ಆ ರಾಮ!

ಆ ರಾಮ!

ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು ಮೆಟ್ಟಲುಗಳಮೇಲಿಂದ, ಗಡೆ-ಗಡೆಗಳ ಮೇಲಿಂದ ಜಿಗಿಜಿಗಿಯುತ್ತ ನೀರಿನಲ್ಲಿ ಈಜಾಡುತ್ತಿದ್ದಾರೆ; ಸುರ್ಽಽ ಎಂದು ನೀರಾಟವಾಡಿ ಕೇಕೆ ಹಾಕುತ್ತಿದ್ದಾರೆ. ಹೆಂಗಸರು ಕೆಲವರು ದಂಡೆಯಲ್ಲಿಯ ಒಗೆದ ಅರಿಬೆಗಳ ಮೊಟ್ಟೆಯನ್ನು ಹಿಂಡುತ್ತಲಿದ್ದಾರೆ; ಹಲವರು ಬಿಂದಿಗೆ ಕೊಡಗಳನ್ನು ಲಕಲಕನೆ ತಿಕ್ಕುತ್ತಿದ್ದಾರೆ. ಇವೆಲ್ಲ ಉತ್ಸಾಹದ ಸಪ್ಪಳದಲ್ಲಿ ಮೇಲಿನಿಂದ ಘಂಟೆಯ ವಾದ್ಯವು ವಾತಾವರಣವನ್ನು ತುಂಬಿಕೊಂಡು ತೇಲಿ ತೇಲಿ ಬರುತಲಿದೆ. ಹೆಂಗಸರೇ ಆಗಲಿ, ಗಂಡಸರೆ ಆಗಲಿ ಹೊಂಡದಲ್ಲಿ ಸ್ನಾನಮಾಡಿದವರೆಲ್ಲ ಸಮತಾವಾದದಲ್ಲಿ ಮಮತೆಯನ್ನು ತೋರಿಸುವವರಂತೆ ಆ ಗಂಟೆಯ ನಾಲಗೆಯನ್ನು ಅಲುಗಾಡಿಸುತ್ತಾರೆ. ಎದುರಿಗಿದ್ದ ಮೂರುತಿಗೆ ಆ ಗಂಟೆಯ ಸಪ್ಪಳವು ಕೇಳಿಸುತ್ತದೆಯೋ ಇಲ್ಲವೋ! ಜನರಾಡುವ ಮಾತುಗಳು ಅವನ ಹೃದಯದಲ್ಲಿ ನಾಟುತ್ತಿದ್ದವೊ ಇಲ್ಲವೊ! ಏನೆಂದರೂ ಅವನು ಕಲ್ಲೆದೆಯವನು! ಆದರೆ ಇನ್ನೊಂದು ಬದಿಗೆ ಕಟ್ಟೆಯ ಮೇಲೆ ಕುಳಿತಿರುವ ಮಂಗಪ್ಪನಿಗೆ ಮಾತ್ರ ಅವೆಲ್ಲವೂ ಅರ್ಥಪೂರ್ಣವಾಗಿ ಕಾಣುತ್ತಿದ್ದವು. ದೇಗುಲದಲ್ಲಿ ನಿನಾದವು ಅವನ ಭಕ್ತಿಭಾವವನ್ನು ಅರಳಿಸಿ ಅವನನ್ನು ಹಾಡಿ ಹಚ್ಚುತ್ತಿತ್ತು. ತಾಳಿಲ್ಲ, ತಂತಿಲ್ಲಿ – ‘ರಘುಪತಿ ರಾಘವ ರಾಜಾರಾಮ! ಪತೀಶ ಪಾವನ ಸೀತಾರಾಮ! ಎಂಬ ಪಲ್ಲವಿಯನ್ನು ಮುಕ್ತ ಕಂಠನಾಗಿ ಹಾಡುತ್ತಿದ್ದ. ನೀರಿನಲ್ಲಿರುವ ಜನರೆಲ್ಲರೂ ‘ಸಾಕೋ ಬಿಡಪ್ಪ’ ಎಂದು ಒದರಿಕೊಂಡರೂ ಅವನು ತನ್ನ ಹಾಡಿಕೆಯನ್ನು ಬಿಡುತ್ತಿರಲಿಲ್ಲ.

ಅವನಿಗೆ ಬಾಲವೊಂದಿದ್ದರೆ ಸಂಪೂರ್ಣವಾಗಿ ಮಂಗನೆ ಆಗುವನೆಂದು ಜನರೆಲ್ಲರೂ ಚೇಷ್ಟೆ ಮಾಡುತ್ತಾರೆ. ಒಮ್ಮೆ ಅರ್ಧಾಂಗವಾಯುವಿನ ಬೇನೆ ಬಂದು ಅವನ ಮೈ ಕಟ್ಟನ್ನು ಕೆಡಿಸಿಬಿಟ್ಟಿದೆ. ಮೊದಲೆ ಕುರೂಪ! ಅವನ ದಪ್ಪವಾದ ತುಟಿಗಳು, ವಿಶಾಲವಾದ ಹುಬ್ಬುಗಳು, ಮಂಗನಂತೆ ಮುಂಬಂದ ಮೊಗದ ಬಗೆ ಎಲ್ಲವೂ ಡಾರ್ವಿನ್ನನು ಇವನನ್ನು ನೋಡಿಯ ತನ್ನ ಸಿದ್ದಾಂತವನ್ನು ಶೋಧಿಸಿದನೆಂದು ತೋರುವ ಹಾಗಿದೆ. ಯಾರಾದರೂ ನಾಟಕದ ಮಾಲಕರು ಇವನನ್ನು ಕಂಡಿದ್ದರೆ, ಒಮ್ಮೆ ‘ಸಂಪೂರ್ಣ ರಾಮಾಯಣ’ದ ನಾಟಕಕ್ಕೆ ಇವನನ್ನು ಹನುಮಂತನ ಪಾತ್ರವನ್ನು ವಹಿಸಲು ಜುಲುಮೆಯಿಂದ ಹೊತ್ತು ಕೊಂಡು ಹೋಗಬಹುದಿತ್ತು. ಹೊಂಡದ ಮೇಲೆಯೆ ರಾಮನ ನಾಮವನ್ನು ಕಿರಿಚಿಕೊಳ್ಳುವದಕ್ಕಿಂತ, ನಾಟಕಗೃಹದಲ್ಲಿ ಹಾಗೆ ಮಾಡಿದರೆ ಬೇಕಾದ ಹಾಗೆ ದುಡ್ಡುಗಳಿಸಬಹುದಿತ್ತು. ಜನರೆಲ್ಲರೂ ಇವನನ್ನು ಮೆಚ್ಚುತ್ತಿದ್ದರು, ಇವನಿಗೆ ಹೂಮಾಲೆಗಳನ್ನು ಅರ್ಪಿಸುತ್ತಿದ್ದರು. ಒಂದು ದೃಶ್ಯದಲ್ಲಿ ಸ್ವತಃ ಶ್ರೀರಾಮನೆ ಪ್ರತ್ಯಕ್ಷನಾಗುತ್ತಿದ್ದ. ಅಹ! ಅದೆಂಥ ಕಲ್ಪನೆ! ಮೂಲೆಯಲ್ಲಿ ಕುಳಿತ ಮಂಗಪ್ಪನನ್ನು ನೆನೆದಾಗಲೆಲ್ಲ ಈ ಕಲ್ಪನಾವಿಲಾಸವು ನನ್ನಲ್ಲಿ ಬಾರದೆ ಹೋಗಿಲ್ಲ. ಆದರೇಕೋ ಅವನ ಮುಂದೆ ನಾನದರ ವಿಚಾರವನ್ನು ತೆಗೆದಿರಲಿಲ್ಲ. ನನ್ನ ಕಣ್ಣಿಗೆ ಅವನು ಯಾವಾಗಲೂ ಸಂತುಷ್ಟನಾಗಿಯೆ ಕಾಣಿಸುತ್ತಿದ್ದ.

ಅದೇಕೊ ಚಿಕ್ಕಂದಿನಿಂದಲೂ ನನ್ನ ಮೇಲೆ ವಿಶೇಷವಾದ ಮಮತೆ ಅವನದು. ಈಜು ಕಲಿಯಲೆಂದು ಹೋದವನು ನೀರಿಗೆ ಅಂಜಿ ದೂರ ದೂರ ಸರಿಯುತ್ತಿರುವಾಗ, ‘ಇಷ್ಟಕ್ಕ ಅಂಜತಾರ್ರೀ ಯಪಾ? ಬರ್ರಿ ನಾ ಒಯ್ತೀನಿ’ ಎಂದು ತನ್ನ ಹೆಗಲ ಮೇಲೆ ನನ್ನನ್ನು ಕುಳ್ಳಿರಿಸಿಕೊಂಡು ಆಟವಾಡುತ್ತ ಹೋಗಿ ನಡುನೀರಿನಲ್ಲಿ ನನ್ನನ್ನು ಬಿಟ್ಟು ಬಿಡುತ್ತಿದ್ದನು. ನಾನು ನೀರು ಕುಡಿಕುಡಿದು ‘ಅಯ್ಯೋ’ ಎಂದು ಎಲ್ಲರನ್ನೂ ಶಪಿಸುತ್ತಿರುವಾಗ ‘ಕಾಲ ಬಿಡಿರಿ…….. ಕಾಲ ಬಿಡಿರಿ’ ಎಂದು ಉಪದೇಶಿಸುತ್ತ ನನ್ನನ್ನು ದಂಡೆಗೆ ಕರೆತರುತ್ತಿದ್ದನು. ನಾನೆಷ್ಟು ಅವನನ್ನು ಬಯ್ದರೂ ಅವನು ಮಾತ್ರ ಸಿಟ್ಟಿಗೇಳುತ್ತಿರಲಿಲ್ಲ. ನೀರಿನಿಂದ ಎದ್ದು ಬಂದಮೇಲೆ ಕಟ್ಟೆಗೆ ಕರೆದುಕೊಂಡು ಹೋಗಿ ತನ್ನ ಹೊಟ್ಟೆಯ ಮಗನಂತೆ ಮಮತೆಯಿಂದ ನನ್ನನ್ನು ತನ್ನ ಹತ್ತಿರವೆ ಕುಳ್ಳಿರಿಸಿಕೊತ್ತಿದ್ದ; ಮೂಗಿನ ಮೇಲ್ಬಾದಲ್ಲಿ ಯಾವುದೊ ಭಂಡಾರವನ್ನು ಬಡಿಯುತ್ತಿದ್ದ; ಆಮೇಲೆ ಕೈಮಾಡುತ್ತ, ತೊಡೆಯಿಂದ ತಾಳ ಹಾಕುತ್ತ,

`ಎಷ್ಟು ಸೇವಿಸಿದರು
ಗುರುಸಿದ್ದೇಶ್ವರನ ಮಹಿಮಾ ತಿರಽದು’

ಎಂಬ ಹಾಡಿನ ಪಲ್ಲವಿಯನ್ನು ಪ್ರಾರಂಭಿಸುತ್ತಿದ್ದ. ಆ ಹಾಡಿನ ಅರ್ಥವು ನನಗೆಷ್ಟು ತಿಳಿಯುತ್ತಿತೋ! ಆದರೆ ಗೋಣು ಮಾತ್ರ ಹಾಕುತ್ತಿದ್ದೆ, ಏಕೆಂದರೆ ಹಿಂದುಗಡೆ ಮಾರುತಿಯ ಪ್ರಸಾದವೆಂದು ನನಗೆ ಅರ್ಧ ಖೊಬ್ಬರಿಯ ಬಟ್ಟಲವನ್ನು ಕೊಡುತ್ತಿದ್ದ. ಎಳೆ ವಯಸ್ಸು; ಅದೆ ನನಗೆ ಎಷ್ಟೋ ಹರುಷವನ್ನು ತರುತ್ತಿತ್ತು.

‘ನನಗಿಂತಲೂ ನನ್ನ ತಾಯಿಗೆ ಬಹಳ ಆನಂದ, ದೇವರ ಪ್ರಸಾದವೆಂದು ನಾನು ತಂದ ಬಟ್ಟಲವನ್ನು ಮಮತೆಯಿಂದ ಸ್ವೀಕರಿಸಿದಾಗ ನನಗೊಂದು ಉಂಡೆಯನ್ನು ಕೊಡುತ್ತಿದಳಲ್ಲದೆ ಮುಂಗಪ್ಪನಿಗೂ ಅಕ್ಕಿ ಮುಂತಾದ ಧಾನ್ಯಗಳ ದಾನ ಕೊಡುತಿದ್ದಳು. ನಮ್ಮ ಓಣಿಯಲ್ಲಿ ಅವನು ಹಾದು ಹೋಗುವವನಿದ್ದರೆ ನಮ್ಮ ಮನೆಗೆ ಬಂದು ‘ಏನಾದರೂ ಕೆಲಸ ಐತೇನ್ರಿ?’ ಎಂದು ಕೇಳದೆ ಹೋಗುತ್ತಿರಲಿಲ್ಲ. ನಾನು ಮನೆಯಲ್ಲಿ ಇದ್ದುದನ್ನು ಕಂಡು ನನ್ನನ್ನು ಕೂಡಿಸಿಕೊಂಡು ಎಷ್ಟೋ ಹಾಡುಗಳನ್ನು ಹೇಳುತ್ತಿದ್ದ. ಸುತ್ತಲೂ ಕುಳಿತ ಇನ್ನಿತರ ಹುಡುಗರು “ಮಂಗಪ್ಪ…..ಇನ್ನೊಂದು?” ಎಂದು ಕೇಳುತ್ತಿದ್ದರು. ಅವನಿಗೂ ದಣಿವೆ ಇರಲಿಲ್ಲ. ಹಗಲೇನು, ರಾತ್ರಿಯೇನು ಹಗಲೆಲ್ಲ ನಮ್ಮ ಮನೆಗೆ ಬರುತ್ತಿದ್ದನು. ಪದ್ಯದಲ್ಲಿ ಧಾಟಿ ಇದ್ದರೇನು, ಇಲ್ಲದಿದರೇನು; ಧ್ವನಿಯಲ್ಲಿ ಇಂಪು ಇದ್ದರೇನು, ಇಲ್ಲದಿದ್ದರೇನು ತನಗೆ ತಿಳಿದಂತೆ ಹಾಡುತ್ತಿದ್ದ. ಒಮ್ಮೊಮ್ಮೆ ರಾತ್ರಿಯಲ್ಲಿ ಅವನ ಸಂಗೀತವನ್ನು ಕೇಳುತ್ತ ಹುಡುಗರು ನಿದ್ದೆವೋಗುತಿರಲು-

ಗುರು ರಾಮು ಏ, ನೀವೆನಾಡತಿರಿ?
ನಾನೆದ್ದು ಹೋಗುವಾಗ ಸುಮ್ಮನೆ ಮಲಗೀರಿ?

ಎಂದು ಹಾಡಿದ ಕೂಡಲೆ, ಎಲ್ಲರೂ ನಿದ್ದೆಗಣ್ಣಿನಿಂದ ಎಚ್ಚತ್ತು ಖೊಳ್ಳನೆ ನಗುತ್ತಿದ್ದರು. ನಿದ್ದೆ ಓಡಿಬಿಡುತ್ತಿತ್ತು. ಅವನ ಹಾಡಿನ ಬೆನ್ನ ಹತ್ತುತ್ತಿತ್ತು. ‘ಏ ಮಂಗಪ್ಪ, ಈ ಹಾಡು ಯಾರ ಕಲಿಸ್ಯಾರ?’ ಎಂದು ಕೇಳಿದರೆ ‘ರಾಮ ದೇವರು’ ಎಂದೆನ್ನುತ್ತಿದ್ದ. ಹೀಗೆನ್ನುವಾಗ ಅವನು ಎಷ್ಟೆ ಹಾಸ್ಯ ಪ್ರವೃತ್ತಿಯುಳ್ಳವನಾದರೂ ಮುಖಮುದ್ರೆಯು ತುಸು ಬದಲಾದಂತೆ ಗೋಚರವಾಗುತ್ತಿದ್ದಿತು.

ಅದೆಂಥ ವಿಚಿತ್ರವಾದ ಪ್ರೀತಿ! ನಾನು ದೊಡ್ಡವನಾದ ಮೇಲೂ ಮಂಗಪ್ಪನು ನನ್ನನ್ನು ಮರೆತೇ ಇಲ್ಲ. ಬೇಸಿಗೆ ರಜೆಗೆ ನಾನು ಊರಿಗೆ ಬರುವೆನೆಂಬ ಸುದ್ದಿಯನ್ನು ತಾಯಿಯ ಮುಖಾಂತರ ಕೇಳಿಕೊಂಡು ಆ ಹೊತ್ತಿಗೆ ನಿಲ್ದಾಣದಲ್ಲಿ ದಾರಿ ಕಾಯುತ್ತಿರುತ್ತಾನೆ. ನನ್ನ ಸಾಮಾನುಗಳನ್ನು ಹೊತ್ತುಕೊಂಡು ಮನೆಗೆ ತರುತ್ತಾನೆ. “ಎಷ್ಟು ದಿನ ಇರೂದ್ರಿ?” ಎಂದು ಕೇಳುತ್ತಾನೆ. ಅವನ ಹರಕು ಹರುಕಾದ ಬಟ್ಟೆಗಳನ್ನು, ಕಾಲಲ್ಲಿ ಏನೂ ಇಲ್ಲದೆ ಓಡಾಡುವದನ್ನು ನೋಡಿ ಅವನಿಗೆ ನನ್ನಲ್ಲಿದ್ದ ಅರಿವೆ ಅಂಚಡಿಗಳನ್ನೂ, ಚಪ್ಪಲಿಗಳನ್ನೂ ಕೊಡುತ್ತೇನೆ. ಎಲ್ಲಕ್ಕೂ ಅವನಿಗೆ ಬಲು ಖುಷಿ, ನಾನೇನಾದರೂ ಕೆಲಸ ಹೇಳಿದರೆ ಸಾಕು-ಬೇಗನೆ ಮಾಡಿ ತೋರಿಸುತ್ತಾನೆ.

ಇಂಥ ಮಂಗಪ್ಪನಿಗೆ ಒಂದು ದಿನ “ಹೊಂಡದ ಮೇಲೆ ಏಕಿರೋದು? ನಾಟಕದಲ್ಲಿ ಹೋಗಬಾರದೆ?” ಎಂದು ಚೇಷ್ಟೆಯಿಂದ ಕೇಳಿದೆ. ತುಸು ನಕ್ಕು, ಅನಂತರ ಮುಖದಲ್ಲಿ ಅವನು ಗಂಭೀರತೆಯನ್ನು ತೋರಿಸಿದ. ‘ನನ್ನ ದೇವರು ಇಲ್ಲೆ ಇದಾರ್ರಿ’ ಅಂದ.

ಗೋಡೆಯ ಮೇಲೆಲ್ಲ ‘ರಾಮ’ ಎಂದು ಬರೆದಿದೆ. ಗೋಡೆಯ ಒಂದು ಭಾಗದಲ್ಲಿ ದೇವರ ಚಿತ್ರವಿದೆ. ಮೂಲೆಯಲ್ಲಿ ಮೂರು ಕಲ್ಲಿನ ಒಲೆ; ಅವರ ಹತ್ತಿರ ಅಲಿಮನೆಯ ಒಂದೆರಡು ಪಾತ್ರೆಗಳು, ಅದೆ ಅವನ ಸಂಸಾರ-ಅವನ ದೇವರು-ಅವನದೆಲ್ಲವು ಸರಿ!

ಅವನ ಗಂಭಿರವಾದ ಭಾವವು ನನ್ನಲ್ಲಿ ಅಸ್ಪಷ್ಟವಾದ ವೇದನೆಯನ್ನುಂಟು ಮಾಡಿತು. ಆದರೂ ನಾನದನ್ನು ಲಕ್ಷಕ್ಕೆ ತಾರದೆ ಆ ದಿನ ರಾತ್ರಿ ನಮ್ಮ ಮನೆಯ ಕಡೆಗೆ ಬರಲು ಅವನಿಗೆ ಹೇಳಿ ಹೊರಟು ಬಂದೆ.

ಅಂದು ಕಾರ ಹುಣ್ಣಿವೆಯಾಗಿದ್ದಿತು. ಅಂದೆ ನನ್ನ ಹುಟ್ಟು ಹಬ್ಬ. ಇಪ್ಪತ್ತೆರಡನೆಯ ವರ್ಷದಲ್ಲಿ ಕಾಲಿಡುತ್ತಿದ್ದೆ. ಮಂಗಪ್ಪನಿಗೆ ಅದೆಲ್ಲವನ್ನೂ ತಿಳಿಸಿದ್ದೆ. ಹುಣ್ಣಿಮೆಯ ಶಾಂತವಾದ ರಾತ್ರಿಯಲ್ಲಿ ಅವನ ಗಾಯನವನ್ನು ಕೇಳಬೇಕೆಂದು ಬಯಸಿದ್ದೆ.

ಏಳು …. ಎಂಟು … ಒಂಬತ್ತು …. ಗಡಿಯಾರವು ಬಡಿದುಕೊಂಡಿತು. ಕಾಲವು ರೆಕ್ಕೆಗೊಂಡು ಹಾರಿತು. ಆದರೆ ಮಗಂಪ್ಪನ ಸುಳಿವೆ ಕಂಡು ಬರಲಿಲ್ಲ. ಮುಂಜಾನೆಯಿಂದ ಅಷ್ಟು ಹೊತ್ತಿನವರೆಗಾದರೂ ನನ್ನನ್ನು ಕಾಣಲು ಬರಲೇ ಇಲ್ಲ. ಆಹ್ಲಾದಕರವಾದ ಬೆಳದಿಂಗಳು ಬಿದ್ದುದರಿಂದ ನಾನೇ ಆ ಹೊಂಡದ ಕಡೆ ಹೊರಟೆ.

ಚಪ್ಪಲಿಗಳು ಬಿದ್ದಿವೆ; ಒಂದೆರಡು ಅಂಗಿ ಕೋಟುಗಳು ಹರಡಿವೆ. ಮಂಗಪ್ಪನು ಕೈಯಲ್ಲಿ ಒಂದು ಏಕತಾರಿಯನ್ನು ಹಿಡಿದಿದ್ದಾನೆ.

ಎಷ್ಟೊಂದು ಸೇವಿಸಿದರೂ
ಈ ಜನುಮದ ದುಃಖಾ ತೀರಽದು.

ಎಂದು ಹಾಡುತ್ತಿದ್ದಾನೆ. ದೂರದಿಂದ ಆಗಸದಲ್ಲಿಯ ಚಂದ್ರನು ಇದೆಲ್ಲವನ್ನು ನೋಡುತ್ತಿದ್ದಾನೆ. ಅವನ ಹಾಡನ್ನು ಕೇಳುತ್ತಿದ್ದಾನೆ. ಸುತ್ತಲಿನ ಪ್ರಪಂಚ ಮಲಗಿಕೊಂಡಿದೆ.

ಸಮೀಪಕ್ಕೆ ಹೋದೆ. ಮಂಗಪ್ಪನಿಗೆ ಎಚ್ಚರಿಕೆ ಇರಲಿಲ್ಲ ಅವನ ಏಕತಾರಿಯನ್ನು ನಾವೆಂದಿಗೂ ನೋಡಿರಲಿಲ್ಲ. ಅಲ್ಲಿದ್ದ ಚಪ್ಪಲಿ ಅಂಗಿಗಳು ನಾನು ಎಷ್ಟೋ ದಿನಗಳ ಹಿಂದೆ ಕೊಟ್ಟದ್ದುವೆ ಆಗಿದ್ದುವು. ನನಗೆ ಮಹದಾಶ್ಚರ್ಯ! ಇನ್ನೂ ಹೀಗೆ ಇವೆ? ಮಂಗಪ್ಪ ದಿನದಂತಿರಲಿಲ್ಲ. ಅವನು ಬೇರೊಂದು ಅವತಾರವನ್ನು ತಾಳಿದ್ದನು.

“ರಾಮ! ರಾಮ!! ರಾಮ!!!” ಎಂದು ತಂತಿಯನ್ನು ಮೀಟಿದ.

“ಓಽ, ಹೋಽ, ಹೋಽ ಎಂದು ಬಾರಿಸುವುದನ್ನು ನಿಲ್ಲಿಸುವಂತೆ ಕೂಗಿದೆ. ಕಣ್ಣುಗಳಿಂದ ಕಂಬನಿಗಳು ಧಾರೆಯಾಗಿ ಬರುತಿದ್ದವು. ಅವು ಯಾವುದೋ ವಿಚಿತ್ರವಾದ ಕಥೆಯನ್ನು ಹೇಳುತ್ತಿದ್ದವು. ಮಂಗಪ್ಪನ ಕಣ್ಣೆರೆದು ನನ್ನನ್ನು ನೋಡಿದನು ಕಣ್ತುಂಬ ಸಂತೋಷಬಟ್ಟನು. ಅಂದೆ ಅವನು ನನ್ನೆದುರು ತನ್ನ ಜೀವನ ಕಥೆಯ ಗಂಟನ್ನೆಲ್ಲ ಬಿಚ್ಚಿದನು. ಕೊನೆಗೆ ‘ಕುದ್ದು ಕುದ್ದು ಸಾಕಾತರಿ ಎಪ್ಪ, ಇನ್ಯಾಕ ಬದುಕೋದು ಹೇಸಿ ಬದುಕು’ ಎಂದು ಮುಗಿಲ ಕಡೆ ನೋಡಿ ಸ್ತಬ್ದನಾದನು.

ರಾತ್ರಿಯಲ್ಲ ನನಗೆ ನಿದ್ದೆಯೆ ಇಲ್ಲ ಮಂಗಪ್ಪನ ಮಾತುಗಳು ಮತ್ತೆ ಮತ್ತೆ ನನ್ನ ತಲೆಯಲ್ಲಿ ಕುಸ್ತಿಯಾಡುತ್ತಿವೆ. ಅವನು ಬಾರಿಸಿದ ತಂಬೂರಿಯ ನಾದವು ಮೇಲಿಂದ ಮೇಲೆ ನನ್ನ ಕರ್ಣಪಟಲಕ್ಕೆ ಬಡಿದಂತೆ ಭಾಸವಾಗುತ್ತದೆ. ತಂಬರಿಯ ಒಂದೇ ಒಂದು ತಿಂತಿಯು ಮಂಗಪ್ಪನ ಜೀವನದ ಒಂದು ಮಹತ್ವದ ಸಂಗತಿಯನ್ನು ಹೇಳಿತು.

ಅಯ್ಯೋ! ಅದೆಂತಹ ಅದ್ಭುತವಾದ ದೈವದಾಟವು! ನನ್ನ ಮುಖ, ನನ್ನ ಮಾಟ, ನನ್ನ ವಯಸ್ಸು ಆ ಮುಂಗಪ್ಪನನ್ನು ಕೆಣಕಿತೆ? ಮೋಹದಲ್ಲಿ ಅವನನ್ನು ಕೆಣಕಿತೆ? ನನ್ನ ಮುಂದೆ ಹಾಡುತ್ತ, ನನ್ನೆದುರು ಮಾತನಾಡುತ್ತ, ನನ್ನನ್ನೇ ನೋಡುತ್ತ ಮಂಗಪ್ಪನು ಮುಗ್ದನಾಗಿ ಕುಳ್ಳಿರುವುದು. ಯಾಕೆಂಬುದರ ಅರಿವು ಇದೀಗ ನನಗೆ ಹೊಳೆಯುತ್ತಿದೆ. ಆದರೆ ನನ್ನಂತಿರುವ ಆ ಮಂಗಪ್ಪನ ಮಗನು-ಆ ‘ರಾಮ’ನು ಎಲ್ಲಿ? ದೂರದಲ್ಲಿ ಪ್ಲೇಗು ಪಿಡುಗಿನ ನೇತಾಳವು ಕಾರಹುಣ್ಣಿಮೆಯಂಥ ಆಹ್ಲಾದಕರವಾದ ಬೆಳದಿಂಗಳಲ್ಲಿ ನಿಂತುಕೊಂಡು ಹುಚ್ಚೆದ್ದು ಕುಣಿಯುತ್ತಿದೆ. ಅವನನ್ನು ಒಯ್ದವನು ‘ನಾನು! ನಾನು!’ ಎಂದು ಎದೆ ಬಡಿದುಕೊಳ್ಳುತ್ತಿದೆ, ಪಾಪ! ಸಣ್ಣ ವಯಸ್ಸಿನಲ್ಲಿಯೆ, ಇಪ್ಪತ್ತೆರಡನೆಯ ವರ್ಷದಲ್ಲಿಯೇ ಅವನು ವೈಕುಂಠವಾಸಿಯಾಗಬೇಕೆ? ಎಲ್ಲ ವಿಚಾರ ಗಳು ನನ್ನ ದೇಹವನ್ನೆಲ್ಲ ಬೆವರಿಸಿದವು.

ಮುಂಜಾವಿನ ತಂಗಾಳಿ ಅದೆ ಬೀಸುತ್ತಿತ್ತು. ಕೋಗಿಲೆಯು ಕೂಗುತ್ತ ನನ್ನನ್ನು ಸೊಂಪು ನಿದ್ದೆಗೆ ಲಲ್ಲೆಗೈದಿತು.

ಆದರೆ ನಿದ್ರೆಯಲ್ಲಿಯೂ ಮತ್ತೆ ಮಂಗಪ್ಪನಿಗೆ ಎಲ್ಲರೂ ಹೋಗಿಬಿಟ್ಟಿದ್ದಾರೆ, ಅವನೊಬ್ಬನೆ ಬಯಲಿನಲ್ಲಿ ಏಕಾಕಿಯಾಗಿ ಕುಳಿತುಕೊಂಡು ಒಂದೇಸವನೆ ಏಕತಾರಿಯನ್ನು ಬಾರಿಸುತ್ತಿದ್ದಾನೆ.

ರಘುಪತಿ ರಾಘವ ರಾಜಾರಾಮ!
ಪತಿತಪಾವನ ಸೀತಾರಾಮ!

ಅವನ ಕಂಠವು ಉಬ್ಬಿ ಉಬ್ಬಿ ಬರುತ್ತಿದೆ, ನಾದವು ತಂತಿಯನ್ನು ತುಂಬಿ ತುಂಬಿ ಹೊರಹೊಮ್ಮುತ್ತಿದೆ. ಬಿಟ್ಟು ಬಿಡದೆ ಜೋರಿನಿಂದ ತಂತಿಯನ್ನು ಮೀಟುತಿದ್ದಾನೆ. ಅಯ್ಯೋ….ಹರಿಯುತ್ತಿದೆ……. ಹರಿಯಿತು… ಎನ್ನುತ್ತಿದ್ದೆ. ಹಾಗೆಯೆ ಎಚ್ಚತ್ತೆ.
* * * *

ಬೆಳಗಿನಲ್ಲಿ ಏಕತಾರಿಯ ಸಂಗಡ ಮಂಗಪ್ಪನ ದೇಹವನ್ನು ಹೊಂಡದ ನೀರಿನಿಂದ ಬೆರಗೆ ತೆಗೆದುದನ್ನು ಕಂಡೆ. ಏಕತಾರಿಯ ತಂತಿಯು ಹರಿದಿತ್ತು. ಅವನ ಹಾಡು ಈಗ ಹೆಣವನ್ನು ಹಿಂಬಾಲಿಸುವವರ ಹಾಡಾಗಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಮಣ
Next post ನೀ ಸ್ವರವಾದೆ

ಸಣ್ಣ ಕತೆ

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…