ದೇವರೇ ಪಾರುಮಾಡಿದಿ ಕಂಡಿಯಾ

ದೇವರೇ ಪಾರುಮಾಡಿದಿ ಕಂಡಿಯಾ

“Life is as tedious as a twice-told tale”

ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು ತುಸು ಹೊರಬೀಸಾಗಿದ್ದು ಅದನ್ನು ವಾಯು ಸಂಚಾರಕ್ಕೆ ಅನುಕೂಲವಾಗಿರುವಂತೆ ಕಟ್ಟಿದ್ದರು. ಮನೆಯ ಸುತ್ತಲು ಚಿಕ್ಕದಾಗಿರುವದೊಂದು ಹೂದೋಟವೂ ಇತ್ತು.

ಆ ದಿವಸ ಮನೆಯಲ್ಲಿ ವಿಲಕ್ಷಣವಾದ ಸ್ತಬ್ಧತೆಯು ಕಂಡು ಬರುತ್ತಿತ್ತು. ಮನೆಯವರೆಲ್ಲರೂ ತಮ್ಮ ತಮ್ಮ ಕೆಲಸವನ್ನು ಮುಂದಿಟ್ಟು ಕೊಂಡಿದ್ದರೂ ಅದನ್ನು ಮಾಡಲರಿಯದೆ ಚಿಂತಾಕ್ರಾಂತರಾಗಿ ಅಲ್ಲಲ್ಲಿ ಕುಳಿತಿದ್ದರು. ತಂದು ಬಂದು ಹಾಕುವವನಾದ ಮನೆಯ ಯಜಮಾನನೇ ವ್ಯಾಧಿಗ್ರಸ್ತನಾಗಿ ಬಿದ್ದಲ್ಲಿಯೇ ಬಿದ್ದು ಕೊಂಡಿದ್ದನು. ಎಂಟು ದಿವಸದಿಂದ ಅವನಿಗೆ ಈ ಕಡೆಯ ಪ್ರಜ್ಞೆಯೇ ಇದ್ದಿಲ್ಲ.

ಚಿಂತೋಪಂತನ ಸೋದರತ್ತೆಯ ಮಗಳಾದ ಅನ್ನಪೂರ್ಣೆಯು ವ್ಯಾಧಿತನಿಗೆ ಶುಶ್ರೂಷೆ ಮಾಡುವದಕ್ಕಾಗಿ ಬಳಿಯಲ್ಲಿ ಕುಳಿತುಕೊಂಡಿದ್ದಳು. ಅನಾಥ ಬಾಲಿಕಾಶ್ರಮದಲ್ಲಿದ್ದುಕೊಂಡು ಅನ್ನಪೂರ್ಣೆಯು ವ್ಯಾಧಿತರಿಗೆ ಆರೈಕೆ ಮಾಡುವ ವಿದ್ಯೆಯನ್ನು ಕಲಿತಿದ್ದಳು. ಏಕಾಕಿನಿಯಾಗಿ ಬಹಳೊತ್ತು ಕಾದು ಕುಳಿತ ಶ್ರಮಕ್ಕಾಗಿಯೂ, ವ್ಯಾಧಿತನ ದುರವಸ್ಥೆಯನ್ನು ಕಂಡು ಕೊಂಡದ್ದಕ್ಕಾಗಿಯೂ ಅನ್ನಪೂರ್ಣೆಯು ಉದ್ವಿಗ್ನಳಾಗಿದ್ದಳು.

ಆಕಸ್ಮಾತ್ತಾಗಿ ಚಿಂತೋಪಂತನು ತನ್ನ ವಿಶಾಲವಾದ ಕಣ್ತೆರೆದು ನೋಡಿದನು. ಕೋಣೆಯಲ್ಲಿ ಮೃದುಲಾಂಗಿಯಾದ ಅನ್ನಪೂರ್ಣೆಯು ತಕ್ಕ ಮಟ್ಟಿಗೆ ಸುಂದರವಾಗಿರುವ ತನ್ನ ಮೊಗದಲ್ಲಿ ಚಿಂತೆಯನ್ನಾಂತು ಗಲ್ಲದ ಮೇಲೆ ಕೈಯಿಟ್ಟು ಕೊಂಡು ಕುಳಿತಿದ್ದಳು.

“ಹೊತ್ತಾದಂತೆ ಕಾಣುತ್ತದೆ! ಹತ್ತರ ಗಾಡಿಗೆ ನಾನು ಹುಬ್ಬಳ್ಳಿಗೆ ಹೋಗಲೇಬೇಕು” ಎಂದು ಬಡಬಡಿಸಿ ಚಿಂತೋಪಂತನು ಎದ್ದು ಕೂಡಲಿಕ್ಕೆ ಹೋದನು. ಚಾಚಿದ ಕೈ ಎಳಕೊಳ್ಳಲಿಕ್ಕೆ ಅಸಮರ್ಥನಾಗಿರುವನಾದ ಆ ಬೇನೆಯವನು ಏಳಲರಿಯದೆ ನರಳುತ್ತೆ ಅಂದದ್ದು: “ಯಾರಲ್ಲಿ? ನನ್ನನ್ನು ಎಬ್ಬಿಸಬಾರದೆ? ಹತ್ತರ ಗಾಡಿ ತಪ್ಪಿದರೆ ಕಚೇರಿಯ ಕೆಲಸವೆಲ್ಲ ಕೆಟ್ಟು ಹೋಗುವದು. ಕಲ್ಲನಗೌಡರು ರಜೆಯ ಮೇಲೆ ಹೋಗಿದ್ದಾರೆ. ಉಳಿದವರು ಸಂಬಳ ತೆಗೆದುಕೊಳ್ಳಲಿಕ್ಕೆ ಮಾತ್ರ ಇದ್ದಾರೆ. ನಾನು ಹೋಗಲೇಬೇಕು.”

ಅನ್ನಪೂರ್ಣೆಯು ಮೆಲ್ಲನೆದ್ದು “ಬೇನೆ ಬಂದಾಗ ಕಚೇರಿಯ ಮಾತೇಕೆ? ನೆಟ್ಟಗಾಗಲಿ; ಕಚೇರಿಗೆ ಹೋಗುವಿರಂತೆ, ಬಹಳ ಮಾತಾಡಿ ಆಯಾಸ ಮಾಡಿಕೊಳ್ಳಬೇಡಿರಿ” ಎಂದು ಸದಯಾಂತಃಕರಣದಿಂದ ನುಡಿದಳು.

“ಬೇನೆ! ಯಾತರ ಬೇನೆ? ಯಾವಾಗಿನಿಂದ ಬೇನೆಬಿದ್ದಿರುವೆನು?”

“ಎಂಟಾನೆಂಟು ದಿವಸ ಮೈ ಮೇಲೆ ಎಚ್ಚರಿಕೆಯಿಲ್ಲದೆ ಮಲಗಿ ಕೊಂಡಿರುವಿರಿ! ಮಾತಾಡಬೇಡಿರೆಂದು ನಾನು ಹೇಳಲಿಲ್ಲವೆ? ಆಯಾಸ ಮಾಡಿಕೊಳ್ಳುತ್ತೀರಿ” ಎಂದು ಚಿಂತೋಪಂತನ ಮುಖವನ್ನು ನೋಡುತ್ತೆ ಅನ್ನಪೂರ್ಣೆಯು ನುಡಿದಳು.

“ಯಾರು! ನೀನು ಅನ್ನಪೂರ್ಣೆಯೇನು?”

“ಬಹಳ ಮಾತಾಡಬಾರದೆಂದು ಡಾಕ್ಟರರು ಶಾಸನಮಾಡಿರುವರು. ಕಣ್ಣು ಮುಚ್ಚಿಕೊಂಡು ಮಲಗಿರಿ” ಎಂದು ಹೇಳಿ ಅನ್ನಪೂರ್ಣೆಯು ಚಿಂತೋಪಂತನಿಗೆ ಔಷಧವನ್ನು ಕುಡಿಸಿ ಅವನ ತಲೆದಿಂಬು ಸರಿಮಾಡಿಟ್ಟು ಮೈ ತುಂಬ ಚೆನ್ನಾಗಿ ಹೊದಿಸಿದಳು.

ಕಣ್ಣು ಮುಚ್ಚಿಕೊಂಡು ಮಲಗಿದರೂ ಚಿಂತೋಪಂತನು “ಎಂಟಾನೆಂಟು ದಿವಸ ಎಚ್ಚರವಿಲ್ಲದೆ ಇದ್ದೇನೇ? ನನಗೆ ತಿಳಿಯದೆ ನಾನೆಂತು ಆಸ್ವಸ್ಥನಾದೆನೋ ಏನೋ! ಚಮತ್ಕಾರವೇ!!” ಎಂದು ಅವನು ಆಲೋಚಿಸಲಾಗಿ ಅವನ ನಿದ್ದೆಯು ಹಿಂದಾಯಿತು. ಅವನ ಮಿದುಳು ವಿಚಾರಗ್ರಹಣಕ್ಕೆ ಅಕ್ಷಮವಾಗಿದ್ದರೂ ಸಂಸಾರತಾಪದ ವಿವಿಧವಾದ ದುಃಸಂಗತಿಗಳು ಅವನ ಹೃದಯದಲ್ಲಿ ಸುತ್ತಾಡಿದ್ದರಿಂದ ದುಃಖಸಂತಪ್ತನಾಗಿ ಕಣ್ಣಿಗೆ ನೀರುತಂದನು. ಸಂಸಾರದಲ್ಲಿ ಅವನಿಗೆ ತಿಲಮಾತ್ರವೂ ಸುಖವಿರಲಿಲ್ಲ. ಅದರ ಭಾರವನ್ನು ಮಾತ್ರ ಅವನಿಗೆ ಅವ್ಯಾಹತವಾಗಿ ಹೊರಬೇಕಾಗಿತ್ತು.

ಚಿಂತೋಪಂತನು ಹದಿನೆಂಟು ವರುಷದವನಿದ್ದಾಗ ಅವನ ತಂದೆಯು ಒಂದು ಹೆಣ್ಣು ತೆಗೆದು ಮದುವೆ ಮಾಡಿದ್ದನು. ಅವನ ಮನಸ್ಸಿನಲ್ಲಿ ಬೇರೊಬ್ಬ ಅಭಿನವಸುಂದರಿಯನ್ನು ಮದುವೆ ಮಾಡಿಕೊಳ್ಳಬೇಕೆಂದಿತ್ತು. ಆದರೆ ಲಜ್ಜೆಗೂ ಜನರೂಢಿಗೂ ದುರಾಗ್ರಹಿಯಾದ ತಂದೆಯ ಅಂಜಿಕೆಗೂ ಅವನು ಈಡಾಗಿ ತನ್ನ ಮನೋಗತವನ್ನು ವ್ಯಕ್ತಪಡಿಸದಲೆ ಕಲ್ಲುಕಟ್ಟಿಕೊಂಡು ಭವಾರ್ಣವದಲ್ಲಿ ಈಸುಬಿದ್ದು ಬಿಟ್ಟನು.

ತಂದೆ ತೀರಿಕೊಂಡ ಬಳಿಕ ಚಿಂತೋಪಂತನು ಸದರ್‍ನ್ ಮರಾಠಾ, ರೇಲ್ವೆಯ ಮಾರ್ಗವನ್ನು ಮಾಡತಕ್ಕವನಾದ ಸರ್ ಟೀ. ಟಾಮ್ ಸನ್ ನೆಂಬ ಕಂತ್ರಾಟಗಾರನ ಕೈ ಕೆಳಗೆ ಒಂದು ಚಾಕರಿಯನ್ನು ಸಂಪಾದಿಸಿಕೊಂಡು ಅಂದಿನಿಂದ ಸಪ್ತಾಪುರದಲ್ಲಿ ಮನೆಮಾಡಿಕೊಂಡಿದ್ದನು. ಚಿಂತೋಪಂತನ ಹೆಂಡತಿಯ ಹೆಸರು ಸುಶೀಲೆಯು, ಹೆಸರು ದಂಡ! ಅವಳು ಜಾತ್ಯಾ ದುಃಶೀಲೆಯಾಗಿದ್ದು ಮೇಲೆ ತಾಯಿಯ ಕಲಿಕೆ. ಕೇಳುವದೇನು ? ಸೊಸೆಮುದ್ದು ಮನೆಯಲ್ಲಿ ಕಾಲಿಟ್ಟ ಕ್ಷಣದಿಂದ ಅತ್ತೆಯೊಡನೆ ಹುರ್ರೆಂದು ಜಗಳಕ್ಕೆ ಪ್ರಾರಂಭ ಮಾಡಿದಳು. ಚಿಂತೋಪಂತನು ಸೌಮ್ಯ ಸ್ವಭಾವದವನೂ ಸುಶೀಲನೂ ಆಗಿದ್ದನು. ಸಂಸಾರ ಸುಖದ ಹೊಸ ಭರತಿಯಲ್ಲಿ ಮನೆಯ ಕಲಾಪವನ್ನು ಅವನು ಮೈಗೆ ಹಚ್ಚಿಕೊಳ್ಳಲಿಲ್ಲ.

ಸುಶೀಲೆಯು ಬೇಗ ಬೇಗನೆ ಇಬ್ಬರು ಗಂಡುಮಕ್ಕಳನ್ನು ಹಡೆದಳು. ತಾಯಿ ಮುದುಕೆ, ಹೆಂಡತಿಯು ಕೂಸಿನ ತಾಯಿ! ಹೀಗಾಗಿ ಸಮಯಕ್ಕೆ ಊಟವಿಲ್ಲ; ದುಡಿದು ದಣಿದು ಮನೆಗೆ ಬರುವದರೊಳಗಿಯೇ ಅತ್ತೆ-ಸೊಸೆಯರು ಭೋರೆಂದು ಕಾದುತ್ತಿರುವರು. ಹೆಂಡರಾಡುವ ನಾಲ್ಕು ಸವಿ ಮಾತುಗಳು ಕೂಡ, ಪಾಪ, ಚಿಂತೋಪಂತನ ಕಿವಿಗೆ ಬೀಳುತ್ತಿದ್ದಿಲ್ಲ.

“ಪುಣ್ಯವಂತಿಯರು ಮುನಸೀಫ ಮಾಮಲೇದಾರರ ಹೆಂಡಿರಾಗಿ ಐಶ್ವರ್‍ಯದಲ್ಲಿ ಲೋಲಾಡುತ್ತಿರುವರು; ನನ್ನ ದೈವಕ್ಕೆ ಈ ಹತ್ತು ಗಂಟೆಯ ಅಡಿಗೆ ಮಾಡಿ ನೀರು ಹೊತ್ತು ಹೊತ್ತು ಸಾಯುವದು ಪ್ರಾಪ್ತವಾಯಿತು! ಮೇಲೆ ಇಂಥ ಅತ್ತೆಯ ಕಿಟಿಕಿಟಿ!” ಎಂದು ಕಂಡದ್ದನ್ನೆಲ್ಲ ಎಡವುತ್ತೆ ಪಾತ್ರೆಗಳನ್ನು ಇಕ್ಕರಿಸುತ್ತಿರುವ ಹೆಂಡತಿಯನ್ನು ನೋಡಿ ಚಿಂತೋಪಂತನಿಗೆ ಎಷ್ಟಾದರೂ ವ್ಯಸನವಾಗುತ್ತಿರಬಹುದು! ತನ್ನ ಮನಸ್ಸಿಗೆ ಬಂದಿದ್ದ ಗುಣಸಂಪನ್ನೆಯಾದ ಸುಂದರಿಯು ತನ್ನ ಹೆಂಡತಿಯಾಗಲಿಲ್ಲೆಂಬ ಚಿಂತೆಯು ಅವನ ಮನಸ್ಸಿನಲ್ಲಿ ಹೆಚ್ಚಾಗಿ ಕಟೆಯದಿರುವದೆ? ಮೇಲಾಗಿ ಆ ಸುಚರಿತೆಯು ವಿಧವೆಯಾಗಿ ಜಗತ್ತಿನಲ್ಲಿ ಕಣ್ಣು ಕಟ್ಟಿ ಬಿಟ್ಟವರಂತೆ ಆಧಾರಹೀನಳಾದ ಸಂಗತಿಯಾದರೂ ಅವನ ವ್ಯಸನಕ್ಕೆ ಕಾರಣವಾಗಿತ್ತು.

ಚಿಂತೋಪಂತನು ಸುಶೀಲನೂ ಸಮಾಧಾನವುಳ್ಳ ವೃತ್ತಿಯವನೂ ಆಗಿದ್ದರಿಂದ ಬಂದದ್ದನ್ನೆಲ್ಲ ನುಂಗಿಕೊಂಡಿದ್ದನು. ಆದರೂ ಅವನ ಮುಂದೆ ಬಡಿಸಿಟ್ಟ ದುಃಖದ ಎಡೆಯು ಸವೆಯಲೊಲ್ಲದು.

ಲೋಹಮಾರ್ಗದ ರಚನೆಯು ಮುಗಿದು ಹೊಗೆಬಂಡಿಗಳು ಓಡಾಡ ಹತ್ತಿದ ಬಳಿಕ ಚಿಂತೋಪಂತನು ಹುಬ್ಬಳ್ಳಿಯಲ್ಲಿಯ ಒಂದು ರೇಲ್ವೆ ಆಫೀಸದ ಹೆಡ್‌ಕ್ಲಾರ್ಕನಾದನು. ದಿನಾಲು ಧಾರವಾಡದಿಂದ ಹುಬ್ಬಳ್ಳಿಗೆ ಹತ್ತು ಗಂಟೆಗೆ ಹೋಗಿ ಸಂಜೆಯ ಐದಕ್ಕೆ ಮನೆಗೆ ಬರುವನು. ಆಂತಃಕರಣದ ತಾಯಿಯು ತೀರಿಕೊಂಡದ್ದರಿಂದ ಹೆಂಡತಿಯ ತಾಪವು ಅವನಿಗೆ ಅಧಿಕವಾಗಿ ತೋರಿತು. ಸಿದ್ದೂ, ಗಣು ಎಂಬ ಅವರಿಬ್ಬರು ಮಕ್ಕಳು ಸಾಲೆ ಬಿಟ್ಟು ಮನೆ ಮೂಳರಾಗಿ ಕುಳಿತರು.

ತಂದೆಯು ನೂರು ರೂಪಾಯಿ ಸಂಬಳವುಳ್ಳ ಅಧಿಕಾರಿಯಿರುವನೆಂಬ ಹೆಮ್ಮೆಯಿಂದಲೂ, ತಾಯಿಯ ಮೈ ಮೇಲಿರುವ ಮೂರು ನಾಲ್ಕು ಸೇರು ಬಂಗಾರದ ದೀಪ್ತಿಯಿಂದಲೂ ಸಿದ್ದೇಶ್ವರನ ತಲೆ ತಿರುಗಿ ಹೋಗಿದ್ದರಿಂದ ಅವನು ಉದ್ದಾಮನಾಗಿ ವರ್ತಿಸುತ್ತಿದ್ದನು. ಚಿಕ್ಕವನು ವೇಶ್ಯಾಗೃಹಸಂಚಾರಿಗಳಾದ ರಾವಸಾಹೇಬರ ಅನುಯಾಯಿಯಾಗಿ ತಂಬಾಕಚರ್ವಣ ಧೂಮ್ರಪಾನಗಳ ವ್ಯಸನವನ್ನು ತಗಲಿಸಿಕೊಂಡು ಸುಲಿದ ಬಡಿಗೆಯಂತೆ ಕ್ಷೀಣನಾಗಿದ್ದನು. ಅಹೋರಾತ್ರಿ ನಾಟಕದ ಪದಗಳನ್ನು ಕೇಳಿದವರ ಕಿವಿ ಕೀಸರಾಗುವಂತೆ ಅಪದ್ಧವಾಗಿ ಹಾಡುವನು. ವೇಶ್ಯಾ ಜನರ ಸೇವೆಯಲ್ಲಿ ನಿರತನಾಗಿದ್ದ ಗಣಪತಿಗೆ ಮನೆಯ ಅರಿವೇ ಇದ್ದಿಲ್ಲ.

ಸಿದ್ದೇಶ್ವರನು ಅಕ್ಷರಸ್ಥನಾಗಿದ್ದುದರಿಂದ ಅವನ ತಂದೆಯು ಹುಬ್ಬಳ್ಳಿಯ ಗಿರಣಿಯಲ್ಲಿ ಒಂದು ಚಾಕರಿ ಕೊಡಿಸಿದ್ದನು. ಆದರೆ ಉನ್ಮತ್ತನಾದ ಆ ಪೋರನಿಗೂ ಗಿರಣಿಯ ವ್ಯವಸ್ಥಾಪಕನಿಗೂ ಕೂಡಿ ಬರಲಿಲ್ಲಾದ್ದರಿಂದ ಅವನು ವರ್ತಮಾನಪತ್ರಗಳ ಲೇಖಕನಾಗುವ ಯತ್ನದಲ್ಲಿರುವೆನೆಂದು ತಂದೆ ತಾಯಿಗಳಿಗೆ ಹೇಳಿ ಕಾಗದ ಮಸಿಗಳಿಗೆ ಕಾಳರೂಪಿಯಾದನು. ಕಡೆಗೆ ಅವಿಚಾರಿಗಳಾದ ಮಕ್ಕಳನ್ನು ಕಂಡರೆ ತಂದೆಗೆ ಆಗುತ್ತಿದ್ದಿಲ್ಲ. ತಂದೆಯ ಸಮಕ್ಷದಲ್ಲಿ ಕುಳಿತು ಉಣ್ಣಲಿಕ್ಕೆ ಮಕ್ಕಳಿಗೆ ಮನಸ್ಸಾಗುತ್ತಿದ್ದಿಲ್ಲ.

ಚಿಂತೋಪಂತನಿಗೆ ನಿತ್ಯದಲ್ಲಿಯೂ ಒಂದೇ ಪ್ರಕಾರದ ತಾಪಗಳು, ಅದೇ ಊಟದ ಅನಾನುಕೂಲತೆ, ಅದೇ ಗಾಡಿಯ ಅವಸರ; ನಿರಂತರವಾದ ಕಚೇರಿಯ ಕೆಲಸದ ತಾಪ, ಮಕ್ಕಳ ಅವಿಚ್ಛಿನ್ನವಾದ ದುರ್‍ವ್ಯಾಪಾರ. ಚಿಂತೋಪಂತನೆಂದೇ ಅವುಗಳನ್ನು ಅನುಭವಿಸುತ್ತಿದ್ದನೆ ಹೊರತಾಗಿ ಮತ್ತೊಬ್ಬನಾಗಿದ್ದರೆ ಉರುಲು ಹಾಕಿಕೊಳ್ಳುವ ಮಾತು.

ಮುನಸಿಪಲ್ ಇಲೆಕ್ಶನ್ನದ ಗಡಿಬಿಡಿಯ ಮೂಲಕ ಒಂದು ದಿವಸ ಚಿಂತೊಪಂತನಿಗೆ ಸ್ಟೇಶನಕ್ಕೆ ಹೋಗಲಿಕ್ಕೆ ‘ಟಾಂಗೆ’ ಸಿಗಲಿಲ್ಲ. ಹೊಟ್ಟೆಯಲ್ಲಿ ಕೂಳು ತುಂಬಿಕೊಂಡು ಅವನು ನಡೆಯುತ್ತ ಸ್ಟೇಶನಕ್ಕೆ ಹೊರಟನು. ಕರ್ಮಧರ್ಮ ಸಂಯೋಗದಿಂದ ಮಾರ್ಗದಲ್ಲಿ ಒಳಿತಾಗಿ ಮಳೆ ಹೊಡೆಯಿತು. ತೋಯಿಸಿಕೊಂಡು ಚಿಂತೋಪಂತನು ಕಚೇರಿಗೆ ಹೋದವನು ಸಂಜೆಗೆ ಜ್ವರತಕ್ಕೊಂಡೇ ಮನೆಗೆ ಬಂದನು.

ಮೇಲೆ ವಿವರಿಸಿದಂಥ ಅಸಹ್ಯವಾದ ಸಂಸಾರ ತಾಪಗಳನ್ನು ನೆನೆದು ಚಿಂತೋಪಂತನು ವ್ಯಾಕುಲನಾಗಿ ಆಗಾಗ್ಗೆ ಬಾಯಲ್ಲಿ ಏನೋ ಒಟಗುಡುತ್ತಿದ್ದನು. ಅನ್ನಪೂರ್ಣೆಯು ಅವನ ಬಾಯಿ ಸಪ್ಪಳವನ್ನು ಬಹಳ ಹೊತ್ತು ಕೇಳಿ ಮೆಲ್ಲನೆ ಮುಸುಕು ತೆಗೆದು ನೋಡಿದಳು. ಹೃದಯದಲ್ಲಿ ಕಲ್ಲೋಲವನ್ನುಂಟುಮಾಡುವ ವಿಚಾರಗಳ ನಿರ್ಭರಕ್ಕಾಗಿ ಪಾಪ, ಆ ರೋಗಿಯು ಆಯಾಸ ಹೊಂದಿದ್ದನು. ಮೈಯೆಲ್ಲ ಜೋರೆಂದು ಬೆವತಿತ್ತು. ಹಿತೈಷಿಣಿಯಾದ ಅನ್ನಪೂರ್ಣೆಯು ಚಿಂತೋಪಂತನ ದುಃಸ್ಥಿತಿಯನ್ನು ಕಂಡು ಒಳಿತಾಗಿ ಉಸುರ್ಗರೆದು ಜೋಕೆಯಿಂದ ಅವನ ಬೆವರೊರಿಸಿ ತನ್ನ ಸೆರಗಿನಿಂದ ಮೆಲ್ಲನೆ ಗಾಳಿ ಹಾಕಿದಳು. ತುಸು ಹೊತ್ತಿನಲ್ಲಿ ಅವನಿಗೆ ನಿದ್ದೆ ಹತ್ತಿತು.

ವಿಕಾರವಶತೆಯಿಂದುಂಟಾದ ಆಯಾಸಕ್ಕಾಗಿ ರೋಗಿಯು ಹೆಚ್ಚಿಗೆ ಕ್ಷೀಣನಾದನು. ನಿನ್ನಿಗಿಂತಲೂ ಈ ದಿವಸದ ಸ್ಥಿತಿಯು ಕೆಟ್ಟದ್ದು. ಡಾಕ್ಟರ ಮಂಗೇಶರಾಯರು ರೋಗಿಯ ನಾಡೀ ಪರೀಕ್ಷೆ ಮಾಡಿ ಅನ್ನಪೂರ್ಣೆಯನ್ನು ಕುರಿತು “ಕಠಿಣವಿದೆ” ಎಂದು ಹೇಳಿದರು.

“ಏನಾಯಿತು?” ಎಂದು ಅನ್ನಪೂರ್ಣೆಯು ದ್ರವಹಾರಿ ಕೇಳಿದಳು.

“ತೀರ ನಿಕ್ಕಳಿಕೆಗೆ ಬಿದ್ದಿದ್ದಾರೆ. ಏನಾಗುತ್ತದೆಯೋ ಹೇಳಲಾಗದು.”

“ಈ ಸಮಾಚಾರವನ್ನು ಸುಶೀಲಾಬಾಯಿಯವರಿಗೆ ತಿಳಿಸಲೆ?” ಎಂದು ಅನ್ನಪೂರ್ಣೆಯು ಕಣ್ಣು ತುಂಬಾ ನೀರು ತಂದು ಕೇಳಿದಳು.

“ಉಪಾಯವೇ ಇಲ್ಲ, ತಿಳಿಸಬಹುದು?” ಎಂದು ಹೇಳಿ ಡಾಕ್ಟರರು ಅನಿರ್ವಾಹಕ್ಕಾಗಿ ಕೆಲವು ಔಷಧಗಳನ್ನು ಕೊಟ್ಟು ಹೊರಟುಹೋದರು.

“ನಿಕ್ಕಳಿಕೆ” “ಸುಶೀಲಾಬಾಯಿಗೆ ತಿಳಿಸಲೆ?” “ಉಪಾಯವಿಲ್ಲ” ಮುಂತಾದ ಮೇಲಿನ ಸಂವಾದದಲ್ಲಿಯ ಶಬ್ದಗಳು ಚಿಂತೋಪಂತನ ಕಿವಿಗೆ ಬಿದ್ದು ಅವನಿಗೊಂದು ಪ್ರಕಾರದ ಚೇತನವು ಬಂದಂತಾಯಿತು.

“’ಸುಶೀಲಾಬಾಯಿಗೆ ತಿಳಿಸಲೆ’ ಯಾಕೆ ? ನಾನು ಔಷಧ ತೆಗೆದು ಕೊಳ್ಳುವದಿಲ್ಲವೆಂದು ತಿಳಿದು ಆ ಚಂಡಿಯನ್ನು ನನ್ನ ಮುಂದೆ ತಂದು ನಿಲ್ಲಿಸುವಿರೇನು ಮತ್ತೆ?” ಎಂದು ವಿಚಾರಿಸಿ ಅವನು ತುಸು ಹೆದರಿದನು.

“ಉಪಾಯವಿಲ್ಲವೇಕೆಂದರು? ನಾನು ಸಾಯುವೆನೇನು? ‘ಮರಣಂ ಪ್ರಕೃತಿಃ ಶರೀರಿಣಾಂ’ ಎಂಬ ಮಾತು ಸತ್ಯವಿರಲಿ ಇರದಿರಲಿ, ‘ವಿಕೃತಿರ್‍ಜೀ ವಿತಮುಚ್ಯತೇ ಬುಧೈಃ’ ಎಂಬದು ಮಾತ್ರ ಸರ್ವಾಂಶಗಳಲ್ಲಿ ಸತ್ಯವು, ಆಃಹಾ, ಈ ಸಮಯದಲ್ಲಿ ಮರಣ ಬಂದರೆ ನಾನು ಗೆದ್ದೆನಲ್ಲವೆ?” ಎಂದು ಅವನು ಮೆಲ್ಲನೆ ಉದ್ಘಾರ ತೆಗೆದು ಮತ್ತೆ ಕಣ್ಣು ಮುಚ್ಚಿದನು.

ತುಸು ಹೊತ್ತಿನ ಮೇಲೆ ಅನ್ನಪೂರ್ಣೆಯು ಅವನ ಕೈಹಿಡಿದು ನೋಡಿದಳು. ತುದಿ ಬೆರಳುಗಳು ತಣ್ಣಗಾಗಿದ್ದವು. ಅವಳ ಕೋಮಲವಾದ ಹಸ್ತ ಸ್ಪರ್ಶದಿಂದ ಚಿಂತೋಪಂತನಿಗೆ ತುಸು ಎಚ್ಚರ ಬಂದಂತಾಗಿ ನಾನು ಸಾಯುವೆನೇನು?” ಎಂದು ಅನ್ನಪೂರ್ಣೆಯ ಮುಖವನ್ನು ನೋಡಿ ಕೇಳಿದನು.

“ಭರವಸವಿಲ್ಲವೆಂದು ಡಾಕ್ಟರರು ಹೇಳಿದ್ದಾರೆ” ಎಂದು ಅವಳು ಗದ್ಗದಿತಕಂಠೆಯಾಗಿ ಮೆಲ್ಲನೆ ಉಸುರಿದಳು.

“ದೀನದಯಾಳಾ, ಪಾರುಮಾಡಿದಿ ಕಂಡಿಯಾ!”

ಬದುಕುವ ಆಶೆಯಿಲ್ಲೆಂದು ಡಾಕ್ಟರರು ಹೇಳಿದ ಸಂಗತಿಯನ್ನು ಕೇಳಿ ಸುಶೀಲೆಯು ತನ್ನ ಮುತ್ತೈದೆತನವನ್ನು ನೆನೆದು ದುಃಖಿತಳಾದಳು. ಗಣಪತಿಯು ರಂಗಾಸಾನಿಗಾಗಿ ಕೊಯ್ದಿರುವ ಹೂವಿನ ಬುಟ್ಟಿಯನ್ನು ತೋಟದಲ್ಲಿಯೇ ಬಿಟ್ಟು ತಂದೆಯ ಬಳಿಗೆ ಬಂದನು, ಸಿದ್ದೇಶ್ವರನು ತಾನು ಬರೆದಿಟ್ಟ ಕಾಗದಗಳನ್ನು ಅವಸರದಿಂದ ಪಾಙ್ಕ್ತವಾಗಿ ಕೂಡಿಸತೊಡಗಿದನು.

ಹೆಂಡತಿಯ ಮಕ್ಕಳೂ ತನ್ನ ಬದಿಗೆ ಬಂದು ನಿಂತದ್ದು ಕಂಡು ಚಿಂತೋಪಂತನ ಮನಸ್ಸಿನಲ್ಲಿ ಅನೇಕ ಪ್ರಕಾರದ ವಿಕಾರಗಳು ಉದ್ಭವಿಸಿದವು. ಹೆಂಡತಿಯು ಮೇಲೆ ಅವನ ಪ್ರೇಮವು ವಿಶೇಷವಾಗಿ ಇಲ್ಲದಿದ್ದರೂ “ಧರ್‍ಮೇ ಚ ಅರ್‍ಥೇ ಚ ಕಾಮೇ ಚ ನಾತಿಚರಾಮಿ” ಎಂದು ತಾನು ಅವಳೊಡನೆ ಪ್ರತಿಜ್ಞೆ ಮಾಡಿದ್ದನ್ನು ಸರ್‍ವಥಾ ಅವನು ಉಲ್ಲಂಘಿಸಿದ್ದಿಲ್ಲ. ಆದರೂ ಸಂಸಾರದಲ್ಲಿ ತನಗೆ ಸುಖವಾಗಲಿಲ್ಲವೆಂದು ನೆನಿಸಿ ಅವನು ದುಃಖಿತನಾದನು. ಸಿದ್ದೇಶ್ವರನೂ ಗಣೇಶನೂ ಚಿಕ್ಕ ಮಕ್ಕಳಿದ್ದಾಗ ಅವರು ತನ್ನ ಅರಗಿಳಿಗಳೇ ಎಂದು ಅವನು ಅಕ್ಕರತೆಯನ್ನು ಹೊಂದಿದ್ದನು. ಅದೇ ಮಕ್ಕಳು ಈಗ ವ್ರಾತ್ಯರಾಗಿ ತಾವೂ ಸುಖಿಗಳಾಗಲಿಲ್ಲ, ತಂದೆಯಾದ ತನಗೂ ಸುಖ ಕೊಡಲಿಲ್ಲವೆಂದು ಕಂಡು ಸರ್ವಸಂಗ ಪರಿತ್ಯಾಗ ಮಾಡಿದ ಬಾವಾ ಬೈರಾಗಿಗಳ ಜೀವಿತವೇ ವಿಹಿತವಾದದ್ದೆಂದು ಅವರು ತಿಳಿದನು. ಹೆಂಡತಿಯು ದುಃಖದಿಂದ ಅಳುವುವದು ಕಂಡು ಅವನಂದದ್ದು :

“ಯಾಕೆ ಅಳುತ್ತೀ? ಸಾವು ಬಿಡಿಸುವವರಾರು? ನನ್ನ ಅವಸ್ಥೆ ಏನೆಂದು ಶೋಕಿಸಬೇಡ. ನನಗೆ, ಯಾವ ವ್ಯಥೆಯೂ ಇಲ್ಲ! ಸಮಾಧಾನವನ್ನು ತಾಳಬೇಕು. ಬೇರೆ ಮಾರ್ಗವೇ ಇಲ್ಲ.”

ಉಪಚಾರಕ್ಕಾಗಿ “ನಿಮ್ಮನ್ನು ಬಿಟ್ಟು ಹೇಗೆ ಸಾಯಲಿ!” ಎಂದೆನ್ನಬೇಕೆಂದು ಅವನು ಯೋಚಿಸಿದನು. ಆದರೆ ಸಾಯುವ ಸಮಯದಲ್ಲಿ ಸುಳ್ಳಾಡಲರಿಯದೆ ಅವನು ಹಲ್ಲಲ್ಲಿ ನಾಲಿಗೆ ಇಟ್ಟುಕೊಂಡು ಕುಳಿತನು.

“ಮುಂದೆ ನನ್ನ ಗತಿಯೇನು? ಸಿದ್ದೇಶ್ವರ ಗಣಪತಿಗಳಿಗೆ ಏನು ಹೇಳುತ್ತೀರಿ?” ಎಂದು ನಿಜವಾದ ದುಃಖದಿಂದ ಸುಶೀಲೆಯು ಕೇಳಿದಳು.

“ಗತಿಯೇನು! ಲಯಿಫ ಅಶ್ಯುರನ್ಸದ ೪ಂಂಂ ರೂಪಾಯಿಗಳು ಬರುವವು. ನಿನ್ನ ಮೇಲೆ ಬಂಗಾರವಿದೆ; ನಾವಿದ್ದ ಮನೆಯನ್ನು ಕೊಂಡು ಬಿಟ್ಟಿದ್ದೇನೆ, ಕೆಲಗೇರಿಯ ಗದ್ದೆಯಿಂದ ಹೊಟ್ಟೆಗೆ ಸಾಕಷ್ಟು ನೆಲ್ಲು ಬರುತ್ತದೆ. ಹೇಗಾದರೂ ಇರಿರಿ. ಹುಡುಗರು ಒಳ್ಳೆ ರೀತಿಯಿಂದ ನಡಕೊಂಡರೆ ಹೊಟ್ಟೆ ಬಟ್ಟೆಗೆ ಏನು ಕಡಿಮೆ?” ಎಂದು ನುಡಿದವನೇ ಮತ್ತೆ ಭ್ರಮ ಬಂದಂತಾಗಿ ಮಲಗಿದನು. ಇಷ್ಟಕ್ಕೆಯೇ ನಾಲಿಗೆ ಕುಂಠಿತವಾದದ್ದು ಕಂಡು ಇನ್ನೇನು ಮರಣವೇ ಬಂದಿತೆಂದು ನೆನೆದು ಅವನು ಒಳ್ಳೇ ಸಂತುಷ್ಟನಾಗಿ ಮಲಗಿದನು.

ಈಗ ಪ್ರಾಣವು ಹೋಗುತ್ತದೋ ಇನ್ನೊಂದು ಕ್ಷಣಕ್ಕೆ ಹೋಗುತ್ತದೋ ಎಂದು ಎಲ್ಲರೂ ಹೌಹಾರಿ ಕುಳಿತರು. ತೀರ್ಥ ಗಂಗಾಜಲಗಳ ಹನಿಗಳು ಕಷ್ಟದೊಂದಿಗೆ ಗಂಟಲಿನಲ್ಲಿ ಇಳಿದವು. ಹಾಗೂ ಹೀಗೂ ರಾತ್ರಿ ಪಾರಾಯಿತು. ಚಿಂತೋಪಂತನಿಗೆ ಮನೋಹರವಾದ ಕನಸು ಬಿದ್ದಂತಾಗಿ ಅವನು ಸುಖನಿದ್ರೆಗೈದಿದನೆಂದು ಹೇಳಬಹುದು.

ಮರುದಿವಸ ಶ್ವಾಸೋಚ್ಛ್ವಾಸವು ಸಮಾಧಾನಕರವಾಗಿ ನಡೆಯಿತು. ನಾಡಿಗಳು ಮೆಲ್ಲನೆ ಆಡಲಾರಂಭಿಸಿದವು. ಡಾಕ್ಟರರು ಚಿಂತೋಪಂತನ ಸರ್ವಾಂಗವನ್ನೆಲ್ಲ ಚೆನ್ನಾಗಿ ಪರೀಕ್ಷಿಸಿ “ಇನ್ನೇನು ಚಿಂತೆಯಿಲ್ಲ!” ಎಂದು ನಗೆಮೊಗವನ್ನು ತಾಳಿ ಹೇಳಿದರು.

ಸುಶೀಲೆಯು ಸಮಾಧಾನದ ಉಸುರ್ಗರೆದು “ನೋಡಿರಪ್ಪಾ ನೀವೇ ಹೊಟ್ಟೆಯಲ್ಲಿ ಹಾಕಿಕೊಳ್ಳಿರಿ!” ಎಂದು ಡಾಕ್ಟರರಿಗೆ ಹೇಳಿಕೊಂಡಳು.

“ಚಿಂತೇ ಬಿಡಿರಿ! ಮಾತ್ರ ನೀವು ಇಲ್ಲಿ ನಿಷ್ಕಾರಣವಾಗಿ ಗೊಂದಲ ಮಾಡಿ ಇವರ ನಿದ್ದೆ ಕೆಡಿಸಬೇಡಿರಿ. ಆದಷ್ಟು ನಿದ್ದೆ ಒಳ್ಳೇದು. ಶುಶ್ರೂಷೆಗೆ ಅನ್ನಪೂರ್ಣಾಬಾಯಿಯವರು ಒಬ್ಬರು ಮಾತ್ರ ಇರಲಿ, ನೀವೆಲ್ಲರೂ ನಿಮ್ಮ ಉದ್ಯೋಗಕ್ಕೆ ಹೆಣರಟುಹೋಗಿರಿ” ಎಂದು ಹೇಳಿ ಎಲ್ಲರನ್ನು ಕರಕೊಂಡು ಡಾಕ್ಟರರು ಹೊರಬಿದ್ದು ಹೋದರು.

ಬಹಳೊತ್ತಿನ ಮೇಲೆ ನಿದ್ರೆ ತಿಳಿದಂತಾಗಿ “ನಾನು ಸತ್ತೆನೇನು?” ಎಂದು ಚಿಂತೋಪಂತನು ಅರೆನಿದ್ದೆಯಲ್ಲಿ ಕೇಳಿದನು.

ಯಮಪಾಶವು ಸಡಿಲಾಗಿ ಕಳಚಿಬಿದ್ದುದರಿಂದಲೇ ಅವನ ಬಾಯಿಯಿಂದ ಶಬ್ದಗಳು ಹೊರಟವಷ್ಟೆ? ಚಿಂತೋಪಂತನ ವಿಲಕ್ಷಣವಾದ ಪ್ರಶ್ನವನ್ನು ಕೇಳಿ ಅನ್ನಪೂರ್ಣೆ, ವಿನೋದವಾಗಿ ಅವಳು ತುಸು ಕೇಳಬರುವಂತೆ ನಕ್ಕಳು. ತನ್ನ ಕನಸಿಗೂ ಆ ನಗೆಗೂ ಸಂಬಂಧವಿದ್ದಂತಾಗಿ ಚಿಂತೋಪಂತನು ಮೆಲ್ಲನೆ ಕಣ್ದೆರೆದು ನೋಡಿದನು.

“ಅನ್ನಪೂರ್ಣಾ ನೀನೆಂದು ಬಂದಿ? ನಿನ್ನೆ ಮೊನ್ನೆ ನಿನ್ನನ್ನು ಎಲ್ಲಿಯೊ ನೋಡಿದಂತಾಯಿತು.”

“ಮಾತಾಡಗೊಡಬಾರದೆಂದು ಡಾಕ್ಟರರು ಹೇಳಿದ್ದಾರೆ.” ಎಂದು ಅನ್ನಪೂರ್ಣೆಯು ಮಂದಸ್ಮಿತೆಯಾಗಿ ಹೇಳಿದಳು.

“ನಾನಿನ್ನು ಸಾಯಲಿಕ್ಕಿಲ್ಲೇನು?” ಎಂದು ಅವನು ಮತ್ತೆ ಕೇಳಿದನು.

“ಸಾವಿನ ಮಾತೇ ತೆಗೆಯಬೇಡಿರಿ. ಇಂದಿಗೆಂಟನೆಯ ದಿವಸ ನೀವೇ ಸಂಬಳ ತೆಗೆದುಕೊಳ್ಳಲಿಕ್ಕೆ ಹುಬ್ಬಳ್ಳಿಗೆ ಹೋಗುವಿರಿ. ಸದ್ಯಕ್ಕೆ ದಯಮಾಡಿ ಮಾತಾಡಬೇಡಿರಿ, ಕಣ್ಣು ಮುಚ್ಚಿಕೊಂಡು ನಿದ್ದೆ ಮಾಡಲಿಕ್ಕೆ ಯತ್ನಮಾಡಿರಿ.”

ಆಜ್ಞೆಯ ಮೇರೆಗೆ ಚಿಂತೋಪಂತನು ಕಣ್ಣು ಮುಚ್ಚಿದಂತೆ ಮಾಡಿದನು, ಆದರೆ ಅವು ಮುಚ್ಚಲೊಲ್ಲವು. ನಿಚ್ಚಳವಾಗಿ ಕಣ್ತೆರೆದು ಕೆಲಹೊತ್ತಿನವರೆಗೆ ಅವನು ಅಸಂಬದ್ಧವಾಗಿ ಬಡಬಡಿಸಿದಂತೆ ಮಾಡಿದನು. ಅನ್ನಪೂರ್ಣೆಯು ಅವನ ಮಾತುಗಳನ್ನು ತಡೆಯಲಿಲ್ಲ, ಅವನಿಗೆ ಉತ್ತರವನ್ನೂ ಕೊಡಲಿಲ್ಲ. ಅವನೇ ಮಾತಾಡಿ ದಣಿದು ಮತ್ತೆ ತುಸು ನಿದ್ದೆ ಮಾಡಿದನು. ಅರ್ಧಗಳಿಗೆಯಲ್ಲಿಯೇ ಮತ್ತವನು ಎಚ್ಚತ್ತು ಜೀವಕಳೆಯಿಂದ ಯುಕ್ತವಾದ ತನ್ನ ಕಣ್ಣು ತೆರೆದು ನೋಡಿದನು. ಅನ್ನಪೂರ್ಣೆಯು ಕೆಳಗೆ ಮೋರೆ ಮಾಡಿಕೊಂಡು ಕಾಲುಚೀಲವನ್ನು ಹೆಣೆಯುತ್ತೆ “ಹರಿ ಕೊಟ್ಟದ್ದುಂಡು ಇಟ್ಟಂತಿರೊದಲ್ಲದೆ | ಪರತೊಂದು ಬಯಸುವರೇ” ಎಂದು ಬಹು ಮೆಲ್ಲಗೆ ಮಂಜುಲವಾಗಿ ಹಾಡುತ್ತಿದ್ದಳು. ಆ ಸ್ವರದ ಸೊಂಪಿಗೆ ಚಿಂತೋಪಂತನ ಜೀವಕ್ಕೆ ಉತ್ಸಾಹ ಬಂದಂತಾಗಿ “ಪೂರ್ಣಾ, ನಾನಾಗಲೇ ಏನೇನೋ ಹುಚ್ಚನಂತೆ ಮಾತಾಡುತ್ತಿದ್ದೆನಲ್ಲವೆ?” ಎಂದು ಕೇಳಿದನು.

“ಆಹುದು! ಏನೇನೋ ಬಡ ಬಡಿಸುತ್ತಿದ್ದಿರಿ.” ಎಂದು ಅವಳು ಸುಳ್ಳಾಡಿದಳು. ನಿಜವಾಗಿ ಹೇಳಬೇಕಾದರೆ ಚಿಂತೋಪಂತನು ಬಡಬಡಿಸಲಿಲ್ಲ. ಎಚ್ಚರುಳ್ಳವನಾಗಿಯೇ ಮಾತಾಡಿದ್ದನು.

“ಆಡಬಾರದ್ದನ್ನು ಆಡಿದೆನೇನು?” ಎಂದು ಅವನು ಕಿಂಚಿತ್ ಪಶ್ಚಾತ್ತಾಪದಿಂದ ಕೇಳಿದನು.

“ಆಡಿದರೂ ಆಡಿರಬಹುದು! ಬೇನೆಯರಿವರೇನಾಡಿದರೂ ಅದನ್ನು ಲಕ್ಷಕ್ಕೆ ತರಕೂಡದೆಂಬದು ನಾವು ಕಲಿತ ಶುಶೂಷಾಶಾಸ್ತ್ರದ ನಿಯಮವು.” ಆದರೆ ಅನ್ನಪೂರ್ಣೆಯು ಅನಭಿಜ್ಞಳೇ ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೊಣೆ
Next post ನೀರು… ನೀರು… ನೀರು…

ಸಣ್ಣ ಕತೆ

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…