ಎರಡು ರೆಕ್ಕೆಗಳು

ಎರಡು ರೆಕ್ಕೆಗಳು

ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ ಕೋಟೆಯ ಬಂಡೆಯ ಮೇಲೆ ಕುಳಿತ ಸರ್ವದಾ ನೆತ್ತಿ ಮೈಮನ ಸವರಿದ ಗಾಳಿಯಿಂದ ಪುಲಕಿತಗೊಂಡಳು. ಮುಳುಗುವ ಸೂರ್ಯ ಅವಳೆದೆಯಲ್ಲಿ ಒಂದು ಹಗುರಾದ ಭಾವ ತುಂಬಿದ್ದ ಕೋಟೆಯ ಕೆಂಪು ಬಂಡೆಗಳು ಆ ತಿಳಿ ಬಿಸಿಲಿಗೆ ಮತ್ತಷ್ಟು ರಂಗು ಬಳಿದುಕೊಂಡು ಅಪಾರ ಹೊಂಬಣ್ಣವನ್ನು ಪ್ರತಿಫಲಿಸಿತ್ತು. ಸರ್ವದಾ ಒಳಗೊಳಗೆ ಆ ಸಂಜೆಯ ಹಿತ ತಂಪಾಗಿ ಹರಿದುದಕ್ಕೆ ಖುಷಿಯ ಮೂಡಿನಲ್ಲಿದ್ದಳು. ಆ ಪೇಪರ ಮಾರುವ ಹುಡುಗ ಅವಳೊಟ್ಟಿಗೆ ಇದ್ದ. ಈ ದಿನ ಯಾಕೋ ಅವ ಹೇಳಲಿಲ್ಲ. ಅವನು ಹಾಗೆ ಇದ್ದಾಗಲೊಮ್ಮೆ ಅವಳು ಸುಮ್ಮನೆ ಇದ್ದು ಬಿಡುತ್ತಿದ್ದಳು. ಆ ಸಂಜೆಯ ಮೌನ ಅವಳಲ್ಲಿ ಅವನಲ್ಲಿ ಒಳಗೊಳಗೇ ಪ್ರಶ್ನೆಗಳನ್ನು ಹುಟ್ಟು ಹಾಕಿದ್ದವು.

ಆ ಇತಿಹಾಸ ಪ್ರಸಿದ್ಧ ಊರಿನ ಕೋಟೆ ಕೊತ್ತಲಗಳು ಸರ್ವದಾಳಿಗೆ ಯಾವಾಗಲು ತುಂಬ ಅಕರ್ಷಕ, ಮನಸ್ಸು ತುಂಬಾ ಗೊಂದಲಕ್ಕೆ ಒಳಗಾದಾಗ ಅವಳು ಮೆಲ್ಲನೆ ಭಾವನ ಬಂಡೆಯ ಕೋಟೆಯನ್ನು ಏರುತ್ತಾಳೆ. ಕೋಟೆಯ ಕಪ್ಪು ಬಿಳುಪಿನ ಏಕಾಂತದೊಳಗೆ ಅವಳು ಕೋಟೆಯ ಮೌನದಲ್ಲಿ ಸಮೀಕರಿಸಿಕೊಳ್ಳುತ್ತಾಳೆ. ಅವಳು ಬಂಡೆಯ ಮೇಲೆ ಮೂಡಿದ ತನ್ನ ಹೆಜ್ಜೆಗಳ ಗುರುತುಗಳನ್ನು ಹುಡುಕುತ್ತಿರುತ್ತಾಳೆ. ಈ ಕೋಟೆ ಮತ್ತು ಬಂಡೆಗಳ ಮಧ್ಯದ ಅಲೆದಾಟವನ್ನು ಅವಳು ಸಾಕಷ್ಟು ಬಾರಿ ಮಾಡಿದ್ದಾಳೆ. ಬದುಕಿನ ಸುಂದರತೆಯೂ, ಮೌನದ ಶಾಂತಿಯೂ, ಕರಾಳತೆಯೂ ಅವಳನ್ನು ಕಾಡಿದೆ. ಮತ್ತೆ ಮತ್ತೆ ಏಕಾಂತದ ಆ ಸಂಜೆಯ ವಿಸ್ಮಯ ಫಲುಕುಗಳಿಗೆ ಅವಳು ತನ್ನನ್ನು ಒಡ್ಡಿಕೊಳ್ಳುತ್ತಾಳೆ. ಜನ ತಮಗೆ ತಿಳಿದಂತೆ ಮಾತನಾಡುತ್ತಾರೆ. ಅವಳು ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಗಳನ್ನೇ ಕೊಡುವುದಿಲ್ಲ. ತನ್ನ ಬದುಕಿನ ಒಳನೋಟಗಳನ್ನು ಅನುಭವಿಸುವುದು ಅವಳು ತನ್ನ ಹಕ್ಕು ಎಂದುಕೊಂಡಿದ್ದಾಳೆ. ಒಟ್ಟಾರೆ ಆ ಜಾಗ ಅವಳಿಗೆ ವಿಶಿಷ್ಟವಾದುದನ್ನು ಕೊಡುತ್ತದೆ ಎಂಬುದು ಅವಳ ಭಾವನೆ. ಅವಳು ಕೋಟೆಯನ್ನು ಏರುವ ಹೊತ್ತಿಗೆ ಅವಳೊಟ್ಟಿಗೆ ತಪ್ಪದೇ ಆ ಪೇಪರ್ ಮಾರುವ ಹುಡುಗ ಇರುತ್ತಾನೆ. ಆ ಹುಡುಗ ಮಾತನಾಡುತ್ತಿದ್ದ. ಮನೆಯಲ್ಲಿ ಎಲ್ಲರೂ ಹಸಿವಿನಿಂದ ಕುಳಿತ ಬಗ್ಗೆ ಓದದ ತಮ್ಮಂದಿರ ಬಗ್ಗೆ ತನ್ನ ಅರೆಬರೆ ವಿದ್ಯಾಭ್ಯಾಸದ ಬಗ್ಗೆ ಮತ್ತೆ ಪೇಪರ ತುಂಡು ಮಾರಿ ತನ್ನ ಬದುಕನ್ನು ಸಾಗಿಸುವ ಕಷ್ಟದ ಬಗ್ಗೆ ಅವಳು ಸುಮ್ಮನೆ ಹೂಂಗುಡುತ್ತಲಿದ್ದಳು. ಅವನ ಸಮಸ್ಯೆಗಳನ್ನು ತನ್ನಿಂದ ಬಗೆಹರಿಸದ ಬಗ್ಗೆ ವ್ಯಥೆ ಪಡುತ್ತಿದ್ದಳು. ಐವತ್ತಾರರ ಅಂಚಿಗೆ ನಿಂತ ಅವಳಿಗೆ ದುಡಿಯುವ ದಾರಿ ಬಂದಾಗಿತ್ತು. ಬರೀ ಜಡ್ಡು ತಾಪತ್ರಯಗಳಲ್ಲಿ ದುಡಿದುದ್ದು ಎಲ್ಲಾ ಸೋರಿಹೋಗಿತ್ತು. ಅವಳು ತನ್ನ ಹೊಟ್ಟೆ ಬಟ್ಟೆಗೋಸ್ಕರ ದುಡಿದು ತರುವ ತಂಗಿಯ ಮೇಲೆ ಅವಲಂಬಿತಳಾಗಿದ್ದಳು, ಕೋಟೆ ಏರಿದಾಗಲೊಮ್ಮೆ ಅವಳು ಅಂದುಕೊಳ್ಳುತ್ತಿದ್ದಳು. ಈ ಜಗತ್ತಿನಲ್ಲಿ ಒಬ್ಬರ ಕಷ್ಟಗಳನ್ನು ನಾವು ನೀಗಿಸುವಂತಿದ್ದರೆ ಎಷ್ಟೊಂದು ಹಿತವಲ್ಲ! ಅವಳಿಗೆ ಬದುಕು ತುಂಬ ಗೋಜಲು ಗೋಜಲು ಆಗಿತ್ತು. ಮೇಲಾಗಿ ತುಂಬ ಹಚ್ಚಿಕೊಂಡ ಆ ಹುಡುಗ ಅವಳೆದುರು ತನ್ನ ಗೋಳನ್ನು ಹೇಳಿಕೊಂಡಾಗ ಅವಳು ತನ್ನ ಅಸಾಯಕತೆಗೆ ತಾನೇ ಮರುಗುತ್ತಿದ್ದಳು.

ಭಾವನ ಬಂಡೆ ಕೋಟೆ ತುಂಬ ವಿಶಾಲವಾಗಿತ್ತು. ಕೋಟೆಯನ್ನು ಏರಲು ನೂರಾರು ಮೆಟ್ಟಿಲುಗಳನ್ನು ಏರಬೇಕಿತ್ತು. ಏರುವ ಸಂಜೆಯ ಏಕಾಂತದಲ್ಲಿ ಅವರಿಬ್ಬರ ಬದುಕಿನ ಪದರಗಳು ಬಿಚ್ಚಿಕೊಳ್ಳುತ್ತಿದ್ದವು. ಕೋಟೆಯ ಮಧ್ಯೆ ಇರುವ ಪೊಳ್ಳು ಭಾಗದಿಂದ ಆಕಾಶ ಕಳಚಿ ಅಂಟಿಕೊಂಡಂತೆ ಕಾಣುತ್ತಿತ್ತು. ಆಗಾಗ ಹಕ್ಕಿಗಳು ಗಿಳಿಗಳು ನೆತ್ತಿಯ ಮೇಲೆ ಹಾರಿ ಹೋಗುತ್ತಿದ್ದವು. ದೊಡ್ಡ ದೊಡ್ಡ ಬಂಡೆಯ ಮಧ್ಯೆ ಅಲ್ಲಲ್ಲಿ ಜೀವ ಹಿಡಿದ ಬಿಳಲು ಮರಗಳು ಜೋಕಾಲಿಯಂತೆ ಓಲಾಡುತ್ತಿದ್ದವು. ರಾಜರ ಕುದುರೆಗಳ ಗೊರಸುಗಳು ಕಲ್ಲಿನ ಮೇಲೆ ಮೂಡಿದ್ದು ಏರುವ ದಾರಿಯ ಮಧ್ಯೆ ಮಧ್ಯೆ ಬಂಡೆಗಳ ಸಂದಿಯಲ್ಲಿ ಗಣಪ ಹನುಮಂತನ ವಿಗ್ರಹಗಳು ಸ್ಥಪಿತವಾಗಿದ್ದವು. ಭಕ್ತಿಯ ಮೂಲದವರು ಹಚ್ಚಿದ್ದ ವಿಭೂತಿ ಕುಂಕುಮ ತಮ್ಮ ಮೂಲ ಬಣ್ಣಗಳನ್ನು ಕಳೆದುಕೊಂಡು ಮಂಕಾಗಿ ಗೋಚರಿಸುತ್ತಿದ್ದವು. ಅಪಾರ ಸಾಧನೆ ಮಾಡಿದ ರಾಜವಂಶದವರು ಕಷ್ಟಕೋಟಲೆಗಳನ್ನು ಎದುರಿಸಿ ಇಂತಹ ಬೃಹತ್ ಕೋಟೆಯನ್ನು ಕಟ್ಟಿದ್ದು ಅವಳಿಗೆ ಪ್ರತಿ ಸಲವು ಅಚ್ಚರಿಯನ್ನು ಹುಟ್ಟು ಹಾಕುತ್ತಿತ್ತು. ಇಂತಹ ಆಯಕಟ್ಟಿನಲೋಕ ಜಾಗ ಅವಳೊಳಗೆ ವಿಸ್ಮಯಗಳ ಸಾಗರವನ್ನೇ ಹುಟ್ಟು ಹಾಕಿತ್ತು. ಸರ್ವದ ಮೆಲ್ಲಗೆ ಒಳಗೊಳಗೆ ವಿಶ್ವಕೋಶದಂತಾದಳು. ಅಂವ ಹಿಂಬಾಲಿಸುತ್ತಿದ್ದ. ಕಳೆದ ಎರಡು ಮೂರು ವರ್ಷಗಳಿಂದ ಅವಳು ಸರ್ವದಾ ಆ ಹುಡುಗನೊಂದಿಗೆ ಪ್ರತಿ ಭಾನುವಾರ ಆ ಕೋಟೆಯನ್ನು ಏರುತ್ತಿದ್ದಳು. ಸಂಜೆಯ ತಂಗಾಳಿ ಮುಖ ಸವರಿದಾಗ ಅವಳಿಗೆ ಅಲೌಕಿಕ ಸಂತೋಷ ಉಂಟಾಗುತ್ತಿತ್ತು. ಕೋಟೆಯ ಮೇಲಿರುವ ಸಯ್ಯದಬಾದಷ ಗುಡ್ಡದಲ್ಲಿ ಶಿವಪ್ಪಯ್ಯ ಶರಣ ಮತ್ತು ಬಾದಷಹನ ಗದ್ದಗೆಗಳು ಒಟ್ಟೋಟ್ಟಿಗೆ ಇದ್ದವು. ಅಪೂರ್ವ ಗೆಳೆಯರ ಗದ್ದುಗೆರೆ ಊರ ಜನರು ಪ್ರತಿ ಗುರುವಾರ ನಂಬಿಕೆಯಿಂದ ನಡೆದುಕೊಳ್ಳುತ್ತಿದ್ದರು. ವರ್ಷಕ್ಕೊಮ್ಮೆ ಹಿಂದು ಮುಸ್ಲಿಂ ಬಾಂಧವರು ಒಟ್ಟುಗೂಡಿ ಊರುಸ್ ಆಚರಣೆ ಮಾಡುತ್ತಿದ್ದರು. ಆ ಪೇಪರ ಮಾರುವ ಹುಡುಗನೊಂದಿಗೆ ಅವಳು ಅ ಸ್ಥಳಕ್ಕೆ ಬಂದಾಗ ತನ್ನ ಮತ್ತು ಹುಡುಗನ ಬಾಂಧವ್ಯ ಅಪೂರ್ವವಾದುದ್ದು ಅನಿಸುತ್ತಿತ್ತು. ಏಕೆಂದರೆ ಆತ ಹುಡುಗನಾಗಿದ್ದ ಅವಳಿಗೆ ಹೃದಯ ತುಂಬ ಹತ್ತಿರದವನಾಗಿದ್ದ.

ಹೆಚ್ಚು ಶಾಲೆ ಕಲಿಯದ ಈ ಹುಡುಗ ಓದಿದ ತರ್ಕಕ್ಕೆ ಅಭಿರುಚಿಗೆ ಅವಳು ಮಾರು ಹೋಗಿದ್ದಳು. ಅವರಿಬ್ಬರೂ ಒಟ್ಟಾಗಿ ಸಯ್ಯದಬಾದಶ ಗುಡ್ಡಕ್ಕೆ ಹೋಗುವುದನ್ನು ಜನ ರಾಜಕೀಯ ಬಣ್ಣ ಹಚ್ಚಿ ಮಾತನಾಡುತ್ತಿದ್ದರು. ಅವಳಿಗೆ ಅವನ ವಿಷಯ ಸಂಗ್ರಹಣೆ, ಓದು, ಸಮಯಕ್ಕೆ ಸಂದರ್ಭಕ್ಕೆ ಸರಿಯಾದ ಮಾತು, ಅವನ ಹಾಸ್ಯ ಮತ್ತು ತರ್ಕ ಖುಷಿಯನ್ನು ಕೊಡುತ್ತಿದ್ದವು. ಅವಳು ಅವನೊಂದಿಗೆ ಪುಸ್ತಕಗಳನ್ನು ಹಂಚಿಕೊಳ್ಳುತ್ತಿದ್ದಳು. ಅವಳೊಟ್ಟಿಗೆ ಬಾವನ ಬಂಡೆ ಕೋಟೆ ಏರುವಾಗ ಅವನು ಶಾಂತನಾಗಿರುತ್ತಿದ್ದ. ಸರ್ವದಾ ತುಸು ಹೆಚ್ಚು ಎಂಬಂತೆ ಅವನನ್ನು ಹಚ್ಚಿಕೊಂಡಳು. ಇದರಿಂದ ಇತರ ಗೆಳೆಯ ಗೆಳತಿಯರಿಗೆ ಹೊಟ್ಟೆಕಿಚ್ಚು ಆಗುತ್ತಿತ್ತು. ಅವಳ ಮುಂದೆ ಅಂವ ಸರಿ‌ಇಲ್ಲ ಅಂತ ಚಾಡಿ ಹೇಳುತ್ತಿದ್ದರು. ಗುಡ್ಡದ ಮೇಲೆ ಏಕಾಂತದ ಸಂಜೆಯಲಿ ಅವನ ಮಾತುಗಳು ಸರ್ವದಾಳಿಗೆ ಆಲಾಪದಂತೆ ಕೇಳಿಸುತ್ತಿದ್ದವು.

ಯಾವ ಕಾರಣವಿಲ್ಲದೇ ಅವರು ಗುಡ್ಡ ಏರುವುದು ಸುಮ್ಮನೆ ತಿರುಗಾಡುವುದು, ಆಗಾಗ ಸಾಹಿತ್ಯದ ಬಗ್ಗೆ ಚರ್ಚಿಸುವುದು, ಅವನು ರಾಜಕುಮಾರನ ಹಾಡುಗಳನ್ನು ಹಾಡುವುದು, ಬಾನಿನಲ್ಲಿ ಹಿಂಡು ಹಕ್ಕಿಗಳು ಹಾರಿ ಹೋಗುವುದು, ಸಂಜೆಯ ಮೌನದಲಿ ಸರ್ವದಾಳಿಗೆ ಏನೋ ಹೊಸ ಅನುಭವದ ಬಾಗಿಲುಗಳನ್ನು ತೆರೆಯುತ್ತಿದ್ದವು. ಸಂಜೆ ಗದ್ದಿಗೆಯ ಕಡೆಯಿಂದ ಯಾರೋ ಭಕ್ತರು ಹಾಕಿದ ಕೌಡಿ ಲೋಬಾನದ ಹೊಗೆ ಗಾಳಿಯಲ್ಲಿ ಪಸರಿಸಿರುತ್ತಿತ್ತು. ಅವನು ಹೇಳುತ್ತಿದ್ದ ಅವ್ವ ಹೊಲಮನಿಯ ಗದಗಕ್ಕೆ ಹೋಗಿ ಕೂಲಿ ಮಾಡಿ ಮನೆಯ ಏಳು ಮಂದಿಯ ಹೊಟ್ಟೆಯ ಹೊರೆಯುದರ ಬಗ್ಗೆ, ತಾನು ತಮ್ಮಪ್ಪ ಮಾಡುವ ಪುಟ್ಟ ವ್ಯಾಪಾರದಲ್ಲಿ ಏನೂ ಸಿಗದುದರ ಬಗ್ಗೆ ತಾನು ಸಣ್ಣತನದಲ್ಲಿ ಶಾಲೆ ಬಿಟ್ಟದ್ದು, ಉಡಾಳ ಹುಡುಗರ ಹಿಂದೆ ಅಲೆದಾಡಿದ್ದು, ಯಾವ ಬಾಲ್ಯದ ತಣ್ಣನೆಯ ಅನುಭವನ ದಕ್ಕದೇ ಹೋಗಿದ್ದು, ಕೊಳೆಯಾದ ಮನಸ್ಸಿನ ಬಗ್ಗೆಯೇ ಹೇಳುತ್ತಿದ್ದ. ಈಗ ಏನೂ ಓದದ ತಾನು ಯಾವ ದಾರಿ ಹಿಡಿಯಬೇಕು, ಎಲ್ಲಿ ತಿರುಗಾಡಬೇಕು, ಎಲ್ಲಕ್ಕಿಂತ ಹೆಚ್ಚಾಗಿ ದುಡ್ಡು ಗಳಿಸಬೇಕೆಂಬ ಆಶೆ, ಅದಕ್ಕಾಗಿ ಅವನ ಯೋಜನೆಗಳು ಅವಳ ಮುಂದೆ ಏಕಾಂತದಲ್ಲಿ ಗುಡ್ಡದ ಗಾಲೀಯ ಹಾಗೆ ಉಸುರುತ್ತಿದ್ದ. ಅವಳು ಹೇಳುತ್ತಿದ್ದಳು ಪ್ರಾಮಾಣಿಕವಾಗಿ ದುಡಿ ಮೇಲೆ ಬಂದೇ ಬರುತ್ತೀಯಾ, ಆಗೆಲ್ಲಾ ಅವನು ಮೌನಕ್ಕೆ ಜಾರುತ್ತಿದ್ದ. ಅವಳು ಕೂಡಾ ಮುಳುಗುವ ಸೂರ್ಯನ ನೋಡುತ್ತ ಸುಮ್ಮನೆ ಕುಳಿತು ಬಿಡುತ್ತಿದ್ದಳು.

ಆದರೆ ಈಗ ಒಂದೆರಡು ತಿಂಗಳಿಂದ ಸರ್ವದಾಳಿಗೆ ಅವನ ವರ್ತನೆ ಬಿಡಿಸಲಾಗದ ಗಂಟಾಗಿತ್ತು. ಅವನು ತಳಮಳಿಸುತ್ತಿದ್ದ. ಎಲ್ಲಿಯೋ ಗುಹೆಯ ಆಳಿಕ್ಕಿಳಿದು ಏನನ್ನೋ ಹುಡುಕುವಂತೆ ಕಾಣುತ್ತಿದ್ದ. ಮತ್ತೆ ಸುಮ್ಮಸುಮ್ಮನೆ ಯಾರ್‍ಯಾರನ್ನೊ ಬಯ್ಯುತ್ತಿದ್ದ. ಸರ್ವದಾಳಿಗೆ ಅವನು ದೇಶದ ಭ್ರಷ್ಠತೆಯ ಬಗ್ಗೆ ಸುದ್ದಿ ಹೇಳುತ್ತಿದ್ದ. ಆದರೆ ಯಾವ ಕಾರಣಕ್ಕೂ ಈ ಮೊದಲು ಆತನು ಯಾರನ್ನೂ ಬಯ್ಯುತ್ತಿರಲಿಲ್ಲ ತನಗೆ ಆರೋಗ್ಯದ ತೊಂದರೆ ಇದೆ ಎಂದು ಹೇಳುತ್ತಿದ್ದ. ಅವಳು ನಂಬುತ್ತಿದ್ದಳು. ತನ್ನಷ್ಟಕ್ಕೆ ತಾನೇ ಆ ಸಯ್ಯದ ಬಾದಷಹನ ಗುಡ್ಡದ ಮೇಲೆ ಕುಳಿತು ಗೊಣಗಿಕೊಳ್ಳುತ್ತಿದ್ದ ಸರ್ವದಾಳಿಗೆ ಕಿರಿಕಿರಿ ಉಂಟಾಗುತ್ತಿತ್ತು. ಈ ಹುಡುಗನನ್ನು ಹಚ್ಚಿಕೊಂಡು ತಪ್ಪು ಮಾಡಿದನೇನೋ ಅನಿಸುತ್ತಿತ್ತು. ಮತ್ತೆ ಅವನ ಕಾವ್ಯದ ಬಗ್ಗೆ ಕಥೆಗಳ ಬಗ್ಗೆ ಸಿನೇಮಾಗಳ ಬಗ್ಗೆ ಮಾತನಾಡಿದಾಗ ಅವಳು ಯಾವ ಆತಂಕಕ್ಕೂ ಒಳಗಾಗದೇ ಅವನ ಮಾತಿನ ಮೋಡಿಗೆ ಒಳಗಾಗುತ್ತಿದ್ದಳು. ಈ ಸುಂದರ ಬದುಕು ನಮ್ಮದು ಅದು ತುಂಬ ಸುಂದರವಾಗಿ ಕಳೆಯಬೇಕು. ಗೆಳತನ ಹಿತವಾಗಿರಬೇಕು, ಬದುಕಿನ ಕಠೋರತೆಗೆ ಹೆದರಬೇಡ, ಅದು ಒಮ್ಮೆ ತಿಳಿಯಾಗುತ್ತದೆ ಎಂದು ಅವನಿಗೆ ಮನವರಿಕೆ ಮಾಡಿ ಕೊಡುತ್ತಿದ್ದಳು. ತಣ್ಣನೆಯ ಸಂಜೆಯಲಿ ಅವರು ಬೆಟ್ಟ ಇಳಿದು ಬರುತ್ತಿದ್ದರು ಆ ಕೋಟೆ ಸರ್ವದಾಳಿಗೆ ಒಂದು ನಿರಂತರ ಹುಡುಕಾಟವನ್ನು ಹುಟ್ಟು ಹಾಕಿತ್ತು. ಆ ಕೋಟೆಯ ಒಳಗೆ ಕೇಳುವ ಮೌನ ಶಬ್ಬಗಳು ಮೂರ್ತ ಅನುಭವವನ್ನು ಕಟ್ಟುವ ಕಲೆಯಾಗಿ ಅವಳಿಗೆ ಗೋಚರಿಸುತ್ತಿದ್ದವು. ಕ್ರಿ.ಶ. ೫೪೩ ರಲ್ಲಿ ಹಿಂದೆ ಮೊದಲನೇಯ ಪುಲಿಕೇಶಿ ತಾನು ಸ್ವತಂತ್ರ ರಾಜ ಎಂದು ಅಶ್ವಮೇಧ ಯಜ್ಞ ಮಾಡಿದ ಶಾಸನವನ್ನು ಬಾವನ ಬಂಡೆಗಳ ಮಧ್ಯೆ ಕೆತ್ತಿಸಿದ್ದ. ಪ್ರತಿ ಸಲವು ಕೋಟೆ ಪ್ರವೇಶ ಮಾಡಿದಾಗ ಆ ಐವತ್ತಮೂರು ಬೃಹತ್ ಬಂಡೆಗಳ ಒಳಗೂಡಿ ಭದ್ರ ಕೋಟೆ; ತನ್ನನ್ನೂ ಯಾರಿಂದಲೋ ರಕ್ಷಿಸುತ್ತದೆ, ಮತ್ತೆ ಈ ನಾಡಿನಲ್ಲಿ ಪುಲಿಕೇಶಿಯಂತಹ ರಾಜ ಈ ಸುಂದರ ಊರನ್ನು ಆಳುತ್ತಾನೆ ಅಂತ ಸುರ್ವದಾಳಿಗೆ ಇತಿಹಾಸದ ಪಲಕುಗಳು ಎದೆಗೆ ಅಮರುತ್ತಿದ್ದವು. ಕೋಟೆಯ ಉತ್ತರ ಭಾಗದಿಂದ ಏರಿ ಅವರಿಬ್ಬರೂ ಪೂರ್ವ ಭಾಗದಲ್ಲಿರುವ ಭತೇರಿ ಹನುಮಂತನ ಗುಡಿಯ ಮುಖಾಂತರ ಮೂರು ಸಂಜೆಯ ಹೊತ್ತು ಇಳಿದು ಬರುತ್ತಿದ್ದರು. ಸೂರ್ಯನ ಬೆಳಕಿಗೆ ಕೆಂಪು ಬಣ್ಣದ ಕೋಟೆಯ ಕಲ್ಲುಗಳು ಕಾಮನ ಹಬ್ಬದಲ್ಲಿ ಬಣ್ಣ ಬಳಿದುಕೊಂಡಂತೆ ಗೋಚರಿಸುತ್ತಿದ್ದವು. ಒಮ್ಮೊಮ್ಮೆ ಅವನು ರಾತ್ರಿಯ ಮಟನ್ ಊಟದ ಬಗ್ಗೆ ಕೊರೆಯುತ್ತಿದ್ದ. ಕುಂಚವಿಲ್ಲದ ನೈಸರ್ಗಿಕ ಚಿತ್ರ ಆ ಕೋಟೆಯದಾಗಿತ್ತು. ಅದೊಂದು ಪೂರ್ಣ ಪ್ರಮಾಣದ ಬೃಹತ್ ಕಲಾಕೃತಿಯಂತೆ ಇತ್ತು.

ಸರ್ವದಾಳಿಗೆ ತನ್ನ ಒಂಟಿತನದ ಆಳವಾದ ನೋವಿತ್ತು, ಎಷ್ಟೊಂದು ಓದಿದರೂ ಸಿಗಲಾರದ ನೌಕರಿ, ಮನೆ ಪಾಠದಿಂದ ಬರುವ ಆದಾಯ ಬದುಕಿಗೆ ಸಾಕಾಗುತ್ತಿರಲಿಲ್ಲ. ತೀವ್ರವಾದ ಒಂಟಿತನ ತಬ್ಬಲಿತನ ಅವಳಿಗೆ ಆವರಿಸಿದಾಗ ಅವಳು ಮೆಲ್ಲಗೆ ಬಾವನ ಬಂಡ ಕೋಟೆಯೊಳಗೆ ನುಸುಳುತ್ತಿದ್ದಳು. ಅವಳು ಅಲ್ಲಿ ಅಡ್ಡಾಡುತ್ತ ಒಂಥರಾ ಬೆಚ್ಚನೆ ಅನುಭವಕ್ಕೆ ತನ್ನನ್ನು ತಾನೇ ತೆರೆದುಕೊಳ್ಳುತ್ತಿದ್ದಳು. ಬಂಡೆಗಳ ಮಧ್ಯೆ ಇರುವ ಮೌನವು ಅವಳಿಗೆ ತಾಯ ಗರ್ಭದಲ್ಲಿ ಇದ್ದಂತೆ ಮಾಡುತ್ತಿತ್ತು. ಅವಳಿಗೆ ಒಮ್ಮೊಮ್ಮೆ ಅನಿಸುವುದು ಉಂಟು ತನ್ನಪ್ಪನ ಹಾಗೆ ತಾನೂ ಅಲೆಮಾರಿ ಬದುಕನ್ನು ಬದುಕುತ್ತಿರುವೆ ಅಂತ. ಬರೆದ ಓದಿದ ಸಾಹಿತ್ಯವೂ ಹೊಟ್ಟೆ ತುಂಬಿಸುತ್ತಿರಲಿಲ್ಲ. ಪ್ರಕೃತಿಯ ಮಧ್ಯದಲ್ಲಿ ಓಡಾಡುವ ತನಗೆ ಬದುಕುವ ಚೈತನ್ಯ ಈ ಕೋಟೆ ಕೊಡುತ್ತದೆ ಎಂದು ಅವಳು ಭಾವಿಸಿದ್ದಳು. ಕೋಟೆಯಂತೆ ನಿಗೂಢ, ಅಚಲ ನವನವೋನ್ಮೇಷಶಾಲಿಯಾಗಬೇಕು, ಜೀವ ಚೈತನ್ಯ ಹಿಗ್ಗಬೇಕು, ಎಲ್ಲದಕ್ಕೂ ಹೊಸ ಸ್ಪರ್ಶ ಹೊಸ ಭಾಷೆ, ಹೊಸ ಉಲ್ಲಾಸ ಹುಟ್ಟಬೇಕೆಂದುಕೊಳ್ಳುತ್ತಿದ್ದಳು. ಅವರಿಬ್ಬರೂ ಕೋಟೆಯ ವಿಶಾಲವಾದ ನೈಸರ್ಗಿಕ ಕೊಳದ ದಂಡೆಯಲ್ಲಿ ಒಮ್ಮೊಮ್ಮೆ ಕುಳಿತಿರುತ್ತಿದ್ದರು. ಅವರು ದೇಶದ ತುರ್ತು ಪರಿಸ್ಥಿತಿಯ ಬಗ್ಗೆ ಸಿಖ್‌ರ ಹತ್ಯಾಕಾಂಡದ ಬಗ್ಗೆ, ಜಾಲಿಯನ್ ವಾಲ್‌ಬಾಗ್ ದುರಂತದ ಬಗ್ಗೆ, ಉಪ್ಪಿನ ಸತ್ಯಾಗ್ರಹದ ಬಗ್ಗೆ ಕರಾರುವಕ್ಕಾಗಿ ಇಸ್ವಿ ದಿನಾಂಕಗಳ ಪಟ್ಟಿಯಲ್ಲಿ ನಮೂದಿಸಿ ಮಾತನಾಡುತ್ತಿದ್ದ. ಅವನು ಇತಿಹಾಸದ ಘಟನೆಗಳ ಬಗ್ಗೆ ಎಷ್ಟೊಂದು ಆಳವಾಗಿ ವಿವರಿಸುತ್ತಿದ್ದನೆಂದರೆ, ಇಪ್ಪತ್ನಾಲ್ಕರ ಆ ಓದದ ಹುಡುಗ ಸರ್ವಧಾಳಿಗೆ ಪ್ರಶ್ನೆಯಾಗಿರುತ್ತಿದ್ದ.

ಕೋಟೆಯ ಒಳಗಡೆ ಕುಳಿತಾಗಲೊಮ್ಮೆ ಬಾದಾಮಿಯ ಇತಿಹಾಸ ಪುನರುತ್ಥಾನಕೊಳ್ಳುತ್ತಿತ್ತು. ಮಾತುಗಳ ಮಧ್ಯೆ ಅವ್ವನು ಅವನು ಮಾಡಿದ ಮೀನುಸಾರಿನ ಬಗ್ಗೆ, ಮಟನ್‌ ಪಲ್ಯದ ಬಗೆ ರೆಸಿಪಿಯನ್ನೇ ಮಂಡಿಸುತ್ತಿದ್ದ. ಪಕ್ಕನೆ ಏನೋ ಪಕ್ಕೆಗೆ ತಿವಿದಂತೆ ತನ್ನ ಪೇಪರಿನ ವಹಿವಾಟದ ಬಗ್ಗೆ ಗಲಿಬಿಲಿಗೊಳ್ಳುತ್ತಿದ್ದ. “ನಾ ಹ್ಯಾಂಗರ ಮಾಡಿ ಹಣ ಗಳಸಬೇಕ್ರಿ” ಅಂತ ಅನ್ನುತ್ತಿದ್ದ. “ದುಗ್ಗಾಣಿ ಪೇಪರ ಮಾರಿ ಎಂದ ಹಣ ಗಳಿಸಬೇರಿ, ಹೊಟ್ಟೆ ತುಂಬಿಕೊಳ್ಳುವುದು ಹ್ಯಾಂಗರಿ” ಅಂತ ಅವಲತ್ತುಗೊಳ್ಳುತ್ತಿದ್ದ. ಆಗೆಲ್ಲ ಸರ್ವದಾ ಮಂಕಾಗಿ ಬಿಡುತ್ತಿದ್ದಳು.

“ಜನ ಜೀವನ ಉಪಾಯಕ್ಕೆ ತಕ್ಕ ಅನುಕೂಲ ಹೊಂದುವುದು ಹಕ್ಕು, ಶಾಸನ ಸರ್ಕಾರ, ರಾಜಕೀಯ ಇವುಗಳೆಲ್ಲ ಮಾರ್ಗಗಳೇ ಹೊರತು ಅಂತಿಮ ಗುರಿಯಲ್ಲ. ಯಾವ ನಿಯಮಗಳ ಅವಶ್ಯಕತೆ ಇರದು ಒಂದು ಗುರಿ ಇದೆ ಆ ಗುರಿ ಯಾವುದೇ ಶಾಸನ ಸಂವಿಧಾನಗಳ ಕಾಯ್ದೆಯಿಂದ ಆಯ್ದದ್ದಲ್ಲ. ನೈತಿಕ ನಿಷ್ಠೆ ಹೃದಯ ಪರಿ. ಶುದ್ಧತೆಯೇ ನಿಜವಾದ ಜೀವನದ ಬಲ ಇದನ್ನು ಎಲ್ಲಾ ಧರ್ಮಗಳು ಅನುಮೋದಿಸುತ್ತವೆ. ಆದ್ದರಿಂದ ಪ್ರತಿಯೊಬ್ಬನೂ ತನಗೆ ನಂಬಿಗೆಯುಳ್ಳ ಧರ್ಮದ ಮೂಲದಲ್ಲಿ ಸಮಸ್ಯೆಗೆ ಪರಿಹಾರ ಹುಡುಕಿಕೊಳ್ಳಬೇಕು. ಅದು ಮನುಷ್ಯನ ಚಾರಿತ್ರ್ಯವನ್ನು ರೂಪಿಸುತ್ತದೆ. ಸಯ್ಯದ ಬಾದಷಹ ಹಾಗೂ ಶಿವಪ್ಪಯ್ಯ ಅಜ್ಜ ಒಂದುಗೂಡಿ ಜನರ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದರು. ನಿನಗೆ ಏನು ಅನಿಸುತ್ತದೆ. ಈ ಬದುಕ ನಡೆಸಲು, ಶಕ್ತಿಯನ್ನು ಒಂದುಗೂಡಿಸಲು ಅಂತಃಕರಣ ಬಹಳ ಮುಖ್ಯ ಅನಿಸುವುದಿಲ್ಲವೇ ನಮ್ಮ ಸಮಾಜದಲ್ಲಿ ಕಾಣುತ್ತಿರುವ ನ್ಯೂನತೆಗಳಿಗೆ ನಾವೇ ಕಾರಣ ಅಲ್ಲವೇ ನಿನಗೇನನಿಸುತ್ತದೆ. ವಿಕಾಸದ ಮೆಟ್ಟಿಲುಗಳನ್ನು ಹತ್ತಲು ನಮ್ಮನ್ನು ತಯಾರು ಮಾಡಿಕೊಳ್ಳಬೇಕು” ಸರ್ವದಾಳ ವಿಚಾರಗಳಿಗೆ ಸುಮ್ಮನೆ ಹೂಂಗುಡುತ್ತಿದ್ದ. ‘ಏನ್ ಮಾಡುವುದುರೀ ಎಳೆಯರಿದ್ದಾಗ ಮನೆಯ ವಾತಾವರಣ ಭಯಾನಕವಾಗಿತ್ತು. ಸುಯೋಗ ಪ್ರಜೆಗಳಾಗಿ ಬೆಳೆಯವ ಯಾವ ನಡತೆಯನ್ನೂ ನಾವು ಕಲಿಯಲಿಲ್ಲ. ಅವ್ವ ಬಡಿದು ಬಡಿದುಕೊಂಡು ಕೂಲಿಗೆ ಹೋಗುತ್ತಿದ್ದಳು. ಮಕ್ಕಳು ಶಾಲೆಗೆ ಹೋಗುತ್ತಾರೆ ಎಂದು ಭಾವಿಸಿದಳು. ಶಾಲೆಯಲ್ಲಿ ಪಾಟೀಚೀಲ ಇಟ್ಟು, ಒಂದಕ್ಕೆ ಹೋಗುತ್ತೇವೆ ಅಂತ ಹೇಳಿ ಪರಾರಿಯಾಗಿ, ಅವರಿವರ ಮನೆಯ ಮುಂದಿಟ್ಟಚಪ್ಪಲಿ ಸಾಮಾನುಗಳನ್ನು ಕದ್ದು ಮಾರಿ, ಗಜ್ಜುಗ, ಗೋಲಿ, ಛಾಪಾ ಕಾಗದದ ಆಟ ಆಡುತ್ತಿದ್ದೆವು. ಅದೇ ಸರಳ ಬದುಕು ಅನಿಸುತ್ತಿತ್ತು. ಓದಿನ ಹಿಂದಿನ ಸುಂದರ ಬದುಕು ಆಗ ನಮ್ಮ ತಲೆಗೆ ಹಾಯಲೇ ಇಲ್ಲ ಬರೀ ಉಡಾಳತನದಲಿ, ಮುಕ್ಕುವದರಲ್ಲಿ ಬಾಲ್ಯ ಕಳೆದು ಹೋಯ್ತುರೀ. ನಿಜವಾಗಿ ಪ್ರೀತಿಯ ಪರಿಕಲ್ಪನೆ ನಮಗೆ ತಿಳಿದಿರಲಿಲ್ಲ. ಈಗೀಗ ಗೊತ್ತಾಗ ಹತೈತ್ರಿ ಯಾವ ದಾರಿ ಹಿಡಿದು ಕೆಲಸ ಹುಡಿಕಿಕೊಳ್ಳುವುದು ಬಹಳ ದೊಡ್ಡ ಸಮಸ್ಯೆ ಈ ಬದುಕಿನದು ಆಗಿ ಬಿಟ್ಟೈತ್ರಿ” ಹುಡುಗ ಅವಳ ಮುಂದೆ ಅವಲತ್ತುಕೊಳ್ಳುತ್ತಿದ್ದ.

ಒಬ್ಬರನ್ನು ಪ್ರೀತಿಸುವದೆಂದರೆ ಅವನ ಬೆಳವಣಿಗೆಯ ಬಗ್ಗೆ ಸರ್ವತೋಮುಖ ಪ್ರಗತಿಯ ಬಗ್ಗೆ ನಾವು ಜವಾಬ್ದಾರಿಯಾಗಿರುವುದು. ಪೇಪರ ಮಾರುವುದನ್ನು ಬಿಟ್ಟು ಬೇರೆ ಉದ್ಯೋಗ ಹುಡುಕು, ಸ್ವಲ್ಪ ದಿವಸೆ ಕಷ್ಟವಾಗುತ್ತೆ. ನಿನಗೆ ಪ್ರೀತಿಯ ಸ್ಪರ್ಶವಿಲ್ಲದೇ ಕೊರಗುತ್ತಿದ್ದೀಯಾ, ನಾನು ನಿನ್ನ ತುಂಬ ಪ್ರೀತಿಸುತ್ತೇನೆ. ನೀನು ಜೀವನದಲ್ಲಿ ಗೆದ್ದ ಗೆಲ್ಲುತ್ತೀಯಾ, ಆದರೆ ಒಂದು ಪರಿಶುದ್ಧ ಪ್ರೀತಿಯನ್ನು ಅವಮಾನಿಸಬೇಡ. ಅರಿತುಕೊಳ್ಳು ಅದಕ್ಕೋಸ್ಕರ ಹಾತೊರೆ ಈ ಬದುಕಿನ ಎಲ್ಲಾ ಕಷ್ಟಗಳನ್ನು ಎದುರಿಸುತ್ತ ನಾವು ಸುಮ್ಮನೆ ನಡೆಯಬೇಕು. ಸುಮ್ಮನೆ ಸಿಟ್ಟಿಗೆದ್ದರೆ, ಬೈದರೆ, ಅವಮಾನಿಸಿದರೆ ಬೇರೆಯವರ ಬದುಕು ನಮ್ಮದಾಗುವುದಿಲ್ಲ.” ಅವಳ ವೇದಾಂತದ ಮಾತು ಹೇಗೇ ಸಾಗುತ್ತಿತ್ತು ಅದರಲ್ಲಿ ಎಷ್ಟು ವಿಚಾರಗಳು ಅವನ ತಲೆ ಕೊರೆದವೊ ಅವಳಿಗೆ ತಿಳಿಯುತ್ತಿರಲಿಲ್ಲ. ಅವಳು ಅವನು ಸಿಟ್ಟಿಗೆದ್ದಾಗಲೆಲ್ಲಾ ಮಗುವಂತೆ ಅವನನ್ನು ಸಂಬಾಳಿಸುತ್ತಿದ್ದಳು.

ಅವನು ನಾಹಂಬಿಭೇಮಿ ಎನ್ನುತ್ತಿದ್ದ, ಅದರರ್ಥ ನಾನು ಹೆದುರುವದಿಲ್ಲ. ಸೂರ್ಯ ಇವರ ಹುಚ್ಚಾಟದ ಮಾತುಗಳ ಕೇಳುತ್ತ ಮುಳುಗುತ್ತಿದ್ದ. ಕೋಟೆಯನ್ನು ಕರಿನೆರಳು ಅವರಿಸುತ್ತಿತ್ತು, ಪೊಟರೆಗಳಲಿ, ಸಂದುಗಳಲ್ಲಿ ಗೂಡು ಮಾಡಿದ ಹಕ್ಕಿಗಳು ಒಂದೊಂದಾಗಿ ಹಾರಿ ಬರುತ್ತಿದ್ದವು, ಸಂಜೆಯ ಮೌನ ಹೊತ್ತು ಅವರು ಕೋಟೆ ಇಳಿದು ಬರುತ್ತಿದ್ದರು. ಸರ್ವದಾ ಕೋಟೆಯೊಳಗೆ ಪ್ರವೇಶಿಸಿದಾಗಲೆಲ್ಲಾ ಅವನು ಗೆಳೆಯ ಎದೆಯ ಆಳಕ್ಕೆ ಇಳಿದು ಬರಿತ್ತಿದ್ದ. ಕವಿಯಾಗಿದ್ದವನು ಸುಮ್ಮನೆ ದಾರಿಯಲ್ಲಿ ಹೆಜ್ಜೆ ಹಾಕುತ್ತ ಅವಳೊಡನೆ ತುಸು ದೂರ ನಡೆದು ಬಂದನು. ಅವನ ಸುಂದರ ಕಾವ್ಯದ ಸಾಲುಗಳು ಅವಳಿಗೆ ತಣ್ಣೀರಿನ ಬಾವಿಯಲ್ಲಿ ತೇಲಿಸಿದಂತೆ ಸ್ವಪ್ನ ಗಂಧದ ಮುಂಜಾವಿನ ಹಿತದಂತೆ ಎದೆಗೆ ಇಳಿಯುತ್ತಿತ್ತು. ಅವಳು ರೆಕ್ಕೆಗಳನ್ನು ಆಕಾಶದಲ್ಲಿ ಹಾರಿಸುತ್ತಿದ್ದಳು. ಅವನು ಒಟ್ಟಿಗೆ ಇದ್ದಾಗ ನೀರಿನಲ್ಲಿ ಮೀನಿನಂತೆ ಈಜುತ್ತಿದ್ದಳು. ಅವನು ಅವಳ ಪ್ರೇಮಿಯಾಗಿರಲಿಲ್ಲ. ಬರೀ ಗೆಳೆಯನಾಗಿದ್ದ, ಬರೀ ಸುಂದರ ಕವಿತೆಗಳ ಸಾಲುಗಳನ್ನು ಅವಳ ಮುಂದೆ ಉಸುರುತ್ತಿದ್ದ, ಆಗೆಲ್ಲಾ ಬಡತನದಲ್ಲೂ, ಊಟವಿಲ್ಲದ ರಾತ್ರಿಯಲ್ಲೂ ಈ ಬದುಕು ಹಗುರ ಸುಂದರ ಅಂತ ಸರ್ವದಾಳಿಗೆ ಅನಿಸುತ್ತಿತ್ತು. ಅವನು ಬರೀ ತೇಲು ಮೋಡಗಳನ್ನು ತೋರಿಸುತ್ತಿದ್ದ. ಅದರಂತೆ ಹಗುರಾಗಿ ತೇಲು ಅನ್ನುತ್ತಿದ್ದ. ಅವಳಿಗೆ ತಾನು ಅವನ ಕವಿತೆಯ ಫಲಕುಗಳಲ್ಲಿ ಅಡಗಿ ಕುಳಿತಂತೆ ತಾನೇ ಅರಳಿ ಗಂಧ ಸೂಸುವ ಸುಗಂಧಿಯಾದಂತೆ ಅನಿಸುತ್ತಿತ್ತು. ಅವಳಿಗೆ ಯಾವುದೇ ಆಪಾದ ಮುನ್ಸೂಚನೆ ಕೊಡದೇ ಅವನು ಮೆಲ್ಲಗೆ ಸರಿದು ಹೋಗಿದ್ದ ಅವಳು ಮತ್ತವೇ ನೋವು, ಒಂಟಿತನ ವಿಷಾಧದ ಭಾವಗಳಿಂದ ಅವನನ್ನು ನೆನೆಸುತ್ತ ಒಬ್ಬಳೇ ದಾರಿಯಲ್ಲಿ ನಡೆಯತೊಡಗಿದಳು. ದಾರಿಯಲ್ಲಿ ಭಾವನ ಬಂಡೆ ಕೋಟೆ ಎದುರಾಯಿತು. ಅವಳೂ ಕೋಟೆಯೊಳಗಿನ ಏಕಾಂತದ ಸಂಜೆಗಳಲ್ಲಿ ತನ್ನನ್ನು ಅದ್ದಿ ತೆಗೆದಳು. ಪೇಪರ ಮಾರುವ ಹುಡುಗ ಅವಳೊಟ್ಟಿಗೆ ಹೆಜ್ಜೆ ಹಾಕತೊಡಗಿದ.

ಕೋಟೆಯ ಪ್ರಶಾಂತತೆ ಇಳಿಸಂಜೆಯ ಮಟ್ಟು ಬೆಳಕು, ಹಕ್ಕಿಗಳ ಹಾರಾಟ, ಎದೆಯ ಆಳಕ್ಕೆ ಇಳಿವ ಮೌನ, ಕಣ್ಣಿಗೆ ಹಿತವಾಗುವ ಕೋಟೆಯ ಕೆಂಪು ಬಣ್ಣ ಅವಳಿಗೆ ಅವನ ಆ ಗೆಳೆಯನ ನೆನಪುಗಳಲ್ಲಿ ಧ್ಯಾನಸ್ಥವಾಗುವಂತೆ ಮಾಡುತ್ತಿದ್ದವು. ಅಲ್ಲಿ ಅವನ ಎಲ್ಲಾ ಕವಿತೆಗಳ ಸಾಲುಗಳು ಬಂಡೆಯ ಮಧ್ಯದಿಂದ ಪಿಸುಗುಡುತ್ತಿದ್ದವು. ಎಷ್ಟೊಂದು ಭಾವುಕತೆ, ಎಷ್ಟೊಂದು ನೆನಪುಗಳು, ಎಷ್ಟೊಂದು ಹಿತಗಳು, ಎಷ್ಟೊಂದು ಮೌನದ ಧ್ವನಿಗಳು. ಅವಳು ಕೋಟೆಯನ್ನು ತುಂಬ ಪ್ರೀತಿಸತೊಡಗಿದಳು. ಒಮ್ಮೊಮ್ಮೆ ಸರ್ವದಾ ತನ್ನಷ್ಟಕ್ಕೆ ತಾನೇ ಹೇಳಿಕೊಳ್ಳುತ್ತಿದ್ದಳು. ಇದೆಲ್ಲಾ ಸ್ಕಿಜೋಫ್ರೇನಿಯಾದ ಲಕ್ಷಣಗಳೆಂದು ಮತ್ತೆ ಇರಲಿಕ್ಕಿಲ್ಲ ಎಂದು ತಲೆ ಝಾಡಿಸುತ್ತಿದ್ದಳು. ಪೇಪರ ಮಾರುವ ಹುಡುಗ ಹೇಳುತ್ತಿದ್ದ ಯಾವುದಾದರೂ ಒಂದು ಹೊಸ ಉದ್ಯೋಗ ಮಾಡಬೇಕೆಂದು ಬರೀ ಪೇಪರ್ ಮಾರಿದ ಕಮೀಶನ್ ಹಣದಿಂದ ಏನು ಮಾಡಲಿಕ್ಕೆ ಬರುತ್ತದೆ. ಒಮ್ಮೊಮ್ಮೆ ಅವನು ಇಲ್ಲದ ಇದ್ದ ಬ್ರಷ್ಟಾಚಾರದ ಸುದ್ದಿಗಳನ್ನು ಪತ್ರಿಕೆಗಳಿಗೆ ಬೇನಾಮಿ ಹೆಸರಿನಲ್ಲಿ ಬರೆಯುತ್ತಿದ್ದ. ದೊಡ್ಡ ದೊಡ್ಡ ಆಫೀಸರಗಳು, ರಾಜಕೀಯ ವ್ಯಕ್ತಿಗಳು ಮಾಡುವ ಕೆಲಸದ ಬಗ್ಗೆ ವಾಚಕರ ವಾಣಿಯಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಿದ್ದ. ಕೆಲಸಮಯ ಆ ಊರಿನ ಓಣಿಗಳಲ್ಲಿ ಅದು ಚರ್ಚೆಯಾಗುತ್ತಿತ್ತು. ಅವಳ ಮುಂದೆ ಆಗಾಗ ಹೇಳುತ್ತಿದ್ದ. ಸುದ್ದಿ ಬರೀಬೇಕರಿ ಮತ್ತು ಊರು ಬಿಟ್ಟು ಸ್ವಲ್ಪ ದಿವಸ ಓಡಿ ಹೋಗಬೇಕ್ರಿ. ಅವನು ಒಮ್ಮೊಮ್ಮೆ ಮನೋರಂಜನೆ ಒದಗಿಸುತ್ತಿದ್ದ, ಒಮ್ಮೊಮ್ಮೆ ಆತಂಕಗಳನ್ನು ಹುಟ್ಟು ಹಾಕುತ್ತಿದ್ದ. ಅವನ ತೀಕ್ಷ್ಣಬುದ್ಧಿ ಒಮ್ಮೊಮ್ಮೆ ಅನಾಹುತಕಾರಿಯಾದ ವಿಚಾರಗಳನ್ನು ಅವನಲ್ಲಿ ಹುಟ್ಟು ಹಾಕುತ್ತಿದ್ದವು. ಆವಾಗೆಲ್ಲ ಸರ್ವದಾಳು ಸಂಜೆಯ ಏಕಾಂತದಲ್ಲೂ ಸಣ್ಣಗೆ ನಡುಗುತ್ತಿದ್ದಳು. ಅವನು ಯಾವಾಗಲೂ ದುಡ್ಡು ಮಾಡುವುದರ ಬಗ್ಗೆಯೇ ಮಾತನಾಡುತ್ತಿದ್ದ. ದಾರಿ ಯಾವುದಾದರೇನ್ರಿ, ಒಟ್ಟಾರೆ ರೊಕ್ಕ ಗಳಿಸಬೇಕು. ನಾವು ಸರಿದಾರಿ ಅರಿತ ಕುಂತ್ರ ಹೊಟ್ಟೆ ತುಂಬವದಿಲ್ಲರಿ. ನಾನು ವಾರ್ಡ ಇಲೆಕ್ಷನ್‌ಗೆ ನಿಲ್ಲುತ್ತೀನಿ ಅಂತ ಜೋರಾಗಿ ಹೇಳುತ್ತಿದ್ದ. ಆವಾಗ ಸರ್ವದಾ ಅವನ ಮುಗಿಲೆತ್ತರದ ಕನಸುಗಳ ಬಗ್ಗೆ ಏನೂ ಹೇಳುತ್ತಿರಲಿಲ್ಲ.

ಅವನು ಬದುಕಿನ ದಾರಿಯ ಬಗ್ಗೆ ಬದಲಾಗುವ ರಾಜಕಾರಣದ ಬಗ್ಗೆ, ಬಡತನದ ಬಗ್ಗೆ, ಸಂತನಂತೆ ನಿವೇದನೆ ಮಾಡಿಕೊಳ್ಳುತ್ತಿದ್ದ. ಅವನು ಇತಿಹಾಸದ ಘಟನೆಗಳನ್ನು ನಿಖರವಾಗಿ ಹೇಳುತ್ತಿದ್ದ. ಸಿಖ್‌ ಹತ್ಯೆಯ ನಂತರ ಕೇಂದ್ರ ಸರಕಾರದ ಧೋರಣೆ ನೀತಿ, ಆರ್ಥಿಕ ವ್ಯವಸ್ಥೆ ಮತ್ತು ಕಾರ್ಯಾಚರಣೆಯ ಬಗ್ಗೆ ಪುಸ್ತಕ ಓದಿದಂತೆ ಅವಳ ಮುಂದೆ ವಿಷಯ ಮಂಡಿಸುತ್ತಿದ್ದ, ಸರ್ವದಾ ಅವನ ವಿಚಾರಶೀಲತೆಗೆ ಮಾರು ಹೋಗುತ್ತಿದ್ದಳು ಮತ್ತೆ ತನ್ನ ಮನೆಯಲ್ಲಿ ಓದುತ್ತಿರುವ ಬಗ್ಗೆ ಅವರ ಜಾಣತನದ ಬಗ್ಗೆ ಮಾತನಾಡುತ್ತಿದ್ದ. ಕೋಟೆಯ ಒಳ ಪದರಗಳು ಇಂತಹ ಅನೇಕ ಮಹತ್ವದ ಚರ್ಚೆಗಳಿಗೆ ಸಾಕ್ಷಿಯಾಗಿತ್ತು, ಮತ್ತೆ ಸರ್ವದಾ ಇತಿಹಾಸದ ಪುಟಗಳನ್ನು ಕೋಟೆಯ ಮೆಲಕು ಹಾಕುತ್ತಿದ್ದಳು. ಸಯ್ಯದ ಬಾದಷಹನ ಗುಡ್ಡದ ಗಾಳಿ ನಿಧಾನವಾಗಿ ಬದಲಾವಣೆಗೆ ಬೀಸುತ್ತಿತ್ತು. ಸಂಜೆ ಮಾತುಗಳಲ್ಲಿ ಕಂತುತ್ತಿತ್ತು. ಹದಿನೈದು ದಿವಸದ ಎರಡು ಭಾನುವಾರ ಆ ಪೇಪರ ಮಾರುವ ಹುಡುಗ ಅವಳ ಮನೆಗೆ ಬಂದಿರಲಿಲ್ಲ ಅವಳು ಏಕಾಂಗಿಯಾಗಿ ಗುಡ್ಡವನ್ನು ಏರುತ್ತಿದ್ದಳು ಆದಸರೆ ಆ ಏಕಾಂತದಲ್ಲೂ ಒಂಥಾರ ಆತಂಕ ಕಾಡುತ್ತಿತ್ತು. ಯಾಕೆ ಅವನು ಬಂದಿಲ್ಲ. ಅವನ ಮನೆಗೆ ಹೋಗಿ ವಿಚಾರಿಸಿಕೊಳ್ಳಬೇಕೆಂದರೆ ಊರಾಚೆ ಇರುವ ಮನೆ ದೂರ ಎರಡು ವಾರದಿಂದಲೂ ಅವನು ಹಾಕುವ ವಾರಪತ್ರಿಕೆಗಳು ಅವಳಿಗೆ ತಲುಪಿರಲಿಲ್ಲ. ಅವಳು ಅವನಿಗೆ ಮೈಯಲ್ಲಿ ಹುಷಾರಿಲ್ಲ ಅಂತ ತಿಳಿದಳು. ಉಳಿದ ಪೇಪರ್ ಹಾಕುವ ಹುಡುಗರನ್ನು ವಿಚಾರಿಸಿದಳು. ಅವರು ನಮಗೆ ಗೊತ್ತಿಲ್ಲರೀ ಹಾರಿಕೆಯ ಉತ್ತರ ನೀಡಿದರು. ಸರ್ವದಾಳಿಗೆ ಅವನೊಂದಿಗೆ ಭಾನುವಾರ ಕೋಟೆಯ ಮೆಟ್ಟಿಲುಗಳನ್ನು ಹತ್ತುವುದು ಇಳಿಯುವುದು ವಿಚಿತ್ರ ಉಲ್ಲಾಸದ ಕೆಲಸ ಎಂಬಂತೆ ಆಗಿತ್ತು. ಈ ಎರಡು ವಾರಗಳು ಅವನಿಲ್ಲದ ಗ್ಯಾಪ್ ಮಗನ್ನೆಲ್ಲೋ ದೂರದ ವಿದೇಶಕ್ಕೆ ವಲಸೆ ಹೋದಾಗ ತಾಯಿಯ ಆತಂಕ ಬೇಸರಗಳಂತೆ ಅವಳಲ್ಲಿ ಒಂದು ಶೂನ್ಯಭಾವ ಆವರಿಸಿತ್ತು. ಒಮ್ಮೊಮ್ಮೆ ಅವಳು ತನಗೆ ತಾನೇ ಸಂಭಾಳಿಸಿಕೊಳ್ಳುತ್ತಿದ್ದಳು. ಯಾರದೋ ಮಕ್ಕಳು ನಮ್ಮ ಮಕ್ಕಳಾಗುತ್ತವೆಯೇ ಸುಮ್ಮನೆ ಕಳಕಳ ಕುದಿಯುವುದು, ಹಚ್ಚಿಕೊಂಡು ಕೊರಗುವುದು. ಆದರೆ ಅವನು ಅವಳ ಮನೆಗೆ ಬರದಿದ್ದಾಗ ಅವಳು ಪರಿತಪಿಸಿದಳು.

ಬಾವನ ಬಂಡೆಯ ಕೋಟೆ ಕೊತ್ತಲುಗಳಲಿ ಬೀಸಿದ ಗಾಳಿ, ಅವಳ ನಂಬುಗೆಯ ಶೃದ್ಧೆಗಳನ್ನು ತನ್ನೊಳಗೆ ತಾನೇ ತುಂಬಿಕೊಳ್ಳುತ್ತಿತ್ತು. ಆ ನೀರವ ಸಂಜೆಯಲಿ ಅವಳು ಆ ಪುಟ್ಟ ಗೆಳೆಯನನ್ನು ಹುಡುಕುತ್ತಿದ್ದಾಳೆ. ಹಕ್ಕಿಗಳು ಸುಮ್ಮನೆ ನೆತ್ತಿ ಸವರಿ ಹೋದವು. ದರ್ಗಾದ ಮುಂದೆ ಶಿವಪ್ಪಯ್ಯ ಶರಣ ಹಾಗೂ ಸಯ್ಯದ ಬಾದಷದ ಒಂದಾದ ಸ್ಥಳದಲ್ಲಿ ಯಾರೋ ಭಕ್ತರು ಒಟ್ಟುಗೂಡಿಸಿದ ಲೋಬಾನದ ಹೊಗೆ ಮತ್ತು ದೀಪದ ಕುಡಿಯ ಬೆಳಕು ನಿಧಾನವಾಗಿ ಸುತ್ತಲೂ ಪಸರಿಸುತ್ತಿತ್ತು. ಅವಳಲ್ಲಿ ಉಳಿದುಕೊಂಡಿದ್ದ ಅವನ ಉಸಿರು ವಿದಾಯ ಹೇಳಿ ಪಯಣಿಸಿದಂತೆ ಹೊಗೆ ದೂರದೂರ ಸರಿಯುತ್ತಿತ್ತು. ಕಥೆಯ ಮುನ್ನಡೆಯಂತೆ ಎಲ್ಲೋ ಅಲೆದಾಡುತ್ತಿದ್ದ ಒಂದು ಅಲೆಮಾರಿ ನಾಯಿ ಆ ಗದ್ದುಗೆಯ ಹತ್ತಿರ ಬಂದು ಕಾಲೆತ್ತಿ ಉಚ್ಚೆ ಹೊಯ್ಯಿತು. ಅವಳು ಕತ್ತಲಾವರಿಸಿದಂತೆ ಮತ್ತೆ ಬೀಸುವ ಗಾಳಿಗೆ ಮುಖ ಒಡ್ಡಿ ಕೋಟೆಯ ಒಂದೊಂದೇ ಮೆಟ್ಟಲುಗಳನ್ನು ಭಾರವಾದ ಹೆಜ್ಜೆಯನಿರಿಸಿ ಇಳಿಯ ತೊಡಗಿದಳು. ಮತ್ತೆ ಹುಡುಗನಿಗೆ ಏನಾಗಿದೆಯೋ ಅಂತ ಸಾವಿರಸಲ ತನ್ನಲ್ಲಿಯೇ ತಾನೇ ಅಂದುಕೊಂಡಳು. ಏಕಾಂತದ ಆಲಾಪ ಕತ್ತಲೆಯಲ್ಲಿ ಒಂದಾಯಿತು. ಸರ್ವದಾ ಕೋಟೆಯ ಏಕಾಂತದ ಸಂಜೆಯಲಿ ಅಗಲಿಹೋದ ಆತ್ಮದ ಗೆಳೆಯನ ಬಗ್ಗೆ ಯೋಚಿಸುತ್ತಿದ್ದಳು. ಪೂರ್ತಿ ಕುಸಿದ ತನ್ನ ಬದುಕು, ಉಣಲಾರದ ರಾತ್ರಿಗಳು, ಯಾರ್‍ಯಾರೋ ಕೊಟ್ಟ ಅರಿವೆಗಳು ಮೈಮೇಲೆ ಹಾಕಿಕೊಂಡು ಕಳವಳದ ಬದುಕಿನಲ್ಲೂ ಅವನು ಅವಳೆಯ ತುಂಬ ಗಂಧದ ಸುವಾಸನೆಯ ಕನಸಿನ ಬೀಜಗಳನ್ನು ಉಸಿರಿಗೆ ಚೆಲ್ಲಿದ್ದ. ಕಠಿಣವಾದ ಆ ನಡೆಗೆಯ ದಿನಗಳಲ್ಲಿ ಕುಸಿಯಬೇಡ, ಬರೀ ಹೆಜ್ಜೆಗಳನ್ನು ಹಾಕು, ದಾರಿತಾನೇ ಸಾಗುತ್ತದೆ ನನ್ನ ವಿಶ್ವಾಸ ಭರವಸೆಗಳು ನಿನ್ನೊಂದಿಗೆ ಇವೆ ಎಂದು ಅವನು ಬರೆದ ಪತ್ರಗಳು ಅವಳಿಗೆ ಕತ್ತಲಲ್ಲಿ ಕಂದೀಲು ಆಗಿತ್ತು. ಅವನು ತಿಳಿಗೊಳದಂತೆ ಅವಳ ಎದೆಯಲ್ಲಿ ಸ್ಥಾಪಿತವಾಗಿದ್ದ. ದಣಿದ ಸರ್ವದಾ ಆ ಕೊಳದಲ್ಲಿ ಈಜಿಯೇ ಈಜಿದಳು. ಅವನ ಪೇಲವ ಕಣ್ಣಿನಲಿ ಈಜಿಚೇರ್ ಹಾಕಿ ಆರಾಮವಾಗಿ ಕಣ್ಣು ತುಂಬಿ ನಿದ್ದೆ ತೆಗೆದಳು. ಅವಳು ಅವನ ಪ್ರೀತಿಯ ಕೊಳಲು ಗಾನಕೆ ರಾಧೆಯಾದಳು ಪರಿತಪಿಸಿದಳು. ಒಂದೇ ಒಂದು ಅವನ ಭರವಸೆಯ ನುಡಿಯೊಂದಿಗೆ ತನ್ನ ಯೌವನದ ಪ್ರಯಾಣವನ್ನು ಮುಂದುವರಿಸಿದಳು. ಇತಿಹಾಸ ಓದಿ ಸಾಹಿತ್ಯದ ಅಭಿರುಚಿ ಬೆಳೆಸಿಕೊಂಡಳು. ಮೆಲ್ಲಗೆ ಎಲ್ಲಾ ಆತಂಕಗಳಿಂದ ಬಿಡುಗಡೆ ಪಡೆಯಲು ಮುಂದಾದಳು. ಇತಿಹಾಸ ಸಾಹಿತ್ಯ ಅವಳ ನಡುಗೆಯ ಸಂಗಾತಿಗಳಾದವು. ಜಾರಿಹೋದ ದಿನಗಳ ಪುಟ್ಟ ಮನೆಯ ಕನಸುಗಳ ಹಿಂದೆ ಅವನಿದ್ದ. ಮುಂದೆ ಪೇಪರ ಮಾರುವ ಹುಡುಗನಿದ್ದ, ಸರ್ವದಾಳಿಗೆ ಬದುಕಿನಲ್ಲಿ ಗಟ್ಟಿಯಾಗಲು ಪ್ರೇರೇಪಿಸುವಂತೆ ಬಾವನ ಬಂಡ ಕೋಟೆ ಪ್ರೀತಿಯಿಂದ ಅವಳನ್ನು ಅಪ್ಪಿಕೊಂಡಿತು. ಕೋಟೆ ಅವನು ದೂರಾದರೂ ಅವಳಿಂದ ದೂರವಾಗಲಿಲ್ಲ. ಏಕಾಂಗಿತನದ ತಬ್ಬಲಿತನಕ್ಕೆ ಒಂಥರಾ ಸಮಾಧಾನ ಶಾಂತಿ ತಣ್ಣಗಿನ ಗಾಳಿಯನ್ನು ಹೊದಿಸಿ ಅವಳನ್ನು ಹಿತವಾಗಿ ಇರುವಂತೆ ಮಾಡಿತ್ತು. ಕೋಟೆಯೊಳಗೆ ಜನರಿಗೆ ಪ್ರಾಣಿಗಳಿಗೆ ನೆರಳಿರಲಿ ಅಂತ ಗಿಡ ಮರಗಳು ಹುಟ್ಟಿಕೊಂಡು ಬೀಳಲು ಬಿಟ್ಟಿದ್ದವು. ಅಲ್ಲಲ್ಲಿ ನೀರಿನ ಹೊಂಡಗಳಿದ್ದವು. ಅದು ಕೋಟೆ ಆಗಾಗ ಸರ್ವದಾಳಿಗೆ ಪೇಪರ ಮಾರುವ ಹುಡುಗನಿಗೆ ಹೇಳುತ್ತಿತ್ತು. “ಎಲ್ಲ ಮನುಷ್ಯರು ನನ್ನ ಮಕ್ಕಳು ಅವರು ಹಿತ ಸುಖ ಅನುಭವಿಸಲಿ, ಬೆಚ್ಚನೆಯ ಭರವಸೆಯಲಿ ಬಾಳಲಿ ಎಂದು ಸರ್ವರೂ ವೃದ್ಧಿಯಾಗಬೇಕು ಮತ್ತು ಖುಷಿಯಿಂದ ಬಾಳಬೇಕು. ಇತಿಹಾಸದ ಸತ್ಯಗಳು ಮತ್ತೆ ವರ್ತಮಾದಲ್ಲಿ ಬೆಳಕು ಚೆಲ್ಲಬೇಕು.” ಎರಡು ಭಾನುವಾರಗಳ ನಂತರ ಪೇಪರ ಮಾರುವ ಹುಡುಗ ವಾರಪತ್ರಿಕೆಗಳೊಂದಿಗೆ ಬಂದಾಗ ಸರ್ವದಾಳಿಗೆ ಅವನ ಮುಖ ಕಂಡು ಖುಷಿಯಾಗಿತ್ತು. “ಎಲ್ಲೇ ಹೋಗಿದ್ದೆ ದಿವಸ, ಮೈಯಾಗ ಆರಾಮ ಇರಲಿಲ್ಲವೇನೋ, ಪತ್ರಿಕೆಗಳನ್ನು ಯಾರೊಟ್ಟಿಗೆ ಆದ್ರೂ ಕಳಿಸಬಹುದಿತ್ತಲ್ಲ, ಹೀಂಗ್ಯಾಕೆ ಒಮ್ಮೆಲೇ ಗಪ್ ಆದಿ. ನನಗೊಬ್ಬಳಿಗ ಕೋಟೆ ಹತ್ತಲು ಎಷ್ಟೊಂದು ಕಷ್ಟ ಆಯ್ತು ಗೊತ್ತಾ, ಯಾವ ಹೊಸ ಪುಸ್ತಕ ಹಿಡಕೊಂಡ ಬಂದಿ” ಅವಳು ಉಸಿರು ಬಿಡದಂತೆ ಹುಡುಗ ಉತ್ತರಿಸದಂತೆ ಒಂದೇ ಸಮನೆ ಪ್ರಶ್ನೆಗಳ ಸರಮಾಲೆಯನ್ನೇ ಅವನ ಮುಂದಿಟ್ಟಳು. ಅವನು ಮಂಕಾಗಿದ್ದ ಬಾ ಒಳಗೆ ಚಹಾ ಕುಡಿದು ಕೋಟೆಗೆ ಹೋಗೋಣ ಇವತ್ತು ಭಾನುವಾರ ಸದ್ಯಕ್ಕೆ ಬಂದಿಯಲ್ಲ. ಇವತ್ತು ಕೋಟೆಯೊಳಗೆ ಜಗ್ಗಽಽ ಮಾತನಾಡೋಣ, ಸರ್ವದಾ ತನ್ನ ಹದಿನೈದು ದಿನಗಳ ಒಂಟಿತನಕ್ಕೆ ಒಮ್ಮೆಲೇ ಖುಷಿ ಸುರಿಯಬೇಕೆಂದಳು. ಅವನು ಮಾತಿಲ್ಲದೇ ಒಳಗೆ ಬಂದು ಕುಳಿತನು, ಅವಳು ಚಹಾ ತಯಾರು ಮಾಡಲು ಒಳಗೆದ್ದು ಹೋದಳು ಸಣ್ಣಗೆ ಯಾವುದೋ, ರಾಗ ಗುಣುಗುಡುತ್ತಲೇ ಚಹಾ ತಯಾರಿಸಿದಳು.

ಹುಡುಗ ಮನೆಯಲ್ಲಿ ಏನೂ ಹೇಳಲಿಲ್ಲ. ಆ ಸಂಜೆ ಅವರು ಸಯ್ಯದ ಬಾದಷಹನ ಗುಡ್ಡದ ಒಳಗಿನ ಕೋಟೆಯನ್ನು ತುಸು ಅವಸರದಲ್ಲಿ ಹತ್ತಿದ್ದರು. ಅವನ ಮುಖ ವ್ಯಗ್ರವಾಗಿತ್ತು. ಅವನು ಗೊಂದಲದಲ್ಲಿದ್ದ. ಅವಳು ಅವನಾಗಿ ಮಾತನಾಡಲಿ ಅಂತ ಸುಮ್ಮನ್ನಿದ್ದಳು. ಅವಳಿಗೆ ಅವನ ಮೇಲೆ ಹೆಮ್ಮೆ ಇತ್ತು. ಎಷ್ಟೊಂದು ವೈಚಾರಿಕ ಪ್ರಜ್ಞೆ ಬೆಳೆಸಿಕೊಂಡಿದ್ದಾನೆ. ಅದೂ ಶಾಲೆಗೆ ಹೋಗದೇ ಬದುಕಿನ ಬಗ್ಗೆ ಎಷ್ಟೊಂದು ಹೋರಾಟ, ಪ್ರಾಮಾಣಿಕ ಹೋರಾಟ ಅವನದು ಎಂದು ಮುಂದೆ ಒಂದು ದಿವಸ ಒಬ್ಬ ಒಳ್ಳೆಯ ಬರಹಗಾರನಾಗುತ್ತಾನೆ ಅವನು ಎಂದು ಅವಳು ಕನಸುಕಂಡಿದ್ದಳು. ಅವರು ಶಿವಪ್ಪಯ್ಯ-ಬಾದಷಹನ ಗದ್ದುಗೆ ಎದುರಿಗಿದ್ದ ಕಟ್ಟೆಯ ಮೇಲೆ ಕುಳಿತರು.

ಅವನು ಕುದಿಯುತ್ತ ಹೇಳಿದ “ಸುಡುಗಾಡು ಹೊಟ್ಟಿರೀ ಖೊಟ್ಟಿ ರೊಕ್ಕರೀ, ಮಾಡಬಾರದ್ದನ್ನು ಮಾಡಸ್ತದರೀ, ಯಾರೂ ಓದದ ನೋಡದ ಪುಸ್ತಕಗಳನ್ನು ಮಾರಾಟ ಮಾಡುವಾಗ ಪೋಲೀಸರಿಗೆ ಸುಳಿವು ಸಿಕ್ಕು, ಬೇಡಿ ನಡು ಬಜಾರದಾಗ ಹಿಡಕೊಂಡ ಹೋದ್ರು, ಹದಿನೈದು ದಿವಸ ಜೇಲ್‌ನಾಗಿ ಇದ್ದನ್ರೀ ಸಾಕ್ಷಿ ೯೫ ಪುಸ್ತಕಗಳು ಸಿಕ್ಕಾವ್ರಿ, ಬೇಲ್ ಮೇಲೆ ಹೊರಗ ಬಂದೀನ್ರಿ ಮುಂದ ಹ್ಯಾಂಗರಿ” ಸರ್ವದಾ ತಣ್ಣಗಾದಳು. ಕತ್ತರಿಸಿದ ರೆಕ್ಕೆಗಳಿಂದ ಸಯ್ಯದಬಾದಷಹನ ಗುಡ್ಡದ ಮೇಲೆ ಶಾಂತಿ ಪಾರಿವಾಳ ಎಂದಿಗೂ ಹಾರುವುದಿಲ್ಲ ಅಂತ ಅವಳು ಮೂಕಳಾದಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂತರಂಗ
Next post ಬುರ್ಖಾ ಬಿಟ್ಟು ಹೊರಗೆ ಬಾರವ್ವ

ಸಣ್ಣ ಕತೆ

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಸಂಬಂಧ

    ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ… Read more…