ಅವನ ಬೈಸಿಕಲ್ಲಿಗೆ ಎಷ್ಟು ವರ್ಷವಾಗಿರಬಹುದೆಂದು ಅವನಿಗೂ ಸರಿಯಾಗಿ ಹೇಳಲು ಸಾಧ್ಯವಿರಲಿಲ್ಲ. ಅದಕ್ಕೆ ಪೈಂಟು ಇಲ್ಲದೆ ಅದೆಷ್ಟೋ ವರ್ಷಗಳು ಕಳೆದಿದ್ದವು. ಅದಕ್ಕೆ ಬೆಲ್ಲು ಇರಲಿಲ್ಲ. ಅದರ ಎಲ್ಲಾ ಭಾಗಗಳೂ ಹೊರಡಿಸುವ ಶಬ್ದದಿಂದಾಗಿ ಬೇರೆ ಬೆಲ್ಲಿನ ಅಗತ್ಯವಿರಲಿಲ್ಲ. ಅದಕ್ಕೆ ಬ್ರೇಕು ಇರಲಿಲ್ಲ. ಆದುದರಿಂದ ಅದು ಬರುವಾಗ ಜನ ತಾವಾಗಿಯೇ ದಾರಿ ಬಿಟ್ಟು ಕೊಡುತ್ತಿದ್ದರು. ಅದಕ್ಕೆ ಲೈಟು ಇರಲಿಲ್ಲ. ಅವನ ಊರಿನಲ್ಲಿ ಪೋಲೀಸರೇ ಇಲ್ಲ. ಹಾಗಾಗಿ ರಾತ್ರೆಯಲ್ಲೂ ಅವನು ತೊಂದರೆಗೆ ಸಿಕ್ಕಿಹಾಕಿಕೊಂಡಿರಲಿಲ್ಲ. ಅದಕ್ಕೆ ಕ್ಯಾರಿಯರ್ ಇರಲಿಲ್ಲ. ಆದುದರಿಂದ ಅವನಿಗೆ ಡಬ್ಬಲ್‌ರೈಡ್ ಮಾಡುವ ತಾಪತ್ರಯವೇ ಇರಲಿಲ್ಲ.
ಅದನ್ನು ರಿಪೇರಿ ಮಾಡಿಸಬೇಕು ಮತ್ತು ಅದಕ್ಕೆ ಒಳ್ಳೆಯ ಪೈಂಟು ಮಾಡಿಸ ಬೇಕೆಂದು ಪ್ರತಿದಿನ ಜನ ನೆನಪಿಸುತ್ತಲೇ ಇರುತ್ತಾರೆ. ಹಾಗೆ ನೆನಪಿಸುವವರೆಲ್ಲಾ ತಲಾ ಒಂದೊಂದು ರೂಪಾಯಿ ಯಂತೆ ಕೊಟ್ಟಿದ್ದರೂ ಅವನ ಬೈಸಿಕಲ್ಲು ಎಂದೋ ರಿಪೇರಿಯಾಗಿ ಬಿಡುತ್ತಿತ್ತು. ಒಂದೆರಡು ಬಾರಿ ಅವ ಹಾಗಂತ ಹೇಳಿಯೂ ಬಿಟ್ಟ. ಆಮೇಲೆ ಪುಕ್ಕಟೆ ಉಪದೇಶಕರ ಸಂಖ್ಯೆ ಸ್ವಲ್ಪ ಕಡಿಮೆಯಾಗಿದೆ.
ಆತ ಪಿ.ಯು.ಸಿ. ಓದಿದ್ದ. ತಂದೆಯ ಕೂಲಿ ಕೆಲಸ ಅವನಿಗೆ ಒಗ್ಗಲಿಲ್ಲ. ಅವನಿಗೆ ಒಗ್ಗುವ ಕೆಲಸ ಸಿಗಲಿಲ್ಲ. ಅವನಿಗೆ ಹೃದಯ ಬಿಚ್ಚಿ ಹರಟಬಹುದಾದ ಸ್ನೇಹಿತರು ಇರಲಿಲ್ಲ. ಅವನ ಬೈಸಿಕಲ್ಲೇ ಅವನ ಸಂಗಾತಿ. ಪಂಚಾಯತ್ ಮತ್ತು ಪೋಸ್ಟ್ ಆಫೀಸ್ ಅವನ ಮೆಚ್ಚಿನ ತಾಣಗಳು. ಪಂಚಾಯತ್ ಪೇಪರ್ ಓದಲು, ಪೋಸ್ಟ್ ಆಫೀಸ್ ಎಂಪ್ಲಾಯ್‌ಮೆಂಟ್ ಎಕ್ಸ್ ಚೇಂಜ್‌ನಿಂದ ಕಾರ್ಡು ಬರುತ್ತದೇನೋ ಎಂದು ಕಾಯಲು. ಅಲ್ಲೆಲ್ಲಾ ಜಮಾಯಿಸು ವವರಿಗೆ ಅವನ ಬೈಸಿಕಲ್ಲು ಪ್ರತಿದಿನದ ಹರಟೆಯ ವಸ್ತು. ಅವನದೊಂದು ಪುಟ್ಟ ಹಳ್ಳಿ. ಅಲ್ಲಿಗೆ ಬಸ್ಸ್ ಇರಲಿಲ್ಲ. ಒಂದು ಸಲ ಶಾಲೆಯ ವಾರ್ಷಿಕೋತ್ಸವದ ಪ್ರಬಂಧ ಸ್ಪರ್ಧೆಗೆ ‘ವಾಹನ’ ಎಂಬ ವಿಷಯ ಕೊಟ್ಟಾಗ ಮಕ್ಕಳೆಲ್ಲಾ ಬರೆದದ್ದು ಅವನ ಬೈಸಿಕಲ್ ಬಗ್ಗೆಯೇ ಎಂದು ಹೆಡ್ಮಾಸ್ತರರು ಅವನನ್ನು ಕಂಡಾಗಲೆಲ್ಲಾ ಹೇಳುತ್ತಿರುತ್ತಾರೆ.
ಅವನ ಬಗ್ಗೆ ಊರ ಜನರಿಗೆ ಕೆಟ್ಟ ಅಭಿಪ್ರಾಯವೇನೂ ಇರಲಿಲ್ಲ. ಅವನ ಬೈಸಿಕಲ್ಲಿಗೆ ಭಯಪಡುವವರೂ ಅವನನ್ನು ನಿರುಪದ್ರವಿ ಪ್ರಾಣಿ ಎನ್ನುತ್ತಿದ್ದರು. ಅವನು ಕನಸು ಕಾಣುತ್ತಿದ್ದ. ತನಗೊಂದು ಕೆಲಸ ಸಿಕ್ಕ ಹಾಗೆ. ತನ್ನ ಸೈಕಲನ್ನು ರಿಪೇರಿ ಮಾಡಿಸಿ, ಕ್ಯಾರಿಯರ್, ಬೆಲ್ಲ್, ಬೇಬಿಸೀಟ್ ಕೂಡಿಸಿ ಪೈಂಟ್ ಮಾಡಿದ ಹಾಗೆ. ತನಗೆ ಇಷ್ಟವಾಗುವವಳನ್ನು ಮದುವೆಯಾಗಿ ಹೆಂಡತಿಯನ್ನು ಹಿಂದೆ, ಮಗುವನ್ನು ಬೇಬಿ ಸೀಟಲ್ಲಿ ಕೂರಿಸಿ ವೇಗವಾಗಿ ಬೈಸಿಕಲ್ಲು ಬಿಡುವ ಹಾಗೆ. ಬೈಸಿಕಲ್ಲು ವೇಗಕ್ಕೆ ಹೆದರಿ ಹೆಂಡತಿ ಅವನನ್ನು ಬೈಯುವ ಹಾಗೆ ಮತ್ತು ಮಗು ಕೇಕೆ ಹಾಕಿ ನಗುವ ಹಾಗೆ.
* * *
ಚುನಾವಣೆಗಳು ಒಮ್ಮೆಲೇ ಬಂದು ಎರಗಿದಾಗ ಊರಿನ ನಿದ್ದೆ ಬಿಟ್ಟಿತು. ಜನರ ಓಡಾಟ ಹೆಚ್ಚಿತು. ಅವನಿಗೂ ಹೊಸ ಹುರುಪು ಬಂತು. ತಾನೀಗ ಗೆಲ್ಲುವ ಪಕ್ಷದ ಬೆನ್ನು ಹತ್ತಬೇಕು. ಅದಕ್ಕೆ ಅಧಿಕಾರ ಸಿಕ್ಕರೆ ತನಗೆ ಕೆಲಸವೂ ಸಿಗಬಹುದು. ತನ್ನ ಕನಸೆಲ್ಲಾ ಕೈಗೂಡಬಹುದು. ಯೋಚಿಸುತ್ತಾ ಬೈಸಿಕಲ್ಲು ತುಳಿಯುತ್ತಿದ್ದವ ಜೀಪೊಂದು ಹತ್ತಿರ ಬಂದು ನಿಂತಾಗ ವಾಸ್ತವಕ್ಕೆ ಬಂದ. ಬ್ರೇಕಿಲ್ಲದ ಬೈಸಿಕಲ್ಲನ್ನು ಬಹಳ ಕಷ್ಟಪಟ್ಟು ನಿಲ್ಲಿಸಿದ. ಜೀಪಿನ ಸುತ್ತಮುತ್ತ ಸುಧಾರಣಾ ಪಕ್ಷದ ಪೋಸ್ಟರ್‌ಗಳು. ಪಕ್ಷದ ಮುಖಂಡ ವೆಂಕಟಪ್ಪ ಅವನನ್ನು ಸನ್ನೆಯಿಂದ ಕರೆದ.
ಲೋ ಪಾರ್ಟಿಗೆ ಪ್ರಚಾರ ಮಾಡ್ತೀಯಾ? ದಿನಕ್ಕೆ ಊಟ, ಕಾಫಿ ಆಗಿ ನೂರು ಕೊಡ್ತೀನಿ.
ಒಮ್ಮೆಲೇ ಬಂದ ಭಾಗ್ಯವನ್ನು ನೋಡಿ ಅವನಿಗೆ ಏನು ಹೇಳಬೇಕೋ ತಿಳಿಯಲಿಲ್ಲ. ಸುಮ್ಮನೆ ನಿಂತ. ಹಳ್ಳಿಗಳಿಗೆ ಹೋಗಿ ಪಾರ್ಟಿಯ ಪೋಸ್ಟರ್ ಹಚ್ಚಬೇಕು. ಜನಗಳಲ್ಲಿ ಪಾರ್ಟಿಗೆ ಓಟು ಕೇಳಬೇಕು. ಅಗತ್ಯ ಬಿದ್ರೆ ಭಾಷಣ ಮಾಡ್ಬೇಕು. ಏನಂತಿ?
ಅವನಿಗೆ ಇದೆಲ್ಲಾ ಗೋಜಲಾಗಿ ಕಂಡಿತು. ಇಲ್ಲ. ನನಗೆ ರಾಜಕೀಯ ಬೇಕಿಲ್ಲ.
ವೆಂಕಟಪ್ಪ ಗಹಗಹಿಸಿ ನಕ್ಕ. ಬೆಪ್ಪು ಮುಂಡೇದೇ. ರಾಜಕೀಯ ನಮ್ಮಂತೋರಿಗೆ ಮಾತ್ರ ಕಣೋ. ನಿಂಗೆ ಕಾಸು ಬರತ್ತೆ. ಹೊಟ್ಟೆ ತುಂಬತ್ತೆ. ಒಂದು ತಿಂಗಳು ಮಾತ್ರ. ನೆನಪಿಟ್ಕೊ ನಂ ಪಾರ್ಟೀನೇ ಎಲಕ್ಷನ್ ಗೆಲ್ಲೋದು.
ಈಗ ಅವನ ಕಣ್ಣುಗಳು ಮಿನುಗಿದವು. ಗೆದ್ರೆ ಕೆಲ್ಸ ಗಿಟ್ಟಿಸಬಹುದು. ಇಲ್ಲಾಂದ್ರೂ ಒಂದು ತಿಂಗಳು ಯೋಚನೆ ಇಲ್ಲದೆ ಕಳೆಯುತ್ತದೆ.
ನಿಂಗೊತ್ತಲ್ಲಾ? ನಂ ಪಾರ್ಟಿ ಚಿನ್ಹೆ ಬೈಸಿಕಲ್ಲು. ಅದ್ಕೇ ಬೈಸಿಕಲ್ಲು ಇರೋರ್‍ನೇ ನಾವು ಕ್ಯಾನ್‌ವಾಸಿಗೆ ತಗೊಳ್ಳೋದು. ಭಾನ್ವಾರ ದೊಡ್ಡ ರ್‍ಯಾಲಿ ಐತೆ. ಅದ್ರಾಗೂ ಬೈಸಿಕಲ್ಲು ಇರೋರಿಗೆ ಮಾತ್ರ ಛಾನ್ಸು. ರ್‍ಯಾಲಿಗೆ ಬಂದೋರಿಗೆ ನೂರು ಸಿಗುತ್ತೆ. ಏನಂತೀಯ?
ಅವನು ತಲೆಯಾಡಿಸಿದ. ದೊಡ್ಡ ಪೋಸ್ಟರ್ ಬಂಡಲ್ ಅವನ ಕೈಗೆ ಬಂತು. ಜತೆಗೆ ಒಂದು ದೊಡ್ಡ ಗಂ ಬಾಟ್ಳು ಕೂಡಾ. ‘ನಿಮ್ಮ ಚಿನ್ಹೆ ಬೈಸಿಕಲ್ಲು’ ಎಂಬ ಬೋರ್‍ಡು ಅವನ ಬೈಸಿಕಲ್ಲಿನ ಮುಂಭಾಗಕ್ಕೆ ನೇತುಬಿತ್ತು.
ಈವಾಗ ಹಿಂಗೆ ಕೆಸ್ರಳ್ಳಿಗ್ಹೋಗಿ ಪೋಸ್ಟರ್ ಹಚ್ಚು. ಸಂಜೀಗೆ ಪಂಚಾಯತಿ ತಾವ ಬಂದ್ಬುಡು. ಹಂಗೇ ಬೈಸಿಕಲ್ಲು ಇರೋರೆನಲ್ಲಾ ಕರ್‍ಕೊಂಬಾ. ತುಂಬಾ ಜನ ಬೇಕಾಗ್ತಾರೆ.
ವೆಂಕಟಪ್ಪನ ಜೀಪು ಧೂಳೆಬ್ಬಿಸುತ್ತಾ ಸಾಗಿತು. ಅವನಿಗೆ ತನ್ನ ಅದೃಷ್ಟ ಬದಲಾದುದಕ್ಕೆ ನಗು ಬಂತು. ಬೈಸಿಕಲ್ಲನ್ನು ನೋಡಿದ. ‘ನಿಮ್ಮ ಚಿನ್ಹೆ ಬೈಸಿಕಲ್ಲು’ ಎಂಬ ಬೋರ್‍ಡು ನವವಧು ವಿನ ಕೊರಳ ಮಾಲೆಯ ಹಾಗೆ, ತನ್ನ ಬೈಸಿಕಲ್ಲು ನಾಚಿ ತಲೆತಗ್ಗಿಸಿ ನಿಂತ ಹಾಗೆ ಅವನಿಗೆ ಕಾಣಿಸಿತು.
ಪೋಸ್ಟರ್ ಬಂಡಲ್ಲನ್ನು ರಾಡ್‌ಗೆ ಕಷ್ಟಪಟ್ಟು ಕಟ್ಟಿ, ಆತ ಸಿನಿಮಾ ಹಾಡೊಂದನ್ನು ಗುನುಗುನಿಸುತ್ತಾ ಕೆಸ್ರಳ್ಳಿಯತ್ತ ಸೈಕಲ್ಲು ತುಳಿದ. ಎರಡು ಕಿಲೋಮೀಟರ್ ಸಾಗಿದಾಗ, ಜೀಪೊಂದು ಭಾರಿ ವೇಗದಲ್ಲಿ ಮುನ್ನುಗ್ಗುತ್ತಾ ಬರುತ್ತಿದ್ದುದನ್ನು ಕಂಡು ಹೆದರಿ ಸೈಡಲ್ಲಿ ಕಷ್ಟಪಟ್ಟು ಬೈಸಿಕಲ್ಲು ನಿಲ್ಲಿಸಿದ. ಸ್ವಲ್ಪ ಆಯ ತಪ್ಪುತ್ತಿದ್ದರೂ ಅವ ಬಿದ್ದು ಬಿಡುತ್ತಿದ್ದ. ಜೀಪು ಬೈಸಿಕಲ್ಲಿನ ಮುಂದಿನ ಬೋರ್ಡನ್ನು ಗಮನಿಸಿ ಗಕ್ಕನೆ ನಿಂತಿತು. ಅದರ ಮೈಮೇಲೆಲ್ಲಾ ಪೋಸ್ಟರುಗಳು. ಅದು ಸಂಪ್ರದಾಯೀ ಪಕ್ಷದ್ದು. ಅದರೊಳಗಿಂದ ಪಾರ್ಟಿ ಮುಖಂಡ ಧರ್ಮಪ್ಪನ ಒಡಕು ದನಿ ಕೇಳಿಸಿತು.
ನೋಡೋದೇನ್ರೋ? ಹ್ಹೂಂ
ಒಡನೆಯೆ ಜೀಪಿನಿಂದ ಏಳೆಂಟು ಜನ ದಡದಡನೆ ಇಳಿದು ಅವನ ಹತ್ತಿರ ಬಂದರು. ಅವರ ಕೈಯಲ್ಲಿ ದೊಣ್ಣೆ, ಮುಖದಲ್ಲಿ ಧೂರ್ತ ನಗು. ಅವರು ಅವನನ್ನು ದೂಡಿ ಬೈಸಿಕಲು ಕಿತ್ತುಕೊಂಡು ಇನ್ನಷ್ಟು ಸೈಡಿಗೆ ಒಯ್ದರು. ಬಲವಾದ ದೊಣ್ಣೆಗಳಿಂದ ಒಂದೇ ಸವನೆ ಬೈಸಿಕಲ್ಲಿಗೆ ಬಡಿಯತೊಡಗಿದರು.
ಅವನು ಸಾವರಿಸಿಕೊಂಡು ಎದ್ದ. ಏನೂ ಮಾಡಲಾಗದೆ ಅವರನ್ನೇ ನೋಡಿದ. ಅವನ ಕಣ್ಣೆದುರೇ ಅವನ ಜೀವನ ಸಂಗಾತಿ ಬೈಸಿಕಲ್ಲಿನ ಮೇಲೆ ಬೀಳುತ್ತಿರುವ ದೊಣ್ಣೆ ಏಟನ್ನು ನೋಡಲಾಗದೆ ಕಣ್ಣುಗಳನ್ನು ಮುಚ್ಚಿಕೊಂಡ. ಅವನ ಅದುರುವ ತುಟಿಗಳು ನಿಮ್ಮ ದಮ್ಮಯ್ಯ….. ನನ್ನ ಬೈಸಿಕಲ್ಲು…… ನನ್ನ ಕೆಲ್ಸಾ ಎಂದು ಅಸ್ಪಷ್ಟ ಆರ್‍ತಸ್ವರ ಹೊರಡಿಸುತ್ತಿದ್ದುವು.
ಆ ದಡಿಯರು ಜಜ್ಜಿಹೋದ ಬೈಸಿಕಲ್ಲ್ ಮೇಲೆ ಅದರಲ್ಲೇ ಇದ್ದ ಪೋಸ್ಟರು ಗಳನ್ನು ಸೇರಿಸಿ, ಜೀಪಿನಿಂದ ಕ್ಯಾನು ತಂದು ಪೆಟ್ರೋಲು ಸುರಿದರು. ಆಮೇಲೆ ಕಡ್ಡಿ ಗೀರಿ ಬೆಂಕಿ ಹಚ್ಚಿದರು. ಭಗ್ಗನೆ ಬೆಂಕಿ ಮೇಲಕ್ಕೇರಿತು.
ಅವನ ಕಣ್ಣುಗಳು ಹನಿಗೂಡಿದವು. ಧರ್ಮಪ್ಪ ಜೀಪಿನಿಂದ ತಲೆ ಹೊರಗೆ ಹಾಕಿ, ಇನ್ನೊಂದ್ಸಲಾ ಆ ಪಾಲ್ಟಿ ಕ್ಯಾನ್‌ವಾಸಿಗೆ ಓಗು. ಈ ಬೈಸಿಕಲ್ ಗತೀನೆ ನಿಂಗೂ ಕಾಣಿಸ್ತೀನಿ. ಬೇವಾರ್ಸಿ ನನ್ ಮಗ್ನೆ ಎಂದು ಕ್ಯಾಕರಿಸಿ ಉಗಿದ. ಜೀಪು ಸ್ಟಾರ್‍ಟಾಗಿ ಬರ್ರನೆ ಓಡಿತು. ಜೀಪಿನ ವೇಗಕ್ಕೆ ಎದ್ದ ಧೂಳು ಮತ್ತು ಬೈಸಿಕಲ್ಲು ಸುಟ್ಟು ಹೋಗುತ್ತಿರುವಾಗಿನ ಹೊಗೆ ಅವನನ್ನು ಮುತ್ತಿಕೊಂಡವು.
*****
೧೯೯೬