ನನಗೋ ತಂತಿ ಮೀಟುವಾಸೆ
ಆಕೆಗೋ ತಂಬೂರಿ ಆಗುವಾಸೆ
ಆಕೆಗೊ ಕಾಮನ ಬಿಲ್ಲಾಗುವಾಸೆ
ನನಗೋ ಕಾಮನಬಿಲ್ಲು ಕಾಣುವಾಸೆ
ಪಕ್ಕದ ಮನೆ ಬೆಳಕಿಗೆ
ನಮ್ಮಿಬ್ಬರ ಕಾಡುವಾಸೆ
ಸದ್ದಿಗೇಕೋ ಮುನಿಸು
ದಿಗ್ಗನೆದ್ದು ನೋಡಿದಳಾಕೆ
ಜಾರಿದ ಸೆರಗನ್ನು ಸರಿಪಡಿಸುತ
ಬೆಕ್ಕೊಂದು ಚಂಗನೆ ಜಿಗಿದು
ಮಾಯವಾಯಿತು ಮಿಂಚಿನಂತೆ
ನಮ್ಮೀರ್‍ವರ ಕನಸಿನಲಿ
ನೂರೆಂಟು ತವಕಗಳು ಹುಟ್ಟುವಾಸೆ
ಆ ತವಕಗಳಲಿ ನೂರೆಂಟು ಭಾವನೆಗಳಿಗೆ ಅರಳುವಾಸೆ
ಮಡುಗಟ್ಟಿದ ಮನ ಕಂಗೆಟ್ಟು
ರಂಗಾದ ತುಟಿ ಅದುರುತಿತ್ತು
ಮನ ಹಾವಿನಂತೆ ಹರಿದಾಡುತಿತ್ತು
ಎಷ್ಟೊ ವರ್ಷಗಳ ಅದುಮಿಟ್ಟ ಮನಸಿಗೆ
ಸ್ಫೋಟವಾಗುವಾಸೆ
ಕ್ಷಣ ಕ್ಷಣಕ್ಕೂ ಬೋಫೋರ್‍ಸ್ ಗುಂಡಿನಂತೆ
ಹೊರ ಚಿಮ್ಮುವಾಸೆ
ಅಂತೂ ಕೊನೆಗೆ ಎಲ್ಲದಕ್ಕೂ
ತ್ಯಾಪೆ ಹಾಕಿದೆವು
ಹೊರಗಡೆ ಮಳೆ ತೊಟ್ಟಿಕ್ಕುತಿತ್ತು
ರಾತ್ರಿ ಜಾರಿತು ಮೆಲ್ಲನೆ
ಹಕ್ಕಿಗಳು ಹಾಡ ತೊಡಗಿದವು
*****
೮-೧೦-೧೯೯೯ರ ಸಾಗರದ ಮಣ್ಣಿನವಾಸನೆ ವಾರಪತ್ರಿಕೆಯಲ್ಲಿ ಪ್ರಕಟ