ಮಾರನೆಯ ದಿನ ಔಟ್‌ಪೇಶೆಂಟ್ ವಿಭಾಗದಲ್ಲಿ ರೋಗಿಗಳಿಂದ ನನಗೆ ಫೋನ್ ಬಂದಿತ್ತು. ನನಗೆ ‘ಆಕೆ’ಯದೇ ಫೋನ್ ಇರಬೇಕು ಎನ್ನಿಸಿತ್ತು. ರೆಸೆಪ್ಷನ್ ಕೌಂಟರ್‌ಗೆ ಬಂದು ಫೋನನ್ನು ಕೈಗೆತ್ತಿಕೊಂಡಿದ್ದೆ.
“ಹಲೋ…”
“ನಾನು ಮೇಡಂ… ಬೌರಿಂಗ್ ಆಸ್ಪತ್ರೆಯಿಂದ ಮಾತಾಡ್ತಾ ಇದ್ದೀನಿ…”
“ಹೇಳಿ…”
“ನೀವು ಬೇಜಾರಾಗೋಲ್ಲ ತಾನೆ?”
“ಪೇಶೆಂಟ್ಸ್ ತುಂಬಾ ಇದ್ದಾರೆ, ಏನೂಂತ ಹೇಳಿ…”
“ನಿಮ್ಮ ಯಜಮಾನರಿಗೆ ನನ್ನ ಕಂಡರೆ ತುಂಬಾ ಇಷ್ಟವಂತೆ…”
“ಸರಿ…”
“ನೀವು ಡೈವೋರ್ಸ್ ಕೊಟ್ಟರೆ ನನ್ನನ್ನು ಮದ್ಎವಯಾಗ್ತಾರಂತೆ…”
“ಅಷ್ಟೇ ತಾನೆ? ಕೊಡ್ತೀನಿ ಬಿಡಿ…”
“ನಿಜವಾಗ್ಲೂನಾ?”
“ಸುಳ್ಳು ಹೇಳೋದು ತುಂಬಾ ಕಡಿಮೆ.”
“ತುಂಬಾ ಥ್ಯಾಂಕ್ಸ್ ಮೇಡಂ…”
ಟೆಲಿಫೋನನ್ನು ಕೆಳಗಿಟ್ಟು ಔಟ್ ಪೇಶಂಟ್ ವಿಭಾಗಕ್ಕೆ ಬಂದಿದ್ದೆ. ನಾನು ಸ್ವಲ್ಪವೂ ವಿಚಲಿತಳಾಗಿರಲಿಲ್ಲ. ಮುಂದಿನ ಕಾರ್ಯಗಳ ಬಗ್ಗೆ ಯೋಚಿಸಬೇಕಿತ್ತು.
ನನಗೆ ಪರಿಚಯವಿದ್ದ ವಕೀಲರ ಬಳಿ ವಿಷಯ ತಿಳಿಸಿ ಡೈವೋರ್ಸ್ ಹಾಕುವ ‘ಫಾರಂ’ಗಳನ್ನು ತೆಗೆದುಕೊಂಡು ಆ ದಿನ ರಜೆ ಹಾಕಿ ಬೆಂಗಳೂರಿನ ಮನೆಗೆ ಬಂದಿದ್ದೆ. ‘ಅವನು’ ಎಲ್ಲಿಗೋ ಹೊರಡಲು ತಯಾರಾಗಿದ್ದ. ನನ್ನನ್ನು ನೋಡಿ ಕುಳಿತುಕೊಂಡಿದ್ದ. ನಾನು ಅವನ ಮುಂದೆ ಕುಳಿತು ವಿಚ್ಛೇದನದ ಪತ್ರಗಳನ್ನು ಹೊರ ತೆಗೆದಿದ್ದೆ.
“ಈ ಪೇಪರ್ಸ್ ಒಂದ್ಸಾರಿ ಓದಿ ಸಹಿ ಮಾಡಿಬಿಡು…” ಎಂದಿದ್ದೆ.
“ಏನು ಪೇಪರ್ಸ್?” ಆಶ್ಚರ್ಯದಿಂದ ಕೇಳಿದ್ದ.
“ಡೈವೋರ್ಸ್ ಪೇಪರ್ಸ್ಗಳು…”
“……..”
“ಇಬ್ಬರೂ ಒಪ್ಪಿಗೆಯಿಂದ ಒಟ್ಟಿಗೆ ಸಹಿ ಮಾಡಿ ಅಪ್ಲಿಕೇಷನ್ಸ್ ಹಾಕಿದರೆ ಡೈವೋರ್ಸ್ ಯಾವ ತಕರಾರು ಇಲ್ಲದೆ ಬೇಗ ಮುಗಿಯುತ್ತಂತೆ…”
“ನಾನು ಕೇಳಿರಲಿಲ್ಲ…”
“ನಾನು ಕೇಳ್ತಾ ಇದ್ದೀನಲ್ಲ. ನೀನು ನಿನಗಿಷ್ಟವಾದ ಬದುಕನ್ನು ಆರಿಸಿಕೊಂಡು ಸುಖವಾಗಿರು. ನನ್ನಿಂದ ನಿನ್ನನ್ನು ಬಿಡುಗಡೆಗೊಳಿಸ್ತಾಯಿದ್ದೀನಿ…”
“……..”
“ಇಲ್ಲಿ… ನಿನ್ನ ಸಹಿ ಮಾಡಿಬಿಡು…”
“ನನಗಿಷ್ಟವಿಲ್ಲ…”
“ನನಗಿಷ್ಟವಿದೆ. ಜಗ್ಗಾಡಿ, ಎಳೆದಾಡಿ ಬದುಕಿದ್ದು ಸಾಕಾಗಿ ಹೋಗಿದೆ. ನೀನಗೂ ಸುಖವಿಲ್ಲ… ನಾನೂ ಸುಖವಾಗಿಲ್ಲ ಅನ್ನೋದಕ್ಕಿಂತಾ ನೆಮ್ಮದಿ ಇಲ್ಲಾ. ನೀನು ಯಾವುದೋ ಪಂಜರದಲ್ಲಿದ್ದವನಂತೆ ಪರದಾಡುವುತ್ತಿರುವುದು ನನಗೆ ತಿಳಿದಿದೆ. ನನ್ನದೇ ತಪ್ಪಾಗಿದೆ. ಕ್ಷಮಿಸಿಬಿಡು. ನಿನಗಿಷ್ಟವಾದಂತೆ ಬದುಕು…”
ಅಸಮಾಧಾನ, ಅಸಹನೆಯಿಂದ ಅವನ ಮುಖ ಗಂಟಿಕ್ಕಿತ್ತು. ಆದರೂ ಪೇಪರ್ಸಗಳ ಮೇಲೆ ಸಹಿ ಮಾಡಿದ್ದ.
“ನನಗೆ ಮೋಸ ಮಾಡಿಬಿಟ್ಟಿರಿ…”
“ಇಲ್ಲ… ಇಬ್ಬರಿಗೂ ಬದುಕಿನಿಂದ ಮೋಸವಾಗಿದೆ. ಇಬ್ಬರ ಆಯ್ಕೆಯೂ ಸರಿಯಾಗಿರಲಿಲ್ಲ. ಯಾವುದೋ ಆತಂಕ ಒತ್ತಡದಿಂದ ನಿನಗೆ ಕೇಳಿಕೊಂಡಿದ್ದೆ. ನನ್ನನ್ನು ಕ್ಷಮಿಸಿಬಿಡು…”
ನಾನು ಕನಕಪುರಕ್ಕೆ ಹೊರಡಲು ಎದ್ದು ನಿಂತಿದ್ದೆ. ಅವನಿನ್ನೂ ಕುಳಿತೇ ಇದ್ದ.
“ಡೈವೋರ್ಸ್‌ಗೆ ಹಾಕಿದ ಮೇಲೆ ಒಟ್ಟಿಗೇ ಇರಬಾರದಂತೆ. ನೀನು ಹೊರಡಲು ತಯಾರಾದ ನಂತರ ತಿಳಿಸು…”- ನನ್ನ ಮಾತುಗಳಿನ್ನೂ ಮುಗಿದಿರಲಿಲ್ಲ, ಅವನು ಧಿಗ್ಗನೆ ಎದ್ದು ನಿಂತು,
“ಈಗಲೇ ಹೋಗ್ತಾಯಿದ್ದೀನಿ…” ಎಂದು ಕೋಪದಿಂದ ಹೇಳುತ್ತಾ
ದಢದಢನೆ ರೂಮಿನೊಳಗೆ ಹೋಗಿ, ತನ್ನೆಲ್ಲಾ ಬಟ್ಟೆಗಳನ್ನು ಬೀರುವಿನಿಂದ ಎಳೆದು ಹಾಕಿದ್ದ. ಮುಖ ಧುಮುಗುಟ್ಟುತ್ತಿತ್ತು. ಎಲ್ಲವನ್ನೂ ಸೂಟ್‌ಕೇಸ್‌ಗಳಲ್ಲಿ ತುಂಬಿಕೊಂಡು ಬಂದು ನನ್ನೆದುರಿಗೆ ನಿಂತು,
“ನಿಮ್ಮ ಮನೆಯಿಂದ ನಾನು ಏನನ್ನೂ ತೆಗೆದುಕೊಂಡು ಹೋಗ್ತಾಯಿಲ್ಲ. ಒಂದ್ಸಾರಿ ನೋಡ್ಕೊಳ್ಳಿ…”-ಎಂದು ಹೇಳುವಾಗ ಅವನ ದನಿಯಲ್ಲಿ ಕಂಪನವಿತ್ತಾ? ನೆನಪಿಲ್ಲ.
“ನಾನು ಹೋಗ್ತಾಯಿದ್ದೀನಿ… ಇನ್ಮೇಲೆ ಸುಖವಾಗಿರಬಹುದು…” – ಎಂದು, ಮುಂದಿನ ಬಾಗಿಲನ್ನು ತೆರೆದು ಹಿಂದೆಯೇ ದಢಾರೆಂದು ಮುಚ್ಚಿ ಸೂಟ್ ಕೇಸ್ ಗಳೊಂದಿಗೆ ಹೋಗಿಬಿಟ್ಟಿದ್ದ.
ಸ್ವಲ್ಪ ಹೊತ್ತು ಸುಮ್ಮನೇ ಕುಳಿತಿದ್ದ ನಾನು ಕನಕಪುರದ ಬಸ್ತ್ ಹತ್ತಿದ್ದೆ. ಎದೆಯ ಭಾರ ಇಳಿದು ಹೋದಂತಾಗಿತ್ತು…!
*****
ಮುಂದುವರೆಯುವುದು