ಮನೆಮನೆಯ ಸಮಾಚಾರ

ಮನೆಮನೆಯ ಸಮಾಚಾರ

ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು ತಕ್ಕಮಟ್ಟಿಗೆ ವಿದ್ಯಾರ್ಜನವನ್ನು ಮಾಡಿ ತಂದೆಯವರ ತಲೆಯ ಮೇಲಿದ್ದ ಸಂಸಾರದ ಭಾರವನ್ನು ತಾನು ಹೊತ್ತು ಕೊಂಡು ಆ ಪ್ರಾಂತದಲ್ಲಿ ಒಳ್ಳೇ ಪ್ರತಿಷ್ಟಿತನೆಂದು ಹೆಸರಾದನು. ಚಿಕ್ಕವನಾದ ವಿಜಯರಾಯನು ಕಾಲೇಜದಲ್ಲಿ ಅಭ್ಯಾಸ ಮಾಡುತ್ತಿದ್ದು ಒಳ್ಳೆ ಬುದ್ದಿವಂತನಾದ ವಿದ್ಯಾರ್ಥಿಯಾಗಿದ್ದನು. ಮಗಳಾದ ವತ್ಸಲೆಯನ್ನು ನೆರೆಹಳ್ಳಿಯ ದೇಸಾಯರ ಮಗನಾದ ತಿರುಮಲರಾಯನಿಗೆ ಕೊಟ್ಟಿತ್ತು. ತಿರುಮಲರಾಯನಾದರೂ ವಿಜಯರಾಯನೊಂದಿಗೆ ಕಾಲೇಜದಲ್ಲಿ ಅಭ್ಯಾಸ ಮಾಡುತ್ತಿದ್ದನು. ಹೀಗೆ ಮನೆಯೆಲ್ಲ ಸಂತತಿ ಸಂಪತ್ತುಗಳಿಂದ ತುಂಬಿ ತುಳುಕುತ್ತಿರುವದನ್ನು ನೋಡಿ ಪ್ರೌಢರಾಯರಿಗೂ ಅವರ ಧರ್ಮಪತ್ನಿಯವರಾದ ಯಮುನಾ ಬಾಯಿಯವರಿಗೂ ಸಂಸಾರಸುಖದ ಪರಮಾವಧಿಯ ತೃಪ್ತಿಯಾಗಿ ಜಗತ್ತಿನಲ್ಲಿ ತಾವೇ ಧನ್ಯರೆಂದು ಅವರು ತಿಳುಕೊಂಡಿದ್ದರು.

ಆದರೆ ಈ ಮೃತ್ಯುಲೋಕದಲ್ಲಿ ಸತ್ಯವಾದ ಸುಖವೆಲ್ಲಿ? ನುಣ್ಣಗೆ ಕಾಣುವ ದುಃಖದ ಬೀಜಗಳನ್ನು ಸುಖದ ಸಾರವೆಂದು ತಿಳಿದು ನಾವು ಯಥೇಷ್ಟವಾಗಿ ಗುಳುಗುಳನೆ ನುಂಗಿದರೆ ಮುಂದೆ ಕಷ್ಟವೇ ಸಂಭವಿಸುವದೆಂದು ಅನಾದಿಕಾಲದಿಂದ ಅನುಭವಿಕರಾದ ಜ್ಞಾನಿಗಳು ಸಾರಿ ಹೇಳುತ್ತೆ ಬಂದಿದ್ದರೂ, ನಿವಾರಿಸಲ್ಪಟ್ಟಾಗ್ಯೂ ಬಿಟ್ಟು ಬಿಡದಿ ದೀವಿಗೆಗೆ ಅಡರುತ್ತಿರುವ ಶಲಭಗಳಂತೆ, ನಾವು ಸುಳ್ಳು ಸುಖದ ಹಂಬಲವನ್ನು ಸರ್ವಥಾ ಬಿಡುವದಿಲ್ಲ. ಈ ಮಾತಿನಿಂದ ಲೋಕದ ಜನರು ಸಂಸಾರ ಮಾಡುವದನ್ನು ಬಿಡತಕ್ಕದ್ದೆಂದು ನಾವು ಹೇಳುವದಿಲ್ಲ. ಸಂಸಾರವನ್ನು ಕರ್ತವ್ಯವೆಂದು ತಿಳಿದೇ ಮಾಡತಕ್ಕದ್ದಲ್ಲದೆ ಅದರಲ್ಲಿ ಅಧಿಕವಾದ ಆಸಕ್ತಿಯನ್ನು ತಳೆಯುವದಲ್ಲ. ಸುಖಾಭಿಲಾಷೆಯನ್ನು ಹೊಂದುವದು ಮನುಷ್ಯನ ಸ್ವಭಾವಸಿದ್ದವಾದ ಗುಣವಾದ್ದರಿಂದ ಅದು ದೋಷವಲ್ಲ. ಜ್ಞಾನಿಗಳು ನಿತ್ಯವಾದ ಸುಖವನ್ನು ಬಯಸಿದರೆ ಇತರರು ತಮ್ಮ ಕ್ಶುದ್ರವಾದ ದೃಷ್ಟಿಗೆ ಕಂಡ ಸುಖಾಪೇಕ್ಷೆಯನ್ನು ಮಾಡುವದುಂಟು.

ಸಾಮಾನ್ಯರಾದ ಮನುಷ್ಯರ ಸುಖಕ್ಕೆ ಅನೇಕವಾದ ಕಂಟಕಗಳಿರುವವು. ಅವುಗಳಲ್ಲಿ ಮೃತ್ಯುವೆಂಬದು ಬಹು ಘೋರವಾದದ್ದು. ಪ್ಲೇಗದ ರೂಪವನ್ನು ತಾಳಿ ಮೃತ್ಯುವು ಹದ್ದಿನಂತೆ ಎರಗಿ ಪ್ರೌಢರಾಯನ ಮುಂಗೈ ಮೇಲಿರುವ ಅರಗಿಳಿಯಾದ ರಾಮಚಂದ್ರರಾಯನನ್ನು ಭರ್ರನೆ ಎತ್ತಿಕೊಂಡೊಯ್ದಿತು, ಅದೇ ಬೇನೆಯಿಂದ ರಾಮಚಂದ್ರನ ಹೆಂಡತಿಯಾದರೂ ತೀರಿಕೊಂಡು ಪರದೇಶಿಯಾದ ತನ್ನ ಚಿಕ್ಕ ಬಾಲಕನ ಸಂರಕ್ಷಣದ ಭಾರವನ್ನು ಮುದುಕೆಯಾದ ತನ್ನ ಅತ್ತೆಯ ಮೇಲೆ ಹೊರಿಸಿ ಹೋದಳು. ಪುತ್ರಶೋಕದ ಉಗ್ರವಾದ ಸಂತಾಪದಿಂದ ಪ್ರೌಢರಾಯರು ಕೂಡ ಬೇಗನೆ ಪರಲೋಕವಾಸಿಗಳಾದರು.

ಪಾಪ! ಯಮುನಾಬಾಯಿಯವರು ಸಂಸಾರಸುಖದ ಸ್ವಾದವನ್ನೆ ಸೇವಿಸಿದವರು ಹೊರತಾಗಿ ಅವರಿಗೆ ದುಃಖದ ಗಾಳಿ ಕೂಡ ಇದುವರೆಗೆ ತಗಲಿದ್ದಿಲ್ಲ. ಮುಪ್ಪಿನ ಕಾಲದಲ್ಲಿ ಪ್ರಾಪ್ತವಾದ ಸತಿಪುತ್ರರ ವಿಯೋಗದ ದುಃಖದಿಂದ ಅವರು ಮುರಿದು ಮುಟ್ಟಿಗೆಯಾದರು. ಮೇಲೆ ೬-೭ ವರ್ಷದ ಅರ್ಭಕನಾದ ಮೊಮ್ಮಗನನ್ನು ಸಂರಕ್ಷಿಸುವ ಭಾರವೊಂದು ಅವರ ಮೈಮೇಲೆ ಬಿದ್ದಿತ್ತು. ಆದರೂ ತಿಳುವಳಿಕೆಯುಳ್ಳವರಾದ ಯಮುನಾಬಾಯಿಯವರು ಪುರಾಣ ಪುಣ್ಯ ಕಥೆಗಳನ್ನು ಕೇಳುವದರಲ್ಲಿಯೂ, ವ್ರತನಿಯಮಗಳನ್ನು ಆಚರಿಸುವದರಲ್ಲಿಯ, ದಾನಧರ್ಮಗಳನ್ನು ಮಾಡುವದರಲ್ಲಿಯ ಕಾಲಕ್ಷೇಪ ಮಾಡುತ್ತೆ ತಮ್ಮ ದುಃಖಗಳನ್ನು ಮೆಲ್ಲಮೆಲ್ಲನೆ ಮರೆಯುತ್ತೆ ಬಂದು ಇದ್ದವರನ್ನು ನೋಡಿಕೊಂಡು ಇದ್ದರು.

“ಉತ್ಸವಪ್ರಿಯಾ: ಖಲು ನಾರ್ಯಃ” ಎಂಬಂತೆ ಮನೆಯಲ್ಲಿ ಲಗ್ನ ಮುಹೂರ್ತಗಳಾದರೆ ಹೆಣ್ಣು ಮಕ್ಕಳು ತಮಗುಂಟಾದ ಕಡುತರವಾದ ದುಃಖಗಳನ್ನು ಮರೆತು ಉಬ್ಬಿನಿಂದ ಮಂಗಲೋತ್ಸವಗಳನ್ನು ನೆರೆವೇರಿಸುವದುಂಟು. ಪ್ರೌಢರಾಯರು ತೀರಿಕೊಂಡು ವರ್ಷವಾದ ಕೂಡಲೆ ಯಮುನಾಬಾಯಿಯವರು ತಮ್ಮ ಚಿಕ್ಕ ಮಗನಾದ ವಿಜಯರಾಯನ ವಿವಾಹಮಹೋತ್ಸವವನ್ನು ಬೆಳಿಸುವವರಾದರು. ಕನ್ನೆಯ ತಂದೆಯ ದೊಡ್ಡದೊಂದು ತಾಲೂಕಿನ ತಹಶೀಲದಾರನಾಗಿದ್ದನು. ಅವನ ಹೆಂಡತಿಯಾದ ರಖಮಾಬಾಯಿಯು ತಹಶೀಲದಾರನಿಗೆ ಇಮ್ಮಡಿಯಾದ ಅಧಿಕಾರವನ್ನು ಆ ತಾಲೂಕಿನಲ್ಲಿ ಮೆರಿಸುತ್ತಿದ್ದಳು. ಇಂಥವರು ಅಭಿಮಾನಕ್ಕೊಳಗಾಗಿ ಒಬ್ಬಳೇ ಒಬ್ಬಳಾಗಿರುವ ತಮ್ಮ ಪ್ರೀತಿಯ ಮಗಳ ಕಲ್ಯಾಣೋತ್ಸವಕ್ಕಾಗಿ ಹೇರಳವಾಗಿ ಹಣ ವೆಚ್ಚ ಮಾಡಿದರು. ಸೊಸೆಯು ರೂಪವತಿಯಾಗಿರುವದರಿಂದಲೂ ವಿವಾಹಮಹೋತ್ಸವವು ತಿಂಗಳಾನು ತಿಂಗಳು ನಡೆದಿದ್ದರಿಂದಲೂ ಯಮುನಾಬಾಯಿಯವರ ಮನಸ್ಸಿಗೆ ವಿಶೇಷವಾದ ಆನಂದವಾದ್ದರಿಂದ ಅವರು ಹಿಂದಿನ ದುಃಖಗಳನ್ನೆಲ್ಲ ಸಂಪೂರ್ಣವಾಗಿ ಮರೆತು ಮಗನಾದ ವಿಜಯರಾಯನ ಸಂಸಾರಸುಖವೆಂಬ ನಾವೆಯಲ್ಲಿ ಕುಳಿತು ಮತ್ತೆ ಭವಸಾಗರದ ಶಾಂತವಾದ ನೀರಿನಲ್ಲಿ ಸಂಚಾರ ಮಾಡಲಾರಂಭಿಸಿದರು. ವಿಜಯರಾಯನು ವಿಶ್ವವಿದ್ಯಾಲಯದ ಪದವೀಧರನಾಗಿ ಬಂದ ಬಳಿಕ ಅವನು ಪ್ರಮೋದ ನಗರದಲ್ಲಿ ಘನವಾದ ವ್ಯಾಪಾರವನ್ನು ನಡಿಸುತ್ತೆ ಅಲ್ಲಿ ಮನೆಮಾಡಿಕೊಂಡು ಇದ್ದನು. ಅವನು ಮನೆಯಿಂದ ಧನವಂತನು; ಸ್ವತಃ ವಿದ್ಯಾವಂತನು, ಸುಶೀಲನು, ತರುಣನು ಆಗಿದ್ದರಿಂದ ಅವನ ಸಂಸಾರ ಸುಖಕ್ಕೆ ಕೊರತೆಯಿಲ್ಲ.

ವಿಜಯರಾಯನ ಹೆಂಡತಿಯಾದ ಸುಭದ್ರೆಯು ರೂಪವತಿಯೂ, ಚತುರೆಯೂ ಆಗಿದ್ದರೂ ಗರ್ವಿಷ್ಟರಾದ ತಂದೆತಾಯಿಗಳ ಅಟ್ಟೆಯಲ್ಲಿ ಬೆಳೆದವಳಾದ್ದರಿಂದ ಅವಳಲ್ಲಿ ನಮ್ರತೆಯು ತುಸು ಕಡಿಮೆಯಾಗಿತ್ತು. ಬಹಿರಂಗವಾಗಿ ಅವಳು ವಿನೀತೆಯಂತೆ ನಡಕೊಳ್ಳುತ್ತಿದ್ದರೂ ಚರ್ಯೆ ನೋಡಲಾಗಿ ಇವಳು ಗೃಹಕಲಹವನ್ನುಂಟು ಮಾಡುವಳೆಂದು ಚಾಣಾಕ್ಷರಾದ ಯಮುನಾಬಾಯಿಯವರು ತಿಳುಕೊಂಡುಬಿಟ್ಟಿದ್ದರು. ಆದರೂ ಇವನೊಬ್ಬ ಮಗನ ಸುಖದಲ್ಲಿ ವಿಷಾದವು ತಿಲಮಾತ್ರವಾದರೂ ಬೆರೆಯಲಾಗದೆಂದು ಯೋಚಿಸಿ ಆ ಮಾತೆಯು ಸೊಸೆಯ ಛಂದಾನುವರ್ತಿಯಾಗಿಯೇ ಇದ್ದಳು. ಸುಭದ್ರೆಯ ತಂದೆಯು ತೀರಿಕೊಂಡದ್ದರಿಂದ ಅವನು ಗಳಿಸಿಟ್ಟ ಧನವೆಲ್ಲ ಅವಳದೇ ಆಗಿದ್ದರಿಂದ, ವಿಜಯರಾಯನು ತನ್ನ ಪ್ರಿಯತಮೆಯಾದ ಹೆಂಡತಿಯು ಹಾಕಿದ ಉಗುಳನ್ನು ಸಹಸಾದಾಟದಂತಾದನು.

ಸುಭದ್ರೆಯು ಗರ್ವಿಷ್ಟಳಂತೆ ನಡಕೊಂಡರೂ ಮನೆಯಲ್ಲಿ ಯಮುನಾ ಬಾಯಿಯವರ ಅಧಿಕಾರವು ಅಬಾಧಿತವಾಗಿ ಉಳಿದದ್ದರಿಂದ ಆಪ್ತರಿಷ್ಟರಿಗೂ ಅನುಯಾಯಿ ವರ್ಗಕ್ಕೂ ಅವಳಿಂದ ವಿಶೇಷವಾದ ಪೀಡೆಯಾಗಲಿಲ್ಲ. ವಿನಯ ನಮ್ರತೆಗಳೂ ಸೌಜನ್ಯ ಮಧುರಾಲಾಪಗಳ ದರಿದ್ರರಲ್ಲಿರತಕ್ಕ ಗುಣಗಳೆಂದು ಸುಭದ್ರೆಯ ತಿಳುವಳಿಕೆಯಾಗಿತ್ತು. ತಾನು ದೊಡವರ ಮಗಳೆಂದು ತಿಳಿದು, ಪತಿಯ ಅತ್ತೆಯವರೂ ತನ್ನನ್ನು ಆದರಿಸುವರೆಂದು ಆ ಹೊಸಮೊದಲುಗಿತ್ತಿಯ ನಂಬಿಕೆಯಾಗಿತ್ತು. ಮಗ-ಸೊಸೆಯರು ಸುಖದಿಂದಿರಲೆಂದೆಣಿಸಿ ಯಮುನಾಬಾಯಿಯವರು ತಮ್ಮ ಉತ್ತಮೋತ್ತಮವಾದ ಅಲಂಕಾರಗಳನ್ನು ಸೊಸೆಯ ಮೈಮೇಲಿಡಿಸಿ ಅಕ್ಕರೆಯನ್ನು ಪಡುತ್ತಿರುವದರ ಬೆಲೆಯು ಸುಭದ್ರೆಗೆ ತಿಳಿಯಲಿಲ್ಲ. ಪರಸತಿಯರನ್ನು ಕಣ್ಣೆತ್ತಿ ನೋಡದ ವಿಜಯರಾಯನು ಹೆಂಡತಿಯ ಇಚ್ಛಾನುವರ್ತಿಯಾಗಿರಲಿಕ್ಕೆ ತನ್ನ ರೂಪ-ಯೌವನಗಳೇ ಕಾರಣಗಳೆಂದು ಅವಳು ತಿಳುಕೊಂಡಿದ್ದಳು.

ಯೌವನ, ಧನ, (ಅಂಶತಃ) ಪ್ರಭುತ್ವಗಳು ಸುಭದ್ರೆಯಲ್ಲಿ ಸೇರಿರಲು ಸಂಪೂರ್ಣವಾದ ಅನರ್ಥಕ್ಕೆ ದುರ್ಬೋಧನವೊಂದೇ ಕಡಿಮೆಯಾಗಿತ್ತು. ಕಾಲಕ್ಕೆ ಸರಿಯಾಗಿ ಆದರದೂ ಪೂರ್ತಿಯಾಯಿತು. ಸುಭದ್ರೆಯ ತಾಯಿಯು ಮಗಳ ಸಂಸಾರವನ್ನು ನೋಡುವದಕ್ಕಾಗಿ ಅಳಿಯನ ಮನೆಗೆ ನಡೆತಂದಳು. ರಖಮಾಬಾಯಿಯು ಗರ್ವಿಷ್ಠಳೂ, ನಿಷ್ಟುರಳೂ, ಕಲಹಪ್ರಿಯಳೂ ಆಗಿದ್ದಳು. ಬಂದು ಒಂದೆರಡು ದಿನಗಳಲ್ಲಿಯೇ ರಖಮಾಬಾಯಿಗೆ ಯಮುನಾ ಬಾಯಿಯವರ ಅಧಿಕಾರವು ಕಣ್ಣು ಕಿಸರಾಗಿ ಕಂಡಿತು. ಸುಭದ್ರೆಯ ಲಗ್ನದ ಕಾಲದಲ್ಲಿ ನಡೆದ ವಾಗ್ವಾದಗಳ ನೆನಪು ಬುಧ್ಯಾ ಕೆದರಿ ತೆಗೆದು ರಖಮಾಬಾಯಿಯು ಆಗಾಗ್ಗೆ ತನ್ನ ಬೀಗಿತಿಗೆ ಮರ್ವಭೇದಕವಾದ ಮಾತುಗಳನ್ನಾಡುವಳು, ಸುಳ್ಳು ಸುಳ್ಳೆಯೇ ತನಗೆ ಅನಾದರವಾಯಿತೆಂದು ಹೇಳಿ ಅವಳು ಸೆಡವು ಮಾಡಿಕೊಂಡು ಕೂಡುವಳು. ಸುಭದ್ರೆಯಾದರೂ ತನ್ನ ತಾಯಿಯನ್ನು ಮೇಲುಕಟ್ಟಿ ಮೆಲ್ಲನೆ ಅತ್ತೆ ಯೊಡನೆ ವ್ಯಾಜ್ಯಮಾಡಲು ಉಪಕ್ರಮಿಸಿದಳು.

ಅಪರೂಪದ ಹಾಗೆ ಮನೆಗೆ ಬಂದಿರುವ ಬೀಗಿತ್ತಿಯೊಡನೆ ನಿಷ್ಕಾರಣವಾಗಿ ವ್ಯಾಜ್ಯವಾಡಕೂಡದೆಂದು ನೆನೆಸಿ, ಯಮುನಾಬಾಯಿಯವರು ರಖಮಾಬಾಯಿಯ ದುರುಕ್ತಿಗಳನ್ನು ಕೇಳಿಯೂ ಕೇಳದಂತೆ ಮಾಡಿ ಅವಳಿಗೆ ತಕ್ಕದಾದ ಉಪಚಾರಗಳನ್ನೇ ಮಾಡುತ್ತಿದ್ದರು. ಸೊಸೆಯ ಔದ್ದತ್ಯಕ್ಕೆ ವಿನೋದವೆಂದು ತಿಳಿದು ಅವರು ನಗುವರು. ಬಹಿಃಪ್ರಾಣನಾಗಿದ್ದ ತಮ್ಮ ಮೊಮ್ಮಗನಾದ ರಂಗಣನಿಗೆ ರಖುಮಾಬಾಯಿಯಾಗಲಿ ಸುಭದ್ರೆಯಾಗಲಿ ಏನಾದರೂ ಆಡಿದ್ದರೆ, “ಆದರೇನಾಯಿತು, ಹಿರಿಯರಾಡಿದ್ದಕ್ಕೆ ಸುಮ್ಮನಿರಬೇಕು!” ಎಂದು ಬುದ್ದಿ ಹೇಳಿ ಆ ಸಾದ್ವಿಯು ಆ ಮಗುವನ್ನೆತ್ತಿ ಮುದ್ದಾಡಿ ಸಂತೈಸುವಳು.

ತನ್ನ ಹೆಂಡತಿಯು ತುಸು ಉದ್ಧತಳಾಗಿ ವರ್ತಿಸುವಳೆಂದು ವಿಜಯರಾಯನಿಗೆ ಕಂಡುಬಂದಿತ್ತು. ಆದರೂ ಹೆಂಡತಿಯನ್ನು ಅವಳ ತಾಯಿಯ ಸಮಕ್ಷದಲ್ಲಿ ದಂಡಿಸುವದು ಸರಿಯಲ್ಲವೆಂದು ತಿಳಿದು ಅವನು ಸುಮ್ಮನಿರುತ್ತಿದ್ದನು. ಹೆಂಡತಿಯೊಡನೆ ಏಕಾಂತದಲ್ಲಿರುವಾಗ ಅವನಿಗೆ ಈ ಮಾತಿನ ಸ್ಮರಣವೇ ಆಗುತ್ತಿದ್ದಿಲ್ಲ. ಮೆಲ್ಲಮೆಲ್ಲನೆ ಸುಭದ್ರೆಯ ಔದ್ಧತ್ಯವು ದಿನಕ್ಕೊಂದು ಚಂದವಾಗಿ ಬೆಳೆಯಿತು.

“ಅಳಿಯನ ಮನೆಯಲ್ಲಿದ್ದು ಕೆಲಕಾಲವಾದ ಬಳಿಕ ಮೈಯುಂಡಂತಾಗಿ ರಖಮಾಬಾಯಿಯು ಮೈಚಳಿ ಬಿಟ್ಟು ಮನಸ್ಸಿಗೆ ಬಂದದ್ದು ಮಾಡಲೂ ಮನಸ್ಸಿಗೆ ಬಂದಂತೆ ಮಾತಾಡಲೂ ಆರಂಭಿಸಿದಳು. ಮನೆಗೆ ಮುಖ್ಯಳಾದ ಯಮುನಾಬಾಯಿಯ ಕಡೆಯಿಂದ ತನಗೆ ಅಪಮಾನವಾಯಿತೆಂದು ನಿಷ್ಕಾರಣವಾಗಿ ಹೇಳಿ ಉಪವಾಸ ಬೀಳುವ ಅಂಜಿಕೆಯನ್ನು ಒಮ್ಮೆ ತೋರಿಸುವಳು. ಕೆಲಸವನ್ನು ಬಿಡಿಸಿ ಮಗಳನ್ನು ಮುಂದೆ ಕೂಡಿಸಿಕೊಂಡು ನಿಂದೆಯ ಹರಟೆಯನ್ನು ಕೊಚ್ಚುವಳು. ಸೌಜನ್ಯಯುತರಾದ ಯಮುನಾಬಾಯಿಯವರು ಒಂದು ಮಾತಾಡದೆ ಬೀಗಿತ್ತಿಯ ಮನಸ್ಸು ಹಿಡಿಯುವದರಲ್ಲಿಯೇ ನಿರತರಾಗಿದ್ದರು.

ಒಂದೇ ಕೈಯಿಂದ ಚಪ್ಪಾಳೆಯಾಗಲಿಲ್ಲವೆಂದು ತಿಳಿದು ನಿರಾಶಳಾಗಿ ರಖಮಾಬಾಯಿಯು ಬೇಸತ್ತು ತನ್ನ ಊರಿಗೆ ಹೋಗುವ ವಿಚಾರ ಮಾಡಿದಳು. ಆದರೂ ಅವಳು ಸುಮ್ಮನೇಕೆ ಹೋದಾಳು? ಅಳಿಯನ ಕಿವಿಗೆ ಮುಟ್ಟುವಂತೆ ಯಮುನಾಬಾಯಿಯವರ ಮೇಲೆ ಇಲ್ಲದ್ದೊಂದು ಮಾತು ಹೊರಿಸಿ ಅವಳು ಊರಿಗೆ ಹೋಗುವೆನೆಂದು ಗಂಟುಕಟ್ಟಿಕೊಂಡು ಕುಳಿತಳು. ಯಮುನಾಬಾಯಿಯವರು ಎಷ್ಟು ಸರಿಯಾಗಿ ಹೇಳಿಕೊಂಡರೂ ಇನ್ನೊಂದು ದಿವಸವಾದರೂ ನಿಲ್ಲಲು ಅವಳು ಒಪ್ಪಿಕೊಳ್ಳಲಿಲ್ಲ; ಹೋಗುವದೇ ನಿಶ್ಚಯವಾಯಿತು. ಹೋಗುವಾಗ ಮಗಳನ್ನು ಏಕಾಂತದಲ್ಲಿ ಕರ ಕೊಂಡು ರಖಮಾಬಾಯಿಯು ಅನೇಕವಾದ ಕಿವಿಮಾತುಗಳನ್ನು ಹೇಳಿರಬಹುದು. ಸುಶ್ರೂಷಸ್ವ ಗುರೂನ್ ಎಂದು ಹೇಳಿದಳೆ? ಎಲ್ಲಿಯ ಮಾತೆ! ಅವಳು ಹೇಳಿದ ಕಿವಿತುಂತ್ರವು ಬೇರೆಯಾಗಿತ್ತು.

ಕುಶಾಗ್ರ ಬುದ್ದಿಯವಳಾದ ಸುಭದ್ರೆಯ ಮನಸ್ಸಿನಲ್ಲಿ ತಾಯಿಯ ಉಪದೇಶವು ಚನ್ನಾಗಿ ಭೇದಿಸಿತು. ಅವಳು ತನ್ನ ಜಾಣತನದ ಪ್ರಯೋಗವನ್ನು ಯಥಾವಕಾಶವಾಗಿ ಮಾಡಲಾರಂಭಿಸಿದಳು. ಒಂದು ದಿವಸ ರಂಗನು ಸಾಲೆಯಿಂದ ಬಂದವನೆ ತನಗೆ ಹಸಿವೆಯಾಗಿದೆಯೆಂದು ಮುತ್ತಮ್ಮನ ಮುಂದೆ ಕುಣಿದಾಡಿದನು. ಯಮುನಾಬಾಯಿಯವರು ಆಗ ಮಡಿಯಲ್ಲಿ ಇದ್ದದರಿಂದ ಹುಡುಗನಿಗೆ ಏನಾದರೂ ತಿನ್ನಲಿಕ್ಕೆ ಕೊಡೆಂದು ಸೊಸೆಗೆ ಕೇಳಿದರು. ಅವಳು ಆ ಮಾತು ಕಿವಿಮೇಲೆ ಹಾಕಿಕೊಳ್ಳದೆ ಹಾಗೆಯೇ ತಿರುಗಾಡಿದಳು. ರಂಗನು ಆ ತನ್ನ ಕಕ್ಕಿಯ ಬೆನ್ನು ಹತ್ತಿ ಏನಾದರೂ ಕೊಡೆಂದು ಕಾಡಿದನು. ಆಗಲಾ ನಿಷ್ಕರುಣೆಯು ಆ ಮಗುವಿನ ಕೆನ್ನೆ ಬಾಯುವಂತೆ ಒಳಿತಾಗಿ ಒಂದು ಏಟು ಕೊಟ್ಟಳು.

ಎಂಥ ಆಪರಾಧಗಳನ್ನು ತಡಕೊಂಡರೆ, ತಮ್ಮ ಪ್ರಾಣ ಪುತ್ಥಳಿಯಾದ ಮೊಮ್ಮಗನಿಗೆ ಪೀಡೆ ಮಾಡಿದವರನ್ನು ಯಮುನಾಬಾಯಿಯವರು ಸರ್ವಥಾ ಕ್ಷಮಿಸುತ್ತಿದ್ದಿಲ್ಲ. ಎಳೆ ಮಗುವಾದ ರಂಗನ ಕೆನ್ನೆಯ ಮೇಲೆ ಕೆಂಪಗೆ ಮೂಡಿದ ಬಾಸಣಿಕೆಯನ್ನೂ, ಅವನ ಕಣ್ಣುಗಳಲ್ಲಿ ಸುರಿಯುತ್ತಿರುವ ಆಶ್ರುಧಾರೆಗಳನ್ನೂ ಕಂಡು ಅವರ ಹೊಟ್ಟೆಯಲ್ಲಿ ಸಾಸಿವೆಯನ್ನು ಅರೆದು ಹೊಯ್ದಂತಾಯಿತು. ತಕ್ಷಣವೇ ಅವರು ಮೈಲಿಗೆಯಾಗಿ ಅಳುತ್ತಿರುವ ರಂಗನನ್ನು ಎತ್ತಿಕೊಂಡು ತಾವೂ ಕಣ್ಣೀರು ಸುರಿಸುತ್ತೆ ಅವನನ್ನು ಬಹು ಪರಿಯಾಗಿ ಸಮಾಧಾನಗೊಳಿಸಿ ಸುಭದ್ರೆಗೆ ಒಳಿತಾಗಿ ಸಿಟ್ಟು ಮಾಡಿದರು. ಅತ್ತೆಯವರ ಕೋಪದ ಮಟ್ಟು, ಎಷ್ಟಿರುವದೆಂಬದು ಅದು ಮೊದಲು ಸುಭದ್ರೆಗೆ ತಿಳಿದಿದ್ದಿಲ್ಲ. ಅವಳು ಆ ದಿವಸ ಸಂಜೆಯವರೆಗೆ ದುಮುದುಮು ಉರಿಯುತ್ತಲೇ ಇದ್ದಳು.

ಸಾಯಂಕಾಲವಾಗುತ್ತಲೆ ಸುಭದ್ರೆಯ ಬಣ್ಣ ತಿರುಗಿತು; ಭೋಜನವಾದ ಬಳಿಕ ಅವಳು ಸಿಂಗರದ ಉಡುಗೆತೊಡಿಗೆಗಳನ್ನು ಮಾಡಿಕೊಂಡು ಒಪ್ಪಿನಿಂದ ಅಲಂಕಾರಗಳನ್ನು ಧರಿಸಿ, ನೂಪುರಗಳ ಮಂಜುಲ ಸ್ವರವಾಗುವಂತೆ ಒನಪಿನಿಂದ ಮೆಲ್ಲಡಿಗಳನ್ನಿಕ್ಕುತ್ತೆ ಪತಿಯ ಶಯ್ಯಾಗೃಹಕ್ಕೆ ಬರುವವಳಾದಳು. ರೂಪವತಿಯಾದ ಆ ನವತರುಣಿಯು ಅಂಗಜನ ಜಯಸಿರಿಯಂತೆ ತನ್ನನ್ನು ಮೋಹಪಾಶದಲ್ಲಿ ಹಿಡಿಯಲು ಸಾಗಿ ಬರುತ್ತಿರುವದನ್ನು ಕಂಡು ವಿಜಯರಾಯನು ಪ್ರೇಮಪರವಶನಾಗಿ ಸೇಜದಿಂದ ಟಣ್ಣನೆ ಹಾರಿಬಂದು ಆ ತನ್ನ ಅರ್ಧಾಂಗಿಯನ್ನು ಭರದಿಂದ, ಅವಳನ್ನು ಲೀಲೆಯಿಂದ ಎತ್ತಿ ತಂದು ಮಂಚದ ಮೇಲೆ ಇರಿಸಿಕೊಂಡನು.

ಹೀಗೆ ಆಯತ್ತವಾಗಿ ತನ್ನ ಕಾರ್ಯವು ಅರ್ಧಕರೆ ಸಾಧಿಸಿತೆಂದು ಕಂಡುಕೊಂಡ ಕೂಡಲೆ ಆ ಮೋಸಗಾರತಿಯು ತುಸು ಕೋಪಾವೇಶವನ್ನು ತಾಳಿ, ಸತಿಯ ಬಾಹುಪಾಶಗಳನ್ನು ಒತ್ತಾಯದಿಂದ ಬಿಡಿಸಿಕೊಂಡು ಸಿಡಿದು ಹೋಗಿ ದೂರದಲ್ಲಿ ಕುಳಿತಳು. ಆತುರನಾದ ಆ ಪತಿಯು ಆ ಕೈಕಯಾ ದೇವಿಯನ್ನು ಮತ್ತೆ ಬಲಾತ್ಕಾರದಿಂದ ತನ್ನ ಬಾಹುಪಾಶಗಳಲ್ಲಿ ಬಿಗಿದಪ್ಪಿ ಅವಳ ನುಣುಪಾದ ಗದ್ದವನ್ನು ಆದರದಿಂದ ಹಿಡಿದು, ಮುನಿಸುಗೊಟ್ಟ ಕಾರಣವನ್ನು ಬಹು ವಿನಯದಿಂದ ಕೇಳಿದನು. ಆಗಲಾ ಕೋಪನೆಯು ಅಬ್ಬರದಿಂದ ಆಕ್ರೋಶಿಸಿ ಕಂಬನಿಗಳನ್ನು ಮಿಡಿದು ಆರ್ತೆಯಂತೆ ಗದ್ಗದ ಕಂಠೆಯಾಗಿ : ” ಮುನಿಸುಗೊಡಲಿಕ್ಕೇನಾಗಿದೆ! ಉರುಲು ಹಾಕಿಕೊಳ್ಳುವಂಥ ಕಷ್ಟವು ನನಗೊದಗಿರಲು ಅದು ನಿಮಗೆ ಮುನಿಸಿನಂತೆಯೂ ಪ್ರಣಯ ಕಲಹದಂತೆಯೂ ಭಾಸವಾಗುವದಲ್ಲವೆ?” ಎಂದು ನುಡಿದಳು.

ವಿಜಯರಾಯನು ತನ್ನ ಸೆಲ್ಲೆಯಿಂದ ಪ್ರಿಯತಮೆಯ ಅಶ್ರುಪೂರ್ಣವಾದ ಕೆಂಗಣ್ಣುಗಳನ್ನೊರಿಸಿ ವಿಷಾದದಿಂದೆ “ಕಷ್ಟವೇತರದು ಪ್ರಿಯೆ? ಈ ಮನೆಗೆ ನೀನು ಸಾರ್ವಭೌಮಿನಿಯಾಗಿರಲು ನಿನ್ನ ಮನಸ್ಸನ್ನು ನೋಯಿಸಿದವರಾರು?” ಎಂದು ಅವಳ ಮುಖವನ್ನು ನೋಡುತ್ತ ಕೇಳಿದನು. “ಬಿಚ್ಚಿ ಹೋಳಾಗಿರುವ ನನ್ನ ಎದೆಯು ಇಂಥ ಬುಬ್ಬುಣಕಚಾರದ ಮಾತುಗಳಿಂದ ವಾಸಿಯಾಗಬಲ್ಲದೆ?” ಎಂದು ಸುಭದ್ರೆಯು ಪತಿಯ ಎದೆ ಹಿಡಿದು ಮೆಲ್ಲನೆ ನೂಕಿದಳು.

ಪ್ರೇಮವಲ್ಲರಿಯ ಅಮೋದಮಯವಾದ ಆ ನವಮಂಜರಿಯ ಪೀಡೆಗೊಳಗಾಗಿರುವದನ್ನು ಕಂಡು ವಿಜಯರಾಯನ ಎದೆಗೆ ಚುರ್ರನೆ ಬರೆ ಕೊಟ್ಟಂತಾಯಿತು. ಅವನ ಪ್ರಿಯತಮೆಯ ಅಧರವನ್ನು ಭರದಿಂದ ಚುಂಬಿಸಿ “ಕಾರಣವು ತಿಳಿಯದಿದ್ದಲ್ಲಿ ದುಃಖ ನಿವಾರಣ ಮಾಡುವ ಬಗೆ ಏನು? ಸುಭದ್ರೆ, “’ಆದದ್ದಾದರೂ ಏನು ಹೇಳು!” ಎಂದು ಕೇಳಿದನು.

“ಹೇಳಿದರೆ ನಂಬಿಕೆಯಾಗದು! ಆದರೂ ದುಃಖಪರಿಮಾರ್ಜನದ ಕೆಲಸವು ನಿಮ್ಮಿಂದಾಗದು! ಹೇಳಿ ಫಲವೇನು?” ಎಂದು ನುಡಿದ ಸುಭದ್ರೆಯ ಕಣ್ಣುಗಳಿಂದ ಜಲಪ್ರವಾಹಗಳು ಸುರಿದವು.

“ವಿಜಯರಾಯನು ಮಮತೆಯಿಂದ ಹೆಂಡತಿಯ ಬೆನ್ನು ಮೇಲೆ ಕೈಯಾಡಿಸಿ “ಪ್ರೇಯಸಿ, ಈ ಮನೆಗೆ ನಾನು ಸಂಪೂರ್ಣನಾದ ಸ್ವಾಮಿಯು! ನಿನ್ನ ದುಃಖವನ್ನು ಹೋಗಲಾಡಿಸಲು ನಾನು ಅಸಮರ್ಥನೆ? – ಇಂಥ ಮಾತು ಹೀಗೆಯೇ ಆಗತಕ್ಕದ್ದು” ಎಂದು ನೀನು ಆಜ್ಞಾಪಿಸಿದ ಕ್ಷಣದಲ್ಲಿಯೇ ನಾನು ಹಾಗೆ ಮಾಡಿಯೇ ತೀರುವೆನು. ನೋಡಿಯಾದರೂ ನೋಡು!” ಎಂದು ಪತಿಯು ಬೇಡಿಕೊಂಡನು.

“ಹೇಳಲಿಯಯಾ? ಇಂದು ರಂಗನು ಏನೇನೋ ಬೇಡಿ ನನ್ನ ಮೈ ಮೈ ಅಡರುತ್ತ ಬಂದು ಪೀಡಿಸಿದಾಗ ನಾನು ಕೆಲಸದಲ್ಲಿರುವದರಿಂದ ತಿಳಿಯದೆ ಅವನ ಗಲ್ಲಕ್ಕೆ ಮೆಲ್ಲನೆ ಕೈ ತಾಗಿಸಿ ಬಡಿದಂತೆ ಮಾಡಿದೆನು. ಅಷ್ಟಕ್ಕೆ ಅತ್ತೆಯವರು ಮುತ್ತೈದೆಯಾದ ನನಗೆ ವಿಧಿನಿಷೇಧಗಳನ್ನು ಲೆಕ್ಕಿಸದೆ ಬಾಯಿಗೆ ಬಂದಂತೆ ಬೈದರು. ನನ್ನಿಂದ ತಪ್ಪಾಗಿದ್ದರೆ ಒಂದು ಮಾತು!”

ವಿಜಯರಾಯನು ಗಹಗಹಿಸಿ ನಕ್ಕು : “ಇಷ್ಟೆಯೋ! ಉರುಲು ಹಾಕಿಕೊಳ್ಳುವಂಥ ಪ್ರಸಂಗವೇನೋ ಎಂದು ಮಾಡಿದ್ದೆನು. ಇದಕ್ಕೆ ಶಾವಿಗೆಯ ಪಾಯಸದಿಂದ ಉರಲು ಹಾಕಿಕೊಳ್ಳು, ಬೇಡೆನ್ನುವವರಾರು?” ಎಂದು ನುಡಿದನು.

“ಹೀಗಾಗುವದೆಂದು ನನಗೆ ಈ ಮೊದಲು ತಿಳಿದೇ ಇತ್ತು!” ಎಂದು ನುಡಿದವಳೇ ಸುಭದ್ರೆಯು ಅಕ್ಕಸದಿಂದ ಮಂಚವನ್ನು ಬಿಟ್ಟಳಿದಳು.

ವಿಜಯರಾಯನು ಮತ್ತೆ ಅವಳನ್ನು ಮಂಚಕ್ಕೆ ಕರೆದೊಯ್ದು “ಸುಭದ್ರೆ, ಹಿರಿಯರೊಂದು ಮಾತಾಡಿದರೆ ತಡಕೊಳ್ಳಬಾರದೇನು?” ಎಂದು ಕೇಳಿದನು.

“ಬೈಸಿಕೊಳ್ಳುವದು ಇದೇ ಮೊದಲಾಗಿದ್ದರೆ ತಡಕೊಳ್ಳುತ್ತಲೇ ಇದ್ದೆನು. ದಿನಬೆಳಗಾದರೆ ಕಿಟಕಿಟಿಯು ಆರಂಭಿಸಿತೇ. ಹೇಳಬಾರದು ಹೇಳಬಾರದು ಎಂದರೆ ಎಲ್ಲಿಯವರೆಗೆ? ನನ್ನಿಂದ ತಪ್ಪಾಗಿದ್ದರೆ ಸಿಟ್ಟು ಮಾಡಲಿಕ್ಕೆ ನಾನು ಬೇಡೆನ್ನುವೆನೆ? ನನಗಂತೂ ಜೀವ ಬೇಡಾಗಿ ಹೋಗಿದೆ. ಒಮ್ಮೆಲೆ ಕೆರೆಬಾವಿ ಹಾರಿಕೊಳ್ಳುವದು ಲೇಸು.”

“ಆಗಲಿ! ನಾಳೆ ಅವನಿಗೆ ಹೇಳಿ ನಿನ್ನ ಹೆಸರು ತೆಗೆಯದಂತೆ ಮಾಡಿದರೆ ಆಯಿತೋ ಇಲ್ಲವೊ?”

ಸುಭದ್ರೆಯ ಮುಖದಲ್ಲಿ ಮಂದಹಾಸವು ತೋರಿತು. ಸತಿಯ ಭುಜದ ಮೇಲೆ ಒಯ್ಯಾರದಿಂದ ತನ್ನ ಮುಖವನ್ನಿಟ್ಟು, ಕಥೆಗಾರನಿಗೆ ತನ್ನ ವಿಲಾಸ ಮಂದಿರವನ್ನು ಬಿಟ್ಟು ಹೊರಗೆ ಹೋಗಲು ಸೂಚಿಸಿದಳು.

ಮುಂದೆ ತಿಂಗಳೆರಡು ತಿಂಗಳಲ್ಲಿ ಒಂದೊಂದರಂತೆ ಇಂಥವೇ ಹತ್ತೆಂಟು ದೂರುಗಳು ವಿಜಯರಾಯನ ಕಿವಿಗೆ ಬಿದ್ದವು. ಅತ್ತೆ-ಸೊಸೆಂದಿರ ನಡುವೆ ದಿನಾಲು ದುಸುಮುಸು ನಡೆದೇ ಇತ್ತು. ಸುಭದ್ರೆಗೆ ಬುದ್ದಿ ಹೇಳೆಂದು ಯಮುನಾಬಾಯಿಯವರು ಮಗನಿಗೆ ಸೂಚಿಸಿದ್ದು ನಿರರ್ಥಕವಾಯಿತು. ವಿಜಯರಾಯನ ತಂಗಿಯಾದ ವತ್ಸಲೆಯು ತವರುಮನೆ ಮಾಡಲಪೇಕ್ಷಿಸಿ ಬಂದಾಗಿನಿಂದಂತೂ ಗೃಹಕಲಹದ ಬೇಗೆಯು ಹೆಚ್ಚಾಯಿತು. ವತ್ಸಲೆಯು ದೊಡ್ಡ ದೇಸಾಯರ ಹೆಂಡತಿಯು: ಮೇಲಾಗಿ ತಾಯಿಯಿದ್ದ ತವರುಮನೆಗೆ ಬಂದವಳು. ಅವಳು ಸುಭದ್ರೆಯ ಜಂಬಕ್ಕೆ ಉಪ್ಪು ಹಾಕುವಳೆ? ಸುಭದ್ರೆಯು ಒಳಗಿಂದೊಳಗೆಯೇ ಕುದಿಯಲಾರಂಭಿಸಿದಳು. ಹೀಗೆ ಹದಿನೈದು ಇಪ್ಪತ್ತು ದಿವಸಗಳು ಕಳೆದ ಬಳಿಕ ಕಲಹಕ್ಕೆ ಒಂದು ನೆವ ಹುಟ್ಟಿತು.

ಒಂದು ದಿವಸ ವತ್ಸಲೆಯು ಮೈ ತೊಳೆದುಕೊಂಡು ತಾಯಿಯ ಹೇಳಿಕೆಯ ಮೇರೆಗೆ ಸುಭದ್ರೆಯ ಜರತಾರಿಯ ಸೀರೆಯನ್ನು ಉಟ್ಟು ಕೊಂಡಳು. ಸುಭದ್ರೆಯು ಅದನ್ನು ಕಂಡು “ಹಾ! ಹಾ! ನನ್ನ ಸೀರೆಯನ್ನು ಏಕೆ ಉಟ್ಟುಕೊಂಡಿರಿ? ಸದ್ಯಕ್ಕೆ ಅದನ್ನು ಕಳೆಯಿರಿ” ಎಂದು ಬೊಗಳಿ ನಿಂತರಿಕೆಯಲ್ಲಿ ಅದನ್ನು ಕಳಿಸಿಕೊಂಡಳು. ಶ್ರೀಮಂತರ ಸೊಸೆಯಾದ ವತ್ಸಲೆಯು ಇಂಥ ಅಪಮಾನವನ್ನು ಸಹಿಸುವಳೆ? ಅರಕ್ಷಣವಾದರೂ ಈ ಮನೆಯಲ್ಲಿ ನಾನು ನಿಲ್ಲುವದಿಲ್ಲವೆಂದು ಹಟತೊಟ್ಟು, ವತ್ಸಲೆಯು ಊಟ ಉಡಿಗೆಗಳ ವಿಚಾರವನ್ನು ಬಿಟ್ಟು ತನ್ನ ಊರಿಗೆ ಹೋಗಲು ರಥವನ್ನು ತರಿಸಿಕೊಂಡು ಸಿದ್ಧಳಾದಳು. ಯಮುನಾಬಾಯಿಯವರಿಗೆ ಮಗಳಿಗಾದ ಅಪಮಾನವನ್ನು ಕಂಡು ಅತಿಶಯವಾದ ಸಂತಾಪವಾಯಿತು. ಅವರು ಸೊಸೆಯ ಸಮಾಚಾರವನ್ನು ಚನ್ನಾಗಿ ತೆಗೆದುಕೊಂಡದ್ದಲ್ಲದೆ, ಮಗನನ್ನು ಏಕಾಂತದಲ್ಲಿ ಕರೆದು ಅವನ ಕಿವಿಯನ್ನಾದರೂ ಚನ್ನಾಗಿ ಹಿಂಡಿದರು. ಆದರೆ ವಿಜಯರಾಯನು ಈಗೀಗಲಾಗಿ ಚನ್ನಾಗಿ ಹೆಂಡತಿಯ ಪಕ್ಷವನ್ನು ಹಿಡಿದವನಾಗಿದ್ದರಿಂದ, ಬಿರಿನುಡಿಗಳಿಂದ ತಾಯಿಗೆ ಎದಿರುತ್ತರವನ್ನು ಕೊಟ್ಟನೇ ಹೊರತಾಗಿ ತನಗೆ ದೇವತೆಯಾದ ಆ ತಾಯಿಯ ಅಭಿಮಾನವನ್ನು ಹಿಡಿಯಲಿಲ್ಲ. “ಅವ್ವಾ, ಇನ್ನು ಮೇಲೆ ಈ ಮನೆಯಲ್ಲಿ ನೀನಾಗಲಿ ಆವಳಾಗಲಿ (ಹೆಂಡತಿ) ಇಬ್ಬರಲ್ಲಿ ಒಬ್ಬರು ಮಾತ್ರ ಇರಬೇಕು. ನಿತ್ಯದಲ್ಲಿಯೂ ನಡೆದಿರುವ ಈ ಆನರ್ಥಗಳನ್ನು ನಾನು ನೋಡಲಾರೆನು. ಅವಳನ್ನೆ ಆಟ್ಟ ಬಿಡಬೇಕೆಂದು ನಿನ್ನ ಮನಸ್ಸಿನಲ್ಲಿ ಇದ್ದರೆ ಇಂದೆಯೇ ಅವಳನ್ನು ತವರು ಮನೆಗೆ ಕಳಿಸಿಬರುತ್ತೇನೆ.”

“ಏನಂದಿ ವಿಜಯಾ!” ಎಂದು ಅತ್ಯಂತವಾಗಿ ಕ್ರುದ್ಧರಾಗಿದ್ದ ಯಮುನಾಬಾಯಿಯವರು ಉದ್ಘಾರ ತೆಗೆದರು.

“ಕೇಳಿಸಲಿಲ್ಲವೇನು?”

“ಸಾಕು! ಇನ್ನೊಂದು ಮಾತಾಡಬೇಡ?” ಎಂದು ಆಜ್ಞಾಪಿಸಿದ ಯಮುನಾಬಾಯಿಯವರು ತಾವು ಕೂಡ ಮತ್ತೊಂದು ಮಾತಾಡದೆ ಮಗಳಾದ ವತ್ಸಲೆಯನ್ನೂ ಮೊಮ್ಮಗನಾದ ರಂಗನನ್ನೂ ರಥದಲ್ಲಿ ಕುಳ್ಳಿರಿಸಿ ಸ್ಟೇಶನದ ಹಾದೀ ಹಿಡಿದರು.

ರಥವು ಕಣ್ಮರೆಯಾದ ಕೂಡಲೆ ವಿಜಯರಾಯನ ಮೈಯೊಳಗಿನ ಮದಜ್ವರವು ಝರ್ರನೆ ಇಳಿದು ಅವನಿಗೆ ಸ್ಮೃತಿ ಬಂದಿತು. ಅವನು ಒಳಗೆ ಹೋಗಿ ನೋಡುತ್ತಾನೆ, ಮಾಡಿದ ಅಡಿಗೆಯು ಹಾಗೆಯೇ ಮೆರೆಯುತ್ತಿತ್ತು. “ಅವರು ಉಣ್ಣದೆ ಹೋದರಲ್ಲೆ!” ಎಂದು ಉದ್ಗಾರ ತೆಗೆದ ವಿಜಯರಾಯನ ಕಣ್ಣುಗಳಲ್ಲಿ ದುಃಖಾಶ್ರುಗಳೂ ಬಂದವು. ತನ್ನ ಪ್ರೀತಿಯ ತಂಗಿಯು ಅಪರೂಪವಾಗಿ ಮನೆಗೆ ಬಂದಿರಲು ಅವಳನ್ನು ನಾನು ಸಂತೋಷ ಗೊಳಿಸಲಿಲ್ಲ. ಅವಳಿಗಾಗಿ ಉಡುಗರೆ ಉತ್ಸವಗಳನ್ನು ಮಾಡಿಸಲಿಲ್ಲ; ಇಷ್ಟೇ ಅಲ್ಲ, ಹೋಗುವಾಗ ಆ ಸೀಮಂತಿನಿಯ ಹಣೆಗೆ ಬೊಟ್ಟು ಕುಂಕುಮವನ್ನು ಕೂಡ ಯಾರೂ ಹಚ್ಚಲಿಲ್ಲ ಎಂದು ಚಿಂತಿಸಿ ಬಹು ವ್ಯಸನಾಕುಲನಾಗಿ ಅವನು ತನ್ನ “ಬಾಸಿಕಲ್”ವನ್ನು ಹತ್ತಿಕೊಂಡು ವಾಯುವೇಗದಿಂದ ಸ್ಟೇಶನಕ್ಕೆ ಬಂದನು.

ಸ್ಟೇಶನದ ಸಮಯಪ್ರತೀಕ್ಷಾಗೃಹದಲ್ಲಿ (waiting room) ಯಮುನಾ ಬಾಯಿಯವರೂ ವತ್ಸಲೆಯೂ ಕುಳಿತಿದ್ದರು. ವಿಜಯರಾಯನು ಬಂದವನೇ ಗಟ್ಟಿಯಾಗಿ ತಾಯಿಯ ಕಾಲುಹಿಡಿದು ಮನೆಗೆ ಬಾರೆಂದು ಹೇಳಿಕೊಂಡನು. ಆ ಮಾತೆಯ ಕಣ್ಣುಗಳಲ್ಲಿಯೂ, ವಿಜಯರಾಯ ವತ್ಸಲೆಯರ ಕಣ್ಣುಗಳಲ್ಲಿಯ ನೀರು ಸುರಿಯುತ್ತಿತ್ತು. ಯಮುನಾಬಾಯಿಯವರು ಸದ್ಗದಿತಕಂಠರಾಗಿ ಅಂದದ್ದು : “ವಿಜಯರಾಯ, ನಾನು ನಿನ್ನ ಮೇಲೆ ಕೋಪಿಸಿಕೊಳ್ಳಲಿಲ್ಲ; ನಿನ್ನ ಮನೆಗೆ ಬರಬಾರದೆಂದೂ ಅನ್ನುವದಿಲ್ಲ. ಮಗನನ್ನು ಅಗಲಿ ಯಾವ ಮಾತೆಯ ಇರಲಾರಳು. ನೀನು ನನ್ನ ದ್ರೋಹವನ್ನು ಮಾಡಲೆಸಗಿದರೂ ನಾನು ಸರ್ವಥಾ ಮಾಡೆನು. ಸಮುದ್ರದ ಚಂಚಲವಾದ ತೆರೆಗಳು ಸಂಕ್ಷುಬ್ಧವಾಗಿ ದಂಡೆಯ ಮೇಲಿದ್ದ ಗುಡ್ಡಕ್ಕೆ ಒಳಿತಾಗಿ ಅಪ್ಪಳಿಸುತ್ತಿದ್ದರೂ ಪರ್ವತವು ತರೆಗಳನ್ನು ಬಡಿಯಲಿಕ್ಕೆ ಹೋಗುವದಿಲ್ಲವಷ್ಟೆ? ಹಾಗೆಯೇ ಪರ್ವತದಂತೆ ನಿಶ್ಚಲವಾಗಿರುವ ನನ್ನ ಮನಸ್ಸು ನಿನ್ನ ಕೂಡ ವಿರೋಧವನ್ನು ಬೆಳಿಸದು.”

“ಆದಿರಲಿ ಅವ್ಬಾ, ಸದ್ಯಕ್ಕೆ ಮನೆಗೆ ನಡಿ; ಇನ್ನು ಮೇಲೆ ನಾನು ಕೇವಲವಾಗಿ ನಿನ್ನ ಆಜ್ಞೆಯಲ್ಲಿಯೇ ಇರುವೆನು” ಎಂದು ವಿಜಯರಾಯನು ಹೇಳಿಕೊಂಡನು.

“ವಿಜಯಣ್ಣಾ, ನಮ್ಮಿಂದೇನು ಪ್ರಯೋಜನ ನಿನಗೆ? ನೀನೂ, ನಿನ್ನ ರಮಣೀ ಯಥೇಷ್ಟವಾಗಿ ಇರಿ, ನೀನು ಆರಸು, ಆಕ ಆರಸಿ, ನೀನು ನಿನ್ನ ಹಣೆಕೊಯ್ದು ಮಣೆಮಾಡಿದರೂ ನಾವು ಬರುವವರಲ್ಲ” ಎಂದು ವತ್ಸಲೆಯು ಅಕ್ಕಸದಿಂದೆ ನುಡಿದಳು.

“ವತ್ಸಲೆ, ಕ್ಷಮಿಸು. ನನ್ನಿಂದ ತಪ್ಪೇ ಆಗಿರುವದು. ಸುಮ್ಮನ ಮನೆಗೆ ನಡೆಯಿರಿ, ಮನುಷ್ಯನು ಒಮ್ಮೆ ತಗ್ಗಿನಲ್ಲಿ ಬಿದ್ದರೆ ಮತ್ತೊಂದಾವರ್ತಿ ಬೀಳುವನೇನು?”

“ಅವ್ವನೇನೋ, ನೀನೇನೋ! ನಾನಂತೂ ನಮ್ಮ ಊರಿಗೆ ಹೋಗಲೇಬೇಕು”

“ಯಾಕೆ ಅವ್ವಾ?” ಎಂದು ವಿಜಯನು ಮತ್ತೆ ತಾಯಿಯನ್ನು ಬೆಸಗೊಂಡನು.

“ವಿಜಯರಾಯ, ಈ ಸಮಯದಲ್ಲಿ ನಾವು ಊರಿಗೆ ಹೋಗುವವರೇ! ಮನುಷ್ಯನಾದವನು ಈ ಸಂಸಾರದಲ್ಲಿ ಅನೇಕವಾದ ಮಾತುಗಳ ಅನುಭವವನ್ನು ತೆಗೆದುಕೊಳ್ಳಲೇಬೇಕು. ನೀನೂ ನಿನ್ನ ಹೆಂಡತಿಯ ಕೆಲವು ದಿವಸ ಇಬ್ಬರೇ ಇದ್ದು ಸಂಸಾರ ಮಾಡಿ ನೋಡಿರಿ. ಬಳಿಕ ನಮ್ಮಂಥವರ ಅವಶ್ಯಕತೆ ಎಷ್ಟರಮಟ್ಟಿಗೆ ಇರುವದೆಂಬದರ ಜ್ಞಾನವು ನಿನಗಾಗುವದು. ನಿನ್ನನ್ನು ಬಿಟ್ಟಿರಬೇಕಾದರೆ ನನಗೆ ಒಂದೊಂದು ಕ್ಷಣವು ಒಂದೊಂದು ವರುಷದಂತೆ ತೋರಿದರೂ ಕೆಲದಿವಸ ನಾನು ಹಾಗೆ ಮಾಡಲೇಬೇಕು. ಹೋಗು, ಹೆಚ್ಚಾಗಿ ಆಗ್ರಹ ಮಾಡಬೇಡ.”

ವಿಜಯರಾಯನೂ ತಾಯಿಯನ್ನು ಕಳಿಸಲಿಕ್ಕೆ ಊರಿಗೆ ಹೋಗಿ ಮರಳಿ ಬಂದನು. ಪತಿಯು ತನ್ನ ತಾಯಿಯ ಅನುನಯವನ್ನು ಮಾಡಿದ್ದು ಕೇಳಿಯೂ ಅವನು ಅವಳನ್ನು ಕಳಿಸಲಿಕ್ಕೆ ಹೋದದ್ದನ್ನು ಕಂಡೂ ಸುಭದ್ರೆಗೆ ಅತಿಶಯವಾದ ಸಂತಾಪವಾಗಿತ್ತು. ಗಂಡನು ಮನೆಗೆ ಬಂದಕೂಡಲೆ “ಬಂದಿರಾ? ಅಲ್ಲಿಯೇ ಇರಬೇಕಾಗಿತ್ತು? ಮಾತೃದೇವತೆಯನ್ನು ಬಿಟ್ಟು ಬರಬೇಕಾದರೆ ಮನಸ್ಸಿಗೆ ಬಹಳ ವ್ಯಸನವಾಗಿದ್ದಿತು!”

“ಮಾತೃದೇವತೆಯನ್ನು ಅಗಲಿ ಬರಬೇಕಾದರೆ ಮನಸ್ಸಿಗೆ ಅಸಮಾಧಾನವಾಯಿತು ಸರಿ; ಆದರೆ ಮನೆಯ ಲಕ್ಷ್ಮಿಯನ್ನು ಬಿಟ್ಟಿರುವದು ಅಸಾಧ್ಯವಲ್ಲೆ?” ಎಂದು ನುಡಿದು ವಿಜಯರಾಯನು ಹೆಂಡತಿಯ ಮುಖವನ್ನು ನೋಡಿ ವಿನೋದದಿಂದ ನಕ್ಕನು.

“ಹೆಂಡತಿಯೇನು! ಅದೊಂದು ದುಡಿಯಲಿಕ್ಕೆ ತಂದ ತೊತ್ತು! ಅದರಲ್ಲಿ ಪ್ರೇಮವೇ, ಮಮತೆ, ಏನಿರುವದು?”

“ನನ್ನ ಪ್ರಾಣಕಾಂತೆಯ ಹೊಟ್ಟೆಯಲ್ಲಿ ಪ್ರೇಮ ಮಮತೆಗಳ ಉರ್‍ಮುಳಿಯೇ ಇರುವದರಿಂದ ನಾನು ಅವಳ ಆಧೀನನಾಗಿರುವನಷ್ಟೆ!”

“ಬಾಯಿತುಂಬ ಒಣ ಮಾತುಗಳನ್ನಾಡಲಿಕ್ಕೆ ಯಾರಿಗೂ ವೆಚ್ಚ ತಗಲುವದಿಲ್ಲ.”

ಸ್ವತಂತ್ರವಾದ ಸಂಸಾರದ ಆರಂಭವು ಹೀಗಾಯಿತು. ಪತಿಯು ತನ್ನ ಆಧೀನದಲ್ಲಿ ಎಷ್ಟರಮಟ್ಟಿಗೆ ಇರುವನೆಂಬದನ್ನು ಅರಿತುಕೊಳ್ಳುವದಕ್ಕಾಗಿ ಸುಭದ್ರೆಯು ಅನೇಕವಾದ ಹಂಚಿಕೆಗಳನ್ನು ಮಾಡಿ ನೋಡಿದಳು. ಇಂಥದೊಂದು ಕೆಲಸ ಮಾಡೆಂದು ವಿಜಯರಾಯನು ಹೇಳಿದರೆ ಮಂದವಾಡಿ ಹೆಂಡತಿಯು “ಈಗ ನನಗೆ ಬೇಸರ” ಎಂದು ಹೇಳುವಳು. ಪತಿಯು ಬೇಡವೆಂದು ಹೇಳಿದ್ದನ್ನು ಸುಭದ್ರೆಯು ಹಟಕ್ಕಾಗಿ ಮಾಡಿ ತೀರುವಳು. ವಿಜಯರಾಯನು ಇದೆಲ್ಲ ವಿನೋದವೆಂದು ತಿಳಿದು ನಕ್ಕು ಸುಮ್ಮನಿರುವನು.

ಸಲಿಗೆಯು ತಲೆಗೇರಿದ್ದರಿಂದ ಪತಿಯ ಆಜ್ಞೆಯನ್ನು ಮೀರುವದೇ ಸುಭದ್ರೆಯ ಅಭೀಷ್ಟೆಯಾಯಿತು. ಅವನಿಗೇನು ಬೇಕು ಬೇಡೆಂಬದರ ಆರಿಕೆಯು ಅವಳಿಗಿರಲಿಲ್ಲ. ಮಾತು ಕೇಳುವ ಗಂಡನಿದ್ದರೆ ಹೆಂಡತಿಯು ಅವನನ್ನು ಜೀತದ ಆಳಿಗಿಂತ ಕಡೆಯಾಗಿ ಮಾಡುವದುಂಟು. ಬರಬರುತ್ತೆ ವಿಜಯರಾಯನು ಕೇವಲ ಪರತಂತ್ರನಾಗಿ ಹೋದನು. ಆಪ್ತರಿಷ್ಟರನ್ನಾಗಲಿ, ಸ್ನೇಹಿತರನ್ನಾಗಲಿ ಮನೆಗೆ ಕರೆತಂದು ಅವರಿಗೆ ಆದರ ಉಪಚಾರಗಳನ್ನು ಮಾಡುವೆನೆಂದರೆ ಅದು ಅವನ ಸ್ವಾಧೀನದಲ್ಲಿ ಇರಲಿಲ್ಲ.

ವಿಜಯರಾಯನ ಭಾವಮೈದುನನೂ, ಸ್ನೇಹಿತನೂ ಆದ ತಿರುಮಲರಾಯ ದೇಸಾಯಿಯು ವಿಜಯರಾಯನ ಸಮಾಚಾರಕ್ಕಾಗಿ ಒಂದು ದಿನ ಅವನ ಮನೆಗೆ ಬಂದನು. ಪ್ರತ್ಯಕ್ಷ ತನ್ನ ತಂಗಿಯಾದ ವತ್ಸಲೆಯ ಗಂಡನು ಬಂದಿರುವನೆಂದು ಕಂಡು ವಿಜಯರಾಯನು ಸಂತುಷ್ಟನಾಗಿ ಅವನಿಗಾಗಿ ಚಹಾ ಉಪಹಾರಗಳನ್ನು ಮಾಡೆಂದು ತನ್ನ ಪ್ರೀತಿಯ ಅರ್ಧಾಂಗಿಗೆ ಆಜ್ಞೆಗೈದನು.

ಮೊದಲಿಗೇ ವತ್ಸಲೆಗೂ ಸುಭದ್ರೆಗೂ ವೈಮನಸ್ಸು. ವತ್ಸಲೆಯ ಗಂಡನಿಗೆ ಅವಳು ಆದರಾತಿಥ್ಯವನ್ನು ತೋರಿಸುವಳೆ? “ಮುಂಜಾವಿನಿಂದ ಸಂಜೆವರೆಗೆ ಇದೇ ಉಸಾಬರಿಯನ್ನೆ ಮಾಡುತ್ತ ಕುಳಿತರೆ ಉಳಿದ ಕೆಲಸಗಳನ್ನಾರು ಮಾಡುವರು? ಬೀಗನಲ್ಲಿ ನಿಮಗೆ ಪ್ರೇಮವು ಹೆಚ್ಚಾಗಿದ್ದರೆ ಒಲೆಯ ಮುಂದೆ ಕುಳಿತು ಬೇಕಾದ್ದು ಮಾಡಿ ಹಾಕಿರಿ?” ಎಂದು ತಿರುಮಲ ರಾಯನಿಗೆ ಕೇಳಿಸುವ ಹಾಗೆ ಆ ಉದ್ಧತೆಯು ನುಡಿದಳು.

ವಿಜಯರಾಯನಿಗೆ ತುಸು ಕೋಪ ಬಂದಿತು. ರುದ್ರಾವತಾರವನ್ನು ತಾಳುವ ಸಮಯವಿದಲ್ಲೆಂದು ನೆನಿಸಿ ಅವನು ಸುಮ್ಮನಿದ್ದನು. ಭಗಿನೀ ಪತಿಯೂ, ಶ್ರೀಮಂತನೂ, ತನ್ನ ಸ್ನೇಹಿತನು, ಸಹಾಧ್ಯಾಯಿಯ ಆಗಿದ್ದ ತಿರುಮಲರಾಯನಿಗಾಗಿ ಉತ್ಸವದ ಭೋಜನ ಸಮಾರಂಭವನ್ನು ಮಾಡಿಸಬೇಕೆಂದು ಅವನು ಯೋಚಿಸುತ್ತಿರುವಾಗ ಆ ಚಂಡಿಯಾಗಿದ್ದ ಅವನ ಹೆಂಡತಿಯು ತಲೆ ಕಟ್ಟಿಕೊಂಡು ಮಲಗಿದ್ದಳು. ವಿಚಿತ್ರವನ್ನೆಲ್ಲ ಕಂಡು ತಿರುಮಲರಾಯನಿಗೆ ನಗೆ ಬಂದಿತು. ವಿಜಯರಾಯನು ತನಗೆ ಆದರವನ್ನು ತೋರಿಸುತ್ತಿದ್ದರೂ ಮನೆಯಲ್ಲಿ ಅವನ ಆಟವು ಸಾಗದಿರುವದನ್ನು ಕಂಡು ಅವನಿಗೆ ವಿಷಾದವಾಯಿತು. ತನ್ನ ಹೆಂಡತಿಯಾದ ವತ್ಸಲೆಯ ಮುಖದಿಂದ ಅವನು ಸುಭದ್ರೆಯ ಗುಣಾನುವಾದವನ್ನು ಕೇಳಿಯೇ ಇದ್ದನು. ಹಾಗೂ ಹೀಗೂ ಭೋಜನದ ಶಿಷ್ಟಾಚಾರವು ಮುಗಿಯಿತು.

ಭೋಜನೋತ್ತರ ಮಾತಿಗೆ ಮಾತು ಬಂದಾಗ ತಿರುಮಲರಾಯನು ವಿಜಯರಾಯನ ಸಂಸಾರಸುಖದ ಸಮಾಚಾರವನ್ನು ಕೇಳಿದನು. ಅನಿರ್‍ವಾಹಕ್ಕಾಗಿ ವಿಜಯರಾಯನಿಗೆ ತನ್ನ ನಿಜವಾದ ಸ್ಥಿತಿಯನ್ನು ಒಪ್ಪಿಕೊಳ್ಳಬೇಕಾಯಿತು. ಹೆಂಡತಿಗೆ ಅನರ್ಥಕರವಾದ ಸಲಿಗೆಯನ್ನು ಕೊಟ್ಟು ಪರಾಧೀನನಾದ ವಿಜಯರಾಯನನ್ನು ತಿರುಮಲರಾಯನು ಬಹುಪರಿಯಾಗಿ ಜರಿದು ಅಂದದ್ದು : “ವಿಜಯರಾಯ, ನೀನು ಕಾಲೇಜದಲ್ಲಿ ತತ್ವಜ್ಞಾನದ ಪುಸ್ತಕಗಳನ್ನು ಓದಿದವನು, ಸಂಸಾರದ ಅನೇಕವಾದ ಚಿತ್ರಗಳನ್ನು ಪ್ರತ್ಯಕ್ಷ ನೋಡಿದವನು. ಇತಿಹಾಸ ಪುರಾಣ ನಾಟಕ ಕಾದಂಬರಿಗಳಲ್ಲಿ ಬರೆದ ಆ ಚಿತ್ರಗಳ ವರ್ಣನೆಯನ್ನು ಓದಿದವನು; ಇಂಥವನು ಹೀಗೆ ಕೇವಲನಾದ ಸ್ತ್ರೈಣನಾಗಿರುವದನ್ನು ಕಂಡು ನನಗೆ ಬಹಳೇ ವ್ಯಸನವಾಯಿತು. ಸ್ತ್ರೀವಶನಾದವನಲ್ಲಿ ಭಕ್ತಿ, ವಾತ್ಸಲ್ಯ, ಕರ್ತವ್ಯದಕ್ಷತೆ, ಔದಾರ್ಯಾದಿ ಗುಣಗಳ ಲೋಪವೇ ಆಗುವದು. ಕುಲದೀಪಕನೂ, ಕೀರ್ತಿವಂತನೂ, ಸುಖಿಯೂ ಆಗಬೇಕೆಂದು ನೀನು ಸಂಸಾರವನ್ನು ಹೂಡಿದಿಯಲ್ಲ, ಸ್ತ್ರೀವಶನಾದ ನಿನಗೆ ಈ ಮೂರು ಉದ್ದೇಶಗಳಲ್ಲಿ ಯಾವದು ಸಾಧಿಸಿತು? ಅವಿಚರಿಯೇ, ನನ್ನಂಥ ಸ್ನೇಹಿತನಿಗೆ ತಾಯಿ ನೀರು ಕೂಡ ಕೊಡಲು ಅಸಮರ್ಥನಾದ ನಿನ್ನ ಜನ್ಮವು ಸುಟ್ಟಿತು. ಯಮುನಾಬಾಯಿಯವರಂಥ ಮಹಾಸಾಧಿಯಾದ ತಾಯಿಯ ಪಾದಸೇವೆಯನ್ನು ಕಳ ಕೊಂಡಿರುವವನಾದ ನೀನು ಪಾಪಿಯಲ್ಲದೆ ಮತ್ತಾರು? ವಿಜಯರಾಯ, ನಿಷ್ಟುರವಾಡಿದ್ದಕ್ಕೆ ಕ್ಷಮಿಸು. ಸ್ನೇಹಿತನ ಅಧಿಕಾರದಿಂದ ನಿನ್ನ ಉಚ್ಛ್ರೇಯವನ್ನು ಬಯಸಿ ಹೀಗೆ ಆಡಿದೆನು.”

“ತಿಮ್ಮಾ, ನೀನಾಡಿದ್ದೆಲ್ಲ ಸತ್ಯವೆ, ನಾನು ನಿಂದ್ಯನಾದ ಸ್ತ್ರೈಣನಾಗಿರುವೆನು. ಸುಧಾರಣಾವಾದಿಗಳ ಮಾತು ಕೇಳಿ ಹೆಂಡತಿಯು ನನ್ನ ಸಮಾನಸ್ಕಂಧಳೆಂದು ತಿಳಿದು ನಾನವಳನ್ನು ಆತ್ಯಾದರದಿಂದ ನಡೆಸಿಕೊಂಡೆನು. ಪಾಶ್ಚಿಮಾತ್ಯ ಸ್ತ್ರೀಯರಲ್ಲಿ ಏನು ಗುಣವಿರುವದೊ, ಅವರನ್ನು ಅವರ ಗಂಡಂದಿರು ತಮ್ಮ ಸಮಾನರೆಂದು ತಿಳಿದರೂ ಅವರು ಪತಿಗಳ ತಲೆಯ ಮೇಲೆ ಏರಿ ಕೂಡುತ್ತಿರಲಿಕ್ಕಿಲ್ಲ. ಮೂಢನಾದ ನಾನು ಹೆಂಡತಿಗೆ ಸಲಿಗೆಯನ್ನು ಕೊಟ್ಟು ಅಸುಖಿಯಾಗಿರುವೆನು. ಹೆಂಡತಿಗೆ ನಾನೆಷ್ಟು ಪರಿಯಾಗಿ ಬೋಧಿಸಿದರೂ ಅವಳಿಗೆ ತಿಳುವಳಿಕೆ ಬಾರದು, ಏನು ಮಾಡಲಿ? ಯತ್ನ ಮೀರಿದ ಮಾತಾಗಿದೆ.” ಎಂದು ವಿಜಯರಾಯನು ಬಹು ವಿಷಾದದಿಂದ ಮಾತಾಡಿದನು.

“ಹುಚ್ಚನ ಹಾಗೆ ಮಾತಾಡಬೇಡ. ಪ್ರತಾಪರಾಯನು ತ್ರಾಟಿಕೆಯನ್ನು ಮಣಿಸಿದ ಮಂತ್ರವನ್ನು ಕೈಕೊಂಡು ನೋಡು, ಮೀರದ ಪಕ್ಷದಲ್ಲಿ “ಮರ್ದನಂ ಗುಣವರ್ಧನಂ” ಎಂಬ ಅಂತಿಮವಾದ ಉಪಾಯವಿದ್ದೆ ಇರುವದು. ತುಸು ಗಂಡಸಿನಂತೆ ವರ್ತಿಸಿ ನೋಡು.”

ತಿರುಮಲರಾಯನು ಊರಿಗೆ ಹೋದ ಮರುದಿವಸವೇ ವಿಜಯರಾಯನು ನಿಶ್ಚಯದಿಂದಲೂ ಜಾಣ್ಮೆಯಿಂದಲೂ ಪ್ರತಾಪರಾಯನ ಉಪಾಯಗಳನ್ನು ಯೋಚಿಸಲಾರಂಭಿಸಿದನು. ರಾಮಸಿಂಗನು ಕುದುರೆಯ ಮೈ ತಿಕ್ಕಿಲ್ಲವೆಂದು ಹೇಳಿ ವಿಜಯರಾಯನು ಅವನನ್ನು ಬಾರಕೋಲಿನಿಂದ ಹೆಣ ಬೀಳ ಹೊಡೆದನು. ಸುಭದ್ರೆಯು ಕನಿಕರಪಟ್ಟು ಅವನನ್ನು ಹೊಡೆಯಬಾರದೆಂದು ಗಂಡನಿಗೆ ಹೇಳಹೋದಳು. “ಸುಮ್ಮನಿರು! ನಿನ್ನದಲ್ಲದ ಮಾತಿನಲ್ಲಿ ಬಾಯಿ ಹಾಕಿದರೆ ಒಳಿತಾಗಲಿಕ್ಕಿಲ್ಲ!” ಎಂದು ಅವನು ಒಳ್ಳೆ ಕೋಪಾಟೋಪದಿಂದ ಆಜ್ಞಾಪಿಸಿದನು. ರಾಮಸಿಂಗನಿಗೆ ಬಿದ್ದ ಹೊಡತಗಳನ್ನು ನೋಡಿಯೇ ಸುಭದ್ರೆಯು ತುಸು ಅಂಜಿದ್ದಳು. ಎಂದು ಇಲ್ಲದೆ ಇಂದು ತನ್ನ ಮೇಲೆ ಗಂಡನು ಸಿಟ್ಟಾಗಿದ್ದು ಕಂಡು ಅವಳು ಮತ್ತಿಷ್ಟು ಅಂಜಿದಳು. ಇದಾಗಿ ಕೆಲವು ಹೊತ್ತಿನ ಮೇಲೆ ಸುಭದ್ರೆಯು ಗಂಡನನ್ನು ಭೋಜನಕ್ಕೆ ಎಬ್ಬಿಸಿದಳು; ಅವನು ಏಳಲಿಲ್ಲ. ತುಸು ಹೊತ್ತಿನ ಮೇಲೆ ಮತ್ತೊಮ್ಮೆ ಎಬ್ಬಿಸ ಬಂದಳು. ಆದರೂ ಅವನು ಏಳಲಿಲ್ಲ. ಮೂರನೆಯ ಸಾರೆ ಅವಳು ಗಂಡನ ಬಳಿಗೆ ಬಂದು “ಏಳುವದಿಲ್ಲವೆ? ನನಗೆ ಹಸಿವೆ ಬಹಳಾಗಿದೆ; ಬಿಟ್ಟು ಊಟಕ್ಕೆ ಕೂಡುವೆನು ನೋಡಿರಿ” ಎಂದು ಅವಳು ತನ್ನ ಪೂರ್ವ ಸ್ವರೂಪವನ್ನು ತಾಳಿ ಕೇಳಿದಳು.

“ತಿನ್ನು ಹೋಗು!” ಎಂದು ವಿಜಯರಾಯನು ಗದರಿಸಿ ನುಡಿದನು.

ಇಂದಿನ ಮುಹೂರ್ತವು ಚನ್ನಾಗಿ ಇಲ್ಲವೆಂದು ತಿಳಿದು ಸುಭದ್ರೆಯು ಹುದುಗಿಕೊಂಡು ಸುಮ್ಮನೆ ಒಳಮನೆಗೆ ಹೋದಳು. ಇಳಿಹೊತ್ತಾದರೂ ವಿಜಯರಾಯನು ಊಟಕ್ಕೆ ಏಳದಿದ್ದದ್ದು ಕಂಡು ಸುಭದ್ರೆಯು ಹಿಟ್ಟು ಆವಲಕ್ಕಿಗಳನ್ನು ತಿಂದು ಕುಳಿತಳು. ಮತ್ತೊಮ್ಮೆ ಗಂಡನನ್ನು ಊಟಕ್ಕೆ ಕರೆಯಲು ಅವಳಿಗೆ ಧೈರ್ಯ ಸಾಲಲಿಲ್ಲ. ವಿಜಯರಾಯನಾದರೂ ಪೇಟೆಯಿಂದ ಹಣ್ಣು ಹಂಪಲಗಳನ್ನು ತರಿಸಿಕೊಂಡು ತಿಂದನು. ಮಾಡಿದ ಆಡಿಗೆಯು ಹಾಗೆಯೇ ಉಳಿಯಿತು. “ಸಂಜೆಯ ಆಡಿಗೆಯನ್ನಾದರೂ ಮಾಡತಕ್ಕದ್ದೂ ಇಲ್ಲವೊ?” ಎಂದು ಸುಭದ್ರೆಯು ತುಸು ವಿನೀತೆಯಂತೆ ಕೇಳಿದಳು.

“ನನಗೆ ಗೊತ್ತಿಲ್ಲ!”

ಆ ದಿವಸ ಗಂಡಹೆಂಡರ ನಡುವೆ ಇದಕ್ಕೂ ಹೆಚ್ಚಿಗೆ ಮಾತುಗಳಾಗಲಿಲ್ಲ. ವಿಜಯರಾಯನು ಆ ರಾತ್ರಿ ತನ್ನ ಶಾಲು ಹೊದ್ದು ಕೊಂಡು ಪಡಶಾಲೆಯಲ್ಲಿಯೇ ಮಲಗಿಕೊಂಡನು, ಮರುದಿವಸ ಬೆಳಗಿನಲ್ಲಿ ಎದ್ದು ಅವನು ಅಡಿಗೆಯವಳಿಗೂ, ಒಕ್ಕಲಗಿತ್ತಿಗೂ, ಕೈಯಾಳಿಗೂ ಅವರವರಿಗೆ ಸಲ್ಲತಕ್ಕ ಸಂಬಳಗಳನ್ನು ಕೊಟ್ಟು ಮನೆಬಿಟ್ಟು ಹೊರಗೆ ಹಾಕಿದನು. ರಾಮಸಿಂಗನಂತೂ ಬಡಿಸಿಕೊಂಡವನು ಮನೆಗೆ ಬರಲೇ ಇಲ್ಲ.

ಈ ಅನಾಹತದ ಅರ್ಥವೇನೆಂಬದು ಸುಭದ್ರೆಗೆ ತಿಳಿಯದಾಯಿತು. ಗಂಡನ ಮೋರೆ ನೋಡಲು ಆದು ಉಗ್ರವಾಗಿ ಕಾಣುತ್ತಿತ್ತು. ಅವನನ್ನು ಮಾತಾಡಿಸಲು ಅವಳಿಗೆ ಧೈರ್ಯ ಸಾಲಲಿಲ್ಲ. ಕೈಯಲ್ಲಿ ಜೀವ ಹಿಡುಕೊಂಡು ಅವಳು ಮೆಲ್ಲನೆ “ಅಡಿಗೆಯವಳನ್ನು ಹೊರಗೆ ಹಾಕಿದ್ದೇಕೆ? ಮನೆಯಲ್ಲಿ ಕೆಲಸ ಹೇಗೆ ಸಾಗಬೇಕು?” ಎಂದು ಕೇಳಿದಳು. ಉತ್ತರವೇ ಇಲ್ಲ. ನಾಲ್ಕೂ ಮನೆಯ ಕಸ ತೆಗಿಯಬೇಕಾದರೆ ಅವಳಿಗೆ ದಮ್ಮಯ್ಯ ದಪ್ಪಯ್ಯ ಆಗಿ ಹೋಯಿತು. ನೀರು ಹೊತ್ತು ಅಡಿಗೆ ಮಾಡಬೇಕಾದರೆ ಸುಭದ್ರೆಯ ಕಣ್ಣೀರು ಕೆನ್ನೆಗೆ ಬಂದಿತ್ತು. ವಿಜಯರಾಯನು ಬೇಕುಬೇಡನ್ನದೆ ಮೌನದಿಂದ ಉಣ್ಣುತ್ತಿರುವದನ್ನು ಕಂಡು “ಮಾತಾಡುವದಿಲ್ಲವೇಕೆ? ನನ್ನಿಂದೇನಾದರೂ ತಪ್ಪಾಗಿರುವದೇನು?” ಎಂದು ಹೆಂಡತಿಯು ಕೇಳಿದಳು. ಮತ್ತಾದರೂ ಉತ್ತರವಿಲ್ಲ. ಪ್ರೌಢೆಯಾದ ಆ ತರುಣಿಗೆ ದುಃಖವಾಗಿ ತಟತಟನೆ ಕಣ್ಣೀರು ನೆಲಕ್ಕೆ ಉದುರಿದವು.

ಆ ರಾತ್ರಿ ಯಾದರೂ ಬೇರೆ ಹಾಸಿಗೆ ಮಾಡಿಕೊಂಡು ಮಲಗಿದ ತನ್ನ ಪತಿಯ ಸಮೀಪಕ್ಕೆ ಹೋಗಿ ತನ್ನ ಮೇಲೆ ಇಷ್ಟು ಕೋಪವೇಕೆ೦ದು ಕೇಳ ಹೋದಳು. ತನ್ನನ್ನು ಮುಟ್ಟಕೂಡದೆಂದು ವಿಜಯರಾಯನು ನಿಷ್ಟುರನಾಗಿ ಹೇಳಿ ಮುಸುಕಿಟ್ಟುಕೊಂಡು ಮಲಗಿದನು. ಸುಭದ್ರೆಯು ಅವನ ಕಾಲುದೆಸೆಯಲ್ಲಿ ಕುಳಿತು ಮುಳುಮುಳು ಅತ್ತಳು. ಅಪರಾಧವಿಲ್ಲದೆ ತನ್ನ ಮೇಲೆ ಪತಿಯು ಇಷ್ಟೇಕೆ ಮುನಿದನೆಂಬ ಚಿಂತೆಗಾಗಿ ಅವಳ ಕಣ್ಣಿಗೆ ಕಣ್ಣು ಹತ್ತಲೊಲ್ಲದು. ಸರಿರಾತ್ರಿಯಾದರೂ ಅವಳು ತನ್ನ ಸ್ಥಳವನ್ನು ಬಿಟ್ಟೇಳಲಿಲ್ಲ. ಪೃಥಕ್ ಶಯ್ಯೆಯು ನಾರಿಯರಿಗೆ ಮರಣ ಸಮಾನವಾದ ವ್ಯಸನವೆಂಬದು ಸುಳ್ಳಲ್ಲ.

ಹೆಂಡತಿಯು ಹೀಗೆ ಹಣಾಗಿರುವದನ್ನು ಕಂಡು ತನ್ನ ಕಾರ್ಯವು ಸಾಧಿಸಿತೆಂದು ನಂಬಿ ವಿಜಯರಾಯನಿಗೆ ಸಂತೋಷವೂ, ಅವಳ ದುರ್ದೆಶೆಯನ್ನು ಕಂಡು ಕನಿಕರವೂ ಉಂಟಾಗಿ ಅವನಿಗೆ ನಿದ್ರೆ ಬರಲೇ ಇಲ್ಲ. ಅವನು ಸುಭದ್ರೆಯ ಚಲನವಲನಗಳನ್ನು ಮುಸುಗಿನೊಳಗಿಂದಲೇ ನಿರೀಕ್ಷಿಸುತ್ತಿದ್ದನು.

“ನಾನು ನನ್ನ ಪಾತಿವ್ರತ್ಯದ ಸನ್ಮಾರ್ಗದಿಂದ ಒಂದು ಹೆಜ್ಜೆಯನ್ನಾದರೂ ಅಡ್ಡತಿಡ್ಡಾಗಿ ಇಟ್ಟಿಲ್ಲ. ಹಾಗಿರಲು ಪತಿಯ ಮನಸ್ಸು ಕ್ಷುಬ್ದವಾಗಿರುವ ಕಾರಣವೇನು? ನಾನು ಅವಿನೀತೆಯಾಗಿ ವರ್ತಿಸಿದೆನೇನು? ಸತ್ಯ! ಅತ್ತೆಯವರ ಕೂಡ ಚನ್ನಾಗಿ ನಡಕೊಳ್ಳಲಿಲ್ಲ. ನಾದಿನಿಯಾದ ವತ್ಸಲಾ ಬಾಯಿಯವರೊಡನೆ ನಿಷ್ಕಾರಣವಾಗಿ ವ್ಯಾಜ್ಯ ಮಾಡಿದನು. ಅವರಿಗೆ ಉಡುಗರೆಯಾಗಿ ಹತ್ತೆಂಟು ಜವಳಿಗಳನ್ನಾದರೂ ಕೊಡಬಹುದಾಗಿದ್ದರೂ ಒಪ್ಪತ್ತು ಅವರು ನನ್ನ ಸೀರೆಯನ್ನುಟ್ಟುಕೊಂಡಿರಲು ಉನ್ಮತ್ತಳಾದ ನಾನು ಅದನ್ನು ಕಳೆಸಿಕೊಂಡೆನು. ಸತಿಯ ಪ್ರೀತಿಯ ತಂಗಿಗೆ ನಾನು ಅನಾದರವನ್ನು ತೋರಿಸಿದರೆ ಅವರು ಕ್ಷಮಿಸುವರೆ? ಪತಿಯ ಬಾಯಿಯಿಂದ ಮಾತುಗಳು ಹೊರಡುವದಕ್ಕೆ ಮುಂಚಿತವಾಗಿ ಆ ಆಜ್ಞೆಯನ್ನು ಶಿರಸಾವಹಿಸಲಿಕ್ಕೆ ನಾನು ಸಿದ್ದಳಾಗಿರತಕ್ಕವಳು. ಬೇಕಾಗಿ ನಾನು ನನ್ನ ಪತಿದೇವರ ಆಜ್ಞೆಗಳನ್ನು ಉಲ್ಲಂಘಿಸಿದೆನು. ಇಂಥ ಆಕ್ಷಮ್ಯವಾದ ಅನೇಕ ಅಪರಾಧಗಳನ್ನು ನಾನು ಮಾಡಿದೆನಲ್ಲೆ? ಬೇಡಿ ಬೇಡಿದ ಹಾಗೆ ನಿನ್ನ ಅಭೀಷ್ಟೆಗಳನ್ನು ಪೂರೈಸುವ ಪ್ರಾಣಕಾಂತರ ಮನಸ್ಸು ಖಿನ್ನ ವಾಗುವಂಥ ಕೃತಿಗಳನ್ನು ಮಾಡಿ, ಸುಭದ್ರೆ, ಅಪರಾಧವೇನೆಂದು ನೀನು ಅದೇ ಪತಿರಾಯರನ್ನು ಕೇಳಿದಿಯಾ?” ಎಂದು ಯೋಚಿಸುತ್ತೆ ಪಶ್ಚಾತ್ತಾಪದ ಭರದಿಂದ ನಮ್ರಳಾಗಿ ಕೆಲಹೊತ್ತು ಕುಳಿತ ಬಳಿಕ ಸುಭದ್ರೆಯು ತನ್ನ ಪ್ರಾಣಕಾಂತನ ಪಾದಗಳನ್ನು ಗಟ್ಟಿಯಾಗಿ ಹಿಡಿದು “ಈ ತೊತ್ತಿನ ಅಪರಾಧಗಳನ್ನು ಕ್ಷಮಿಸುವಿರೇನು?” ಎಂದು ಬಹು ಆರ್ತಳಾಗಿ ಕೇಳಿದಳು.

ವಿಜಯರಾಯನು ಮುಸುಗ ತೆಗೆದು “ಈಗ ನೀನು ಮಲಗಲಿಕ್ಕೆ ಹೋಗು, ಇನ್ನು ಹದಿನೈದು ದಿವಸಗಳವರೆಗೆ ನೀನು ವಿನೀತೆಯಾಗಿ ವರ್ತಿಸಿದ್ದು ನಾನು ಮನಮುಟ್ಟಿ ಕಂಡೆನೆಂದರೆ ಕ್ಷಮೆಯ ವಿಚಾರವನ್ನು ಮಾಡುವೆನು” ಎಂದು ಅವನು ಉದಾಸೀನನಂತೆ ನುಡಿದರೂ ಅವನ ಮನಸ್ಸು ಕರಗಿ ನೀರಾಗಿತ್ತು.

“ನನ್ನ ದೇವರೆ, ಹದಿನೈದು ದಿವಸಗಳವರೆಗೇಕೆ, ಯಾವಜೀವ ನಾನು ಕೇವಲ ವಿನೀತೆಯಾಗಿ ವರ್ತಿಸುವೆನು. ಈ ಪಾದಗಳಿಗಿಂತಲೂ ಪವಿತ್ರವಾದ ವಸ್ತುವು ಈ ಜಗತ್ತಿನಲ್ಲಿ ನನಗೆ ಮತ್ತೊಂದಿಲ್ಲ. ಈ ಪಾದಗಳ ಸಾಕ್ಷಿಯಾಗಿ ನಾನು ಪ್ರಮಾಣ ಮಾಡಿ ಹೇಳುತ್ತೇನೆ. ನಾನು ಯಾವಾಗಲೂ ಪ್ರಾಣಕಾಂತರಿಗೆ ಪ್ರಿಯವಾದದ್ದನ್ನೇ ಮಾಡುತ್ತಲಿರುವೆನು, ಆಯಿತೆ! ಈಗಲಾದರೂ ನನ್ನನ್ನು ಕ್ಷಮಿಸಬೇಕು” ಎಂದು ನುಡಿದ ಆ ತಪಸ್ವಿನಿಯು ಪತಿಯ ಪಾದದ ಮೇಲೆ ಹಣೆ ಇಟ್ಟಳು.

ವಿಜಯರಾಯನು ಭರದಿಂದೆದ್ದು ತನ್ನ ಪ್ರಾಣಕಾಂತೆಯನ್ನು ಎತ್ತಿ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಪ್ರೇಮದಿಂದ ಅವಳ ಗದ್ದವನ್ನು ಹಿಡಿದು “ಪ್ರಿಯೆ ಕ್ಷಮಿಸಿರುವೆನು ಕಂಡಿಯಾ! ನೀನಿನ್ನು ಗುರುಹಿರಿಯರನ್ನು ಪೂಜಿಸುವವಳೂ ಅತಿಥಿ ಅಭ್ಯಾಗತರನ್ನು ಆದರಿಸುವವಳೂ ಆಗಿ ನಿನ್ನ ಪತಿಯಾದ ನನ್ನ ಕೀರ್ತಿಯು ಹೆಚ್ಚಾಗುವಂತೆಯೂ ವರ್ತಿಸಿದರೆ ಗೃಹಮೇಧಿಗಳಾದ ನಾವು ಐಹಿಕ ಸುಖದ ಸ್ವಾರಸ್ಯವನ್ನು ಸೇವಿಸಿ ಪರಲೋಕವನ್ನು ಅಗ್ಗದಲ್ಲಿ ಕಂಡುಕೊಳ್ಳವ” ಎಂದು ಹೇಳಿದನು.

ಆ ಕಾಲದಲ್ಲಿ ಸುಭದ್ರೆಯು ಅನುಭವಿಸಿದ ಸುಖಕ್ಕೆ ಪರಿಮಿತಿ ಇರಲಿಲ್ಲ. ಸುಭದ್ರೆಯು ನಿದ್ದೆ ಗೈದು ಕೃತಾರ್ಥಳಾಗಿಯೇ ಎದ್ದಳು. ಸೂರ್ಯೋದಯದೊಂದಿಗೆ ಸುಭದ್ರೆಯ ಉದಯಕಾಲವಾದರೂ ಪ್ರಾಪ್ತವಾಯಿತು. ನಿರುಪಮಳಾದ ಸತಿಯೆಂದರೆ ಸುಭದ್ರೆಯೇ. ಅತ್ತೆಯ ಆಜ್ಞಾನುವರ್ತಿನಿಯೆಂದರೆ ಅವಳೇ, ಆಪ್ತರಿಷ್ಟರ ಸುಖಸಮಾಚಾರಗಳನ್ನು ನೋಡುವವಳೆಂದರೆ ಅವಳೇ, ಎಂದು ಲೋಕವೆಲ್ಲ ಹೊಗಳಲಾರಂಭಿಸಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶ್ರಾವಣ ಬಂತೆಂದರೆ
Next post ಹೀರೋ ಇಂದ ಜೀರೋ

ಸಣ್ಣ ಕತೆ

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…