ಕಾನ್ಸಿರಾಮ್ ಮತ್ತು ಕರ್ನಾಟಕ

ಕಾನ್ಸಿರಾಮ್ ಮತ್ತು ಕರ್ನಾಟಕ

ಕಾನ್ಸಿರಾಮ್ ಅವರು ಕದ ತಟ್ಟುತ್ತಿದ್ದಾರೆಂದ ಕೂಡಲೆ ಭೂಕಂಪವಾದಂತೆ ಬೆಚ್ಚಿ ಬೀಳುವ ವಾತಾವರಣವಿದೆ ಎಂಬಂತೆ ವರದಿಗಳು ಬರುತ್ತಿವೆ. ಮಹಾರಾಷ್ಟ್ರಕ್ಕೆ ಅವರು ಬರುವುದಕ್ಕೆ ಎರಡು ದಿನ ಮುಂಚೆಯೇ ಮರಾಠವಾಡ ವಿಶ್ವವಿದ್ಯಾಲಯಕ್ಕೆ ಅಂಬೇಡ್ಕರ್ ಹೆಸರು ಇಡುವ ಆದೇಶ ಹೊರಡಿಸಿಲಾಯಿತು; ಗುಜರಾತಿನಲ್ಲಿ ಮೀಸಲಾತಿ ಪ್ರಮಾಣವನ್ನು ಶೇ. ೧೦ ರಿಂದ ೨೭ಕ್ಕೆ ಏರಿಸಲಾಯಿತು. ಪಶ್ಚಿಮ ಬಂಗಾಳದಲ್ಲಿ ಹಿಂದುಳಿದ ಮತ್ತು ದಲಿತ ವರ್ಗಗಳ ಅಭಿವೃದ್ಧಿ ಕಾರ್ಯದ ಸಮೀಕ್ಷೆ ನಡೆಯಿತು; ಕರ್ನಾಟಕದ ಕೋಲಾರ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆಯಿತೆನ್ನಲಾದ ದಲಿತ ಮಲತಿನ್ನಿಸಿದ ಘಟನೆ ಬಗ್ಗೆ ರಾಜಕೀಯ ಮುಖಂಡರೆಲ್ಲ ಮಾತನಾಡತೊಡಗಿದರು. ಹೀಗೆ ಕಾನ್ಸಿರಾಮ್ ಅವರು ಬರುತ್ತಾರೆಂದಕೂಡಲೆ ಇಷ್ಟೆಲ್ಲ ನಡೆಯಿತು ಎಂಬಂತೆ ಪ್ರಚಾರ ಮಾಡಲಾಗುತ್ತಿದೆ. (ಕೆಲವು ಅಂಗ್ಲ ಪತ್ರಿಕೆಗಳಲ್ಲಿ ಇದೊಂದು ರೋಚಕ ಸಂದರ್ಭವೆಂಬಂತೆ ಬರೆಯಲಾಗಿದೆ.)

ಕಾನ್ಸಿರಾಮ್ ಅವರ ಆಗಮನಕ್ಕೆ ವಿವಿಧ ರಾಜ್ಯಗಳಲ್ಲಿ ಈ ರೀತಿಯ ಆತಂಕ ನಿಜವಾಗಿಯೂ ಆಗಿದೆಯೇ? ಕಾನ್ಸಿರಾಮ್ ಅವರು ನಮ್ಮ ದೇಶದ ದಲಿತರನ್ನು ಪ್ರತಿನಿಧಿಸುವ ಪ್ರಾತಿನಿಧಿಕ ಶಕ್ತಿಯೇ?- ಇಂಥ ಪ್ರಶ್ನೆಗಳಿಗೆ ನಿಜ ಉತ್ತರ ಹುಡುಕುತ್ತ ಹೋದಾಗ, ಕಾನ್ಸಿರಾಮರು ಕಾಲಿಟ್ಟಾಗ ಕರ್ನಾಟಕದಲ್ಲಂತೂ ಕಂಪನವಾಗಲಿಲ್ಲ ಎಂದೇ ಹೇಳಬೇಕಾಗಿದೆ. ಹಾಗಾದರೆ, ಅವರನ್ನು ಭೇಟಿಮಾಡಲು ಕರ್ನಾಟಕದ ಕೆಲವು ರಾಜಕಾರಣಿಗಳು ಹಾತೊರೆದದ್ದು ಸೌಜನ್ಯವೊ ಅಭದ್ರತೆಯ ಸಂಕೇತವೊ ಆಗಿದೆ. ಹೀಗೆಂದ ಕೂಡಲೇ ಒಟ್ಟಾರೆಯಾಗಿ ಕಾನ್ಸಿರಾಮರ ರಾಜಕೀಯ ಪ್ರಾಬಲ್ಯವನ್ನು ಅಲ್ಲಗಳೆಯಬೇಕಾಗಿಲ್ಲ. ದೇಶದ ಕೆಲವು ಭಾಗಗಳಲ್ಲಿ ತಮ್ಮ ಹಿಡಿತವನ್ನು ಸಾಧಿಸಿ ತೋರಿಸಿದ ಕಾನ್ಸಿರಾಮ್ ನಿಸ್ಸಂದೇಹವಾಗಿ ಒಂದು ರಾಜಕೀಯ ಶಕ್ತಿಯಾಗಿದ್ದಾರೆ. ಶ್ರೇಣೀಕೃತ ಸಮಾಜದ ಅತೃಪ್ತಿಯನ್ನು ಅಸ್ತ್ರ ಮಾಡಿಕೊಳ್ಳುವಲ್ಲಿ ಪ್ರಬಲರಾಗುತ್ತ ಸಾಗಿದ್ದಾರೆ. ಇತಿಮಿತಿಗಳ ಮಧ್ಯೆಯೂ ನಮ್ಮ ದೇಶದಲ್ಲಿ ಕಾನ್ಸಿರಾಮ್ ಅವರ ಮಹತ್ವವನ್ನು ನಿರ್ಲಕ್ಷ್ಯ ಮಾಡಲಾಗದು. ಮಾಡಬಾರದು. ಎರಡು ಮುಖ್ಯ ಕಾರಣಗಳಿಗಾಗಿ ಕಾನ್ಸಿರಾಮ್ ಮುಖ್ಯವಾಗಿ ಕಾಣುತ್ತಾರೆ: ಒಂದು-ಅವರು ವ್ಯಕ್ತಪಡಿಸುತ್ತಿರುವ ಕ್ರಿಯಾತ್ಮಕ ದಲಿತ ಕಾಳಜಿ. ಎರಡು-ಅಧಿಕಾರ ಹಿಡಿದ ದಲಿತ ರಾಜಕಾರಣಿ ಮತ್ತು ನೌಕರ ಶಾಹಿಯನ್ನು ವಿಮರ್ಶಾತ್ಮಕವಾಗಿ ನೋಡುವ ದೃಷ್ಟಿ, ಹಾಗೆ ನೋಡಿದರೆ ಈ ಎರಡು ಅಂಶಗಳು ಪರಸ್ಪರ ಸಂಬಂಧವನ್ನು ಪಡೆದಿದೆ. ನಿಜವಾದ ದಲಿತ ಕಾಳಜಿ ಇರುವವರು ದಲಿತ ಕಾಳಜಿಯಿಲ್ಲದ ದಲಿತ ನಾಯಕರು ಮತ್ತು ನೌಕರರನ್ನು ಬಯಲಿಗೆಳೆಯುವ ನೈತಿಕ ಸ್ಥೈರ್ಯವನ್ನು ತೋರಿಸಿದಾಗ ಕಾಳಜಿಗೊಂದು ಕ್ರಮಬದ್ಧತೆ ಬರುತ್ತದೆ. ಹಿಂದುಳಿದ ವರ್ಗವನ್ನಾಗಲಿ, ಪರಿಶಿಷ್ಟ ಜಾತಿ-ವರ್ಗವನ್ನಾಗಲಿ ಕೇವಲ ಸ್ವರಕ್ಷಣೆ ಸಾಧನ ಮಾಡಿಕೊಂಡು ಸವಲತ್ತು ಪಡೆಯುವ, ಅನುಭವಿಸುವ ಕೆಲವರ ಬಗ್ಗೆ ಅನಗತ್ಯ ಸಹಾನುಭೂತಿ ಮತ್ತು ಬೆಂಬಲ ಬೇಕಾಗಿಲ್ಲ. ಯಾಕೆಂದರೆ ನಾವೀಗ ಬದಲಾವಣೆಯ ಸ್ಥಿತ್ಯಂತರದ ಸಂದರ್ಭದಲ್ಲಿದ್ದೇವೆ; ಪ್ರಾರಂಭದ ಸ್ಥಿತಿಯಲ್ಲಿಲ್ಲ. ಪ್ರಾರಂಭದ ಸ್ಥಿತಿಯಲ್ಲಿ ಕೆಲವು ರಿಯಾಯಿತಿಗಳು ಬೇಕಾಗಿರಬಹುದು. ಆದರೆ ಪ್ರಾರಂಭದ ಹಂತವನ್ನು ದಾಟಿ ಸ್ಥಿತ್ಯಂತರದ ಹಂತ ತಲುಪಿದಾಗ ವಿಮರ್ಶೆ ಮತ್ತು ಸ್ವವಿಮರ್ಶೆಗಳ ಸೈದ್ಧಾಂತಿಕ ದೃಷ್ಟಿಯನ್ನು ಬೆಳೆಸಿಕೊಳ್ಳದಿದ್ದರೆ ಹಿಂದುಳಿದ ವರ್ಗ ಮತ್ತು ದಲಿತರು ಆತ್ಮವಂಚನೆ ಮಾಡಿಕೊಂಡಂತಾಗುತ್ತದೆ. ಈ ದೃಷ್ಟಿಯಿಂದ ನೌಕರಶಾಹಿಯಲ್ಲಿರುವ ಕರ್ತವ್ಯ ಹೀನ ದಲಿತರನ್ನು ಕಾನ್ಸಿರಾಮ್ ಅವರು ‘ನವಬ್ರಾಹ್ಮಣ’ರೆಂದು ಕರೆದು ಟೀಕಿಸುವುದನ್ನು ಸ್ವಾಗತಿಸಬೇಕು. ನವಬ್ರಾಹ್ಮಣರ ಪರಿಕಲ್ಪನೆ ಕಾನ್ಸಿರಾಮರ ಕೊಡುಗೆಯೇನು ಅಲ್ಲ. ಹಿಂದಿನಿಂದಲೂ ಅದು ಚಾಲ್ತಿಯಲ್ಲಿದೆ. ಆದರೆ ಕಾನ್ಸಿರಾಮರಿಗೆ ದಲಿತ ನೌಕರರ ಬೆಂಬಲವೇ ಜಾಸ್ತಿ ಎಂದು ಹೇಳಲಾಗುತ್ತಿದ್ದ ಅಂಶವನ್ನು ಗಮನಿಸಿದರೆ, ದಲಿತರೆಂಬ ಒಂದೇ ಕಾರಣಕ್ಕೆ ದಲಿತವಿರೋಧಿ ನೌಕರರನ್ನು ಸಂರಕ್ಷಣೆ ಮಾಡಲಾಗದೆಂಬ ಅವರ ಅಭಿಪ್ರಾಯ ಆರೋಗ್ಯಕರ ನಿಲುವಾಗಿ ಕಾಣಿಸುತ್ತದೆ. ಸಹಜ ಸೈದ್ಧಾಂತಿಕ ನೆಲೆಗಳು ಬೇಕಾದ ಅಂಶಗಳು ನಮ್ಮ ಸಂದರ್ಭದಲ್ಲಿ ಮಹತ್ವ ಮೌಲ್ಯಗಳ ಸ್ನಾನ ಪಡೆಯುತ್ತಿರುವುದು ಮಾತ್ರ ನಮ್ಮ ಅನಾರೋಗ್ಯಕರ ಸನ್ನಿವೇಶವನ್ನು ಸಾರಿ ಹೇಳಿದಂತಾಗಿದೆ.

ಪ್ರಖರ ದಲಿತ ಕಾಳಜಿಯುಳ್ಳ ಚುರುಕು ನಾಲಗೆಯ ಕಾನ್ಸಿರಾಮ್ ಪಂಜಾಬಿನ ರೋಪಾರ್ ಜಿಲ್ಲೆಯ ಖವಾಸ್ಪುರ್ ಎಂಬ ಹಳ್ಳಿಯಲ್ಲಿ, ಸಿಖ್ ಧರ್ಮಕ್ಕೆ ಮತಾಂತರಗೊಂಡ ರಾಮದಾಸಿಯ ಜಾತಿಗೆ ಸೇರಿದ ಮನೆಯಲ್ಲಿ ಹುಟ್ಟಿದರು. ಮೂಲ ಚಮ್ಮಾರರಾಗಿದ್ದವರು ರಾಮದಾಸಿಯ ಜಾತಿಯೆನಿಸಿ ಕೊಂಡರೆಂದು ಹೇಳಲಾಗುತ್ತದೆ. ಮದುವೆ ವಯಸ್ಸಿನಲ್ಲಿ ಮನೆಬಿಟ್ಟ ಬ್ರಹ್ಮಚಾರಿ ಕಾನ್ಸಿರಾಮ್ ಅವರು ಇಂದಿಗೂ ತಮ್ಮ ಮೂಲ ಮನೆಯ ಜೊತೆಗೆ ಆತ್ಮೀಯ ಸಂಬಂಧವನ್ನು ಉಳಿಸಿಕೊಂಡಿಲ್ಲ. ಅವರು ಎಲ್ಲಿದ್ದಾರೆಂಬುದೇ ಕೆಲವು ವರ್ಷಗಳವರೆಗೆ ತಾಯಿ ತಂಗಿಯರಿಗೆ ಗೊತ್ತಿರಲಿಲ್ಲ. ಏಳೆಂಟು ವರ್ಷಗಳ ಹಿಂದೆ ತಮ್ಮ ತಂದೆ ನಿಧನರಾದಾಗ, ವಿಷಯ ಗೊತ್ತಿದ್ದೂ ಅಂತ್ಯಸಂಸ್ಕಾರಕ್ಕೆ ಹೋಗಲಿಲ್ಲ.

ಅವಿವಾಹಿತ ಕಾನ್ಸಿರಾಮ್ ಅವರು ತಮ್ಮ ಹುಟ್ಟಿದ ಮನೆ ಜೊತೆ ಗಾಢ ಸಂಬಂಧವನ್ನು ಬೆಳೆಸಲಾಗದ ಮನೋಧರ್ಮವನ್ನು ಪಡೆದಿರುವುದಕ್ಕೂ ಅವರ ಸ್ವಭಾವಕ್ಕೂ ನಾನು ಸಂಬಂಧ ಕಲ್ಪಿಸ ಬಯಸುತ್ತೇನೆ. ಮನುಷ್ಯ ಸಂಬಂಧಗಳಲ್ಲಿ ತೀವ್ರವಾಗಿ ತೊಡಗಿಸಿಕೊಳ್ಳದ ವ್ಯಕ್ತಿಗಳು ವೈಪರೀತ್ಯ ವ್ಯಕ್ತಿತ್ವವನ್ನು ಪಡೆಯುವ ಸಂಭವವುಂಟು. ಏಕಾಕಿತನವನ್ನು ನೀಗಿಸಿಕೊಳ್ಳುವ ಹೋರಾಟದಲ್ಲಿ ಏಕಪ್ರಭುತ್ವ ಸ್ಥಾಪಿಸಿ, ಕೀಳರಿಮೆಯ ಕಟ್ಟುಗಳನ್ನು ಮುರಿದು ಮೆರೆಯುವ ಸ್ವಭಾವ ರೂಪುಗೊಳ್ಳಲು ಸಾಧ್ಯ. ಅಂತರ್ಮುಖತೆ ಬೇರೆ; ಸಂಬಂಧ ವಿಮುಖತೆ ಬೇರೆ. ಸಂಬಂಧವಿಮುಖತೆಗೆ ಒಳಗಾದ ವ್ಯಕ್ತಿ ಒಂಟಿತನವನ್ನೇ ಒಂಟಿ ಶಕ್ತಿಯಾಗಿ ಪ್ರಕಟಿಸಿಕೊಳ್ಳುತ್ತ ‘ಸರ್ವಶಕ್ತ’ ಭ್ರಮೆಗೆ ಒಳಗಾಗುವುದೂ ಉಂಟು. ಸಂಬಂಧ ವಿಮುಖತೆ ಸಿನಿಕತನದ ಪ್ರೇರಕಶಕ್ತಿಯೂ ಹೌದು; ಸಿನಿಕತನವೂ ಅಂತರ್ಮುಖೀ ಸರ್ವಾಧಿಕಾರವಾಗುವ ಒಂದು ಅಪಾಯವೂ ಹೌದು. ಈ ಎಲ್ಲ ಅಂಶಗಳನ್ನು ನಾನು ಕಾನ್ಸಿರಾಮ್ ಅವರಲ್ಲಿ ಕಾಣುತ್ತಿದ್ದೇನೆ. ಕಾನ್ಸಿರಾಮ್ ಅವರ ರಾಜಕೀಯ ವ್ಯಕ್ತಿತ್ವವನ್ನು ಅರ್ಥಮಾಡಿ ಕೊಳ್ಳಲು ವೈಯಕ್ತಿಕ ಮತ್ತು ಸಾಮಾಜಿಕ ನೆಲೆಗಳಿಂದ ಸಹಾಯ ಪಡೆದರೆ ಏಕಕಾಲಕ್ಕೆ ‘ಸಮೂಹ ಪ್ರಜ್ಞೆ ಮತ್ತು ವ್ಯಕ್ತಿ ಪ್ರಜ್ಞೆ’ಗಳನ್ನು ಒಳಗೊಂಡ ವೈಪರೀತ್ಯವನ್ನು ಸರಿಯಾಗಿ ಗ್ರಹಿಸಬಹುದು.

ನಿಜವಾದ ಜನನಾಯಕನೊಬ್ಬ ವ್ಯಕ್ತಿಪ್ರಜ್ಞೆ ಮತ್ತು ಸಮೂಹ ಪ್ರಜ್ಞೆಗಳನ್ನು ಸಮತೋಲಗೊಳಿಸುವ ಒಳ ಹೋರಾಟವನ್ನು ಹೊಂದಿರಬೇಕು. ಈ ಒಳ ಹೋರಾಟದ ಮೂಲಕ ಸಾಮಾಜಿಕ ಹೋರಾಟಕ್ಕೆ ಬೇಕಾದ ಸಮಚಿತ್ತ ಮತ್ತು ಸಮಪ್ರಜ್ಞೆಯನ್ನು ಪಡೆಯಬೇಕು. ಸಮೂಹದೊಳಗೆ ವ್ಯಕ್ತಿಯಾಗುತ್ತ ವ್ಯಕ್ತಿಯೊಳಗೆ ಸಮೂಹವಾಗುತ್ತ ಅಂತರ್‌ಪ್ರಕ್ರಿಯೆಯನ್ನು ಕಾಯ್ದುಕೊಳ್ಳುವ ಕ್ರಿಯಾಶೀಲರು ಮಾತ್ರವೇ ಈ ದೇಶದ ಸಮರ್ಥ ಸಾಮಾಜಿಕ ನಾಯಕರಾಗಬಲ್ಲರು. ಯಾಕೆಂದರೆ ಸಾಹಿತ್ಯಾದಿ ಕಲೆಗಳಿಗೆ ಬೇಕಾದ ಸೂಕ್ಷ್ಮತೆ- ಸಂವೇದನಾ ಶೀಲತೆಗಳೊಂದಿಗೆ, ಸಾಮಾಜಿಕ ಹೊಣೆಗಾರಿಕೆ – ಹೋರಾಟಗಳು ಒಂದಾಗಿ, ವಿವಿಧ ಆಯಾಮಗಳಲ್ಲಿ ಸಾಮಾಜಿಕ ಬದುಕನ್ನು ಗ್ರಹಿಸುವ ಶಕ್ತಿ, ವ್ಯಕ್ತಿ ಪ್ರಜ್ಞೆ ಮತ್ತು ಸಮೂಹ ಪ್ರಜ್ಞೆಯ ಸಮತೋಲನ ಪ್ರಕ್ರಿಯೆಗೆ ಲಭ್ಯವಾಗುತ್ತದೆ. ಇಂಥ ಸಮತೋಲನ ಪ್ರಕ್ರಿಯೆಯನ್ನು ಸಾಧಿಸಬೇಕಾದ ಕಾನ್ಸಿರಾಮ್ ಅವರು ಆಯತಪ್ಪುತ್ತಿರುವ ಅನೇಕ ಸಂದರ್ಭಗಳು ನಮ್ಮ ಕಣ್ಣೆದುರಿಗಿವೆ. ಒಂದು ಉತ್ತಮ ಉದಾಹರಣೆಯೆಂದರೆ – ಉತ್ತರ ಪ್ರದೇಶ ಚುನಾವಣೆ ಫಲಿತಾಂಶ. ಧಾರ್ಮಿಕ ಮೂಲಭೂತವಾದಿಗಳನ್ನು ಸೋಲಿಸಿದ ‘ಮುಲಾಯಂ-ಕಾನ್ಸಿರಾಮ್’ ಅವರನ್ನು ಅಭಿನಂದಿಸಲೇಬೇಕು. ಆದರೆ ಇಡೀ ಫಲಿತಾಂಶದ ರೂವಾರಿ ತಾವೊಬ್ಬರೇ ಎಂಬಂತೆ ಕಾನ್ಸಿರಾಮ್ ಅವರು ಮಾತನಾಡುತ್ತಿದ್ದಾರೆ. ಮುಲಾಯಂ ಸಿಂಗ್ ಅವರು ತಾವು ಪ್ರತಿಷ್ಠಾಪಿಸಿದ ಮೂರ್ತಿ ಮಾತ್ರವೆಂಬಂತೆ ವ್ಯಾಖ್ಯಾನಿಸುತ್ತಿದ್ದಾರೆ. ವಾಸ್ತವವಾಗಿ ಉತ್ತರ ಪ್ರದೇಶ ಚುನಾವಣೆ ಫಲಿತಾಂಶಗಳ ಹಿಂದೆ ಸಮೂಹಪ್ರಜ್ಞೆಯ ಒತ್ತಾಸೆಯಾಗಿದೆ. ವಿವಿಧ ಸಮೂಹಗಳ ಸಮ ಸಂಯೋಜನೆಯಿಂದ ಈ ‘ಪ್ರಜ್ಞೆ’ ರೂಪುಗೊಂಡಿದೆಯೋ ಇಲ್ಲವೋ ಅದು ಚರ್ಚಿಸಬೇಕಾದ ಸಂಗತಿ. ಆದರೆ ಸ್ತೂಲವಾಗಿ ಒಂದು ನಿರ್ದಿಷ್ಟ ಸಮೂಹ ಪ್ರಜ್ಞೆ ರೂಪುಗೊಳ್ಳುತ್ತಿರುವುದ ಫಲವಾಗಿ ಉತ್ತರಪ್ರದೇಶದಲ್ಲಿ ಮುಲಾಯಂ ಮತ್ತು ಕಾನ್ಸಿರಾಮ್ ನೇತೃತ್ವದ ರಾಜಕೀಯ ಶಕ್ತಿ ಮೇಲುಗೈ ಸಾಧಿಸಿದೆ. ಇದು ಸಮಾಜ ಬದಲಾವಣೆಯ ಪ್ರಕ್ರಿಯೆಗೆ ಬೇಕಾದ ಸಮಾ ಸಂಯೋಜನೆ ಶಕ್ತಿಯಾಗುವಂತೆ ಮಾಡುವ ದೊಡ್ಡ ಹೊಣೆಗಾರಿಕೆಯನ್ನು ನಿರ್ವಹಿಸಬೇಕಾದ ಸಂದರ್ಭದಲ್ಲಿ ‘ಮುಲಾಯಂ ಮುಖ್ಯಮಂತ್ರಿಯಾಗಬೇಕೆಂದು ಬಯಸಿದೆ. ಮುಖ್ಯಮಂತ್ರಿಯನ್ನಾಗಿ ಮಾಡಿದೆ.’ ಎಂಬ ವ್ಯಕ್ತಿ ವೈಪರಿತ್ಯದ ಹೇಳಿಕೆಗಳನ್ನು ನೀಡುವುದು ಮುತ್ಸದ್ದಿತನವಂತೂ ಇಲ್ಲ. ಮುಲಾಯಂ ಸಿಂಗ್ ಅವರು ಮುಖ್ಯಮಂತ್ರಿ ಯಾಗುತ್ತಿರುವುದು ಇದೇ ಮೊದಲಲ್ಲ. ಅವರ ಓಟಿನ ಶಕ್ತಿಯನ್ನು ಅಲ್ಲಗಳೆಯುವಂತಿಲ್ಲ. ಮಂದಿರ-ಮಸೀದಿ ವಿವಾದದಲ್ಲಿ ಅತ್ಯಂತ ಸ್ಪಷ್ಟವಾಗಿ ಹಿಂದೂ ಮೂಲಭೂತವಾದಿಗಳು ವಿರುದ್ಧ ಸೆಟೆದು ನಿಂತ ಮುಲಾಯಂ ಉತ್ತರ ಪ್ರದೇಶದ ಮುಸ್ಲಿಮರಿಗೆ ಹೆಚ್ಚು ಪ್ರಿಯವಾದವರು; ಈಗ ಗೆದ್ದಿರುವ ಕ್ಷೇತ್ರಗಳಲ್ಲಿ ಮುಸ್ಲಿಮ್ ಮತದಾರರು ಸುಮಾರು ಶೇ. ೧೫ ರಷ್ಟಿದ್ದಾರೆಂಬುದನ್ನು ಗಮನಿಸಿದಾಗ ಮತ್ತು ಮುಲಾಯಂ ಅವರು ನಿಯಂತ್ರಣಕ್ಕೆ ಸಿಗುವ ಜಾತಿ-ವರ್ಗ ಸಮುದಾಯಗಳನ್ನು ಪರಿಗಣಿಸಿದಾಗ, ಉತ್ತರ ಪ್ರದೇಶ ಚುನಾವಣೆ ವಿಜಯದ ರೂವಾರಿ ಕಾನ್ಸಿರಾಮ್ ಮಾತ್ರ ವೆಂದು ಹೇಳಲು ಸಾಧ್ಯವೇ ಇಲ್ಲ. ಕಾನ್ಸಿರಾಮ್ ಅವರಿಂದ ಮುಲಾಯಂ ಸಿಂಗ್ ಅಭ್ಯರ್ಥಿಗಳಿಗೂ, ಮುಲಾಯಂ ಅವರಿಂದ ಕಾನ್ಸಿರಾಮ್ ಅಭ್ಯರ್ಥಿ ಗಳಿಗೂ ಜಯ ಮತಗಳು ಬಿದ್ದಿದೆ, ಇವರಿಬ್ಬರ ಮತ ಶಕ್ತಿ, ಬಿ.ಜೆ.ಪಿ. ಮತ್ತು ಕಾಂಗ್ರೆಸ್‌ನ ಸೋಲಿನಲ್ಲಿ ಪ್ರಮುಖ ಪಾತ್ರವಹಿಸಿದೆ. ಸತ್ಯಸಂಗತಿ ಹೀಗಿರುವಾಗ ಮುಲಾಯಂ ಅವರನ್ನು ತಮ್ಮ ಮುಂದಿನ ಬಾಲಕನೆಂಬಂತೆ ನೋಡುವ ಅಗತ್ಯವಂತೂ ಇಲ್ಲ, ಮುಲಾಯಂ-ಕಾನ್ಸಿರಾಮ್ ರಾಜಕೀಯ ಸ್ನೇಹವು, ಸಾಮಾಜಿಕ ಸೈದ್ಧಾಂತಿಕತೆಯಾಗಿ ರೂಪುಗೊಳ್ಳಬೇಕಾದ ಸಂದರ್ಭದಲ್ಲಿ ವ್ಯಕ್ತಿ ವೈಪರೀತ್ಯ ರಾಜಕೀಯ ಸ್ನೇಹವನ್ನಷ್ಟೇ ಅಲ್ಲ, ಸಾಮಾಜಿಕ ಕಾಳಜಿಯನ್ನೂ ಹಾಳುಮಾಡುತ್ತದೆ.

ಇನ್ನೊಂದು ಮಾತನ್ನು ಇಲ್ಲಿ ಹೇಳಬೇಕು; ಕಾನ್ಸಿರಾಮ್ ಅವರು ದಲಿತರ ‘ರಾಮ್’ ಆಗಬೇಕಿಲ್ಲ. ‘ರಾಮ’ ಈಗ ಧಾರ್‍ಮಿಕ ಭೂತವಾದಿಗಳ ಕೈಗೆ ಸಿಕ್ಕಿ ಸೊರಗುತ್ತಿರುವ ‘ಸಂಕೇತ’ ಮಾತ್ರವಾಗುತ್ತಿರುವಾಗ ಸಂಕೇತಗಳನ್ನು ಮೀರಿದ ಸಾಮಾಜಿಕ ಆರ್ಥಿಕ ಪ್ರಕ್ರಿಯೆಗೆ ಚಾಲನೆ ಕೊಡ ಬೇಕಾದ ಅಗತ್ಯವಿದೆ. ಈ ಅಗತ್ಯವನ್ನು ಪೂರೈಸಲು ಕೆಲಸಕ್ಕೆ ನಿರಂತರತೆ ಒದಗಿಬರಬೇಕು: ತಮ್ಮೊಳಗೆ ತಾವೇ ಮುಖಾಮುಖಿಯಾಗುತ್ತ ಸಿನಿಕತನ ಮತ್ತು ವ್ಯಕ್ತಿ ವೈಪರಿತ್ಯಗಳನ್ನು ಮೀರಬೇಕು. ಇಲ್ಲದಿದ್ದರೆ ಮಾಧ್ಯಮಗಳಿಗೆ ರೋಚಕ ಸಾಮಗ್ರಿ ಒದಗಿಸುವ ಸಾಧನಗಳು ಮಾತ್ರವಾಗುವ ಸಾಮಾಜಿಕ ದುರಂತ ಕಾದಿರುತ್ತದೆ. ಕಾನ್ಸಿರಾಮ್ ಅವರು ಸಾಮಾಜಿಕ-ರಾಜಕೀಯ ಶಕ್ತಿಯಾಗುತ್ತಿರುವುದು ಸಂತೋಷ ಸಂಗತಿಯೆಂಬುದನ್ನು ಒಪ್ಪುತ್ತಲೇ, ಇದು ಸಾಮಾಜಿಕ ಸಂ-ಭ್ರಮದಲ್ಲಿ ನಿಲ್ಲಬಾರದೆಂದು ಅಪೇಕ್ಷಿಸಬೇಕಾಗಿದೆ. ಯಾಕೆಂದರೆ ಕಾನ್ಸಿರಾಮ್ ಅವರು ಇತರೆ ರಾಜಕಾರಣಿಗಳಂತೆಯೇ ಜಯಂತ ಮಲ್ಹೋತ್ರ ಅವರಂಥ ಬಂಡವಾಳಗಾರರನ್ನು ಹತ್ತಿರದಲ್ಲಿ ಇಟ್ಟುಕೊಂಡಿದ್ದಾರೆ. ವಿವಿಧ ರಾಜಕೀಯ ಪಕ್ಷಗಳ ‘ಫಂಡುದಾರ’ರಾದ ಜಯಂತ ಮಲ್ಹೋತ್ರ ಅವರು ಮುಲಾಯಂ-ಕಾನ್ಸಿರಾಮ್ ಅವರ ಬೆಂಬಲದಿಂದಲೇ ಈಗ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆಂಬುದನ್ನೂ ಗಮನಿಸಬೇಕು. ಜೊತೆಗೆ ಕಾನ್ಸಿರಾಮ್ ಅವರ ಮನೆಯಲ್ಲೇ ಇರುವ ಮಾಯಾವತಿಯವರು ಬಹುಜನ ಸಮಾಜ ಪಕ್ಷದಲ್ಲಿ ಪ್ರಬಲ ಶಕ್ತಿಯಾಗಿದ್ದಾರೆ, ಮಾಯಾವತಿಯವರ ಮಾತಿಗೆ ಎದುರಿಲ್ಲ ಎಂಬಂಥ ವಾತಾವರಣ ಇದೆಯೆಂದು ಹೇಳಲಾಗುತ್ತಿದೆ. ಇಷ್ಟು ಉಲ್ಲೇಖಗಳು ಕಾನ್ಸಿರಾಮ್ ಅವರ ಮತ್ತೊಂದು ಮುಖದ ಬಗ್ಗೆಯೂ ಮಾತಾಡಬಲ್ಲವು. ನಾನಿಲ್ಲಿ ಮಾಯಾವತಿಯವರ ವೈಯಕ್ತಿಕ ಸಂಬಂಧದ ಬಗ್ಗೆ ಮಾತನಾಡುತ್ತಿಲ್ಲ. ಅದು ನಮಗೆ ಗೊತ್ತೂ ಇಲ್ಲ; ಅದರ ಅಗತ್ಯವೂ ಇಲ್ಲ. ಆದರೆ ಯಾವುದೇ ವೈಯಕ್ತಿಕ ಸಂಬಂಧಗಳು ಗಾಢ ಮಾನವೀಯ ಸಂಬಂಧಗಳಾಗಬೇಕಾದ ಅಗತ್ಯವಿರುವಂತೆಯೇ ಈ ಸಂಬಂಧಗಳು ರಾಜಕೀಯ ಸಂಬಂಧ ಸರ್ವಾಧಿಕಾರತ್ವಕ್ಕೆ ಕಾರಣವಾಗಬಾರದೆಂಬುದನ್ನು ಮರೆಯಬಾರದು; ಅಷ್ಟೇ.

ಈಗ ಮತ್ತೊಂದು ಉದಾಹರಣೆಯನ್ನು ನೋಡಬಹುದು. ಕರ್ನಾಟಕದ ‘ಮುಲಾಯಂ’ ಅವರನ್ನು ಹುಡುಕುತ್ತಿದ್ದೀರೆಂದು ಇತ್ತೀಚೆಗೆ ಕಾನ್ಸಿರಾಮ್ ಅವರು ಬೆಂಗಳೂರಿನಲ್ಲಿ ಘೋಷಿಸಿದರು. ಇದು ಕಿಂಗ್ ಮೇಕರ್ ಕಲ್ಪನೆಯನ್ನು ಸ್ವಯಂ ಆರೋಪಿಸಿಕೊಂಡವರ ಮಾತು. ಇಷ್ಟಕ್ಕೂ ಕರ್ನಾಟಕಕ್ಕೆ ಮುಲಾಯಂ ಬೇಕೆ ? ಅಥವಾ ಮುಲಾಯಂ ಬೇಕೆಂದರೂ ಅದಕ್ಕೆ ಹದಗೊಂಡ ವಾತಾವರಣವಿದೆಯೆ? ನನ್ನ ದೃಷ್ಟಿಯಲ್ಲಿ ಎರಡು ಪ್ರಶ್ನೆಗಳಿಗೂ ‘ಇಲ್ಲ’ ಎನ್ನುವುದೇ ಉತ್ತರ. ಇನ್ನೊಬ್ಬರು ಹುಡುಕಿ ಹುಟ್ಟುಹಾಕುವ ಮುಲಾಯಂ ಕರ್ನಾಟಕ ಬೇಕಿಲ್ಲ. ಇಲ್ಲಿನ ಆಂದೋಲನಗಳಿಂದಲೇ ಹುಟ್ಟುವ ಸಮೂಹ ಸಾಮಾಜಿಕ ಪ್ರಜ್ಞೆಯ ನಾಯಕ ನಮಗೆ ಬೇಕಾಗಬಹುದು. ‘ಅವತಾರ ಕಲ್ಪನೆ’ಯಿಂದ ದೂರವಾದ ಸಾಮಾಜಿಕ-ರಾಜಕೀಯ ಶಕ್ತಿಯಾಗಿ ಬೆಳೆಯುವ ಜನಮುಖಿ ನಾಯಕತ್ವವನ್ನು ಕರ್ನಾಟಕ ನಿರೀಕ್ಷಿಸಬೇಕು. ಉತ್ತರ ಭಾರತದಲ್ಲಿರುವ ಹಿಂದುಳಿದ ಹಾಗೂ ದಲಿತರ ಸಂದರ್ಭಕ್ಕಿಂತ ‘ಸಂಪೂರ್ಣ’ ವ್ಯತ್ಯಾಸವಿದೆಯೆಂದು ಹೇಳಲಾಗದಿದ್ದರೂ ದೇವರಾಜ ಅರಸರ ಆಡಳಿತದಲ್ಲಿ ಉಂಟಾದ ಪರಿಣಾಮಗಳಿಂದ ಮೀಸಲಾತಿಯು ಇಲ್ಲಿ ದೊಡ್ಡ ಸಮಸ್ಯೆಯಾಗಿಲ್ಲ. ಹಿಂದುಳಿದ ಮತ್ತು ದಲಿತರಲ್ಲಿ ಅನೇಕ ನಾಯಕರು ಬೆಳೆದು ಅಧಿಕಾರದ ಹಂಚಿಕೊಂಡು ಆಸೆ-ನಿರಾಸೆಗಳಿಗೆ ಕಾರಣವಾದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಈಗ ಬೇಕಾಗಿರುವುದು ಅಧಿಕಾರ ಹಂಚಿಕೆಗೆ ಮಾತ್ರ ಸೀಮಿತವಾಗದ ಸಾಮಾಜಿಕ-ಆರ್ಥಿಕ ಸಮಾನತೆ ಮುಂದುವರೆದ ಪರಿಷ್ಕೃತ, ಪ್ರಬುದ್ಧ ಹೋರಾಟ! ಹೋರಾಟದ ಆರಂಭವನ್ನು ಆಪೇಕ್ಷಿಸುವ ಉತ್ತರದ ಕೆಲವು ರಾಜ್ಯಗಳಿಗೆ ಕರ್ನಾಟಕಕ್ಕೂ ಇರುವ ವ್ಯತ್ಯಾಸವನ್ನು ಇಲ್ಲಿ ಗಮನಿಸಬೇಕು. ಜೊತೆಗೆ ಇಲ್ಲಿ ಬೇರೂರಿರುವ ವಿವಿಧ ರಾಜಕೀಯ ಗುಂಪು ಮತ್ತು ನಾಯಕತ್ವವನ್ನು ಪರಿಗಣಿಸಬೇಕು.

ಆದ್ದರಿಂದ, ಕರ್ನಾಟಕದಲ್ಲಿ ಕಾನ್ಸಿರಾಮ್ ಅವರು ಇತರ ದಲಿತ ಸಂಘಟನೆಗಳಂತೆ ಅಥವಾ ಅವುಗಳ ನೆರವಿನಿಂದ ಒಂದು ಆಂದೋಲನ ಶಕ್ತಿಯಾಗಬಹುದು. ‘ಶಕ್ತಿ ರಾಜಕೀಯ’ದ ಒಂದು ಮುಖ್ಯ ಶಕ್ತಿಯಂತೂ ಆಗುವುದಿಲ್ಲ. ಈ ಮಾತು ಸುಳ್ಳಾದರೆ ಸ್ವಲ್ಪವಾದರೂ ಸಂತೋಷಪಡೋಣ!

೨೭-೨-೧೯೯೪
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಳವಣಿಗೆ
Next post ಹಾಡೆಂದರೆ ಹಾಡಲೇನು

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…