ಹಿಂದೆಲ್ಲ ಬಣ್ಣಬಣ್ಣದ ನಾಜೂಕು ಬಳೆಗಳ
ಕಂಡಾಗಲೆಲ್ಲಾ ಮನ ನವಿಲಾಗುತ್ತಿತ್ತು.
ಕಿಣಿಕಿಣಿ ನಾದ ಕಿವಿ ತುಂಬುತ್ತಿತ್ತು. ಆದರೆ
ಬಂಗಾರದ ಮಿನುಗು ಬಳೆಗಳು
ಹಸಿರು ಗಾಜಿನ ಬಳೆಗಳು
ದಿನಕಳೆದು ಗಡುಸಾದಂತೆ ಕೈಗಳು
ಗಾಯಗೊಳಿಸುತ್ತವೆ ತೊಡುವಾಗಲೆಲ್ಲಾ..
ಸಂಕೋಲೆಯ ಕಂಕಣ
ಡಂಭ ಜೀವನದ ಸುರುಳಿ
ಬಳೆ ತೊಡುವುದೆಂದರೆ ನನ್ನ
ಕೈಗಳಿಗೆ ಬೇಡಿ.
ಅಂಟಿಕೊಂಡ ಮೂಗುತಿ
ಮೂಗುತಿಯೇ ಇಲ್ಲದ
ನಿರಾಭರಣ ಮುಖಗಳ
ಕಂಡಾಗಲೆಲ್ಲಾ ನನ್ನ ಅಣಕಿಸುತ್ತದೆ.
ಆಗಾಗ ಎಲ್ಲೆಲ್ಲೋ ತೊಡರಿಕೊಂಡು
ಮೂಗು ಘಾಸಿಗೊಳ್ಳುವಾಗಲೆಲ್ಲಾ,
ಅಂದುಕೊಳ್ಳುತ್ತೇನೆ.. ಇದರ ಹಂಗೇ ಬೇಡ.
ತೆಗೆದು ಪಕ್ಕಕ್ಕಿಡಲೇ… ಎಂದು.
ಅರಿಸಿನದ ನಂಜು ತೆಗೆಯುವ ಕೊಂಬು
ಕೆಲವೊಮ್ಮೆ ಕುತ್ತಿಗೆಗೆ ಕೆರೆತ ತಂದಿಡುತ್ತದೆ.
ತಾಳಿಯ ನೀರು ಮೈಮೇಲೆ ಬಿದ್ದರೂ
ಕಡಿತ ಕಾಡುತ್ತದೆ.
ಮುಲಾಮುಗಳ ಸಾಲು ಹೆಚ್ಚು
ಹೆಚ್ಚುತ್ತಾ ಹೋದರೂ
ತುರಿಕೆ ನಿಲ್ಲುವುದಿಲ್ಲ.
ಮುಂಚಿನಂತೆ ಈಗ ನನ್ನ ಕಾಲಿಗೆ
ಗೆಜ್ಜೆ ಶೋಭಿಸುವುದಿಲ್ಲ.
ಗೆಜ್ಜೆಯ ಸುತ್ತ ಕಟ್ಟಿಕೊಂಡ ಆ ಸದ್ದು
ತಾರಕ್ಕೇರಿದಂತೆ ಸಂತೆಯೇ ಭುಗಿಲೇಳುತ್ತದೆ.
ತನು ಬಂಧನದ ಕಡಿವಾಣಗಳು
ಕಟ್ಟಿಹಾಕುವುದ ಅರಿತಿಲ್ಲ-
ಮನಗುದುರೆಗೆ ನಾಗಾಲೋಟ
ಕಲಿಸಬೇಕಿಲ್ಲ.
ಎಂದರೆ ಅವನೆಂದ ಒಳಹೊರಗು ಅರಿತರೆ
ತಾಳಿ, ನತ್ತು, ಬಳೆ ನಿನಗೆ ಬೇಕೆಂದಿಲ್ಲ
ಹೊರಗು ಮಾಡಬೇಕಿಲ್ಲ,
ಒಳಜಡಿದು ಬೀಗ ಹಾಕಬೇಕಿಲ್ಲ.
ಮತ್ತೆಲ್ಲವೂ ನಿನ್ನಿಷ್ಟ,
ನಿನ್ನೊಳಗೆ ನಾ
ನಿರುವುದೇ ನನ್ನ ಅದೃಷ್ಟ.
*****