ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ!
ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ ಸಿದ್ಧತೆ ಷುರು ಆಗಿವೆ. ಬ್ಲೀಚಿಂಗ್, ಫೇಷಿಯಲ್, ಹೊಸ ಸೀರೆಗೆ ಫಾಲ್ಸ್ ಹೊಲಿಸೋದು, ಟೈಲರ್ ಹತ್ತಿರಕ್ಕೆ ಹೋಗಿ ‘ಬ್ಲೌಸ್’ ತೆಗೆದುಕೊಂಡು ಬರುವುದು…. ಇತ್ಯಾದಿ.
“ಓಹ್…ದೇವರೇ! ಸಮಯ ಸರಿಹೋಗುತ್ತೋ ಇಲ್ವೋ!” ಕಣ್ಣು ಮುಚ್ಚಿಕೊಂಡು ಯೋಚನೆ ಮಾಡಿದೆ ನಾನಿಲ್ಲಿ… ಬ್ಯೂಟಿ ಪಾರ್ಲರಲ್ಲಿ ಇದ್ದೇನೇ ಹೊರತು – ನನ್ನ ಮನಸ್ಸುಮಾತ್ರ ಆಗಲೇ ನಾಳೆ ‘ಪಾರ್ಟಿ’ ಯಲ್ಲಿ ತಿರುಗುತ್ತಿದೆ. ಕಣ್ಣುಕುಕ್ಕುವಷ್ಟು ವಿದ್ಯುದ್ದೀಪಗಳ ಮಧ್ಯದಲ್ಲಿ ನನ್ನ ಅಸ್ತಿತ್ವವು – ನನ್ನ ‘ಚೆಲುವು’ ಪ್ರತಿಯೊಬ್ಬರನ್ನು ಕಲರವಗೊಳಿಸುತ್ತವೆ… ಸಂದೇಹವೇ ಇಲ್ಲ… !
ಟೊಮೇಟೊ ಬಣ್ಣದ ಸೀರೆ… ನಾನು ತುಂಬಾ ಸ್ಪೆಷಲ್ಲಾಗಿ ಖರೀದಿ ಮಾಡಿದ್ದೆ. ನನ್ನ ಮೋಹಕ ಬಣ್ಣದ ಶರೀರದ ಮೇಲೆ ಆ ಸೀರೆ, ಹೊಸ ನೆಕ್ಲೆಸ್, ಕಿವಿಗಳಿಗೆ ಹೊಸದಾಗಿ ಮಾಡಿಸಿಕೊಂಡಿದ್ದ ‘ಲೋಲಾಕು’ ಗಳು…ಓಹ್
ಶರತ್ ಕಣ್ಣಲ್ಲಿ ಕಾಣಿಸೋ ಹೊಳಪು ನನ್ನ ಮನಸ್ಸನ್ನು ಈಕ್ಷಣದಲ್ಲೇ ಎಳೆಯುತ್ತಿದೆ.
“ಮೇಡಂ!” ಬ್ಯೂಟೀಷಿಯನ್ ಮಾತಾಡಿಸಿದ್ದಾಗ ವರ್ತಮಾನಕ್ಕೆ ಬಂದು – ಕಣ್ಣು ತೆರೆದೆ !
“ಷ್ಟೀಂ ತೆಗೆದುಕೊಳ್ಳಿ…” ನಗುತ್ತಾ ಹೇಳಿದಳವಳು.
ನಾನೂ ನಕ್ಕೆ . “ನೀವು ಮಸಾಜ್ ಮಾಡ್ತಾ ಇದ್ದಾಗಲೇ ನಿದ್ದೆಯಿಂದ ಕಣ್ಣು ಮುಚ್ಚಿಕೊಂಡು ಹೋಗುತ್ತೆ!” ಅವಳನ್ನು ಮೆಚ್ಚಿಕೊಳ್ಳುತ್ತಾ ಹೇಳಿದೆ ನಾನು.
ಅವರ ಕಣ್ಣಲ್ಲಿ ಸ್ವಾತಿಶೆಯ ಲೀಲೆಯಾಗಿ ಕಾಣಿಸಿತ್ತು. ಅದು ಸಹಜತಾನೆ. ಎರಡು ವರ್ಷಕ್ಕೆ ಮುಂದೆ ‘ಪಾರ್ಲರ್’ ಷುರು ಮಾಡಿದ್ದಾರವರು. ಹೆಚ್ಚಾಗಿ ‘ಅಡ್ವರ್ಟೈಜ್’ ಕೂಡಾ ಮಾಡಿಲ್ಲಾ. ಆದರೇ ಈ ಎರಡು ವರ್ಷಗಳಲ್ಲಿ ತುಂಬಾ ಹೆಸರು ಸಂಪಾದಿಸಿತ್ತು ಅವರ ಪಾರ್ಲರ್.
ಬಹುಶಃ ಒಂದು ಸಲ ಅವರ ಹತ್ತಿರ ಬಂದವರು ಯಾರೂ, ಇನ್ನೊಂದು ಪಾರ್ಲರ್ ಗೆ – ಹೊಗೊದಿಲ್ಲಾ… ಅನ್ನಿಸುತ್ತೆ ನನಗೆ. ಏನು ಮ್ಯಾಜಿಕ್ ಮಾಡ್ತಾಳೋ…. ಸಣ್ಣಕ್ಕೆ, ಕುಳ್ಳಕ್ಕೆ , ನಾಜೂಕಾಗಿದ್ದ ಅವರಕಡೆಗೆ
ನೋಡುತ್ತಾ ಅಂದುಕೊಂಡೆ.
ನನ್ನ ಮುಖಕ್ಕೆ ‘ಮಾಸ್ಕ್’ ಹಾಕಿ, ಕಣ್ಣಿನ ಮೇಲೆ ಹತ್ತಿಯಿಟ್ಟು ಪಕ್ಕಕ್ಕೆ ಹೋಗಿದ್ದಳು.
ಮತ್ತೇ ನನ್ನ ಮನಸ್ಸಲ್ಲಿ ‘ಪಾರ್ಟೀ’ ಹೊಳೆಯಿತು.
“ನಾಳೆ ಪಾರ್ಟಿಯಲ್ಲಿ ಅಟ್ರಾಕ್ಷನ್ ನೀವೇ! ನಿಮ್ಮಗೊಸ್ಕರವೇ ನಾನು ಬರ್ತಾಯಿರೋದು…!” ಎಂದು ಹೇಳಿದ್ದ ಶರತ್ ಮಾತುಗಳು ನನ್ನ ಕಿವಿಯಲ್ಲಿ ಪುನಃ, ಪುನಃ ಕೇಳಿಸುತ್ತಿವೆ.
ಶರತ್ ಹಾಗೆ ಮಾತನಾಡುವದು ನಾನು ಯಾವಾಗಲೂ ಕೆಳಿದ್ದಿಲ್ಲಾ! ಅವನೆಂದರೇ ಮೇಲೇ ಬಿದ್ದು ಮಾತನಾಡಿಸೋ ತುಂಬಾ ಸ್ತ್ರೀಯರನ್ನು ನಾ ಕಂಡಿದ್ದೆ!
ಆದರೇ… ಅವನು ಅವನಂತೆಯೇ ಹೀಗೆ ಒಬ್ಬರನ್ನು ಪ್ರಶಂಸಿಸುವುದು…! ಆ ಒಬ್ಬಳು ನಾನೇ ಆಗೋದು ಆಶ್ಚರ್ಯ…..!!
ಶರತ್ ಪರಿಚಯವಾಗಿ ಒಂದು ವರ್ಷವಾಯಿತು. ಮೊದಲನೇಸಲ ನಮ್ಮ ಯಜಮಾನರಿಗೋಸ್ಕರ ಬಂದಿದ್ದ. ನಮ್ಮ ಯಜಮಾನರ ಕೊಲೀಗ್ ಜೊತೆಯಲ್ಲಿ.
ಡ್ರಾಯಿಂಗ್ರೂಮಿನಿಂದ ಅವರ ಮಾತುಗಳು ಕೇಳಿಸುತ್ತಿದ್ದವು. ಅವರ ಕಂಠಸ್ವರ, ಸ್ಪಷ್ಟವಾದ ಇಂಗ್ಲೀಷ್ ಉಚ್ಚಾರಣೆ… ಶರತ್ ನ ನೋಡದೇ ಹೋದರೂ ಒಂದು ತರಹಾ ಇಷ್ಟವಾಯಿತು.
ನಾನು ಕಾಫೀ ತೆಗೆದುಕೊಂಡು ಹೊಗುತ್ತಿದ್ದಾಗ ಹೇಳುತ್ತಿದ್ದನು ಶರತ್ “ಇಪ್ಪತ್ತುನಾಲ್ಕು ಗಂಟೆಕಾಲ ಕಷ್ಟಪಡೋದುಯಾತಕ್ಕೆ ಅಂತೀರಾ?… ವೆಲ್ – ಅದಕ್ಕೆ ಇಪ್ಪತ್ನಾಲ್ಕು ಕಾರಣಗಳಿವೆ. ಮೊದಲನೇದೇನೂ … ಅಂದರೇ… ನಿಜವಾದ ಆನಂದ ಕಷ್ಟಪಡೋದರಲ್ಲಿದೆ. ಎರಡನೇದು ನಾನು ದಿನದಲ್ಲಿ ಮೊದಲನೇ ಗಂಟೇನ ಆನಂದಿಸಬೇಕು.. ಅಂದುಕೊಳ್ಳುತ್ತೇನೆ! ಮೂರು… ನಾನು ದಿನದಲ್ಲಿ ಎರಡನೇ ಗಂಟೇ… ನಾನು ಆನಂದಿಸಬೇಕು ಅನ್ಕೊಳ್ತೀನಿ… ನಾಲ್ಕು…” ಅಂತ ಅವನು ಹೇಳುತ್ತಿದ್ದಾಗಲೇ ನಮ್ಮವರ ಕೊಲೀಗ್ ದೊಡ್ಡದಾಗಿ ನಕ್ಕುಬಿಟ್ಟರು.
ನಮ್ಮ ಯಜಮಾನರು ಶೃತಿ ಸೇರಿಸಿ ಬಿಟ್ಟರು.
ಆ ಸಮಯದಲ್ಲಿ ನಾನು ಆ ಕೊಠಡಿಗೆ ಅಡಿ ಇಟ್ಟಾಗ ಶರತ್ ಗೋಡೆಯ ಮೇಲಿದ್ದ ‘ಪೆಯಿಂಟಿಂಗ್’ ನೋಡುತ್ತಿದ್ದ. ನಾನು ಹೋಗಿದ್ದಾಗ ಒಂದುಸಲ ತಲೆ ನನ್ನಕಡೆ ತಿರುಗಿಸಿ, ನನ್ನನ್ನು ಗಮನಿಸಿದ್ದಂಗೆ ನೋಡಿ – ತಿರಗಾ ಆ ಪೆಯಿಂಟಿಂಗ್ ತೃಪ್ತಿಯಾಗಿ ನೋಡಬೇಕನಿಕೊಂಡೂ ಸಹಾ… ಒಂದು ಕ್ಷಣದಲ್ಲೇ ಆ ಪಯಿಂಟಿಂಗ್ ಕಿಂತ…ಹೆಚ್ಚಾಗಿ ನಾನೇ ಅವನನ್ನ ಆಕರ್ಷಿಸಿದ್ದ ಕಾರಣದಿಂದ ಇರಬೇಕು…ಪೂರ್ತಿಯಾಗಿ ನನ್ನಕಡೆ ತಿರುಗಿ ನನ್ನನ್ನೇ ನೋಡುತ್ತಾ… ಹಾಗೇ ಇದ್ದುಬಿಟ್ಟ! ಯಾವುದೋ ಅದ್ಭುತವನ್ನು ನೋಡ್ತಿರೋ ಥರಾ… !!
ನಮ್ಮ ಯಜಮಾನರು ಪರಿಚಯ ಮಾಡಿಸಿದ್ದರು.
“ವಿಶಾಲ. ಮೈ ವೈಫ್…” ಅಂತ.
ನಾನು ‘ನಮಸ್ತೇ’ ಅಂದೆ
ಅವನಿಂದ ಕೂಡಾ ಆ ಮಾತನ್ನೇ ಎಕ್ಸ್ಪೆಕ್ಟ್ ಮಾಡ್ತಾ !
ಆದರೆ ಅವನು ಸೋಫಾ ದಲ್ಲಿ ಫ್ರೀಯಾಗಿ ಹಿಂದಕ್ಕೆ ಕೂತ್ಕೊಂಡು ನನ್ನನ್ನೇ ತದೇಕ ದೃಷ್ಟಿಯಿಂದ ನೋಡುತ್ತಾ ತಲೆ ಸಣ್ಣಗೆ ಅಲ್ಲಾಡಿಸಿದ್ದ. ಯಾರೋ ‘ಮಹಾರಾಜ’ ವಂದನೆಗಳು ಸ್ವೀಕರಸುತ್ತಿರೋಹಾಗೆ !
ಆಮೇಲೆ ನಿಧಾನವಾಗಿ ತಲೆ ಈಕಡೆ ತಿರುಗಿಸಿ, ಪೆಯಿಂಟಿಂಗ್ ಕಡೆ ದೃಷ್ಟಿ ಸಾರಿಸಿ “ತುಂಬಾ ಚೆನ್ನಾಗಿದೆ” ಅಂದ. ನಮ್ಮವರು “ಹೌದು… ಅದು ನನಗೂ ತುಂಬಾ ಇಷ್ಟ. ನಮ್ಮ ವಿಶಾಲಾನೇ ಪೆಯಿಂಟ್ ಮಾಡಿದ್ದು” ಅಂದರು
ಶರತ್ ಕಣ್ಣಲ್ಲಿ ಆಶ್ಚರ್ಯ ಹೊಳಯಿತು. “ಅದ್ಭುತ…” ಅಂದ
“ನಾನೂಹಿಸಲೇ ಇಲ್ಲಾ. ಯಾರೋ ತುಂಬಾ ದೊಡ್ಡ ‘ಆರ್ಟಿಸ್ಟ್’ ಮಾಡಿದ್ದು ಅಂದುಕೊಂಡಿದ್ದೆ!” ಅಂದ ಶರತ್, ನನಗೆ ಸ್ವಲ್ಪ ಸಂಕೋಚವಾಯಿತು. ಕಿರುನಗೆ ನಗುತ್ತಾ ಅಲ್ಲಿಂದ ಒಳಗೆ ಬಂದುಬಿಟ್ಟಿದ್ದೆ.
ನಾಲ್ಕು ದಿನಗಳಾ ನಂತರ ಅವನು ಫೋನ್ ಮಾಡಿದ್ದ ನಮ್ಮ ಯಜಮಾನರಿಗೋಸ್ಕರ.
ನಿಜವಾಗಲೂ ನಮ್ಮ ಯಜಮಾನರಿಗೋಸ್ಕರಾನೇನಾ?? ನನಗೀವಾಗಲೂ ಅನುಮಾನವೇ! ಆದರೇ ಅವನು ಹೇಳಿದ್ದು ಮಾತ್ರ ಹಾಗೇ ಹೇಳಿದ್ದನು.
“ಅವರತ್ರ ನನಗೆ ಕೆಲಸ ಇದೆ. ಆಫೀಸ್ ಗೆ ಫೋನ್ ಮಾಡಿದ್ದೆ …ಇಲ್ಲಾ – ಅಂದರು. ಅದಕ್ಕೆ ಮನೆಗೆ ಮಾಡ್ತಾ ಇದ್ದೇನೆ” ಅಂದಿದ್ದ. ಆಮೇಲೆ ತುಂಬಾ ಹೊತ್ತು ಮಾತನಾಡಿದ್ದ. ಎಲ್ಲಾ…ನನ್ನ ಅಭಿರುಚಿಗಳ ಬಗ್ಗೆ ಮಾತ್ರಾನೇ ! ಆ ಪರಿಚಯದಿಂದ ನಾಲ್ಕು ದಿನಗಳಾಗದಮೇಲೆ ಇನ್ನೊಂದು ಸಲ ಫೋನ್ ಮಾಡಿದ್ದ. ಹಾಗೆ… ಹಾಗೆ… ಸ್ವಲ್ಪ – ಸ್ವಲ್ಪ ದಿನಗಳಗೊಂದು ಸಲ ಫೋನ್ ಮಾಡುತ್ತಿದ್ದ.
ಇದೆಲ್ಲಾ… ನಮ್ಮಯಜಮಾನರಿಗೆ ‘ಹೇಗೆ’ ಹೇಳಬೇಕೋ ನನಗೆ ಗೊತ್ತಾಗಲಿಲ್ಲಾ. ನಾಲ್ಕೈದು ತಿಂಗಳು ಆದಮೇಲೆ ಇನ್ನೊಂದು ಸಲ ಎಲ್ಲರೂ ಸೇರಿದ್ದಾಗ ಅವನೇ ಹೇಳಿದ್ದ.
“ನಿಮ್ಮ ಹೆಂಡತಿ ಅಭಿಪ್ರಾಯಗಳು ನನಗೆ ತುಂಬಾ ‘ಮೆಚ್ಚುಗೆ’ ಆಗುತ್ತೆ . ಅವಳಹತ್ರ ಫೋನಲ್ಲಿ ಮಾತುನಾಡಿದ್ದಾಗ ಗೊತ್ತಾಯಿತು” ಅಂದ.
ಕಣ್ಣಿನಮೇಲೆ ಇಟ್ಟಿದ್ದ ‘ಹತ್ತಿ’ ತೆಗೆದಿದ್ದರಿಂದ ನನ್ನ ಯೋಚನೆಗಳಿಗೆ ಬ್ರೇಕ್ ಬಿತ್ತು. ಮುಖ ಕ್ಲೀನ್ ಮಾಡಿದ್ಮೇಲೆ ದುಡ್ಡು ಕೊಟ್ಟು ಬಂದುಬಿಟ್ಟೆ.
ಷಾಪಿಂಗ್ ಎಲ್ಲಾ ಮುಗಿಸಿಕೊಂಡು ಮನೆಗೆ ಬರೋ ಹೊತ್ತಿಗೆ ಎಂಟು ಗಂಟೆ ಆಯಿತು. ಬಾಗಿಲಲ್ಲೇ ನನ್ನ ತಂಗಿ ಕಾಣಿಸಿದ್ದಳು.
“ಯಾವಾಗ ಬಂದಿದ್ದಿಯೇ?” ಅಂದೆ ಆಶ್ಚರ್ಯವಾಗಿ.
“ಮಧ್ಯಾಹ್ನದ ಟ್ರೈನಲ್ಲಿ ಬಂದಿದ್ದೆ. ನೀನು ಹಾಗೆ ಹೋದೆ – ನಾನು ಹೀಗೆ ಬಂದೆ ” ಅಂದಳು ಶೈಲಜ. “ಬಾವ ಇದ್ರಾ ನೀನು ಬರೋ ಹೊತ್ತಿಗೆ?” ಅವಳ ಭುಜ ಸುತ್ತು ಕೈಹಾಕಿ ಹತ್ತಿರಕ್ಕೆ ಎಳೆದುಕೊಂಡು
ಪ್ರೀತಿಯಿಂದ ಕೇಳಿದೆ.
ಅವಳು ಬಂದಿದ್ದು ಒಂದು ಕ್ಷಣ ತುಂಬಾ ಆನಂದ ಅನಿಸಿತ್ತು. ಆದರೆ… ಮರುಕ್ಷಣದಲ್ಲೇ…ಏನೋ ಒಂಥರಾ ಕಿರಿ ಕಿರಿ ಅನಿಸಿತ್ತು ಮನಸ್ಸಿಗೆ.
“ನಾಳೆ ಹೇಗೆ ಹೋಗೋದು?” ಅನ್ನೋ ಯೋಚನೆಯಿಂದ ಬಂದಿದ್ದ ಬೇಸರಿಕೆ ಅದು.
ಪಾರ್ಟಿಗೆ ಹೋಗೋದಕ್ಕೆ ಮುಂಚೆ ತಿರಗಾ ಪಾರ್ಲರ್ ಗೆ ಹೋಗಿ ‘ಲೈಟಾ’ಗಿ ಮೇಕಪ್ಹಾಕಿಸ್ಕೋಬೇಕು ಅಂದುಕೊಂಡಿದ್ದೆ. ಈ ಹಡಾವುಡಿ ಎಲ್ಲಾ ನೋಡಿದ್ದರೆ ಇವಳು ಏನಂದುಕೊಳ್ಳುತ್ತಾಳೆ? ಮೊದಲೇ ಅವಳಿಗೆ
ಆಚೆ ಹೋಗೋದು… ಓಡಾಡೋದು ಇಷ್ಟಾನೇ ಇರಲ್ಲಾ! ಅವಳು ತುಂಬಾ ಹಳೇ ಕಾಲದವಳು.
“ಏನಕ್ಕಾ … ಯೋಚನೆ ಮಾಡ್ತಿದ್ದೀಯಾ?” ಅಂದಳು ನಾನು ನಕ್ಕು… ಏನೂ ಇಲ್ವೇ – ನೀನೊಬ್ಬಳೇ ಬಂದಿದ್ದಿಯಾ?” ಅಂದೆ.
“ಊ… ಅವರು ಕ್ಯಾಂಪ್’ಗೆ ಹೋಗಿದ್ದರು. ನಿನ್ನನ್ನೋಡಬೇಕೆನಿಸಿತು. ಬಂದ್ಬಿಟ್ಟೆ” ಚಿಕ್ಕವಳ ಹಾಗೆ ಹೇಳಿದ್ದಳು. “ಒಳ್ಳೆ ಕೆಲಸ ಮಾಡಿದ್ದೀಯಾ” ಮನಃ ಪೂರ್ವಕವಾಗಿಯೇ ಅಂದೆ ನಾನು.
ಶೈಲಜಾ ಪದ್ಧತಿಗಳಲ್ಲಿ – ರೂಢಿಗಳಲ್ಲಿ ಒಂದು ವಿಧವಾದ ನೆಮ್ಮದಿ – ಪ್ರಶಾಂತತೆ ಇರುತ್ತದೆ. ಅವಳ ಸಾನ್ನಿಹಿತ್ಯವೇ ತುಂಬಾ ಆಹ್ಲಾದಕರವಾಗಿ ಅನ್ನಿಸುತ್ತದೆ. ನಾನು ಆ ತರಹಾ ಆಹ್ಲಾದಕರವನ್ನು ಅನುಭವಿಸಿ ತುಂಬಾ ದಿನವಾಯಿತು.
ಸೀದಾ ಅಡಿಗೆ ಮನೆಗೆ ಹೋಗುವ ಪ್ರಯತ್ನ ಮಾಡುತ್ತಿದ್ದೆ… “ಅಡಿಗೆ ಮಾಡಿಬಿಟ್ಟೆ” ಅಂದಳು ಹಿಂದಿನಿಂದ. ಬಿಸಿ – ಬಿಸಿ ಸಾಂಬಾರು, ಅನ್ನ , ಪಲ್ಯ ಚಟ್ನಿಗಳು… ಡೈನಿಂಗ್ ಟೇಬಲ್ ಮೇಲೆ ನಿಟಾಗಿವೆ. ನನಗೆ ನಾಚಿಕೆಯಾಯಿತು.
“ಬಂದ ಕೂಡಲೇ ಕೆಲಸ ನಿನ್ನ ಮೇಲೆ ಬಿತ್ತು” ಅಂದೆ ನಾನು.
“ಸರಿಬಿಡು. ಅಡಿಗೆ ಮಾಡೋದು ಒಂದು ಕೆಲಸ ಅಂತ ನನಗೆ ಯಾವಾಗಲೂ ಅನಿಸೋಲ್ಲ. ಅದೂ ಅಲ್ಲದೆ ನಾನು ಮಾಡತಕ್ಕದ್ದು ಅದೊಂದೇ ಆಲ್ವಾ?! ಅದೇ ಒಂದು ಕೆಲಸ ಮಾಡಿದ್ದೇನೆ… ಅಂತ ಹೋಳಿಕೊಬೇಕಷ್ಟೇ” ಅವಳು ನಕ್ಕು ಹೇಳಿದಳು. ನಾನೂ ನಕ್ಕೆ ….. ಶೈಲಜಾ ಜಾಸ್ತಿ ಓದಲಿಲ್ಲ.
ಬಹಳಾ ಕಷ್ಟಪಟ್ಟು ಪಿ. ಯು. ಸಿ ಪಾಸ್ ಆಗಿದ್ದಳು. ಆಮೇಲೆ ಅಮ್ಮನಿಗೆ ಸಹಾಯ ಮಾಡ್ತಾ ಮನೆಯಲ್ಲೇ ಇದ್ದುಬಿಟ್ಟಳು. ನಾನು ಎಂ. ಎಸ್. ಸಿ ಮಾಡಿದ್ದೇನೆ. ಮ್ಯೂಜಿಕ್ಕಲ್ಲಿ ಡಿಪ್ಲೊಮಾ ಮಾಡಿದ್ದೇನೆ. ಪೆಯಿಂಟಿಂಗ್ಸ್ ಮಾಡಿ ಪ್ರಶಂಸೆಗಳು ಪಡೆದಿದ್ದೇನೆ. ಅದಕ್ಕೇ ನಾನಂದರೆ ಒಂದು ವಿಧವಾದ ಆರಾಧನೆ. ಅವಳ್ಗಿಂತ ನಾನು ‘ತುಂಬಾ ಜಾಣೆ’ ಅಂತ… ನಾನೆಂದರೆ ಗೌರವ.
“ಮಾತಾಡ್ತಾ – ಮಾತಾಡ್ತಾ ಮಧ್ಯದಲ್ಲಿ ಏನೋ ಯೋಚನೆ ಮಾಡ್ತಾ ಇದ್ಬಿಡ್ತೀಯಲ್ಲಾ?! ಏನಕ್ಕಾ ನೀನು?” ಶೈಲಜಾ ಪ್ರಶ್ನೆಗೆ ತಿರುಗಿ ವಾಸ್ತವಕ್ಕೆ ಬಂದೆ.
“ಏನಿಲ್ಲಾ ಕಣೆ! ಈ ಬಾಳೆಹಣ್ಣು, ಕಡಲೆಕಾಳು ಉಸುಲಿ… ಇವೆಲ್ಲಾ ಏನು?” ಅಂದೆ.
“ಪಕ್ಕದ ಮನೆ ಅವರು ಹರಿಸಿನ – ಕುಂಕುಮಕ್ಕೆ ಕರೆದಿದ್ದರು. ಹೋಗಿ ಬಂದಿದ್ದೇನೆ” ಅಂದಳು.
ನಾನು ಹಿಂದಕ್ಕೆ ತಿರುಗಿ “ಅವರು ನಿನಗೆ ಗೊತ್ತಿಲ್ಲವಲ್ಲೇ?” ಅಂದೆ ಆಶ್ಚರ್ಯವಾಗಿ.
“ಸರಿ! ಅವರಿಗೆ ನಾನೂ ಗೊತ್ತಿಲ್ಲವಲ್ಲಾ! ಆದರೂ ಅವರು ಕರೆದಿದ್ದರು ಪಾಪ! ನಾನು ಹೋಗಿದ್ದೆ! ಎರಡು ಹಾಡುಗಳು ಹೇಳಿದ್ದೆ. ನಿನ್ನದು, ನನ್ನದು ಎರಡು ಸೇರಿಸಿಕೊಂಡು ಎರಡು ತಾಂಬೂಲಗಳು ತಂದುಕೊಂಡೆ” ಡೈನಿಂಗ್ ಟೇಬಲ್ ಹತ್ತಿರ ಕೂತುಕೊಳ್ಳುತ್ತಾ ಹೇಳಿದ್ದಳು.
ಅವಳು ಹೇಳಿದ್ದ ರೀತಿ ‘ನಗು – ಬೇಸರ’ ಎರಡೂ ಬಂದಿತ್ತು ನನಗೆ. ‘ಹರಸಿನ-ಕುಂಕುಮಕ್ಕೆ… ಅವಳು ಹೋಗೋದು – ಅವರು ಕೊಟ್ಟಿದ್ದೆಲ್ಲಾ ಗಂಟು ಹಾಕಿಕೊಂಡು ತೊಗೊಂಡು ಬರೋದು… ಇವೆಲ್ಲಾ ನನಗೆ ಇಷ್ಟ ಇರೋದಿಲ್ಲ!
ಚಿಕ್ಕವಳಿದ್ದಾಗ ಶೈಲು ದೊಡ್ಡ ಕರ್ಚಿಫ್ ಒಂದು ತೊಗೊಂಡು ಹೋಗಿ ನೆನೆಸಿದ್ದ ಕಡಲೆಕಾಳು ಕರ್ಚಿಫ್ ನಲ್ಲಿ ‘ಗಂಟು’ ಹಾಕಿಕೊಂಡು ತರೋದು ನೋಡಿದ್ದಾಗಲೆಲ್ಲಾ ನಾನು ನಗುತ್ತಿದ್ದೆ!
ಆದರೆ ಈ ದಿನ ಅವಳಿಗೆ ಏನೂ ಹೇಳದೇ ಸುಮ್ನೇ ಇದ್ದೆ! “ಪಾಪ ಅವಳಿಗೆ ಜೀವನದಲ್ಲಿ ಇದಕ್ಕಿಂತ ಕಾಲಕ್ಷೇಪಗಳು ಏನಿರುತ್ತೆ?” ಅನಿಸಿತ್ತು ನನಗೆ.
“ನಿಮ್ಮ ಬಾವನ್ನ ಕರಿ. ಊಟ ಮಾಡೋಣ” ಅಂದೆ ಒಳಗೆ ನಡೆಯುತ್ತಾ!
ಉಟ ಆದಮೇಲೆ ಶೈಲೂ ಬಂದು ನನ್ನ ಪಕ್ಕದಲ್ಲೇ ಮಲಗಿದ್ದಳು. ನಮ್ಮವರು ಹಾಲುಕಡೆ ಹೋಗುತ್ತಾ “ಬೇಗ ನಿದ್ದೆ ಮಾಡಿ” ಅಂದರು. “ಇಲ್ಲ. ನಾವು ರಾತ್ರೆಲ್ಲಾ ಮಾತನಾಡಿಕೊ ಬೇಕು” ಅಂದಳು ಶೈಲೂ. ಏನೇನೋ ಮಾತುನಾಡುತ್ತಿದ್ದಳು. ಆದರೆ ನಾನು ಹೆಚ್ಚು ಹೊತ್ತು ಎಚ್ಚರವಾಗಿರೋದಕ್ಕೆ ಇಷ್ಟಪಟ್ಟಿಲ್ಲ. ಸರಿಯಾಗಿ ನಿದ್ದೆ ಇಲ್ಲದಿದ್ದರೆ ಬೆಳಗೆ ಹೊತ್ತಿಗೆ ಮುಖ ನಿಸ್ತೇಜವಾಗಿ ಕಾಣಿಸುತ್ತೆ. ಕಣ್ಣುಗಳ ‘ಅಂದ’ ನಾಶವಾಗುತ್ತೆ. ಇನ್ನು ಏನುಮಾಡಿದರೂ ‘ಕಣ್ಣು’ ಗಳ ಹೊಳಪು ಸಾಯಂಕಾಲ ಪಾರ್ಟಿಯಲ್ಲಿ ಅಂದವಾಗಿ ಕಾಣಿಸುವುದಿಲ್ಲಾ.
ಅದಕ್ಕೆ “ನಾಳೆ ಬೆಳಗ್ಗೆ ಮಾತನಾಡೋಣ. ಮಲಗಿಕೋ ಶೈಲೂ” ಅಂತ ಅವಳನ್ನು ಗದ್ದರಿಸಿ ಕಣ್ಣು ಮುಚ್ಚಿಕೊಂಡಿದ್ದೆ.
ಆದರೆ… ಬೆಳಗ್ಗೆ ಆಗಿದ್ದರಿಂದ ಒಂದೇ ಹಡಾವುಡಿ. ಹೇಗೋ ಅಡಿಗೆ ಮಾಡಿ ಅವರನ್ನ ಆಫೀಸ್ ಗೆ ಕಳಿಸಿದ್ದೆ. ತಲೆಗೆ ನೀರು ಹಾಕಿಕೊಳ್ಳೋದು, ಕೂದುಲು ಬಿಡಿಸಿಕೊಳ್ಳೋದು, ನೆಯಿಲ್ಸ್ ಷೇಪ್ಮಾಡಿ ಪಾಲಿಷ್ ಹಾಕಿಕೊಳ್ಳೋದು… ಮೊದಲೇ ಟೆನ್ಷನ್ – ಮೂರುಗಂಟೆ ಆಗಿದ್ಮೇಲೆ ಒಂದೇ ಗಾಬರೀ ನನಗೆ.
ಶೈಲೂ ಏನಂದುಕೊಂಡಿದ್ದಳೋ… ಅವಳನ್ನು ಬಿಟ್ಟು ನಾನು ಆಚೆ ಹೋದರೆ… “ನನಗಿಂತಾ ಆ ಪಾರ್ಟಿ ನಿನಗೆ ಹೆಚ್ಚಾಯಿತೇ ಅಕ್ಕಾ?” ಅಂತಾಳೇನೋ…
ಸಾಯಂಕಾಲ ನಾಲ್ಕುಗಂಟೆಗೆ ಹೊರಟಿದ್ದೇನೆ “ಏನೂ ತಿಳುಕೋಬೇಡವೇ ಶೈಲೂ! ಖಂಡಿತಾ ಹೋಗಲೇ ಬೇಕು. ಇಲ್ಲದಿದ್ದದರೆ ಅವರು ಬೇಜಾರು ಮಾಡ್ಕೋತಾರೆ. ನಾಳೆಯಿಂದ ನಾವು ಚೆನ್ನಾಗಿ ಮಾತುನಾಡಿಕೋ ಬಹುದು ಕಣೆ” ನಾನು ಹೇಳುತ್ತಾ ಇದ್ದರೆ ಅವಳು ನಕ್ಕಿದ್ದಳು.
“ಏನಕ್ಕಾ ನೀನು? ಅವರು ಏನಂದುಕೊಳ್ಳುತ್ತಾರೋ – ಇಲ್ವೋ ಅನೋದು ಬೇರೇ ವಿಚಾರ. ನಿನಗೆ ಈತರಹಾ ಫಂಕ್ಷನ್ಸ್ ಅಂದರೆ ಎಷ್ಟು ಇಷ್ಟಾನೋ ನನಗೆ ಗೊತ್ತಿಲ್ವಾ! ಇಷ್ಟು ಮಾತ್ರಕ್ಕೆ ನಾನೇನೂ ಅನ್ಕೊಳ್ಳೋದಿಲ್ಲ. ಒಬ್ಬರೊಬ್ಬರಿಗೆ ಒಂದೊಂದರಲ್ಲಿ ಆನಂದ ಸಿಗುತ್ತೆ! ನಿನ್ನೆ ನಾನು ಹರಸಿನ – ಕುಂಕುಮಕ್ಕೆ ಹೋಗಿದ್ದೇ ಅಂದರೆ ನೀನು ಸುಮ್ನೇನೆ ಇದ್ದೀಯಲ್ವಾ!” ಅಂದಳು.
ನಾನು ಬೆಚ್ಚಿದ್ದೆ. ಏನಂತಿದ್ದಾಳೆ ಇವಳು? ಅವಳು ಹೋಗಿದ್ದ ಅರಶಿನ – ಕುಂಕುಮಕ್ಕು… ನಾನು ಹೋಗೋ ಫಂಕ್ಷನ್…ಒಂದೇನಾ?? ಸ್ಪೀಡಾಗಿ ಆಟೋ ಹೋಗುತ್ತಿದ್ದರೆ ಮನಸ್ಸಲ್ಲಿ ಇದೇ ಪ್ರಶ್ನೆ ಮತ್ತೆ ಮತ್ತೆ ತಿರುಗುತ್ತಿದೆ.
ಅವಳ ಜೀವನದಲ್ಲಿ ಇದಕ್ಕಿಂತ ಟೈಮ್ ಪಾಸ್ ಏನಿರುತ್ತೆ? ಅಂತ ‘ದಯೆ’ ತೋರಿಸುತ್ತಿದ್ದೇನೆ ಅಂದುಕೊಳ್ಳುತ್ತಿದ್ದೆ. ಆದರೇ ಈದಿನ… ಅವಳು…ಏನಂದಳು? ನಿನಗೆ ಆನಂದ ಕೊಡೋದು ನೀನು ನೋಡ್ಕೋಬೇಕಲ್ಲಾ… ಮಾಡ್ಕೋಬಹುದಲ್ಲಾ ಅಕ್ಕಾ” ಅಂದಳು.
ಅವಳು ನನ್ನ ಸ್ಥಾಯಿಗೆ ಬಂದಿದ್ದ ತರಹಾ ನಗುತ್ತಾ… ಅಲ್ಲ…ಅಲ್ಲ… ನಾನೇ ಅವಳ ಸ್ಥಾಯಿಗೆ ಇಳಿದು ಹೋಗಿದ್ದ ತರಹಾ ನೋಡುತ್ತಾ…..
ನಿಜಾನಾ! ನಾನೂ – ಅವಳೂ ಒಂದೇನಾ?
ಆಗದೇ ಇನ್ನೇನು? ನನ್ನ ಮನಸು ನನ್ನನ್ನು ‘ಒಡೆದ’ ರೀತಿ ಕೇಳಿತ್ತು.
“ಯಾವಾಗ ಜೀವನದಲ್ಲಿ ಸಾಧನೆಗೆ – ವಿಜಯಗಳಿಗೆ ಪ್ರಾಮುಖ್ಯ ಕಮ್ಮಿ ಆಯಿತೋ… ಪ್ರತಿಭೆ ಮತ್ತು ಪರಿಶ್ರಮವನ್ನು ಮರೆತು ಹೋಗಿದ್ದಿಯೋ… ಜೀವನ ಆನಂದಿಸೋಕೆ ಮಾತ್ರಾನೇ ಅಂದುಕೊಂಡಿದ್ದೀಯೋ… ಆವಾಗ ನೀನು ಅವಳಿಗಿಂತ ಏನು ಹೆಚ್ಚು?
ಹೌದು. ನಿಜಾನೆ! ಆನಂದ ಒಂದೇ ಜೀವನ ಧ್ಯೇಯವಾದರೇ ಶೈಲೂ ನನಗಿಂತಾ ಜಾಸ್ತೀನೆ ಆನಂದಿಸುತ್ತಿದ್ದಾಳೆ. ಅವಳನ್ನು ನೋಡಿ ‘ಅಯ್ಯೋ ಪಾಪ’ ಅನ್ಕೊಳ್ಳೋ ಹಕ್ಕು ನನಗೆಲ್ಲಿದೆ?!
ಆಟೋ ಇಳಿದು ದುಡ್ಡು ಕೊಟ್ಟು ಒಳಗೆ ನಡೆದೆ. ಪಾರ್ಲರ್ ಖಾಲಿಯಾಗಿತ್ತು. ಭಾನುವಾರ ಮಧ್ಯಾಹ್ನ ಪಾರ್ಲರ್ ಗೆ ರಜಾ! ನಾನು ತುಂಬಾ ಕೇಳಿಕೊಂಡ ಮೇಲೆ “ಸರಿ ಬನ್ನಿ” ಅಂದರು ಆಕೆ.
“ನಿಮ್ಮ ಮಾಮೂಲಿ ಹೆಯಿರ್ ಷ್ಟಯಿಲ್ ತಾನೇ?” ನಾನು ಕೂದಲಿಗೆ ಹಾಕಿ ಕೊಂಡಿದ್ದ ‘ಕ್ಲಿಪ್’ ಬಿಚ್ಚುತ್ತಾ ಕೇಳಿದ್ದಳು. ನಾನು ತಲೆ ಆಡಿಸಿದೆ ! ಕೂದಲು ಭುಜದ ಮೇಲೆ ಹರಡಿಕೊಳ್ಳುತ್ತಿದ್ದರೆ ಹಿಂದಕ್ಕೆ ಒರಗಿಕೊಳ್ಳುತ್ತಾ “ನಿಮಗೆ ತೊಂದರೆ ಕೊಡುತ್ತಿದ್ದೇನಲ್ವೇ? ಅಂದೆ ನಾನು.
“ಅಯ್ಯೋ… ಪರವಾಗಿಲ್ಲಾ” ಅಂದಳು ಆಕೆ. “ಇನ್ನೂ ನಾಲ್ಕು ಗಂಟೆ ಆಲ್ವಾ? ಟಿ . ವಿ ಯಲ್ಲಿ ಪಿಕ್ಚರ್ ಟೈಂ ಗೆ ಆಗೋಗುತ್ತೆ” ಅಂದಳು
ನಾನು ಆಶ್ಚರ್ಯವಾಗಿ ನೋಡಿದ್ದೆ. ಚಿಕ್ಕ ಹೊಡುಗಿ ತರಹ ‘ಟಿ. ವಿ’ ಯಲ್ಲಿ ಪಿಕ್ಚರ್ ಅಂದ್ರೆ ಇಂಟ್ರಸ್ಟ್ ಏನು ಇವರಿಗೆ” ಅನಿಸಿತ್ತು ನನಗೆ. ಅದೇ ಮಾತು ಸ್ವಲ್ಪ ಗೌರವವಾಗಿ ಅವರನ್ನು ಕೇಳಿದ್ದೆ. ಆಕೆ ನಕ್ಕಿದ್ರು. ನಾನೇ ಒಂದು ಚಿಕ್ಕ ಹುಡುಗಿ ಅನ್ನೊ ಹಾಗೆ ಮೃದುವಾಗಿ ಹೇಳಿದರು.
ಒಬ್ಬೊಬ್ಬರು ‘ರಿಲಾಕ್ಸ್’ ಆಗೋ ರೀತಿ ಒಂದೊಂದು ತರಹ ಇರುತ್ತದೆ. ನನಗೇಕೋ ಪ್ರತಿವಾರ ಐದೂವರೆ ಆಗೊ ಹೊತ್ತಿಗೆ ಕೆಲಸವೆಲ್ಲಾ ಮುಗಿಸಿ, ದಿವಾನದ ಮೇಲೆ ಕಾಲು ಚಾಚಿಕೊಂಡು, ನನ್ಮ ಮಕ್ಕಳನ್ನು ಎರಡುಕಡೆ ಕೂಡಿಸಿಕೊಂಡು… ಟೈಟಿಲ್ಸ್ ಇಂದ ಪಿಕ್ಚರ್ ನೋಡೋದು ಇಷ್ಟ. ಅದೆಷ್ಟು ಕಚಡ ಪಿಕ್ಚರ್ ಆಗಿದ್ದರೂ ಸರಿ.
ಅವಳ ಕೈಗಳು ನನ್ನ ಮುಖದ ಮೇಲೆ ಚುರುಕಾಗಿ ಕದುಲುತ್ತಿವೆ. “ವಾರ ಪೂರ್ತಿ ಕೆಲಸ ತುಂಬಾ ಜಾಸ್ತಿ ಇರುತ್ತೆ. ಎಲ್ಲಿ ಹೋಗೋದಕ್ಕೂ ಆಗೋದೇ ಇಲ್ಲ. ಬೆಳಗ್ಗೆ ಒಂಬತ್ತು ಗಂಟೆಯಿಂದ ಸಾಯಂಕಾಲ ಏಳು ಗಂಟೆ ವರೆಗೂ ಪಾರ್ಲರಲ್ಲೇ ಇರುತ್ತೇನೆ. ಮಿಕ್ಕಿದ ಟೈಂ ಮನೆಯಲ್ಲಿ ಕೆಲಸ ಇರುತ್ತೆ. ಇವೆಲ್ಲಾ ಮಾಡುತ್ತಿದ್ದಾಗ ಭಾನವಾರ ಸಾಯಂಕಾಲ ‘ರಿಲಾಕ್ಸೇಷನ್’ ಜ್ಞಾಪಕ ಬಂದರೆ ಆನಂದವಾಗಿರುತ್ತೆ. ಭಾನವಾರ ಪಿಕ್ಚರ್ ನೋಡುವಾಗ… ಆವಾರದಲ್ಲಿ ಪಟ್ಟಿದ ಶ್ರಮ… ಅದು ತರೋ ಮೆಚ್ಚುಗೆ… ನನ್ನ ಈ ಚಿಕ್ಕಸಾಮ್ರಾಜ್ಯ… ಇದೇ ನನಗೆ ಆನಂದ ಕೊಡುತ್ತೆ. ಇದೊಂದು ಸೈಕಲ್ ಅಷ್ಟೇ. ಬೋರ್ ಆಗಿದ್ದರೆ ವಿನಃ, ಬೇರೆ ತರಹ ಬೇಕಾಗೋದಿಲ್ಲವಲ್ಲಾ…?!” ಜೋರಾಗಿ ನಕ್ಕಿದಳಾಕೆ.
* * * * *
ನಾನು ಹೋಟಲ್ ಗೆ ಹೋಗಿದ್ದಾಗ ಆರುವರೆ ಆಯಿತು “ಹಲೋ” ಹೇಳುತ್ತಾ ಬಂದರು ಶಾರದಾದೇವಿ. ಬಾಬ್ಡ್ ಹೇರ್, ವಿಶಾಲವಾದ ನಗು, ಸ್ಕೈಬ್ಲೂ ಕಲರ್ ಸೀರೆ, ಮುತ್ತುಗಳ ಒಡವೆ… ಐವತ್ತು ವರ್ಷಗಳ ವಯಸಲ್ಲಿ ಕೂಡಾ ಅಂದವಾಗೆ ಇದ್ದಾಳೀಕೆ. ಸೌಂದರ್ಯವಾಗಿ ಇರಬೇಕು ಅನ್ಕೋಬೇಕೇ ಹೊರತು… ಅದು ದೊಡ್ಡ ಅಸಾಧ್ಯವಲ್ಲ ಅನ್ನೋತರಹ…!
ಏನೋ ಮುಜುಗುರ ಮನಸಲ್ಲಿ! “ಅಷ್ಟೇನಾ…? ನಿಜವಾಗಲು…ಅಷ್ಟೇನಾ?” ಅನಿಸಿತ್ತು.
ಶರತ್ ಬಂದಿದ್ದ. ಅವನ ಕಣ್ಣುಗಳಲ್ಲಿ ಬಹಳಾ ಪ್ರಶಂಸೆಗಳ ಸುರಿಮಳೆ. ಆವಿಷಯವೂ… ಆವಾಗ… ನನಗೆ ‘ಮುಜುಗುರ’ ನೇ ಅನಿಸಿತ್ತು. ಯಾಕೋ ಆ ಪ್ರಶಂಸೆ ನನಗೆ ಸಂಬಂಧಪಟ್ಟಿದ್ದು ಅನಿಸಲಿಲ್ಲ.
ಅವನು ನನ್ನೆದುರಿಗೆ ನಿಂತುಕೊಂಡಿದ್ದ. ಆಪಾದಮಸ್ತಕ ಅವಲೋಕಿಸಿ ತಲೆ ಚಿಕ್ಕದಾಗಿ ಅಲ್ಲಾಡಿಸಿದ.
ಈ ನನ್ನಸೀರೆ ಯಾರು ಡಿಜೈನ್ ಮಾಡಿದ್ದರೋ ಅನಿಸಿತ್ತು ನನಗೆ. ಡ್ರೆಸ್ ಮೇಕಿಂಗಲ್ಲಿ ‘ಡಿಪ್ಲಮೋ’ ಮಾಡಿದ್ದ ನನ್ನ ಟೈಲರ್ ಜ್ಞಾಪಕಕ್ಕೆ ಬಂದಳು ನನಗೆ.
ಶರತ್ ತಲೆ ಎತ್ತಿ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದ. ನನ್ನ ಗಲ್ಲ ಕೆಳಗೆ ಒಂದು ಕೈಆನಿಸಿ – ಎರಡನೇ ಕೈಯಿಂದ ‘ಬ್ರಷ್’ ಹಿಡಿದು… ಏಕಾಗ್ರತೆಯಾಗಿ – ತುಟಿಗಳು ಬಿಗಿದು… ಅತ್ಯಂತ ಜಾಗ್ರತೆಯಿಂದ ‘ಮಸ್ಕಾರಾ’ ಹಾಕಿದ್ದ ಬ್ಯೂಟೀಷಿಯನ್ ನನ್ನ ಕಣ್ಣಿಗೆ ಕಾಣಿಸಿದ್ದಳು.
ಜೇನುತುಪ್ಪ ಸೋರುತ್ತಿದ್ದಂತೆ ಇದ್ದ ನನ್ನ ತುಟಿಗಳನ್ನು ನೋಡಿದ್ದ ಅವನ ಕಣ್ಣು ‘ತುಂಟ’ ತನದಿಂದ ನಗುತ್ತಿವೆ.
“ಅಷ್ಟು ಡಾರ್ಕ್ ಷೇಡ್ ಬೇಡ!… ಈ ಕಲರ್ ಕರೆಕ್ಟಾಗಿ ಮ್ಯಾಚ್ ಆಗುತ್ತೆ” ಲಿಪ್‍ಷ್ಟಿಕ್ ಹಾಕುತ್ತಾ ಆಕೆ ಹೇಳಿದ್ದ ಮಾತುಗಳ ನೆನಪು.
ತಲೆ ತಿರುಗುತ್ತಿರೋ ಹಾಗೆ ಅನಿಸಿತು. ಚೇರ್ ನ ಆಸರೆಯಾಗಿ ಹಿಡಿದುಕೊಂಡಿದ್ದಾಗ… “ಏನಾಯಿತು?… ಏನಾಯಿತು…?” ಗಾಬರಿಯಾಗಿ ಅವರಿಬ್ಬರೂ ಕೇಳಿದ್ದರು. ನಾನು ಹೇಳಿದ್ದೆ!
“ಅಯ್ಯೋ….ಅದೇನು? ಕೂತುಕೊಳ್ಳುತ್ತೀರಾ?” ಶಾರದಾದೇವಿ ಕೇಳಿದ್ದಳು.
“ನಾನು ಹೊರಟುಹೋಗುತ್ತೇನೆ” ಬಲಹೀನವಾಗಿ ಹೇಳಿದ್ದೆ.
“ಹೀಗಿರೋವಾಗ ಹೇಗೆ ಹೋಗ್ತೀರಾ? ಸ್ವಲ್ಪಹೊತ್ತು ಕೂತ್ಕೊಳ್ಳಿ… ಆಮೇಲೆ…” ಶಾರದಾದೇವಿ ಮಾತು ಮುಗಿಯೋದಕ್ಕೆ ಮುಂಚೇನೆ “ನಾನು ಡ್ರಾಪ್ ಮಾಡ್ತೀನಿ…ಬನ್ನಿ” ಅಂದ ಶರತ್.
ಇಬ್ಬರೂ ಆಚೆ ಬಂದು ಕಾರಲ್ಲಿ ಕೂತೆವು. ಶರತ್ ಡ್ರೈವ್ ಮಾಡ್ತಾ ಮಾತು ಆರಂಭಿಸಿದನು. ಮಾತುಗಳಲ್ಲಿ ಶರತ್ ನ ಮೀರಿಸಿದ್ದವರಿಲ್ಲ. ಅದು ನೋಡೀನೇ ನನಗೆ ಇಷ್ಟು ಆಕರ್ಷಣೆ!
ಆದರೇ… ಈ ದಿನ ಅದ್ಯಾವದೂ ನನ್ನ ತಲೆಗೆ ಹತ್ತುತ್ತಿಲ್ಲ. ಅವನು ಹೇಳುತ್ತಲೇ ಇದ್ದನು. ನನ್ನ ಮನಸಲ್ಲಿ ಏನೇನೋ ಯೋಚನೆಯ ವಲಯಗಳು ತಿರುಗುತ್ತಿವೆ.
ಅವನೇ ಹೇಳಿದ. ಜೀವನದಲ್ಲಿ ಎಲ್ಲಕ್ಕಿಂತ ಮುಖ್ಯ!… ಹೌದು… ಮುಖ್ಯಾನೇ… ಆ-ನಂ-ದಿ-ಸೊ-ದು… ಮುಖ್ಯಾನೇ!
ಆ ಕೆಲಸ ನಾನೆಂದು ಮಾಡಿಲ್ಲ? ಚಿಕ್ಕವಳಾಗಿದ್ದಾಗಲೂ ಪ್ರತಿ ಒಂದು ಕ್ಷಣವೂ ನಾನು ಆನಂದವಾಗಿಯೇ ಕಳೆದೆ. ದೊಡ್ಡವರ ಆಶೀರ್ವಾದಗಳು, ಹೊಗಳಿಕೆಗಳು… ಅಮ್ಮ- ಅಪ್ಪಂದಿರ ಕಣ್ಣಲ್ಲಿ ಹೆಮ್ಮೆಯ ಹೊಳಪುಗಳು, ತಂಗಿ ಕಣ್ಣಲ್ಲಿ ಆರಾಧನೆ – ಇದಕ್ಕಿಂತ ‘ಜಾಸ್ತಿ’ ಯಾಗಿ – ಆನಂದವನ್ನು… ಈ ಶರತ್ ತೋರಿದನೇ ?
ತಲೆ ತಿರುಗಿಸಿ ಶರತ್ ಕಡೆ ನೋಡಿದೆ. ನಾನು ಆ ತರಹ ‘ತದೇಕ’ ದಿಂದ ನೋಡುವದು ಗಮನಿಸಿ ಅವನು ನಕ್ಕಿದ್ದ. ನನಗೆ ಮೊದಲನೇ ರಾತ್ರಿ ನಮ್ಮವರು ನೋಡಿದ್ದ ‘ನೋಟ’ ಜ್ಞಾಪಕಕ್ಕೆ ಬಂತು.
ಹಾಗೆ… ನನ್ನನ್ನು ಕೂಡಿಸಿಕೊಂಡು… ನನ್ನನ್ನು ನೋಡೋಕೆ ಆಗದೇ ಹಾಗೆ… ಎದೆಯಲ್ಲಿ ಹೇಗೆ… ಒದಗಿಸಿಕೊಬೇಕೋ ಅರ್ಥವಾಗದ ತರಹ… ನನ್ನನ್ನು ಏನು ಮಾಡಬೇಕೋ ಗೊತ್ತಾಗದೇ……!!!
ಆ ದಿನಾನೇ ಅಲ್ಲ… ಈ ದಿನಾನೂ ಅವರು ಹಾಗೇನೆ! “ನನ್ನಲ್ಲಿ ಯಾವ ಪ್ರತಿಭೆಯನ್ನು ಕಂಡು ಆ ದೇವರು ನಿನ್ನನ್ನು ನನಗಾಗಿ ಸೃಷ್ಟಿಸಿರಬಹುದು?” ಎಂದು ಅವರು ಎಷ್ಟೋ ಬಾರಿ ನನ್ನನ್ನು ಪ್ರಶ್ನಿಸಿದರು
ನನ್ನ ಸೌಂದರ್ಯವನ್ನು ಶರತ್‍ಗಿಂತ ಅವರೇ ಹೆಚ್ಚುಸಲ ಮೆಚ್ಚಿಕೊಂಡಿದ್ದಾರೆ… ಅನ್ನೋ ವಿಷಯಾ ಜ್ಞಾಪಕಕ್ಕೆ ಬರ್ತಾನೇ ನನಗೆ ಹೇಳಲಾರದಷ್ಟು ನಿಶ್ಶಕ್ತಿ ನನ್ನನ್ನು ಆವರಿಸಿತು.
ನಾವು ತುಂಬಾ ಬುದ್ಧಿವಂತರು ಅಂದುಕೊಳ್ಳುವುದೇ ಮೂರ್ಖತನಕ್ಕೆ ನಿರ್ವಚನವೇನೋ ಅನ್ನಿಸಿತು ನನಗೆ. ತುಂಬಿಕೊಳ್ಳುತ್ತಿದ್ದ ಕಣ್ಣುಗಳ್ಳನ್ನು ಮುಚ್ಚಿಕೊಂಡೆ. ಹಠಾತ್ತಾಗಿ ಶರತ್ ಕೈ ನನ್ನ ಕೈಮೇಲೆ ಬಿತ್ತು.
ಪಾದಗಳ ಕೆಳಗೆ ಏನೋ ಕಲವರ ‘ಷುರು’ ಆಯಿತು. “ಇನ್ನೂ… ಹಾಗೇ ಇದೆಯಾ?” ಎನ್ನುತ್ತಿದ್ದಾನೆ ಶರತ್. ನಾನು ಮಾತನಾಡಲಿಲ್ಲ. ಕಣ್ಣು ತೆರೆಯೋ ಶಕ್ತಿ ತಂದುಕೊಳ್ಳುತ್ತಿದ್ದೇನೆ! ಅವನು ಮತ್ತೆ ಅಂದ “ಯಾರದೋ ದೃಷ್ಟಿ ದೋಷ ಆಗಿರುತ್ತೆ… ನಿಜವಾಗಲೂ ಈವತ್ತು ನೀನು ತುಂಬ ಚೆನ್ನಾಗಿದ್ದೀಯ…. ಬೊಂಬೆ ತರಹ…!
ಕೆನ್ನೆ ಮೇಲೆ ಹೊಡೆದಂತನ್ನಿಸಿತು… ಕಣ್ಣು ತೆರೆದೆ… ಏನೋ… ಕಸಿವಿಸಿ….
“ಕಾರು ನಿಲ್ಲಿಸಿ. ಇಲ್ಲಿ ನಾನು ಇಳಿದು ಹೋಗುತ್ತೇನೆ” ಎಂದೆ.
ಶರತ್ ಕಾರಿಗೆ ಸಡನ್ ಬ್ರೇಕ್ ಹಾಕಿ ಅಯೋಮಯವಾಗಿ ನೋಡುತ್ತಾ—-
“ಇಲ್ಲಾ? ಇಷ್ಟು ಕತ್ತಲಲ್ಲಿ?” ಎಂದ. ನಾನು “ಹೌದು… !” ಯಾವ ಭಾವನೆಯನ್ನೂ ತೋರ್ಪಡಿಸದೆ ಹೇಳಿದೆ.
“ಸ್ವಲ್ಪ ಕೆಲಸ ಇದೆ ಇಲ್ಲಿ” ಶರತ್ ಮಾತಾನಾಡಲು ಆಸ್ಪದ ಕೊಡದೇ ಇಳಿದುಬಿಟ್ಟೆ. ತುಟಿಗಳ ಮೇಲೆ ನಗೂ ತಂದುಕೊಂಡು “ಬೈ” ಎಂದೆ. ಬೇಗ ಬೇಗ ನಡೆದು ಪಕ್ಕದ ಸಂದಿಗೆ ತಿರುಗಿ – ಅಲ್ಲಿಂದ ಮೆಯಿನ್ ರೋಡಿಗೆ ಬಂದು ಆಟೋ ಹತ್ತಿದೆ.
“ಚಂದನದಗೊಂಬೆ… ಚಂದದ ಗೊಂಬೆ” ಎಂಬ ಮಾತುಗಳೇ ಕಿವಿಗಳಲ್ಲಿ ಮತ್ತೆ – ಮತ್ತೆ ಕೇಳಿಬರುತ್ತಿವೆ. ನನ್ನ ಎದೆಯನ್ನು ಹಿಂಡುತ್ತಿದೆ. ಚಿತ್ರ ಶಿಲ್ಪಿ ವೆಂಕಟಪ್ಪ’ರ ರೀತಿ ಚಿತ್ರಗಳನ್ನು ಗೀಚಬೇಕೆನ್ನೋ ಒಂದು ದಿನದ ನನ್ನ ಕನಸು… ಆ ತರಹ ಇರುವ ನಾನು… “ವೆಂಕಟಪ್ಪ” ಆಗಬೇಕೆಂದುಕೊಂಡಿದ್ದ ನಾನು… ಕೇವಲ… ’ವೆಂಕಟಪ್ಪ’ರ ಚಿತ್ರವಾಗಿ ಇದ್ದುಬಿಟ್ಟೆನಾ…???
ಚಂದನದ ಗೊಂಬೆಯಂತೆ ಕೀರುತಿಯ ಸುಗಂಧವನ್ನು ಬೀರಬೇಕೆಂಬ ಚಿಕ್ಕಂದಿನ ಆಸೆ ಇಂದು ಬರೀ ಚಂದದ ಗೊಂಬೆ ಎನ್ನಿಸಿ ಕೊಳ್ಳುವುದರ ಮೂಲಕ ತೀರಿದಂತಾಯಿತು.
ಆಟೋ ಇಳಿದ ತಕ್ಷಣ ಮಾಹಡಿ ಮೇಲೆ ಓಡಿದೆ.
“ಏನಕ್ಕಾ… ಆವಾಗಲೇ ಬಂದ್ಬಿಟ್ಟಿದ್ದೀಯಾ!” ಅಡಿಗೆ ಮನೆ ಬಾಗಿಲಲ್ಲಿ ನಿಂತು ಕೇಳಿದ ಶೈಲಜ ಮಾತು ಮಧುರವಾಗಿ ಕೇಳಿಸಿತು. ವಾಷ್ಬೇಸಿನ್ ಹತ್ತಿರ ಹೋಗಿ, ಮುಖದ ಮೇಲೆ ನೀರು ಚುಮಿಕಿಸಿಕೊಂಡೆ. ಸೀರೆ ಬದಲಿಸಿ ನನ್ನ ಬೀರು ತೆಗೆದು ಬ್ರಷ್, ಕಲರ್ಸ್… ಕೋಣೆ ಮಧ್ಯದಲ್ಲಿ ‘ಗುಟ್ಟೆ’ ಹಾಕಿಕೊಂಡು ಕೂತುಬಿಟ್ಟೆ. ಶೈಲೂ ಪ್ಲೇಟಲ್ಲಿ ಬಿಸಿ ಬಿಸಿ ತಿಂಡಿ ತಂದಿಟ್ಟಳು.
“ಅಕ್ಕಾ ಚೋಲೆ ತಿಂತೀಯಾ? ನಿನಗೆ ಇಷ್ಟ ಅಂತ ಮಾಡಿದೆ” ಎಂದು ನನ್ನ ಪಕ್ಕದಲ್ಲೇ ಕುಳಿತಳು. ನಾನೂ ತಲೆ ತೂಗಿದೆ.
ಕೋಣೆಯ ಒಂದು ಮೂಲೆಯಲ್ಲಿ… ಅರ್ಧದಲ್ಲಿ ನಿಲಿಸಿದ್ದ ಕಾರ್ಡ್ ಬೋರ್ಡ್ ಪೆಯಿಂಟಿಂಗ್ ಹಾಗೇ ನಿಂತಿತ್ತು ಹಿಂದಿನ ಬಾರಿ ಪೇಯಿಂಟ್ ಮಾಡಿದಾಗ ‘ಕ್ಲೀನ್’ ಮಾಡದೆ ಬಿಟ್ಟ ಬ್ರಷ್‍ಗಳು ನನ್ನ ಮುಂದೆ ಬಿದ್ದಿವೆ.
ಆರು ತಿಂಗಳಾದರೂ ಅವುಗಳನ್ನು ಹುಳಗಳು, ಜಿರಳೆಗಳು… ತಿನ್ನದೇ ಹಾಗೆಯೇ ಬಿಟ್ಟಿದ್ದು ಆಶ್ಚರ್ಯವೇ…! ಒಂದೊಂದು ಬ್ರಷ್ ಮೇಲೆ ’ಅಂಗುಲ’ ಮಂದವಾಗಿ ಪೆಯಿಂಟ್ ಇತ್ತು. ಕ್ಲೀನ್ ಮಾಡಿದಷ್ಟು…. ಕಲರ್ ಬರುತ್ತಲೇ… ಇತ್ತು ! ಅದು ಹಾಗೇ ಬರ್ತಾ ಬರ್ತಾ ಇದ್ದಷ್ಟೂ… ಎದೆಯಲ್ಲಿ ಏನೋ ಆನಂದ ರಸದಂತೆ ಉಕ್ಕಿ ಚಿಮ್ಮುತ್ತಲೇ ಇತ್ತು. ಶೈಲೂ ನನ್ನ ಬಾಯಿಗೆ ಇಟ್ಟಿದ್ದ ‘ಚೋಲೆ’… ನಿಜವಾಗಿಯೂ ಅದ್ಭುತ – ಅ…ದ್ಭು…ತ…!
*****
ತೆಲುಗು ಮೂಲ: ವಲಯಂ / ಟಿ. ಶ್ರೀವಲ್ಲೀ ರಾಧಿಕ