ಕಾಲು ನೆಲಕ್ಕೆ ಊರಿದೊಡನೆಯೇ ಪಚಕ್ ಪಚಕ್ ಸದ್ದು, ಹಸಿರ ಹುಲ್ಲಿನ ಮೇಲೆ ಮುತ್ತಿನಂತೆ ಕಾಣುತ್ತಿದ್ದ ಇಬ್ಬನಿ ಮೇಲೆ ನಡೆಯುವಾಗ ಬರಿಗಾಲಿಗೆ ತಂಪಿನ ಅನುಭವ. ಕಚಗುಳಿ ಇಡುತ್ತಿದ್ದ ಆ ಹುಲ್ಲ ಮೇಲಿನ ನಡಿಗೆ ಚೇತೋಹಾರಿಯಾಗಿತ್ತು. ಪುಟ್ಟ ಮಗುವಿನಂತೆ ಕೈಯಲ್ಲಿ ಚಪ್ಪಲಿ ಹಿಡಿದು ಬರಿಗಾಲಲ್ಲಿ ನಡೆಯುತ್ತಾ ಸಂಭ್ರಮಿಸುತ್ತಾ ಇದ್ದವಳನ್ನೇ ಗಮನಿಸಿದ ವಿಕ್ಕಿಯ ಬಿರುಮೊಗದಲ್ಲೂ ಸಣ್ಣ ನಗೆಯ ಎಳೆ. ಮುಖ ಊದಿಸಿಕೊಂಡು ತನ್ನೊಂದಿಗೆ ಹೆಜ್ಜೆ ಇಡುತ್ತಿದ್ದವನೆಡೆ ಓರೆ ನೋಟ ಬೀರಿ, “ವಾಹ್! ಎಷ್ಟು ಚೆನ್ನಾಗಿದೆ ನಿಮ್ಮೂರು. ನಂಗೆ “ಎಷ್ಟು ಇಷ್ಟವಾಗ್ತಾ ಇದೆ ಗೊತ್ತಾ. ಈ ಗಿಡ, ಮರ, ಆ ಗುಡ್ಡ, ಮನೆ ಸುತ್ತಾ ಇರೋ ಹಸಿರು, ಎಳೆ ಬಿಸಿಲು, ಈ ಚಳಿ ಅಬ್ಬಾ” ಎನ್ನುತ್ತಾ ಅವನ ಸುತ್ತ ಕೈ ಹಾಕಿ ಬಳಸಿದಳು. ಥಟ್ಟನೆ ಅವಳಿಂದ ದೂರ ಸರಿಯುತ್ತಾ.
“ಛೇ ಛೇ ಇದು ರಸ್ತೆ ಕಣೆ, ಯಾರಾದ್ರೂ ನೋಡಿದ್ರೆ” ಆತಂಕಿಸಿದ. “ನೋಡ್ಲಿ ಬಿಡು, ಒಂದು ಹೆಣ್ಣು ಗಂಡು ಜೊತೆಯಲ್ಲಿ ಇದ್ರೆ ಹೀಗೆ ದೂರ ದೂರ ಇರ್ತಾರಾ,
ನೀನಿನ್ನೂ ಹಳ್ಳಿಗೂಸಲೆ” ಅಣಕಿಸಿದಳು.
ಅವಹೇಳನದ ಧ್ವನಿ ಅವನನ್ನು ಕೆರಳಿಸಿತು. “ನೋಡೆ ಜಾನಿ, ನೀನು ಹೀಗೆ ಒಬ್ಳೆ ಬಂದಿದ್ದೆ ಸರಿ ಇಲ್ಲಾ. ಅಂಥದರಲ್ಲಿ ಹೀಗೆಲ್ಲ ನನ್ನ ಜೊತೆ ನಡೆದುಕೊಂಡರೆ ಅಷ್ಟೇ, ನಿನ್ನ ಗತಿ ಗೊವಿಂದಾ”
ಜಾನಕಿ ಹೀಗೆ ದಿಢೀರನೆ ತನ್ನ ಹುಡುಕಿಕೊಂಡು ಹಳ್ಳಿಯವರೆಗೂ ಬರುತ್ತಾಳೆ ಅಂತ ಕನಸು ಮನಸ್ಸಿನಲ್ಲಿಯೂ ವಿಕ್ಕಿ ಎಣಿಸಿರಲಿಲ್ಲ. ಕಾಲೇಜಿನಲ್ಲಿ ಓದುವಾಗ ತುಂಬಾ ಫಾಸ್ಟ್ ಅಂತ ಕರೆಸಿಕೊಳ್ಳುತ್ತಿದ್ದಳು. ಅವಳ ಬೋಲ್ಡ್‌ನೆಸ್ ಬಗ್ಗೆ ಅನೇಕ ಕಥೆಗಳು ಎಲ್ಲರ ಬಾಯಿಯಲ್ಲಿಯೂ ನಲಿದಾಡುತ್ತಿದ್ದವು. ಅದೆಲ್ಲ ಸುಳ್ಳಿರಬೇಕು, ಬರಿ ಗಾಸಿಪ್ ಎನಿಸಿದರೂ ಒಮ್ಮೊಮ್ಮೆ ನಿಜವಿರಬಹುದು ಎಂದೆನಿಸುತ್ತಿದ್ದುದ್ದು ನಿಜಾ. ಅವಳ ರೂಪ, ಶ್ರೀಮಂತಿಕೆ, ಧೈರ್ಯ, ಅವಳಪ್ಪನ ಅಧಿಕಾರ ಅವಳು ಏನು ಮಾಡಿದರೂ ಸರಿ ಅನ್ನಿಸಿಬಿಡುತ್ತಿತ್ತು. ಯಾರೆಲ್ಲ ಅವಳ ಜೊತೆ ಹೇಗೆಲ್ಲ ಇದ್ದಿರಬಹುದು ಅಂತ ನೆನೆಸಿಕೊಂಡೆ ಅಸಹನೆಗೊಳ್ಳುತ್ತಿದ್ದ ವಿಕ್ಕಿಗೆ ಜಾನಕಿ ಅಂದ್ರೆ ಒಂಚೂರು ಆಕರ್ಷಣೆ. ಅವಳ ಬಿಡುಬೀಸಾದ ವರ್ತನೆಗೆ ಕೊಂಚ ಮೆಚ್ಚುಗೆ, ಕಣ್ಣಿಗೆ ಕುಕ್ಕುವಂತಿದ್ದ ಅವಳ ದೇಹ ಸಿರಿಯೆಡೆ ಒಂದಿಷ್ಟು ಆಸೆ ಎಲ್ಲವೂ ಮನಸ್ಸಿನಲ್ಲಿದ್ದರೂ ಅದೇಕೋ ಮನಸ್ಸು ದೂರವೇ ಇರಲು ಬಯಸುತ್ತಿತ್ತು.
ಅವನು ದೂರ ಹೋದ್ರೇನು, ಜಾನಕಿಯೇ ಅವನತ್ತ ಆಸಕ್ತಿ ತೋರಿಸುತ್ತಿದ್ದಳು. ವಿಕ್ಕಿಯ ಮುದುರುವಿಕೆ ಅವಳಿಗೆ ಹಾಸ್ಯದ ವಸ್ತುವಾಗಿತ್ತು. ಅವನನ್ನು ಸಮೀಪಿಸಿ
ಮಾತಿಗೆಳೆದು ಅವನ ಮೈ, ಕೈ ಮುಟ್ಟುತ್ತ, ಅವನು ಕೆಂಪಾಗುಪುದನ್ನು, ಬ್ಬೆ ಬ್ಬೆ ಬ್ಬೆ ಎನ್ನುವುದನ್ನು ಕಾಣುತ್ತಾ ಮಜಾ ತೆಗೆದುಕೊಳ್ಳುತ್ತಿದ್ದಳು. ತನ್ನ ಒಂದು ಕಿರು ನಗುವಿಗಾಗಿ ಕಾದು ಕುಳಿತಿರುವ ಗಂಡುಗಳಲ್ಲಿ ಈ ವಿಕ್ಕಿ ಮಾತ್ರ ಬೇರೆ ಎನಿಸಲಾರಂಭಿಸಿದಾಗಿನಿಂದ ಅವನತ್ತ ವಿಶೇಷ ಆಸಕ್ತಿ. ಆ ಆಸಕ್ತಿಯೇ ಅವನನ್ನು ಇಲ್ಲಿಯವರೆಗೂ ಹುಡುಕಿಕೊಂಡು ಬರಲು ಪ್ರೇರೇಪಿಸಿತ್ತು. ಹುಡುಗರೇನು ಅವಳಿಗೆ ಹೊಸಬರಲ್ಲ. ಆದರೆ ಈ ವಿಕ್ಕಿಯದೇನೋ ವಿಶೇಷ ಸೆಳೆತ, ಆಕರ್ಷಣೆ. ಎಲ್ಲಿದೆ ಅವನ ಆಕರ್ಷಣೆ. ಮೆಲ್ಲನೆ ಅವನೆಡೆ ನಿರುಕಿಸಿದಳು. ಆ ತುಟಿಯೆ, ಮೀಸೆಯೇ, ನಗುವೆ, ವಿಶಾಲವಾದ ಎದೆಯೇ?
“ಏನೋ ಹಾಗೆ ನೋಡ್ತಾ ಇದ್ದೀಯ ಹೊಸಬರನ್ನು ನೋಡಿದಂತೆ” ಅವನ ಮಾತಿಗೆ ಎಚ್ಚೆತ್ತು ಜಾನಕಿ, “ನೀನು ಯಾವಾಗಲೂ ನನಗೆ ಹೊಸಬನೇ” ಎಂದುಕೊಂಡು ನಗುತ್ತ
ಹೆಜ್ಜೆ ಹಾಕಿದಳು.
“ಸಾಕೇನೇ ಹೋಗೋಣ್ವಾ” ಸುಸ್ತಾದವನಂತೆ ದಿಣ್ಣೆ ಮೇಲೆ ಕುಳಿತೇ ಬಿಟ್ಟ.
“ಯಾಕೋ, ಸುಸ್ತಾಗಿ ಬಿಟ್ಯಾ? ನಾನು ದಿನಾ ಆರು ಕಿಲೋಮೀಟರ್ ನಡೀತೀನಿ ಗೊತ್ತಾ. ನಂಗೆ ಸುಸ್ತಾಗೋದೇ ಇಲ್ಲಾ” ಎನ್ನುತ್ತಾ ಅವನಿಗೆ ಒರಗಿಕೊಂಡೇ ಕುಳಿತಳು.
ಥಟ್ಟನೆ ಎದ್ದು ನಿಂತ ವಿಕ್ಕಿ, “ಈಗ ಹೇಳು, ಯಾಕೆ ಹೀಗೆ ದಿಧೀರನೆ ನಮ್ಮನೆಗೆ ಬಂದುಬಿಟ್ಟೆ. ಎಲ್ಲರೆದುರೂ ನಿನ್ನ ಕೇಳೋಕೆ ಆಗ್ಲಿಲ್ಲ. ಮನೆಯಲ್ಲಿ ಎಲ್ಲರಿಗೂ ಏನೋ ಸಂಶಯ ಇದು ಹಳ್ಳಿ ಗೊತ್ತಾ ಇಂಥದಕ್ಕೆಲ್ಲ ವಿಶೇಷ ಅರ್ಥ ಕಲ್ಪಿಸುತ್ತಾರೆ”
ಜಾನಕಿ ಬಂದಾಗಿನಿಂದಲೂ ಅಸಹನೆಯಿಂದ ಒಳಗೊಳಗೇ ಕುದ್ದು ಹೋಗುತ್ತಿದ್ದ ವಿಕ್ಕಿ ಉತ್ತರಕ್ಕಾಗಿ ಕಾದು ನಿಂತ.
“ಲುಕ್ ಮೈ ಫ್ರೆಂಡ್, ಹೀಗೇ ಬರಬೇಕು ಅನ್ನಿಸಿತು ಬಂದೆ. ನಿಂಗೆ ಬೇಸರ ಆದ್ರೆ ಹೇಳಿಬಿಡು ಹೊರಟು ಬಿಡುತ್ತೇನೆ” ಸಹಜವಾಗಿ ಆಡಿದ್ದ ಮಾತು ಚುಚ್ಚಿದಂತಾಗಿ
ಮೆದುವಾದ.
“ಹಾಗಲ್ಲ ಜಾನಕಿ, ನೀನು ಈಗ್ಲೇ ಹೋಗಬೇಕು ಅಂತ ಅಲ್ಲಾ, ಮನೆಯವರು ಏನಾದ್ರೂ ತಿಳ್ಕೋತಾರೆ ಅಂತ ಅಷ್ಟೆ”
ಪಕಪಕನೆ ಜೋರಾಗಿ ನಕ್ಕ ಜಾನಕಿ, ಹಾಗೆ ನಕ್ಕು ನಕ್ಕು ಕೆಂಪಾಗಿ ಕಣ್ಣು ತುಂಬಾ ನೀರು ತುಂಬಿಕೊಂಡಳು. ಹೀಗೆ ನಗುವಾಗ ಜಾನಕಿ ತುಂಬಾ ಚೆನ್ನಾಗಿ ಕಾಣಿಸುತ್ತಾಳೆ ಎನಿಸಿ ವಿಕ್ಕಿ ಅವಳನ್ನೇ ನೇರವಾಗಿ ನೋಡಕೊಡಗಿದ. “ಅಲ್ವೋ ವಿಕ್ಕಿ, ಒಬ್ಬ ಹುಡುಗಿ ಹೇಳೋ ಮಾತನ್ನು ನೀನು ಹೇಳ್ತಾ ಇದ್ದೀಯಲ್ಲೋ, ಹಳ್ಳಿ ನೋಡೋಕೆ ನನ್ನ ಫ್ರೆಂಡ್ ಬಂದಿದ್ದಾಳೆ ಅಂತ ಹೇಳಿದರಾಯ್ತಪ್ಪ, ನಾನೇನು ನಿನ್ನ ಬಯಸಿ ಬಂದಿದ್ದೆನಾ” ಅವನ ಕಣ್ಣಲ್ಲಿ ಕಣ್ಣಿಟ್ಟು ಹೇಳಿದಾಗ ವಿಕ್ಕಿ ಒಮ್ಮೆಲೆ ಬಿಸಿಯಾದ. ಥಟ್ಟನೆ ಅವಳನ್ನು ಬಿಗಿಯಾಗಿ ಅಪ್ಪಿ, “ನಿಜಾ ಹೇಳು ಯಾಕೆ ಬಂದೆ” ಒರಟಾಗಿ ಕೇಳಿದ.
“ವಿಕ್ಕಿ, ಬಿಡು ನನ್ನ, ಬಿಡೋ, ಥೂ ನೀನೂ ಒಬ್ಬ ಗಂಡಸೇ ಅಲ್ವಾ, ನಿನ್ನಂಥವನಿಂದ ಅಪಾಯವಿಲ್ಲ ಅಂತ ನಾನು ಅಂದುಕೊಂಡಿದ್ದು ನನ್ನ ಮೂರ್ಖತನ” ಸಿಡಿದು ಅವನನ್ನು ಜೋರಾಗಿ ತಳ್ಳಿದಳು. ಆ ರಭಸಕ್ಕೆ ಕೆಳಕ್ಕೆ ಬಿದ್ದ ವಿಕ್ಕಿಗೆ ಹೀನಾಯವೆನಿಸಿ ಛೇ, ತಾನೆಂಥ ಕೆಲಸ ಮಾಡಿಬಿಟ್ಟೆ. ಜಾನಕಿಯ ಮುಂದೆ ಅದೆಷ್ಟು ಕೀಳಾಗಿ ಹೋದೆ, ಏನಾಯ್ತು ತನಗೆ ಪಶ್ಚಾತ್ತಾಪದಿಂದ ಮುಖ ಹಿಂಡಿಕೊಂಡ. ಮೆಲ್ಲನೆ ಎದ್ದು ಕುಳಿತವನಿಗೆ ಜಾನಕಿಯ ಮುಖ ನೋಡುವ ಧೈರ್ಯ ಸಾಲದೆ ಕಂಗೆಟ್ಟ.
“ಇಟ್ಸ್ ಆಲ್ ರೈಟ್ ವಿಕ್ಕಿ, ನನ್ನದೇ ತಪ್ಪು. ನಿನ್ನ ಜೊತೆ ತುಂಬಾ ಸಲುಗೆಯಿಂದ ನಡೆದುಕೊಂಡುಬಿಟ್ಟೆ. ಇದನ್ನ ನಾವಿಬ್ರೂ ಮರೆತು ಬಿಡೋಣ. ಏಳು ವಿಕ್ಕಿ, ನಂಗೇನು ನಿನ್ನ ಮೇಲೆ ಕೋಪ ಇಲ್ಲಾ” ವಾತಾವರಣವನ್ನು ತಿಳಿಗೊಳಿಸಲೆತ್ನಿಸಿದಳು. ತಪ್ಪಿತಸ್ಥ ಭಾವ ಕರಗದೆ ಮೌನವಾಗಿಯೇ ಎದ್ದು ನಿಂತು ಅವಳೊಂದಿಗೆ ಹೆಜ್ಜೆ ಹಾಕಿದ.
ನೆನ್ನೆ ಸಂಜೆ ಜಾನಕಿಯ ಕಾರು ಮನೆ ಮುಂದೆ ನಿಂತಾಗ ತಬ್ಬಿಬ್ಬಾದ ವಿಕ್ಕಿ ಅವಳೊಬ್ಬಳೇ ಕೆಳಗಿಳಿದಾಗ ಮತ್ತಷ್ಟು ದಂಗಾಗಿದ್ದ. ಎಲ್ಲೋ ದಾರಿ ತಪ್ಪಿ
ಬಂದಿರಬಹುದು ಎನಿಸಿದರೂ, ಇಷ್ಟು ದೂರ ಒಬ್ಬಳೇ ಈ ಕಾಡು ದಾರಿಯಲ್ಲಿ ಡ್ರೈವ್ ಮಾಡಿಕೊಂಡು ಬಂದಿದ್ದಾಳಲ್ಲಾ, ಧಾಷ್ಟ್ರ್ಯದ ಹುಡುಗಿ ಎಂದು ಮನಸ್ಸಿನಲ್ಲಿಯೇ
ಬೈಯ್ದುಕೊಳ್ಳುತ್ತ ಒಲ್ಲದ ಮನದಿಂದಲೇ ಸ್ವಾಗತಿಸಿದ್ದ.
ಬಂದವಳೇ, “ವಿಕ್ಕಿ, ಬೆಳಿಗ್ಗೆಯಿಂದ ನಿನ್ನ ನೆನಪು ಕಾಡೋಕೆ ಶುರುವಾಯ್ತು. ನಿಮ್ಮೂರ ಹೆಸರು ಹೇಳಿದ್ದೆಯಲ್ಲಾ ಹುಡುಕಿಕೊಂಡು ಬಂದುಬಿಟ್ಟೆ” ಎಂದು
ಎಲ್ಲರೆದುರಿಗೂ ಹೇಳಿಬಿಟ್ಟಾಗ ನಾಚಿಕೆಯಿಂದ ತಲೆತಗ್ಗಿಸುವಂತಾಗಿತ್ತು. ತಾನೇ ಮುಂದುವರಿದು, “ನಾನು ವಿಕ್ಕಿ ಫ್ರೆಂಡ್,” ಒಂದೆರಡು ದಿನ ನಿಮ್ಮನೆಯಲ್ಲಿ ಇದ್ದು
ಹೋಗೋಣ ಅಂತ ಬಂದಿದ್ದೀನಿ”. ತನ್ನನ್ನು ತಾನೇ ಪರಿಚಯಿಸಿಕೊಳ್ಳುತ್ತಾ ಬೆರಗು ಹುಟ್ಟಿಸಿದಳು. ತನ್ನ ಸರಳ ಸ್ವಭಾವದಿಂವ, ನಡೆನುಡಿಗಳಿಂದ ಮನೆಯವರನ್ನೆಲ್ಲ ಬಂದ ಕ್ಷಣವೇ ಗೆದ್ದುಕೊಂಡು ಬಿಟ್ಟಿದ್ದಳು. ಮುಜುಗರದಿಂದ ಸತ್ತು ಹೋಗುವಂತಾಗುತ್ತಿದ್ದರೂ, ಬಾರದ ನಗೆ ಬರಿಸಿಕೊಂಡು ಅವಳ ಮಾತಿಗೆಲ್ಲ ಹ್ಹೂಂಗುಟ್ಟಿದ.
ಮನೆ ತುಂಬಾ ಓಡಾಡುತ್ತ ಮನೆಯವರೊಂದಿಗೆ ಬೆರೆತು ಹೋಗಿ ಎಳೆ ಹುಡುಗಿಯಂತೆ ಸಂಭ್ರಮಿಸುತ್ತಿದ್ದುದನ್ನು ಕಂಡು ಈ ಹುಡುಗಿ ಯಾವ ಸೀಮೆಯವಳಪ್ಪ
ಎಂದು ಗೊಣಗುಟ್ಟಿದ್ದ. ತಂಗಿಯ ಕೆಣಕು ನೋಟವನ್ನು ತಪ್ಪಿಸಲು ಹರಸಾಹಸಪಡುತ್ತಾ ಈ ಪರಿಸ್ಥಿತಿ ತಂದಿತ್ತವಳಿಗೆ ಹಿಡಿಶಾಪ ಹಾಕುತ್ತಿದ್ದ. ರಾತ್ರಿ ತಂಗಿಯನ್ನ ಕಾಡಿ ಅವಳ ಸೀರೆ ಉಡಿಸಿಕೊಂಡು, ತುಂಡು ಕೂದಲನ್ನೆಲ್ದಾ ಎತ್ತಿಕಟ್ಟಿ, ಮಲ್ಲಿಗೆ ಮಾಲೆ ಮುಡಿದು, ಅಮ್ಮನ ಒಡವೆಗಳನ್ನೆಲ್ಲಾ ಹಾಕಿಕೊಂಡು ತನ್ನ ಮುಂದೆ ನಿಂತಾಗ ಬೆರಗಾಗಿದ್ದ. “ಯಾರು ಈ ನಾಟಕದ ಹುಡುಗಿ, ಸರ್ಕಸ್ಸಿನಿಂದ ತಪ್ಪಿಸಿಕೊಂಡ ಬಫೂನ್ ತರ ಇದ್ದ ಹಾಗಿದ್ದಾಳೆ” ಎನ್ನುತ್ತ ಗಹಗಹಿಸಿ ನಕ್ಕು ಅವಳನ್ನು ಪೆಚ್ಚಾಗಿಸಿದ್ದ. ಅವನೆಷ್ಟು ಅಣಕವಾಡಿದರೂ ಅವಳ ಹೆಣ್ತನ ಅರಳಿದಂತೆ ಆ ವೇಷದಲ್ಲಿ ಕಂಡದಂತೂ ಸುಳ್ಳಾಗಿರಲಿಲ್ಲ.
“ಹೋಗೋ, ನೀನೇನು ನನ್ನ ಮೆಚ್ಚಬೇಕಾಗಿಲ್ಲ, “ನನ್ನ ಫೋಟೋ ತೆಗಿ. ಈ ಡ್ರೆಸ್ಸಿನಲ್ಲಿ ನಾನು ಹೇಗೆ ಕಾಣಿಸ್ತೀನಿ ಅಂತ ನನಗೆ ಗೊತ್ತಾಗಬೇಕು” ಎಂದು ಕ್ಯಾಮೆರಾ
ಕೈಗಿಟ್ಟುಕೊಂಡು ಫೋಸು ಕೊಟ್ಟಳು. ಸೆರಗ ಮರೆಯಲ್ಲೂ ಎದ್ದು ಕಾಣುತ್ತಿದ್ದ ತುಂಬಿದೆದೆ, ಆ ಹೊಕ್ಕುಳು, ಬೆಳ್ಳಗಿನ ಹೊಟ್ಟೆ, ಹಿಡಿಯಷ್ಟಿದ್ದ ನಡು, ಮತ್ತೇ ಮತ್ತೇ ಅವಳನ್ನು ನೋಡುವಂತಾಗಿಸಿ ಜಿಲ್ಲನೆ ಬೆವರಿದ. ನರನರಗಳೆಲ್ಲ ಸೆಟೆದು ಕೊಂಡಂತಾಗಿ ತನ್ನಿಂದ ಅವಳ ಫೋಟೋ ತೆಗೆಯಲು ಅಸಾಧ್ಯವೆನಿಸಿ,
“ಹೋಗೆ, ಅವಳ ಕೈಯಲ್ಲಿಯೇ ಈ ಫ್ಯಾನ್ಸಿ ಡ್ರೆಸ್ ಫೋಟೋ ತೆಗೆಸಿಕೋ” ಎಂದು ಹೊರ ಬಿದ್ದವನು ತಣ್ಣನೆ ಗಾಳಿಯಲ್ಲಿ ಒಂದಿಷ್ಟು ಅದ್ದಾಡಿದ ಮೇಲೆಯೇ ಅವನ ಮೈ
ಮನಸ್ಸು ತಣ್ಣಗಾದದ್ದು, ತಂಪಾದದ್ದು, ಛೇ ಹುಡುಗಿ ಇಲ್ಲೂ ಬಂದು ಕಾಡಬೇಕೆ ಎಂದು ಪರಿತಪಿಸಿದ.
ಅವನು ತಣ್ಣಗಾದಾಗಲೆಲ್ಲ ಬಿಸಿ ಏರಿಸಿ ಕೆಣಕುತ್ತಿದ್ದ ಅವಳ ಮುಂದೆ ಸೋತು ಹೋಗಿದ್ದ. ಸುಖದ ಕ್ಷಣ ಹಿತವೆನಿಸಿದ್ದರೂ, ಪ್ರಶ್ನೆ ಬೃಹದಾಕಾರವಾಗಿ ಅವನ ಮುಂದೆ ಬೆಳೆದು ನಿಂತಿತ್ತು. ಇಡೀ ದಿನ ಅವಳ ಕಣ್ಣು ತಪ್ಪಿಸಿದ್ದ ತಪ್ಪಿತಸ್ಥ ಭಾವ ಸುಡುತ್ತಿತ್ತು. ರಾತ್ರಿಯಿಡೀ ನಿದ್ರೆಯಿಲ್ಲದೆ ಬೆಂಕಿಯಲ್ಲಿ ಬೆಂದಂತಹ ಅನುಭವ. ಚಿಂತಿಸಿ ಚಿಂತಿಸಿ ಕೊನೆಗೊಂದು ತೀರ್ಮಾನಕ್ಕೆ ಬಂದ ಮೇಲೆಯೇ ನಿದ್ರೆ ಹತ್ತಿದ್ದು.
ಜಾನಕಿ ಬೆಳಗ್ಗೆ ಹೊರಟು ನಿಂತಾಗ ವಿಹ್ವಲನಾದ. ಜಾನಕಿ ಹೊರಟು ಬಿಡುತ್ತಾಳೆ. ಆಮೇಲೆ ತಾನು…. ತಾನು….ಶೂನ್ಯ ಆವರಿಸಿ ಕ್ಷಣಗಳು ಉತ್ಕಟವಾಗಿ ಕತ್ತು ಹಿಸುಕುತ್ತಿವೆ ಎನ್ನಿಸಿ ಭೀತಿಗೊಂಡ. ಉಸಿರುಗಟ್ಟಿದಂತಾಗಿ ಚಡಪಡಿಸಿದ. ಒಳಗೊಳಗೆ ಒದ್ದಾಡಿದ. ಜಾನಕಿ ಮಾತ್ರ ಇದಾವುದರ ಅರಿವಿಲ್ಲದಂತೆ ಸಹಜವಾಗಿದ್ದಳು. ಅದೇ ಕೆಣಕು ಮಾತು, ಅದೇ ದಿಟ್ಟತನ.
“ಲೋ ವಿಕ್ಕಿ, ನಾನು ಹೋಗ್ತಾ ಇದ್ದೀನಿ. ಸಂತೋಷವಾಗ್ತಾ ಇದೀಯಾ? ನಾನು ಬಂದಾಗಿನಿಂದ ಗುಮ್ಮಗುಸಗನ ಥರಾ ಇದ್ದೀಯಲ್ಲ, ಈಗ ಹಾಯಾಗಿರು. ಬರ್ತೀನಿ
ಕಣೋ. ಸಾರಿ ಹೋಗ್ತೀನಿ ಕಣೋ” ಎದೆಯೊಳಗೆ ಬೆಂಕಿ ಬಿದ್ದಂತೆ ಅನುಭವ. ಎದೆಯುರಿ ತಡೆಯದೆ ತಣ್ಣನೆ ನೀರನ್ನು ಗಟಗಟನೆ ಕುಡಿದ. ಉರಿ ಕಡಿಮೆಯಾಗದೆನಿಸಿ ಎಲ್ಲರಿಗೂ ಹೇಳಿ ಅಮ್ಮ, ಅಪ್ಪನಿಗೆ ನಮಸ್ಕರಿಸುತ್ತಿದ್ದ ಅವಳನ್ನೆ ದೀನನಾಗಿ ನೋಡಿದ. ಕಾರು ಹತ್ತುತ್ತಿದ್ದವಳನ್ನು ತಡೆದು, “ನಡಿ, ಪೇಟೆವರೆಗೂ ಬಿಟ್ಟು ಬರ್ತೀನಿ” ಎಂದು ಸ್ಟೇರಿಂಗ್ ಹಿಡಿದ.
“ಒಳ್ಳೆಯದಾಯ್ತ ಬಿಡು, ಈ ಹಳ್ಳಿ ದಿಣ್ಣೇಲಿ ನಾನು ಕಷ್ಟಪಟ್ಕೊಂಡು ಬಂದೆ. ಈಗ ನಂಗೆ ಆರಾಮ” ಎನ್ನುತ್ತ ಅತ್ತ ಕಡೆಯಿಂದ ಹತ್ತಿದಳು. ಮೆಲ್ಲನೆ ಕಾರು ಚಲಾಯಿಸಿದ.
ಕಾರು ಹೊರಟಾಗಿನಿಂದಲೂ ಮೌನವಾಗಿಯೇ ಕುಳಿತಿದ್ದ ವಿಕ್ಕಿ, ಮರದ ಕೆಳಗೆ ಕಾರು ನಿಲ್ಲಿಸಿದ. ಮಾತನಾಡಲು ಹರಸಾಹಸ ನಡೆಸಿ ಸೋತು ಸುಮ್ಮನೆ ಕುಳಿತುಬಿಟ್ಟ.
“ಹೇಳು ವಿಕ್ಕಿ, ಏನೋ ಹೇಳಬೇಕು ಅಂತ ಇದ್ದೀಯಾ” ತಾನೇ ಮೌನ ಮುರಿದಳು ಜಾನಕಿ.
“ನನ್ನ ಕ್ಷಮಿಸಿಬಿಡು ಜಾನಿ, ನನ್ನಿಂದ ನಿನ್ನ ಮನಸ್ಸಿಗೆ ತುಂಬಾ ಬೇಸರವಾಗಿದೆ ಅಂತ ನಂಗೊತ್ತು. ಅದಕ್ಕೆ ನೀನು ಇಷ್ಟು ಬೇಗ ಹೊರಟು ಬಿಟ್ಟೆ” ನೋವನ್ನು
ಮುಚ್ಚಿಡಲಾಗಲಿಲ್ಲ ಅವನಿಗೆ.
“ಇಲ್ಲಾ ವಿಕ್ಕಿ, ನಿನ್ನ ಬಗ್ಗೆ ಖಂಡಿತಾ ಬೇಸರ ಇಲ್ಲಾ. ಆದರೆ ನೀನೂ ಕೂಡ ಎಲ್ಲರಂತೆ ನನ್ನ ನೋಡಿ ಬಿಟ್ಟೆಯಲ್ಲ ಅನ್ನೋ ನೋವು ಆ ಕ್ಷಣ ಕಾಡಿದ್ದಂತೂ ನಿಜಾ.
ಯಾಕೆ ವಿಕ್ಕಿ, ಎಲ್ಲರೂ ನನ್ನ ಒಂದೇ ದೃಷ್ಟಿಯಲ್ಲಿ ನೋಡ್ತಾರೇ? ನನ್ನ ಡ್ರೆಸ್, ಮೇಕಪ್ಪು, ನನ್ನ ಸಲುಗೆ ಇದೆಲ್ಲಾ ಕಾರಣವಿರಬಹುದೇ? ಎಲ್ಲರ ಜೊತೆ ಸರಳವಾಗಿ ನಡೆಡುಕೊಳ್ಳುತ್ತೇನೆ. ಹೆಣ್ಣು ಗಂಡು ಅನ್ನೋ ತಾರತಮ್ಯ ನನಗಿಲ್ಲ. ಒಂದ್ವಿಶಯ ಗೊತ್ತಾ ವಿಕ್ಕಿ, ಯಾವ ಗಂಡು ಇದುವರೆಗೂ ನನ್ನ ಮೈ ಬಿಸಿ ಏರಿಸಿಲ್ಲ. ಯಾವ ಗಂಡಿನ ಸಾಮೀಪ್ಯದಲ್ಲೂ ನನ್ನ ಹೆಣ್ತನ ಅರಳಲಿಲ್ಲ. ಹಾಗಿದ್ದ ಮೇಲೆ ನಾನು ಹೇಗೆ ಬೇರೆಯವರ ದೃಷ್ಟಿಯಲ್ಲಿ ಕೆಟ್ಟವಳಾದೆ. ನಾನಿನ್ನೂ ನಿರೀಕ್ಷೆಯಲ್ಲಿಯೇ ಇದ್ದೇನೆ. ಬಹುಶಃ ನೀನು ನೆನ್ನೆ ನನ್ನೊಂದಿಗೆ ಅನುಚಿತವಾಗಿ ನಡೆದುಕೊಳ್ಳದಿದ್ದಲ್ಲಿ ನಿನ್ನಲ್ಲಿ ನನ್ನ ಕನಸಿನ ರಾಜಕುಮಾರನನ್ನು ಹುಡುಕುತ್ತಿದ್ದೆನೇನೋ. ಆದರೆ ಆತುರಪಟ್ಟು ನನ್ನ ಕನಸನ್ನು ಒಡೆದುಬಿಟ್ಟೆ. ನೀನೂ ಎಲ್ಲರಂತೆ ಅನ್ನೋ ನಿರಾಶೆಯಿಂದ ವಾಪಸ್ಸು ಹೋಗುತ್ತಾ
ಇದ್ದೀನಿ” ದೀರ್ಘವಾಗಿ ನುಡಿದಳು.
“ಜಾನಿ, ನನ್ನಿಂದ ತಪ್ಪಾಗಿದೆ. ಹಾಗಂತ ನಾನೇನೋ ಮಾಡಬಾರದ ಅಕೃತ್ಯವನ್ನೇನೂ ಎಸಗಿಲ್ಲ. ನಿನ್ನ ಹೂ ಮನವನ್ನು ಘಾಸಿಗೊಳಿಸಿದ್ದೇನೆ. ನಿಜಾ. ನನ್ನ ತಪ್ಪನ್ನು ತಿದ್ದಿಕೊಳ್ಳುವ ಅವಕಾಶ ಕೊಡು, ನನ್ನೇ ಮದ್ವೆ ಮಾಡ್ಕೊ ಜಾನಿ”
“ಮದ್ವೇನಾ? ಬೇಡಾ…. ಬೇಡಾ. ನನ್ನವನ ಬಗ್ಗೆ ನಾನು ನೂರೆಂಟು ಕನಸನ್ನು ಕಟ್ಟಿದ್ದೇನೆ. ನಂಗೊತ್ತು ನನ್ನ ಬಗ್ಗೆ ನಿಂಗೆ ಅಸಹನೆ ಇದೆ. ನನ್ನ ಸ್ನೇಹವೇ ನಿನಗೆ ಅಸಹನೀಯ ಅಂದ ಮೇಲೆ ಮದ್ವೆ ಸಾಧ್ಯನಾ ವಿಕ್ಕಿ. ನಾನೂ ನಿನ್ನಂತೆಯೇ ಯೋಚಿಸಿದೆ. ಆದರೆ ಇಲ್ಲಿಗೆ ಬಂದ ಮೇಲೆ ವಿಕ್ಕಿ, ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಅವಕಾಶ ಸಿಕ್ಕಿತು. ಗೊಂದಲದಲ್ಲಿ ಮುಳುಗಿ ಸಮಸ್ಯೆಗಳನ್ನು ಸೃಷ್ಟಿಸುವ ಸಂದಿಗ್ಧತೆ ಬೇಡಾ ವಿಕ್ಕಿ. ನೀನು ನನ್ನ ಸ್ನೇಹಿತನಾಗಿಯೇ ಕೊನೆವರೆಗೂ ಇದ್ದು ಬಿಡು. ನಿನ್ನಂತಹ ಸ್ನೇಹಿತ ಇದ್ದಾನೆಂಬ ನೆಮ್ಮದಿಯಿಂದ ಹೊರಟು ಬಿಡ್ತೀನಿ” ಗಂಭೀರವಾಗಿತ್ತವಳ ಧ್ವನಿ. ಆ ದನಿಯಲ್ಲಿ
ನಿರ್ಧಾರದ ಸೆಡವು ಇತ್ತು.
ಬೆಳಕಿನ ಚುಕ್ಕಾಣಿ ಹಿಡಿಯಲು ಹೊರಟ ಅವನಿಗೆ ನಿರಾಶೆಯಾದರೂ ಸ್ನೇಹದ ಕಂದೀಲು ಸಿಕ್ಕಿದಂತಾಗಿ ದೀರ್ಘವಾಗಿ ಅವಳನ್ನೇ ನೋಡುತ್ತಾ “ಸರಿ ಜಾನಿ, ನಿನ್ನ
ಸ್ನೇಹವಾದಾರೂ ಈ ಬಾಳಿನಲ್ಲಿ ಶಾಶ್ವತಾವಾಗಿರಲಿ” ಎಂದುಸುರಿ ಎಂದಾದರೊಮ್ಮೆ ಬದಲಾಗಿಯಾಳೆಂಬ ನಿರೀಕ್ಷೆಯೊಂದಿಗೆ ಕಾರು ಸ್ಟಾರ್ಟ್ ಮಾಡಿದ.
*****
ಪುಸ್ತಕ: ದರ್ಪಣ