Home / ಕಥೆ / ಸಣ್ಣ ಕಥೆ / ವೀರಮತಿ

ವೀರಮತಿ

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ನೊಣಗಳನ್ನು ಝಾಡಿಸುತ್ತಿದ್ದುವು. ಹಕ್ಕಿಗಳು ಮರದ ಎಲೆಗಳಲ್ಲಿ ಹುದುಗಿಕೊಂಡು, ಸುಖವಾಗಿ ನಿದ್ದೆ ಹೋಗುತ್ತಿದ್ದುವು. ಕಾಗೆಯು ಅತ್ತಿತ್ತ ಅರಚುತ್ತ ಮರದಿಂದ ಮರಕ್ಕೆ ಹಾರುತ್ತಲಿತ್ತು. ಗಿಡುಗನು ಗಗನದ ಮಧ್ಯದಲ್ಲಿ ಮಂಡಳಿಸಿ, ನೆಲದ ಮೇಲೆ ಸುಳಿಯುವ ಕೊಳೆಯನ್ನು ತೀಕ್ಷ್ಣದೃಷ್ಟಿಯಿಂದ ನೋಡಿ, ಫಕ್ಕನೆ ಕೆಳಕ್ಕೆ ಹಾರಿಬಂದು, ಹತಾಶನಾಗಿ ಸಮೀಪದಲ್ಲಿದ್ದ ಉನ್ನತವಾದ ಮಂದಿರದ ಸೂರುಗಳಲ್ಲಿ ಕುಳಿತುಕೊಳ್ಳುತ್ತಿತ್ತು. ದೇವಗಿರಿಯ ಅರಮನೆಯ ಬಳಿಯಲ್ಲಿ ಕಾವಲುಗಾರರು ಬಹಳ ಎಚ್ಚರಿಕೆಯಿಂದ ಪಹರೆ ಮಾಡುತ್ತಿದ್ದರು. ಅರಮನೆಯಲ್ಲಿ ಜನರು ಕಾರ್ಯಗೌರವದಿಂದ ಹೋಗುತ್ತ ಬರುತ್ತ, ಅಲ್ಲಲ್ಲಿ ಗುಂಪುಕೂಡಿ ನಿಂತು, ತಮ್ಮೊಳಗೆನೇ ಏನನ್ನೋ ವಿಚಾರ ಮಾಡುತ್ತಿದ್ದರು. ರಾಜಮಂದಿರದ ಕಿರುಬಾಗಿಲಿನಿಂದ ಒಂದು ಪಲ್ಲಕ್ಕಿಯು ಹೊರಗೆ ಬಂದಿತು. ಪ್ರಜೆಗಳೆಲ್ಲರೂ ವಿಶೇಷವಾದ ಕಾರ್ಯದಲ್ಲಿ ಮಗ್ನರಾದುದರಿಂದ ಪಲ್ಲಕ್ಕಿಯನ್ನು ಯಾರೂ ಲಕ್ಷಿಸಲಿಲ್ಲ. ಅಂದಣವು ತಪ್ತವಾದ ರಾಜಮಾರ್ಗವನ್ನು ಬಿಟ್ಟು, ನಿರ್ಜನವಾದ, ಶೀತಲವಾದ ರಹಸ್ಯಮಾರ್ಗವನ್ನು ಹಿಡಿದುಕೊಂಡು ಹೋಯಿತು. ಪಲ್ಲಕ್ಕಿಯು ಕೋಟೆಯನ್ನು ಸಮೀಪಿಸುತ್ತಲೇ ಪಹರೆಯವನು ಅದನ್ನು ನೋಡಿ, ಖಡ್ಗವನ್ನು ಎತ್ತಿಹಿಡಿದು ಅದನ್ನು ಅಡ್ಡಿಮಾಡದೆ ಹೊರಕ್ಕೆ ಬಿಟ್ಟನು. ಅಂದಣವು ದೇವಗಿರಿಯ ಕೋಟೆಯನ್ನು ಆಕ್ರಮಿಸಿ, ಅದರ ಬಹಿರ್ಭಾಗದಲ್ಲಿದ್ದ ಅರಣ್ಯವನ್ನು ಸೇರಿತು. ಕೊನೆಗೆ ವಿಜನವಾದ ಬೀಕರವಾದ ಅರಣ್ಯಮಧ್ಯದಲ್ಲಿದ್ದ ಕಾಳಿಕಾದೇವಸ್ಥಾನದ ಬಳಿಯಲ್ಲಿ ಆಳುಗಳು ಪಲ್ಲಕ್ಕಿಯನ್ನು ಬಿಟ್ಟುಹೋದರು. ಕೂಡಲೇ ರಮಣಿಯರಿಬ್ಬರು ಅಂದಣದಿಂದ ಕೆಳಕ್ಕೆ ಇಳಿದು, ಕಾಲ್ನಡೆಯಾಗಿ ದೇವಸ್ಥಾನವನ್ನು ಪ್ರವೇಶಿಸುವುದಕ್ಕೆ ಸಿದ್ಧರಾಗಿ, ತಮ್ಮ ವಸ್ತ್ರಾಲಂಕಾರಗಳನ್ನು ಸರಿಗೊಳಿಸುವುದಕ್ಕೆ ಒಂದು ಮುಹೂರ್ತ ಅಲ್ಲಿಯೇ ತಡೆದರು.

ಇಬ್ಬರೂ ಸಮವಯಸ್ಯೆಯರು. ಇಬ್ಬರೂ ಅಸಮಾನ ಸೌಂದರ್ಯಶಾಲಿನಿಯರಾಗಿದ್ದರೂ, ಒಬ್ಬಳ ರೂಪಲಾವಣ್ಯಗಳು ಮತ್ತೊಬ್ಬಳ ಅಂದಚೆಂದವನ್ನು ಅತಿಕ್ರಮಿಸಿದ್ದುವು. ಭಾರತೀಯ ಕವಿಗಳು ಸ್ತ್ರೀಯನ್ನು ‘ಚಂದ್ರಮುಖಿ’, ‘ಕಮಲವದನೆ’ ಎಂದು ವರ್ಣಿಸಿರುವರು. ಈ ಯುವತಿಯು ಈ ಅಭಿಮಾನಕ್ಕೆ ಪಾತ್ರಳಾಗಿರಲಿಲ್ಲ, ಏಕೆಂದರೆ ಇವಳ ಮುಖಮಂಡಲವು ನೈಸರ್ಗಿಕ ಚಂದ್ರನಂತಾಗಲಿ ಕಮಲದಂತಾಗಲಿ ಶೋಭಿಸಿರಲಿಲ್ಲ. ವರ್ತುಲನಾದ ಪೂರ್ಣಚಂದ್ರನು ಸ್ವಲ್ಪ ದೀರ್ಘಾಕಾರವನ್ನು ಧರಿಸಿದರೆ ಎಷ್ಟು ಮಧುರವಾಗಿ ಶೋಭಿಸಬಹುದೋ, ಅಥವಾ ಧೀರ್ಘವಾದ ಕಮಲದ ಪತ್ರವು ಸ್ವಲ್ಪ ವೃತ್ತಾಕಾರವನ್ನು ವಹಿಸಿದರೆ ಎಷ್ಟು ರಮ್ಯವಾಗಿ ಉಜ್ವಲಿಸುವುದೋ ಅಷ್ಟೇ ಸೌಂದರ್ಯ ಮಯವಾಗಿ ಈ ರಮಣಿಯ ಮುಖಮಂಡಲವು ರಂಜಿಸುತ್ತಿತ್ತು. ನಯನೇಂದ್ರಿಯಗಳು ಹರಿಣಲೋಚನದಂತೆ ಕಂಪಿಸುತ್ತಲಿದ್ದುವು. ಈ ಕಂಪನವು ಅವುಗಳಲ್ಲಿ ಪ್ರವಹಿಸುತ್ತಲಿದ್ದ ಪ್ರೇಮರಸದಿಂದ ಸರಿಯಾಗಿ ವ್ಯಕ್ತವಾಗುತ್ತಿರಲಿಲ್ಲ. ಅದೂ ಅಲ್ಲದೆ ಮುಖದ ಮೇಲೆ ಕ್ಷಾತ್ರತೇಜಸ್ಸು ಸಂಪೂರ್ಣವಾಗಿ ಪ್ರತಿಫಲಿಸುತ್ತಿದ್ದುದರಿಂದ, ಭಯದಿಂದ ಉಂಟಾದ ಕಂಪನವು ಎಲ್ಲಿಯೋ ಅದೃಶ್ಯವಾಗಿತ್ತು. ಸೂರ್ಯನ ಉಷ್ಣದಿಂದಲೋ ಅಥವಾ ಮಾರ್ಗದ ಆಯಾಸದಿಂದಲೋ ಪ್ರಾಪ್ತವಾದ ಸ್ವೇದಬಿಂದುಗಳನ್ನು ಧರಿಸಿದ ಆ ಮುಖವು ಹಿಮಜಲದಿಂದ ಮಾನವಾದ ಹೇಮಂತ ಋತುವಿನ ಕಮಲದಂತೆ ಕನಿಕರವನ್ನು ಉಂಟುಮಾಡುತ್ತಲಿತ್ತು. ಮಸ್ತಕದ ಹಿಂದುಗಡೆಯಲ್ಲಿದ್ದ ವೇಣಿಯು ಶಿರವನ್ನು ಏರಿದ ಚೀನಾಂಬರದಿಂದ ಆಚ್ಛಾದಿತವಾಗಿದ್ದುದರಿಂದ, ಅವಳ ಪೃಷ್ಟದಲ್ಲಿಯೇ ಸ್ವತಂತ್ರವಾಗಿ ಕ್ರೀಡಿಸುತ್ತಲಿತ್ತು. ಹಸುರು ರೇಷ್ಮೆಯ ಸೆರಗನ್ನು ದಕ್ಷಿಣ ಬಾಹುವಿನ ಕೆಳಗಡೆಯಿಂದ ಸೆಳೆದುಕೊಂಡು, ಉಡಿಯಲ್ಲಿ ಬಿಗಿದುದರಿಂದ ವಕ್ಷೋರಂಗವು ಇನ್ನೂ ಉನ್ನತವಾಗಿಯೂ ಉಜ್ವಲವಾಗಿಯೂ ತೋರುತ್ತಲಿತ್ತು. ಮನ್ಮಥ ವೈಜಯಂತಿಯಂತೆ ವಾಯುವಿನಲ್ಲಿ ಮೆಲ್ಲಮೆಲ್ಲನೆ ತೇಲುತ್ತಿರುವ ಹಸುರಾದ ದುಕೂಲವು ಅವಳ ಅಂಗಕಾಂತಿಯನ್ನು ಸಂಪೂರ್ಣವಾಗಿ ಮುಚ್ಚಿದ್ದರೂ, ಅಂಗಛಾಯೆಯು ವಸ್ತ್ರದ ಹಿಂದುಗಡೆಯಿಂದ ನೋಟಕರ ಮನಸ್ಸನ್ನು ಆಕರ್ಷಿಸುವಂತಿತ್ತು. ದೇಹವರ್ಣವು ಹರಿದ್ರ; ಸ್ವಲ್ಪ ಹಳದಿ; ಸುವರ್ಣ ಕಮಲದಂತೆ ಹರಿದ್ರವಾಗಿರಲಿಲ್ಲ. ಹಿಮದಿಂದ ಆದ್ರವಾದ ಸುವರ್ಣಕಮಲವು ಹರಿತಪತ್ರದ ಛಾಯೆಯಿಂದ ಯಾವ ಕಾಂತಿಯನ್ನು ಧರಿಸುವುದೋ, ಚಂದ್ರಕಾಂತಿಯಿಂದ ನೆನೆದ ಹೊಂಗೇದಗೆಯ ಹಸುರೆಲೆಯ ಮರೆಯಲ್ಲಿ ಯಾವ ಬಣ್ಣದಿಂದ ಶೋಭಿಸುವುದೋ, ಆ ಕಾಂತಿಯೂ ಆ ವರ್ಣವೂ ಆ ಯುವತಿಯ ಪ್ರಫುಲ್ಲಿತ ದೇಹದಲ್ಲಿ ಸಮ್ಮಿಳಿತವಾಗಿದ್ದುವು.

ರಮಣಿಯಿಬ್ಬರು ದೇವಸ್ಥಾನವನ್ನು ಪ್ರವೇಶಿಸಿದರು. ಕಾಳಿಕಾ ಮೂರ್ತಿಯ ಸಮ್ಮುಖದಲ್ಲಿ ಬದ್ಧ ಹಸ್ತದಿಂದ ಇಬ್ಬರೂ ಕಣ್ಮುಚ್ಚಿ ನಿಮಿಷ ಮಾತ್ರ ನಿಂತರು. ಬಳಿಕ ಕರಾಳವಾದ ಚಂಡಿಕಾವಿಗ್ರಹವನ್ನು ಬಲವಂದು ದೇವಿಯ ಮುಂದೆ ಸಾಷ್ಟಾಂಗ ಪ್ರಣಾಮ ಮಾಡಿದರು. ಪುನಃ ಎದ್ದು ನಿಂತು “ತಾಯೇ! ಚಂಡಿಕೇ! ನಮಗೆ ಬಂದಿದ್ದ ಆಪತ್ತನ್ನು ಪರಿಹರಿಸು! ಯುದ್ಧದಲ್ಲಿ ನಮ್ಮ ಪತಿಗಳಿಗೆ ಸಹಾಯಕಳಾಗು! ಅವರ ಹಸ್ತದಿಂದಲೇ ನಮ್ಮ ವೈರಿಗಳನ್ನು ಸಂಹರಿಸು!” ಎಂದು ಪ್ರಾರ್ಥಿಸಿದರು. ಪುನಃ ದೇವಗಿರಿ ದುರ್ಗದ ಅಧಿಷ್ಟಾತ್ರಿಯಾದ ದುರ್ಗಾಂಬಿಕೆಯನ್ನು ಪ್ರದಕ್ಷಿಣೆ ಮಾಡಿ, ಇಬ್ಬರೂ ಪಲ್ಲಕ್ಕಿಯನ್ನು ಹತ್ತುವಷ್ಟರಲ್ಲಿ ಕುದುರೆಯ ಕುರಪುಟ ಧ್ವನಿಯು ಕೇಳಿಸಿದುದರಿಂದ, ಇಬ್ಬರೂ ಸ್ವಲ್ಪ ಸಂಭ್ರಾಂತರಾದಂತೆ ಅಲ್ಲಿಯೇ ತಡೆದರು. ಕೂಡಲೇ ಒಬ್ಬ ಅಶ್ವರೋಹಿಯು ಕುದುರೆಯಿಂದ ಧುಮುಕಿ, ಯುವತಿಯರ ಸಮೀಪ ಬರುತ್ತಿದ್ದನು. ಯುವತಿಯರು ಇವನನ್ನು, ದೃಷ್ಟಿಸುತ್ತಲೇ ಆನಂದದಿಂದಲೂ ಆಶ್ಚರ್ಯದಿಂದಲೂ ಚಕಿತರಾಗಿ ಹೋದರು.

ಯುವಕ:- “ವೀರಮತಿ! ನೀನು ಗೌರಿಯೊಡನೆ ಇಲ್ಲಿ ಏಕೆ ಬಂದಿ?”

ವೀರಮತಿಯು ಯುವಕನ ಕೈಯನ್ನು ತನ್ನ ಕೈಯಲ್ಲಿ ತೆಗೆದುಕೊಂಡು, “ನಾವು ಇಲ್ಲಿ ಬಂದೆವೆಂದು ನಿನಗೆ ಹೇಗೆ ತಾನೇ ತಿಳಿಯಿತು?” ಎಂದು ಪ್ರಶ್ನಿಸಿದಳು.

ಯುವಕ:-ರಾಜಮಂದಿರದಲ್ಲಿ ನೀವು ಇಲ್ಲದೆ ಇದ್ದುದನ್ನು ನೋಡಿ, ನಾನು ಕಾತರದಿಂದ ನಿಮ್ಮನ್ನು ಹುಡುಕಿ ಬಂದೆನು. ಕೋಟೆಯ ಪಹರೆಯವರು ನೀವು ಕಾಳಿಕಾ ಪೂಜೆಗೆ ಹೋಗಿರುವಿರಿ ಎಂದು ಹೇಳಿದರು. ನೀವು ಇಲ್ಲಿ ಏಕೆ ಬಂದಿರಿ?

ವೀರಮತಿ:-“ಏಕೆಂದರೆ ಇನ್ನೂ ತಿಳಿಯಲಿಲ್ಲವೇ? ಮುಂದಿನ ಆಪತ್ತನ್ನು ಪರಿಹರಿಸುವಂತೆ ದೇವಿಯನ್ನು ಬೇಡುವುದಕ್ಕೆ.”

ಯುವಕ:- “ಅದಕ್ಕೋಸ್ಕರ ನೀವು ಇಷ್ಟು ದೂರ ಬರಬೇಕಿತ್ತೇ? ಶತ್ರುವಿನ ಪಾಳೆಯದವರು ನಿಮ್ಮನ್ನು ಇಲ್ಲಿ ಎಲ್ಲಾದರೂ ನೋಡಿದರೆ ನಿಮ್ಮ ಗತಿ ಏನಾಗುವುದು?”

ಈ ಮಾತನ್ನು ಕೇಳುತ್ತಲೇ ವೀರಮತಿಯ ಮುಖದಲ್ಲಿ ಒಂದು ಪ್ರಕಾರವಾದ ತೇಜಸ್ಸು ಹೊಳೆಯಿತು. ಕೂಡಲೇ ತನ್ನ ಕಟಿಭಾಗದಲ್ಲಿ ಅಡಗಿಸಿಟ್ಟ ಭರ್ಚಿಯನ್ನು ಈಚೆಗೆ ಸೆಳೆದುಕೊಂಡು-“ನೋಡಿದೆಯೇ ಇದನ್ನು? ಇದರ ಸಹಾಯದಿಂದಲೇ ನಾನು ದಾರಿಯನ್ನು ಬಿಡಿಸಿಕೊಂಡು ಅರಮನೆಗೆ ಹಿಂದೆರಳುತ್ತಿದ್ದೆನು” ಎಂದು ವೀರಮತಿಯು ಉತ್ತರಕೊಟ್ಟಳು.

ಯುವಕ:-“ನೀನು ಕ್ಷತ್ರಿಯ ಕುಮಾರಿ ಎಂದು ಬಲ್ಲೆ. ನೀವೆಲ್ಲರೂ ನಮ್ಮ ಭುಜಗಳ ನೆರಳಿನಲ್ಲಿರುವಾಗ ಇಷ್ಟು ಆಯಾಸವೇಕೆ?”

ವೀರಮತಿ:-ಯುದ್ಧಕಾಲದಲ್ಲಿ ಶೌರ್ಯವನ್ನು ತೋರಿಸುವುದು ಪುರುಷರ ಕರ್ತವ್ಯ. ದೇವಪ್ರಾರ್ಥನೆಯನ್ನು ಮಾಡುವುದು ಸ್ತ್ರೀಕೃತ್ಯ. ಇಬ್ಬರ ಕಾರ್ಯಗಳೂ ಒಂದೇ ಫಲವನ್ನು ಕೊಡುವುವು.

ಯುವಕನು ಮತ್ತೆ ಮಾತಾಡಲಿಲ್ಲ. ಗೌರಿಯು ಈ ಸಂಭಾಷಣೆಯ ಕಾಲದಲ್ಲಿ ಸುಮ್ಮನಿದ್ದನು ಕೊನೆಗೆ “ಸಖಿಯೇ! ವೀರಮತಿ! ನಾವು ಇನ್ನೂ ಇಲ್ಲಿ ತಳುವಿದರೆ, ತಂದೆಯು ನಮ್ಮ ಮೇಲೆ ಕೋಪಿಸದೆ ಇರಲಾರನು” ಎಂದಳು.

ಇಬ್ಬರೂ ಪಲ್ಲಕ್ಕಿಯನ್ನು ಹತ್ತಿ, ಯುವಕನನ್ನು ಕರೆದರು. ಯುವಕನು “ನಾನು ಇದೇ ಸಂದರ್ಭದಲ್ಲಿ ಶತ್ರುವಿನ ಸೇನೆಯ ವಿಸ್ತಾರವನ್ನೂ ರಚನೆಯನ್ನೂ ಹೊಂಚಿ ನೋಡಿ ಬರುವೆನು, ನೀವು ಬೇಗನೆ ಮುಂದು ಹೋಗಿರಿ” ಎಂದು ಹೇಳಿ ಕೋಟೆಯವರೆಗೆ ಅವರಿಬ್ಬರಿಗೆ ಮೈಗಾವಲಾಗಿ ಬಂದು ಅಲ್ಲಿಯೇ ಹಿಂದುಳಿದನು.

ಕಥಾಸೂತ್ರವನ್ನು ಪಾಠಕಮಹಾಶಯರು ಸರಿಯಾಗಿ ಹಿಡಿಯುವಂತೆ ಇಲ್ಲಿ ಕೆಲವು ಪ್ರಸ್ತಾವಗಳನ್ನು ಹೇಳಬೇಕಾಗುವುದು. ಕ್ರಿ.ಶಕೆಯ ೧೩ನೆಯ ಶತಮಾನದ ಆದಿಯವರೆಗೆ ದಕ್ಷಿಣ ಹಿಂದೂಸ್ಥಾನದ ಮೇಲೆ ಮುಸಲ್ಮಾನರ ದೃಷ್ಟಿಯು ಬಿದ್ದಿರಲಿಲ್ಲ. ಪಠಾನ ಸುಲ್ತಾನರು ಉತ್ತರ ಹಿಂದೂಸ್ಥಾನದಲ್ಲೇ ಸರ್ವಶಕ್ತರಾಗಿದ್ದರಲ್ಲದೆ, ದಕ್ಷಿಣದಲ್ಲಿನ ಚಿಕ್ಕ ದೊಡ್ಡ ರಾಜ್ಯಗಳು ಸ್ವಾತಂತ್ರ್ಯ ಸುಖವನ್ನು ಅನುಭವಿಸುತ್ತಲಿದ್ದುವು ಇಂತಹ ಸ್ವತಂತ್ರ ರಾಜ್ಯಗಳಲ್ಲಿ ಭಾವಿ ಮಹಾರಾಷ್ಟ್ರ ಸಾಮ್ರಾಜ್ಯದ ಅಂಕುರ ಸ್ವರೂಪವಾದ ಚಿಕ್ಕದೊಂದು ರಾಜ್ಯವಿತ್ತು. ದೇವಗಿರಿ ಎಂಬುದು ಇದರ ರಾಜಧಾನಿಯಾಗಿತ್ತು; ರಾಮದೇವ ಎಂಬವನು ರಾಜನಾಗಿದ್ದನು. ಈ ಮರಾಟ ರಾಜ್ಯವನ್ನು ಕುರಿತು ಜೀಯುದ್ದೀನ್ ಬಾರ್ನಿ ಎಂಬ ತುರುಷ್ಕ ಇತಿಹಾಸಕಾರನು ಹೀಗೆಂದು ಬರೆದಿರುವನು:

“ಈ ಮೊದಲು ಇಲ್ಲಿನ ಜನರು ಮುಸಲ್ಮಾನರನ್ನು ಕುರಿತು ಕೇಳಿರಲಿಲ್ಲ. ಮುಸಲ್ಮಾನ್ ಸೈನ್ಯವು ಇದಕ್ಕಿಂತ ಮೊದಲು ಮಹಾರಾಷ್ಟ್ರ ರಾಜ್ಯದಲ್ಲಿ ಪದಾರ್ಪಣ ಮಾಡಿರಲಿಲ್ಲ. ದೇವಗಿರಿ ನಗರವು ಚಿನ್ನ ಬೆಳ್ಳಿ ಮೊದಲಾದ ಅಮೂಲ್ಯ ವಸ್ತುಗಳಿಗೆ ತವರುಮನೆಯಾಗಿತ್ತು.”

ಈ ವರ್ಣನೆಯು ಆ ರಾಜ್ಯಕ್ಕೆ ಮಾತ್ರ ಸಲ್ಲುತ್ತಿರಲಿಲ್ಲ. ವಿದೇಶೀಯರು ಭಾರತ ಭೂಮಿಯಲ್ಲಿ ಕಾಲಿಡುವ ಮೊದಲು ಹಿಂದುಸ್ಥಾನದ ಸ್ಥಿತಿಯನ್ನು ಪ್ರತಿ ಒಬ್ಬ ಇತಿಹಾಸಕಾರನು ಇಂತಹ ಮಾತುಗಳಲ್ಲಿಯೇ ವರ್ಣಿಸಿರುವನು. ಈ ಧನವೇ ವಿದೇಶೀಯರ ದೃಷ್ಟಿಗೆ ಬಿದ್ದುದರಿಂದ, ದಿಲ್ಲಿಯ ಅಂದಿನ ಚಕ್ರವರ್ತಿಯಾದ ಜಲಾಲುದ್ದೀನ್ ಖಿಲ್ಜಿಯ ಅಳಿಯನಾದ ಅಲ್ಲಾವುದ್ದೀನ್ ಖಿಲ್ಜಿಯು ಮಹಾಸೈನ್ಯದೊಡನೆ ಕ್ರಿ.ಶಕೆಯ ೧೨೯೪ರಲ್ಲಿ ದಖ್ಖಣಕ್ಕೆ ದಂಡೆತ್ತಿ ಹೋದನು. ಅಲ್ಲಾವುದ್ದೀನನು ಮಹಾ ಸೈನ್ಯದೊಡನೆ ದೇವಗಿರಿಯನ್ನು ಎರಡುಸಲ ಮುತ್ತಿಗೆ ಹಾಕಿ ಹತಾಶನಾಗಿ, ಮೂರನೆಯ ಸಲ ಅದರ ಕೋಟೆಯ ಬಾಗಿಲಲ್ಲಿ ಕುಳಿತುಕೊಂಡಿದ್ದು, ಪ್ರಕೃತದಲ್ಲಿ ಜಾರುವಂತಿದ್ದನು.

ರಾಮದೇವರಾಜನಿಗೆ ಬಲಗೈಯಂತಿದ್ದು ಯುದ್ಧದಲ್ಲಿಯೂ ರಾಜ್ಯವಿಸ್ತರಣದಲ್ಲಿಯೂ ಅವನಿಗೆ ಸಹಾಯ ಮಾಡಿದ್ದ ಸರದಾರನೊಬ್ಬನು ಈ ಮುತ್ತಿಗೆಯ ಕಾಲದಲ್ಲಿ ಮಡಿದು ಹೋದನು. ಈ ಸರದಾರನು ತನ್ನ ಪುತ್ರೀರತ್ನವಾದ ವೀರಮತಿಯ ವಿವಾಹಕ್ಕೆ ಎಲ್ಲವನ್ನು ಸಿದ್ಧಪಡಿಸಿದ್ದನು. ವೀರಮತಿಯು ಕಾಳಿಕಾ ದೇವಸ್ಥಾನದ ಬಗೆಯಲ್ಲಿ ಯಾರೊಡನೆ ಮಾತಾಡಿದಳೊ ಆ ಯುವಕನು ತನ್ನ ಪ್ರಾಣೇಶ್ವರನೆಂದು ಆರಿಸಲ್ಪಟ್ಟಿದ್ದನು. ಕೃಷ್ಣರಾಜನು ತನ್ನ ಅಳಿಯನಾಗುವುದು ವೀರಮತಿಯ ತಂದೆಗೆ ಏನು ಕಾರಣದಿಂದಲೋ ಮೊದಲು ಯೋಗ್ಯವಾಗಿ ತೋರಲಿಲ್ಲ. ಕೊನೆಗೆ ಮಗಳ ನಿರ್ಬಂಧದಿಂದ ಅವನು ಸಮ್ಮತಿ ಕೊಟ್ಟನು. ಆದರೆ ಪೃಕೃತದ ಅವನ ಅಕಾಲಿಕ ಮರಣದಿಂದ ವೀರಮತಿಯ ಲಗ್ನಕ್ಕೆ ವಿಘ್ನ ಬಂದಿತು. ಈಗ ವೀರಮತಿಯು ತಂದೆಯ ಮರಣಕ್ಕೆ ಪ್ರತೀಕಾರವನ್ನು ಮಾಡಿದ ಹೊರತು, ಲಗ್ನಮಂಟಪವನ್ನು ಸೇರುವುದಿಲ್ಲ ಎಂದು ನಿಶ್ಚಯ ಮಾಡಿದಳು. ಅದಕ್ಕೋಸ್ಕರವೇ ಅವಳು ಅರಸನ ಮಗಳಾದ ಗೌರಿಯೊಡನೆ ಕಾಳಿಕಾ ಪೂಜೆಗೆ ಹೋಗಿದ್ದಳೆಂದು ಪಾಠಕ ಮಹಾಶಯರು ಈಗ ತಾನೇ ತಿಳಿಯಬಹುದು.

“ಭಾರತ ಭೂಮಿಯ ಸೌಭಾಗ್ಯ ಭಂಡಾರವನ್ನು ಸೂರೆಗೊಂಡು ತಮ್ಮ ವಂಶಸ್ಥರ ನಾಮವನ್ನೂ ತಮ್ಮ ಹೆಸರನ್ನೂ ಇತಿಹಾಸ ಪುಟದಲ್ಲಿ ಕಳಂಕಿತವಾಗಿ ಮಾಡಿದ ಮುಸಲ್ಮಾನರಲ್ಲಿ ಘಜ್ನಿ ಮಹಮ್ಮದ್, ಅಲ್ಲಾವುದ್ದೀನ್ ಖಿಲ್ಜಿ, ತೇಮೂರ್ ಲೇನ್ ಈ ಮೂವರಿಗಿಂತಲೂ ಅಧಮರು ಯಾರೂ ಇಲ್ಲ ಎಂದು ಒಬ್ಬ ಬಂಗಾಳೆಯ ಚರಿತ್ರೆಕಾರನು ಹೇಳಿದ್ದಾನೆ. ಈ ಮೂವರು ತಾವು ಕಾಲಿಟ್ಟ ಭೂಮಿಯಲ್ಲಿ ಆರ್ಯಧರ್ಮಾವಲಂಬಿಗಳಾದ ಆಬಾಲವೃದ್ಧರನ್ನು ಕೊಂದು, ಪವಿತ್ರವಾದ ದೇವಸ್ಥಾನಗಳ ಮುಂದುಗಡೆಯಲ್ಲಿ ಪಶು ರಕ್ತವನ್ನು ಬಸಿದು, ಆರಾಧಿತವಾದ ವಿಗ್ರಹಗಳನ್ನು ಮಸೀದಿಯ ಸೋಪಾನಗಳಿಗಾಗಿ ಹಾಸಿ, ನಂದನವನದಂತೆ ಇದ್ದ ಪ್ರದೇಶಗಳನ್ನು ಸ್ಮಶಾನದಂತೆ ಮಾಡಿ, ಹೊಟ್ಟೆಯೊಳಗಿದ್ದ “ಒಂದೇ ಬಾರಿ ಸುರಿಗೊಂಬ” ತವಕದಿಂದ ಭಾರತಧೇನುವಿನ ಉದರವನ್ನು ಸೀಳಿಬಿಟ್ಟರು. ಇವರು ನಡೆದ ಮಾರ್ಗಗಳೆಲ್ಲಾ ಸಿಡಿಲು ಬಡೆದ ಬೆಟ್ಟದ ದಾರಿಗಳಂತೆ ಆದುವು. ನುಗ್ಗಿದ ನಗರಗಳೆಲ್ಲಾ ಅಡವಿಯ ಗುಹೆಗಳಂತೆ ಆದುವು. ಇವರ ‘ದೀನ್! ದೀನ್’ ರಣಕೋಲಾಹಲವನ್ನು ಕೇಳುತ್ತಲೇ ಹಳ್ಳಿಹಳ್ಳಿಗರು ತಾವು ತಿಂದುಳಿದ ಕೊಂಚ ಹಣವನ್ನು ಉಡಿಯಲ್ಲಿ ಕಟ್ಟಿಕೊಂಡು ಹುಲಿಹಾವುಗಳಿದ್ದ ಅಡವಿಗಾದರೂ ಒಕ್ಕಲು ಹೋಗುತ್ತಿದ್ದರು. ರಾಜ ಯುವತಿಯರು ತಮ್ಮ ವೀರಪತಿಗಳನ್ನು ಇವರೊಡನೆ ಯುದ್ಧಕ್ಕೆ ಸಶಕ್ತರಾಗಿ ಕಳುಹಿಸಿ ತಮ್ಮ ಪಾತಿವ್ರತ್ಯವನ್ನು ರಕ್ಷಿಸುವುದಕ್ಕೆ ನಗುನಗುತ್ತ ಚಿತೆಯನ್ನು ಏರುತ್ತಿದ್ದರು. ಇವರು ಮಾಡಿದ ಹಾಳು ಹಾವಳಿ ಎಷ್ಟೆಂಬುದಕ್ಕೆ ಗಾದೆಗಳೇ ಹುಟ್ಟಿವೆ. ಆದರೂ ಈ ಮೂವರಲ್ಲಿ ಇಷ್ಟೊಂದು ಭೇದವಿತ್ತು; ಆವರ ಕಾರ್ಯಗಳಲ್ಲಿ ಸಾಮ್ಯವಿದ್ದರೂ ಅವರ ಉದ್ದೇಶಗಳಲ್ಲಿ ಇಷ್ಟೊಂದು ತಾರತಮ್ಯವಿತ್ತು. ತೇಮೂರಲೇನನು ಅತ್ಯಂತ ಧನಾಪೇಕ್ಷೆಯುಳ್ಳವನು, ಆ ಆಸೆಯು ತೀರುವ ತನಕ ಅವನು ಹಸಿದ ಸಿಂಹ; ಹಸಿವು ಅಣಗುವುದಕ್ಕೆ ಕೈಗೆ ಸಿಕ್ಕಿದ ಕೊಳ್ಳೆಯನ್ನು ಹೊಡೆದುಬಿಡುತ್ತಲೇ ತೃಪಿಗೊಂಡು, ದೂರದ ಗವಿಗೆ ಹಿಂತಿರುಗಿದನು. ಘಜ್ನಿಮಹಮ್ಮದನು ಧನಾಪೇಕ್ಷೆಯೊಡನೆ ಧರ್ಮಾಂಧತೆಯನ್ನು ಬೆರೆಸಿದ್ದನು. ಹಿಂದೂ ಜನರ ಬೊಕ್ಕಸವನ್ನು ಬಿಚ್ಚಿ, ಅವರ ದ್ರವ್ಯಾಪಹಾರವನ್ನು ಮಾಡುವುದು ಮಾತ್ರವಲ್ಲ. ಅವರ ಧರ್ಮವನ್ನು ನಿರ್ಮೂಲಿಸಿ, ತನ್ನ ಮತವನ್ನು ಖಡ್ಗಮುಖದಿಂದ ಸ್ಥಾಪಿಸಬೇಕೆಂದು ಬದ್ಧಕಂಕಣನಾದನು. ಇದಕ್ಕೋಸ್ಕರವೇ ಈತನು ಹನ್ನೊಂದು ಸಲ ಹಿಂದುಸ್ಥಾನಕ್ಕೆ ದಂಡೆತ್ತಿ ಬಂದುದು ಸಾಲದೆ, ಕೊನೆಗೆ ಕ್ರಿ.ಶ. ೧೦೨೪ರಲ್ಲಿ ಗುಜರಾತಿನಲ್ಲಿದ್ದ ಸೋಮನಾಥ ದೇವಸ್ಥಾನವನ್ನು ಒಳನುಗ್ಗಿ, ವಿಗ್ರಹಗಳನ್ನು ಪುಡಿಪುಡಿಗೈದನು. ಆದರೂ “ಪರದ್ರವ್ಯಾಪಹಾರಿ” “ಅನ್ಯಮತಭಂಜಕ” ಎಂಬ (ಮಹಾ+ಅಯೋಗ್ಯ?) ಬಿರುದುಗಳನ್ನು ತಾಳಿದ ಬಳಿಕ ತನ್ನ ದೇಶಕ್ಕೇನೇ ಹಿಂತೆರಳಿದನು. ಅಲ್ಲಾವುದ್ದೀನನಾದರೋ ತನ್ನ ಹಾಳು ಜೀವನ ಕಾಲದಲ್ಲಿ ಮೂರು ಉದ್ದೇಶಗಳನ್ನು ಕೊನೆಗಾಣಿಸುವುದಕ್ಕೆ ಯತ್ನಿಸಿದನು. ತೇಮೂರಲೇನನ ಧನಾಪೇಕ್ಷೆಯೂ, ಮಹಮ್ಮದನ ಮತಾಭಿಮಾನವೂ ಮಾತ್ರವಲ್ಲ, ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ರಾಜದಂಡವನ್ನು ಬೀಸಬೇಕೆಂಬ ರಾಜ್ಯಾಕಾಂಕ್ಷೆಯೂ ಈತನ ಹೃದಯದಲ್ಲಿ ಬೇರೂರಿದ್ದವು. ಈ ಅಭಿಲಾಷೆಯು ಹುಟ್ಟುಬಂಜೆಗೆ ಮಕ್ಕಳಾಗಬೇಕೆಂಬ ಆಸೆಯಾಗಿರಲಿಲ್ಲ. ಅಲ್ಲಾವುದ್ದೀನನು ಮಹಾವೀರನಾಗಿದ್ದನು ಎಂಬುದೇನೋ ನಿಜ; ಆದರೆ ಬಾಲ್ಯದಿಂದಲೂ ನ್ಯಾಯನೀತಿಗಳ ಚಿಂತೆಯನ್ನು ಇವನು ಕಟ್ಟಿಕೊಳ್ಳದೆ ಇದ್ದುದರಿಂದ, ಕೆಲವು ಕಾಲ ಮಾತ್ರವೇ ಬೆಳೆಯುತ್ತ ಹೋದನು. ಹೊಕ್ಕುಳಿನ ಪ್ರಯೋಜನವನ್ನು ಅರಿಯದ ಈ ಕೃತಘ್ನನು ಯಾವ ಸೋಪಾನಗಳನ್ನು ಹತ್ತಿ ಶಿಖರಕ್ಕೆ ಏರಿದನೋ, ಅವುಗಳನ್ನೇ ಧಿಕ್ಕಾರ ದೃಷ್ಟಿಯಿಂದ ಮೇಲೆ ನಿಂತು ನೋಡುತ್ತಿದ್ದನು. ಯಾವ ಮರದ ಕೊಂಬೆಯ ಮೇಲೆ ತನ್ನ ಕೈಕೊಡಲಿಯನ್ನು ತಿಕ್ಕಿ ಹರಿತವಾಗಿ ಮಾಡಿದನೋ, ಆ ವೃದ್ಧ ವೃಕ್ಷವನ್ನೇ ಕಡಿದು ಹಾಕಲಿಕ್ಕೆ ಇವನು ಹೇಸಲಿಲ್ಲ. ತನ್ನನ್ನು ಉನ್ನತ ಪದವಿಯಲ್ಲಿಟ್ಟ ತನ್ನ ಮಾವನಾದ ಜಲಾಲುದ್ದೀನ್ ಖಿಲ್ಜಿಯನ್ನು ರಾಜ್ಯಾಭಿಲಾಷೆಯಿಂದ ಸಂಹರಿಸುವುದಕ್ಕೆ ಯಾವನು ಹಿಂಜರಿಯಲಿಲ್ಲವೋ, ಸಿಂಹಾಸನವನ್ನು ಹತ್ತುವುದಕ್ಕೆ ಹೋಗಬೇಕಾದ ಮಾರ್ಗದಲ್ಲಿದ್ದ ತನ್ನ ಬಂಧು ಬಾಂಧವರನ್ನೂ, ಗುರುಹಿರಿಯರನ್ನೂ ನೆಲ್ಲುಹುಲ್ಲಿನಂತೆ ಕೊಯ್ದುಬಿಟ್ಟು ಯಾವನು ಮುಂದೆ ಗದ್ದುಗೆಯನ್ನು ಏರಿದನೋ, ಆ ವಿಶ್ವಾಸಘಾತುಕನೇ, ಆ ಪರಮಪಾಪಿಯೇ ಅತುಲ ಸೈನಿಕರೊಡನೆ, ದೇವಗಿರಿಯ ಮುತ್ತಿಗೆಯನ್ನು ತೆಗೆದು ಓಡುವಂತಿದ್ದನು.

ಈ ಸಂಕಷ್ಟಕರವಾದ ಸಮಯವನ್ನು ಹೇಗೆ ಇರಿಸಬೇಕೆಂಬ ವಿಷಯದಲ್ಲಿ ರಾಮದೇವರಾಜನು ತನ್ನ ಸ್ನೇಹಿತ ಸರದಾರರ ಆಲೋಚನೆಯನ್ನು ವಿಚಾರಿಸಿದನು. ರಾಮದೇವನ ಅಳಿಯನಾದ ಹರಪಾಲದೇವನು ಕೋಟೆಯನ್ನು ದಾಟಿ ಯುದ್ಧ ಕೊಡುವುದು ನ್ಯಾಯವಲ್ಲವೆಂದು ಹೇಳಿದನು. ಈ ಮಾತು ರಾಜನಿಗೆ ಸಮ್ಮತಿಯಾಯಿತು. “ಅಲ್ಲಾವುದ್ದೀನನು ಎರಡು ಸಲ ಸೋತು ಹೋದನು. ಮೂರನೆಯ ಸಲ ಹಾಕಿದ ಮುತ್ತಿಗೆಯನ್ನು ತಾನೇ ತೆಗೆದು ಈಗ ಪಲಾಯನ ಮಾಡುತ್ತಿರುವನು. ತಾನಾಗಿ ಹೀಯಾಳಿಸಿ ಶತ್ರುವನ್ನು ಕೆರಳಿಸಿ, ಹೋಗುವ ಮಾರಿಯನ್ನು ಕರೆದು, ನಮ್ಮ ಸೈನ್ಯವನ್ನು ಆಪತ್ತಿಗೆ ಗುರಿಮಾಡುವುದು ಶ್ರೇಯಸ್ಕರವಲ್ಲ. ಇದಲ್ಲದೆ ಅಲ್ಲಾವುದ್ದೀನನು ಯಾವ ಕಾರಣದಿಂದ ಪಲಾಯನ ಮಾಡುತ್ತಿರುವನೆಂದು ತಿಳಿಯಬೇಕು; ಅಭೇದ್ಯವಾದ ಕೋಟೆಯೊಳಗೆ ಸುರಕ್ಷಿತವಾಗಿದ್ದ ನಮ್ಮನ್ನು – ಹಾವಾಡಿಗನು ಕೊಳಲೂದಿ ಬಿಲದಿಂದ ಹಾವನ್ನು ಹೊರಡಿಸುವಂತೆ – ಅವನು ಸೆಳೆಯಬೇಕೆಂಬ ಉಪಾಯ ಮಾಡಿದ್ದರೆ, ನಮ್ಮ ಸೈನ್ಯವೆಲ್ಲಾ ನಿರರ್ಥಕವಾಗಿ ಶತ್ರುಹಸ್ತದಿಂದ ಸಂಹಾರವಾಗಬಹುದು”. ಎಂದು
ರಾಮದೇವನು ಅಳಿಯನ ಅಭಿಪ್ರಾಯವನ್ನು ಬಲಗೊಳಿಸಿದನು. ಈ ಮಾತು ಕೃಷ್ಣರಾಜನಿಗೆ ಯಾವ ಕಾರಣದಿಂದಲೂ ಸಮ್ಮತವಾಗಲಿಲ್ಲ. ಅವನು ಯುದ್ಧ ಮಾಡಲೇ ಬೇಕೆಂದು ನಿಂತುಬಿಟ್ಟನು. “ಅಲ್ಲಾವುದ್ದೀನನು ಈಗ ಹಿಮ್ಮೆಟ್ಟಿದರೂ ಮತ್ತೆ ಬಾರದೆ ಇರಲಾರನು. ಯಾರು ಬಾರದೆ ಹೋದರೂ ನಮ್ಮ ಸೈನ್ಯವನ್ನು ನಾನೊಬ್ಬನೇ ಕೋಟೆಯ ಹೊರಕ್ಕೆ ಕೊಂಡುಹೋಗಿ, ಶತ್ರುವು ಯಾವ ಉಪಾಯದಿಂದಲಾದರೂ ನನಗೆ ತಲೆ ಬಾಗಿಸುವಂತೆ ಮಾಡಿ, ದೇವಗಿರಿ ರಾಜ್ಯವು ನನ್ನನ್ನು ಚಿರಕಾಲ ಸ್ಮರಿಸುವಂತೆ ಮಾಡುವೆನು” ಎಂದು ಕೃಷ್ಣರಾಜನು ಹೇಳಿದನು. ಈ ಅಭಿಪ್ರಾಯಗಳಲ್ಲಿ ಯಾವುದನ್ನು ಸ್ವೀಕರಿಸಬೇಕೆಂದು ತಿಳಿಯದೆ, ರಾಜನು ವೀರಮತಿಯ ಮುಖವನ್ನು ದೃಷ್ಟಿಸಿದನು. ಪ್ರಾಚೀನಕಾಲದಲ್ಲಿ ಭಾರತಸ್ತ್ರೀಯರ ಸ್ವಾತಂತ್ರ್ಯಕ್ಕೆ ಯಾವುದೊಂದು ನಿರ್ಬಂಧವಿಲ್ಲದೆ ಇದ್ದುದರಿಂದ, ವೀರರಮಣಿಯರು ಇಂತಹ ಸಂದರ್ಭಗಳಲ್ಲಿ ತಮ್ಮ ಆಲೋಚನೆಯಿಂದಲೂ ಆಯುಧದಿಂದಲೂ ರಾಜ್ಯಾಧಿಕಾರಿಗಳಿಗೆ ಸಹಾಯ ಮಾಡುತ್ತಿದ್ದರು! ರಾಮದೇವನು ಸಾಕೂತದೃಷ್ಟಿಯಿಂದ ತನ್ನನ್ನು ನೋಡುತ್ತಲೇ ವೀರಮತಿಯು ಉತ್ಸಾಹಿತಳಾಗಿ ಹೀಗೆಂದಳು:- “ನನ್ನ ಪ್ರಾಣವಲ್ಲಭನ ಅಭಿಪ್ರಾಯವು ವಿದಿತವಾಗಿದೆ. ಅಲ್ಲಾವುದ್ದೀನನನ್ನು ಈಗ ಜಾರಬಿಟ್ಟರೆ ರಕ್ತದ ರುಚಿ ಹತ್ತಿದ ಹುಲಿಯು ಮತ್ತೆ ಮತ್ತೆ ಗ್ರಾಮಗಳಿಗೆ ಬಂದು, ಹಳ್ಳಿಗರನ್ನು ಹೆದರಿಸುವಂತೆ ಅವನು ಮರಳಿ ಮರಳಿ ಇಲ್ಲಿಗೆ ಬರುವನಲ್ಲವೇ? ಇದಲ್ಲದೆ ನನ್ನ ಜನ್ಮದಾತಾರನಾದ ತಂದೆಯು ಶತ್ರುವಿನಿಂದ ರಣರಂಗದಲ್ಲಿ ಬಿದ್ದು ಹೋದನೆಂಬ ದುಃಖಾಗ್ನಿಯು ನನ್ನ ಹೃದಯವನ್ನು ಪದೇಪದೇ ದಹಿಸುತ್ತಿರುವುದು. ಶತ್ರುವಿನ ರಕ್ತಸೇಚನದಿಂದ ಈ ಅಗ್ನಿಯು ಶಾಂತವಾಗಬೇಕಾದುದರಿಂದ, ನನ್ನ ಪ್ರಾಣೇಶ್ವರನು ಸೈನ್ಯದ ವಿಶೇಷ ಭಾಗವನ್ನು ಈ ರಾತ್ರಿ ಕೋಟೆಯ ಹೊರಕ್ಕೆ ಕೊಂಡುಹೋಗುವಂತೆ ಅಪ್ಪಣೆಯಾಗಬೇಕೆಂದು ಪ್ರಾರ್ಥಿಸುವೆನು. ಇವನ ಸಹಾಯಕಳಾಗಿ ಹೋಗಲಿಕ್ಕೆ ನನಗೂ ಆಜ್ಞೆಯಾಗಬೇಕೆಂದು ವಿಜ್ಞಾಪಿಸುವೆನು.” ರಾಮದೇವನು ಮೊದಲಿನ ಎರಡು ಯುದ್ಧಗಳಲ್ಲಿಯೂ ಕೃಷ್ಣರಾಜನ ಸಾಹಸವನ್ನೂ ಚಾತುರ್ಯವನ್ನೂ ಕಣ್ಣಾರೆ ಕಂಡಿದ್ದುದರಿಂದ, ಕೃಷ್ಣರಾಜನು ಸೇನೆಯ ಹೆಚ್ಚಿನ ಭಾಗವನ್ನು ಆ ರಾತ್ರಿ ಹೊರಗೆ ಕೊಂಡು ಹೋಗಿ ಯುದ್ಧ ಮಾಡುವುದಕ್ಕೆ ರಾಮದೇವನು ಸಮ್ಮತಿಸಿ, ತಾನು ಅವನೊಡನೆ ಹೊರಡಲಿಕ್ಕೆ ಸಿದ್ಧನಾದನು. ಆದರೆ ವೀರಮತಿಯು ಸೈನ್ಯದೊಡನೆ ಹೊರಕ್ಕೆ ಹೋಗುವುದು ಯೋಗ್ಯವಲ್ಲವೆಂದು ಬಹುಪಕ್ಷದವರ ಮತವಾಯಿತು.

ದೇವಗಿರಿ ದುರ್ಗವು ಪುರಾತನ ಕಾಲದಲ್ಲಿ ಮಹಾಪ್ರಖ್ಯಾತಿಗೊಂಡಿತು. ಕಡಲು ಮಟ್ಟಕ್ಕಿಂತ ೬೪೦ ಅಡಿ ಎತ್ತರಕ್ಕೆ ಏರಿದ ಏಕಾಕಿಯಾದ ಪರ್ವತದ ಮೇಲೆ ಅದು ಇದ್ದಿತ್ತು. ಈ ಪರ್ವತವು ಸೂಚ್ಯಾಕಾರವಾಗಿದ್ದು, ಸುತ್ತಲೂ ಪ್ರಪಾತಮಯ ವಾದ ಬಂಡೆಗಳಿಂದ ಭದ್ರವಾಗಿತ್ತು. ಲಂಬಾಯಮಾನವಾದ ಪ್ರಕಾರಗಳು, ಉನ್ನತವಾದ ತೆನೆಗಳು, ವಿಸ್ತಾರವಾದ ಪರಿಗೆಯು ಕೋಟೆಯನ್ನು ಬಲಪಡಿಸಿದ್ದುವು. ದೂರ ದೃಷ್ಟಿಗೆ ಈ ದುರ್ಗವು ಒಂದೇ ಆಗಿ ತೋರಿದ್ದರೂ, ಇದರಲ್ಲಿ ಒಂದರ ಒಳಗೊಂದಾಗಿ ಮೂರು ಕೋಟೆಗಳಿದ್ದುವು. ದುರ್ಗವು ಒಂದೇ ಆಗಿ ತೋರಿದ್ದರೂ, ಇದರಲ್ಲಿ ಒಂದರ ಒಳಗೊಂದಾಗಿ ಮೂರು ಕೋಟೆಗಳಿದ್ದುವು. ದುರ್ಗದ ಅಡಿಯಲ್ಲಿ ದೇವಗಿರಿ ನಗರವು ಹುದುಗಿಕೊಂಡು ಭದ್ರವಾಗಿತ್ತು. ಇಂತಹ ಕೋಟೆಯನ್ನು ಶತ್ರುವು ಮಹಾಸೈನ್ಯದೊಡನೆ ೧೦ ವರ್ಷಗಳ ವರೆಗೆ ಮುತ್ತಿದರೂ ರಾಮರಾಜನು ಸುಖವಾಗಿಯೂ ನಿರಾತಂಕವಾಗಿಯೂ ನಿದ್ದೆಹೋಗಬಹುದಿತ್ತು. ಮುಸಲ್ಮಾನರ ಸೇನಾಸಮುದ್ರವು ಉತ್ತರ ಹಿಂದುಸ್ಥಾನದ ಮೇರೆಯನ್ನು ಅತಿಕ್ರಮಿಸಿ, ಚಿರಕಾಲ ದೇವಗಿರಿಯ ಪ್ರಾಕಾರಗಳ ಮೇಲೆ ಬಂದು ಬಡಿದರೂ, ಅದರ ಸ್ವಾತಂತ್ರ್ಯವು ನಾಶವಾಗುತ್ತಿದ್ದಿಲ್ಲ. ವಿಧಾತನು ಮಾತ್ರ ಹಾಗೆ ಎಣಿಸಿರಲಿಲ್ಲ.

ಮಧ್ಯರಾತ್ರಿ ಅಷ್ಟಮಿಯ ಚಂದ್ರನು ದುಃಖದಿಂದ ಅಸ್ತಮಿಸುತ್ತಲಿದ್ದನು. ಅಂಧಕಾರವು
ಮೆಲ್ಲಮೆಲ್ಲನೆ ದೇವಗಿರಿಯ ಹೊರವಳಯವನ್ನೆಲ್ಲಾ ಆಕ್ರಮಿಸಿಕೊಳ್ಳತೊಡಗಿತು. ದೇವಗಿರಿಯ ಪಾಳಯದಲ್ಲಿ ಕಾವಲುಗಾರರು ದೀವಟಿಗೆಯನ್ನು ಹಿಡಿದುಕೊಂಡು ಅತ್ತಿತ್ತ ತಿರುಗುತ್ತಿದ್ದರು. ವೀರರು ಶಸ್ತ್ರಕವಚಗಳನ್ನು ತೊಟ್ಟುಕೊಳ್ಳುವ ಝಣತ್ಕಾರ ಯುದ್ಧಾಶ್ವಗಳ ಹೇಷಧ್ವನಿ, ಭಟರ ಕಲಕಲ-ಇವೆಲ್ಲಾ ನಿಶ್ಯಬ್ದವಾದ ರಾತ್ರಿಯ ‘ಕರ್ಣವನ್ನು ಭೇದಿಸಿ ಹೋಗುವಂತಿದ್ದುವು. ರಾಮದೇವನು ತಾನೇ ಪಾಳಯದಲ್ಲಿ ಸಂಚರಿಸುತ್ತ, ಪ್ರಾತಃಕಾಲದ ಯುದ್ಧಕ್ಕೆ ಸೈನಿಕರಲ್ಲಿ ಭೀತರಾದವರನ್ನು ಉತ್ಸಾಹಗೊಳಿಸುತ್ತ ಶತ್ರುಚಲನೆಯನ್ನು ತಿಳಿಯುವುದಕ್ಕೆ ನೆಲಕ್ಕೆ ಒರಗಿ, ಕಿವಿಕೊಡುತ್ತಿದ್ದನು. ಅಲ್ಲಾವುದ್ದೀನನ ಪಾಳಯವು ದುರ್ಗದಿಂದ ೧೦ ಮೈಲು ದೂರವಿದ್ದುದರಿಂದ ಶತ್ರುಚಲನೆಗಳೇನೂ ತೋರುತ್ತಿರಲಿಲ್ಲ. ಕೃಷ್ಣರಾಜನು ತಾನೇ ಮುಂದು ಹೋಗಿ ಪರೀಕ್ಷಿಸುವನೆಂದು ಹೇಳಿ ಕೋಟೆಯ ಗೋಡೆಯನ್ನು ಹತ್ತಲು ಹೋದನು.

ಅಲ್ಲಾವುದ್ದೀನನ ಸೈನಿಕರೆಲ್ಲರೂ ಗಾಂಜಾವಿನ ಬಲದಿಂದ ಸುಖವಾಗಿ ನಿದ್ದೆ ಹೋಗುತ್ತಿದ್ದರು. ಅಲ್ಲಲ್ಲಿ ಒಬ್ಬಿಬ್ಬರು ಕಾವಲುಗಾರರು ಪಹರೆ ಮಾಡುತ್ತಿದ್ದರು. ಅಷ್ಟರಲ್ಲಿ ಅಲ್ಲಾವುದ್ದೀನನ ಪಾಳಯದಲ್ಲಿ ಒಂದು ದೀಪವನ್ನು ಯಾರೋ ಹಚ್ಚಿದರು. ಡೇರೆಯ ಒಳಗೆ ಒಬ್ಬ ಯುವಕನು ಏನನ್ನೋ ಆಲೋಚಿಸುತ್ತ ಕುಳಿತುಕೊಂಡಿದ್ದನು. ಬಳಿಕ ಹೊರಗೆ ಬಂದು ಯಾರನ್ನೋ ಹುಡುಕಿದಂತೆ ಅತ್ತಿತ್ತ ನೋಡಿಕೊಂಡು ನಿಂತನು. ಶೀಲವಾದ ಗಾಳಿ ಬೀಸುತ್ತಿತ್ತು. ಆಕಾಶದಲ್ಲಿ ‘ಸಹಸ್ರ ರತ್ನಗಳು’ ಮಿನುಗುತ್ತಿದ್ದವು. ಯುವಕನು ಪುನಃ ಡೇರೆಯೊಳಗೆ ಹೋಗಿ ಕುಳಿತುಕೊಂಡನು. ಯುವಕನ ಹೆಸರು ಮಾಲಿಕ್ ನಾಯಬ್ ಕಾಫರ್,
ಹಿಂದುಸ್ಥಾನದ ಇತಿಹಾಸದಲ್ಲಿ ಈ ಹೆಸರೇ ಮಾಲಿಕ್ ಕಾಫರ್ ಎಂದು ಸಂಕ್ಷೇಪ ವಾಗಿರುವುದು. ಈ ಮಾಲಿಕ್ ಕಾಫರನು ಮೊತ್ತಮೊದಲು ಅಲ್ಲಾವುದ್ದೀನನ ಗುಲಾಮನಾಗಿದ್ದನು, ಅವನ ದಯೆಯಿಂದಲೇ ಸೈನ್ಯದಲ್ಲಿ ಉಚ್ಚಪದವಿಯನ್ನು ಪಡೆದಿದ್ದನು. ಹಲವು ದುರ್ಗುಣಗಳು ಇವನಲ್ಲಿ ಹಾಸುಹೊಕ್ಕಾಗಿದ್ದುವು. ಅಲ್ಲಾವುದ್ದೀನನು ಈ ಪಾಪಿಯಲ್ಲಿ ಹೆಚ್ಚಾದ ವಿಶ್ವಾಸವಿಟ್ಟಿದ್ದನು; ಅವನನ್ನೇ ತನ್ನ ಸೇನಾಧಿಪತಿಯಾಗಿ ಮಾಡಿದ್ದನು; ಅವನ ವಚನವನ್ನು ಕುರಾನಿನಂತೆ ಪಾಲಿಸುತ್ತಿದ್ದನು. ಅಲ್ಲಾವುದ್ದೀನನನ್ನು ರಾಜ್ಯಾಭಿಲಾಷೆಯಿಂದ ಲೋಕಾಂತರಕ್ಕೆ ಕಳುಹಿಸಿದ ವಿಶ್ವಾಸಘಾತುಕನು ಈತನೇ. ಮಾಲಿಕ್ ಕಾಫರನು ಹೊರಕ್ಕೆ ಬಂದು ಅಲ್ಲಲ್ಲಿ ವಿಹರಿಸುತ್ತಿದ್ದನು. ರಾತ್ರಿಯು ಮೆಲ್ಲಮೆಲ್ಲನೆ ಸರಿಯುತ್ತ ಬಂದಿತ್ತು. ಮುಸಲ್ಮಾನರ ಸೈನ್ಯದಲ್ಲಿ ಒಬ್ಬಿಬ್ಬರು ಎಚ್ಚರವಾಗುತ್ತಿದ್ದರು. ಮಾಲಿಕ್ ಕಾಫರನು ಡೇರೆಯ ಸಮೀಪದಲ್ಲಿದ್ದ ಮರದ ತೋಪಿನ ಬಳಿಯಲ್ಲಿ ಬಂದು ನಿಂತನು. ಅಷ್ಟರಲ್ಲಿ ಅವನ ಇದಿರಿಗೆ ಯಾರೋ ಒಬ್ಬನು ಕಾಲ್ನಡಿಗೆಯಾಗಿ ಬರುತ್ತಿದ್ದನು. ಮಾಲಿಕ್ ಕಾಫರನು ಆಗಂತುಕನನ್ನು ನೋಡಿ ಸಲಾಂ ಮಾಡಿದನು.

ಮಾಲಿಕ್‌ ಕಾಫರನು ಆಗಂತುಕನ ಬಳಿಗೆ ಬಂದು, “ನಿನ್ನೊಡನೆ ಮತ್ತಾರಾದರೂ ಬಂದಿದ್ದರೇ?” ಎಂದನು.

ಆಗಂತುಕನು ಸುತ್ತಲೂ ನೋಡುತ್ತ “ಇಲ್ಲ, ನಾನು ಬಂದುದು ಯಾರೂ ತಿಳಿಯಲು ಕಾರಣವಿಲ್ಲ” ಎಂದನು.

ಮಾಲಿಕ್ ಕಾಫರ್:-“ನಿನ್ನ ಹಿಂದೆಯೇ ಏನೋ ದೂರದಲ್ಲಿ ನಿನ್ನ ನೆರಳಂತೆ ತೋರಿತು. ಇಷ್ಟು ವಿಳಂಬವೇಕಾಯಿತು?”

ಆಗಂತುಕ:- ”ಮಧ್ಯಾಹ್ನ ನಿನ್ನನ್ನು ನೋಡಿದ ಬಳಿಕ ಅರಮನೆಯ ಕಾರ್ಯ ಗೌರವದಿಂದ ತಳುವಿದೆನು.”

ಮಾಲಿಕ್‌ಕಾಫರ್:- “ನೀನು ಹಗಲು ನನಗೆ ಮಾತು ಕೊಟ್ಟಂತೆ ದೇವಗಿರಿಯ ಸೈನ್ಯವನ್ನು ಹೊರಕ್ಕೆ ಇಳಿಸಿರುವೆಯೋ?” ಎಲೆಯ ಮರಮರ ಶಬ್ದದಂತೆ ಹತ್ತಿರದಲ್ಲಿ
ಕೇಳಿಸಿತು.

ಆಗಂತುಕ:- ಕೊಟ್ಟ ಮಾತನ್ನು ಮರೆಯಲಾರೆನು. ಅರಮನೆಯನ್ನು ಕಾಯುವಷ್ಟು ಕೈತುಂಬಾ ಸೈನಿಕರನ್ನು ಹಿಂದೆಬಿಟ್ಟು ಮಿಕ್ಕ ಸೈನ್ಯವನ್ನು ಹೊರಕ್ಕೆ ಹೊರಡಿಸಿರುವೆನು.”

ಮಾಲಿಕ್ ಕಾಫರ್:-”ಹಾಗಾದರೆ ನಮ್ಮ ಸೈನ್ಯವು ಒಳ ನುಗ್ಗುವುದಕ್ಕೆ ಇದೇ ಅವಕಾಶವಲ್ಲವೇ? ರಹಸ್ಯ ಮಾರ್ಗವು ಯಾವುದು?”

ಆಗಂತುಕ:- “ಇದೇ ಸಮಯ. ನಾನು ಈ ಮಧ್ಯಾನ್ಹದಲ್ಲಿ ನಿನ್ನೊಡನೆ ಯಾವ ಸ್ಥಳದಲ್ಲಿ ಸಂಭಾಷಣೆ ಮಾಡಿದೆನೋ ಆ ಸ್ಥಳದಿಂದ ಎಡಕ್ಕೆ ತಿರುಗಿದರೆ…”

ಮಾಲಿಕ್ ಕಾಫರ್:- “ಎಡಕ್ಕೆ ತಿರುಗಿದರೆ ಹಾಳು ಗುಡಿಯೊಂದು ತೋರುವುದು.”

ಆಗಂತುಕ:-“ಸರಿ, ಆ ಕಾಳಿಕಾ ದೇವಸ್ಥಾನಕ್ಕೆ ಇದಿರಾದ ಹಾದಿಯನ್ನು ಹಿಡಿದು ಹೋದರೆ, ಅರಮನೆಯ ಹಿಂದುಗಡೆಯಲ್ಲಿ ಇಳಿಯಬಹುದು.”

ಇಬ್ಬರೂ ಸುತ್ತಮುತ್ತಲು ನೋಡಿದರು. ಯಾರೊಬ್ಬರ ಸುಳಿವು ತೋರುತ್ತಿರಲಿಲ್ಲ. ಗಾಳಿಯ ಶಬ್ದವೆಂದು ಸುಮ್ಮನಾದರು. ಪುನಃ ಕಣ್ಣೆತ್ತಿ ನೋಡಿದರು. ವಾಯುವಿನ ಹಿಲ್ಲೋಲದಿಂದ ಉಂಟಾದ ಎಲೆಗಳ ಮರಮರ ಶಬ್ದದಲ್ಲಿ ಅವರಿಗೆ ಏನೊಂದೂ ಕೇಳಿಸಲಿಲ್ಲ.

ಆಗಂತುಕ:- “ಅಲ್ಲಿ ಬೇಕೆಂತಲೇ ಮೂವರು ಸಿಪಾಯರನ್ನು ಇಟ್ಟಿರುವೆನು.”

ಮಾಲಿಕ್‌ ಕಾಫರ್: “ಅಲ್ಲಾವುದ್ದೀನರು ನೀನು ಮಾಡಿದ ಉಪಕಾರವನ್ನು ಮರೆಯಲಾರರು. ಯಾವ ಉಪಾಯದಿಂದಲಾದರೂ ಕೋಟೆಯನ್ನು ಜಯಿಸಿದ ಹೊರತು, ತಾನು ಅನ್ನಾಹಾರವನ್ನು ತೆಗೆದುಕೊಳ್ಳುವುದಿಲ್ಲವೆಂದು ನಿನ್ನೆಯಿಂದ ಹಟ ಹಿಡಿದಿರುವರು. ರಾಮದೇವನ ಸ್ಥಾನವನ್ನು ನೀನೇ ಅಲಂಕರಿಸುವೆ ಎಂದು ತಿಳಿ.”

ಆಗಂತುಕ:-“ರಾಜನಾದ ಬಳಿಕ ನಾನು ವಿವಾಹವಾಗಬೇಕೆಂದು ಯೋಚಿಸಿರುವೆನು.
ಅಲ್ಲಾವುದ್ದೀನರ ಸಮಕ್ಷಮದಲ್ಲಿಯೇ ನಾನು ವೀರಮತಿಯನ್ನು ವಿವಾಹವಾಗಬೇಕೆಂದು ನನ್ನ ಆಸೆ.”

ಆಗ ಗಾಳಿಯು ಪುನಃ “ಚಿ! ಚಿ!” ಎಂಬ ಸ್ವರದಿಂದ ಬೀಸಿತು. ಒಂದೊಂದು ಹಕ್ಕಿಯು ಮರದಲ್ಲಿ ಗೂಡಿನಿಂದ “ದಿಕ್! ದಿಕ್! ಎಂದು ಅರಚಿತು. ಮಾಲಿಕ್ ಕಾಫರನು ಆಗಂತುಕನ ಹಸ್ತವನ್ನು ಹಿಡಿದುಕೊಂಡು “ಕೃಷ್ಣರಾಜ್! ಇನ್ನು ಮುಂದೆ ನೀನೇ ದೇವಗಿರಿಯ ರಾಜನೆಂದು ತಿಳಿ. ನೀನು ಇಲ್ಲಿ ಡೇರೆಯಲ್ಲಿ ತಳುವಿದರೆ ನಾನು ಅಲ್ಲಾವುದ್ದೀನರಿಗೆ ನಿನ್ನನ್ನು ಮನ್ನಣೆಗೊಳಿಸಬೇಕೆಂದು ಹೇಳುವೆನು. ವಿಳಂಬವಾದರೆ ಕಾರ್ಯವು ಕೆಟ್ಟುಹೋಗುವುದು. ಕುದುರೆಯನ್ನು ಹತ್ತಿ ನಾನು ಕೋಟೆಯನ್ನು ಬೆಳಗಾಗುವಷ್ಟರಲ್ಲಿ ನುಗ್ಗಬೇಕು. ಇಕೋ, ಕೋಳಿ ಕೂಗಿತು!” ಎಂದು ಹೇಳಿ ಕುದುರೆಯ ಮೇಲೆ ಹತ್ತಿ ಅದೃಶ್ಯವಾದನು.

ಆಗಂತುಕನು ಮನಸ್ಸಿನಲ್ಲಿ ಏನನ್ನೋ ಯೋಚಿಸುತ್ತ ಮಾಲಿಕ್‌ನು ಇದ್ದ ಡೇರೆಯ ಕಡೆಗೆ ಮೆಲ್ಲಮೆಲ್ಲನೆ ಕಾಲಿಡುತ್ತಿದ್ದನು. ಅಷ್ಟರಲ್ಲಿ “ಹಾ! ದುಷ್ಟಾ!” ಎಂದೊಂದು ಸ್ತ್ರೀ ಧ್ವನಿಯು ಅವನ ಕಿವಿಯನ್ನೂ ಎದೆಯನ್ನೂ ಸೀಳಿಕೊಂಡು ಹೋಯಿತು. ಆಗಂತುಕನು ಪುನಃ ತಿರುಗಿದನು. ಕಣ್ಣುಮುಚ್ಚುವಷ್ಟರಲ್ಲಿ ಮುಸುಕಿಟ್ಟು, ಒಂದು ವ್ಯಕ್ತಿಯು ಅವನ ಸಮ್ಮುಖಕ್ಕೆ ಹಾರಿ ಬಂದಿತು. ಆಗಂತುಕನು ತನ್ನ ಕಟಿಯಲ್ಲಿದ್ದ ಕಠಾರಿಯನ್ನು ಈಚೆಗೆ ಸೆಳೆಯುವಷ್ಟರಲ್ಲಿ ವ್ಯಕ್ತಿಯ ಕೈಯಲ್ಲಿದ್ದ ಭರ್ಚಿಯು ಅವನ ಹೊಟ್ಟೆಯನ್ನು ಹಾಯ್ದುಕೊಂಡು ಅವನ ಸೊಂಟದ ಕಠಾರಿಯನ್ನು ಝಣತ್ಕರಿಸಿತು. ಆಗಂತುಕನು ಘಾತವನ್ನು ತಡೆಯಲಾರದೆ ಒರಗಿದನು.

ಕೃಷ್ಣರಾಜನು ಕರ್ಕಶವಾದ ಭೂಮಿಯ ಮೇಲೆ ಬಿದ್ದುಬಿಟ್ಟನು. ಅವನ ದೇಹದ ರಕ್ತದಿಂದ ನೆಲವೇ ಹರಿದು ಹೋಗುವಂತಿತ್ತು. ಕೃಷ್ಣರಾಜನ ಪ್ರಾಣವು ಮೆಲ್ಲಮೆಲ್ಲನೆ ದೇಹವನ್ನು ಬಿಟ್ಟುಹೋಗುತ್ತಿತ್ತು. ಅವನು ಅಸ್ಪುಟಸ್ವರದಿಂದ, “ಪ್ರಿಯೇ! ನನ್ನ ಹತ್ಯವನ್ನು ಮಾಡುವುದಕ್ಕೆಂದು ಇಲ್ಲಿಗೆ ಬಂದೆಯೇ?” ಎಂದು ಕೇಳಿದನು.

ವೀರಮತಿಯು ಉದ್ರೇಕಿತಳಾಗಿ “ಯಾವನು ಜನ್ಮಭೂಮಿಯ ಹತ್ಯವನ್ನು ಮಾಡುವನೋ ಅವನು ನಿನ್ನ ಗತಿಗೆ ಹೋಗಲಿ” ಎಂದಳು.

ಕೃಷ್ಣರಾಜ:-“ಸಖಿ! ವೀರಮತಿ ನನ್ನನ್ನು ನೀನು ಪ್ರೀತಿಸಲಿಲ್ಲವೇ?”

ವೀರಮತಿಯ ಉತ್ಸಾಹಿತವಾದ ಹೃದಯವು ಈ ಪ್ರಣಯ ಪ್ರಸ್ತಾವದಿಂದ ಫಕ್ಕನೆ ಪರಿವರ್ತಿತವಾಯಿತು. ಕೃಷ್ಣರಾಜ-ಮಾಲಿಕ್ ಕಾಫರರ ಗುಪ್ತ ಸಂಭಾಷಣದಿಂದ ಉದ್ರೇಕಿತವಾದ ಅವಳ ಸ್ವದೇಶಾನುರಾಗವು ಸರ್ವ ದೇಹವನ್ನು ಆವರಿಸಿಕೊಂಡು ಅವಳ ಹಸ್ತದಿಂದ ಈ ಘೋರಕೃತ್ಯವನ್ನು ಹೇಗೆ ನಡೆಯಿಸಿತೋ, ಹಾಗೆಯೇ ಆ ಮನೋಭಾವವು ಶಾಂತವಾಗುತ್ತಲೇ, ಪ್ರಾಣವಲ್ಲಭನ ಅಂತಿಮ ದರ್ಶನದಿಂದ ಅವಳ ಮನಸ್ಸನ್ನು ಆಕ್ರಮಿಸಿ, ತಾನೇತಾನಾಗಿ ನಿಂತ ಪ್ರಣಯವು ಅವಳನ್ನು ದುಃಖಕ್ಕೆ ಗುರಿಮಾಡಿತು. ಕೃಷ್ಣರಾಜನು ಉಜ್ವಲ ಮುಖದಿಂದ “ಪ್ರಾಣೇಶ್ವರಿ! ರಾಜ್ಯ-ಬೇಡ-ನಿನ್ನ-ಚುಂ-ಬ-ನ- ನಾನು-ಸಾ-ಯು…” ಎಂದನು. ಅವನ ಕಡೆಯ ಮಾತುಗಳು ನಾಲಿಗೆಯಲ್ಲೇ ಉಳಿದುಹೋದುವು.

ವೀರಮತಿಯು ಆ ಮೃತದೇಹವನ್ನು ಚುಂಬಿಸಿದಳು; ಮತ್ತೊಮ್ಮೆ ಚುಂಬಿಸಿದಳು; ಪುನಃ ಚುಂಬಿಸಿದಳು. ಅಯ್ಯೋ! ವಿಧಾತನು ಈ ಸುಂದರವಾದ ದೇಹದಲ್ಲಿ ಕಪಟವನ್ನು ಏಕೆ ಅಡಗಿಸಿಟ್ಟನು? ಮಧುರ ಪುಷ್ಪದಲ್ಲಿ ಕ್ರಿಮಿ ಇರುವುದೆಂದು ಹೇಳುವರಲ್ಲವೇ? ಆದಕಾರಣದಿಂದಲೇ ಅದು ಸುಂದರ ಪುಷ್ಪವೆನಿಸುವುದೇ? ಪ್ರಿಯನೇ! ನಿನ್ನ ದೇಹವು ಚಂದ್ರನಂತೆ ಶೀತಲವಾಯಿತಲ್ಲಾ! ಚಂದ್ರನ ಕಳಂಕ ಗೋಚರವಾಗಿದೆ. ನಿನ್ನ ಕಳಂಕವನ್ನು ನೀನು ಮರೆಗೊಳಿಸಿ, ನನಗೆ ಈ ದುರ್ಗತಿಯನ್ನು ತಂದುಬಿಟ್ಟೆಯಲ್ಲ! ನಿನ್ನ ಸ್ಥಿತಿಯನ್ನು ನೋಡಲಾರದೆ ‘ಆಕಾಶದೀಪಗಳು’ ಕಣ್ಮುಚ್ಚಿದವು. ನನ್ನ ಕೈದೀಪವೇ! ನಿನ್ನ ಜೀವಜ್ಯೋತಿಯನ್ನು ನಾನು ನಂದಿಸಿದೆನಲ್ಲಾ! ಮರಳಿ ಇದನ್ನು ಹಚ್ಚುವುದಕ್ಕೆ ನಾನು ಬಲ್ಲೆನೇ? ಮುಸಲ್ಮಾನರಿಗೆ ಸಿಕ್ಕಿದರೇನು! ಸರಿ! ಸರಿ! ಮುಸಲ್ಮಾನರು ಕೋಟೆ ನುಗಿದರು!” ಹೀಗೆಂದು ಪ್ರಲಾಪಿಸುತ್ತಾ ವೀರಮತಿಯು ಪುನಃ “ನನ್ನ ಪ್ರಾಣವಲ್ಲಭನೇ! ಈ ಕಠಾರಿಯು ನಿನ್ನನ್ನು ಎಷ್ಟು ತಿವಿಯಿತೋ ನಾನು ಇದನ್ನು ನೋಡುವೆನು” ಎಂದು ಹೇಳಿ ಕಠಾರಿಯನ್ನು ಮೃತದೇಹದಿಂದ ಈಚೆಗೆ ಸೆಳೆದಳು. “ಶಿರಪುಷ್ಟವೇ! ನಿನ್ನನ್ನು ಇನ್ನೊಮ್ಮೆ ಆಘ್ರಾಣಿಸುವೆನು” ಎಂದು ಹೇಳಿ ಪುನಃ ಪುನಃ ಚುಂಬಿಸಿ “ಕೃಷ್ಣ ಕೃಷ್ಣ ಕೃಷ್ಣ! ಎಂದು ಉಚ್ಚರಿಸುತ್ತ, ಕಠಾರಿಯ ಹತಿಯಿಂದ ಆಹತಳಾಗಿ, ಕೃಷ್ಣರಾಜನ ದೇಹದ ಮೇಲೆ ಬಿದ್ದು ಪ್ರಾಣವನ್ನು ತೊರೆದಳು.
****

ಇಲ್ಲಿ ಇನ್ನೂ ಹೇಳುವುದೇನೂ ಉಳಿಯಲಿಲ್ಲ. ಅಲ್ಲಾವುದ್ದೀನನು ಮಾಲಿಕ್ ಕಾಫರನ ಮುಖಾಂತರವಾಗಿ ಮಾಡಿದ ಭೇದೋಪಾಯವು ಫಲಿಸಿತು. ದೇವಗಿರಿಯ ದುರ್ಗವು ಅಲ್ಲಾವುದ್ದೀನನ ವಶವಾಯಿತು. ಮಿಕ್ಕ ಅಂಶವೆಲ್ಲಾ ಹಿಂದೂಸ್ಥಾನದ ಇತಿಹಾಸದಲ್ಲಿ ವಿಸ್ತರಿತವಾಗಿದೆ.
*****

Tagged:

Leave a Reply

Your email address will not be published. Required fields are marked *

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...