ಹದ್ದು ಹದ್ದು ಹದ್ದು ಅಣ್ಣ ಸುತ್ತಮುತ್ತಲೂ
ರಣಹದ್ದುಗಳ ರಾಜ್ಯವಾಯ್ತು ಎತ್ತೆತ್ತಲೂ ||ಪ||
ರಕ್ತ ಮಾಂಸ ತಿನ್ನುತ್ತಾವೆ ಶಕ್ತಿ ಹೀರಿ ಒಗೆಯುತಾವೆ
ಗೊತ್ತೆ ಆಗದಂಥ ರೀತಿ ಕೊಲ್ಲುತಾವೆ
ಕೆಂಗಣ್ಣು ಕೆಕ್ಕರಿಸುತ ಕೊಕ್ಕು ತಿಕ್ಕಿ ಡೊಕ್ಕರಿಸುತ
ಹೆದರಿಸುತ್ತ ಬೆದರಿಸುತ್ತ ಸುಲಿಯುತಾವೆ ||೧||
ಪಂಚಾಯ್ತಿ ತಾಲೂಕು ಜಿಲ್ಲಾ ಕಛೇರಿಗಳಾಗೆ
ಹೊಂಚಾಕಿ ಕುಂತಾವೆ ಕುರ್ಚಿಗಳೊಳಗೆ
ಫೋಲೀಸು ಠಾಣದಾಗೆ ಕೋರ್ಟಿನ ತಾಣದಾಗೆ
ಆಸುಪತ್ರೆ ಅಲ್ಲಿ ಇಲ್ಲಿ ಎಲ್ಲ ಕಡೆಗೆ ||೨||
ಒಳ್ಳೇ ಬೆಣ್ಣೆ ಮಾತಿನ್ಯಾಗ ಮಣ್ಣು ತಿನಿಸಿ ಬಿಡುತಾವೆ
ಕಳ್ಳ ದಾರಿ ಸಂದುಗಳಾಗೆ ಕೈಯಾಡ್ತಾವೆ
ಮಳ್ಳ ಮಂದಿ ಕುರೀ ಮಂದೇ ಕಟುಕರ ಕೈಯಾಗ್ಗುಬ್ಬಿಯಂಗೆ
ಕಳ್ಳು ಹರದು ಕೂಗಿಕೊಂಡ್ರು ಚೂರಿ ಆಡ್ತಾವೆ ||೩||
ಬಿಳೀ ಬಟ್ಟೆ ಹಾಕಿಕೊಂಡು ಬಿಳೀ ಟೊಪ್ಗಿ ಇಟ್ಟುಕೊಂಡು
ಬೆಳ್ಳ ಬೆಳ್ಳನ್ನಗುವ ಚಿಮ್ಮಿ ಮಳ್ಮಾಡ್ತಾವೆ
ಓಟು ಕೊಡ್ರಿ ದೈವ ನಿಮ್ಮ ದಾಸನಂತ ಹೇಳಿಕೊಂಡು
ನೋಟು ಬಟ್ಟೆ ಬಾಟ್ಲಿ ಕೊಟ್ಟು ನಿಮ್ಮ ಕೊಳ್ತಾವೆ
ವೋಟು ಗೆದ್ದ ಮ್ಯಾಲೆ ಹದ್ದು ಕಾರುಗಳಾಗೆ ಹಾರತಾವೆ
ನೀಟಾಗಿ ಗದ್ದುಗೇರಿ ಲೂಟಿ ಮಾಡ್ತಾವೆ ||೪||
ಗುಡಿಗಳಾಗೆ ಹೊಟ್ಟೆ ಜುಟ್ಟು ಹಣೇ ಮೈಗೆ ನಾಮದ ಬೊಟ್ಟು
ಮಠಗಳಾಗೆ ಬೊಜ್ಜಿನ ಹದ್ದು ಭಕ್ತರನ್ನುಂಗೋ ಹದ್ದು
ಕಳ್ಳ ಸಂತೆ ಪ್ಯಾಟಿಗಳಾಗೆ ದಲ್ಲಾಳಿ ಮಳಿಗೆಗಳಾಗೆ
ಪೆಂಡೆ ಪೆಂಡೆ ಝಣಝಣಾಂತ ರಣ ರಣಾ ಹದ್ದು ||೫||
ದರಸದುದ್ದುಕ್ ರಕ್ತ ಬೆವರು ಸುರಿಸಿ ರೈತ ದುಡ್ಡು ಒಯ್ದು
ಮಾರುಕಟ್ಟೆ ಅಂಗಡ್ಯಾಗೆ ಹದ್ದಿಗ್ಹಾಕ್ತಾನೆ
ರಟ್ಟೆ ಮುರ್ದು ಜೀವಾ ಹಿಂಡಿ ಫ್ಯಾಕ್ಟರಿಯೊಳಗೆ ದುಡಿಯುವಂಥ
ಕೆಲಸಗಾರ ಭಂಡವಾಳಿಗ ಹದ್ದಿಗ್ಹಾಕ್ತಾನೆ ||೬||
ಹದ್ದುಗಳಿಗೆ ಹೆದರಿ ಹೆದರಿ ಬಾಳಿದ್ದಿನ್ನು ಸಾಕೋ ಯಣ್ಣಾ
ಒದ್ದೋದ್ದವ್ನ ಎಳಿಯೋ ಅಣ್ಣ
ಗುದ್ದಿದ್ರೇನೆ ಸರಿಯೋ ಅಣ್ಣ
ಜನಾ ದುಡ್ದುದ್ ತಿಂಬೋವಂಥ ಹದ್ದುಗಳ್ಹಣಿರಿ
ಜನಗಳ ಹೆಸರಿನ್ಯಾಗೆ ಗಳಸೋ ಬಸುರ ತುಳೀರಿ ||೭||
ಖಾದೀ ಬಟ್ಟೆ ಮಂತ್ರಿಯಾಗ್ಲಿ ಪ್ಯಾಂಟು ಬೂಟು ಆಫೀಸರಾಗ್ಲಿ
ಖಾಕಿ ಬಟ್ಟೆ ಖಾದಿಯಾಗ್ಲಿ ಜನಗಳ ಸೇವೆ ಮಾಡ್ಲಿ
ನಮ್ಮ ಕೈಕಾಲೊತ್ತೋದ್ ಬ್ಯಾಡ ನಮ್ಮ ಕೆಲಸ ಮಾಡ್ಲಿ
ದನಗಳಂಗೆ ನಮ್ಮನ್ನೋಡ್ದೆ ಮನಸ್ಯಾರಂಗೆ ನೋಡ್ಲಿ ||೮||
ರೆಕ್ಕೆ ಕಿತ್ರಿ ಪುಕ್ಕ ಹಿರೀರಿ ಕೊಕ್ಕು ಸೀಳಿ ಹಾಕ್ರಿ
ಹದ್ದುಗಳಿಂದ ದೇಶಾ ಸುಡುಗಾಡಾಗೋಯ್ತಲ್ಲ ಇಕ್ರಿ
ಹದ್ದಿನ ರೂಪ ಕಂಡ ಕೂಡ್ಲೆ ತಡಮಾಡಿದ್ರೆ ತಪ್ಪು
ನೋಡೀ ನೋಡೀ ಸುಮ್ನೆ ಇದ್ರೆ ನಾವೇ ಅಲ್ಲೇ ಬೆಪ್ಪು ||೯||
೬-೪-೮೬
*****