ಚೀನಾದಲ್ಲಿ ಅದ್ಭುತ ಬದಲಾವಣೆ ತಂದು ಸಮತಾ ಸಮಾಜದ ತಾತ್ವಿಕ ತಿರುಳಿಗೆ ಜೀವ ಕೊಟ್ಟ ಧೀಮಂತ ನಾಯಕ ಮಾವೋತ್ಸೆತುಂಗ್ ಅವರ ಜನ್ಮ ಶತಾಬ್ದಿಯ ವರ್ಷ ೧೯೯೪. ಜನ್ಮ ಶತಾಬ್ದಿಯ ಸನ್ನಿವೇಶ ವಿಚಿತ್ರವಾಗಿದೆ. ಚೀನಾದಲ್ಲಿ ಮಾರುಕಟ್ಟೆ ಆರ್ಥಿಕ ನೀತಿ ಅನುಷ್ಠಾನಕ್ಕೆ ಬಂದಿದೆಯೆಂದು ಪ್ರಚಾರ ಮಾಡಲಾಗುತ್ತಿದೆ. ಸೋವಿಯತ್ ಯೂನಿಯನ್ ವಿಘಟನೆ ಗೊಂಡಿದೆ. ಪ್ರಪಂಚದಲ್ಲಿ ಮಾರ್ಕ್ಸ್‌ವಾದದ ಕತೆ ಮುಗಿಯಿತೆಂದು ಅನೇಕರಿಗೆ ಭ್ರಮಾತ್ಮಕ ಸಂಭ್ರಮವುಂಟಾಗಿದೆ. ಇಂಥ ಸನ್ನಿವೇಶದಲ್ಲಿ ಸಮತೆಯ ಸತ್ಯಕ್ಕಾಗಿ ಪುನರ್ ಶೋಧ ನಡೆಸಬೇಕಾದ ಅಗತ್ಯವನ್ನು ನೆನಪಿಸುವಂತೆ ಮಾವೊ ಜನ್ಮಶತಾಬ್ದಿ ಬಂದಿದೆ. ಕಮ್ಯುನಿಸಂ ಕಮರಿ ಹೋಗಿಲ್ಲವೆಂದು ಕಣ್ಣಲ್ಲಿ ಹೊಳಪು ಹೊಮ್ಮಿಸುತ್ತಿದೆ.
ಚೀನಾದಲ್ಲಿ ಮಾರುಕಟ್ಟೆ ಆರ್ಥಿಕ ನೀತಿಯ ಮಾದರಿಗಳು ಪ್ರವೇಶ ಮಾಡಿದ್ದರೂ ಸಮತಾವಾದದ ಸಾವಿನಲ್ಲಿ ಪರ್‍ಯಾವಸಾನವಾಗಿಲ್ಲ. ಸಮತಾವಾದವನ್ನು ಮೂಲನೆಲೆಯಾಗಿ ಉಳಿಸಿಕೊಂಡು ಪಾಶ್ಚಾತ್ಯ ಮಾದರಿಗಳನ್ನು ಪೂರಕವಾಗಿ ಬಳಸಿಕೊಳ್ಳುವ ಪ್ರಯೋಗಕ್ಕೆ ಚೀನಾದೇಶವು ಒಳಗಾಗುತ್ತಿದೆ. ಅಂತೆಯೇ ಸೋವಿಯತ್ ಯೂನಿಯನ್ ವಿಘಟನೆ ಹೊಂದಿದ್ದರೂ ಅಲ್ಲಿ ಕಮುನಿಸ್ಟ್ ತತ್ವಗಳು ಸತ್ತಿಲ್ಲ. ಬದಲಾಗಿ ಮತ್ತೆ ಶಕ್ತಿ ಪಡೆಯುತ್ತಿವೆ. ಕಮ್ಯುನಿಸ್ಟ್ ಸರ್ಕಾರಗಳ ಕೆಲವು ತಪ್ಪು ಹೆಜ್ಜೆಗಳು, ಸಾಮ್ರಾಜ್ಯಶಾಹಿಗಳ ಸಂಚುಗಳು ಒಟ್ಟಿಗೆ ಸೇರಿ ಕಮ್ಯುನಿಸಂ ಒಂದು ಸರ್ಕಾರವಾಗಿ ನೆಲ ಕಚ್ಚುವುದು ನಿಜ ಆದರೆ ಸಿದ್ಧಾಂತವಾಗಿ ಸಾವಿನಂಚಿಗೆ ಹೋಗಿಲ್ಲ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಮಾವೊ ನೆನಪು ಮಾಡಿಕೊಂಡಾಗ ಹೊಸ ಚೈತನ್ಯ ಬಂದೀತು. ನೂರು ವರ್ಷದ ನೆನಪು ಸಾವಿರ ಕನಸುಗಳ ಕಣ್ಣು ತೆರೆದೀತು.
ಮಾವೊ, ಲೆನಿನ್, ಚೆಗೆವಾರ, ಫೀಡಲ್‌ಕ್ಯಾಸ್ಟ್ರೊ, ಹೊಚಿಮಿನ್ ಮುಂತಾದವರು ಮಾರ್ಕ್ಸ್‌ವಾದಿ ಸಿದ್ಧಾಂತದ ಸೃಜನಶೀಲ ಸ್ಫೋಟಗಳು, ಸಾಂಸ್ಕೃತಿಕ ಪ್ರಜ್ಞೆ ಮತ್ತು ರಾಜಕೀಯ ಪ್ರಜ್ಞೆಗಳು ಏಕೀಭವಿಸಿ ರೂಪುಗೊಂಡ ಇವರ ವ್ಯಕ್ತಿತ್ವಗಳ ಔನ್ನತ್ಯ ಕೇವಲ ಕೆಲವು ವಿಶೇಷಣಗಳಲ್ಲಿ ಸವೆದು ಸ್ವಾಂತನಗೊಳ್ಳುವುದಿಲ್ಲ. ಜನರ ಹೋರಾಟಗಳನ್ನು ಕಟ್ಟಿ ಮುನ್ನಡೆಸಿದ ಇವರಲ್ಲಿ ಜಾಗೃತವಾಗಿದ್ದ ಸಾಂಸ್ಕೃತಿಕ ಪ್ರಜ್ಞೆ ವಿಶಿಷ್ಟ ಒಳನೋಟಗಳನ್ನು ತಂದು ಕೊಟ್ಟಿತು. ಅವರನ್ನು ಸಂವೇದನಾಶೀಲರನ್ನಾಗಿಸಿತು. ಸಿದ್ಧಾಂತ ಮತ್ತು ಸಂವೇದನೆಗಳು ಒಂದಾದ ವಿರಳ ವ್ಯಕ್ತಿತ್ವಗಳ ಸಾಲಿನಲ್ಲಿ ಮಾವೂ, ಲೆನಿನ್ ಮುಂತಾದವರದು ಅಗ್ರಸ್ಥಾನ. ಇವರ ಸಾಂಸ್ಕೃತಿಕ ಚಿಂತನೆ ಮತ್ತು ಸಂವೇದನಾಶೀಲತೆಗಳು ಮಾರ್ಕ್ಸ್ ಸಿದ್ಧಾಂತವನ್ನು ಜಡಗೊಳಿಸಲು ಬಿಡಲಿಲ್ಲ. ಬದಲಾಗಿ ತಂತಮ್ಮ ಸನ್ನಿವೇಶದಲ್ಲಿ ಕ್ರಿಯಾ ಸೃಷ್ಟಿಗೆ ಕಾರಣವಾದವು. ಜನ ಸಮುದಾಯದಲ್ಲಿ ನಂಬಿಕೆಯಿರುವ ನಾಯಕರು ಯಾವುದೇ ತತ್ವಗಳ ತಿರುಳಿಗೆ ಬದ್ಧರಾಗಿರುತ್ತಾರೆಯೇ ಹೊರತು ಅಕ್ಷರಕ್ಷರದ ಬಾಯಿಪಾಠಕ್ಕೆ ಬದ್ಧರಲ್ಲ ಎಂಬುದಕ್ಕೆ ಮಾವೊ, ಲೆನಿನ್ ಮುಂತಾದವರು ಉತ್ತಮ ಉದಾಹರಣೆಯಾಗಿದ್ದಾರೆ. ಮಾರ್ಕ್ಸ್‌ವಾದವನ್ನು ತತ್ವಮಾತ್ರವೆಂದು ನಂಬಿದವರು ಬಾಯಿ ಚಪಲದ ಬಾಯಿಪಾಠ ಒಪ್ಪಿಸುತ್ತಾರೆ. ಇದೊಂದು ಕ್ರಿಯೆಯೆಂದು ನಂಬಿದವರು ತತ್ವದ ತಿರುಳನ್ನು ತಮ್ಮದಾಗಿಸಿಕೊಂಡು ಹೊಸದಾರಿ ತೆರೆಯುತ್ತಾರೆ. ಈ ಸಾಲಿನ ಮುಖ್ಯರಲ್ಲಿ ಮಾವೊ ಹೆಸರು ಉಲ್ಲೇಖನೀಯ.
ಮಾವೊ ತನ್ನ ‘ವೈರುಧ್ಯಗಳ ನಡುವೆ’ ಎಂಬ ಲೇಖನದಲ್ಲಿ ಯಾವುದೇ ರೀತಿಯ ಅಂಧಾನುಕರಣೆಯನ್ನು ವಿರೋಧಿಸುತ್ತಾರೆ. ‘ಅಂಧಾನುಕರಣೆಯ ವ್ಯಕ್ತಿ ಎಂದಿಗೂ ಮಾರ್ಕ್ಸ್‌ವಾದಿಯಲ್ಲ’ ಎಂದು ಸಾರುತ್ತಾರೆ. ಹೀಗೆ ಚಿಂತನ ನಡೆಸಿದ್ದರಿಂದಲೇ ಮಾವೊ ಮಾರ್ಕ್ಸವಾದವನ್ನು ಕ್ರಿಯಾಶೀಲ ಗೊಳಿಸುತ್ತಾರೆ, ವಿಸ್ತರಿಸುತ್ತಾರೆ. ನಗರಕೇಂದ್ರಿತ ಶ್ರಮಿಕ ವರ್ಗದ ನೆಲೆಯನ್ನು ಮಾತ್ರ ಮುಖ್ಯವೆಂದು ತಿಳಿಯದೆ ಗ್ರಾಮೀಣ ಕೃಷಿ-ಕಾರ್ಮಿಕವರ್ಗದ ನೆಲೆಗಳನ್ನು ನಂಬಿದ ತಾತ್ವಿಕ ತಿಳುವಳಿಕೆಯನ್ನು ಮಾವೊ ಪ್ರಕಟಿಸುತ್ತಾರೆ. ಇದೊಂದು ಸೈದ್ಧಾಂತಿಕ ಬೆಳವಣಿಗೆ.
ಮಾವೊ ಅವರು ಕ್ರಾಂತಿ ನಿರಂತರತೆಯಲ್ಲಿ ನಂಬಿಕೆ ಉಳ್ಳವರು. ವ್ಯವಸ್ಥೆಯ ಬದಲಾವಣೆ ಮತ್ತು ವೈಚಾರಿಕ ಕ್ರಾಂತಿಗಳ ಅವಿನಾಭಾವ ಸಂಬಂಧ ನಿರಂತರತೆಯ ಔಚಿತ್ಯವನ್ನು ಅರ್ಥ ಮಾಡಿಕೊಳ್ಳಬಲ್ಲದು. ‘ಮಾರ್ಕ್ಸ್ ಎಂಗೆಲ್ಸ್, ಲೆನಿನ್ ಸತ್ತರೂ ಕ್ರಾಂತಿ ಸಾಯದು. ನಾನು ಸತ್ತರೂ ಅಷ್ಟೆ ಉತ್ತರಾಧಿಕಾರಿ ಇದ್ದೇ ಇರುತ್ತಾನೆ. ಕ್ರಾಂತಿ ಎನ್ನುವುದು ನಿರಂತರ ಪ್ರಕ್ರಿಯೆ’- ಇದು ಮಾವೊ ಚಿಂತನೆ.
ಮಾವೋ ಚಿಂತನೆಯ ಮತ್ತೊಂದು ಮುಖ್ಯ ಭಾಗವೆಂದರೆ ವಿಮರ್ಶೆ ಮತ್ತು ಸ್ವವಿಮರ್ಶೆ. ಸಮಾಜವನ್ನು ಟೀಕಿಸುವ ವಿಮರ್ಶಿಸುವ ಹಕ್ಕು ಇರುವಂತೆಯೇ ಕ್ರಾಂತಿಕಾರಿಗಳು ಸ್ವವಿಮರ್ಶೆಗೆ ಸದಾ ಒಡ್ಡಿಕೊಂಡಿರಬೇಕೆಂಬ ವಿಚಾರ ಉಚಿತವಾಗಿಯೇ ಇದೆ.
ಸೋವಿಯತ್ ಯೂನಿಯನ್ ವಿಘಟನೆ ಹೊಂದಿದ ನಂತರ ಕಮ್ಯುನಿಸ್ಟ್ ದೇಶಗಳು ನೌಕರಶಾಹಿ ಪ್ರವೃತ್ತಿಯ ಬಗ್ಗೆ ಸ್ವವಿಮರ್ಶೆ ನಡೆಯುತ್ತಿರುವುದನ್ನು ಇಲ್ಲಿ ನೆನೆಯಬಹುದಾಗಿದೆ. ವಾಸ್ತವವಾಗಿ ಮಾವೊ ತುಂಬಾ ಹಿಂದೆಯೇ ನೌಕರಶಾಹಿಯ ಪ್ರಾಬಲ್ಯವನ್ನು ವಿರೋಧಿಸಿದ್ದರು. ನೌಕರಶಾಹಿಯ ಪ್ರಾಬಲ್ಯವು ಸಮತಾವಾದಿ ಆಶಯಗಳನ್ನು ಹಾಳುಮಾಡುತ್ತದೆಯೆಂದು ತಿಳಿದಿದ್ದರು.
ಬಹುಮುಖ್ಯವಾಗಿ ಉಲ್ಲೇಖಿಸಬೇಕಾದ ಮಾವೊ ಮುಖವೆಂದರೆ ಅವರ ಸಾಂಸ್ಕೃತಿಕ ಪ್ರಜ್ಞೆ. ಅವರ ಭಾಷೆ, ಸಾಹಿತ್ಯ ಮತ್ತು ಇತರ ಕಲೆಗಳನ್ನು ಕುರಿತು ತಮ್ಮದೇ ಆದ ಗಂಭೀರ ಚಿಂತನೆ ನಡೆಸಿದ್ದಾರೆ. ಸ್ವತಃ ಕವಿಯಾಗಿ ಭಾವಗಳಿಗೆ ಭಾಷಾಭಿವ್ಯಕ್ತಿ ನೀಡಿದ್ದಾರೆ.
ರಾಜಕೀಯವೆಂದರೆ ಅಧಿಕಾರ ಹಾಗೂ ಕುರುಡು ಕುರ್ಚಿಯ ಅಹಂಕಾರವೆಂದು ಭಾವಿಸಿರುವ ನಮ್ಮ ದೇಶದ ‘ವಿದ್ಯಾವಂತ ಅನಕ್ಷರಸ್ಥ ಆಡಳಿತಗಾರರು’ ಮಾವೊ ಅಂಥವರಿಂದ ಕಲಿಯಬೇಕಾದ್ದು ಬಹಳವಿದೆ. ಕ್ರಾಂತಿ ಮಾಡದಿದ್ದರೆ ಹೋಗಲಿ ಪುಸ್ತಕಗಳನ್ನು ಓದುಸುವವ ಚಿಂತಿ ಸಾಮಾನ್ಯ ಸ್ಫೂರ್ತಿಯನ್ನಾದರೂ ಉಳಿಸಿಕೊಳ್ಳಬೇಕಾಗಿದೆ. ಸದಾ ಶಕ್ತಿ ರಾಜಕೀಯದಲ್ಲಿ ತಮ್ಮೆಲ್ಲ ಶಕ್ತಿಗಳನ್ನೂ ವ್ಯಯಮಾಡುವ ನಮ್ಮ ರಾಜಕಾರಣಿಗಳು ರಾಜಕೀಯ ಎಂಬ ಪದವನ್ನು ಚಿಲ್ಲರೆ ಕೆಲಸ ವೆಂಬ ಅರ್ಥದ ನೆಲೆಗೆ ತಂದು ನೇಣು ಹಾಕಿದ್ದಾರೆ. ಅಪರೂಪಕ್ಕೊಬ್ಬ ಗಾಂಧಿ, ನೆಹರೂ, ಲೋಹಿಯಾ, ಅಂಬೇಡ್ಕರ್ ರಂಥ ಬೆರಳೆಣಿಕೆಯ ಕೆಲವು ಗಣ್ಯ ಪುಸ್ತಕ ಪ್ರೇಮಿಗಳೂ ರಾಜಕಾರಣಿ ಕಮ್ ಲೇಖಕರು ಸಿಗುವುದೇ ನಮ್ಮ ಹೆಗ್ಗಳಿಕೆಯಾಗಿದೆ. ಚೀನಾದ ಮಾವೊ ಈ ಹೆಗ್ಗಳಿಕೆಯ ಹೆಗ್ಗುರುತುಗಳಲ್ಲಿ ಒಬ್ಬರಾಗಿ ರಾಜಕಾರಣಕ್ಕೆ ಮೌಲಿಕತೆ ತಂದಿದ್ದಾರೆ. ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ತಮ್ಮದೇ ರೀತಿಯ ಅಭಿಪ್ರಾಯಗಳನ್ನು ತುಂಬು ಗಾಂಭೀರ್ಯದಿಂದ ಪ್ರತಿಪಾದಿಸಿದ್ದಾರೆ.
ಕ್ರಾಂತಿಕಾರಿ ಮನೋಧರ್ಮದ ಮಾವೊ ಅದಕ್ಕನುಗುಣವಾಗಿ ಸಾಹಿತಿ ಮತ್ತು ಸಾಹಿತ್ಯವನ್ನು ನೋಡುತ್ತಾರೆ.
ಜನರಿಗಾಗಿ ಬರೆಯುತ್ತಿಲ್ಲ, ಆತ್ಮತೃಪ್ತಿಗಾಗಿ ಬರೆಯುತ್ತೇನೆ ಎನ್ನುವುದು ಆತ್ಮವಂಚನೆಯ ಎಂದು ಹೇಳುವ ಮಾವೊ ‘ಲೇಖಕನು ಆಯುಧ ಹಿಡಿದು ಹೋರಾಡಬೇಕಿಲ್ಲ ಹೋರಾಟಗಾರರ ಪರ ಬರೆದರೂ ಸಾಕು. ತನ್ನ ಕರ್ತವ್ಯ ನಿರ್ವಹಿಸಿದಂತಾಗುತ್ತದೆ’ ಎಂದು ನಂಬಿದ್ದಾರೆ. ಬದ್ಧತೆಯನ್ನು ಕುರಿತಂತೆ ಇನ್ನು ತೌಡು ಕುಟ್ಟುತ್ತಿರುವ ಕನ್ನಡ ವಿಮರ್ಶಾ ವಲಯಕ್ಕೆ ವಿವೇಕ ಹೇಳುವಂತೆ ಮಾವೊ ಹೀಗೆ ಹೇಳುತ್ತಾರೆ. ಬದ್ಧತೆಯ ಸಾಹಿತ್ಯವೆಂದರೆ ಘೋಷಣೆಗಳಲ್ಲ. ಸಾಹಿತ್ಯಿಕ ಮೌಲ್ಯ ಮುಖ್ಯ. ಆದರೆ ಸಾಹಿತ್ಯಕ ಮೌಲ್ಯವೆಂದರೆ ಸೌಂದರ್ಯವಾಗಿದ್ದರೂ ಸ್ವೀಕಾರಾರ್ಹವಲ್ಲ.
ಸಾಹಿತ್ಯವನ್ನು ಜನಪ್ರಿಯಗೊಳಿಸಬೇಕೆನ್ನುವುದು ಮಾತ್ರ ಅವರ ಅಪೇಕ್ಷೆಯಾಗಿತ್ತು. ಸಾಹಿತಿಯಾದವನು ಜನರ ಬದುಕು ಮತ್ತು ಭಾಷೆಯನ್ನು ಒಳಹೊಕ್ಕು ನೋಡಬೇಕು ಎಂದು ಪ್ರತಿಪಾದಿಸಿದ ಮಾವೊ ಉತ್ತಮ ಕೃತಿಗಳನ್ನು ಜನರಿಗೆ ಪರಿಚಯಿಸಿ ಜನಪ್ರಿಯ ಗೊಳಿಸಬೇಕು ಎಂದು ಆಶಿಸಿದ್ದರು. ಜನಭಾಷೆಗಳ ಬಗೆಗೆ ಅಪಾರ ಗೌರವ ಪ್ರೀತಿಗಳನ್ನು ಹೊಂದಿದ್ದ ಮಾವೊ ಮತ್ತು ಲೆನಿನ್‌ರಿಂದ ನಮ್ಮ ದೇಶದ ಕಮ್ಯುನಿಸ್ಟರು ಕಣ್ತೆರೆಯಬೇಕಾಗಿದೆ. ಕಮ್ಯುನಿಸಂ ಎಂದರೆ ಕಾರ್ಖಾನೆಯ ಕಾರ್ಮಿಕ ಸಂಘಟನೆಯಷ್ಟೇ ಎಂದು ನಂಬುವ ಇವರಿಗೆ ರಾಜಕಾರಣವೆನ್ನುವುದು ಭಾಷೆ, ಸಾಹಿತ್ಯ, ಕಲೆ ಮುಂತಾದ ನೆಲೆಗಳಿಂದ ಪುಷ್ಟಿ ಪಡೆಯಬೇಕೆಂಬ ಅಂಶ ಬೇಗ ಅರ್ಥವಾಗುವುದಿಲ್ಲ. ಆದರೆ ಮಾವೊ ರೀತಿಯ ನಾಯಕರು ಸಾಹಿತ್ಯಾದಿ ಕಲೆಗಳು ಸಾಮಾನ್ಯರಲ್ಲೂ ಜನಪ್ರಿಯ ವಾಗಬೇಕೆಂದು ಬಯಸಿದರು.
ಜನರಲ್ಲಿ ನಂಬಿಕೆಯಿಟ್ಟಿರುವ ಯಾರಾದರೂ ಉತ್ತಮ ಕೃತಿಗಳನ್ನು ಜನಪ್ರಿಯಗೊಳಿಸುವ ಆಶಯವನ್ನು ವಿರೋಧಿಸುವುದಿಲ್ಲ. ಅದರ ಸಾಧ್ಯ ಸಾಧ್ಯತೆಗಳ ಬಗ್ಗೆ ಭಿನ್ನಾಭಿಪ್ರಾಯ ವಿರಬಹುದು ಅಷ್ಟೇ. ಅದೇ ರೀತಿ ಜನರೊಂದಿಗೆ ಕೆಲಸ ಮಾಡುವ ಸಂವೇದನಾಶೀಲ ಹೋರಾಟಗಾರನು ಹಿಂದೆ ಮುಂದೆ ನೋಡದೆ ಐತಿಹ್ಯ-ಪುರಾಣಗಳನ್ನು ಕುರುಡು ನಿರಾಕರಣೆಗೆ ಒಳಪಡಿಸುವುದಿಲ್ಲ. ಜನರ ನಂಬಿಕೆ ನೆಲೆಗಳಾದ ಇವುಗಳ ಬಳಕೆಯಿಂದ ಬದಲಾವಣೆ ಆಶಯಕ್ಕೆ ಶಕ್ತಿ ತುಂಬುತ್ತಾನೆ.
ಮಾವೊ ಮಾಡಿದ್ದೂ ಇದನ್ನೇ. ಜನಪ್ರಿಯ ರೂಪಗಳನ್ನು ಕ್ರಾಂತಿಕಾರಿ ಭಾವನೆಗಳ ಅಭಿವ್ಯಕ್ತಿಗೆ ಬಳಸಿಕೊಂಡ ಅವರು ಈ ಕಾರಣಕ್ಕಾಗಿ ಐತಿಹ್ಯ ಮತ್ತು ಪುರಾಣಗಳನ್ನು ಕವಿತೆಯ ಭಾಗವಾಗಿಸಿಕೊಂಡರು.
ಹೀಗೆ ಸಾಹಿತ್ಯ ಮತ್ತು ರಾಜಕಾರಣಗಳ ಬಗ್ಗೆ ಅದ್ಭುತ ಚಿಂತನಶೀಲರಾದ ಮಾವೊ ಪ್ರಮುಖವಾಗಿ ಜನರಲ್ಲಿ ನಿಷ್ಠೆ ಮತ್ತು ನಂಬಿಕೆಗಳನ್ನಿಟ್ಟಿದ್ದ ರಾಜಕೀಯ ವ್ಯಕ್ತಿ. ಇವರಿಗೆ ಜನರ ಮೇಲೆ ಎಷ್ಟು ನಂಬಿಕೆಯಿತ್ತೆಂದರೆ ಹಿರೋಷಿಮಾ ಬಾಂಬ್ ದಾಳಿಯಿಂದ ನಾಶವಾದಾಗ ಜಗತ್ತಿನ ಜನರು ಬಾಂಬಿಗೆ ವಿರುದ್ಧವಾದವರೆಂದು ಪ್ರತಿಪಾದಿಸಲು ಮರೆಯಲಿಲ್ಲ. ಕೊನೆಯಲ್ಲಿ ಈ ಬಾಂಬು ಜನರನ್ನು ನಾಶ ಪಡಿಸುವುದಿಲ್ಲ. ಜನರು ಬಾಂಬನ್ನು ನಾಶಪಡಿಸುತ್ತಾರೆ ಎಂದು ಅಚಲವಾಗಿ ನಂಬಿದ್ದ ಮಾವೊ ಅವರ ಈ ಮಾತುಗಳು ಇಂದಿಗೂ ಸ್ಪೂರ್ತಿದಾಯಕವಾಗಿವೆ.
ಮಾವೊ ವಿಚಾರಗಳ ಬಗ್ಗೆ ಭಿನ್ನಾಭಿಪ್ರಾಯ ವಿರಲು ಸಾಧ್ಯ. ಆದರೆ ಮಾವೊ ಅವರ ಸಂಕಲ್ಪ ಶಕ್ತಿ, ಹೋರಾಟ, ಮನೋಧರ್ಮ, ಆಶಾವಾದ ಮತ್ತು ಸಮುದಾಯ ಪ್ರೀತಿಗಳು ಪ್ರಶ್ನಾರ್ಹ ವಾಗಲು ಸಾಧ್ಯವಿಲ್ಲ. ಮಾವೊ ಅವರ ಈ ಗುಣಗಳು ಎಷ್ಟು ಗುರುತರವಾಗಿದ್ದವೆಂಬುದಕ್ಕೆ ಅವರ ಕವಿತೆ ಯೊಂದರ ಕೆಳಕಂಡ ಸಾಲುಗಳು ಸಾಕ್ಷಿಯಾಗಿವೆ.
‘ಮೇಲೇರುವ ಸಂಕಲ್ಪ ಇರುವುದು ನಿಜವಾದರೆ
ಲೋಕದೊಳಗೆ ಇಲ್ಲವೇ ಇಲ್ಲ ಕಷ್ಟ ಪರಂಪರೆ’.
*****
೨೧-೮-೧೯೮೪ ಮಾರ್ದನಿ