ಗುತ್ತಿನವರು ನಡೆಸುವ ದೊಂಪದ ಬಲಿ ಅಂದರೆ ಆಸುಪಾಸಿನ ಹತ್ತೂರಲ್ಲಿ ಎಲ್ಲೂ ಇಲ್ಲದ್ದು. ಸುಗ್ಗಿ ಕೊಯ್ಲು ಕಳೆದು ಸರಿಯಾಗಿ ಮೂವತ್ತನೆಯ ದಿವಸಕ್ಕೆ ನಡೆಯುವ ದೊಂಪದ ಬಲಿ ಊರಿಗೆ ಎಲ್ಲಿಲ್ಲದ ಕಳೆ ತರುತ್ತದೆ. ನಾಲ್ಕೂರುಗಳ ಜನ ಅಲ್ಲಿ ನೆರೆದು ಜಾತ್ರೆಯ ವಾತಾವರಣ ಮೂಡಿಸುತ್ತಾರೆ. ಗುತ್ತಿನವರ ಬಾಕಿಮಾರು ಗದ್ದೆಯ ಮೂಡು ದಿಕ್ಕಿನಲ್ಲಿರುವ ದೈವಗಳ ಗುಡಿಯಿಂದ ಅಜಮಾಸು ನೂರು ಮಾರು ದೂರದಲ್ಲಿ ದೊಂಪದ ಬಲಿಗಾಗಿಯೇ ನಿರ್‍ಮಿಸುವ ದೊಡ್ಡ ಚಪ್ಪರದಲ್ಲಿ ಗುರಿಕಾರರುಗಳಿಗೆ ಜಾತಿ ಅಂತಸ್ತಿಗೆ ತಕ್ಕಂತೆ ಎದುರಿನ ಸಾಲಲ್ಲಿ ಕೂರುವ ಅವಕಾಶ. ಇತರರು, ಹೆಂಗಸರು, ಮಕ್ಕಳು ಹಿಂದೆ ಕೂರುತ್ತಾರೆ. ಊರ ಮರ್‍ಯಾದೆಯೆಂದು ಬ್ರಾಹ್ಮಣರು ಬಂದರೆ ಅವರಿಗೆ ಎದುರಿನ ಪಂಕ್ತಿಯಲ್ಲಿ ವಿಶೇಷ ಆಸನದ ವ್ಯವಸ್ಥೆ ಇರುತ್ತದೆ.
ದೊಂಪದ ಬಲಿ ಸಂಜೆ ಆರಂಭವಾಗುತ್ತದೆ. ಅದು ಮುಗಿಯುವುದು ಮರುದಿನ ಬೆಳಿಗ್ಗೆ ನ್ಯಾಯ ತೀರ್‍ಮಾನ ಮಾಡಿದ ಬಳಿಕವೇ. ಕಳೆದೊಂದು ವರ್ಷದ ಎಲ್ಲಾ ವ್ಯಾಜ್ಯಗಳು ಆಗ ಭೂತದ ಮುಂದೆ ಬರುತ್ತವೆ. ದೈವ ಪರಿಹಾರ ಒದಗಿಸುತ್ತದೆ. ಮುಂದಿನ ವರ್‍ಷ ಏನಾಗಲಿದೆ ಎಂಬ ಸೂಚನೆ ನೀಡಿ, ಎಲ್ಲರಿಗೂ ಅರಿಶಿನ ಕೊಟ್ಟು ಕೈಯೆತ್ತಿ ಆಶೀರ್‍ವಾದ ಮಾಡುತ್ತದೆ. ಮತ್ತೆ ಸ್ವಲ್ಪವೇ ಸಮಯದಲ್ಲಿ ಮಳೆ ಸುರಿದು ಊರ ಜನ ಏಣೆಲು ಬೆಳೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.
ಕಳೆದ ಇಪ್ಪತ್ತೈದು ವರ್‍ಷಗಳಿಂದ ನ್ಯಾಯದೈವವಾಗಿ ಊರ ಎಲ್ಲಾ ವ್ಯಾಜ್ಯಯ ತೀರ್‍ಮಾನ ಮಾಡುವ ಪಕ್ರುವಿಗೆ ಪ್ರಾಯ ಎಷ್ಟು ಎನ್ನುವುದು ಅವನಿಗೇ ಗೊತ್ತಿಲ್ಲ. ಆ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳಿಲ್ಲ. ಆದರೆ ಫರಂಗಿಗಳು ಇಲ್ಲಿಗೆ ಬಂದದ್ದು, ತುಂಡು ಬಟ್ಟೆಯ ಮುದುಕ ಗಾಂಧಿ ಅವರನ್ನು ಇಲ್ಲಿಂದ ಓಡಿಸಿದ್ದು ಕೇಳಿ ಗೊತ್ತು. ಫರಂಗಿಗಳ ಕಾಲದಲ್ಲಿ ಯಾರೋ ಇಂಗ್ರೋಜಿ ಪಾದಿರಿಗಳು ಅವನ ಭೂತ ನೋಡಲು ಬಂದದ್ದು, ಅವನ್ನು ಕೇಳಿ ಏನೇನೋ ಬರಕೊಂಡದ್ದು, ಭೂತದ ಫೋಟೋ ತೆಗೆಯಲು ಅವನ ಅನುಮತಿ ಕೇಳಿದ್ದು, ಅವರ ಒತ್ತಾಯಕ್ಕೆ ಮಣಿದು ತಾನು ಒಪ್ಪಿದರೂ ಫೋಟೋ ತೆಗೆದರೆ ಭೂತದ ಕಾರಣಿಕ ಕಡಿಮೆಯಾಗುತ್ತದೆಂದು ಗುತ್ತಿನವರು ತಡೆದದ್ದು, ಪಾದಿರಿಗಳು ಅವನಿಂದ ಪ್ರಸಾದ ತೆಗೆದುಕೊಂಡದ್ದು, ಕೊನೆಗೆ ಗುತ್ತಿನವರ ಮನವೊಲಿಸಿ ಅವರನ್ನು ಭೂತದ ಜತೆ ನಿಲ್ಲಿಸಿ ಫೋಟೋ ತೆಗೆದದ್ದು ಎಷ್ಟು ಸಲ ಹೇಳಿದರೂ ಅವನಿಗೆ ಬಚ್ಚದ ವಿಷಯ. ಹಾಗೆ ಎಷ್ಟು ಕೇಳಿದರೂ ಬೊಡಿಯದ ಇನ್ನೊಂದು ವಿಷಯವೆಂದರೆ ಭೂತಗಳ ಭಂಡಾರ ಬರುವಾಗಿನ ಮಹಿಮೆ.
ಒಂದು ಸಲ ಅವನ ಮುದ್ದಿನ ಮಗಳು ಬಿಜಿಲು ಭೂತದ ಭಂಡಾರ ಬರುವುದನ್ನು ನೋಡಬೇಕೆಂದು ಬಯಸಿದ್ದಳು. ಹಾಗೆ ಅಪ್ಪನಲ್ಲಿ ಹೇಳಿದಾಗ ಪಕ್ರು ನಡುಗತೊಡಗಿದ್ದ. ಏನು? ಏನು ಹೇಳುವುದು ನೀನು ಭಂಡಾರ ಬರುವಾಗ ನೀನು ನೋಡುವುದಾ! ಏನು ಗ್ರೆಯಿಸಿದ್ದಿ! ನೀನು ಎಲ್ಲಿಯಾದರೂ ನೋಡಿದರೆ ಉರಿದು ಬೂದಿಯಾಗಿ ಹೋಗಬಹುದು. ಭೂತದ ಕಾರ್‍ಣಿಕದಿಂದ ಮಾಯಕವಾಗಿ ಹೋದೀಯೆ! ಏನದು ಕುಸಾಲಾಲ ಪೊಟ್ಟು ಮತ್ತು ಚುಮಣಿಗೆ ಆದದ್ದು ನೆನಪುಂಟಲ್ಲಾ?
* * *
ಅವಳಿಗೆ ಅದು ಚೆನ್ನಾಗಿ ನೆನಪಿತ್ತು. ಎರಡು ವರ್‍ಷಗಳ ಹಿಂದೆ ನಡೆದದ್ದು ಅದು. ಊರ ಜಾತ್ರೆಗೆ ದೈವಗಳ ಭಂಡಾರ ಇವರ ಕೇರಿಯ ಎದುರಲ್ಲೇ ಹೋಗುವುದು. ರಾತ್ರೆ ಹೋಗುವ ಭಂಡಾರದ ದಾರಿಯುದ್ದಕ್ಕೂ ಶುದ್ಧವೋ ಶುದ್ಧ ಆಗಬೇಕು. ಅದು ಬರುವ ಹಿಂದಿನ ಸಂಜೆಯೇ ಕೇರಿಗೆ ಕೇರಿಯೇ ಖಾಲಿಯಾಗಬೇಕು. ಭಂಡಾರದ ಎದುರಲ್ಲಿ ಹೆಂಗಸರು ಹಾಯಲೇಬಾರದು.
ಆ ಸಲ ಕೇರಿ ಇಡೀ ಖಾಲಿಯಾಗಿದ್ದರೂ ಮುದುಕ ಪೊಟ್ಟ ಎಲ್ಲಿಗೂ ಹೋಗುವಂತಿರಲಿಲ್ಲ. ಅವನ ಎಡಭಾಗ ಬಿದ್ದುಹೋಗಿ ನಾಲ್ಕು ತಿಂಗಳುಗಳಾಗಿದ್ದವು. ಅವನ ಬಗ್ಗೆ ದೈವ ಕರುಣೆ ತೋರಬಹುದೆಂದು ಅವನನ್ನು ಅಲ್ಲೇ ಬಿಟ್ಟು ಕೇರಿಯವರು ಮನೆಗಳನ್ನು ಖಾಲಿ ಮಾಡಿದ್ದರು. ಆದರೆ ಅವನ ಮುದುಕಿ ಚುಮುಣಿಗೆ ಅವನನ್ನು ಆ ಸ್ಥತಿಯಲ್ಲಿ ಬಿಟ್ಟು ಹೋಗಲು ಮನಸ್ಸು ಬರಲಿಲ್ಲ. ಮರುದಿವಸ ಕೇರಿಯ ಜನ ಹಿಂದಕ್ಕೆ ಬಂದು ನೋಡುವುದೇನನ್ನು? ಕೇರಿಗೆ ಕೇರಿಯೇ ಸುಟ್ಟು ಹೋಗಿಬಿಟ್ಟಿದೆ! ಮುದುಕ ಮುದುಕಿಯರ ಹೆಣಗಳಿಗೆ ಮತ್ತೆ ಬೆಂಕಿಕೊಡುವ ಅಗತ್ಯವೇ ಬೀಳಲಿಲ್ಲ. ದೈವದ ಕಟ್ಟಳೆಯನ್ನು ಮೀರಿದರೆ ಏನಾಗುತ್ತದೆ ಎನ್ನುವುದಕ್ಕೆ ಬೇರೆ ಸಾಕ್ಷಿ ಬೇಕಿರಲಿಲ್ಲ. ಬಳಿಕ ಬಿಜಿಲು ಆ ಬಗ್ಗೆ ಮತ್ತೆ ಮಾತಾಡಲಿಲ್ಲ.
* * *
ಸಂಜೆಯಾಯಿತೆಂದರೆ ಕೇರಿಗೆ ಜೀವ ತುಂಬತೊಡಗುತ್ತದೆ. ತೋಟಗದ್ದೆಗಳಿಗೆ ಕೂಲಿ ಕೆಲಸಕ್ಕೆ ಹೋದವರು ವಾಪಾಸಾಗುತ್ತಾರೆ. ತಣ್ಣನೆಯ ನೀರು ಹೊಯ್ದು ಸ್ನಾನಮಾಡಿ ಹೊಸ ಚೈತನ್ಯ ಪಡೆಯುತ್ತಾರೆ. ಊಟ ಮುಗಿಸಿ ಕೇರಿಯ ಮುಂದಿನ ಎತ್ತರದ ಪಡ್ಪಿನಲ್ಲಿ ಸೇರಿದರೆ, ತೆಂಬರೆ, ದುಡಿ, ಎರುದೋಳುಗಳು ಹೊರಬರುತ್ತವೆ. ಅವುಗಳ ನಾದಕ್ಕೆ ಕೊಳಲಿನ ನಿನಾದ ಸೇರಿಕೊಳ್ಳುತ್ತದೆ. ಹಿರಿಯರು ಪಾಡ್ದನ ಹಾಡುತ್ತಾರೆ. ಲಯಬದ್ಧ ವಾದ ತಾಳಕ್ಕೆ ಹೆಣ್ಣು ಗಂಡೆನ್ನದೆ ಎಲ್ಲರೂ ಹೆಜ್ಜೆ ಹಾಕುತ್ತಾರೆ. ಆಗ ಅಲ್ಲೊಂದು ಹೊಸ ಲೋಕ ಸೃಷ್ಟಿಯಾಗುತ್ತದೆ. ದುಃಖ ದುಮ್ಮಾನಗಳಿಲ್ಲದ, ಗಂಡುಹೆಣ್ಣೆನ್ನದ ಲೋಕ ಅದು. ಅಲ್ಲಿರುವುದು ಹಾಡು ಮತ್ತು ಕುಣಿತ ಮಾತ್ರ.
ತೆಂಬರೆ ಬಾರಿಸುವುದರಲ್ಲಿ ಪಕ್ರುನ ಮಗಳು ಬಿಜಿಲುವನ್ನು ಮೀರಿಸುವವರು ಆ ಕೇರಿಯಲ್ಲಿ ಯಾರೂ ಇಲ್ಲ. ಆಕೆಗೆ ಎಲ್ಲಾ ವಾದನಗಳಲ್ಲಿ ಇಷ್ಟ. ಅಪ್ಪನ ಇಷ್ಟಕ್ಕೆ ವಿರೋಧವಾಗಿ ದುಡಿ ಬಾರಿಸುವುದನ್ನು ಕಲಿತಿದ್ದಳು. ತಾರುಣ್ಯ ತುಂಬಿ ಮಿರಿಮಿರಿ ಮಿಂಚುವ ಅವಳ ಪುಷ್ಟ ಶರೀರ ಎಂಥವರನ್ನೂ ಒಂದಷ್ಟು ಹೊತ್ತು ಹಿಡಿದು ನಿಲ್ಲಿಸಲೇಬೇಕು. ಅವಳಂಥ ರೂಪದ ಹೆಣ್ಣು ಕೇರಿಯಲ್ಲಿ ಮಾತ್ರವಲ್ಲ, ಇಡೀ ಊರಲ್ಲೇ ಇರಲಿಲ್ಲ. ಅವಳನ್ನು ಯಾರ ಕೈಗಿತ್ತು ತಾನು ನಿಶ್ಚಿಂತನಾಗಿ ಕಣ್ಣುಮುಚ್ಚುವುದು ಎಂದು ಪಕ್ರು ಯೋಚಿಸಿ, ಅಳೆದೂ ತೂಗಿ ಕೊನೆಗೆ ತನ್ನ ಭಾವ ಬಾಬುವಿನ ತಮ್ಮ, ಜತ್ತುವಿನ ಎರಡನೆಯ ಮಗನಾದ ಉಗ್ಗಪ್ಪು ಮಾತ್ರ ಅವಳಿಗೆ ಸರಿಯಾದ ಗಂಡು ಎಂಬ ತೀರ್‍ಮಾನಕ್ಕೆ ಬಂದಿದ್ದ. ಕಡೆದಿರಿಸಿದ ಶಿಲಾಮೂರ್ತಿ ಯಂತಹ ಭವ್ಯರೂಪದ ಉಗ್ಗಪ್ಪು ಶಾಲೆಯ ಮುಖವನ್ನು ಕಂಡವ. ಒಂದಷ್ಟು ಊರು ಸುತ್ತಿ ಹೊಸ ಆಲೋಚನೆಗಳನ್ನು ತಲೆಯಲ್ಲಿ ತುಂಬಿಕೊಂಡವ. ಅವನೇ ತಾನೇ ತನಗೆ ಗೊತ್ತಾಗದಂತೆ ಬಿಜಿಲುವಿಗೆ ದುಡಿ ತಂದು ಕೊಟ್ಟವ. ಮಾವಾ ತೆಂಬರೆ ಮಾತ್ರವಲ್ಲ…. ನಾವು ದುಡಿ ಕೂಡಾ ಬಾರಿಸಬೇಕು…. ಕೊಳಲು ಕಲಿಯಬೇಕು. ಹಾಡು, ಕುಣಿತ ಇಲ್ಲದ ಬದುಕು ಯಾಕಾಗಿ ಎಂದು ತನ್ನನ್ನು ಪ್ರಶ್ನಿಸಿದವ!
ಅವನು ಪಾಡ್ದನಗಳನ್ನೆಲ್ಲಾ ಎಷ್ಟು ಬೇಗ ಕಲಿತ? ಎಷ್ಟು ನಾಜೂಕಾಗಿ ಯಾವುದೇ ಭೂತವನ್ನಾದರೂ ಕಟ್ಟಿ ತನಗಿಂತಲೂ ಚೆನ್ನಾಗಿ ಸಂಧಿ ಹೇಳುವವನಾಗಿ ಬಿಟ್ಟ? ಅವನ ಹಾಡು, ಕುಣಿತ, ಕೊಳಲ ನುಡಿತಗಳಿಗೆ ಸ್ವತಾಃ ಪಕ್ರುವೇ ಮನಸೋತಿದ್ದ. ಅವನ ಹಾಡಿಗೆ ಬಿಜಿಲುವಿನ ತೆಂಬರೆ ಸೇರಬೇಕು. ಆಗ ಪಕ್ರು ಕುಣಿಯುತ್ತಾನೆ. ಅವರೊಟ್ಟಿಗೆ ಕೇರಿಗೆ ಕೇರಿಯೇ ಸೇರುತ್ತದೆ. ಮೈಮರೆತ ದಿನಗಳಲ್ಲಿ ಬೆಳಗಿನ ಜಾವದವರೆಗೂ ಕುಣಿತ ಮುಂದು ವರಿಯುತ್ತದೆ. ನಿದ್ದೆಯಿರದ ಆಯಾಸ ಒಂದಿಷ್ಟೂ ಕಾಣದ ತನ್ನ ಜನ ಬೆಳಿಗ್ಗೆ ಯಾವತ್ತಿ ನಂತೆ ಕೆಲಸಕ್ಕೆ ಹೋಗುವುದು ಪಕ್ರುವಿಗೆ ಹೆಮ್ಮೆಯ ವಿಷಯ.
ಕೇರಿಯ ಖುಷಿ ಊರವರ ಸಂತೋಷ ಅಲ್ಲವೆಂದು ಪಕ್ರುವಿಗೆ ಗೊತ್ತಿತ್ತು. ಗುತ್ತಿನವರು ಅವನನ್ನು ಎಷ್ಟೋ ಬಾರಿ ಗದರಿದ್ದುಂಟು. ನಿಮಗೆಲ್ಲಾ ಬಾಸೆಯ ಸಂತಾನ ಇಲ್ಲ. ಕುಡಿಯುವುದು, ಕುಡಿದು ರಾತ್ರಿ ಇಡೀ ಬೊಬ್ಬೆ ಹೊಡೆದು ಕುಣಿಯುವುದು. ನಿಮ್ಮ ಜಾತಿ ಉದ್ಧಾರ ಆಗಲಿಕ್ಕೆ ಉಂಟಾ! ನೀನು ಹಿರಿಯನಾಗಿ ಇದನ್ನು ನಿಲ್ಲಿಸುವುದನ್ನು ಬಿಟ್ಟು ನಿನ್ನಿಂದಲೇ ಇದು ಸುರು ಆದರೆ ಹೇಗೆ? ಇನ್ನೊಂದು ಸಲ ನಮ್ಮ ನಿದ್ದೆ ಕೆಡಿಸಿದರೆ ನೋಡು.
ಪಕ್ರು ಅದಕ್ಕೆ ನಗುತ್ತಲೇ ಉತ್ತರಿಸುತ್ತಿದ್ದ. ನಮಗೆ ಬೇರೆ ಏನುಂಟು ಉಳ್ಳಯಾ? ಒಂದು ದೇವರಾ, ಒಂದು ಪೂಜೆಯಾ? ನಿಮ್ಮ ದೇವರಿಗೆ ನಾವು ಹೊರಗಿನಿಂದಲೇ ಕೈ ಮುಗಿಯ ಬೇಕು. ಜುಗಾರಿಯ ಕಳಕ್ಕೂ ನೀವು ನಮ್ಮನ್ನು ಸೇರಿಸುವುದಿಲ್ಲ. ಕೋಳಿಕಟ್ಟಕ್ಕೂ ಅಷ್ಟೆ. ಮತ್ತೆ ನಮ್ಮ ಮಕ್ಕಳು ಓದಿ ಆಫೀಸರು ಆಗುವುದುಂಟಾ? ನೀವು ಬಿಡಲೇಬೇಕೆಂದರೆ ಬಿಡುತ್ತೇವೆ. ಆದರೆ ಅದೂ ಬಿಟ್ಟರೆ ನನ್ನ ನಂತರ ಬೂತ ಕಟ್ಟುವವರು ತಯಾರಾಗಲಿಕ್ಕಿಲ್ಲ. ಇನ್ನು ನಿಮ್ಮ ಇಷ್ಟ.
ಪಕ್ರುವಿನ ಪ್ರಶ್ನೆಗಳಿಗೆ ಅವರ ಉತ್ತರವೆಂದರೆ ನಗು ಮಾತ್ರ. ಹುಟ್ಟು ಗುಣ ಎಲ್ಲಿ ಹೋಗುತ್ತದೆ ಹೇಳು? ಈಗ ಪಕ್ರು ಕೂಡಾ ಅವರ ನಗುವಿನಲ್ಲಿ ಸೇರಿಕೊಳ್ಳುತ್ತಾನೆ.
* * *
ಆ ರಾತ್ರೆ ಎಂದಿನಂತೆ ಊಟ ಮುಗಿಸಿ ಉಗ್ಗಪ್ಪು ಹೊರಬಂದು ಪಾಡ್ದನ ಆರಂಭಿಸಿದ. ಬಿಜಿಲು ತೆಂಬರೆ ತಂದು ಬಾರಿಸತೊಡಗಿದಳು. ಕೇರಿಯ ಗಂಡಸರು ಒಬ್ಬೊಬ್ಬರೇ ಹೊರಬಂದು ಅದಾಗಲೇ ಕುಣಿತ ಆರಂಭಿಸಿದ್ದ ಪಕ್ರುನ ಸುತ್ತ ಸೇರಿಕೊಂಡರು. ಕಪ್ಪು ಕಪ್ಪು ರಾತ್ರೆ ಅದು. ಕುಣಿತ ತೀವ್ರತೆ ಪಡೆದುಕೊಳ್ಳುತ್ತಿದ್ದಂತೆ ಒಮ್ಮಮಿಂದೊಮ್ಮಲೇ ಕೇಳಿಸಿದ್ದು ಶಂಖ ಮತ್ತು ಜಾಗಟೆ ಸ್ವರ. ಇದೆಲ್ಲಿ ಪೂಜೆ ಎಂದು ಕುಣಿಯುವವರು ಕುಣಿತ ನಿಲ್ಲಿಸಿ ಕಿವಿಗೊಟ್ಟರು. ಆಗ ಕೆಲವು ಆಕೃತಿಗಳು ದಡದಡ ಓಡಿಕೊಂಡು ಬಂದವು. ಪ್ರಖರವಾದ ಟಾರ್‍ಚುಗಳು ಕುಣಿತ ನಿಲ್ಲಿಸಿ ನೋಡುತ್ತಿದ್ದವರ ಕಣ್ಣುಗಳಿಗೆ ಬೆಳಕು ಚೆಲ್ಲಿದವು. ಆ ಬೆಳಕಿನಲ್ಲಿ ಎರಡು ತಲವಾರುಗಳು ಮಿರಿ ಮಿರಿ ಮಿಂಚಿದವು. ಯಾರಾದರೂ ಕದಲಿದಿರೋ ಹೆಣಾ ಬೀಳುತ್ತದೆ, ಹೆಣ. ದಪ್ಪನೆಯ ದನಿಯೊಂದು ಅವರನ್ನು ಮರಗಟ್ಟಿಸಿತು. ಹೆದರಿ ಮುದ್ದೆಯಾಗಿ ಬಿಜಿಲು ಅಪ್ಪನ ಹಿಂದೆ ಅಡಗಿಕೊಂಡಳು. ಬಂದವರಲ್ಲಿ ಇಬ್ಬರು ತಲವಾರು ಹಿಡಿದುಕೊಂಡು ಅಲ್ಲಲ್ಲೇ ನಿಂತರು. ಉಳಿದವರು ಗುಡಿಸಲುಗಳಿಗೆ ನುಗ್ಗಿದರು. ಅಲ್ಲಿಂದ ಹೆಂಗಸರ ಚೀರಾಟ ಶುರುವಾಯ್ತು. ದಮ್ಮಯ್ಯ ಬಿಡೀ….. ದಮ್ಮಯ್ಯ ಬಿಡೀ ಎಂಬ ಆರ್‍ತನಾದ. ಆದರೆ ಟಾರ್‍ಚು ಬೆಳಕಲ್ಲಿ ಮಿಂಚುವ ಆ ಎರಡು ತಲವಾರುಗಳು ಗಂಡಸರನ್ನು ಎಲ್ಲಿಗೂ ಹೋಗದಂತೆ ಮಾಡಿದ್ದವು. ಅದೆಷ್ಟು ಹೊತ್ತೋ!! ಆಕೃತಿಗಳೆಲ್ಲಾ ಅಲ್ಲಿಂದ ಹೊರಟು ಹೋದ ಮೇಲೆಯೇ ಅಲ್ಲಿದ್ದ ಗಂಡಸರಿಗೆ ಅಲುಗಾಡಲು ಸಾಧ್ಯವಾದದ್ದು. ಕೇರಿಯಲ್ಲಿ ಆ ರಾತ್ರಿ ಯಾರೂ ನಿದ್ದೆ ಮಾಡಲಿಲ್ಲ. ಮರುದಿನ ಒಲೆಗಳು ಉರಿಯಲಿಲ್ಲ. ಹಸಿವಿನಿಂದ ಅಳುವ ಮಕ್ಕಳದ್ದು ಮತ್ತು ಅಪಸ್ವರದಲ್ಲಿ ಊಳಿಡುವ ನಾಯಿಗಳದ್ದು ಬಿಟ್ಟರೆ ಬೇರೆ ಸ್ವರವೇ ಇರಲಿಲ್ಲ.
ಪಕ್ರು ಸುಮ್ಮನಿರಲಿಲ್ಲ. ಹತ್ತು ಮಂದಿಯನ್ನು ಹಿಂದಿಟ್ಟುಕೊಂಡು ಗುತ್ತಿನವರಲ್ಲಿಗೆ ಹೋಗಿ ನಡೆದದ್ದನ್ನು ಹೇಳಿದ. ಗುತ್ತಿನವರು ಪಟೇಲರಲ್ಲಿಗೆ ಇವರನ್ನು ಕರೆದುಕೊಂಡು ಹೋದರು. ಸ್ವಲ್ಪ ಹೊತ್ತು ಮಾತುಕತೆ ನಡೆದು ಕೊನೆಗೆ ಎಲ್ಲರೂ ಹೋದದ್ದು ಬಲಿಮ್ಮೆಯ ಬಾಣಾರಲ್ಲಿಗೆ. ಬಲಿಮ್ಮೆಯ ಬಾಣಾರು ಪಂಚಾಂಗ ಬಿಡಿಸಿದರು. ಕವಡೆ ಹಾಕಿದರು. ಮೇಲೆ ನೋಡಿ ಮಣಮಣ ಮಾಡಿದರು. ಕೆಳಗೆ ನೋಡಿ ಗುಣುಗುಣು ಗುಣಿಸಿದರು. ಕೈಯಲ್ಲಿ ಏನೇನೋ ಕೂಡಿ ಕಳೆದರು. ಎರಡು ಕವಡೆ ಅತ್ತ ಇಟ್ಟು, ಮೂರು ಕವಡೆ ಇತ್ತ ಇಟ್ಟು ಲೆಕ್ಕ ಹಾಕಿದರು. ಆಮೇಲೆ ದೊಡ್ಡದಾದ ಉಸಿರೊಂದನ್ನು ಹೊರಡಿಸಿದರು. ಅದರ ಒಟ್ಟಿಗೇ ಅವರ ನಿಯಂತ್ರಣಕ್ಕೆ ಮೀರಿದ ಅಪಾನ ವಾಯುವೊಂದು ಭಯಂಕರ ಸ್ವರದೊಡನೆ ಹೊರಹೊಮ್ಮಿತು. ಜತೆಗೇ ಬಾಯಿಯಿಂದ ಮುತ್ತು ಉದುರಿತು. ಹೌದು….. ಇದುವು ಅದುವೇ…. ಯಾವುದು? ಗಾಬರಿಯಿಂದ ಪಟೇಲರು ಮತ್ತು ಗುತ್ತಿನವರು ಒಟ್ಟಿಗೇ ಕೇಳಿದರು. ಕೇರಿ ಇರುವುದು ಅಮ್ಮನಿಗೆ ಸೇರಿದ ಜಾಗದಲ್ಲಿ. ಈವರೆಗೆ ಅಮ್ಮ ಹೇಗೋ ಎಲ್ಲವನ್ನೂ ನುಂಗಿ ಕೂತಿದ್ದಾಳೆ. ಆದರೆ ಈಗ ಅಲ್ಲಿ ದುಡಿತೆಂಬರೆ, ಪಾಡ್ದನ ಎಂದು ಅಮ್ಮನಿಗೆ ಅಶುದ್ಧ ಆಗ್ತಾ ಇದೆ. ಅಮ್ಮ ಇನ್ನು ಸಹಿಸುವುದಿಲ್ಲ. ಅವಳಿಗೆ ಅಲ್ಲಿ ಒಂದು ಗುಡಿ ಕಟ್ಟಬೇಕು. ನೀವೆಲ್ಲಾ ಸೇರಿ ದಿನಾ ಅಲ್ಲಿ ಭಜನೆ ಮಾಡಬೇಕು. ವಾರಕ್ಕೊಮ್ಮೆ ಮಡಿ ಬ್ರಾಹ್ಮಣನಿಂದ ಪೂಜೆ ನಡೆಯಬೇಕು. ಒಂಬತ್ತರಲ್ಲಿ ಕುಜದೋಷ ಇದೆ. ಅದಕ್ಕೆ ತಕ್ಷಣ ಒಂದು ಪೂಜೆ ಆಗಬೇಕಾಗುತ್ತದೆ. ಒಟ್ಟಿನಲ್ಲಿ ಈಗ ನಡೆದದ್ದಕ್ಕೆಲ್ಲಾ ಕಾರಣ ಅಮ್ಮನ ಉಪದ್ರ. ಹಾಗಂತ ಇಲ್ಲಿ ಸ್ಪಷ್ಟವಾಗಿ ಕಾಣುತ್ತದೆ.
ಪಕ್ರು ಮತ್ತು ಅವನ ಸಂಗಡಿಗರು ಮುಖ ಮುಖ ನೋಡಿಕೊಂಡರು. ಕಾಯ ಬೇಕಾದ ಅಮ್ಮ ಮುನಿದದ್ದು ಒಂದು ಚಿಂತೆಯಾದರೆ ಗುಡಿಗೆ ಹಣ ಒದಗಿಸುವುದು ಇನ್ನೊಂದು. ಏನು ಹೇಳಬೇಕೋ ತೋಚದೆ ಅವನು ಕೂತಿದ್ದಾಗ ಉಗ್ಗಪ್ಪು ಅದೆಲ್ಲಾ ಹಾಗೇ ಇರ್‍ಲಿ ಬಾಣಾರೇ, ಕೇರಿಗೆ ನುಗ್ಗಿ ನಮ್ಮ ಹೆಂಗಸ್ರ ಮಾನ ಕಳ್ದದ್ದು ಯಾರು ಹೇಳಿಲು ಎಂದು ಅಬ್ಬರಿಸಿ ಕೇಳಿದ. ಪಟೇಲರು ದೊಡ್ಡ ದನಿ ತೆಗೆದು ಸುಮ್ಮನೆ ಕೂತ್ಕೊ. ನಿನ್ನಂತವರು ನಾಲ್ಕು ಅಕ್ಷರ ಓದಿದ್ದಕ್ಕೇ ಹೀಗೆಲ್ಲಾ ಆಗುವುದು. ಅಮ್ಮನಿಗೆ ಅಸುದ್ಧ ಮಾಡಿ ನಮ್ಮ ತಲೆಗೆ ತಂದಿಟ್ರಿ ನೀವು, ಸೂಳೆ ಮಕ್ಳು. ಏನೋ ಇಷ್ಟಕ್ಕೇ ಮುಗಿದು ಹೋಯ್ತು. ಕೇರಿಗೆ ಬಂದ ಮಾರಿ ಊರಿಗೆ ಬಂದರೇನು ಗತಿ? ಸಾಕು… ಇನ್ನೂ ಅಸುದ್ಧ ಮಾಡಿ ಊರಿಗೆ ಉಪದ್ರ ತರಬೇಡಿ ಮೂರು ಕಾಸಿನವರು ಎಂದು ದಬಾಯಿಸಿದರು.
ಗುತ್ತಿನವರು ಎಲ್ಲರನ್ನೂ ಸಂತೈಸುವ ದನಿಯಲ್ಲಿ ಹ್ಹಾಂ…. ಆಯ್ತು….. ಏನೋ ಅಮ್ಮನ ದಯೆಯಿಂದ ಇಷ್ಟರಲ್ಲಿಯೇ ಮುಗಿದು ಹೋಯ್ತು. ಯಾರೂ ಈಗ ತಕರಾರು ಎತ್ತಬೇಡಿ. ಸರಿ ಜೋಯಿಸ್ರೆ, ಅಮ್ಮನವರಿಗೆ ಗುಡಿಯಾ! ಒಂದು ಒಳ್ಳೇ ಮೂರ್‍ತ ನೋಡಿ ಬಿಡಿ. ಆಮೇಲೆ ನಾವೆಲ್ಲಾ ಇದ್ದೇವಲ್ಲಾ ಎಂದರು. ಪಟೇಲರು ಈಗ ದನಿ ತಗ್ಗಿಸಿ ಆದದ್ದೆಲ್ಲಾ ಒಳ್ಳೇದಿಕ್ಕೇ ಅಂತ ತಿಳ್ಕೂಳ್ಳುವುದು ಒಳ್ಳೆಯದು ಪಕ್ರೂ. ಈಗಲಾದರೂ ಆ ಕೇರಿ ಅಮ್ಮನಿಗೆ ಸೇರಿದ್ದು ಎಂದು ಗೊತ್ತಾಯಿತೋ, ಇಲ್ಲವೋ? ಗುಡಿ ಕಟ್ಟುವಾ. ಅಮ್ಮ ಅಂದ್ರೆ ಕೇರಿಗೆ ಮಾತ್ರವಾ? ಊರಿಗೂ ಅವಳು ಅಮ್ಮನೇ. ಆದ್ದರಿಂದ ನೀವೆಲ್ಲಾ ಗಾಬರಿ ಮಾಡಬೇಡಿ. ನಾವು ಹಣ ಜಮೆ ಮಾಡಿಕೊಡುತ್ತೇವೆ. ನೀವು ಕೆಲಸಕ್ಕೆ ಸೇರಿದರೆ ಸಾಕು ಎಂದು ಸಂತೈಸಿದರು. ಪಕ್ರುವಿನ ಚಿಂತೆ ದೂರಾದದ್ದು ಆಗಲೇ.
* * *
ಹಾಗೇ ಕಟ್ಟಿದ್ದು ಕೇರಿಯ ಬಲಭಾಗದ ಗುಡ್ಡದ ಮೇಲಿನ ಅಮ್ಮನ ಗುಡಿ. ಅದರ ಪಂಚಾಂಗಕ್ಕೆ ನೆಲ ಅಗೆದದ್ದು, ಕಲ್ಲುಗಳನ್ನು ಕೆತ್ತಿ ತಂದದ್ದು, ಗುಡಿಯ ಮುಂದೆ ಸಮತಟು ಅಂಗಳ ವೊಂದನ್ನು ಮಾಡಿದ್ದು ಎಲ್ಲಾ ಕೇರಿಯವರೇ. ಗುಡಿ ಕಟ್ಟಲು ಕೇರಳದಿಂದ ಚಾತು ಮೇಸ್ತ್ರಿ ಬಂದಿದ್ದ ಸಂಗಡಿಗರೊಡನೆ. ಕಟ್ಟುವ ಕಲ್ಲುಗಳನ್ನು ಶುದ್ಧ ಮಾಡಲು ಸ್ವಯಂ ಬಲಿಮ್ಮೆದ ಬಾಣಾರೇ ಬಂದಿದ್ದರು. ಪಂಚಾಂಗದ ಕಲ್ಲೊಂದನ್ನು ಊರ ಮನೆಮನೆಗೂ ರಾತ್ರಿ ಶಂಖ, ಜಾಗಟೆ, ಗರ್‍ನಾಲು ಮೆರವಣಿಗೆಯೊಡನೆ ಹೊತ್ತುಕೊಂಡು ಹೋಗಿ ಶಿಲಾಪೂಜೆ ಮಾಡಿಸಿ ಹಣ ಸಂಗ್ರಹಿಸಲಾಗಿತ್ತು.
ಗುಡಿಯ ಮೇಲೆ ಅಮ್ಮನವರ ಪ್ರತಿಷ್ಠಾಪನೆ ಮಾಡಿದ್ದು ಕೂಡಾ ಬಲಿಮ್ಮೆಯ ಬಾಣಾರೇ. ಅವರಿಗಾಗಿ ಗುಡ್ಡದ ಎಡಭಾಗದಿಂದ ಗುಡಿಗೆ ಬರಲು ಬೇರೆಯೇ ದಾರಿಯನ್ನು ಮಾಡಬೇಕಾಯಿತು. ಊರವರೆಲ್ಲಾ ಗುಡಿಗೆ ಬರುವುದು ಅದೇ ದಾರಿಯಿಂದ. ಗುಡಿಯಲ್ಲಿ ಅಮ್ಮನವರ ಪ್ರತಿಷ್ಠಾಪನೆಗಾಗಿ ಖರ್‍ಚಿಗೆಂದು ಕೇರಿಯ ಪ್ರತಿ ಮನೆಯವರು ನೂರರಂತೆ ಕೊಡಬೇಕಾಗಿ ಬಂತು. ಪ್ರತಿಷ್ಠಾಪನೆಯ ದಿನ ಹತ್ತೂರ ಮಂದಿ ಗುಡ್ಡೆಯಲ್ಲಿ ಸೇರಿದ್ದರು. ಮೊದಲು ಎಲ್ಲಾ ಬಾಣಾರುಗಳಿಗೆ, ಮತ್ತೆ ಎಲ್ಲಾ ಉಳ್ಳಯಗಳಿಗೆ ಭರ್‍ಜರಿ ಊಟವಾಗಿಯೂ ಮಿಕ್ಕದ್ದು ಅದೆಷ್ಟು ಕೇರಿಯವರು ಎರಡು ದಿವಸ ಒಲೆಗೆ ಬೆಂಕಿ ಹಚ್ಚಬೇಕಾಗಿ ಬರಲಿಲ್ಲ.
ಪ್ರತಿಷ್ಠಾಪನೆ ಆದ ಮೇಲೆ ಪ್ರತಿ ಸಂಜೆ ಯಾರಾದರೂ ಉಳ್ಳಯಗಳು ಬಂದು ಗುಡಿಯ ದೀಪ ಹಚ್ಚುತ್ತಿದ್ದರು. ಕೇರಿಯವರನ್ನು ಅಂಗಳದಲ್ಲಿ ಕೂರಿಸಿ ಭಜನೆ ಹೇಳಿ ಕೊಡುತ್ತಿದ್ದರು. ಪ್ರತಿ ಮಂಗಳವಾರ ಸ್ವಯಂ ಬಲಿಮೆಯ ಬಾಣಾರು ಬಂದು ಪೂಜೆ ಮಾಡಿ ಹೋಗುತ್ತಿದ್ದರು. ಕೇರಿಯ ಜನ ಅಮ್ಮನಿಗೆ ಅಶುದ್ಧ ಆಗದ ಹಾಗೆ ತುಂಬಾ ಜಾಗ್ರತೆ ವಹಿಸುತ್ತಿದ್ದರು. ಪಾಡ್ದನಗಳ ಬದಲು ಭಜನೆ ಗುಣುಗುಣಿಸುತ್ತಿದ್ದರು.
ಪಕ್ರುವಿಗೆ ಈಗ ತುಂಬಾ ನೆಮ್ಮದಿಯಾಗಿತ್ತು. ಅವನು ಭಜನೆಗಳಲ್ಲಿ ತನ್ನನ್ನು ಪೂರ್‍ಣವಾಗಿ ತೊಡಗಿಸಿಕೊಳ್ಳುತ್ತಿದ್ದ. ಗುಡಿಯ ಒಳಗೆ ಹೋಗಲು ತನ್ನವರಿಗೆ ಅಪ್ಪಣೆ ಇಲ್ಲದ್ದು ಒಳ್ಳೆಯದೇ ಆಯಿತು. ಇಲ್ಲದಿದ್ದರೆ ಅಸುದ್ಧ ಆಗಿ ಏನಾದರೂ ಅನಾಹುತ ಆಗಿಬಿಡುತ್ತದೆ ಎಂದುಕೊಂಡ. ಕೇರಿಯೂ ನಿಧಾನವಾಗಿ ಹೊಸ ದಿನಚರಿಗೆ ತನ್ನನ್ನು ತಾನು ಒಗ್ಗಿಸಿಕೊಳ್ಳತೊಡಗಿತು.
ಅಪಸ್ವರ ಹೊರಡಿಸಿದ್ದು ಉಗ್ಗಪ್ಪು ಮಾತ್ರ. ಅವನಿಗೆ ದಿನಕ್ಕೊಮ್ಮೆ ಪಾಡ್ದನ ಹೇಳದಿದ್ದರೆ, ಕೊಳಲು ಊದದಿದ್ದರೆ, ಬಿಜಿಲುವಿನ ತೆಂಬರೆ ಕೇಳದಿದ್ದರೆ ಹುಚ್ಚು ಹಿಡಿದ ಹಾಗಾಗುತ್ತಿತ್ತು. ಈಗ ಅವೆಲ್ಲದರ ಬದಲು ಭಜನೆ ಮತ್ತು ಕುಂಕುಮ. ಸುಮ್ಮನೆ ಕೂತು ಭಜನೆ ಮಾಡುವುದಕ್ಕೆ ಅವನ ಗಂಡುತನ ಒಪ್ಪುತ್ತಿರಲಿಲ್ಲ. ತೆಂಬರೆ ಕೇಳಬೇಕು, ಪಾಡ್ದನ ಹೇಳಬೇಕು. ಎರುದೋಳು ಬಾರಿಸಿ ಕುಣಿಯಬೇಕು. ಎಂಥ ರೋಮಾಂಚಕ ಅನುಭವ ಅದು! ಭಜನೆಯಲ್ಲಿ ಏನಿದೆ? ಅದು ಅರ್‍ಥವೂ ಆಗುವುದಿಲ್ಲ. ಅದರಲ್ಲಿ ಸಂತೋಷವೂ ಇರುವುದಿಲ್ಲ.
ಈ ಭಜನೆ ಹೇಳಿಕೊಡುವ ಉಳ್ಳಯಗಳು ಮೂಗು ಮುಟ್ಟ ಕುಡಿದು ಬಂದು ತಪ್ಪು ತಪ್ಪು ತಾಳ ಹಾಕಿ ಅಪಸ್ವರ ಹೊರಡಿಸುತ್ತಿದ್ದರು. ಅದನ್ನೇ ಭಕ್ತಿಯಿಂದ ಹಾಗೆಯೇ ಕೇರಿಯವರು ಹೇಳಬೇಕಾಗಿ ಬರುವಾಗ ಉಗ್ಗಪ್ಪುವಿಗೆ ಎಲ್ಲಿಲ್ಲದ ಕೋಪ ಬರುತ್ತಿತ್ತು. ಒಂದು ಸಲ ತಾಳ ವಿಪರೀತ ತಪ್ಪಿದಾಗ ಉಗ್ಗಪ್ಪು ತಾಳ ಮಿಸ್ಸಿಂಗ್ ಆಯಿತಲ್ಲ ಉಳ್ಳಯಾ ಅಂದುಬಿಟ್ಟ. ಭಜನೆ ಹೇಳಿಕೊಡುತ್ತಿದ್ದವನಿಗೆ ಎಲ್ಲಿಲ್ಲದ ಸಿಟ್ಟು ಬಂದು ಬಜನೆ ಎಂದರೆ ನಿನ್ನ ಕಪ್ಪು ಸಬ್ಬಲಲ್ಲ. ಬಜನೆ ಮಧ್ಯೆ ಮಾತಾಡಿ ತಪ್ಪಿಸಿದರೆ ನಿನ್ನ ಅಮ್ಮನ ಪೂ…ಗೆ ಪೋ… ಬಿಡುತ್ತೇನೆ ಬೇವಾರ್‍ಸಿ ಎಂದು ಅಭಿನಯಪೂರ್‍ವಕವಾಗಿ ದೊಡ್ಡ ಸ್ವರದಲ್ಲಿ ತೊದಲಿದ್ದ. ಉಗ್ಗಪ್ಪು ತಲೆ ತಗ್ಗಿಸಿ ಕುಳಿತ. ಕೇರಿಯವರು ಸೊಲ್ಲೆತ್ತಲಿಲ್ಲ.
ಅಂದಿನಿಂದ ಉಗ್ಗಪ್ಪು ಕಾಡತೊಡಗಿದ್ದು ಪಕ್ರುವನ್ನು. ಮಾವ…. ನಾವು ಸಂಧಿ ಹೇಳುವುದು ಯಾವಾಗ? ಪಾಡ್ದನ ಹೇಳಿ ತೆಂಬರೆ ಬಾರಿಸಿ ಕುಣಿಯುವುದು ಯಾವಾಗ? ಈ ಹಾಳು ಬಜನೆ ನಿಲ್ಲುವುದು ಯಾವಾಗ? ಪಕ್ರು ಸಮಾಧಾನಪಡಿಸುತ್ತಿದ್ದ. ಹೌದು ಉಗ್ಗಪ್ಪು… ನನಗೆ ಇದೆಲ್ಲಾ ಅರ್‍ಥ ಆಗುತ್ತದೆ. ಆದರೆ ಅಮ್ಮನವರಿಗೆ ಮತ್ತೆ ಸಿಟ್ಟು ಬರಬಾರದಲ್ಲಾಲ ಗುತ್ತಿನವರನ್ನು ಕೇಳಿ ಶುರು ಮಾಡುವಾ.
ಆದರೆ ಉಗ್ಗಪ್ಪುವಿಗೆ ಬಹಳ ದಿನ ತಡೆಯಲಾಗಲಿಲ್ಲ. ಆ ರಾತ್ರೆ ಬಜನೆ ಮುಗಿಸಿ ಉಳ್ಳಯಗಳು ಹೋದ ಕೂಡಲೇ ಅವ ಪಡ್ಪಿಗೆ ಬಂದು ಪಾಡ್ದನ ಹೇಳತೊಡಗಿದ. ಬಿಜಿಲು ತೆಂಬರೆ ತಂದು ಪಾಡ್ದನಕ್ಕೆ ತಕ್ಕಂತೆ ಬಾರಿಸತೊಡಗಿದಳು. ಪಕ್ರುವಿಗೆ ಒಮ್ಮೆಲೇ ಆವೇಶ ಬಂದಂತಾಗಿ ಅವನು ಕುಣಿಯತೊಡಗಿದ. ಅಲ್ಲಿದ್ದವರೆಲ್ಲಾ ಅವನನನ್ನು ಕೂಡಿಕೊಂಡರು. ಇಲ್ಲಿಯ ಹಾಡು ಗದ್ದಲ ಗುಡ್ಡದ ಎಡಬದಿಯಿಂದ ಇಳಿದು ಊರ ಹಾದಿ ಹಿಡಿಯುತ್ತಿದ್ದ ಉಳ್ಳಯಗಳಿಗೆ ಕೇಳಿ ಅವರು ಗುಡ್ಡ ಹತ್ತಿ ಸೇಕಿಕೊಂಡು ಓಡಿ ಬಂದರು. ಕುಣಿತದ ಆವೇಶದಲ್ಲಿದ್ದ ಕೇರಿಯವರಿಗೆ ಇದು ಗೊತ್ತಾಗಲೇ ಇಲ್ಲ. ಉಳ್ಳಯಗಳಿಗೆ ವಿಪರೀತ ಕೋಪ ಬಂದು ಸೂಳೆ ಮಕ್ಕಳೆ, ನಿಲ್ಲಿಸಿ. ಮಾನಗೆಟ್ಟ ನಾಯಿ ಜಲುಮದವರು ಎಂದು ಅಬ್ಬರಿಸಿದರು. ಅಬ್ಬರಕ್ಕೆ ಕುಣಿತ ನಿಂತಿತು. ನಿಮಗೆ ಬಾಸೆ ಬರುವುದು ಯಾವಾಗ? ಗುಂಡಿಗೆ ಹಾಕಿದ ಮೇಲೆಯಾ? ಅಮ್ಮನವರ ಗುಡಿಯ ಎದುರು ಕುಣಿದು ಅಪಸುದ್ಧ ಮಾಡುತ್ತೀರಿ. ನಿಮಗೆ ಅವತ್ತು ಆದದ್ದು ಸಾಲದಾ? ಮನುಷ್ಯ ಜಲುಮದಲ್ಲಿ ಬಂದ ಮೇಲೆ ಬಾಸೆ ಬೇಕು ಬಾಸೆ ಎಂದು ಒಬ್ಬ ಉಳ್ಳಯ ಗರ್‍ಜಿಸಿದರು. ಇನ್ನೊಬ್ಬ ಉಳ್ಳಯ ಪಕ್ರೂ ನಾನು ಹೇಳಲಿಲ್ಲಾಂತ ಬೇಡ ಆಂ? ಇನ್ನೊಮ್ಮೆ ಇಲ್ಲಿ ನಿನ್ನ ತೆಂಬರೆ ಸೊರ ಕೇಳಿದರ
ನೋಡು. ನೀನು ಹಿರಿಯವ. ಅಮ್ಮನವರ ಕೋಪ ನಿನಗೆ ಗೊತ್ತುಂಟಲ್ಲಾ? ಎಂದಾಗ ಪಕ್ರು ತಲೆಯಾಡಿಸಿದ. ತನ್ನಿನಂದಾಗಿ ಎಲ್ಲರಿಗೂ ಬೈಗಳ ಪ್ರಸಾದ ಸಿಕ್ಕಿದ್ದು ಕಂಡು ಉಗ್ಗಪ್ಪು ಮುದುಡಿ ಹೋದ.
ಮರುದಿನ ಪಕ್ರು ಗುತ್ತಿನವರಲ್ಲಿ ಬೇಡಿಕೊಂಡ. ನಾವು ಯಾವಾಗ ಪಾಡ್ದನ ಹೇಳಬಹುದು ಉಳ್ಳಯಾ? ಕುಣಿಯದಿದ್ದರೆ, ತೆಂಬರೆ ಬಾರಿಸದಿದ್ದರೆ ನಮಗೆಲ್ಲಾ ಹುಚ್ಚು ಹಿಡಿಯುತ್ತದೆ. ನಾವೆಲ್ಲಾ ಸತ್ತು ಹೋಗುತ್ತಿದ್ದೇವೆ. ನಾವು ಕುಣಿಯಬಹುದು, ಪಾಡ್ದನ ಹೇಳಬಹುದು ಅಂತ ಒಂದು ಕಟ್ಟಳೆ ಮಾಡಿಬಿಡಿ. ನಿಮ್ಮ ದಮ್ಮಯ್ಯು.
ಗುತ್ತಿನವರು ನಗುತ್ತಲೇ ಉತ್ತರಿಸಿದರು. ಏನು ಹೇಳುತ್ತೀ ಪಕ್ರು? ನನಗೆ ಇದೆಲ್ಲಾ ಗೊತ್ತಾಗುವುದಿಲ್ಲ ಅಂತ ತಿಳಿದಿದ್ದೀಯಾ? ಆದರೆ ನೋಡು ಅಮ್ಮನವರಿಗೆ ಅಸುದ್ಧ ಆಗಿದೆ ಅಂತ ಬಲಿಮೆಯಲ್ಲಿ ಕಂಡದ್ದು ಸುಳ್ಳಾ? ಅವತ್ತು ನೀನೇ ಇದ್ದಿಯಲ್ಲಾ? ಈಗ ನೋಡು, ಈ ಬಜನೆಯಿಂದಾಗಿ ನೀವೆಲ್ಲಾ ಎಷ್ಟು ಬದಲಾಗಿದ್ದೀರಿ? ಆ ಒಂದು ಗುಡಿ ಯಿಂದಾಗಿ ನಮ್ಮಂಥೋರು ಕೂಡಾ ನಿಮ್ಮಲ್ಲಿಗೆ ಬರುವ ಹಾಗೆ ಆಯಿತೋ, ಇಲ್ಲವೋ? ಕೇರಿ ಇರುವುದು ಅಮ್ಮನವರ ಜಾಗದಲ್ಲಿ. ಹಾಗೆ ನೋಡಿದರೆ ನಿಮ್ಮನ್ನೆಲ್ಲಾ ಆ ಜಾಗದಿಂದ ಬಿಡಿಸಬೇಕಾಗುತ್ತದೆ. ಸದ್ಯಕ್ಕೆ ನಾನು ಹಾಗೆ ಮಾಡಿದ್ದೇನಾ? ಸ್ವಲ್ಪ ಕಾಲ ಕಳೆಯಲಿ. ಆಮೇಲೆ ಅಮ್ಮನವರ ಮನಸ್ಸು ಇದ್ದ ಹಾಗೆ ಆಗಲಿ. ಅವನ ಕೈಗೆ ಎಲೆ ಅಡಿಕೆ, ಹೊಗೆಸೊಪ್ಪು ಎಸೆದು ಅಂದ ಹಾಗೆ ಉಗ್ಗಪ್ಪುವಿಗೆ ನಿನ್ನ ಬಿಜಿಲುವನ್ನು ಕೊಡುತ್ತಿ ಎಂದು ಸುದ್ದಿ ಉಂಟಲ್ಲಾ? ಯಾವಾಗ? ಊರ ಹಿರಿಯರ ಅಪ್ಪಣೆ ತೆಗೆದುಕೊಳ್ಳುತ್ತೀಯಾ ಇಲ್ಲವಾ? ಎಂದು ಕೇಳಿದ್ದಕ್ಕೆ ಪಕ್ರು ಉಂಟ ಉಳ್ಳಯಾ? ನಿಮ್ಮೆಲ್ಲರಲ್ಲಿ ಕೇಳಿಯೇ ಅಲ್ಲವಾ ದಿನ ನಿಶ್ಚಯ ಮಾಡುವುದು ಎಂದಿದ್ದ ಗಾಬರಿಯಿಂದ.
ಅಂದು ಈರಣ ಅಮಾವಾಸ್ಯೆ. ಕೇರಿಯಲ್ಲಿ ಐದು ಹಂದಿ ಹೊಡೆದಿದ್ದರು. ಕಳ್ಳು ತಂದು ಕುಡಿದಿದ್ದರು. ಭಜನೆ ಕಳೆದು ಎಷ್ಟೋ ಹೊತ್ತಾಗಿದ್ದರೂ ಯಾರಿಗೂ ನಿದ್ದೆ ಬಂದಿರಲಿಲ್ಲ. ಒಳ್ಳೆಯ ಆಮಲುಭರಿತ ಆವೇಶ. ಸರಿರಾತ್ರಿಯಲ್ಲಿ ಉಗ್ಗಪ್ಪು ಕೇರಿಯ ಕಟ್ಟೆಗೆ ಬಂದು ಪಾಡ್ದನ ಶುರು ಮಾಡಿದ. ಬಿಜಿಲು ತಕ್ಷಣ ತೆಂಬರೆ ತಂದು ಬಾರಿಸತೊಡಗಿದಳು. ಕೇರಿಯವರೆಲ್ಲಾ ಪಡ್ಪಿಗೆ ಬಂದರು. ಎಲ್ಲರಲ್ಲೂ ಹೊಸ ಹುರುಪು. ಎಷ್ಟೋ ದಿವಸಗಳಿಂದ ಕಟ್ಟಿಟ್ಟದ್ದು ಈಗ ಹರಿದು ಹಾಡಾಯಿತು. ಅಬ್ಬರದ, ಆವೇಶದ ಕುಣಿತ ವಾಯಿತು. ಎಂತಹ ಕುಣಿತ ಅದು! ಈ ವರೆಗೆ ಕಾಣದ್ದು. ಪಕ್ರು ತನ್ನು ತಾನು ಮರೆತು ಕುಣಿದ. ಕುಡಿದ ಆಮಲಿಗೆ ಅವನ ಬಾಯಿಯಿಂದ ಭೂತದ ಸಂಧಿಗಳು ಹೊರ ಹೊಮ್ಮಿದವು. ಅವನು ಭೂತದಂತೆ ಆರ್‍ಭಟಿಸತೊಡಗಿದ.
ಎಷ್ಟು ಹೊತ್ತು ಎಂದು ಯಾರಿಗೂ ಗೊತ್ತಿಲ್ಲ. ನಾಲ್ಕೈದು ಟಾರ್ಚುಗಳ ಪ್ರಖರ ವಾದ ಬೆಳಕು ಇವರ ಕಣ್ಣಿಗೆ ಕುಕ್ಕಿದಾಗಲೇ ಎಲ್ಲರೂ ವಾಸ್ತವಕ್ಕೆ ಬಂದದ್ದು. ಆ ಬೆಳಕಿನಲ್ಲಿ ತಮ್ಮತ್ತ ಗುರಿ ಮಾಡಿದ ಎರಡು ಕೋವಿಗಳ ನಳಿಗೆಗಳನ್ನು ಕಂಡು ಕುಣಿಯುತ್ತಿದ್ದವರ ಕೈಕಾಲುಗಳು ಥರಗುಟ್ಟತೊಡಗಿದವು.
ಏನು ನೋಡುತ್ತೀರಿ ಹ್ಹಾಂ… ಗಟ್ಟಿಯಾದ ಸ್ವರವೊಂದು ಹೊರಟಾಗ ಹೆಂಗಸರಿಗೆ ನಡುಕ ಉಂಟಾಯಿತು. ಗುಂಪಿನ ಎದುರಲ್ಲೇ ಇದ್ದ ಬಿಜಿಲುವನ್ನು ಬಲಿಷ್ಠ ಬಾಹುಗಳೆರಡು ಎತ್ತಿಕೊಂಡವು. ಅಪ್ಪಾ…. ಅಪ್ಪಾ…. ಬಿಡಿಸಿ. ಅವಳ ಆಕ್ರಂದನಕ್ಕೆ ಕರಗಿದ ಪಕ್ರು ಮುಂದೆ ಬಂದಾಗ ಅವನ ಹೊಟ್ಟೆಗೆ ಬಲವಾದ ಒಂದು ಒದೆತ ಬಿತ್ತು. ಅವ ತುಳುವ ಹಲಸಿನ ಹಣ್ಣಿನ ಹಾಗೆ ಪಚಕ್ಕನೆ ಬಿದ್ದುಬಿಟ್ಟ. ಸಿಟ್ಟಿನಿಂದ ಕಟಕಟನೆ ಹಲ್ಲು ಕಡಿಯುತ್ತಾ ಮುಂದಕ್ಕೆ ಬಂದ ಉಗ್ಗಪ್ಪುವಿನ ತಲೆಗೆ ಕೋವಿಯ ಹಿಮ್ಮಡಿಯಿಂದ ಬಲವಾದ ಏಟು ಬಿತ್ತು. ಅವನು ಅಮ್ಮ ದೇವರೇ ಎಂಬ ಕೂಗಿನೊಡನೆ ಪ್ರಜ್ಞೆ ತಪ್ಪಿ ಬಿದ್ದ. ಕಿರುಚಾಡುವ ಬಿಜಿಲುವನ್ನು ಬಲಿಷ್ಠ ಬಾಹುಗಳು ಅಮ್ಮನವರ ಗುಡಿಯತ್ತ ಒಯ್ದವು. ಕೇರಿಯವರು ಯಾರೂ ಅಲುಗಾಡದಂತೆ ಎರಡು ಕೋವಿಗಳು ನೋಡಿಕೊಂಡವು. ಗುಡಿಯ ಕಡೆಯಿಂದ ಕೇಳಿಬರುತ್ತಿದ್ದ ಕಿರಿಚಾಟ ಕ್ಷೀಣವಾಗುತ್ತಾ ಕೊನೆಗೆ ನಿಂತು ಹೋಯಿತು. ಸ್ವಲ್ಪ ಹೊತ್ತಿನ ಬಳಿಕ ಮತ್ತೆ ಅದೇ ಗಂಭೀರ ಸ್ವರ ಮೊಳಗಿತು. ಸೂಳೆ ಮಕ್ಳೇ… ಇನ್ನೊಮ್ಮೆ ನಿಮ್ಮ ತೆಂಬರೆ ಕೇಳಿದ್ರೆ ಗುಂಡಿ ತೆಗೆದು ಹೂಳುತ್ತೇವೆ. ಬಂದವರು ಹಾಗೇ ಗುಡ್ಡಹತ್ತಿ ಮಾಯವಾದರು.
ಉಟ್ಟ ಬಟ್ಟೆಯೆಲ್ಲಾ ಹರಿದುಹೋಗಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಬಿಜಿಲುವಿನ ಮೇಲೆ ಬಿದ್ದು ಪಕ್ರು ಗೋಳಾಡಿದ. ಉಗ್ಗಪ್ಪು ಅಳು ನುಂಗಿಕೊಂಡು ಅಮ್ಮನವರ ಗುಡಿಯತ್ತ ನೋಡಿ ಕ್ಯಾಕರಿಸಿ ಉಗುಳಿದ. ಬೆಳಕು ಹರಿಯುವ ಮೊದಲೇ ಪಕ್ರು ಗುತ್ತಿನವರಲ್ಲಿಗೆ ಓಡಿದ. ತಲೆಕೆದರಿ ಕೊಂಡು, ಎದೆ ಎದೆ ಬಡಿದುಕೊಂಡು, ಹೇಳಿ ಉಳ್ಳಯಾ….. ಹೀಗೆ ಮಾಡಬಹುದಾ? ನನ್ನಗೆ ಬೇಕಾದರೆ ಚಪ್ಪಲಿಯಲ್ಲಿ ನಾಲ್ಕು ಹೊಡೆಯಿರಿ. ಏನೂ ಅರಿಯದ ಆ ಹೆಣ್ಣಿಗೆ ಹೀಗೆ ಮಾಡಬಹುದಾ? ಅದರ ಇಡೀ ಮೈ ಕಚ್ಚಿ ಕಚ್ಚಿ ಇಟ್ಟಿದ್ದಾರೆ. ತೊಡೆಯಿಂದ ಇನ್ನೂ ರಕ್ತ ಬರ್‍ತಾ ಇದೆ….. ಉಳ್ಳಯಾ…. ನನಗೆ ನ್ಯಾಯ ಕೊಡಿ ಎಂದು ಗೋಳಾಡಿದ.
ಗುತ್ತಿನವರ ಹೃದಯ ದ್ರವಿಸಿತು. ಛೆ… ಛೆ… ಹೀಗಾಗಬಾರದಿತ್ತು… ಹೀಗಾಗ ಬಾರದಿತ್ತು… ನನಗೊಂದೂ ಗೊತ್ತಾಗುವುದಿಲ್ಲ. ಪಟೇಲರೇ ಏನಾದರೂ ವ್ಯವಸ್ಥೆ ಮಾಡಬೇಕಷ್ಟೇ… ಬಾ ಅಲ್ಲಿಗೆ ಹೋಗುವಾ ಎಂದು ಉಟ್ಟಬಟ್ಟೆಯಲ್ಲೇ ಹೊರಟರು. ಪಕ್ರು ಹಿಂದಿನಿಂದ ನಡೆದ. ಪಟೇಲರು ….ಹೌದಾ? ಅಯ್ಯಯ್ಯಯೋ ಹೀಗಾಗಬಾರದಿತ್ತು… ಆದರೆ ತೊಂದರೆ ಏನೂಂತ ಜೋಯಿಸರೇ ಹೇಳಬೇಕಷ್ಟೆ ಎಂದು ಹೊರಟುಬಿಟ್ಟರು.
ಜೋಯಿಸರು ಪಂಚಾಂಗ ಬಿಚ್ಚಿ ಕವಡೆ ಹಾಕಿ ಗುಣಿಸಿ ಹ್ಹೋ…. ಇದು ಅದುವೇ ಅಂದರು. ಪಟೇಲರು ಗಾಬರಿಯಿಂದ ಯಾವುದು ಸ್ವಾಮಿ? ಎಂದು ಕೇಳಿದರು. ಅಲ್ಲಿ ಇವರು ಕುಣಿದು ಅಶುದ್ಧ ಮಾಡಿದ್ದಾರೆ. ಅಮ್ಮನಿಗೆ ಸಿಟ್ಟು ಬಂದಿದೆ ಎಂದು ಜೋಯಿಸರು ಹೇಳಿದಾಗ ಪಟೇಲರು ಮತ್ತು ಗುತ್ತಿನವರು “ಮತ್ತೆ ಅಸುದ್ಧವಾ….” ಒಳ್ಳೆ ಕತೆ ಆಯ್ತಲ್ಲಾ ಇದು ಎಂದು ತಲೆಗೆ ಕೈಹೊತ್ತು ಕುಳಿತರು. ಪಕ್ರು ಅದು ಹಾಗಿರಲಿ ಬಾಣಾರೆ, ನಿನ್ನೆ ಬಂದು ಅನ್ಯಾಯ ಮಾಡಿದವರು ಯಾರು ಎಂದು ಸ್ವಲ್ಪ ನೋಡಿ ಹೇಳಿ ಎಂದು ಅಂಗಲಾಚಿದ. ಜೋಯಿಸರು ಇಲ್ಲಿ ಕಾಣುವ ಹಾಗೆ ಅಮ್ಮನ ಉಪದ್ರ ಇದು. ಮತ್ತೆ ಶುದ್ಧ ಕಾರ್‍ಯ ಮಾಡದಿದ್ದರೆ ಮತ್ತಷ್ಟು ಉಪದ್ರ ಕಾಣಬಹುದು ಎಂದರು.
ವಾಪಸ್ಸು ಬರುವಾಗ ಪಟೇಲರು ನಿಮ್ಮ ಜಾತಿ ಗುಣ ಎಲ್ಲಿಗೆ ಹೋಗುತ್ತದೆ ಹೇಳು? ಆವತ್ತು ಆದದ್ದು ನಿಮಗೆ ಬುದ್ಧಿ ಬರಿಸಬೇಕಾಗಿತ್ತು. ಈಗ ನೀವಾಗಿಯೇ ತಂದು ಕೊಂಡಿರಿ. ಆದದ್ದು ಆಯಿತು. ಈ ಸಲ ಸುದ್ಧಕ್ಕೆ ನಾವೆಲ್ಲಾ ಆದಷ್ಟು ಹಾಕುತ್ತೇವೆ. ಇನ್ನೊಂದು ಸಲ ಅಸುದ್ಧ ಆದರೆ ನಾವಲ್ಲ ಜನ. ನಿಮ್ಮನ್ನು ಅಮ್ಮನ ಜಾಗದಿಂದ ಎಬ್ಬಿಸಲೇ ಬೇಕಾಗುತ್ತದೆ. ನೆನಪಿರಲಿ. ಎಷ್ಟು ಹೇಳಿದರೂ ನೀವೆಲ್ಲಾ ನಾಯಿ ಬಾಲದ ಹಾಗೆ ಎಂದು ಬಯ್ದರು.
* * *
ದೊಂಪದ ಬಲಿ ಮುಗಿಯುತ್ತಾ ಬಂದಿತ್ತು. ಪಕ್ರು ನ್ಯಾಯ ದೈವವಾಗಿ ನ್ಯಾಯ ನೀಡಲು ಸಿದ್ಧನಾಗಿದ್ದ. ಅವನ ಬಳಗದವರೆಲ್ಲಾ ಭೂತದ ಗುಡಿಯ ಆಸುಪಾಸಿನಲ್ಲಿ ಕೂತಿದ್ದರು. ನ್ಯಾಯ ನೀಡುವಾಗ ಕೇರಿಯ ಹೆಂಗಸರು ದೊಂಪಕ್ಕೆ ಬರುವಂತಿಲ್ಲ. ಬಿಜಿಲು ದೂರದಲ್ಲಿ ಉಗ್ಗಪ್ಪುವಿನ ಹತ್ತಿರ ಕೂತಿದ್ದಳು.
ಗರನಾಲಿನ ಸಿಡಿತ, ವಾದ್ಯಗಳ ಮೊರೆತಗಳ ನಡುವೆ ಪಕ್ರು ನ್ಯಾಯದೈವವಾಗಿ ದೊಂಪಕ್ಕೆ ಬಂದ. ದರ್‍ಶನ, ಬಾರಣೆ, ಕೋಳಿ ಬಲಿ ಆಗಿ ನ್ಯಾಯದೈವ ಶಾಂತವಾಗಿ ಕಟ್ಟೆಯ ಮೇಲೆ ಕೂತಿತು. ಬಾಣಾರು, ಪಟೇಲರು ಮತ್ತು ಗುತ್ತಿನವರು ಒಟ್ಟಾಗಿ ಬಂದು ಭೂತಕ್ಕೆ ಕೈ ಮುಗಿದರು. ಗುತ್ತಿನವರ ಹಿಂದೆ ಅವರ ಮಗ. ಅವನ ಜತೆ ನಾಲ್ಕಾರು ಹೊಂತಕಾರಿಗಳು. ಇವರನ್ನೆಲ್ಲಾ ಒಟ್ಟಿಗೆ ನೋಡಿ ಪಕ್ರುವಿಗೆ ಕಸಿವಿಸಿ ಆಯಿತು. ದೊಡ್ಡ ನ್ಯಾಯವೇ ಇರಬೇಕು ಎಂದುಕೊಂಡು ದೊಂಪದ ಹೊರಗಿದ್ದ ತನ್ನವರತ್ತ ನೋಡಿದ. ನ್ಯಾಯಕ್ಕೆ ಬಂದವರತ್ತ ಸುರಿಯಚಾಚಿ ಅಭಯಪ್ರದಾನ ಮಾಡಿ ಅರಿಶಿನ ಪ್ರಸಾದವನ್ನು ನೀಡಿದ.
ಪ್ರಸಾದವನ್ನು ಕಣ್ಣಿಗೆ ಒತ್ತಿಕೊಂಡ ಗುತ್ತಿನವರು ನೀನು ಎಲ್ಲಾ ತಿಳಿದ ಸತ್ಯ. ನಿನಗೆ ಹೇಳುವುದು ಏನನ್ನು? ಈ ಊರನ್ನು ಹೂವಿನ ತೋಟದ ಹಾಗೆ ನೋಡಿಕೊಂಡು
ಹೋಗುವುದು ನಿನ್ನ ಕೀರ್‍ತಿ. ಕಳೆದ ಕೆಲವು ಸಮಯದಿಂದ ಈ ಊರಲ್ಲಿ ಏನೇನೋ ನಡೆಯುತ್ತಿದೆ. ಆಗಬಾರದ್ದೆಲ್ಲಾ ಆಗುತ್ತಿದೆ. ಇದಕ್ಕೆ ಕಾರಣ ಏನು ಎಂದು ಕಂಡು ಹಿಡಿದು ಇನ್ನು ಮುಂದೆ ಹಾಗೆ ಆಗದ ಹಾಗೆ ಮಾಡುವುದು ನಿನಗೆ ಬಿಟ್ಟದ್ದು ಎಂದು ಮತ್ತೊಮ್ಮೆ
ಕೈಮುಗಿದರು. ಪಟೇಲರು ಮಾತಿನ ಉದ್ದಕ್ಕೂ ಹಾಗೆ…. ಹಾಗೆ…. ಎಂದು ದನಿಗೂಡಿಸಿದರು.
ಆಗ ಬಲಿಮೆಯ ಬಾಣಾರು ಪಂಚಾಂಗದಲ್ಲಿ ಕಂಡುಬಂದ ಹಾಗೆ ಗುಡ್ಡದ ಅಮ್ಮನವರ ಸ್ಥಳದಲ್ಲಿ ಅಶುದ್ಧ ಆಗುತ್ತಿರುವುದೇ ಇದಕ್ಕೆ ಕಾರಣ. ಅಶುದ್ಧಕ್ಕೆ ಕಾರಣರಾಗುವವರು ಯಾರು ಎನ್ನುವುದು ದೈವಕ್ಕೆ ತಿಳಿದಿರುವ ಸತ್ಯ. ದೈವವೇ ಅವರನ್ನು ಅಮ್ಮನವರ ಜಾಗದಿಂದ ಎಬ್ಬಿಸಿ ಓಡಿಸಬೇಕಾಗುತ್ತದೆ ಎಂದರು. ಬಾಣಾರ ಹಿಂದೆ ಇದ್ದ ಗುತ್ತಿನವರ ಮಗ ಹೌದು ಹೌದು. ಅಪಸುದ್ಧ ಮಾಡುವ ಮುಂಡೇ ಮಕ್ಳಿಗೆ ನೀನೇ ಸಿಕ್ಸ ನೀಡಬೇಕು ಅಂದ. ಅವನ ಬಾಯಿಯಿಂದ ಹೊರಟ ಗಂಗಸರದ ಗಮಲು ಅಷ್ಟು ದೂರಕ್ಕೇ ರಾಚಿ ದೈವಕ್ಕೆ ಕಸಿವಿಸಿಯಾಯಿತು.
ಆ ಸ್ವರ ಕೇಳಿಸಿಕೊಂಡ ಬಿಜಿಲು ಬೊಂಡ ಕೆತ್ತುವ ಹರಿತವಾದ ಕತ್ತಿಯೊಂದನ್ನು ಹಿಡಿದುಕೊಂಡು ಧಾವಿಸುತ್ತಾ ಬಂದು ಅಪ್ಪಾ ಇವನೇ…. ಇವನೇ…. ಅವತ್ತು ನನ್ನನ್ನು ಹೊತ್ತುಕೊಂಡು ಹೋದವ. ಅಮ್ಮನ ಗುಡಿಯಲ್ಲೇ ನನ್ನನ್ನು ಅಪಸುದ್ದ ಮಾಡಿದವ. ನೀನು ನ್ಯಾಯದೈವ….. ಇವನಿಗೆ ಶಿಕ್ಷೆ ಕೊಡು….. ಇವನಿಗೆ ಶಿಕ್ಷೆ ಕೊಡು….. ಎಂದು ಪಕ್ರುವಿನ ಕಾಲ ಬುಡದಲ್ಲಿ ಕುಸಿದಳು.
ಈ ಅನಿರೀಕ್ಷಿತಕ್ಕೆ ದಂಗಾದ ಗುತ್ತಿನವರು ಅಯ್ಯಯ್ಯೋ….. ಕೇರಿಯ ಹೆಂಗಸರು ದೊಂಪಕ್ಕೆ ಬರಬಾರದು. ಬೂತವನ್ನು ಕೂಡಾ ಅಸುದ್ಧ ಮಾಡಿಬಿಟ್ಟರು ಈ ಕಂಡ್ರೇಕುಟ್ಟಿಗಳು. ಆ ಸೂಳೆಯನ್ನು ತುಳಿದು ಹೊರಗೆ ಹಾಕಿ ಎಂದು ಗರ್‍ಜಿಸಿದರು. ಅದಕ್ಕೇ ಕಾದಿದ್ದವರಂತೆ ಗುತ್ತಿನವರ ಮಗ ಮತ್ತು ಅವನ ಜೊತೆಗಿದ್ದ ಹೊಂತಕಾರಿಗಳು ಬಿಜಿಲುನತ್ತ ನುಗ್ಗಿದರು. ಇದನ್ನು ನೋಡಿ ಉಗ್ಗಪ್ಪುವಿನ ರಕ್ತವೆಲ್ಲಾ ಕುದಿದು, ಭೂತದ ಸುರಿಯವೊಂದನ್ನು ಹಿಡಿದು ಕೊಂಡು ಕೊಲ್ಲಿ ಕೊಲ್ಲಿ ಆ ಸೂಳೇ ಮಕ್ಕಳನ್ನು ಎಂದು ಭೂತದಂತೆ ಆರ್‍ಭಟಿಸುತ್ತಾ ಬಂದ. ಕುಸಿದಿದ್ದ ಬಿಜಿಲುವಿನ ಮೈಯಲ್ಲಿ ಒಮ್ಮೆಲೇ ಭೂತ ಸಂಚಾರ ವಾದಂತಾಗಿ ಯಾವ ಅಪ್ಪನಿಗೆ ಹುಟ್ಟಿದ ಮಗ ನನ್ನನ್ನು ಮುಟ್ಟುತ್ತಾನೆ? ನೋಡಿಯೇ ಬಿಡುತ್ತೇನೆ ಎಂದು ಎದ್ದು ನಿಂತು ಕತ್ತಿ ಬೀಸಿದಳು.
ಅವಳನ್ನು ಬಾಚಲೆಂದು ಚಾಚಿದ್ದ ಗುತ್ತಿನವರ ಮಗನ ಬಲಗೈಗೆ ಹರಿತವಾದ ಕತ್ತಿಯ ಏಟು ಬಿದ್ದು ಅದು ಕಚಕ್ಕೆಂದು ತುಂಡಾಗಿ ಕೆಳಗೆ ಬಿತ್ತು. ಅಯ್ಯಯ್ಯೋ…. ಎಂದು ಅವನು ವಿಕಾರವಾಗಿ ಕಿರಿಚುತ್ತಾ ಓಡಿದ. ಅವನ ಸ್ನೇಹಿತರು ದಂಗಾಗಿ ನೋಡುತ್ತಿರುವಂತೆ ಉಗ್ಗಪ್ಪು, ಅವನ ಕಡೆಯ ಗಂಡಸರು, ಹೆಂಗಸರೆಲ್ಲಾ ಕತ್ತಿ, ದೊಣ್ಣೆ, ಕೊಳ್ಳಿ, ದೊಂಪದ ಸೂಣಸಿಕ್ಕಿದ್ದನ್ನೆಲ್ಲಾ ಹಿಡಿದುಕೊಂಡು ದೊಂಪಕ್ಕೆ ನುಗ್ಗಿದರು. ಇವರ ಕೋಪಾವೇಶಕ್ಕೆ ತತ್ತರಿಸಿ ಕಂಗಾಲಾದ ಬಾಣಾರು, ಪಟೇಲರು, ಗುತ್ತಿನವರು, ಹೊಂತಕಾರಿಗಳು, ಊರ ಮಂದಿಗಳು ಬದುಕಿದರೆ ಸಾಕೆಂದು ಓಡತೊಡಗಿದರು. ಕೇರಿಯ ಜನರಿಗೆ ಇನ್ನಷ್ಟು ಆವೇಶ ಬಂದು ಮುಂಡೇ ಮಕ್ಳು… ನಮ್ಮನ್ನು ಜಾಗದಿಂದ ಓಡಿಸ್ತಾರಂತೆ. ಕಡಿಯಿರಿ… ಕಡಿಯಿರಿ… ಎನ್ನುತ್ತಾ ಅವರನ್ನು ಅಟ್ಟಿಸಿಕೊಂಡು ಹೋದರು.
ಪಕ್ರು ದಂಗಾಗಿ ಎದ್ದು ನಿಲ್ಲುತ್ತಿದ್ದಂತೆ ದೊಂಪ ದಬಾಲನೆ ಅವನ ಮೇಲೆ ಬಿತ್ತು. ಅವನೂ ಅದರೊಂದಿಗೆ ಕೆಳಗೆ ಕುಸಿದ. ಆಮೇಲೆ ತನ್ನ ಮೈಮೇಲಿನ ತೆಂಗಿನ ಮಡಲು ಗಳನ್ನು, ಕಂಗಿನ ಸಲಕೆಗಳನ್ನು ಅತ್ತಿತ್ತ ಸರಿಸಿ ಜಾಗ ಮಾಡಿಕೊಂಡು ಎದ್ದ. ಸಲಕೆಗಳ ಅಡಿಯಲ್ಲಿ ಸಿಕ್ಕಿಕೊಂಡ ಸುರಿಯ ಮತ್ತು ಚವಲಗಳನ್ನು ಕೈಗೆತ್ತಿಕೊಂಡ. ಮತ್ತೆ ಅಲ್ಲೇ ಬಿಟ್ಟ. ಆಮೇಲೆ ಒಂದೊಂದೇ ತೆಂಗಿನ ಮಡಲುಗಳನ್ನು ಎತ್ತಿ, ಎತ್ತಿ ಬಿಸಾಡುತ್ತಾ ಅವನ್ನು ಹುಡುಕತೊಡಗಿದ. ಕೊನೆಗೂ ಅವು ಕಂಡು ಬಂದಾಗ ಅವನ ಕಣ್ಣುಗಳು ತುಂಬಿಕೊಂಡವು. ಅವು ಅವನ ಮಗಳ ಪ್ರೀತಿಯ ತೆಂಬರೆ ಮತ್ತು ಉಗ್ಗಪ್ಪುವಿನ ಕೊಳಲು! ಅವನು ಅವೆರಡರತ್ತ ಧಾವಿಸಿ ಅವನ್ನು ಎರಡೂ ಕೈಗಳಿಂದ ಬಾಚಿ ಎದೆಗವಚಿಕೊಂಡು ನಿಧಾನವಾಗಿ ಕೇರಿಯತ್ತ ಹೆಜ್ಜೆ ಹಾಕಿದ.
*****