ಥಾಮಸ್ ಹಾರ್ಡಿಯ “The Return of the Native” ಕೃತಿ Architectonic ಎಂದು ಕರೆಯಲ್ಪಡುವಷ್ಟು ಕಲಾತ್ಮಕವಾಗಿ ನೇಯಲ್ಪಟ್ಟ ಕಾದಂಬರಿ. ವಿಮರ್ಶಕರು ಒಪ್ಪುವಂತೆ ಕಥಾ ಹಂದರ ಅಪೂರ್ವ ಸಂರಚನೆ. ಅದು ಸುಂದರ ಪ್ರಾಕೃತಿಕ ಸೊಬಗಿನ Egdon Heath. ಕಾದಂಬರಿ ಎದ್ದೇಳುವುದೇ ಆ ನೆಲದಲ್ಲಿ ಅದೊಂದು ಅಪೂರ್ವ ಭೂಮಿ. ಸೂರ್ಯಾಸ್ತದ ಹೊತ್ತು. ಕಡು ಕಂದು ಬಣ್ಣದ ಹೊಳಪು ಪಡೆವ, ರಾತ್ರಿಯಲ್ಲಿ ಅದೊಂದು ಟೈಟಾನಿಕ್. ಆ ನೆಲ ಮೋಹದ ಬಲೆ ಹೆಣೆವ ಕಲೆಯ ಚಿತ್ರದಂತೆ. ಹಾಗಾಗಿ ಯಕಶ್ಚಿತ ಮಾನವರು ಅದರ ಮಾಯೆಗೆ ಮರುಳಾಗುತ್ತಲೂ ತನ್ನೊಳಗಿನ ಕತ್ತಲೆಯ ಕೂಪಕ್ಕೆ ತಳ್ಳಬಿಡುತ್ತದೆ. ಅದರ ಮಾದಕ ಸೌಂದರ್ಯ ಹೀಗಿದೆ “The storm is its lover, and the wind its friend”.
ಆಕೆ Mrs. Yeobright. ವಿಧವೆ. ತನ್ನ ಸೋದರಿ ಸಂಬಂಧಿ ಸಹೋದರಿ ತೊಮಾಸಿನ್ ನೊಂದಿಗೆ ವಾಸಿಸುತ್ತಿದ್ದಾಳೆ. ಆಕೆಯ ಮಗ Clym Yeobright ಪ್ಯಾರಿಸ್‌ನಲ್ಲಿ ವಜ್ರ ವ್ಯಾಪಾರಿಯಲ್ಲಿ ಮ್ಯಾನೇಜರ ಆಗಿ ಕೆಲಸಕ್ಕಿದ್ದಾನೆ. ಆತನದು ಅಸಾಮಾನ್ಯ ಬುದ್ದಿವಂತಿಕೆ ಎಂಬ ಮಾತುಗಳು ಎಗ್‌ಡಾನ್ ಹೀತ್ ನಲ್ಲಿ ಕೇಳಿಬರುತ್ತಿವೆ. ಅಲ್ಲೇ ಕೆಳಗಿನ ಬೀದಿಯಲ್ಲಿ Daman Wildeve ನ ಮನೆ. ಆತನೊಬ್ಬ ಇಂಜೀನಿಯರ. ಆದರೆ ಈಗ ಛತ್ರದ ಸಂಚಾಲಕ. ಮತ್ತೊಂದು ಬದಿಯಲ್ಲಿ ನಿವೃತ್ತ ಸೈನಿಕ Captain Vye ತನ್ನ ಮೊಮ್ಮಗಳು Eustacia ಳೊಂದಿಗೆ ವಾಸಿಸುತ್ತಿದ್ದಾನೆ.
ವೈಲ್ಡ್ ಇವ್‍ಗೆ ಯುಸ್‌ಟಚಿಯ ಳೆಂದರೆ ಆಕರ್ಷಣೆ, ಮೋಹ. ಆಕೆ ಅಪೂರ್ವ ಸುಂದರಿ. ಆದರೆ ಆಕೆಯ ಸ್ಪಂದನರಹಿತ ವರ್ತನೆಯಿಂದ ಬೇಸತ್ತಿದ್ದಾನೆ. ಹಾಗಾಗಿ ಸರಳ ಸ್ವಭಾವದ ಮುಗ್ಧ ಸೌಂದರ್ಯದ ಉತ್ತಮ ಚರಿತ್ರೆಯ ತಾಮಸಿನ್ ಳನ್ನು ವಿವಾಹವಾಗಲು ನಿರ್ಧರಿಸುತ್ತಾನೆ. ಆದರೆ ಇವರ ಮದುವೆಗೆ ಮಿಸೆಸ್. ಯೊಬ್ರೈಟ್‌ಳ ಸಹಮತವಿಲ್ಲ. ಅಲ್ಲದೇ ವೈಲ್ಡ್‌ಇವ್ ಮದುವೆಯ ದಿನ ಮದುವೆಗೆ ಬೇಕಾದ ಲೈಸೆನ್ಸನ್ನು ಮರೆತು ಬರುತ್ತಾನೆ. ದುಃಖದಿಂದ ತೊಮಸಿನ್ ಬಸವಳಿಯುತ್ತಾಳೆ. ಮದುವೆಗೆ ಹಿನ್ನೆಡೆಯಾದ ಸಂಗತಿ ತಿಳಿಯುತ್ತಲೇ ಯುಸ್‌ಟಚಿಯ ಆತನ ತೆಕ್ಕೆಗೆ ಪುನಃ ಬೀಳುತ್ತಾಳೆ. ಅವಳನ್ನು ಅತಿಯಾಗಿ ಬಯಸಿದ ಆತನೂ ಆಕೆಯೊಂದಿಗೆ ಬೆರೆತು ಸಂಬಂಧ ಮುಂದುವರೆಸುತ್ತಲೂ ತೊಮಸಿನ್ ದುಃಖದಿಂದ ಕುದಿದುಹೋಗುತ್ತಾಳೆ. ಇದು ತಿಳಿದ ಡಿಗ್ಗೊರಿ ವಿನ್ ಬುದ್ಧಿ ಹೇಳಿ ಮನವರಿಕೆ ಮಾಡಿಕೋಡಲು ಪ್ರಯತ್ನಿಸಿದರೂ ಆಕೆ ಅದನ್ನು ಕೇಳದೆ ಉನ್ಮತ್ತಳಂತೆ ವರ್ತಿಸುತ್ತಾಳೆ. ವೆನ್ ಒಬ್ಬ ಸದ್ಗುಣಿ ಕೆಂಪು ಖಡು ತಯಾರಿಕೆಯ ಕೆಲಸ ಮಾಡುವವ. ಮನಸ್ಸಿನಲ್ಲಿಯೇ ತೊಮಸಿನ್ ಳನ್ನು ಆರಾಧಿಸುತ್ತಿದ್ದ ತಾನೇ ಆಕೆಯನ್ನು ವಿವಾಹವಾಗುವ ಇರಾದೆಯನ್ನು ವ್ಯಕ್ತಪಡಿಸಲು ಮಿಸೆಸ್. ಯೊಬ್ರೈಟ್ ಅದಕ್ಕೂ ಅಡ್ಡಗಾಲು ಹಾಕಿ ಆತ ವೈಲ್ಡ್ ಇವ್ ನ ವೈರಿ ಎಂಬಂತೆ ಆತನಲ್ಲಿ ಚುಚ್ಚಿ ಬರುತ್ತಾಳೆ.
ಆದರೆ ಕಾದಂಬರಿ ಹೊಸ ರೂಪ ಪಡೆಯುವುದು ಎರಡನೇಯ ಅಧ್ಯಾಯದಲ್ಲಿ ಯಾವಾಗ ಕ್ಲಿಮ್ ಯೊಬ್ರೈಟ್ ಕ್ರಿಸ್‌ಮಸ್ ಆಚರಣೆಗೆ ತಾಯಿಯೊಂದಿಗೆ ಕಳೆಯಲು ಎಗ್ಡನ್ ಹೀತ್ ಗೆ ಆಗಮಿಸುತ್ತಾನೆ ಅಲ್ಲಿಂದ. ಆತನ ವ್ಯಕ್ತಿತ್ವದಿಂದ ರೀತಿ ನೀತಿಗಳಿಂದ ಪ್ರಭಾವಿತಳಾದ ಯುಸ್‌ಟಚಿಯ ಈಗ ವೈಲ್ಡ್ ಇವ್ ಬಿಟ್ಟು ತನ್ನ ಸೌಂದರ್ಯ ಹಾಗೂ ಆಕರ್ಷಣೆಯ ಮೂಲಕ ಕ್ಲಿಮ್ ನನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತಾಳೆ. ವೈಲ್ಡ್ ಇವ್ ಈಗ ಬೇರೆ ವಿಧಿಯಿಲ್ಲದೇ ತೊಮಸಿನ್ ವಿವಾಹವಾಗುತ್ತಾನೆ.
ಕ್ಲಿಮ್ ಕಾದಂಬರಿಯ ಪ್ರಮುಖ ಪಾತ್ರ. ಮೂಲತಃ ತನ್ನ ನೆಲೆಯನ್ನು ಪ್ರೀತಿಸುವ ಪಾತ್ರವಾಗಿ ಚಿತ್ರಿಸಲ್ಪಡುತ್ತಾನೆ.. ಚಿಕ್ಕ ಪ್ರಾಯದಲ್ಲಿ ತಂದೆಯ ಕಳೆದುಕೊಂಡ ಆತ ನೆರೆಹೊರೆಯವರ ಸಹಾಯದಿಂದ ಪ್ಯಾರಿಸ್‌ನಲ್ಲಿ ವಜ್ರ ವ್ಯಾಪಾರಿಯಲ್ಲಿ ಮ್ಯಾನೇಜರ ಹುದ್ದೆ ದಕ್ಕಿಸಿಕೊಂಡರೂ ಆತನ ಚುರುಕು ಬುದ್ಧಿ, ವಿಚಾರವಾದಿ ಧೋರಣೆಗೆ ಆ ಕೆಲಸ ಸರಿ ಹೊಂದದೇ ನೆಮ್ಮದಿಯಿಲ್ಲದೇ ನೋಯುತ್ತಾನೆ. ಸೂಕ್ಷ್ಮ ಸಂವೇದಿಯಾದ ಆತನ ಕೆಲವು ವರ್ತನೆಗಳು ಇತರರಿಗೆ ಮರಳುತನವೆಂಬಂತೆ ಭಾಸವಾಗುತ್ತವೆ.
ಆದಾಗ್ಯೂ ಹಾರ್ಡೀ ಆತನನ್ನು ಸಭ್ಯನನ್ನಾಗಿ ಚಿತ್ರಿಸಿದ್ದಾನೆ. ಕ್ಲಿಮ್ ಯಾವಾಗ ಎಗ್ಡನ್ ಹೀತ್‌ನಲ್ಲಿ ಶಾಲಾಶಿಕ್ಷಕನಾಗುವ ಹಂಬಲದಿಂದ ಪ್ಯಾರಿಸ್ ಬಿಟ್ಟು ಬರುತ್ತಾನೋ ಆಗ ತಾಯಿ ಆತನ ಬಗ್ಗೆ ಅಸಂತುಷ್ಟಳಾಗುತ್ತಾಳೆ. ಅದೂ ಅಲ್ಲದೇ ಯುಸ್‌ಟಚಿಯ ಳಿಗೆ ಆತ ಹೆಚ್ಚು ಹತ್ತಿರವಾಗುವುದು ಆಕೆಗೆ ಇಷ್ಟವಿಲ್ಲ. ಆಕೆಗೆ ಶುದ್ಧ ಚಾರಿತ್ರ್ಯವಿಲ್ಲವೆಂದು ಆಕೆ ಹೇಳಿದರೂ ಆತ ಕೇಳುವ ಮನಸ್ಥಿತಿಯಲ್ಲಿಲ್ಲ. ಸಜ್ಜನ ವ್ಯಕ್ತಿತ್ವದ ಆತ ಸಂಕೀರ್ಣ ಮನಸ್ಥಿತಿಯ ಯುಸ್‌ಟಚಿಯ ಳನ್ನು ವಿವಾಹವಾಗಲು ನಿರ್ಧರಿಸುತ್ತಾನೆ. ತನ್ನ ಆಶೋತ್ತರಗಳಿಗೆ ಸ್ಪಂದಿಸುವ ಅರಿತು ಬಾಳುವ ಹೆಣ್ಣೆಂದು ಭ್ರಮಿಸುತ್ತಾನೆ. ಆಕೆಯದು ಮನಸ್ಸನ್ನು ಒಮ್ಮೆಲೆ ಸೆಳೆದುಕೊಳ್ಳುವ ಮೋಹಕ ಚೆಲವು. ಆದರೆ ವಿವಾಹದ ಕೆಲವೇ ದಿನಗಳಲ್ಲಿ ಅವರ ಸುಂದರ ಸಂಸಾರ ತನ್ನ ಸೊಗಸನ್ನು ಕಳೆದುಕೊಳ್ಳತೊಡಗುತ್ತದೆ. ಒಬ್ಬರಿಗೊಬ್ಬರು ಕಣ್ಣಲ್ಲಿ ಕಣ್ಣಿಟ್ಟು ನೋಡುವ ಆಕರ್ಷಣೆ ಕಳೆದುಕೊಳ್ಳುತ್ತಾರೆ. ಅವರಿಬ್ಬರ ವಿರುದ್ಧ ಆಸಕ್ತಿಗಳು, ಭಿನ್ನ ಯೋಚನಾ ವಿಧಾನಗಳು ಕ್ರಮೇಣ ಮಹಾ ಕಂದಕವನ್ನೇ ತೋಡಿಬಿಡುತ್ತದೆ.
ವ್ಯಕ್ತಿ ಪಾತ್ರಗಳ ಚಿತ್ರಣದಲ್ಲಿ ಹಾರ್ಡಿ ಅದ್ಭುತ ಕಲಾಕಾರ. ಯುಸ್‌ಟಚಿಯ ಭಾರತೀಯ ಪುರಾಣದ ಪಾತ್ರವಾದ ಚಂಡಿಯ ವ್ಯಕ್ತಿತ್ವದವಳು. ಪಾಶ್ಚಿಮಾತ್ಯ ಪಾತ್ರವಾದರೂ ವ್ಯಕ್ತಿ ಸ್ವಭಾವಗಳು ಮಾನವ ಸಹಜ ಪ್ರಕಾರಗಳು. ಹಾಗಾಗಿ ಆಕೆಯನ್ನು ವಿಚಿತ್ರ ಪಾತ್ರವಾಗಿ ಮೂಡಿಸಿದ್ದಾನೆ. ಇತರರು ಏನನ್ನು ಬಯಸುವರೋ ಅದಕ್ಕೆ ತದ್ವಿರುದ್ದವಾಗಿ ಪ್ರತಿಕ್ರಿಯಿಸುವ ಆಕೆ ವೈಲ್ಡ್ ಇವ್ ತನ್ನ ಬಯಸಿದಾಗ ಅವನ ನಿರಾಕರಿಸುತ್ತಾಳೆ. ಆತ ವಿವಾಹಕ್ಕೆ ಅಣಿಯಾದಾಗ ಆತನ ಬದುಕಿನಲ್ಲಿ ಮತ್ತೆ ಪ್ರವೇಶಿಸುತ್ತಾಳೆ. ಅದೇ ಆಕೆಯ ಬದುಕಿನ ದುರಂತದ ಮೂಲ.
ತನ್ನ ಯೋಜನೆ ಯೋಚನೆಗಳಿಗೆ ಆಕೆಯ ಸಹಕಾರ ಸಿಗದೆಂದು ತಿಳಿದಿರುತ್ತದೆ. ಹಾಗೆ ಆಕೆಗೆ ಕೂಡ ಆತ ತನ್ನ ಆಕರ್ಷಣೆಯ ತಾಣ ಪ್ಯಾರಿಸ್ಸಿಗೆ ಮತ್ತೆ ಹೋಗಲಾರನೆಂದು ಗೊತ್ತಿದ್ದು ಆತನ ಮುಂದೊಂದು ದಿನ ಒಪ್ಪಿಸುವ ಭರವಸೆಯಿಂದ ವಿವಾಹವಾಗುತ್ತಾಳೆ. ತಮ್ಮ ಬದುಕಿನ ದುರಂತಕ್ಕೇ ತಾವೇ ಹೊಣೆಗಾರರಾಗುತ್ತಾರೆ. ಯಾಕೆ?
ಶಾಲಾ ಶಿಕ್ಷಕನಾಗುವ ಆಸೆಯಿಂದ ಅತಿಯಾಗಿ ಓದಿಗೆ ತೊಡಗಿಸಿಕೊಂಡ ಆತ ಅದರ ಫಲವಾಗಿ ಕಣ್ಣಿನ ದೃಷ್ಟಿ ಕಳೆದುಕೊಳ್ಳುತ್ತಾನೆ. ಅದರಿಂದ ಶಿಕ್ಷಕ ಕೆಲಸವೂ ಸಿಗದೆ ಸಮಯಕೊಲ್ಲಲು ಆತ ಕಟರ ಕೆಲಸಕ್ಕೆ ತೊಡಗಿಕೊಳ್ಳುತ್ತಾನೆ. ತನ್ನ ಕನಸಿನ ಪ್ಯಾರಿಸ್ ಬದುಕು ಸಿಗದ ಕಾರಣ ಈಗ ಹತಾಶೆಗೊಂಡ ಬಾಳಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಾನೆ.
ಇದೇ ಸಮಯಕ್ಕೆ ಮಗನಿಂದ ದೂರವಾದ ವ್ಯಥೆಗೆ ಒಳಗಾಗಿ ಮಗನ ನೋಡುವ ಆಸೆಯಿಂದ ಮಿಸೆಸ್. ಯೊಬ್ರೈಟ್ ಆತನ ಮನೆಗೆ ಬರುತ್ತಾಳೆ. ಆದರೆ ಮನೆಯಿಂದ ಹೊರಹೋಗಿದ್ದು ಮನೆಗೆ ಕರೆಸಿಕೊಂಡಿದ್ದ ತನ್ನ ಗುಟ್ಟು ಬಯಲಾಗುವುದೆಂಬ ಕಾರಣಕ್ಕೆ ಬಾಗಿಲು ತೆರೆಯದೆ ಇದ್ದು ಪುನಃ ಮರಳಿ ಹೋಗುವ ದಾರಿಯಲ್ಲಿ ಪ್ರಜ್ಞೆ ತಪ್ಪಿದ ಆಕೆಯನ್ನು ಮಗ ನೋಡುತ್ತಾನೆ. ಆದರಾಕೆ ಅಲ್ಲಿಂದ ಆರೋಗ್ಯ ಸಹಜಸ್ಥಿತಿಗೆ ಬರದೆ ಮರಣ ಹೊಂದುತ್ತಾಳೆ. ಪತ್ನಿಯ ದುಷ್ಟ ವರ್ತನೆಗೆ ಬೇಸತ್ತ ಆಕೆಯನ್ನು ತಿರಸ್ಕರಿಸುತ್ತಾನೆ. ಇದರಿಂದ ನೊಂದ ಯುಸ್‌ಟಚಿಯ ಆತ್ಮಹತ್ಯೆಗೆ ನಿರ್ದರಿಸುತ್ತಾಳೆ. ಆದರೆ ವೈಲ್ಡ್ ಇವ್ ಆಕೆಯನ್ನು ಪುನಃ ಸ್ವೀಕರಿಸುವ ಭರವಸೆಯಿಂದ ಅವನೊಂದಿಗೆ ಪ್ಯಾರಿಸ್‌ಗೆ ಹೋಗಲು ರಾತ್ರಿ ಸಿದ್ಧಳಾಗುತ್ತಾಳೆ. ಆದರೂ ಮಳೆ ಬಿರುಗಾಳಿಯಿಂದ ಕೂಡಿದ ಆ ರಾತ್ರಿಯಲ್ಲಿ ಹೊರಹೊರಟ ಆಕೆಗೆ ಮನಸ್ಸಿನಲ್ಲಿ ಬದುಕಿನ ಬಗ್ಗೆ ವಿಪರೀಪ ವೈರಾಗ್ಯ ಮೂಡುತ್ತಲೇ ದಾರಿಯಲ್ಲಿಯ ಕೊಳಕ್ಕೆ ಹಾರಿ ಬಿಡುತ್ತಾಳೆ. ಅದಾಗಲೇ ಅಲ್ಲಿಗೆ ಬಂದ ಕೂಡ ಆಕೆಯ ರಕ್ಷಿಸಲು ಕೊಳಕ್ಕೆ ಜಿಗಿಯುತ್ತಾನೆ ಆದರೆ ದುರದೃಷ್ಟಾವಶಾತ್ ಅವರಿಬ್ಬರೂ ಅಲ್ಲೇ ಅಸು ನೀಗುತ್ತಾರೆ. ಮುಂದೊಂದು ದಿನ ಡಿಗ್ಗೊರಿ ವಿನ್ ಮತ್ತು ತೊಮಸಿನ್ ವಿವಾಹವಾಗುತ್ತಾರೆ. ಕ್ಲಿಮ್ ಪ್ರವಾದಿಯಾಗಿ ಬದುಕು ರೂಪಿಸಿಕೊಳ್ಳುತ್ತಾನೆ.
ವಿಮರ್ಶಕರ ಪ್ರಕಾರ ಬದುಕಿನ ದುರಂತ ದೃಶ್ಯಗಳನ್ನು ಹಾರ್ಡಿ ಪರಿಣಾಮಕಾರಿಯಾಗಿಸುತ್ತಾನೆ. ಆತನ ೫ ನಾಟಕಗಳು ಸಶಕ್ತ ದುರಂತ ನಾಟಕಗಳು. ವೈಯಕ್ತಿಕ ಬದುಕಿನಲ್ಲಿ ಕೆಲವು ನೈಸರ್ಗಿಕ ಉದ್ದೇಶಗಳು ಆಕಾಂಕ್ಷೆಗಳು ದೂರೀಕರಿಸಲಾಗದೇ ಹೇಗೆ ಬದುಕಿನಲ್ಲಿ ಹೊಂಚುಹಾಕುತ್ತವೆ ಎಂಬುದು ಮನಮುಟ್ಟುವಂತೆ ಪಾತ್ರಗಳ ಮುಖೇನ ನಿರೂಪಿಸುತ್ತಾನೆ. ಅದರೊಂದಿಗೆ ಮನುಷ್ಯ ಜೀವನದಲ್ಲಿ ಅದೃಶ್ಯ ಶಕ್ತಿಗಳ ಮೇಲಾಟವನ್ನೂ ಕಾದಂಬರಿ ಬಿಂಬಿಸುತ್ತದೆ. ೧೮೪೦ರಲ್ಲಿ ಇಂಗ್ಲೆಂಡಿನಲ್ಲಿ ಜನಿಸಿದ ಹಾರ್ಡಿ ಮೊದಲು ಕವಿತೆಗಳ ಬರೆದ. ಆದರೆ ಅದಕ್ಕೆ ಪ್ರಕಾಶಕರು ಸಿಗದೇ ಇದ್ದ ಕಾರಣ ಮುಂದೆ ಕಾದಂಬರಿಗಳ ಕಡೆ ತನ್ನ ಆಸಕ್ತಿಯನ್ನು ತಿರುಗಿಸಿ ವಿಕ್ಟೋರಿನ್ ಇಂಗ್ಲಂಡಿನ ಶ್ರೇಷ್ಟ ಕಾದಂಬರಿಕಾರನಾಗಿ ಹೊರಹೊಮ್ಮಿದ. ಆತನ ಬಹುತೇಕ ಕಾದಂಬರಿಗಳ ದೃಶ್ಯಗಳೆಲ್ಲ ಆತನ ಹುಟ್ಟೂರಿನ ನೆಲದಲ್ಲೆ ಅರಳಿದ್ದು ಆತನ ಕಾದಂಬರಿಗಳ ವಿಶೇಷ. ಮುಂದೆ ೧೯೨೮ರಲ್ಲಿ ಇಹಲೋಕ ತ್ಯಜಿಸಿದ.
*****