ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ್ರ ಮಹಾರಸ್ತೆ ಅದು. ಈಗೀಗ ಅಪಘಾತಗಳ ಸಂಖ್ಯೆ ಕೊಂಚ ಕಡಿಮೆಯೆಂದೆ ಹೇಳಬೇಕು. ಆದರೂ ಸೀಜನ್‌ಗೆ ದಿನಕ್ಕೆ ನಾಲ್ಕು ಅಪಘಾತ ಎರಡು ಸಾವು ಅಪರೂಪವಲ್ಲ. ಆದರೆ ಅದೊಂದು ಕಾಲವಿತ್ತು. ಮರಣ ಮೃದಂಗ ನಿರಂತರವಾಗಿ ಬಾರಿಸುತ್ತಿದ್ದ ಕಾಲ. ಮ್ಯಾಂಗನೀಸ ಅದಿರು ರಾಜನ ಹಾರಾಟದ ಕಾಲ. ೩೦೦ ಕೀ.ಮೀ ಅಂತರದಲ್ಲಿ ದಿನಕ್ಕೆ ಎಳೆಂಟು ಸಾವು ಸಾಮಾನ್ಯವಾಗಿತ್ತು. ವ್ಯಕ್ತಿಯೊಬ್ಬ ಸತ್ತರೆ ಇರುವೆ ಸತ್ತಂತೆ ಎಂಬಂತೆ ಮತ್ತದೇ ವೇಗದ ಲಾರಿಗಳು. ಇನ್ನು ದನಕರುಗಳ ಪಾಡಂತೂ ಕೇಳುವವರೇ ಇರಲಿಲ್ಲ. ಹಣದ ಹಿಂದೆ ಬಿದ್ದ ಜಗತ್ತು ಅದು. ಹುಬ್ಬಳ್ಳಿ ಕಾರವಾರದ ನಡುವಿನ ಅರಬೈಲ ಘಾಟನ್ನು ದಾಟುವುದೆಂದರೆ ಎಂಥಹ ಚಾಲಕನು ಬೆಸ್ತು ಬೀಳುತ್ತಾನೆ. ಇನ್ನು ಕೆಳಗಿಳಿಯುತ್ತಿದ್ದಂತೆ ಸ್ವಲ್ಪ ಸಮತಟ್ಟಾದ ರಸ್ತೆ. ಆದರೆ ಮತ್ತೆ ಮುಂದೆ ಮುಂದೆ ಹೋದಂತೆ ತಿರುವುಗಳು ಬಹಳ. ಹಿರಿಯೂರಿನಿಂದ ಮುಂದೆ ಹತ್ತು ಕೀ.ಮೀ.ದೂರದಲ್ಲಿ ಒಂದು ಅಪಾಯಕಾರಿ ತಿರುವು.ಎರಡು ಹೆಜ್ಜೆ ಮುಂದೆ ಕರಾಳ ಇತಿಹಾಸ ಹೊಂದಿದ್ದೊಂದು ಸೇತುವೆ.
ಅದೊಂದು ಮಟಮಟ ಮಧ್ಯಾಹ್ನ. ಬಹುಶಃ ಆ ದಂಪತಿಗಳು ಹುಬ್ಬಳ್ಳಿಯಿಂದ ಕಾರವಾರದತ್ತ ಪಯಣಿಸುತ್ತಿದ್ದರು. ಸ್ವತಃ ಪತಿಯೇ ವಾಹನ ಚಲಾಯಿಸುತ್ತ್ತಿದ್ದರಿಂದ ಪತ್ನಿ ನಿರುಮ್ಮಳಾಗಿ ಕುಳಿತಿದ್ದಳು. ತಿರುವಿನಲ್ಲಿ ದಾಟಿ ಇನ್ನೇನು ಮುಂದೆ ಬಂದೆ ಎನ್ನುವಷ್ಟರಲ್ಲಿ ಎದಿರಿನಿಂದ ಅದಿರು ಲಾರಿಯೊಂದು ಯಮಧೂತನಂತೆ ಅಡ್ಡವಾಗಲು ಆ ಕಾರಿನ ಚಾಲಕ ಬಲಕ್ಕೆ ಕಾರನ್ನು ಹೊರಳಿಸಿದ್ದೆ ತಡ. ಕಾರು ಸೇತುವೆಗೆ ಗುದ್ದಿದ ರಭಸಕ್ಕೆ ಚಾಲಕನ ಸ್ಥಾನದಲ್ಲಿದ್ದ ಆಕೆಯ ಪತಿ ಕ್ಷಣಾರ್ಧದಲ್ಲಿ ಒದ್ದಾಡಿ ಮೃತಪಟ್ಟಿದ್ದ. ಎರಡು ಕಾಲುಗಳು ಕತ್ತರಿಸಿ ಬಿದ್ದಿದ್ದವು. ಗಂಭೀರವಾಗಿ ಗಾಯಗೊಂಡ ಆಕೆ ಆ ಸ್ಥಿತಿಯಲ್ಲಿಯೇ ಯಾತನಾ ಭರಿತ ಧ್ವನಿಯಲ್ಲಿ ರೋಧಿಸತೊಡಗಿದಳು. ’ನೀರು, ನೀರು’ ಎಂದು ಜೀವದ ಕೊನೆಯ ಬೇಡಿಕೆಗೆ ತಳಮಳಿಸತೊಡಗಿದಳು. ಆಸುಪಾಸು ಯಾರು ಇಲ್ಲದ ಸಮಯ ಜೊತೆಗೆ ಸ್ಥಳವು ಕೂಡ. ಅಷ್ಟರಲ್ಲೇ ಮೋಟಾರು ಬೈಕೊಂದು ರಭಸವಾಗಿ ಬಂದದ್ದು, ಸಡನ್ನಾಗಿ ಬ್ರೇಕ ಒತ್ತಿ ನಿಂತಿತು. ಯುವಕರಿಬ್ಬರು ಓಡೋಡಿ ಬಂದರು.
ಏ,ಏ,ಏ,ಅಯ್ಯೋ! ಏನಾಯ್ತಾ?, ಬದಕರ ಇಲ್ವಾ? ಪಾಪ.ಯಾವೂರವರೇನಾ?. ಎನ್ನುತ್ತಾ ಬಂದವರ ಮುಖದಲ್ಲಿ ಗಾಬರಿ. ಅಪಘಾತಗೊಂಡವರ ಬಗ್ಗೆ ಅನುಕಂಪದಿಂದ ಸಹಾಯ ಮಾಡಬಂದರು. ಅವರು ಪರವೂರಿನವರಲ್ಲ. ಅಲ್ಲಿಂದ ಸುಮಾರು ನಾಕೈದು ಫರ್ಲಾಂಗ ದೂರದ ಕೆರೆಕೊಪ್ಪದವರು. ಸ್ನೇಹಿತರು. ಕಾರಿನ ಹತ್ತಿರ ಬರುತ್ತಿದ್ದಂತೆ ಒಳಗಿನ ಭೀಭತ್ಸ ದೃಶ್ಯಕ್ಕೆ ಕ್ಷಣ ವಿಚಲಿತಗೊಂಡರು. ಅಷ್ಟೇ, ಮರುಕ್ಷಣ ಕಾರಿನಲ್ಲಿದ್ದವರ ಕಡೆ ಗಮನಹೋಗುತ್ತಲೂ ಆಗಲೇ ಮೃತನಾದ ಪತಿ ಹಾಗೂ ಅರೆಜೀವವಾಗಿ ಬಿದ್ದ ಪತ್ನಿ ದೃಷ್ಟಿಗೆ ಬಿದ್ದರು. ಕೈ ಕುತ್ತಿಗೆಯ ತುಂಬಾ ಬಂಗಾರದ, ವಜ್ರದ ಆಭರಣ ಧರಿಸಿದ್ದ ಆಕೆ ಆಘಾತಗೊಂಡಿದ್ದಳು. ಆದರೆ ಬದುಕುವಂತಿದ್ದಳು. ಪ್ರಜ್ಞಾವಸ್ಥೆಯಲ್ಲಿದ್ದಳು. ತರುಣರ ಕಣ್ಣುಗಳಲ್ಲಿ ಈಗ ಆವರೆಗಿನ ಅನುಕಂಪ ಸತ್ತುಹೋಗಿತ್ತು. ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರು. ಪಕ್ಕದಲ್ಲೆ ಆಕೆಯ ಒಡವೆಗಳ ಪೆಟ್ಟಿಗೆ, ಹಣದ ಚೀಲ ಅರೆತೆಗೆದು ಕೆಲವೆಲ್ಲಾ ಸ್ವಲ್ಪ ಚೆಲ್ಲಾಪಿಲ್ಲಿಯಾಗಿದ್ದವು. ಬಹುಶಃ ಯಾವುದೋ ಆಭರಣ ಮಳಿಗೆಯ ಕುಟುಂಬಸ್ಥರೆಂದು ತಿಳಿಯುವಂತಿತ್ತು. ಇವರನ್ನು ಕಂಡ ಕೂಡಲೇ ಆಕೆ ಕ್ಷೀಣ ಸ್ವರದಲ್ಲಿ ಮತ್ತೆ ನೀರು, ನೀರು ಎಂದು ಗೋಗರೆದಳು. ಆದರೆ ತರುಣರ ಮನಸ್ಸಿನ ತುಂಬಾ ಈಗ ಕರುಣೆ ಎಂಬ ಸ್ಥಳದಲ್ಲಿ ಲೋಭವೆಂಬ ಪಿಶಾಚಿ ಆಕ್ರಮಿಸಿಕೊಂಡಿತ್ತು. ಸಣ್ಣ ಪುಟ್ಟ ವ್ಯವಹಾರ ಮಾಡಿಕೊಂಡು ಏನೋ ಮಜಾ ಉಡಾಯಿಸುತ್ತಿದ್ದ ತರುಣರಿಗೆ ಒಮ್ಮೆಲೆ ಇಷ್ಟು ಸಂಪತ್ತನ್ನು ನೋಡಿ ಕಳೆದುಕೊಳ್ಳಲು ಮನಸ್ಸಾಗಲಿಲ್ಲ. ಈಗವರು ತಡಮಾಡಲಿಲ್ಲ. ಒಬ್ಬ ಭರಭರನೆ ಆಕೆಯ ಕೈಗಳಲ್ಲಿದ್ದ ಬಳೆಗಳನ್ನು ಬಲವಂತವಾಗಿ ಎಳೆದುತೆಗೆದ. ಆಕೆ ಚೀರತೊಡಗಿದರೂ ಬಿಡದೆ ಇನ್ನೊಬ್ಬ ಕುತ್ತಿಗೆಗೆ ಕೈಹಾಕಿ ಸರಗಳನ್ನು ಸೆಳೆಯತೊಡಗಿದ. ಆ ರಭಸಕ್ಕೆ ಆಕೆಯ ಕುತ್ತಿಗೆ ಸೆರೆ ಕಿತ್ತು ಹೋಯ್ತು. ಆಕೆ ನಾಲ್ಕೈದು ನಿಮಿಷಗಳಲ್ಲಿ ಪ್ರಾಣ ಬಿಟ್ಟಳು. ಇಬ್ಬರಿಗೂ ಚರ್ಚಿಸಲು ಸಮಯವಿರಲಿಲ್ಲ. ತರುಣರಿಬ್ಬರು ಮತ್ಯಾರಾದರೂ ಕಂಡಾರೆಂಬ ಭಯದಲಿ ದಡಬಡಾಯಿಸಿ ಸೆಳೆದುಕೊಂಡ ಒಡವೆ, ಬಂಗಾರದ ಪೆಟ್ಟಿಗೆ, ಹಣದ ಚೀಲ ಎಲ್ಲವನ್ನು ಎತ್ತಿಕೊಂಡು ಪಲಾಯನಗೈದರು.
ವರ್ಷಗಳು ಉರುಳಿದವವು. ಎಲ್ಲವನ್ನು ಬದಲಾಯಿಸುವ ಕಾಲಕ್ಕೆ ತಡೆಯಿಲ್ಲ. ಮಹೇಂದ್ರನೀಗ ಮ್ಯಾಂಗನೀಸ ಅದಿರು ವ್ಯವಹಾರದಲ್ಲಿ ತೊಡಗಿಕೊಂಡಿದ್ದಾನೆ. ಮರಳು ಮಾಫಿಯಾ ಕೂಡ ಅವನ ವ್ಯವಹಾರಗಳಲ್ಲಿ ಒಂದು. ಎಡಬಿಡದ ದುಡಿಮೆ ಆತನದು. ಪ್ರಭಾವಿ ರಾಜಕಾರಣಿಗಳ ಸ್ನೇಹಿತ ಕೂಡ. ಹಾಗಂತ ಗೆಳೆಯ ಪ್ರಕಾಶ ಸುಮ್ಮನೆ ಕುಳಿತಿಲ್ಲ.ಒಂದೇ ಬುದ್ಧಿಯ ಜನ ಎಲ್ಲವನ್ನು ಒಟ್ಟಾಗಿಯೇ ಮಾಡಿದವರು ಹಾಗಿರುವಾಗ ಪ್ರಕಾಶ ಸುಮ್ಮನಿದ್ದಾನೆಯೇ? ಅವನೂ ಅದಿರು ಕಳ್ಳ ವ್ಯವಹಾರದಲ್ಲಿ ಮುಳುಗಿ ಅಕ್ರಮ ಸಂಪತ್ತಿನ ರಾಜನಾಗತೊಡಗಿದ. ಪಳಗತೊಡಗಿದ. ಇಬ್ಬರ ಗುಡಿಸಲಂತಿದ್ದ ಮನೆಗಳು ಈಗ ಬಂಗಲೆಗಳಾದವು. ಎರಡೂ ಮನೆಗಳ ಮುಂದೆ ನಾಲ್ಕು ನಾಲ್ಕು ಅದಿರು, ಇಲ್ಲ ಮರಳು ಲಾರಿಗಳು ನಿಲ್ಲ ತೊಡಗಿದವು. ಎಲ್ಲೆಂದರಲ್ಲಿ ಇವರದೇ ಬೈಕುಗಳ ಸದ್ದು. ಇವರೂ ಹಾಕಿದ ಎಂಜಲಿಗೆ ಬಾಯ್ಬಿಡುವ ಬೋಪರಾಕ್ ಹಲ್ಲು ಕಿಸುಕ ಖದೀಮರು ಹುಟ್ಟಿಕೊಂಡರು. ಒಂದು ರೀತಿಯಲ್ಲೀಗ ನಿಧಾನವಾಗಿ ಎರಡು ಗುಂಪುಗಳು ಹುಟ್ಟಿಕೊಂಡವು. ರಾಜಕೀಯ ಜಗತ್ತು ಇಬ್ಬರನ್ನೂ ಆಕರ್ಷಿಸತೊಡಗಿತು. ಸ್ನೇಹವೇನೋ ಅಲ್ಪ ಸ್ವಲ್ಪ ಇತ್ತು. ಮಹೇಂದ್ರ ಆಗಾಗ ಪ್ರಕಾಶನ ಮನೆಗೆ ಬರುತ್ತಲೂ, ಹೋಗುತ್ತಲೂ ಇದ್ದ. ಅದು ಪ್ರಕಾಶನಿಗೆ ಗೊತ್ತಿಲ್ಲದ ಇನ್ನೊಂದು ಆಕರ್ಷಣೆ. ಪ್ರಕಾಶನ ತಂಗಿಯೊಬ್ಬಳು ಗಂಡನನ್ನು ಬಿಟ್ಟು ಬಂದು ವರ್ಷಗಳಾಗಿತ್ತು. ಹಣದ ಹರಿವು ಹೆಚ್ಚಾಗುತ್ತಿದ್ದಂತೆ ಪ್ರಕಾಶ ಮನೆ ಸಮೀಪವೇ ಒಂದು ಸಣ್ಣ ಮನೆಯನ್ನು ಆಕೆಗೆ ಕಟ್ಟಿಸಿಕೊಟ್ಟಿದ್ದ. ಆಕೆಗೂ ವಿಚ್ಚೇದನದ ಹಣವೂ ಸ್ವಲ್ಪ ಬಂದಿದ್ದು ಆರಾಮಾಗೆ ಇದ್ದಳು. ಪ್ರಕಾಶನ ಮನೆಗೆ ಹೋಗಿ ಬಂದು ಮಾಡುತ್ತಿದ್ದ ಮಹೇಂದ್ರ ಮತ್ತವಳ ಮಧ್ಯೆ ಅದು ಹೇಗೋ ಒಂದು ಬಂಧ ಏರ್ಪಟ್ಟಿದ್ದು, ವಿಷಯ ಎಲ್ಲ ಕಡೆಯಲ್ಲೂ ಹರಿದಾಡತೊಡಗಿದರೂ ಪ್ರಕಾಶನಿಗೆ ಮಾತ್ರ ತಿಳಿದಿರಲಿಲ್ಲ. ಅದರಿಂದಾಗುವ ಅನಾಹುತದ ಲೆಕ್ಕ ಬಹುಶಃ ಅಂದಾಜು ಯಾರಿಗೂ ಇರಲಿಲ್ಲ. ಮದುವೆಯಾಗದ ಪ್ರಕಾಶ ಹೆಣ್ಣಿನ ವಿಷಯದಲ್ಲಿ ಹಲ್ಲುಗಿಂಜುವವನಾಗಿರಲಿಲ್ಲ. ಒಳ್ಳೆಯ ಹುಡುಗಿ ತಲಾಷಿಲಿದ್ದ.
ಇಂವ ಕಲಿದೇ ಇದ್ರು ಆಸ್ತಿ ನೋಡೆ ಹಿಣ್ಣ ಕುಡ್ತರ ತಾಯಿ ಆಗಾಗ ಜಂಬಕೊಚ್ಚಿಕೊಳ್ಳುತ್ತಿದ್ದರು. ಇದ್ದಾಗ ಇರುವುದಕ್ಕಿಂತ ಹೆಚ್ಚಾಗಿ ತೋರಿಸಿಕೊಳ್ಳುವುದು, ಜಬದ್ರಸ್ತ ಬದುಕಿನ ಬಡಾಯಿ ಆ ಜನರ ಬದುಕಿನ ಬಡಿವಾಣ.
ಏ ಮಹೀ, ನೀ ಪದೇ ಪದೇ ಮಾನಿ ಕಡೆ ಬರಬ್ಯಡ.ಅಣ್ಣ ಯೇಗೇಗ ಬಾಳ ಸಿಟ್ಟ, ಸಿಟ್ಟ ಮಾಡ್ತ್ಯ.ನಮ್ಮ ವಿಷ್ಯ ಏನಾದ್ರು ಗುತ್ತಾದ್ರೇ.. ಏನಾತಿದೇನಾ?. ಕಾಮಾಕ್ಷಿ ಆ ದಿನ ಮಹೇಂದ್ರನಿಗೆ ನಾಜೂಕಾಗೇ ಸುದ್ದಿ ಮುಟ್ಟಿಸಿದಳು. ನಿಮ್ಮ ಅಣ್ಣ ಏನ ಬಲರಾಮ,ಹಾಂಗೇನರೂ ಅಂವಗೆ ಗುತ್ತಾದ್ರೆ ಏನ ಮಾಡ್ತ್ಯ ನೋಡೆ ಬಿಡ್ತಿ.ನಿಂಗೂ ಉಂದ ಮಂಗಲಸೂತ್ರ ಕಟ್ಟೆಬಿಡ್ತಿ. ನೋಡೆ ಬಿಡ್ವ.ಎಂದಾಕೆಗೆ ಮರಳು ಮಾತನಾಡಿ ಪುಸಲಾಯಿಸಿದ.
ಆದರೆ ಅದು ಅಷ್ಟು ಸುಲಭವಾಗಿರಲಿಲ್ಲ. ಹೆಣ್ಣು ಕೊಟ್ಟ ಮಾವ ಸಮಾಜದಲ್ಲಿ ಆಸ್ತಿವಂತನಾಗಿದ್ದು ಮಹೇಂದ್ರನ ಮೇಲೆ ಹಿಡಿತ ಚೆನ್ನಾಗಿಯೇ ಇಟ್ಟುಕೊಂಡಿದ್ದ. ಮೊದಲೆ ಊಸರವಳ್ಳಿಯ ಸೋಗಿನ ಮಹೇಂದ್ರನ ನಿಜವಾದ ಬಣ್ಣ ಆಕೆಗಂತೂ ತಿಳಿದಿರಲಿಲ್ಲ. ಮಹೇಂದ್ರನ ಮದುವೆಯಾಗಿ ಆಗಲೇ ನಾಲ್ಕು ವರ್ಷಗಳಾಗಿತ್ತು. ಒಂದು ಮಗುವು ಆಗಿ ಹೆಂಡತಿ ಯಾವಾಗಲೂ ಮಗುವಿನ ಆರೈಕೆಯಲ್ಲೆ ಉಳಿಯುತ್ತಿದ್ದದ್ದು, ಮಹೇಂದ್ರನಿಗೆ ಇನ್ನೊಂದು ಬಯಕೆಗೆ ಬೆದೆ ಬಂದಿತ್ತು. ಇತ್ತ ಇದು ಕೂಡ ಕೈತಪ್ಪಿದರೆ ಎನ್ನುವ ಚಿಂತೆಯಲ್ಲಿ ಗೆಳೆಯ ಪ್ರಕಾಶ ಈಗೀಗ ವೈರಿಯಾಗಿ ಕಾಣಿಸತೊಡಗಿದ. ಆದರೆ ಹಂಚಿಕೊಂಡ ಗಂಟಿನ ಗುಟ್ಟು ಮಾತ್ರ ಕಗ್ಗಂಟಿನ ಕೆಂಡವಾಗಿ ಎದೆಯೊಳಗೆ ಉಳಿಸಿಕೊಳ್ಳಲು ಆಗದೇ ಹೊರಹಾಕಲು ಆಗದೇ ಇಬ್ಬರನ್ನೂ ಕಾಡತೊಡಗಿತ್ತು. ಯಾರಾದರೂ ಒಬ್ಬರು ಮೇಲೆ ಹೋದರೆ ಮಾತ್ರ ಈ ಸಮಸ್ಯೆಗೆ ಪರಿಹಾರ ಎಂಬುದು ಇಬ್ಬರ ಮನದಲ್ಲೂ ಹೊಂಚುಹಾಕುತ್ತಿತ್ತು.
ಜುಲೈ ತಿಂಗಳಲ್ಲಿ ಸರಿಯಾಗಿ ಗ್ರಾಮ ಪಂಚಾಯತ ಚುನಾವಣೆಯೂ ಘೋಷಣೆಯಾಗಿ ಬಿಟ್ಟಿತು. ಪ್ರಕಾಶನ ಕಡೆ ಜನ ಅವನನ್ನು ಹುರಿದುಂಬಿಸಿ ಹಿರಿಯೂರು ಗ್ರಾಮಪಂಚಾಯತಿಗೆ ಕೆರೆಕೊಪ್ಪದಿಂದ ಹಿಂದುಳಿದ ಅಭ್ಯರ್ಥಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವಂತೆ ಮಾಡಿದರು. ಇದು ಮಹೇಂದ್ರನಿಗೆ ಸಹನೆಯಾಗಲಿಲ್ಲ.
ಗೆಳೆಯರೊಡನೆ ಚರ್ಚಿಸಿದ ಇಂವ್ಯಾಕೆ ಇಲೆಕ್ಷನೆ ನಿಲ್ಲಬೇಕಾಗತ, ನಾ ನಿಲ್ತಿ ಅಂದ ಗುತ್ತಿದ್ರು ಹಿಂಗ ಮಾಡ್ಯ. ಮಾನಗೆಟ್ಟಂವ. ಇಂತೋರಿಗೆಲ್ಲ ಯಾವ ಹೆಲ್ಪು ಮಾಡುಕಿಲ್ಲ.ಖದೀಮರ್ರ. ಎನ್ನುತ್ತಲೇ ಗೆಳೆಯರೆಲ್ಲ ’ನೀನು ನಿಂತೆ ಬಿಡ, ನೋಡೆ ಬಿಡ್ವ ಉಂದ ಕೈಯ, ಆಂವಗೂ ಬಗೀಲೆ ಬುದ್ದಿ ಬರ್‍ಲೆ ಎಂದು ಹುರಿದುಂಬಿಸಿದರು.
ಮೊದಲೇ ತಾನೇ ಅಧ್ಯಕ್ಷನಾಗುವ ಕನಸು ಕಾಣುತ್ತಿದ್ದ ಮಹೇಂದ್ರ ಯೋಚಿಸಲೇ ಇಲ್ಲ. ಮರುದಿನ ಅವನ ನಾಮಪತ್ರವು ಸಲ್ಲಿಕೆಯಾಗಿ ಪಕ್ಕದ ಊರು ಮಾಯಕೆರೆಯಿಂದ ಸಾಮಾನ್ಯ ಅಭ್ಯರ್ಥಿ ಸ್ಥಾನಕ್ಕೆ ಸ್ಪರ್ಧಿಯಾಗಿ ನಿಂತೆ ಬಿಟ್ಟ. ಸ್ನೇಹದ ಜಾಗವನ್ನು ಈಗ ಪೂರ್ತಿಯಾಗಿ ದ್ವೇಷ ಆಕ್ರಮಿಸಿಕೊಳ್ಳತೊಡಗಿತು. ಆದರೂ ಇಬ್ಬರೂ ತಾವುಗಳು ಹೇಗೆ ದಿಢೀರ ಶ್ರೀಮಂತರಾದ ವಿಚಾರವನ್ನು ಯಾರ ಹತ್ತಿರವೂ ಬಾಯಿ ಬಿಡಲಿಲ್ಲ. ಬಾಯಿ ತುಂಬಾ ಕುಡಿದ ದಿನ ಕೂಡ. ಒಳಗೊಳಗೆ ಕುದಿಯುವ ಆ ಸತ್ಯವನ್ನು ಪ್ರಯತ್ನಪೂರ್ವಕವಾಗೆ ತಡೆದುಕೊಳ್ಳುತ್ತ್ತಿದ್ದರು. ಉಳಿದಂತೆ ಇತರ ವಾಗ್ವಾದಗಳು ನಿರಂತರವಾಗಿದ್ದವು.
ಹಳೆಯ ತಲೆಗಳು ತೋಚಿದಂತೆ ಲೆಕ್ಕಾಚಾರ ಹಾಕಿದರೂ ಇವರಿಬ್ಬರ ಆಸ್ತಿಯ ಅಂದಾಜು, ಅದನ್ನು ಗಳಿಸಿದ ಬಗೆ ಮಾತ್ರ ಅರ್ಥವಾಗುವಂತಿರಲಿಲ್ಲ. ಪ್ರಭಾವಿ ರಾಜಕಾರಣಿಯೊಬ್ಬರ ಚಮಚಾದಂತೆ ಕೆಲಸಮಾಡುತ್ತಿದ್ದ ಮಹೇಂದ್ರಗೆ ಅವರ ಕೃಪಾಕಟಾಕ್ಷವಂತೂ ಇದ್ದೆ ಇತ್ತು. ಅದೊಂದು ದಿನ ಎಲೆಕ್ಷನ್ ಪ್ರಚಾರಕ್ಕೆಂತಲೆ ಮಹೇಂದ್ರ ಹೊಸ ಜೀಪೊಂದನ್ನು ಖರೀದಿಸಿದ. ಪ್ರಚಾರಕ್ಕೆ ಕಾವು ಏರತೊಡಗಿತ್ತು. ಪ್ರಕಾಶ ತನ್ನ ಬೆಂಬಲಿಗರೊಂದಿಗೆ ರಸ್ತೆ ಪಕ್ಕ ಚುನಾವಣೆಗೆ ಸಂಬಂಧಿಸಿ ಅದು ಇದು ಮಾತನಾಡುತ್ತಿರುವಾಗಲೇ ಹೊಸ ಜೀಪಿನಲ್ಲಿ ಬಂದ ಮಹೇಂದ್ರ ಭರ್ರನೇ ಬ್ರೇಕು ಒತ್ತುತ್ತಲೂ ಎದ್ದ ಧೂಳು ಅಲ್ಲಿದ್ದವರ ಬಾಯಿ ಮೂಗಿನೊಳಗೆಲ್ಲ ಸೇರಿ ಒಂದೇ ಸಮ ಸೀನತೊಡಗಿದರು. ಕಣ್ಣುಗಳನ್ನು ಉಜ್ಜಿಕೊಳ್ಳಲು ಆಗದೇ ಬಿಡಲು ಆಗದೇ ಒದ್ದಾಡುತ್ತ ಇದ್ದರೂ ಪ್ರಕಾಶನ ಪಿತ್ತ ನೆತ್ತಿಗೇರಿತ್ತು. ಆರ್ಭಟಿಸುತ್ತ ಜೀಪಿನಿಂದಿಳಿದ ಮಹೇಂದ್ರನ ಕೊರಳ ಪಟ್ಟಿಗೆ ಕೈಹಾಕಿ,
ಏನೋ, ಮಗನೇ? ಕಳ್ಳ ದುಡ್ಡು ಸಿಕ್ಕದಕ್ಕೆ ಇಟ್ಟೆಲ್ಲಾ ಮಿರಿತಿ. ನಿನ್ನ ಬಂಡವಾಳ ಎಲ್ಲಾ ನಂಗ ಗುತ್ತಿದ್ದು, ನಾನ್ ಮುಂದೆ ನಿಂದ ಈ ಹಾರಾಟ ಆದ್ರೆ ಅದ್ರ ಹೇಂಗೆ ಹೇರ್‍ಗೆ ಹಾಕ್ಬೇಕ ಅನ್ನುದ ನಾಂಗು ಗುತ್ತ್ತಿದ. ಬೇವರ್ಸಿ, ಜನ ನಿಂತದ್ದ ಕಣ್ಣಿಗ ಕಾಣ್ತಿದಾ ಇಲ್ಲಾ. ನಿಂಕಡೊಬ್ಬನ್ಕಡೆ ಜೀಪಿದಂದ ಮಾಡ್ಯಾ? ಹಲ್ಕಾ ನನ್ನ ಮಗನೇ,ಎನ್ನುತ್ತ ಏರಿಹೋಗಲು ಮಹೇಂದ್ರ ಕೆಂಡಾಮಂಡಲವಾದ.
ಕಾಲರ್ ಪಟ್ಟಿ ಸರಿಮಾಡಿಕೊಳ್ಳುತ್ತ ಬಡಬಡಿಸತೊಡಗಿದ. ನೀನೇನೋ ಮಹಾ ಸಾಚಾ, ನಿನ್ನ ಹಕೀಕತ್ತ ನಾಂಗುತ್ತಿಲ್ಲ.ಅವ್ವಿ, ಅಪ್ಪ ಎಲ್ಲಾ ಉಂದೇ ಜಾತ್ಯವ. ಮಾನ ಮರ್ಯಾದೆ ಬಿಟ್ಟವ. ಯೇಗೆ ನಿಂಗೂ ಬಡ್ಕಂಡಿದ ದಿವ್ವ. ಉಂದ ಕಾಲಕ್ಕೆ ದೋಸ್ತ ಅಂದ ಬಿಟ್ಟಿ. ಇಲ್ಲಾಂದ್ರ ಹುಟ್ಟಲಾ ಅನ್ಸಬಿಡ್ತದೆ. ಎಂದೆನ್ನುತ್ತಾ ಮುಂದೆ ಮುಂದೆ ಕೈ ಕೈ ಮಿಲಾಯಿಸುವತ್ತ ಮುಂದುವರೆದರು. ಅಷ್ಟರಲ್ಲೆ ಆ ಕಡೆಯವರೂ ಈ ಕಡೆಯವರೂ ಎಲ್ಲಾ ಸೇರಲು ದೊಡ್ಡ ರಾದ್ಧಾಂತವೇ ಆಗಿ ಹೋಯಿತು.ಎಳೆಯ ಸ್ಪರ್ಧೆ ಈಗ ದ್ವೇಷದ ಹುತ್ತವಾಗಿ ಬೆಳೆಯಿತು. ಆಪ್ತರು ಬದ್ಧ ವೈರಿಗಳಾದರು. ಹಣದ ಮಹಿಮೆ ಮುಂದೆ ಎಲ್ಲ ಗೌಣ. ಕಾಲದ ಕುದುರೆಯ ವೇಗಕ್ಕೆ ಎಲ್ಲವೂ ಬದಲಾಗುವುದು ಸೃಷ್ಟಿ ನಿಯಮ.
* * * * * *
ನಾಳೆಯೆ ಚುನಾವಣೆ, ಹಿಂದಿನ ದಿನ ಚಿತ್ರ ವಿಚಿತ್ರ ರಾಜಕೀಯ ದೊಂಬರಾಟ. ಹಿರಿಯೂರು ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಮುಖಂಡರ ಖರೀದಿ, ಹಣದ ಹಂಚುವಿಕೆ, ಸೀರೆಗಳ ಕೊಡುಗೆ, ಮದಿರೆಯ ಪಾಕೀಟುಗಳು ಎಲ್ಲವೂ ಯಥೇಚ್ಛವಾಗಿ ಸರಬರಾಜಾದವು. ಕೆರೆಕೊಪ್ಪ, ಮಾಯಕೆರೆ ಪರಸ್ಪರ ಸ್ಪರ್ಧೆಗಿಟ್ಟಂತೆ ಇವೆಲ್ಲವನ್ನು ಹಂಚಿದ್ದವು. ಮಾರನೇ ದಿನ ಬೆಳ್ಳಂಬೆಳಿಗ್ಗೆ ತನ್ನ ವೋಟು ಚಲಾಯಿಸಿ ಕಾಯಿದೆ ಮೀರದೆ ದೂರದಲ್ಲಿ ಬೆಂಬಲಿಗರ ಜೊತೆಯಲ್ಲಿ ಮಹೇಂದ್ರ ಕಾರಿನಲ್ಲಿ ಕೂತು ಮತಚಲಾವಣೆ ಲೆಕ್ಕಾಚಾರ ಹಾಕುತ್ತಿದ್ದ. ತಮಗೆ ಬೇಕಾದ ಕೆಲವರನ್ನು ಕೆಲವೊಮ್ಮೆ ತನ್ನದೇ ಕಾರಲ್ಲಿ ಕರೆದು ತರುವುದು, ಮನೆ ಮುಟ್ಟಿಸಿಬರುವುದು ನಡೆದೆ ಇತ್ತು. ಹೆಂಗೋ ಏನೋ ವಯಸ್ಸಲ್ಲಿ ಹಿರಿಯನಾದ್ರೂ ಮನಸ್ಸು ಮಾತ್ರ ಹೆಸರಿಗೆ ತಕ್ಕಂತೆ ಇದ್ದ ಕರಿಯಣ್ಣ ತನ್ನ ವೋಟು ಕೆರೆಕೊಪ್ಪದಲ್ಲಿ ಚಲಾಯಿಸಿ ಇಲ್ಲಿಯ ಸಮಾಚಾರ ನೋಡುವ ಸಲುವಾಗಿ ಎರಡು ಕಿ.ಮೀ. ಕ್ರಮಿಸಿ ಮಾಯಕೆರೆಯವರೆಗೆ ವಾಲುತ್ತ ವಾಲುತ್ತ ಇವನತ್ತಲೇ ನಡೆದು ಬಂದ. ಮೊದಲೆ ಆತನ ದೃಷ್ಟಿಯೂ ಕೆಟ್ಟ ಹೆಸರು ಪಡೆದ ದೃಷ್ಟಾಂತ ಇರೋದ್ರಿಂದ ಮಹೇಂದ್ರ ಆತ ಹತ್ತಿರ ಬರುತ್ತಲೇ ಬೇರೆ ಕಡೆ ದೃಷ್ಟಿ ಹರಿಸಿದಂತೆ ನಟಿಸಿದರೂ ಆತ ಬಿಡಲಿಲ್ಲ. ಮಹೇಂದ್ರ, ಅಡ್ಡಿಲ್ಲ. ಜೋರೆ ನಡಿತೀದ. ಎಂಥೆಂಥ್ರವರೆಲ್ಲಾ ಏನೆನೋ ಆಗೋ ಕಾಲ, ಕಾಚ ಪಾಚ ಆಯ್ತ.ಪಾಚ ಕಾಚ ಆಯ್ತ. ನಡೀಲೆ ನಡೀಲೆ. ಹೀ.ಹೀ. ಎಂದರೂ ಒಳಗಿನ ಮತ್ಸರವನ್ನು ಚೂರು ಹೊರಹಾಕೆ ಹೋದ. ಒಮ್ಮೆಲೆ ಮಹೇಂದ್ರನಿಗೆ ತಲೆ ಕೆಟ್ಟಂಗಾಯ್ತು. ಯಾಕೋ ಎಲೆಕ್ಷನ್ನಿಗೆ ನಿಂತ ಮೇಲೆ ಒಂದಲ್ಲಾ ಒಂದು ಮಾನಸಿಕ ಕಿರಿಕಿರಿಯಾಗುತ್ತಲೇ ಇತ್ತು. ಆದರೂ ತಲೆಕೊಡವಿ ಭಾರ ಇಳಿಸಿಕೊಳ್ಳಲು ಲಕ್ಷ್ಯ ಬೇರೆಡೆ ಹರಿಸಿದ.
ಇತ್ತ ಪ್ರಕಾಶನಿಗೆ ಕೆರೆಕೊಪ್ಪ ಗ್ರಾಮದಲ್ಲಿ ಯಾವ ಕಿರಿಕಿರಿಯಾಗದೆ ಇದ್ರೂ ಪ್ರತಿಸ್ಪರ್ಧಿ ಸುಬ್ರಾಯ ಮಾತ್ರ ಸೊಕ್ಕು ತೋರಿಸುತ್ತಿದ್ದಂತೆ ಕಾಣಿಸುತ್ತಿತ್ತು. ಹಾಗೂ ಹೀಗೂ ಐದುವರೆವರೆಗೂ ಮತ ಚಲಾವಣೆಗೊಂಡು ಮತಗಟ್ಟೆ ಅಧಿಕಾರಿಗಳು ಎಲ್ಲವನ್ನು ಕಟ್ಟಿಕೊಂಡು ಹೋಗುವವರೆಗೂ ಅಲ್ಲೇ ನಿರೀಕ್ಷಿಸಿ ಆಮೇಲೆ ಪ್ರಕಾಶ ಕೆರೆಕೊಪ್ಪದ ಮತಗಟ್ಟೆ ಬಿಟ್ರೆ, ಮಹೇಂದ್ರ ಮಾಯಕೆರೆಯ ಮತಗಟ್ಟೆ ಬಿಟ್ಟು ಮನೆಗೆ ನಡೆದರು. ಇನ್ನೈದು ದಿನದಲ್ಲಿ ಮತ ಎಣಿಕೆ. ಈ ಮಧ್ಯೆ ಒಬ್ಬರೊಬ್ಬರ ಮೇಲೆ ಗೂಬೆ ಕೂರಿಸುವುದು. ಕಂಡಾಗ ಸಿಡುಕಿಂದ ಮುಖತಿರುವಿ ನಡೆಯುವುದು ನಡೆದೆ ಇತ್ತು. ಮತ ಎಣಿಕೆಯಾಗಿ ಮಹೇಂದ್ರ ಭರ್ಜರಿ ಬಹುಮತ ಬಾರಿಸಿ ಗೆದ್ದು ಬಂದರೆ, ಪ್ರಕಾಶ ಮಾತ್ರ ಎಪ್ಪತೈದು ವೋಟುಗಳ ಅಂತರದಲ್ಲಿ ಪರಾಭವಗೊಂಡಿದ್ದ. ಸುಬ್ರಾಯ ಆರಿಸಿ ಬಂದಿದ್ದ.ಅವನಿಗೆ ಮಹೇಂದ್ರನ ಕುಮ್ಮಕ್ಕು ಸಿಕ್ಕಿತೆನ್ನುವುದು ತಿಳಿದ ಮೇಲಂತೂ ಪ್ರಕಾಶ ನಿಗಿಕೆಂಡವಾದ. ಮಹೇಂದ್ರನ ಗೆಲುವಿಗೆ ಪ್ರಭಾವಿ ರಾಜಕಾರಣಿಯ ಬೆಂಬಲವೇ ಕಾರಣ ಎಂದು ಜನರಾಡಿಕೊಳ್ಳುತ್ತಿದ್ದರು. ಮೊದಲೇ ಕೆಟ್ಟಬಾಯಿ ಕೆಟ್ಟಕಣ್ಣಿನ ಕರಿಯಣ್ಣ ಒಳಗೊಳಗೆ ಉರಿದಿದ್ದ. ಕಳೆದ ಎಲೆಕ್ಷನ್ ನಲ್ಲಿ ಅವನ ಮಗ ಪೂರ್ತಿಯಾಗಿ ಸೋತುಹೋಗಿದ್ದು ,ಇದ್ದದ್ದನ್ನು ಕಳೆದುಕೊಂಡು ಈಗ ರೈತಾಪಿ ಮಾಡಿಕೊಂಡು ಸ್ವಲ್ಪ ಮಟ್ಟಿಗೆ ಸಮಾಧಾನದ ಉಸಿರಾಡುತ್ತಿದ್ದದ್ದು, ನೆನೆದಾಗ ಮಹೇಂದ್ರನ ಗೆಲುವು ಗಾಯದ ಮೇಲೆ ಬರೆ ಎಳೆದಂತೆ ನೋವು ಕೊಟ್ಟಿತ್ತು.
ಇಂವ ಗೆದ್ದ ಬಂದ ಮಾಡು ಹರ್‍ದೇನ ಅಟ್ರಲ್ಟೇ ಇದ. ಮಾಡದ್ದೆಲ್ಲಾ ಮನೆಹಾಳ ಕೆಲಸನೇ, ಇಂತೋರಿಗೆ ಏಗೆ ಕಾಲ, ಎಲ್ಲಾ ಕಾಲದ ಮಹಿಮೆಎನ್ನುತ್ತ ಊರೆಲ್ಲಾ ಸುತ್ತಿದ. ಒಟ್ಟಾರೆ ಕೆರೆಕೊಪ್ಪದ ಬಹಳಷ್ಟು ಜನರಿಗೆ ಅವನ ಗೆಲುವು ಸಂತಸಕೊಡಲಿಲ್ಲ.ಯಾವುದೊಂದು ಒಳ್ಳೆಯ ಇತಿಹಾಸ ಹೊಂದಿಲ್ಲದ ಆತ ಅಧಿಕಾgಕ್ಕೆ ಬಂದರೆ ಮುಂದೇನು? ಎಂಬ ಸಂಶಯವಿತ್ತು.
ಯಾರು ಏನೇ ಬಯಸಿದರೂ ಮಹೇಂದ್ರನ ಜೊತೆ ಮಾತ್ರ ಕಾಲದ ಕುದುರೆ ಜೋರಾಗಿಯೇ ಓಡುತ್ತಿತ್ತು.ಹಿರಿಯೂರ ವ್ಯಾಪ್ತಿಯ ಎಂಟು ಕ್ಷೇತ್ರಗಳಲ್ಲಿ ಆರಿಸಿ ಬಂದವರೆಲ್ಲಾ ಬಹುತೇಕರು ಅನನುಭವಿಗಳು. ಅನಕ್ಷರಸ್ಥರು ಆಗಿದ್ದರು. ಅಷ್ಟೇ ಅಲ್ಲದೇ ಅಧ್ಯಕ್ಷ ಪಟ್ಟ ಕೂಡ ಹಿಂದುಳಿದ ವರ್ಗಕ್ಕೆ ಸೀಮಿತವಾಗಲು, ಸಾಮಾನ್ಯ ಸ್ಥಾನದಿಂದ ಗೆದ್ದ ಹಿಂದುಳಿದ ವರ್ಗದ ಮಹೇಂದ್ರನಿಗೆ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತೆ ಅವಕಾಶಗಳು ಅರಿಸಿಕೊಂಡು ಬಂದವು. ಒಟ್ಟು ಎಂಟು ಸ್ಥಾನಗಳಲ್ಲಿ ಈಗಾಗಲೇ ಮೂರು ಜನರನ್ನು ತನ್ನ ಪರವಾಗಿ ಮಾಡಿಕೊಂಡ ಮಹೇಂದ್ರ ಇನ್ನೆರಡು ಮತಗಳ ಭೇಟೆಯಲ್ಲಿದ್ದ. ಅದಕ್ಕಾಗಿ ಅಧ್ಯಕ್ಷ ಸ್ಥಾನದ ಆಯ್ಕೆ ಹಿಂದಿನ ದಿನ ಊರ ಹೊರಗಿನ ಮಂಕಾಳಮ್ಮನ ಗುಡಿಯಲ್ಲಿ ರಹಸ್ಯ ಚಿಂತನೆಗಳು ನಡೆದವು. ರಾತ್ರಿಯಂತೂ ಒಂದು ಹಗರಣಕ್ಕೆ ಬೇಕಾದ ಎಲ್ಲ ಮಸಲತ್ತುಗಳು ಲಾಟೀನು ಬೆಳಕಿನಲ್ಲಿ ನಡೆದು ಎರಡು ಮತಗಳು ತಲಾ ಐವತ್ತು ಸಾವಿರಕ್ಕೆ ಖರೀದಿಯಾದವು. ಈಗಿಲ್ಲಿ ಪಕ್ಷಗಳ ಪ್ರತಿಷ್ಠೆಯೂ ಸೇರಿಕೊಂಡಿದ್ದರಿಂದ ಯಾವ ಅಡೆತಡೆಯಿಲ್ಲದೆ ಹಣದ ವ್ಯವಹಾರ ಕುದುರಿತ್ತು.
ಕಗ್ಗತ್ತಲೆಯ ರಾತ್ರಿ ಹನ್ನೊಂದು ಗಂಟೆ.ದೇಗುಲದ ಜಗುಲಿ ಮೇಲೆ ಮೆಲ್ಲನೆ ಉರಿಯುತ್ತದ್ದ ಲಾಟೀನು. ಎಣ್ಣೆ ತೀರುತ್ತ ಬಂದಿದ್ದರಿಂದಲೋ, ಬತ್ತಿಯ ಆಯಸ್ಸು ಮುಗಿಯುತ್ತ ಬಂದಿತ್ತೋ, ಉರಿ ಕ್ರಮೇಣ ಕಡಿಮೆಯಾಗುತ್ತ ಬಂದಿತ್ತು. ಮಹೇಂದ್ರನೇ ದೇವರಿಗೆ ಊದುಬತ್ತಿ ಬೆಳಗಿಸಿ ವ್ಯವಹಾರ ಮುಗಿಸಿ ಮಾತು ಪ್ರಾರಂಭಿಸಿದ.
ಸೋಮ, ಭುಜಂಗ, ಮತ್ತೆಲ್ಲಾ ಸರ್‍ಯಾಗಿದ ಇಲ್ಲಾ ನೊಡ್ಕಂಡ್ರಾ. ನಾಳಗ ಇಟ್ಟೊತ್ತಿಗ ಮಂಕಾಳಮ್ಮ ಆಶೀರ್ವಾದ ನಮಗೇ ಆಗಿರಬೇಕ. ನಿಮ್ಮದೆಲ್ಲ ಸರ್‍ಯಾಗೆ ವೋಟ ಬೀಳಬೇಕ. ಮತ್ತೆ ಹೇಳುದಿಲ್ಲ. ಮಂಕಾಳಮ್ಮನ ಮೇಲೆ ಆಣೆ ಅಂದ್ರೆ ಅಟ್ ಹಗುರಲ್ಲ. ಎಂದು ಎಚ್ಚರಿಸುತ್ತಲೂ ಗೆಳೆಯನೊಬ್ಬ ಜೋಡಿ ತೆಂಗಿನಕಾಯಿ ತಂದು ಅವರಿಬ್ಬರ ಮುಂದಿಟ್ಟ. ಅವರಿಬ್ಬರೂ ಒಮ್ಮೆ ದುಡ್ಡಿನ ಕಡೆಯೂ ಇನ್ನೊಮ್ಮೆ ತೆಂಗಿನ ಕಾಯಿ ಕಡೆಯೂ ತಿರುತಿರುಗಿ ನೋಡಿ ಕೊನೆಗೂ ಮಂಕಾಳಮ್ಮನ ಹೆಸರಿನಲ್ಲಿ ಆಣೆ ಮಾಡೇಬಿಟ್ಟರು. ಮಹೇಂದ್ರ ಈಗ ಸಮಾಧಾನಗೊಂಡ. ಹಿಡಿದ ಕೆಲಸ ಮುಕ್ಕಾಲು ಮುಗಿಯಿತೆಂದುಕೊಂಡ. ಎಲ್ಲರೂ ಮನೆಕಡೆ ಹೊರಡಲು ಮಹೇಂದ್ರನಿಗೆ ಮಾತ್ರ ನಿದ್ದೆ ಬರಲಿಲ್ಲ. ಕಾಮಾಕ್ಷಿ ಕಾಡತೊಡಗಿದಳು. ಸಣ್ಣಗೆ ಜಿಟಿಜಿಟಿ ಮಳೆಯೂ ಸೇರಿಕೊಂಡು ಆತನ ಅಮಲು ಇನ್ನೂ ಹೆಚ್ಚಾಗಿತ್ತು. ನಿಧಾನವಾಗಿ ಮಹೇಂದ್ರನ ಜೀಪು ರಾತ್ರಿ ಹನ್ನೆರಡರ ಹೊತ್ತಿಗೆ ನಿಧಾನವಾಗಿ ಕಾಮಾಕ್ಷಿಯ ಮನೆಕಡೆ ಹೊರಟಿತು.
ತಾನಂದುಕೊಂಡ ವಿದ್ಯಮಾನಗಳೆಲ್ಲ ತಲೆಕೆಳಗಾಗಿದ್ದರಿಂದ, ಕೈಹಾಕಿದ ಕೆಲಸಗಳಲ್ಲೆಲ್ಲಾ ವಿಧಿ ತನ್ನೊಡನೆ ಆಟವಾಡುತ್ತಿರುವಂತೆ ಅನ್ನಿಸಿದ್ದರಿಂದಲೋ, ಮಹೇಂದ್ರನಿಗೆ ಉಚ್ಛ್ರಾಯ ಕಾಲ ಬಂದೊದಗಿ ಹಂತ ಹಂತವಾಗಿ ಮೇಲೇರುತ್ತಿದ್ದುದನ್ನು ನೋಡಿ ಮೈಉರಿ ಎದ್ದಂಗಾಗಿ ಪ್ರಕಾನಿಗೆ ನಿದ್ದೆ ಬರಲಿಲ್ಲ. ಮನೆ ಹೊರಗೆ ಬಂದು ಚಿಟ್ಟಿ ಮೇಲೆ ಕೂತು ಹೊರಗೆ ನೋಡುತ್ತಿದ್ದವ ತಂಗಿಯ ಮನೆ ಸಮೀಪ ಜೀಪು ಬರುತ್ತಿರುವುದನ್ನು ನೋಡುತ್ತ ಜಾಗ್ರತನಾದ. ಮನಸ್ಸಿನ ಮೂಲೆಯಲ್ಲಿ ಅಡ್ಡ ವಾಸನೆ ಹೊಳೆದಂತಾಗಿ, ಅಲ್ಲೆ ಮನೆ ಮುಂದಿನ ಹೂಗಿಡಗಳ ಮರೆಗೆ ನಿಂತ.
ಜೀಪಿನಿಂದಿಳಿದ ಮಹೇಂದ್ರ ಬಹಳ ನಿಧಾನವಾಗಿ ಎಲ್ಲ ಕಡೆ ಒಮ್ಮೆ ಕಳ್ಳ ನೋಟ ಬೀರಿ ಕಾಮಾಕ್ಷಿ ಮನೆ ಒಳಗೆ ಲಗುಬಗೆಯಿಂದ ನಡೆದ. ಮೊದಲೆ ಪೋನಾಯಿಸಿದ್ದರಿಂದ ಆಕೆ ದೀಪವಾರಿಸಿ ಬಾಗಿಲು ತೆರೆದು ಇಟ್ಟಿರುವಂತೆ ಕಾಣುತ್ತಿತ್ತು. ಈಗ ಪ್ರಕಾಶನಿಗೆ ತಾನು ಪೂರ್ತಿಯಾಗಿ ನಾಶವಾದಂತೆ ಅನ್ನಿಸಿತು. ರಕ್ತಹಂಚಿಕೊಂಡು ಹುಟ್ಟಿದ ತಂಗಿ, ಆತ್ಮೀಯನೆಂದುಕೊಂಡ ಗೆಳೆಯ, ಕೈ ಹಿಡಿಯದ ವಿಧಿ ಎಲ್ಲವೂ ತನ್ನ ವಿರುದ್ಧವೇ ಕರಾಮತ್ತು ನಡೆಸುತ್ತಿರುವುದನ್ನು ಸಹಿಸಿಕೊಳ್ಳದಾದ. ನಖಶಿಖಾಂತ ಕುದಿಯತೊಡಗಿದ. ಮನೆಯೊಳಗೆ ನಡೆದವನೆ ಮಾರುದ್ದದ ಹರಿತವಾದ ಕತ್ತಿಯನ್ನು ಎತ್ತಿಕೊಂಡು ಬಂದ. ಕಾಮಾಕ್ಷಿಯ ಮನೆ ಕಡೆ ನಡೆಯಲು ಅವರಿಬ್ಬರ ಸಲುಗೆ ಸಂಭಾಷಣೆ ಕೇಳಿಸುತ್ತಿತ್ತು. ತಂಗಿಯ ಬಗ್ಗೆ ಅಸಹ್ಯವೆನಿಸಿತು. ತಡಮಾಡದ ಆತ ಟಕಟಕನೆ ಬಾಗಿಲು ಬಡಿಯಲು ಒಳಗಿದ್ದ ಜೀವಗಳು ಭಯದಿಂದ ಅರೆಜೀವದಂತಾದವು. ಆದರೂ ಮಹೇಂದ್ರನಿಗೆ ಒಳಗಿರಲು ಹೇಳಿ ಭಂಡ ದೈರ್ಯಮಾಡಿ ಬಾಗಿಲು ತೆರೆದ ಕಾಮಾಕ್ಷಿ ಬಾಯಿ ತೆರೆಯುವ ಮುನ್ನವೇ ಕೋಪೋಗ್ರನಾದ ಪ್ರಕಾಶ ಕುತ್ತಿಗೆಗೆ ಒಂದೇ ಏಟು ಕೊಟ್ಟ. ಅಲ್ಲೆ ಆಕೆ ಕುಸಿದು ಬಿದ್ದಳು. ಅಷ್ಟರಲ್ಲೇ ಗಡಿಬಿಡಿಸಿ ಓಡಿಹೋಗಲು ಬಂದ ಮಹೇಂದ್ರನ ಕಾಲಿಗೆ ಏಟು ಬಿದ್ದರೂ ಹೇಗೋ ತಪ್ಪಿಸಿಕೊಂಡು ಹೊರಗೋಡಿದ. ಜೀಪು ತರಾತುರಿಯಲ್ಲಿ ಹತ್ತಿ ಚಾಲೂ ಮಾಡಿ ಹೊರಟೇ ಬಿಟ್ಟ. ಈಗ ಯೋಚಿಸುವ ಸ್ಥಿತಿಯಲ್ಲಂತೂ ಪ್ರಕಾಶನಿರಲಿಲ್ಲ. ಬಡಬಡ ಮನೆ ಕಡೆ ಓಡಿ ತನ್ನ ಕಾರಿನ ಕೀ ಹಿಡಿದು ಬಂದು ಮಹೇಂದ್ರನನ್ನು ಹಿಂಬಾಲಿಸಿದ. ತಂದೆಯಂತೂ ಇರಲಿಲ್ಲ. ಒಳಕೋಣೆಯಲ್ಲಿ ಗಾಢ ನಿದ್ರೆಯಲ್ಲಿ ಮಲಗಿದ್ದ ತಾಯಿಗೆ ಇದಾವುದು ತಿಳಿಯಲೆ ಇಲ್ಲ. ತೀರ ತಲೆ ಕೆಟ್ಟಂತಾದ ಮಹೇಂದ್ರ ಜೀವ ಕೈಯಲ್ಲಿ ಹಿಡಿದು ಜೀಪು ಚಲಾಯಿಸುತ್ತಿದ್ದಂತೆ ಕಣ್ಣ ಮುಂದೆ ಬೇಡ ಬೇಡವೆಂದರೂ ಅಪಘಾತದಲ್ಲಿ ಇವರಿಂದ ಹತಳಾದ ಮಹಿಳೆಯ ಮುಖವೇ ಕಾಣತೊಡಗಿತು. ಕೆಲವೊಮ್ಮೆ ಆ ಮುಖ ದೇವಿ ಮಂಕಾಳಮ್ಮನ ಮುಖದಂತೆಯೂ ಮರುಕ್ಷಣ ಮಹಿಳೆಯ ಮುಖದಂತೆಯೂ ಕಾಡತೊಡಗಿದಂತಾಗಿ ಆತ ಇನ್ನಷ್ಟು ಬೆವತ.ಜೀಪು ಮನೆ ಕಡೆ ಹೋಗುವ ಬದಲು ಯಾವುದೋ ಮಾಯಕ್ಕೆ ಒಳಗಾದವನಂತೆ ರಸ್ತೆಯುದ್ದಕ್ಕೂ ವಾಹನ ಚಲಾಯಿಸುತ್ತಲೂ ಇವನ ಹಿಂದೆ ಹಿಂದೆ ಪ್ರಕಾಶನ ಕಾರು ಬರತೊಡಗಿತು.ಈಗ ಇನ್ನಷ್ಟು ಗಾಬರಿಗೊಂಡ. ಸರಿಯಾಗಿ ಅದೇ ತಿರುವು ದಾಟಿ ಮುಂದೆ ಬರುತ್ತಲೂ ಸೇತುವೆ ಹತ್ತಿರಕ್ಕೆ ಬಂದಂತೆ ತಲೆ ಕೆಲಸ ಮಾಡುವುದನ್ನೆ ನಿಲ್ಲಿಸಿಬಿಟ್ಟಂತೆ, ಒಮ್ಮೆಲೇ ಬ್ರೇಕು ಹಾಕಿದ ಆ ರಭಸ ಎಷ್ಟಿತೆಂದರೆ ವಾಹನದ ಮುಂದಿನ ಗಾಲಿಗಳು ಒಮ್ಮೆಲೆ ಮೇಲಾದವು. ಹಿಂದಿನಿಂದ ಬೆನ್ನಟ್ಟಿ ಬರುತ್ತಿದ್ದ ಪ್ರಕಾಶ ಈಗ ಬ್ರೇಕು ಹಾಕುದನ್ನೆ ಮರೆತ. ಜೀಪಿಗೆ ಗುದ್ದಿದ ಕಾರು ಹೊರಳಿ ಸೇತುವೆಗೆ ಗುದ್ದಿತು. ಕಾರಿನಲ್ಲಿದ್ದ ಪ್ರಕಾಶನ ಉಸಿರು ಕ್ಷಣದಲ್ಲಿ ನಿಂತಿತು. ಕಾರು ಗುದ್ದಿದ ಜೀಪು ಸೇತುವೆಯಿಂದ ಕೆಳಗೆ ಬಿದ್ದು ಪೆಟ್ರೋಲ ಟ್ಯಾಂಕು ಜಕಮಗೊಂಡು ಹೊರಚೆಲ್ಲಿದ ಪೆಟ್ರೋಲಿಗೆ ಭಗ್ಗನೇ ಬೆಂಕಿಯ ಕೆನ್ನಾಲಿಗೆ ಹತ್ತಿಕೊಂಡು ಮಹೇಂದ್ರನನ್ನು ಒಳಗೊಂಡು ಜೀಪು ಉರಿಯತೊಡಗಿತು.
ಹಿಂದಿನ ರಾತ್ರಿ ಊರೆಲ್ಲ ನಾಳೆಯ ರಾಜಕೀಯ ಸಮರಕ್ಕೆ ಸಿದ್ಧವಾಗಿದ್ದರೆ, ಬೆಳಗಾಗುತ್ತಲೆ ಕೆರೆಕೊಪ್ಪ ಶೋಕಸಾಗರದಲ್ಲಿ ಮುಳುಗಿತ್ತು. ತೀವ್ರವಾಗಿ ರಕ್ತಸ್ರಾವದಿಂದ ಪ್ರಜ್ಞಾಹೀನಳಾಗಿದ್ದ ಕಾಮಾಕ್ಷಿ ಆಸ್ಪತ್ರೆ ಸೇರಿದರೆ, ಇತ್ತ ಕಡೆ ಅಧ್ಯಕ್ಷ ಸ್ಥಾನಕ್ಕೆ ನಡೆಯಬೇಕಿದ್ದ ಆಯ್ಕೆ ಪ್ರಕ್ರಿಯೆ ಸ್ಥಗಿತಗೊಂಡಿತು. ಕರಿಯಣ್ಣ ತನ್ನದೇ ವಿಶಿಷ್ಠ ಮಾತುಗಳ ಮಳೆ ಸುರಿಸತೊಡಗಿದ. ಇದು ಅಂತಿಂತ ಸೃಷ್ಟಿಯಲ್ಲ. ಪರಶುರಾಮ ಸೃಷ್ಟಿ. ಇಲ್ಲೆಲ್ಲಾ ಬೇಕಾಬಿಟ್ಟಿ ವ್ಯವಹಾರ ನಡಿಯೂಲ. ಆದ್ರೂ ಮಕ್ಕಳ ಪಾಪ. ಇಟ್ಟ ಬ್ಯಾಗೆ ಹಿಂಗಾಗುಕಿಲ್ಲಾಗತ. ಎಲ್ಲವೂ ಉಂದ ನಿಮಿತ್ತ ಅಟ್ಟೆ. ಎನ್ನುತ್ತ ಒಳಗೊಳಗೆ ತೃಪ್ತನಾದರೂ ತೋರಿಕೆಯ ಕನಿಕರ ವ್ಯಕ್ತಪಡಿಸಿದ. ದೂರದಲ್ಲಿ ದೈತ್ಯಾಕಾರದ ಸುಳಿಗಾಳಿ ಎದ್ದು ತರಗಲೆಗಳನ್ನೆಲ್ಲಾ ಹಾರಿಸಿಕೊಂಡು ಹೋಗುತ್ತಿತ್ತು.
*****
















