ಗಂಡು ಮೆಟ್ಟಿನ ನಾಡು ಕನ್ನಡ ನಾಡು
ಗಂಡುಗಲಿಗಳ ಶೌರ್ಯ ಸಾಹಸ ಬೀಡು
ತ್ಯಾಗ ಪ್ರೀತಿ ಶೌರ್ಯಕೆ ಹೆಸರಾಯಿತೊ ಅಂದು…
ಇತಿಹಾಸದ ಪುಟಪುಟದಿ ಉಳಿಯಿತಿದೊ ಇಂದು
ಪುಲಿಕೇಶಿ ಮಯೂರ ವಿಕ್ರಮಾದಿತ್ಯರು
ಗಂಡೆದೆಯ ಗುಂಡುಗಳು; ಗಂಡರಿಗೆ ಗಂಡರು
ಬನವಾಸಿ ಕಲ್ಯಾಣ ಬಾದಾಮಿ ಮಣ್ಣಲಿ
ಮೆರೆದಂತ ಶೂರರು; ಕನ್ನಡ ರಣಧೀರರು
ಸಿರಿಗನ್ನಡ ಬಾವುಟ ಮುಗಿಲೆತ್ತರಕ್ಕೇರಿಸಿ
ಕಲಿಗನ್ನಡ ಜಯಭೇರಿ ದಿಕ್ಕದಿಕ್ಕಲು ಬಾರಿಸಿ
ಕನ್ನಡ ರಾಜೇಶ್ವರಿಗೆ ಕೀರ್ತಿ ತಂದರೋ…
ದಿಟ್ಟೆದೆಗಳ ಹಾದಿಗೆ ಸ್ಫೂರ್ತಿ ಆದರೊ
ನೃಪತುಂಗ ಹೊಯ್ಸಳ ಕೃಷ್ಣದೇವರಾಯ
ಏಳು ಸುತ್ತಿನಾ ಕೋಟೆ ಮದಕರಿ ನಾಯಕರು
ಎಚ್ಚಮ್ಮ ನಾಯಕ ಕಿತ್ತೂರು ಚೆನ್ನಮ್ಮ
ಆಂಗ್ಲರನು ಬಗ್ಗುಬಡಿದ ಬೆಳವಡಿ ಮಲ್ಲಮ್ಮ
ಕನ್ನಡ ಚೈತನ್ಯವ ತಮ್ಮಲ್ಲೆ ಸೂಸುತ
ಕನ್ನಡ ಪ್ರತಾಪವ ವಿಶ್ವಕ್ಕೆ ತೋರುತ
ರಣರಂಗದ ತುಮುಲದಲಿ ವೀರ ಹೆಜ್ಜೆ ಇಟ್ಟರೋ…
ಜಗದೇಕ ವೀರರಿಗೆ ಮಾದರಿ ಆದರೊ
*****