ಮೂವತ್ತು ವರ್ಷದ ನನ್ನ ಸ್ವತಂತ್ರ ಭಾರತದಲ್ಲಿ ಹೆಮ್ಮೆಯಿಂದ ತಲೆ ಎತ್ತಿ ತಿರುಗಬೇಕಾದವನು ಕುಗ್ಗಿ ಕುಸಿದು ಹೋಗುವಂಥ ಅಮಾನವೀಯ ಅಂತರಗಳ ನಡುವೆ ಉಸಿರಾಡುತ್ತಿದ್ದೇನೆ. ವೈಭೋಗದಲ್ಲಿರುವ ಸ್ವಪ್ರತಿಷ್ಟಿತ ರಾಜಕಾರಣಿಗಳು ಒಂದು ಕಡೆ, ಅವರ ಹಿಡಿತದಲ್ಲಿ ನರಳುತ್ತಿರುವ ಕೋಟ್ಯಾಂತರ ಅಸಹಾಯಕ ಜನತೆ ಮತ್ತೊಂದು ಕಡೆ; ಭೂಮಾಲೀಕನ ಗರ್ವದ ಚಾವಟಿಯ ನೋಟ ಒಂದು ಕಡೆ; ಬೆದರಿ ಬೆನ್ನು ಬಾಗಿಸಿರುವ ಅಶಕ್ತ ಗುಲಾಮರು ಇನ್ನೊಂದು ಕಡೆ; ಸುವ್ಯವಸ್ಥಿತ ದರ್ಪಿಷ್ಟ ಆಧಿಕಾರಿಗಳೊಂದಿಗೆ ನಲುಗಿ ಹೋಗುತ್ತಿರುವ ಶ್ರಮಜೀವಿಗಳು; ನಗರದ ವಿಜೃಂಭಿತ ಶಾಲೆಗಳಲ್ಲಿ ವಿದ್ಯೆ ಕಲಿಯುತ್ತಿರುವ ಶ್ರೀಮಂತ ಮಕ್ಕಳಿಗೆ ಬದಲಾಗಿ ಹಳ್ಳಿಗಳಲ್ಲಿ ಹಾವು ಚೇಳುಗಳ ಮಧ್ಯೆ ವಿದ್ಯೆಗಾಗಿ ಆಂಗಲಾಚಿರುವ ಆಸಂಖ್ಯಾತ ಹರಕಲಂಗಿಯ ಒಣ ಮೈಯ ಮಕ್ಕಳು; ಈ ಎಲ್ಲ ಅಂತರಗಳಿಗಿಂತಲೂ ಭೀಕರವಾದ ಹಾಗೂ ಅತ್ಯಂತ ಕ್ರೂರವಾದ, ಅರೆಬೆತ್ತಲಾಗಿ ದೈನ್ಯತೆಯ ಕೈಚಾಚಿ ಭಿಕ್ಷೆ ಬೇಡುತ್ತಿರುವ ಭಿಕಾರಿಗಳು, ಅವರ ಮಕ್ಕಳು; ಇವು ನನ್ನದೇಶದ ಸ್ವಾತಂತ್ರ್ಯದ ಉಸಿರನ್ನೇ ಒತ್ತಿ ಹಿಡಿದಿವೆ. ಸರ್ಕಾರದ ಮತ್ತು ಜನತೆಯ ಮಧ್ಯವರ್ತಿಗಳಾಗಿ ರಾಜ ಬೊಕ್ಕಸಕ್ಕೆ ಹೆಗ್ಗಣಗಳಾಗಿರುವ ಅಧಿಕಾರಿಗಳು, ಅವ್ಯವಹಾರಕ್ಕೆ ಅವರನ್ನು ದುರುಪಯೋಗಪಡಿಸಿಕೊಂಡು ತಮ್ಮ ಸುಖದ ಹಾದಿಯನ್ನು ಸುಗಮ ಮಾಡಿಕೊಳ್ಳುತ್ತಿರುವ ರಾಜಕಾರಣಿಗಳು, ಜ್ಞಾನದ ಹೆಸರಿನಲ್ಲಿ ಅಜ್ಞಾನದ ಮೌಢ್ಯದ ಪೋಷಕರಾಗಿರುವ ಮಠಾಧಿಪತಿಗಳು, ಧೀಮಂತರು ಎಲ್ಲರೂ ಇದಕ್ಕೆ ಹೊಣೆಗಾರರಾಗಬೇಕಾಗಿದೆ. ಆಗಸ್ಟ್ ೧೫, ೧೯೪೭ ರಂತೆ ೧೯೭೭ ರಲ್ಲೂ ಸಹ ದೇಶದ ಮೂಲೆಮೂಲೆಗಳಲ್ಲಿ ಹಾರಾಡುವ ರಾಷ್ಟ್ರಧ್ವಜದಲ್ಲಿ ಅನ್ನಕ್ಕಾಗಿ ಆಂಗಲಾಚಿರುವ ಈ ಅಸಂಖ್ಯಾತ ಬರಿಗೈಗಳನ್ನು ಕಾಣಬೇಕಾಗಿದೆ. ವ್ಯಂಗವೆಂದರೆ ಈ ನಿರಾಶ್ರಿತರ ಕೊರಳಿಗೆ ಉರುಳು ಬಿದ್ದಿರುವಾಗ ಅಂದು ಸಹ ರಾಜಕಾರಣಿಗಳ, ಅಧಿಕಾರಿಗಳ, ಮಠಾಧೀಶರ, ಧೀಮಂತರ, ಪ್ರತಿಷ್ಠಿತರ ಕೊರಳು ಹಾರ ತುರಾಯಿಗಳಿಂದ ರಂಜಿಸುತ್ತದೆ. ಅಮಾನವೀಯತೆಗೆ ಮತ್ತೊಂದು ಉದಾಹರಣೆ ಬೇಕೆ? ಎಂಥ ಕ್ರೌರ್ಯ! !
ಅಂದು ಮಧ್ಯಾಹ್ನ ಮೂರರ ಹೊತ್ತು. ಛತ್ರದ ಮುಂಭಾಗಕಲ್ಲಿ ರೇಶ್ಮೆ ವಸ್ತ್ರಧಾರಿಗಳು, ಹಿಂಭಾಗದಲ್ಲಿ ಕಸದ ತೊಟ್ಟಿಯ ಸುತ್ತ ಹಸಿದು ಹಲ್ಕಿರಿದು ನಾಲಿಗೆ ಚಾಚಿರುವ ನಾಯಿಗಳ ಜೊತೆಯಲ್ಲಿ ಅದಕ್ಕೂ ಕೀಳಾದ ಮನುಷ್ಯಾಕೃತಿಯ, ಸಮಾಜದ ವ್ಯಂಗ್ಯಕ್ಕೆ ತುತ್ತಾದ ಭಿಕ್ಷುಕರು. ಎಂಜಲೆಲೆ ಬಿದ್ದದ್ದೆ ತಡ ನಾಯಿಗಳೊಂದಿಗೆ ಒಮ್ಮೆಲೆ ಕುಸ್ತಿಗೆ ಬಿದ್ದ ಅವರ ಹೋರಾಟದ, ಕಚ್ಚಾಟದ ಕರ್ಕಶವಾದ ಚೀರಾಟದ ಮಧ್ಯೆ ಛತ್ರದ ಮಧುರ ಸಂಗೀತ- ಎಂಥ ವಿಪರ್ಯಾಸ! ಬಿಕ್ಷುಕರ ಸಮಸ್ಯೆಯನ್ನು ತಿಳಿಯುವ ದೃಷ್ಟಿಯಿಂದ ಅವರೊಡನೆ ಮಾತನಾಡಬೇಕೆಂದು ಹೋಗಿದ್ದ ನನಗೆ ಭಯವಾಯ್ತು. ಅವರ ಆಕೃತಿಗಳು, ನನ್ನನ್ನು ನುಂಗುವಂತೆ ನೋಡುವ ನೋಟ ನನ್ನಲ್ಲಿ ಭಯ ಬಿತ್ತಿದುವು. ಧೈರ್ಯ ತಂದುಕೊಂಡು ಹತ್ತಿರ ಹೋದೆ.
ಥೂ, ಅದನ್ನ ತಗೋಬೇಡಿ, ಬಿಟ್ಟು ಬನ್ನಿ ಎಂದು ಕರೆದೆ. ಅವರ ಕ್ರೂರ ನೋಟ ನನ್ನ ಮೇಲೆ ನೆಟ್ಟಿತು. ನಾಯಿಗಳನ್ನು ಅತ್ತಿತ್ತ ನೂಕುತ್ತಾ ಎಂಜಲೆಲೆಗಳನ್ನು ಬಾಚುತ್ತಿದ್ದರು. ಮತ್ತೆ ಅವರ ಅದೇ ಕ್ರೂರ ನೋಟ ನನ್ನನ್ನು ಅಲ್ಲಿಂದ ಹೋಗುವಂತೆ ಸೂಚಿಸಿದುವು. ಅದನ್ನ ತಗೋಬೇಡಿ ಬನ್ನಿ ಬೇರೆ ಅನ್ನ ಹಾಕುಸ್ತೀನಿ ಎಂದೆ. ಎಲ್ಲರೂ ಒಮ್ಮೆಲೇ ನಕ್ಕರು. ಅದರಲ್ಲಿ ಕ್ರೂರತೆ ಇತ್ತು. ಒಬ್ಬ ಸರಸರನೆ ಎಂಜಲೆಗಳ ಮೇಲಿದ್ದ ತುಣುಕುಗಳನ್ನು ಬಾಚುತ್ತಾ ಥೂ, ನಿನ್ನ ಊಟಕ್ಕೆ! ಒಂಟೋಗು ಎಂದ. ಸ್ವಲ್ಪ ಗಡುಸಾದ ಧ್ವನಿಯಲ್ಲಿ ಕರೆದರೆ ಪ್ರಯೋಜನವಾಗಬಹುದು ಎಂದು ಭಾವಿಸಿದ್ದು ವಿಫಲವಾಗಿ ಅಲ್ಲಿಂದ ಹೊರಬಂದೆ, ಸ್ವಲ್ಪ ಶಾಂತವಾದ ಮೇಲೆ ಯತ್ನಿಸುವ ಎಂದು. ಅರ್ಧ ಘಂಟೆಯ ನಂತರ ಮತ್ತೆ ಹೋದಾಗಲೂ ಸೋತು ಅವರಿಂದ ಬೈಗಳ ತಿಂದ ನನಗೆ ಅನ್ನಿಸಿತು, ಅವರನ್ನು ತಿರಸ್ಕಾರಕ್ಕೆ ಗುರಿಮಾಡಿರುವ ನಮ್ಮ ಜನ, ಸಮಾಜ ಭಿಕ್ಷುಕರ ದೃಷ್ಟಿಯಲ್ಲಿ ಎಂಜಲನ್ನಕ್ಕಿಂತ ಕೀಳಾಗಿದೆ ಎಂದು. ಅಲ್ಲಿಂದ ಅವರ ಸಮಸ್ಯೆ ತಿಳಿಯುವ ಕುತೂಹಲ ಹೆಚ್ಚಾಯಿತು. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಗೆಳೆಯ ಕೆ. ಟಿ. ಶಿವಪ್ರಸಾದರೊಂದಿಗೆ ಭೇಟಿಕೊಟ್ಟೆ.
ಆಗಿನ ಮೈಸೂರಿನ ಮಹಾರಾಜರು ೧೯೪೪ ರಲ್ಲಿ ನಿರಾಶ್ರಿತರ ಪರಿಹಾರದ ಕಾನೂನನ್ನು ಹೊರಡಿಸಿದರು. ೧೯೪೮ ರಲ್ಲಿ ಕಟ್ಟಡಗಳನ್ನು ಹೊಂದಿ ಅಲ್ಲಿ ನಿರಾಶ್ರಿತರಿಗಾಗಿ ನಿರಾಶ್ರತರ ಪರಿಹಾರ ಕೇಂದ್ರ ಸರ್ಕಾರದ ವತಿಯಿಂದ ಕೆಲಸ ಮಾಡುತ್ತಿದೆ. ೩೬೦ ಎಕರೆಗಳ ವಿಸ್ತೀರ್ಣದ ಭೂಮಿಯಲ್ಲಿ ವ್ಯವಸಾಯ ಮತ್ತು ಕೈಗಾರಿಕೆಗಳು, ರಟ್ಟು ಕಟ್ಟುವುದು, ಹೊಲಿಗೆ ಇತ್ಯಾದಿ ಕೆಲಸಗಳು ಜಾರಿಯಲ್ಲಿವೆ. ನಿರಾಶ್ರಿತರಿಗೆ ಬೆಳಗ್ಗೆ ಗಂಜಿ ಮತ್ತು ಕಾಳಿನ ಪದಾರ್ಥ, ಮಧ್ಯಾಹ್ನ ರಾಗಿಮುದ್ದೆ, ಅನ್ನಸಾರು ಕೊಡಲಾಗುತ್ತದೆ ಅಲ್ಲದೆ ಒಂದು ಜೊತೆ ಬಟ್ಟೆ, ಟವಲ್, ಚಾಪೆ, ಕಂಬಳಿ ಕೊಟ್ಟು ಒಂದು ವಿಶಾಲವಾದ ಕೋಣೆಯಲ್ಲಿ ೩೦-೪೦ ಜನರನ್ನು ಒಟ್ಟಿಗೆ ಇರುವಂತೆ ಮಾಡಲಾಗಿದೆ. ನಗರದಲ್ಲಿ ಭಿಕ್ಷೆ ಬೇಡುವವರನ್ನು ಹಿಡಿದು ತಂದು ಅಲ್ಲಿ ಅವರನ್ನು ಇರಿಸಲಾಗುತ್ತದೆ: ಅಲ್ಲಿ ೩೦೦ ಜನ ಭಿಕ್ಷುಕರಿಗೆ ಮಾತ್ರ ಅವಕಾಶವಿದೆ. ಅಲ್ಲಿ ಅವರನ್ನು ಆರು ತಿಂಗಳವರೆಗೆ ಇಟ್ಟುಕೊಳ್ಳಲಾಗುತ್ತದೆ. ನಂತರ ಕೊಟ್ಟ ಬಟ್ಟೆಬರೆಗಳನ್ನು ಹಿಂತೆಗೆದುಕೊಂಡು ಮೊದಲಿನ ಸ್ಥಿತಿಯಲ್ಲೆ ಹೊರಗೆ ಬಿಡುತ್ತಾರೆ. ವರ್ಷಕ್ಕೆ ಇದಕ್ಕಾಗಿ ಸರ್ಕಾರ ಕೇವಲ ಆರು ಲಕ್ಷ ರೂಗಳನ್ನು ಮತ್ತು ನಗರಾಡಳಿತ ಕಛೇರಿ ಹತ್ತು ಸಾವಿರ ರೂಪಾಯಿಗಳನ್ನು ಮಂಜೂರು ಮಾಡುತ್ತದೆ. ದುರಂತವೆಂದರೆ ಅಲ್ಲಿನ ಭಿಕ್ಷುಕರು ಆರು ತಿಂಗಳ ನಂತರವೂ ಭಿಕ್ಷುಕರಾಗಿಯೇ ಹಿಂದಿರುಗುವುದು. ಅಪವಾದವೆಂಬಂತೆ ಒಬ್ಬಿಬ್ಬರು ಕಲಿತ ಕಸುಬಿನ ಕೆಲಸ ಹಿಡಿದು ಹೋಗಬಹುದು.
ಮಧ್ಯಾಹ್ನ ೧೨ರ ಸಮಯ. ನಾನು ಹಾಗೂ ಪ್ರಸಾದ್ ಅಲ್ಲಿಯ ಸಿಬ್ಬಂದಿಯೊಂದಿಗೆ ಭಿಕ್ಷುಕರಿದ್ದ ಕೋಣೆಗೆ ಹೋದೆವು. ಕೋಣೆಯನ್ನು ಪ್ರವೇಶಿಸುತ್ತಿದ್ದಂತೆ ಅನೇಕ ಕ್ರೂರ ತಿವಿತಗಳಂತೆ ಅಲ್ಲಿದ್ದವರ ದೃಷ್ಟಿ ಏಕಕಾಲದಲ್ಲಿ ನಮ್ಮ ಮೇಲೆ ಕೇಂದ್ರೀಕೃತವಾಯಿತು. ಭಿಕ್ಷುಕರಿಗೂ ಹಾಗೆ ಅನ್ನಿಸಿರಬೇಕು! ಮೂಲೆಯಲ್ಲಿದ್ದ ಒಬ್ಬ ಇದ್ದಕ್ಕಿದ್ದಂತೆ ತನ್ನ ಕೈಗಳನ್ನು ಮುಂಚಾಚಿಕೊಂಡು ನಮ್ಮತ್ತ ಧಾವಿಸಿದ. ಅವನನ್ನು ಮತ್ತೊಬ್ಬ ತಡೆದ, ಅವನ ಕೈಗಳನ್ನೂ ಚಾಚಿದ. ಅವರ ಮಾನಸಿಕ ಆರೋಗ್ಯ ದೃಷ್ಟಿಯಿಂದ ನಾವು ಹೊರ ಬರಬೇಕಾದುದು ಅನಿವಾರ್ಯವಾಗಿತ್ತು. ವಯಸ್ಸಾದ, ಅಶಕ್ತರಾದ, ಮಾನಸಿಕ ಮೃತ್ಯವಿಗೆ ತುತ್ತಾಗಿರುವ, ಅಂಗವಿಕಲರ, ರೋಗಿಗಳ ಒಟ್ಟು ಸಮೂಹವೇ ಅಲ್ಲಿತ್ತು; ಮತ್ತೊಂದು ಕ್ರೂರ ಬಂಧೀಖಾನೆಯಲ್ಲಿ! ಪರಿಹಾರ?
ಬಹಳ ಹೊತ್ತು ಪ್ರಯತ್ನಿಸಿ ಅನೇಕ ಉಪಾಯಗಳಿಂದ ಅವರ ಹೂತು ಹೋಗಿದ್ದ ಮನಸ್ಸನ್ನು ಹೊರತರಬೇಕಾದರೆ ಸಾಕು ಸಾಕಾಯಿತು. ನಮ್ಮ ಪ್ರಯತ್ನದ ಫಲವಾಗಿ ಮುದುಕನೊಬ್ಬ ಬಾಯಿಬಿಟ್ಟ. ಅಲ್ಲಿಯ ಸಿಬ್ಬಂದಿ ನನ್ನ ಜೊತೆಯಲ್ಲಿದ್ದ. ಅವನಿದ್ದರೆ ಸರಿಬಾರದೆಂದು ಅನುಮತಿ ಪಡೆದು ಒಬ್ಬ ಬಿಕ್ಷುಕನನ್ನ ದೂರಕ್ಕೆ ಕರೆದೊಯ್ದೆ.
– ಮುದುಕಪ್ಪ, ನಿನ್ನ ಹೆಸರೇನು? …..ಪರವಾಗಿಲ್ಲ ಹೇಳು ಭಯಬೇಡ.
ರಾಜು(ಸ್ವಾಮಿ) ಸಾಮಿ.
– ಎಷ್ಟು ವಯಸ್ಸಾಗಿದೆ ನಿನಗೆ?
೭೨ ವರ್ಸ ಇರಬೇಕು, ಸಾಮಿ.
-ನೀನು ಇಲ್ಲಿಗೆ ಯಾವಾಗ ಬಂದೆ?
ಅದೆಲ್ಲ ನಿಮ್ಗೆ ಯಾಕ್ ಸಾಮಿ, ನಾವೋಯ್ತೀನಿ? (ಅವನನ್ನು ಮತ್ತೆ ಒಲಿಸಿಕೊಳ್ಳಲು ಕಷ್ಟವಾಯ್ತು. ಆದರೂ ಒಲಿಸಿಕೊಂಡು)
– ಹೇಳು, ಇಲ್ಲಿಗೆ ಯಾವಾಗ ಬಂದೆ?
ಏನೋ ಸಾಮಿ, ಅವ್ರು ಇಡ್ಕಂಬಂದಾಗ ಆರ್‍ತಿಂಗ್ಲೊ ಇರ್ಬೇಕಂದ್ರು. ಓಯ್ತೀನಿ ಅಂದ್ರೆ ಇನ್ನೂ ವಾರ ಇರ್ಬೇಕಂತಾರೆ. – ನೀನು ಭಿಕ್ಷೆ ಬೇಡಾಕೆ ಸುರುಮಾಡಿ ಎಷ್ಟು ದಿನಾಯ್ತು?
ದ್ಯಾಪ್ಕ ಇಲ್ಲ. ಸಾಮಿ.
– ನಿನಗೆ ತಂದೆ, ತಾಯಿ, ಬಂಧು, ಬಳಗ ಯಾರಿದ್ದಾರೆ?
ಯಾರೂ ಇಲ್ಲ, ಸಾಮಿ.
-ಅಂದ್ರೆ ನಿನ್ನ ತಂದೆ ತಾಯಿ ಇದ್ದದ್ದು ಗೊತ್ತಿಲ್ಲವಾ?
ಇದ್ರು ಸಾಮಿ, ಈಗ ೫೦ ವರ್ಸಕ್ಕೂ ಮುಂಚೆ ಒಂದಪ ಪಿಲೇಗು(plague) ಬಂದಿತ್ತು, ದೊಡ್ಡ ಪಿಲೇಗು. ಆಗ ಒಂಟೋದ್ರು.
– ಆಗ ಯಾವೂರಲ್ಲಿದ್ರಿ?
ನಮ್ಮೂರು ಮಂಗ್ಲೂರ್ನಾಗೆ, ಸಾಮಿ,
– ಆಗ ನಿನಗೆ ಆಸ್ತಿ, ಮನೆ ಯಾವುದೂ ಇರಲಿಲ್ಲವೆ?
ನಮ್ಮ ಚಿಕ್ಕಪ್ಪ ಕಿತ್ಕಂಡು ಓಡಸ್ಬೂಟ್ಟ.
– ಆಮೇಲೆ?
– ಇಂಗೇ ಬಂದ್ಬುಟ್ಟೆ.
– ಆಗ ಎಷ್ಟು ವಯಸ್ಸು?
ಗಟ್ಟಿಮುಟ್ಟಾಗಿದ್ದೆ, ಸಾಮಿ.
– ಇಲ್ಲಿಗೆ ಬಂದು ಏನ್ಮಾಡ್ದೆ?
ಸಾಮಿ, ಚಿಕ್ಕಪೇಟೆನಾಗ ಒಂದು ಬಟ್ಟೆ ಅಂಗ್ಡಿನಾಗ… ಗಾಡಿ ಎಳ್ಕಂಡು ಹತ್ತೊರ್ಸ ಕೆಲ್ಸ ಮಾಡ್ದೆ. ಆಮ್ಯಾಕೆ ಸಾವುಕಾರರು ಚಿಕ್ಕಬಳ್ಳಾಪುರ್ದಾಗ ಜಮೀನಾಗೆ ಭಾವಿ ತೆಗ್ಸೆಕೇಂತ ಕರಕಂಡೋದ್ರು, ಸಾಮಿ. ಆಗ ಅಲ್ಲಿ ಭಾವಿನಾಗ ಬಿದ್ದು ಹಲ್ಲುಗಳು ಮುರ್‍ದುವೋಯ್ತು. ನ್ವಾಡಿ ಸಾಮಿ, (ಬಾಯನ್ನು ತೋರಿಸಿದ) ಅಂಗೆ ಸ್ವಂಟನೂ ಇಡ್ಕಂತು. ಅಲ್ಲಿಂದ ಹಿಂಗೇ ಬಿಕ್ಸೆ ಬೇಡಾದು, ಸಿಕ್ಕಿದ್ದು ತಿನ್ನಾದು.
-ನಿನಗೆ ಹೀಗಾದಾಗ ನಿನ್ನ ಧಣಿ ನಿನಗೆ ಏನೂ ಕೊಡಲಿಲ್ಲವಾ? (ಮುದುಕನ ಕಣ್ಣಲ್ಲಿ ನೀರು ಬಂತು. ಅದನ್ನು ಒರೆಸಿಕೊಳ್ಳುತ್ತಾ) ಇಲ್ಲ, ಸಾಮಿ
-ಅಳಬೇಡ, ಮುದುಕಪ್ಪ. (ಸ್ವಲ್ಪ ಕಾಲ ಬಿಟ್ಟು) ನೀನು ಗಾಡಿ ಎಳೀತಿದ್ದೆ ಅಂದೆಯಲ್ಲ ಆಗ ಬಂದ ಹಣ ಏನ್ಮಾಡ್ದೆ?
ಅಯ್ಯೋ ಬುಡಿಸಾಮಿ ಎಲ್ಲ ವೋಯ್ತು. ವಯಸ್ನಾಗ ಪೋಲಿ ಉಡುಗ್ರ ಜತಿನಾಗ.
-ನಿಜ, ಆಗ ಮದುವೆ, ಮಕ್ಕಳು ಅಂತ ಮಾಡಿಕೊಳ್ಳಲಿಲ್ಲವಾ, ಅಜ್ಜ?
ಇಲ್ಲ, ಸಾಮಿ.
– ನೀನು ಇಲ್ಲಿಗೆ ಬರಾಕೆ ಮುಂಚೆ ಎಲ್ಲಿದ್ದೆ?
ಇಂಗೇ ಸಾಮೀ, ನಾನೂ ಎರಡ್ನೆ ದಪಾ ಬರ್ತಿರಾದೂ… ಹ್ಹೂ… ಬ್ಯಾಡಂದ್ರು, ಇಡ್ಕಂಬತ್ತಾರೆ.
– ಬಂದ್ರೇನಂತೆ ಅನ್ನ ಸಿಕ್ಕುತ್ತಲ್ಲಾ? ಅಯ್ಯೋ, ಇಲ್ಲಿನ ಅನ್ನದಾಗಿರೋ ಕಲ್ಗಳ್ನ ತಿಂದು ವಟ್ಟೆ ಉಣ್ಣಾಗಿದೆ, ಸಾಮಿ, ನೋವು ನೋವು ಬತ್ತಾದೆ. ಉಣ್ಣಾಕೆ ಆಗಾಕಿಲ್ಲ.
(ಮುದುಕ ಅನ್ನದ ವಿಷಯ ಹೇಳಿದಾಗ ಸರ್ಕಾರ ಉಪಾಧ್ಯಾಯರಿಗೆ ಕಂತಿನ ಮೇಲೆ ಅಕ್ಕಿ ಸಾಲ ಕೊಡುತ್ತಿರುವುದು ನೆನಪಿಗೆ ಬಂತು. ಹಾಸನದಲ್ಲಿ ನನ್ನ ಅಣ್ಣನ ಸ್ನೇಹಿತರು ಸರ್ಕಾರ ಕೊಟ್ಟ ಮುಗ್ಗಿದ ವಾಸನೆಯ ಅಕ್ಕಿಯನ್ನು ತಿನ್ನಲಾರದೆ ಕೆಜಿಗೆ ಒಂದು ರೂ ನಂತೆ ವ್ಯಾಪಾರಿಗೆ ಮಾರಿ ಆ ವ್ಯಾಪಾರಿ ಅದಕ್ಕೆ ಪಾಲಿಷ್ ಮಾಡಿಸಿ ಮತ್ತೆ ಕೆ.ಜಿ.ಗೆ ರೂ ೨.೫೦ ರಂತೆ ಮಾರುತ್ತಿರುವ ಘಟನೆ ಜ್ಞಾಪಕವಾಗಿ ಅಲ್ಲಿಯ ಅನ್ನವನ್ನು ನೋಡಿದಾಗ ಮುದುಕನ ಮಾತು ಸತ್ಯಕ್ಕೆ ಹತ್ತಿರವಾಗಿತ್ತು.)
– ಇಲ್ಲಿಂದ ಬಿಟ್ಟಮೇಲೆ ಎಲ್ಲಿಗೆ ಹೋಗ್ತೀಯ, ಮುದುಕಪ್ಪ?
ಈದಪ ರೈಲಿನಾಗೆ ಕುಂತ್ಕಂದು ಮಂಗ್ಳೂರ್‍ಗೆ ವಾಯ್ತೀನಿ.
-ದುಡ್ಡು ?
ತಿಕೀಟಿಲ್ದೆ ಇದ್ರೆ ಎಲ್ಲಂದ್ರಲ್ಲಿ ಇಳುಸ್ಬುಡ್ತಾರೆ, ಅಂಗೆ ಮತ್ತೆ ಅತ್ಕಂದಿ ವಾಯ್ತೀನಿ.
-ನಿನಗೆ ಹೊಟ್ಟೆನೋವು ಅಂದಿಯಲ್ಲ ಔಷಧಿ ತೆಗೊಳ್ಳದಿಲ್ಲವೆ?
ದಾಕ್ಟ್ರಾ ಅದು ವಾಸಿಯಾಗಕಿಲ್ಲ ಅಂದವ್ರೆ. ರಾತ್ರಿನಾಗ ಉಣ್ಣಾಕಾಗಕಿಲ್ಲ ಸಾಮಿ, ಒಂದೆ ಒತ್ತಿನಾಗ ಉಣ್ಣಾದು.
-ನಿಂದು ಯಾವ ಜಾತಿ, ಅಜ್ಜ?
ಬಣಜಿಗರೋನು, ಸಾಮಿ.
-ದೇವ್ರು ದಿಂಡ್ರು ಅಂತ ಪೂಜೆಮಾಡ್ತೀಯ?
………………………
ಮುದ್ಕಪ್ಪ ಮುಂಚೆ ಇಂಗ್ಲೀಷನೋರು ಇದ್ದಾಗ ಚಂದಾಗಿತ್ತೋ ಇಲ್ಲ ಈಗ ಚಂದಾನೊ?
ಅದೇನೋ ನಂಗೆ ತಿಳಿಯೊಕಿಲ್ಲ, ಬುದ್ಧಿ.
-ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದದ್ದು ಗೊತ್ತೆ, ಅಜ್ಜ?
ಆದೆಂತದೊ ನಂಗೇನ್ ಗೊತ್ತು, ಸಾಮಿ.
-ಸರ್ಕಾರದವರು ಭಿಕ್ಷುಕರನ್ನ ಚೆನ್ನಾಗಿ ನೋಡ್ಕಬೇಕು ಅಂತ ಕಾನೂನು ಮಾಡಿದ್ರಲ್ಲ ಗೊತ್ತುಂಟ, ಅಜ್ಜ?
ನಂಗೊತ್ತಿಲ್ಲ, ಸ್ವಾಮಿ, ಈಚೀಚೆಗೆ ಅಪ್ಪರದಪ್ಪ ಹಿಡ್ಕಂತಾರೆ.
ತಟ್ಟೆಗಳ ಶಬ್ದ ಆಯ್ತು. ಕೇಳಿಸಿಕೊಂಡವನೆ ನಾನಿನ್ನ ಊಟಕ್ಕೆ ವಾಯ್ತಿನಿ ಸಾಮಿ ಎಂದು ದಡಬಡನೆ ಓಡಿಹೋದ. ನಾವು ಭಾರವಾದ ಹೆಜ್ಜೆಗಳನ್ನಿಡುತ್ತಾ ನಗರ ತಲಪಿದೆವು. ನಮ್ಮ ಸಹ ಜೀವಿಗಳ ಕ್ರೂರ ಬದುಕು ನಮ್ಮ ತಲೆಯನ್ನು ಕೊರೆಯುತ್ತಲೇ ಇತ್ತು.
*****
೧೫, ಆಗಸ್ಟ್ ೧೯೭೭