‘ಸಲಾಮ್ರಿ’
ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ.
‘ಸಲಾಮ್ರೀಽ ಏಕ ಪೈಸಾ.’
ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ ಲಾರಂಭಿಸಿದಳು. ಮೈ ತುಂಬ ಹರಕು ಬಟ್ಟೆ ತೊಟ್ಟಿದ್ದಾಳೆ. ಕೂದಲುಗಳನ್ನು ಹರವಿದ್ದಾಳೆ. ಹೊಲಸು ಮೈ; ಹೊಲಸು ಅರಿವೆ. ಎಲ್ಲವೂ ಹೊಸು ಹೊಲಸು..
‘ಅಯ್ಯೋ ಮುಟ್ಟ ಬೇಡ, ಏಽ ಸರಿ ದೂರ.’
‘ಏಕ ಪೈಸಾಽ…..,
ಅದೇ ಸಾಲೆಯನ್ನು ಬಿಟ್ಟು ಹೊರಬಿದ್ದ ಹುಡುಗರು ‘ಹುಚ್ಚಿ ರಾಮಿ ಬಂದ್ಲು…. ಹುಚ್ಚಿ ರಾಮಿ’ ಎಂದು ಹಿಡಿ ತುಂಬ ಮಣ್ಣನ್ನು ತುಂಬಿಕೊಂಡು ಆಕೆಯ ಮೇಲೆ ತೂರುತ್ತ ನಡೆದಿದ್ದರು.
ಈ ದೃಶ್ಯವನ್ನು ವೆಂಕಟೇಶನಿಗೆ ನೋಡುವುದಾಗಲಿಲ್ಲ. ಹತ್ತಿರ ಲಕ್ಷ್ಮಿ ಬೇರೆ ಕೂತಿದ್ದಳು. ತನ್ನ ಜೇಬಿನಿಂದ ಒಂದು ಕಾಸನ್ನು ತೆಗೆದು ಹುಚ್ಚಿಯ ಮೈ ಮೇಲೆ ಎಸೆದನು.
’ಸಲಾಮ್ರೀ’ ಎಂದು ಹುಡುಗರ ಗುಂಪಿನಲ್ಲಿ ಮಾಯವಾದಳು.
* * * *
ಧಡಕ್! ಧಡಕ್! ವೆಂಕಟೇಶನು ಮುಗ್ಧನಾಗಿ ಕುಳಿತಿದ್ದಾನೆ. ರೈಲು ‘ರಾಮಿ ಹುಚ್ಚಿ! ರಾಮಿ ಹುಚ್ಚಿ!’ ಎಂಬ ಸಪ್ಪಳವನ್ನೇ ಮಾಡುವಂತೆ ಅವನಿಗೆ ಅನಿಸುತ್ತಿತ್ತು. ಮದುವೆಯಾದ ಮೇಲೆ ಲಕ್ಷ್ಮಿಯ ಸಂಗಡ ಎಷ್ಟೋ ಸಲ ಎಷ್ಟು ಹುರುಪಿನಿಂದ ಇರುತ್ತಿದ್ದ! ತಂದೆ ತಾಯಂದಿರ ಮಮತೆ ಬಂಧುಬಳಗದವರ ಒಲುಮೆ, ಎಷ್ಟೊಂದು ಅವನ ಹೃದಯದಲ್ಲಿ ಚಿನ್ನಾಟವಾಡುತ್ತಿದ್ದವು! ಲಕ್ಷ್ಮಿಯ ಸಂಗಡ ತನ್ನ ಊರಿನ ಬಗ್ಗೆ ಮಾತನಾಡಿಯೇ ಆಡುತ್ತಿದ್ದ. ಅವನ ನಾಲಗೆಯೆ ಸೋಲುತ್ತಿರಲಿಲ್ಲ. ಆದರೆ ಇಂದು ಮೌನವಾಗಿದ್ದಾನೆ. ಲಕ್ಷ್ಮಿ ಎರಡು ಮೂರು ಸಲ ಕೈ ಮುಟ್ಟಿ ಏನ್ರೀ? ಎಂದು ಕೇಳಿದರೂ ಅವನಿಗೆ ಪ್ರಜ್ಞೆಯಿಲ್ಲ.
ರಾಮಿ ಹುಚ್ಚಿ! ಮತ್ತೆ ಮತ್ತೆ ಅವನ ಮನಸ್ಸಿನಲ್ಲಿ ಸುಳಿದಾಡುತ್ತಿದೆ; ಮಣ್ಣಿನ ಧೂಳಿಯಲ್ಲಿ, ಪುಂಡ ಹುಡುಗರ ಕೇಕೆಯಲ್ಲಿ ಮರೆಯಾಗಿ ಹೋದ ರಾಮಿಯ ದೃಶ್ಯ ಅವನ ಕರುಳನ್ನು ಹಿಂಡಿ ಹಿಂಡಿ ಒಗೆಯುತ್ತಿದೆ.
ಅಹುದು. ವೆಂಕಟೇಶನೂ ಹುಡುಗನಿದ್ದ. ರಾಮಿಯ ಪರಿಚಯವಾದಾಗ್ಗೆ ಹುಡುಗಿಯಿದ್ದಳು. ರಾಮಿಯ ವೆಂಕಟೇಶನ ಸಂಗಡ ಗೋಲಿ-ಗುಂಡು ಆಡಲಿಕ್ಕೆ ಬರುತ್ತಿದ್ದಳು. “ನಾ ಬಲ್ಲಿ! ನಾನು ಗೆದ್ದೆ! ಡೀಕು ನೀನು” ಎಂದು ಹುರುಪಿನಿಂದ ಮಾತನಾಡುತ್ತ ಗೇಲಿಯಾಡುತ್ತಿದ್ದಳು. ವೆಂಕಟೇಶನನ್ನು ಸೋಲಿಸಿ ಡೀಕಲಿಕ್ಕೆ ಹಚ್ಚಿದಾಗ್ಗೆ ಅವನ ಕೈ ತೊಗಲೆಲ್ಲ ಸುಲಿದು ಬಿಡುತಿತ್ತು. ‘ಏ ರಾಮೀ, ಗಂಡರಾಮಿ’ ಎಂದು ಹಲ್ಲು ಕಿರಿಯುತ್ತಿದ್ದ.
ರಾಮಿಯ ನಿಜವಾದ ಹೆಸರೇನೊ ಯಾರಿಗೂ ಗೊತ್ತಿಲ್ಲ. ಊರಲ್ಲಿ ಯಾರನ್ನು ಕೇಳಿದರೂ ಅವರು ‘ರಾಮಿ’ ಎಂದೇ ಕರೆಯುವರು. ಅವಳು ಗಂಡಸರಿಗಿಂತ ಗಂಡಸಾಗಿದ್ದಳು. ಗಂಡುಹುಡುಗರ ಟೋಳಿಯಲ್ಲಿ ನಿಶ್ಚಿಂತಳಾಗಿ ತಿರುಗಾಡಲು ಅವಳು ಎಂದೂ ಹೆದರಲಿಲ್ಲ. ಅವರ ಸಂಗಡ ಚಿಣಿಫಣಿ ಹುಡತೀತಿ, ಖೋಖೋ, ಚಂಡು ಎಲ್ಲ ಆಟಗಳನ್ನು ಆಡುತ್ತಿದ್ದಳು. ಅವರ ಸಂಗಡ ಚೇಷ್ಟೆ ಮಾಡುತ್ತ ಓಡಾಡುತ್ತಿದ್ದಳು. ಓಣಿಯಲ್ಲಿ ಅವಳನ್ನು ಕಂಡವರೆಲ್ಲ ‘ಗಂಡರಾಮಿ’ ಎಂದು ಕರೆಯಲು ಪ್ರಾರಂಭಿಸಿದರು. ಅದೇ ‘ರಾಮಿ, ರಾಮಿ’ ಎಂಬ ಹೆಸರು ಪ್ರಸಿದ್ಧವಾಯಿತು.
ರಾಮಿಯ ಹೆಸರು ಎಷ್ಟೋ ಜನರ ನಾಲಗೆಗಳಲ್ಲಿ ಆಡುತ್ತಿತ್ತು. ಅದೆಂತಹ ಪ್ರಸಿದ್ಧಿ! ಇದೆಲ್ಲ ಅವಳ ಗಂಡುಬೀರಿತನ, ದುಂಡ ದುಂಡ ಅಂಗಾಂಗಗಳು ಸಾಧಾರಣ ದಪ್ಪವಾದ ತುಟಿಗಳು, ಹಾರುವ ಹುಬ್ಬುಗಳು, ತುಸು ತೇಜವುಳ ಕಣ್ಣುಗಳು ಬೆನ್ನಿನ ಭಾಗವನ್ನು ಮುಚ್ಚುವ ದಟ್ಟವಾಗಿ ಬೆಳೆದ ಅವಳ ಕೂದಲಗಳು, ಎಲ್ಲವೂ ಮೋಹಕವಾಗಿದ್ದವು. ಆದರೆ ಮೆದುಳಿನಲ್ಲಿ ಏನೂ ತಥ್ಯವಿರಲಿಲ್ಲ. ಹೆಂಗಸಿನ ಮೃದುಹೃದಯ ಆಕೆಯಲ್ಲಿರಲಿಲ್ಲ. ಓರಣ ನಾಜೂಕುತನ ಯಾವವೂ ಅವಳಿಗೆ ಗೊತ್ತಿರಲಿಲ್ಲ. ಶೌರ್ಯವನ್ನಷ್ಟೆ ಬೇಡುತ್ತಿದ್ದಳು; ಸ್ವಾತಂತ್ರ್ಯವನ್ನಷ್ಟೆ ಬೇಡುತ್ತಿದ್ದಳು. ಒಂದು ಹುಡುಗರ ಸಂಗಡ ಚಡ್ಡಿ ಯನ್ನು ಹಾಕಿಕೊಂಡು ಈಜಲಿಕ್ಕೆಂದು ಹೋಗುತ್ತಿದ್ದಳು. ಅವಳು ಮೇಲಿಂದ ಹಾರಿ ನೀರಿನಲ್ಲಿ ಮುಳುಮುಳುಗಿ ಈಜುವಾಗ್ಗೆ ಮೇಲೆ ನಿಂತ ಕೆಲವು ಯುವಕರು ಬೆರಗಾಗಿ ಅವಳನ್ನೇ ದಿಟ್ಟಿಸಿ ನೋಡುತ್ತಿದ್ದರು. ಅವಳು ಸೀರೆಯ ಸೆರಗನ್ನು ಕಟ್ಟಿಕೊಂಡು ಮೇಲಕ್ಕೆ ಕೈಗಳನ್ನೆತ್ತಿ ಜೋರಿನಿಂದ ಛಿಣಿಯನ್ನು ಹೊಡೆಯುವಾಗ್ಗೆ ಎಲ್ಲಿಯೋ ಗದ್ದಲದಿಂದ ‘ಭಲೆ ಭಲೆ’ ಎಂಬ ಸದ್ದು ಕೇಳಬರುತ್ತಿತ್ತು.
ವೆಂಕಟೇಶನೂ ಇಂಥ ಗುಂಪುಗಳಲ್ಲಿ ಎಷ್ಟೋ ಸಲ ಓಡಾಡಿದ್ದನು. ಇಂಥ ಮಾತುಗಳು ಅವನ ಕಿವಿಗಳ ಮೇಲೆ ಬಿದ್ದಿದ್ದವು. ರಾಮಿಯು ಯಾವಾಗಲಾದರೊಮ್ಮೆ ಭೆಟ್ಟಿಯಾದಾಗ್ಗೆ ಅವಳ ಇತಿಹಾಸವನ್ನು ತಿಳಿದುಕೊಳ್ಳಬೇಕೆಂದು ಆ ಮಾತುಗಳ ಪ್ರಸ್ತಾಪವನ್ನು ಎತ್ತುತ್ತಿದ್ದನು. ಆದರೆ ಅವಳು ಯಾವುದಕ್ಕೂ ಉತ್ತರ ಕೊಡುತ್ತಿರಲಿಲ್ಲ. ಆಟಗಳ ವಿಚಾರವನ್ನಷ್ಟೆ ಮಾತ ನಾಡುತ್ತಿದ್ದಳು.
ವೆಂಕಟೇಶನಿಗೆ ಮನಸ್ಸನ್ನು ಹಿಡಿದಂತಾಗುತ್ತಿತ್ತು. ತಂದೆತಾಯಿಗಳ ಮುಂದೆ ಅವಳ ಹೆಸರನ್ನು ಎತ್ತಿದ ಕೂಡಲೇ ‘ಅವಳ ಗುರ್ತು ಎಲ್ಲಿ ಹಚ್ಚಿದೆಯೋ ಮೂರ್ಖ!’ ಎಂದು ಬೈದುಬಿಡುತ್ತಿದ್ದರು. ಆ ಗಂಡರಾಮಿಯ ಬಗ್ಗೆ ವೆಂಕಟೇಶನಿಗೆ ಏಕೋ ಕಳವಳ.
ಕಾಲವೂ ಹಾಗೆಯೆ ಇರುವುದೆ! ಮಕ್ಕಳು ಹಾಗೆಯೆ ಮಕ್ಕಳಾಗಿ ಇರ ಬಹುದೆ! ರಾಮಿಯು ಬೆಳೆಯುತ್ತ ನಡೆದಿದ್ದಾಳೆ. ವೆಂಕಟೀಶನೂ ಬೆಳೆಯುತ್ತಿದ್ದಾನೆ. ವೆಂಕಟೇಶನು ಅದೇ ಊರಿನಲ್ಲಿ ಇಂಗ್ಲೀಷ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಾನೆ. ರಾಮಿಯು ಬೀದಿ ಬೀದಿ ತಿರುಗುತ್ತಿದ್ದಾಳೆ. ಆಕೆಯ ನಡಿಗೆಯಲ್ಲಿ ಗಂಡುಸತನವು ಮತ್ತಿಷ್ಟು ಒಡೆದು ಕಾಣುತ್ತಿದೆ. ಮುಖಮುದ್ರೆಯಲ್ಲಿ ಬದಲಾಗುತ್ತಿದೆ. ಗಂಡಸರಿಗಿಂತ ಹೆಂಗಸರಲ್ಲಿ ಎಷ್ಟು ಬೇಗನೆ ಮನ್ಮಥನು ಕಂಡುಕೊಳ್ಳುತ್ತಾನೆ ! ಜನರನ್ನು ಆಕರ್ಷಿಸುವ ಮತ್ತೊಂದು ಕಳೆ ಅವಳಲ್ಲಿ ತೋರಲಾರಂಭಿಸಿದೆ.
ವೆಂಕಟೇಶನು ಸಾಲೆಯಿಂದ ಬರುವಾಗ ಅಥವಾ ಹೋಗುವಾಗಲೋ ಅಥವಾ ಮತ್ಯಾವುದಾದರೂ ವೇಳೆಯಲ್ಲಿಯೋ ರಾಮಿಯನ್ನು ನೋಡುತ್ತಿರುತ್ತಾನೆ. ಅವಳು ಅವನನ್ನು ಮುಂಜಾವಿನಲ್ಲಿ ಭೆಟ್ಟಿಯಾದರೆ “ಈಸಲಿಕ್ಕೆ ಬರಿಯೇನು?” ಎಂದು ಕೇಳುವಳು; ಕೆಲವೊಂದು ಸಲ ಯಾವುದಾದರೊಂದು ಆಟವಾಡಲು ಕರೆಯುತ್ತಿದ್ದಳು. ಇದು ವೆಂಕಟೇಶನಿಗೆ ಅಸಹ್ಯವೆನಿಸುತಿತ್ತು. ಅವಳಿಗೆ ಜಬರಿಸಿದ್ದ. ಆದರೆ ಅವಳು ಕೇಳಬೇಕೆ ? ಮುಂದೆ ಮುಂದೆ ಅವಳನ್ನು ಮಾತನಾಡಿಸುವುದನ್ನೂ ಬಿಟ್ಟು ಅವಳನ್ನು ಕಂಡಕೂಡಲೇ ದೂರ ಹಾಯುತ್ತಿದ್ದನು. ವೆಂಕಟೇಶನು ದೂರದಲ್ಲಿ ಮತ್ತೊಂದು ಬದಿಯಲ್ಲಿ ಹೋಗುವಾಗ್ಗೆ ರಾಮಿಯನ್ನು ಹೌರಗೆ ಹೊರಳಿ ಹೊರಳಿ ನೋಡುತ್ತಿದ್ದ. ದಿನದಿನವೂ ಅದೇನು ಬದಲಾವಣೆ! ಅಂದವಾದ ಪತ್ತಲದ ಸೆರಗನ್ನು ಹೇಗೆಯೋ ಮೈ ಮೇಲೆ ಹಾಕಿ ಕೊಳ್ಳುತಿದ್ದಳು. ತರತರದ ಬ್ಲೌಜಗಳನ್ನು ಹಾಕುತ್ತಿದ್ದಳು. ಬಣ್ಣ ಬಣ್ಣದ ಚಪ್ಪಲಿಗಳನ್ನು ಹಾಕುತ್ತಿದ್ದಳು. ಇದೆಲ್ಲ ವೆಂಕಟೇಶನಿಗೆ ವಿಚಿತ್ರವೆನಿಸಿತು. ಇದು ಎನು ? ಇವಳು ಹಿಗೇಕೆ? ಎಂದು ಕೇಳಬೇಕೆಂದು ಒಂದು ಸಲ ಅವಳ ಎದುರಿಗೇ ಬಂದನು. ಆದರೆ ಧೈರ್ಯ ಸಾಲದು. ಹಾಗೆಯೆ ದಾರಿಯಲ್ಲಿಯ ಮರದ ಬೊಡ್ಡೆಯಲ್ಲಿ ಅಡಗಿಕೊಂಡುಬಿಟ್ಟ; ಅವಳು ಕೈ ಬೀಸುತ್ತ ಹಾದುಹೋದಳು! ಘಮಘಮ ಸುವಾಸನೆಯೂ ಅವಳ ಬೆನ್ನು ಹತ್ತಿ ಹೋಯಿತು! ಅಂದಿನಿಂದ ವೆಂಕಟೇಶನಿಗೆ ಅದೇನೋ ದೊಡ್ಡ ಸಂಶಯ. ಪರೀಕ್ಷೆಯ ಅಭ್ಯಾಸಕ್ಕಿಂತಲೂ ರಾಮಿಯ ಬಗ್ಗೆ ಅವನು ಎಷ್ಟೋ ಸಲ ವಿಚಾರಿಸುತ್ತಿದ್ದ. ‘ಇವಳು ಯಾರು? ಎಲ್ಲಿಯವಳು?’
ಒಂದು ದಿನ ಅಕಸ್ಮಾತ್ತಾಗಿ ವೆಂಕಟೇಶನು ರಾಮಿಯ ಎದುರಿಗೆ ಬಂದ. ಆದರೆ ಆಕೆ ಅವನನ್ನು ಏನೂ ಮಾತಾಡಿಸಲಿಲ್ಲ. ಕೈ ಬೀಸುತ್ತ ಹಾಗೆಯೆ ಸಾಗಿ ಹೋದಳು. ತನಗೆ ಬಗೆ ಹರಿಯದಾದ ಪ್ರಶ್ನೆಯನ್ನು ತಿಳಿದುಕೊಳ್ಳಬೇಕೆಂದು ಆತುರನಾಗಿ ಒಂದು ದಿನ ಬಣ್ಣದ ಚೆಂದವಾದ ಒಂದು ಅರಿವೆಯ ತುಣುಕನ್ನು ಕೊಟ್ಟನು. ಅವಳು ಇವನನ್ನು ನೋಡುತ್ತ ವಿಚಿತ್ರವಾಗಿ ಹುಬ್ಬು ಹಾರಿಸಿದಳು; ಎಂದೂ ಕಾಣದಂಥ ನಗೆಯನ್ನು ನಕ್ಕಳು. ರಾಮಿಯು ಮೊದಲಿನಂತೆ ಆಟಕ್ಕೆ ಕರೆಯಲಿಲ್ಲ. ಮತ್ತೆ ಅವಳು ಮಾತನಾಡಲಿಲ್ಲ. ಇದೇನು ವಿಚಿತ್ರ! ತೋಟದಲ್ಲಿ ಒಂದು ಹೂವು ವಿಕಸಿತವಾಗಿ ನಿಂತು, ತನ್ನ ಸುವಾಸನೆಯನ್ನು ಎಷ್ಟು ದೂರ ಬೇಗನೆ ಹರಡುವುದು! ಅದರ ಸುಳಿವನ್ನು ಕಂಡುಹಿಡಿದು ಎಷ್ಟು ಜನರು ಅದನ್ನು ಮೂಸಲು ಯತ್ನಿಸುವರು! ರಾಮಿಯೂ ಹೂವು! ಸಂದಿ ಸಂದಿಗಳಲ್ಲಿ ಅವಳಿಗೆ ಸುಸ್ವಾಗತ!!
ನಾಲ್ಕು ವರ್ಷವಾಗಿ ಹೋಯಿತು. ವೆಂಕಟೇಶನು ಊರಿನಿಂದ ದೂರ ನಾಗಿಯೇ ಇದ್ದಾನೆ. ತನ್ನ ಅಭ್ಯಾಸಕ್ಕೆಂದು ಹೋದವನು ಸೂಟಿಯಲ್ಲಷ್ಟೆ ತಿರುಗಿ ಬರುತ್ತಿದ್ದನು. ಬಂದು ಕೆಲವೇ ದಿನಗಳನ್ನು ಊರಲ್ಲಿ ಕಳೆದು ತಿರುಗಿ ಹೋಗಿಬಿಡುತ್ತಿದ್ದನು. ಕೆಲವೇ ದಿನಗಳಿದ್ದರೂ ರಾಮಿಯ ನೆನಪು ಯಾವಾಗಲಾದರೊಮ್ಮೆ ಹಾಯುತ್ತಿತ್ತು. ಆದರೆ ಅವಳ ಸುಳಿವನ್ನು ಅವನು ಕಂಡಿರಲಿಲ್ಲ.
ಬೇಸಿಗೆಯ ಸೂಟಿ, ಮಧ್ಯಾಹ್ನದಲ್ಲೆಲ್ಲ ಬಿಸಿಲಿನ ತಾಪವನ್ನು ತಾಳಿ ಬಾಳಿ ಬೆಂಡಾದ ವೆಂಕಟೆಶನು ಸಂಜೆಯಲ್ಲಿ ತಂಪಾದ ಹವೆಯು ಬೀಸುತ್ತಿರಲು ಉಡಿಗೆ- ತೊಡಿಗೆಗಳನ್ನು ಓರಣವಾಗಿ ತೊಟ್ಟುಕೊಂಡು ಮನೆ ಬಿಟ್ಟು ಅದೇ ಹೊರಟಿದ್ದ. ಊರ ಸಮೀಪದ ಒಂದು ಓಣಿಯಲ್ಲಿ ಯಾರೋ ನರಳುವ ಧ್ವನಿ ಕೇಳಬಂತು. ಹೋಗಿ ನೋಡಿದ. ಸುತ್ತಲೂ ಕೆಲವು ಜನರು ಮುಕುರಿದ್ದಾರೆ.
ಅವಳು ರಾಮಿಯಾಗಿದ್ದಳು. ಉಡಿಗೆಗಳು ಹಳೆಯವು. ಮೈ ಬಣ್ಣ ಕಂದಿದೆ, ಮೋರೆಯ ಮೇಲೆ ಕಳಿಯಿಲ್ಲ. ಹೊಟ್ಟೆನೋವೆಂದು ಒಂದೇ ಸವನೆ ನರಳುತ್ತಿದ್ದಾಳೆ. ಸಮೀಪದಲ್ಲಿಯ ಮನೆಯವರು ಬಂದು ಅವಳನ್ನು ಉಪ ಚರಿಸುತ್ತಿದ್ದಾರೆ. ನೋಡ ನೋಡುತ್ತಲೆ ವೆಂಕಟೇಶನಿಗೆ ಎಲ್ಲವೂ ಭಯಂಕರ ವೆನಿಸಿತು. ಕಾರಣಗಳನ್ನು ಕೂಡಲೇ ತಿಳಿದುಕೊಂಡನು. ಹೂವನ್ನು ಮೂಸು ವಾಗ ಅದು ಮಾಸಿಹೋಗುವ ಅರಿವು ಯಾರಿಗೆ ಉಂಟು! ಆದರೆ ಹೂವನ್ನು ಮೂಸಿದವರು ಎಲ್ಲಿ? ಕೆಲವು ನಿಮಿಷಗಳಲ್ಲಿಯೇ ಅವಳನ್ನು ಆಸ್ಪತ್ರೆಗೆ ಹೊತ್ತು ಕೊಂಡು ಹೋದರು. ವೆಂಕಟೇಶನು ಅವಳನ್ನು ದಿಟ್ಟಿಸಿ ನೋಡಿದನು. ಒಂದೆರಡು ದಿನ ರಾತ್ರಿಯೆಲ್ಲಾ ನಿದ್ದೆಯೇ ಬರಲಿಲ್ಲ!!
ಇವೆಲ್ಲ ಚಿತ್ರಗಳು ಚಲಚಿತ್ರಗಳಂತೆ- ವೆಂಕಟೇಶನ ಮನಸ್ಸಿನ ಮುಂದೆ ಹಾಯ್ದುವು. ರೈಲು ಧಡಕ್! ಧಡಕ್! ಸಪ್ಪಳ ಮಾಡುತ್ತಿದ್ದಿತು. ಇವನ ಮನಸ್ಸು ‘ರಾಮಿ! ರಾಮಿ!’ ಎಂದೆನ್ನುತಿದ್ದಿತು. ಒಮ್ಮೆ ಉದ್ವೇಗದಿಂದ ‘ರಾಮಿ’ ಎಂದುಬಿಟ್ಟ.
ಸಮೀಪದಲ್ಲಿ ಕುಳಿತ ಲಕ್ಷ್ಮಿ ಮನಸ್ಸಿನಲ್ಲಿ ಹೌಹಾರಿದಳು.
“ಅವಳೇ ಪಾಪ!” ಎಂದಳು.
“ಏನದು? ನಿನಗೇನಾದರೂ ಗೊತ್ತಿದೆಯೆ?” ಎಂದು ಆತುರತೆಯಿಂದ ಕೇಳಿದ.
ತಂದೆಯು ತಾಯಿಯು ಗರ್ಭಿಣಿಯಿರುವಾಗಲೆ ಸತ್ತಿದ್ದನ್ನೂ, ತಾಯಿಯು ಕೂಸನ್ನು ಹಡೆದು ಸತ್ತಿದ್ದನ್ನೂ, ಆ ಮೇಲೆ ರಾಮಿ ಯಾರದೋ ನೆರಳಿನಲ್ಲಿದ್ದು ಕೊಂಡು ಯಾರದೋ ಮನೆಯಲ್ಲಿ ಊಟ ಮಾಡಿಕೊಂಡು ಅನಾಥೆಯಾಗಿ ಬಾಳು ಕಳೆದಿದ್ದನ್ನೂ ಲಕ್ಷ್ಮಿಯು ತಾನು ಕೇಳಿದನ್ನೆಲ್ಲವನ್ನು ಹೇಳಿದಳು. ಅವಳು ಗಂಡುಬೀರಿಯಾಗುತ್ತಿರುವುದನ್ನು ನೋಡಿ ಎಲ್ಲರೂ ಅವಳ ಕೈ ಬಿಟ್ಟು ಬಿಟ್ಟಿದ್ದರು. ಜಗತ್ತೆ ಅವಳ ಮನೆ. ಅವಳನ್ನು ಎಲ್ಲರೂ ಮಾತನಾಡಿಸುವವರು. ಆದರೆ ಇದೀಗ ಯಾರು ಮಾತನಾಡಿಸಬೇಕು? ಸೌಂದರ್ಯ ಹೋಗಿದೆ. ಜೀವನದಲ್ಲಿ ಸ್ವಾರಸ್ಯವಿಲ್ಲ. ಆ ಹೂವನ್ನು ಯಾರೋ ಬಳ್ಳಿಯಿಂದ ಮುರುಟಿ ಕಿತ್ತು ಎಸೆದಿದ್ದಾರೆ. ಎಲ್ಲರೂ ತುಳಿಯುವವರೆ!
ವೆಂಕಟೇಶ ಮದುವೆಯಾಗಿದ್ದಾನೆ. ಲಕ್ಷ್ಮಿಯಂತಹ ಹೆಂಡತಿಯು ಮನೆಗೆ ಬಂದಿದ್ದಾಳೆ. ಬ್ಯಾಂಕಿನಲ್ಲಿ ಒಂದು ನೌಕರಿ ಸಿಕ್ಕಿದೆ. ತಂದೆ ತಾಯಿಯಿದ್ದಾರೆ; ಸುಖಗಳನ್ನು ಕಷ್ಟಗಳನ್ನು ಅವನ ಬಾಯಿಂದ ಕೇಳಿಕೊಂಡು ಪ್ರೀತಿಯ ಭಾವದಿಂದ ಅವನನ್ನು ನೋಡಿಕೊಳ್ಳುತ್ತಾರೆ. ಅದೆಲ್ಲವೂ ಎಷ್ಟು ಸೊಗಸು! ಆದರೆ ರಾಮಿ……..?
ವೆಂಕಟೇಶನ ಕಣ್ಣುಗಳಲ್ಲಿ ಹನಿಗಳು ಬಳಬಳನೆ ಉರುಳಿದವು. ಜನರಿಗೆ ಕಾಣಬಾರದೆಂದು ಕೈ ಚೌಕವನ್ನು ಕಣ್ಣುಗಳ ಮೇಲೆ ಒಗೆದ.
* * * *
ಮತ್ತೊಂದು ಸಲ ವೆಂಕಟೇಶನು ತಮ್ಮೂರಿಗೆ ಬಂದಿದ್ದ. ಅದೇ ಸ್ಟೇಶನದ ದಾರಿಯಲ್ಲಿ ರಾಮಿಯು ಮತ್ತೆ ಭೆಟ್ಟಿಯಾದಳು. ಸಲಾಮು ಹೊಡೆದು ‘ಏಕ ಪೈಸಾ!’ ಕೇಳಿದಳು. ವೆಂಕಟೇಶ ಕೊಡಲೇ ಜೇಬಿನಿಂದ ತೆಗೆದು ಅವಳ ಕೈಯಲ್ಲಿ ಕೊಟ್ಟ.
ಅದು ಪೈಸಾ ಆಗಿದ್ದಿಲ್ಲ….. ಬೆಳ್ಳಿಯ ಒಂದು ರೂಪಾಯಿಯ ನಾಣ್ಯ ವಾಗಿದ್ದಿತು. ಅವಳು ‘ಸಲಾಮ್ಽ’ ಅನ್ನುತ್ತ ಓಟಕೊಟ್ಟಳು.
ಓಣಿಯಲ್ಲಿಯ ಧೂಳ ಆಕೆಯನ್ನು ಆವರಿಸಿ ಮರೆಮಾಡಿತು.
*****