ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು ಸರಿದಂತೆ ಕವಿದು ಮೇಲೇರಿ ಬರುವ ಬೆಟ್ಟದ ಕರಿನೆರಳು, ಸಂಜೆಯಲಿ ಪಿಸುಗುಟ್ಟುವ ಮೌನ, ಸುಟ್ಟ ಮಣ್ಣು ಬಳೆದ ತಟ್ಟಿಯ ಗೋಡೆಗಳು ಒಂಥರಾ ಎಲ್ಲೋ ಹುಟ್ಟಿ ಬೆಳೆದವರು ಇಲ್ಲಿ ಬಂದು ಸೇರಿಕೊಂಡು ತಮ್ಮದೇ ಊರು, ತಮ್ಮದೇ ಮನೆಗಳಂತೆ ಕಟ್ಟಿಕೊಂಡ ಏಳೆಂಟು ಗುಡಿಸಲುಗಳು ಹತ್ತಾರು ಮಕ್ಕಳು ಇಪ್ಪತ್ತಾರು ಹಿರಿಯರು, ಪಡಿಯೂರು ಅಂತ ತಾವೇ ನಾನು ಇಟ್ಟ ಈ ಸಮೂಹಕ್ಕೆ ಮಬ್ಬು ಕವಿದ ಇರುಳಲ್ಲಿ ಸುಯ್ಯನೆ ಸುಳಿವ ತಂಗಾಳಿ ಬುಡ್ಡಿ ದೀಪವನ್ನು ಹೊರತರದಂತೆ ಮಾಡುತ್ತಿದ್ದವು. ಗುಡಿಸಲುಗಳಲಿ ರಾತ್ರಿ ಜೀವಗಳಿಗೆ ಆಹಾರ ಬೆಯ್ಯುತ್ತಿತ್ತು.
ಫಾತಿಮಾಳಿಗೆ ಹದಿನಾಲ್ಕು ವರ್ಷ. ಅವ್ವ ಅಪ್ಪ ಇಬ್ಬರೂ ಕೂಲಿಗೆ ಹೋಗುತ್ತಿದ್ದರು. ಉರ್ದು ಏಳನೇಯ ತರಗತಿಯವರೆಗೆ ಓದಿದ ಫಾತಿಮಾಳಿಗೆ ಬಡತನದಿಂದ ಮತ್ತು ಸಾಲಾಗಿ ಹುಟ್ಟಿದ ತಂಗಿ-ತಮ್ಮಂದಿರ ದೆಸೆಯಿಂದ ಶಾಲೆಯನ್ನು ಮುಂದುವರಿಸಲಿಕ್ಕೆ ಆಗಲಿಲ್ಲ. ಪುಟ್ಟ ತಮ್ಮ ತಂಗಿಯರ ಹೊಣೆಗಾರಿಕೆ ಹದಿನಾಲ್ಕರ ಬಾಲಕಿ ಫಾತಿಮಾಳ ಜವಾಬ್ದಾರಿಯಾಗಿತ್ತು. ಅಪ್ಪ ಕೂಲಿಗೆ ಹೋದರೂ ಭರಪೂರ ಕುಡಿದು ಬರುತ್ತಿದ್ದ. ಅವ್ವನ ಕೂಲಿ ಹೊಟ್ಟೆಗೆ ಸಾಲುತ್ತಿರಲಿಲ್ಲ. ಫಾತಿಮಾಳು ತಮ್ಮ-ತಂಗಿಯರ ಜವಾಬ್ದಾರಿಯ ಜೊತೆಗೆ ಗುಡ್ಡದ ಪರಿಯಿಂದ ಊರಿಗೆ ಬಂದು ಎರಡು-ಮೂರು ಮನೆಯ ಪಾತ್ರೆ ತೊಳೆದು ಬಟ್ಟೆಗಳನ್ನು ಒಗೆದು ಬರುತ್ತಿದ್ದಳು.
ದಿನಾ ಕುಡಿದು ತೇಲುತ್ತಾ ಬರುವ ಅಬ್ಬಾ, ಮಕ್ಕಳಿಗೆ ಇದೆಯೋ ಇಲ್ಲವೋ ಎಂಬುದಕ್ಕೆ ತಲೆ ಕೆಡಿಸಿಕೊಳ್ಳದೇ ತಾನೊಬ್ಬನೇ ಉಂಡು ಅಂಗಳದಲ್ಲಿದ್ದ ಹೊರಸಿನ ಮೇಲೆ ಮಲಗಿ ಬಿಡುತ್ತಿದ್ದ. ಫಾತಿಮಾಳಿಗೆ ಅಪ್ಪ ಹೀಗೆಲ್ಲ ಮಾಡುವುದು ಸರಿ ಬರುತ್ತಿರಲಿಲ್ಲ. ಯಾರೊಂದಿಗೆ ಹೇಳಿಕೊಳ್ಳುವುದು? ಹೊಲದ ಕೂಲಿಗೆ ಬರುವ ಅಮ್ಮಿ ಬಹಳಷ್ಟು ದಣಿದು ಬರುತ್ತಿದ್ದಳು. ಫಾತಿಮಾಳು ಅಡುಗೆ ಮಾಡಿ ಇಟ್ಟಿದ್ದರೆ ಮಕ್ಕಳ ಕರೆದುಕೊಂಡು ಉಣ್ಣುತ್ತಿದ್ದಳು. ಪಕ್ಕದಲ್ಲಿದ್ದ ದಲಿತರ, ಗುಡಿಸಲುಗಳಿಗೆ ಎಂ.ಎಲ್.ಎ. ಹಸಿರು ಕಾರ್ಡು ತಾವಾಗಿಯೇ ಮುತುವರ್ಜಿವಹಿಸಿ ಮಾಡಿಸಬೇಕು ಎಂಬುದೂ ತಿಳಿದಿರಲಿಲ್ಲ. ಅವಳು ಪಕ್ಕದ ಗುಡಿಸಲಿನಲ್ಲಿರುವದರಿಂದ ಮಾಹಿತಿ ತೆಗೆದುಕೊಂಡು ಹಸಿರು ಕಾರ್‍ಡು ತರಲು ಮುಂದಾದಳು.
ಮೊದಲು ಊರ ಮಧ್ಯದಲ್ಲಿರುವ ಹಂಚಿನ ಮಾಡಿನ ದೊಡ್ಡ ಬಿಲ್ಡಿಂಗ್‌ನಲ್ಲಿ ನಡೆಯುತ್ತಿದ್ದ ಮುನಸಿಪಾಲಿಟಿಗೆ ಬಂದಳು, ಅಲ್ಲಿರುವ ಮೆಹಬೂಬ ಅವಳಿಗೆ ವೋಟರ್ ಲಿಸ್ಟ್ ತೆಗೆದು ತೋರಿಸಿ ಒಂದು ಫಾರಂನ್ನು ತಾನೇ ಫಾತಿಮಾಳ ಬಾಯಿಂದ ವಿವರಗಳನ್ನು ಕೇಳಿ ತುಂಬಿಸಿಕೊಟ್ಟ. ಮನೆ ಮಂದಿಯ ಭಾವಚಿತ್ರಗಳನ್ನು ಅಂಟಿಸಲು ತಿಳಿಸಿದ. ಅವಳ ಸಹಿ ಹಾಕಿಸುವಾಗ ಮೆಲ್ಲಗೆ ಅವಳ ಕೈ ಹಿಡಿದ ಫಾತಿಮಾಳಿಗೆ ಈ ಹದಿನಾರರ ಹರೆಯದಲ್ಲಿ ಏನೇನೋ ಆಸೆಗಳು ಗರಿಬಿಚ್ಚಿದ್ದವು. ಈ ಮುನಸಿಪಾಲಿಟಿ ಒಂದು ಪವಿತ್ರ ಸ್ಥಳದಂತೆ ಅನಿಸತೊಡಗಿತು. ಅವಳು ಮುಂದಿನ ಎಲ್ಲಾ ಕೆಲಸಗಳನ್ನು ಮಾಡಿಕೊಡಲು ಮೆಹಬೂಬನಿಗೆ ಗಂಟು ಬಿದ್ದಳು. ನಾಳೆ ಶನಿವಾರ ಬರಲು ಮೆಹಬೂಬ ತಿಳಿಸಿದ. ಅವಳು ಹಕ್ಕಿಯಂತೆ ಹಾರುತ್ತ ಫಡಿಯೂರ ಕಡೆಗೆ ಹೋದಳು.
ಬರೀ ಒಬ್ಬ ಅಪರಿಚಿತ ಹುಡುಗನ ಕೈಯ ಸ್ಪರ್ಶ ಫಾತಿಮಾಳ ತಲೆಯಲ್ಲಿ ವಿಚಿತ್ರ ಲೋಕವನ್ನೇ ಸೃಷ್ಟಿಸಿತ್ತು. ಆ ರಾತ್ರಿ ಅವಳಿಗೆ ವಿಚಿತ್ರ ಕನಸುಗಳು ಬಿದ್ದವು. ಆ ಹುಡುಗ ಅವಳಿಗೆ ಹೆಸರು ಗೊತ್ತಿಲ್ಲದ ಹುಡುಗ ಕುದುರೆಯನ್ನೇರಿ ಬಾರಾತ ಬಂದಂತೆ ಕನಸು. ಮತ್ತೆ ತನ್ನ ಅಂಗೈತುಂಬ ಮೆಹಂದಿಯ ಚೆಲುವು ಚಿತ್ತಾರಗಳು. ಅವಳು ಮರುದಿನ ಬೆಳಿಗ್ಗೆ ತಡವಾಗಿ ಎದ್ದಳು. ಎದ್ದ ತಕ್ಷಣ ಅವಳ ತಲೆಗೆ ಬಂದ ವಿಚಾರವೆಂದರೆ ಶನಿವಾರಕ್ಕೆ ಇನ್ನೂ ಮೂರು ದಿವಸಗಳು ಬಾಕಿ ಇವೆ ಎಂದು ಅವಳು ಆ ವಿಚಾರದಿಂದಲೇ ತುಸು ಮಂಕಾದಳು.
ಶನಿವಾರ ಅವಳು ತನ್ನ ದಿನದ ಕೆಲಸವನ್ನು ಮುಗಿಸಿ ಮುನಿಸಿಪಾಲಿಟಿಗೆ ಬಂದಳು. ಮೆಹಬೂಬ್ ಅವಳಿಗೋಸ್ಕರವೇ ಕಾದಂತೆ ಇದ್ದ. ಅವಳು ಬಂದೊಡನೆಯೇ ವೋಟರ ಲಿಸ್ಟಿನಲ್ಲಿ ಪಡಿಯೂರಿನ ಪುಟ್ಟ ಮನೆಗಳ ಸದಸ್ಯರ ಹೆಸರು ನೊಂದಣಿ ಆಗಿದ್ದು ತಿಳಿಸಿದ. ಅವರ ಮನೆಯ ಎಲ್ಲಾ ಸದಸ್ಯರ ನೊಂದಣಿ ನಂಬರಗಳನ್ನೂ ಬರೆದು ಕೊಟ್ಟ, ಸ್ವಲ್ಪ ಕಾಯಲು ತಿಳಿಸಿ ತಾನೇ ತಲಾಟಿ ತಹಶೀಲದಾರರ ಹತ್ತಿರ ಕರೆದೊಯ್ಯದಾಗಿ ತಿಳಿಸಿದ. ಅವನು ಮೊದಲೇ ತಿಳಿಸಿದ ಹಾಗೆ ಫಾತಿಮಾ ಅಪ್ಪ ಅವ್ವ, ತಮ್ಮ ತಂಗಿಯರದು ಎಲ್ಲಾ ಸ್ಯಾಪ್ ಮತ್ತು ಸ್ವಲ್ಪ ದೊಡ್ಡದಾದ ಸೈಜಿನ ಫೋಟೋಗಳನ್ನು ತಂದಿದ್ದಳು. ಮೆಹಬೂಬ್ ತಮ್ಮ ಮೇಲಿನವರಿಗೆ ತಿಳಿಸಿ ಅಲ್ಲೇ ಹತ್ತಿರದಲ್ಲಿರುವ ತಲಾಟಿ ಮತ್ತು ತಹಶೀಲದಾರ ಆಫೀಸಿಗೆ ಅವಳನ್ನು ಕರೆದೊಯ್ದ ಅತಿ ಮುತುವರ್ಜಿಯಿಂದ ಸುತ್ತುವಾಗ ಈ ಜಗತ್ತು ಬಹಳ ಸುಂದರ ಎನಿಸಿತು. ಬೇಜವಾಬ್ದಾರಿ ಅಪ್ಪನ ಕಡೆಯಿಂದ ಸಿಗದ ಪ್ರೀತಿ ಮೆಹಬೂಬ್‌ನಿಂದ ತನಗೆ ಶಾಶ್ವತವಾಗಿ ಸಿಗುತ್ತದೆ ಎಂದು ಅವಳು ಚಿಟ್ಟೆಯಂತಾದಳು. ತೊಡವ ಬಟ್ಟೆಗಳು ಶುಭ್ರವಾಗಿ ಕಂಗೊಳಿಸತೊಡಗಿದವು. ಹಸಿರು ಕಾರ್ಡಿನ ನೆಪದಲ್ಲಿ ಅವರು ಮೇಲಿಂದ ಮೇಲೆ ಭೇಟಿಯಾದರು. ಅವಳು ಮುನಿಸಿಪಾಲಿಟಿಯ ಕಟ್ಟೆಯ ಮೇಲೆ ಅವನು ಕೆಲಸ ಮುಗಿಸಿ ಬರುವ ವೇಳೆಯಲಿ ಬಂದು ಕುಳಿತಿರುತ್ತಿದ್ದಳು. ಹೀಗೆ ತಿಂಗಳಿಗೆ ಮೂರು ನಾಲ್ಕು ಬಾರಿ ಅವನ ಭೇಟಿ, ಅವರಿಬ್ಬರಲ್ಲಿ ಏನೋ ಒಂದು ಬೆಸುಗೆಯನ್ನು ಹುಟ್ಟು ಹಾಕಿತ್ತು. ಕುಲಬಾಂಧವರು ಬೇರೆ. ಆನ ಮಾತನಾಡದೇ ಬಾಯಿ ಮುಚ್ಚಿಕೊಂಡಿದ್ದರು. ಅವಳ ಪುಟ್ಟ ಗುಡಿಸಲು ಮತ್ತು ಕಂದೀಲ ಜೋರಾಗಿ ಫಳಫಳ ಹೊಳೆಯಲಾರಂಭಿಸಿತು. ಮೂರು ತಿಂಗಳ ನಂತರ ಫಾತಿಮಾಳಿಗೆ ಹಸಿರು ಕಾರ್ಡು ಸಿಕ್ಕಿತು. ಮನೆಯಲ್ಲಿ ಆಹಾರ ಧಾನ್ಯಗಳು ಕೂಡಿಕೊಂಡವು. ಅವರಿಬ್ಬರ ಒಲವು ಚಿಗುರಿತು.
ಫಾತಿಮಾಳಿಗೆ ಮಳೆ ಎಂದರೆ ತುಂಬ ಇಷ್ಟ. ಅವಳು ಶ್ರಾವಣದ ಮಳೆಗೆ ಮುಖ ಒಡ್ಡಿ ಮೆಹಬೂಬನೊಂದಿಗೆ ಮಹಾಕೂಟ ಗುಡ್ಡ, ಸೈಯದ ಬಾದಷಹ ಗುಡ್ಡ ಎಲ್ಲವನ್ನು ನೆನೆಯುತ್ತ ಸುತ್ತಾಡಿ ಮನ ತಣಿಸಿಕೊಳ್ಳುತ್ತಿದ್ದಳು. ಅವಾಗ ಮೆಹಬೂಬ ಅವಳಿಗೆ ಕೈ ಕೆಲಸ ಮಾಡುವ ಹಾಗೂ ಅದರಿಂದ ಸಂಪಾದನೆ ಹುಟ್ಟಿಸಿಕೊಳ್ಳುವ ರೀತಿಗಳನ್ನು ಹೇಳಿ ಕೊಡುತ್ತಿದ್ದ. ಅವಳ ಪುಟ್ಟ ಗುಡಿಸಿಲಿನ ಸಂದಿಯೊಳಗೆ ಒಂದು ಪುಟ್ಟ ಹೊಲಿಗೆ ಮಶೀನು ಬಂದು ಕುಳಿತಿತು. ಅವಳು ಮಹಬೂಬನ ಸಹಾಯದಿಂದ ಆರು ತಿಂಗಳು ತರಬೇತಿ ಕೇಂದ್ರಕ್ಕೆ ಸೇರಿಕೊಂಡಳು. ಗುಡ್ಡದ ಫಡಿಯಲ್ಲಿದ್ದ ಅಜೂ ಬಾಜೂ ಗುಡಿಸಲುಗಳ ಜನರು ಝಂಪರುಗಳನ್ನು ಫಡಕಿಗಳನ್ನು ಹೊಲಿಸಿಕೊಳ್ಳಲು ಬರುತ್ತಿದ್ದರು. ತಟಕೋಟಿಯ ಜನರೆಲ್ಲಾ ಸಣ್ಣಮಟ್ಟ ಹೊಲಿಗೆಗಾಗಿ ಘಾತಿಮಾಳನ್ನೇ ಅವಲಂಬಿಸಿದರು. ಮೆಲ್ಲನೆ ಪುಟ್ಟ ಹಣದಗಂಟು ಅವಳ ಬಳಿ ಸೇರತೊಡಗಿತು. ಚತುರೆ ಫಾತಿಮಾ ತಾನು ಹೊಲಿದ ಕೂಲಿಯನ್ನು ಬ್ಯಾಂಕಿನಲ್ಲಿ ಮೆಹಬೂಬನ ಅಣತಿಯಂತೆ ಒಂದು ಖಾತಾ ತೆಗೆದು ಇರಿಸತೊಡಗಿದಳು.
ಅಪ್ಪನ ಕುಡಿತ ಹಾಗೆಯೇ ಸಾಗಿತ್ತು. ತಮ್ಮ ತಂಗಿಯರು ಉರ್ದು ಶಾಲೆಗೆ ಹೋಗುತ್ತಿದ್ದರು, ಅವ್ವ ಹಾಗೆಯೇ ಕೂಲಿಗೆ ಹೊಂಟು ಬಿಡುತ್ತಿದ್ದಳು. ಹತ್ತೊಂಬತ್ತರ ಫಾತಿಮಾ ಮನೆಕೆಲಸ ಮಾಡುತ್ತ, ಹೊಲಿಗೆ ಹೊಲೆಯುತ್ತ, ರೇಷನ್ ತರುತ್ತ, ಮನೆಯಲ್ಲಿ ಅಡುಗೆ ಮಾಡುತ್ತ ಎಲ್ಲವನ್ನು ನಿಭಾಯಿಸುವುದರಲ್ಲಿ ತನಗೇ ತನೇ ಅವ್ವನಾಗಿ, ಅಜ್ಜಿಯಾಗಿ ಚುರುಕಾದಳು. ಅಲ್ಲಿ ಮೆಹಬೂಬನ ಸಾಂಗತ್ಯ ದೊಡ್ಡ ಕೆಲಸ ಮಾಡಿತ್ತು. ಮೆಹಬೂಬ ಮನೆಯವರಿಗೆ ಚಿಂತೆ ಹೆಚ್ಚಿಸಿ ಬಿಟ್ಟಿತ್ತು. ಜಾತಿ ಒಂದಾದರೇನು ಅಂತಸ್ತು ಬೇರೆ ಬೇರೆ. ಆರ್. ಸಿ. ಸಿ. ಮಹಡಿ ಮನೆಯ ಮನೆತನಕ್ಕೆ ಪರ್ದಾ ಇರುವ ಅಂತಸ್ತಿನ ಮನೆಯ ಹುಡುಗಿಯನ್ನೇ ಸೊಸೆಯನ್ನಾಗಿ ತರಬೇಕೆಂದು ಅವನ ಅಪ್ಪನ ಕುಡುಕ ಪ್ರವೃತ್ತಿ ನಾಲ್ಕು ಮನೆ ಮುಸರಿ ತೊಳೆಯುವ ಫಾತಿಮಾಳು ತಮ್ಮ ದೊಡ್ಡ ಮನೆತನಕ್ಕೆ ಯಾವುದರಲ್ಲೂ ಸಾಟಿ ಇಲ್ಲ ಎಂಬುದನ್ನು ಖಂಡಿತವಾಗಿ ಮೆಹಬೂಬನಿಗೆ ತಿಳಿಹೇಳಲಾಯ್ತು. ಮೆಹಬೂಬ್ ವಯೋ ಸಹಜ ಆಸೆಯಿಂದ ತೊಳಲಾಡಿದ ಹೊರಳಾಡಿದ. ಮೆಲ್ಲಗೆ ಫಾತಿಮಾಳ ಜೊತೆ ತಿರುಗಾಡುವುದನ್ನು ಕಡಿಮೆ ಮಾಡಿದ. ಮನೆಯವರೊಂದಿಗೆ ಅಲ್ಲಿ ಇಲ್ಲಿ ಕನ್ಯಾಗಳನ್ನು ನೋಡಲು ಹೋಗಿ ಬಂದ ಫಾತಿಮಾಳಿಗೆ ಸುದ್ದಿ ತಲುಪಿತು.
ಅವಳು ಕಂಗಾಲಾದಳು. ಮೆಹಬೂಬನೊಂದಿಗೆ ಜಗಳವಾಡಿದಳು. ತನ್ನನ್ನು ನಿರ್ಲಕ್ಷಿಸಿದ ಕಾರಣಗಳನ್ನು ಅವಳಿಂದ ಅರಗಿಸಿಕೊಳ್ಳಲಾಗಲಿಲ್ಲ. ತನ್ನ ಪರಿಸ್ಥಿತಿಯನ್ನು ಯಾರೂ ಲಕ್ಷಿಸುವುದಿಲ್ಲ. ಮನೆಯಲ್ಲಿ ಎಲ್ಲವೂ ಹುಸಿಯಾಗುವ ಕಾರಣಗಳು. ಮೆಹಬೂಬನೂ ಒಂದು ಕಾರಣ ಹೇಳಿ ಬೇರೆ ನಿಖಾಕ್ಕೆ ಸಿದ್ಧನಾಗಿದ್ದು ಅವಳಿಗೆ ತನ್ನ ದೈನ್ಯಸ್ಥಿತಿಯ ಮೇಲೆ ರೇಜಿಗೆ ಉಂಟಾಯಿತು. ಮನೆಯ ನಿರ್ವಹಣೆಯೇ ಕಷ್ಟಕರವಾದಾಗ ಇನ್ನೆಲ್ಲಿಯ ಮದುವೆಯ ಕನಸುಗಳು. ಅವಳು ಮೆಹಬೂಬ್ ಬೇರೆ ಮದುವೆಯಾಗುವ ಸುದ್ದಿ ಕೇಳಿ ತಟಕೋಟಿಯ ಹೊಂಡದ ದಂಡೆ ಮೇಲೆ ಕುಳಿತು ಹೊಂಡ ತುಂಬುವಂತೆ ಅತ್ತಳು, ಮನೆಯಲ್ಲಿ ಅವ್ವ ಬಾಬಾರಿಗೆ ಅವಳ ಪರಿಸ್ಥಿತಿಯ ಬಗ್ಗೆ ಒಲವು ಆಸಕ್ತಿ ಸಾಂತ್ವಾನ ಎಳ್ಳಷ್ಟು ಇರಲಿಲ್ಲ. ಅವಳೂ ಒಂಟಿಯಾಗಿ ರೋಧಿಸಿಯೇ ರೋಧಿಸಿದಳು. ಬದುಕಿನ ದಾರಿಯಲ್ಲಿ ಒಂದು ದೊಡ್ಡ ಬಂಡೆಕಲ್ಲು ಉರುಳಿಬಿತ್ತು. ಅವಳು ಸ್ವಲ್ಪದಿನ ಹೈರಾಣಳಾದಳು.
ಅವಳು ಈ ಯಾತನೆಯ ಗುಂಡಿಯಿಂದ ಮೇಲೆ ಬರಲು ಪ್ರಯತ್ನಿಸಿದಳು. ಯಾರನ್ನು ನಂಬಿ ಈ ಬದುಕು ಮುಂದುವರಿಯುವುದಿಲ್ಲ. ನಮ್ಮ ಸಂಕಟಗಳನ್ನು ನಾವೇ ಹೊರಬೇಕು. ಮೆಹಬೂಬ ಒಬ್ಬ ತನಗೆ ಮೋಸ ಮಾಡಿದರೆ ಏನಾಯ್ತು ಈಗ ಬರೀ ಇಪ್ಪತ್ತು ವರ್ಷಗಳು ಇನ್ನೂ ನಾನು ನಡೆಯಬೇಕಾದ ದೂರ ಬಹಳ ಇದೆ. ನಾನು ಹೀಗೆ ಅಳುತ್ತ ಕುಳಿತರೆ ಸಂಕಟದಲ್ಲಿದ್ದ ತಮ್ಮ-ತಂಗಿ ಅಪ್ಪ-ಅಮ್ಮ ಹೇಗೆ ಬದುಕಬೇಕು. ಇವೆಲ್ಲಾ ಅಪಮಾನ ನೋವುಗಳನ್ನು ರೂಢಿಸಿಕೊಂಡು ಹೊಸ ದಾರಿ ಹುಡುಕಬೇಕೆಂದು ಫಾತಿಮಾ ಅಂದುಕೊಂಡಳು.
ಫಾತಿಮಾಳ ಮೊದಲ ಹೆಜ್ಜೆ ಅವಳು ಬ್ಯಾಂಕಿನಲ್ಲಿ ಕೂಡಿ ಹಾಕಿದ ಹಣವನ್ನು ತನ್ನ ಸುತ್ತಮುತ್ತಲಿನವರಿಗೆ ಅವಶ್ಯಕತೆಗೆ ತಕ್ಕಂತೆ ನೂರಕ್ಕೆ ಮೂರರಂತೆ ಬಡ್ಡಿ ಸಾಲ ಕೊಡಹತ್ತಿದಳು. ಅವಳಲ್ಲಿದ್ದ ಚಿಕ್ಕ ಗಂಟು ಬರಬರುತ್ತ ಇಡೀ ಗಂಟಾಗತೊಡಗಿತು. ಕೆಲವೇ ದಿವಸಗಳಲ್ಲಿ ಈ ಹಣದ ವ್ಯವಹಾರ ಅವಳಿಗೆ ಪಳಗಿ ಬಿಟ್ಟಿತು. ಅಪ್ಪನ ಕೈಗೆ ಸಿಕ್ಕರೆ ಎಲ್ಲಾ ದುಡ್ಡು ಹೆಂಡದ ಪಾಲಾಗುತ್ತದೆ ಎಂದು ತಿಳಿದ ಫಾತಿಮಾ ಈ ತನ್ನ ಬಡ್ಡಿ ವ್ಯವಹಾರವನ್ನು ಮನೆಯವರಿಗೆ ತಿಳಿಯದ ಹಾಗೆ ಹೊರಗಿನಿಂದಲೇ ನಿಭಾಯಿಸುತ್ತಿದ್ದಳು. ಮೆಹಬೂಬ್ ಬ್ಯಾಂಕಿನ ವ್ಯವಹಾರ ತಿಳಿಸಿದ್ದ. ಬಂದ ಬಡ್ಡಿ ಹಣವನ್ನೆಲ್ಲಾ ಅವಳು ಶೇಖರಿಸುತ್ತಾ ಹೋದಳು. ಈ ಮಧ್ಯೆ ಮನೆಯಲ್ಲಿ ನಿಖಾದ ಸುದ್ದಿಗಳು ಎದ್ದವು. ಫಾತಿಮಾಳಿಗೆ ಒಳಗೊಳಗೆ ಮದುವೆ ಆಗಬೇಕೆನಿಸಿದರೂ, ಮೆಹಬೂಬ ಮಾಡಿದ ಅಪಮಾನಕ್ಕೆ ನಾನೊಬ್ಬ ಗಟ್ಟಿಯಾದ ಹೆಣ್ಣು ಮಗಳು ಆಗಬೇಕೆಂದು ನಿರ್ಧರಿಸಿದ್ದಳು. ಅಮ್ಮಿಜಾನ ಮದುವೆಯ ಸುದ್ದಿ ತೆಗೆದಾಗಲೆಲ್ಲಾ ತಮ್ಮ ತಂಗಿಯ ಭವಿಷ್ಯ, ಓದು, ಅಬ್ಬಾಜಾನನ ಬೇಜವಾಬ್ದಾರಿ ಎಲ್ಲವನ್ನೂ ವಿವರಿಸಿ ಹೇಳಿ ಸ್ವಲ್ಪ ದೊಡ್ಡವರಾದ ಮೇಲೆ ನಿಖಾಹ ಮಾಡಿಕೊಳ್ಳುವೆ ಎಂದು ಬಾಯಿ ಮುಚ್ಚಿಸಿದಳು.
ಫಾತಿಮಾಳು ತನ್ನ ಗಂಟು ಇಡಿಗಂಟಾದಾಗ ಅವರಿವರ ಸಹಾಯದಿಂದ ಟಿಪ್ಪೂ ನಗರದಲ್ಲಿ ಈಗಷ್ಟೆ ಶುರವಾದ ಹೊಸ ಮನೆಗಳ ಸಾಲುಗಳಲ್ಲಿ ಒಂದು ಇಪ್ಪತ್ತೈದು ಮೂವತ್ತರ ಸೈಟು ಖರೀದಿಸಿದಳು. ಅಮ್ಮಿಜಾನ್ ಅಬ್ಬಾಜಾನ್ ಮಗಳ ಶ್ಯಾಣತನಕ್ಕೆ ಬೆರಗಾದರು. ಫಾತಿಮಾಳು ಜಾಗ ಹಿಡಿದ ಸುದ್ದಿ ಅಕ್ಕ ಪಕ್ಕ ಗುಡಿಸಿಲಿನವರಿಗೆ ಒಂಥರಾ ಹೊಟ್ಟೆಕಿಚ್ಚು ಹುಟ್ಟಿ, ಅವಳ ನೈತಿಕತೆಯ ಬಗ್ಗೆ ಉರಿದು ಮಾತನಾಡಿಕೊಳ್ಳಹತ್ತಿದರು. ಯಾರಾರೋ ಸಂಬಂಧ ಇಲ್ಲದವರ ಹೆಸರುಗಳು ಅವಳ ಹೆಸರಿನೊಂದಿಗೆ ತಳಕು ಹಾಕಿಕೊಂಡವು. ಈ ಮಧ್ಯೆ ಫಾತಿಮಾಳು ಹೊಲಿಗೆಯೊಂದಿಗೆ ಬ್ಯೂಟಿ ಪಾರ್ಲರಿಗೂ ಹೋಗಿ ಕಲಿಯತೊಡಗಿದಳು. ಭಾಂಡೇ ಮನಿಗಳನ್ನು ಬಿಟ್ಟು ಬಿಟ್ಟಳು. ಎಲ್ಲಾ ಪ್ರಯೋಗಗಳು ಅವಳಿಗೆ ಲಾಭದಾಯಕ ದಾರಿಯನ್ನು ತೋರಿಸಿಕೊಟ್ಟಿತು. ಅವಳು ಮೆಲ್ಲಗೆ ನಡು ಊರಿನಲ್ಲಿ ಒಂದು ಬ್ಯೂಟಿಪಾರ್ಲರನ್ನು ತೆಗೆದು ಬಿಟ್ಟಳು. ದಿನಾಲೂ ನೂರು-ಇನ್ನೂರು ರೂಪಾಯಿಗಳನ್ನು ಉತ್ಪನ್ನ ಆಗೇ ಆಗುತ್ತಿತ್ತು. ಸುಂದರವಾಗಿದ್ದ ಫಾತಿಮಾಳು ಪರಿಸ್ಥಿತಿ ಸುಂದರವಾಗಿದ್ದಕ್ಕೆ ಮತ್ತಷ್ಟು ಸುಂದರವಾಗಿ ಕಾಣಹತ್ತಿದಳು. ಮೆಲ್ಲಗೆ ಬದುಕು ಹತ್ತಿಯ ಹಾಗೆ ಅರಳತೊಡಗಿತು. ಫಾತಿಮಾಳ ಮೆಹಂದಿ, ಬ್ಯೂಟಿ ಪಾರ್ಲರ್ ಹೆಂಗಳೆಯರ ಕೈ ಬಳೆಗಳ ಸಪ್ಪಳದೊಂದಿಗೆ ನಗುವಿನೊಂದಿಗೆ ಸವೇರಾ ಎಂಬ ಬೋರ್ಡ್ ಹೊತ್ತುಕೊಂಡಿತು. ಸಾಂಸ್ಕೃತಿಕವಾಗಿ ಸಾಮಾಜಿಕವಾಗಿ ಬೌದ್ಧಿಕವಾಗಿ ತನ್ನನ್ನು ತಾನೇ ಕೆಳಗಿದ್ದೇನೆ ಎಂದು ತಿಳಿದುಕೊಂಡ ಫಾತಿಮಾ ತನ್ನ ಕೀಳರಿಮೆಯನ್ನು ಕಿತ್ತು ಒಗೆದಳು. ತನ್ನ ಅಭಿರುಚಿಯ ಕೆಲಸದಲ್ಲಿ ಮೆಲ್ಲ ಮೆಲ್ಲನೆ ಮೆಟ್ಟಿಲುಗಳನ್ನು ಏರುತ್ತ, ಆತ್ಮ ವಿಶ್ವಾಸವನ್ನು ವೃದ್ಧಿಸುವ ಉಪಾಯಗಳನ್ನು ಕಂಡುಹಿಡಿದಳು. ತಾಳ್ಮೆ ಮತ್ತು ಪ್ರಾಮಾಣಿಕ ಪ್ರಯತ್ನದಿಂದ ಮೊದಲು ಅಸಾಧ್ಯವೆಂದು ತೋರಿದ ಕೆಲಸಗಳನ್ನು ಸಾಧ್ಯ ಮಾಡುತ್ತ ಹೋದಳು. ಅವಳು ಹತಾಶ ಭಾವದಿಂದ ನರಳದೇ ಮೇಲೆದ್ದು ತನ್ನ ಕಾಲಮೇಲೆ ತಾನೇ ನಿಂತಿಕೊಂಡು ತನಗೆ ಸಿಕ್ಕ ಅವಕಾಶಗಳನ್ನು ತಪ್ಪಿಸಿಕೊಳ್ಳದೇ ಮುಂದುವರಿದಳು. ಹಣದ ಹರವು ಅವಳಿಗೆ ಸಾಕಷ್ಟು ಮನೋಧೈರ್ಯವನ್ನು ತಂದುಕೊಟ್ಟಿತ್ತು.
ಟಿಪ್ಪು ನಗರದಲ್ಲಿ ತಾನು ಕೊಂಡಿದ್ದ ಚಿಕ್ಕ ಸೈಟ್‌ನಲ್ಲಿ ಫಾತಿಮಾ ಮೂರು ರೂಮುಗಳ ಒಂದು ಪುಟ್ಟ ಮನೆಯನ್ನು ಕಟ್ಟಿಕೊಂಡು, ಉಳಿದ ಜಾಗದಲ್ಲಿ ಬಾಡಿಗೆ ಬರುವ ಕಾಂಪ್ಲೆಕ್ಸ್‌ಗಳನ್ನು ಕಟ್ಟಿ ಬಾಡಿಗೆ ಬರುವ ಹಾಗೆ ನೋಡಿಕೊಂಡಳು. ಅಬ್ಬಾಜಾನ್ ತೀರಿಕೊಂಡಿದ್ದ, ಅಮ್ಮಿಜಾನ್ ಜೊತೆ ಫಾತಿಮಾ ತಟುಕೋಟಿಯ ಗುಡಿಸಲಿನಿಂದ ಟಿಪ್ಪು ನಗರದ ಹೊಸ ಮನೆಗೆ ಸ್ಥಾಪಿತಳಾದಳು. ತಂಗಿ ತಮ್ಮಂದಿರಿಗೆ ಪಿ.ಯು.ಸಿ. ವರೆಗೆ ಓದಿಸಿ, ಇಬ್ಬರು ತಂಗಿಗೂ ಮದುವೆಮಾಡಿಸಿ ಬಿಟ್ಟಳು, ಫಾತಿಮಾ ೨೮ರ ಗಡಿಲ್ಲಿದ್ದಳು. ಅಮ್ಮಿಜಾನ್ ಮದುವೆಗೆ ಒತ್ತಾಯಿಸುತ್ತಿದ್ದಳು. ಆದರೆ ಫಾತಿಮಾಳಿಗೆ ತನ್ನ ದೋಣಿಯನ್ನು ನಡು ನೀರಿನಲ್ಲಿ ಕೈಬಿಡಲು ಇಷ್ಟವಿರಲಿಲ್ಲ. ತಮ್ಮಂದಿರು ಪಿ.ಯು.ಸಿ. ಮುಗಿಸಿ ಕಂಪ್ಯೂಟರ್ ಕೋರ್ಸಿಗೆ ಹಚ್ಚಿದ್ದರು. ಆರು ಜನರಿದ್ದ ಕುಟುಂಬ ಈಗ ನಾಲ್ಕು ಜನರಿಂದ ಕಂಗೊಳಿಸಿತು. ಅವಳು ತಲೆತುಂಬು ದುಡ್ಡು ಮಾಡುವ ದಾರಿಯನ್ನು ಹುಡುಕುತ್ತಿದ್ದಳು.
ಹೊಸ ಊರಿನಲ್ಲಿ ಅವಳ ಜೀವನ ಹೊಸ ಅಲೆಗಳಲ್ಲಿ ಬದಲಾಯಿತು. ಮನೆಯಲ್ಲಿ ಗ್ಯಾಸ್, ಕುಕ್ಕರ್, ಟಿ.ವಿ. ಬಂದವು, ಮನೆ ಕಟ್ಟಲು ಮಾಡಿದ ಸಾಲ ಪೂರ್ತಿ ತೀರಿ ಅವಳು ಲಕ್ಷದ ಹತ್ತಿರ ಉಳಿಸಿದ್ದಳು. ಬ್ಯೂಟಿ ಪಾರ್ಲರರ ವ್ಯಾಪಾರ ವಹಿವಾಟು ಬಲವಾಗಿತ್ತು. ಬರೀ ಮುಂದೆ ನಡೆಯುವ ಛಲ ಹೊಂದಿದ ಫಾತಿಮಾಳಿಗೆ ದುಡಿದ ದುಡ್ಡು ಇಡೀ ಗಂಟಾಗಲು ಬಹಳ ದಿವಸಗಳು ಬೇಕಾಗಲಿಲ್ಲ. ಅವಳು ಸಬಲಳಾದಳು. ಮರದಂತೆ ಬದುಕಲು ಕಾಡಿಗೆ ಹೋಗಬೇಕಾಗಿಲ್ಲ. ಪಾತಿಮಾ ನಾಡಿನಲ್ಲಿಯೇ ಮರವಾದಳು. ಹೂವು ಹಣ್ಣುಗಳಿಂದ ಫಲಭರಿತಳಾದಳು. ಉಸಿರನ್ನು ಹಸಿರಾಗಿಸಿ ಬ್ಯೂಟಿ ಫಾರ್ಲರನಿಂದ ಗಳಿಸಿದ ಹಣದಿಂದ ಇಬ್ಬರೂ ತಮ್ಮಂದಿರ ಸಹಾಯದಿಂದ ಮನೆಯ ಮುಂದಿನ ಶೆಟರ್‌ಗಳ ಮುಚ್ಚಿ ಒಂದು ಹಣದ ಲೇವಾದೇವಿ ಅಂಗಡಿಯನ್ನು ತೆರದೇ ಬಿಟ್ಟಳು. ವ್ಯವಹಾರ ಪೊಗದಸ್ತಾಗಿ ಬೆಳೆಯಿತು. ಎಲ್ಲಾ ಕಾಯಿದೆ ಕಾನೂನುಗಳ ಅಡಿಯಲಿ ಎರಡು-ಮೂರು ವರ್ಷಗಳಲ್ಲಿ ಮತ್ತೆ ಹಲವಾರು ಕೈಗಳಿಗೆ ಕೆಲಸ ಹೊಂದಿಸುವ ಫೈನಾಯಿನ್ಸ್ ಹೋಗಿ ಕೋ-ಆಪರೇಟಿವ್ ಸೊಸೈಟಿ ಆಯ್ತು. ಮನೆ ಪಾತ್ರೆ ತೊಳೆಯುವ ಫಾತಿಮಾ ಈಗ ಆ ಸಂಸ್ಥೆಯ ನಿರ್ದೇಶಕರ ಸ್ಥಾನ ಅಲಂಕರಿಸಿದಳು. ವಯಸ್ಸು ಮೂವತ್ತು ದಾಟಿತ್ತು. ತಮ್ಮಂದಿರು ಹಂದರವೇರಿ ಮದುಮಕ್ಕಳಾದರು.
ಮೆಹಬೂಬ ಮೊದಲನೆಯ ಹೆಂಡತಿಯಿಂದ ತಲ್ಲಾಖ ಹೊಂದಿದ್ದ, ದೊಡ್ಡ ಮನೆತನದ ದೊಡ್ಡಸ್ತಿಕೆ ಇಳಿದಿತ್ತು. ಫಾತಿಮಾಳನ್ನು ಅಂಗಲಾಚಿದ, ಬೇಡಿದ, ಮದುವೆ ಆಗುತ್ತೇನೆ ಎಂದು ದುಂಬಾಲು ಬಿದ್ದ. ಫಾತಿಮಾ ಗಟ್ಟಿಯಾಗಿದ್ದಳು. ತನಗೆ ಮಾಡಿದ ಅವಮಾನ ತಲ್ಲಣಗಳನ್ನು ಅಳುಕಿಸಿ ಹಾಕಿದ್ದಳು. ಮೆಹಬೂಬನ ಬಗ್ಗೆ ಇದ್ದ ಮಧುರ ಭಾವಗಳನ್ನು ಕಠೋರಗೊಳಿಸಿದ್ದಳು. ತಾನು ನಡೆಯಬೇಕಾದ ದಾರಿ ಅವಳಿಗೆ ತುಂಬಾ ನಿಚ್ಚಳವಾಗಿತ್ತು. ಅವಳು ನೇರವಾಗಿ ಅವನ ಕೋರಿಕೆಯನ್ನು ತಳ್ಳಿಹಾಕಿದಳು.
ಆ ಊರಿನಲ್ಲಿ ಅವಳು ಆ ಬ್ಯಾಂಕಿನ ಒಡತಿ, ಮದುವೆ ಆಗಿ ಮಕ್ಕಳೂ ಆಗಿವೆ. ಅವಳೀಗ ತೆನೆ ತುಂಬಿದ ಹಸಿರು ಗದ್ದೆ.
*****