ಹೃದಯದ ತೀರ್ಪು

ಹೃದಯದ ತೀರ್ಪು

ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ ಮನೆಯೇನೂ ಬಹಳ ದೂರವಿರಲಿಲ್ಲ. ಅವನ ಮನೆಯ ಮುಂಭಾಗದ ವಿಶಾಲವಾಗಿದ್ದ ಕೊಠಡಿಗೆ ಬೀದಿಯ ಕಡೆಯಿಂದ ಬಾಗಿಲನ್ನು ಇಟ್ಟು, ಅದರಲ್ಲಿಯೇ ಒಂದಿಷ್ಟು ಬಚ್ಚಲುಮನೆ, ಅಡಿಗೆಮನೆ ಎಂದು ಕಾಣಿಸಿ ಮನೆಯ ಕಡೆಯಿಂದ ಇದ್ದ ಬಾಗಿಲನ್ನು ಬಂದ್ ಮಾಡಿಬಿಟ್ಟಿದ್ದ. ಎಡಭಾಗದ್ದು ಅವನ ಹೆಂಡತಿ ಅಖಿಳ ಮನ ; ಬಲ ಭಾಗದ್ದು ಅವನ ತಾಯಿ ಮಹಬೂಬ್‌ಬೀಯ ಮನೆ ಮಹಬೂಬ್‌ಬೀ ಹರೆಯದಲ್ಲೇ ವಿಧವೆಯಾಗಿ ಮರು ಮದುವೆಯ ಪ್ರಸ್ತಾಪವೆತ್ತಿದವರ ಮೇಲೆಲ್ಲಾ ಉರಿದುರಿದು ಬೀಳುತ್ತಾ, ಒಬ್ಬನೇ ಮಗನಾದ ಯೂಸುಫ್‌ನನ್ನು ಬೆನ್ನಿಗೆ ಕಟ್ಟಿಕೊಂಡು ಮುಚ್ಚಟೆಯಾಗಿ ಸಾಕಿದ್ದಳು. ಅವಳು ಪಡದ ಶ್ರಮವಿರಲಿಲ್ಲ ; ಮಾಡದ ಕೆಲಸವಿರಲಿಲ್ಲ. ಹೀಗಾಗಿ ಯೂಸುಫ್ ಕೂಡ ಅನಿವಾರ್ಯವಾಗಿ ಹಣ್ಣಿನ ವ್ಯಾಪಾರವನ್ನು ಕೈಗೊಂಡಿದ್ದ. ಮೊದಮೊದಲು ಅವನು ಮನೆಯಂಗಳದಲ್ಲಿ ಬೆಳೆದಿದ್ದ ಪರಂಗಿ ಹಣ್ಣುಗಳನ್ನು ನಾಜೂಕಾಗಿ ಹೆರೆದು ಅತ್ಯಂತ ಕಲಾತ್ಮಕವಾಗಿ ಕಾಗದದಷ್ಟು ತೆಳುವಾಗಿ ಸೀಳಿ ಮಾರಾಟ ಮಾಡುತ್ತಿದ್ದನು. ಅವನು ಕೊಯ್ದು, ಉಪ್ಪು ಮೆಣಸಿನ ಪುಡಿ ಸವರಿದ ಸೌತೇಕಾಯಿ ಗಿರಾಕಿಗಳ ಕೈಯಲ್ಲಿ ತೆಳ್ಳಗೆ ಬಳಕುತ್ತಿತ್ತು. ಆ ಸೌತೇಕಾಯಿಯ ಒಂದು ತುಂಡು ಒಂದೇ ಬಾಯಿಗೆ ಸಾಕಾಗುತ್ತಿತ್ತು. ಹಾಗೆ ಆರಂಭವಾದ ಅವನ ಹಣ್ಣಿನ ವ್ಯಾಪಾರ ದಿನೇ ದಿನೇ ವೃದ್ಧಿಸಿ, ಈಗ ಸುಮಾರಾದ ಒಂದು ಹಣ್ಣಿನ ಅಂಗಡಿಯನ್ನೇ ಇಟ್ಟಿದ್ದ. ಮೊದಲೆಲ್ಲಾ ಒಂದು ತುತ್ತು ಅನ್ನಕ್ಕೂ ಕಷ್ಟಪಡಬೇಕಾಗಿದ್ದ ಯೂಸುಫ್ ಈಗ ಸಾಕಷ್ಟು ಅನುಕೂಲಕರ ಸ್ಥಿತಿಯಲ್ಲಿದ್ದ. ಅವನಿಗೆ ಹೆಚ್ಚಿನ ಯೋಚನೆಗಳ್ಯಾವುವೂ ಇರಲಿಲ್ಲ. ಆದರೆ…..

ಅವನ ತಲೆ ಬಿಸಿಯಾಗುತ್ತಿದ್ದುದು ಅವನ ಹೆಂಡತಿ ಅಖಿಲಳಿಂದ ಮಾತ್ರ…. ತಾಯಿಯನ್ನು ಕಂಡರೆ ಎಳೆಗರುವಿನಂತೆಯೇ ನೆಗೆಯುತ್ತಿದ್ದ ಯೂಸುಫ್‌ನನ್ನು ಕಂಡರೆ ಅವಳ ಮೈಯುರಿದು ಹೋಗುತ್ತಿತ್ತು. ಮಧ್ಯಾಹ್ನ ಉಣ್ಣುವ ಊಟ ಕೂಡ ಅವನ ಮೈ ಹತ್ತುವುದಿಲ್ಲವೆಂದು ಅವಳಿಗೆ ಗೊತ್ತು. ಒಂದು ವೇಳೆ ಮೀನು ಅಥವ ಮಾಂಸದ ಸಾರು ಮಾಡಿದ್ದರೆ ‘ಅಮ್ಮನಿಗೆ ಸಾರು ಕೊಟ್ಟೆಯಾ’ ಎಂದು ಅವ ಕೇಳುತ್ತಿರಲಿಲ್ಲ. ಹಾಗೆ ಕೇಳಿದ್ದರೆ ಅಖಿಲ ಅವನನ್ನು ಸುಮ್ಮನೆ ಬಿಡುತ್ತಿರಲಿಲ್ಲ. ಬದಲಿಗೆ ಸಾರನ್ನು ಮಾತ್ರ ಅನ್ನದಲ್ಲಿ ಕಲಿಸಿಕೊಂಡು ಮೀನು ಮಾಂಸದ ತುಂಡುಗಳೆಲ್ಲವನ್ನೂ ತಟ್ಟೆಯ ಬದಿಗೆ ಸರಿಸಿ ಕೈತೊಳದುಬಿಡುತ್ತಿದ್ದ. ರಾತ್ರಿಯ ಊಟ ಮಾತ್ರ ಅಮ್ಮನೆದುರಿಗೆ ಕುಳಿತು ಹೊಟ್ಟೆ ತುಂಬಾ ತೃಪ್ತಿಯಿಂದ ತಿನ್ನುತ್ತಿದ್ದ. ಹೊಟ್ಟೆ ಭಾರವಾಗಿ ಒಮ್ಮೊಮ್ಮೆ ಅಲ್ಲೇ ಕಾಲು ಚಾಚಿದರೂ ಚಾಚಿದನೇ.

ಹೀಗಾಗಿ ಅಖಿಲಾಳಿಗೆ ಅವಳ ಬದುಕಿನ ಬದ್ಧವೈರಿ ಎಂದರೆ ಅವಳ ಅತ್ತೆ ಮೆಹಬೂಬ್ ಬೀಯೇ ಆಗಿದ್ದಳು. ಅವನ ಮದುವೆಯಾದ ಹೊಸದರಲ್ಲಿ ಎಲ್ಲರೂ ಒಟ್ಟಿಗೆ ಇದ್ದರು. ತಾಯಿಯು ತನ್ನಿಂದ ಬೇರೆಯಾಗಿ ಇರುವಳೆಂದು ಅವನು ಕನಸಿನಲ್ಲೂ ಊಹಿಸಲಾರದವನಾಗಿದ್ದ. ಆದರೆ ದಿನೇ ದಿನೇ ಅಖಿಲಳ ಕೋಪ, ಸಿಟ್ಟು ಸೆಡವುಗಳು ಜಾಸ್ತಿಯಾಗುತ್ತಲೇ ಹೋದವು. ಅವಳಿಗೆ ನಾಲ್ಕೈದು ಮಂದಿ ಸಹೋದರರಿದ್ದರು. ಅವರೂ ಕೂಡ ಸುತ್ತಮುತ್ತಲೇ ವಾಸವಾಗಿದ್ದರು. ಒಂದು ದಿನವಂತೂ ಮಹಬೂಬ್‌ಬೀಯ ಕಾರಣಕ್ಕಾಗಿ ಗಂಡ ಹೆಂಡತಿಯ ನಡುವೆ ಭಯಂಕರ ಜಗಳವೇ ನಡೆದು ಮಧ್ಯ ಪ್ರವೇಶಿಸಿದ ಅಖಿಲಳ ತಮ್ಮನೂಬ್ಬ ಯೂಸುಫ್‌ಗೆ ಚೆನ್ನಾಗಿ ಬಾರಿಸಿಯೇ ಬಿಟ್ಟ. ಈ ಪ್ರಸಂಗ ನಡೆದಾಗಲಂತೂ ಈ ಅವಮಾನಕ್ಕೆ ಕಾರಣಕರ್ತಳಾದ ಪಿಶಾಚಿ ಅಖಿಲಾಳಿಗಿಂತ ಎದೆಗೂ ಸಂತೈಸಿ ಸೆರಗಿನಿಂದ ಗಾಳ ಹಾಕಿ ಕಣ್ಣೀರಿಟ್ಟ ತಾಯಿಯೇ ಅವನಿಗೆ ಇನ್ನಷ್ಟು ಆಪ್ತಳಾಗಿ ಬಿಟ್ಟಳು.

ಮಾರನೆಯ ದಿನವೇ ಮನೆಬಿಟ್ಟು ತನ್ನ ಅಮ್ಮನ ಮನೆಗೆ ತುಮಕೂರಿಗೆ ಹೋಗಲು ಸಿದ್ಧಳಾದ ತಾಯಿಯನ್ನು ನೋಡಿ ಅವನು ಕನಲಿ ಕೆಂಡವಾಗಿ ಬಿಟ್ಟ. “ನೀನು ಮನೆಯಿಂದ ಹೊರಗೆ ಕಾಲಿಟ್ಟರೆ ಅಖಿಲಳನ್ನು ಬಿಟ್ಟುಬಿಡುತ್ತೇನೆ” ಎಂದು ಅವನು ಖಡಾಖಂಡಿತವಾಗಿ ಹೇಳಿಬಿಟ್ಟ ಮೇಲೆ ಜಮಾತಿನವರು, ಅಖಿಲಳ ಸಹೋದರರು ಮತ್ತು ಸುತ್ತಮುತ್ತಲಿನ ಜನರು ಬಂದು ಪಂಚಾಯಿತಿ ಮಾಡಿ ಆ ಮನೆಯ ಮುಂದಲ ಕೋಣೆಗೆ ಇದ್ದ ಬಾಗಿಲಿಗೆ ಗೋಡೆಕಟ್ಟಿ, ಬೀದಿಯ ಕಡೆಯಿಂದ ಬಾಗಿಲನ್ನು ಇಡಿಸಿ ಮಹಬೂಬ್‌ಬೀಯು ಅಲ್ಲಿ ಉಳಿದುಕೊಳ್ಳುವಂತೆ ತೀರ್ಮಾನ ಮಾಡಿದರು.

ಯೂಸುಫ್ ಚನ್ನಾಗಿಯೇ ದುಡಿದ. ಅಖಿಲಳಿಗೊಂದು ಪುಟ್ಟ ಟೀವಿ ತಂದುಕೊಟ್ಟರೆ ಅದೇ ರೀತಿಯ ಇನ್ನೊಂದು ಟೀವಿ ಮಹಬೂಬ್‍ಬೀಯ ಮನೆಯಲ್ಲಿ ರಾರಾಜಿಸಿತು. ಅಖಿಲಳಿಗೊಂದು ಸೀಮೆ‌ಎಣ್ಣೆ ಸ್ಟವ್ ತಂದುಕೊಟ್ಟರ ಮಹಬೂಬ್ ಬೀಗೊಂದು….. ಈಕೆಯ ಮನೆಗೊಂದು ಕಲ್ಲಂಗಡಿ ಹಣ್ಣು ತಂದರೆ ಆಕೆಯ ಮನೆಗೆ ಕೂಡ ಅಷ್ಟೇ ಗತ್ರದ್ದೊಂದು…. ಹೀಗಾಗಿ ತಾನೇ ಯಜಮಾನಿಯಾದ ಮನೆ….. ಸ್ವಾತಂತ್ರ್ಯ ಅಖಿಲಳಿಗಿದ್ದರೂ, ಅವಳು ಮಾತ್ಸರ್ಯದಿಂದ ಕುದಿದು ಹೋಗುತ್ತಿದ್ದಳು. ಈ ನಡುವೆ ಅಖಿಲಳ ನಾಲ್ಕು ಗಂಡು ಮಕ್ಕಳು ರಾಜ, ಮುನ್ನಾ, ಬಾಬು, ಚೋಟು ಇವರೆಲ್ಲಾ ಎರಡು ಕಡೆಯ ವೈರತ್ವದಲ್ಲಿ ಸಾಕಷ್ಟು ಗಿಟ್ಟಿಸಿಕೊಳ್ಳುತ್ತಿದ್ದರು. ಅಂದ ಹಾಗೆ ಮೆಹಬೂಬ್ ಬೀ ಕೂಡ ಅಖಿಲಳೊಡನೆ ಸೇರಿಗೆ ಸವಾಸೇರಾಗಿ ನಿಂತಿದ್ದಿದ್ದರೆ ಅವನು ಅಷ್ಟಾಗಿ ತಾಯಿಯ ಪರ ವಹಿಸುತ್ತಿರಲಿಲ್ಲವೇನೋ….. ಆದರೆ ಅವನ ತಾಯಿ ಅಖಿಲಳ ಎಲ್ಲಾ ಬೈಗುಳ ಮತ್ತು ಕೀಟಲೆಗಳಿಗೂ ಸುಮ್ಮನಾಗಿಬಿಡುತ್ತಿದ್ದುದು ಅವನಿಗೆ ತುಂಬಾ ನೋವುಂಟುಮಾಡಿ ಅವನು ಸಹಜವಾಗಿಯೇ ತಾಯಿಯ ಪಕ್ಷಪಾತಿಯಾಗಿಬಿಟ್ಟಿದ್ದ.

ಒಮ್ಮೆಯಂತೂ ಹತ್ತು ವರ್ಷದ ಮುನ್ನ ಅಜ್ಜಿಯ ಬಳಿ ಕುಳಿತು ‘ಟೀ’ನಲ್ಲಿ ಅದ್ದಿ ಅದ್ದಿ ಹೊಟ್ಟೆ ಭರ್ತಿ ಬಿಸ್ಕತ್ ತಿಂದದ್ದೇ ಅಲ್ಲದೆ ಗರಿಗರಿಯಾಗಿದ್ದ ಆ ಬಿಸ್ಕತ್ತಿನ ವರ್ಣನೆಯನ್ನು ಅಖಿಲಳ ಎದುರಿಗೆ ಮಾಡಿಬಿಟ್ಟ. ಅಖಿಲಳಿಗಷ್ಟೇ ಅಲ್ಲದ ಯೂಸೂಫ್ ತನ್ನ ತಾಯಿಗೂ ಆ ಬಿಸ್ಕತ್ತಿನ ಪೊಟ್ಟಣವನ್ನು ತಂದು ಕೊಟ್ಟಿರಲಿಲ್ಲ. ಮೆಹಬೂಬ್ ಬೀಯನ್ನು ಕಾಣಲು ಬಂದಿದ್ದ ಅವಳ ಅಣ್ಣನ ಮಗ ಆ ಬಿಸ್ಕತ್ತನ್ನು ಆಕೆಗೆ ಕೊಟ್ಟು ಹೋಗಿದ್ದ. ಅಖಿಲ ಹಿಂದೆ ಮುಂದೆ ನೋಡದೆ ಗಂಡನನ್ನು ಅವನ ತಾಯಿಯನ್ನು ವಾಚಾಮಗೋಚರವಾಗಿ ಬೈದಳು. ಮೆಹಬೂಬ್‌ಬೀಯು ಕೇಳಲಿ ಎಂದು ಮುಂಬಾಗಿಲ ಬಳಿ ಬಂದು ಮನೆಹಾಳಿ ಎಂದು ನೆಟಿಕೆ ಮುರಿದಳು. ಯಾವುದಕ್ಕೂ ಪ್ರತಿಕ್ರಿಯೆ ಬಾರದೇ ಹೋದಾಗ

‘ನನ್ನ ಸವತಿಯಾಗಿ ನನ್ನ ಹೊಟ್ಟೆ ಉರಿಸುತ್ತಿದ್ದೀಯಲ್ಲಾ…’ ಎಂದು ಎದೆ ಬಡಿದುಕೊಂಡು ಅತ್ತಳು.

ಅವಳ ನಾಲ್ಕು ಮಂದಿ ಮಕ್ಕಳು ಕೂಡ ಭಯಗ್ರಸ್ಥರಾಗಿ ಅವಳ ಸುತ್ತಲೂ ಸೇರಿಕೊಂಡವು ಆ ಮಕ್ಕಳನ್ನು ನೋಡಿ ಅವಳಿಗೆ ಇನ್ನಷ್ಟು ಅಳು ಒತ್ತರಿಸಿಕೊಂಡು ಬಂದಿತು. ತನ್ನನ್ನು ತನ್ನ ಇಂತಹ ಮುತ್ತಿನಂತಹ ಮಕ್ಕಳನ್ನು ಕಾಲ ಕಸವಾಗಿ ಕಂಡು ಆ ಮುದುಕಿಯನ್ನು ತನ್ನ ಗಂಡ ಎಲ್ಲರಿಗಿಂತ ಹೆಚ್ಚಾಗಿ ಪ್ರೀತಿಸುವ ವಿಷಯವೇ ಅವಳಿಗೆ ಅಸಹನೀಯವಾಗುತ್ತಿತ್ತು. ಅವಳ ಅಳು ಕೂಗು, ಗಲಾಟೆ ಎಲ್ಲದರ ನಡುವ ಯೂಸೂಫ್ ಬಂದು ಅವಳ ಹಿಂದೆ ನಿಂತುದು ಅವಳಿಗೆ ಅರಿವಾಗಲೇ ಇಲ್ಲ. ಯೂಸೂಫ್‌ಗೆ ತಲೆಕಟ್ಟು ಒಮ್ಮೊಮ್ಮೆ ಬಡಿದು ಅವಳ ಪ್ರಾಣ ಕಳೆಯಲೇ ಎನಿಸುತ್ತಿತ್ತು. ಇದೂ ಕೂಡಾ ಅಂಥಹುದೇ ಒಂದು ತಲೆಕೆಟ್ಟ ಪ್ರಸಂಗ. ತಾಯಿಯಿಂದ ಸ್ವಲ್ಪ ಶಾಂತ ಸ್ವಭಾವದ ಬಳುವಳಿಯೂ ಬಂದಿತ್ತು, ಹೀಗಾಗಿ ಅವನು ಏನನ್ನೂ ಮಾತಾಡಲಿಲ್ಲ. ಕುರ್ಚಿಯ ಮೇಲೆ ಕುಳಿತು ಅವನು ಎರಡೂ ಕೈಗಳಲ್ಲಿ ತೊಟ್ಟಿದ್ದ ಬಂಗಾರದ ಉಂಗುರಗಳ ಕಡೆ ದೃಷ್ಟಿಯನ್ನು ನೆಟ್ಟಿದ್ದ. ಅವನಿಗೆ ಉಂಗುರ ತೊಡುವುದೆಂದರೆ ಅಪಾರ ಪ್ರೀತಿ ಅವನನ್ನು ಆ ವೇಶದಲ್ಲಿ ನೋಡುತ್ತಿದ್ದ ಮುಸ್ಲಿಂ ಸ್ನೇಹಿತರು ಅವನನ್ನು ಅಪಹಾಸ್ಯ ಮಾಡಿ ನಗುತ್ತಿದ್ದರು ಇಸ್ಲಾಮೀ ವ್ಯವಸ್ಥೆಯ ಪ್ರಕಾರ ಗಂಡಸರು ರೇಷ್ಮೆ ಬಟ್ಟೆ ಮತ್ತು ಚಿನ್ನವನ್ನು ಧರಿಸುವುದು ನಿಷಿದ್ಧ. ಆದರೆ ಯೂಸುಫ್ ಕಪಾಲಿ ಉಂಗುರ ಇನ್ನೊಂದು ದೊಡ್ಡ ಹಸಿರು ಕಲ್ಲಿನ ಉಂಗುರಗಳೆರಡನ್ನೂ ಎದ್ದು ಕಾಣುವಂತ ತೊಟ್ಟುಕೊಂಡಿದ್ದ.

ಅವನು ಕುಳಿತಲ್ಲಿಯೇ ಯೋಚನಾಮಗ್ನನಾಗಿ ಉದ್ದೇಶರಹಿತನಾಗಿ ಎಡಗೈನ ಉಂಗುರವನ್ನು ತಿರುಗಿಸುತ್ತಿದ್ದ. ಅವನನ್ನು ನೋಡಿ ಅಖಿಲ ತನ್ನ ಬೈಗಳ ಕೋಶವನ್ನು ಮುಚ್ಚಿಟ್ಟರೂ ಅಪ್ರಯತ್ನವಾಗಿ “ನನ್ನ ಸವತಿ… ನನ್ನ ಸವತಿ…” ಎಂದು ಮಾತು ಅವಳಿಂದ ಪುನಾರವರ್ತನೆಯಾಗತೊಡಗಿತು.

ಯೂಸೂಫ್‌ನ ತಾಳ್ಮೆಯ ಕಟ್ಟೆಯೊಡೆಯಿತು. ಅವನು ಅನಾಮತ್ತಾಗಿ ಎದ್ದು ನಿಂತು,

“ಯಾರು….. ನಿನ್ನ ಸವತಿ…..?” ಎಂದು ಕೇಳಿದ. ನೇರವಾಗಿ ಉತ್ತರಿಸಲು ಅವಳು ಸಿದ್ಧಳಿರಲಿಲ್ಲ. “ಯಾರು… ನನ್ನ ಮನೆ ಹಾಳು ಮಾಡ್ತಿದಳೋ…. ಯಾರು ನನ್ನ ಗಂಡನ್ನ ನನ್ನಿಂದ…. ಕಿತ್ಕೊಂಡಿದಾಳೋ…. ಯಾರು ಮುದಿಹದ್ದಾಗಿ….. ನನ್ನನ್ನು… ಕುಕ್ಕುತ್ತಿದ್ದಾಳೋ…. ಅವಳನ್ನ ನನ್ನ ಸವತಿ ಅಂದೇ ಅನ್ತೀನಿ….” ಎಂದು ಒಂದೇ ಪಟ್ಟನ್ನು ಹಿಡಿದಳು “ಇನ್ನು ಇವಳ ಜೊತೆ ಮಾತಾಡಿದರೆ ಅನರ್ಥವೇ ಸರಿ…” ಎಂದು ಅಂದುಕೊಂಡವನೇ ಯೂಸುಫ್ ಬಾಗಿಲ ಕಡೆ ಕಾಲಿಟ್ಟ. ತಾನು ಎಷ್ಟೇ ಪ್ರತಿಭಟಿಸಿದರೂ ಲೆಕ್ಕಿಸದೆ ಅವನು ತನ್ನ ಜಾಡನ್ನೇ ಹಿಡಿದು ತನ್ನೆದುರಿಗೇ ತನ್ನ ತಾಯಿಯ ಮನೆಗೆ ಹೋಗುತ್ತಿರುವುದನ್ನು ನೋಡಿ ಅವಳ ಪಿತ್ತ ನೆತ್ತಿಗೇರಿತು.

ಹಿಂದಿನಿಂದ ಬಂದವಳೇ ಗಂಡನ ಷರ್ಟನ್ನು ಹಿಡಿದೆಳೆದು “ಅವಳನ್ನೇ ಇಟ್ಕೋಬೇಕಿತ್ತು…… ಈ ಸುಖಕ್ಕೆ ನನ್ನನ್ಯಾಕೆ ಮದುವೆಯಾದಿರಿ…..” ಎಂದು ಕಿರುಚಾಡತೊಡಗಿದಳು. ಯೂಸುಫ್‌ಗೆ ತೀರ ತಳ್ಮೆ ತಪ್ಪಿತು.

“ಬಾಯ್ಮುಚ್ಚು…. ಇನೊಂದ್ಸಾರಿ ಹಲ್ಕ ಮಾತಾಡಿದರೆ…. ಹಲ್ಲುದುರಿಸಿ ಬಿಡ್ತೀನಿ” ಎಂದ.

ಅವಳು ಭಯಾನಕವಾಗಿ ಕಣ್ಣುಗುಡ್ಡೆಗಳನ್ನು ಹೊರಳಿಸುತ್ತ “ಹೊಡೀತೀರಾ… ಹೊಡೀರಿ….. ಆ ರಂಡೆ ಹೇಳಿಕೊಟ್ಟಿರಬೇಕು…” ಎಂದು ಅವನ ಷರ್ಟನ್ನು ಜಗ್ಗಾಡ ತೊಡಗಿದಳು. ಅವನು ತನ್ನಲ್ಲಾ ತಾಳ್ಮೆಯನ್ನು ಕಳೆದುಕೊಂಡು ಕೋಪಾತಿರೇಕದಿಂದ ರಪರಪನೆ ಬಾರಿಸಿ ಮನೆಯಿಂದ ಹೊರ ನಡೆದುಬಿಟ್ಟ.

ಅಂದು ರತ್ರೆಯೂ ಕೂಡ ಅವನು ಅಖಿಲಳ ಮನೆಗೆ ಬರಲಿಲ್ಲ. ತಾಯಿಯ ಮನೆಯಲ್ಲಿಯೇ ಉಂಡು ಅಲ್ಲಿಯೇ ಉರುಳಿಕೊಂಡ. ಬೆಳಗೆದ್ದು, ತನ್ನ ಹಿರಿಮಗ ರಾಜನನ್ನು ಕರೆದು ಅಖಿಲಳ ಮನೆ ಖರ್ಚಿಗೆಂದು ಐವತ್ತು ರೂಪಾಯಿಯನ್ನು ಅವನ ಕೈಗಿತ್ತು ಹೊರ ನಡೆದ. ಅಖಿಲ ಆ ದಿನ ಮಧ್ಯಾಹ್ನ ಅವನಿಗಾಗಿ ಕಾದಳು ಆದರೆ ಯೂಸುಫ್ ಬರಲಿಲ್ಲ, ಇದ್ದುದರಲ್ಲಿ ಅವಳ ಎರಡನೇ ಮಗ ಮುನ್ನ ತುಂಬಾ ಚಾಲಾಕಿ ಹುಡುಗ. ಅವನಿಗೆ ಶಾಲೆ ಬಿಡಿಸಿ, ಅಜ್ಜಿಯ ಮನೆಯಲ್ಲೇ ಕೂರಿಸಿ ಅವರಿಬ್ಬರ ಕಾರಸ್ಥಾನದ ಬಗ್ಗೆ ಮಾಹಿತಿ ಇರುವಂತೆ ಅವನನ್ನು ತಯಾರು ಮಾಡಿ ಕಳುಹಿಸಿ ಕಾದೇ ಕಾದಳು. ಆದರೆ…. ಅವಳಿಗೂ ಸುಸ್ತಾಗಿ ನಿದ್ರೆ ಹತ್ತಿದ ನಂತರ ಯೂಸುಫ್ ಸರಿ ರಾತ್ರಿಯಲ್ಲಿ ಬಂದು ತಾಯಿಯ ಮನೆಯಲ್ಲಿ ಮಲಗಿ ಅಖಿಲ ಖರ್ಚಿಗೆ ಮಗನ ಕೈಲಿ ದುಡ್ಡು ಕಳಿಸಿ ಮುಂಜಾನೆಯೇ ಎದ್ದು ಹೋಗಿದ್ದ. ಅವಳೂ ಕೂಡ ಹಟದಿಂದ ಒಂದು ವಾರದವರೆಗೂ ಶಾಲೆಗೆ ಮುನ್ನಾನನ್ನು ಕಳಿಸದೆ ಕಾವಲು ಹಾಕಿದಳು. ಆದರೂ ಏನೂ ಪ್ರಯೋಜನವಾಗಲಿಲ್ಲ.

ಕೊನೆಗೆ ಅವಳೇ ಸೋತು ಹೋದಳು. ಬಾಬುವನ್ನು ಜೊತೆಯಲ್ಲಿ ಕರೆದುಕೊಂಡು ಒಂದು ನಡು ಮಧ್ಯಾಹ್ನ ಅವಳು ಯೂಸುಫ್‌ನ ಹಣ್ಣಿನಂಗಡಿ ಬಳಿ ಹೋದಳು. ಈಗಾಗಲೇ ಅವನ ಕೋಪವೂ ಕೂಡ ಸಾಕಷ್ಟು ಇಳಿದಿತ್ತು. ಅಷ್ಟೇ ಅಲ್ಲದೆ ಅಂಗಡಿ ಎದುರು ನಿಂತ ಅಖಿಲ ಅವಳ ಅಣ್ಣಂದಿರನ್ನೇನಾದರೂ ಕರೆ ತಂದಿದ್ದಾಳೇನೋ ಎಂಬ ಆತಂಕವೂ ಕೂಡ ಅವನಿಗುಂಟಾಯಿತು.

‘….ಸರಾ….. ಬರಾ…’ ಎಂದು ಅವಳ ಮೂಗೊರಸುವಿಕೆಯಿಂದಲೇ ಇದು ಬೇರೆಯದೇ ವರಸೆ ಎಂದು ಅವನಿಗರ್ಥವಾಯಿತು….. ಮತ್ತೆ ಮಾರ್ಕೆಟ್ಟಿನ ಜಾಗದಲ್ಲಿ ಅಕ್ಕಪಕ್ಕದವರು ಏನಂದುಕೊಂಡಾರೋ ಎಂಬ ಅಳುಕಿನಿಂದ ಕೂಡಲೇ ಬುದ್ಧಿಯೋಡಿಸಿ ಹಣ್ಣಿನ ಪೊಟ್ಟಣವೊಂದನ್ನು ಮಗನ ಕೈಗಿತ್ತು, “ಮಧ್ಯಾಹ್ನ….. ಮನೆಗೆ ಬರ್ತಿನಿ….. ಈಗ ಹೋಗು…” ಎಂದು ಹೇಳಿ ಕಳುಹಿಸಿದ.

ಆಡಿದಂತೆಯೇ ಅವನು ಮಧ್ಯಾಹ್ನ ಅಖಿಲಳ ಮನೆಗೆ ಬಂದ ಅವಳು ಕೂಡ ಬಂಗಡೆ ಮೀನನ್ನು ಅವನಿಗಾಗಿಯೆಂದು ಹುರಿದಿದ್ದಳು. ಅವನೂ ಕೂಡ ತಟ್ಟೆಯ ಬದಿಗೆ ಸರಿಸದಂತೆ ಒಂದರಡು ಮೀನುಗಳನ್ನು ತಿಂದು ತೃಪ್ತಿಯಿಂದಲೇ ತೇಗಿದ. ಗಂಡ ಹಂಡತಿಯ ನಡುವೆ ಕಂಡೂ ಕಾಣದಂತೆ ಮುಗುಳು ನಗುವಿನ ವಿನಿಮಯವಾಯಿತು. ಏನೂ ನಡೆದೇ ಇಲ್ಲವೇನೋ ಎಂಬಂತೆ ಇಬ್ಬರೂ ಸಹಜವಾಗಿಯೇ ಇದ್ದು ಬಿಟ್ಟರು.

ಆದರೆ ರಾತ್ರಿ ತಾಯಿಯ ಮನೆಗೆ ಬಂದ ಯೂಸುಫ್ ತಾಯಿಗಾಗಿ ವಿಶೇಷವಾಗಿ ಕಾಕಾ ಹೋಟೆಲಿನಿಂದ ಎರಡು ಬಂಗಡೆ ಮೀನುಗಳನ್ನು ಕಟ್ಟಿಸಿಕೊಂಡು ಬಂದ ಮತ್ತು ಎರಡು ಮೀನುಗಳನ್ನೂ ತಾಯಿಯ ಎದುರಿಗಿಟ್ಟು, “ಅಮ್ಮ….. ನೀನಗೆ ಆ ಮೀನುಗಳನ್ನೆಲ್ಲ ಕ್ಲೀನ್ ಮಾಡಿ ಅಡಿಗೆ ಮಾಡೋಕಾಗಲ್ಲ ; ಅದಕ್ಕೇ ಇದನ್ನು ಕಟ್ಟಿಸಿಕೊಂಡು ಬಂದೆ….. ಮಧ್ಯಾಹ್ನ ಅಖಿಲ ಮಾಡಿದ್ಲು…. ತುಂಬಾ ಚೆನ್ನಾಗೇನೋ ಇತ್ತು, ಆದರೆ… ನನಗೆ ಮಾತ್ರ ತಿನ್ನೋಕಾಗ್ಲಿಲ್ಲ….. ಗಂಟಲಲ್ಲೇ ಹಿಡಿದುಕೊಂಡ ಹಾಗಾಯಿತು… ನಿನಗೂ ಒಂದು ಕೊಟ್ಟು ಕಳಿಸಿದ್ದರೆ ಏನಾಗ್ತಿತ್ತು….” ಎಂದು ಅಸಮಾಧಾನವನ್ನು ವ್ಯಕ್ತ ಪಡಿಸಿಬಿಟ್ಟ.

ಮಹಬೂಬ್ ಬೀ ಕೂಡ “ಏನೋ… ಹೋಗ್ಲಿ…. ಬಿಡಪ್ಪಾ.. ಅಂತೂ ನೀವಿಬ್ಬರೂ ಕೂಡ ನೆಮ್ಮದಿಯಾಗಿರುವುದು ಮುಖ್ಯ. ಈ ಮೀನು, ಮಾಂಸ, ಕೋಳಿ ಇದೆಲ್ಲಾ ಯಾವ ಮಹಾ… ಕೈ ಬಾಯಿ ಎಲ್ಲಾ ಮಾಂಸಾನೇ….. ಅಲ್ಲವಾ…. ಅದಕ್ಯಾಕ್ ಅಷ್ಟೊಂದು ಹಚ್ಚ್ಕೊಬೇಕು…. ಅವಳೊಬ್ಬಳಿಗೆ ಬುದ್ದಿ ಇಲ್ಲ ಅಂದ್ರೆ….. ನೀನಾದ್ರೂ ಅನುಸರಿಸಿಕೊಂಡು ಹೋಗ್ಬೇಕು… ಇಲ್ದಿದ್ರೆ….. ಹಾದಿರಂಪ ಬೀದಿರಂಪ ಆಗುತ್ತೆ…. ಅಷ್ಟೆ…” ಎಂದು ಮಾತಿನ ನಡುವೆಯೇ ಮೀನನ್ನು ಬಾಯಲ್ಲಿಟ್ಟಳು.

ಅಲ್ಲೇ ಕುಳಿತು, ಪುಸ್ತಕವನ್ನು ಕಣ್ಣೆದುರಿಗಿಟ್ಟುಕೊಂಡು ಓದುವಂತೆ ನಟಿಸುತ್ತಿದ್ದ ಮುನ್ನಾನ ಕಿವಿಗಳೆರಡೂ ಕೂಡ ಈ ಕಡೆಗೇ ಇದ್ದವು. ಅಪ್ಪ ನಾದರೋ….. ಗಮನಿಸಲೇ ಇಲ್ಲ…. ಹೋಗಲಿ ಅಜ್ಜಿಯಾದರೂ ಬಾಯಲ್ಲಿ ನೀರೂರಿಸುತ್ತಿದ್ದ ಹುರಿದ ಬಂಗಡೆ ಮೀನಿನ ಒಂದು ತುಂಡನ್ನಾದರೂ ಬಾಯಿಗಿಟ್ಟಿದ್ದಿದ್ದರೆ ಅವನು ಸಂತೋಷದಿಂದಲೇ ಪಕ್ಷಾಂತರ ಮಾಡಲು ಸಿದ್ಧನಾಗುತ್ತಿದ್ದ. ತನ್ನನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ತಾಯಿ, ಮಗ ಇಬ್ಬರೂ ಪರಸ್ಪರ ಉಪಚಾರದಲ್ಲಿ ಮಗ್ನರಾಗಿದ್ದಾಗ ಮುನ್ನಾ ಹೊರಗೆ ನುಸುಳಿ ತನ್ನ ತಾಯಿಯ ಬಳಿ ಬಂದ. ಹಾಸಿಗೆಯನ್ನು ಬಿಡಿಸಿಟ್ಟುಕೊಂಡು ಗಂಡನ ಬರುವಿಗೆ ಕಾಯುತ್ತಾ ಎಲೆ ಅಡಿಕೆಯನ್ನು ಮೆಲ್ಲುತ್ತಿದ್ದ ಅಖಿಲಾ ಮೆಲ್ಲನೆ ಮಗನನ್ನು ಮಡಿಲಲ್ಲಿ ಮಲಗಿಸಿಕೊಂಡು, ಅವನ ಕ್ರಾಫಿನಲ್ಲಿ ಬೆರಳಾಡಿಸುತ್ತ ವಿಶೇಷ ಮಮತೆಯಿಂದ ಕೇಳಿದಳು.

“ಏನು ನಡೀತಾ ಇದೆ ಅಲ್ಲಿ….?” ಅವನಂತೂ ಈ ವೇಳೆಗಾಗಲೇ ತಾಯಿಯ ಹಾಗೂ ಅಜ್ಜಿಯ ವ್ಯವಹಾರದಲ್ಲಿ ಪಳಗಿಬಿಟ್ಟಿದ್ದ. ಅಜ್ಜಿಯ ಮನೆಯಲ್ಲಿ ನಡೆದ ಬಂಗಡೆ ಮೀನಿನ ಇಡೀ ವೃತ್ತಾಂತವನ್ನು ವರದಿ ಮಾಡಿದ್ದಷ್ಟೇ ಅಲ್ಲದೆ “ಮತ್ತೇ… ಮತ್ತೆ… ಅಜ್ಜಿ ಹೇಳಿದರು….. ನಿನಗೆ ಬುದ್ಧಿ ಇಲ್ವಂತ….. ನಿನಗೆ ತಲೆ…. ಸರಿ ಇಲ್ವಂತೆ….” ಎಂದು ಉಪ್ಪು ಖಾರವನ್ನು ಹಚ್ಚಿಬಿಟ್ಟ.

ಎಷ್ಟೋ ಪ್ರಯತ್ನ ಪಟ್ಟು ತನ್ನ ಗಂಡನನ್ನು ಒಲಿಸಿಕೊಳ್ಳಲು ಸಿದ್ಧವಾಗುತ್ತಿದ್ದ ಅಖಿಲಳಿಗೆ ತುಂಬಾ ಮನಸ್ಸು ಕೆಟ್ಟು ಹೋಯಿತು. ಧಡಾರನೆ ಬಾಗಿಲನ್ನು ತೆಗೆದು ಹೊರ ಬಂದು ಎಲೆ ಅಡಿಕೆಯ ತಾಂಬೂಲವನ್ನು ಚರಂಡಿಗೆ ಉಗಿಯುತ್ತಾ ತಾರಕ ಸ್ವರದಲ್ಲಿ ವೈರಿಯನ್ನು ಆಹ್ವಾನಿಸುತ್ತಾ ಯುದ್ಧವನ್ನು ಘೋಷಿಸಿಯೇಬಿಟ್ಟಳು. ಅವಳ ಆ ಮತಿಗೆಟ್ಟ ಸಂದರ್ಭದಲ್ಲಿ ಅತ್ತೆಯೇ ತನಗೆ ತೊಡಕೇ….. ಅಥವಾ ತನಗೆ ಪ್ರೀತಿ ದೊರಕದೇ ಇರುವುದರಲ್ಲಿ ಗಂಡನ ಪಾತ್ರವೇ ಮುಖ್ಯವೇ….. ಎಂದು ನಿರ್ಧರಿಸಲಾಗದೆ ಇಬ್ಬರನ್ನೂ ಸಾರಾಸಗಟಾಗಿ ಬಯ್ಯತೊಡಗಿದಳು. ಯೂಸುಫ್ ಗಾಬರಿಯಿಂದ ಹೊರಬಂದ ಈಗಾಗಲೇ ಅಕ್ಕ-ಪಕ್ಕದ ಮನೆಗಳಿಂದ ಜನ ಹೊರ ಬರತೊಡಗಿದ್ದರು. ಯೂಸುಫ್ ಗಂತೂ ಈ ಹಾದಿರಂಪ ಬೀದಿ ರಂಪವಾಗುವುದರ ಬಗ್ಗೆಯೇ ಹೆಚ್ಚು ಆತಂಕವಿದ್ದುದು.

ಅಂತೆಯೇ ಅಖಿಲ ಕೂಡ ಮೂರ್ಖಳಂತೆ ಆಡುತ್ತಿದ್ದಳು. ಅವಳ ಬೈಗುಳದಲ್ಲಿ ಬಂಗಡೆ ಮೀನು, ಹುರಿದ ಮಸಾಲೆ, ಕಾಕಾ ಹೋಟೆಲ್, ಬುದ್ಧಿ ಇಲ್ಲದವಳು, ತಲೆ ಕೆಟ್ಟವಳು… ಎಲ್ಲಾ ಬಂದಿದ್ದರಿಂದ ಮತ್ತು ಮುನ್ನಾ ಹಾಸಿಗೆಯ ಮೇಲೆ ಅಮಾಯಕ ನಂತೆ ಮಲಗಿ ನಿದ್ರೆಯಲ್ಲಿರುವವನಂತೆ ಕಣ್ಣು ಮುಚ್ಚಿದ್ದರಿಂದಲೂ ಯೂಸುಫ್‌ಗೆ ವಿಷಯವನ್ನು ಗ್ರಹಿಸಲು ಹೆಚ್ಚು ವೇಳೆಯೇನೂ ತಗುಲಲಿಲ್ಲ. ಅವನು ಒಮ್ಮೆಲೇ ಅಖಿಲಳನ್ನು ಒಳಗೆಳೆದುಕೊಂಡು ಬಾಗಿಲ ಕಿಂಡಿಯನ್ನು ಜಡಿದುಬಿಟ್ಟ. ಅವನಿಗೂ ಈ ರಣಾ ರಂಪ ಸಾಕಾಗಿಬಿಟ್ಟಿತ್ತು. ಅಖಿಲಳನ್ನು ಹಾಸಿಗೆಯ ಮೇಲೆ ಕೂರಿಸಿ ತಾನೂ ಪಕ್ಕದಲ್ಲಿ ಕುಳಿತುಕೊಂಡು ಅವಳನ್ನು ರಮಿಸತೊಡಗಿದ.

“ನೋಡು ಅಖಿಲ….. ನಿನ್ನನ್ನು ಯಾರೂ …..ಏನನ್ನೂ ಅಂದಿಲ್ಲ. ನೀನು ಮಾತ್ರ ಹೀಗೆ ಆಡಬೇಡ… ಹುಚ್ಚುಚ್ಚಾಗಿ…” ಎಂದು ಬಂದ ಮಾತನ್ನು ಅವನು ಪ್ರಯತ್ನಪೂರ್ವಕವಾಗಿ ನಾಲಿಗೆ ಕಚ್ಚಿ ತಡೆಹಿಡಿದ….. “ಅವಳು ನನ್ನ ತಾಯಿ ಅಲ್ವೇನೆ…. ನೋಡು ನಿನಗೇನೆ ಒಂದಲ್ಲ……. ನಾಲ್ಕು ಗಂಡು ಮಕ್ಕಳಿವೆ…. ಅಮ್ಮನಿಗೆ ಇನ್ಯಾರೂ ದಿಕ್ಕು ದೆಸೆ ಅಂತ ಇಲ್ಲ…. ಇನ್ನೊಬ್ಬ ಮಗ ಅಂತ ಏನಾದರೂ ಅವಳಿಗೆ ಇದ್ದಿದ್ದರೆ….. ನಾನು ಅವಳ ಕಡೆ ತಿರುಗಿ ನೋಡ್ತಿರಲಿಲ್ಲ….. ನಿನ್ ಮಕ್ಳು….. ನಿನ್ನನ್ನ ಉಂಡೆಯಾ…. ತಿಂದೆಯಾ…. ಅಂತ ಕೇಳಿದ್ರೆ, ಅದರಲ್ಲಿ ತಪ್ಪೇನಿದೆ… ನಿನಗೇನ್ಬೇಕು ಹೇಳು…. ನಾನು ನಿನ್ನನ್ನೇನೂ ನೋಯ್ಸೋದಿಲ್ಲ…. ನಾನು ಹರಾಜಾಗಿ ಹೋದ್ರೂ ಕೂಡ ನಿನಗೆ ಏನೂ ಕಮ್ಮಿ ಮಾಡೋಲ್ಲ….. ನೀನ್ ಮಾತ್ರ ಅಮ್ಮನ್ನ ಬೈಬೇಡ….. ಕಣೆ….” ಎಂದು ವಿಧವಿಧವಾಗಿ ಸಮಾಧಾನ ಹೇಳಿದ.

ಅಖಿಲ ಏನೂ ಮಾತನಾಡಲಿಲ್ಲ. ಬಿಕ್ಕಿ ಬಿಕ್ಕಿ ಅಳತೊಡಗಿದಳು. “ನನ್ಗೇನೂ ಬೇಡಾ ಕಣ್ರೀ….. ನಾನೇನು ಒಡವೆ ಕೇಳೋನಾ… ವಸ್ತ್ರ ಕೇಳ್ತೀನಾ… ಸುಪ್ಪತ್ತಿಗೆ ಕೇಳ್ತೀನಾ…. ನಿಮ್ಮ ಪ್ರೀತಿ ಒಂದಿದ್ದರೆ ಸಾಕು ನನಗೆ….. ಅದೇ ಕೊಡ್ತಿಲ್ಲ” ಎಂದು ಬಿಕ್ಕಳಿಸಿದಳು. ಅವನು ಅವಳನ್ನು ಸಾಕಷ್ಟು ವಿಧದಲ್ಲಿ ಸಾಂತ್ವನಗೊಳಿಸಿದ. ಅವಳ ಬಗ್ಗೆ ತನಗಿರುವ ಪ್ರೀತಿಯ ಬಗ್ಗೆ ಆಣೆ ಪ್ರಮಾಣ ಕೂಡ ಮಾಡಿದ. ಅವಳನ್ನು ಇನ್ನಷ್ಟು ಖುಷಿಪಡಿಸಲು ತನ್ನ ಬೆರಳುಗಳಲ್ಲಿದ್ದ ಎರಡು ಉಂಗುರಗಳನ್ನು ತೊಡಿಸಿದ. ಅಂತೂ ಅವರಿಬ್ಬರು ಒಂದು ಸಮಾಧಾನಕ್ಕೆ ಬಂದರು.

……ಬೆಳಗಾಯಿತು. ಇನ್ನೂ ಅಖಿಲ ನಿದ್ರೆಯಲ್ಲಿಯೇ ಇದ್ದಳು. ಅವನು ಎದ್ದವನೇ ಮೊದಲು ಅವಳ ಬೆರಳುಗಳಿಗೆ ತೊಡಿಸಿದ ತನ್ನ ಎರಡು ಉಂಗುರುಗಳನ್ನು ಕಳಚಿ ತನ್ನ ಬೆರಳುಗಳಿಗೇರಿಸಿಕೊಂಡು ಎಂದಿನಂತೆ ಅಂಗಡಿಗೆ ಹೊರಟ. ಅಖಿಲ ಕೂಡ ಹೆಚ್ಚೇನೂ ತಲೆ ಬಿಸಿ ಮಾಡಿಕೊಳ್ಳದೆ ಒಂದು ವಾರದ ಬೇಹುಗಾರಿಕೆ ನಂತರ ಮುನ್ನಾನನ್ನು ಶಾಲೆಗೆ ಕಳಿಸಿ ತನ್ನ ಕೆಲಸಗಳಲ್ಲಿ ಮಗ್ನಳಾದಳು. ಆದರೂ ಆಕ ಮಹಬೂಬ್ ಬೀಯ ಮನೆ ಕಡೆ ಒಂದು ಕಣ್ಣನ್ನು ಇಟ್ಟೇ ಇದ್ದಳು. ಸ್ವಲ್ಪ ಸದ್ದಾದರೂ ಅವಳ ಕಿವಿ ನಿಮಿರುತಿತ್ತು. ಎಲ್ಲಿಂದಲಾದರೂ ಮಸಾಲೆಯ ವಾಸನೆ ಬಂದರೂ ಅವಳ ಮೂಗು ಅರಳುತ್ತಿತ್ತು. ಅಂತೂ ಸಾಕಷ್ಟು ಎಚ್ಚರಿಕೆಯಿಂದಲೇ ಅವಳು ತನ್ನ ಗಂಡನ ಬರುವಿಗೆ ಕಾದಳು.

ಸುಮಾರು ಹನ್ನೊಂದು ಗಂಟೆಯ ಹೊತ್ತಿಗೆ ಮೆಹಬೂಬ್ ಬೀ ಸ್ನಾನ ಮಾಡಿ ಶುಭ್ರವಾದ ವಾಯಿಲ್ ಸೀರೆಯೊಂದನ್ನುಟ್ಟು ಕಾಲಲ್ಲಿ ಚಪ್ಪಲಿ ಮೆಟ್ಟಿ ಬ್ಯಾಗ್ ಹಿಡಿದು ಹೊರಗೆ ಬಂದಳು. ಅಖಿಲಳಿಗೆ ಕುತೂಹಲ…. ಇವಳು ಹೋಗುತ್ತಿರುವುದಾದರೂ ಎಲ್ಲಿಗೆ…..?

…..ಅಂತೂ ಅವಳು ಅಡಿಗೆ ಮಾಡಿ ಮಧ್ಯಾಹ್ನದ ಊಟಕ್ಕೆ ಗಂಡ ಇನ್ನೂ ಬಂದಿಲ್ಲವೆಂದು ಬೀದಿ ಬಾಗಿಲಿಗೆ ಬರುವುದಕ್ಕೂ….. ತಾಯಿ ಮಗ ಇಬ್ಬರು ಆಟೋದಿಂದ ಇಳಿಯುವುದಕ್ಕೂ ಸರಿ ಹೋಯಿತು. ಅವಳಿಗೆ ಸರ್ರೆಂದು ಕೋಪವೇರಿತು. ಯೂಸುಫ್ ಒಂದು ಕಲ್ಲಂಗಡಿ ಹಣ್ಣನ್ನು ಆಟೋದಿಂದ ಇಳಿಸಿ ಮಹಬೂಬ್ ಬೀಯ ಮನೆಗೆ ತಂದಿತ್ತು, ಅಷ್ಟೇ ಗಾತ್ರದ ಇನ್ನೊಂದು ಕಲ್ಲಂಗಡಿ ಹಣ್ಣನ್ನು ಅಖಿಲಳ ಮನೆಗೆ ಕೊಂಡೊಯ್ದನು. ಅವನು ಅದನ್ನು ಅವಳ ಕೈಗಿಡುತ್ತಿದ್ದಂತೆಯೇ ತೀರಾ ಉಡಾಫೆಯಿಂದ ಅದನ್ನು ನೆಲಕ್ಕೆ ಬೀಳಿಸಿದಳು ಯೂಸುಫ್ ಇದೇನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿಯೇ ತನ್ನ ಬಲವನ್ನೆಲ್ಲಾ ಉಪಯೋಗಿಸಿ ಬಲವಾಗಿ ಪುಟ್‌ಬಾಲ್ ಒದ್ದಂತ ಹಣ್ಣನ್ನು ಒದ್ದಳು ಹಣ್ಣು ಗೋಡೆಗೆ ತಗುಲಿ ಬಿದ್ದು ಹಲವು ಹೋಳುಗಳಾದವು. ಅದರ ತಿರುಳೆಲ್ಲ ಹುಡಿ ಹುಡಿಯಾಗಿ ನೆಲದ ಮೇಲೆಲ್ಲಾ ಚೆಲ್ಲಾಡಿತು. ಅವನ ನರಗಳೆಲ್ಲಾ ಹುರಿಯಾದವು ಮುಷ್ಠಿ ಬಿಗಿಯಾದರೂ ಸಂಯಮದಿಂದ ಅವನು ಏನನ್ನೂ ಮಾತನಾಡದೆ ಕುರ್ಚಿಯ ಮೇಲೆ ಕುಳಿತ. ಅವನ ಮೌನ ಅವಳನ್ನು ಇನ್ನಷ್ಟು ಕೆರಳಿಸಿತು. ಬೈಯುವುದೊ…., ಜಗಳವಾಡುವುದೊ, ಅಳುವುದೊ…, ಏನನ್ನೂ ನಿರ್ಧರಿಸದೆ ಹತಾಶಳಾಗಿ ಅವಳು ಗೋಡೆಗೆ ತಲೆಯನ್ನು ಚಚ್ಚಿಕೊಳ್ಳಲಾರಂಭಿಸಿದಳು. ಆಗಲೂ ಅವನು ಮೌನವಾಗಿ ತನ್ನೆದುರು ಯಾವುದೋ ಚಲನಚಿತ್ರ ನಡೆಯುತ್ತಿರುವಷ್ಟು ನಿರ್ಲಿಪ್ತನಾಗಿ ನೋಡುತ್ತಲೇ ಕುಳಿತಿದ್ದ. ಅವನ ಗ್ರಹಣ ಶಕ್ತಿಯೇ ಕುಂಠಿತಗೊಂಡಿತ್ತೋ ಅಥವಾ ಅವನು ಬೇಕೂಂತಲೇ ಮೌನವಾಗಿದ್ದನೋ… ಅವಳನ್ನು ನಿರ್ಲಕ್ಷಿಸುತ್ತಿದ್ದನೋ ಒಂದೂ ಗೊತ್ತಾಗುತ್ತಿರಲಿಲ್ಲ……

ಈಗ ಮಾತ್ರ ಅವಳು ಕೆಳಗೆ ಬಿದ್ದು, ಭೋರಾಡಿ ಅಳತೊಡಗಿದಳು. ಆಗಲೂ ಅವನು ಮಹಾ ಮೌನಿಯಾಗಿದ್ದ, ಸಾಕಷ್ಟು ಅತ್ತ ಮೇಲೆ ಎದೆ ಬಡಿದುಕೊಂಡು ಅವನನ್ನೂ ಅವನ ತಾಯಿಯನ್ನೂ ಬಯ್ಯಲಾರಂಭಿಸಿದಳು “ನನ್ನನ್ನ….. ಒಂದಿನಾನಾದ್ರು ಕಕ್ಕೊಂಡು ಹೋಗಿದಿರೇನ್ರೀ…. ಹೊರಗೆಲ್ಲಾದ್ರೂ ಆ ರಂಡೇನ ಬೆಳಿಗ್ಗೆಯಿಂದ ಇದುವರೆವಿಗೂ ಮರೆಸ್ತಿದೀರಲ್ಲಾ…. ನಾಚಿಕೆ ಯಾಗೋಲ್ವ, ನಿಮಗೆ….?” ಎಂದು ಪ್ರಶ್ನಾವಳಿಯನ್ನೇ ಅವನ ಮುಂದಿಟ್ಟಳು.

ಅವನು ಮರಗಟ್ಟಿ ಹೋದರೂ ತಾಯಿಯ ಪ್ರಸ್ತಾಪ ಬಂದ ಕೂಡಲೇ ಜಾಗೃತನಾದ….

“ನೋಡು…. ನೀನು ಮಾಡ್ತಿರೋದು ಒಂದು ಕೂಡ ಒಳ್ಳೇದಕ್ಕಲ್ಲ…. ನೀನು ಹಣ್ಣಿಗೆ ಒದ್ದೆ…. ನನಗೇ ಒದಿ ಪರವಾಗಿಲ್ಲ …. ನಂಗೇನೂ ಬೇಜಾರಿಲ್ಲ…. ಆದರೆ ಅಮ್ಮನಿಗೆ ಮಾತ್ರ ಏನೂ ಅನ್ಬೇಡ. ಅವಳಿಗೆ ತುಂಬಾ ಕಷ್ಟ ಇದೆ ಗೊತ್ತಾ…. ಅವಳು ಮಂಡಿ ನೋವಿನಿಂದ ರಾತ್ರಿಯೆಲ್ಲಾ ಮಲಗಲಿಲ್ಲ…. ಅದಕ್ಕೆ ನಾನೇ ಆಸ್ಪತ್ರೆಗೆ ಹೋಗೂಂತ ಹೇಳಿದ್ದೆ. ಬೆಳಿಗ್ಗೆ ಅವಳು ಆಸ್ಪತ್ರೆಗೆ ಹೋಗಿ ಅಂಗಡಿ ಹತ್ರ ಬಂದಳು. ಮೊದ್ಲೇ ಮಂಡಿನೋವಿದ ಅವಳ್ಗೆ… ನಡೆಸೋಕಾಗುತ್ತೇನೆ…. ಅದಕ್ಕೆ ಇಬ್ಬರೂ ಸೇರಿ ಆಟೋದಲ್ಲಿ ಬಂದ್ವಿ…. ಅದೇನು ತಪ್ಪಾ…. ನಾಕ್ಜನರನ್ನ ಸೇರಿಸ್ತೀನಿ…. ನನ್ ತಪ್ಪೇನಿದೆ ಅವರೂ ಹೇಳ್ಲಿ….. ನೀನ್ ಸುಮ್ಸುಮ್ನೆ ಹಿಂಗೆಲ್ಲಾ ಮಾಡ್ಬೇಡಾ” ಎಂದು ಇಡೀ ಘಟನೆಯ ವಿವರಣೆಯನ್ನು ನೀಡಿದ. ಅವಳ ಎದೆ ಉರಿದುಹೋಗುತ್ತಿತ್ತು. ಗಂಡನ ಪ್ರೀತಿಯಲ್ಲಿ ಹೆಚ್ಚಿನ ಪಾಲು ಪಡೆದಾಕೆ ಆತನ ತಾಯಿಯೇ ಇರಲಿ ಅವಳು ಹಂಚಿಕೊಳ್ಳಲು ಸಿದ್ಧಳಾಗಿರಲಿಲ್ಲ. ಅವನ ಸಮಾಧಾನದ ಮಾತು ನಯವಂಚಕತನದಿಂದ ಕೂಡಿರುವಂತೆ ಕಂಡುಬಂದಿತು. ಅವಳು ಸ್ವಲ್ಪ ವಿವೇಚನೆ ತಂದುಕೊಂಡಿದ್ದರೆ ಆ ವಿಷಯ ಅಲ್ಲಿಗೆ ಮುಗಿಯುತ್ತಿತ್ತು. ಆದರೆ ಕಿಡಿಯೆಂದು ಅವಳು ನಿರ್ಲಕ್ಷಿಸಿದ್ದು ಕೆಂಡವಾಗಿತ್ತು. ಅವಳ ಎದೆಯನ್ನೆಲ್ಲಾ ಸುಡುತ್ತಿದ್ದ ಕಂಡದ ಉಂಡೆಗಳನ್ನು ನಂಜಿನೊಡನೆ ಅವಳು ಕಕ್ಕಿದಳು, ‘ಆಹಾ…. ಏನ್ ಬೆಣ್ಣೆ ಮಾತಾಡ್ತೀರೀ….. ಇವರು ಹೇಳಿದ್ರಂತ….. ನಾನು ನಂಬಬೇಕಂತ…. ಸಿಗದ್ರೆ ನಾಲ್ಕಾಳು ಆಗೋಹಂಗಿದಾಳೆ…. ಅವಳ್ಗೆ ಯಾವ ದೊಡ್ಡ ರೋಗ ಬರುತ್ತೆ… ನನ್ನ ಸಂಸಾರಾನ ನುಂಗಿ ನೀರ್‍ಕುಡಿಯೋಕೆ ನಿಂತಿದಾಳ… ಚಾಂಡಾಲಿ ಹಾಗೆ….” ಎಂದು ಆರ್ಭಟಿಸಿದಳು.

ಯೂಸೂಫ್ ಸೋತವನಂತೆ ಎದ್ದು ನಿಂತು “ನಿಂಜೊತೆ ಮಾತಾಡೋರಿಗೆ ತಲೆ ಇಲ್ಲ…. ಏನಾದ್ರೂ ಮಾಡ್ಕೊ” ಎಂದು ಹೊರ ಹೋಗಲು ಸಿದ್ಧನಾದ.

ಅಖಿಲಳಿಗೆ ಅವನ ದೌರ್ಬಲ್ಯ ಗೊತ್ತಿತ್ತು. ಅವನ ತಣ್ಣನೆಯ ವ್ಯವಹಾರ ಅವಳಿಗೆ ರೇಗಿಸುತ್ತಿತ್ತು. ಕಾಲು ಕೆರೆದು ಜಗಳವಾಡುವ ಪ್ರಯತ್ನದಲ್ಲಿ ಅವಳು “ರೀ…. ನೀವು ಮೂರು ಕಾಸಿನ ಸೂಳೆಯರ ಸಾವಾಸ ಮಾಡಿ, ನಾನು ಬೇಡ ಅನ್ನಲ್ಲಾ…. ಅವರಿಗೆ ತಿನ್ಸಿ…. ಉಣ್ಸಿ…. ಏನ್ಬೇಕಾದ್ರೂ ಮಾಡಿ. ಆದ್ರೆ ಈ ಸವತಿ ರಂಡೆ ಮಾತ್ರ….” ಅವಳ ಮಾತನ್ನು ಮುಗಿದೇ ಇಲ್ಲ…. ಅವನು ರಪ್ಪೆಂದು ಕೆನ್ನೆಗೆ ಬಡಿದ.

“ಎಷ್ಟೇ…. ಎಷ್ಟೇ ನಿನ್ನ ಪೊಗರು….. ಇನ್ನೊಂದ್ಸಾರಿ ಅಮ್ಮನ ಹೆಸರೆತ್ತಿದ್ರೆ ನಿನ್ನ ಹುಟ್ಟಿಲ್ಲ ಅನ್ನಿಸಿಬಿಡ್ತೀನಿ….. ನಿನಗೇನೇ….. ಅವಳ್ನ ಕಟ್ಕೊಂಡು…. ಅವಳು ನನ್ನಮ್ಮ ಕಣೇ…. ನಮ್ಮಪ್ಪ ಸತ್ಮೇಲೂ ನನ್ನನ್ನ ತನ್ನ ಕಣ್ಣಲ್ಲಿಟ್ಟು ಸಾಕಿದಾಳೆ…. ನಿನ್ನಂಥ ಬೇವರ್ಸಿಗಳು ನನಗೆ ಹತ್ ಜನ ಸಿಕ್ತಾರೆ… ಅಂಥ ತಾಯಿ ಸಿಕ್ತಾಳಾ… ನೀನು ಯಾವೋಳೆ ತಾಯಿಮಗ್ನ ಮಧ್ಯೆ ಬರೋಳು… ಒಂದು ಚೀಟಿ ಸೀರೆ ತಂದ್ಕೊಟ್ರೆ ಉರ್‍ಕೋಂಡ್ ಸಾಯ್ತಿಯಾ….., ನೋಡ್ತಾಯಿರು ನಿನ್ ಕಣ್ಣೆದ್ರುಗೆ ಅವಳ್ಗೆ ಪಂಜಾಬಿ ಡ್ರಸ್ ತೊಡುಸ್ತೀನಿ….. ಮೈತುಂಬಾ ಬಂಗಾರ ತೊಡಿಸ್ತೀನಿ. ಇಡೀ ಬೀದಿಯೆಲ್ಲಾ ತುಂಬೊ ಹಾಗೆ ಶಾಮಿಯಾನ ಹಾಕಿ ಅವಳ ಮದ್ದೆ ಮಾಡ್ತೀನಿ….” ಎಂದು ಸೆಡ್ಡು ಹೊಡೆದೇ ಬಿಟ್ಟ.

ಅವನ ದೌರ್ಬಲ್ಯವನ್ನು ಅವಳು ತಿಳಿದುಕೊಂಡಿದ್ದಷ್ಟೇ ಸಹಜವಾಗಿ ಅವಳ ದೌರ್ಬಲ್ಯವನ್ನೂ ಅವನ ಅರ್ಥ ಮಾಡಿಕೊಂಡಿದ್ದ. ಈ ಮಾತಿನಿಂದ ಕೆರಳಿ ಕೆಂಡವಾದ ಅವಳು ಅಣಕವಾಡಿಯೇಬಿಟ್ಟಳು.

“ಪಂಜಾಬಿ ಡ್ರೆಸ್ ಹೊಲಿಸ್ತೀರಾ…. ಮದ್ದೆ ಮಾಡ್ತೀರಾ…. ನೀವು ಗಂಡಾಗಿದ್ರೆ ಮಾಡಿ ತೋರ್‍ಸಿ….” ಎಂದು ಪಂಥಾಹ್ವಾನವನ್ನು ಒಡ್ಡಿಯೇಬಿಟ್ಟಳು.

“ನೋಡು ನಾನು ಹೇಳ್ದಂಗೆ ಮದುವೆ ಮಾಡ್ದೆಯಿದ್ರೆ ಈ ಮೀಸೇನಾ ಬೋಳಿಸ್ಕೊಂಡು ಬಿಡ್ತೀನಿ…..” ಎಂದು ಸವಾಲು ಸ್ವೀಕರಿಸಿಯೇ ಬಿಟ್ಟ.

ಪಾಪದ ಮೆಹಬೂಬಬೀ ಮಾತ್ರ ಎಂದಿನಂತೆಯೇ ಮಗ ಸೊಸೆಗೆ ಏನೋ ಲಟಾ ಪಟಿ ನಡೆಯುತ್ತಿದೆ ಎಂದು ಊಹಿಸಿದರೂ ನಿರಾತಂಕವಾಗಿ ಮಂಡಿಗಳಿಗೆ ಮುಲಾಮನ್ನು ನೀವಿಕೊಳ್ಳುತ್ತಾ ಕುಳಿತಿದ್ದಳು.

ಜಗಳವಾದ ರಾತ್ರಿ ಆಗುವಂತೆಯೇ ಮಾಮೂಲಿಯಾಗಿ ಅವನು ತಾಯಿಯ ಮನೆಯಲ್ಲಿಯೇ ಮಲಗಿದ. ಸಾಮಾನ್ಯವಾಗಿ ನೋಡಿದಲ್ಲಿ ಹೆಣ್ಣಿಗೆ ನಿರ್ಧಿಷ್ಟ ಮನೆ ಅನ್ನುವುದು ಇರುವುದಿಲ್ಲ, ಬದಲಿಗೆ ಅವಳು ತಂದೆಯ ಮನೆ, ಗಂಡನ ಮನೆ, ಇಲ್ಲವೇ ಮಗನ ಮನೆಯಲ್ಲಿ ಬದುಕಬೇಕಾಗುತ್ತದೆ. ಆದರೆ ಯೂಸೂಫ್‌ನ ವಿಷಯದಲ್ಲಿ ಮಾತ್ರ ಅವನದ್ದೆಂಬ ಮನೆಯೇ ಇರಲಿಲ್ಲ. ಮೆಹಬೂಬ್ ಬೀಯ ಮನೆ ಇತ್ತು, ಪ್ರತಿಯಾಗಿ ಅಖಿಲಾಳ ಮನೆಯಿತ್ತು. ಅವನು ಅಖಿಲಾಳೊಡನೆ ಬೇಜಾರಾದಾಗ ತಾಯಿಯ ಮಡಿಲನ್ನು ಸೇರುತ್ತಾ ಆಕೆಯು ಬೇಕಾದಾಗ ಅವಳ ಪಕ್ಕಾ ಸೇರುತ್ತ ವಿಚಿತ್ರ ಪರಿಸ್ಥಿತಿಯಲ್ಲಿ ಸಿಲುಕಿದ್ದ. ಅವನೀಗ ಏನಾದರೂ ಪರಿಹಾರವನ್ನು ಕಂಡುಕೊಳ್ಳಲೇಬೇಕಿತ್ತು.

ಮೊದಲನೆಯ ಸಾಧ್ಯತೆಯೆಂದರೆ ಅಖಿಲಾಳಿಗೆ ತಲಾಕ್ ಕೊಡುವುದು. ಅವಳನ್ನು ನಿಜವಾಗಿಯೂ ಅವರು ಪ್ರೀತಿಸುತ್ತಿದ್ದುದರಿಂದಲೂ, ಚಿಕ್ಕ ವಯಸ್ಸಿನ ನಾಲ್ಕು ಮಕ್ಕಳನ್ನು ಗಮನಿಸಿ ಅದು ಸಾಧುವಲ್ಲ ಎಂಬುದು ಅವನ ಅಭಿಪ್ರಾಯ. ಅಲ್ಲದೆ, ಮೆಹಬೂಬ್ ಬೀಯ ಮೇಲಿನ ತೀವ್ರ ಅಸಹನೆಯೊಂದನ್ನು ಬಿಟ್ಟರೆ ಅವಳೊಬ್ಬ ಒಳ್ಳೆಯ ಹೆಂಗಸೇ ಆಗಿದ್ದಳು. ಅದೂ ಅಲ್ಲದೆ ಅವಳಿಗೆ ಅವನೇನಾದರೂ ತಲಾಕ್ ನೀಡಿದರೆ ಅವನಂತೂ ಆ ಊರಿನಲ್ಲಿ ಉಳಿಯುವುದು ಸಾಧ್ಯವಿರಲಿಲ್ಲ…. ಅವಳ ಸಹೋದರರು ಅವನ ಕೈಕಾಲು ಮುರಿಯದೆ ಬಿಡುತ್ತಿರಲಿಲ್ಲ. ಹೀಗಾಗಿ ಅವಳನ್ನು ತೊರೆಯುವ ಸಾಧ್ಯತೆಯನ್ನು ಅವನು ತಳ್ಳಿಹಾಕಿದ.

ಎರಡನೆಯ ಸಾಧ್ಯತೆ ಎಂದರೆ ಅಖಿಲಳನ್ನು ಶಿಕ್ಷಿಸಲು ಅವಳಿದ್ದಂತೆಯೇ ಇನ್ನೊಬ್ಬಳನ್ನು ಮದುವೆಯಾಗುವುದು. ಅದನ್ನು ನೆನಸಿಕೊಂಡೇ ಅವನಿಗೆ ಬೆವರು ಹರಿಯಲಾರಂಭಿಸಿತು. ಆ ಇನ್ನೊಬ್ಬಾಕೆಯನ್ನು ಕೊಲೆ ಮಾಡಿ ಅಖಿಲಾ ಜೈಲಿಗೆ ಹೋಗುವುದರ ಬಗ್ಗೆ ಅವನಿಗೆ ಯಾವ ಅನುಮಾನಗಳೂ ಉಳಿಯಲಿಲ್ಲ. ಹೀಗಾಗಿ ಮೆಹಬೂಬ್ ಬೀಯನ್ನು ನೆನೆಸಿಕೊಂಡು ಅವನಿಗೆ ಸಂಕಟವಾಗತೊಡಗಿತು. ಇದೇ ಚಿಂತೆಗಳು ಅವನನ್ನು ಕಿತ್ತು ತಿನ್ನತೊಡಗಿದವು. ಕುಳಿತರೆ ನಿಂತರೆ ವ್ಯಾಪಾರದಲ್ಲಿ ನಿರತನಾದಾಗ…. ಎಲ್ಲೆಲ್ಲೂ… ಅವನಿಗೆ ನೆಮ್ಮದಿ ಸಿಗದಂತಾಗಿ ಅವನ ನಿದ್ರೆಯೇ ಹಾರಿಹೋಯಿತು. ಒಂದು ವಾರ ಕಳೆಯುವಷ್ಟರಲ್ಲಿ ಅವನು ಒಂದು ನಿರ್ಧಾರಕ್ಕೆ ಬಂದ.

ಜಗಳದ ನಡುವೆ ಛಾಲೆಂಜಾಗಿ ಬಂದ ಮಾತನ್ನು ಸತ್ಯವಾಗಿಸಲು ಅವನು ಪಣ ತೊಟ್ಟ. ಅವನ ಕಣ್ಣೆದುರಿಗೆ ಮೂಡಿಬಂದವನು ಮದುವೆಗಳ ದಲ್ಲಾಳಿ ಹಯಾತ್ ಖಾನ್…. ಅಷ್ಟೆಲ್ಲಾ ಮದುವೆಗಳನ್ನು ತನ್ನ ಸರ್ವೀಸಿನಲ್ಲಿ ಮಾಡಿಸಿದ ಹಯಾತ್ ಖಾನ್ ಕೂಡ ಯೂಸುಫ್‌ನ ಪ್ರಸ್ತಾಪದಿಂದ ಬೆಚ್ಚಿಬಿದ್ದ. ಅವನು ಬಹಳ ಎಚ್ಚರಿಕೆಯಿಂದ ಯೂಸುಫ್‌ನ ಬೇಡಿಕೆಯನ್ನು ಪರಿಶೀಲಿಸಿದ. ಈ ಕೆಲಸಕ್ಕೆ ಕೈ ಹಾಕುವುದರಿಂದ ತನ್ನ ವ್ಯವಹಾರಕ್ಕೇನಾದರೂ ಹಾನಿಯಾಗುವುದೇ ಎಂದು ವಿಚಾರ ಮಾಡಿದ. ಅದರಲ್ಲಿ ತಪ್ಪೇನಿಲ್ಲವೆಂದು ಅವನಿಗನ್ನಿಸಿದರೂ ಕೊನೆಗೊಮ್ಮೆ…. ಜಾಮಿಯ ಮಸೀದಿಯ ಮೌಲಾನರನ್ನು ಕಂಡು ವಿಚಾರ ಮಾಡಿದ. ಅವರಂತೂ ಗಡ್ಡ ನೀವಿಕೊಂಡು ಗಂಟಲು ಸರಿಪಡಿಸಿಕೊಂಡು “ಆರೆ…. ಮಿಯಾಂ …. ವಿಧವೆಯ ಮರುಮದುವೆಯಷ್ಟು ಒಳ್ಳೆ ಕೆಲಸ ಇನ್ಯಾವುದಿದೆ…. ನಾವೇ ಈ ನಿಕಾಹ್ ಮಾಡ್ತೀವಿ…. ನಮ್ಮನ್ನೇ ಕರಿ” ಎಂದು ಹುರಿದುಂಬಿಸಿ ಈ ಕಾರ್ಯಕ್ಕೆ ಧರ್ಮದ ವತಿಯಿಂದ ಯಾವುದೇ ಅಡಚಣೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಇಷ್ಟೆಲ್ಲಾ ಜಾಲಾಡಿ ಹಯಾತ್‌ಖಾನ್ ಉತ್ಸಾಹದಿಂದ ಮಹಬೂಬ್ ಬಿಗೆ ಗಂಡು ಹುಡುಕಲು ಸಿದ್ಧನಾದ. ಅವನಿನ್ನೂ ಯಾರೆದುರಿಗೂ ಬಾಯಿ ಬಿಟ್ಟಿರದಿದ್ದರೂ ಈ ಮಾತು ಮಾತ್ರ ಇಡೀ ಪಟ್ಟಣದ ಉದ್ದಗಲಕ್ಕೂ ಹರಡಿತು. ತುಟಿಯ ಮರೆಯಲ್ಲಿ ನಕ್ಕವರೆಷ್ಟೋ ಮಂದಿ…. “ಏನಂತೇ… ಗಂಡಸರು ಮಾಡಿಕೊಳ್ಳೋದಿಲ್ಲವೇ…. ಆದರೆ ಈಕೆಯದೂ ಆಗಲಿ ಬಿಡಿ” ಎಂದು ಉದಾರತೆಯನ್ನು ಪ್ರದರ್ಶಿಸಿದವರೆಷ್ಟೋ ಮಂದಿ; ‘ಅವನಿಗೆ ತಲೆ ಕೆಟ್ಟದೆ…’ ಎಂದು ತೀರ್ಮಾನ ಕೊಟ್ಟವರಷ್ಟೋ ಮಂದಿ. ಅಂತೂ ಯೂಸುಫ್ ಮತ್ತವನ ತಾಯಿ ವಿಧವಿಧದ ಚರ್ಚೆಗೊಳಪಟ್ಟುಬಿಟ್ಟರು.

ಯೂಸುಫ್‍ನೇನೊ ಮೊದಲೇ… ಅಂದರೆ…. ಅವನಿಗೂ ಅಖಿಲಳಿಗೂ ಕಲ್ಲಂಗಡಿ ಹಣ್ಣಿನ ಚೆಂಡಾಟದ ಜಗಳವಾದ ಮೂರ್‍ನಾಲ್ಕು ದಿನಗಳೊಳಗಾಗಿಯ ತಾಯಿಯು ಆಸ್ಪತ್ರೆಗೆಂದು ಬಂದಿದ್ದಾಗ ಅವಳದೊಂದು ಜಬರ್‌ದಸ್ತ್ ಕಲರ್ ಫೋಟೋ ತೆಗೆಸಿಟ್ಟು ಕೊಂಡಿದ್ದ. ಅಖಿಲ ಬೈಯ್ದಂತೆ ಅವಳು ಪೋಟೋದಲ್ಲಿ ಮಜಬೂತಾಗಿಯೇ ಕಂಡು ಬರುತ್ತಿದ್ದಳು. ಐವತ್ತರ ಅಂಚಿನಲ್ಲಿದ್ದ ಆಕೆ ಲಕ್ಷಣವಾದ ಹೆಣ್ಣು ಮಗಳಾಗಿದ್ದಳು. ಹೀಗಾಗಿ ಯೂಸುಫ್‌ನ ಗಂಡು ಹುಡುಕುವಿಕೆಯ ಕಾರ್ಯಕ್ರಮಕ್ಕೆ ಹೆಚ್ಚೇನೂ ವಿಘ್ನಗಳು ಮೂಡಿಬರಲಿಲ್ಲ. ಬದಲಿಗೆ ಅವನ ಕಾಲಿಗೆ ತೊಡರು ಬಳ್ಳಿಯಾಗಿ ಸಿಲುಕಿಕೊಂಡವನು ಹಾಷಿಮ್ ಸಾಬ್… ಯೂಸುಫ್ ಎಚ್ಚರಿಕೆಯಿಂದ ಅವನ ಪೂರ್ವೇತಿಹಾಸವನ್ನೆಲ್ಲಾ ಜಾಲಾಡಿದ. ಸ್ವಲ್ಪ ಸ್ಥಿತಿವಂತನೇ ಆಗಿದ್ದ ಹಾಷಿಮ್ಸಾಬ್‌ನ ಆರು ಜನ ಮಕ್ಕಳು ಮದುವೆಯಾಗಿ ಬೇರೆ ಇದ್ದರು. ಅವನ ಪತ್ನಿಗೆ ಲಕ್ವ ಹೊಡೆದು ಹಾಸಿಗೆಯ ತಿಗಣೆಯಾಗಿದ್ದಳು. ಕೊನೆಯ ಮಗ ಸೊಸೆ ಅವನ ಜೊತೆಗಿದ್ದರು. ಅವನ ಪತ್ನಿಯನ್ನು ನೋಡಿ ಕೂಳ್ಳಲು ಹಾಷಿಮ್‌ಸಾಬ್‌ಗೆ ಒಂದು ಹೆಣ್ಣಿನ ತುರ್ತು ಅವಶ್ಯಕತೆ ಇತ್ತು. ಯಾವುದೋ ನೆಪದಲ್ಲಿ ಅವನು ಮಧ್ಯಸ್ಥಗಾರನ ಮೂಲಕ ಅಖಿಲಳ ಮನೆಗೆ ಆಹ್ವಾನಿಸಿದ. ಬಂದವರ್‍ಯಾರು ಎಂಬ ಸುಳಿವನ್ನು ಅವನು ಯಾರಿಗೂ ಬಿಟ್ಟುಕೊಡಲಿಲ್ಲ. ಅಖಿಲಳೇನೋ ಚನ್ನಾಗಿಯೇ ಅಡಿಗೆ ಮಾಡಿದ್ದರೂ ಬಲಿತಿದ್ದ ಟಗರಿನ ಮಾಂಸವಾಗಿದ್ದರಿಂದ, ಹಾಷಿಮ್ ಸಾಬ್ ಅದನ್ನು ಅಗಿಯಲು ಪಡಿಪಾಟಲು ಪಡುತ್ತಿದ್ದ. ಅವನ ನರೆತಿದ್ದ ಗಡ್ಡ ಮತ್ತು ಅವನು ಉಳಿಸಿದ್ದ ಮಾಂಸದ ತುಂಡುಗಳನ್ನು ನೋಡಿ ಅವನ ಸ್ವಂತದ ಹಲ್ಲುಗಳೊಂದು ಕೂಡ ಅವನ ಬಾಯಲ್ಲಿ ಉಳಿದಿಲ್ಲವೆಂದು ಯೂಸುಫ್‌ಗೆ ಖಾತರಿಯಾಯಿತು. ಅಷ್ಟೇ ಅಲ್ಲದೆ ತನ್ನ ತಾಯಿಯನ್ನು ಹಾಷಿಮ್‌ಸಾಬ್‌ನ ಪತ್ನಿಯ ಮಲಮೂತ್ರಗಳನ್ನು ಸ್ವಚ್ಛಗೊಳಿಸಲು ಆಯಾ ಆಗಿ ಕಳಿಸುವುದು ಅವನಿಗೆ ಸುತಾರಾಮ್ ಇಷ್ಟವಿರಲಿಲ್ಲ. ಹೀಗಾಗಿ, ಗಂಡು ತನಗೆ ಒಪ್ಪಿಗೆಯಾಗಲಿಲ್ಲವೆಂದು ಹೇಳಿಕಳಿಸಿಬಿಟ್ಟರೂ ಅವನ ಹುಡುಕಾಟ ಮುಂದುವರಿದೇ ಇತ್ತು.

ಯೂಸುಫ್‌ಗೆ ಒಳಗೊಳಗೆಯೇ ಸಂಭ್ರಮವನಿಸತೊಡಗಿತು. ಮೊದಲು ಹೆಂಡತಿಯ ಮೇಲಿನ ಸೇಡಿನಿಂದ…. ಆಕೆಯ ಛಾಲೆಂಜಿನಿಂದ ಆರಂಭಿಸಿದ ಈ ಕೆಲಸದಲ್ಲಿ ಅವನು ನಿಜವಾಗಿಯೂ ಸಂತೋಷದಿಂದ ತೊಡಗಿಸಿಕೊಳ್ಳಲಾರಂಭಿಸಿದ. ಅಷ್ಟೇ ಅಲ್ಲದೆ… ಗಂಡು ಹುಡುಕುವ ಕೆಲಸದಲ್ಲಿ ಅವನು ನಿರತನಾಗಿದ್ದುದರಿಂದ ತಾಯಿಯ ಕಡೆ ಗಮನ ಹರಿಸಲು ಅವನಿಗೆ ಹೆಚ್ಚಿನ ವೇಳೆ ಇರಲಿಲ್ಲ. ಅವನು ತಾಯಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡದಿರುವುದನ್ನು ಗಮನಿಸಿದ ಅಖಿಲ ಕೂಡ ನಿರ್ಯೋಚನೆಯಿಂದ ಅವನೊಡನೆ ಹೆಚ್ಚಿನ ಜಗಳವಾಡದೆ ನೆಮ್ಮದಿಯಿಂದ ಇದ್ದಳು.

ವಿಶೇಷ ಮುತುವರ್ಜಿಯಿಂದ…. ಅಂದರೆ ಒಳ್ಳೆಯ ಪ್ಯಾಂಟ್, ಮಂಡಿಯವರೆಗೆ ತೊಟ್ಟ ಗೆರೆಗೆರೆಯ ತುಂಬುಡೋಳಿನ ಷರ್ಟ್ ಧರಿಸಿ ಗಾಢವಾದ ಸುವಾಸನೆಯ ಸೆಂಟ್ ಬಳಿದುಕೊಂಡು ಒಂದು ಹಳೆಯ ಜಾವಾ ಮೋಟರ್‌ಬೈಕಿನಲ್ಲಿ ಬಂದ ಕರೀಮ್‌ಖಾನ್ ಶೋಕೀಲಾಲ ಎಂದು ಮೊದಲ ನೋಟದಲ್ಲಿಯೇ ಖಾತರಿಯಾಯಿತವನಿಗೆ. ಕರೀಮ್ ಖಾನ್‌ಗೆ ಈಗಾಗಲೆ ಇಬ್ಬರು ಹೆಂಡತಿಯರು, ಮನೆ ತುಂಬಾ ಮಕ್ಕಳು ಇದ್ದರು. ಅವನಿಗೆ ಮಹಾನ್ ಹೆಂಗಸರ ಖಯಾಲಿ. ಅವನ ಈ ಹುಚ್ಚಿನ ದೆಸೆಯಿಂದ ಅನೇಕ ಪ್ರಸಂಗಗಳು ನಡೆದಿದ್ದು, ಅವೆಲ್ಲಾ ಜನರ ಬಾಯಿಂದ ಬಾಯಿಗೆ ಹರಡಿದ್ದು, ಹೆಂಗಸರ ನಡುವೆಯೂ ಅವನ ಖ್ಯಾತಿ ಸಾಕಷ್ಟು ಹಬ್ಬಿದ್ದು, ಸಂಭಾವಿತರಾರೂ ಅವನನ್ನು ಮನೆಗೆ ಕರೆಯುತ್ತಿರಲಿಲ್ಲ. ಅವನಿದ್ದ ಕಡೆಯಿಂದ ಹೆಂಗಸರು ಹಾದು ಹೋಗಬೇಕಾಗಿದ್ದಲ್ಲಿ ಅವರುಗಳು ಮೈತುಂಬಾ ಹೊದ್ದಿದ್ದ ಬುರ್ಕಾವನ್ನು ಇನ್ನಷ್ಟು ಬಿಗಿಯಾಗಿ ಎಳೆದುಕೊಳ್ಳುತ್ತಿದ್ದರು….. ಒಮ್ಮೆಯಂತೂ ಕಡ್ಲೆಕಾಯಿ ಮಾರುವ ರಜಾಕ್‌ನ ಹೆಂಡತಿಯೊಡನೆ ಅವನು ಸ್ನೇಹ ಬೆಳೆಸಿಕೊಂಡಿದ್ದು, ರಜಾಕ್ ಇಲ್ಲದ ಸಮಯದಲ್ಲಿ ಅವನ ಮನೆಗೆ ಹೋಗಿದ್ದು…. ಕಣ್ಣಿಟ್ಟು ಕಾಯುತ್ತಿದ್ದ ರಜಾಕ್‌ನ ಕೈಗೆ ಅತ್ಯಂತ ಅವಮಾನಕರವಾಗಿ ಸಿಕ್ಕುಬಿದ್ದು, ಬಚಾವಾಗಲು ಹಿಂಬಾಗಿಲ ಗೋಡೆಯನ್ನು ಹಾರಲು ಪ್ರಯತ್ನಿಸಿ ಪಾಯಖಾನೆ ಗುಂಡಿಯೊಳಗೆ ಬಿದ್ದು ಅವಾಂತರವನ್ನನುಭವಿಸಿದ್ದ. ಅಲ್ಲಿದ್ದ ಕಕ್ಕಸ್ಸೆಂದರೆ…. ಅಗಲವಾದ ಗುಂಡಿಯನ್ನು ತೋಡಿದ್ದು ಅದರ ಮೇಲೆ ಅಡ್ಡಡ್ಡಲಾಗಿ ಚಪ್ಪಡಿ ಕಲ್ಲನ್ನು ಇಟ್ಟಿದ್ದ ಆ ಪಾಯಕಾನೆ ಗುಂಡಿಯನ್ನು ಸುತ್ತಲಿನ ಸುಮಾರು ಇಪ್ಪತ್ತು ಸಂಸಾರಗಳು ಬಳಸುತ್ತಿದ್ದುದರಿಂದ ಅದು ಭರ್ತಿ ಯಾಗಿಯೇ ಇತ್ತು. ಮೈಗೆಲ್ಲಾ ಢಾಳಾಗಿ ಹೇಲು ಬಳಿದುಕೊಂಡಿದ್ದ ಅವನನ್ನು ಯಾರೂ ಮುಟ್ಟಲು ತಯಾರಿಲ್ಲದೆ ಕೊನೆಗೆ ಕೋಲುಗಳಿಂದ ಬಡಿದು ಹೊರಗಟ್ಟಿದ್ದ ಪ್ರಸಂಗವನ್ನು ಯೂಸುಫ್‌ನ ಒಂದಿಬ್ಬರು ಸ್ನೇಹಿತರು ಅವನಿಗೆ ರಸವತ್ತಾಗಿ ಬಣ್ಣಿಸಿ, ಯೂಸುಫ್ ಪಕ್ಕೆ ಬಿರಿಯುವಷ್ಟು ನಕ್ಕಿದ್ದನಾದರೂ ಅವನ ಬಗ್ಗೆ ಯೂಸುಫ್‌ಗೆ ಅಸಹ್ಯವಾಗಿ ಬಿಟ್ಟಿತ್ತು. ಅವನಂತಹ ಕರಡಿಯ ಕೈಗೆ ತನ್ನ ಪ್ರೀತಿಯ ಅಮ್ಮನನ್ನು ಒಪ್ಪಿಸುವುದು ತರವಲ್ಲ ಎಂದು…. ಆ ಪ್ರಸ್ತಾಪವನ್ನೇ ನಿರಾಕರಿಸಿಬಿಟ್ಟ.

ಅಂತೂ ಅನೇಕ ಗಂಡುಗಳ ನಿರಾಕರಣೆಯ ನಂತರ ಅವನಿಗೆ ಸೂಕ್ತ ವರ ಎಂದು ಕಂಡು ಬಂದವನೇ ಅಬ್ದುಲ್ ಗಫಾರ್, ಅಬ್ದುಲ್ ಗಫಾರ್ ಮತ್ತವನ ಪತ್ನಿ ಇಬ್ಬರೂ ಹೈಯರ್ ಪ್ರೈಮರಿ ಶಾಲೆಯಲ್ಲಿ ಉಪಾಧ್ಯಾಯರಾಗಿದ್ದರು. ಮೂವರು ಹೆಣ್ಣು ಮಕ್ಕಳು ಅವರಿಗಿದ್ದರು. ಸಂತೃಪ್ತ ಸಂಸಾರವಾಗಿತ್ತದು. ಅಚಾನಕವಾಗಿ ಕ್ಯಾನ್ಸರ್‌ನ ರಕ್ಕಸ ಹಿಡಿತದಲ್ಲಿ ಅಬ್ದುಲ್ ಗಫಾರ್‌ನ ಹೆಂಡತಿ ಮರಣ ಹೊಂದಿದ್ದಳು. ಆಕೆ ಇದ್ದಾಗಲೇ ಇಬ್ಬರು ಹೆಣ್ಣು ಮಕ್ಕಳ ಮದುವೆಯೂ ನಡೆದಿತ್ತು. ಪತ್ನಿಯ ಸಾವಿನ ನಂತರ ಅಬ್ದುಲ್ ಗಫಾರ್ ತಮ್ಮ ಮಗಳು ರೋಷನಿಗೆ…. ರೋಷನಿ ತಂದೆಗೆ ಜೊತೆಯಾಗಿದ್ದರು. ಯೂಸುಫ್‌ಗೆ ಬಲು ನೆಮ್ಮದಿ ತಂದುಕೊಟ್ಟ ಸಂಬಂಧವಿದು. ಅಬ್ದುಲ್ ಗಫಾರ್ ಕೂಡ ಮೆಹಬೂಬ್ ಬೀಯ ಫೋಟೋ ನೋಡಿ ಒಪ್ಪಿಕೊಂಡಿದ್ದ. ಮೆಹಬೂಬ್ ಬೀಯ ಮದುವೆಯ ದಿನಾಂಕವನ್ನು ಗೊತ್ತುಪಡಿಸಿದ ನಂತರ, ಯೂಸುಫ್‌ಗೆ ಬಿಡುವಿಲ್ಲದಷ್ಟು ಕೆಲಸ…… ಅಬ್ದುಲ್ ಗಫಾರ್ ತಮ್ಮ ಮದುವೆ ಯಾದ ಹೆಣ್ಣುಮಕ್ಕಳಿಗೆ ಈ ವಿಷಯ ತಿಳಿಸಿ. ಸಂಕೋಚದಿಂದಲೇ ಅಳಿಯಂದಿರಿಗೂ ಈ ವಿಷಯವನ್ನು ತಿಳಿಸಿದ್ದರು. ಅವರಾರೂ ಆಕ್ಷೇಪಣೆ ವ್ಯಕ್ತಪಡಿಸದೆ ಮದುವೆಗೆ ಬರಲು ಸಮ್ಮತಿಸಿದ್ದರೂ….. ಅಬ್ದುಲ್ ಗಫಾರ್‌ಗೆ ಒಂದು ವಿಧದ ಹಿಂಜರಿಕೆ ಇದ್ದೇ ಇತ್ತು. ಹೀಗಾಗಿ ಅವರು ಯೂಸುಫ್‌ನೆದುರು ಕಳದನಿಯಲ್ಲಿ “ಏನೋ…. ಒಂದು ದಿನ ಒಂದು ನಿಖಾ ಅಂತ ಮಾಡಿಬಿಡಿ; ಜಾಸ್ತಿ ಜನರನ್ನು ಸೇರಿಸಿಕೊಂಡು ಗಲಾಟೆಯೇನೂ ಮಾಡಿಕೊಳ್ಳುವುದು ಬೇಡ…..” ಎಂದು ಹೇಳಿದ್ದರು. ಆದರೂ ಯೂಸುಫ್ ಸುಮ್ಮನಿರಬೇಕಲ್ಲ….. ವಿಶೇಷವಾದ ತಯಾರಿಯನ್ನೇ ನಡೆಸಿದ್ದನವ. ಮೊದಲಿಗೆ ತನ್ನ ಬೆರಳಲ್ಲಿದ್ದ ವಂಕಿ ಉಂಗುರವನ್ನು ಪಾಲಿಶ್ ಮಾಡಿಸಿ ತಂದು ತನ್ನ ಬೀರುವಿನಲ್ಲಿಟ್ಟು ಬೀಗ ಹಾಕಿದ. ಉಳಿದ ನಾಲ್ಕೈದು ಉಂಗುರಗಳನ್ನು ಕರಗಿಸಿ ಮೇಲಿಷ್ಟು ದುಡ್ಡು ಹಾಕಿ ತಾಯಿಗಾಗಿ ಒಂದು ನೆಕ್ಲೇಸ್ ಮಾಡಿಸಿದ. ಅದೂ ಬೀರು ಸೇರಿತು. ದಿನ ಕಳೆದಂತೆ ಯೂಸುಫ್ ರಟ್ಟಿನ ಪೆಟ್ಟಿಗೆಗಳಲ್ಲಿ ಏನನ್ನೋ ತಂದು ಬೀರುವಿನಲ್ಲಿಡುವುದನ್ನು ಗಮನಿಸುತ್ತಾ ಬಂದ ಅಖಿಲ ಆಶ್ಚರ್ಯಗೊಂಡಳು. ಅವನಿಲ್ಲದಾಗ ಬೀರುವನ್ನು ತೆರೆದು ನೋಡಬೇಕೆಂಬ ಅವಳ ಇಚ್ಛೆ ನೆರವೇರುವ ಸಾಧ್ಯತೆಗಳಿರಲಿಲ್ಲ. ಏಕೆಂದರೆ ಬೀಗದ ಕೈ ಸದಾ ಅವನ ಜೇಬಿನಲ್ಲಿರುತ್ತಿತ್ತು.

ಅಬ್ದುಲ್ ಗಫಾರ್‌ನೊಡನೆ ಮದುವೆಯ ಮಾತುಕತೆ ನಡೆಯುವ ಸಂದರ್ಭದಲ್ಲಿ ಯೂಸುಫ್ ತನ್ನ ಇಬ್ಬರು ಸ್ನೇಹಿತರನ್ನು ಮಾತ್ರ ಜೊತೆಯಾಗಿಟ್ಟುಕೊಂಡಿದ್ದನು. ಹಾಗಿದ್ದಾಗ್ಯೂ ಊರಲ್ಲಾ ಹರಡಿದ್ದ ಆ ಸುದ್ದಿ ಅತ್ತೆ ಸೊಸೆಯ ಕಿವಿಗೆ ಬೀಳಲು ತಡವಾಗಲಿಲ್ಲ. ಅವನ ವಿಚಿತ್ರ ಚರ್ಯೆಗಳನ್ನು ತಾಯಿ ಮತ್ತು ಹೆಂಡತಿ ಗಮನಿಸಿದ್ದರು. ಅವನ ಪ್ರೀತಿ ಪಾತ್ರ ಉಂಗುರುಗಳು ಅವನ ಬೆರಳುಗಳಲ್ಲಿ ಇಲ್ಲದೆ ಇದ್ದುದರಿಂದ ಇಬ್ಬರೂ ದುಃಖಿತರಾಗಿದ್ದರು. ಆಖಿಲಾಗೆ ಇತ್ತೀಚೆಗೆ ಅವನೊಡನೆ ಯಾವ ಮಾತನ್ನು ಬೆಳೆಸಲೂ ಕೂಡ ಹೆದರಿಕೆ ಯಾಗುತ್ತಿತ್ತು. ಮೆಹಬೂಬ್ ಬೀಯಂತೂ ಮಗನ ಅಪಾಯಕಾರಿ ಆಲೋಚನೆಗಳನ್ನರಿತು ಇಡೀ ದಿನವೆಲ್ಲಾ ಅತ್ತಳು.

…..ಆ ದಿನ ಬೆಳಬೆಳಿಗ್ಗೆಯೇ ಅವನು ನಾಲ್ಕು ‘ಕುರಿಗಳನ್ನು ತಂದು ಮನೆ ಮುಂಭಾಗದಲ್ಲಿ ಕಟ್ಟಿ ಹಾಕಿದ. ಮೂವರು ಕೂಡ ಒಬ್ಬರೊಡನೊಬ್ಬರು ಕಣ್ಣಾಮುಚ್ಚಾಲೆ ಯಾಡುತ್ತಿದ್ದರು. ಕುರಿಗಳ ಬಗ್ಗೆ ಯಾರೊಬ್ಬರೂ ಪ್ರಶ್ನಿಸಲಿಲ್ಲ….. ಯೂಸುಫ್ ಕೂಡ ಉಸಿರಲಿಲ್ಲ. ಎಲ್ಲಾ ವ್ಯವಸ್ಥೆಯನ್ನೂ ಒಂದೊಂದಾಗಿ ಮಾಡುತ್ತಿದ್ದ ಯೂಸುಫ್ ತಾಯಿಯೊಡನೆ ಈ ವಿಚಾರದ ಬಗ್ಗೆ ಪ್ರಸ್ತಾಪ ಮಾಡಲು ಸೂಕ್ತ ಅವಕಾಶ ಸಿಗದಿದ್ದುದರಿಂದ ಚಡಪಡಿಸುತ್ತಿದ್ದ. ‘ಸೊಸೆಯೇ ತನ್ನ ಮಗನ ಕಿವಿಯೂದಿ ತನ್ನನ್ನು ಶಾಶ್ವತವಾಗಿ ದೂರ ಮಾಡಲು ಕೊನೆಗೂ ಸಫಲಳಾದಳಲ್ಲ…. ಹೂ… ಇದೆಂಥಾ ನಾಚಿಕೆಗೇಡಿನ ಪ್ರಸಂಗ’ ಎಂದು ಕೊರಗಿದರೆ, ಅಖಿಲ “ಛೇ… ತಾನು ತಪ್ಪು ಮಾಡಿಬಿಟ್ಟೆ…. ವಿಷಯವನ್ನು ಇಲ್ಲಿವರೆಗೆ ಬೆಳೆಸಬಾರದಿತ್ತು…” ಎಂದು ಚಿಂತಾಕ್ರಾಂತಳಾದಳು. ಗಂಡನೆದುರು ಬಾಯಿಲ್ಲದವಳಂತಾಗಿದ್ದಳು. ಅತ್ತೆಯನ್ನು ರಂಡೆ…. ಸವತಿ….. ಎಂದೆಲ್ಲಾ ಬೈದುದಕ್ಕೆ ತೀರಾ ನೊಂದುಕೊಂಡರೂ ಪ್ರಯೋಜನವೇನೂ ಇಲ್ಲ ಎಂದು ಅವಳಿಗರ್ಥವಾಗಿತ್ತು. ಅಷ್ಟೇ ಅಲ್ಲದೆ…. ಅವನು ಖಂಡಿತವಾಗಿಯೂ ತನ್ನ ತಾಯಿಗೆ ನೆಕ್ಲೇಸ್ ಮಾಡಿಸಿದ್ದು….., ಹಟಕ್ಕಾದರೂ ಒಂದೆರಡು ಪಂಜಾಬಿ ಸೆಟ್ ತಂದಿರುವನೆಂದು ಅವಳಿಗೆ ಖಾತರಿಯಾಗಿತ್ತು, ತನಗೇ ಇಲ್ಲದ ಭಾಗ್ಯ ಈ ಮುದಿಗೂಬೆಗೆ ದಕ್ಕಿತಲ್ಲ ಎಂದು ಅವಳಿಗೆ…. ಅಸೂಯೆಯೂ ಆಯಿತು…. ಆದರೆ ಪ್ರಕಟಗೊಳ್ಳಲಿಲ್ಲ. ಏನಾಡಿದರೆ….. ಏನನಾಹುತ ಆಗುವುದೋ ಎಂಬ ತಲ್ಲಣದಿಂದ ಅವಳು ಮಾತೇ ಮರೆತವಳಂತಾಗಿದ್ದಳು.

ಹೀಗೆ ಅವರವರ ಬೇನೆಯನ್ನು ಅವರವರೇ ತಿನ್ನುತ್ತಿದ್ದರು. ಆದರೆ ಮನೆ ಮುಂಭಾಗದಲ್ಲಿ ಕುರಿಗಳನ್ನು ಕಟ್ಟಿ ಹಾಕಿದಾಗ ಯಾವುದೇ ಆತಂಕಗಳಿಲ್ಲದೆ ನಿರ್ಮಲವಾಗಿ ಸಂತೋಷಪಟ್ಟವರು ಮಾತ್ರ ಮಕ್ಕಳು. ಮುನ್ನಾನಂತೂ ಸುತ್ತಮುತ್ತಲಿನ ಮಕ್ಕಳನ್ನೆಲ್ಲಾ ಕಲೆ ಹಾಕಿಕೊಂಡಿದ್ದಷ್ಟೇ ಅಲ್ಲದೆ…. ಅದ್ಯಾರು ಹೇಳಿಕೊಟ್ಟಿದ್ದರೋ….. ಏನೋ…. ‘ಅಜ್ಜಿ ಮದುವೆ ಕುರಿ….. ಅಜ್ಜಿ ಮದುವೆ ಕುರಿ…..’ ಎಂದು ಅವುಗಳ ಬೆನ್ನಿನ ಮೇಲೆ ಸವಾರಿಯನ್ನೇ ಮಾಡಿದ. ಅಖಿಲಾಳ ಕಿವಿಗೆ ಅವನ ಹಾಡು ಬಿದ್ದ ನಂತರ ಅವನನ್ನು ದರದರನೆ ಮನೆಯೊಳಗೆ ಎಳೆದುಕೊಂಡು ಬಂದು…. ತನ್ನೆಲ್ಲಾ ಕೋಪವನ್ನು ತೀರಿಸಿಕೊಳ್ಳುವಂತೆ ನಾಯಿಗೆ ಬಡಿದಂತೆ ಬಡಿದಳು. ಅವನೋ….. ಅವನ ಗಂಟಲೋ…. ಸೂರು ಹಾರಿ ಹೋಗುವಂತೆ….. ಹತ್ತು ಮನೆಗೆ ಕೇಳಿಸುವಂತೆ ಕಿರುಚಾಡಿದ. ಮುನ್ನಾನ ಧ್ವನಿ ಮೆಹಬೂಬ್ ಬೀ ಗೆ ತಟ್ಟದೆ ಇರಲಿಲ್ಲ. ಉಳಿದ ಸಯಮದಲ್ಲಾಗಿದ್ದರೆ ಅವನ ಕೂಗಿಗೆ ಮೆಹಬೂಬ್ ಬೀ….. ಹೋಗಿ ಅವನನ್ನು ಬಾಚಿ ತಬ್ಬಿಕೊಳ್ಳುತ್ತಿದ್ದಳೇನೋ….. ಆದರೆ ಇಂದು ಅವಳ ಹೃದಯ ಕಲ್ಲಾಗಿತ್ತು….. ಯಾರಿಗೆ ಯಾರೂ ಇಲ್ಲದ ಈ ಸುಟ್ಟ ಪ್ರಪಂಚದ ಬಗ್ಗೆ ಅವಳ ಮನಸ್ಸು ಅಪಾರ ಕಹಿಯನ್ನು ತುಂಬಿಕೊಂಡಿತ್ತು. ಹೀಗಾಗಿ ಅವಳು ಮುನ್ನಾನ ನೆರವಿಗೂ ಧಾವಿಸಲಿಲ್ಲ….. ಬದಲಿಗೆ ಮುಂಬಾಗಿಲ ಅಗುಳಿಯನ್ನೇರಿಸಿ ಊಟವನ್ನು ಕೂಡ ಮಾಡದೆ ಕತ್ತಲ ಸಾಮ್ರಾಜ್ಯದಲ್ಲಿ ಸೇರಿಹೋದಳು. ಮಹಬೂಬ್ ಬೀಯೇನೋ ಮನೆಯ ಬಾಗಿಲಿನ ಅಗುಳಿಯೇರಿಸಿದ್ದಳು…. ಆದರೆ ಅವಳ ಮನದ ಬಾಗಿಲು ಪಟಪಟನೆ ಬಡಿದುಕೊಳ್ಳುತ್ತಿತ್ತು. ಯಾರೂ ಊಹಿಸಲಾಗದ ವೇದನೆಯ ನಡುವೆಯೂ…. ಮಗ ಸೊಸೆಯ ಬಗ್ಗೆ ತೀವ್ರವಾದ ತಿರಸ್ಕಾರದ ನಡುವೆಯೂ ಮುನ್ನಾನ ಆರ್ತನಾದ ಅವಳನ್ನು ತಟ್ಟುತ್ತಿತ್ತು. ಅವಳ ಸಹನಾಶಕ್ತಿ ಪೂರ್ತ ಲಯವಾದಂತೆನಿಸಿ ಅವಳ ಅಂತರಂಗದಲ್ಲಿ ಆಸ್ಫೋಟವಾದಂತನಿಸಿ ಅವಳು ಶಕ್ತಿಗುಂದತೊಡಗಿದಳು…… ಹಲವು ನಿಮಿಷಗಳ ಕಾಲ ಅವಳನ್ನು ಆವರಿಸಿದ್ದ ಆ ನಿಚ್ಚೇಷ್ಟಿತ ನಿರ್ಭಾವುಕ ಸುಶುಪ್ತಿಯ ತೆರೆ ಸರಿಯುತ್ತಿದ್ದಂತೆಯೇ ಅವಳ ಮನದ ಕಾರ್ಮೋಡ ಕ್ರಮೇಣ ಚದುರಿತು. ಅವಳನ್ನು ತಲ್ಲಣಗೊಳಿಸುತ್ತಿದ್ದ ಆ ಗಳಿಗೆಯಲ್ಲೂ ಅವಳ ಮಾತೃತ್ವ ಜಾಗೃತವಾಯಿತು.

ಮಂಡಿ ನೋವನ್ನು ಕೂಡ ಲೆಕ್ಕಿಸದೆ ಜಗ್ಗುತ್ತಿದ್ದ ಸೀರೆಯ ನೆರಿಗೆಯನ್ನೂ ಗಮನಿಸದೆ ಜಾರುತ್ತಿದ್ದ ಸೆರಗನ್ನೂ ಹೊದ್ದುಕೊಳ್ಳದೆ ಅವಳು ಆಖಿಲಳ ಮನೆಗೆ ಓಡು ನಡಿಗೆಯಲ್ಲಿ ಬಂದು ಸೇರಿದಳು. ಹಜಾರದ ಮೂಲೆಯಲ್ಲಿ ಬಿಕ್ಕಳಿಸುತ್ತಿದ್ದ ಮುನ್ನಾ ಅವನ ನೋವಿನೊಡನೆ ಶಾಮೀಲಾಗಿ ತಾವೂ ಬಿಕ್ಕಳಿಸುತ್ತಿದ್ದ ಮಕ್ಕಳನ್ನು ನೋಡಿ ಮಹಬೂಬ್ ಬೀಗೆ ದುಃಖವುಕ್ಕಿ ಬಂದಿತು. “ನೀನೇನು ಮನುಷ್ಯಳಾ…. ರಾಕ್ಷಸಿಯಾ… ಮಗೂನ ಏನ್ಮಾಡಬೇಕೂಂತಿದೀಯಾ…” ಎಂದು ಸೊಸೆಯನ್ನು ಆಚೆಗೆ ತಳ್ಳಿ ಮುನ್ನಾನನ್ನು
ತನ್ನ ನೆರಿಗೆಯಲ್ಲಿ ಬಚ್ಚಿಟ್ಟುಕೊಂಡಳು. ಕೂಡಲೆ ಮೆಹಬೂಬ್ ಬೀಗೆ ಆತಂಕವಾಯಿತು. ‘ಸೊಸೆ ಮತ್ತಷ್ಟು ರಂಪ ಮಾಡಿ ಸುತ್ತಲಿನ ಜನರೆಲ್ಲಾ ಸೇರುವಂತಾದರೆ ಏನಪ್ಪಾ ಗತಿ’ ಎಂದು ಅವಳು ತಲ್ಲಣಿಸಿ ಹೋದಳು. ಆದರೆ ಅವಳ ನಿರೀಕ್ಷೆಯ ವಿರುದ್ಧವಾಗಿ ಆಖಿಲ….. ‘ಹೋ’ ಎಂದು ಅರಚುತ್ತಾ ಬಂದು ಅತ್ತೆಯ ತೆಕ್ಕೆ ಬಿದ್ದಳು. ಅಳುತ್ತಲೇ ನಡುನಡುವ ಬಿಕ್ಕಳಿಸಿದಳು. “ಬೀ ಅಮ್ಮಾ….. ಬೀ ಅಮ್ಮಾ….. ಇದೇನಾಗ್ತಾ ಇದೆ…. ನಮ್ಮ ಮರ್ಯಾದೆಯಲ್ಲಾ ಹೋಯ್ತಲ್ಲಾ…. ನಂದೇ ತಪ್ಪು… ನಿಮ್ಮ ಈ ಚಪ್ಲಿಲಿ ನಂಗೆ ಹೊಡೀರಿ….. ನಾನು ನಿಮಗೆ ತುಂಬಾ ಅನ್ಯಾಯ ಮಾಡ್ಬಿಟ್ಟೆ…..” ಎಂದು ಕಣ್ಣೀರು ಹರಿಸಿದಳು.

ಮಹಬೂಬ್ ಬೀ ಗೆ ಆಶ್ಚರ್ಯವೋ ಆಶ್ಚರ್ಯ….. …. ಇದೇನಿದು… ಹೀಗೂ ಉಂಟೇ…. ಗಂಡನ ಕಿವಿಯೂದಿ ತನ್ನ ಮದುವೆ ಮಾಡಲು ಹೊರಟಾಕೆ ಹೀಗೆ ತೆಕ್ಕೆ ಬಿದ್ದು ಅತ್ತು ಕಣ್ಣೀರು ಹರಿಸಲು ಸಾಧ್ಯವೆ ? ಯಾವಾಗಲೂ ….. ಮುದಿ ಹದ್ದು…. ಹೆಮ್ಮಾರಿ….. ನನ್ನ ಸವತಿ….. ಇವೇ ಬಯ್ಗಳನ್ನು ಉದುರಿಸುತ್ತಿದ್ದ ಆಖಿಲಳ ಈ ಬದಲಾವಣೆ ಒಳ್ಳೆಯದಕ್ಕೋ, ಕೆಟ್ಟದ್ದಕ್ಕೋ….. ಒಂದೂ ನಿರ್ಧರಿಸಲಾಗದೆ ಅವಳು ಕುಸಿದು ಕುಳಿತಳು. ಆಖಿಲಾಳಂತೂ ತನಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿ ಕೊಂಡು ಮೆಹಬೂಬ್ ಬೀಯೆದುರಿಗೆ ತನ್ನ ಸಾಚಾತನವನ್ನು ಮೆರೆದಿದ್ದೂ ಮೆರಿದಿದ್ದೇ…. ಅವಳಿಗೆ ನೀಡುತ್ತಿದ್ದ ಬಿರುದು ಬಾವಲಿಗಳನ್ನೆಲ್ಲಾ ಹಿಂತೆಗೆದುಕೊಂಡ ಅಖಿಲ ಅತ್ಯಂತ ಆಪ್ತ ಧ್ವನಿಯಲ್ಲಿ ‘ಬೀ ಅಮ್ಮಾ’ ಎನ್ನುವುದನ್ನು ಕೇಳಿದವರ ಹೊಟ್ಟೆ ಯೊಳಗಿನ ನೀರು ಕೂಡ ಕರಗುತ್ತಿತ್ತು. ಮೆಹಬೂಬ್ ಬೀ ಕೂಡ ಅವಳ ಪ್ರೀತಿಯೆದುರು ತುಸುವೇ ಕರಗುತ್ತಿದ್ದಳು, “ಬೀ…. ಅಮ್ಮಾ…… ಏನೋ ಕೆಟ್ಟ ಗಳಿಗೆ….. ಆಗಬಾರದ ಅನಾಹುತಗಳೆಲ್ಲಾ ಆಗಿ ಹೋದವು. ನಂದೇ ತಪ್ಪು….. ನಾನು ನಾಯಿ ಆಡಿದ ಹಾಗೆ ಆಡುತ್ತಿದ್ದೆ….. ಆದರೂ ಏನಂತೆ ಗಂಡಸರಲ್ಲವಾ ಅವರು….. ನನ್ನ ಹುಚ್ಚು ನೆತ್ತಿಗೇರಿದ್ದಾಗ ಎರಡು ಒದೆ ಕೊಟ್ಟಿದ್ದರೆ ಎಲ್ಲಾ ಸರಿಹೋಗಿತ್ತು. ಅದು ಬಿಟ್ಟು….. ನನ್ ಮೇಲಿನ ಸೇಡಿಗೆ ಅಂತ ಯಾರಾದ್ರೂ ಅಮ್ಮನ ಮದುವೆ ಮಾಡ್ತಾರಾ?…… ಆಂ…. ಎಲ್ಲಾದರೂ ಕೇಳಿದೀರಾ ಇಂತ ಕಥೇನಾ…… ಆಹಾಹ….. ಯಾವ ಪಿಕ್ಟರ್‌ನಲ್ಲೂ ನಾನಿಂಥ ಕಥೇನ ಕಾಣ್ಲಿಲ್ವಲ್ಲ….” ಎಂದು ಎಲ್ಲಾ ತಪ್ಪನ್ನೂ ಗಂಡನ ಮೇಲೆ ವರ್ಗಾಯಿಸಿಬಿಟ್ಟಳು.

ಆಖಿಲ ಬೇಗನೆ ಅಡಿಗೆ ಮನೆಗೆ ಹೋಗಿ ಗಟ್ಟಿಹಾಲಿನಲ್ಲಿ ಒಂದು ಲೋಟ ಟೀ ಮಾಡಿ ಅತ್ತೆಯ ಕೈಗೆ ತಂದಿತ್ತು “ಛೀ.. ಛೀ….. ಈ ಕುರೀನ ತಂದು ಹೀಗೆ ಮನೆ ಎದುರು ಕಟ್ಟೋಣ ಎಂದ್ರೇನು…. ಮನೆ ಅಂದ್ರೆ ಒಂದು ಮಾತು ಬರುತ್ತೆ….. ಹೋಗುತ್ತೆ…. ಅದನ್ನ….. ಬೀದಿಗೆ ಎಳೆಯೋಣ ಅಂದರೆ ಏನು….. ಯಾವ ಸಂಸಾರದಲ್ಲಿ ಜಗಳ ಆಗೋದಿಲ್ಲ. ಎಲ್ಲರೂ ಹೀಗೆ ರಣಾರಂಪ ಮಾಡ್ತಾರೆಯೇ….. ಮಾಂಸ ತಿನ್ತಾರೇಂತ ಯಾರಾದರೂ ಕತ್ತಿಗೆ ಮೂಳೆ ಹಾರ ಹಾಕಿಕೊಂಡು ತಿರುಗುತ್ತಾರೆಯ….. ನೀವೇ ಹೇಳಿ ಏನು ಅಂಥ ಅನರ್ಥ ಆಗಿರೋದು ನಿಮ್ಪಾಡಿಗೆ ನೀವಿದೀರ….. ನನ್ ಪಾಡಿಗೆ ನಾನಿದೀನಿ…. ಆವಾಗಾವಾಗ ನಾನು ಸ್ವಲ್ಪ ಬಡಕೊಳ್ತಿನಿ….. ನಾಯಿ ಜನ್ಮ ಅಲ್ವ ಅದಕ್ಕೆ….. ಬಗುಳ್ಕೋ ಅಂತ ನನ್ ಪಾಡಿಗೆ ನನ್ನ ಬಿಟ್ಟಿದ್ರೆ…. ಎಷ್ಟೂಂತ ನಾನು ಬೊಗುಳ್ತಾ ಇದ್ದೆ…. ನೀವೇ ಹೇಳಿ… ಆದ್ರೆ ನಾನೇನೂ ಕಚ್ತಾ ಇರ್‍ಲಿಲ್ವಲ್ಲ……”

ಮೆಹಬೂಬ್ ಬೀಯ ಕೈಯ ಟೀ ಲೋಟ ಹಾಗೆಯೇ ಉಳಿದುಹೋಯಿತು. ಒಂದು ಗುಟುಕನ್ನೂ ಅವಳು ಕುಡಿಯಲಿಲ್ಲ ಯಾಕೋ…. ಅಖಿಲ ಇನ್ನಷ್ಟು ಅಪಾಯ ಕಾರಿಯಾಗಿ ವರ್ತಿಸುತ್ತಿದ್ದಾಳೆ ಎಂದು ಅವಳಿಗನ್ನಿಸತೊಡಗಿತು. ಆ ಸಂದರ್ಭದಲ್ಲೂ….. ತನ್ನ ಮಗನ ಮೇಲೆ ಆಕೆಗೆ ತೀವ್ರವಾದ ಅಸಮಾಧಾನ ಇದ್ದಂತಹ ಸಂದರ್ಭದಲ್ಲೂ….. ಆಕೆ ತನ್ನ ಮಗನ ವಿರುದ್ಧ ಏನನ್ನೂ ಕೇಳಲು ಸಿದ್ಧಳಿರಲಿಲ್ಲ. ಆದರೆ ಅಖಿಲ ಆ ಸೂಕ್ಷ್ಮತೆಗಳನ್ನೆಲ್ಲಾ ಗಮನಿಸಿದರೆ ತಾನೇ…. ಅಪಾರವಾದ ಕೀಳರಿಮೆಯಿಂದ….. ಅಪರಾಧಿ ಭಾವದಿಂದ ಅವಳು ಹೇಗೆ ಹೇಗೋ ಮಾಡಿ ತನ್ನ ಮೇಲಿನಿಂದ ಹೊಣೆಗಾರಿಕೆಯನ್ನು ಜಾರಿಸಿಕೊಳ್ಳಲು ಪ್ರಯತ್ನಪಡುತ್ತಿದ್ದಳು. ಮೆಹಬೂಬ್ ಬೀ ಗೆ ವಿಷಯ ಸ್ವಲ್ಪ ಅರ್ಥವಾಂದತೆನಿಸುತ್ತಿತ್ತು…. ಉಳಿದಂತೆ ಅವಳ ತಲೆಯಲ್ಲಾ ಕಲೆಸಿಹೋದಂತೆನಿಸಿ …… ಎಲ್ಲವೂ ಗೊಂದಲಮಯವಾಗಿ ಕಾಣತೊಡಗಿತು.

“ಬೀ‌ಅಮ್ಮಾ…. ನೀವು ಟೀ ಕುಡಿಯುತ್ತಿರಿ. ನಾನು ಈಗಲೇ ಬರ್‍ತೀನಿ” ಎಂದು ಅಖಿಲ ಬೀದಿಗಿಳಿದಳು….. ಅವಳ ಕೈಯ ಟೀ ಲೋಟ ಹಾಗೆಯೇ ತಣ್ಣಗಾಯಿತು. ಅವಳು ನೆನಪಿನಾಳಕ್ಕೆ ಜಾರಿದಳು.

….. ಯೂಸುಫ್ ಆಗಿನ್ನೂ ಚಿಕ್ಕ ಹುಡುಗ. ಈಗಿನಷ್ಟು ಸಂತೃಪ್ತಿ ಆಗ ಅವನಿಗಿರಲಿಲ್ಲ. ಯಾವಾಗಲೂ ಹಸಿವು ಅವನಿಗೆ. ಅವನ ಹಸಿವನ್ನು ತಣಿಸುವ ಯಾವ ವಿಧಾನವೂ ಅರಿಯದ ಮೆಹಬೂಬ್ ಬೀ ಇದ್ದ ತಂಗಳನ್ನೆಲ್ಲಾ ಅವನಿಗಾಗಿಯೇ ಮುಡುಪಿಡುತ್ತಿದ್ದಳು. ಹೀಗಿದ್ದರೂ ಗಬಗಬನ ಮುಕ್ಕುತ್ತಿದ್ದ ಅವನು ಇನ್ನಷ್ಟು…. ಮತ್ತಷ್ಟು ಬೇಕೆಂದು ವರಾತ ತೆಗೆಯುತ್ತಿದ್ದ. ಹೀಗಾಗಿ ಮೆಹಬೂಬ್ ಬೀ ಒಂದು ಮಾರ್ಗವನ್ನು ಹೆಕ್ಕಿ ತೆಗೆದಿದ್ದಳು… ಊಟದ ತಟ್ಟೆಯನ್ನು ಅವನೆದುರಿಗೆ ಇಟ್ಟು….. ಮೆಲ್ಲನೆ ಒಂದು ಕಥೆಯನ್ನು ಆರಂಭಿಸುತ್ತಿದ್ದಳು. ಅವನಿಗೆ ಮೆಚ್ಚಿನ ಕಥೆಯೆಂದರೆ ‘ಹಾತಿಮ್ ತಾಯಿ’ಯದು. “ಒಂದೂರಿನಲ್ಲಿ ಒಬ್ಬ ರಾಣಿ ಇದ್ದಳು. ಅವಳಿಗೆ ತನ್ನ ಸೌಂದರ್ಯದ ಬಗ್ಗೆ ತುಂಬಾ ಅಹಂಕಾರವಿತ್ತು. ಅವಳ ಪ್ರೀತಿಗಾಗಿ ಒಂದು ಹಿಂಡು ಗಂಡಸರೇ ಅವಳ ಹಿಂದೆ ಸುತ್ತುತ್ತಿದ್ದರು. ಆದರೆ ಅವಳು ಮಾತ್ರ ಯಾರ ಕೈ ವಶವೂ ಆಗದೆ…. ಯಾರನ್ನೂ ಮೆಚ್ಚದೆ…… ಎಲ್ಲರನ್ನೂ ತನ್ನ ಕಿರುಬೆರಳಿನ ಸುತ್ತಾ, ತಿರುಗಿಸುತ್ತಿದ್ದಳು. ತನ್ನನ್ನು ಮೆಚ್ಚಿ ಬಂದ ಗಂಡಸರಿಗೆಲ್ಲಾ ಅಸಾಧ್ಯವಾದ ಕೆಲಸಗಳನ್ನು ಹೇಳಿ ಅವರು ತೊಂದರೆ ಅನುಭವಿಸುವುದನ್ನು ನೋಡಿ ಸಂತೋಷಪಡುವುದು ಅವಳ ಕೆಲಸವಾಗಿತ್ತು…..”

‘ಹೂಂ….. ಹೂಂ….’ ಎಂದು ಹೂಂಗುಟ್ಟುತ್ತಿದ್ದ ಯೂಸುಫ್‌ನ ಧ್ಯಾನವೆಲ್ಲಾ ಈ ವೇಳೆಗಾಗಲೇ ಕಥೆಯ ಕಡೆಯಾಗಿದ್ದು, ಅವನ ಕೈ ಮಾತ್ರ ರೊಟ್ಟಿಯ ಮೇಲಿರುತ್ತಿತ್ತು…… ಅವಳು ಕಥೆಯನ್ನು ನಿಧಾನಿಸಿದಾಗಲೆಲ್ಲಾ ಅವನು ಅಸಹನೆಯಿಂದ ಜೋರಾಗಿ ‘ಹೂಂ….’ ಎನ್ನುತ್ತಿದ್ದ. ಅವಳು ಎಚ್ಚೆತ್ತವಳಂತೆ ತನ್ನ ಕಥೆಯನ್ನು ಮುಂದುವರೆಸುತ್ತಿದ್ದಳು. “ಒಂದು ದಿನ ಒಬ್ಬ ಸೇನಾಪತಿ ಅವಳನ್ನು ಕಂಡ ಕೂಡಲೇ ಅವನು ತನ್ನನ್ನೇ ಮರೆತುಬಿಟ್ಟ. ಅವಳ ಹಿಂದೆಯೇ ಹುಚ್ಚನಾಗಿ ಹೋದ….. ಅವಳನ್ನು ಒಲಿಸಿಕೊಳ್ಳಲು ಅನೇಕ ವಿಧದಲ್ಲಿ ಪ್ರಯತ್ನಿಸಿದ. ಅವಳು ಅವನನ್ನು ‘ಕ್ಯಾರೆ’ ಅನ್ನಲಿಲ್ಲ. ಬದಲಿಗೆ ಅವನನ್ನು ಲೇವಡಿ ಮಾಡಬೇಕೆಂದು ‘ನೋಡು ನಾನು ನಿನ್ನನ್ನು ಒಲಿಯಬೇಕೆಂದರೆ ನೀನು ನಿನ್ನ ತಾಯಿಯ ಹೃದಯವನ್ನು ನನಗೆ ಉಡುಗೊರೆಯಾಗಿ….ತಾ’ ಎಂದು ಅಪ್ಪಣೆ ಮಾಡಿದಳು. ಆ ಸೇನಾಪತಿ ತನ್ನೂರಿಗೆ ಹೋದ. ತಾಯಿಯ ಮುಖ ನೋಡಿದ. ಇನ್ನಿವಳಿಗೆ ಈ ವಿಷಯ ಹೇಗೆ ಹೇಳುವುದಪ್ಪಾ……. ಎಂದು ಮನೋರೋಗ ಹಚ್ಚಿಕೊಂಡು ಮುಖ ಅಡಿಯಾಗಿ ಬಿದ್ದುಬಿಟ್ಟ. ಈ ವಿಷಯ ತಾಯಿಗೆ ತಿಳಿಯಿತು. ಮಗನ ಹತ್ತಿರ ಹೋಗಿ ‘ಅಯ್ಯೋ…. ನನ್ನ ಮಗನೆ…. ಈ ಮುದಿ ಜೀವಾನ ನಾನಿಟ್ಕೊಂಡು ಏನ್ಮಾಡಬೇಕಿದೆ….. ನಿನ್ನ ಸುಖ ಸಂತೋಷಕ್ಕಲ್ಲದೆ….. ಇನ್ನು ಯಾತರ ಪ್ರಯೋಜನ ಈ ಜೀವ…… ಈ ಹೃದಯ….. ನೀನೇನೂ ಚಿಂತೆ ಮಾಡದೆ ತಗೋ…..ಈ ಹೃದಯಾನ” ಎಂದಳು. ಆ ಮೂರ್ಖನಿಗೆ ಆವಾಗಲಾದರೂ ಬುದ್ದಿ ಬರಬೇಡವೇ….” ಈ ವೇಳೆಗಾಗಲೇ ಯೂಸುಫ್‌ನ ಕಣ್ಣಾಲಿಗಳು ತುಂಬಿ ಬಂದಿರುತ್ತಿದ್ದವು….. ಅವಳು ತನ್ನನ್ನು ತಾನೇ ಹಳಿದುಕೊಳ್ಳುತ್ತಾ ಮಗನಿಗೆ ಹೊಟ್ಟೆ ತುಂಬಾ ಅನ್ನವಿಕ್ಕದೆ ಇರುವ ತನ್ನ ದೌರ್ಭಾಗ್ಯವನ್ನು ದೂರುತ್ತಾ ಕಥೆ ಯನ್ನು ಒಳಗೊಳಗೆಯೇ ನುಂಗಿಕೊಳ್ಳಲು ಪ್ರಯತ್ನಿಸುವಳು. ಆದರೆ ಅವನು ಬಿಡ ಬೇಕಲ್ಲಾ….. “ಅಮ್ಮಾ ಹೇಳಮ್ಮಾ….ಮುಂದೆ ಹೇಳಮ್ಮಾ….” ಎಂದು ಗೋಗರೆಯುವನು.

“ಆಮೇಲೆ….. ಆ ಸೇನಾಪತಿ ತನ್ನ ತಾಯಿಯನ್ನು ಕೊಂದು ಅವಳ ಬಿಸಿಬಿಸಿ ಹೃದಯವನ್ನು ತನ್ನ ಕೈಯಲ್ಲಿ ಹಿಡಿದು, ಆ ರಾಣಿಯ ಹತ್ತಿರ ಓಡುತ್ತಾನೆ. ಹಾಗೆ ಓಡುತ್ತಿರುವಾಗ ಅವನು ಎಡವಿ ಬೀಳುತ್ತಾನೆ. ಬಿದ್ದ ಕೂಡಲೇ ಅವನ ಕೈಯಲ್ಲಿದ್ದ ಅವನ ತಾಯಿಯ ಹೃದಯ ಒಮ್ಮೆಲೇ ಮಿಡುಕುತ್ತದೆ ಮತ್ತು ಆ ಸೇನಾಪತಿಯನ್ನು ಕೇಳುತ್ತದೆ “ಅಯ್ಯೋ…… ನನ್ನ ಕಂದ….. ಪೆಟ್ಟು ಬಿತ್ತೇನಪ್ಪಾ….. ನಿಧಾನವಾಗಿ ಹೋಗು ನನ್ನ ಮಗುವೇ…” ಈ ಕಥೆಯನ್ನು ಮುಗಿಸುವಷ್ಟರಲ್ಲಿಯೇ ಮೆಹಬೂಬ್ ಬೀಯ ಕಣ್ಣುಗಳು ಕೂಡ ಹನಿಗೂಡಿರುತ್ತಿದ್ದವು….. ಕಥೆಯ ಕರುಣಾಜನಕ ಅಂತ್ಯಕ್ಕೋ….. ಅಥವಾ ಮಗ ಅರಹೊಟ್ಟೆಯಲ್ಲಿಯೇ ಕೈ ತೊಳೆದಿದ್ದಕ್ಕೋ…. ಮುಂದುವರಿದಂತೆ ಹಾತಿಮ್ ತಾಯ್ ಆ ರಾಣಿಗೆ ಬುದ್ಧಿ ಕಲಿಸಿದ್ದರಲ್ಲಿ ಅವನಿಗೆ ಯಾವುದೇ ಆಸಕ್ತಿ ಉಳಿಯುತ್ತಿರಲಿಲ್ಲ.

ಮೆಹಬೂಬ್ ಬೀ ಇನ್ನೂ ತನ್ನ ನೆನಪಿನಿಂದ ಹೊರ ಬಂದಿರಲಿಲ್ಲ. ಅಷ್ಟರಲ್ಲಿಯೇ ಆಖಿಲ ನಾಲ್ಕಾರು ಜನರೊಂದಿಗೆ ಒಳ ಬಂದಳು. ಅಂಗಡಿಯ ಬುಡೇನ್ ಸಾಬ್, ಮಹಡಿ ಮನೆಯ ಸಾಲಾರ್ ಸಾಬ್, ಕೌನ್ಸಿಲರ್ ಮಹಮ್ಮದ್‌ನ ಹೆಂಡತಿ ಬೇಗಮ್, ಮೊಹಲ್ಲಾದ ವಯೋವೃದ್ಧೆ ಹಾಫಿಜಬೀ….. ಇನ್ನು ಯಾರು ಯಾರೋ….. ತನ್ನ ಆಪ್ತ ಲೋಕದಿಂದ ಮೆಹಬೂಬ್ ಬೀ ಇನ್ನೂ ಹೊರಬಂದಿರಲಿಲ್ಲ….. ಆದರೂ ಅವಳು ಬಂದವರನ್ನು ಗಮನಿಸಿ ತಾನು ಕುಳಿತಿದ್ದ ಕುರ್ಚಿಯಿಂದ ನಿಧಾನವಾಗಿ ಎದ್ದು, ಗೋಡೆಗೊತ್ತರಿಸಿ ನಿಂತಳು. ಆಖಿಲ ಸಟಸಟನೆ ಓಡಾಡಿ ಗಂಡಸರತ್ತ ಕುರ್ಚಿಯನ್ನು ಸರಿಸಿ ಇಟ್ಟು ಬಂದ ಹೆಂಗಸರು ಕುಳಿತುಕೊಳ್ಳುವಂತೆ ಚಾಪೆಯನ್ನು ಹಾಸುತ್ತಾ ಮನೆ ತುಂಬಾ ಓಡಾಡತೊಡಗಿದಳು.

ಬಂದವರು ಆರಂಭಿಸಲಿ ಎಂದು ಮೆಹಬೂಬ್ ಬೀ….. ಈ ಎಲ್ಲಾ ಗೊಂದಲ ಒಮ್ಮೆ ಮುಗಿದರೆ ಸಾಕೆಂದು ಆಖಿಲ…. ಇಂಥ ಸೂಕ್ಷ್ಮ ಸನ್ನಿವೇಶದ ಪ್ರಸ್ತಾಪ ಹೇಗೆ ಮಾಡುವುದೆಂದು ಬಂದವರು….. ಏನೋ ಗಂಭೀರವಾದುದು ಘಟಿಸಲಿದೆ ಎಂಬ ನಿರೀಕ್ಷೆಯಲ್ಲಿ ತಮ್ಮ ಎಂದಿನ ಚಟುವಟಿಕೆಗಳನ್ನು ಮರೆತ ಮಕ್ಕಳು…… ಕೊನೆಗೆ ಬಾಯಿ ಬಿಟ್ಟವಳು ಬೇಗಮ್, ಸಾಕಷ್ಟು ವಯಸ್ಸಾಗಿದ್ದರೂ ವಯ್ಯಾರದ ಹಾವ ಭಾವಗಳಿಗೆ, ಕೊಂಕು ನುಡಿಗಳಿಗೆ ಹೆಸರುವಾಸಿಯಾಗಿದ್ದು, ಎಂಥಹದೇ ಪ್ರಸಂಗವನ್ನಾದರೂ ನಿಭಾಯಿಸುವ ಸಾಮರ್ಥ್ಯವಿದ್ದ ಮತ್ತು ಕೆಲವು ವೇಳೆಗಳಲ್ಲಿ ಹೆಂಗಸರ ಪರವಾಗಿ ನಿಂತು ಮುಲಾಜಿಲ್ಲದೆ ಎಲ್ಲರನ್ನೂ ಎದುರಿಸುವ ತಾಕತ್ತಿದ್ದ ಬೇಗಮ್ ದೇಶಾವರಿ ನಗೆಯನ್ನು ಬೀರುತ್ತಾ “ಬಾರವ್ವ…. ಅಲ್ಯಾಕೆ ನಿಂತೆ….. ಕೂತ್ಕೊಬಾ….” ಎಂದು ಕರೆದಳು. ಮೆಹಬೂಬ್ ಬೀ ಸ್ವಲ್ಪ ಬಿಗುಮಾನದಿಂದ ನಿಂತಲ್ಲೇ ನಿಂತಿದ್ದಳೆ ವಿನಃ ಏನೂ ನುಡಿಯಲಿಲ್ಲ…. ಇನ್ನೂ ಗಾಢವಾದ ಮೌನ ಕವಿಯಿತು.

ತಾನೇ ಹೋಗಿ ಕರೆದು ಬಂದ ಹೊಣೆಗಾರಿಕೆಯಿಂದ ಅಖಿಲಳೇ ಮೌನದ ಮೊನೆ ಮುರಿದಳು. ಅಡಿಗೆ ಮನೆಯ ಬಾಗಿಲಿಗೆ ಇಳಿ ಬಿದ್ದಿದ್ದ ಪರದೆಯ ಹಿಂದಿನಿಂದ ಅವಳು ಪಶ್ಚಾತ್ತಾಪ ತುಂಬಿದ ಧ್ವನಿಯಲ್ಲಿ ಆರಂಭಿಸಿದಳು “ಅಲ್ಲಾ ನನ್ನನ್ನು ಕ್ಷಮಿಸಲಿ. ಶೈತಾನ ತನ್ನ ತಲೆಯೊಳಗೆ ಹೊಕ್ಕಿದ್ದ. ನಾನು ನನ್ನ ಅತ್ತೆಯ ವಿಷಯವನ್ನೇ ನೆಪಮಾಡಿಕೊಂಡು ಜಗಳವಾಡುತ್ತಿದ್ದೆ. ನಮ್ಮ ಮನೆಯವರಿಗೂ ಸಾಕಷ್ಟು ತೊಂದರೆ ಕೊಡುತ್ತಿದ್ದೆ, ಅದರಿಂದ ಯಾರಿಗೂ ಸುಖವಿರಲಿಲ್ಲ, ಬೀ ಅಮ್ಮಾ ನನ್ನ ಯಾವ ತಂಟೆಗೆ ಬಾರದೆ ಅವರಷ್ಟಕ್ಕೆ ಅವರೇ ಇದ್ದರೂ…. ನಾನು ಅವರನ್ನು ನೆಮ್ಮದಿಯಿಂದ ಇರಲು ಅವಕಾಶ ಮಾಡಿಕೊಡುತ್ತಿರಲಿಲ್ಲ….. ಇದು ನನ್ನ ಮೂರ್ಖತನವಷ್ಟೇ….”

ಅವಳ ಮಾತಿನ್ನೂ ಮುಗಿದಿರಲಿಲ್ಲ…. ಆಟೋದಲ್ಲಿ ಸಾಮಾನನ್ನು ಹೇರಿಕೊಂಡು ಬಂದ ಯೂಸುಫ್ ಬಾಗಿಲಿಗೆ ಬಂದ. ಒಂದು ಕ್ಷಣ….. ಮನೆಯಲ್ಲಿ ಸೇರಿದ್ದ ಜನ…….” ಉಸಿರುಗಟ್ಟಿದ ವಾತಾವರಣ…. ಗೋಡೆಗೊರಗಿ ನಿಂತ ತಾಯಿ… ಮಾತನಾಡುತ್ತಿದ್ದ ಅಖಿಲಾ ತನ್ನನ್ನು ಕಂಡೊಡನೆಯೇ ಮಾತನ್ನು ಹಾಗೆಯೇ ನುಂಗಿಕೊಂಡ ಪರಿ….. ಇವುಗಳನ್ನು ನೋಡಿಯೇ….. ಇದೇನೋ…… ಅಖಿಲಾಳ ಕಾರುಬಾರು ಎಂದು ಅವನಿಗನಿಸಿತು, ಜೊತೆ ಜೊತೆಯಲ್ಲಿಯೇ ಇದೇನೋ ಮದುವೆಗೆ ಸಂಬಂಧಪಟ್ಟ ವಿಷಯವೇ ಎಂದು ಅವನಿಗೆ ಹೊಳೆದುಬಿಟ್ಟಿದ್ದರಿಂದ ಅವನು ಜಾಗರೂಕನಾಗಿಬಿಟ್ಟ…. ಅಲ್ಲಿದ್ದವರನ್ನು ಉದ್ದೇಶಿಸಿ ಬಹಳ ಶಾಂತವಾಗಿ ‘ಅಸ್ಸಲಾಮ್-ವ-ಅಲೈಕುಮ್’ ಎಂದವನೇ ಹೊರಗಡೆ ಬಂದು ಆಟೋದಿಂದ ಸಾಮಾನನ್ನು ಇಳಿಸತೊಡಗಿದ.

ಪರಿಸ್ಥಿತಿಯನ್ನು ಮತ್ತೆ ಹತೋಟಿಗೆ ತೆಗೆದುಕೊಂಡವಳು….. ಬೇಗಮ್. “ಯೂಸುಫ್…. ಬಾಪ್ಪ ಇಲ್ಲಿ…. ನಿನ್ನ ಜೊತೆಯಲ್ಲಿ ಸ್ವಲ್ಪ ಮಾತನಾಡಬೇಕಾಗಿದೆ” ಎಂದು ಕರೆದಾಗ ಅವನು ಸಾವಧಾನವಾಗಿಯೇ ಎಲ್ಲಾ ಸಾಮಾನುಗಳನ್ನು ಇಳಿಸಿ, ಆಟೋದವನಿಗೆ ದುಡ್ಡನ್ನೆಣಿಸಿ ಒಳ ಬಂದ. “ಕೂತ್ಕೊ ಬಾ ಇಲ್ಲಿ” ಎಂಬ ಆಕೆಯ ಕರೆಯನ್ನು ಕೇಳಿದರೂ ಕೇಳದಂತೆ, ತಾಯಿ ನಿಂತಿದ್ದನ್ನು ಗಮನಿಸಿ ಅಪಾರವಾದ ಸಿಟ್ಟು ಬಂದರೂ ತಡೆದುಕೊಂಡು ತಾನೂ ನಿಂತುಕೊಂಡ.

“ಏನೋ ಮನೆಯಲ್ಲಿ ಸ್ವಲ್ಪ ತೊಂದರೆ ಅಂತಾ ನಿನ್ನ ಹೆಂಡತಿ ಹೇಳಿದಳಪ್ಪಾ…. ಅದಕ್ಕೇ ವಿಚಾರಿಸೋಣವೆಂದು ಬಂದಿದೀವಿ” ಎಂದು ಸಾಲಾರ್ ಸಾಹೇಬರು ತಮ್ಮ ಬರುವಿಗೆ ವಿವರಣೆ ನೀಡಿದರು.

“ಓಹೋ…. ತೊಂದರೆಯಂತಾ ಅವಳಿಗೆ….. ಹಾಗಿದ್ದರೆ… ಅವಳು ಹೇಳಲಿ ; ತಾವೆಲ್ಲಾ ಸರಿಪಡಿಸಿ” ಎಂದು ಅದು ತನಗೆ ಸಂಬಂಧಪಡದ ವಿಷಯವೆಂಬಂತೆ ಅವನು ಹೇಳಿದರೂ ‘ಅವಳ ತೊಂದರೆ ನಿವಾರಿಸುವ ಸಲುವಾಗಿಯೇ ಇದೆಲ್ಲಾ ಮಾಡ್ತಿದೀನಲ್ಲಾ…. ಇನ್ನೇನು ಗುನುಗು ಅವಳಿಗೆ’ ಎಂದು ಕೊಂಡು ಮನಸ್ಸೆಲ್ಲಾ ಕಹಿ ತುಂಬಿದ್ದರೂ ಅದನ್ನು ಪ್ರಕಟಗೊಳಿಸಲಿಲ್ಲ.

ಯೂಸುಫ್‌ನ ಧ್ವನಿಯ ವ್ಯಂಗ್ಯವನ್ನು ಗಮನಿಸಿದರೂ ಅದನ್ನು ಸಮಾಧಾನವಾಗಿಯೇ ತೆಗೆದುಕೊಂಡ “ಅಮ್ಮಾ ಅಖಿಲ…. ಅದೇನು ಹೇಳ್ಬೇಕೂಂತಿದೀಯೋ ಅದನ್ನ ನಿನ್ನ ಗಂಡನ ಎದುರಿಗೆ ಹೇಳು ತಾಯಿ….. ಮುಖ್ಯ ಅವನ ಮನಸ್ಸು ತಿಳಿಯಾಗಬೇಕು” ಎಂದರು. ಅಖಿಲಳ ಕಣ್ಣುಗಳು ತುಂಬಿಬಂದವು. ಈ ಎಲ್ಲಾ ಬೆಳವಣಿಗೆಗಳಿಂದ ಅವಳು ನಿಜವಾಗಿಯೂ ಆತಂಕಕ್ಕೊಳಗಾಗಿದ್ದಳು. “ಈ ವಿಷಯ ತಮ್ಮೆಲ್ಲರಿಗೆ ತಿಳಿದುರವಂತಹದೇ ಆಗಿದೆ. ಹಿಂದೆ ಅನೇಕ ಸಾರಿ ತಾವುಗಳೇ ಈ ಬಗ್ಗೆ ತೀರ್ಮಾನ ಮಾಡಿದ್ದೀರಿ. ಆದರೆ ಆಗಲೂ ಕೂಡ ನನಗೆ ತಿಳುವಳಿಕೆ ಬರಲಿಲ್ಲ. ನನ್ನ ಜಗಳ ತಾಳಲಾರದೆ ನಮ್ಮ ಯಜಮಾನರು ಅವರ ತಾಯಿಗೆ ಮದುವೆ ಮಾಡಲು ಹೊರಟಿದ್ದಾರೆ…. ನಾಳೆಯೇ ನಿಕಾಹ್…” ಕೊನೆಯ ಮಾತುಗಳನ್ನಾಡುವಾಗ ಅವಳ ಕಂಠ ರುದ್ಧವಾಯಿತು. ಕ್ಷಣ ಕಾಲ ತಡೆದು ಅವಳು ಮತ್ತೆ ಆರಂಭಿಸಿದಳು. “ನನ್ನಿಂದ ಮಹಾ ಅಪರಾಧವಾಗಿದೆ, ನಾನು ಅವುಗಳನ್ನೆಲ್ಲಾ ಸರಿಪಡಿಸಿಕೊಳ್ತೀನಿ. ನನ್ನ ಅತ್ತೆಯೆಲ್ಲಾ ತಾಯಿ ಅಂತ ಅವರನ್ನ ನಾನು ನೋಡಿಕೊಳ್ತೀನಿ ; ಆಗಿ ಹೋಗಿರೋ ನನ್ನ ಎಲ್ಲಾ ತಪ್ಪುಗಳನ್ನು ಹೊಟ್ಟೆಗೆ ಹಾಕಿಕೊಂಡು ನಮ್ ಸಂಸಾರಾನ ನೇರ ಮಾಡ್ಕೊಡಿ…. ನೀವು ತಿಳಿದೋರು…..” ತುಂಬಿ ಬಂದಿದ್ದ ಅವಳ ಕಣ್ಣುಗಳು ಹರಿದುಹೋದವು.

ಯೂಸುಫ್ ಅವಕ್ಕಾಗಿಬಿಟ್ಟ. ಈಕೆ…. ಈಕೆಯೇ ಆ ಅಖಿಲಳೇ?…… ಈಕೆಯೇ ತನ್ನಮ್ಮನಿಗೆ ಸವತಿ ಅಂದವಳೇ….. ಈಕೆಯೇ ಆಡಬಾರದ್ದನ್ನೆಲ್ಲಾ ಅಂದು ತನ್ನೆದೆಗೆ ಕಿಚ್ಚನ್ನಿಟ್ಟವಳೇ….. ಈಕೆಯೇ….. ತನ್ನ ಅನೇಕ ರಾತ್ರಿಗಳ ನಿದ್ರೆಯನ್ನು ದೂರ ಅಟ್ಟಿದವಳೇ…. ಈಕೆಯೇ ತನ್ನ ಅನೇಕ ಹಗಲುಗಳ ನೆಮ್ಮದಿಯನ್ನೂ, ಸಂತೋಷವನ್ನೂ ನಾಶ ಮಾಡಿದವಳೇ…. ಅವನು ಅವಳ ಪ್ರಾಮಾಣಿಕತೆಯ ಬಗ್ಗೆ ಶಂಕಿಸುವುದಿರಲಿ ; ತಾಯಿಯ ಮನಸ್ಸಿನ ಸ್ಥಿತಿಯ ಬಗ್ಗೆ ಊಹಿಸಿಯೇ ಅಸ್ವಸ್ಥನಾಗಿಬಿಟ್ಟ. ಅವಳ ನಾಟಕ ಅವನನ್ನು ಸ್ತಬ್ಧನನ್ನಾಗಿಸಿತು.

ತಾಯಿ ಒಂದೆಡೆ ಮೌನ ; ಅವನೊಂದು ಕಡೆ ಬಾಯಿ ಕಳೆದುಕೊಂಡು ಬಿಟ್ಟಿದ್ದ. ಅಸಹನೆಯ ಆಗರ…. ಮಾತ್ಸರ್ಯದ ಕುಲುಮೆ…. ಅಖಿಲ ಇಂದು ತನ್ನ ತಪ್ಪೋಪ್ಪಿಕೊಂಡು ಸಂತಳಂತೆ ಆಡುತ್ತಿರುವ ಈ ಪರಿ…., ಈ ಮುಖ ಅವನಿಗೆ ಅಪರಿಚಿತವಾದುದು. ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲಿ ಕುಟುಂಬದವರೇ ಭಾವನಾತ್ಮಕ ಬಿರುಕನ್ನೊದಗಿಸಿದರೆ ಒಳ ನುಸುಳಬಹುದೆಂದು ಪಂಚಾಯಿತಸ್ತರ ನಿರೀಕ್ಷೆ, ಆದರೆ ತಾಯಿ – ಮಗ ಇಬ್ಬರೂ ಮೊದಲೇ ಮಾತನಾಡಿಕೊಂಡಿದ್ದಂತೆ, ಮೊದಲೇ ಸನ್ನದ್ಧರಾದಂತ ಅಸೀಮ ಮೌನದ ಪ್ರತೀಕಗಳು.

ಅಖಿಲಳೇ ಮುಂದುವರೆಸಿದಳು, “ಇನ್ನು ಒಂದೇ ಒಂದು ತಪ್ಪು ಕೂಡ ನನ್ನಿಂದಾದರೂ ನೀವು ಹೇಳಿದ ಶಿಕ್ಷೆಗೆ ನಾನು ತಯಾರು. ನನ್ನ ಮೂರ್ಖತನಕ್ಕೆ ಸರಿಯಾದ ಶಿಕ್ಷೆಯಾಗಿದೆ….” ಮುಂದಿನ ಶಬ್ದಗಳು ಅಸ್ಪಷ್ಟ ಗೊಣಗುವಿಕೆಯಲ್ಲೇ ತೇಲಿಹೋದವು. ಬೇಗಮ್ ಎಲ್ಲರನ್ನೂ ಒಮ್ಮೆ ಅತ್ಯಂತ ಗಂಭೀರವಾಗಿ ನಿರುಕಿಸಿ ನುಡಿದಳು. “ಯೂಸುಫ್….. ಮನೆ ಅಂದರೆ ಒಂದು ಮಾತು ಬರುತ್ತೆ….. ಒಂದು ಮಾತು ಹೋಗುತ್ತೆ…. ಅದಕ್ಕೆ ಯಾರಾದರೂ ಹೀಗೆ ರಣಾ ರಂಪ ಮಾಡುತ್ತಾರೆಯೇ….. ನಿನಗೆ ಗೊತ್ತಿರಬೇಕಪ್ಪ ಹೆಂಡ್ತೀನ ಹೇಗೆ ನಿಭಾಯಿಸ್ಬೇಕು…. ತಾಯೀನ ಹೇಗೆ ನೋಡೋಬೇಕೂಂತ…”

ಬುಡೇನ್ ಸಾಹೇಬರು ಮೂತಿ ತೂರಿಸಿದರು, “ಅಲ್ವೇ ಮತ್ತೆ….. ಸವಾರ ಮೊದಲು ಸರಿಯಾಗಿರ್‍ಬೇಕು. ಅವನೊಬ್ಬ ಸರಿಯಾಗಿದ್ದರೆ, ಎಂಥ ಕುದುರೇನ ಬೇಕಾದರೂ ಪಳಗಿಸಿ ಸವಾರಿ ಮಾಡ್ಬೋದು….” ಮೆಹಬೂಬ್ ಬೀ ಒಮ್ಮೆ ಕಣ್ಣೆತ್ತಿ ಮಗನತ್ತ ದೃಷ್ಟಿ ಹಾಯಿಸಿದಳು. ಅವನ ಹಣೆಯ ಮೇಲೆಲ್ಲಾ ಬೆವರ ಹನಿಗಳು…. ‘ತುಂಬಾ ಬೆವರುತಿದ್ದಾನೆಂದೆನಿಸಿತವಳಿಗೆ. ಅವನು ಒಳಗೊಳಗೇ ತುಂಬಾ ಅಸಹಾಯಕನಾಗಿಬಿಟ್ಟಿದ್ದ. ಕೋಪವೆಲ್ಲೋ ಲಯವಾಗಿಬಿಟ್ಟಿದ್ದು…… ದೈನ್ಯತೆ ಅವನ ಮೋರೆಯ ಮೇಲೆ ಎದ್ದು ಕಾಣುತ್ತಿತ್ತು. ತಾಯಿಯನ್ನು ಮದುವೆ ಮಾಡಿಕೊಡುವುದಾಗಿ ಅವಳಿಗರಿವಿಲ್ಲದಂತೆ ಮಾತು ನೀಡಿದ್ದ. ಈ ವಿಷಯವನ್ನು ಅತ್ಯಂತ ನಾಜೂಕಿನಿಂದ ತಾಯಿಯ ಗಮನಕ್ಕೆ ತರಬೇಕೆನ್ನುವಷ್ಟರಲ್ಲಿಯೇ ಅಖಿಲಾ ಒರಟೊರಟಾಗಿ ತಾಯಿಯೇ ಈ ಮದುವೆಯನ್ನು ತಿರಸ್ಕರಿಸುವ ಮಟ್ಟಕ್ಕೆ ತಂದಿಟ್ಟುಬಿಟ್ಟಿದ್ದಾಳೆ. ಹೆಂಡತಿಯ ಒತ್ತಡಕ್ಕೆ ಮಣಿದು, ತನ್ನನ್ನು ದೂರ ಮಾಡಲು ಮಗ ಮದುವೆಯಂಥ ಪ್ರಯತ್ನಕ್ಕೆ ಕೈಹಾಕಿದ ಎಂದು ಅಮ್ಮ ತಿಳಿದುಕೊಂಡರೆ….. ದುಃಖ ಪಟ್ಟರೆ…. ತನ್ನ ಮುಖದ ಮೇಲೆ ಉಗಿದು ತುಮಕೂರಿಗೆ ಹೋಗಿಬಿಟ್ಟರೆ….. ಶಾಶ್ವತವಾಗಿ ಅಮ್ಮ ತನ್ನನ್ನು ತೊರದಂತೆಯೇ ಸರಿ.

ಅವನಿಗೆ ಅಳು ಕೂಡ ಬರಲಿಲ್ಲ. ಆಶ್ರು ಮೂಡುವುದು ಬರೀ ಕಣ್ಣುಗಳಿಂದ ಮಾತ್ರವಲ್ಲವೇ….. ಅವನಂತೂ ದೇಹದ ಕಣಕಣಗಳಿಂದಲೂ ಒಸರುತ್ತಿದ್ದ ; ಮುಖ ಕೆಂಪೇರಿಬಿಟ್ಟಿತ್ತು, ಹಣೆಯ ಮೇಲೆ ಮೂಡಿದ ಬೆವರು ಧಾರಾಕಾರವಾಗಿ ಹರಿದು ತೊಟ್ಟಿಕ್ಕತೊಡಗಿತು. ಅವನ ಸಮಸ್ತ ಚೈತನ್ಯವೂ ಒಗ್ಗೂಡಿ ಅತ್ಯಂತ ಆರ್ತತೆಯಿಂದ ಮೊರೆಯಿಡತೊಡಗಿತು. ‘ಅಮ್ಮಾ….. ಅಮ್ಮಾ…. ನನ್ನನ್ನು ಅರ್ಥ ಮಾಡಿಕೊಳ್ಳಮ್ಮಾ….. ಇವಳ ಕಾಟಕ್ಕೆ ನಾನು ನಿನ್ನನ್ನು ದೂರ ಮಾಡ್ತಿಲ್ಲಮ್ಮ, ಅವಳ ಮೇಲಿನ ಸೇಡಿಗೂ ಮಾಡ್ತಿಲ್ಲ…. ಬದಲಿಗೆ ನೀನು ಸುಖವಾಗಿರಬೇಕೂಂತ…. ಈ ನರಕದಿಂದ ನಿನಗೆ ಬಿಡುಗಡೆ ಯಾಗಲೀಂತ…. ನಿನಗೆ ನೆಮ್ಮದಿ ಸಿಗಲೀಂತ ಮಾಡಿದೆನಮ್ಮಾ…’ ಅವನು ಇಡಿಯಾಗಿ ಅವಳೊಡನೆ ಸಂಪರ್ಕಿಸಲು ಪ್ರಯತ್ನ ಪಡುತ್ತಿದ್ದ…. ಆದರೆ ಅವರಿಬ್ಬರೂ ಶಿಲೆಗಳಾಗಿಬಿಟ್ಟಿದ್ದರು. ಈ ಲೋಕದ ಪರಿವೆಯೇ ಅವರಿಗಿರಲಿಲ್ಲ. ಯೂಸುಫ್‌ನ ಹೃದಯ ಕರಗಿ ನೀರಾಗಿ ಹರಿದು ಹೋಗುತ್ತಿತ್ತು. ಕ್ಷಣ ಕ್ಷಣವಾಗಿ ಅವನು ಛಿದ್ರಗೊಳ್ಳುತ್ತಿದ್ದ. ಎಲ್ಲಕ್ಕಿಂತ ಹೆಚ್ಚಾಗಿ ಅವನ ಆತ್ಮಬಲ ಕುಗ್ಗುತ್ತಿತ್ತು. ಎಂದೂ ಇಲ್ಲದ ಭಯ ಅವನನ್ನು ಆವರಿಸಿಕೊಂಡು, ಬಾಲ್ಯದ ಅವನ ಹಸಿವು ಬೃಹದಾಕಾರವಾಗಿ ಅವನನ್ನು ನುಂಗುವಂತೆ ಬಾಯ್ದೆರೆದುಕೊಂಡು ಅವನೆದುರಿಗೆ ಬರಲಾರಂಭಿಸಿತು. ಅವನೊಮ್ಮೆ ತಲೆ ಕೊಡವಿಕೊಂಡ….. ಅದರಿಂದ ತಪ್ಪಿಸಿಕೊಳ್ಳುವಂತೆ ಅವನ ಧ್ವನಿ…. ಕೈಕಾಲಿನ ಚೈತನ್ಯ ಎಲ್ಲವೂ ಉಡುಗಿ ಹೋಗಿತ್ತು. ಯಾವುದೇ ಪ್ರತಿಭಟನೆಯನ್ನು ತೋರದೆ ಅವನು ಇಂಚಿಂಚು ಭೂಮಿಗಿಳಿಯುತ್ತಿದ್ದ. ….ಆಗಲೇ ವಿಚಿತ್ರವಾದ, ಅತ್ಯಂತ ಪ್ರಶಾಂತವಾದ, ಅವನಿಗೆ ಹತ್ತಿರವಾದ ಆಪ್ತ ಧ್ವನಿಯೊಂದು ಮೂಡಿಬಂದದ್ದು.

“ನೀವೆಲ್ಲಾ ಇದೇನು ಹಗರಣ ಮಾಡ್ತಿದೀರಿ….. ನನಗರ್ಥವಾಗಿಲ್ಲ…”

ಯಾರದು… ? ಯಾವ ದೇವ ಕನ್ಯೆಯ ಭರವಸೆಯ ಆಶಾಕಿರಣ ಸೂಸುವ ನುಡಿಗಳಿವು..?

“ಹೌದು…. ಮದುವೆಯಾಗ್ತಿದೀನಿ…. ತಪ್ಪಲ್ವಲ್ಲ…. ಯಾರ ಮನೇನೂ ಹಾಳು ಮಾಡ್ತಿಲ್ವಲ್ಲ….. ನೀವೆಲ್ಲಾ ಸಂತೋಷ ಪಡ್ಬೇಕು…. ಮಗನೇ ನಿಂತು ಈ ಕಾರ್ಯ ನಡೆಸ್ತಿದಾನೆ…. ಅಭಿಮಾನದಿಂದ….. ಪ್ರೀತಿಯಿಂದ ನಡೆಸ್ತಿದಾನೆ…. ನಾನು ಕಾನ್ಯೆಯೇನೋ ಎನ್ನುವಂತೆ ಸಕಲ ಸಿದ್ಧತೆಯೊಂದಿಗೆ ನೆರವೇರಿಸ್ತಿದಾನೆ. ಅದು ನನ್ನ ಪುಣ್ಯ, ಈ ವಿಚಾರದ ಬಗ್ಗೆ ನೀವೆಲ್ಲಾ ಬಂದು ಕೇಳೊ ಅಗತ್ಯಾನೂ ಇಲ್ಲ…. ನಾವ್ಯಾರೂ ಉತ್ತರಿಸಬೇಕಾದ್ದೂ ಇಲ್ಲ…. ಉಳಿದಂತೆ ನೀವೆಲ್ಲಾ ಮತ್ತು ಈ ಜಮಾತ್‌ನವರು ನಮಗೆ ಬೇಕು ಅದಾನ್ನಾವತ್ತೂ ನಿರಾಕರಿಸೋಲ್ಲ. ಅದಕ್ಕೆ ದಯವಿಟ್ಟು ಎಲ್ಲರೂ ನಾಳೆ ಬೆಳಿಗ್ಗೆ ನನ್ನ ನಿಕಾಹ್‌ಗೆ ಬಂದರೆ ಸಾಕು….”

ಯೂಸುಫ್‌ನ ಬಗ್ಗೆ ಅತ್ಯಂತ ಆಶ್ಚರ್ಯಕರವಾಗಿ ಅವಳ ಮನಸ್ಸು ತಿಳಿಯಾಗಿ ಬಿಟ್ಟಿತ್ತು. ಇದೊಂದು ಗಳಿಗೆಯಲ್ಲಿ ಅತ್ಯಂತ ಉದಾತ್ತತೆ ಪ್ರದರ್ಶಿಸುತ್ತಿರುವ ಅಖಿಲ ಯೂಸುಫ್ ತನ್ನತ್ತ ತಿರುಗಿ ನೋಡಿದರೆ ಸಾಕು ಸಿಡಿಯುವ ಜ್ವಾಲಾಮುಖಿಯಾಗುವಳೆಂಬ ಸತ್ಯದ ಅರಿವು ಅವಳಿಗಿತ್ತು. ಹೀಗಾಗಿ ಆ ಕ್ಷಣದಲ್ಲಿ ಆಕೆ ಕೈಗೊಂಡ ತೀರ್ಮಾನ….. ಅವಳ ಬದುಕಿಗಾಗಿರಲಿಲ್ಲ…. ಬದಲಿಗೆ ಯೂಸುಫ್‌ನ ಬದುಕಿನ ಕ್ಷಣಗಳ ನೆಮ್ಮದಿ ಗೋಸ್ಕರವಾಗಿತ್ತು,

ಸುತ್ತು ಬಳಸಿ ತಮ್ಮನ್ನು ಇಲ್ಲಿಂದ ಎದ್ದು ಹೋಗಿ ಎಂದು ಹೇಳ್ತಿದಾಳೆ ಎಂದರಿತ ಪಂಚಾಯಿತಸ್ಥರು ಅವಳ ಮಾತುಗಳಲ್ಲಿ…. ವರ್ತನೆಗಳಲ್ಲಿ ತಪ್ಪೇನಾದರೂ ಸಿಗುವುದೇ ಎಂದು ಯೋಚಿಸುವಷ್ಟರಲ್ಲಿಯೇ….. ಮೆಹಬೂಬ್ ಬೀ ಮೆಲುವಾಗಿ ನಡೆಯುತ್ತ ಮನೆ ಸೇರಿಯಾಗಿತ್ತು.

ಯೂಸುಫ್ ನಿಧಾನವಾಗಿ ಚೇತರಿಸಿಕೊಂಡ ಇನ್ನೂ ಕುಳಿತೇ ಇದ್ದ ಪಂಚಾಯಿತಸ್ಥರನ್ನು ನೋಡುತ್ತಾ ಅತ್ಯಂತ ಶಾಂತವಾದ ಧ್ವನಿಯಲ್ಲಿ ಮೆಲುವಾಗಿ “ಅಖಿಲ…. ನಿನಗೂ ನಿನ್ನ ಮಕ್ಕಳು ನಿಂತು ಮದುವೆ ಮಾಡುವ ಅದೃಷ್ಟ ನಿನ್ನದಾಗಲಿ ಕಣೇ…” ಎಂದು ಬಾಳಿನುದ್ದದ ಕಹಿಯನ್ನು ಕಕ್ಕಿಬಿಟ್ಟ.

ಅಖಿಲಗೆ ಮಾತ್ರ ಸಿಡಿಲೆರಗಿದಂತಾಯಿತು. ಅವಳು ಮಿಡುಕುತ್ತಾ “ಬೇಡ್ರಿ…. ಬೇಡಿ….. ನನಗೆ ಅಂಥ ಶಾಪ ಕೊಡ್ಬೇಡಿ….” ಎಂದು ಎದುರಿಗೇ ಇದ್ದ ಮುನ್ನಾ ನನ್ನು ಬಾಚಿ ತಬ್ಬಿಕೊಂಡು ಅವನ ಶಾಪದಂತೆಯೇ ನಡೆದುಹೋದರೆ ತನದುರಿಸಬೇಕಾದ ದುರಂತಗಳನ್ನು ನೆನೆದು ಬಿಕ್ಕಿ ಬಿಕ್ಕಿ ಅಳತೊಡಗಿದಳು. ಪಂಚಾಯಿತಸ್ತರು ಕಣ್ಣ ನೋಟದಲ್ಲೇ ಮಾತನಾಡಿಕೊಂಡು ಉಭ ಶುಭ ಏನನ್ನೂ ನುಡಿಯದೆ ಹೊರಗಡಿ ಇಟ್ಟರು. ಇಡೀ ಮನೆಯ ಮೌನವನ್ನು ಭೇದಿಸುತ್ತಿದ್ದ ಅವಳ ಬಿಕ್ಕುವಿಕೆಯನ್ನು ತಡೆಯುವವರಾರೂ ಇರಲಿಲ್ಲ. ಏಕೆಂದರೆ ಯೂಸುಫ್ ಆಗಲೇ ಬೀದಿಗಿಳಿದಿದ್ದ ಮುಂದಿನ ಸಿದ್ದತೆ ನಡೆಸಲು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದಾನ
Next post ಆಕಾಶ(ವ್ವ)

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…