ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ ಮಗಳಿಗಾಗಿ ಅಳಬೇಕೋ ಇಲ್ಲ ಚಿಕ್ಕ ಹಸುಳೆಗಾಗಿ ಮರುಗಬೇಕೋ ತಿಳಿಯಲಿಲ್ಲ. ಮಗುವನ್ನು ಎದೆಗವಚಿಕೊಂಡು ರೋಧಿಸುವ ಅಜ್ಜಿಯ ಬೆನ್ನನ್ನು ಅಪ್ಪಿನಿಂತ ಮೂರು ವರ್ಷದ ಪುಟ್ಟ ಬಾಲುವಿನ ಕಣ್ಣಿನಲ್ಲಿ ಧಾರಾಕಾರವಾಗಿ ಕಣ್ಣೀರು ಹರಿಯುತ್ತಿತ್ತು. ಎರಡು ಮಕ್ಕಳನ್ನೂ ಎದೆಗವಚಿ ಕೊಂಡು ಧೈರ್ಯ ಧೈರ್ಯದಿಂದ ಬೆಳೆಸಲು ಅವಳು ಮನಸು ಗಟ್ಟಿ ಮಾಡಿಕೊಂಡಳು. ಹೆಂಡತಿ ಸತ್ತಮೇಲೆ ಅಳಿಯ ಕುಡಿದು ಬೀದಿ ಬೀದಿಯಲ್ಲಿ ಬಿದ್ದು ಅಜ್ಜಿಗೆ ಹೊಸ ಸಂಕಟಗಳನ್ನು ತಂದೊಡ್ಡುತ್ತಿದ್ದ. ದುಡ್ಡನ್ನು ಕುಡಿಯುವುದರಲ್ಲಿ ಹಾಳುಮಾಡಿ ಅಜ್ಜಿಯ ಕೈಗೆ ಸಂಸಾರ ನಡೆಸಲು ದುಡ್ಡು ಕೊಡುತ್ತಿರಲಿಲ್ಲ. ಗುಡಿಸಲಲ್ಲಿ ಜೀವಿಸುತ್ತಿದ್ದ ಅಜ್ಜಿ ಮಕ್ಕಳನ್ನು ಬೆಳಸಲು ಕೂಲಿನಾಲಿ ಮಾಡಿ ನಾಲ್ಕು ಕಾಸು ಸಂಪಾದಿಸಿ ಮಕ್ಕಳನ್ನು ಸಲಹುತ್ತಿದ್ದಳು. ಕಷ್ಟಕಾರ್ಪಣ್ಯದ ನಡುವೆ ಒಂದು ದಿನ ಅವಳಿಗೆ ಬರಸಿಡಿಲು ಹೊಡೆದಂತೆ ಸುದ್ದಿ ಬಂತು. ಅಳಿಯ ಕುಡಿದು ಲಾರಿಗೆ ಸಿಕ್ಕು ಮೃತ ಹೊಂದಿರುವ ಎಂದು.
“ಅಜ್ಜಿ, ಅಪ್ಪ ಯಾಕೆ ಬಂದಿಲ್ಲ? ನಂಗೆ ಅಮ್ಮನೂ ಇಲ್ಲ, ಅಪ್ಪ ಕೂಡ ಯಾಕೆ ಬಿಟ್ಟು ಹೋದ” ಎಂದು ಬಾಲು ರೊಚ್ಚಿಗೆದ್ದಾಗ ಅವಳ ಪರಿಸ್ಥಿತಿ ಸಹಿಸಲಾರದಾಗುತಿತ್ತು. ಇದ್ದ ಒಂದು ಸಣ್ಣ ಆಸರೆಯು ಅವಳ ಕೈಬಿಟ್ಟಾಗ ಜೀವನ ದುಸ್ತರವಾಯಿತು. ಪುಟ್ಟ ಮಗು ಮುನ್ನಿ ಈಗ ಎರಡು ವರ್ಷದ ಮಗುವಾಗಿತ್ತು. ಅದನ್ನು ಸೊಂಟದಲ್ಲಿ ಇಟ್ಟುಕೊಂಡು ಅಕ್ಕಪಕ್ಕದ ಮನೆಗಳಿಗೆ ಹೋಗಿ ಮನೆಕೆಲಸ ಮಾಡುತ್ತಿದ್ದಳು. ನೆರೆಹೊರೆಯವರು ಮಗುವಿಗೆ ಹಾಲು, ತಿಂಡಿ ತಂಗಳು ಅನ್ನ ಕೊಡುತ್ತಿದ್ದರು. ತಾನು ಸಂಪಾದಿಸಿದ ಪುಡಿಕಾಸಿನಲ್ಲಿ ಮಕ್ಕಳಿಗೆ ಬೇಕಾದುದನ್ನು ಅಜ್ಜಿ ಕೊಡಿಸಿ ತೃಪ್ತಿ ಪಡಿಸುತ್ತಿದ್ದಳು.
ಬಾಲು ಹತ್ತಿರ ಇದ್ದ ಸರ್ಕಾರಿ ಶಾಲೆಗೆ ಹೋಗಿಬರುತ್ತಿದ್ದ. ಅಜ್ಜಿ ತನ್ನ ಇಳಿವಯಸ್ಸಿನಲ್ಲಿ ಮಕ್ಕಳನ್ನು ಸಾಕಿ ಸಲುಹುವುದನ್ನು ನೋಡಿ ಎಲ್ಲರಿಗೂ ಆಶ್ಚರ್ಯವಾಗುತ್ತಿತ್ತು. ಶಾಲೆಗೆ ಊಟ ತೆಗೆದುಕೊಂಡು ಹೋಗಿ ದಿನವೂ ಬಾಲುಗೆ ಉಣಿಸುತ್ತಿದ್ದಳು. ಸ್ನೇಹಿತರು, ಶಾಲೆಯ ಮಕ್ಕಳು ಅಜ್ಜಿ ಎಂದರೆ ಬಹಳ ಇಷ್ಟಪಡುತ್ತಿದ್ದರು. ಇದನ್ನು ನೋಡಿ ಶಾಲೆಯ ಮುಖ್ಯೋಪಧ್ಯಾಯರು ಅವಳನ್ನು ತಮ್ಮ ಆಫೀಸಿಗೆ ಕರೆಸಿದರು. “ಏನಮ್ಮಾ, ಜಯಮ್ಮ! ಹೇಗಿದ್ದಿಯಾ? ಸಂಸಾರ ಹೇಗೆ ನಡೀತಾ ಇದೆ?” ಎಂದು ಕೇಳಿದರು.
ಜಯಮ್ಮ ಕಣ್ಣೀರಿಡುತ್ತಾ “ಬಹಳ ಕಷ್ಟ ಇದೆ. ಕೈಯಲ್ಲಿ ಕಾಸಿಲ್ಲದೆ ಎರಡು ಮಕ್ಕಳನ್ನು ಬೆಳಿಸೋದು ಅಂದರೆ ಹೇಗೆ ಹೇಳಿ?” ಎಂದಳು.
ಹೆಡ್ಮಾಸ್ತರಿಗೆ ಅವಳ ಸಂಕಟ ಅರ್ಥವಾಗಿ, ‘ಜಯಮ್ಮ, ನಿಂಗೆ ಆಯಾ ಕೆಲಸ ಕೊಟ್ಟರೆ ಮಾಡುತ್ತೀಯಾ?’ ಎಂದರು.
“ನಿಮ್ಮ ಕೃಪೆಯಿಂದ ಹಾಗಾದರೆ ನಾನು ಎಲ್ಲಾ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ” ಎಂದಳು.
ಹೆಡ್ಮಾಸ್ತರ್ ಅವಳನ್ನು ಮುಂದಿನ ಸೋಮವಾರದಿಂದ “ನೀನು ಕೆಲಸಕ್ಕೆ ಬಾ” ಎಂದು ಹೇಳಿ ಅವಳನ್ನು ಆಯಾಳನ್ನಾಗಿ ನೇಮಿಸಿದ ಪತ್ರವನ್ನು ಒಡನೆ ಕೈಗೆ ಕೊಟ್ಟರು. ಇದು ಅವಳ ಬಾಳಿನಲ್ಲಿ ಹೊಸ ತಿರುವನ್ನು ಮೂಡಿಸಿತು. ಚಿಕ್ಕವಯಸ್ಸಿನ ತಾಯಿಯಂತೆ ಅವಳು ಮಕ್ಕಳನ್ನು ನೋಡಿಕೊಳ್ಳತೊಡಗಿದಳು. ಬಂದ ಈ ಹೊಸತಿರುವಿನಿಂದ ಅವಳ ಬಾಳು ಹಸನಾಗಿ ಮಕ್ಕಳು ಮುದ್ದಾಗಿ ಬೆಳೆಯತೊಡಗಿದವು.
ಈಗ ಬಾಲುವಿಗೆ ಹನ್ನೆರಡು ವರ್ಷ, ಮುನ್ನಿಗೆ ಹತ್ತು ವರ್ಷವಾಗಿ ಅವರ ತುಂಟತನಗಳು ಹೆಚ್ಚಿದ್ದವು. ಅವರ ಆಟಪಾಟಗಳನ್ನು ನೋಡಿ ಅಜ್ಜಿಗೆ ಸಂತೋಷವಾದರೂ ಮಕ್ಕಳೊಡನೆ ಬಾಲುವಿನ ಸಣ್ಣಪುಟ್ಟ ಜಗಳಗಳು, ಮುನ್ನಿಯ ಮೊಂಡುತನ ಅವಳನ್ನು ಹೈರಾಣ ಮಾಡುತ್ತಿದ್ದವು. ಒಂದು ದಿನ ಬಾಲು ಮಕ್ಕಳೊಡನೆ ತೋಟಕ್ಕೆ ಹೋಗಿ ಮಾವಿನಕಾಯಿ ಮರವನ್ನು ಹತ್ತಿದ್ದ. ಮಕ್ಕಳೆಲ್ಲರು ಅವನನ್ನು ಪುಸಲಾಯಿಸಿ ಮರವನ್ನು ಹತ್ತಲು ಪ್ರೇರಿಪಿಸಿದ್ದರು. ಉತ್ಸಾಹದಿಂದ ಮರಹತ್ತಿ ಮಾವಿನಕಾಯಿಯನ್ನು ಕಿತ್ತಿ ಕಿತ್ತಿ ಹಾಕುವಾಗ ತೋಟದ ಮಾಲಿಯ ಕೈಗೆ ಸಿಕ್ಕಿಬೀಳುವೆನೆಂಬ ಹೆದರಿಕೆಯಿಂದ ಎತ್ತರದ ಕೊಂಬೆಯಿಂದ ಜಿಗಿದು ಕೈ ಮುರಿದುಕೊಂಡು ಅಳುತ್ತಾ ಮನೆಗೆ ಬಂದಾಗ ಅಜ್ಜಿಯ ಪ್ರಾಣ ಹೋದಂತಾಯಿತು. ಒಡನೆ ಆಸ್ಪತ್ರೆಗೆ ಹೋಗಿ ಮುರಿದ ಕೈ ಮೂಳೆಗೆ ಪ್ಲಾಸ್ಟರ್ ಹಾಕಿಸಿಕೊಂಡು ಬಂದಿದ್ದಳು. ಬಲಗೈ ಆದ್ದರಿಂದ ಅವನಿಗೆ ಊಟ, ಸ್ನಾನ, ಬಟ್ಟೆ ಹಾಕುವುದು ಎಲ್ಲ ಉಪಚಾರವನ್ನು ಚಾಚು ತಪ್ಪದೆ ಮಾಡಿ ಮೂರು ವಾರದಲ್ಲಿ ಅವನ ಕೈ ಮೂಳೆ ಕೂಡಿ ಸರಿಹೋಗುವಂತೆ ತನ್ನ ಸರ್ವ ಪ್ರಯತ್ನ ಮಾಡಿ ಮಮತೆ, ಪ್ರೀತಿಯನ್ನು ತೋರಿದ್ದಳು.
“ಅಜ್ಜಿ! ನೀನು ನನ್ನ ಕೈಮೂಳೆ ಮುರಿದಾಗ ಊಟಮಾಡಿಸುತ್ತಿದ್ದಾಗ ಬಹಳಾ ಇಷ್ಟವಾಗುತ್ತಿತ್ತು. ದಿನಾ ಹಾಗೆ ಊಟ ಮಾಡಿಸುತ್ತಿಯಾ?” ಎಂದು ಗೋಗರೆದಾಗ ಮುನ್ನಿ ಕೂಡ “ನಂಗೂ ಊಟ ಮಾಡಿಸು ಅಜ್ಜಿ” ಎಂದು ದುಂಬಾಲು ಬೀಳುತ್ತಿದ್ದಳು. ಅಜ್ಜಿಗೆ ಎರಡು ಮಕ್ಕಳು ಎರಡು ಕಣ್ಣಿನಂತೆ ಅವಳ ಬಾಳಿಗೆ ಬೆಳಕನ್ನು ನೀಡಿದ್ದವು.
ಅಂದು ಬಾಲು ಶಾಲೆಯಿಂದ ಮನೆಗೆ ಬಂದಾಗ ಅಜ್ಜಿ ದುಪ್ಪಟಿ ಹೊದ್ದು ಮಲಗಿಬಿಟ್ಟಿದ್ದಳು. ಮುನ್ನಿ ಬಂದು ಅಜ್ಜಿ ಪಕ್ಕದಲ್ಲಿ ಮಲಗಿ, “ಅಜ್ಜಿ ! ನಿಂಗೆ ಏನಾಯಿತು? ಏಕೆ ಮಲಗಿದ್ದೀಯ?” ಎಂದು ಮುಖಕ್ಕೆ ಮುದ್ದು ಕೊಟ್ಟು ಗಲ್ಲ ಸವರಿದಳು.
ಬಾಲು ಅಜ್ಜಿಯ ಹಣೆಯನ್ನು ಮುಟ್ಟಿ ಅಜ್ಜಿ, ನಿಂಗೆ ಜ್ವರ ಬಂದಿದೆ, ನಡೆ ಆಸ್ಪತ್ರೆಗೆ ಹೋಗೋಣ ಎಂದು ಬೆನ್ನು ಸವರಿ ಎಬ್ಬಿಸಿದ. ಅಜ್ಜಿ ಏಳದೆ ಮುಲುಗುವುದನ್ನು ನೋಡಿ “ಅಂಗಡಿಯಲ್ಲಿ ಜ್ವರದ ಮಾತ್ರೆ ತರ್ತಿನಿ” ಎಂದು ಹೇಳಿ ಹುಂಡಿಯಲ್ಲಿದ್ದ ಪುಡಿಕಾಸನ್ನು ತೆಗೆದುಕೊಂಡು ಗುಡಿಸಲಿಂದ ಓಡಿದ.
ಬಾಲು ಮಾತ್ರೆ ತಂದು ಅಜ್ಜಿಗೆ ನೀರು ಕೊಟ್ಟು ತಲೆ ನೀವುತ್ತಾ ಕುಳಿತ. ಪುಟ್ಟ ಮುನ್ನಿ ಅಜ್ಜಿಯ ಬೆನ್ನು ತಟ್ಟಿ ಮಲಗಿಸುತ್ತಿದ್ದಳು. ಸ್ವಲ್ಪ ಹೊತ್ತಿನಲ್ಲೇ ಅಜ್ಜಿಯ ಜ್ವರ ಬಿಟ್ಟು ಚೇತರಿಸಿಕೊಂಡು ಮಕ್ಕಳ ಪ್ರೀತಿಗೆ ಅವಳ ಹೃದಯ ಕರಗಿ ನೀರಾಯಿತು. ಅಜ್ಜಿ ಮೊಮ್ಮಕ್ಕಳ ಬಾಂಧವ್ಯ ನೋಡಿದವರು “ತಾಯಿ ಇಲ್ಲದ ಮಕ್ಕಳಿಗೆ ಮಹತಾಯಿ ಸಿಕ್ಕಿದ್ದಾಳೆ” ಎಂದು ಹೇಳುತ್ತಿದ್ದರು.
ಅದೊಂದು ಕರಾಳ ರಾತ್ರಿ, ಅಜ್ಜಿ ಮೊಮ್ಮಕ್ಕಳು ನೆಮ್ಮದಿಯಾಗಿ ಮಲಗಿದ್ದರು ಪುಟ್ಟ ಗುಡಿಸಿಲಿನಲ್ಲಿ, ಮಣ್ಣಿನ ಗಡಿಗೆ ಒಲೆಯ ಮೇಲೆ ನೆಮ್ಮದಿಯಾಗಿ ಕೂತಿತ್ತು. ಒಂದು ಮೂಲೆಯಲ್ಲಿ ಶಿವನ ಫೋಟೋದ ಮುಂದೆ ಬೆಳಿಗ್ಗೆ ಏರಿಸಿದ ಹೂವುಗಳು ತಮ್ಮ ಬಾಳ ಸಾರ್ಥಕತೆಯನ್ನು ಹೊಂದಿ ಬಾಡಿ ದೈವಕ್ಕೆ ಶರಣಾಗಿದ್ದವು. ಅಜ್ಜಿಯ ಚಿಂದಿಯಾದ ಸೀರೆಗಳು ಹಗ್ಗದಲ್ಲಿ ತೂಗಾಡುತ್ತಿದ್ದವು. ಗುಡಿಸಿಲ ಮೇಲ್ಬಾಗದ ಓಲೆಗರಿಗಳು ಗಾಳಿಗೆ ಜರುಗಿಹೋಗಿ ಬೆಳಕಿನ ಕಿಂಡಿಗಳಾಗಿದ್ದವು. ಬಾಲು, ಮುನ್ನಿಯ ಮುರಿದ ಆಟಿಕೆಗಳು ಮೂಲೆಯಲ್ಲಿ ಮೂಕವಾಗಿ ಕಣ್ಣು ಮುಚ್ಚಿ ಬಿದ್ದಿದ್ದವು. ಅಜ್ಜಿಯ ಕುಟ್ಟಾಣಿಯಲ್ಲಿ ಜಜ್ಜಿದ ಎಲೆ ಅಡಿಕೆ ಅಜ್ಜಿಗಾಗಿ ಬೆಳಿಗ್ಗೆ ಮೆಲ್ಲಲು ಕಾಯುತ್ತಿತ್ತು. ಬೆಳಿಗ್ಗೆ ಕುಡಿಯಲು ಮಿಳ್ಳೆಯಲ್ಲಿ ಇಟ್ಟಿದ್ದ ಹಾಲನ್ನು ರಾತ್ರಿ ಬೆಕ್ಕು ಬಂದು ಕಾಣದ ಮೃತ್ಯುವಿನ ಕೈವಾಡದಂತೆ ಉರುಳಿಸಿತ್ತು. ಅಜ್ಜಿಯನ್ನು ಮುನ್ನಿ ಬಿಗಿಯಾಗಿ ತಬ್ಬಿ ಮಲಗಿದ್ದಳು, ಅವಳ ಪಕ್ಕದಿಂದ ದೂರ ಸರಿದು ಬಾಲು ದೊಡ್ಡ ಮನುಷ್ಯನಂತೆ ಮಲಗಿದ್ದನು. ಬಾಗಿಲಿಗೆ ಹಗ್ಗ ಎಳೆದು ಕಟ್ಟಿ ಮಲಗುತ್ತಿದ್ದರು. ಅಕ್ಕಪಕ್ಕದಲ್ಲಿ ಹಲವಾರು ಚಿಕ್ಕ ಚಿಕ್ಕ ಮನೆಗಳು, ಗುಡಿಸಿಲುಗಳು ಇದ್ದವು. ಮನೆಯ ಹಿಂಭಾಗಕ್ಕೆ ಕುರುಚಲು ಗಿಡಗಳಿದ್ದು ಹಾವಿನ ಹುತ್ತಗಳು ಇದ್ದವು. ಮಧ್ಯರಾತ್ರಿ ಬಾಗಿಲ ಸಂದಿಯಿಂದ ಒಂದು ದೊಡ್ಡ ನಾಗರಹಾವು ಸರಿದು ಬಂದು ಬಾಗಿಲಿಗೆ ಹತ್ತಿರ ಮಲಗಿದ್ದ ಅಜ್ಜಿಯ ಕೈಯನ್ನು ಕಚ್ಚಿತು. ಅಜ್ಜಿಗೆ ಒಡನೆ ನೋವನ್ನು ತಾಳಲಾರದೆ ಕಣ್ಣು ತೆರೆದು ನೋಡಿದಾಗ ಹಾವು ಸರಿದು ಬರುತ್ತಿರುವುದು ಕಂಡು ಒಡನೆ ಅದರ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದು ಮಕ್ಕಳನ್ನು ಎದ್ದು ದೂರ ಮನೆಯಿಂದ ಹೋಗಲು ಕೂಗಿದಳು. ಹಾವು ಮಕ್ಕಳನ್ನು ಕಚ್ಚದಿರಲೆಂದು ಕುತ್ತಿಗೆಯನ್ನು ಬಿಗಿಯಾಗಿ ಹಿಡಿದಳು. ಅದು ಮತ್ತೆ ಮತ್ತೆ ಅವಳ ಕೈಯನ್ನು ಕಚ್ಚುತ್ತಿದ್ದರೂ ಅದನ್ನು ಬಿಡಲಿಲ್ಲ. ಮಕ್ಕಳ ಕೂಗು, ಅಜ್ಜಿಯ ಕೂಗಿಗೆ ಅಕ್ಕ ಪಕ್ಕದದವರು ಧಾವಿಸಿ ಎದ್ದು ಬಂದರು. ನಿದ್ದೆಗಣ್ಣಿನಲ್ಲಿ ಎದ್ದು ಬಂದ ಅವರಿಗೆ ಕಣ್ಣಿನ ಮುಂದೆ ಕಾಣುತ್ತಿರುವುದು ಕನಸೆಂಬಂತೆ ಎನಿಸಿತು. ಎಲ್ಲರು ಭಯಭೀತರಾಗಿ ಏನು ಮಾಡುವುದು ಎಂದು ತೋಚದೆ ಹಾಹಾಕಾರ ಮಾಡತೊಡಗಿದರು. ಹಾವಿನ ಬಾಲ ಅಜ್ಜಿಯ ತೋಳಿನವರೆಗೂ ಗಟ್ಟಿಯಾಗಿ ಬಿಗಿದು ಸುತ್ತಿತ್ತು. ಅಜ್ಜಿಯ ಮುಂಗೈ ಮಾತ್ರ ಅದರ ಕುತ್ತಿಗೆಯನ್ನು ಸಡಿಲವಾಗಿಸಲಿಲ್ಲ. ಯಾರು ಎಷ್ಟು ಪ್ರಯತ್ನ ಪಟ್ಟರೂ ಹಾವನ್ನು ಅಜ್ಜಿಯ ಕೈಯಿಂದ ಬಿಡಿಸಲಾಗಲಿಲ್ಲ. ಅಷ್ಟು ಹೊತ್ತಿಗೆ ಹಾವು ಹಿಡಿಯುವವನನ್ನು ಯಾರೋ ಕರೆತಂದರು. ಹಾವನ್ನು ಕೊಲ್ಲುವುದು ಯಾರಿಗೂ ಇಷ್ಟವಿರಲಿಲ್ಲ. ಹೆಡೆ ಎತ್ತಿ ಹಾವು ಬುಸುಗುಟ್ಟುತ್ತ ಪದೇಪದೇ ಅಜ್ಜಿಯ ಕೈಯನ್ನು ಕಚ್ಚುತಿತ್ತು. ಅಜ್ಜಿಗೆ ವಿಷ ಶರೀರದಲ್ಲಿ ಹರಡಿ ನೀಲಿ ಬಣ್ಣವಾಯಿತು. ಅಜ್ಜಿಗೆ ಪ್ರಜ್ಞೆಯು ತಪ್ಪಿ ನಿಶ್ಚಿತಳಾದಳು. ಮಕ್ಕಳು ಒಂದು ಕಡೆ ಗೊಳೋ ಎಂದು ಅಳುತ್ತಿದ್ದವು. ಜನಜಂಗುಳಿ ಹೌಹಾರಿ ತತ್ತರಿಸಿ ಏನೂ ತೋಚದೆ ಕೈಕಾಲು ನಡುಗಿ ನಿಂತಿದ್ದರು. ಅಜ್ಜಿಯ ಪ್ರಾಣವನ್ನು ಉಳಿಸುವುದು ಮುಖ್ಯವಾಗಿದ್ದು ಕ್ಷಣದಲ್ಲಿ ಹಾವಾಡಿಗ ಅದನ್ನು ಕೊಲ್ಲುವ ನಿರ್ಧಾರಕ್ಕೆ ಬರಬೇಕಾಯಿತು. ಹಾವಿನೊಡನೆ ಸಂಗ್ರಾಮ ಅಲ್ಲಿಗೆ ಮುಗಿದರೂ ಅಜ್ಜಿಯ ಜೀವ ಮರಣದ ಪ್ರಶ್ನೆ ಎಲ್ಲರನ್ನು ಕಾಡುತಿತ್ತು ಅವಳನ್ನು ಒಡನೆ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಶರೀರವನ್ನು ಪೂರ್ಣ ಆವರಿಸಿದ ವಿಷವು ಅವಳ ಪ್ರಾಣವನ್ನು ಹೋಗಿಸಿತ್ತು. ಹಾವಿನೊಡನೆ, ಸಾವಿನೊಡನೆ ಸೆಣಸಾಡಿದ ಅಜ್ಜಿ ತನ್ನ ಮೊಮ್ಮಕ್ಕಳ ಜೀವ ಉಳಿಸಲು ಪ್ರಾಣಾರ್ಪಣ ಮಾಡಿ ತನ್ನ ಪ್ರೀತಿ ಮಮತೆಯನ್ನು ಅಮರವಾಗಿಸಿದ್ದಳು.
*****