ವರ್ಗಿನೋರು

ವರ್ಗಿನೋರು

ಚಿತ್ರ: ಗಿಘೇಫ್

ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ… ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ… ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ ಬೆಂಕಿಯಲ್ಲಿಟ್ಟಂಗೆ. ಬಿಸ್ಲೇನು… ಜನ್ರೂ ಬುಸ್… ಬುಸ್. ಮಾತು ಕೆಂಡ ವುಗ್ದಂಗೆ. ಯಿನ್ನೂ ವುಗಾದಿಯ ಯೆಡ ಬಲ್ದ ಬಿಸ್ಲಿಗೆ ರವ್ವಾಟು ‘ರಾವು’ ಜಾಸ್ತಿಯಷ್ಟೆ.

ಪೆರ್ಲಜ್ಜ ಯಂದಿನಂತೆ ಮಧ್ಯಾಹ್ನಕ್ಕೆಲ್ಲ ಗಳೇವು ಬಿಚ್ಕೊಂಡು, ಮುಂಜಾಲಿಂದ ಬದ್ಕುಮಾಡಿ, ಸುಸ್ತಾಗಿ ಕಾಲೆಳೆಯುತ್ತಾ… ಯಗಲ್ಮೇಲೆ ನೊಗ, ಕೈಲಿ ಗಳೇವು, ತಲ್ಮೇಲೆ ದಬ್ರಿಕೆ ಸಿಗ್ಯಾಕೊಂಡು, ಯೆತ್ತುಗ್ಳ ವಡ್ಕೊಂಡು, ಕೆಂಧೂಳ ಕುಡ್ಕೋತಾ, ಬೆವ್ರು ಇಳ್ಸಿಕೊಂಡು, ಬರೀ ಮೈಯಾಗೆ, ಕರಿ ಜಾಲಿ ಕೊಲ್ಡಂಗೆ, ಉದ್ದೂಕೆ ಬರೀಗಾಲೆಗೆ, ಕೇರಿ ತಲ್ಪಷ್ಟೊತ್ತಿಗೆ ಯೇಳು ಅನ್ನೊಂದಾಗಿವೋಗಿದ್ದ.

ನೀರಡ್ಕೆ ಸಾನ್ಯಾಗಿತ್ತು. ಮನೆಯೊಳ್ಗೆ ಹಂದಿ, ನಾಯಿ, ಕೋಳಿಗಳ ಕಛೇರಿ ನಡೆದಿತ್ತು. ಯೆಂಡ್ತಿ ಮಕ್ಕಳಿರಲಿಲ್ಲ. ಅಂಗ್ಳಕ್ಕೆ ನೊಗ ವಗ್ದೆ, ಗಳೇವು ಯೆತ್ತುಗಳ್ಗೆ ಆಕೋ ಸಿಕ್ಕುಗಳ್ನ ಅಟ್ಟದ್ಮೇಲೆ ಅರಾತುರಿ ವಗ್ದ. ಗ್ವಾದ್ಲಿಗೆ ಯೆತ್ತುಗಳ್ನ ಬಿಗ್ದಿ! ಮುಂದ್ಕ ಮೇವು, ನೀರಿಟ್ಟ. ಯಾಕೋ ಕೈಕಾಲುಗಳು ಸಣ್ಗೆ ಪದಾಡುತ್ತಿದ್ದವು.

ಕೇರಿ ವರ್ಗ ಕುಂಟೆ ಬಯಲಾಗೆ, ವೂರು ಕೇರಿ ಜನ್ರು, ಜಾತ್ರೆಯಂಗೆ ಸೇರಿದ್ದು ನೋಡಿ, ಜಲಜಲಾಂತ ಬೆವೆತ. ಅರ್ಕು ಟುವ್ವಾಲಿಂದ ಮಕ ಮಾರೆ ವರ್ಸಿಕೊಂಡ, ಗಡಿಗ್ಯಾಗಿನ ತಣ್ಣಿನ ನೀರು ಮಗಿಯೊಳ್ಗೆ ತುಂಬಿಕೊಂಡು, ಗಟಗಟನೆ ಕುಡಿದು. ಸಾವರ್ಸಿಕೊಂಡ.

‘ಕಪ್ದಳಾಡ್ದಂಗೆ’ ಆಗೋದು ಆ ಕ್ಷಣಾ… ತ್ವಟುಗು ನಿಂತಂಗಾತು. ವಲ, ಗದ್ದೆ, ತೋಟ ಬಯಲು ಕುಸಿ ಕೊಟ್ಟಂಗ, ಯೀ ಮನೆ, ಮಠ, ವೂರು, ಕೇರಿ, ಕುಸಿಕೊಡೋ ಬದ್ಲು ಕುತ್ತಿಗೆ ಯಿಡ್ಡು ತಳ್ಳಿದಂಗಾತು. ಕುಂಟೆ ನೀರ್ಯಾಗೆ ಯೆಂಡ್ತಿ ಮಕ್ಳು ಬಿದ್ದುಗಿದ್ದು ಸತ್ರಾ? ಮುಂಜಾನೇನೆ ಮನ್ಯಾಗೆ ವುಪ್ಪಿಲ್ಲ, ಕಟ್ಗಿಲ್ಲ, ಯಿಟ್ಟಿಲ್ಲ… ವುಣಸೆಣ್ಣಿಲ್ಲ.. ಬರೀ ಯಿಲ್ಲಾಗಳ ಪಟ್ಟಿ ಬೆಳದಿತ್ತು. ಕುಂತು ವೋದದೇ ‘ಸಿರುಗಲು’ ಆಟವಾಡುತ್ತಿದ್ದವು. ತಲೆತಿರುಗಿ ಬಾರ್ಕೋಲು ರುಚಿ ತೋರ್ಸೇ ವೊಗಿದ್ದು ನೆಪ್ಪಾತು. ಯೇನು… ಗ್ರಾಚಾರ ಕಾದಿದೆಯೋ… ಅಂದ್ಕೊಂಡು ಅಂಗ್ಳಕ್ಕಿಳ್ದ. ಜನಂಭೋ ಜನ್ರು ಪರಿಸೆಯಂಗೆ… ಯೇದುಸ್ರು ಬಿಡ್ತಾ… ಕುಂಟೆ ಕಡೆ ವೋಡುತ್ತಿದ್ದರು.

‘ಲೇ… ತಿಮ್ಮ ಕುಂಟೆ ನೀರಿನಾಗೇನು ಮೀನು, ಯಂಡ್ರಾಕಾಯಿ ಯಿಡೀತಿದ್ದಾರೇನೋ?’ ಯೆಂದು ಪೆರ್ಲಜ್ಜ, ಕೇರಿ ತಿಮ್ಮಣ್ಣನನ್ನು, ತನ್ನ ಅನುಮಾನ ಪರಿಹಾರವಾಗಿ, ಕೇಳ್ದ.

‘ನನ್ಗೊತ್ತಿಲ್ಲಪ್ಪೋ… ಯೀ ಜನ್ರು ವೋಡ್ತಾರಂಥಾ ನಾನೂ ವೋಡ್ತಿದ್ಬೀನಿ…’ ತಿಮ್ಮಣ್ಣ, ಯಿಷ್ಟು ಹೇಳಿ, ತಾನೂ ಕುಂಟೆ ಕಡೆ, ವೋಡತೊಡ್ಗಿದ. ಮುಂಜಾನಿಂದ ಬದ್ಕು ಮಾಡ್ದಿ ಸುಸ್ತು, ನಡ್ದೋಗಿ, ನಡ್ದು ಬಂದ, ಕಾಲುನೋವು. ವಟ್ಗಿಲ್ಪ ಕ್ವಾಪ, ಮನ್ಯಾಗೆ ಯೆಂಡ್ತಿ ಮಕ್ಳಿಲ್ದ ತಾಪ. ಯೀ ಜನ್ರ… ದನುಗ್ಳು ಮಾಡ್ದಂಗೆ ಮಾಡೋ ರೀತ್ಗೆ… ತಲೆ ಪರಾ ಪರಾ… ಕೆರ್ದುಕೊಂಡ.

ಅಷ್ಟಾಗೆ ಮ್ಯಾಗಡೆ ಕೇರಿಂದ ಮಲ್ಲಣ್ಣ ಕುಂಟೆ ಕಡೆ ನಡ್ದಿದ್ದ. ಪೆರ್ಲಜ್ಜ ಮಲ್ಲಣ್ಣನ ಯೆಜ್ಜೆಗೆಜ್ಜೆಯಾದ. ಪೆರ್ಲಜ್ಜನೇ ಮೆಲ್ಗೆ ಮಾತಿಗಾರಂಭಿಸಿದ…

‘ಯೇನು ಮಲ್ಲಣ್ಣ… ವೂರು ಕೇರಿ ಅಷ್ಟೊಂದು… ಸೇರಾದಲ್ಲೇನು ಯಂಡ್ರಕಾಯಿ, ಮೀನು ಮಸ್ಳೆ… ಯಿಡೀತ್ತಿದ್ದಾರೇನು?

‘ಯೇ ಯೀಗೆಲ್ಲಿ ಯಂಡ್ರೆಕಾಯಿ, ಮೀನು ಮಸ್ಳೆ.. ಸಿಗ್ಬೇಕು ಪೆರ್ಲ್ಜಜ್ಜ? ಜನ ಮರುಳೋ… ಜಾತ್ರೆ ಮರುಳೋ… ಅಂತಾ ನಾನು ನೋಡೋಕೆ ನಡ್ದೀನಿ ಬಿಡು’ ಯೆಂದು ಮಲ್ಲಣ್ಣ, ಸಣ್ಗೆ ಯದೆ ವಡ್ದೋಗಂಗೆ, ಮಾತಾಡಿದ್ದ.

ತ್ವಟುಗು ತೋರಗೊಡ್ದೆ ‘ಯೇನು ಯಿಂಗೇಳೀಯಾ ಮಲ್ಲಣ್ಣಾ? ಯಿದೇ ಕೇರ್ಯಾಗೆ ಮೀನು, ಯಂಡ್ರಕಾಯ್ನಾ… ಬಳ್ಳದಿಂದ ಅಳೆದು ಮಾರಿದ್ದ ಕಣ್ಣಾರೆ ನೋಡಿಲ್ಲೇನು? ಬಂಡಿಗಟ್ಲೆ’ ಮೀನು, ಯಂಡ್ರಕಾಯಿ, ಸೀ ಗೆಣಸು, ಮರ್ಗೆಣಸು ತಂದು ತಂದು ಮಾರಿದ್ದು ಮರ್ತೇನು? ಪೆರ್ಲಜ್ಜ ಬಾಲ್ಯದ, ಗತವೈಭವವನ್ನು ನೆನಪಿಸ್ದ.

‘ಅಯ್ಯೋ ಪೆರ್ಲಜ್ಜಾ.. ಅದೆಲ್ಲಾ ಹಳೇ ಕಾಲ… ಬೊಟ್ಗೆ, ದಮ್ಮಡಿಗೆ, ಆಣಿ, ಅರ್ಧಾಣಿಗೆ ಬೆಲಿತ್ತು. ರೂಪಾಯಿಗೆ ಅದಿನಾರು ಸೇರು ಜೋಳ, ಬೆಳ್ಳಿ ಬಂಗಾರಕ್ಕೆಲಿತ್ತು ಬೆಲೆ? ಆಗೇನಿದ್ರೂ ಮನುಸ್ಯರಿಗೆ ಬೆಲೆ! ಮಾತಿಗೆ ಬೆಲೆ’ ಮಲ್ಲಣ್ಣ… ಯಿಂದ್ಲುದೆಲ್ಲಾ ನೆನ್ಸಿಕೊಂಡು, ಮಕ ನಾಲ್ಕಾಣಿ ಮಾಡ್ಕೊಂಡ.

‘ಯಿಲ್ಲೇನು ತೇರು, ಪರಿಷೆ, ದೊಂಬ್ರಾಟ ನಡಿತೈತಾ? ಯೆದ್ರು ಬಿಸ್ಲಿಗೆ ವಳ್ಳೆ ಗೊಂಬೆಗ್ಳಂತೆ, ಕಣ್ಣು, ಬಾಯಿ, ಮೂಗು, ಕಿವಿ ಅರಳ್ಸಿಕೊಂಡು, ದೆವ್ವಗ್ಳಂಗೆ ತಲೆಗೂದ್ಲು ಕೆದ್ರಿಕೊ೦ಡು, ಅರ್ಕುಬಟ್ಟೆ ತಿರ್ಕುರಂಗೆ ವಂಟಿಕಾಲೀಲಿ, ಗಂಟೆಗಟ್ಟಲೆ ಬೆವ್ರಿಳ್ಸಿಕೊಂತಾ ಮಿಕಿಮಿಕಿ ನೋಡೋದು ಬೇಕಾ?’ ಪೆರ್ಲಜ್ಜ ಜನ್ರನ್ನ ಗದ್ರಿಕೊಂಡ.

‘ಅಯ್ಯೋ… ಬಿಡಪ್ಪೋ… ಯಿಂಗೇನಾ ಗದ್ರಿಕೊಳ್ಳಾದು? ಕಾಲಾನುಕಾಲ್ಕೆ ಕೇರಿ ವರ್ಗಿನೋರು ಬಂದಾರೆ ಅವ್ರನ್ನ ನೋಡ್ತಾ ಮೈಮರ್ತು ನಿಂತಿದ್ವಪ್ಪಾ…! ಯಾಕೆ ನಿಲ್ಬಾರ್ದೇನು?’ ಯೆಂದು ಅನುಮಕ್ಕ ಜೋರು ಮಾಡಿದಳು.’ …ಸಂಗಿನೊತ್ತಿನಿಂದ ಅವನ್ನ ಪಿಕಿಪಿಕಿ ನೋಡ್ತೈದ್ರಲ್ಲಾ ನಿಮ್ಗೇನ ಗೊತ್ತಾಯ್ತೀಗೇಳಿ ಮತ್ತೇ? ರವ್ವಾಟು ಸಣ್ಣಾರು, ದೊಡ್ಡೋರು ಅಂಬೋದು ನೋಡಿ ಮಾತಾಡು… ಯೆರ್ಡು ಬಿಡಾರ ಆಕಂತದಾರಲ್ಲಾ ಅವ್ರು… ದಕ್ಲು ಜನ… ಮಾದಿಗರಿಗಿಂತ ಜಾತೀಲಿ ಕಡಿಮೆ ಜನ. ಕೇರಿ ವಳಕ್ಕೆ ಬರಲ್ಲ. ವರ್ಗಿನಿಂದ್ಲೇ ವ್ಯವಹಾರವೆಲ್ಲ. ಅವ್ರು ಕುಂತಲ್ಲಿಗೆ ಬಾನ, ನೀರು, ಬಟ್ಟೆ-ಬರೆ, ಕಾಳು, ಕಡಿ, ನೀಡ್ಬೇಕು. ಕೇರಿ ಬಿಟ್ಟು ಇನ್ನೊಂದು ಕೇರಿಗೆ ವೋಗ್ವಾಗ ಮಗಿ ತುಂಬಾ ಬಂಗಾರ, ಯಿಡಿ ತುಂಬಾ ರೊಕ್ಕ, ಯಿದ್ದವ್ರು ಮನೆಯಿಂದ ಬಂಡಿಯೆತ್ತು ಕಟ್ಟಿ, ಅವ್ರ ಸಾಮಾನು ಸರಂಜಾಮುಗಳ ಸಾಗ್ಸಿ ಬರ್ಬೇಕೆಂದು ‘ಕಂಚಿ ಶಾಸನ’ ಐತಿ…. ತಿಳೀತೋ…’ ಕೇರಿ ಮುಕಂಡ ಮಲ್ಲಪ್ಪ, ವಿವರ್ಸಿದ. ಜನ್ರು ಯಂದೂ ಕೇಳದ್ದನ್ನು, ಬಾಯಿ ಬಿಟ್ಟುಕೊಂಡು. ಕೇಳತೊಡಗಿದ್ದರು.

‘…ಅಗೋ ಅಲ್ಲಿ ಬಿಡಾರ್ಕೆ, ಪೂಜೆ ಮಾಡೋ ಯಜಮಾನ ಮನುಸಾನೇ ಪೂಜಾರಿ ದಕ್ಲು ಮುದುಕಪ್ಪ ಅಂತಾ. ಅವ್ನ ಹೆಂಡ್ರು ವುಲುಗಮ್ಮ. ಅದಿನಾರು ಮಕ್ಳು… ಮೊಮ್ಮಕ್ಕಳು… ಮರಿಮೊಮ್ಮಕ್ಳು… ಯೀಗಿವ್ರು ದ್ಯಾಸಂದ್ರದಿಂದ ಬಂದಾರೆ, ಅಲ್ಲಿ ತಿಂಗಳುಗಟ್ಲೆಯಿದ್ರು ಅಂತಾ ಕೇಳಿನಿ. ದಿನ್ಕೊಂದು ಕತೆ, ಪರಾಣ, ಹಾಡು, ಆಟಾಡಿ ರಂಜಿಸಿದ್ದೂ… ಕೇಳೀನಿ’ ಯೆಂದು ಪೆರ್ಲಜ್ಜ, ಯೇಳಿದ್ದೇ ಯಲ್ಲರ್ಗೂ ಖುಷಿಯಾಯ್ತು.

ಕೇರಿ ಮುಕಂಡ್ರಾದ ಪೆರ್ಲಜ್ಜ, ಮಲ್ಲಣ್ಣನನ್ನು ದಕ್ಲು ಪೂಜಾರಿ ಮುದುಕಪ್ಪ ಗುರ್ತಿಡಿದು ‘ಅಡ್ಡಬಿದ್ದೇ… ಗೌಡ್ರೇ…’ ಯೆಂದು, ಅವ್ರತ್ತಿರಕೆ ವೋಡೋಡಿ ಬಂದು, ಯರ್ಡು ಕೈ ಜೋಡ್ಸಿ, ನೆಲ ಮುಟ್ಟಿ ದೂರಸರಿದು ನಿಂತ್ಕೊಂಡ.

‘ಯೇನು ಮುದುಕಪ್ಪಾ ಬಾಳ ವರ್ಸುಕೊಮ್ಮೆ ತಪ್ಪದೆ ನಿಮಪ್ಪ, ತಾತ, ನಿಮ್ ದೊಡ್ಡಪ್ಪ ಬಂದ್ಬಂದು ವೋಗುತ್ತಿದ್ರು, ಯೀಗೀಗ ನಮ್ ಕೇರೀನ ಮರೆತುಬಿಟ್ರೋ…’ ಯೆಂದು ಪೆರ್ಲಜ್ಜ, ದೊಡ್ಡತನ ತೋರಿದ.

‘ಗೌಡ್ರೇ… ನಮ್ ಪಾಲಿಗೆ ಸಾವಿರಾರು ಅಳ್ಳಿಗಳಿವೆ…! ಆಂಧ್ರ ಮಹಾರಾಷ್ಟ್ರ ಗೋವಾದ ತನ್ಕ ನಮ್ ಅಳ್ಳಿಗಳೇ… ಯೀಗೀನ ನಮ್ ಮಕ್ಕು, ಮೊಮ್ಮಕ್ಕಳು… ಕೇರಿಗಳ ಮೇಲೆ ವೋಗಾದೇ ಕೈಬಿಟ್ಟು ಕುಂತಾರೇ. ವಟ್ಟೆ ಬಟ್ಗೆ ಯೇನೇನೂ ಸಾಲಲ್ಲ. ಮರ್ಯಾದೆಯಿಲ್ಲ. ಯೀ ಕುಲಕಸುಬು, ತರವಲ್ದು ಯೆಂದು, ರೋಸಿಬಿಟ್ಟಾರೇ. ನಮ್ ತಲೆಗಳು ಯಿರೊತನ್ಕ ಪದ್ಧತಿ ಬಿಡಬಾರ್ದೆಂದು, ಯೀಗೀಗ ಕೇರಿಗಳ ಮೇಲೆ, ಬರ್ತೀವಿ ಗೌಡ್ರೇ…’ ಯೆಂದು ಮುದುಕಪ್ಪ, ವಟ್ಟೆಯೊಳಗಿಂದು ವೊರಗಿಟ್ಟ.

ಅಷ್ಟೊರೊಳ್ಗೆ… ಕೇರಿ ಮುಕಂಡ್ರಾದ… ಯನ್ನಪ್ಪ, ಪೆನ್ನಪ್ಪ, ಮಾರಪ್ಪ, ರುದ್ರಪ್ಪ, ಕರಿಯಪ್ಪ ಒಬ್ಬೊಬ್ರಾಗಿ… ಬದುಕುಗಳಿಗೆ ವೋದವ್ರು… ಬಂದ್ರು, ಮುಕಂಡರು ದಕ್ಲು ಮುದುಕಪ್ಪನ್ನು ಕಂಡೊಡನೆ, ಆನಂದಬಾಷ್ಪದಿಂದ ‘ಯೇಸು ವರುಸಗಳಾದ್ವು ಮುದುಕಪ್ಪಾ… ನಿನ್ನಪ್ಪ, ತಾತ್ನ ಯಿಂದೆ ಕೆಂಪು, ಬಿಳೀ, ಕರೀ… ಕುದ್ರೆ ಮೇಲೆ ನೀ ಸಣ್ಣೋನಿದ್ದಾಗ ಕೇರಿಗೆ ಬರ್ತಿದ್ದೆ. ಯೀ ಮಾದಿಗನ್ನ ಮರ್ತೀರೇನೋ ಅನ್ಕಂಡ್ವಿ. ಯೀಗ್ಲಾದ್ರು ಬಂದಿದ್ದು ವೂರು ಕೇರಿಗ್ರ ಪುಣ್ಯ ನೋಡು’ ಯೆಂದು, ಯನ್ನಪ್ಪ ಬಾಯ್ತುಂಬಾ ಕೊಂಡಾಡಿದ.

‘ಅಂದಂಗೆ, ಯೀ ಕುಂಟೆ ಬಯಲಾಗೆ… ಸೀಮೆ ಜಾಲಿ ಗಿಡಗಳ ತಾಗೆ ಯೀ ಬಿಡಾರಗಳು ಯೀಗ ಯಾಕೇಳ್ರೀ? ಕೇರ್ಯಾಗೆ ನಮ್ಮ ಜನತಾ ಮನೆಗಳು, ಯಳ್ಳೆ ಮನೆಗಳೂ, ಅಳೇ ಮನೆಗಳೂ, ಜನಿಲ್ದೆ ಆಳಾಳ್ ಬಿದ್ದಾವೆ. ನಿಮ್ಗೊಪಿದ ಮನ್ಯಾಗ ರಾಜಿ ಬಂದಷ್ಟು ದಿನ ಇದ್ದು, ವೋಗ್ಬೋದಲ್ಲಾ?! ಯೀ ಅಳೇ ನಂಬಿಕೆ, ಜಾತಿಪದ್ಧತಿ ಯಿನ್ನೂ ಬೇಕಾ?’ ಯೆಂದು ಪೆನ್ನಪ್ಪ, ರುದ್ರಪ್ಪ, ದಕ್ಲು ಪೂಜಾರಿ ಮುದುಕಪ್ಪನ, ಅವ್ನ ಯೆಂಡ್ತಿ, ಮಕ್ಳನ್ನ ಬರ್ಲೇಬೇಕೆಂದು ವುಡುದ ಪಟ್ಟು ಯಿಡಿದ್ರು,

‘ಭೇಸ್ ಯೇಳ್ರಿ ಗೌಡ್ರೇ… ನಿಮ್ ಸಮ ನಾವಾದ್ವೇನು? ಜಾನಪದ ಶ್ರೀ ಪಶಸ್ತಿ ಪಡದ್ರೇನು? ಕಿನ್ನರಿ ಬಾರ್ಸಿ, ನವಿಲು ಕುಣ್ಸಿದ್ರೇನು? ಗೌಡ್ರೇ… ನಿಮ್ಗಿಂತ ಕುಲ್ದಲ್ಲಿ ಕಮ್ಮಿ. ವೂರೂರು ಅಲೇರೂ. ನಿಮ್ಮಿಂದ ಬದುಕೋರು. ವೂರಾಗ್ಳೋರು ಬಂಗಾರ, ಬೆಳ್ಳಿ, ಲಡ್ಡು, ಜಿಲೇಬಿ ಕೊಟ್ರೆ…. ನಾವು ಯೀತನ್ಕಾ… ಯೆಂದಾದ್ರು ಮುಟ್ಟೀವಾ? ನೀವು ಕೊಟ್ಟಷ್ಟು! ನಾವು ಪಡೆದಷ್ಟು. ಅದಬಿಟ್ಟು, ನಿಮ್ಮ ಕೇರ್ಯಾಗೆ, ಅದೂ ನಿಮ್ ಸರೀಗೆ, ಯಿರಾಕ್ಕಾಗ್ತೈತಾ? ಯಿದ್ನ ದೇವ್ರೇ ಒಪ್ತಕ್ಕಿಲ್ಲಾ ಗೌಡ್ರೇ… ದೇವ್ರ ಲಿಖಿತ ತಪ್ಪಕಾಗಲ್ಲ’ ಯೆಂದು ದಕ್ಲು ಪೂಜಾರಿ, ವಿನಯಪೂರ್ವಕವಾಗಿ, ಮುಕಂಡ್ರಿಗೆ ತನ್ದು, ತನ್ನವ್ರು ಭುಜ, ಮುಟ್ಟುಗೊಡ್ಸಲಿಲ್ಲ.

‘ಯೇಸು ವರುಸಗಳಾದ್ಮೇಲೆ, ದಕ್ಲು ಮಕ್ಳು, ನಮ್ಮೀ ಕೇರಿಗೆ, ಬಂದಾರೆ. ತವ್ರು ಮನ್ಗೆ, ಯಿರೀ ಮಗ್ಳು, ಬಂದಷ್ಟು ಕುಸಿಯಾಗೈತಿ. ನಾಳೆ ಯಿವ್ರಿಗೆಲ್ಲಾ ಕುಸಿ ಮಾಡಾನ… ಕೇರಿ ಸುತ್ತಾ ಮಾವಿನ ತೋರಣ, ತೆಂಗಿನ ಗರಿ, ನಾಲ್ಕು ಮೂಲೆಗೆ, ಬಾಳೆ ಗಿಡ ಕಟ್ಟಿ, ದೊಡ್ಡ ಗೌಡ್ರು ಮನೆಯಿಂದ ಕ್ವಾಣಗರ ತಂದು ಕೊಯ್ದು, ಅಕ್ಕಿ ಬಾನ, ಸಳ್ಳೆಪಲ್ಲೆ, ಬಟ್ಟಿಸಾರಾಯಿ, ಯೀಚಲು ಹೆಂಡದ ಲೊಟ್ಟೆ ಯಿಳ್ಸ್ಯಾನಾ! ಮನೆ ಮನ್ಗೆ ಪಟ್ಟಿ ಹಾಕಿ ಭರ್ಜರಿ ಅಬ್ಬಾ ಮಾಡಾನ…’ ಪೆರ್ಲಜ್ಜ, ವುಳಿದ ಕೇರಿ ಯಜಮಾರ್ರಿಗೆ, ತಾಕೀತು ಮಾಡಿದ. ಅದ್ಕೆ ಉಳಿದವ್ರು ‘ಅಂಗೇ ಆಗ್ಲಿ’ಯೆಂದು. ಒಪಿಗೆ ಕೊಟ್ಟರು.

‘ಗೌಡ್ರೇ… ದಕ್ಕಲಾರ್ಮೇಲೆ ನಿಜವಾದ ಜೀವ, ಪಿರೂತಿ, ಅಭಿಮಾನವಿದ್ರೆ… ಕರುಳು ಚುರುಕಾ ಅಂದ್ರೆ… ಕೇರಿಯೊಳ್ಳೆ ಬಿಟ್ಟುಗೊಂಡ್ವಿ. ಕೇರ್ಯಾಗ್ಳ ಅಳೇ ಮನೇನ ಯಿರಾಕ್ ಕೊಟ್ವಿ, ಕ್ವಾಣಗರ ಕೊಯ್ದು ಸಳ್ಳೆ ಪಳ್ಲೆ ಮಾಡಿ, ಅಕ್ಕಿಬಾನ ಮಾಡಿಡಾದಾಗ್ಲಿ, ಬ್ಯಾಡಾ! ಯಿದ್ರಿಂದಾ ಪುಣ್ಯ ಬರಲ್ಲ. ಯಲ್ಡು ವಟ್ಟೆ ಆಗಲ್ಲ. ಜಗತ್ತೇನು ಬದ್ಲಾಗಲ್ಲ. ಸೂರ್ಯ ಚಂದ್ರ, ಸಣ್ಣದು, ದೊಡ್ಡದು, ಆಗಲ್ಲ. ನಮ್ದು ವಟ್ಟೆ ಬಟ್ಟೆ ದಿನ್ದ ತೀರ್ಥದ ವ್ಯವಸ್ಥೆ, ಜಿಂಕೆ, ಕುಂದ್ಲಿ, ವುಡ, ಪಾರಿವಾಳ, ಮೀನು, ಯಂಡ್ರಕಾಯಿ ತಿಂದು ವುಂಡು, ನಾವು… ಕುಸಿಯಲ್ಲಿರಬೇಕು. ನಮ್‌ತನ ಮುಖ್ಯನೇ ಹೊರತು, ನಿಮ್ ಸಮಾನಾ ಆಗ್ಸೇಕು, ಮತಾಂತರವಾಗಿ ದಕ್ಲುತನ ಕಳಕೊಂಡು, ನಮ್ ಸಂತತಿ… ನಾಶ ಮಾಡಿಕೊಳ್ಳೋ… ವುಚ್ಚು ಆಲೋಚನೆ ನಮಗಿಲ್ಲ ಗೌಡ್ರೇ…’ ದಕ್ಲು ಪೂಜಾರಿ, ಅವ್ನ ಯೆಂಡ್ತಿ… ಮಕ್ಕಳು… ಮಾದಿಗ್ರನ್ನ ಯೆಳ್ಳು ಕೊಡವಿದಂಗೆ ಕೊಡುವಿದ್ರು. ಮಾದ್ರಾ… ಮಕಗಳೆಲ್ಲ ತೆಂಗಿನ ಚಿಪ್ಪಾದವು.

‘ಯೀ ವರ್ಗಿನೋರಂಗೆ ಯೀ… ವೂರು, ಕೇರಿಗಳು ಯೋಚಿಸಿದ್ರೆ ಜಾತಿ, ಮತ, ಧರ್ಮದ ಗೋಡೆಗಳ ಗೊಡವೇನೇ ಯಿರಲ್ಲ ಅಲ್ವೇನ್ರೋ?’ ಪೆರ್ಲಜ್ಜ, ಕೇರಿಗನ್ನ ಕೇಳ್ದ. ಮುದುಕಪ್ಪ ಮತ್ತೆ ಮಾತ್ಗೆ ತೊಡ್ಗಿದ-

‘ಗೌಡ್ರೇ… ನಿಮ್ಗುಳ ಓಳ್ಳೆತನ್ದ ಬಗ್ಗೆ, ಯೀ ಕೇರಿ ಬಗ್ಗೆ, ನಮ್ ತಾತ, ನಮ್ ಅಪ್ಪ ಸಾಯೋವಾಗೆ ಯೇಳಿ ಸತ್ರು… ಅದ್ಕೆ ಸಾಯುವ ಮುನ್ನಾ… ನನ್ ಬಳ್ಗ ಕಟ್ಗೊಂಡು ಬಂದೀನಿ, ಉಪಕಾರ ಮಾಡ್ರಿ. ಕೈ ದೊಡ್ದು ಆಗ್ಲಿ… ಕಾಳು, ಕಡಿ, ರೊಕ್ಕ, ಬಟ್ಟೆ ಬರೆಯಲ್ಲಾ ಕಳ್ಸಿ ಕೊಟ್ರೆ ಕೊನೇ ಮಗಳ್ದು, ಮಗುಂದು ನಿಮ್ ಕೇರಿವರ್ಗೇ ಮದ್ವೆ ಮಾಡಿ ಕಣ್ಮುಚ್ಚಬೇಕಂತೈದೀನಿ ಗೌಡ್ರೇ…’ ಯೆಂದೂ… ಕೈ ಕೈ ಮುಗ್ದು, ಮಾದಿಗ್ರ, ಮಾತುಗಳಿಗೆ ಕಿವಿಯಾದ.

ಪೆರ್ಲಜ್ಜ ‘ಒಳ್ಳೆ ಕಾರ್ಯಕ್ಕೆ ನಾವಿಲ್ಲ ಅಂತೀವಾ? ನೀ ಬಾಯ್ದಿಟ್ಟು ಕೇಳಿದ್ದು ಎಂಜಲಾಯ್ತು. ನೀ ಕುಂತಲ್ಲಿಗೆ ಆನೆ, ನಿಂತಲ್ಲಿಗೆ ವಂಟೆ, ನೀ ನಡಿಯೋ ಹಾದಿಗೆ ತಂಗಡಿ ಹೂವು ಆಗ್ತೀವೀ ಅಂತಾ… ನಮ್ಮಪ್ಪ ಆದಿ ಜಾಂಬವಂತ ಭಾಷೆ ಕೊಟ್ಟಾನೆ. ಆತ್ನ ಮಕ್ಳು ನಾವೆಲ್ಲ. ಮದ್ವೆಗಿಲ್ಲಾ ಅಂತೀವಾ? ಯೆಷ್ಟಾಗ್ಲಿ ನಾವು ಉಪಾಸಿದ್ದಾದ್ರು ನಿನ್ಗೆ ಕೊಡ್ತೀವಿ… ಕಾರ್ಯ ಇಟ್ಟುಗೊಳ್ರೀ…’ ಯೆಂದು, ಕೇರಿಗ್ರ ಪರವಾಗಿ ವಚನ ನೀಡ್ದ. ಉಳಿದವ್ರು ರುದ್ರಪ್ಪ, ಪೆನ್ನಪ್ಪ, ಮಲ್ಲಪ್ಪ ಅವ್ರೆಲ್ಲಾ… ‘ನಾವು ಬೇರೆ ನೀವು ಬೇರಲ್ಲ! ನಾವೆಲ್ಲ ವಂದೇ ಮರ್ದ ಬೇರುಗಳು. ಯಾವುದೋ ವಿಷದ ಗಳಿಗೆಯಲ್ಲಿ ನಾವು -ನೀವು, ಬೇರೆ ಬೇರೆಯಾಗಿರಲಿಕ್ಕೇ, ಬೇಕು’ ಯೆಂದು, ದನಿಗೂಡಿಸಿದ್ರು.

ರಾತ್ರಾಯ್ತು. ಮಾದಿಗರ ಮನೆಗಳಿಂದ ಮುದ್ದೆ, ಅನ್ನ, ಸಾರು, ರೊಟ್ಟಿ, ಉಳ್ಳಾಗಡ್ಡಿ, ಗುರಾಳುಪಡಿ, ಹುಣಸೆತೊಕ್ಕು, ವುಪ್ಪು, ದನಕರುಗಳಿಗೆ ಮೇವು, ಹುಲ್ಲು, ದೀಪಗಳಿಗೆ ಸಿಮಿಯೆಣ್ಣೆ, ಸವುಳು ಪುಡಿ, ಯೇನೆಲ್ಲಾ… ಮನೆಮಂದಿಯೆಲ್ಲಾ… ಹೆಂಗಸ್ರು, ಗಂಡಸ್ರು, ಮಕ್ಳು, ಮುಪ್ಪರೂ ಸಾಲುಗಟ್ಟಿ ತಂದು… ತಂದು ದಕ್ಕಲಾರಿಗೆ ಕೊಟ್ರು.

‘ಮಾದುಗರ್ನ ದಕ್ಕಲಾರು ಮುಟ್ಸಿಕೊಳ್ಳಂಗಿಲ್ಲ. ವೋಗ್ಗಿ ದಕ್ಕಲಾರು ಮಾದಿಗರ್ನ ಮುಟ್ಸಿಕೊಳ್ಳಂಗಿಲ್ಲ… ಯಿದು ಯೆಲ್ಲೇತನ್ಗಕ?’ ಪೆರ್ಲಜ್ಜ… ಮುದುಕಪ್ನ ಕುಡಿದ ನಶೆಯಲ್ಲಿ… ಕೊನೇ ಗೇರ್ಗೆ ಆಕ್ದ.

‘ಆ ಸೂರ್ಯ ಚಂದಪ್ಪನಿರೋವರ್ಗೇ! ನಮ್ಮ ತ್ರಾಣ ಯಿರೋವರ್ಗೆ. ಯಿಂಗೇ… ಬಾಳ ಚಕ್ರ ತಿರ್ಗೋದೇ…’ ಮುದುಕಪ್ಪ ಅತಾಸೆನಾಗಿ, ಮಾತುಗಳ್ನ ನುಂಗಿಕೊಂಡ. ಕೇರಿ ನಾಯಿಗಳು ದಕ್ಕಲಿಗ್ರ ಕಂಡು, ಅವ್ರ ನಾಯಿಗಳ ಕಂಡು, ಬೊಗಳಾಟ, ಕಪ್ಪಲಕ್ಕ, ನರಿ, ತೋಳಗಳ ಕೂಗಾಟದಲ್ಲಿ… ಮುದುಕಪ್ಪನ ಮಾತುಗಳು… ಪೆರ್ಲಜ್ಜನಿಗೆ ಕೇಳ್ಸಿದಂಗಾದವು.

ಬೆಳ್ಳಂಬೆಳಿಗ್ಗೆ ಸೂರ್ಯ, ಮೋಡದ ಮರೇಲಿ, ಕಣ್ಣಾಮುಚ್ಚಾಲೆಯಾಡುತ್ತಿದ್ದ. ಕೇರಿ ಮುಕಂಡ್ರು, ನಾಲ್ಕು ಮೂಲೆಗೆ, ನಾಲ್ಕು ಬಾಳೆಕಂಬ ನೆಟ್ಟು. ಮಾವಿಂದು, ಕಾನ್ಗಿದ್ದು ಅಸ್ರು ತೋರ್ನ ಕಟ್ಟಿ, ಅಲ್ಲಲ್ಲಿ ತೆಂಗಿನ ಗರಿಗಳ್ನ್ ಕಟ್ಟಿ, ಕೇರಿಕೇರಿನೇ ಸಿಂಗರ್ಸಿ, ದಕ್ಲು ಪೂಜಾರಿ ಮುದುಕಪ್ಪ… ಯೀವತ್ತು ಕೇರಿ ಮುಂದ್ಕ ಕಿನ್ನರಿ ನುಡಿಸುತ್ತಾ, ನವಿಲು ಕುಣಿಸುತ್ತಾ… ಅರ್ಕೆ ಆಕುತ್ತಾ… ಬಂದು ನಿಲ್ಲುವ, ಸಡಗ್ರ… ಜಂಭ್ರದ… ಕ್ಷಣಕ್ಕಾಗಿ, ಕೇರಿಗ್ರು ತುದಿಗಾಲಲ್ಲಿ ಕಾದು, ಕುಳಿತರು.

ಅಷ್ಟರಲ್ಲಿ, ಕೇರಿ ವರ್ಗಿಂದ ವುಬ್ಸ, ಆಯಾಸ, ಬಿದ್ಕೂಂತಾ ದಕ್ಲು ಪೂಜಾರಿ ಮುದುಕಪ್ಪನ ಯಿರೀಮಗ ದುರುಗಣ್ಣ, ವೋಡೋಡಿ ಕೇರಿ ಮುಂದ್ಕ, ಬಂದು ನಿಂತ್ಗೊಂಡಿದ್ದೇ ತಡಾ, ಕೇರಿ ಮುಕಂಡ್ರು ಗಾಬ್ರಿ ಬಿದ್ದು, ಕಂಗಾಲಾಗಿ ಕೇರಿ ವರ್ಗಡೆ ನಿಂತು ಕೂಗ್ದಿ ದಕ್ಲು ಪೂಜಾರಿ ದುರುಗಣ್ಣನ ಮುಂದೆ, ಬಾಯಿ ಬಾಯಿ ಬಿಡುತ್ತಾ ಪಿಳಿ ಪಿಳಿ ಕಣ್ ಬಿಡ್ತಾ, ಆತಂಕದಿಂದ ತುದಿಗಾಲಲ್ಲಿ, ಒಬ್ಬೊಬ್ರೇ ವೋಗೋಗಿ, ನಿಂತರು.

‘ಗೌಡ್ರೇ ಯಲ್ರು ಬಂದಾರೆಂದು ನಾ ಅನ್ಕೊಂಡೀನಿ. ಅಪ್ಪಣೆ ಕೊಟ್ರೆ ಸುದ್ದಿ ಮುಟ್ಸತೀನಿ…’ ಯೆಂದು, ಗಳಗಳನೆ ಕಣ್ಣೀರು ಸುರ್ಸುತಾ… ಯೀವತ್ತು ಯೀಗ ನಮಪ್ಪ ಪೂಜಾರಿ ಮುದುಕಪ್ಪ, ಬೆಳಗಿನ ಜಾವ, ಕೈಲಾಸ ಸೇರ್ಕೊಂಡ್ರು ಗೌಡ್ರೇ… ಜೀವ ಬಿಡುವಾಗ ಯೆದೆ ನೋವು ತಡಿಲಾರ್ದೆ, ಗಳಿಗೆ ವತ್ತು ಮಿಲ ಮಿಲ ವದ್ದಾಡಿ, ಪಿರಾಣ ಬಿಡೋ ಮುಂಚೆ, ಯರ್ಡು ಮಾತೇಳಿದ್ರು ಗೌಡ್ರೇ… ವಂದು ಮಾತು ನಮ್ಗೇ…! ಯಿನ್ನೊಂದು ನಿಮ್ಗೇ ಗೌಡ್ರೇ…!! ನೀವ್ಯಾರೂ ಮಾದ್ರು, ಕ್ರೈಸ್ತರು, ಬುದ್ಧರು, ವಡ್ರು ಯಾವುದ್ಕೂ ಮತಾಂತರವಾಗ್ಬೇಡ್ರಿ… ನನ್ ಸವಸಮುಸ್ಕಾರ್ನ ಮಠದಯ್ಯನವ್ರ ಕೈಲಿ ಮಾಡ್ಸಿ. ಯೀ ಕೇರಿ ಮಾದಿಗ್ರ ಗೌಡ್ರಂಗೆ ಯೀ ಸುತ್ತೇಳಳ್ಲ್ಯಾಗೆ ಯಿಲ್ಲ. ಅವ್ರಿಗೆ ಯೇಳು ಸಾಕು ಅಂತಾ… ಕೈಯಾಗೆ ಕೈ ಆಕಿ, ವಚನಾ ತಗೊಂಡು, ಜೀವಬಿಟ್ಟ. ಅಬ್ಬಾ…! ಯಂತಾ ಸಾವು ಗೌಡ್ರೇ, ಬಂಗಾರದಂಥಾ ಸಾವು ಬಿಡ್ರೀ…’ ಯೆಂದೇಳಿ, ಗೋಳೋ ಅಂತ ಗ್ವಾಮಳೆ ಸೇರ್ದ. ಆ ಕ್ಷಣ, ಮಾದಿಗ್ರ ಕಣ್ಣಾಲೆಗಳು… ತೇವಗೊಂಡವು.

ಮಣೆಗಾರ್ಗೆ ದಿಕ್ಕು ತಪ್ಪಿದಂಗಾತು. ಯಿಷ್ಟೆಲ್ಲ ಸಿಂಗರ್ಸಿದ್ದು ಸಾವನ್ನು ಸ್ವಾಗತಿಸಲಾ? ನಮ್ ಮಾತಿನ ವರ್ಸೆಗೇ, ಮುದುಕಪ್ಪ ವಳ್ಗೊಳ್ಗೆ ಯೆದ್ರಿ, ಪಿರಾಣ ಬಿಟ್ಟಿರಬೇಕು. ರಾತ್ರಿ ಗುಂಡುಕಲ್ಲು ಯಿದ್ದಂಗೆ ಯಿದ್ದ, ಕೆಮ್ಮಿಲ್ಲ, ನೆಗಡಿ, ಜಡ್ಡಿಲ್ಲ. ಇದ್ದಕ್ಕಿದ್ದಂಗೆ ಆಪತ್ತೆಂದ್ರೆ ಕೇರಿಗ್ಮಾತು, ವರ್ತನೆ, ಬಲವಂತದ ಪರಿವರ್ತನೆನೇ, ಕಾರಣವಿರಬೇಕೆಂದು ವೊಬ್ರು ಮಕ, ವೊಬ್ರು… ನೋಡಿಕೊಂಡ್ರು.

ಪೆರ್ಲಜ್ಜ ಮುಂದೆ ಬಂದು, ‘ಮುದುಕಪ್ಪನ ಆಸೆಯಂತೆ, ನಮ್ಮೂರಿನ ಮಠದಯ್ಯನವ್ರ ಕೈಲಿ, ‘ಸವಸಮುಸ್ಕಾರ’ ಮಾಡ್ಸಿ, ಆತ್ನ ಆತ್ಕಕ್ಕೆ, ಸಾಂತಿ ಮಾಡಾನ’ ಯೆಂದು, ವಚನ ಕೊಟ್ಟ.

ವುಳಿದವ್ರು ‘ಆಗ್ಲೀ ಆಗ್ಲೀ ಅಂದ್ರು. ಆದ್ರೆ ಸಂಗಣ್ಣ ಸಣ್ಣಿಗೆ ರಾಗ ಯೆತ್ತಿದ…

‘ಯಿಂದ್ಲು ಪದ್ಧತಿಯೆಲ್ಲಾ… ಯೀಗೆಲ್ಲಿ ನಡೆಯುತ್ತೇ? ಮಾದಿಗ್ರ ಸುಡುಗಾಡಿಗೆ ಮುದುಕಪ್ಪನ ಯೆಣ್ನ ವೂಳಿದ್ರೆ. ಆಯ್ತು.’

ದಕ್ಲು ಪೂಜಾರಿ ದುರುಗಣ್ಣ… ಕಿಡಿ… ಕಿಡಿ ಕಾರಿದ. ‘ನಿಮ್ಮಪ್ಪಂದಿರ್ನ ಯಿಂಗೇ ಬೇಬಿಟ್ಟಿ ಮಾಡ್ತೀರಾ ಗೌಡ್ರೇ? ಮಾದ್ರು ಕೆಂಪು ವುಡಿದಾರ ಕಿತ್ರೀ… ದಕ್ಕಲಾರ್ದು ಕರೀವುಡಿದಾರ ಕಟ್ರಿ… ನಮ್ಮಂಗೆ ನೀವೂ ಕೇರಿವರ್ಗೆ ಕೂಗ್ರೀ… ಅದ್ರ ಸಂಕಟ ಯೇನಂತಾ ನೋಡುವಂತ್ರೀ…! ನಮ್ಮಪ್ಪಯ್ಯ ಯಿಡೀ ದಕ್ಲು ಜನಾಂಗಕ್ಕೆಲ್ಲ ಯಿರಿಯ, ಪೂಜಾರ್ಕೆ ಮನೆತನ್ದ ಮನ್ಸ. ಜಾನಪದ ಪಶಸ್ತಿ ವಿಜೇತ, ಕಲೆಗಾರ… ಬಲು ದೊಡ ವ್ಯಕ್ತಿತ್ವ… ಯೇನೋ ಕೊನೇ ಆಸೆ ಯೇಳ್ಯಾನಂತಾ ನೀವೆಲ್ಲ… ಗೌಡ್ರು ಪೂರೈಸ್ಲಿಲ್ಲಾಂದ್ರೆ… ಯಾರು ನಮ್ನ ಮೂಸಿ ನೋಡಾರೆ ಗೌಡ್ರೇ…’ ಯೆಂದು, ಮಕಕ್ಕೆ ಬಟ್ಟೆಯಿಟ್ಟುಗೊಂಡು, ಬೋರು ಬೋರಾಡಿ… ಅಳತೊಡಗಿದ.

‘ನೀ ಕೇರಿ ಮುಂದೆ ನಿಂತು. ಅರ್ಕೆ ಕೋಡೋನಾಗಿ, ಯಿಂಗೆ ಅತ್ರೆ, ವೂರು ಕೇರಿಗೆ, ವಳ್ಳೇದಾಗಲ್ಲ ಬಿಡು. ದುರುಗಣ್ಣ, ನಿನ್ ಅಪ್ಪಂದು ಕೊನೇ ಆಸೇನ ನಾವು ತೀರಿಸ್ತೀವಿ. ನೀನೋಗಿ ಮುಂದಿನ ಏರ್ಪಾಡೆಲ್ಲಾ ಮಾಡ್ಕೋ ವೋಗು…’ ಯೆಂದು, ಪೆರ್ಲಜ್ಜ ನೂರರ ಎರ್ಡು ನೋಟು ತೆಗ್ದು, ದುರುಗಪ್ಪನ ಮುಂದೆ ಬಗ್ಗಿ, ಯಿಟ್ಟಿದ್ದೇ ತಡ, ವುಳಿದವ್ರು… ಯಿಪ್ಪತ್ತು, ಐವತ್ತು… ನೂರು ತೆಗೆದು, ದುರುಗಪ್ಪನ ಮುಂದಿಟ್ರು.

ದುರುಗಪ್ಪ ಹಣ ಕೈಯ್ಯಲಿಡ್ದು ‘ನಾಯಿನ್ನ ಬರ್ತೀನಿ ಗೌಡ್ರೇ… ಮುಂದಿಂದು ಧರ್ಮಕರ್ಮ ನಿಮ್ಗೇ ಬಿಟ್ಟದ್ದು’ ಯೆಂದು, ಕೇರಿ ವರಿಗ್ನ… ಸೀಳು ದಾರಿ ಯಿಡ್ದು… ಮರೆಯಾದ. ಯಿತ್ತ ಸಂಗಣ್ಣ, ಮಲ್ಲಣ್ಣ ಕುತ್ತಿಗೆ ಮಟ್ಟ ಯೆಗ್ರಾಡಿ, ಮಾತಿನ ಕತ್ತಿ ತೆಗೆದ್ರು.

‘ನೀಯಲ್ಲಾದ್ಕೂ ಮುಂದಿರ್ತೀಯಾ ನೋಡು! ಗಂಜಿಗಿಲ್ದಾರು ಮುಂಜಿ ಮಾಡ್ಸಿಕೊಂಡ್ರಂತೆ. ನಮ್ದೆ ನಮ್ಗೆ ಜರ್ದಿ ಆಗಿರುವಾಗ… ಯೀ ಕರಡೀನ್ಯಾಕೆ ಮೈಮೇಲೆ? ನಮ್‌ಗರ್ತಾಗ್ಲಿಲ್ಲ. ಆ ಮಠದಯ್ಯನೋರು ಮೊದ್ಲು ಯಿದ್ದಂಗಿಲ್ಲ. ಯಿದು ಆಗ್ದ ಕೆಲ್ಸ ಬಿಡು’ ಯೆಂದು ಯಿಬ್ರೂ ತಲೆ ತಲೆ ಕೊಡ್ವಿದ್ರು.

‘ಕೇರ್ಯಾಗೆ ಪ್ರತಿಯೊಂದ್ಕು ನೀವಿಬ್ರಾಳೇ ಅಡ್ಬಾಯಿ ಆಕ್ಕೊಂತಾ ಕಾಲಿಡ್ದು ಯಳಿಯೋದ್ಯಾಕೆ? ಯೀ ವೂರು ಕೇರಿಯೇನು? ಸುತ್ತೇಳೂ ಅಳ್ಯಾಗೇ ನಮ್ ಮಾತು ನಡೀತ್ತೆ, ದಕ್ಲಾರ್ದು ಯೆಣ್ನ ವೂಣ್ಯಾಕ್ದೋರೆಂಬಾ ಕೆಟ್ಟ ಯೆಸ್ರು ತಲೆಮ್ಯಾಲ್ಯಾಕೆ? ನಡ್ರೀ ಗಟ್ಟಿ ಧೈರ್ಯ ಮಾಡಿ, ಮಠದಯ್ಯನವ್ರ ಕಾಲು ಕಟ್ಟಿ, ಕರ್ದು ತರಾನೆ’ಯೆಂದು ಪೆರ್ಲಜ್ಜ, ಕೇರಿ ಮುಕಂಡ್ರನ್ನ ಯಿಂದಿಟ್ಟುಕೊಂಡು, ವೂರು ದಾಟಿ, ಮಠದ ವರ್ಗೇ ನಿಂತು, ರವ್ವಾಟೊತ್ತು ಸುಧಾಸ್ರಿಕೊಂಡು, ಗಂಟ್ಲು ಸರಿಮಾಡಿಕೊಂಡು- ‘ಸ್ವಾಮಿಗಳೇ… ಅಯ್ಯನೋರೇ…’ ಯೆಂದು. ವಂದೆರಡು ಸಲ ಕೂಗಿದ್ರು. ವಳಗಿಂದ ‘ವತಾರೆ ಯಾರದು ಕೂಗಾದು?’ ಯೆಂದು. ಕರೀ ಜಾಲಿ ಕೊಲ್ಡುನಂಗೆ, ಗಿಡ್ಡುಕೆ, ಅಡ್ಡಡ್ಡ ಕಾಲ್ಗುಳ್ಳನ ಯಳಕ್ಕೊಂತಾ… ಎದೆ ಮೇಲೆ ಬಿಳಿಕೂದ್ಲು ವಣಗಿದ ಹತ್ತಿ ಕಟ್ಟಿಗೆಯಂತ ದೇಹ, ಕೊರಳಲ್ಲಿ ರುದ್ರಾಕ್ಷಿಸರ, ಯೆಗಲ್ಮೇಲೆ ಕೆಂಪು ಟುವ್ವಾಲು, ವುದರದ್ಮೇಲೆ ಶಿವದಾರದಲ್ಲಿದ್ದ ಲಿಂಗದ ಕಾಯಿ ಜೋಕಾಲಿಯಾಡುತ್ತಿತ್ತು. ಬಿಳಿ ಪಂಚೆ ವುಟ್ಟಿದ್ದು, ನೆಲ ಬಳ್ಕೊಂತಾ, ಮಾದಿಗ್ರ ಮುಂದೆ ವಕ್ರಕಣ್ಣು ಬಿಟ್ಟು ನಿಂತಿದ್ದು ಕಂಡು, ಗಾಬ್ರಿಬಿದ್ದು, ಕಾಲ್ಗೆ ವುದ್ದೂಕೆ ಅಡ್ಡಬಿದ್ರು.

‘ವೋ… ನೀವ್ಯಾ ದೊಡ್ಡು ಮನೆಯವ್ರು. ಅರಳಯ್ಯನೋರು. ಕರಿಕುಲ್ದಾರು… ಯೇನು? ವತ್ತುಟ್ಟಾಕೆ ಪುರುಸೊತ್ತಿಲ್ಲ ಆಗ್ಲೇ ಮಠದ ಬಾಗ್ಲು ಯಿಡುಕ್ಕೊಂಡು ನಿಂತೀರಲ್ಲಾ?! ಯೇನು ಸುದ್ದಿ ತಂದ್ರೀ’ ಎಂದ್ರು.

‘ಬುದ್ಧೇರಾ… ಕೇರಿ ವರ್ಗಿನೋರಾದ ದಕ್ಲು ಪೂಜಾರಿ, ಬೆಳಿಗ್ಗೆ ಕೈಲಾಸವಾಸಿಯಾದ. ಅವ್ನು ಕೊನೇ ಆಸೆಯಂತೆ, ತಾವು ಸವಸಂಸ್ಕಾರ್ನ ನಡ್ಸಿಕೊಡಲು ಬೇಡಿಕೊಳ್ತೇವೆ ಬುದ್ಧಿ’ ಯೆಂದು ಪೆರ್ಲಜ್ಜ, ಟುವಾಲು ನೆಲ್ಕ ಆಕಿ ಅಡ್ಬಿದ್ದ.

‘ಸೋಗ್ಲಾಡಿತನ ಬ್ಯಾಡ್ರಲೇ? ಯೆಲ್ಲಿ ಅರಿಯೋ ನೀರಲ್ಲೇ ಅರೀಲಿ. ಮಾದುಕ್ಕಿನ್ನ ಕಡಿಮೆ ಜಾತಿಯವ್ರಾದ… ದಕ್ಲಾರ್ಗೆ ಶವ ಸಂಸ್ಕಾರಕ್ಕೆ ಬರೋ ಕರ್ಮ ಯೀಗೇನೈತಿ? ಯಿಂದ್ಲುದು ಕೈಬಿಟ್ಟೀವಿ. ಯೀಗ ದೊಡ್ಡ ಮಠಕ್ಕೆ ಪೂಜಾರಿಯಾಗಿ, ಗುರುವಾಗಿ… ಗೂಟ್ದ ಕಾರುಬಂಗ್ಲೆ, ಮಠದ ಆಸ್ತಿಪಾಸ್ತಿ, ಯಿಸ್ಕೂಲು, ಕಾಲೇಜು ಯೇನೆಲ್ಲಾಯಿದ್ದು, ಕೆಳ ಜಾತಿಯವ್ರ ಸಂಸ್ಕಾರಕ್ಕೆ ನಾನೇಕೆ ಬರಬೇಕೇಳ್ರಲೇ? ನಾನಲ್ಲ ನನ್ನ ಶಿಷ್ಯರ… ಯಡಗಾಲು ಕೂಡಾ… ಬರಲ್ಲಾ ನಡ್ರೀ. ಮೊದ್ದು ಯಿಲ್ಲಿಂದ ಕದ್ಲರಿ’ ಯೆಂದು ಮಠದಯ್ಯನವ್ರು… ಮಾದಿಗ್ರುಗೆ ಮಾತಿನ ಕವಣೆಕಲ್ಲು ಬೀಸಿ ಬೀಸಿ ಯೆಸುದ್ರು. ವಬ್ರಮಕ ವೊಬ್ರು ನೋಡಿಕೊಂಡ್ರು, ಚಿಮುಟಿದ್ರು ಯಾರ ಮಕದಲ್ಲಿ, ರವ್ವಾಟು ರಕ್ತ ಬರದ ಸ್ಥಿತಿಯಲ್ಲಿ ನಿಂತ್ರು.

‘ಬುದ್ಧೇರಾ, ಯೀ ಮಠಕ್ಕೆ ಕಲ್ಲು, ಮಣ್ಣು, ಕಟ್ಗೆ, ಸಿಮೆಂಟು ತಂದಾಕೀವಿ. ತಗ್ಗು ದಿನ್ನೆ ಸರಿಮಾಡಿ, ಬುನಾದಿ ತೆಗ್ದು ಬೇಸಾಮಟ್ಟದ ವರ್ಗೆ ಕಲ್ಲು ಕಟ್ಟಿದವ್ರು ಯೀ ಮಾದಿಗ್ರು. ಯೀಗ ನಮ್ಗೆ ಯೆಗ್ಸೆಟ್ಟೆ ಮಾತಾಡಿ ನಗ್ತೀರಾ? ಆಗ ಜಾತಿ, ಮತ, ಧರ್ಮ, ಅಡ್ಡ ಬರ್ಲಿಲ್ಲವೇ… ಅಯ್ಯನೋರೇ?’ ಯೆಂದು ಪೆರ್ಲಜ್ಜ, ಮಠದಯ್ಯನವರ್ನ ತರಾಟೆಗೆ ತೆಗೆದುಕೊಂಡ.

ಬೆಳಂಬೆಳ್ಗೆ ಯಾರ್ಮಕ ನೋಡ್ದೆ ಸಿವ್ನೇ…?! ಯೀ ಮಾದಿಗ್ರ ಕಡೆನೂ ಮಂಗಳಾರ್ತಿ ಯೆತ್ರಿಸ್ಕೊಳ್ಳೊವತ್ತು. ಬಂತಲ್ಲಪ್ಪಾ! ಯೀಗ ಯಿಂದ್ಗುದೆಲ್ಲಾ ಯಾಕೇ? ನಡ್ರೀ ಯಿಗಾ ಮಠಬಿಟ್ಟು. ಬೇಗ ತೊಲಗ್ರೀ…’ ಮಠದಯ್ಯನವ್ರು, ಕೂಗಾಡತೊಡಗಿದರು. ಯಲ್ರು ಅಲ್ಲಿಂದ ಕಾಲ್ಕಿತ್ತರು.

‘ಥೂ… ಮಠದಯ್ಯನವ್ರ ತಂಟ್ಗೆ ಬರೋದೊಂದೇ ಪಿಟ್ಲು ಪರ್ಕೆ ತಂಟ್ಗೆ ವೋಗೋದೊಂದೇ. ಯಿಂದು… ಯಾರ ಮಕಾನ ನೋಡಿ, ಯೆದ್ದೀವೋ ಯೇನೋ. ಯೀಗೇನು ಸನಿಕಾದೈತೋ. ಸಿವ… ಸಿವಾ. ನಮ್ಮನ ನೀನೇ ಕಾಪಾಡಪ್ಪಾ’ ಕೇರಿ ಮುಖಂಡ ಸಂಗಣ್ಣ, ದೇವ್ರ ಭಜನೆಗೆ ಮೊರೆ ಹೋದ.

‘ಲೇ ಅಳೇ ವತಾರೆ ಆ ಮಠದಯ್ಯನೋರು ನಮ್ ಆಳ್ ಮಕಕೇ ಬಿಸ್ ನೀರುಗ್ಗಿ ಕಳ್ಸಿದ್ರು. ಅದ್ರಾಗೆ ನೀನ್ಯಾಕೆ ಯೀಗ ಓಬೀನ ಮುಳ್ಳು ಯಿಡ್ಕೊಂಡಂಗೆ ಯಿಡ್ಕೊಂತೀಯಿ? ಯಾವ ಪಕ್ಕೆಗೆ ಯೆದ್ದೀವೋ ಯೇನೋ. ಯೀಗೇನು ಗಹಚಾರವೋ? ನಡ್ರೀ ವನಾಸಾ-ವುಪಾಸಾ ಯೀಗ ರಾಮಾಯಣ, ಮಹಾಭಾರತ… ಸುರುವಾತು’ ಯೆಂದು, ಕೇರಿ ಮುಕಂಡ ಪೆನ್ನಪ್ಪ ಅಳೇ ರಾಗತೆಗ್ದ.

ಮುಕಂಡ್ರೆಲ್ಲ… ದೊಡ್ಡ ಗೌಡನ ಮನೆ ಮುಂದೆ ಹಂದ್ಗಿಳಂಗೇ ಗುಂಪಾಗಿ ನಿಂತ್ರು, ನಿಂತು ನಿಂತು ಸಾಕಾಯಿತು. ವಳಕಲ್ಲಿಗೆ ತಲೆಕೊಟ್ಟು, ವಣ್ಕೆ ಕೈಗೆ ಕೊಟ್ಟಂಗಾತು! ಮನೆಯಿಂದ್ಲ ಚರಂಡಿ ಕಲ್ಲು, ಗೋಡೆಗಳ ಮೇಲೆ, ಅಲ್ಲಲ್ಲಿ ಕೂತು ಕೂತು ಬಿಸ್ಲಿಗೆ ತಲೆ ಸುತ್ತಿದಂಗಾಗಿ, ಕಾದೂ ಕಾದೂ ಕಣ್ಣು ಗುಡ್ಡೆಗಳೊಡೆದಂಗಾದವು. ಗೌಡ್ರು ವಳಗಿಂದ ಚಾವಡಿ ಕಟ್ಟೆಗೆ ತೇಲಿಲ್ಲ. ಮಟ ಮಟ ಮಧ್ಯಾಹ್ನ ಬಿಸ್ಲು ನೆತ್ತಿಗೇರಿತು. ಆಗ ಮೆಲ್ಗೆ ಬಿಟಿಯಸ್ ಕುಲಕರ್ಣಿ, ಶಾನುಭೋಗ್ರು, ಗೌಡ್ರ ಚಾವಡಿ ಕಟ್ಟೆಗೆ ಬಂದು ಬಂದು ಕುಂತ್ರು.

ಮುಕಂಡ್ರ ವೋದ ಜೀವ, ಮೆಲ್ಗೆ ಬಂದಂಗಾತು. ಯಲ್ರು ಕುಂತಲ್ಲಿಂದ ಜಾಗ ಕದ್ಲಿಸಿದ್ರು, ಗೌಡ್ರು ಮನೆಯೊಳ್ಗಿಂದ ವರ್ಗೆ ಬಂದ್ರು, ಸುತ್ತಾ ಮುಕಂಡ್ರು ವೊಬ್ಬೊಬ್ಬರಾಗಿ ಗೌಡ್ರಿಗೆ ಅಡ್ಡಬಿದ್ರು.

‘ಯೇನು ಪೆರ್ಲ, ಪೆನ್ನಾ, ಸಂಗಾ, ನಿಂಗಾ ಬಂದಿದ್ದೂ?’ ಗೌಡ್ರು ಗತ್ತಿನಲ್ಲಿ ಕೇಳಿದ್ರು.

‘ದಣಿಗಳೇ… ವೂರು ಕೇರಿಗೇ ಸುತ್ತೇಳು ಅಳ್ಳಿಗೇ ನೀವು ಮುವ್ವಾರು ತ್ರಿಮೂರ್ತಿಗಳಿದ್ದಂಗೆ ಯಿದ್ದೀರಿ ಬುದ್ಧೇರಾ. ಮುಂಜಾನೆ ನಸುಗ್ಗೆ ಕೇರಿ ವರ್ಗಿರೋ ದಕ್ಲು ಪೂಜಾರಿ ಮುದುಕಪ್ಪ ತೀರ್ಕೊಂಡಾನೆ. ಅವ್ನ ಕೊನೇ ಆಸೆಯಂಗೆ. ನಮ್ಮೂರ ಮಠದಯ್ಯನವ್ರ ಕೈಲಿ, ಸಮುಸ್ಕಾರ ಆಗಬೇಕಂತಾ ಅಂಗಲಾಚಿದ್ವಿ. ಮಠದಯ್ಯನವ್ರು ಕೀಳು ಜಾತಿಯವ್ರ ಸಮುಸ್ಕಾರಕ್ಕೆಲ್ಲ ಬರಲ್ಲಾಂದ್ರು. ನೀವುಗ್ಳು ದೊಡ್ ಮನಸ್ಸು ಮಾಡಿ, ಮಠದಯ್ಯನವ್ರ ವಪ್ಸಿ ಗೌಡ್ರೇ’ ಯೆಂದು ಪೆರ್ಲಜ್ಜ, ತಲೆಮೇಲಿನ ಟುವ್ವಾಲು ತೆಗೆದು, ಮತ್ತೊಮ್ಮೆ ಉದ್ದುಕ ಅಡ್ಡಬಿದ್ದ.

‘ಯೀ ಮಾದಿಗ್ರೆಗೆ ಅಡ್ಡಬೀಳೋದೊಂದೇ ಬರೋದು, ಗೊತ್ತಿರಾದು’ ಯೆಂದು… ಮುವ್ಹಾರೂ ವಬ್ರು ಮಕ ವಬ್ರು ನೊಡ್ಕೊಂಡು, ಮುಸಿ-ಮುಸಿ ನಕ್ಕರು.

‘ಅತ್ತಾ ಆ ಮಠದಯ್ಯಸ್ವಾಮಿ, ಜಂಗಮ… ನಮ್ಗೆ ಬಾಳಾ ಬೇಕಾದವ್ರು. ಯಿತ್ತ ಯೀ ಮಾದಿಗ್ರು ಬೇಕಾದವ್ರೇ. ಅತ್ತ ಪುಲಿ, ಯಿತ್ತ ಧರಿ! ಅನ್ನಂಗಿಲ್ಲ ಅನುಭವಿಸಂಗಿಲ್ಲ’ ಯೆಂದು… ಕದ್ಲಾದಂಗೇ… ಕುಂತ್ರು! ಮಾದಿಗ್ರು ದೇವ್ರ ಮುಂದೆ ನಿಂತಂಗೆ, ಭಕ್ತಿ ಭಾವದಲಿ, ಕೈಕಟ್ಟಿ ನಿಂತ್ರು. ಗೌಡ್ರು ದೊಡ್ ಮನಸ್ಸು ಮಾಡಿ ಕೊನೆಗೂ ಬಾಯ್ಬಿಟ್ರು…

‘ಕಾಲ ಮೊದ್ಲಿದ್ದಂಗಿಲ್ಲ. ಅವ್ರವ್ರಿಷ್ಟ. ನೀವುಂಟು ಮಠದಯ್ಯನೋರುಂಟೂ. ಮಧ್ಯೆದಲ್ಲಿ ನಮ್ದೇನುಂಟು? ವೋಗ್ರಿ, ನಿಮ್ಗೆ ತಕ್ಕಂಗೆ ಶಾಸ್ತ್ರ ಮುಗ್ಸಿರಿ’ ಯೆಂದು, ಯೆದ್ಬೋಗ ಮಾತ್ನ, ಬಿದ್ದೋಗಂಗೆ ಅಂದ್ರು, ನಿಂತ ನೆಲ ಕುಸಿದಂಗಾತು. ಪೆನ್ನಪ್ಪನಿಗೆ ತಲೆ ತಿರುಗಿತು.

‘ಗೌಡ್ರೇ… ನ್ಯಾಯ ಯೀ… ವೂರು ಕೇರ್ಯಾಗ್ಳರಿಗೇ ವಂದೇ. ನಾವೂ ಸಂಬ್ಳ ದುಡಿಯಲ್ಲ. ವೊಲ, ಮನೆ, ಕೆಲ್ಸಕ್ಕೆ ಬರಲ್ಲ ಅಂದ್ವೀ… ನೀವು ಬಿಟ್ರಾ? ಕೇಳ್ದ್ರಾ…?? ವುರು ಕೇರಿಯೆಂದ್ಮೇಲೆ ವೊಂದಾಗಿ, ಚಂದಾಗಿರಬೇಕು, ಯೇನೇನೋ ಬೆಣ್ಣೆ, ತುಪ್ಪ, ಅಜ್ಜಿ, ಕಾಜಿ ನ್ಯಾಯ ಮಾಡಿದ್ದಕ್ಕೆ, ರಟ್ಟೆ ಮುರಿಯಂಗೆ, ಯೀಗ್ಲೂ ದುಡೀತಿದೀವಿ. ಯೀಗ ನೀವೂ ಕೇರಿಗರ ಪರ ಯಾಕೆ ವಹಿಸಬಾರ್ದು? ಮಠದಯ್ಯನ್‌ವ್ರಿಗೆ ಬರೀ ಕಣ್ ಸನ್ನೆ ಮಾಡಿದ್ರೆ ಸಾಕು, ಮಾದಿಗ್ರ ಮಾತೇನು? ಕೇರಿವರ್ಗಿರೋ ದಕ್ಲೋರು ಮಾತು ಕೇಳ್ತಾರೆ. ಯೀಗ ಅದ್ನೆ ಮಾಡಿ ಪುಣ್ಯ ಕಟ್ಟಕೊಳ್ಳಿ. ಬರೀ ಮೊಸಳೆ ಕಣ್ಣೀರಿಂದ ಕೇರಿಗ್ರ, ದ್ಕಕಲಿಗ್ರ, ಉದ್ಧಾರಿಲ್ಲ ಗೌಡ್ರೇ. ಯೀ ಮಾದಿಗ್ರಗೆ ಅಡ್ಡಬಿಳೋದು, ಅಡ್ಡ ಬಿಳ್ಸೋದು ಗೊತ್ತು. ನಾಳಿಂದ ನಿಮ್ ಕೆಲ್ಸಕ್ಕೆ ನಾವ್ಯಾರು ಬರಲ್ಲ ಗೌಡ್ರೇ’ ಯೆಂದು, ಗಲಗಲಾಂತ ಬಾಯಿ ಮಾಡಿದವ್ನ ಸಂಗಣ್ಣ, ಕೈ ಯಿಡಿದು, ಯಳಕ್ಕೊಂಡು ದೂಡಿದ.

‘ಬುದ್ಧಿವಂತ್ರಿಗೆ ದೊಣ್ಣೆ ಪೆಟ್ಟು ಯಾಕೆ? ವೂರಾಗ ನ್ಯಾಯ ಸಿಗುತ್ತೆಂದು ನಾವಿಲ್ಲಿಗೆ ಬಂದಿದ್ದೇ ದೊಡ್ಡ ತಪ್ಪಾತು. ನಮ್ಮ ನಾವೇ ಬಡ್ಕೋಬೇಕಷ್ಟೇ. ನಡ್ರೀ… ನಡ್ರೀ… ದ್ಯಾಸಂದ್ರದ ಕಟ್ಟೆಮನ್ಗೆ ವೋಗಿ, ಮುಂದೇನೆಂದೂ ಕೇಳಾನು’ ಪೆರ್ಲಜ್ಜ ಕೇರಿಗ್ರ, ವುರಿದುಂಬಿಸ್ದ.

ಅದಿನಾರು ಜನ ಕೇರಿ ಮುಕಂಡ್ರು ದ್ಯಾಸಂದ್ರದ ದಾರಿ, ಯಿಡಿದರು. ಅಷ್ಟೊತ್ತಿಗಾಗ್ಲೆ ಮಕನಸುಕಾಗಿತ್ತು. ವಟ್ಟಿಗಿಟ್ಟಿಲ್ದೆ, ನೀರಿಲ್ದೆ ಕೇರಿಗ್ರು ಸೋತು ಸುಣ್ಣಾದ್ರು. ದಾರಿ ಸಾಗುವುದೇ ಕಷ್ಟವೆನಿಸಿ ಪಕ್ಕದ ಗೌಡ್ರ ವೊಲಕ್ಕೆ ನುಗ್ಗಿ ಪರಂಗೆಣ್ಣು, ಜಾಮೆಣ್ಣು, ಸೌತೆಕಾಯಿ, ಅತ್ತೆಣ್ಣು ಎಳ್ಬೆದ್ನೆಕಾಯಿ, ಟಮಾಟ… ಕಿತ್ತು ಕಿತ್ತು ತಿಂದು ವಟ್ಟಿ ತುಂಬ್ಸಿ, ತೊಟ್ಟೇಗ್ಳು ನೀರ್ನ ಮನಾರ ಗಂಟ್ಲು ಮಟ್ಟ ಕುಡ್ದು, ಡರ್ರೆಂದು ಡೇಗುತ್ತಾ ದನ, ಕರು… ಕುರಿ, ಮೇಕೆ ಮರಿಗ್ಳಂಗೆ ಬಂಡಿ ಜಾಡಿಡಿದ್ರು.

ದ್ಯಾಸಂದ್ರ ತಲುಪಿದಾಗ, ದೀಪ ಗೂಡಿಗಿಡೋ ವತ್ತು. ವಳ್ಳೇ ಗಳಿಗೇಗೆ ಯಿಲ್ಗೆ ಕಾಲಿಟ್ಟಂಗಾತು. ನಮ್ಮೆಲ್ಲ ಪಾಪವೋಗಿ, ವೂರುಕೇರಿಗೆ ವಳ್ಳೆದಾಗುತ್ತೆ, ಬಿಡೋ ಮಲ್ಲಣ್ಣ. ಅಮ್ಮೋರು ಗುಡಿ ವೊಳಗೆ ಮಂಗಳಾರ್ತಿ, ದೀಪ, ಧೂಪ ಪ್ರಸಾದಯೆಲ್ಲ ಜರುಗೋ ವೇಳೆಯಿದು’ ಯೆಂದು ಪೆರ್ಲಜ್ಜ, ಯಲ್ಲಮ್ಮಾ ದೇವ್ರ ಪಾದಗಟ್ಟೆಗೆ ಅಡ್ಡಬಿದ್ದ.

‘ಅಮ್ಮಾ ತಾಯಿ, ನಮ್ಮಮ್ಮ ಯಲ್ಲಮ್ಮಾ… ನನ್ನ, ನನ್ಮಕ್ಕಳ್ನ ನನ್ ಕೇರೀನ, ಕೇರಿ ವರ್ಗಿನೋರ್ನ ಕಾಪಾಡಮ್ಮ. ಯೀಗ ಬಂದಿರೋ ಬಿಕ್ಕಟ್ಟನಿಂದ ನಮ್ನ ಯೀ ದಿನವೇ ಪಾರು ಮಾಡು. ಯೇಳುಕೊಳ್ಳದ ಯಲ್ಲಮ್ಮಾ, ನಿನ್ಗೆ ವರ್ಸುದೊಳ್ಗೆ ವೂರು ಕೇರಿ ಪರವಾಗಿ ಬೇಟೆ ಕಡ್ದು ಸರ್ಗವುಗ್ತೀನಿ ತಾಯಿ’ ಯೆಂದು ಬೇಡಿಕೊಂಡು, ರವ್ವೊಟ್ಟೊತ್ತು ನೆಲಕ್ಕೆ ಕುಂತು. ಕೇರಿಗೆ ನಡೆದ್ರು. ಕಟ್ಟೆಮನೆ ಮಾರೆಣ್ಣ ಕುಂತಲ್ಲಿಗೆ ವೊದ್ರು.

‘ಯಾರು ಪೆರ್ಲಜ್ಜನೇನು? ಯಿಷ್ಟು ಜನ್ರು ಬಂದ್ರೆಲ್ಲಾ ಯೇನು ಬರ್ರಿ ಕುಂತಗಳ್ರಿ, ಎಲ್ಲಾ ಭೇಷೈತೇನು?’ ಮುಕುಂಡ್ರು ಮತ್ತು ಅವ್ರ ಜತೆಗೆ ಬಂದ ಮಾದಿಗ್ರು ಮಾರೆಣ್ಣನ ಪಶ್ನೆಗೆ ಸುತ್ತಮುತ್ತಾ ಕುಂತ್ರು, ಸುದ್ದಿ ವಿವರಿಸಿದ್ರು.

‘ಯಿದೇನು ಸುದ್ದಿ ಬಿಡ್ರೋ… ಐದಾರು ವರುಸ್ದಾ ಕೆಳ್ಗೆ, ವಿಠಲಾಪುರ್ದಾಗೆ ದಕ್ಲು ಕರಿಯಣ್ಣ ಗೌಡ ಸತ್ತಿದ್ದ. ಆಗ ಆವೂರಿನ ಮಠದಯ್ಯನವ್ರೇ ಸದ್ಗತಿ ಕಾಣಿಸಿದ್ರಪ್ಪಾ… ಯೀಗ ಯೇನಾತು ಯಿವ್ರುಗೇ ಅಂಗೇ ಮಾಡಾನೇಳಿ, ಯೇಳು ‘ಅಳ್ಳಿ’ಯಿಂದ ಸರಪಂಚರ್ನ ನಾಳೆ ದಿನ ನಿಮ್ಮೂರ್ಗೆ ಕರ್ಸಿ. ನಮ್ಮೂರಿಂದ ಐದಾರು ಯಜಮಾನ್ರ ಕರ್ಕೊಂಡು ವತ್ತುಟ್ಟೋತ್ಗೆಲ್ಲ ಸೇರ್ಕೊಳ್ತೀನಿ’ ಯೆಂದು, ಕಟ್ಟೆಮನೆ ಯಜಮಾನ ಮಾರೆಣ್ಣ, ತೀರ್ಪಿತ್ತ.

‘ಅಂಗೇ ಆಗ್ಲಿಯಣ್ಣೋ… ಕತ್ಲಾಗುತ್ತೆ! ನಾವಿನ್ನು ಬರ್ತೀವಿ. ನೀವು ಮರೀದಂಗೆ ಬಂದ್ಬಿಡ್ರೀ’ ಯೆಂದು ಪೆರ್ಲಜ್ಜ, ಸಾರಿ ಸಾರಿ… ಯೇಳಿ, ‘ಬಂದ ದಾರಿಗೆ ಸುಂಕಿಲ್ಲ. ಬನ್ರೋ ನಮ್ಮೂರು ನಮ್ಗೆ ಚಂದಾ… ಮೊದ್ಲು ನಮ್ಗೂರ್ಗೆ ವೋಗಿ ಬೀಳಾನೆ’ ಯಂದು, ಜಿಗಿಜಿಗಿದು ದಾರಿ ನಡೆಯತೊಡಗಿದ.

ಕೇರಿ ಮುಂದುಗಡೆ… ದಕ್ಲು ಮುದುಕಪ್ಪ… ತನ್ನೆರಡು ನಾಯಿ, ಪುಟ್ಟಿ, ತಟ್ಟಿ, ಗಡಿಗೆ, ಪಾತ್ರೆ, ಪಡುಗ, ಪರಿಯಾಣ, ಚೊಂಬು, ಗಂಗಾಳ, ಕ್ವಣಿಗೆಗಳನ್ನಿಟ್ಟು ಕೊಂಡು ಮಾದಿಗ್ರನ್ನ ಕಂಚಿನ ಕಂಠದಿಂದ, ಮೇಲಿಂದ್ಮೇಲೆ, ಯಂದಿನಂತೆ, ವಟ್ಟಿ ಬಟ್ಟೆಗೆ ಆಗ್ರಹಿಸಿ ಕೂಗುತ್ತಿದ್ದಾನೆ.

ಮನೆ ಮನೆಯಿಂದ, ಹೆಣ್ಣು, ಗಂಡು, ಮಕ್ಳು, ಮರಿ, ಮುದ್ದೆ, ಚಟ್ನಿ, ರೊಟ್ಟಿ, ಪಲ್ಲೆ, ಸಾರು… ನೀರೂ… ತಂದು ತಂದು ಆಕುತ್ತಿದ್ದಾರೆ. ಅಂಗಳದಾಗೆ ನಿಂತು: ‘ಲಕ್ಕಿ… ಲಕ್ಕಿ… ಕಾಲ್ ತೊಳಕಂಬಾಕೆ ನೀರು ತಗೊಂಬಾರೇ’ ಪೆರ್ಲಜ್ಜ ಕೂಗ್ದ. ಯೆಂಡ್ತಿ ಮಗಿ ತುಂಬಾ ನೀರು ತಂದಿಟ್ಟಳು.

‘ಯೇ ದಕ್ಲು ಪೂಜಾರಿ ಮುದುಕಪ್ಪ… ಗಂಟ್ಲು ಅರ್ಕೋತಿದ್ದಾನೆ ಯೇನಾದ್ರು ವುಂಬಾಕಿಟ್ರಿಯೇನೇ?…’ ಪೆರ್ಲಪ್ಪ ಮಗಿ ನೀರ್ನ ಕೈಯಲ್ಲಿಡಿದೇ ಕೇಳಿದ.

‘ಮುದುಕಪ್ಪಾ ಮುಂಜಾನೆ ಸತ್ತಿಲೇನು…?! ಯಿನ್ಯಾವ ದಕ್ಲಾರು ಬಂದು ಕೂಗ್ತೀದಾರೆ, ಯಲ್ಲಾ ನಿಂಭ್ರಮೆ.’ ಯೆಂಡ್ತಿ ಲಕ್ಕಮ್ಮ, ಪೆರ್ಲಜ್ಜನ ಗುಂಗನು ಬಿಡಿಸಿದಳು. ಪೆರ್ಲಜ್ಜ ಕೈಕಾಲು ಮಕ ತೊಳ್ಕೊಂಡು, ಕೇರಿ ಮುಂದ್ಕ ನೋಡಿದ, ‘…ಅಲ್ಲೇ ಕುಂತಂಗಿದ್ದಾನೆ. ಯಿವ್ಳು ನೋಡಿದ್ರೆ ಅಲ್ಲಿ ಯಾರಿಲ್ಲ ಅನ್ತಾಳೆ! ‘ತೋ… ಯಲ್ಲೆಲ್ಲೂ ದಕ್ಲು ಮುದುಕಪ್ಪನೇ ಕಂಡಂಗೆ’ ಯೆಂದವ್ನ, ಬಲವಂತಕ್ಕೆ ಪೆರ್ಲಜ್ಜನ ವುದ್ದುಕೆ ದುರುಗಮ್ಮನ ಗುಡಿ ಕಡೆಗೆ ನಿಲ್ಸಿ, ಯೆಡಗೈ ತುಂಬಾ ವುಪ್ಪು, ಉಳ್ಳಾಗಡ್ಡೆ, ನಾಲ್ಕು ಮೆಣಸಿನಕಾಯ್ನ… ನಿವಾಳಿಸಿ ‘ತೂ… ತೂ… ಯೆಂದು ವುಗುಳಿ… ಮೂರು ದಾರಿ ಸೇರೋ ಜಾಗೆಗೆ… ಅದ್ನಯಿಟ್ಟು ತಿರುಗಿ ನೋಡ್ದಂಗೆ, ಮನ್ಗೆ ಬಂದು, ತಾನೂ ಕೈಕಾಲು, ಮಕ, ತೊಳ್ದು ವಸ್ಲಿಗೆ ವೂದುಬತ್ತಿ ಅಚ್ಚಿ, ಅಡ್ಡಬಿದ್ದು, ವಳ ಬಂದಳು. ಪೆರ್ಲಜ್ಜ ಮನೆಯಲ್ಲಿರಲಿಲ್ಲ.

‘ಯೆಲ್ಲಿ ನಿಮ್ಮಪ್ಪಾಲೇ? ಯೆಂದಿದ್ದಕೆ… ‘ಕಂಬಳಿ ವದ್ದುಕೊಂಡು, ಕುಂಟೆ ಕಡೆ, ದಕ್ಲಾರು ಅತ್ತ ವೋಗ್ತೀನಿ, ಯೆಂದು ವೋದಾ…’ ಅಂದ್ರು.

‘ಭಾರೀ ಸಮ್ರವಂತ ಗಂಡ್ಸು, ಯೆಣ್ದತ್ತಿರ ಯಾಕೋದ್ನೋ?’ ಯೆಂದು ರಾತ್ರಿಯೆಲ್ಲಾ, ವಂದೇ ಸಮನೆ… ಭಾರೀ… ಭಾರೀ… ಪೇಸಾಡತೊಡಗಿದಳು.

ಯೆಣದ ಸುತ್ತ, ಮುದುಕಪ್ಪನ ಕಳ್ಳು-ಬಳ್ಳಿ, ದೂರ್ದೂರ್ದ ವೂರುಗಳಿಂದ, ಬಂದ್ವಾರೂ… ಯದೆ ಯದೆಗಟ್ಸಿಕೊಂಡು, ಅಳೋದು… ಕೂಗೋದು… ಮಾಡುತ್ತಿದ್ದರು. ಕೇರಿ ಯಜಮಾನ್ರಾದ ಮಲ್ಲಪ್ಪ, ಪೆನ್ನಪ್ಪ, ಸಂಗಣ್ಣ, ರಂಗಣ್ಣ ಬಂದಾಗ್ಲೆ ಕುಳಿತಿದ್ರು. ಸೀಮೆ ಜಾಲಿ ಕಟ್ಟಿಗೆಯಿಂದ ಬೆಂಕಿ ಧಗಧಗ ವುರಿಯತೊಡಗಿತ್ತು. ಬೆಂಕಿ ಮುಂದ್ಗಡೆ ಕುಂತ. ವುರಿಯೋ ಬೆಂಕೀನ ಯೆಣ ಸುಡುವ ಜ್ವಾಲಾಗ್ನಿಯಂತೆ ಕಂಡು ಭಯಭೀತನಾದ. ಪ್ಲೇಗು, ಕಾಲರವೆಂದೂ, ವಾಂತಿ, ಭೇದಿಯೆಂದೂ ವದಂತಿ ಅರಡಿತು.

‘ಯೆಣದ ಮುಂದೆ ಜಾತಿ, ಮತ, ಕುಲ, ಧರ್ಮಗಳು ಬೇಕ್ಯಾಕೆ? ಕಟ್ಟುಪಾಡುಗಳೇಕೆ?’ ಪೆರ್ಲಜ್ಜ ಗುನುಗಿದ.

ರಾತ್ರಿಯೆಲ್ಲ ಯೆಣ ಕಾಯೋ ಕೆಲ್ಸಕೆ, ವಗ್ಗಿಕೊಂಡ. ಯೆಣದ ಸುತ್ತಾ ಗಂಡುಗೊತ್ತಿಗಳು, ಕೆಂಪ, ಕರೀ ಸೀಮೆಗಳ ವೋಡಾಟ, ನಾಯಿ, ನರಿ, ತೋಳ, ಕಪ್ಪಲಕ್ಕಗಳ ಕೂಗಾಟ. ವುದ್ದನೆ ಕೋಲು, ಬಡಿಗೆಗಳ ಯಿಡಿದು, ರಾತ್ರಿಯೆಲ್ಲ ಗಲಗಲಾಂತ, ಬಾಯಿ ಮಾಡ್ತಾ ಕೂಗ್ತಾ… ಕಾವಲಿದ್ದಿದ್ದರಿಂದ ನಿದ್ರೆ ‘ಅತ್ರಾ’ ಸುಳೀಲಿಲ್ಲ. ರಾತ್ರಿ ಯೆಷ್ಟೊಂದು ಭಯಾನಕವೆಂದು ಪೆರ್ಲಜ್ಜನಿಗೆ ಯೀ ಮೊದ್ದು ಅನ್ನಿಸಿರಲಿಲ್ಲ. ಕಟ್ಟಿಗೆ ಮುರಿದು ಬೆಂಕಿಗೆ ಹಾಕುವುದು, ಕೋಲಿನಿಂದ ನಾಯಿ, ನರಿ, ಕಪ್ಪಲಕ್ಕ… ಯಿಂಡನ್ನು ವೋಡ್ಸಿಕೊಂಡು ವೋಗುವುದು. ಯೇನೆಲ್ಲ ಮಾಡಿದ್ರೂ ಬೆಳಗಾಗಲಿಲ್ಲ. ವತ್ತು ನಡೆಸುವ ಚುಕ್ಕಿ ಕೂಡಾ, ದಕ್ಲಿಗರ ಸಾವಿನಲ್ಲಿ ಭಾಗಿಯಾದಂತೆ, ನಿಂತಲ್ಲೇ ನಿಂತುಬಿಟ್ಟಿತ್ತು.

ಸೂರ್ಯ ವುದಯಿಸಲಿಲ್ಲ, ಮೋಡದ ಮರೆಯಲ್ಲಿ, ಸಾವಿಗಂಜಿ ಕುಳಿತ. ಯಿಡೀ ವೂರು ಕೇರಿ, ಸೂತಕದಲ್ಲುಳಿಯಿತು. ಮನೆಮನಗಳೆಲ್ಲ ಬಿಕೋ… ಅನ್ನಿಸತೊಡಗಿದವು. ದನಕರು, ಕುರಿ, ಮೇಕೆ, ಕೋಳಿ, ನಾಯಿಗಳೂ, ಯೇನೂ ತಿನ್ನದೆ, ಜೋಲು ಮಕದಲಿ ನೆಲ ನೋಡತೊಡಗಿದವು. ಮಕ್ಳು ಮರೀ ಉಪಾಸಾದ್ರ. ಯೆಣ ಮಣ್ಣ ಮಾಡೋತನ್ಕ ಉಂಬಂಗಿಲ್ಲವೆಂಬ ಶಾಸ್ತ್ರಕ್ಕಿನ್ನ ಯೆದ್ರುಕೆ! ಯಲ್ರ ಮನೆ ಮುಂದೆ, ದಕ್ಲು ಪೂಜಾರಿ ಯೆಣಯಿರುವಂತೆ, ಭಯಗೊಂಡು ಯೇನೊಂದು ಬದ್ಕು ಮಾಡದೆ ಜನ್ರು ತುಂಬಾ ವದ್ಕೊಂಡು ಕುಪ್ಪೆ ಕುಪ್ಪೆ ಕುಂತ್ರು.

ಯೇಳು ಅಳ್ಳಿ, ಕಟ್ಟೆಮನೆಯಿಂದ ಸರಪಂಚರು, ಬಿಕ್ಕಟ್ಟು ಬಗೆಹರಿಸಲು, ವಗ್ಗಟ್ಟಾಗಿ ಬಿಳಿ ರುಮಾಲು ಸುತ್ತಿಕೊಂಡು, ಕೈಯಲ್ಲಿ ಬಿದ್ರಕೋಲು ಯಿಡಕೊಂಡು, ಮೂರು ಬಾರ್ನ ಜೋಡು ಮೆಟ್ಟಿಗೊಂಡು, ಯೆಗ್ಲ್ಮೇಲೆ ಕರೀ ಕಂಬ್ಳಿ ಆಕ್ಕೊಂಡು, ದುರುಗಮ್ಮನ ಗುಡಿಕಟ್ಟೆಗೆ ಭಾರಾದ್ರು. ಬೀಡಿ, ಸಿಗರೇಟು ಚುಟ್ಟಾ… ಸೇದುತ್ತಾ, ಯಲೆಡಿಕೆ ಮೆಲ್ಲುತ್ತಾ, ಮೂರು ದೊಡ್ಡದಾದ ಬೇವಿನ ಮರದ ನೆರಳಿಗೆ, ಸರಪಂಚರು ಆಸೀನರಾದ್ರು.

‘ಯೆಣಾನ ಮಾದಿಗ್ರು ಮುಟ್ಟುವಂತಿಲ್ಲ. ವೋಗ್ಲಿ ದಕ್ಕಲಿಗ್ರು ಸಂಸ್ಕಾರ ಮಾಡುವಂತಿಲ್ಲ. ಕಂಚಿಶಾಸನದ ಪಕಾರ… ಮಠದಯ್ಯನವ್ರ ಕೈಲೇ… ಸದ್ಗತಿ ಕಾಣಿಸ್ಸೇಕು. ಅವ್ರೂ ವಪ್ತಾಯಿಲ್ಲ, ವೋಗ್ಲಿ ದಕ್ಕಲಿಗರ್ಗೆ ಸ್ಮಶಾನ ಭೂಮಿ ಯಾವ ವೂರಲ್ಲಿಲ್ಲ. ಯಿದ್ನ ಬಗೆ ಅರ್ಸೋದು ಯೆಂಗೇ?’ ಯೆಂದು, ಕಟ್ಟೆಮನೆ ಮಾರೆಣ್ಣ, ಕಣ್ಣುಮುಚ್ಚಿ ಕುಳಿತ. ಅಲ್ಲಿದ್ದವರಿಗೆಲ್ಲ ಅಂಗೇ ಜಂಪು ಬಂತು. ಮಾರೆಣ್ಣ ಮಾತ್ರ ಕಣ್ಣು ತೆರೆದು, ಪರಿಹಾರ ಸೂಚಿಸಲಿಲ್ಲ. ಜನ್ರು ಕಂಗಾಲಾದ್ರು.

‘ಇದೆಂಥಾ ಮೌನ? ತೀರ್ಮಾನಾ? ಪಂಚಾಯ್ತಿ? ಯೆಣವಾಗ್ಲೇ ವಾಸನೆ ಬರ್ತೈತಿ. ಕೇರೆಂಬೋ ಕೇರಿ, ಉಪಾಸ ಬಿದ್ದೈತಿ. ವೂರಾಗ್ಳು ಗೌಡ್ರ, ಗಂಚಿಗಾರರೂ ನನ್ನ ಕರ್ಸಿ ಯಲ್ಡು ದಿನದಿಂದ ಯೆಣಾ… ಯಿಟ್ಗೊಂಡು ಯೇನು ಆಟಾಡ್ತಿದ್ದೀರಾ? ಯಿವತ್ತು ಯೆಣ ಯೆತ್ತುತೀರೋ… ಯಿಲ್ಲ ನಿಮ್ಮೆಣ ಯೆತ್ತಬೇಕೋ ಯೆಂದು ಕಂಡಾಬಟ್ಟೆ ಬೈದಾಡ್ಯಾರೆ’ ಯೆಂದು, ಪೆರ್ಲಜ್ಜ, ಕೇರಿಗ್ರ ಪರವಾಗಿ ಯೆದ್ದು ಕೈಜೋಡ್ಸಿದ.

‘ದಕ್ಲಿಗರು ದೊಡ್ಡ ಮನಸ್ಸು ಮಾಡಿ, ಯೆಣ ಸ್ಮಶಾನದಾಗೆ ವೂಳಲು ಇಲ್ಲಾ ಮಾದಿಗ್ರು ಯೆಣ ವೊತ್ತು, ಸಂಸ್ಕಾರ ಮಾಡಬೇಕು. ಅವ್ರು ವಪ್ತಾ ಇಲ್ಲ. ಯಿವ್ರು ವಪ್ತಾ ಇಲ್ಲಾ. ಯಿಂಗಾದ್ರೆ ಸಮಸ್ಯೆ ಬಗೆರ್ಸೋದೆಂಗೇ?’ ಮಾರೆಣ್ಣ, ತಲೆ ಮೇಲೆ ಕೈವತ್ತು, ಬೀಡಿ ಎಳೆಯುತ್ತಾ ಕುಂತ. ಜನ ಅಸಿವು… ನೀರಡ್ಕೆಯಿಂದ ಬಳಲಿ… ಬಳಲಿ ಬೆಂಡಾಯಿತು. ಯೀವೂರು ಕೇರಿಗಿಂಥಾ ದುರ್ಗತಿ ಬರಬಾರದಿತ್ತು! ಶನಿ ಲತ್ತೇ… ಬಡಿಯಿತೆಂದು ಗುನುಗಿದರು.

ಸುದ್ದಿ ಮಿಂಚಿನಂತೆ, ಯೇಳು ಅಳ್ಳಿ… ಪಟ್ಟಣಗಳಿಗೆ ಮಾರೆಣ್ಣ ಮುಟ್ಸಿದ. ದಲಿತ ಸಂಘರ್ಷ ಸಮಿತಿ, ಮಹಿಳಾ ಜಾಗೃತಿ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆಯವ್ರು… ಯೆಣ್ದ ಮುಂದೆ… ಜನ ಸಾಗ್ರ ಸೇರಿತು.

ಅಲ್ಗೆ… ವುರುಮೆ, ಡೊಳ್ಳು, ನಗಾರಿ, ಕೊಂಬು ಕಹಳೆ, ಜಾಗ್ಟೆಗಳ ಆರ್ಭಟ, ಮುಗಿಲು ಮುಗಿಲು… ಮುಟ್ಟಿತು. ಜನ್ರು ಸಿಳ್ಳೆ, ಕೇಕೆ, ಆಕಿ ಕುಣಿದು ಕುಪ್ಪಳಿಸಿತು.

ಚಟ್ಟದ್ಮೇಲೆ ಯೆಣಯಿಟ್ಕೊಂಡು, ರಾಂಪುರದ ಕಳ್ಳಿಸಾಲು, ಕತ್ತಾಳೆ ಬಡ್ಡೆಗಳ ಗುಂಟಾ, ವುಣಿಸೆಮರ ದಾಟಿ, ಮುಸಲ್ಮಾನ್ರ ಸಮಾಧಿಗಳ ಪಕ್ಕದಿಂದ, ಮೆರವಣಿಗೆ ವಂಟಿತು. ದೇವ್ರೋ ಪರಿಷೇನೋ. ಅಂತಾ ಜನ್ರು ವಲ, ಗದ್ದೆ, ತೋಟಗಳಿಂದ ವೋಡೋಡಿ ಬಂದು ನೋಡಿ ನಿರಾಸೆಗೊಂಡು ‘ಯಿದೇನು ಕಾಲವಪ್ಪೋ ದಕ್ಕಲಾರು ಯೆಣಕ್ಕಿಷ್ಟು ಮರ್ಯಾದೆ ಬಂತಪ್ಪೋ… ಯೇನು ಆಪತ್ತು ಕಾದಿದೆಯೋ’ ಯೆಂದು ಗೊಣಗಿಕೊಳ್ಳುತ್ತಾ ಮೆರವಣಿಗೆಗೆ ದಾರಿಕೊಟ್ರು.

ಸಾವಿರಾರು ಜನ್ರ ಕಂಡು, ವೂರು ಕೇರಿ ಮೂಗಿನ್ಮೇಲೆ ಬೆರ್ಳಿಟ್ಟಿತು. ಅನ್ನಂಗಿಲ್ಲ. ಅನುಭವ್ಸಂಗಿಲ್ಲ. ಯಾಕೋ ಪರಿಸ್ಥಿತಿ ಕೈಮೀರಿ ವೋಗುತ್ತಿದೆಯೆನ್ಸಿ, ‘ನೀ ಯೇನೆ ಯೇಳು ಕಟ್ಟೆಮನೆಯವ್ರು… ವುಗುರ್ಲಿ ವೋಗಾದ್ಕೆ ಕೊಡ್ಲಿ ತಗೊಂಡ್ರು, ನನಿಗ್ಯಾಕೋ ಜೀವ… ಬಿಟ್ಟು ಬಿಟ್ಟು ಯಿಡ್ದಂಗಾಗ್ತೈತಿ. ಯಿಂದ್ಕೂ ವೋಗ್ಲಾರ್ದೆ, ಮುಂದ್ಕೂ ಬರ್ಲಾರ್ದೆ ಅತ್ಲುಕೊತ್ಲು ಆಗೀನಿ’ ಯೆಂದು ಪೆನ್ನಣ್ಣ, ತಲೆ ಕೊಡ್ವಿದ.

ರಾಂಪುರ ಮುಟ್ಟಿದ್ರು. ‘ಬಳ್ಳಾರಿ-ಬೆಂಗ್ಳೂರು’ ರಾಷ್ಟ್ರೀಯ ಹೆದ್ದಾರಿ ಮೇಲೆ ಮುದುಕಪ್ಪನ ಯೆಣ ಯಿಟ್ಟು, ರಸ್ತೆ ಬಂದ್ ಮಾಡಿ, ಜನ್ರು ಕೆಂಭೂತ-ಪಿಶಾಚಿಗಳಂತೆ ಕುಣ್ಣು, ಕುಪಳಿಸಿ, ಪ್ರತಿಭಟನೆಗಿಳಿದ್ರು.

‘ಯೆಣ ವೂಳಾಕೆ ಸುಡುಗಾಡು ಬೇಕು.

ದಕ್ಕಲಿಗ್ರಗೆ ನ್ಯಾಯ ಬೇಕು.

ಸರ್ಕಾರ ಪರಿಹಾರ ವದಗಿಸ್ಬೇಕು…’

ಮಕನಸುಕಾಗ್ತಾ ಬಂತು. ಬಳ್ಳಾರಿ ಕಡ್ಗೆ, ಬೆಂಗ್ಳೂರು ಕಡ್ಗೆ ವಾಹನಗಳು ‘ಅನುಮನ ಬಾಲದಂತೆ ನಿಂತವು. ಸುದ್ದಿ ಜಿಲ್ಲಾ ಸ್ಥಳಕ್ಕೆ ಮುಟ್ಟಿದ್ದೇ ತಡ… ಅಲ್ಲಿಂದ ಜೀಪು, ಲಾರಿ, ಪೊಲೀಸ್ ವ್ಯಾನುಗಳಲ್ಲಿ ಸಿಬ್ಬಂದಿ, ಅಧಿಕಾರಿಗಳೂ… ಬಂದಿಳಿದರು. ಲಾಠಿಯೇಟು, ಬೂಟಿನೇಟಿಗೆ, ಜನ್ರು ವುಚ್ಚಾಪಟ್ಟೆ ವೋಡೋಡಿ ಕತ್ತಲಲ್ಲಿ ಕರಗಿತು. ಅನಾಥ ಶವವನ್ನು ಬಳ್ಳಾರಿ ಶವಾಗಾರಕ್ಕೆ ಒಪ್ಸಿ… ಬೆರಳಣಿಕೆ ಮಂದೀನ ಜೈಲಿಗಿಟ್ರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಟ್ಟು ಆತ್ಮದ ಓಂ ಮಠಾ
Next post ಮಿಂಚುಳ್ಳಿ ಬೆಳಕಿಂಡಿ – ೭೧

ಸಣ್ಣ ಕತೆ

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…