ಮನೆಮನೆಗೆ ಮಲ್ಲಿಗೆಯ ಬಳ್ಳಿ ಕೋನರಿಹವಿಲ್ಲಿ
ಮಧುಮಾಸವಿಲ್ಲಿರುವ ವಧುವೆನಲು ಚಿರನವ-
ಸ್ಫಾಲನದಿ ಎಸೆಯುತಿದೆ ಕೆಂದಳಿರು, ಸುಚಿರನಯ-
ನೋನ್ಮೀಲನದ ಮುದದಿ ಕಮ್ಮಲರ ಜೊಂಪಿಲ್ಲಿ
ದೂರ ಮುಗಿಲ ಕಮಾನು ನೆಲವ ಮುತ್ತಿಡುವಲ್ಲಿ
ಮಾಂದಳಿರು ಕಟ್ಟಿಹುದು ತೋರಣವ. ಬರುವನವ,-.
ಸುತ್ತಲಿಹ ಬನದೊಡೆಯ, ವೀರ ಮನ್ಮಥರಾಯ-
ನೆನೆ ಚೆಲುವೆಯರ ಕೂಟ ಸಂದಣಿಸುತಿಹುದಿಲ್ಲಿ
ಕಂಡಿತಿಂತು ಹೊಸೂರು ಎಳೆಯನಿರ ಹೊಸದಾಗಿ.
ಇಂದಿಗೋ! ಭಣಗುಟ್ಟುತಿಹುದದರ ಹಣೆ, ಬನವ
ತುಂಬಿಹವು ಶ್ವಪಚಗಳು, ಊರಿನಲಿ ಮಾತುಗರು
ಕೊಲುತಿಹರು ದುರ್‍ದಮ್ಯಕಾಲವನು ತೂಬಾಕಿ-
ಯನು ಕೊಂಡು ಬಹರು ಬಿಳಿಯರು ಬೇಟೆಗೆನೆ ಮತವ
ಕೊಳಲೆಂದು ಹಳ್ಳಿಗರ ಮನವೊಲಿಸಿ ಬೂತುಗರು!
*****