಚಯ ಯಾರಿಗೂ ಕಾಣಲಿಲ್ಲ. ಯೇಸು ಉಳಿದೆಲ್ಲ ಶಿಷ್ಯರನ್ನು
ಕೆಲಸ ಹೇಳಿ ಕಳುಹಿಸಿ ಜುಡಾಸನ ತೊಡೆಯ ಮೇಲೆ ತಲೆಯಿಟ್ಟು ಮಲಗಿದ. ಒಂದೆರಡು ನಿಮಿಷ ಮೇಲುಗಡೆಗೇ, ಜುಡಾಸನ ಕಡೆಗೇ ನೋಡುತ್ತಾ ಒಂದು ನಿಟ್ಟುಸಿರಿಟ್ಟ.

“ಜುಡಾಸ್”
“ಪ್ರಭು”
“ನಿನ್ನ ತೊಡೆಯ ಮೇಲೆ ತಲೆಯಿಟ್ಟು ಮಲಗಿದಾಗ ಎಷ್ಟು ಹಾಯಿಯನಿಸುತ್ತದೆ ಗೊತ್ತೇ ಜುಡಾಸ್, ಒಂದೊಂದು ಸಾರಿ ಮನಸ್ಸಿಗೆ ದಣಿವಾದಾಗಲೂ ನನಗೆ ಶಾಂತಿ ನಿನ್ನ ತೊಡೆಯಲ್ಲಿ ಸಿಕ್ಕಿದೆ. ನಿನ್ನ ಮುಖ ಕಂಡೊಡನೆಯೋ ನನಗೆ ಏನೇನೋ ನೆನಪಾಗುತ್ತದೆ. ಜುಡಾಸ್.”

“ಏನು ನೆನಪು, ಪ್ರಭು?”

“ಚಿಕ್ಕಂದಿನಲ್ಲಿ ನನ್ನ ತಾಯಿ ಮೇರಿಯೊಂದಿಗೆ ನಾನು ಈಜಿಪ್ಟಿನಲ್ಲಿದ್ದಾಗ, ಸೈನಿಕರಿಂದ ನನ್ನನ್ನುಳಿಸಲು ತಾಯಿ ಊರಿನಿಂದ ಊರಿಗೆ ಹೋಗುತ್ತಿದ್ದಳು. ಆಗ ರಾತ್ರಿಯಾಯಿತೆಂದರೆ ಹೀಗೆಯೇ ತೊಡೆಯ ಮೇಲೆ ತಲೆಯಿಟ್ಟು ಮಲಗುತ್ತಿದ್ದೆ. ಮೇಲೆ ಕಣ್ಣೆತ್ತಿದರೆ ಹೀಗೆಯೇ ಅಚಲನಂಬಿಕೆಯಿಂದ ಕಳೆಗಟ್ಟಿದ ಮುಖ. ಪ್ರೇಮವೇ ಕಾಂತಿಯಾದ ಮಮತೆಯ ಕಣ್ಣುಗಳು ನಿನ್ನನ್ನು ಕಂಡಾಗಲೆಲ್ಲ ನನಗೆ ತಾಯಿ ಮೇರಿಯ ನೆನಪಾಗುವುದು, ಜುಡಾಸ್.”

ಜುಡಾಸ್ ಮಾತಾಡಲಿಲ್ಲ. ಕೈ ಮಾತ್ರ ಯೇಸುವಿನ ಮುಂಗುರುಳುಗಳನ್ನಾಡಿಸುತ್ತಿತ್ತು. ತಾಯ್ತನದ ಮಮತೆಯಿಂದ ಹಣೆಯನ್ನು ನೇವರಿಸುತ್ತಿತ್ತು. ಕಣ್ಣಿನಲ್ಲಿ ನೀರು ತುಂಬಿಕೊಂಡಿತ್ತು. ಜುಡಾಸನಿಗೆ ತನ್ನ ತಾಯಿಯ ನೆನಪೂ ಬಂದಿತು. ತಾನು ಯೇಸುವಿನೊಂದಿಗೆ ಹೊರಟುಬಂದಾಗ ತಾಯಿಗೆ ಹೇಳಿ ಕೂಡ ಬರಲಿಲ್ಲ. ಆಗ ತಾನಿನ್ನೂ
ಚಿಕ್ಕವನು, ತಮ್ಮ ಮನೆಯಿಂದ ಕೊಂಚದೂರದಲ್ಲಿದ್ದ ಹಳೆಯ ಕೋಟೆಯ ಅವಶೇಷಗಳ ಬಳಿ ಕುಳಿತಿದ್ದ. ಅಲ್ಲಿಯೇ ಕುಳಿತು ಗ್ರೀಕ್ ವೀರ ಯೋಧರ ಕತೆಯನ್ನೋದುತ್ತಿದ್ದ. ಮೊದಲಿನಿಂದಲೂ ಅವನಿಗೆ ಕಾವ್ಯವೆಂದರೆ ಪ್ರಾಣ. ಅದರಲ್ಲಿಯೂ ಗ್ರೀಕ್ ರುದ್ರಕಾವ್ಯಗಳಂತೂ ಅವನಿಗೆ ಸೀಯಾಳ ಕುಡಿದಂತೆ. ಆಗ ಅದನ್ನು ಓದುತ್ತಿದ್ದಾಗ, ತಮ್ಮ ದೇಶವನ್ನುಳಿಸಲು ತಮ್ಮತನ ಮರೆತ ತ್ಯಾಗವೀರರ ಚಿತ್ರ ಮನಸ್ಸಿನ ಮುಂದೆ ಸುಳಿದು, ತನ್ನ ಯುವಕ ಹೃದಯದಲ್ಲಿ ಕೂಡ ಹಿರಿಯಾಸೆ ಮೂಡಿದಾಗ, ದೂರದಲ್ಲಿ ಹನ್ನೆರಡು ಮಂದಿ ಬರುತ್ತಿದ್ದುದನ್ನು ಕಂಡಿದ್ದ. ಹಿಂದಿನ ದಿನದಿಂದ ಹೃದಯ ಏನೋ ಹುಚ್ಚು ಹುಚ್ಚಾಗಿದ್ದುದು ಈಗ ಇದ್ದಕ್ಕಿದ್ದಂತೆ ಬಂದರು ಸೇರಿದ ಹಡಗಿನಂತೆ ಶಾಂತವಾಯಿತು. ಜೋಲಿಯಾಟ ನಿಂತಿತು. ಯೇಸು ಮುಂದೆ ಬಂದವನು “ಮಗು” ಎಂದು ತನ್ನ ಕೈ ಹಿಡಿದಿದ್ದ. ಆಗ ತಾನು ಮಾತಿಲ್ಲದೆ ಯೇಸುವನ್ನು ಹಿಂಬಾಲಿಸಿದ್ದ. ಅದಾಗಿ ಬಹಳ ವರ್ಷಗಳಾಗಿ ಹೋಗಿದೆ. ಈಗ ತನ್ನ ತಾಯಿ ಏನಾಗಿರುವಳೋ, ಮಗನನ್ನು ಕಳೆದು ಕೊಂಡ ದುಃಖದಲ್ಲಿ ತಾಯಿ ಕೊರಗಿ ಕೊರಗಿ ಆಗಲೇ ಸತ್ತುಹೋದಳೋ ಏನೋ, ಈಗ ಉಳಿದಿರುವಳೋ ಇಲ್ಲವೋ, ಉಳಿದಿದ್ದರೂ ಮುದುಕತನ. ಕಣ್ಣು ಕಾಣಿಸದೆ ಒದ್ದಾಡಬಹುದು. ಹಲವುವರ್ಷಗಳ ಹಿಂದೆ ಕಳೆದು ಕೊಂಡ ತನ ಒಬ್ಬನೇ ಮಗನ ಬರವಿಗಾಗಿ ಕಾದು ಕಾದು ಕಣ್ಣು ಇಂಗಿ ಹೋಗಿರಬಹುದು. ಹಂಬಲಿಸಿ ಹಂಬಲಿಸಿ ಹೃದಯ ತರಗಾಗಿರಬಹುದು. ತಾನು ತಾಯಿಯನ್ನು ಕಳೆದುಕೊಂಡವನು ಎಂದು ಜುಡಾಸಿನ ಹೃದಯದಲ್ಲಿ ನೆನಪು ಉಮ್ಮಳಿಸಿ ಬಂತು. ಕಣ್ಣಿನಿಂದ ಒಂದು ಹನಿ ನೀರು ಮುತ್ತಿನ ಚಿಪ್ಪಿನಿಂದುರುಳುವ ಮುತ್ತಿನಂತೆ ಕೆಳಗುರಳಿ ಯೇಸುವಿನ ಮುಂಗುರುಳಿನ ಆಭರಣವಾಗಿ ಕ್ಷಣಕಾಲ ನಿಂತಿತು. ಅಲ್ಲಿಂದ ಹಣೆಗೆ ಇಳಿಯಿತು.

“ಜುಡಾಸ್”
“ಪ್ರಭು”
“ಅಳುತ್ತಿರುವೆಯಾ, ಜುಡಾಸ್”

ಯೇಸುವಿನ ಧ್ವನಿಯಲ್ಲಿ ಮಾಧುರ್‍ಯ, ಮಾರ್‍ದವತೆ, ಮಮತೆಗಳು ಮನೆಮಾಡಿಕೊಂಡಿದ್ದುವು. ತಾಯಿಯ ಪ್ರೇಮದ ಸ್ವರದಂತಿತ್ತು.

“ಏನೋ, ನನಗೂ ತಾಯಿಯ ನೆನಪಾಯಿತು. ಪ್ರಭು”

“ಜುಡಾಸ್, ತಾಯಿಯ ನೆನಪಾಗದ ಮನುಷ್ಯ ಮನುಷ್ಯನೇ ಅಲ್ಲ, ತನಗೆ ಜನ್ಮ ಕೊಟ್ಟ ತಾಯಿಯನ್ನು ಮರೆಯುವನಿಗಿಂತ ಪಾಪಿ, ದ್ರೋಹಿ ಮತ್ತೊಬ್ಬನಿಲ್ಲ. ಕೋಟಿ ಕೀಳ್ತನ ನಡೆಸಿದವನಿಗಾದರೂ ಸ್ವರ್ಗದ ಬಾಗಿಲು ತೆರೆಯಬಹುದು. ಆದರೆ ತಾಯಿಯನ್ನು ಮರೆತವನಿಗಲ್ಲ. ನನಗೆ ನೀನೇ ತಾಯಿಯಂತಿರುವೆ. ಜುಡಾಸ್”

ಜುಡಾಸನ ಕಣ್ಣಿನಿಂದ ಹನಿ ಪಳಪಳನೆ ಉದುರಿದುವು. ಆನಂದ, ನೋವುಗಳು ಕೈಗೆ ಕೈ ಕೂಡಿದ್ದುವು ಆ ಕಣ್ಣೀರಿನಲ್ಲಿ.

“ನೀವೆಲ್ಲಾ ನನಗಾಗಿ ಬಹಳ ಕಷ್ಟ ಪಟ್ಟಿದ್ದೀರಿ, ಜುಡಾಸ್ ಆದರೆ ಇದು ಈ ಎಲ್ಲ ಕಷ್ಟವೂ ಪ್ರಪಂಚದ ಒಳಿತಿಗಾಗಿ, ಹೊಸ ಪ್ರಪಂಚದ ಸೃಷ್ಟಿಯಾಗಬೇಕಾಗಿದೆ. ಜುಡಾಸ್, ಪ್ರೇಮದ ಜನನವಾಗ ಬೇಕಾಗಿದೆ. ಈಗ ರೋಮನರ ಶಾಸನದಲ್ಲಿ, ಮಾನವತೆಯನ್ನೇ ಮರೆತವರ ಅಮಾನುಷತೆಯಿಂದ ಪ್ರಪಂಚ ಕೆಟ್ಟು ಹೋಗಿದೆ. ಅದನ್ನು ಸರಿಪಡಿಸ ಬೇಕು. ಅದು ಕಷ್ಟದ ಕೆಲಸ. ಅಸಾಧ್ಯ ಗಡುಸಿನ ಕೆಲಸ, ಇದುವರೆಗೂ ನನ್ನ ಜತೆಯಲ್ಲಿದ್ದು ಎಲ್ಲರೀತಿಯ ಕಷ್ಟಗಳನ್ನೂ ಅನುಭವಿಸಿದ್ದೀರಿ. ನಿಮ್ಮನ್ನು ಎಲ್ಲರೂ ದೂರಕ್ಕೆ ಎಸೆದಿದ್ದಾರೆ. ಗಾಳಿಗೆ ಸಿಕ್ಕಿ ಹೂಬಳ್ಳಿಯಿಂದ ಕಿತ್ತು ಬೇಲಿಯಿಂದ ಹೊರಗೆಸೆಯಲ್ಪಟ್ಟ ಹೂವಿನ ಬಾಳು ಕಠಿಣ. ಆದರೆ ಅದನ್ನೇ ಆರಿಸಿ ಎತ್ತಿಕೊಂಡುಹೋಗಿ ಮುಡಿದುಕೊಳ್ಳುವರು. ಅಂತೆಯೇ ನೀವಿಲ್ಲಿ ಕಷ್ಟಪಟ್ಟರೂ ನಿಮಗೆ ನನ್ನ ಸ್ವರ್ಗದಲ್ಲಿ ಯಾವಾಗಲೂ ಸುಖಾಸನ ಕಾದಿರುತ್ತದೆ.”

“ಈಗ-”

ಜುಡಾಸ್ ಮಾತಾಡಲು ಕೊಂಚ ಹಿಂತೆಗೆದ. ಅದನ್ನು ಕಂಡು ಯೇಸು ಅವನನ್ನು ಕುರಿತು ಹೇಳಿದ-

“ಹೇಳು, ಜುಡಾಸ್, ಏನೋ ಸಂದೇಹವಿರುವಂತಿದೆ”

“ಪ್ರಭು, ನಮ್ಮ ಕಷ್ಟವೇನೂ ಕಷ್ಟವಲ್ಲ. ಆದರೆ ನಿಮ್ಮದು, ಇನ್ನು ಮೂರುದಿನವೆಂದು ಮಾತ್ರ ಹೇಳಿದಿರಿ. ಆಮೇಲೆ ನಿಮ್ಮನ್ನುಳಿದು ನಾವು ಹೇಗೆ ಇರುವುದು ಪ್ರಭು?”

“ಮಗು, ಜುಡಾಸ್, ಮೂರು ದಿನದ ನಂತರ ನಾನು ಶತ್ರುಗಳ ಕೈಗೆ ಸಿಕ್ಕಿಕೊಳ್ಳುತ್ತೇನೆ. ಅದಾದ ಮೂರುದಿನದಲ್ಲೇ ಸಾವಿನಿಂದ ಮತ್ತೆ ಏಳುತ್ತೇನೆ. ಇದೂ ಅಲ್ಲದೆ ನಿಮ್ಮೊಂದಿಗೆ ನನ್ನ ಆತ್ಮ ಯಾವಾಗಲೂ
ಇದ್ದೇ ಇದೆ”

“ಆದರೆ, ಪ್ರಭು, ಶತ್ರುಗಳ ಕೈಗೆ ನಿಮ್ಮನ್ನೊಪ್ಪಿಸುವವರು ಯಾರು,
ಪ್ರಭು?”

“ಜುಡಾಸ್, ನಿನ್ನಲ್ಲಿ ನನ್ನದೊಂದು ಬೇಡಿಕೆಯಿದೆ. ಜುಡಾಸ್. ನೀನು ನನಗೆ ತಾಯಿಯಂತೆ. ತಾಯಿ ಮಗ ಕೇಳಿದುದನ್ನು ಏನಂದರೂ ಒಲ್ಲೆನೆನ್ನುವುದಿಲ್ಲ. ಕೊಡುವೆಯಾ ಜುಡಾಸ್?”

“ಜುಡಾಸ್ ಈ ಬೇಡಿಕೆ ಕೇಳಿ ಕೊಂಚ ಬೆದರಿದ, ಕಾಲು, ತೊಡೆ ಕೊಂಚ ಅದುರಿತು. ಯೇಸುವಿಗದು ಕೂಡಲೇ ಅರಿವಾಯಿತು.

“ಜುಡಾಸ್, ನಾನು ಕೇಳಿದುದಕ್ಕೆ ಬೆಚ್ಚಿದೆಯಾ? ನಾ ಕೇಳಿದುದನ್ನು ಕೊಡಲಾರೆಯಾ?”

“ಯೇಸುವಿನ ಧ್ವನಿಯ ಹಿಂದಿದ್ದ ನೋವು ಜುಡಾಸನ ಹೃದಯದ ತಂತಿಯನ್ನು ಮೀಟಿತು.

“ಪ್ರಭು, ನನ್ನದೆಲ್ಲವೂ ನಿಮ್ಮದಾಗಿರುವಾಗ…”

“ಹಾಗಲ್ಲ, ಜುಡಾಸ್. ಇದೊಂದು ಮಾತನ್ನು ನೀನು ಮಾಡಬೇಕು. ನಿನ್ನಿಂದ ಒಬ್ಬನಿಂದಲೇ ಈ ಮಹಾತ್ಯಾಗ ಸಾಧ್ಯ.”

“ಪ್ರಭು, ತಮ್ಮದಾದುದನ್ನು ಹೇಗೆ ಬೇಕಾದರೂ ತಾವು ಉಪ ಯೋಗಿಸಿಕೊಳ್ಳಬಹುದಲ್ಲವೇ?

“ಈ ತ್ಯಾಗದಿಂದ ನಿನ್ನ ಹೆಸರು ಕಲುಷಿತವಾಗುವುದು. ಪ್ರಪಂಚ ವಿರುವವರೆಗೂ ಜನ ನಿನ್ನ ಹೆಸರನ್ನೆ ಬಯ್ಯುವರು. ಪ್ರಪಂಚವೆಲ್ಲ ನಿನ್ನನ್ನು ನಿಂದಿಸುವುದು. ನಿನಗೆ ಒಬ್ಬರಿಂದಲೂ ಒಂದು ಒಳ್ಳೆಯ ಮಾತು ಸಿಗುವುದಿಲ್ಲ. ನಿನ್ನವರಿಂದ, ನಿನ್ನ ಜತೆಗಾರರಿಂದ, ನನ್ನ ಜತೆಗಾರರಿಂದಲೂ ನೀನು ಹಾಸ್ಯಕ್ಕೆ ಗುರಿಯಾಗಬೇಕಾದೀತು. ಅಪನಿಂದೆಗೀಡಾಗಬೇಕು. ಈ ತ್ಯಾಗಕ್ಕೆ ನೀನು ಸಿದ್ಧನಾಗಿರುವೆಯಾ, ಜುಡಾಸ್?”

ಯೇಸುವಿನ ಮಾತಿನ ಹಿಂದಿನ ನೋವು, ಕಾವಿನಿಂದ ಜುಡಾಸನ ಹೃದಯಕ್ಕೆ ಮೋಡಿ ಹಾಕಿದಂತಾಗಿತ್ತು. ಎಂದೂ ಯೇಸು ಇಷ್ಟು ಉದ್ವೇಗದಲ್ಲಿ ಮಾತಾಡಿರಲಿಲ್ಲ. ಎಂದೂ ಯೇಸುವಿನ ಕಣ್ಣಿನಲ್ಲಿ ನೀರು ಆಡಿರಲಿಲ್ಲ. ಈಗ ಯೇಸುವಿನ ಮುಖದಲ್ಲಿ ನೋವು, ಅಗಾಧ ವೇದನೆ ತೋರುತ್ತಿತ್ತು. ಕಣ್ಣಿನಲ್ಲಿ ನೀರು ತುಂಬಿ ಕೆನ್ನೆಗಿಳಿಯುತ್ತಿತ್ತು. ಜುಡಾಸ್ ಮೆಲ್ಲನೆ ಬೆರಳಿನಂಚಿನಿಂದ ಕಣ್ಣೀರನೊರೆಸಿದ.

“ಹೇಳು, ಜುಡಾಸ್, ನಿನ್ನನ್ನು ಎಲ್ಲರೂ ದ್ರೋಹಿಯನ್ನುವರು. ಮುಂದೆ ಬರುವ ಜನಾಂಗಗಳೆಲ್ಲಾ ನಿನ್ನ ಹೆಸರನ್ನೇ ದ್ರೋಹಿಯೆಂದು ಯೋಗಿಸುವರು. ಆದರೆ ಅವರಿಗಾಗಿ, ಜಗತ್ತನ್ನುಳಿಸುವುದಕ್ಕಾಗಿ ನೀನು ಅದನ್ನೊಪ್ಪಬೇಕು ಜುಡಾಸ್”

ಜುಡಾಸ್ ಧಿಗ್ಗನೆ ನಡುಗಿದ. ಹಾಗಿದ್ದರೆ-ಹಾಗಿದ್ದರೆ! ನಿಜ! ತಾನೇ!

“ಪ್ರಭು!” ಎಂದೊಮ್ಮೆ ಚೀರಿದ.

“ಹೌದು ಜುಡಾಸ್, ನೀನೇ ಆ ಕಾರ್‍ಯ ಮಾಡಬೇಕು ಹಣ್ಣನ್ನು ಕೆಳಕ್ಕೆ ಬೀಳಿಸಲು ತಾಯಿತೊಟ್ಟಿಗೆ ಇಚ್ಛೆಯಿಲ್ಲ. ಆದರೆ ಆ ಹಣ್ಣಿನ ಸಾವಿನಿಂದ ಸಾವಿರ ಬೀಜಗಳು ಹುಟ್ಟುತ್ತವೆ. ಅದಕ್ಕಾಗಿ ತೊಟ್ಟು ಮರುಗಬಾರದು, ಸಂತೋಷ ಪಡಬೇಕು”.

“ಪ್ರಭು, ನಿಮ್ಮನ್ನು ಬಲಿ ಕೊಡಬೇಕೇ? ಅಯ್ಯೋ! ಇದೆಂತಹ ಬೇಡಿಕೆ ಪ್ರಭು? ಅದಿಲ್ಲದೆ ಪ್ರಪಂಚವನ್ನುಳಿಸುವುದು ಸಾಗದೇ ಪ್ರಭು. ನಾವು ಹನ್ನೆರಡು ಮಂದಿ ಶಿಷ್ಯರಿದ್ದೇವೆ. ನಮ್ಮೆಲ್ಲರ ಬಲಿ ಕೊಟ್ಟರೆ ಸಾಲದೇ?ಪ್ರಪಂಚವನ್ನುಳಿಸಲು ನೀವೇ ಬಲಿಯಾಗಬೇಕೇ?”

“ಹೌದು, ಜುಡಾಸ್. ನನ್ನ ಮನಸ್ಸು ಎಷ್ಟು ರೋಸಿಹೋಗಿದೆ ಗೊತ್ತೇ? ಒಂದೊಂದು ಬಾರಿ ನನಗೂ ಅನಿಸುತ್ತೆ, ಸ್ವರ್ಗದಲ್ಲಿರುವ ನನ್ನ ತಂದೆ-ದೇವದೇವ ಕೂಡ ನನ್ನನ್ನು ಮರೆತುಬಿಟ್ಟನೇನೋ ಎಂದು. ಆದರೇನು ಮಾಡುವುದು? ಇಷ್ಟು ವರ್ಷ ನಾವು ಬೋಧಿಸಿದೆವು. ಪ್ರೇಮದ ತತ್ವ ಬೋಧಿಸಿ ನಾವು ಬಡವಾದೆವೇ ಹೊರತು, ಕೇಳಿದವರಾರೂ ಬಲವಂತರಾಗಲಿಲ್ಲ. ಇಷ್ಟು ದಿನ ನಾವು ನಡೆಸಿದುದೆಲ್ಲಾ ನೀರಿನಲ್ಲಿ ಬರೆದ ಬರಹವಾಗಿ ಹೋಗುತ್ತದೆ. ಈ ಜನರ ಅಜ್ಞಾನದಿಂದ ನನಗೂ ಅತ್ಯಂತ ಬೇಸರವಾಗಿದೆ. ಹಾಗೆಯೇ ಬರಿಯ ಬೋಧನೆಯಿಂದಲೇ ಜನರನ್ನು ಪ್ರೇಮದ ಹಾದಿಗೆ ತರಬಹುದೆಂದಿತ್ತು,
ಆದರೆ ಈಗ ಅದರಿಂದ ಏನೂ ಉಪಯೋಗವಾಗಿಲ್ಲ. ನಾವು ಹೋದ ಹೋದಲ್ಲಿ ಜನ ನಮ್ಮನ್ನು ಕೇಳುತ್ತಾರೆ. ಆದರೆ ಕೇಳಿದೊಡನೆಯೇ ಮರೆಯುತ್ತಾರೆ. ಈಗ ಅವರನ್ನುಳಿಸಲು ಒಂದೇ ಮಾರ್‍ಗ!”

“ಅದೇನು ಪ್ರಭು?”

“ರಕ್ತತರ್‍ಪಣ, ನನ್ನ ರಕ್ತಹರಿಸಿ ಅದರ ಪಾಪಗಳನ್ನು ತೊರೆಯಬೇಕು. ಅವರ ಪಾಪಗಳನ್ನೆಲ್ಲಾ ನನ್ನ ಮೇಲೆ ತೆಗೆದುಕೊಳ್ಳಬೇಕು ಅವರ ಪಾಪಗಳಿಗಾಗಿ ನಾನು ನೋವನನುಭವಿಸಬೇಕು. ಅದೊಂದೇ ಈ ಜಗತ್ತಿನ ಜನರನ್ನೆಚ್ಚರಿಸುವ ಮಾರ್‍ಗ, ಅದರಿಂದ ಮಾತ್ರವೇ ಅವರ ಹೃದಯದಲ್ಲಿ ಪ್ರೇಮ ಬೆಳೆಯಲು ಸಾಧ್ಯ. ಅದಕ್ಕಾಗಿ ನೀನು ನನಗೆ ನೆರವಾಗಲಾರೆಯಾ, ಜುಡಾಸ್?”

“ಪ್ರಭು ಇದನ್ನು ಹೇಗೆ ಒಪ್ಪಲಿ ಪ್ರಭು. ಕೈಯಾರ ತನ್ನ ಕೂಸನ್ನೇ ಕೊಲ್ಲಲು ಯಾವ ತಾಯಿ ತಾನೇ ಒಪ್ಪುವಳು ಪ್ರಭು?”

“ಜಗತ್ತಿಗೆ ತಾಯಿಯಾಗುವ ಹೃದಯವೈಶಾಲ್ಯಕ್ಕಾಗಿ ತನ್ನದೆಲ್ಲವನ್ನೂ ಬಲಿ ಕೊಡುವವಳೇ ನಿಜವಾದ ತಾಯಿ, ಜುಡಾಸ್. ಇದು ಕೊಲೆಯಲ್ಲ, ಜುಡಾಸ್, ಜನ್ಮ!”

“ಜನ್ಮವೇ, ಪ್ರಭು?”

“ಹೌದು, ಜುಡಾಸ್. ಮಗು ತಾಯಿಯ ಬಸುರಿನಲ್ಲಿ ಒಂಬತ್ತು ತಿಂಗಳು ಕಳೆಯುತ್ತದೆ. ತಾಯಿಗೆ ಅದು ಕಟ್ಟಿಕೊಂಡಿರುತದೆ. ತಾಯಿಯ ದೇಹಕ್ಕೆ ಅದು ಅಂಟಿಕೊಂಡಿರುತ್ತದೆ. ತಾಯಿಗೆ ಅದನ್ನು ಬಿಡುವ ಮನಸ್ಸಿಲ್ಲ. ಆದರೆ ಕೂಸಿಗೂ ತನಗೂ ಇರುವ ಸಂಬಂಧವನ್ನು ತಾಯಿ ಕಡಿಯಬೇಕು. ಬಸುರಿನಲ್ಲಿ ಕಾಪಾಡಿದ ಜೀವವನ್ನು ಹೊರ ಜಗತ್ತಿಗೆ ಕೊಡಬೇಕು. ಈ ಕಾರ್‍ಯ ಬಹು ಕಠಿಣವಾದುದು. ತಾಯಿ ಅದಕ್ಕಾಗಿಯೇ ಕೂಸು ಹುಟ್ಟುವಾಗ ಅತಿ ನೋವಿನಿಂದ ನರಳುವುದು. ಆದರೆ ತನ್ನೊಳಗಿಂದ ಪ್ರಪಂಚಕ್ಕೆ ಕೊಟ್ಟ ಮೇಲೆ ತಾಯಿಯ ಆನಂದಕ್ಕೆ ಕೊನೆಯಲ್ಲಿ? ಆಕೆ ಆ ಕೂಸಿಗೊಂದಕ್ಕೆ ತಾಯಿಯಲ್ಲ. ಜಗತ್ತಿಗೇ ತಾಯಿ! ನೀನೂ ಅಂತಹ ತಾಯಿಯಾಗಲಾರೆಯಾ?”

“ಪ್ರಭು-”

“ಇನ್ನೂ ಅನುಮಾನವೇ, ಜುಡಾಸ್? ನಾನು ಜಗತ್ತಿಗೆ ಬಂದ ಕಾರ್‍ಯ ಪೂರ್ಣವಾಗಬಾರದೆಂದೇ ನಿನ್ನ ಅಭಿಪ್ರಾಯ? ಪೂರ್‍ಣವಾಗಲು ಇದೊಂದೇ ಮಾರ್ಗ. ಈಗ ನನ್ನ ಒಂದು ಹನಿ ರಕ್ತ ತೊಟ್ಟಿಕ್ಕಿದರೆ ಪ್ರಪಂಚದ ಒಂದೊಂದು ಜನಾಂಗದ ಜೀವವುಳಿಯುವುದು. ಇಲ್ಲದಿದ್ದರೆ ಮಾನವ ಮಾನವನಾಗುವುದನ್ನು ಮರೆತುಬಿಡುತ್ತಾನೆ. ಇನ್ನೂ ಮೃಗವಾಗಿಯೇ ಉಳಿಯುತ್ತಾನೆ. ಅದಕ್ಕಾಗಿ, ನನಗಾಗಿ ನನ್ನನ್ನು -”

“ಪ್ರಭು-ಆಗಲಿ, ಪ್ರಭು”

“ಜುಡಾಸ್, ನೀನಿಂದು ನಿಜವಾದ ತ್ಯಾಗಿ, ಯಾರೂ ಮಾಡದ ತ್ಯಾಗವನ್ನು ನೀನುಮಾಡಿರುವೆ. ಜಗತ್ತು ನಿನ್ನನ್ನು ದೂಷಿಸಲಿ. ಆದರೆ ನೀನು ಮಾತ್ರ ನಿಷ್ಕಳಂಕ. ನೀನು ನಿಜವಾದ ತಾಯಿ, ಸ್ವರ್ಗ ಸಾಮ್ರಾಜ್ಯದ ಜನ್ಮದ ಕೀರ್ತಿಯಿನ್ನೂ ನಿನ್ನದು, ನಿನ್ನ ಹೃದಯ ವೈಶಾಲ್ಯ ಜಗತ್ತಿಗೆ ಬರಲಿ. ನಿನ್ನ ಪ್ರೇಮ ಪ್ರಪಂಚದಲ್ಲಿ ಮೊಳೆಯಲಿ. ನಿನ್ನ ಹೃದಯದ ತಾಯ್ತನ ಎಲ್ಲೆಲ್ಲೂ ಮೂಡಲಿ. ನಿನ್ನ ತ್ಯಾಗ ಎಲ್ಲರ ರಕ್ತದಲ್ಲ ಬೆರೆಯಲಿ.”

ಯೇಸು ಜುಡಾಸನನ್ನಪ್ಪಿಕೊಂಡುಬಿಟ್ಟ. ತೊಡೆಯಮೇಲೆ ಮಲಗಿದ್ದ ಯೇಸುವಿನ ಕೈಗಳೆರಡೂ ಜುಡಾಸನ ಕೊರಳಸುತ್ತ ಸುತ್ತಿದವು. ಜುಡಾಸ್ ಕಂದಿದ ಮುಖದಿಂದ ಬಾಗಿ ಯೇಸುವಿನ ಹಣೆಯಮೇಲೆ ಮಮತೆಯಿಂದ, ವಾತ್ಸಲ್ಯದಿಂದ ಮುತ್ತಿಕ್ಕಿದ. ತಾಯಿಹಸು ಅದೇ ತಾನೆ ಈದ ಎಳಗರುವನ್ನು ನೆಕ್ಕುವಾಗಿನ ವಾತ್ಸಲ್ಯ, ನೋವು ಕೂಡಿದ ನಲುಮೆ ಆ ಮುತ್ತಿನಲ್ಲಿತ್ತು.

ಅದಾದಮೇಲಿನ ಎರಡು ದಿನವನ್ನು ಯೇಸು ಬಹಳ ಸಂತೋಷದಿಂದ ಕಳೆದ ಹಿಂದೆಂದೂ ಕಾಣದ ಆನಂದ, ಕಳೆ ಅವನ ಮುಖದಲ್ಲಿ ಮಿರುಗುತಿತ್ತು. ಅವನ ಸುತ್ತಲಿದ್ದ ಎಲ್ಲರಿಗೂ ಅದು ಹರಡಿಕೊಂಡಿತ್ತು, ಅವನ ಹತ್ತಿರ ಬಂದ ಯಾರಿಗೇ ಆಗಲಿ ಆ ನಗೆಯ ಸೆಳೆತ ತಡೆಯಲಾಗುತ್ತಿರಲಿಲ್ಲ. ಅಂದಿನವರೆಗೂ ಪೀಟರ್ ಮೊದಲಾದ ಶಿಷ್ಯರು ಯೇಸುವಿನಲ್ಲಿ ಈ ಆನಂದದ ಹಿಗ್ಗನ್ನು ಕಂಡಿರಲಿಲ್ಲ. ಈ ಆನಂದ ಏತಕ್ಕೆಂಬುದು ಅವರಿಗೆ ತಿಳಿದಿರಲಿಲ್ಲ. ಮೂರು ದಿನದ ಅನಂತರ ಏನೋ ಆಗಬೇಕು, ಸುಮಾರು ಆ ಪವಾಡಕ್ಕೆ ಮುನ್ನುಡಿಯಾಗಿ ಈ ಹಿಗ್ಗೆಂದು ಅವರೂ ಅದರಲ್ಲಿ ಸೇರಿಹೋದರು. ಆದರೆ ಜುಡಾಸನ ಮುಖದಲ್ಲಿ ಮಾತ್ರ ಎಂದಿಗಿಂತ ಹೆಚ್ಚು ಗಾಂಭೀರ್ಯ, ಗೂಢವಾದ ಯಾವುದೋ ಚಿಂತೆಯನ್ನಿಟ್ಟು ಕೊಂಡಂತೆ ಗಹನವಾಗಿತ್ತು ಮುಖ. ಕಣ್ಣುಗಳ ಆಳದಲ್ಲಿ ಯಾವುದೋ ದುಗುಡ ಮನೆ ಮಾಡಿಕೊಂಡಿತ್ತು. ಆದರೆ ಅಲ್ಲಿಂದಲೂ ಯಾವುದೋ ಅಪೂರ್ವ ತೇಜಸ್ಸು ಪದೇಪದೇ ಮಿಂಚುತ್ತಿತ್ತು. ಜುಡಾಸನ ಮನಸ್ಸಿಗಿನ್ನೂ ಶಾಂತಿಯಿರಲಿಲ್ಲ. ಒಪ್ಪುವಾಗಲೇನೋ ಒಪ್ಪಿದ. ಆದರೆ ಮನಸ್ಸಿನಲ್ಲಿ ಮಹಾಸಂಗ್ರಾಮ ಸಾಗುತ್ತಿತ್ತು. ಅಯ್ಯೋ! ಎಂತಹ ಕಾರ್ಯ! ಜಗತ್ತನ್ನು ಉಳಿಸಲು ಬಂದವನ ಅಳಿವಿಗೆ ನಾನು ಅಡಿಗಲ್ದಾಗ ಬೇಕೇ ಎಂದು ಮರುಗು ಅವನ ಅಳಿವಿನಿಂದಲೇ ಜಗತ್ತಿನ ಉಳಿವು. ಅದೂ ಅವನಾಗಿಯೇ ಹೇಳಿದುದು. ಅಂದಮೇಲೆ ತಾನೊಲ್ಲೆನೆನ್ನುವುದಾದರೂ ಹೇಗೆ? ಇಷ್ಟಾಗಿ ಯೇಸು ಅಷ್ಟೊಂದು ಕರುಣೆಯಿಂದ, ಅಷ್ಟೊಂದು ದೈನ್ಯದಿಂದ, ಕಣ್ಣೀರು ಕರೆದು ತನ್ನನ್ನು ಬೇಡಿಕೊಂಡಿದ್ದ. ಯೇಸುವಿನ ಮಾತಿಗೆ ಮರು ಮಾತಾಡಲಾಗದೆ ತಾನೊಪ್ಪಿದ ಮಾತು ಕೊಟ್ಟ. ಈಗ ಕೊಟ್ಟ ಮಾತನ್ನು ಮುರಿಯುವುದಾದರೂ ಹೇಗೆ? ಅದೂ ತನ್ನ ಪ್ರಭುವಿಗೆ ಕೊಟ್ಟ ಮಾತು. ಪ್ರಭುವಿಗೆ ತನ್ನನ್ನೇ ತಾನು ಅರ್ಪಿಸಿ ಕೊಂಡಾಗ ಪ್ರಭು ಹೇಳಿದುದನ್ನೆಲ್ಲ ಮಾಡಬೇಡವೇ? ಅಂತಹುದರಲ್ಲಿ ಪ್ರಭುವಿಗೆ ಒಪ್ಪಿಗೆ ಕೊಟ್ಟು ಅದನ್ನು ಮಾಡದಿದ್ದರೆ ಹೇಗೆ? ಆದರೆ ಈ ಬಗೆಯ ಸಮಾಧಾನವನ್ನೆಷ್ಟು ಹೇಳಿಕೊಂಡರೂ ಮನಸ್ಸು ಮಾತ್ರ ಒಂದೇ ಸಮನಾಗಿ ಮಿಡುಕುತ್ತಿತ್ತು. ಯಾರೂ ಮಾಡದ ಕೆಲಸ. ಇದು ನೀಚಕಾರ್ಯವೆಂದು ತನ್ನ ಮೇಲೆ ತನಗೇ ಕೋಪ ಬಂತು. ಆದರೆ ಅದು ಆರಲೇನೂ ಕಾಲವಿಲ್ಲ. ಪ್ರಭುವಿನ ಕಾರ್ಯ ಮಾಡುವುದು ನನ್ನ ಕೆಲಸ ಎಲ್ಲ ಕಾರ್ಯದ ಹೊಣೆಯೂ ಅವನ ಮೇಲೆಯೇ, ಪ್ರಭುವೇ ಹೇಳಲಿಲ್ಲವೇ? ನೂರು ಜನರ ಪಾಪವನ್ನು ತಾನೇ ಹೊತ್ತು ಪ್ರಪಂಚದ ಮುಂಬರುವ ಜನಾಂಗಗಳ ಪಾಪವನ್ನೆಲ್ಲಾ ತನ್ನ ರಕ್ತದಿಂದಲೇ ತೊಳೆಯುವೆನೆಂದು ಯೇಸು ಭರವಸೆ ನೀಡಲಿಲ್ಲವೇ?ಮಾಡುವವನು ನಾನು ನಿಮಿತ್ತ ಮಾತ್ರ. ಮಾಡಿಸುವವನು ಯೇಸು, ಎಂದು ಮನಸ್ಸಿಗೆ ಸಮಾಧಾನ ತಂದುಕೊಳ್ಳುತ್ತಿದ್ದ. ಆದರೂ ಈ ಸಮಾಧಾನದ ತಿಳಿ ನೀರಿನಲ್ಲಿ ಒಂದೊಂದು ಅಸಮಾಧಾನದ ಸುಳಿ ತೋರಿಕೊಂಡು ನೀರನ್ನು ಕದಡುತ್ತಿತ್ತು.

ಅದೇ ಕೊನೆಯ ಊಟ, ಯೇಸು ಇದುವರೆಗೂ ತಲೆಗೆ ಎಣ್ಣೆ ಸೋಕಿಸದವನು ಅಂದು ಆ ಮನೆಯ ಯಜಮಾನಿ ತಂದ ಎಣ್ಣೆಯನ್ನು ಸ್ವೀಕರಿಸಿದ. ತಲೆಗೆ ಎಣ್ಣೆ ಹಚ್ಚಿ ಅಂದು ಮೈಗೆಲ್ಲಾ ಮಂಗಳಸ್ನಾನ ಮಾಡಿಕೊಂಡ. ಹಿಂದೆಂದೂ ಕಾಣದಂತೆ ಅಂದು ಮದುವಣಿಗನಷ್ಟು ಆಸಕ್ತಿಯಿಂದ ತನ್ನ ಉಡುಪನ್ನು ನೋಡಿಕೊಂಡ. ಎಲ್ಲರೊಂದಿಗೂ ನಗುನಗುತ್ತಾ ಮಾತನಾಡಿದ. ಕೊನೆಯ ಊಟಕ್ಕೆ ಕುಳಿತಾಗ ಪೀಟರನನ್ನು ತನ್ನ ಪಕ್ಕದಲ್ಲಿ ಕೂರಿಸಿಕೊಂಡು ಅವನನ್ನು ಹಾಸ್ಯ ಮಾಡಿದ. ಎದುರಿಗಿದ್ದ ಜುಡಾಸನ ಮುಖದ ಕಡೆ ಒಮ್ಮೆ ಕೂಡ ತಿರುಗಿ ನೋಡಲಿಲ್ಲ. ಜುಡಾಸ್ ಮೌನವಾಗಿ ಆಳವಾದ ಯೋಚನೆಯಲ್ಲಿ ಮುಳುಗಿ ಮುಂದಿದ್ದ ಊಟವನ್ನು ಮರೆತು ಕುಳಿತಿದ್ದ. ಅವನ ಮನಸ್ಸಿನ ಕೋಲಾಹಲ ಯೇಸುವಿಗೆ ಚೆನ್ನಾಗಿ ಗೊತ್ತು. ಆ ಅಶಾಂತಿ ಬೇಗನೆ ಇಳಿ ಯುವುದೆಂದೂ ಯೇಸುವಿಗೆ ಗೊತ್ತು. ಅದು ತಾನಾಗಿಯೇ ತಗ್ಗ ಬೇಕೆಂದೂ ಗೊತ್ತು. ಅದರಿಂದಲೇ ಜುಡಾಸನ ಕಡೆಗೊಮ್ಮೆಯೂ ತಿರುಗಿ ಕೂಡ ನೋಡಲಿಲ್ಲ. ಆದರೆ ಹೆಚ್ಚು ಮಾತೆಲ್ಲ ಪೀಟರನೊಂದಿಗೇ!

“ಪೀಟರ್”
“ಪ್ರಭು”

“ನನ್ನ ಕಾಲ ಮುಗಿಯಿತು. ಇನ್ನು ನಿನ್ನ ಕಾಲ ಆರಂಭ. ಪ್ರೇಮದ ಮತವನ್ನು ನೀನು ಎಲ್ಲೆಲ್ಲೂ ಪ್ರಸಾರ ಮಾಡಬೇಕು. ನನ್ನ ತಂದೆಯಿಂದ ನಾನು ಬಂದು ಇಲ್ಲಿ ಇದ್ದುದಾಯಿತು, ಇನ್ನು ಮತ್ತೆ ನಾನು ನನ್ನ ತಂದೆಯ ಬಳಿಗೆ ಹಿಂದಿರುಗಬೇಕು. ನಾನು ನಡೆಸಿದ ಕಾರ್ಯವನ್ನು ನೀವು ನಡೆಸಬೇಕು. ನನ್ನಲ್ಲಿ ನೀವು ಪ್ರೇಮ ತೋರಿದಿರಿ. ಅದಕ್ಕಾಗಿ ದೇವದೇವನಿಗೆ ನಿಮ್ಮಲ್ಲಿ ಪ್ರೇಮವಿದೆ. ನನ್ನಲ್ಲಿ ನೀವು ನಂಬಿಕೆಯಿಟ್ಟಿರಿ. ಅದಕ್ಕಾಗಿ ನೀವೇನು ಬೇಡಿದರೂ ಅದು ಸಿದ್ದಿಯಾಗುತ್ತದೆ. ಆದರೆ ನನ್ನಲ್ಲಿ ಮಾತ್ರ ನಂಬಿಕೆ ಬಿಡಬೇಡಿ.”

“ಖಂಡಿತವಾಗಿಯೂ ಇಲ್ಲ ಪ್ರಭು, ನಿಮ್ಮಲ್ಲಿ ನನಗೆ ಅಚಲ ನಂಬಿಕೆಯಿದೆ. ಎಂದೆಂದಿಗೂ ನಿಮ್ಮಲ್ಲಿ ನನ್ನ ನಂಬಿಕೆ ಹೋಗದು.”

ಯೇಸು ಈ ಮಾತು ಕೇಳಿ ನಸುನಕ್ಕ.

“ಪೀಟರ್, ಕೋಳಿ ಕೂಗುವುದರಲ್ಲಿ ಮೂರು ಬಾರಿ ನನ್ನಲ್ಲಿ ನಂಬಿಕೆ ಕಳೆದುಕೊಳ್ಳುವೆ. ಆದರೂ ನನ್ನ ತತ್ವಪ್ರಚಾರ ನಿನ್ನಿಂದ ಆಗಬೇಕು.”

ಪೀಟರ್ ಹೆಚ್ಚು ಮಾತಾಡಲಿಲ್ಲ. ಮತ್ತಾರಿಗೂ ಮಾತಾಡುವ ಧೈರ್ಯ ಬರಲಿಲ್ಲ. ಪೀಟರನಂತಹ ಶ್ರೇಷ್ಠ ವ್ಯಕ್ತಿಯೇ ನಂಬಿಕೆ ಕಳೆದು ಕೊಳ್ಳುವನೆಂದರೆ ತನ್ನ ಪಾಡೇನೋ ಎಂದು ಅವರಿಗೆ ಹೆದರಿಕೆಯಾಯಿತು. ಅವರೆಲ್ಲರ ಹೃದಯಗಳಲ್ಲೂ ಹೆದರಿಕೆ ಹೆಜ್ಜೆಯಿಟ್ಟಿತು. ಜುಡಾಸ್ ಮಾತ್ರ ತನ್ನ ಚಿಂತೆಯ ಜೇಡನ ಬಲೆಯಲ್ಲಿ ಸಿಕ್ಕಿಕೊಂಡು ತಪ್ಪಿಸಿಕೊಳ್ಳಲಾರದೆ ಒದ್ದಾಡುತ್ತಿದ್ದ.

ಊಟ ಮುಗಿದ ಮೇಲೆ ಯೇಸು ನೇರವಾಗಿ ಮನೆಯ ಬಾಗಿಲಿ ನಿಂದ ಹೊರಗೆ ನಡೆದ. ಬೀದಿಯ ಕಡೆಗೇ ದಿಟ್ಟಿಸುತ್ತಾ ನಿಂತ ಜುಡಾಸನ ಬಳಿಗೆ ಬಂದ. ಬೆನ್ನ ಮೇಲೆ ಮೆಲ್ಲನೆ ಕೈಯಾಡಿಸಿದ.

“ಜುಡಾಸ್”

“ಪ್ರಭು”

ಜುಡಾಸ್ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದ ಯೇಸು ಅವನನ್ನು ತನ್ನೆದೆಗಾನಿಸಿಕೊಂಡ. ಮೆಲ್ಲನೆ ಅವನ ತಲೆ ನೇವರಿಸುತ್ತಾ ಸಮಾಧಾನ ನೀಡಿದ. ಒಂದೆರಡು ನಿಮಿಷದ ನಂತರ ಜುಡಾಸನ ಮನಸ್ಸು ಕೊಂಚ
ಸಮಾಧಾನಗೊಂಡಿತು.

“ಪ್ರಭು, ನೀವು ಬಿಟ್ಟು ಹೋದ ಮೇಲೆ ನಾನಿಲ್ಲಿರಲಾರೆ ಪ್ರಭು. ನಿಮ್ಮೊಂದಿಗೇ ನಾನೂ ಬರುತ್ತೇನೆ”

“ಜುಡಾಸ್, ಅದು ಹೇಗೆ ಸಾಧ್ಯ. ನೀನೇ ಯೋಚಿಸು. ಈಗ ನಾನಲ್ಲದೆ ಮತ್ತಾರೂ ಪೈಲೆಟನ ಕೈಗೆ ಸಿಕ್ಕಿಕೊಳ್ಳಲಾಗದು. ನೀನೂ ನನ್ನೊಂದಿಗೆ ಸೇರಿಕೊಳ್ಳುವೆ, ಯೋಚಿಸಬೇಡ”

“ಪ್ರಭು, ನೀವಿಲ್ಲದ ಮೇಲೆ ನನಗೆ ಒಂದು ನಿಮಿಷಕೂಡ ಇರಲು ಆಗದು, ಪ್ರಭು, ಇದೊಂದು ಕರುಣೆ ತೋರಬೇಕು.”

“ಹುಂ ಆಗಲಿ, ಹೋಗಿ ಪೈಲೆಟನ ಸೈನಿಕರನ್ನು ಕರೆದುತಾ ಹೋಗು, ಇದೇ ನಮ್ಮಿಬ್ಬರ ಕೊನೆಯ ಊಟ ಮುಗಿಯಿತು. ಈಗ ಕೊನೆಯ ಸಂವಾದ. ಕೊನೆಯ ಪ್ರೇಮಲ ಆಲಿಂಗನ. ಎಲ್ಲಿ-ಇದೋ ನನ್ನ ಕ್ಷೇಮದ ಕುರುಹು”

ಯೇಸು ಜುಡಾಸನ ಎರಡು ಕೆನ್ನೆಗಳ ಮೇಲೂ ಮುತ್ತಿಟ್ಟ. ಜುಡಾಸ್ ಮೆಲ್ಲನೆ ಯೇಸುವಿನ ಹಣೆಯ ಮೇಲೆ ಮುತ್ತಿಟ್ಟು ಅಲ್ಲಿಂದ ಹೊರಟು ಕತ್ತಲಿನಲ್ಲಿ ಮಾಯವಾದ.

ಯೇಸು ಮನೆಯೊಳಕ್ಕೆ ಬಂದು ಪೀಟರನೊಂದಿಗೆ ಮಾತನಾಡುತ್ತಿದ್ದಂತೆಯೇ ಪೀಟರನಿಗೆ ತನ್ನೆಲ್ಲ ಶಕ್ತಿಯನ್ನು ಧಾರೆಯೆರೆದುಕೊಟ್ಟ. ದೇವದೇವನ ದಯದಿಂದ, ತನ್ನಲ್ಲಿ ಅವನಿಗಿರುವ ನಂಬಿಕೆಯಿಂದ ಅವನಿಂದಾಗದ ಕೆಲಸವಾವುದೂ ಇಲ್ಲವೆಂದು ಪೀಟರನಿಗೆ ಹೇಳಿದ. ಸ್ವರ್ಗದ ಬೀಗದ ಕೈ ನಿನ್ನ ಕೈಯಲ್ಲಿದೆಯೆಂದೂ ಹೇಳಿದ. ಇದರಿಂದ ಪೀಟರನ ಹೃದಯ ಹಿಗ್ಗಿನಲ್ಲಿ ಅರಳಿತು. ಯೇಸುವಿಗೆ ನಮ್ರತೆಯಿಂದ ಬಾಗಿದ, ಯೇಸು ಉಳಿದ ಶಿಷ್ಯರನ್ನು ಉದ್ದೇಶಿಸಿ ಅವರವರ ಕೆಲಸ ತಿಳಿಸಿದ. ಒಬ್ಬೊಬ್ಬನಿಗಾಗಿ ಹೇಳಿ ಮುಗಿಸಿದ ಮೇಲೆ ಪೀಟರನಿಗೆ ಇದ್ದಕ್ಕಿದ್ದಂತೆ ನೆನಪಾಯಿತು. ಊಟವಾದಷ್ಟು ಹೊತ್ತಿನಿಂದ ಜುಡಾಸ್ ಎಲ್ಲಿಯೋ ಕಾಣಲಿಲ್ಲ. ಪಕ್ಕದಲ್ಲಿದ್ದ ಥಾಮಸನನ್ನು ಕೇಳಿದ. ಅವನೂ ತಿಳಿಯದೆಂದ, ಪೀಟರನಿಗೇಕೋ ಕೊಂಚ ಅನುಮಾನವಾಯಿತು. ಕಳವಳವೂ ಆಯಿತು. ಜುಡಾಸ್ ಎಲ್ಲೋ ದ್ರೊಹಿಯಾಗಿರಬೇಕು. ಯೇಸುವನ್ನು ಪೈಲೆಟ್ ರಾಜನಿಗೆ ಬಿಟ್ಟುಕೊಟ್ಟಿರ ಬೇಕೆಂದು ಹೆದರಿಕೆಯಾಯಿತು. ನೋಡೋಣವೆಂದು ಬಾಗಿಲಕಡೆ ಹೊರಡುವ ವೇಳೆಗೆ ಜುಡಾಸ್ ಒಳಗೆಬಂದ ಯೇಸು ಅವನು ಬಂದೊಡನೆಯೇ ಅವನ ಕಡೆ ತಿರುಗಿದ, ಆನಂದದ ಎಳೆನಗು ನಕ್ಕು ಅವರನ್ನು ಕರೆದ. ಆಗಲೇ ನಡೆದ ಸಂಕೇತದಂತೆ ಜುಡಾಸ್ ಬಂದು ಯೇಸುವಿನ ಹಣೆಗೆ ಮುತ್ತಿಟ್ಟ, ಪೈಲೆಟನ ಅಧಿಕಾರಿಗಳು, ಸೈನಿಕರು ಬಂದು ಯೇಸುವನ್ನು ಬಂಧಿಸಿದರು.

ಪೀಟರ್ ಹೆದರಿಕೆಯಿಂದ ಯೇಸುವನ್ನು ಬಿಟ್ಟು ಬಾಗಿಲಿಗೆ ಓಡಿದ. ಅಲ್ಲಿದ್ದವರಲ್ಲೊಬ್ಬ ಅವನನ್ನು ಕೇಳಿದ-“ನೀನೂ ಈ ಯೇಸುವಿನ ಶಿಷ್ಯನಲ್ಲವೇ?” ಎಂದು.

ಪೀಟರ್ ಹಿಂದು ಮುಂದು ನೋಡದೆ “ಅವನಾರೋ ನನಗೆ ತಿಳಿಯದು” ಎಂದು
ಎರಡನೆಯ ಬಾರಿ ಅಲ್ಲಿದ್ದ ಹೆಂಗಸೊಬ್ಬಳು “ನೀನು ಯೇಸುವಿನ ಶಿಷ್ಯ” ಎಂದಳು.

“ಪೀಟರ್ ಗಾಬರಿಯಿಂದ” ಇಲ್ಲ, ಇಲ್ಲ, ನಾನು ಅವನನ್ನು ಕಂಡೇ ಇಲ್ಲ” ಎಂದ.

ಮೂರನೆಯ ಬಾರಿ ಪೈಲೆಟನ ಅಧಿಕಾರಿ “ನೀನೂ ಈ ಯೇಸುವಿನ ಶಿಷ್ಯನೋ?” ಎಂದುಗುಡುಗಿದ.

“ಇಲ್ಲ, ಇಲ್ಲ, ನನಗೂ ಅವನಿಗೂ ಪರಿಚಯವೇ ಇಲ್ಲ” ಎಂದು ಪೀಟರ್ ನಡುಗುತ್ತ ಹೇಳಿದ.

ಯೇಸು ಸೈನಿಕರ ಮಧ್ಯೆ ಸೆರೆಯಾಳಾಗಿದ್ದವನು ಇದನ್ನು ನೋಡಿ ನಸುನಕ್ಕ, ಬಾಗಿಲಿನ ಹಿಂದೆ ಮುಖ ಮುಚ್ಚಿಕೊಂಡು ಜುಡಾಸ್ ಅಳುತ್ತಿದ್ದ.
ಯೇಸು ಶಿಲುಬೆಗೇರಿದಾಗ ಜುಡಾಸ್ ಅಲ್ಲಿರಲಿಲ್ಲ. ಯೇಸು ತನ್ನ ತೊಡೆಯ ಮೇಲೆ ತಲೆಯಿಟ್ಟು ಮಲಗಿ, ತನ್ನ ತ್ಯಾಗ ಬೇಡಿದ ಜಾಗಕ್ಕೆ ಬಂದಿದ್ದ. ತ್ಯಾಗಮಾಡಿಯಾದ ಮೇಲೆ ಅವನಿಗೆ ಅಲ್ಲಿರಲು ಸಾಗದಾಯಿತು. ಅಲ್ಲಿಂದ ತಪ್ಪಿಸಿಕೊಳ್ಳಬೇಕೆಂದು ಓಡಿದ, ಹುಚ್ಚು ಹುಚ್ಚಾಗಿ ನಡೆದ. ಕಾಲೊಯ್ದ ಕಡೆ ಸಾಗಿದ. ಕೊನೆಗೆ ಸುಸ್ತಾಗಿ ಅಲ್ಲಿಗೆ ಬಂದು ಆ ನದಿಯ ತೀರದಲ್ಲಿ ಬಿದ್ದಿದ್ದ. ತಲೆ ಗಿರನೆ ಸುತ್ತುತ್ತಿತ್ತು, ಅಯ್ಯೋ! ಏನೋ ಮಾಡಿಬಿಟ್ಟೆ ಆಗಿಹೋಯಿತು! ಎಂದು ಹೃದಯ ಹೊಡೆದು ಕೊಳ್ಳುತ್ತಿತ್ತು. ಎಷ್ಟೇ ಯತ್ನಿಸಿದರೂ ಮನಸ್ಸಿನ ಯೋಚನೆಗಳೊಂದೂ ಸ್ಪಷ್ಟವಾಗದು. ಏನೋ ದುಃಖ, ತಾಳಲಾರದ ನೋವು, ಅಪಾರವೇದನೆ ಉಕ್ಕಿ ಉಕ್ಕಿ ಉಮ್ಮಳಿಸಿ ಬರುತ್ತಿತ್ತು. ಇನ್ನೇನು ಯೇಸುವಿನ ಗತಿ ಆಗಿ ಹೋಯಿತು. ಅದೂ ನನ್ನಿಂದ ಎಂದು ಹೃದಯ ಸಿಡಿಯುತ್ತಿತ್ತು. ಕಣ್ಣಿನ ಮುಂದೆ ಇದ್ದಕ್ಕಿದ್ದಂತೆ ಯೇಸುವಿನ ಮೂರ್ತಿ ಬಂದು ನಿಂತಿತು. “ನಾನು ನೀನು ಒಂದೇ ಅಲ್ಲವೇ ಜುಡಾಸ್? ನೀನೂ ನನ್ನಲ್ಲಿ ಸೇರಿ ಹೋಗುವೆ” ಎಂದಿತು ಮೂರ್ತಿ, ನಸುನಗೆಯಮೂರ್ತಿ ಮಾಯವಾಯಿತು. ಮತ್ತೊಂದು ಮೂರ್ತಿಶಿಲುಬೆಯ ಮೇಲೇರಿಸಿದ ಮಾನವ ಯೇಸು ಮುಳ್ಳಿನ ಕಿರೀಟಹೊತ್ತವನು ಶಿಲುಬೆಯಮೇಲೆ ಯೆಹೂದಿಗಳ ರಾಜನೆಂದು ಬರೆದಿದೆ-ಅವನನ್ನು ಹಾಸ್ಯಮಾಡಲು! ಜನ ಅವನಮೇಲೆ ಉಗಿಯುತ್ತಿದಾರೆ. ಕಲ್ಲನ್ನೆಸೆಯುತ್ತಿದ್ದಾರೆ. ರಕ್ತ ಒಂದೇ ಸಮನಾಗಿ ತೊಟ್ಟಿಕ್ಕುತ್ತಿದೆ. ಆದರೆ ಮುಖದಲ್ಲಿ ಮಾತ್ರ ಅನಂತ ಶಾಂತಿಯಿದೆ.

“ಪ್ರಭು” ಎನ್ನುತ್ತಾ ಜುಡಾಸ್ ಮುನ್ನುಗ್ಗಿದ.
ನದಿಯ ಪ್ರವಾಹ ತನ್ನ ಆಲಿಂಗನದಲ್ಲಿ ಜುಡಾಸನನ್ನು ಸೇರಿಸಿಕೊಂಡಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮರೀಚಿಕೆ
Next post ಚತುಷ್ಪಥ ರಸ್ತೆಗಳು

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…