ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು.
ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ ಹಸಿರಾದ ಎಲೆ ಚಿಗುರು; ಒತ್ತು ಒತ್ತಾಗಿ ಬೆಳೆದ ಗಿಡಗಳಲ್ಲಿ ಬಣ್ಣ ಬಣ್ಣದ ಹೂವುಗಳು, ಕಾಯಿಗಳು, ತೋಟಕ್ಕೆ ಬೇಲಿ ಇಲ್ಲ ಗೇಟು, ಬಾಗಿಲು ಇಲ್ಲ. ಅದು ಹಕ್ಕಿಯ ಪರಿವಾರದ ಪ್ರಕೃತಿದತ್ತ ಮನೆ ದಶ ದಿಕ್ಕುಗಳಿಂದಲೂ ಹಾರಿಹಾರಿ ಹಾಡಿಬರುವ ನಾನಾ ವಿದಧ ಸುಂದರ ಹಕ್ಕಿಗಳ ಚಿಲಿಪಿಲಿಯಲ್ಲಿ ಸ್ನೇಹ ಸಂಬಂಧಗಳ ಆತ್ಮೀಯ ಆಲಾಪಗಳು, ಎಲ್ಲಾ ನಿರಾತಂಕದ ವಾತಾವರಣ, ಕಿವಿಗೊಟ್ಟರೆ ಚಿಲಿಪಿಲಿಯ ಶಾಂತಿಮಂತ್ರ. ಹಕ್ಕಿಗಳ ರೆಕ್ಕೆ ಪುಕ್ಕದ ಅವರ್ಣನೀಯ ವರ್ಣಸಿಂಧುವಿನ ಸೊಬಗು ನಯನಮನೋಹರ. ಹಕ್ಕಿ ಪರಿವಾರಗಳಲ್ಲಿ ಅದೆಂತಹ ಶಿಸ್ತು, ಅದೇನು ಸೊಗಸು. ತಾಯಿ ಹಕ್ಕಿ ಪರಿವಾರದಲ್ಲಿ ಮರಿಗಳನ್ನು ನೋಡಿಕೊಂಡರೆ ಇನ್ನೊಂದರಲ್ಲಿ ಅದು ತಂದೆ ಹಕ್ಕಿಯ ಕೆಲಸ. ತಾಯಿಕೋಗಿಲೆ ಮೊಟ್ಟೆ ಇಟ್ಟು ಹೋದರೆ ಅಪರಿಚಿತ ಕಾಗೆಯ ಶುಶ್ರೂಷೆ. ಇದೆಂತಹಾ ಸೇವಾ ಮನೋಭಾವ! ಗೂಡು ಕಟ್ಟುವುದರಲ್ಲಿ ಗಂಡು ಹೆಣ್ಣು ಹಕ್ಕಿಯ ಸಹಕಾರ, ಕೌಶಲ್ಯ ಎಲ್ಲ ಬೆರಗು ತರುವಂತಹುದು. ಇನ್ನು ಉದಯ ರವಿಕಿರಣದೊಂದಿಗೆ ಸುಪ್ರಭಾತದ ನವೋದಯದ ಸಂದೇಶ, ಮತ್ತೆ ಆಹಾರ ವಿಹಾರ, ಮಕ್ಕಳಿಗೆ ಹುಳು ಹುಪ್ಪಟೆಗಳ ಫಲಹಾರ. ಎಲ್ಲದರಲ್ಲೂ ಒಂದು ಸೈನಿಕ ಶಿಸ್ತು ಒಂದು ಛಂದೋಬದ್ಧತೆ, ಬಿಗಿ ಬಾಂಧವ್ಯ, ಸರಾಗ ಸಂಸಾರ ಲೀಲೆ ಸಂಗೀತಮಯ ಚಿಲಿಪಿಲಿಯ ಸಂಸಾರ ಈ ಹಕ್ಕಿಗಳ ಪರಿವಾರದ್ದು. ಹಗುರವಾಗಿ ನೆರೆನೆರಿಗೆಯಲ್ಲಿ ಹರಡಿದ ಹಕ್ಕಿಯ ರೆಕ್ಕೆ ಪುಕ್ಕದ ಗರಿಗಳಲ್ಲಿ ಅದೆಷ್ಟು ಕಾರ್ಯಕ್ಷಮತೆ. ಎತ್ತರ ಎತ್ತರಕ್ಕೆ ಹಾರುವ ಆ ಭವ್ಯತೆ ಎಲ್ಲವೂ ಬೆರಗು ತರುವಂತಹುದು.
ಮರಿಗಳ ರೆಕ್ಕೆ ಬಲಿತ ಮೇಲೆ ಅವು ಹಾರಿ ಹೋಗುವಾಗ ತಾಯಿ ತಂದೆ ಹಕ್ಕಿಗೆ ಅದೆಷ್ಟು ಸಂತಸ? ಅವುಗಳ, ಆರೈಕೆ, ಪ್ರೀತಿಯಲ್ಲಿ ನಿರೀಕ್ಷೆಯಿಲ್ಲ, ಫಲಾಪೇಕ್ಷೆಯಿಲ್ಲ. ಹಾರುವ ಹಕ್ಕಿಗಳಲ್ಲಿ ಆಗಸದ ಮನೋವೈಶಾಲ್ಯ. ಮರದ ರೆಂಬೆಗಳಿಗೆ ಅಂಟಿ ಅಂಟಿಕೊಳ್ಳದ ಸ್ವಾತಂತ್ರಮಯ ಹಾರಾಟ. ಇದೇ ನನ್ನ ಮರ, ಇದೇ ನನ್ನ ರೆಂಬೆ ಎನ್ನುವ ಮಮಕಾರವಿಲ್ಲ. ಯಾವ ಗಿಡವಾದರೇನು? ಯಾವ ಮರವಾದರೇನು? ರೆಂಬೆ ಒಣಗಿದ್ದರೇನು? ಹಸಿರಾಗಿದ್ದರೇನು? ಬಂದು ಕುಳಿತು ಇತರ ಹಕ್ಕಿಗಳೊಂದಿಗೆ ಒಡನಾಡಿ ಹಾಡಿ ಹಾರಿ ಹೋಗುವ ಹಕ್ಕಿಗಳೆಲ್ಲಿ, ನಾವೆಲ್ಲಿ?
ಈಗ ಬರೋಣ ಮಾನವ ಪರಿವಾರದ ದೊಡ್ಡ ಮನೆಗೆ. ಇಲ್ಲಿ ಎಲ್ಲಿ ನೋಡಿದರೂ ಸಿಮೆಂಟಿನ, ಇಟ್ಟಿಗೆ, ಕಲ್ಲಿನ ಗೋಡೆಗಳು, ಇದಕ್ಕೆ ಜೋಡಿಸಿದ ಕಿಡಿಕಿಗಳು, ಬಾಗಿಲುಗಳು, ಅವುಗಳಿಗೆ ಭದ್ರಪಡಿಸುವ ಚಿಲಕಗಳು, ಅಗುಳಿಗಳು, ಬೋಲ್ಟುಗಳು, ಬೇಲಿಗಳು ಒಂದೇ ಎರಡೇ? ಇಲ್ಲಿ ಇರುವುದು ದುಡಿಯುವ ಅಪ್ಪ, ಬೆನ್ನು ಬಗ್ಗಿ ಹೃದಯ ಕೊಟ್ಟು ಮನೆಯ ಶ್ರೇಯಸ್ಸಿಗೆ ದುಡಿಯುವ ಅಮ್ಮ, ಬೆಳ್ಳಿ ಕೂದಲಿನಿಂದ ಹೊಳೆಯುವ ಜೋಲು ಚರ್ಮದ ಅಜ್ಜಿ, ತಾತ, ಪ್ರೀತಿಸಿದರೂ ಜಗಳ ಕದನ ಮಾಡುವ ಅಣ್ಣ ತಮ್ಮಂದಿರು. ಒಡಹುಟ್ಟಿದ್ದರು ಹೊಟ್ಟೆ ಕಿಚ್ಚಿನ ಅಕ್ಕ ತಂಗಿಯರು. ಬಾಂಧವ್ಯದ ಬಿಗಿಯರಿಯದ ಕೊಂಕು ಮಾತಿನ ಅತ್ತೆ ಮಾವಂದಿರು. ಅಪ್ಪ ಅಮ್ಮ ಮಕ್ಕಳ ನಡುವೆ ಪ್ರೀತಿಸೆರೆ ಹರಿದರೂ ಮುಂದೆ ತಮ್ಮ ಮುದಿತನದ ಕಾಲಕ್ಕೆ ಆಶ್ರಯರಾಗುತ್ತಾರೆಂಬ ಪ್ರತಿಫಲಾಪೇಕ್ಷೆ ಮತ್ತು ನಿರೀಕ್ಷೆಯ ಸ್ವಾರ್ಥ. ಮಕ್ಕಳು ನಾವು ಹೇಳಿದಂತೆ ಕೇಳಬೇಕೆಂಬ ಹಿರಿಯರ ಒತ್ತಡ. ಇಲ್ಲಿ ಸ್ವಚ್ಛಂದಕ್ಕೆ ಎಡೆಕೊಡುವ ಅತಿಯಾದ ಪ್ರೀತಿ. ಪರಿವಾರದಲ್ಲಿ ಈ ತೆರನಾದ ಉಸಿರು ಕಟ್ಟುವ ವಾತಾವರಣ ಮಕ್ಕಳಿದ್ದಾಗ ಮಮತೆಯ ಮಡಿಲಿನಲ್ಲಿ ಬೆಳೆದು ದೊಡ್ಡವರಾಗಿ ವಿದ್ಯೆಗಾಗಿ, ಉದ್ಯೋಗಕ್ಕಾಗಿ ದೂರ ದಡಗಳನ್ನು ಸೇರಿದಾಗ ಮನವನ್ನು ಕಾಡುವ ಭಾವಗಳು. ಇನ್ನು ಮಕ್ಕಳು ಮದುವೆಯಾಗಿ ಸಂಸಾರ ಹೂಡಿ ಸೊಸೆ ಒಡಗೂಡಿ ನಡೆದಾಗ ಅದೇಕೊ ಅನುಭವಿಸುವ ಹೃದಯದ ಅಧೀರತೆ, ಎಂದೂ ಪ್ರೀತಿಯ ಸೆರೆಹಾಕುವ ಮನದ ತೀವ್ರತೆ. ಹಕ್ಕಿ ಬಲಿತ ರೆಕ್ಕೆಯ ಮರಿಹಾರುವುದನ್ನು ನೋಡಿ ಪಡುವ ಸಂತಸ ನಮಗೇಕೆ ಆಗಲಾರದು?
ನಮ್ಮ ಪರಿವಾರಕ್ಕೂ ಹಕ್ಕಿಯ ಪರಿವಾರಕ್ಕೂ ಅದೆಷ್ಟು ಅಜಗಜಾಂತರ!
*****