ಸಂಶೋಧನೆ

ಸಂಶೋಧನೆ

ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ ಮತ್ತೊಂದು ಕಾಫಿ ಕುಡಿಯುವುದು, ಮಡದಿ ಕೂಗಿದಾಗ ಚಿಂತನೆಯಿಂದ ಎಚ್ಚೆತ್ತು ಸ್ನಾನ ಮಾಡಿ, ಊಟ ಮುಗಿಸಿ, ಆಫೀಸಿಗೆ ಹೋಗುವುದು.

ಆಫೀಸಿನಲ್ಲಿ ಆರರವರೆಗೆ ಕೆಲಸ, ಅಲ್ಲಿಂದ ಮನೆಗೆ ಮರಳಲು ನಲವತ್ತು ನಿಮಿಷ. ಮನೆಗೆ ಬಂದು ಕೈಕಾಲು ತೊಳೆಯುತ್ತಲೆ ಮತ್ತೆ ಕಾಫಿ, ಮಡದಿ ಇಬ್ಬರು ಮಕ್ಕಳೊಡನೆ ಹರಟೆ, ಹುಡುಗಾಟದ ಮಾತು ನಗೆ.

ವೇಣುಗೋಪಾಲನಿಗೆ ಇಬ್ಬರು ಮಕ್ಕಳು. ಒಂದು ಗಂಡು ಒಂದು ಹೆಣ್ಣು. ಹುಡುಗಿಯೇ ದೊಡ್ಡವಳು. ಅವಳಿಗೆ ಹದಿನೆಂಟು ವರ್ಷ. ಮಗನಿಗೆ ಹದಿನಾರು. ಕತ್ತಲಾಗುತ್ತಿದ್ದಂತೆ ಅವರಿಬ್ಬರು ತಮ್ಮ ತಮ್ಮ ಓದಿನಲ್ಲಿ ತೊಡಗುವರು. ಅವನು ಸಿಕ್ಕ ಪುಸ್ತಕ ಹಿಡಿದು ಓದಿನಲ್ಲಿ ತಲ್ಲೀನನಾಗುವನು. ಅಡುಗೆ ಏನಾದರೂ ಮಾಡುವುದಿದ್ದರೆ ಮಾಡುತ್ತಲೆ ಚಿಕ್ಕ ತೆರೆಯ ಮೇಲೆ ನಡೆದ ಕಾರ್ಯಕ್ರಮಗಳನ್ನು ನೋಡುತ್ತಿದ್ದವಳವನ ಮಡದಿ.

ಊಟವಾದ ನಂತರ ಮತ್ತೆ ಸ್ವಲ್ಪ ಹೊತ್ತಿನ ಓದಿನ ಬಳಿಕ ನಿದ್ದೆ. ನಂತರ ಮತ್ತೊಂದು ಬೆಳಗು. ಮತ್ತೆ ಅಂತಹದೆ ನಿಗದಿತ ಚಟುವಟಿಕೆ.

ದೇಶದ ಬಹುದೊಡ್ಡ ಸಂಶೋಧನಾ ಕೇಂದ್ರವೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಣುಗೋಪಾಲ್. ಅಲ್ಲಿನ ನೂರಾರು ಕಾರಕೂನರಲ್ಲಿ ಅವನೂ ಒಬ್ಬ. ಅವರನ್ನು ವಿಜ್ಞಾನಿಗಳಿಗೆ ಸಂಶೋಧಕರಿಗೆ, ಸಹಾಯಕರಾಗಲಿ ಎಂದು ಸರಕಾರ ನಿಯಮಿಸಿತ್ತು. ಸೌಮ್ಯ ಸ್ವಭಾವದವನಾದ ವೇಣುಗೋಪಾಲ್ ತನ್ನ ಕೆಲಸವನ್ನು ಬಹು ಮುತುವರ್ಜಿಯಿಂದ ನಿರ್ವಹಿಸುತ್ತಿದ್ದ. ಕಡಿಮೆ ಮಾತಾಡುತ್ತಿದ್ದ. ಇತ್ತೀಚೆಗೆ ಸಂಶೋಧನೆಗಳಿಗೆ ಆದ ಲೆಕ್ಕ ಪತ್ರಗಳನ್ನು ಆಡಿಟ್ ಮಾಡುವ ಇಲಾಖೆಗೆ ವರ್ಗಾವಣೆಯಾಗಿದ್ದ. ಅಲ್ಲಿ ವರ್ಗಾವಣೆಯಾದಾಗಿನಿಂದ ಅವನ ವರ್ತನೆ ಬದಲಾಗತೊಡಗಿತು. ಅದಕ್ಕೆ ಕಾರಣ ಅವನಿಗೆ ಸಂಶೋಧಕರ ಮೇಲೆ, ವಿಜ್ಞಾನಿಯರ ಮೇಲೆ, ಬುದ್ದಿಜೀವಿಯರ ಮೇಲೆ ಇದ್ದ ಅಪಾರ ಗೌರವ ಅದು ಅಲ್ಲದೆ ಅವನ ಸೌಮ್ಮ ಭಾವುಕ ಸ್ವಭಾವ.

ಬಡಬಗ್ಗರು, ಓದು ಬರಹ ಬರದವರೂ ಪಡುತ್ತಿದ್ದ ಪಾಡುಗಳನ್ನು ವೇಣುಗೋಪಾಲ್ ಕಣ್ಣಾರೆ ಕಂಡಿದ್ದ. ಅಂತಹವರ ಅವಸ್ಥೆಯನ್ನು ತೃಣಮಾತ್ರವು ಮುಲಾಜಿಲ್ಲದೆ ಉಪಯೋಗಿಸಿಕೊಳ್ಳುವವರನ್ನು ನೋಡಿದ್ದ. ಅದನ್ನು ಕಂಡ ಅವನಿಗೆ ಹೇಸಿಗೆಯಾಗಿತ್ತು. ಮಾನವತ್ವವಿಲ್ಲದ, ಲವಲೇಶವೂ ಸ್ವಾಭಿಮಾನವಿಲ್ಲದ ಇಂತಹ ಮನುಷ್ಯರು ಇರಲು ಸಾಧ್ಯವೆ ಎಂದು ಯೋಚಿಸುವಂತಾಗಿತ್ತು. ಬರಬರುತ್ತಾ ಇದವನ ಬದುಕಿನ ಒಂದು ಅಂಗವಾಗಿ ಪರಿಣಮಿಸಿ ಅದಕ್ಕೆ ಅಭ್ಯಸಿತನಾಗಲು ಯತ್ನಿಸಿದ್ದ. ಆದರದವನಿಗೆ ಬಹುಕಷ್ಟಕರ ವಿಷಯವಾಗಿತ್ತು. ಮತ್ತೆ ಅದಕ್ಕೆ ಕಾರಣ ಅವನ ಸ್ವಭಾವ.

ದಿನಾಗಲು ಬೆಳಗ್ಗೆ ಶಾಸ್ತ್ರೋಕ್ತವಾಗಿ ಮಠದಲ್ಲಿ ದೇವರ ಪೂಜೆಯಾಗುವಂತೆ ವೇಣುಗೋಪಾಲ್ ದಿನಪತ್ರಿಕೆಯನ್ನು ಓದಲೇಬೇಕು. ಮಿತಮೀರುತ್ತಿರುವ ರಾಜಕಾರಣಿಗಳ ರಾಜಕೀಯ ಪಾರ್ಟಿಗಳ ಭ್ರಷ್ಟಾಚಾರ ಅವನನ್ನು ತಲ್ಲಣಗೊಳಿಸಿತ್ತು. ಮೊನ್ನೆ ತಾನೆ ಎರಡು ಪಾರ್ಟಿಗಳ ನಾಯಕರ ನಡುವಿನ ವೈರ ಒಂದು ಸ್ಟುಡಿಯೋದ ಬಳಿ, ಬಾಂಬು ಸ್ಫೋಟದಲ್ಲಿ ಪರಿವರ್ತಿತಗೊಂಡಿತ್ತು. ಪಾರ್ಟಿಯ ನಾಯಕನಿಗೆ ಚಿಕ್ಕಪುಟ್ಟ ಗಾಯಗಳು ಮಾತ್ರ ಆಗಿದ್ದವು. ಆದರೆ ಅದರಲ್ಲಿ ಮರಣಿಸಿದವರು ಸುಮಾರು ನಲವತ್ತು ಅಮಾಯಕ ಜನ. ಪಟ್ಟಣದ ಹೊರವಲಯದಲ್ಲಿ ಆದ ಆ ಬಾಂಬು ಸ್ಫೋಟ ಯುದ್ಧಭೂಮಿಯಂತ ಪರಿವರ್ತಿತ ಗೊಂಡಿತ್ತು. ಕೈ-ಕಾಲುಗಳು, ತಲೆಗಳು, ಮಾಂಸಖಂಡಗಳ ದೇಹದಿಂದ ಬೇರ್ಪಟ್ಟು ಬಹುದೂರದವರೆಗೆ ಚೆಲ್ಲಾಪಿಲ್ಲಿಯಾಗಿ ಹರಡಿದ್ದವು. ಅವರೆಲ್ಲಾ ನಾಯಕನ ಹಿಂಬಾಲಕರು. ಸಿನಿಮಾದ ಹುಚ್ಚಿರುವ ಮುಗ್ಧ ಬಡವರು.

ಅಪರಾಧಿಗಳು ದೊರೆತರೂ ಅವರಿಗೆ ಯಾವ ಘೋರ ಶಿಕ್ಷೆಯು ಆಗುವುದಿಲ್ಲ ಎಂಬುದು ಮನದಟ್ಟಾಗಿತ್ತು ವೇಣುಗೋಪಾಲಾನಿಗೆ. ಅದರ ಕಾರಣಕ್ಕಾಗಿ ಹೆಚ್ಚು ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯು ಇಲ್ಲ. ಅವರಲ್ಲಿ ಸಾಕಷ್ಟು ಧನ, ಅಧಿಕಾರ ಬಲವಿದೆ. ಅದೂ ಅಲ್ಲದ ಹುಚ್ಚು ಅಥವಾ ಮುಗ್ಧ ಜನರ ಸಮೂಹ ಅವರೊಡನಿದೆ. ಒಂದು ವೇಳೆ ಏನಾದರೂ ಆದರೆ ಇಬ್ಬರ ನಡುವಿನ ವೈರ್ಯ ಇನ್ನಷ್ಟು ಅಮಾಯಕರ ಬಲಿ ತೆಗೆದುಕೊಳ್ಳಬಹುದಷ್ಟೆ. ಐವತ್ತು ವರ್ಷಗಳ ಸ್ವಾತಂತ್ರ್ಯದಲ್ಲಿ ಭಾರತ ಸಾಧಿಸಿದ್ದೆಂದರೆ ಅಪರಾಧಿಗಳ ಕೈಯಲ್ಲಿ ದೇಶವನ್ನು ಆಳುವ ಅಧಿಕಾರ ಕೊಟ್ಟದ್ದು.

ಮಹಾ ಅಪರಾಧಿಗಳೆ, ಒಳ್ಳೆಯ ರಾಜಕಾರಣಿಗಳು ಆಗಬಲ್ಲರೆಂಬ ಮಾತನ್ನು ಯಾರೋ ಹೇಳಿದ್ದು ನೆನಪಿಸಿಕೊಂಡು ಆ ಚಿಂತನೆಯಿಂದಲೂ ಮುಕ್ತನಾಗಲು ಯತ್ನಿಸಿದ್ದ ವೇಣುಗೋಪಾಲ್. ಅದೂ ಅವನಿಗೆ ಕಷ್ಟದ ಕೆಲಸ.

ವಿಜ್ಞಾನಿಯರು ಬುದ್ಧಿಜೀವಿಗಳು ಬಹು ನಿಜಾಯತಿಪರರು, ಶ್ರಮಪಟ್ಟು ಹೊಸ ಅವಿಷ್ಕಾರಗಳನ್ನು ಮಾಡುವರೆಂಬ ಭ್ರಮೆಯಲ್ಲಿದ್ದ ವೇಣುಗೋಪಾಲ್, ವಿಜ್ಞಾನಿಗಳಿಗೆ ಮಂಜೂರಾದ ವಿವಿಧ ಸಂಶೋಧನಾ ಪ್ರಾಜೆಕ್ಟ್‌ಗಳು, ಸಂಶೋಧನಗಳ ಬಡ್ಜಟ್ ನೋಡುತ್ತಿದ್ದಂತೆ ದಿಗ್ಭ್ರಾಂತಿಯಾಯಿತವನಿಗೆ. ವೈಜ್ಞಾನಿಕ ಸಂಶೋಧನೆಗಳಿಗಾಗಿ ಎಲ್ಲ ವಿಧಗಳಲ್ಲೂ ಪರೀಕ್ಷಿಸಿ, ತುಲನೆ ಮಾಡಿ, ಸರಾಕರದ ವಿವಿಧ ಸಂಸ್ಥೆಗಳು ಮಂಜೂರು ಮಾಡುತ್ತಿದ್ದ ಧನರಾಶಿಯದು. ಅವುಗಳಲ್ಲಿ ಕೆಲವು ಡಿ.ಎಸ್.ಟಿ., ಡಿ.ಆರ್.ಎಸ್.ಟಿ., ಐ.ಸಿ.ಎಮ್.ಆರ್. ಒಬ್ಬ ವಿಜ್ಞಾನಿ ತನ್ನ ಪ್ರಾಜೆಕ್ಟ್‌ಗಳಿಗೆ ಮಂಜೂರು ಮಾಡಿಸಿಕೊಂಡ ಹಣ ಮುವತ್ತು ಲಕ್ಷದಿಂದ ಹಿಡಿದು ಐದು ಕೋಟಿಯವರೆಗೂ ಇತ್ತು.

ಅದನ್ನೆಲ್ಲಾ ಆಡಿಟ್ ಮಾಡುತ್ತಿದ್ದ ವೇಣುಗೋಪಾಲನಿಗೆ ಹೇಳಲಾರದಂತಹ ಕಸಿವಿಸಿ ಆರಂಭವಾಯಿತು. ಹಾಗೊಂದು ದಿನ ಒಬ್ಬ ವಿಜ್ಞಾನಿಗೆ ಮಾತ್ರ ಮಂಜೂರಾದ ಹಣದ ಬಿಲ್ಲುಗಳನ್ನು ಪರೀಕ್ಷಿಸುತ್ತಾ ಕುಳಿತಾಗ ವೇಣುಗೋಪಾಲ್ ಸಮಯದ ಅರಿವನ್ನು ಮರೆತ. ಕತ್ತಲಾಗಲಾರಂಭಿಸಿದಾಗ ಎಚ್ಚೆತ್ತವನಂತೆ ತನ್ನ ಆಲ್‌ಮಾರಾ ಮತ್ತು ಡ್ರಾಯರ್‌ಗಳಿಗೆ ಬೀಗ ಹಾಕಿ ಸೀಲ್ ಮಾಡಿ ಮನೆಯ ಕಡೆಗೆ ನಡೆದ.

ಭಾರವಾದ ಮನದಿಂದ ಉತ್ತರವಿಲ್ಲದ ಪ್ರಶ್ನೆಗಳನ್ನು ಹಾಕುತ್ತಿದ್ದ ಮೆದುಳನ್ನು ಹೊತ್ತು ಮನೆಗೆ ಹೇಗೆ ಬಂದನೆಂಬ ಅರಿವು ಅವನಿಗಿಲ್ಲ. ಯಾಂತ್ರಿಕವಾಗಿ ಮಡದಿ ತಂದುಕೊಟ್ಟ ಕಾಫಿಯನ್ನು ತೆಗೆದುಕೊಂಡ. ಮೊದಲಿನ ದಿನಗಳಂತೆ ಮಡದಿ ಮಕ್ಕಳೊಡನೆ ಮಾತಾಡಲಿಲ್ಲ. ನಗಲಿಲ್ಲ. ಆದಿನದಿಂದಲೇ ಅವನ ಮನೆಯಲ್ಲಿನ ದಿನಚರಿ ಕೂಡ ಬದಲಾಗುತ್ತಾ ಬಂತು.

ಆಡಿಟ್ ಮಾಡುತ್ತಿದ್ದ ಅವನಿಗೆ ಮಂಜೂರಾದ ಪ್ರಾಜೆಕ್ಟ್‌ಗಳಿಗೂ ಅದಕ್ಕೆ ಬೇಕಾಗಿರುವುದೆಂದುಕೊಳ್ಳಲಾದ ವಸ್ತುಗಳಿಗೂ, ತಾಳ-ಮೇಳ ಕಂಡಿರಲಿಲ್ಲ. ತನ್ನಕ್ಕಿಂತ ಮೊದಲು ಆ ಸ್ಥಾನದಲ್ಲಿದ್ದ ಆಡಿಟರ್, ಅದಕ್ಕೆ ಯಾವ ತರಹದ ಆಕ್ಷೇಪಣೆಯನ್ನು ತೋರಿರಲಿಲ್ಲ. ವಿಜ್ಞಾನಿಗಳು, ಬುದ್ಧಿಜೀವಿಗಳು ಭ್ರಷ್ಟಾಚಾರವೆಸಗುವರೆಂದರೆ ವೇಣು ಗೋಪಾಲನ ಮನ ನಂಬಲು ಸಿದ್ಧವಿರಲಿಲ್ಲ. ಇದೆಲ್ಲಾ ಕಾರಕೂನರ ಕಿತಾಪತಿಯೇ ಆಗಿರಬೇಕು. ವಿಜ್ಞಾನಿಗಳು ತಮ್ಮದೇ ಅಧ್ಯಯನದ ಸಂಶೋಧನೆಯ ಚಿಂತನೆಯಲ್ಲಿರುತ್ತಾರೆ. ಲೆಕ್ಕ ಪತ್ರಗಳ ವ್ಯವಹಾರ ಅವರಿಗೆ ಗೊತ್ತಾಗುವುದಿಲ್ಲ. ಕಾರಕೂನರು ತೋರಿದ ಕಡೆ ಸಹಿ ಮಾಡುತ್ತಾರೆ ಎಂದವನು ತನಗೆತಾನು ಸಮಾಧಾನ ಹೇಳಿಕೊಳ್ಳಲು ಯತ್ನಿಸಿದ. ಅದು ವಿಫಲವಾಯಿತು. ಅವನಿಗೆ ಅದಕ್ಕೆಲ್ಲಾ ಸರಿಯಾದ ಸಮಾಧಾನಗಳು ಬೇಕೆ ಬೇಕಾಗಿತ್ತು.

ಬಟ್ಟೆ ಬದಲಿಸಿ ಮನೆಯಿಂದ ಹೊರಬೀಳುತ್ತಿದ್ದಾಗ ಅವನ ಮುಖಭಾವ ಕಂಡ ಮಡದಿ. ಎಲ್ಲಿಗೆ ಹೋಗುತ್ತಿದ್ದೀರೆಂದು ಕೇಳುವ ಧೈರ್ಯ ಮಾಡಲಿಲ್ಲ. ಎದುರು ಬಂದ ಮಗಳು ಎರಡೂ ಕೈ ಹಿಡಿದು ಈಗ ಮತ್ತೆಲ್ಲಿಗೆ ಎಂದು ಕೇಳಿದಳು. ಮಗಳನ್ನು ಬಹಳ ಪ್ರೀತಿಸುತ್ತಿದ್ದ ವೇಣುಗೋಪಾಲ್, ಅಕ್ಕರೆಯಿಂದ ಅವಳ ತಲೆ ಕೂದಲಲ್ಲಿ ಬೆರಳಾಡಿಸಿ ಬೇಗ ಬಂದು ಬಿಡುತ್ತೇನೆನ್ನುತ್ತಾ ಮನೆಯಿಂದ ಹೊರಬಿದ್ದ.

ಹಲವಾರು ವರುಷಗಳಿಂದ ಆ ಸಂಶೋಧನಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ವೇಣುಗೋಪಾಲನಿಗೆ ಹಲವಾರು ಪರಿಚಯಸ್ಥರಿದ್ದರು. ಅವರಲ್ಲಿ ಪ್ರಾಮಾಣಿಕರು ಎನಿಸಿಕೊಂಡ ಕೆಲವರೊಡನೆ ಒಮ್ಮೊಮ್ಮೆ ಮನಬಿಚ್ಚಿ ಮಾತನಾಡುತ್ತಿದ್ದ. ಅಂತಹವನ ಒಬ್ಬ ಸಹೋದ್ಯೋಗಿಯ ಮನೆಗವನು ಹೋದಾಗ ಹಾರ್ಧಿಕವಾಗಿ ಸ್ವಾಗತಿಸಿದನಾತ, ಏನೋ ಆಗಿ ಹೋಗಿದೆ ಎಂಬಂತಹದೇ ಭಾವ ಸ್ಪಷ್ಟವಾಗಿತ್ತು ವೇಣುಗೋಪಾಲನ ಮುಖದಲ್ಲಿ. ಅಂತಹ ಆತಂಕದ ದನಿಯಲ್ಲಿ ಅದನ್ನೆ ಕೇಳಿದ ನಿವೃತ್ತಿಗೆ ಸಮಿಸುತ್ತಿದ್ದ ಸಹೋದ್ಯೋಗಿ.

ಇಷ್ಟು ಕಾಲದಿಂದ ತನ್ನೊಳಗೆ ಹುದುಗಿಟ್ಟುಕೊಂಡ ಭಾವೋದ್ವೇಗದಿಂದ ಮಾತಾಡತೊಡಗಿದ ವೇಣುಗೋಪಾಲ್. ಹಾಗವನು ಮೊದಲೆಂದು ಮಾತಾಡಿರಲಿಲ್ಲ. ಗಾಬರಿ ಅಚ್ಚರಿ ಅನುಕಂಪದಿಂದ ಅವನು ಹೇಳಿದ ಎಲ್ಲವನ್ನು ಸಂಯಮದಿಂದ ಕೇಳಿದ ಸಹೋದ್ಯೋಗಿ ವೇದಾಂತಿಯಂತಹ ನಗೆ ನಕ್ಕು ಮಾತಾಡತೊಡಗಿದ.

ಆ ಮಾತುಗಳನ್ನು ಕೇಳುತ್ತಿದ್ದ ವೇಣುಗೋಪಾಲನಿಗೆ ಅದನ್ನು ನಂಬುವುದು ಅಸಾಧ್ಯವೆನಿಸತೊಡಗಿತು. ಗಾಢನಿದ್ದೆಯಲ್ಲಿದ್ದವನನ್ನು ಎಬ್ಬಿಸುವಂತಿತ್ತು ಅವನ ಸಹೋದ್ಯೋಗಿಯ ಮಾತುಗಳು. ಅಪರೂಪಕ್ಕೆ ಒಬ್ಬರಿಬ್ಬ ವಿಜ್ಞಾನಿಗಳನ್ನು ಬಿಟ್ಟರೆ, ಮಿಕ್ಕವರಲ್ಲಾ ಲಂಚ ತಿನಿಸಿಯೆ ಡಿ.ಎಸ್.ಟಿ., ಐ.ಪಿ.ಸಿ.ಎಮ್.ಆರ್., ಸಿ.ಎಸ್.ಐ.ಆರ್. ಗಳಿಂದ ತಮ್ಮ ತಮ್ಮ ಪ್ರಾಜೆಕ್ಟ್‌ಗಳಿಗೆ ಹಣವನ್ನು ಮಂಜೂರು ಮಾಡಿಸಿಕೊಳ್ಳುತ್ತಾರೆ. ಅದರಲ್ಲಿನ ಅರ್ಧದಷ್ಟು ಭಾಗ ಕೂಡ ಸಂಶೋಧನೆಗೆ ಉಪಯೋಗಿಸಲಾಗುವುದಿಲ್ಲ. ವಿಜ್ಞಾನಿಯರು, ಅವರ ಹಿಂಬಾಲಕರು ಹತ್ತಿರ ಇರುವವರು ಮಿಕ್ಕ ಹಣದಿಂದ ಧನವಂತರಾಗುತ್ತಾರೆ. ಸಂಶೋಧನೆ ಯಾವ ಹೊಸ ವಿಷಯ ತಿಳಿಯಲು ನಾಂದಿ ಹಾಕುವುದಿಲ್ಲ. ಹೆಸರಿಗೆ ಮಾತ್ರ ಸಂಶೋಧನೆಯ ಪ್ರಾಜೆಕ್ಟ್‌ಗಳು ಇಂತಹ ಪ್ರಾಜೆಕ್ಟ್‌ಗಳಿಂದ ಹಲವಾರು ಕಾರಕೂನರು ಧನವಂತರಾಗಿದ್ದಾರೆ.

ಹೀಗೆ ಬಹಳ ವಿಷಯಗಳನ್ನು ಹೇಳಿದ ನಿವೃತ್ತಿಗೆ ಸಮೀಪ ಬಂದಿರುವ ಅವನ ಸಹೋದ್ಯೋಗಿ. ಬಹು ನಿಧಾನವಾಗಿ ಬಂದ ಅವನ ಮಾತುಗಳು ಅಪ್ಪಟ ಸತ್ಯಗಳಂತೆ ಧ್ವನಿಸಿದವು. ಆದರೆ ಅವನೆಲ್ಲಾ ನಂಬಲಾಗಲಿಲ್ಲ. ವೇಣುಗೋಪಾಲನಿಗೆ ಎಲ್ಲಾ ಮಾತುಗಳು ಮುಗಿದು ಅವನು ಹೋಗಲು ಎದ್ದು ನಿಂತಾಗ ಉಪದೇಶ ಕೊಡುವಂತಹ ದನಿಯಲ್ಲಿ ಹೇಳಿದ ಸಹೋದ್ಯೋಗಿ.

“ಯಾರಿಂದಲೂ ಈ ಲೋಕವನ್ನು ಉದ್ಧಾರ ಮಾಡಲಾಗುವುದಿಲ್ಲ. ಇದು ಹೀಗೆ ನಡೆಯುತ್ತಿರುತ್ತದೆ. ಇನ್ನೂ ಅಧ್ವಾನವಾಗಬಹುದು ಎಲ್ಲವನ್ನೂ ಮರೆತು ನಿನ್ನ ಬದುಕು. ನೀಬದುಕು. ನಿನ್ನ ಮಡದಿ ಮಕ್ಕಳ ಬಗ್ಗೆ ಯೋಚಿಸು. ಇಲ್ಲದರಲ್ಲಿ ತಲೆದೂರಿಸಿದರೆ ನಿನ್ನ ಬದುಕು ನಾಶವಾಗಬಹುದಷ್ಟೆ!”

ಅವನ ಮಾತಿಗೆ ಯಾವ ರೀತಿಯಲ್ಲೂ ಪ್ರತಿಕ್ರಿಯಿಸದೆ ಧನ್ಯವಾದಗಳನ್ನು ಹೇಳಿ ಮನೆಯ ದಾರಿ ಹಿಡಿದ ವೇಣುಗೋಪಾಲ್‌ನ ಮನ ಬಹಳ ಉದ್ವಿಗ್ನಗೊಂಡಿತ್ತು. ಯೋಚನೆಗಳು, ಘಟನೆಗಳು, ಒಂದರನಂತರ ಒಂದರಂತೆ ಅವನ ಮೇಲೆ ದಾಳಿ ಆರಂಭಿಸಿದವು. ವಿಜ್ಞಾನೇತರ ಸಿಬ್ಬಂದಿಯಲ್ಲಿ ಹಲವಾರು ಜನ ಭ್ರಷ್ಟರೆಂಬುವುದು ಅವನಿಗೆ ತಿಳಿದಿತ್ತು. ಅವರಲ್ಲಿ ಅವನ ಬಾಲ್ಯ ಸ್ನೇಹಿತನೊಬ್ಬನಿದ್ದ. ಆದರೆ ವಿಜ್ಞಾನಿಗಳು ಈ ಮಟ್ಟಕ್ಕೆ ಇಳಿಯಬಹುದೆಂಬುವುದವನು ಕನಸ್ಸು ಮನಸಿನಲ್ಲಿಯೂ ಊಹಿಸದ ಮಾತಾಗಿತ್ತು. ಅದಕ್ಕೆ ಕಾರಣ ವಿಜ್ಞಾನಿಯರನ್ನು ಬುದ್ಧಿಜೀವಿಯರನ್ನು ಅವನು ಅತಿಮಾನವರೆಂದು ತಿಳಿದುಕೊಂಡಿದ್ದ.

ಯೋಚನೆಗಳ ತಳಮಳದಲ್ಲಿ ವೇಣುಗೋಪಾಲ್ ಆ ರಾತ್ರಿ ಹೇಗೆ ಮನೆ ಸೇರಿದನೆಂಬ ಅರಿವು ಅವನಿಗಿರಲಿಲ್ಲ. ಮಕ್ಕಳಿಬ್ಬರು ಮಲಗಿಬಿಟ್ಟಿದ್ದರು. ಕಾತುರದಿಂದ ಕಾದುಕುಳಿತಿದ್ದ ಮಡದಿ ಅವನ ಮುಖ ನೋಡಿ ಗಾಬರಿಗೊಂಡಳು. ಅದೇ ವಿಷಯ ಅವಳು ಮಾತಾಡಿದಾಗ ಸಿಡುಕಿದ ವೇಣುಗೋಪಾಲ್, ಮೊದಲಬಾರಿ ಪತಿಯ ಇಂತಹ ಪ್ರತಿಕ್ರಿಯೆ ಕಂಡ ಆಕೆ-ಮಾತು ಬೆಳೆಸದ ಊಟಕ್ಕೆ ಕರೆದುಳು. ವೇಣುಗೋಪಾಲನ ಹಸಿವು ನಂದಿ ಹೋಗಿತ್ತು. ಆದರೂ ಊಟದ ಶಾಸ್ತ್ರ ಮಾಡಿದ.

ಆರಾತ್ರಿ ಅವನಿಗೆ ನಿದ್ದೆ ಹತ್ತಲು ಬಹು ಸಮಯ ಹಿಡಿಯಿತು. ಭೂಗತ ದೊರೆಗಳಿಂದ ವಿಜ್ಞಾನಿಗಳವರೆಗೆ ಹಬ್ಬಿದ ಭ್ರಷ್ಟಚಾರಗಳೆ, ಬಹು ಭಯಂಕರ ರೂಪತಾಳಿ ಅವನ ಮೆದುಳಿನಲ್ಲಿ ನಾಟ್ಯವಾಡುತ್ತಿದ್ದವು.

ಬೆಳಗ್ಗೆ ಪ್ರತಿದಿನಕ್ಕಿಂತ ತಡವಾಗಿ ಎದ್ದ ವೇಣುಗೋಪಾಲ್ ಕಾಫಿ ಕುಡಿಯುತ್ತಾ ದಿನಪತ್ರಿಕೆ ತಿರುವಿ ಹಾಕುತ್ತಿದ್ದಾಗ ಅವನಿಗೆ ಇನ್ನೊಂದು ಅಪಘಾತ ಕಾದಿತ್ತು. ಒಬ್ಬ ಶ್ರೇಷ್ಠ ಸಾಹಿತಿ ಸರಕಾರದಿಂದ ಸುಮಾರು ಒಂದು ಕೋಟಿ ರೂಪಾಯಿ ಬೆಲೆ ಬಾಳುವ ಬಂಗಲೆ ದಾನವಾಗಿ ಪಡೆಯಲು ಹವಣಿಸುತ್ತಿದ್ದ ವಾರ್ತೆ. ಸಮಾಜವಾದವನ್ನು ಪ್ರತಿಪಾದಿಸುವ ಆ ಸಾಹಿತಿಯ ಭಕ್ತನಾಗಿದ್ದ ವೇಣುಗೋಪಾಲ್, ಎಲ್ಲಾ ವಿವರಗಳೊಡನೆ ಪ್ರಕಟವಾದ ಆ ವರದಿಯನ್ನು ಎರಡೆರಡು ಸಲ ಓದಿದ. ಬೇರೆ ಬೇರೆ ಊರುಗಳಲ್ಲಿ ತಮ್ಮವೇ ಎರಡು ಸ್ವಂತ ಮನೆಗಳಿರುವ ಅವರು ಈ ದೊಡ್ಡ ಬಂಗಲೆಗಾಗಿ ಏಕೆ ಹಂಬಲಿಸುತ್ತಿದ್ದಾರೆಂದು ವ್ಯಂಗ್ಯದ ದನಿಯಲ್ಲಿ ವರದಿ ನೀಡಿದ್ದ ವರದಿಗಾರ. ಅದು ಸುಳ್ಳು ಸುದ್ದಿಯಲ್ಲ ಎಂದು ವಾದಿಸುವಂತಹ ಎಲ್ಲಾ ವಿವರಗಳು ಇದ್ದವದರಲ್ಲಿ. ಅದನ್ನು ಮನ ತಣಿಯುವವರೆಗೂ ಓದಿ ಮುಗಿಸಿದಾಗ ಆ ಸಾಹಿತಿಯ ಕೃತಿಗಳೆಲ್ಲಾ ಟೊಳ್ಳಾಗಿ ಕಂಡುಬರತೊಡಗಿದವನಿಗೆ ಅವನ ಮನದಲ್ಲಿ ಆಕಾಶದೆತ್ತರದ ಸ್ಥಾನವನ್ನು ಆಕ್ರಮಿಸಿದ್ದ ಆ ಸಾಹಿತಿ ಒಮ್ಮಲೆ ನೆಲಕ್ಕೆ ಕುಸಿದು ಹುಳುವಿನಂತಾದ. ಧನವಂತನೆ ಎನ್ನಬಹುದಾದ ಈ ಸಾಹಿತಿಗೆ ಈ ಕೊನೆಯ ದಿನಗಳಲ್ಲಿ ಇಷ್ಟು ಆಶೆ ಯಾಕೆಂಬುವುದೆ ಅವನಿಗೆ ಬಿಡಿಸಲಾಗದ ಪ್ರಶ್ನೆಯಾಯಿತು.

ಆ ವರದಿಯ ಬಗ್ಗೆ ಸ್ವಲ್ಪ ಹೊತ್ತು ಚಿಂತನೆ ನಡೆಸಿದ ನಂತರ ತಾ ಕೆಲಸ ಮಾಡುವ ಸಂಸ್ಥೆಯ ವಿಜ್ಞಾನಿಯರು ಭ್ರಷ್ಟರಾಗಿರಲು ಸಾಧ್ಯವೆಂಬ ನಿರ್ಣಯಕ್ಕೆ ಬಂದ. ಆಗಲೇ ಪುರಾವೆಗಳ ಸಹಿತ ಎಲ್ಲವನ್ನು ಶೇಖರಿಸಿ ಬಯಲು ಮಡಬೇಕೆಂಬ ನಿರ್ಣಯವನ್ನು ತಗೆದುಕೊಂಡ. ಈಗವನ ಮೆದುಳಿಗೆ ಬೇರಾವ ಚಿಂತನೆಗೂ ಅವಕಾಶವಿರಲಿಲ್ಲ.

ಮಗಳು ಅವನ ಮನಸ್ಥಿತಿಯ ಬಗ್ಗೆ ಕಾಳಜಿ ತೋರಿದಾಗ ಅವಳನ್ನು ಸಿಡುಕಿಕೊಂಡ ವೇಣುಗೋಪಾಲ್. ಅವಳಿಗಲ್ಲದೆ ಮಗನಿಗೂ ಅದರಿಂದ ದಿಗ್ಭ್ರಾಂತಿಯಾಯಿತು. ಆದಿನ ಮನೆಯವರಿಗೆಲ್ಲರಿಗೂ ಅವನಿಗೆ ಏನೋ ಆಗಿದೆ ಎಂಬುವುದು ಖಚಿತವಾಯಿತು.

ಪ್ರತಿ ದಿನಕ್ಕಿಂತ ಆ ದಿನ ಆಫೀಸಿಗೆ ಬೇಗ ಹೋದ ವೇಣುಗೋಪಾಲ್, ಅಲ್ಲಿ ಇನ್ನು ಕಸಗುಡಿಸುತ್ತಿದ್ದವರು ಯಾವದೋ ಮುಖ್ಯ ಕೆಲಸವಿರಬಹುದೆಂದುಕೊಂಡರು. ತನ್ನ ಸ್ಥಾನದಲ್ಲಿ ಕುಳಿತ ಅವನು ಕೆಲಸ ಆರಂಭಿಸಿದ. ಯಾವ ಯಾವ ಪ್ರಾಜೆಕ್ಟ್, ಮತ್ತು ಸ್ಕೀಮುಗಳಿಗೆ ಯಾವ ಯಾವ ಸಂಸ್ಥೆಯಿಂದ ಯಾವ ಯಾವ ವಿಜ್ಞಾನಿಗೆ ಎಷ್ಟೆಷ್ಟು ಹಣ ಮಂಜೂರಾಗಿದೆ. ಅದನ್ನು ಈವರೆಗೆ ಬಳಸಿದ್ದು ಹೇಗೆ ಎಂಬ ವಿವರಗಳನ್ನು ಹುಡುಕಿ ತೆಗೆದು ಪಟ್ಟಿ ಮಾಡತೊಡಗಿದ. ಏಕಾಗ್ರಚಿತ್ತದಿಂದ ಕೆಲಸ ಮಾಡುತ್ತಿದ್ದ ಅವನಿಗೆ ಸಮಯ ಸರಿಯುತ್ತಿದ್ದುದರ ಅರಿವೇ ಇರಲಿಲ್ಲ.

ಅಕ್ಕಪಕ್ಕದ ಕಾರಕೂನರೆಲ್ಲಾ ಬಂದು ಆಫೀಸಿನಲ್ಲಿ ಎತ್ತರದ ದನಿಯಲ್ಲಿ ಮಾತುಗಳು ಆರಂಭಸಿದಾಗ ನಿರಾಸಕ್ತಿಯಿಂದ ಅವರ ಕಡೆ ನೋಟ ಹರಿಸಿ ತನ್ನ ಕೆಲಸದಲ್ಲಿ ಲೀನವಾಗಿಬಿಟ್ಟ. ಆಗಲೇ ನಾಲ್ಕು ಹಾಳೆಗಳಲ್ಲಿ ವಿವರಗಳು ತುಂಬಿಬಿಟ್ಟಿದ್ದವು. ಒಂದೊಂದೆ ಫೈಲನ್ನು ತೆಗೆಯುತ್ತಾ ಇನ್ನೂ ವಿವರಗಳನ್ನು ನಮೂದಿಸುತ್ತಲೇ ಇದ್ದಾಗ ಅವನೆದುರು ಒಬ್ಬ ನಿಂತದ್ದು ಗಮನಕ್ಕೆ ಬಂದು ಅತ್ತ ಕಡೆ ನೋಟ ತಿರಿಗಿಸಿದ. ಬಯಾಲಜಿ ಡಿವಿಜನ್‌ಗೆ ಸೇರಿದ ಕಾರಕೂನ. ಏನು ಎಂಬಂತೆ ಅವನ ಕಡೆ ನೋಡಿದಾಗ ಅವನೊಡನೆ ಕೆಲಸವಿರುವುದಾಗಿ ಸ್ವಲ್ಪ ಹೊರಬರಬೇಕೆಂದು ಬಹುದೈನ್ಯ ಮುಖಮಾಡಿ ಕೇಳಿಕೊಂಡನಾತ. ಕೆಲ ಕ್ಷಣಗಳು ಯೋಚಿಸಿದ ವೇಣುಗೋಪಾಲ್ ತಾನು ಬರೆದುಕೊಂಡ ವಿವರದ ಕಾಗದಗಳನ್ನು ಜಾಗ್ರತೆಯಾಗಿ ಭದ್ರಪಡಿಸಿ, ಅವನೊಡನೆ ಹೊರಬಂದ. ಹತ್ತಿರದಲ್ಲೆ ಇದ್ದ ಕ್ಯಾಂಟೀನಿನಕಡೆ ಬೀಳತೊಡಗಿದವು ಇಬ್ಬರ ಹೆಜ್ಜೆಗಳು.

ವೇಣುಗೋಪಾಲನನ್ನು ಕಾಣಬಂದ ಕಾರಕೂನ ಹೊಸಬ. ಅವನಿಗೆ ತಾ ಕಾಣಲು ಬಂದ ವ್ಯಕ್ತಿಯ ಸ್ವಭಾವದ ಅರಿವಿರಲಿಲ್ಲ. ಇಬ್ಬರು ಕಾಫಿ ಕುಡಿಯುತ್ತಿದ್ದಾಗ ಪ್ರಾಜೆಕ್ಟ್ ಒಂದಕ್ಕೆ ಸಂಬಂಧಿಸಿದ ಅಲಮಾರಾ ಮತ್ತು ಇನ್ನಿತರ ಫರ್ನೀಚರಿನ ಬಿಲ್ಲಿಗೆ ಸಂಬಂಧಿಸಿದ್ದ ವಿಷಯ ತೆಗೆದ. ಆ ಬಿಲ್ಲನ್ನು ಇಂದೇ ಪಾಸು ಮಾಡಿ ಚೆಕ್ ಕೊಡಿಸಿದರೆ ಉಪಕಾರವಾಗುತ್ತದೆ ಎಂದ. ವೇಣುಗೋಪಾಲ್‌ ಭಾವರಹಿತ ನೋಟದಿಂದ ಅವನನ್ನೇ ನೋಡುತ್ತಿದ್ದಾಗ ಆ ಹೊಸ ಕಾರಕೂನ ಆ ನೋಟವನ್ನು ತಪ್ಪಾಗಿ ಓದಿ ಯಾರಿಗೂ ಕಾಣದಂತೆ ಅವನಡೆ ನೂರರ ಎರಡು ನೋಟುಗಳನ್ನು ಸರಿಸುತ್ತಾ ಚೆಕ್ ಬಂದಾಗ ಇನ್ನೂ ಕೊಡುವುದಾಗಿ ಹೇಳಿದ. ಅದನ್ನು ನೋಡಿದ ವೇಣುಗೋಪಾಲನ ನರನರದಲ್ಲಿ ಸಿಟ್ಟು ತುಂಬಿಬಂತು. ಬಹುಕಷ್ಟಪಟ್ಟು ಅದನ್ನು ತಡೆದುಕೊಂಡು ಅವನು ಹೇಳಿದ ಬಿಲ್ ಪಾಸಾಗುವುದಿಲ್ಲವೆಂದು ಹೇಳುತ್ತಾ ಅಲ್ಲಿಂದೆದ್ದ ವೇಣುಗೋಪಾಲ್, ಕಾಫಿಯ ಹಣವನ್ನು ಅವನೆಕೊಟ್ಟು ತನ್ನ ಸೀಟಿಗೆ ಮರಳಿದ. ಈ ವ್ಯಕ್ತಿ ಹುಚ್ಚನಿರಬಹುದೆ ಎಂಬಂತೆ ಅವನನ್ನೇ ಅಚ್ಚರಿಯಿಂದ ನೋಡುತ್ತಾ ಅಲ್ಲೇ ನಿಂತಿದ್ದ ಹೊಸ ಕಾರಕೂನ.

ಆ ಸಂಜೆ ಆಫೀಸು ಮುಗಿಯುವ ಸಮಯದಲ್ಲಿ ಆಡಿಟ್ – ಆಫೀಸ್‌ರನಿಂದ ವೇಣುಗೋಪಾಲನಿಗೆ ಕರೆ ಬಂತು. ಅವನು ತನ್ನ ಅಧಿಕಾರಿಯ ಕೋಣೆಗೆ ಹೋದಾಗ ಇವತ್ತು ಅವನು ಮಾಡಿದ ಶಾಖೆಯ ಕೆಲಸ ಸಾಕೆಂದು ಅಲ್‌ಮಾರಾದ ಬೀಗದ ಕೈಗಳನ್ನು ತನಗೆ ತಂದುಕೊಡಬೇಕೆಂದು, ನಾಳೆ ಅವನು ಎಲ್ಲಿ ಕೆಲಸ ಮಾಡಬೇಕೆಂಬುದನ್ನು ಹೇಳುವುದಾಗಿ ಹೇಳಿದ ಅಧಿಕಾರಿ. ಇಂತಹ ಅವಮಾನ ವೇಣುಗೋಪಾಲನಿಗೆ ಮೊದಲನೆಂದೂ ಆಗಿರಲಿಲ್ಲ. ಅಧಿಕಾರಿಯ ಆಜ್ಞೆಗೆ ಕಾರಣಗಳು ಕೇಳುವ ಅಧಿಕಾರ ತನಗಿಲ್ಲ. ಈಗ ಬೀಗದ ಕೈಗಳನ್ನು ತಂದುಕೊಡುವುದಾಗಿ ಹೇಳಿದ ವೇಣುಗೋಪಾಲ್ ತಾನು ಆವರೆಗೆ ಬರೆದಿಟ್ಟ ವಿವರದ ಕಾಗದಗಳನ್ನು ಬಹು ಜಾಗ್ರತೆಯಾಗಿ ಮಡಚಿ ತನ್ನ ಕಿಸೆಯಲ್ಲಿರಿಸಿಕೊಂಡು ಎರಡೂ ಅಲ್‌ಮಾರಾಗಳಿಗೆ ಬೀಗ ಹಾಕಿ ಅದರ ಬೀಗದ ಕೈಗಳನ್ನು ತನ್ನ ಅಧಿಕಾರಿಗೆ ಕೊಟ್ಟು ಮನೆಯ ಕಡೆಗೆ ನಡೆದ.

ಈಗವನ ಮೆದಳು ಯುದ್ಧರಂಗವಾಗಿತ್ತು. ನಾಲ್ಕು ಹೆಜ್ಜೆ ನಡೆಯುವುದರಲ್ಲಿ ಎದುರಾದ ಹೊಸ ಕಾರಕೂನ ಕೈಜೋಡಿಸಿ ನಮಸ್ಕಾರ ಮಾಡಿ ವಿಚಿತ್ರ ಮುಗುಳ್ನಗೆ ನಕ್ಕ. ಅದು ಅವನ ಗೆಲುವಿನ ಸಂಕೇತವಾಗಿತ್ತು. ತಾನು ಎರಡು ನೂರು ತೆಗೆದುಕೊಳ್ಳದ್ದಕ್ಕೆ ಆದ ಅವಮಾನವಿದು ಎನಿಸಿದಾಗ ವೇಣುಗೋಪಾಲ್ ಹೇಳಲಾಗದಂತಹ ಹಿಂಸೆಗೆ ಒಳಗಾದ.

ಅವಮಾನದ ಹಿಂಸೆಯ ಗುಂಗಿನಲ್ಲಿ ನಡೆಯುತ್ತಿದ್ದ ವೇಣುಗೋಪಾಲನ ಬದಿಗೆ ಸ್ಕೂಟರ್ ಬಂದು ನಿಂತಿತು. ಬಾಲ್ಯ ಸ್ನೇಹಿತ, ಈಗ ಅವನು ಕೂಡ ಅದೇ ಸಂಶೋಧನಾಲಯದಲ್ಲಿ ಕೆಲಸ ಮಾಡುತ್ತಿದ್ದ. ಮಿತ್ರನ ಮುಖ ನೋಡುತ್ತಲೇ ಏನೋ ಆಗಬಾರದ್ದು ಆಗಿದೆ ಎಂದುಕೊಂಡು ಚೈತನ್ಯ ತುಂಬುವಂತೆ ವೇಣುವಿನ ಬೆನ್ನ ಮೇಲೆ ಹೊಡೆದು ಮಾತಾಡಿದ. ಬಾಲ್ಯಸ್ನೇಹಿತನಾದ ಇವನೊಡನೆ ಮುಕ್ತವಾಗಿ ಮಾತಾಡ ಬಹುದೆನಿಸಿತು. ವೇಣುಗೋಪಾಲನಿಗೆ ಆಗಾಗ ಇಬ್ಬರು ಕಲೆತು ಗುಂಡು ಹಾಕುವ ಅಭ್ಯಾಸವನ್ನು ಇಟ್ಟುಕೊಂಡಿದ್ದರು. ಮಾತಾಡದೆ ಅವನ ಹಿಂದೆ ಕುಳಿತ. ಸ್ಕೂಟರ್ ಮುಂದೋಡತೊಡಗಿತು.

ಮೊದಲ ಪೆಗ್ಗಿನ ಮೊದಲ ಗುಟುಕು ಹೊಟ್ಟೆಯಲ್ಲಿ ಇಳಿದ ಮೇಲೆ ತನ್ನಲ್ಲಿನ ಹೊಯ್ದಾಟಕ್ಕೆ ಹಿಂಸೆಗೆ ಕಾರಣಗಳನ್ನು ಹೇಳತೊಡಗಿದ ವೇಣುಗೋಪಾಲ. ತೋರಿಕೆಯ ಆಸಕ್ತಿಯ ಮುಖಮಾಡಿ ಎಲ್ಲವನ್ನು ಕೇಳಿದ ನಂತರ ಮಿತ್ರ ಗಂಭೀರ, ಸಿಟ್ಟಿನ ದನಿಯಲ್ಲಿ ಮಾತಾಡಿದ.

“ಲಂಚ, ಭ್ರಷ್ಟಾಚಾರ, ನ್ಯಾಯ ನೀತಿ ನಿಜಾಯಿತಿಯಂತ ಯಾಕೆ ಬಡಕೋತಿ! ಅದರಿಂದೇನು ಆಗುವುದಿಲ್ಲ. ದೇಶಾನ್ನ ಉದ್ಧಾರಮಾಡುವ ಇರಾದೆಯಿದ್ದರೆ ಈ ಕೆಲಸ ಬಿಟ್ಟು ಅದೇ ಕೆಲಸ ಮಾಡು!… ನೆನಪಿಡು ಇನ್ನೊಂದು ಸಲ ಹೇಳುತ್ತಿದ್ದೇನೆ ಅದರಿಂದ ಏನು ಆಗುವುದಿಲ್ಲ. ನಿನ್ನ ಹೆಂಡತಿ, ಮಕ್ಕಳ ಕೈಗೆ ಭಿಕ್ಷೆಯ ಚಿಪ್ಪುಗಳು ಬರಬಹುದಷ್ಟೆ!” ಕೋಪದ ಕಾರಣ ಮಿತ್ರನ ದನಿಯು ಏರಿತ್ತು. ಮತ್ತೊಂದು ಗುಟುಕು ಕುಡಿದು ಮಿತ್ರನ ಕಡೆಯೇ ನೋಡುತ್ತಿದ್ದ ವೇಣುಗೋಪಾಲ, ಅವನ ನೋಟ ಎದುರಿಸಲಾಗದೆ ಪಶ್ಚಾತ್ತಾಪದ ದನಿಯಲ್ಲಿ ಹೇಳಿದ ಮಿತ್ರ.

“ಐ ಆಮ್ ಸಾರಿ ವೇಣು!…. ನಾನಿದೆಲ್ಲಾ ನಿನ್ನ ಒಳಿತಿಗಾಗಿಯೇ ಹೇಳುತ್ತಿರುವುದು. ಇಂತಹ ಹುಚ್ಚು ಯೋಚನೆಗಳೆಲ್ಲಾ ಬಿಡು ಇದರಿಂದ ಏನು ಆಗುವುದಿಲ್ಲ. ನಿನ್ನ ವರ್ಗಾವಣೆ ಒಂದು ಕಡೆಯಿಂದ ಇನ್ನೊಂದು ಕಡೆ ಆಗುತ್ತಾ ಹೋಗಬಹುದು… ಹೆಂಡತಿ ಮಕ್ಕಳ ಬಗ್ಗೆ ಯೋಚಿಸು. ಯಾವ ಕಾಲದಿಂದಲೋ ಕಲರ್ ಟಿ.ವಿ. ಕೊಳ್ಳುತ್ತೇನೆ ಎಂದುಕೊಳ್ಳುತ್ತಿದ್ದಿ ಕೊಂಡೆಯಾ? ಅದು ನಿನಗಲ್ಲ ನಿನ್ನ ಹೆಂಡತಿ ಮಕ್ಕಳಿಗೆ…. ನನ್ನ ನೋಡು ಆಗಲೇ ಸ್ವಂತ ಮನೆ ಕಟ್ಟಿಸಿಯಾಗಿದೆ. ಮನೆಯ ಉಪಯೋಗಕ್ಕೆ ಬೇಕಾದ ಎಲ್ಲಾ ಆಧುನಿಕ ಉಪಕರಣಗಳು ಕೊಂಡಿದ್ದೇನೆ. ನನ್ನ ಸಂಬಳ ನಿನ್ನಕ್ಕಿಂತ ಕಡಿಮೆ ಎಂಬುವುದು ನಿನಗೆ ಗೊತ್ತು. ಆದರೂ ಇಷ್ಟೆಲ್ಲಾ ಮಾಡಿದ್ದೇನೆ. ಅದು ಹೇಗೆಂಬುವುದೂ ನಿನಗೆ ಗೊತ್ತು! ಅದರಿಂದ ಮಹಾ ಅಪರಾಧ ಮಾಡುತ್ತಿದ್ದೇನೆಂಬ ಅನಿಸಿಕೆ ನನ್ನಲ್ಲಿ ಎಂದೂ ಹುಟ್ಟಿಲ್ಲ. ನನ್ನ ಸುತ್ತ ಮುತ್ತಲಿರುವವರಂತೆ ನಾನು ಬದುಕುತ್ತಿದ್ದೇನಷ್ಟೆ! ಹೇಗೂ ಒಂದು ದಿನ ನಮ್ಮನ್ನು ನಾಲ್ವರು ಹೊತ್ತುಕೊಂಡು ಹೋಗಿ ಸುಟ್ಟುಬಿಡುತ್ತಾರೆ. ಬದುಕಿರುವಷ್ಟು ದಿನ ನಾವು ನಮ್ಮ ಹೆಂಡತಿ ಮಕ್ಕಳು ಸುಖವಾಗಿರಬಾರದೇ ಯೋಚಿಸು! ಇಲ್ಲದ ಗೋಳುಗಳನ್ನು ತಲೆಯಲ್ಲಿ ತುಂಬಿಕೊಡು ಜೀವನ ಹಾಳುಮಾಡಿಕೊಳ್ಳಬೇಡ!”

ಬಹಳ ಭಾವುಕವಾಗಿದ್ದ ಮಾತಿನಲ್ಲಿ ವೇಣುಗೋಪಾಲನ ಬಗ್ಗೆ ಅವನಿಗಿದ್ದ ಕಳಕಳಿ ಆತ್ಮೀಯತೆಗಳು ತುಂಬಿ ಬಂದಿದ್ದವು.

“ಆದರೆ ಈ ವಿಜ್ಞಾನಿಗಳು, ಬುದ್ಧಿಜೀವಿಗಳು, ಚಿಂತಕರು…”

ಅವನ ಮಾತು ಯಾವ ಪರಿಣಾಮವು ಬೀರದಂತೆ ವೇಣುಗೋಪಾಲ ಆರಂಭಿಸಿದ ಮಾತನ್ನು ನಡುವೆಯೇ ತಡೆದು ಮೊದಲಿಗಿಂತ ಹೆಚ್ಚಿನ ಭಾವುಕ ದನಿಯಲ್ಲಿ ಹೇಳಿದ ಮಿತ್ರ

“ಅವರು ಮನುಷ್ಯರಲ್ಲವೆ! ಅವರುಗಳಿಗೆ ಕಾರು, ಬಂಗಲೆಗಳು ಬೇಡವೆ, ತಮ್ಮ ಮಕ್ಕಳಿಗೆ ಒಳ್ಳೆಯ ಓದು ಕೊಡಲು, ಮದುವೆ ಮಾಡಲು. ಅವರುಗಳ ಭವಿಷ್ಯಕ್ಕೆ ಸೊಗಸಾದ ರೂಪಕೊಡಲು ಅವರಿಗೆ ಹಣ ಬೇಡವೆ! ಅದಕ್ಕಾಗೇ ಕೇಂದ್ರ ಸರಕಾರದ ಸಂಸ್ಥೆಗಳು ಕೊಡುವ ಗ್ರಾಂಟಿನಲ್ಲಿ ತಮಗೆ ಸಾಧ್ಯವಾದಷ್ಟು ಅವರು ತಮ್ಮ ಅಗತ್ಯಗಳಿಗೆ ಉಪಯೋಗಿಸಿ ಕೊಳ್ಳುತ್ತಾರೆ… ಅವರು ಎಲ್ಲರಂತೆ ಮನುಷ್ಯರೆಂಬುವುದು ನೀ ಮರೆಯುತ್ತಿದ್ದಿ”

ಈ ಸಲವೂ ಅವನ ಮಾತನ್ನು ಕೇಳಿಸಿಕೊಳ್ಳದವನಂತೆ ಮಾತಾಡಿದ ವೇಣುಗೋಪಾಲ್

“ಆದರೆ ಬಡಬಗ್ಗರು, ಒಂದು ಹೊತ್ತಿನ ಊಟಕ್ಕಾಗಿ ಚಡಪಡಿಸುತ್ತಿರುವವರು ಕೆಲಸಗಳು ದೊರೆಯದ ಅಪರಾಧಕ್ಕಿಳಿಯುತ್ತಿರುವ ಯುವಕರು ಅವರ ಗತಿ!”

“ಅವರ ಚಿಂತ ನಿನಗ್ಯಾಕೆ! ಅವರದೇ ಅಲ್ಲ, ಯಾರ ಬಗ್ಗೆಯಾದರೂ ಚಿಂತಿಸಿ ನೀನೇನು ಮಾಡಬಲ್ಲೆ! ನಿನ್ನ ಮನೆ ಸಂಸಾರದ ಬಗ್ಗೆ ಮೊದಲು ಯೋಚಿಸು… ನನ್ನ ಮೂಡ್ ಕೂಡ… ಹಾಳುಮಾಡಿ ಬಿಟ್ಟಿ! ಕುಡಿ”

ಎಂದೂ ಎರಡು ಪೆಗ್ಗಿಗಿಂತ ಹೆಚ್ಚು ಕುಡಿಯುವವನಲ್ಲ ವೇಣುಗೋಪಾಲ್. ಮಿತ್ರನೆ ಅವನನ್ನು ಮನೆಯ ಬಳಿಬಿಟ್ಟು ಹೋದ. ಬಾಗಿಲು ತೆಗೆದ ಮಡದಿಗೆ ಪತಿ ಕುಡಿದು ಬಂದಿರುವುದು ಗೊತ್ತಾಯಿತು. ಮಕ್ಕಳಿಬ್ಬರು ಊಟ ಮಾಡುತ್ತಿದ್ದರು. ಮಕ್ಕಳನ್ನು, ಮಡದಿಯನ್ನು ಹೊಸಬರನ್ನು ನೋಡುವಂತೆ ನೋಡಿದ ವೇಣುಗೋಪಾಲ್, ಬಟ್ಟೆ ಬದಲಿಸಿ ಕೈಕಾಲು ತೊಳೆದು ಅವರೊಡನೆ ಊಟಕ್ಕೆ ಕೂಡುತ್ತಾ ಮಡದಿಗೂ ತಮ್ಮೊಡನೆಯೇ ಊಟ ಮಾಡುವಂತೆ ಹೇಳಿದ. ಆಫೀಸಿನಿಂದ ಬರಲು ಇನ್ನೂ ತಡವೇಕಾಯಿತೆಂದು ಕೇಳಿದ ಮಗಳಿಗೆ ಮುಗುಳ್ನಗುತ್ತಲೇ ಯಾವುದೋ ಸಮಾಧಾನ ಹೇಳಿದ.

ನಾಲ್ವರೂ ಕಲೆತು ಊಟ ಮಾಡುತ್ತಿದ್ದಾಗ ಇದ್ದಿದ್ದು ಮಡದಿ, ಮಕ್ಕಳ ಮುಖಗಳ ಮೇಲೆ ಆಡುತ್ತಿದ್ದವು ವೇಣುಗೋಪಾಲನ ಕಣ್ಣುಗಳು. ತಾಳಲಾರದವಳಂತೆ ಕೇಳಿದಳು ಮಗಳು

“ಹಾಗೇನು ನೋಡುತ್ತಿದ್ದೀಯಪ್ಪಾ?”

“ನಿಮಗೆ ಕಲರ್ ಟಿ.ವಿ. ಬೇಕೆ?” ಅವಳ ಮೇಲಿಂದ ಮಡದಿಯ ಕಡೆ ನೋಟ ಸರಿಸಿ ಕೇಳಿದ ವೇಣುಗೋಪಾಲ್, ಮಗನ ನೋಟ ಕಪ್ಪು ಬಿಳುಪು ಟಿ.ವಿ ಬಿತ್ತರಿಸುತ್ತಿದ್ದ ಯಾವುದೋ ಧಾರಾವಾಹಿಯ ಕಡೆಗೇ ಇತ್ತು.

“ಆ ಮಾತು ಈಗ್ಯಾಕೆ?” ಒಂದೂ ಅರ್ಥವಾಗದವಳಂತೆ ಕೇಳಿದಳು ಮಡದಿ.

“ಬಹಳ ಕಾಲದಿಂದ ತರುತ್ತೇನೆ, ತರುತ್ತೇನೆ ಎನ್ನುತ್ತಿದ್ದೀಯಪ್ಪಾ! ಯಾವಾಗ ತರುತ್ತಿ ಕಲರ್ ಟಿ.ವಿ.?” ಕೇಳಿದ ಮಗ.

“ಇನ್‌ಸ್ಟಾಲ್‌ಮೆಂಟ್‌ನ ಮೇಲೆ ತರುತ್ತೀಯಾ?” ಕೇಳಿದಳು ಮಗಳು. ಮತ್ತೆ ಮೂವರ ಮುಖಗಳ ಕಡೆ ಒಮ್ಮೆ ನೋಟ ಹಾಯಿಸಿ ಹೇಳಿದ ವೇಣುಗೋಪಾಲ್.

“ನೋಡೋಣ! ಹೇಗಾದರೂ ಮಾಡಿ ತರುತ್ತೇನೆ”

ಅವನ ಮಾತು ಮುಗಿಯುತ್ತಿದ್ದಂತೆ ಮನೆಯ ಮೂವರಲ್ಲಿ ಲವಲವಿಕೆ ತುಂಬಿಬಂತು. ಬಣ್ಣದ ಟಿವಿಯ ಸುತ್ತು ಮಾತುಗಳು ಸುತ್ತುತ್ತಾ ಊಟ ಮುಗಿಸಿದರು.

ಕುಡಿತದ ಕಾರಣ ವೇಣುಗೋಪಾಲನಿಗೆ ಬೇಗನೆಯೇ ನಿದ್ದೆ ಹತ್ತಿತ್ತು ಮತ್ತೆ ಬೆಳಗ್ಗೆ ಎದ್ದಾಗ ದಿನಪತ್ರಿಕೆಯ ಸುದ್ದಿ, ಆ ದಿನಪತ್ರಿಕೆಯಲ್ಲಿ ಶ್ರೇಷ್ಠ ಸಾಹಿತಿಯ ಅನೈತಿಕ ವರ್ತನೆಯ ವಿರುದ್ಧ ಮೂವರು ಓದುಗರು ಬರೆದ ಪತ್ರಗಳು ಪ್ರಕಟವಾಗಿದ್ದವು. ಅವನ್ನು ಓದಿದ ವೇಣುಗೋಪಾಲನಲ್ಲಿ ಕುಂದುತ್ತಿದ್ದ ಹುರುಪು ಮತ್ತೆ ಸ್ಪುಟಿಯಿತು. ಜನರನ್ನು ಅನ್ಯಾಯಗಳನ್ನು ಭ್ರಷ್ಟಾಚಾರವನ್ನು ಕಂಡು ಸಿಡಿದೇಳುತ್ತಾರೆಂಬ ಹುರುಪು.

ಮತ್ತೊಂದು ಪುಟ ತಿರುವಿ ಹಾಕಿದಾಗ ಸಾಹಿತ್ಯ ಸಮ್ಮೇಳನದ ವರದಿ. ಬೃಹತ್ ಪ್ರಮಾಣದಲ್ಲಿ ನಡೆಯಲಿರುವ ಅದನ್ನು ಮಾನ್ಯಮುಖ್ಯಮಂತ್ರಿಯರು ಉದ್ಘಾಟಿಸಲಿದ್ದರು. ಸಾಹಿತ್ಯ ಸಮ್ಮೇಳನದ ವರದಿಯನ್ನು ಪೂರ್ತಿಯಾಗಿ ಓದುತ್ತಿದ್ದಂತೆ ತನಗೆ ಪರಿಚಯಸ್ಥ ಮತ್ತೊಬ್ಬ ಶ್ರೇಷ್ಠ ಸಾಹಿತಿಯರ ನನಪಾಯಿತವನಿಗೆ. ಅವರನ್ನು ಅವನು ಹತ್ತಾರು ಸಲ ಭೇಟಿಯಾಗಿದ್ದ. ಅವರೊಡನೆ ಮಾತಾಡುತ್ತಾ ಕುಳಿತಾಗ ಸಮಯ ಹೇಗೆ ಸರಿದು ಹೋಗುತ್ತದೆ ಎಂಬುದು ಗೊತ್ತಾಗುತ್ತಲೇ ಇರಲಿಲ್ಲ. ಅವರಿಗೆ ಈ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಆಹ್ವಾನ ಬಂದಿರಲೇಬೇಕು. ಅದರಲ್ಲಿ ಭಾಗವಹಿಸಲು ಅವರು ಒಪ್ಪಿಕೊಂಡಿರಬಹುದೇ? ನೈತಿಕ ಮೌಲ್ಯಗಳ ಬಗ್ಗೆ ಸಮಾಜದ ಪ್ರತಿ ಮನುಷ್ಯನ ಜವಾಬ್ದಾರಿಯ ಕುರಿತು ಬಹು ಗಂಭೀರ ಮಾತುಗಳನ್ನಾಡುತ್ತಿದ್ದರವರು. ಎಪ್ಪತ್ತನ್ನು ದಾಟಿದ ಮುಖ್ಯಮಂತ್ರಿ ತನಗೀಗಲೂ ಯುವತಿಯರ ಪ್ರಿತ ಆಕರ್ಷಣೆಯಿದೆ ಎಂದು, ಈ ವಯಸ್ಸಿನಲ್ಲೂ ತನ್ನ ಗಂಡಸುತನಕ್ಕೆ ಕುಂದು ಬಂದಿಲ್ಲವೆಂದು, ಈಗಲೂ ತಾನು ಗುಂಡು ಹಾಕುತ್ತೇನೆಂದು ಬಹಿರಂಗವಾಗಿ ಹೇಳಿದ್ದ. ಇಂತಹ ವ್ಯಕ್ತಿ ಉದ್ಘಾಟಿಸುವ ಸಾಹಿತ್ಯ ಸಮ್ಮೇಳನದಲ್ಲಿ ಇವರು ಭಾಗವಹಿಸುವರೆ?

ವೇಣುಗೋಪಾಲನಿಗೆ ಪರಿಚಯಸ್ಥ ಸಾಹಿತಿ ಸಾಕಷ್ಟು ಹೆಸರು ಮಾಡಿದವರಲ್ಲದೆ ಎಲ್ಲಾ ವಿಷಯಗಳ ಬಗ್ಗೆ ಗಹನ ಅಧ್ಯಯನವನ್ನು ಕೂಡ ಮಾಡಿದ್ದರು. ಅವರ ಸಮಯ ಬರಹಕ್ಕಿಂತ ಹೆಚ್ಚು ಓದಿನಲ್ಲೇ ವ್ಯಯವಾಗುತ್ತಿತ್ತು. ಇದನ್ನು ಕೂಡ ನೋಡಿದ್ದ ವೇಣುಗೋಪಾಲನಿಗೆ ಕೂಡಲೇ ಅವರನ್ನು ಕಾಣುವ ತಹತಹಿಕೆ ಹುಟ್ಟಿಕೊಂಡಿತು. ಅಡ್ಡಪಂಚೆಯ ಮೇಲೆ ಹತ್ತಿರದ ಟೆಲಿಫೋನ್ ಬೂತಿಗೆ ಹೋಗಿ ಅವರ ಮನೆಗೆ ಫೋನ್ ಮಾಡಿದ. ಹೆಸರು ಹೇಳಿದಾಗ ಅವನನ್ನು ಗುರ್ತಿಸಲು ಸ್ವಲ್ಪ ಸಮಯ ಹಿಡಿಯಿತು ಅವರಿಗೆ. ತನ್ನ ಭೇಟಿಯಾಗಬಯಸಿದರೆ ಯಾವಾಗ ಬೇಕಾದರಾಗ ಬರಬಹುದೆಂದು ಹೇಳಿದರವರು. ತಕ್ಷಣ ಬರುತ್ತಿರುವುದಾಗಿ ಹೇಳಿದ ವೇಣುಗೋಪಾಲ್.

ಬುದ್ಧಿಜೀವಿ ಸಾಹಿತಿ ಅವನನ್ನು ನೋಡುತ್ತಲೆ ಈ ವ್ಯಕ್ತಿ ಯಾವುದೋ ತಳಮಳದಲ್ಲಿದ್ದಾನೆಂಬುವುದು ಗ್ರಹಿಸಿದರು. ಆದರವರು ಆ ಮಾತನ್ನು ತೆಗೆಯಲಿಲ್ಲ. ಲೋಕಾಭಿರಾಮ ಮಾತುಗಳ ನಂತರ ಕೇಳಿದ ವೇಣುಗೋಪಾಲ್.

“ನಿಮಗೆ ಈ ಸಲದ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನ ಬಂದಿರಬಹುದಲ್ಲವೇ ಸರ್?”

“ಬಂದಿದೆ” ಇವನ ಮನಸ್ಸಿನಲ್ಲಿ ಏನಿರಬಹುದೆಂಬುದನ್ನು ಊಹಿಸಲು ಯತ್ನಿಸುತ್ತಾ ಹೇಳಿದರವರು.

“ಹೋಗುತ್ತಿದ್ದೀರಾ ಸರ್?” ಕೇಳಿದ ವೇಣುಗೋಪಾಲ್. ಅವರ ಉತ್ತರದ ಮೇಲೆ ತನ್ನ ಭವಿಷ್ಯ ಅವಲಂಬಿಸಿದೆ ಎಂಬಂತೆ ಧ್ವನಿಸಿತವನ ಪ್ರಶ್ನೆ.

“ಬರುತ್ತಿದ್ದೇನೆಂದು ಬರೆದುಬಿಟ್ಟಿದ್ದೇನೆ!” ಇನ್ಯಾವುದೋ ವಿಷಯ ಯೋಚಿಸುತ್ತಿರುವಂತೆ ಹೇಳಿದರವರು. ವೇಣುಗೋಪಾಲನ ಮನದಲ್ಲಿ ಹೇಳಲಾರದಂತಹ ಸಂಕಟ. ಮುಂದೇನು ಮಾತಾಡದೆ ಅಲ್ಲಿಂದ ಎದ್ದು ಹೋಗಿ ಬಿಡಬೇಕೆಂದುಕೊಳ್ಳುತ್ತಿದ್ದಾಗ ಮಾತಾಡಿದರು ಬುದ್ಧಿಜೀವಿ ಸಾಹಿತಿ.

“ಈಗ ನಾ ಮನ ಬದಲಾಯಿಸಿದ್ದೇನೆ. ಇಂತಹ ಮುಖ್ಯಮಂತ್ರಿಯರು ಉದ್ಘಾಟಿಸುವ ಸಾಹಿತ್ಯ ಸಮ್ಮೇಳನಕ್ಕೆ ನಾ ಹೋಗುವುದಿಲ್ಲ”

ವೇಣುಗೋಪಾಲನಲ್ಲಿ ಎಲ್ಲಿಲ್ಲದ ಸಂತಸ ತುಂಬಿ ಬಂತು. ಅವನ ದೃಷ್ಟಿಯಲ್ಲಿ ಅವರಿನ್ನು ಎತ್ತರವಾಗಿ ಬಿಟ್ಟಿದ್ದರು. ಅದೇ ಲಯದಲ್ಲಿ ಕೇಳಿದ.

“ಸಾಹಿತ್ಯ ಸಮ್ಮೇಳನವನ್ನು ಮುಖ್ಯಮಂತ್ರಿಯವರು ಉದ್ಘಾಟಿಸುತ್ತಾರೆಂಬುವುದು ನಿಮಗೆ ಗೊತ್ತಿರಲಿಲ್ಲವೇ ಸರ್!”

“ಇಲ್ಲ, ಪೇಪರಿನಲ್ಲಿ ಓದಿದ ಮೇಲೆ ತನಗದು ಗೊತ್ತಾದದ್ದು. ಅಂತಹ ಮುಖ್ಯಮಂತ್ರಿಯವರು ಉದ್ಘಾಟಿಸುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ನಾನು ಭಾಗವಹಿಸುವುದಿಲ್ಲವೆಂದು ಬರೆದು ಹಾಕುತ್ತೇನೆ”

ಅವರ ಉತ್ತರದಿಂದ ಇನ್ನಿಷ್ಟು ಉತ್ತೇಜಿತನಾದ ವೇಣುಗೋಪಾಲ್ ಕೇಳಿದ.

“ನೀವು ನಿಮ್ಮ ಸ್ನೇಹಿತ ಸಾಹಿತಿಯರ ಬಗ್ಗೆಯೂ ಓದಿರಬಹುದು”

“ಹೂ! ಒಂದು ವೇಳೆ ಅವರೂ ಈ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಲಿದ್ದರೆ ನಾ ಹೋಗುತ್ತಿರಲಿಲ್ಲ!”

ಕೇಳದೆಯೆ ಅವನಿಗೆ ಬೇಕಾಗಿದ್ದ ವಿಷಯ ಹೇಳಿದರವರು. ಅದರಿಂದ ಅವನ ಸಂತಸ ಇಮ್ಮಡಿಯಾಯಿತು. ತನ್ನ ಭಾವೋದ್ವೇಗವನ್ನು ಅದುಮಲು ಯತ್ನಿಸುತ್ತಾ ಗಂಭೀರದನಿಯಲ್ಲಿ ಕೇಳಿದ.

“ದೇಶದಿಂದ ಈ ಭ್ರಷ್ಟಾಚಾರವನ್ನು ನಿರ್ಮೂಲ ಮಾಡುವುದು ಸಾಧ್ಯವಿಲ್ಲವೆ ಸಾರ್?”

“ಇಲ್ಲವೆಂದೇ ನನಗನಿಸುತ್ತದೆ. ಆದರೆ ಅದರ ನಿರ್ಮೂಲನಕ್ಕೆ ಅದು ತಪ್ಪೆಂದು ತಿಳಿದ ಪ್ರತಿ ವ್ಯಕ್ತಿಯೂ ತನ್ನಿಂದಾದಷ್ಟು ಕೊಡುಗೆ ಕೊಡಬೇಕು!”

ಅಷ್ಟು ಮಾತು ಸಾಕಾಗಿತ್ತು ವೇಣುಗೋಪಾಲನಿಗೆ. ಇನ್ನೂ ಒಂದೆರಡು ಮಾತುಗಳನ್ನಾಡುವ ಶಾಸ್ತ್ರ ಮುಗಿಸಿ ಹೊರಬಿದ್ದ. ಅವನ ಮೊದಲಿನ ಇರಾದೆ ಇನ್ನು ಗಟ್ಟಿಯಾಗಿತ್ತು.

ಅಂದವನು ಆಫೀಸಿಗೆ ಹೋದಾಗ ವರ್ಗಾವಣೆಯ ಆರ್ಡರ್ ಅವನಿಗಾಗಿ ಕಾದಿತ್ತು. ಆಡಿಟ್‌ನಿಂದ ಅವನನ್ನು ಮತ್ತೊಂದು ಡಿವಿಜನ್‌ಗೆ ವರ್ಗಾಯಿಸಿದ್ದರು. ಅಷ್ಟು ಬೇಗ ಮಾಡಿದ ವರ್ಗಾವಣೆಗೆ ಯಾವ ಕಾರಣವನ್ನು ಕೊಟ್ಟಿರಲಿಲ್ಲ ಆಡಳಿತ ವರ್ಗ. ಯಾವ ತರಹದ ಪ್ರತಿಕ್ರಿಯೆಯೂ ತೋರದೆ ಆ ಕಾಗದ ತೆಗೆದುಕೊಂಡ ವೇಣುಗೋಪಾಲ್ ಆಡಿಟ್ ಆಫೀಸರ್‌ನಿಂದ ಅಲ್ಲಿಂದ ಬಿಡುಗಡೆಯಾಗುತ್ತಿರುವಂತಹ ಆರ್ಡರ್ ಕೂಡ ಪಡೆದು ಬೇರೆ ಕಾರ್ಯಾಲಯದ ಕಡೆ ನಡೆಯತೊಡಗಿದೆ.

ಅದು ರಸಾಯನ ಶಾಸ್ತ್ರ ವಿಭಾಗ, ಅಲ್ಲಿ ಕೂಡ ಅವನ ಕೆಲಸ ಲೆಕ್ಕಪತ್ರಗಳಿಗೆ ಸಂಬಂಧಿಸಿದ್ದೆ. ಆದರಿದು ಬೇರೆಯ ರೀತಿಯ ಲೆಕ್ಕಪತ್ರ. ಅಲ್ಲಿ ಕೆಲಸ ಮಾಡುವ ಎಲ್ಲರ ಸಂಬಳದ ಬಿಲ್ಲುಗಳನ್ನು ಮಾಡುವುದು. ಅವರಿಗೆ ಇನ್ಯಾವ್ಯಾವ ಹಣ ಬರುವುದಿದೆ ಎಂದು ತಿಳಿದು ಅದನ್ನು ತರಿಸುವ ಲೆಕ್ಕಪತ್ರ. ಇಡೀ ತಿಂಗಳಲ್ಲಿ ಮೂರು ನಾಲ್ಕು ಗಂಟೆಗಳ ಕೆಲಸವಿದ್ದರೆ ಹೆಚ್ಚಾಯಿತು. ಕ್ರಿಯಾಶೀಲ ಮನುಷ್ಯನನ್ನು ಸೋಮಾರಿಯನ್ನಾಗಿ ಮಾಡಿ ಬಿಡುವಂತಹ ಕೆಲಸವದು.

ತನ್ನ ಹೊಸ ಜಾಗದಲ್ಲಿ ಕುಳಿತ ವೇಣುಗೋಪಾಲ್ ಕಳೆದ ತಿಂಗಳ ಬಿಲ್ಲುಗಳನ್ನು ತಿರುಗಿಹಾಕುವುದರಲ್ಲಿ ಸ್ವಲ್ಪ ಸಮಯ ಸವೆಸಿದ. ಅವನ ಬದಿಯಲ್ಲಿ ಕುಳಿತ ಕೆಳದರ್ಜೆಯ ಕಾರಕೂನನಿಗೂ ಯಾವ ಕೆಲಸವೂ ಇಲ್ಲ. ಇಬ್ಬರೂ ಆ ಡಿವಿಜನಿನ ಹಿಂದಿದ್ದ ಕ್ಯಾಂಟೀನಿಗೆ ಹೋದರು.

ಕೆಲಸಕ್ಕೆ ಸೇರಿದಾಗಿನಿಂದ ಅದೇ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ಆ ಕೆಳದರ್ಜೆಯ ಕಾರಕೂನನಿಗೆ ಮಾತಾಡುವ ಗೀಳು, ಬುದ್ಧಿವಂತಿಕೆಯಿಂದ ತಾ ತಿಳಿಯಬಯಸಿದ ವಿಷಯಗಳ ಕುರಿತು ಒಂದೆರಡು ಪ್ರಶ್ನೆಗಳನ್ನು ಹಾಕಿದ ವೇಣುಗೋಪಾಲ್. ಅದೇ ಬೇಕಾಗಿದ್ದವನಂತೆ ಎಲ್ಲವನ್ನು ಬಹು ವಿವರವಾಗಿ ಬಾಯಿ ಬಿಡತೊಡಗಿದನಾತ.

ಅವನ ಮಾತುಗಳನ್ನು ಕೇಳುತ್ತಾ ಹೋದ ಹಾಗೆಲ್ಲಾ ತನಗಿಲ್ಲಿ ವರ್ಗವಾಗಿದ್ದು ಅದೃಷ್ಟವೆನಿಸತೊಡಗಿತು ವೇಣುಗೋಪಾಲನಿಗೆ. ಅಲ್ಲಿನ ಮುಖ್ಯಸ್ಥ ನಂಬಿಕಸ್ಥ, ಆತ ಹೇಳಿದ ಮಾತು ಕೇಳುವ, ಬೆಳಗ್ಗೆ ಆಫೀಸಿಗೆ ಸಮಯಕ್ಕಿಂತಲೂ ಮೊದಲು ಬಂದು ಎಲ್ಲಕ್ಕಿಂತ ಕೊನೆಗೆ ಹೋಗುವ ಕಾರಕೂನನೊಬ್ಬನಿದ್ದ. ಅವನ ಹೆಸರೂ ವೇಣುಗೋಪಾಲನೆ. ಈ ಇನ್ನೊಬ್ಬ ವೇಣುಗೋಪಾಲ್ ಬಹುಬೇಗ ಹಿರಿಯ ಕಾರಕೂನನಾಗಲು ಕಾರಣ ಕೂಡ ಆ ಡಿವಿಜನಿನ ಮುಖ್ಯಸ್ಥನೆ. ಆ ಇನ್ನೊಬ್ಬ ವೇಣುಗೋಪಾಲ್ ಹೇಳಿದ ಪ್ರತಿ ಮಾತನ್ನು ನಂಬುತ್ತಾನೆ ಅಲ್ಲಿಯ ಮುಖ್ಯಸ್ಥ. ಆ ಡಿವಿಜನಿನಲ್ಲಿ ಕೆಲಸ ಮಾಡುವ ಹಲವರು ವಿಜ್ಞಾನಿಗಳಿಗೆ ಡಿ.ಎಸ್.ಟಿ.ಐ.ಸಿ.ಎಮ್.ಆರ್.ಸಿ.ಎಸ್.ಐ.ಆರ್. ಮತ್ತಿನ್ನಿತರ ಸಂಸ್ಥೆಗಳಿಂದ ಮಂಜೂರಾದ ಹಣದ ಲೆಕ್ಕ ಪತ್ರಗಳನ್ನೆಲ್ಲ ಅವನೇ ನೋಡಿಕೊಳ್ಳುತ್ತಾನೆ. ಇಂತಹ ವಿವಿಧ ಸಂಸ್ಥೆಗಳಿಂದ ತಮ್ಮ ತಮ್ಮ ಪ್ರಾಜೆಕ್ಟ್‌ಗಳನ್ನು ಮಂಜೂರು ಮಾಡಿಸಿಕೊಂಡ ಎಲ್ಲಾ ವಿಜ್ಞಾನಿಗಳಿಗೆ ಈ ಇನ್ನೊಬ್ಬ ವೇಣುಗೋಪಾಲ್ ಬಹಳ ಬೇಕಾದವನು. ಅವನು ಆ ಡಿವಿಜನಿನ ಮುಖ್ಯಸ್ಥನ ಆಪ್ತ ಕಾರ್ಯದರ್ಶಿಯಂತೆ ಕೆಲಸ ಮಾಡುವುದಲ್ಲದೆ ಅವರ ಮನೆಯ ಕೆಲಸಗಳನ್ನು ಮಾಡುತ್ತಾನೆ.

ಮಾತುಗಳಿಗೆ ಕೊನೆ ಇಲ್ಲವೆಂಬಂತೆ ಆಡುತ್ತಲೇ ಇದ್ದ ಆ ಕೆಳದರ್ಜೆಯ ಕಾರಕೂನ ಅವನು ಹೇಳುತ್ತಿದ್ದ ಪ್ರತಿ ವಿಷಯವೂ ವೇಣುಗೋಪಾಲನ ಮೆದುಳಿನಲ್ಲಿ ಮನೆ ಮಾಡುತ್ತಿತ್ತು. ಆವರೆಗೆ ಅವರು ಎರಡು ಕಾಫಿಗಳನ್ನು ಕುಡಿದಾಗಿತ್ತು. ಒಬ್ಬ ಗಡ್ಡಧಾರಿಯನ್ನು ತೋರಿಸಿ ಅವರೊಬ್ಬ ಪ್ರತಿಭಾವಂತ ವಿಜ್ಞಾನಿಯೆಂದು ಹೇಳಿದಾಗ ಅವರೆಡೆ ಪರೀಕ್ಷಾತ್ಮಕವಾಗಿ ನೋಡಿದ ವೇಣುಗೋಪಾಲ್. ವಯಸ್ಸು ಮೂವತ್ತೈದರೊಳಗಿರಬಹುದಷ್ಟೆ ಅವರೊಡನೆ ಇಬ್ಬರು ವಿದ್ಯಾರ್ಥಿಗಳು ಬಹುವಿನಯದ ಭಾವದಿಂದ ಕ್ಯಾಂಟೀನಿನ ಕಡೆ ಬರುತ್ತಿದ್ದರು. ಯಾಕೋ ವ್ಯಕ್ತಿಯನ್ನು ನೋಡುತ್ತಲೆ ಅವರೊಡನೆ ಮಾತಾಡಬೇಕೆನಿಸಿತು. ವೇಣುಗೋಪಾಲನಿಗೆ, ಸಹೋದ್ಯೋಗಿಯೊಡನೆ ಮಾತು ಮುಗಿಸಿ ಕಾರ್ಯಲಯದ ಕಡೆ ಹೋಗುತ್ತಿದ್ದಾಗ ಆ ಯುವ ವಿಜ್ಞಾನಿಯ ಮೇಲೆ ಇನ್ನೊಮ್ಮೆ ಹರಿಯಿತು ವೇಣುಗೋಪಾಲನ ನೋಟ.

ಗಡ್ಡಧಾರಿ ವಿಜ್ಞಾನಿ ತಮ್ಮ ಕೋಣೆಯಲ್ಲಿ ಒಬ್ಬರೇ ಕುಳಿತು ಓದುತ್ತಿದ್ದಾಗ ಅಲ್ಲಿ ಬಂದ ವೇಣುಗೋಪಾಲ್ ತನ್ನನ್ನು ತಾನು ಪರಿಚಯಿಸಿಕೊಂಡ. ಪುಸ್ತಕ ಮುಚ್ಚಿ ಹಾರ್ದಿಕ ನಗೆ ನಗುತ್ತಾ ಅವನಿಗೆ ಕೂಡಲು ಹೇಳಿದರು. ವಿಜ್ಞಾನ, ಸಂಶೋಧನೆಯ ಮತ್ತು ತಮ್ಮ ಡಿವಿಜನ್‌ನ ಕೆಲವು ಮಾತುಗಳನ್ನಾಡಿದ ಬಳಿಕ ಅಂತರಾಷ್ಟ್ರೀಯ ವೈಜ್ಞಾನಿಕ ಪತ್ರಿಕೆಗಳಲ್ಲಿ ಪ್ರಕಟವಾದ ಅವರ ಲೇಖನಗಳ ಬಗ್ಗೆ ಮಾತು ತೆಗೆದು ಅವರು ಯಾವುದಾದರೂ ಸಂಸ್ಥೆಯಿಂದ ಹಣ ಪಡೆದು ಯಾಕೆ ಬೃಹತ್ ಪ್ರಮಾಣದ ಸಂಶೋಧನೆಯನ್ನು ಆರಂಭಿಸಬಾರದೆಂದು ಕೇಳಿದ ವೇಣುಗೋಪಾಲ್. ಅವನ ಆ ಮಾತಿಗೆ ವಿಚಿತ್ರ ಮುಗುಳ್ನಗೆ ಬೀರಿ ಹೇಳಿದರು ಯುವ ವಿಜ್ಞಾನಿ.

“ಯಾವುದಾದರೂ ಸರಕಾರಿ ಸಂಸ್ಥೆಯಿಂದ ಸಂಶೋಧನೆಗೆ ಹಣ ಹೊಂದುವುದು ಅಷ್ಟು ಸುಲಭವೆಂದು ಕೊಂಡಿದ್ದೀರಾ ಮಿ| ವೇಣುಗೋಪಾಲ್! ನಮ್ಮ ಪ್ರಾಜೆಕ್ಟ್‌ನೊಡನೆ ದೆಹಲಿಗೆ ಹೋಗಿ ಅಲ್ಲಿ ಹತ್ತಾರು ದಿನಗಳಿದ್ದು ಆ ಸಂಸ್ಥೆಯ ಅಧಿಕಾರಿಗಳಿಗೆ ಖುಷಿಪಡಿಸಿ ಅವರು ಕೊಡುವ ಹಣದಲ್ಲಿ ಅವರ ಪಾಲು ಎಷ್ಟೆಂಬುವುದು ನಿರ್ಧಾರವಾದ ಮೇಲೆ ಆ ಸಂಸ್ಥೆಗಳು ಸಂಶೋಧನೆಗೆ ಹಣವನ್ನು ಮಂಜೂರು ಮಾಡುತ್ತದೆ. ಅದೂ ಅಲ್ಲದ ಅದಕ್ಕೆ ರಾಜಕೀಯ ನಾಯಕರ ಪ್ರಭಾವವನ್ನು ಉಪಯೋಗಿಸಬೇಕು. ಅದೆಲ್ಲಾ ನನ್ನಿಂದ ಮಾಡಲಾಗುವುದಿಲ್ಲ, ಅಂತಹ ಕೀಳುಮಟ್ಟಕ್ಕೆ ನಾನಿಳಿಯಲಾರೆ. ಇಲ್ಲಿ ನನ್ನದ್ಯಾವ ಕೆಲಸವಿದೆಯೋ ಅದನ್ನು ಮುತುವರ್ಜಿಯಿಂದ ಮಾಡುತ್ತೇನೆ ಅದರಲ್ಲಿ ನನಗೆ ತೃಪ್ತಿ.”

ಯಾವ ಸಂಕೋಚವೂ ಇಲ್ಲದೆ ವಿವರ ಕೊಟ್ಟರು ಯುವ ವಿಜ್ಞಾನಿ ಅದರಿಂದ ಸಮಾಧಾನವಾಗದವನಂತೆ ಕೇಳಿದ ವೇಣುಗೋಪಾಲ್.

“ಸರಕಾರ ಪ್ರತಿಭಾವಂತರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ಕೊಡುವುದಿಲ್ಲವೆ ಸರ್?”

ವ್ಯಂಗ್ಯದ ನಗೆಯೊಡನೆ ಮಾತಾಡಿದರು ವಿಜ್ಞಾನಿ

“ಯಾರಿಗೆ ಹೆಚ್ಚು ಹಣ ಬಲವಿದೆಯೊ, ರಾಜಕೀಯ ಬೆಂಬಲವಿದೆಯೋ, ಅವರೇ ಪ್ರತಿಭಾವಂತ ವಿಜ್ಞಾನಿಗಳು, ಇದು ನಮ್ಮ ದೇಶದಲ್ಲಿ ನಡೆಯುತ್ತಿರುವ ನಿಯಮ, ಅದು ಸಧ್ಯದಲ್ಲಿ ಬದಲಾಗುವ ಲಕ್ಷಣಗಳು ಕಾಣುತ್ತಿಲ್ಲ”

ಇನ್ನಿಷ್ಟು ವಿವರ ಶೇಖರಿಸಿದಂತಾಗಿತ್ತು ವೇಣುಗೋಪಾಲನಿಗೆ ಆಗಲೇ ಆಡಿಟ್‌ನಲ್ಲಿ ಸಾಕಷ್ಟು ವಿಷಯಗಳನ್ನು ಸಂಗ್ರಹಿಸಿದ್ದ. ಇಲ್ಲಿ ಮಾತುಗಾರನಿಂದ ಇನ್ನಷ್ಟು ಮುಖ್ಯ ಸಂಗತಿಗಳು ತಿಳಿದಿದ್ದವು. ಈ ಇನ್ನೊಬ್ಬ ವೇಣುಗೋಪಾಲನ ಆಸ್ತಿ ಎಷ್ಟಿದೆಯೆಂಬುದು ತಿಳಿಯುವುದು ಕಷ್ಟವಲ್ಲ. ಅದೇ ವಿಧದಲ್ಲಿ ವಿಜ್ಞಾನಿಗಳು ಅನೈತಿಕ ರೀತಿಯಲ್ಲಿ ಎಷ್ಟು ಚರ-ಸ್ಥಿರ ಆಸ್ತಿಗಳನ್ನು ಸಂಪಾದಿಸಿದ್ದಾರೆಂಬುದನ್ನು ತಿಳಿಯಬಹುದು. ಇವತ್ತಿನಿಂದಲೇ ತನ್ನ ಮುಖ್ಯ ಕೆಲಸ ಆರಂಭಿಸಬೇಕೆಂದು ತೀರ್ಮಾನಿಸಿದ್ದ ವೇಣುಗೋಪಾಲ್. ಮುಂದೆ ಅವನು ಏನು ಹೇಗೆ ಮಾಡುವುದೆಂಬುವುದು ಮಿದುಳಿನಲ್ಲಿ ಸ್ಪಷ್ಟವಾಗಿತ್ತು. ಅದೇ ಯೋಚನೆಯಲ್ಲಿ ಅಂದವನು ಮನೆಗೆ ಸರಿಯಾದ ಸಮಯಕ್ಕೆ ಬಂದ.

ವೇಣುಗೋಪಾಲನ ನರನರದಲ್ಲೂ ಒಂದು ತರಹದ ಆವೇಶ ಹೊಕ್ಕಿತ್ತು. ತಾ ಮಾಡಬಯಸಿದ ಕೆಲಸ ಮಾಡಿಬಿಡುವರೆಗೂ ಮುಕ್ತಿ ಇಲ್ಲ ಎಂಬಂತಹ ಭಾವ. ತಾ ಟಿಪ್ಪಣಿ ಮಾಡಿಕೊಂಡ ಕಾಗದಗಳನ್ನು ತೆಗೆದು ಒಂದು ಬದಿಗೆ ಜಾಗ್ರತೆಯಾಗಿ ಇರಿಸಿಕೊಂಡು ಕೆಲ ಬಿಡಿಹಾಳೆಗಳನ್ನು ತೆಗೆದು ಅದರ ಮೇಲೆ ಕೆಳದರ್ಜೆಯ ಕಾರಕೂನ ಕೊಟ್ಟ ವಿವರಗಳನ್ನು ಬರೆಯತೊಡಗಿದ. ಅವನು ಹೇಳಿದ ವಿಷಯಗಳಿಗೆ ಯಾವ ಸಾಕ್ಷಾಧಾರಗಳ ಅವಶ್ಯಕತೆಯೂ ಇರಲಿಲ್ಲ. ಕೆಲಸಕ್ಕೆ ಸೇರಿದಾಗ ಆ ಇನ್ನೊಬ್ಬ ವೇಣುಗೋಪಾಲನು ನಿರ್ಗತಿಕನಾಗಿದ್ದ. ಈಗವನು ಎರಡಂತಸ್ತಿನ ಮನೆಯ ಒಡೆಯ ಮಗಳ ಮದುವೆಗೆ ಮೂರು ಲಕ್ಷ ವೆಚ್ಚ ಮಾಡಿದ್ದಾನೆ. ಅದಲ್ಲದೆ ಅವನಿಗೆ ಇನ್ನೆರಡು ಬಹಳ ಬೆಲೆ ಬಾಳುವ ಸೈಟುಗಳಿವೆ. ಅದು ಅವನ ಆದಾಯಕ್ಕೆ, ಹೊಂದಿರುವ ಆಸ್ತಿಗೆ ಅಜಗಜಾಂತರದ ವ್ಯತ್ಯಾಸವೆಂಬುವುದು ಯಾರಾದರೂ ಗುರ್ತಿಸಬಹುದು. ಹಾಗೇ ವಿಜ್ಞಾನಿಗಳು ತಮ್ಮ ಸಂಶೋಧನೆಗೆಂದು ಮಂಜೂರು ಮಾಡಿಸಿಕೊಂಡ ಹಣದಲ್ಲಿ ಯಾತಕ್ಕೆ ಎಷ್ಟು ವೆಚ್ಚ ಮಾಡಿದ್ದಾರೆಂಬ ವಿವರವಿದೆ. ಅವು ಸುಳ್ಳು ಲೆಕ್ಕ ಪತ್ರಗಳೆಂಬುವುದು ತಿಳಿಯಲು ಹೇಮಾ ಹೇಮಿ ವಿಜ್ಞಾನಿ ಅಥವಾ ಬುದ್ಧಿವಂತ ಗಣಿತಜ್ಞನ ಅವಶ್ಯಕತೆ ಇಲ್ಲ. ಸಾಮಾನ್ಯ ಬುದ್ದಿ ಇರುವ ಯಾವನಾದರೂ ಅದನ್ನು ಹೇಳಬಹುದು. ಅದೂ ಅಲ್ಲದೆ ಲಕ್ಷಾಂತರಗಳು ಕೊಟ್ಟು ಕೊಂಡವೆನ್ನಲಾದ ಯಂತ್ರೋಪಕರಣಗಳು ಯಾವ ಲ್ಯಾಬಿನಲ್ಲೂ ಇಲ್ಲ. ಅದರ ಬಾಬತ್ತಿನ ಹಣ ಕಂಪನಿಗಳಿಗೆ ಕೊಟ್ಟಾಗಿದೆ.

ಎಲ್ಲವನ್ನು ಮರೆತು ಕೆಲಸದಲ್ಲಿ ಲೀನನಾದ ಅವನಿಗೆ ಊಟಕ್ಕೆ ಎಬ್ಬಿಸಿದಳು ಮಡದಿ. ಊಟ ಮಾಡುತ್ತಿರುವಾಗಲೂ ಅದರದೆ ಯೋಚನೆ, ತಾ ಮಾಡಲಿರುವ ಈ ಕೆಲಸದಿಂದ ಇಡೀ ಸಂಶೋಧನಾ ಕೇಂದ್ರ ಅಲ್ಲೋಲಕಲ್ಲೋಲದಲ್ಲಿ ಮುಳುಗಿ ಬಿಡಬಹುದು. ಕೆಲ ವಿಜ್ಞಾನಿಗಳು ಅವರ ಹಿಂಬಾಲಕ ಕಾರಕೂನರು ಕೆಲಸಗಳನ್ನು ಕಳೆದುಕೊಳ್ಳವುದಂತು ನಿಸ್ಸಂದೇಹ. ಕೇಂದ್ರದ ವಿವಿಧ ಸಂಸ್ಥೆಯವರು ತಾವು ಕೊಟ್ಟ ನಿಧಿಗಳ ಲೆಕ್ಕಪತ್ರವನ್ನು ನೋಡಲು ಪರಿಣಿತರನ್ನು ಕಳುಹಿಸುವುದಂತು ಖಚಿತ. ಅದೇ ಗುಂಗಿನಲ್ಲಿ ಊಟ ಮುಗಿಸಿದ ವೇಣುಗೋಪಾಲ್ ಮತ್ತೆ ತನ್ನ ಕೆಲಸ ಆರಂಭಿಸಿದ.

ಈ ಸಂಶೋಧನಾ ಕೇಂದ್ರದಲ್ಲಿ ನಡೆದ ಭ್ರಷ್ಟಾಚಾರದ ದೂರಿನೊಡನೆ ಅದನ್ನು ದೃಢಪಡಿಸುವ ಕೈಬರಹದಿಂದ ಬರೆದ ಎಂಟು ಪುಟಗಳ ವಿವರಗಳನ್ನು ಅದಕ್ಕೆ ಲಗತ್ತಿಸುವುದರಲ್ಲಿ ರಾತ್ರಿಯ ಒಂದಾಗಿತ್ತು. ಅವನ ಏಕಾಗ್ರಚಿತ್ತದ ಕೆಲಸ ನಡೆದಿದ್ದಾಗ ಮಡದಿ ಮಕ್ಕಳು ಅವನನ್ನು ಮಾತಾಡಿಸುವ ಗೋಜಿಗೆ ಹೋಗಿರಲಿಲ್ಲ. ಅವರು ತಮ್ಮ ಪಾಡಿಗೆ ತಾವು ಮಲಗಿಬಿಟ್ಟಿದ್ದರು.

ಬಚ್ಚಲಿಗೆ ಹೋಗಿ ಬಂದ ವೇಣುಗೋಪಾಲ್‌ ತಾನೇ ಕಾಫಿ ಮಾಡಿಕೊಂಡು ಬಂದು ಅದನ್ನು ಕುಡಿಯುತ್ತಾ ತಾನಾವರೆಗೆ ಬರೆದಿದ್ದರ ಪರಿಕ್ಷಣೆಯಲ್ಲಿ ತೊಡಗಿದ. ಹಾಗೇ ಹಲವಾರು ಸಲ ಮಾಡಿ ಅದನ್ನು ಮತ್ತೆ ಮತ್ತೆ ತಿದ್ದಿ ಎಲ್ಲವನ್ನು ಮತ್ತೊಮ್ಮೆ ಶುದ್ಧ ಬರಹದಲ್ಲಿ ಬರೆದು ಎರಡೆರಡು ಸಲ ಓದಿಕೊಂಡ ಮೇಲೆ ಸಂತೃಪ್ತನಾದ ವೇಣುಗೋಪಾಲ್ ಮಲಗಲು ಹೋದಾಗ ರಾತ್ರಿಯ ಎರಡಾಗಿತ್ತು.

ಅಷ್ಟು ಹೊತ್ತು ಎದ್ದಿದ್ದರೂ ವೇಣುಗೋಪಾಲನಿಗೆ ಬೇಗ ನಿದ್ದೆ ಹತ್ತಲಿಲ್ಲ. ತಾನು ಮಾಡಲಿರುವ ಕೆಲಸದಿಂದ ಇಡೀ ಸಂಶೋಧನಾ ಸಂಸ್ಥೆಯಲ್ಲಿ ಎಂತಹ ಬಿರುಗಾಳಿ ಏಳಬಹುದೆಂಬ ಯೋಚನೆಗಳು, ಆಗಬಹುದಾದ ಘಟನೆಗಳು ಬೃಹದಾಕಾರ ತಾಳಿ ಅವನೆದುರು ನಾಟ್ಯವಾಡುತ್ತಿದ್ದವು. ಬಹು ಉದ್ವಿಗ್ನಗೊಂಡ ಅವನಿಗೆ ತಾನು ಸಂಶೋಧನಾಲಯದಲ್ಲಿ ನಡೆಯುತ್ತಿರುವ ಭ್ರಷ್ಟಚಾರದ ನಿರ್ಮೂಲನೆಗೆ ತನ್ನಿಂದಾದಷ್ಟು ಕೊಡುಗೆ ಕೊಡುತ್ತಿರುವೆನೆಂಬ ತೃಪ್ತಿಯಿತ್ತು.

ವೇಣುಗೋಪಾಲ್ ಎದ್ದಾಗ ಎಂಟರ ಸಮೀಪಿಸುತ್ತಿತ್ತು ಸಮಯ. ಬಹು ಅವಸರದಲ್ಲಿ ಅವನು ಬೆಳಗಿನ ವಿಧಿಗಳನ್ನು ಮುಗಿಸಿ ತಾ ಶುದ್ಧ ಲಿಪಿಯಲ್ಲಿ ಬರೆದ ದೂರೂ ಮತ್ತು ಭ್ರಷ್ಟಾಚಾರದ ವಿವರಗಳಿರುವ ಕಾಗದಗಳೊಡನೆ ಮನಬಿಟ್ಟ.

ಕಂಪ್ಯೂಟರ್‌ನಲ್ಲಿ ಮುದ್ರಿತವಾದ ದೂರು ಮತ್ತು ಅದಕ್ಕೆ ಲಗತ್ತಿಸಬೇಕಾದ ವಿವರಗಳು ಬಹುಸುಂದರವಾಗಿ ಕಾಣುತ್ತಿದ್ದವು. ಅವುಗಳ ಹತ್ತು ಪ್ರತಿಗಳನ್ನು ತೆಗೆಸಿದ. ಮಾನವ ಸೃಷ್ಟಿಸಿದ ಹೊಸ ಯಂತ್ರದಲ್ಲಿ ನೋಡು ನೋಡುತ್ತಿದ್ದಂತೆಯೇ ಮುದ್ರಣಗೊಂಡು ಬಂದ ಅವು ಎಂತಹವನ್ನೇ ಆಗಲಿ ಆಕರ್ಷಿಸುವುದು ನಿಸ್ಸಂದೇಹ ಎನಿಸಿತವನಿಗೆ. ಕೈ ಬರಹಕ್ಕಿಂತ ಅದನ್ನು ಓದುವುದರಲ್ಲಿ ಹೆಚ್ಚಿನ ಖುಷಿ.

ಮೊದಲೇ ಸಿದ್ಧವಾಗಿಟ್ಟುಕೊಂಡ ಲಕೋಟೆಗಳ ಮೇಲೆ ಸಂಶೋಧನೆಗಳಿಗೆ ಹಣದ ನೆರವು ಕೊಡುವ ಎಲ್ಲಾ ಸಂಸ್ಥೆಗಳ ವಿಳಾಸಗಳನ್ನು ಬರೆಯುವ ಕೆಲಸ ಕೂಡ ಕಂಪ್ಯೂಟರೇ ಮಾಡಿತು. ಲಂಚ ನಿರೋಧಕ ಶಾಖೆಯ ಮುಖ್ಯಸ್ಥ ಮತ್ತು ತಮ್ಮ ಸಂಶೋಧನಾ ಸಂಸ್ಥೆಯ ಡೈರೆಕ್ಟರ್‌ರನ್ನು ಅವನು ಮರೆಯಲಿಲ್ಲ. ತಾನು ಮಾಡಿಸಿಕೊಂಡ ಆ ಕೆಲಸಕ್ಕೆ ಕೊಡಬೇಕಾದ ಹಣ ಕೊಟ್ಟು ನೇರವಾಗಿ ಪೋಸ್ಟಾಫೀಸಿಗೆ ಬಂದ. ಅಲ್ಲಿ ಅವನ್ನೆಲ್ಲಾ ರಿಜಿಸ್ಟರ್ ಪೋಸ್ಟ್‌ನ ಮೂಲಕ ಎಲ್ಲರಿಗೂ ರವಾನಿಸಿದ ಮೇಲೆ, ಅವನು ಒಂದು ಮಹಾಸಾಧನೆ ಮಾಡಿ ಮುಗಿಸಿದಂತಹ ನಿರಾಳವಾದ ಉಸಿರೆಳೆದ. ಎಲ್ಲರಿಗೂ ಕಳುಹಿಸಿದ ಮೇಲೂ ಅವನಲ್ಲಿ ಇನ್ನೂ ಮೂರು ಪ್ರತಿಗಳು ಮಿಕ್ಕಿದ್ದವು. ಅವುಗಳನ್ನು ಜಾಗ್ರತೆಯಾಗಿ ಮಡಚಿ ಕಿಸೆಯಲ್ಲಿಟ್ಟುಕೊಂಡು ಆಫೀಸಿಗೆ ಬಂದ.

ಏನು ಆಗದವನಂತೆ ತನ್ನ ಕೆಲಸದಲ್ಲಿ ತೊಡಗಿದ್ದ ವೇಣುಗೋಪಾಲನ ಬಳಿ ಯಾವುದೋ ಲೆಕ್ಕಪತ್ರ ಕೇಳಲು ಇನ್ನೊಬ್ಬ ವೇಣುಗೋಪಾಲ ಬಂದ. ಅವನಿಗೆ ಅದನ್ನು ತೋರಿಸುತ್ತಾ ನಿನ್ನ ದಿನಗಳು ಇನ್ನು ಮುಗಿಯುತ್ತಿವೆ ಎಂದುಕೊಂಡ. ಹಾಗೆ ಆ ಡಿವಿಜನಿನ ಮುಖ್ಯಸ್ಥ. ಅವನು ಪಟ್ಟಿಯಲ್ಲಿದ್ದ ಇನ್ನಿತರ ವಿಜ್ಞಾನಿಯರು ಕಂಡಾಗ ಕೂಡ ಹಾಗೇ ಅನಿಸಿತು. ವೇಣುಗೋಪಾಲನ ದೃಷ್ಟಿಯಲ್ಲಿ ಅವರೆಲ್ಲಾ ಆಗಲೇ ಕೆಲಸಗಳನ್ನು ಕಳೆದುಕೊಂಡು ಮುಂದೇನು ಮಾಡಬೇಕೆಂದು ತೋಚದಂತಹ ಆಯೋಮಯ ಸ್ಥಿತಿಯಲ್ಲಿದ್ದರು.

ಬದಿಗೆ ಕುಳಿತ ಕೆಳದರ್ಜೆಯ ಕಾರಕೂನ ಕಾಫಿಗೆ ಹೋಗುವ ಎಂದಾಗ ಟೇಬಲ್‌ನ ಮೇಲಿದ್ದ ಫೈಲುಗಳನ್ನು ತೆಗೆದಿರಿಸಿ ಅವನನ್ನು ಹಿಂಬಾಲಿಸಿದ.

ಮಾತುಗಾರ ಮತ್ತೆ ತಮ್ಮ ಡಿವಿಜನಿನ ಭ್ರಷ್ಟಾಚಾರದ ಮಾತುಗಳನ್ನೆತ್ತಿದಾಗ ಧರ್ಮಾಚಾರ್ಯನಂತೆ ಹೇಳಿದ ವೇಣುಗೋಪಾಲ್

“ಇಂತಹುದಲ್ಲ ಹೆಚ್ಚು ದಿನ ನಡೆಯುವುದಿಲ್ಲ. ಇಂದಲ್ಲ ನಾಳೆ ಇವರಿದರ ಫಲವನ್ನು ಅನುಭವಿಸುತ್ತಾರೆ. ಸತ್ಯಕ್ಕೆ ಜಯ ಸಿಕ್ಕೆ ಸಿಗುತ್ತದೆ. ಗಂಭೀರ ದನಿಯ ಅಂತಹ ಮಾತಿಗೆ ಚಕಿತನಾದವನಂತೆ ಕೇಳಿದ ಕಳದರ್ಜೆಯ ಕಾರಕೂನ.

“ಅಂದರೆ?”

ಒಂದು ಕ್ಷಣ ತನ್ನ ಕಿಸೆಯಲ್ಲಿರುವ ಕಾಗದಗಳನ್ನು ಇವನಿಗೆ ತೋರಿಸಲೆ ಎನಿಸಿತು. ವೇಣುಗೋಪಾಲನಿಗೆ. ಆ ಅನಿಸಿಕೆಯನ್ನು ತಡೆದು ಭವಿಷ್ಯ ಹೇಳುವಂತಹ ದನಿಯಲ್ಲಿ ಮಾತಾಡಿದ.

“ನೋಡುತ್ತಿರು, ಸಮಯ ಬಂದಾಗ ಎಲ್ಲಾ ತಾನೇ ಗೊತ್ತಾಗುತ್ತದೆ”

ಅವನ ಸಹೋದ್ಯೋಗಿ ಅದಕ್ಕೆ ಪ್ರತಿಕ್ರಿಯಿಸುವ ಮುನ್ನ ಬಾಲ್ಯಸ್ನೇಹಿತನ ಸ್ಕೂಟರ್ ಕ್ಯಾಂಟೀನಿನ ಆವರಣ ಪ್ರವೇಶಿಸುತ್ತಿರುವುದು ಕಾಣಿಸಿತು. ತಾನೀಗ ಬರುವುದಾಗಿ ಅವನಿಗೆ ಹೇಳಿ ಮಿತ್ರನ ಕಡೆ ನಡೆದ ವೇಣುಗೋಪಾಲ್.

ಅವರಿಬ್ಬರು ದೂರದ ಟೇಬಲ್‌ನೆದುರು ಕೂಡುತ್ತಿದ್ದಂತೆ ಕೇಳಿದ ಮಿತ್ರ.

“ಯಾಕೇ? ಏನಾಗಿದೆ? ಬಹಳ ಖುಷಿಯಲ್ಲಿದ್ದ ಹಾಗೆ ಕಾಣುತ್ತಿ!”

ಅದೇ ಮಾತಿಗಾಗಿ ಕಾದವನಂತೆ ಹೇಳಿದ ವೇಣುಗೋಪಾಲ್.

“ನೋಡುತ್ತಿರು ಈಗ ಎಲ್ಲರ ಆಟವೂ ಬಯಲಾಗುತ್ತದೆ. ಧೂರ್ತತನ ಹೆಚ್ಚು ದಿನ ನಡೆಯುವುದಿಲ್ಲ.”

ದಿಗ್‌ಭ್ರಾಂತಿಯ ಭಾವದಿಂದ ಅವನನ್ನೇ ನೋಡುತ್ತಾ ಕೇಳಿದ ಮಿತ್ರ

“ಏನು ಮಾಡಿದ್ದಿ?”

ಅದಕ್ಕೆ ಉತ್ತರವೆಂಬಂತೆ ತನ್ನ ಕಿಸೆಯಲ್ಲಿದ್ದ ಕಾಗದಗಳನ್ನು ಅವನಿಗೆ ಕೊಟ್ಟ. ಅದನ್ನು ಓದುತ್ತಾ ಹೋದಂತೆ ಅವನ ಮುಖದಲ್ಲಿ ವಿಚಿತ್ರ ಬದಲಾವಣೆಯಾಯಿತು. ಪೂರ್ತಿ ಓದುವುದು ಮುಗಿಸಿ ಅವನು ತಲೆಯೆತ್ತಿದಾಗ ಹೇಳಿದ ವೇಣುಗೋಪಾಲ್

“ಅವನ್ನು ನಾನಾಗಲೇ ಎಲ್ಲರಿಗೂ ರಿಜಿಸ್ಟರ್ಡ್ ಪೋಸ್ಟ್ ಮೂಲಕ ಕಳುಹಿಸಿಬಿಟ್ಟಿದ್ದೇನೆ”

ಅದನ್ನು ಕೇಳಿದ ಮಿತ್ರನ ಮುಖದಲ್ಲಿ ದಿಗಿಲು ಇನ್ನು ಹೆಚ್ಚಾದಂತೆ ಕಂಡಿತು. ಕಾಗದಗಳನ್ನು ಅವನಿಗೆ ಹಿಂತಿರುಗಿಸುತ್ತಾ ಕುರ್ಚಿಯಿಂದ ಎದ್ದು ಹೇಳಿದ.

“ಇಲ್ಲಿ ಬೇಡ ನಡಿ, ಇನ್ನೆಲ್ಲಾದರೂ ಹೋಗಿ ಮಾತಾಡುವ”

ಸ್ಕೂಟರ್ ಸ್ಟಾರ್ಟ್ ಆಗುತ್ತಿದ್ದಂತೆ ಹಿಂದೆ ಕುಳಿತ ವೇಣುಗೋಪಾಲ. ಸ್ವಲ್ಪ ದೂರ ಓಡಿದ ಅದು ನಿರ್ಜನವಾಗಿದ್ದ ಒಂದು ಸ್ಥಳದ ಬಳಿ ನಿಂತಿತು. ಗಾಡಿಯನ್ನು ಸ್ಟಾಂಡಿಗೆ ಎಳೆಯುತ್ತಲೇ ಆವರೆಗೆ ಅದುಮಿಟ್ಟ ಸಿಟ್ಟನ್ನೆಲ್ಲಾ ಕಾರುವಂತೆ ಮಾತಾಡಿದ ಮಿತ್ರ.

“ನಿನ್ನ ತಲೆ ಕೆಟ್ಟಿದೆಯೆ! ಹುಚ್ಚು ಹಿಡಿದಿದಯೆ! ಇದೇನು ಮಾಡಿದೆ”

“ಈ ಸಂಸ್ಥೆಯಿಂದ ಭ್ರಷ್ಟಾಚಾರ ತೊಲಗಿಸಲು ನನ್ನಿಂದ ಮಾಡಲು ಸಾಧ್ಯವಾದದ್ದನ್ನು ಮಾಡಿದ್ದೇನೆ. ಇನ್ನು ಯಾರ ಆಟವೂ ನಡೆಯುವುದಿಲ್ಲ.”

ನಿಖರವಾದ ದನಿಯಲ್ಲಿ ಹೇಳಿದ ವೇಣುಗೋಪಾಲ, ಅದರಿಂದ ಮಿತ್ರನ ಸಿಟ್ಟು ದ್ವಿಗುಣಿತವಾಯಿತು. ಅಂತಹುದೇ ದನಿಯಲ್ಲಿ ಹೇಳಿದ.

“ಇದರಿಂದ ಭ್ರಷ್ಟಾಚಾರ ತೊಲಗಿ ಎಲ್ಲರೂ ಒಮ್ಮೆಲೆ ನಿಜಾಯತಿ ಪರರಾಗುತ್ತಾರೆ ಎಂದುಕೊಂಡೆಯಾ!… ದಿನಾಗಲೂ ಪೇಪರ್ ಓದುತ್ತಿ. ಇದರಿಂದ ಏನೂ ಆಗುವುದಿಲ್ಲ. ನಿನ್ನ ನಾಶ ಮಾತ್ರ ಖಂಡಿತವೆಂಬುದು ಗೊತ್ತಾಗಲಿಲ್ಲವೇ”

“ಅದು ರಾಜಕಾರಣಿಗಳ, ರೌಡಿಗಳ ವಿಷಯ. ಇವರೆಲ್ಲಾ ವಿಜ್ಞಾನಿಯರು ತಮ್ಮ ಮೇಧಾಶಕ್ತಿಯಿಂದ ಸಮಾಜವನ್ನು ಉದ್ಧಾರ ಮಾಡುವವರು. ಇವರುಗಳು ಇಂತಹ ಹೇಯ ಕೃತ್ಯವನಸುಗತ್ತಾರೆಂಬುವುದು ನಾನ್ಯಾವ ಪತ್ರಿಕೆಯಲ್ಲೂ ಓದಿಲ್ಲ” ಅವನ ಮಾತಿಗೆ ಅರ್ಥವಿಲ್ಲವೆಂಬಂತೆ ಹೇಳಿದ ವೇಣುಗೋಪಾಲ.

“ರಾಜಕಾರಣಿಗಳಿಗೆ, ರೌಡಿಗಳಿಗೆ ಹೆಚ್ಚು ಬುದ್ಧಿ ಇರುವುದಿಲ್ಲ, ಇವರುಗಳು ಮೇಧಾವಿ…”

“ಮೇಧಾವಿಯರು ಭ್ರಷ್ಟಾಚಾರ…” ಮಿತ್ರ ಮಾತು ಮುಗಿಸುವ ಮುನ್ನವೇ ಮಾತು ಆರಂಭಿಸಿದ ವೇಣುಗೋಪಾಲ. ಅವನ ಮಾತನ್ನು ಅರ್ಧಕ್ಕೇ ತಡೆದು ಸಿಟ್ಟಿನಾತಿರೇಕದಲ್ಲಿ, ಕಿರುಚುವಂತಹ ದನಿಯಲ್ಲಿ ಮಾತಾಡಿದ ಮಿತ್ರ.

“ಅವರುಗಳು ಮನುಷ್ಯರಲ್ಲವೇ! ಅವರಿಗೆ ಇನ್ನೂ… ಇನ್ನೂ ಧನವಂತರಾಗುವ ಆಸೆ. ಇರುವುದಿಲ್ಲವೇ? ನೀನೀ ಘನಕಾರ್ಯ ಮಾಡಿ, ಏನು ಮಾಡಬಯಸ್ಸಿದ್ದಿ”

“ಕನಿಷ್ಠ… ಕನಿಷ್ಠ ಇಂತಹವರು ಭ್ರಷ್ಟಾಚಾರರಾಗಬಾರದು. ನಾ ಮಾಡಿದ ಕೆಲಸದಿಂದ ಇವರುಗಳಿಗೆ ಬುದ್ದಿ ಬರುತ್ತದೆ. ಎಚ್ಚರಗೊಳ್ಳುತ್ತಾರೆ” ತಾ ಮಾಡಿದ್ದು ಪರಿಣಾಮಕಾರಿಯಾಗುತ್ತದೆ ಎಂಬ ವಿಶ್ವಾಸವಿತ್ತು ವೇಣುಗೋಪಾಲನ ಮಾತಿನಲ್ಲಿ.

ನಿಸ್ಸಹಾಯತೆ, ಸಿಟ್ಟಿನ ಮಿಳಿತಭಾವದಿಂದ ಅವನನ್ನ ಹಲವು ಕ್ಷಣಗಳು ದುರುಗುಟ್ಟಿ ಹೇಳಿದ ಮಿತ್ರ.

“ಎಷ್ಟು ವರ್ಷದಿಂದ ಇಲ್ಲಿ ಕೆಲಸ ಮಾಡುತ್ತಿದ್ದಿ. ಇದೆಲ್ಲಾ ನಿನಗೆ ಈಗಲೇ ತಿಳಿಯಿತೆ…”

“ಹೌದು ಈಗಲೇ ತಿಳಿದದ್ದು. ಇಷ್ಟು ದಿನ ಮೇಧಾವಿಯರು ಇಂತಹ ಹೇಯ ಕೆಲಸ ಮಾಡಬಹುದೆಂಬುವುದು ನನ್ನ ಊಹೆಗೂ ಮೀರಿದ ವಿಷಯವಾಗಿತ್ತು” ಅವನ ಸಿಟ್ಟಿನ ಮಾತು ಪೂರ್ತಿಗೊಳ್ಳುವ ಮುನ್ನ ಹೇಳಿದ ವೇಣುಗೋಪಾಲ.

“ನೀ ಮಾಡಿದ ಈ ಅತಿಬುದ್ಧಿವಂತಿಕೆಯ ಕೆಲಸದಿಂದ ಏನೂ ಆಗುವುದಿಲ್ಲ. ನೀನೆ ನಾಶವಾಗಿಹೋಗುತ್ತಿ ಅಷ್ಟೆ….”

“ಅದೇ ನಿನ್ನ ತಪ್ಪು ಗ್ರಹಿಕೆ. ಕೇಂದ್ರದಿಂದ ಎಲ್ಲಾ ಸಂಸ್ಥೆಗಳವರು ಲೆಕ್ಕಪತ್ರಗಳ ಪರಿಶೀಲನೆಗೆ ಬರುತ್ತಾರೆ. ಕೋಟಿಗಟ್ಟಲೆ ಅವರು ಹಣ ಮಂಜೂರು ಮಾಡಿದ್ದು ವಿಜ್ಞಾನಿಯರು ಇನ್ನು ಶ್ರೀಮಂತರಾಗರೆಂದಲ್ಲ. ಆಂಟಿಕರಷನ್… ಇನ್‌ಕಮ್‌ಟ್ಯಾಕ್ಸ್ ದಳದವರೂ ಬರಬಹುದು. ಆಗ ಇವರ ಬಣ್ಣವೆಲ್ಲಾ ಬದಲಾಗುವುದು ಖಂಡಿತ” ಮತ್ತೆ ಅವನಿಗೆ ಮಾತು ಪೂರ್ತಿ ಮಾಡುವ ಅವಕಾಶ ಕೊಡದೇ ದೃಢವಾದ ದನಿಯಲ್ಲಿ ಹೇಳಿದ ವೇಣುಗೋಪಾಲ್. ಮಿತ್ರನ ಕೋಪ ಈವರೆಗೆ ಸಾಕಷ್ಟು ಇಳಿದಿತ್ತು. ಅನುಕಂಪದಿಂದ ಅವನನ್ನೇ ನೋಡುತ್ತಾ ಮಾತಾಡಿದ.

“ನೀ ಹೇಳಿದ ಹಾಗೆ ಕೇಂದ್ರದಿಂದ ಹಣ ಕೊಟ್ಟ ಎಲ್ಲ ಸಂಸ್ಥೆಯವರೂ ಬರುತ್ತಾರೆ ನಮ್ಮವರು ಅವರಿಗೆ, ನಮ್ಮದೇ ಗೆಸ್ಟ್ ಹೌಸಿನಲ್ಲಿ ಸಕಲಸವಲತ್ತುಗಳನ್ನೂ ಒದಗಿಸುತ್ತಾರೆ. ಇಷ್ಟಪಟ್ಟವನಿಗೆ ಇಷ್ಟಪಟ್ಟಂತಹ ಭೋಗ ಲಭಿಸುತ್ತದೆ. ಒಂದು ವಾರ ಮಜಾ ಮಾಡಿ ತಮ್ಮ ತಮ್ಮ ಜೇಬುಗಳನ್ನು ತಂಬಿಕೊಂಡು ನೀ ಕೊಟ್ಟ ದೂರಿಗೆ ಯಾವ ಆಧಾರವೂ ಇಲ್ಲವೆಂದು ಹೀಗೆ ದೂರು ಕೊಟ್ಟವನ ಮತಿಭ್ರಮಿಸಿದವನಿರಬೇಕೆಂಬ ವರದಿ ಬರೆದುಕೊಂಡು ಹೊರಟುಹೋಗುತ್ತಾರೆ. ನೀನು!… ದೂರು ಕೊಟ್ಟ ನೀನು ಬರೀ ಅಪಹಾಸ್ಯಕ್ಕೆ ಗುರಿಯಾಗುವುದಿಲ್ಲ. ಇಲ್ಲಿನ ಆಡಳಿತ ವರ್ಗ ನಿನ್ನ ಬದುಕನ್ನು ದುರ್ಭರಮಾಡಿಬಿಡುತ್ತದೆ. ನೀನು ಕೆಲಸ ಕಳೆದುಕೊಂಡರೂ, ಕಳೆದುಕೊಳ್ಳಬಹುದು. ನೀನು ಹಾಳಾಗುವುದಲ್ಲದೇ ಮಡದಿ, ಮಕ್ಕಳನ್ನೂ ಬೀದಿಗೆ ತರುತ್ತೀಯ… ಈ ಕಾಗದಗಳನ್ನು ಇನ್ನಾರಿಗಾದರೂ ತೋರಿಸಿದ್ದೀಯಾ?”

“ಇಲ್ಲ” ಎಂದ ವೇಣುಗೋಪಾಲ. ಅವನ ದನಿ ಮೊದಲಿನಂತಿರಲಿಲ್ಲ. ಮೊದಲಬಾರಿ ತನ್ನ ಮಿತ್ರ ಹೇಳುತ್ತಿರುವುದು ನಿಜವಾಗಬಹುದೇ ಎಂಬ ಯೋಚನೆ ಸುಳಿಯಿತವನ ಮೆದುಳಿನಲ್ಲಿ. ಮಡದಿ, ಮಕ್ಕಳ ಭವಿಷ್ಯ ನೆನೆದು ನಡುಗುವಂತಾಯಿತು. ಅವನ ಮುಖಭಾವ ಕಂಡು ಹೆಗಲ ಮೇಲೆ ಕೈಹಾಕಿ ಮಾತಾಡಿದ ಸ್ನೇಹಿತ

“ಇದರ ಬಗ್ಗೆ ಯಾರೊಡನೆಯೂ ಮಾತಾಡಬೇಡ. ಮಾಡಿದ್ದೇನೋ ಮಾಡಿಬಿಟ್ಟಿದ್ದಿ, ಇನ್ನು ನೀನಾಕಾಗದಗಳನ್ನು ಸುಟ್ಟು ಹಾಕು! ನಾನೇನು ಮಾಡಬಹುದೋ ನೋಡುತ್ತೇನೆ”

“ಅಂದರೆ ಈ ಭ್ರಷ್ಟರಿಗೆ ಶಿಕ್ಷೆಯಾಗುವುದಿಲ್ಲವೆನ್ನುತ್ತೀಯಾ?” ಅಪನಂಬಿಕೆಯ ದನಿಯಲ್ಲಿ ಕೇಳಿದ ವೇಣುಗೋಪಾಲ. ಮೊದಲ ಬಾರಿ ತಾನು ಮಾಡಿದ್ದು ತಪ್ಪೇನೋ ಎಂಬ ಅನಿಸಿಕೆ ಹುಟ್ಟಿ ಮಾಯವಾಯಿತು ಅವನಲ್ಲಿ.

“ಇಡೀ ದೇಶವೇ ಭ್ರಷ್ಟರದು! ಅಂತಹುದರಲ್ಲಿ ಒಬ್ಬ ಭ್ರಷ್ಟ ಇನ್ನೊಬ್ಬ ಭ್ರಷ್ಟನಿಗೆ ಶಿಕ್ಷೆ ಕೊಡುವ ಧೈರ್ಯ ಮಾಡುತ್ತಾನೆಯೇ!… ಹಾಗೆ ನೋಡಿದರೆ ನೀನೇ ಅಪರಾಧಿ! ಎಲ್ಲರಂತೆ ಬದುಕುವುದು ಕಲೆತಿಲ್ಲ. ನಡಿ… ಏನೋ ಆಗುವುದಿಲ್ಲ… ಮುಂದೇನಾಗುತ್ತದೆಯೋ ಅದನ್ನು ನಾನು ನೋಡಿಕೊಳ್ಳುತ್ತೇನೆ ನಡಿ”

ತನ್ನದೇ ಯೋಚನೆಯಲ್ಲಿ ಸ್ಕೂಟರಿನ ಹಿಂದೆ ಕುಳಿತ ವೇಣುಗೋಪಾಲ. ಕ್ಯಾಂಟೀನಿನಲ್ಲಿ ಕೆಳದರ್ಜೆಯ ಕಾರಕೂನ ಕಾಣಲಿಲ್ಲ. ಕಾದು ಕಾದು ಬೇಸತ್ತು ಅವನು ಹೊರಟುಹೋಗಿರಬಹುದೆಂದುಕೊಳ್ಳುತ್ತಾ ತನ್ನ ಕಾರ್ಯಾಲಯಕ್ಕೆ ನಡೆದ ವೇಣುಗೋಪಾಲ. ಅಲ್ಲಿ ಅವನಿಗಾಗಿ ಯಾವ ಕೆಲಸವೂ ಕಂಡುಬರಲಿಲ್ಲ. ಐದು ಗಂಟೆಯವರೆಗೆ ಸಮಯ ತಳ್ಳಿ ಮನೆಯ ದಾರಿ ಹಿಡಿದ. ಈಗಲೂ ಬೇರೆ ತರಹದ ಯೋಚನೆಗಳ ಕಾರಣ, ತಾನು ಮನೆಗೆ ಹೇಗೆ ಸೇರಿದನೆಂಬ ಅರಿವು ಅವನಿಗಿರಲಿಲ್ಲ.

ಮೈಮನಗಳನ್ನೆಲ್ಲಾ ತುಂಬಿದ ಒಂದು ತರಹದ ಉಲ್ಬಣ ನಂದಿ ಮತ್ತೊಂದು ಬಗೆಯ ಯೋಚನೆ ಆರಂಭವಾಯಿತು. ಮೊದಲ ಬಾರಿ ನೋಡುತ್ತಿರುವವನಂತೆ ಮಡದಿ ಮಕ್ಕಳ ಕಡೆ ನೋಡಿದ ವೇಣುಗೋಪಾಲ. ಮನೆಯಲ್ಲಿ ಬಣ್ಣದ ಟಿ.ವಿ. ಇಲ್ಲದಿದ್ದರೂ ಅವರನ್ನೆಲ್ಲಾ ಸುಖವಾಗಿಯೇ ಬೆಳೆಸಿದ್ದ. ಕೆಲಸದಿಂದ ಬಂದಾಗ ಮನೆಯಲ್ಲಿ ಮಕ್ಕಳಿರದಿದ್ದರೆ ಅವನಿಗೆ ಬಹಳ ಮುಜುಗರವಾಗುತ್ತಿತ್ತು. ಅವರೆಲ್ಲಾದರೂ ಹೋಗುವುದಿದ್ದರೆ ಅವನಿಂದ ಅಪ್ಪಣಪಡದೇ ಹೋಗುತ್ತಿದ್ದರು. ಅವರಿಲ್ಲದ ಮನೆ, ಮನೆಯೋ ಅಲ್ಲವೇನೋ ಎಂಬಷ್ಟರ ಮಟ್ಟಿಗೆ ಅವರನ್ನು ಹಚ್ಚಿಕೊಂಡಿದ್ದನವ. ಅವನ ಮಡದಿಯನ್ನು ನೋಡಿದವರಾರೂ ಅವಳಿಗೆ ಹದಿನೆಂಟು ವರ್ಷದ ಮಗಳಿರಬಹುದೆಂಬುದನ್ನು ಊಹಿಸುವುದೂ ಕಷ್ಟ. ಇಲ್ಲದ ಆಸೆ ಆಕಾಂಕ್ಷೆಗಳಿಲ್ಲದೆ, ಅಸಾಧ್ಯವೆನಿಸುವಂತಹ ಕನಸುಗಳನ್ನು ಕಾಣುವ ಹೆಣ್ಣು ಅವಳಲ್ಲ. ಅದಕ್ಕೆ ತೃಪ್ತಿಯಿಂದ ತುಂಬಿತ್ತು ಮುಖ. ಮಿತ್ರ ಹೇಳಿದಂತೆ ಇವರುಗಳ ಯೋಚನೆ ಬಂದಾಗ ನಿರ್ದಯವಾಗಿ ಯಾರೋ ಹೃದಯವನ್ನು ಹಿಡಿದು ಕಿವುಚಿದಂತಾಯಿತು. ಬಹು ಕಷ್ಟಪಟ್ಟು ಅಂತಹ ಯೋಚನೆಗಳನ್ನು ದೂರತಳ್ಳಿದ ವೇಣುಗೋಪಾಲ. ಅವರೆಲ್ಲರ ನಡುವೆ ಕುಳಿತು ಮೊದಲಿನಂತೆ ನಗುತ್ತಾ ಕಾಫಿ ಕುಡಿಯತೊಡಗಿದ.

ಎಷ್ಟು ಅದುಮಲು ಪ್ರಯತ್ನಿಸಿದರೂ ಅವನಲ್ಲಿ ಹುಟ್ಟಿಕೊಂಡ ಭಯ ಅವನನ್ನು ಕಾಡುತ್ತಲೇ ಇತ್ತು. ಒಮ್ಮೆಲೆ ಬದಲಾದ ಅವನ ವರ್ತನೆ ಮಡದಿ, ಮಕ್ಕಳಿಗೆ ಅರ್ಥವಾಗಲಿಲ್ಲ. ಮೊದಲಿನ ದಿನಗಳಂತೆ ಎಲ್ಲರೂ ಊಟ ಮಾಡಿ, ತಮ್ಮ ತಮ್ಮ ಓದುಗಳು ಮುಗಿಸಿ ಮಲಗಿದರು.

ಈ ರಾತ್ರಿಯಂತೂ ವೇಣುಗೋಪಾಲನಿಗೆ ನಿದ್ದೆ ಹತ್ತಲು ಇನ್ನೂ ಹೆಚ್ಚು ಸಮಯ ಹಿಡಿಯಿತು. ಅದಕ್ಕೀಗ ಕಾರಣ ಭಯ, ತನ್ನ ಮಿತ್ರನೇ ಅಂದಂತೆ ಕೆಲಸ ಎಲ್ಲಿ ಹೋಗುತ್ತದೋ ಎಂಬ ಭಯ! ಭಾವೋದ್ವೇಗದ ಭರದಲ್ಲಿ ಅವನು ಮೊದಲು ಆ ದಿಕ್ಕಿನಲ್ಲಿ ಯೋಚಿಸಲು ಯತ್ನಿಸಿರಲಿಲ್ಲ. ಒಂದು ವೇಳೆ ಆಗದ್ದು ಆದಲ್ಲಿ ಮುಂದೇನು ಎಂಬ ದ್ವಂದ್ವ, ತರ್ಕ, ಚಿಂತನೆಗಳು ಆರಂಭವಾದವು.

ತಾನು ಮಾಡಿದ್ದು ತಪ್ಪೆ? ದೇಶದ ಮಾದರಿಯಾಗಿರಬೇಕಾದ ಬುದ್ದಿಜೀವಿಯರು, ವಿಜ್ಞಾನಿಯರು, ಹೆಸರು ಮಾಡಿದ ಸಾಹಿತಿಯರು, ಹೀಗೆ ಭ್ರಷ್ಟರಾಗುತ್ತಾ ಹೋದರೆ, ದೇಶ ನಾಶವಾಗಿ ಹೋದಂತೆಯೇ. ಇಂತಹವರಿಗೆ ರಾಜಕೀಯ ಅನ್ಯಾಯದ ಅಪರಾಧಿಗಳು ರಾಜಕಾರಣಿಗಳಾಗುತ್ತಿರುವುದರ ಬಗ್ಗೆ ಟೀಕಿಸಲು ನೈತಿಕ ಅಧಿಕಾರವಿರುತ್ತದೆಯೆ! ಹಾಗೆ ನೋಡಿದರೆ, ಭೂಗತದೊರೆಗಳಿಗಿಂತ, ರಾಜಕಾರಣಿಗಳಿಗಿಂತ ಹೆಚ್ಚು ನೀಚರು ಇವರೇ! ವಿಜ್ಞಾನಿ ಅಬ್ದುಲ್ ಕಲಾಮ್‌ರಂತಿರುವವರು ಲಕ್ಷಕ್ಕೊಬ್ಬರಿರಬಹುದು. ಇಂತಹ ಈ ನೀಚ ಭ್ರಷ್ಟಚಾರವನ್ನು ಬಯಲು ಮಾಡುವುದು ಅಪರಾಧವೆ?

ಅರೆಕತ್ತಲಲ್ಲಿ ವೇಣುಗೋಪಾಲನ ತಳಮಳ ಗಮನಿಸುತ್ತಿದ್ದ ಮಡದಿಗೂ ನಿದ್ದೆ ಹತ್ತಿರಲಿಲ್ಲ. ಅಂಜುತ್ತಲೇ ಕೇಳಿದಳು.

“ಏನು ಯೋಚಿಸುತ್ತಿದ್ದೀರಿ?”

ಅವಳ ಕಡೆ ತಿರುಗಿ ಅಕ್ಕರೆಯಿಂದ ತಲೆಯ ಮೇಲೆ ಕೈಯಾಡಿಸಿದ ವೇಣುಗೋಪಾಲ. ಹಾಗವನು ಮಾಡಿ ಎಷ್ಟು ದಿನಗಳಾಗಿತ್ತೆಂಬ ನೆನಹು ಇಬ್ಬರಿಗೂ ಇಲ್ಲ.

“ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದೆ!”

ಅವನ ದನಿಯಲ್ಲಿ ಎಲ್ಲೋ ಒಂದು ತರಹದ ನೋವು ಇದ್ದಂತೆ ಕಂಡುಬರುತ್ತಿತ್ತು.

“ಯೋಚಿಸುವುದೇನಿದೆ ಇಬ್ಬರೂ ಚೆನ್ನಾಗಿಯೇ ಓದುತ್ತಿದ್ದಾರೆ. ಅವನಿಗೆ ಸಮಾಧಾನ ಪಡಿಸುವಂತಹ ದನಿಯಲ್ಲಿ ಮಾತಾಡಿದ ಮಡದಿ, ಇನ್ನೂ ಹತ್ತಿರ ಸರಿದಳು. ತನ್ನ ಮನದ ಗೊಂದಲ ಭಯಗಳು ಅವಳಿಗೆ ತಿಳಿಯಬಾರದೆಂದು ತಲೆಯಿಂದ ಬೆನ್ನಿಗೆ ಕೈಯನ್ನು ತಂದು ನಯವಾಗಿ ಸವರುತ್ತಾ ಹೇಳಿದ.

“ಮುಂದೆ ಏನಾಗುತ್ತದೋ ಹೇಳುವುದು ಕಷ್ಟ! ಈಗಿನಿಂದಲೇ ಎಲ್ಲಾ ಯೋಚಿಸಿ ಅವಳ ಮದುವೆಗೆ ಬೇಕಾಗುವ ಹಣವನ್ನು ಕೂಡಿ ಹಾಕುವುದು ಆರಂಭಿಸಬೇಕು”

“ಈಗಿನ್ನು ಅವಳು ಹದಿನೆಂಟರಲ್ಲಿ ಅಡಿ ಇಟ್ಟಿದ್ದಾಳೆ. ಇನ್ನೂ ನಾಲೈದು ವರ್ಷಗಳು ಕಾಯಬಹುದು. ಆವರೆಗೆ ಮದುವೆಗೆ ಬೇಕಾದ ಹಣ ಕೂಡಿಹಾಕುವುದು ಕಷ್ಟವೇ?”

ಹತ್ತಿರ ಸರಿದ ಅವಳನ್ನು ಅಪ್ಪಿ ಹೇಳಿದ ವೇಣುಗೋಪಾಲ,

“ನಾವು ಮಾಡುವನ್ನು ಮಾಡಬೇಕು. ದೇವರು ಅವರ ಹಣೆಬರಹದಲ್ಲಿ ಹೇಗೆ ಬರೆದಿದ್ದಾನೋ ಹಾಗಾಗುತ್ತದೆ”

“ಅದೇನೋ ನಿಜ” ಎಂದ ಅವಳು ಅವನ ಅಪ್ಪುಗೆಗೆ ಪ್ರತಿಕ್ರಿಯಿಸಿದಳು. ವೇಣುಗೋಪಾಲ ಆರಾತ್ರಿ ತನ್ನ ಭಯಾ, ಅಂದೋಲನಗಳಿಂದ, ಆತಂಕದಿಂದ ಮುಕ್ತನಾಗಲು ಅವಳನ್ನು ಕೂಡಿಕೊಂಡ. ಹಾಗವರು ಇದಕ್ಕೆ ಮೊದಲು ಕೂಡಿ ಎಷ್ಟು ದಿನಗಳಾಗಿದ್ದವೆಂಬುವುದು ಇಬ್ಬರಿಗೂ ನೆನಪಿರಲಿಲ್ಲ.

ದೇಹದ ನರನಾಡಿಗಳ ಬಿಗಿತ ಸಂತಸಾತಿರೇಕಕ್ಕೇರಿ ಇಳಿಯತೊಡಗಿದಾಗ ಹಾಗೇ ಯಾವ ಮಾತೂ ಇಲ್ಲದೇ ಇಬ್ಬರ ಅಪ್ಪುಗೆಯಲ್ಲೊಬ್ಬರು ಬಹಳ ಹೊತ್ತು ಮಲಗಿದ್ದರು. ವೇಣುಗೋಪಾಲ ದೂರಸರಿದಾಗ ಬಚ್ಚಲಿಗೆ ಹೋಗಿಬಂದ. ಅವನ ಮಡದಿ ಮಲಗಿದ್ದಳು. ಬೆಳಗಿನಿಂದ ಕೆಲಸ ಮಾಡಿ ದಣಿದ ಕಾರಣ ಬಹುಕಾಲದ ಬಳಿಕ ನರನಾಡಿಗಳ ಬಿಗಿತ ಇಳಿದ ಕಾರಣ ಅವಳಿಗೆ ಬೇಗ ನಿದ್ದೆ ಹತ್ತಿತ್ತು. ಆದರೆ ವೇಣುಗೋಪಾಲನಿಗೆ ಯೋಚನೆಗಳಿಂದ ಮುಕ್ತಿ ದೊರೆಯಲಿಲ್ಲ.

ತಾನು ಸರಿಯೆನಿಸಿದ್ದು ಮಾಡಿಯಾಗಿದೆ. ಅದರ ಬಗ್ಗೆ ಈಗ ತಾನೇನು ಮಾಡುವಂತಿಲ್ಲ. ಮುಂದೆ ಎಂತಹ ಪರಿಸ್ಥಿತಿ ಬರಲಿ ಅದನ್ನು ಎದುರಿಸಲು ತಾನು ಸಿದ್ಧನಾಗಿರಬೇಕು. ತಾನು ಮಾಡುತ್ತಿರುವುದು ಕೇಂದ್ರ ಸರಕಾರದ ಕೆಲಸ. ಸುಮ್ಮಸುಮ್ಮನೆ ತನ್ನನ್ನು ಕೆಲಸದಿಂದ ತೆಗೆದುಹಾಕಲು ಸಾಧ್ಯವಿಲ್ಲ. ಇದು ಸ್ವತಂತ್ರ ದೇಶ, ಹಾಗೇನಾದರೂ ಆದರೆ ನ್ಯಾಯಾಲಯಗಳು ಇದ್ದೇ ಇವೆ. ಅದರಲ್ಲೂ ತಾನೂ ವಿಫಲನಾದರೆ, ಮುಂದಿನ ಬದುಕಿನ ದಾರಿಯನ್ನು ಹುಡುಕಿಕೊಳ್ಳಬೇಕು. ಮೊದಮೊದಲು ಅದು ಕಷ್ಟವಾಗಬಹುದು ನಂತರ ಎಲ್ಲಾ ಅಭ್ಯಾಸವಾಗಿ ಹೋಗುತ್ತದೆ ಎಂಬ ನಿರ್ಣಯಕ್ಕೆ ಬಂದ ಮೇಲೆ ನಿದ್ದೆ ಅವನ ಹತ್ತಿರ ಸರಿಯತೊಡಗಿತು.

ಮುಂದಿನ ಎರಡು ದಿನಗಳು ಯಾವ ತರಹದ ಬದಲಾವಣೆಯೂ ಇಲ್ಲದೇ ಮೊದಲಿನಂತೆಯೇ ಯಾಂತ್ರಿಕವಾಗಿ ಕಳೆದುಹೋದವು. ಮೂರನೆಯ ದಿನದ ಮಧ್ಯಾಹ್ನದಿಂದ ವಿಜ್ಞಾನಿಯರ ಇತರ ಸಿಬ್ಬಂದಿಯವರ ವಿಚಿತ್ರ ನೋಟಗಳು ಅವನ ಮೇಲೆ ಬೀಳಲು ಆರಂಭವಾದವು. ಕೆಳದರ್ಜೆಯ ಕೆಲಸದವರೂ ಅವನೊಡನೆ ಮಾತಾಡಲು ಹತ್ತಿರ ಬರಲು ಅಂಜುತ್ತಿರುವಂತೆ ಭಾಸವಾಯಿತು. ತಾ ಕೊಟ್ಟ ದೂರಿನ ವಿಷಯ ಹಬ್ಬಿದಂತೆ ಕಾಣುತ್ತದೆ ಎಂದುಕೊಂಡ ವೇಣುಗೋಪಾಲನಲ್ಲಿ ಮುಂದೇನಾಗುವುದೋ ಆತಂಕ ಆರಂಭವಾಯಿತು. ಯಾವ ತರಹದ ಅಳಕೂ ಇಲ್ಲದೇ ಅವನೊಡನೆ ವರ್ತಿಸುತ್ತಿದ್ದವನೆಂದರೆ ಬದಿಯ ಸೀಟಿನ ಕೆಳದರ್ಜೆಯ ಕಾರಕೂನ.

ನಾಲ್ಕು ಗಂಟೆಯ ಸಮಯದಲ್ಲಿ ಅವನ ಬಳಿ ಬಂದ ಇನ್ನೊಬ್ಬ ವೇಣುಗೋಪಾಲ ತನ್ನ ಸಂಬಳದ ವಿವರ ನೋಡಬೇಕೆಂದ. ಅಲಾಮಾರಾದಲ್ಲಿನ ರಿಜಿಸ್ಟರ್ ತೆಗೆದು ಅದನ್ನವನಿಗೆ ತೋರಿಸುತ್ತಿದ್ದಾಗ ಇಲ್ಲದ ತಪ್ಪುಗಳನ್ನು ತೋರಿಸುತ್ತಾ ಎತ್ತರದ ದನಿಯಲ್ಲಿ ಮಾತಾಡತೊಡಗಿದ. ಇದು ತಾ ಕೊಟ್ಟ ದೂರಿನ ಪರಿಣಾಮವೇ ಇರಬಹುದು. ಆಗಲೇ ಇದರ ಶಾಖ ಇವನಿಗೂ ತಾಕಿದೆ ಎಂದುಕೊಂಡ ವೇಣುಗೋಪಾಲ. ತಾನು ಆವೇಶದ ದನಿಯಲ್ಲಿ ಮಾತಾಡಲಾರಂಭಿಸಿದ. ಮಾತಿಗೆ ಮಾತು ಬೆಳೆಯಿತು. ಇನ್ನೊಬ್ಬ ವೇಣುಗೋಪಾಲ ಅಶ್ಲೀಲ ಭಾಷೆ ಉಪಯೋಗಿಸಿದಾಗ ವೇಣುಗೋಪಾಲನಿಗೆ ಸಿಟ್ಟು ತಡೆಯಲಾಗಲಿಲ್ಲ. ಕುರ್ಚಿಯಿಂದ ಎದ್ದ ಅವನು ಎತ್ತರದ ದನಿಯಲ್ಲಿ ಇನ್ನೊಬ್ಬ ವೇಣುಗೋಪಾಲ ಭ್ರಷ್ಟಾಚಾರದಿಂದ ಸಂಪಾದಿಸಿದ ಹಣದ ವಿವರಣೆ ಕೊಡತೊಡಗಿದ. ಆಗ ಬಾಯಿ ಮಾತಿನೊಡನೆ ಇಬ್ಬರ ಕೈಕಾಲುಗಳೂ ಆಡತೊಡಗಿದವು. ಆ ತಮಾಷೆಯನ್ನು ನೋಡಲು ಆ ಡಿವಿಜನಿನವರೆಲ್ಲಾ ಅಲ್ಲಿ ಸೇರಿದ್ದರು. ಕೊನೆಗೆ ಅಲ್ಲಿಯ ಮುಖ್ಯಸ್ಥ ತಾನೆ ನಡುವೆ ಬಂದು ಅವರ ಜಗಳ ಪರಿಹರಿಸಿದ. ಬುಸುಗುಟ್ಟುತ್ತಲೇ ತನ್ನ ಸ್ಥಾನಕ್ಕೆ ಹೋದ ಇನ್ನೊಬ್ಬ ವೇಣುಗೋಪಾಲ.

ಹದಿನೈದು ನಿಮಿಷದಲ್ಲಿ ನಡೆದು ಹೋದ ಆ ಘಟನೆ ವೇಣುಗೋಪಾಲನ ಮನವನ್ನು ಕದಡಿ ಬಿಟ್ಟಿತ್ತು. ಎಲ್ಲರೂ ಅವನನ್ನು ಒಂದು ತಮಾಷೆಯ ವಸ್ತುವನ್ನು ನೋಡುವ ಹಾಗೆ ಬಂದು ನೋಡಿ ಹೋಗುತ್ತಿದ್ದರು. ಇನ್ನು ತನಗಲ್ಲಿರಲು ಸಾಧ್ಯವಿಲ್ಲ ಎಂದು ನಿರ್ಣಯಿಸಿದ ವೇಣುಗೋಪಾಲ ಮುಖ್ಯಸ್ಥನ ಅನುಮತಿ ಪಡೆದು ಮನೆಗೆ ಬಂದು ಬಿಟ್ಟ.

ಆ ಘಟನೆ ಅವನನ್ನು ಬಹಳವಾಗಿ ಕದಡಿಬಿಟ್ಟಿದ್ದರೂ ತಾ ಕೊಟ್ಟ ದೂರು ಪರಿಣಾಮ ತೋರಿಸಲಾರಂಭಿಸಿದೆ ಎಂಬ ಸಮಾಧಾನವಾಯಿತು ವೇಣುಗೋಪಾಲನಿಗೆ. ತನ್ನ ಈವರೆಗಿನ ಬದುಕಿನಲ್ಲಿ ಆದ ಅಂತಹ ಮೊದಲ ಘಟನೆಯನ್ನು ಮರೆಯಲು ಆಲೋಚನೆಗಳಿಂದ ದೂರವಿರಲು ಮನೆಯವರೊಡನೆ ಮೊದಲಿಗಿಂತ ಹೆಚ್ಚಿನ ಲವಲವಿಕೆಯಲ್ಲಿ ಸಮಯ ಕಳೆದ.

ಮರುದಿನ ಆಫೀಸಿಗೆ ಹೋದಾಗ ಅವನನ್ನು ಸಸ್ಪೆಂಡ್ ಮಾಡಿದ ಆರ್ಡರ್ ಅವನ ದಾರಿ ಕಾಯುತ್ತಿತ್ತು. ಆಫೀಸಿನಲ್ಲಿ ಅಶ್ಲೀಲ ಭಾಷೆ ಉಪಯೋಗಿಸುತ್ತಾ ವೇಣುಗೋಪಾಲ ಎಂಬ ಹಿರಿಯ ಕಾರಕೂನನನ್ನು ಹೊಡೆದ ಕಾರಣ ಅವನನ್ನು ಸಸ್ಪೆಂಡ್ ಮಾಡಲಾಗಿತ್ತು. ಯಾವ ಭಾವೋದ್ವೇಗವೂ ಇಲ್ಲದೆ ಆ ಕಾಗದವನ್ನು ತೆಗೆದುಕೊಂಡ ವೇಣುಗೋಪಾಲ ತಡೆಯಲಾಗದ ಇನ್ನೊಬ್ಬ ವೇಣುಗೋಪಾಲನ ಸೀಟಿನ ಬಳಿಬಂದು ಬಹು ಮೆಲ್ಲನ ಹೇಳಿದ.

“ಕಾಯುತ್ತಿರು! ನೀನು ಕಂಬಿಗಳನ್ನು ಎಣಿಸುವ ದಿನಗಳು ಹತ್ತಿರವಾಗುತ್ತಿವೆ”

ತಲೆ ಎತ್ತಿದ ಅವನು ವೇಣುಗೋಪಾಲನ ಕಡೆ ನೋಡಿ ಗೆಲುವಿನ ಮುಗುಳ್ನಗೆ ನಕ್ಕ. ಆ ನಗೆಯ ಅರ್ಥವನ್ನು ಹುಡುಕುತ್ತಾ ಕ್ಯಾಂಟೀನಿಗೆ ಬಂದ. ಇನ್ನೂ ಕೆಳದರ್ಜೆಯ ಕಾರಕೂನ ಕಾರ್ಯಾಲಯಕ್ಕೆ ಬಂದಿರಲಿಲ್ಲ. ಒಬ್ಬನೇ ಕಾಫಿ ಕುಡಿಯುತ್ತಾ ಕುಳಿತ ಅವನು ಮುಂದೇನು ಮಾಡಬೇಕೆಂಬ ಚಿಂತನೆ ಆರಂಭಿಸಿದ. ಇನ್ನೊಬ್ಬ ವೇಣುಗೋಪಾಲನ ನಗೆ ಅವನಿಗೆ ಬಹಳಷ್ಟುನ್ನು ವಿವರಿಸಿತ್ತು. ಇದು ಬೇಕೆಂತಲೇ ತೆಗೆದ ಜಗಳ, ಆಡಳಿತ ವರ್ಗದವರು ತನ್ನ ಸಸ್ಪೆಂಡ್ ಮಾಡಲು ಉಪಯೋಗಿಸಿದ ವಿಧಾನ ಅಲ್ಲಿ ನೆರೆದ ಎಲ್ಲರೂ ತನ್ನ ವಿರುದ್ದವೇ ಸಾಕ್ಷಿ ಕೊಡುತ್ತಾರೆ. ಅವರಲ್ಲಿ ಹಲವರಿಗೆ ತನ್ನ ಸ್ಥಿತಿಯ ಬಗ್ಗೆ ಅನುಕಂಪವಿರಬಹುದು. ನಿಜವನ್ನೂ ಅವರು ಅರಿತಿರಬಹುದು. ಆದರೆ ಯಾರೂ ಡಿವಿಜನಿನ ಮುಖ್ಯಸ್ಥನ ಆಜ್ಞೆ ಮೀರುವಂತಿಲ್ಲ. ಅವರಿಗೆ ಬದುಕುವುದಿದೆ. ತಮ್ಮ ತಮ್ಮ ಸಂಸಾರಗಳ ಹೊಣೆ ಇದೆ. ಎಷ್ಟು ಕಾಲ ತನ್ನ ಸಸ್ಪೆನ್ಶನ್‌ನಲ್ಲಿ ಇರಿಸಬಹುದು? ಎಂದವನು ಯೋಚಿಸುತ್ತಿದ್ದಾಗ ಕೆಳದರ್ಜೆಯ ಮಾತುಗಾರ ಕಾರಕೂನ ಬಂದು ಅವನೆದುರು ಕುಳಿತ.

ವೇಣುಗೋಪಾಲನಿಗಾದ ಅನ್ಯಾಯದ ಬಗ್ಗೆ ಮಾತು ತೆಗೆದು ತನ್ನ ಸಿಟ್ಟನ್ನು ವ್ಯಕ್ತಪಡಿಸಿದ. ಅವನಿಗೂ ವೇಣುಗೋಪಾಲ ಸರಕಾರಕ್ಕೆ ಕೊಟ್ಟು ದೂರಿನ ಅರಿವಾಗಿತ್ತು. ಅವನ ಸಿಟ್ಟಿನ ಸಹಾನುಭೂತಿಯ ಮಾತು ಕೇಳಿದ ವೇಣುಗೋಪಾಲ ಪ್ರತಿಕ್ರಿಯಿಸಲು ಹೋದಾಗ ಆ ಮಾತುಗಳು ಇಲ್ಲಿ ಬೇಡವೆಂದು ಸಂಜೆ ತಾನವನ ಮನೆಗೆ ಬರುವುದಾಗಿ ಎಲ್ಲಾದರೂ ಕುಳಿತು ವಿವರವಾಗಿ ಮಾತಾಡಿ ಮುಂದೇನು ಮಾಡಬೇಕೆಂಬ ನಿರ್ಣಯ ತಗೆದುಕೊಳ್ಳೋಣ ಎಂದು ಸೂಚಿಸಿದ ಕೆಳದರ್ಜೆಯ ಕಾರಕೂನ, ಆವರೆಗೆ ವೇಣುಗೋಪಾಲ ನೊಡನೆ ಯಾರೂ ಮಾತಾಡಿರಲಿಲ್ಲ. ಇಂತಹುದರಲ್ಲಿ ತನ್ನ ಮನದ ಹಿಂಸೆ ಅರ್ಥ ಮಾಡಿಕೊಂಡ ಇವನೊಡನೆ ಮುಕ್ತವಾಗಿ ಮಾತಾಡಬಹುದೆನಿಸಿತು ವೇಣುಗೋಪಾಲನಿಗೆ. ಸಂಜೆ ಆಫೀಸು ಮುಗಿಯುತ್ತಲೇ ಬರುವುದಾಗಿ ಹೇಳಿದ ಕೆಳದರ್ಜೆಯ ಕಾರಕೂನ ಇನ್ನೊಂದು ಕಾಫಿಯಾದ ನಂತರ ಇಬ್ಬರೂ ಅಲ್ಲಿಂದ ಎದ್ದರು.

ಅಂತಹುದು ಆಗಬಹುದೆಂದು ಊಹಿಸದ ವೇಣುಗೋಪಾಲ ಕೆಲಗಂಟೆಗಳು ಗೊತ್ತುಗುರಿ ಇಲ್ಲದಂತೆ ಅಲೆದು ಈ ವಿಷಯವನ್ನು ಬೇರೆಯವರು ತನ್ನ ಮಡದಿ ಮಕ್ಕಳಿಗೆ ತಿಳಿಸುವ ಮುನ್ನ ತಾನೇ ಅದನ್ನು ಹೇಳಬೇಕೆಂಬ ನಿರ್ಣಯಕ್ಕೆ ಬಂದು ಮನೆಗೆ ಬಂದಾಗ ಮಧ್ಯಾಹ್ನ ಎರಡಾಗಿತ್ತು.

ಮಕ್ಕಳಿಬ್ಬರೂ ಶಾಲೆ ಕಾಲೇಜುಗಳಿಗೆ ಹೋಗಿದ್ದರು. ಎಂದು ಇಲ್ಲದೆ ಅಷ್ಟು ಬೇಗ ಬಂದ ವೇಣುಗೋಪಾಲನನ್ನು ನೋಡಿ ಆಶ್ಚರ್ಯವಾಯಿತು ಮಡದಿಗೆ ಅಪ್ಯಾಯತೆಯಿಂದ ಅವಳ ಕೊರಳಲ್ಲಿ ಕೈಹಾಕಿ ತನ್ನ ಹತ್ತಿರ ಕೂಡಿಸಿಕೊಂಡು ಅವಳು ಕೇಳುವ ಮುನ್ನ ಹೇಳಿದ

“ನನ್ನನ್ನು ಕೆಲಸದಿಂದ ಸಸ್ಪೆಂಡ್ ಮಾಡಿದ್ದಾರೆ”

“ಸಸ್ಪೆಂಡ್” ಎಂಬ ಪದವನ್ನು ಅರ್ಥ ಮಾಡಿಕೊಳ್ಳುವಷ್ಟು ಓದಿದ್ದಳು ಅವನ ಮಡದಿ. ಗಾಬರಿಯ ಕಾರಣ ಕೂಡಲೇ ಅವಳ ಬಾಯಿಗೆ ಮಾತು ಬರಲಿಲ್ಲ. ರಾತ್ರಿ ಅವನಾಡಿದ ಮಾತುಗಳು ನೆನಪಾಗಿ ಗಾಟು ಇನ್ನೂ ಹೆಚ್ಚಾಯಿತು. ಹಲವು ಕ್ಷಣಗಳು ಉರಳಿದ ನಂತರ ಅಪನಂಬಿಕೆಯ ದನಿಯಲ್ಲಿ ಕೇಳಿದಳು

“ಯಾಕೆ?”

“ನಿನ್ನೆ ಏನೋ ಜಗಳವಾಗಿತ್ತು… ನೀನಷ್ಟ್ಯಾಕೆ ಗಾಬರಿಯಾಗುತ್ತಿ? ಎಲ್ಲಾ ತಾನೆ ಸರಿಹೋಗುತ್ತದೆ.” ಅವಳಿಗೆ ಸಮಾಧಾನ ಹೇಳುವಂತಹ ದನಿಯಲ್ಲಿ ಮಾತಾಡಿದ ವೇಣುಗೋಪಾಲ.

“ಹಾಗಾದರೆ ನಿಮಗಿನ್ನು ಮುಂದೆ ಸಂಬಳ ಸಿಗುವುದಿಲ್ಲವೆ?” ಇನ್ನೂ ಗಾಬರಿಯ ದನಿಯಲ್ಲಿ ಕೇಳಿದಳವಳು. ವ್ಯಂಗ್ಯದ ನಗೆ ನಕ್ಕು ಹೇಳಿದ ವೇಣುಗೋಪಾಲ.

“ಹುಚ್ಚಿ ಈಗ ಮೊದಲಿಗಿಂತ ಹೆಚ್ಚು ಸಂಬಳ ಸಿಗುತ್ತದೆ. ಹೆಸರಿಗೆ ಮಾತ್ರ ಅರ್ಧ ಸಂಬಳ ಆದರೆ ಅದರಲ್ಲಿ ನಾ ತೆಗೆದುಕೊಂಡ ಯಾವ ಸಾಲದ ಕಂತೂ ಕಡಿತವಾಗುವುದಿಲ್ಲ”

ಅದು ತಾನು ನಂಬುವುದಿಲ್ಲವೆಂಬಂತಹ ಭಾವದಿಂದ ಮಡದಿ ಅವನ ಕಡೆ ನೋಡಿದಾಗ ಎಲ್ಲವನ್ನೂ ವಿವರಿಸಿದನವ ಹಾಗೇ ಸ್ವಲ್ಪ ಹೊತ್ತು ಮಾತು ಸಾಗಿದ ಮೇಲೆ ದಣಿದಂತಹ ದನಿಯಲ್ಲಿ ಹೇಳಿದ

“ನಾ ಸ್ವಲ್ಪ ಮಲಗುತ್ತೇನೆ. ನನಗಾಗಿ ಆರೇಳರ ನಡುವೆ ಒಬ್ಬರು ಬರುತ್ತಾರೆ. ಆಗ ಎಬ್ಬಿಸು”

ಯಾವುದೋ ಗುಂಗಿನಲ್ಲಿದ್ದ ಮಡದಿ ಅದಕ್ಕೆ ಹೂಂಗುಟ್ಟಿದಳು. ಮಂಚದ ಮೇಲೆ ಮಲಗಿದ ವೇಣುಗೋಪಾಲ ಎಲ್ಲಾ ಯೋಚನೆಗಳನ್ನು ದೂರತಳ್ಳಿ ನಿದ್ದೆಯನ್ನು ಆಹ್ವಾನಿಸುವ ಯತ್ನ ಆರಂಭಿಸಿದ. ಕೆಲವು ರಾತ್ರಿಗಳು ನಿದ್ದೆಗೆಟ್ಟಿದ್ದ ಅವನಿಗೆ ಈ ಸಲ ಅದಕ್ಕಾಗಿ ಹೆಚ್ಚು ಶ್ರಮವಹಿಸಬೇಕಾಗಿ ಬರಲಿಲ್ಲ.

ಯಾರೋ ಅಲುಗಿಸದಂತಾದಾಗ ಎಚ್ಚರವಾಯಿತು. ಇದು ರಾತ್ರಿಯೊ ಹಗಲೊ ತಾನು ಯಾವಾಗ ಮಲಗಿದ್ದನೆಂಬುವುದು ಅವನಿಗೆ ಗೊತ್ತಾಗಲು ಸ್ವಲ್ಪ ಸಮಯ ಹಿಡಿಯಿತು. ಅಷ್ಟು ಗಾಡನಿದ್ದೆ. ಮಂಚದ ಬದಿಯಲ್ಲಿ ಮಗಳು ನಿಂತಿದ್ದಳು.

ಕೆಳದರ್ಜೆಯ ಕಾರಕೂನ ಬಂದಿದ್ದ. ಆರುವರೆಯಾಗಿದ್ದರೂ ಆಗಲೇ ಸಾಕಷ್ಟು ಕತ್ತಲು ಆವರಿಸಿ ಬಿಟ್ಟಿತ್ತು. ಮುಖತೊಳೆದು ಬಟ್ಟೆ ಬದಲಿಸಿ ತನ್ನ ಆಫೀಸಿನ ಸಂಗಡಿಗನೊಡನೆ ಹೋಗುತ್ತಿರುವುದಾಗಿ ಆದಷ್ಟು ಬೇಗನೆ ಬಂದು ಬಿಡುವುದಾಗಿ ಹೇಳಿ ಮನೆಯಿಂದ ಹೊರಬಿದ್ದ.

ಎಲ್ಲಿ ಹೋಗಬೇಕು, ಎಲ್ಲಿ ಕುಳಿತು ಮಾತಾಡಬೇಕು. ಎಂದವರು ನಿರ್ಣಯಿಸಿರಲಿಲ್ಲ. ಮುಖ್ಯರಸ್ತೆ ಹತ್ತಿರವಾಗುತ್ತಿದ್ದಾಗ ಗುಂಡು ಹಾಕುತ್ತಾ ಮಾತಾಡೋಣವೇ? ಎಂದು ಮಾತುಗಾರ ಕೆಳದರ್ಜೆಯ ಕಾರಕೂನ ಕೇಳಿದಾಗ ಅದೇ ಸರಿ ಎನಿಸಿತು ವೇಣುಗೋಪಾಲನಿಗೆ ಅದಾದ ಮೇಲೆ ಯಾವ ಬಾರಿಗೆ ಹೋಗಬೇಕೆಂಬುದನ್ನು ನಿರ್ಣಯಿಸಲು ಅವರಿಗೆ ಹೆಚ್ಚು ಸಮಯ ಹಿಡಿಯಲಿಲ್ಲ.

ಸ್ವಲ್ಪ ಉಚ್ಚ ಮಟ್ಟದ್ದೆನಿಸಿಕೊಂಡ ಆ ಬಾರಿನಲ್ಲಿ ಜನರ ಹೆಚ್ಚುಗದ್ದಲವಿರಲಿಲ್ಲ. ಇದ್ದವರೂ ತಮ್ಮ ತಮ್ಮ ಟೇಬಲುಗಳೆದುರು ಕುಳಿತುಕುಡಿಯುತ್ತಾ ಮೇಲುದನಿಯಲ್ಲಿ ಮಾತಾಡಿಕೊಳ್ಳುತ್ತಿದ್ದರು. ದೂರದ ಒಂದು ಟೇಬಲಿನೆದುರು ಹೋಗಿ ಕುಳಿತರು ವೇಣುಗೋಪಾಲ ಮತ್ತವನ ಸಹೋದ್ಯೋಗಿ. ವಿಸ್ಕಿ ಇನ್ನೂ ಹೊಟ್ಟೆಗಿಳಿಯುವ ಮುನ್ನವೇ ಮಾತು ಆರಂಭಿಸಿದ ಮಾತುಗಾರ.

ವೇಣುಗೋಪಾಲನಿಗೆ ಆದದ್ದು ಘೋರ ಅನ್ಯಾಯವೆಂದು ಇದೆಲ್ಲಾ ಅಲ್ಲಿನ ಆಡಳಿತ ವರ್ಗದವರು ಮತ್ತು ಆ ಇನ್ನೊಬ್ಬ ವೇಣುಗೋಪಾಲ ಆಡಿದ ನಾಟಕವೆಂದು ಇದು ಅದರ ಪರಿಣಾಮವೆಂದು ಹೇಳಿದಾಗ ವೇಣುಗೋಪಾಲನಿಗೆ ಆಶ್ಚರ್ಯವಾಗಲಿಲ್ಲ. ಭಾವೋದ್ವೇಗದಲ್ಲಿ ತಾನು ಹುಚ್ಚನಂತೆ ವರ್ತಿಸಿದ್ದೇನೇನೊ ಎನಿಸುತ್ತಿತ್ತು. ಆದರೂ ಕೆದಕಿ ಕೆದಕಿ ಮಾತುಗಳನ್ನು ಕೇಳತೊಡಗಿದನವ.

ವಿಸ್ಕಿ ಗ್ಲಾಸುಗಳು ಅದರ ಜೊತೆಗೆ ಎಲ್ಲಾ ತಿಂಡಿಗಳು ಬಂದನಂತರ ಬಹುಕಾಲದಿಂದ ಬಾಯಾರಿದವನಂತೆ ಗ್ಲಾಸುಗಳಲ್ಲಿ ಪೇಯ ಸುರಿದ ಕೆಳದರ್ಜೆಯ ಮಾತುಗಾರ ಕಾರಕೂನ ವೇಣುಗೋಪಾಲನಿಗೆ ಅದರೆಲ್ಲದರ ಕಡೆ ಲಕ್ಷವಿರಲಿಲ್ಲ. ತನ್ನ ಭವಿಷ್ಯ ಮುಂದೆ ಯಾವ ತಿರುವು ತೆಗೆದುಕೊಳ್ಳುವುದಿದೆಯೋ ಎಂಬುವುದು ತಿಳಿದುಕೊಳ್ಳುವ ಕಾತುರ.

ಕುಡಿತದ ನಡುವೆ ಮಾತುಗಳು ಸಾಗಿದ್ದವು. ಮಾತುಗಾರ ಕಾರಕೂನ ಪ್ರತಿಮಾತಿನಲ್ಲೂ ವೇಣುಗೋಪಾಲನನ್ನು ಹೊಗಳುತ್ತಿದ್ದ. ಆ ಸಂಶೋಧನಾ ಕೇಂದ್ರದಲ್ಲಿ ಅವರಿಗೆ ಯಾರೂ ಅಂತಹ ಧೈರ್ಯ ಮಾಡಿಲ್ಲವೆಂದೂ, ಅದು ಹಿರಿಯ ವಿಜ್ಞಾನಿಯರನ್ನು, ಆಡಳಿತವರ್ಗದ ಲಂಚಕೋರ ಎಲ್ಲರನ್ನೂ ಭಯಭ್ರಾಂತರನ್ನಾಗಿ ಮಾಡಿಬಿಟ್ಟಿದೆ ಎಂದು ಹೇಳಿದಾಗ ವೇಣುಗೋಪಾಲನಲ್ಲಿ ಒಂದು ತರಹದ ಸಂತಸ ಹುಟ್ಟಿ, ತಾ ಮಾಡಿದ ಕೆಲಸ ಯಾವುದಾದರೂ ಫಲ ನೀಡೆ ನೀಡುತ್ತದೆ ಎನಿಸಿತು. ಆವರೆಗೆ ಅನುಭವಿಸಿದ ಹಿಂಸೆಯ ಕಾರಣ ಭಾವೋದ್ವೇಗದ ಕಾರಣ ಬಹುಕಡಿಮೆ ಮಾತಾಡುತ್ತಿದ್ದ ವೇಣುಗೋಪಾಲ ತನ್ನ ಮನದಲ್ಲಿದ್ದುದೆಲ್ಲವನ್ನು ತೋಡಿಕೊಂಡ. ಆ ಮಾತುಗಳನ್ನು ಕೇಳಿದ ಮಾತುಗಾರ ಕಾರಕೂನ ಬಹು ಉತ್ಸಾಹದ ದನಿಯಲ್ಲಿ ವೇಣುಗೋಪಾಲನಿಗೆ ಯಾರೂ ಏನು ಮಾಡಲೂ ಸಾಧ್ಯವಿಲ್ಲವೆಂದು ಕೇಂದ್ರದಿಂದ ಪರಿಶೀಲಕರು ಬಂದಮೇಲೆ ಎಲ್ಲರ ಆಟ ನಿಂತು ಹೋಗುವುದೆಂದು ಹೇಳಿದ.

ಮಾತು ಬೆಳೆಯುತ್ತಾ ಹೋದವು. ಅಂದು ಮೊದಲಬಾರಿಗೆ ಅನಿಯಮಿತವಾಗಿ ಕುಡಿಯುತ್ತಾ ಹೋದ ವೇಣುಗೋಪಾಲ ಸಮಯ ಸರಿಯುತ್ತಾಹೋದಹಾಗೆ ಅವನೇನು ಮಾತಾಡುತ್ತಿದ್ದಾನೆಂದು ಅರಿವು ಅವನಿಗಿರಲಿಲ್ಲ. ತನ್ನೆದುರು ಕುಳಿತ ಕಾರಕೂನ ಕುಡಿತ ಹೆಚ್ಚಾದಂತೆ ನಟಿಸುತ್ತಿದ್ದಾನೆ. ಅವನು ಒಂದು ಪೆಗ್‌ಗಿಂತ ಹೆಚ್ಚಾಗಿ ಕುಡಿದೇ ಇಲ್ಲವೆಂಬುವುದು ಕೂಡ ವೇಣುಗೋಪಾಲನಿಗೆ ಗೊತ್ತಾಗಲಿಲ್ಲ.

ಬಾರಿನ ಆಳು ಮತ್ತು ಕಾರಕೂನ ಇಬ್ಬರೂ ಕಲೆತು ವೇಣುಗೋಪಾಲನನ್ನು ಹೊರಕರೆತಂದು ಆಟೋದಲ್ಲಿ ಕೂಡಿಸಿದರು. ಕಾರಕೂನನ ಆಜ್ಞೆಯ ಮೇರೆಗೆ ಅದು ಸಂಶೋಧನಾಲಯದ ಕಡೆ ಸಾಗಿತು. ತಾನು ಮುಂದೇನು ಮಾಡಬೇಕೆಂಬುದನ್ನು ಚೆನ್ನಾಗಿ ಗೊತ್ತಿತ್ತು ಮಾತುಗಾರ ಕಾರಕೂನನಿಗೆ.

ಕೇಂದ್ರ ಸಂಶೋಧನಾಲಯದ ಬಹುದೊಡ್ಡ ಆವರಣದ ಒಂದು ಕಡೆ ಕೆಳದರ್ಜೆಯ ಕೆಲಸಗಾರರಿಗಾಗಿ ಕಟ್ಟಲಾದ ಮನೆಗಳು, ಆ ಮನೆಯಿಂದ ಸ್ವಲ್ಪ ದೂರದಲ್ಲಿ ನಿಂತಿತು ಆಟೋ. ಇಬ್ಬರು ಇಳಿದ ಮೇಲೆ ಆಟೋ ಚಾಲಕನಿಗೆ ಹಣ ಕೊಟ್ಟು ಕಳುಹಿಸಿಬಿಟ್ಟ ವೇಣುಗೋಪಾಲನನ್ನಲ್ಲಿ ಕರೆತಂದ ಕಾರಕೂನ. ಇಬ್ಬರೂ ದೂರದಲ್ಲಿದ್ದ ಮನೆಗಳ ಕಡೆ ನಡೆಯತೊಡಗಿದರು. ಮನೆಗಳ ಸಮೂಹಗಳಲ್ಲಿನ ಮೊದಲಿನದನ್ನು ಸಮೀಪಿಸುತ್ತಿದ್ದ ವೇಣುಗೋಪಾಲನನ್ನು ಬಿಟ್ಟು ಹಿಂದೆ ಹೊರಟು ಹೋದ ಕಾರಕೂನ. ತೂರಾಡುತ್ತಾ ದಿಕ್ಕುದಿಸೆ ತೋರದವನಂತೆ ಹೆಜ್ಜೆ ಹಾಕುತ್ತಿದ್ದ ವೇಣುಗೋಪಾಲ.

ರಾತ್ರಿ ಬಹಳವಾದುದರಿಂದ ಎಲ್ಲೆಡೆಯಲ್ಲಿ ಪ್ರಶಾಂತತೆ ತಾನಾಗಿಯೇ ಆಕ್ರಮಿಸಿತ್ತು. ವಿಜ್ಞಾನಿಯರು ವಾಸಿಸುವ ವಾಸಸ್ಥಳಗಳು ಅಲ್ಲಿಂದ ಸಾಕಷ್ಟು ದೂರದಲ್ಲಿದ್ದವು. ಅಲ್ಲಿಯೂ ಸೃಜನಶೀಲ ಗಂಭೀರ ಮೌನ.

ತೂರಾಡುತ್ತಾ ಒಂದು ಮನೆ ಎದುರು ಬಂದ ವೇಣುಗೋಪಾಲ ಇನ್ನು ನಡೆಯಲು ಸಾಧ್ಯವಾಗುವುದಿಲ್ಲವೆಂಬಂತ ಹತ್ತಿರದಲ್ಲೆ ಇದ್ದ ಗೋಡೆಯ ಮೇಲೆ ಕೈಹಾಕಿದ. ಆ ಕ್ಷಣಕ್ಕಾಗೇ ಕಾದಂತೆ ಹತ್ತಿರದ ಮನೆಯ ಬಾಗಿಲು ತೆಗೆದುಕೊಂಡಿತು. ಅದರಿಂದ ಒಬ್ಬ ಹೆಣ್ಣು ಗಂಡು ಮತ್ತೊಬ್ಬ ಹದಿನಾರು ವರ್ಷದ ಹುಡುಗಿ ಹೊರಬಂದರು. ವೇಣುಗೋಪಾಲನನ್ನು ನೋಡಿದ ಕೂಡಲೇ ಅವರ ಎತ್ತರದ ದನಿಯ ಕೂಗಾಟಗಳು ಆರಂಭವಾದವು. ಅದರ ಪ್ರತಿಕ್ರಿಯೆಯಾಗಿ ಎಂಬಂತೆ ಇನ್ನೆರಡು ಮನೆಯ ಬಾಗಿಲುಗಳು ತೆಗೆದುಕೊಂಡು ಇಬ್ಬರು ಯುವಕರು ಅಲ್ಲಿಗೆ ಮುನ್ನುಗ್ಗಿ ಬಂದರು. ಮೊದಲು ಬಾಗಿಲು ತಗೆದ ಮನೆಯಾತ ವೇಣುಗೋಪಾಲ ಕುಡಿದ ಅಮಲಿನಲ್ಲಿ ತನ್ನ ಮಗಳೊಡನೆ ಅಸಭ್ಯವಾಗಿ ವರ್ತಿಸಿದನೆಂದು ರೋಷ ತುಂಬಿದ ಎತ್ತರದ ದನಿಯಲ್ಲಿ ಹೇಳಿದ. ಅಷ್ಟು ಸಾಕಾಗಿತ್ತು ಆ ಇಬ್ಬರು ಯುವಕರಿಗೆ ತಮ್ಮ ಧೈರ್ಯ ಸಾಹಸಗಳ ಪ್ರಯೋಗವನ್ನು ಅವನ ಮೇಲೆ ಮಾಡಲಾರಂಭಿಸಿದರು. ಗದ್ದಲದ ಕಾರಣ ಅಲ್ಲಿ ಇನ್ನಿಷ್ಟೂ ಜನರಾದರು. ಅವರೆಲ್ಲರೂ ಗಂಡು, ಹೆಣ್ಣು ಎಂಬ ಭೇದವಿಲ್ಲದೇ ವೇಣುಗೋಪಾಲನ ಮೇಲೆ ತಮ್ಮ ಸಿಟ್ಟನ್ನು ಕಾರತೊಡಗಿದರು.

ಕುಡಿತದ ಅಮಲಿನಿಂದ ನಿಷ್ಕ್ರಿಯನಾದ ವೇಣುಗೋಪಾಲ ಯಾವುದಕ್ಕೂ ಪ್ರತಿಕ್ರಿಯಿಸುವ ಸ್ಥಿತಿಯಲ್ಲಿ, ಸರಿಯಾಗಿ ಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲ. ಹೊಡೆತಗಳ ನೋವಿನಿಂದಲೂ ದೂರವಿತ್ತವನ ಮೆದುಳು. ಗದ್ದಲ ಹೆಚ್ಚಾದಾಗ ದೂರದ ಮನೆಯ ಕೆಲ ವಿಜ್ಞಾನಿಯರು ಅಲ್ಲಿ ಬಂದರು. ಯಾರೋ ಪೊಲೀಸ್ ಸ್ಟೇಷನ್‌ಗೆ ಫೋನ್ ಮಾಡಿದರು. ನೋಡುನೋಡುತ್ತಿದ್ದಂತೆ ಪೊಲೀಸ್ ಜೀಪ್ ಬಂದು ವೇಣುಗೋಪಾಲನನ್ನು ಅದರಲ್ಲಿ ಕೂಡಿಹಾಕಿಕೊಂಡು ಪೊಲೀಸ್ ಸ್ಟೇಷನ್‌ಗೆ ಎಳೆದೊಯ್ಯತು. ಆಗಲೇ ಗುರುತು ಸಿಗಲಾರದಷ್ಟು ಹೂನಗೊಂಡಿತ್ತು ವೇಣುಗೋಪಾಲನ ಮುಖ.

ರಾತ್ರಿ ಹನ್ನೆರಡು ದಾಟಿದರೂ ವೇಣುಗೋಪಾಲ ಮನೆಗೆ ಬರದಿರುವುದು ಅವನ ಮಡದಿಯಲ್ಲಿ ಆತಂಕವನ್ನು ಹೆಚ್ಚಿಸಿತ್ತು. ಆವರೆಗೆ ಆಕೆಗೆ ಮಲಗಿದ್ದ ಮಕ್ಕಳನ್ನು ಯಾಕೆ ಎಬ್ಬಿಸಬೇಕು ತನ್ನ ಪತಿ ಯಾವ ಕ್ಷಣದಲ್ಲಾದರೂ ಬರಬಹುದು ಎಂದುಕೊಳ್ಳುತ್ತಾ ಕ್ಷಣಗಳನ್ನು ಸವಿಸುತ್ತಾ ಬಂದಿದ್ದಳು. ಕ್ಷಣಗಳು ಸರಿದು ಸರಿದು ಸಮಯ ಹನ್ನೆರಡು ದಾಟಿಬಿಟ್ಟಿತ್ತು. ಈಗಾಕೆಗೆ ಕಾತುರದೊಡನೆಯೇ ಒಂದು ತರಹದ ಗಾಬರಿ, ಇನ್ನು ತಡೆಯಲು ಸಾಧ್ಯವಿಲ್ಲ. ಏನಾದರೂ ಮಾಡಲೇಬೇಕೆಂದು ಕೊಂಡು ಮಕ್ಕಳಿಬ್ಬರನ್ನು ಎಬ್ಬಿಸಿದಳು. ವೇಣುಗೋಪಾಲನ ಮಡದಿ.

ಎದ್ದ ಇಬ್ಬರಿಗೂ ತಂದೆ ಇನ್ನೂ ಮನೆಗೆ ಬಂದಿಲ್ಲವೆಂದು ತಿಳಿದಾಗ ನಿದ್ದೆಯ ಗುಂಗು ಮಾಯವಾಗಿ ಗಾಬರಿ ಹುಟ್ಟಿಕೊಂಡಿತ್ತು. ಈಗ ತಾವೇನು ಮಾಡಬೇಕೆಂದು ತಾಯಿ ಮಕ್ಕಳು ಚಿಂತೆಯಲ್ಲಿ ತೊಡಗಿದರು. ತಂದೆ, ತನ್ನ ಬಾಲ್ಯ ಸ್ನೇಹಿತನ ಮನೆಯ ಫೋನ್ ನಂಬರ್ ಒಂದು ಕಡೆ ಬರೆದಿದ್ದು. ಮಗಳಿಗೆ ನೆನಪಾಯ್ತು. ಆತ ನಾಲ್ಕಾರು ಸಲ ತನ್ನ ಮಡದಿ ಮಕ್ಕಳೊಂದಿಗೂ ಬಂದು ಹೋದ ಕಾರಣ ಎಲ್ಲರಿಗೂ ಪರಿಚಿತ. ಕೂಡಲೇ ಈ ವಿಷಯವನ್ನು ಅವನಿಗೆ ತಿಳಿಸಬೇಕೆಂದು ನಿರ್ಣಯಿಸಿದರವರು.

ಮುಖ್ಯರಸ್ತೆಯಿಂದ ಸ್ವಲ್ಪದೂರದಲ್ಲಿ ಟೆಲಿಫೋನ್ ಬೂತ್ ಇದೆ. ಅಲ್ಲಿಂದ ಯಾವಾಗ ಬೇಕಾದಾಗ ಫೋನ್ ಮಾಡಬಹುದು, ಮಧ್ಯರಾತ್ರಿ ದಾಟಿದೆ, ಆದರೂ ತಾನೇ ಹೋಗಿ ಅಪ್ಪನ ಮಿತ್ರನಿಗೆ ಫೋನ್ ಮಾಡಿಬರುವುದಾಗಿ ಹೇಳಿದ ಮಗ, ಅದರ ವಿನಹ ಬೇರಾವ ದಾರಿ ಕಾಣಲಿಲ್ಲ. ಮಿಕ್ಕಿಬ್ಬರಿಗೆ ಮಗನನ್ನು ಕಳುಹಿಸಿ ಕಾತುರದಿಂದ ಅವನ ದಾರಿ ಕಾಯುತ್ತ ಕುಳಿತರು ತಾಯಿ, ಮಗಳು.

ಹತ್ತು ನಿಮಿಷದಲ್ಲಿ ಹಿಂತಿರುಗಿದ ಮಗ ಆಂಕಲ್, ತಕ್ಷಣ ಬರುತ್ತಿರವುದಾಗಿ ಹೇಳಿದರೆಂದು ಹೇಳಿದ. ಅದರಿಂದ ಮೂವರಿಗೂ ಸ್ವಲ್ಪ ಮಟ್ಟಿಗೆ ಸಮಾಧಾನವಾಗಿತ್ತು. ವೇಣುಗೋಪಾಲ ಎಲ್ಲಿಗೆ ಹೋಗಿರಬಹುದು? ಏನಾಗಿರಬಹುದೆಂಬ ತರ್ಕದಲ್ಲಿ ತಾಯಿ ಮಕ್ಕಳು ತೊಡಗಿದ್ದಾಗ ಮನೆ ಎದುರು ಸ್ಕೂಟರ್ ನಿಂತ ಸದ್ದಾಯಿತು.

ಮನೆಯೊಳಗೆ ಬಂದ ವೇಣುಗೋಪಾಲನ ಮಿತ್ರ ತಾಯಿ ಮಕ್ಕಳ ಗಾಬರಿಗೊಂಡ ಮುಖಗಳನ್ನು ನೋಡಿ ಅವರಿಗೆ ಸಮಾಧಾನ ಹೇಳುತ್ತಾ, ವೇಣುಗೋಪಾಲ ಎಲ್ಲಿ ಯಾರೊಡನೆ ಯಾವಾಗ ಹೋದನೆಂಬ ಬಗ್ಗೆ ಅವರಿಗೆ ಗೊತ್ತಿದಷ್ಟು ತಿಳಿದು ತಾನೀಗ ಅವನೆಲ್ಲಿದ್ದರೂ ಕರತರುವನೆಂದು ಸುಮ್ಮಸುಮ್ಮನೆ ಗಾಬರಿಪಡಬಾರದೆಂದು ಆಶ್ವಾಸನೆ ನೀಡಿ ಅಲ್ಲಿಂದ ಹೊರಟ. ತಾಯಿ ಮಕ್ಕಳಿಗೆ ಕಾಯುವುದಲ್ಲದೆ ಬೇರೆ ಮಾರ್ಗವಿರಲಿಲ್ಲ.

ತನ್ನ ಇನ್ನೊಬ್ಬ ಸಹೋದ್ಯೋಗಿಯ ಮನೆಗೆ ಹೋದ ವೇಣುಗೋಪಾಲನ ಮಿತ್ರ ಮಾತುಗಾರ ಕಾರಕೂನನ ಮನೆಯ ಪತ್ತೆ ಹಚ್ಚಿದ್ದ. ಅಲ್ಲಿ ಹೋದಾಗ ಗಾಢನಿದ್ದೆಯಿಂದ ಎಚ್ಚೆತ್ತ ಮಾತುಗಾರನಿಗೆ ತನ್ನೆದುರು ನಿಂತವನನ್ನು ನೋಡಿ ಗಾಬರಿಯಾಯಿತು. ಭಯಗ್ರಸ್ತನಾದ ಅವನ ಬಾಯಿಬಿಡಿಸುವುದು ವೇಣುಗೋಪಾಲನ ಸ್ನೇಹಿತನಿಗೆ ಕಷ್ಟವಾಗಲಿಲ್ಲ. ಭಯದ ಕಾರಣ ಮಾತುಗಾರ ಅವಶ್ಯಕತೆಗಿಂತ ಹೆಚ್ಚೇ ಬಾಯಿಬಿಟ್ಟ, ಕುಡಿದ ಅಮಲಿನಲ್ಲಿ ವೇಣುಗೋಪಾಲ ಒಬ್ಬ ವಾಚ್‌ಮನ್‌ನ ಮಗಳೊಡನೆ ಅಸಭ್ಯವಾಗಿ ವರ್ತಿಸಿದನೆಂದು ಅವನನ್ನು ಪೊಲೀಸಿನವರು ಹಿಡಿದೊಯ್ದಿದ್ದಾರೆಂದು ಅವನು ಹೇಳಿದಾಗ ತನ್ನ ಕಿವಿಗಳನ್ನು ತಾನೇ ನಂಬದಾದ ಅವನ ಮಿತ್ರ. ಆದದರ ಕಡೆ ನಂತರ ಗಮನ ಹರಿಸಬಹುದೆಂದುಕೊಂಡು ಮೊದಲು ಮಾಡಬೇಕಾದ ಕೆಲಸದ ಕಡೆ ಗಮನ ಹರಿಸಿದ.

ತನಗೆ ಪರಿಚಯಸ್ಥ ಒಬ್ಬ ಹಿರಿ ಪೊಲೀಸ್ ಅಧಿಕಾರಿಗೆ ಫೋನ್ ಮಾಡಿ ವಿಷಯ ವಿವರಿಸಿ ವೇಣುಗೋಪಾಲನನ್ನು ತಕ್ಷಣ ಬಿಡುವಂತೆ ಆದೇಶ ನೀಡಬೇಕೆಂದು ಕೋರಿದ. ಅವನು ಆ ಪೊಲೀಸ್ ಸ್ಟೇಷನ್‌ಗೆ ಹೋಗುವುದೊರಳಗಾಗಿ ತಾನಲ್ಲಿಗೆ ಫೋನ್ ಮಾಡುವುದಾಗಿ ಹೇಳಿದ ಅವನ ಆ ಪರಿಚಯಸ್ಥ ಅಧಿಕಾರಿ. ಅಲ್ಲಿಂದ ಅವನ ಸ್ಕೂಟರ್ ವೇಣುಗೋಪಾಲ ಬಂದಿಯಾದ ಪೊಲೀಸ್ ಸ್ಟೇಷನಿನ ಕಡೆಗೆ ವೇಗದಿಂದ ಸಾಗಿತು.

ಆವರೆಗೆ ಲಾಕಪ್‌ನಲ್ಲಿ ಗೋಡೆಗಾತು ಕುಳಿತಿದ್ದ ವೇಣುಗೋಪಾಲನಿಗೆ ನಿಶೆ ಸಾಕಷ್ಟು ಇಳಿದಿತ್ತು. ಹೊಡೆತಗಳ ಕಾರಣ ಮುಖ ಗುರುತು ಹಿಡಿಯಲು ಸಾಧ್ಯವಾಗದಷ್ಟು ಊದಿಬಿಟ್ಟಿತ್ತು. ಬಟ್ಟೆಗಳು ಕೊಳಕಾಗಿ ಅವನು ಅಲೆಮಾರಿಯಂತೆ ಕಾಣುತ್ತಿದ್ದ. ಅವನಿಗೆ ತಾನಿಲ್ಲಿ ಹೇಗೆ ಬಂದನೆಂಬ ನೆನಪಿಲ್ಲ. ತಾನು ಮತ್ತು ಮಾತುಗಾರ ಕಾರಕೂನ ಬಾರಿನಲ್ಲಿ ಕುಡಿಯುತ್ತಾ ಕುಳಿತ ನೆನಪಿತ್ತಷ್ಟೆ. ತಾನು ಅಲ್ಲಿಂದ ಹೇಗೆ ಹೊರಬಂದನೆಂಬ ನನವೂ ಅವನಿಗಿಲ್ಲ. ಪೊಲೀಸ್ ಸ್ಟೇಷನಿನಲ್ಲಿ ಆಗ ಸಾಕಷ್ಟು ಸಿಬ್ಬಂದಿ ಇಲ್ಲದ ಕಾರಣ ಅವನ್ನು ಆಸ್ಪತ್ರೆಗೆ ಕಳುಹಿಸುವ ಕಷ್ಟವನ್ನು ಯಾರೂ ತೆಗೆದುಕೊಂಡಿರಲಿಲ್ಲ.

ಅವನನ್ನು ಅಂತಹ ಅವಸ್ಥೆಯಲ್ಲಿ ನೋಡಿದಾಗ ಮಿತ್ರನಲ್ಲಿ ಏನೋ ಹೇಳಲಾಗದಂತಹ ಸಂಕಟ. ಅವನಲ್ಲಿ ಬರುವ ಮುಂಚೆಯೇ ಹಿರಿ ಅಧಿಕಾರಿಯ ಫೋನ್ ಬಂದ ಕಾರಣ ಅವನ ಸ್ವಾಗತಕ್ಕಾಗೇ ಕಾದಂತ್ತಿದ್ದರು. ಅಲ್ಲಿನ ಪೊಲೀಸಿನವರು. ವೇಣುಗೋಪಾಲನ ಅವಸ್ಥೆ ಕಂಡು ಭಾವಾವೇಶ ತಡೆಯಲಾಗದೆ ಅವನನ್ನು ಬಿಗಿದಪ್ಪಿದ್ದ ಆಗವನಿಗೆ ದೇಹದ ಮೇಲೆ ಬಿದ್ದ ಹೊಡೆತಗಳ ನೋವಿನ ಅರಿವಾಯಿತು. ಅವನು ಯಾವ ಯೋಚನೆಯೂ ಮಾಡಬಾರದೆಂದು, ಅವನ ಪರವಾಗಿ ತಾನು ಎಲ್ಲರ ಮೇಲೆ ಸೇಡು ತೀರಿಸಿಕೊಳ್ಳುತ್ತೇನೆಂದು ಸಿಟ್ಟಿನಾತಿರೇಕದಲ್ಲಿ ಶಪಥ ಮಾಡುವಂತಹ ದನಿಯಲ್ಲಿ ಹೇಳಿದ ಅವನ ಮಿತ್ರ.

ವೇಣುಗೋಪಾಲನನ್ನು ಪೊಲೀಸ್ ಸ್ಟೇಷನಿನಿಂದ ನೇರವಾಗಿ ನರ್‍ಸಿಂಗ್‌ಹೋಂ ಒಂದಕ್ಕೆ ಕರೆದೊಯ್ದು ಅಲ್ಲಿ ಅವನ ಗಾಯದ ಆರೈಕೆ ಮಾಡಿಸಿದ ಅವನ ಮಿತ್ರ. ಅದಾದನಂತರ ಅವನಿಗೆ ಯಾವ ಯೋಚನೆಯೂ ಇಲ್ಲದಂತೆ, ಸುಖವಾಗಿ ನಿದ್ದೆ ಬರುವ ಹಾಗೆ ಔಷಧಿ ಕೊಡಬೇಕೆಂದು ಕೇಳಿಕೊಂಡ. ಕುಡಿತದ ಪ್ರಭಾವ ಹೆಚ್ಚುಕಡಿಮೆ ಪೂರ್ತಿ ಇಳಿದುದರಿಂದ ನಿದ್ದೆಯ ಇಂಜೆಕ್ಷನ್ ಚುಚ್ಚಿದ ನರ್‍ಸಿಂಗ್ ಹೋಂನಲ್ಲಿದ್ದ ಡಾಕ್ಟರ್.

ವೇಣುಗೋಪಾಲನನ್ನು ಆ ಅವಸ್ಥೆಯಲ್ಲಿ ನೋಡಿದ ಮಡದಿ ಮಕ್ಕಳು ಗಾಬರಿಯಿಂದ ಅಳತೊಡಗಿದರು. ಏನೂ ಆಗಿಲ್ಲವೆಂದು ಒಂದು ಚಿಕ್ಕ ಆಕ್ಸಿಡೆಂಟ್‌ನ ಕಾರಣ ಆದ ಗಾಯಗಳು ಅವೆಂದು ತಾವೂ ಗಾಬರಿಪಟ್ಟು ಅವನನ್ನು ಗಾಬರಿಪಡಿಸಬಾರದೆಂದು ಸಮಾಧಾನ ಹೇಳಿದ ಅವನ ಮಿತ್ರ. ತನ್ನ ಮಡದಿ ಮತ್ತು ಇಬ್ಬರು ಮಕ್ಕಳ ಕಡೆ ತದೇಕಚಿತ್ತದಿಂದ ಸ್ವಲ್ಪ ಹೊತ್ತು ನೋಡಿ ಯಾವ ಮಾತೂ ಆಡದೆ ಮಲಗಲು ಹೋದ ವೇಣುಗೋಪಾಲ.

ನಿದ್ದೆಯ ಇಂಜೆಕ್ಷನ್ ಅಲ್ಲದೇ ಅವನಲ್ಲಿ ಅಲ್ಪಸ್ವಲ್ಪ ವಿಸ್ಕಿಯೂ ನೋವುಗಳನ್ನು ಮರೆಯುವಲ್ಲಿ ಸಹಾಯ ಮಾಡಿದ್ದವು. ಆಗಲೇ ಸಮಯ ಮೂರು ದಾಟಿಬಿಟ್ಟಿತ್ತು. ಬೆಳಿಗ್ಗೆ ಮತ್ತೆ ಬರುವುದಾಗಿ ಹೇಳಿ ಹೊರಟು ಹೋದ ಅವನ ಮಿತ್ರ.

ಬೆಳಗ್ಗೆ ಮನೆಯವರು ಎಲ್ಲರೂ ಎದ್ದ ಮೇಲೆ ಎಚ್ಚರವಾಯಿತು ವೇಣುಗೋಪಾಲನಿಗೆ. ಎಚ್ಚರವಾಗುತ್ತಲೇ ಎದೆಯ ಮತ್ತು ಪಕ್ಕೆಲುಬುಗಳಲ್ಲಿನ ನೋವಿನ ಅರಿವಾಯಿತು. ಅದರೊಡನೆ ತಲೆ ಸಿಡಿತ ಮತ್ತು ಮುಖದ ಮೇಲೆ ಏನೋ ಭಾರವಿಟ್ಟಂತಹ ಭಾಸ. ಬಹುಕಷ್ಟಪಟ್ಟು ಮಂಚದಿಂದ ಇಳಿದು ಕನ್ನಡಿ ಎದುರು ಬಂದು ನಿಂತ. ಅವನ ಮುಖವನ್ನು ಅವನೇ ಗುರುತಿಸುವುದು ಕಷ್ಟವಾಗುವಷ್ಟು ಬದಲಾಗಿಬಿಟ್ಟಿತ್ತು. ಮಡದಿ ಮಕ್ಕಳು ಅವನನ್ನು ಸುತ್ತುವರೆದಾಗ ತನಗೇನೂ ಆಗಿಲ್ಲವೆಂದು ಎಲ್ಲಾ ತಾನೆ ಸರಿಹೋಗುತ್ತದೆ ಎಂದೂ ಹೇಳಿದ. ಮಗಳ ಕಣ್ಣಿಂದ ಧಾರಾಕರವಾಗಿ ನೀರಿಳಿಯುತ್ತಿತ್ತು. ಅದನ್ನು ಒರೆಸಿ ಅಕ್ಕರೆಯಿಂದ ಅವಳ ತಲೆ ಮೇಲೆ ಕೈಯಾಡಿಸಿ ತನ್ನ ಯೋಚನೆ ಬಿಟ್ಟು ಕಾಲೇಜಿಗೆ ಹೋಗುವಂತೆ ಹೇಳಿದ.

ಅವತ್ತು ಮೊದಲ ಬಾರಿ ಅವನಿಗೆ ದಿನಪತ್ರಿಕೆ ಓದಲು ಮನಸ್ಸಾಗಲಿಲ್ಲ. ಕಾಫಿ ಕುಡಿದು ಕುಳಿತಾಗ ಪೊಲೀಸ್ ಸ್ಟೇಷನಿನಲ್ಲಿ ನಡೆದ ಮಾತುಗಳು ಅಸ್ಪಷ್ಟವಾಗಿ ಅವನ ಮೆದುಳಿನಲ್ಲಿ ಹಾದು ಹೋಗತೊಡಗಿದವು. ನಿಶೆ ಇಳಿಯುತ್ತಿದ್ದ ಹಾಗೇ ತಾನು ಮಾಡಿದ ಅಪರಾಧವನ್ನು ವಿವರಿಸಿದ್ದ ಒಬ್ಬ ಪೇದೆ. ತಾನು ರಾತ್ರಿ ವಿಪರೀತವಾಗಿ ಕುಡಿದು ವಾಚಮನ್ ವೆಂಕಟಯ್ಯನ ಮನೆಗೆ ಹೋಗಿದ್ದೆ. ಅವನ ಮನೆ ಇದ್ದುದು ಸಂಶೋಧನಾಲಯದ ಆವರಣದಲ್ಲೇ ಇರುವ ಕ್ವಾರ್ಟಸ್‌ನಲ್ಲಿ. ಅವನು ತಾ ಕೆಲಸ ಮಾಡುವ ಡಿವಿಜನಿನ ವಾಚ್‌ಮನ್‌ರಲ್ಲಿ ಒಬ್ಬ. ಅಲ್ಲಿಗೆ ಹೋದ ತಾನು ಅವನ ಹದಿನಾರು ವರ್ಷದ ಮಗಳೊಡನೆ ಅಸಭ್ಯವಾಗಿ ವರ್ತಿಸಿದ ಕಾರಣ ಅಲ್ಲಿಯವರು ತನ್ನನ್ನು ಚೆನ್ನಾಗಿ ತದಕಿ ಪೊಲೀಸಿನವರಿಗೆ ಒಪ್ಪಿಸಿದರು. ಆಗ ತನ್ನೊಡನೆ ಯಾರೂ ಇರಲಿಲ್ಲ. ಅಂದರೆ ಆಗಲೇ ಈ ಸುದ್ದಿ ಸಂಶೋಧನಾಯದಲ್ಲೆಲ್ಲಾ ಹಬ್ಬಿಬಿಟ್ಟಿರುತ್ತದೆ. ತಾನು ತನ್ನ ಮಗಳಿಗಿಂತ ಚಿಕ್ಕ ವಯಸ್ಸಿನ ಹುಡುಗಿಯೊಡನೆ ಅಸಭ್ಯವಾಗಿ ವರ್ತಿಸಿದ್ದೇನೆಂದು ಎಲ್ಲರೂ ಆಡಿಕೊಳ್ಳುತ್ತಿರುತ್ತಾರೆ. ಅದು ಸುಳ್ಳೆಂದು ತಾನು ಯಾರನ್ನು ನಂಬಿಸಲು ಸಾಧ್ಯವಿಲ್ಲ. ಆ ಯೋಚನೆಯ ವಿನಹ ಇನ್ಯಾವ ಯೋಚನೆಯೂ ವೇಣುಗೋಪಾಲನ ತಲೆಯಲ್ಲಿ ಸುಳಿಯುತ್ತಿರಲಿಲ್ಲ. ಗರಬಡಿದವನಂತೆ ಕುಳಿತು ಬಿಟ್ಟಿದ್ದ.

ಆಫೀಸಿಗೆ ಹೋಗುವ ಮುನ್ನ ಮನೆಗೆ ಬಂದ ಅವನ ಮಿತ್ರ ನಿಸ್ಸಹಾಯ ಸಿಟ್ಟಿನಲ್ಲಿ ಅವನ ಮೇಲೆ ರೇಗಾಡಿದ. ಆ ಮಾತುಗಾರ ಕೆಳದರ್ಜೆಯ ಕಾರಕೂನ ಮಹಾ ಧೂರ್ತನೆಂದು ಆ ಇನ್ನೊಬ್ಬ ವೇಣುಗೋಪಾಲ ಲಂಚದಲ್ಲಿ ಅವನಿಗೂ ಪಾಲು ಕೊಡದ ಕಾರಣ ಅವನ ಮೇಲೆ ರೇಗಾಡುತ್ತಾನೆಂದೂ ನಿನ್ನೆ ತನ್ನ ಡಿವಿಜನಿನ ಮುಖ್ಯಸ್ಥನ ಆದೇಶಾನುಸಾರವಾಗೇ ಅವನು ಎಲ್ಲಾ ಕೆಲಸಗಳನ್ನು ಮಾಡಿರುವುದಾಗಿ ಹೇಳಿದ. ಕಲ್ಲು ಬಂಡೆಯಂತೆ ಕುಳಿತ ವೇಣುಗೋಪಾಲನ ಮೇಲೆ ಆ ಮಾತುಗಳು ಯಾವ ಪರಿಣಾಮವನ್ನು ಬೀರಲಿಲ್ಲ. ವಿಜ್ಞಾನಿಯರ ಬುದ್ದೀಜೀವಿಯರ ಸೃಜನಶೀಲಸಾಹಿತಿಯರ ಭ್ರಷ್ಟಾಚಾರದ ಯೋಚನೆಯೂ ಅವನ ತಲೆಯಲ್ಲಿ ಸುಳಿಯಲಿಲ್ಲ. ತಾನು ಎಲ್ಲಾ ಸರಪಡಿಸುವದಾಗಿ ತನಗೆ ಕಮೀಷನರ್ ಕೂಡ ಗೊತ್ತೆಂದೂ ಅವನು ಯಾವ ಯೋಚನೆಯೂ ಮಾಡಬಾರದೆಂದೂ, ಮತ್ತೆ ತಾನು ನಾಳೆ ಬರುವುದಾಗಿ ಹೇಳಿ ಹೊರಟು ಹೋದ ಅವನ ಮಿತ್ರ.

ಮಕ್ಕಳು ತಮ್ಮ ತಮ್ಮ ಓದುಗಳಿಗೆ ಹೊರಟುಹೋದಮೇಲೆ ಮಡದಿಯೊಡನೆ ಕುಳಿತು ಊಟದ ಶಾಸ್ತ್ರ ಮಾಡಿದ ವೇಣುಗೋಪಾಲ ಪತಿಗೆ ತನ್ನಿಂದಾದಷ್ಟು ಸಮಾಧಾನ ಹೇಳಿದಳು ಮಡದಿ. ಬಹು ಅಪ್ಯಾಯತೆಯಿಂದ ಅವಳ ತಲೆಯ ಮೇಲೆ ಕೈ ಸವರುತ್ತಾ ಅವಳ ಮಾತು ಕೇಳಿದ.

ಮುಗಿದ ನಂತರ ಆಸ್ಪತ್ರೆಗೆ ಹೋಗಿಬರುವುದಾಗಿ ಹೇಳಿಹೋದ ವೇಣುಗೋಪಾಲ ಮಧ್ಯಾಹ್ನದ ನಂತರವೇ ಮನೆಗೆ ಬಂದ. ಯಾರೊಡನೆಯೂ ಯಾವ ತರಹದ ಮಾತೂ ಇಲ್ಲದೆ ಗರಬಡಿದವರ ತರಹ ಯಾಂತ್ರಿಕವಾಗಿದ್ದವನ ಚಲನ-ವಲನಗಳು.

ಶಾಲೆ ಕಾಲೇಜುಗಳಿಂದ ಬಂದ ಅವನ ಮಗ-ಮಗಳು ಕೂಡ ತನ್ನನ್ನು ಹೊಸ ವ್ಯಕ್ತಿಯೊಬ್ಬನನ್ನು ನೋಡುವ ನೋಟದಿಂದ ನೋಡುತ್ತಿದ್ದಾರೆನಿಸಿತು ವೇಣುಗೋಪಾಲನಿಗೆ. ಸಂಶೋಧನಾಲಯದಲ್ಲಿನ ಅವರ ಸ್ನೇಹಿತರು ತನ್ನ ಬಗ್ಗೆ ಆಡಿಕೊಳ್ಳುತ್ತಿರುವ ಮಾತುಗಳನ್ನು ಅವರು ಕೇಳಿರಬಹುದೆನಿಸಿತವನಿಗೆ.

ಮನೆಯಲ್ಲಿ ಒಂದು ಅಸಹನೀಯ ಮೌನ. ಮೊದಲಿನ ಲವಲವಿಕೆ ಇಲ್ಲ. ಎಲ್ಲರೂ ಯಾವುದೂ ಗಾಢ ಯೋಚನೆಯಲ್ಲಿರುವಂತೆ ಕಂಡುಬರುತ್ತಿದ್ದರು. ಹಾಗೇ ಸಮಯ ಸರಿಯುತ್ತಾ ರಾತ್ರಿ ಮಲಗುವ ಹೊತ್ತಾಯಿತು. ಅರೆ ಕತ್ತಲಲ್ಲಿ ವೇಣುಗೋಪಾಲನೊಬ್ಬನೇ ಕುರ್ಚಿಯಲ್ಲಿ ಕುಳಿತಾಗ ಅವನೆದುರು ಬಂದು ಕುಳಿತಳು ಮಗಳು. ಅವಳೆರಡೂ ಕೈಗಳು ಅವನ ತೊಡೆಯ ಮೇಲೆ ಬೀಳಲಿದ್ದಾಗ ಒಮ್ಮೆಲೆ ಹಿಂದೆ ಸರಿದ ವೇಣುಗೋಪಾಲ, ಅವನಿಗೀಗ ತನ್ನ ಮಗಳನ್ನು ಮುಟ್ಟಲು ಎಂತಹುದೋ ಭಯ. ತಂದೆಯ ಅಂತಹ ವರ್ತನೆ ಮಗಳ ಗಮನಕ್ಕೆ ಬಂದಂತೆ ಕಾಣಲಿಲ್ಲ. ತನ್ನದೇ ಮುಗ್ಧ ದನಿಯಲ್ಲಿ ಕೇಳಿದಳು.

“ಜನರಾಡಿಕೊಳ್ಳುತ್ತಿರುವುದು ನಿಜವೇ ಅಪ್ಪಾ?”

ವೇಣುಗೋಪಾಲನ ಹೊಟ್ಟೆಯಲ್ಲಿ ಯಾರೋ ಕೈಹಾಕಿ ಕದಡಿದಂತಾಯಿತು. ಅದಕ್ಕವನು ಏನೂ ಹೇಳಲಿಲ್ಲ.

“ಅಂತಹುದೆಲ್ಲಾ ಮಾಡುವುದಿಲ್ಲ. ನನ್ನಪ್ಪ ಬಹಳ ಒಳ್ಳೆಯವರೆಂದು ನಾನೆಲ್ಲರಿಗೂ ಹೇಳಿದೆ”

ನನ್ನ ಅಪ್ಪ ಅಂತಹ ಪಾಪಿಯಲ್ಲ ಎಂದು ತನ್ನನ್ನು ತಾನೇ ನಂಬಿಸಿಕೊಳ್ಳುವಂತಿತ್ತು ಅವಳ ಮಾತು.

“ಈ ಸಮಾಜ ತನಗಿಷ್ಟ ಬಂದವರನ್ನು ಪೂಣ್ಯವಂತರನ್ನಾಗಿ ತನಗಿಷ್ಟವಿಲ್ಲದವರನ್ನು ಪಾಪಿಗಳನ್ನಾಗಿ ಮಾಡಿಬಿಡಬಹುದು. ಈ ಎಲ್ಲಾ ಯೋಚನೆಬಿಡು, ನೀ ಹೋಗಿ ಮಲಗು ರಾತ್ರಿ, ಬಹಳ ಹೊತ್ತಾಗಿದೆ”

ಆ ರಾತ್ರಿ ಮಲಗಿದ್ದ ಅವನು ಬೆಳಗ್ಗೆ ಏಳಲಿಲ್ಲ. ಮಧ್ಯಾಹ್ನ ತಂದು ಕೊಂಡಿದ್ದ ನಿದ್ರೆಯ ಮಾತ್ರೆಗಳು ಅವನನ್ನು ಮತ್ತೆ ಏಳದಂತಹ ನಿದ್ದೆಯ ಕಡೆ ಎಳೆದೊಯ್ದಿದ್ದವು.

ಅದನ್ನು ತಿಳಿದು ಅವನ ಮನೆಗೆ ಧಾವಿಸಿಬಂದ ಸಂಶೋಧನಾಲಯದ ಆಡಳಿತವರ್ಗ ಮತ್ತು ಅಲ್ಲಿನ ವೈದ್ಯಕೀಯ ಸಿಬ್ಬಂದಿ, ಅವನು ಹೃದಯಾಘಾತದಿಂದ ಮರಣಿಸಿದ್ದಾನೆಂಬ ತೀರ್ಪು ಕೊಟ್ಟರು. ಅದರಿಂದಾಗಿ ಅವನ ಶವವನ್ನು ಪೋಸ್ಟ್ ಮಾರ್ಟಮ್ ಮಾಡುವ ಅವಶ್ಯಕತೆಯೂ ಬೀಳಲಿಲ್ಲ.

ವೇಣುಗೋಪಾಲನ ಮರಣದಿಂದ ಸಂಶೋಧನಾಲಯದ ವಿಜ್ಞಾನಿಯರ ಸೃಜನಶೀಲತೆಗೆ ಯಾವ ತರಹದ ಅಡೆತಡೆಯೂ ಒದಗಿ ಬರಲಿಲ್ಲ.
*****

2 thoughts on “0

  1. ಬಹಳ ದಿನಗಳ ನಂತರ ,’ ಸಂಶೋಧನೆ’ ಕಥೆಯ ಮರು ಓದು.
    ವ್ಯವಸ್ಥೆ ಕುರಿತು ಅಂದಿಗೂ ಇಂದಿಗೂ ಬದಲಾಗದ,ಸನ್ನಿವೇಶಗಳ‌ಮೇಲೆ ಕ್ಷ-ಕಿರಣ.

  2. ಬಹಳ ದಿನಗಳ ನಂತರ ,’ ಸಂಶೋಧನೆ’ ಕಥೆಯ ಮರು ಓದು.ನೆನಪುಗಳ ಸರಮಾಲೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತೃಪ್ತಿ
Next post ಆರದ ನೋವು

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…