ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು.
“ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ ನಮ್ಮ ಬಡತನ ಹೋಗಿ ನಾವು ಸುಖವಾಗಿರಬಹುದಲ್ಲವೇ?” ಎನ್ನುತ್ತಿದಳು ನೀಲಾಂದ್ರಿ ದೇವಿ ಪತಿಯ ಬಳಿ.
ಪತಿ ಸಾಹುಗೆ ಕೂಡ ಅದೇ ನಂಬಿಕೆ ವಿಶ್ವಾಸವಿದ್ದು ಪತ್ನಿಗೆ “ಜರೂರ್ ಜರೂರ್, ನಾವು ಸುಖ ಶಾಂತಿಯಿಂದ ಇರುವುದಕ್ಕೆ ಸಮಯ ದೂರವಿಲ್ಲ” ಎಂದು ಸಮರ್ಥಿಸುತ್ತಿದ್ದರು.
ಕಿರಾಣಿ ಅಂಗಡಿಯನ್ನಿಟ್ಟುಕೊಂಡಿದ್ದ ಸಾಹು ಸಂಸಾರ ತೂಗಲು ಬಹಳ ಕಷ್ಟ ಪಡುತ್ತಿದ್ದ ಪತ್ನಿ ನಿಲಾಂದ್ರಿಯು ಅಕ್ಕಪಕ್ಕದವರಿಗೆ ಸಹಾಯ ಮಾಡಿ ನಾಲ್ಕು ಪುಡಿ ಕಾಸು ಸಂಪಾದಿಸಿ ತರಕಾರಿ ಖರೀದಿಸಲು ಉಪಯೋಗಿಸುತ್ತಿದ್ದಳು.
ದೊಡ್ಡ ಮಗನಿಗೆ ಈಗಾಗಲೆ ೨೫ ವರ್ಷವಾಗಿತ್ತು. ಅವನಿಗೆ ಹೋದ ವರ್ಷ ಮದುವೆ ಮಾಡಿದ ಮೇಲೆ ಹೆಂಡತಿಯೊಂದಿಗೆ ಕಲಕತ್ತಾದಲ್ಲಿ ವ್ಯಾಪಾರ ಮಾಡಲು ಹೊರಟುಹೋಗಿದ್ದ. ಎರಡನೆಯವನು ಈಗ ೨೩ ರ ಯುವಕನಾಗಿ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದ. ಇನ್ನು ನಾಲ್ಕು ಮಕ್ಕಳ ೨೦, ೧೮, ೧೬, ೧೪ ಇವರುಗಳಲ್ಲಿ ಇಬ್ಬರು ಅಜ್ಜಿ ತಾತನ ಹತ್ತಿರ ಹಳ್ಳಿಯಲ್ಲಿ ವ್ಯವಸಾಯಕ್ಕೆ ಸಹಾಯ ಮಾಡುತ್ತಿದ್ದರು. ಕೊನೆಯ ಇಬ್ಬರು ತಮ್ಮಂದಿರು ಕಲಕೊತ್ತಾದಲ್ಲಿ ಬಟ್ಟೆ ಅಂಗಡಿ ಇಟ್ಟಿದ್ದ ಅಣ್ಣನ ಹತ್ತಿರ ಸಹಾಯ ಮಾಡುತ್ತಾನೆರವಾಗಿದ್ದರು. ಅವರು ಎಸ್ ಎಸ್ ಎಲ್ ಸಿ ವರೆಗೆ ಓದಿ ವಿದ್ಯೆಗೆ ಶರಣು ಹೇಳಿದ್ದರು.
ಎರಡನೇಯ ಮಗ ಬೇನುಧರ್ ಮತ್ತು ಬಿಮಲಾ ಇವರ ಬಳಿ ಭುವನೇಶ್ವರದ ಹತ್ತಿರದ ಹಳ್ಳಿಕೆರೆಯಲ್ಲಿ ಇದ್ದರು. ಬೇನುಧರ್ ಕುಡಿಯುವ ಕೆಟ್ಟ ಚಾಳಿಗೆ ಬಿದ್ದು ಸಾಲ ಸೋಲ ಮಾಡಿಕೊಂಡು ಎಲ್ಲರೊಂದಿಗೆ ಜಗಳವಾಡುತ್ತಿದ್ದ.
“ಬೇನು, ನಿನ್ನ ಆರೋಗ್ಯ ಕೆಡತ್ತೆ. ಅಲ್ಲದೆ ಮನೆಯಲ್ಲಿ ಬಡತನವಿರುವಾಗ ಏಕೆ ಬರುವ ನಿನ್ನ ಸಂಬಳವನ್ನು ಕುಡಿಯುವುದಕ್ಕೆ ಹಾಕಿ ನಿನ್ನ ಜೀವನವನ್ನು ಹಾಳು ಮಾಡಿ ನಮಗೂ ದುಃಖ ಉಂಟುಮಾಡುತ್ತೀ?” ಎನ್ನುತ್ತಿದ್ದಳು ಮಮತೆ ಪ್ರೀತಿಯಿಂದ ತಾಯಿ ನಿಲಾಂದ್ರಿ ದೇವಿ.
“ಅತ್ತೆ, ಮಾವಗೆ ವಯಸ್ಸಾಗಿದೆ. ಮಾವನವರಿಗೆ ಕಾಯಿಲೆಗಳು ಬೇರೆ ಮನೆಮಾಡಿರುವಾಗ ಏಕೆ ಹೀಗೆ ದುಡ್ಡು ಹಾಳು ಮಾಡುತ್ತೀ?” ಎಂದು ಬಿಮಲಾದೇವಿ ನೆಪಮಾತ್ರಕ್ಕೆ ಗಂಡನನ್ನು ಕೇಳಿದಾಗ ಅವಳಿಗೆ ಅವಾಚ್ಯ ಶಬ್ದಗಳ ಅರ್ಚನೆ ಹೊಡೆತದ ಪ್ರಹಾರವೂ ಆಗುತ್ತಿತ್ತು.
ತಾಯಿ, ಹಾಗು ಯಜಮಾನನೆನಿಸಿದ ತಂದೆ ಸಾಹು ಕೂಡ ಮಗನನ್ನು ತಿದ್ದಲಾರದೆ ದಿನವೂ ಕಣ್ಣೀರು ಹಾಕುತ್ತಿದ್ದರು. ತನ್ನ ಸಂಸಾರ ಖರ್ಚು ಮುಗಿದು ಉಳಿದ ಹಣವನ್ನು ದೊಡ್ಡ ಮಗ ಕೊಲಕ್ಕತ್ತಾಯಿಂದ ಕಳಿಸುತ್ತಿದ್ದ.
ತಾಯಿ ನೀಲಾಂದ್ರಿ ಜೋಪಾನವಾಗಿ ದುಡ್ಡನ್ನು ಖರ್ಚುಮಾಡಿ ಸಂಸಾರವನ್ನು ನಿಭಾಯಿಸುತ್ತಿದ್ದಳು.
ಎಂಬತ್ತರ ಹೊಸಿಲಿಗೆ ಬರುತ್ತಿದ್ದ ಸಾಹುಗೆ ಈಗ ೭೯ ನಡೆಯುತಿತ್ತು. ಕಾಲಿನಲ್ಲಿ ಬಂದ ಒಂದು ಹುಣ್ಣು ಸಕ್ಕರೆ ಕಾಯಿಲೆಯಿಂದಾಗಿ ವಾಸಿಯಾಗದೆ ಬಹಳ ದಿನದಿಂದ ನರಳುತ್ತಿದ್ದರು. ಕಣ್ಣಿನಲ್ಲಿ ಚಾಳೀಸು ಬಂದು ಕಣ್ಣು ಕೂಡ ಮಸುಕಾಗಿತ್ತು.
ತಂದೆ ಓಡಾಡಲು ಆಗದೆ ಮಂಚ ಹಿಡಿದಾಗ ಬೇನುಧರನದೇ ಯಜಮಾನಿಕೆ ಆಗಿತ್ತು. ಅವನು ಒಂದು ಬಟ್ಟೆ ಮಿಲ್‌ನಲ್ಲಿ ಕೆಲಸಮಾಡುತ್ತಿದ್ದ ಅವನಿಗೆ ತಿಂಗಳಿಗೆ ೨,೦೦೦ರೂ. ಬರುತಿತ್ತು ಅವನು ಸಾವಿರಕ್ಕೂ ಹೆಚ್ಚು ದುಡ್ಡನ್ನು ಕುಡಿಯುವುದಕ್ಕೆ, ಬೀಡೀಗೆ ಹಾಳುಮಾಡುತ್ತಿದ್ದ. ಇನ್ನು ಅಲ್ಪ ಸ್ವಲ್ಪ ದುಡ್ಡನ್ನು ಹೆಂಡತಿ ಕೈಗೆ ಕೊಡುತ್ತಿದ್ದ.
ತಂದೆ ಸಾಹುಗೆ ವೈದ್ಯರಲ್ಲಿಗೆ ಕರೆದೊಯ್ಯುವುದಾಗಲಿ, ಔಷಧಿ ಉಪಚಾರವಾಗಲಿ ಯಾವುದೂ ಅವನು ಮಾಡುತ್ತಿರಲಿಲ್ಲ.
“ಬೇನು, ತಂದೆಯ ಹುಣ್ಣು ರಣವಾಗುತ್ತಿದೆ. ವೈದ್ಯರ ಹತ್ತಿರ ಕರೆದೊಯ್ಯ ಬಾರದೇ?” ಎಂದು ಅಂಗಲಾಚುತ್ತಿದ್ದಳು ತಾಯಿ.
“ಮುದುಕ ಇನ್ನೆಷ್ಟು ವರ್ಷ ಬದುಕಬೇಕು ಭೂಮಿಗೆ ಭಾರವಾಗಿ” ಎನ್ನುತ್ತಿದ್ದ ಬೇನು.
ತಾಯಿ ಕಣ್ಣೀರು ಸುರಿಸಿ ಬುದ್ಧಿ ಹೇಳಲು ಬೇನುವಿನ ಕೋಪ ವಿಪರೀತವಾಗಿ “ದೇವರು ನಿಮಗೆ ಬೇಡದ ಆಯಸ್ಸು ಕೊಡುತ್ತಿದ್ದಾನೆ. ನಾನೇ ಒಂದು ದಿನ ಈ ಮುದುಕನನ್ನು ಮುಗಿಸಿಬಿಡುತ್ತೇನೆ” ಎನ್ನುತ್ತಿದ್ದ.
ಕರ್ಣ ಕಠೋರವಾದ ಮಾತುಗಳನ್ನು ಕೇಳಲಾರದೆ ತಾಯಿ “ಇವನು ಮಗನಲ್ಲ ನನ್ನ ಹೊಟ್ಟೆಯಲ್ಲಿ ಹುಟ್ಟಿದ ಶತ್ರು” ಎನ್ನುತ್ತಿದ್ದಳು.
“ನೀವು ನನ್ನ ತಂದೆ ತಾಯಿಯರಲ್ಲ ನೀವು ನಮ್ಮ ಆಜನ್ಮ ಶತ್ರುಗಳು, ಘಾತುಕರು” ಎಂದು ಶಪಿಸುತ್ತಿದ್ದ.
ತಂದೆ ತಾಯಿ ದೊಡ್ಡ ಮಗನ ಮದುವೆ ಮಾಡಿದಾಗ ಸೊಸೆಗೆ ನೀಲಾಂದ್ರಿ ಮತ್ತು ಅವಳ ಪತಿ ದೇವ ಮನೆಯನ್ನು ಮಾರಿ ೨ ತೊಲ ಬಂಗಾರವನ್ನು ಸೊಸೆಗೆ ಹಾಕಿದ್ದರು. ಅಲ್ಲದೆ ತಂದೆ ಮೊದಲ ‘ಬಹು’ಗೆ ಬನಾರಸ್ ಪೀತಾಂಬರವನ್ನು ಕೊಟ್ಟಿದ್ದರು. ಎರಡನೆಯ ಮಗನ ಮದುವೆ ಹೊತ್ತಿಗೆ ಸಾಹು ಹತ್ತಿರ ಹೆಚ್ಚು ಕಾಸು ಇರಲಿಲ್ಲ. ಬೇನುವಿನ ಹೆಂಡತಿ ಬಿಮಲಾಗೆ ಬಂಗಾರವಾಗಲಿ, ಒಳ್ಳೆಯ ರೇಶ್ಮೆ ಪತ್ತಲವಾಗಲಿ ಕೊಡುವ ಶಕ್ತಿ ಇರಲಿಲ್ಲ. ಮದುವೆ ಬಹಳ ಸರಳವಾಗಿ ಮಾಡಿದ್ದರು.
ಬೇನುವಿಗೆ, ಬಿಮಲಾಗೆ ಇದು ಹೊಟ್ಟೆಯುರಿ ಉಂಟು ಮಾಡಿತ್ತು. ಎಲ್ಲವನ್ನೂ ದೋಚಿ ಬಾಚಿ ದೊಡ್ಡ ಅಣ್ಣನಿಗೆ ಕೊಟ್ಟು ತನ್ನ ಕೈಗೆ ಚಿಪ್ಪು ಕೊಟ್ಟ ತಂದೆ ತಾಯಿಯನ್ನು ಕಂಡರೆ ದ್ವೇಷಿಸಿ ವಿಷಕಾರುತ್ತಿದ್ದ. ಅವನಿಗೆ ಬಂಗಾರ, ದುಡ್ಡು ಮನೆ ಇವುಗಳ ದುರಾಶೆ ಇದ್ದು ಹೆತ್ತ ತಂದೆ ತಾಯಿಯ ಬೆಲೆ ತಿಳಿದಿರಲಿಲ್ಲ. ಜನ್ಮದಾತರನ್ನು ಚಿತ್ರ ವಿಚಿತ್ರವಾಗಿ ಕಷ್ಟ ಕೊಟ್ಟು ನೋವು ಕೊಡುತ್ತಿದ್ದ.
ಸೊಸೆ ಬಿಮಲಾದೇವಿ ಕೂಡ ಅತ್ತಗೆ ಮಾವನಿಗೆ ಅನ್ನವನ್ನೂ ಹಾಕದೆ ಉಪವಾಸ ಕೆಡುವುತ್ತಿದ್ದಳು.
“ಒಲೆ ಉರಿಸಲು ಸೀಮೆ ಎಣ್ಣೆ ಇಲ್ಲ ಅನ್ನ ಮಾಡಲು ಅಕ್ಕಿ ಇಲ್ಲ ನಾನು ಎಲ್ಲಿಂದ ನಿಮಗೆ ಊಟ ಹಾಕಲಿ?” ಎನ್ನುತ್ತಿದ್ದಳು. ದರ್ಪದ ವಾಣಿಯಲ್ಲಿ ತಮ್ಮ ಮಟ್ಟಿಗೆ ರೊಟ್ಟಿ ಸಬ್ಜಿ ಮಾಡಿಕೊಂಡು ತಿಂದು ಅನ್ನ ಮಾಡಿಯೇ ಇಲ್ಲವೆಂದು ಅತ್ತೆ ಮಾವರಿಗೆ ಹೇಳುತ್ತಿದ್ದಳು.
ಎರಡು ದಿನದಿಂದಲೂ ರೊಟ್ಟಿ, ಅನ್ನ ಕೊಡದೆ ಉಪವಾಸ ಕೆಡುವಿದ್ದ ಅತ್ತೆ ಮಾವಂದಿರಿಗೆ ಇಂದು ಗಂಡನ ಎದುರಿಗೆ ಕೂಡಿಸಿ ಊಟ ಬಡಿಸಿದಳು ಸೊಸೆ. ಬೇನುಧರ್‌ಗೆ ಕೋಪ ನೆತ್ತಿಗೇರಿತು. ಹೊಗೆಯಾಡುತ್ತಿದ್ದ. ಅವನ ಕೋಪದಲ್ಲಿ ಅವನ ಬುದ್ದಿ ಪೂರ್ತಿ ಭ್ರಮಣೆಯಾಗಿತ್ತು. ಅವನಿಗೆ ತಾನು ಏನು ಮಾಡುತ್ತಿರುವೆನೆಂಬುದರ ಪರಿವೆಯೂ ಇರಲಿಲ್ಲ. ಊಟ ಮುಗಿಸಿ ಕಾಲು ಹುಣ್ಣಿನಿಂದ ಬಳಲುತ್ತಿದ್ದ ತಂದೆಯನ್ನು ಮತ್ತು ಅವನ ಮುದಿರಿಸುವ ಮಂಚವನ್ನು ಸಣ್ಣದಾಗಿ ಜೋಡಿಸಿ ಆಟೋ ವಾಹನದಲ್ಲಿರಿಸಿಕೊಂಡು ಮನೆಯಿಂದ ಕೊಂಡು ಹೋದ.
ತಾಯಿಗೆ ಪತ್ನಿಗೆ ಬೇನುಧರ ಏನು ಮಾಡುತ್ತಿರುವ ಎಂಬುದು ತಿಳಿಯಲಿಲ್ಲ. “ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರಬಹುದು. ಅವನಿಗೆ ಕರುಣೆ ಬಂದಿರಬೇಕು” ಎಂದು ತಾಯಿ ಯೋಚಿಸಿದಳು.
ಪತ್ನಿಗೆ ಗೊತ್ತಿತ್ತು ‘ತನ್ನ ಗಂಡ ಇಂದು ಏನೋ ಅನಾಹುತ ಮಾಡಲಿರುವ’ ಎಂದು. ಅವಳು ಕೇಳಿದ ಯಾವ ಪ್ರಶ್ನೆಗೆ ಬೇನುಧರ ಉತ್ತರವೀಯಲಿಲ್ಲ ಮತ್ತೆ ಮತ್ತೆ ಪತ್ನಿ ಪೀಡಿಸಿ “ಎಲ್ಲಿಗೆ ಕರೆದೊಯ್ಯುತ್ತಿರುವೆ?” ಎಂದು ಕೇಳಿದಾಗ-
“ಇನ್ನು ಮುದುಕನ ಸಾವಿಗಾಗಿ ನಾನು ಎದುರುನೋಡುವುದಿಲ್ಲ, ನಾನು ಇವನನ್ನು ಜೀವಂತವಾಗಿ ಕೊಂಡೊಯ್ದು ಸ್ಮಶಾನದಲ್ಲಿ ಬಿಟ್ಟು ಬರುತ್ತೇನೆ. ಸಾವು ಬಂದಾಗ ಸಾಯಲಿ” ಎಂದ.
ತಾಯಿ ದಂಗು ಬಡಿದವಳಂತೆ ಮೂಕವಿಸ್ಮಿತರಾಗಿ ಎದೆ ಒಡೆದು ನಿಂತುಬಿಟ್ಟಳು. ಪತ್ನಿ “ಹಾಗೆಮಾಡಬೇಡಿ” ಎಂದು ಪತಿಯಲ್ಲಿ ಕೇಳಿಕೊಂಡಳು. ಬೇನು ಕೇಳಲಿಲ್ಲ, ಸಾವಿನದವಡೆಯಲ್ಲಿ ಬಳಲುತ್ತ ಬದುಕಿದ್ದ ತಂದೆಯನ್ನು ಸ್ಮಶಾನದಲ್ಲಿ ಎಸೆದು ಬಂದೇಬಿಟ್ಟ ಮಗ ನೆನೆಸಿಕೊಂಡ ಯಮದೂತ “ನೀನು ಇಲ್ಲೇ ಬದುಕಿರು, ಮನೆಯಲ್ಲಿ ಅಲ್ಲ” ಎಂದು ಆಜ್ಞೆಹಾಕಿ ಹೊರಟು ಬಂದ.
ಅಂದು ರಾತ್ರಿ ಕರಾಳ ಕತ್ತಲೆಯ ಸ್ಮಶಾನದ ಮೌನದಲ್ಲಿ ಗಾಳಿ ಚಳಿಗೆ ಮೈಯೊಡ್ಡಿ ಆಗಸವನ್ನು ದಿಟ್ಟಿಸುತ್ತಾ ಭೂಮಿ ಬಾಯಿ ಬಿಡಬಾರದೇ ಎಂದು ಸಂಕಟಪಡುತ್ತಾ ಜನ್ಮದಾತ ವಿಲಿವಿಲಿ ಒದ್ದಾಡಿದ.
ಬೆಳಗಾಲು ಅಲ್ಲಿ ಓಡಾಡುತ್ತಿದ್ದ ಒಬ್ಬ ಪುರೋಹಿತನ ಕಣ್ಣಿಗೆ ಜೀವಂತ ಶವವಾಗಿ ಮಂಚದ ಮೇಲೆ ಮಲಗಿದ ಮುದುಕ ಕಣ್ಣಿಗೆ ಬಿದ್ದ. ಅವನು ಮುದುಕನನ್ನು ವಿಚಾರಿಸಿ ಕಟುಕ ಮಗ ತಂದೆಯನ್ನು ಅಲ್ಲಿಗೆ ಕರೆತಂದು ಹಾಕಿರುವನೆಂದು ತಿಳಿದು ಪೊಲೀಸ್ ಸಿಬ್ಬಂದಿಗೆ ಸಮಾಚಾರ ತಿಳಿಸಿದ.
ಪೊಲೀಸ್ ಅಧಿಕಾರಿ ವಿಚಾರಿಸಿದಾಗ ಮುದುಕ “ತನ್ನ ಐದು ಮಕ್ಕಳು ಪಕ್ಕದ ಊರುಗಳಲ್ಲಿ ಇರುತ್ತಾರೆ. ನನ್ನ ದೊಡ್ಡ ಮಗ ಕೊಲ್ಕತ್ತಾದಲ್ಲಿ ಇರುತ್ತಾನೆ. ಇವನು ನನ್ನ ಎರಡನೆಯ ಮಗ, ನನ್ನ ಕಾಲಿನ ಹುಣ್ಣು ಎಷ್ಟು ದಿನವಾದರೂ ವಾಸಿಯಾಗದಿರಲು ನನ್ನ ಮಗ ಬೇಸತ್ತು ನನ್ನ ಇಲ್ಲಿಗೆ ತಂದು ‘ಇಲ್ಲೇ ಇರು’ ‘ಇದಕ್ಕೆ ಮೊದಲು ನನ್ನ ದನದ ಕೊಟ್ಟಿಗೆಯಲ್ಲಿಟ್ಟಿದ್ದ’ ಎಂದು ಹೋದ ಎಂದು ತಮ್ಮ ದುಃಖದ ಕ್ರೂರ ಘೋರ ಕಥೆಯನ್ನು ಹೇಳಿದಾಗ ನೆರೆದ ಜನಕ್ಕೆ ಕರಳು ಕತ್ತರಿಸಿದಂತೆ ಎನಿಸಿತು. ಇಂತಹ ಕಠೋರ ಕ್ರೂರಿ ಮಗ ಪ್ರಪಂಚದಲ್ಲಿ ಇರಲು ಸಾಧ್ಯವೇ? ರಕ್ತ ಹಂಚಿಕೊಂಡು ಕರುಳು ಬಳ್ಳಿ ಹಬ್ಬಿಸಿಕೊಂಡು ಪ್ರಾಣಕೊಟ್ಟ ಜನ್ಮಾದಾತನಿಗೆ ಇದೆಂತಹ ನಾಯಿಪಾಡು? ಅಯ್ಯೋ ವಿಧಿಯಾಟಕ್ಕೆ ಒಂದು ಇತಿ ಮಿತಿ ಬೇಡವೆ? ತಂದೆಯ ಶುಶ್ರೂಷೆ ಮಾಡಿ ಸೇವೆಗೈದು ಪ್ರೀತಿ ಗೌರವಗಳಿಂದ ನೋಡಿಕೊಳ್ಳಬೇಕಾದವ ಮಾಡುತ್ತಿರುವಾದರೂ ಏನು? ನಮ್ಮ ಸಂಸ್ಕೃತಿ ಸಂಸ್ಕಾರವನ್ನು ತಿಳಿಯ ಹೇಳಿ ಬೆಳಸಿದ ಮಕ್ಕಳು ಹೀಗಾಗುವುದು ತರವೇ? ನಮ್ಮ ಮೌಲ್ಯಗಳು ಎಲ್ಲಿ ಹೋಗಿವೆ? ತಂದೆ ತಾಯಿಯ ಸ್ಥಾನಮಾನಕ್ಕೆ ಸ್ಮಶಾನವೇ ವೇದಿಕೆಯೆ? ಮಕ್ಕಳನ್ನು ಹೆತ್ತು ಹೊತ್ತು ಮಮತೆಯಿಂದ ಪಾಲಿಸಿದ ತಾಯಿ ಮಗ ಕೊಡುವ ವೈಧವ್ಯದ ಕಾಣಿಕೆಯೇ? ದುರ್ಯೋಧನ, ದುಶ್ಯಾಸನರಿಗಿಂತಲೂ ಕ್ರೂರಿ ಕಟುಕ ರಾಕ್ಷಸ ಜನಾಂಗ ಈ ಕಲಿಯುಗದಲ್ಲಿ ಸೃಷ್ಟಿಯಾಗುತ್ತಿದೆಯೇ? ಇದಕ್ಕೆ ಬಡತನ ಕಾರಣವೇ? ಇಲ್ಲ ಮೌಲ್ಯಗಳ ಶೂನ್ಯತೆ ಕಾರಣವೇ? ಇಂತಹ ವಿಷ ಬೀಜಗಳು ಏಕೆ ಮಕ್ಕಳಾಗಿ ಹುಟ್ಟುತ್ತವೆ? ಎಂದು ಅಲ್ಲಿ ನೆರೆದ ಹತ್ತು ಹಲವು ಜನರು ವೇದನೆ ತಾಳಲಾರದೆ ತಮ್ಮ ದುಃಖದ ಉದ್ಗಾರಗಳನ್ನು ಎತ್ತಿ ಮೂರ್ಖ ಮಗನನ್ನು ಬೈಯುತ್ತಿದ್ದರು.
ತಂದೆಯು ಕೊಟ್ಟ ವಿಳಾಸ, ದೂರವಾಣಿಯ ಮೂಲಕ ಕೊಲ್ಕತ್ತಾದ ದೊಡ್ಡ ಮಗ ಮತ್ತು ಇತರ ಮಕ್ಕಳನ್ನು ಪೊಲೀಸ್ ಅಧಿಕಾರಿ ಕರೆಸಿ ಸಾವಿನ ದವಡೆಯಲ್ಲಿದ್ದು ಬಳಲುತ್ತಿದ್ದ ತಂದೆಯನ್ನು ಒಪ್ಪಿಸಿದರು.
ಗುಣವಂತನಾದ ದೊಡ್ಡಮಗನಿಗೆ ಇದು ಬರಸಿಡಿಲು ಬಡಿಯುವಂತೆ ಸುದ್ದಿಯಾಗಿ ತಕ್ಷಣ ಊರಿಗೆ ಬಂದು ತಂದೆಯನ್ನು ಆಸ್ಪತ್ರೆ ಸೇರಿಸಿದ್ದ. ಇತರ ನಾಲ್ಕು ಚಿಕ್ಕ ಮಕ್ಕಳು ತಂದೆಯ ಶುಶ್ರೂಷೆ ಹಗಲಿರುಳು ಮಾಡಿ ತಂದೆಗೆ ಸೇವೆ ಮಾಡಿದರು.
ಪೊಲೀಸರು ಅದು ಮನೆಗೆ ಸಂಬಂಧಪಟ್ಟ ಜಗಳ, ಅನಾದರದ ವ್ಯವಹಾರವೆಂದು ಬೇನುಧರನಿಗೆ ಶಿಕ್ಷೆ ವಿಧಿಸಲಿಲ್ಲ. “ನಿನಗೆ ಶಿಕ್ಷೆ ನಿನಗೆ ಹುಟ್ಟುವ ಮಗನಿಂದ ಕಾದಿದೆ” ಎಂದು ಅವನಲ್ಲಿ ಮಾನವತ್ವವನ್ನು ಎಚ್ಚರಿಸಿದರು.
ತಾಯಿ, ಮಕ್ಕಳ ಅನನ್ಯ ಸೇವೆ ಪ್ರಾರ್ಥನೆಗೆ ದೈವ ಕೃಪೆಮಾಡಿದ. ದೇಬಾನಂದ ಸಾಹುವಿನ ಕಾಲಿನ ಹುಣ್ಣು ಗುಣಮುಖವಾಯಿತು. ಅವರ ಸಕ್ಕರೆ ಕಾಯಿಲೆ ಹಿಡಿತಕ್ಕೆ ಬಂದು ಅವರ ದೇಹದಲ್ಲಿ ಶಕ್ತಿ ಸಂಚಾರವಾಯಿತು. ತಮ್ಮ ಪಾಲಿಗೆ ಎರಡನೆಯ ಮಗ ಇನ್ನಿಲ್ಲವೆಂದು ನಿರ್ಧರಿಸಿ ದೊಡ್ಡ ಮಗ ಮತ್ತು ಇತರ ಮಕ್ಕಳ ಜೊತೆ ಹೋಗಿ ತಮ್ಮ ಬಾಳಿನ ಕೊನೆಯ ದಿನಗಳನ್ನು ಸುಖವಾಗಿ ಕಳೆದರು.
*****