Home / ಕಥೆ / ಸಣ್ಣ ಕಥೆ / ಅಗ್ನಿ

ಅಗ್ನಿ

ಪೆಟ್ರೋಲ್ ವಾಸ್ತೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊದಿಕೆಯೆಲ್ಲ ಪೆಟ್ರೋಲ್‌ನಲ್ಲಿ ಮುಳುಗೆದ್ದವು!

ಹೊರಗಿನಿಂದ ಐದಾರು ಜನರ ಪರಿಚಿತ ಧ್ವನಿಯ ಗುಸು ಗುಸು ಪಿಸು ಪಿಸ… ಮಾತುಗಳು ಕಿವಿ ತುಂಬಿ ಬಂದವು. ಅಗಾ ಇಗಾ ಅನ್ನೊದೊಳಗಾಗಿ ಅಗ್ಗಿ ಪಿಲ್ಲಗಿಸಿ ರೋಷದಿ ಎಸೆದೇ ಬಿಟ್ಟರು ದುಷ್ಟರು. ಇಡೀ ಮನೆ ಮನೆನೇ ಧಗ್ ಗುಟ್ಟಿತು! ಆ ಕತ್ತಲ ರಾತ್ರಿಲಿ ಮುಗಿಲೆತ್ತರ ಉರಿ ಎದ್ದಿತು! ಕೌರವರು ಅರಗಿನ ಮನೆಗೆ ಬೆಂಕಿ ಕೊಟ್ಟಂತೇ ನನ್ ಹಂಡ್ತಿ, ಮೂರು ಜನ ಮಕ್ಕಳು ಎಚ್ರ ತಪ್ಪಿ ಮಲಗಿದ್ದಲ್ಲೇ ನಾ ಎಬ್ಬಿಸುದ್ರೊಳಗಾಗಿ ಹಂಗೆ ಸುಟ್ಟು ಭಸ್ಮವಾದ್ರು…! ನನ್ನದು ಅರಣ್ಯರೋಧನೆಯಾಯಿತು! ಕೊನೇ ಪಕ್ಷ ನಾನೊಬ್ನೆ ಏನನ್ನ ಮಾಡಿ ಬದುಕಿ ಬಿಡಬೇಕೆಂಬ ಛಲದಿ ಗವಾಕ್ಷಿಲಿ ತೂರಿ ಹೊರ ಬಿದ್ದೆ!

ಆ ಮನೆಹಾಳ್ರು ನನ್ನ ನೋಡಿದ್ರು ಅಲ್ಲಿಗೆ ಕತ್ತಿ, ಮಚ್ಚು, ಲಾಂಗು, ಕಲ್ಲು, ಹಾರೆಗಳನ್ನು ಆ ಅವೇಳೆ ರಾತ್ರಿಯಲ್ಲೂ ಎಸೆದ್ರು … ರವ್ವಾಟ್ರಾಗ ತಪ್ಸಿಗಂಡೆ.

ನಾನಾಗೋ ಮರಗಟ್ಟಿದ ಮರ, ಉಕ್ಕಿನ ತಂತಿ, ಕಬ್ಬಿಣದ ಕಾಲು-ಕೈ ಆಗಿದ್ದೆ! ಮಾಳಿಗೆ ಮನೆ ಮೇಲಿಂದ ಒಂದೇ ಉಸ್ರಿಗೆ ಜಿಗಿದೆ! ಎದ್ದೆನೋ… ಬಿದ್ದೆನೋ ಎಂಬಂತೆ ರಿಜುಲು ಗಿಡಗಳ ಪೊದೆಯೊಳಕ್ಕೆ ಪೀಕಿದೆ.

ನನ್ನ ಬೆನ್ನು ಬಿದ್ದು ಅವರೆಲ್ಲ ಕೆಡಾಬಡಾ ಓಡೋಡಿ ಅಟ್ಟಿಸಿಗೊಂಡು ಬಂದ್ರು. ಅವರು ಬಿಡುವಲ್ರು, ನಾ ನಿಲ್ಲುವಲ್ಲೇ… ಉಬ್ಸಾ ಆಯಾಸ ಬಿದ್ಕೊಂತಾ ಸಂಗಿನಹೊತ್ತು ಓಡತೊಡಗಿದೆ.

ನಾ ಕತ್ಲಲ್ಲಿ ಇದ್ದಕ್ಕಿದ್ದಂತೆ ತಪ್ಸಿಗೊಂಡೆ! ಪೊದೆ ಮರೆಗೆ ನಿತ್ಕೊಂಡು ತ್ವೊಟ್ಗು ಉಬ್ಬಾರ್ಸಿಗೊಂಡೆ. ಅಲ್ಲಿಗೆ… ದೆವ್ವ, ಭೂತ, ಪಿಶಾಚಿ, ಕೊಳ್ಳಿದೆವ್ವ … ಪಂಜ್ರೆ … ಏಳು ಎಡೆ ಸರ್ಪ, ಹೆಬ್ಬಾವು ನನ್ ಮೇಲೆ ಎಲ್ಲಾ ಒಟ್ಟಿಗೆ ಏರೇರಿ ಬಂದ್ವು! ನಾ ಅಲ್ಲೇ ಚಿಲಿಚಿಲಿ ಉಚ್ಛೆ ಹೊಯ್ಕಂಡು ನಿಕ್ಕರಿನಲ್ಲಿ ಬುತ್ತಿ ಕಟ್ಗೊಂಡೆ. ಅವೂ ನನ್ನ ಬೆನ್ನು ಹತ್ತಿದವು! ಮತ್ತೆ ನಾ ಓಡತೊಡಗಿದೆ. ಅವು ಏಕದಮ್ಮಾಗಿ ನನ್ನ ಮುಂದೆ ಬಂದು ನಿಂತವು. ಅಬ್ಬಾ! ಧೈರ್ಯ ಮಾಡಿ ಅಲ್ಲೆ ಇದ್ದ ರಿಜಿಲು ಗಿಡವನ್ನು ಬುಡಸಮೇತ ಕಿತ್ತಿಗೊಂಡು ಅವುಗಳಿಗೆ ಬಡಿಯಲು ಹೋದೆ! ಅವು ಹಿಂದಿಂದೆ ಸರಿದವು!

“ಏ … ಇನ್ನೊಂದು ಹೆಜ್ಜೆ ಮೊಂದಿಟ್ರೆ ನಿಮ್ನ ಇಲ್ಲವಾಗಿಸಿ ಬಿಡ್ತೀನಿ” ಎಂದು ಹಲ್ ಹಲ್ ಮಸೆದು ಜೋರಿಲೇ ಏರೇರಿ ಹೋದೆ. ನಾ ಶ್ಯಾನೇ ಹೊತ್ತು ಉಸಿರು ಬಿಗಿ ಹಿಡಿದು ಸಿಕ್ಕಾಪಟ್ಟೆ ಅವುಗಳೊಂದಿಗೆ ಹೋರಾಡುತ್ತಲೇ ಇದ್ದೆ.

“ರೀ … ರೀ … ಎಡಗಡೆ ಪಕ್ಕೆಗೆ ಸರೀರ್ರೀ …” ಎಂದು ನನ್ನವಳು ನನ್ನ ತಿವಿದಾಗ್ಲೆ ನನ್ಗೆ ಎಚ್ರವಾಗಿದ್ದು!

ಎದ್ದು ನೋಡ್ತೀನೀ ನನ್ನ ಮೂರು ಜನ ಮಕ್ಳು, ನನ್ ಹೆಂಡ್ತಿ ಲಕ್ಷ್ಮಿ ಹೆದ್ರಿ ಗೋಡೆಗಂಟಿದ ಹಲ್ಲಿಯಂಗೆ ಲೋಚಗುಟ್ಟುತ್ತಿದ್ದರು!

ನಾನೋ ಅಂಥಾ ತಂಪು ಹೊತ್ತಿನಲ್ಲೂ ಫ್ಯಾನುಗಾಳಿಯಲ್ಲೂ ಜಲ ಜಲಾ ಬೆವತು ಭಯಬಿದ್ದು ಬಸವಳಿದು ಕೈ ಸನ್ನೆ ಬಾಯಿ ಸನ್ನೇಲಿ ನೀರು ಕೇಳಿದ್ದೆ!

ಅಬ್ಬಾ! ಗಂಟಲು ಒಣಗಿ ಬಂದಿತ್ತು! ಬೆಚ್ಚಿಬಿದ್ದೆ. ಚೆಂಬಿನಾ ತುಂಬಾ ನೀರು ಗಟಗಟನೆ ಸೆಂಡಿದೆ. ರವ್ವಾಟು ಉಬ್ಬಾರಿಸಿಗೊಂಡೆ.

“ಏ ಕೆಟ್ ಕನಸು ಬಿದ್ದಿತ್ತಾ? ಏನ್ ಹಲ್ ಹಲ್ ಕಡಿದು ಹೇ ಹೇ ಒಂದ್ ಹೆಜ್ಜೆ ಮುಂದಿಟ್ರೆ … ನಿಮ್ನ ಇಲ್ಲವಾಗ್ಸಿ ಬಿಡ್ತೀನಿ ನೋಡ್ರಿ! ಆಹಾ ಆಹಾ …. ಹಿಂಗೇ ತಡಾಯಿ ಮಂದ್ಲು ಬಂದ್ಬಿಟ್ರಿ … ನಮ್ನ ಓಡ್ಸಿಗೊಂಡು, ಹೆದ್ರಿಸಿಗೊಂಡು, ಬಂದ್ಬಿಟ್ರಿ ಎಂದು …! ಬಲು ಸೆಡ್ವಿಲಿ ಕೂಗಾಡ್ತೀದ್ರಿ … ನಾ ನಿಮ್ನ ಅಲುಗಾಡ್ಸಿ ಬಿಟ್ಟೆ ನೋಡ್ರಿ! ಆವಾಗ ಸುಮ್ನಾದ್ರಿ ಏನ್ರಿ ಇದೆಲ್ಲ? ನೀವೇ ಹಿಂಗ್ಯಾದ್ರೆ? ನಾವೆಂಗ್ರಿ?” ಎಂದಿನಂತೆ ಕಣ್ಣೀರ್‍ಲಿ ಕೈತೊಳೆದ್ಲು.

“ಡ್ಯಾಡಿ ಮದ್ಲು ಯೀ ಮನೇನಾ ಖಾಲಿ ಮಾಡಿ, ಊರೊಳಗೆ ಹೋಗಿ ಬಿಡ್ಯಾನ್ರಿ! ಒಂಟಿ ಮನೆ, ಪಕ್ಕದಲ್ಲಿ ಸುಡುಗಾಡು ಹೆಣ ಹೂಳಾದು, ಕೀಳಾದು, ಸುಡಾದು! ಅಬ್ಬಾ! ಹಗಲು ಹೊತ್ತು ಜನ್ರು ಅತ್ರೆ … ರಾತ್ರಿ ಹೊತ್ತು ಹೆಣಗಳೆದ್ದು ಅಳಾದು! ಛೇ ಛೇ…ಬಾಗಿಲು ಕಿಟಕಿ ಬಡಿಯೋ ಸದ್ದು ಗದ್ದಲ ಮೆರ್ರ್ ಗುಟ್ಟೋ ಗಾಳಿ! ಮಲ್ಗಿದ್ರೆ ಹಗಲು, ರಾತ್ರಿ ಬರೀ ಕೆಟ್ ಕೆಟ್ ಕನಸುಗಳು … ಆಹಾ! ಎಂಥಲ್ಲಿ ಮನೆ ಮಾಡ್ಡಿಟ್ಟೆ ಡ್ಯಾಡಿ…? ಯೀವತೆ ಖಾಲಿ ಮಾಡ್ ಬಿಡ್ಯಾನ್ರೀ…”. ಮಗಳು ಜೊತೆಗೆ ಉಳಿದವರೂ ಕಣ್ಣೀರು ಒರೆಸಿಗೊಂಡರು.

ಎಲ್ರು ಭಯದಿಂದ ಗಡಗಡನೆ ನಡುಗುತ್ತಿದ್ರು… ಹೊರಗಿನ ಸುಯ್… ಗುಟ್ಟೋ ಗಾಳಿ ಜೊತೆಗೆ ಗುಟ್ಟೆಗಳ ಕಡೆಯಿಂದ ಕಪ್ಪಾಲಕ್ಕಾ, ಗುಳ್ಳೆನರಿ, ತೋಳ, ಕತ್ತೆ ಕಿರುಬ, ಗೂಬೆ, ಸೀಳುನಾಯಿ – ಊರು ಕೇರಿ ನಾಯಿಗಳಾ ಕೂಗೂ ಮೇಲಿಂದಾ ಮೇಲೆ ಕಿವಿಗಪ್ಪಳಿಸಿ ಇನ್ನು ನಡಕವನ್ನು ದ್ವಿಗುಣಗೊಳಿಸಿದವು. ಅಬ್ಬಾ! ರಾತ್ರಿಯಿಷ್ಟು ಭಯಾನಕವಾಗಿರುತ್ತದೆಂದು ಈ ಮೊದಲು ಅನಿಸಿರಲಿಲ್ಲ. ಹಿಂದೆ ಜನ್ರು ಮನೆ ಮಠಗಳಿಲ್ಲದಾಗ, ಬೆಂಕಿ ಕಂಡು ಹಿಡಿಯದೆ ಇದ್ದಾಗ ಹೇಗೆ ಬದುಕಿರಬಹುದೆಂದೂ, ಕ್ಷಣ ಚಿಂತಿಸಿದೆ! ಮೈಕೂದ್ಲು ಜಮ್ಮೆಂದವು!

ಅವಸರ ಅವಸರವಾಗಿ ಮನೆ ಮಾಡಿದ್ದು, ಕಡಿಮೆ ಬಾಡಿಗೆ, ಅಡ್ವಾನ್ಸ್ ಇಲ್ಲ… ಕಛೇರಿಗೆ ಹತ್ತಿರ, ಜನದಟ್ಟಣೆಯಿಲ್ಲ ಏನೆಲ್ಲ ಇಲ್ಲಗಳ ಮಧ್ಯೆ ನಾವೆಲ್ಲ ಇಲ್ಲವಾಗುವ ಪರಿಸ್ಥಿತಿ ನಮಗೀಗ ಎದುರಾಗಿದೆ. ಈಗ ನಿತ್ಯ ಎದೆಯಲ್ಲಿ ಅವಲಕ್ಕಿ ಪವಲಕ್ಕಿ ಡಾಮ್ ಡೂಮ್ ಕೈ ಕೊಟ್ರೋ … ಎಂದು ಯಾರೋ ಕುಟ್ಟಿದ ಅನುಭವವಾಗುತ್ತಿದೆ!

ಕೆಟ್ಟ ಕನಸಿನಿಂದಾಗಿ ಇಷ್ಟವಾದ ನಿದ್ರೆ ನಿತ್ಯ ದೂರ ಸರಿದು, ತಲೆ ದೆವ್ವಗಳ ಅಡ್ಡೆಯಾಗಿದೆ.

“ಅಯ್ಯೋ ಪಾಪ! ನಿದ್ರೆಯಿಲ್ಲದೆ ವಿಲ ವಿಲ ಒದ್ದಾಡುತ್ತಿದ್ದಾರೆ! ತಲೆ ಕೆಟ್ಟು ಗೊಬ್ರವಾಗಿದೆ! ಹೆದ್ರಿ ಜಲ ಜಲ ಬೆವತು ಗಡಿಗೆ ಮೀನಾಗೈರೇ” ಎಂದು ಬೆಳಕರಿವುದೆನನ್ನಾ ತಡವಾಗಿದೆಯೇ? ಮೈಕೈಯೆಲ್ಲ ನೋವಾಗಿ, ತಲೆಯೆಲ್ಲ ಭಾರವಾಗಿ, ಕೈಕಾಲುಗಳೆಲ್ಲ ಸೋತು ಸೊರಗಿ ಹೋಗಿದ್ದವು! ಏಳಲಾರದೆ ಎದ್ದು ಮನಸ್ಸಿಲ್ಲದ ಮನಸ್ಸಿನಲ್ಲಿ ನಿತ್ಯ ಕರ ಮುಗಿಸಿ, ಕಛೇರಿಗೆ ಹೊರಡಲು ಅನುವಾದೆ.

ನನಗೆ ಬಲು ಇಷ್ಟವಾದ ಉಪ್ಪಿಟ್ಟನ್ನು ಬಲು ಕಷ್ಟಪಟ್ಟು ನಾಲ್ಕು ಮುಟುಗಿ ನುಂಗಿದೆ! ನೀರಿಳಿಯದ ಗಂಟಲೊಳಗೆ ಬಲವಂತದಿ ಗಂಜಿ ತುರುಕಿದಂತಾಗಿತು! ಮೆತ್ತಾಗೆ ಬಾಂಬೆ ರವೆಯಲಿ ಮಾಡಿದ ಉಪ್ಪಿಟ್ಟು ಗಂಟಲಿಂದ ಹೊರಗೆ ಬರತೊಡಗಿತ್ತು! ಮೊದಲೇ ಸುಸ್ತಾಗಿದ್ದೆ! ಇನ್ನು ಕೇಳಬೇಕೆ? ಬಲ ಹೋದ ಕಾಲಕ್ಕೆ ಗಂಜಿ ನೀರೂ ವಾಂತಿಯಾಗುವುದು.

“ಲಕ್ಷ್ಮಿ ಒಂದು ಗ್ಲಾಸು ಹಾಲು ಕೊಟ್ಬಿಡು! ಹಂಗೇ ಗೌಡಪ್ಪನಿಗೆ ಉಪ್ಪಿಟ್ಟು, ಟೀ ಕೊಡು! ನನ್ನ ಆಫೀಸ್ಸಿಗೆ ಕರ್‍ಕೊಂಡೋಗಾಕೆ ಬಂದಾನೆ”.

“ಗೌಡಪ್ಪ ಬಾ! ಕೂತುಗಾ ಹೋಗಾನು ಬಾ! ಯೀವತ್ತು ಶನಿವಾರ ಅಷ್ಟೊಂದು ಕೆಲ್ಸವಿರಲ್ಲ ಬಾ!” ಎಂದೆ.

ಮಡದಿ ಮಣೆ ಒಳಗಿಂದ ನನ್ಗೆ ಹಾಲು, ಗೌಡಪ್ಪನಿಗೆ ಉಪ್ಪಿಟ್ಟು, ಟೀ, ಬಿಸ್ಕತ್ತು ತಂದಿಟ್ಟು ಹೋದಳು.

ಹಾಲನ್ನು ಎರಡು ಮೂರು ಗುಟುಕು ಗುಟಕರಿಸಿದೆ! ಕಹಿ ಕಹೀ …!

ಲಕ್ಷ್ಮಿ ಹಾಲು ಸರಿಯಿದೆಯಾ? ಹಲ್ಲಿ ಬಿದ್ದೈತಂಗಾ ನೋಡಿದೆಯಾ?

“ಹಾಲಿಗೇನಾಗಿಲ್ಲ ರೀ … ಅದ್ರಲ್ಲಿ ಹಲ್ಲಿ ಏನೂ ಬಿದ್ದಿಲ್ಲ ಸರಿಯಾಗಿಯೇ ಇದೆ! ನಿಮ್ಮ ಬಾಯಿ, ಮನಸು, ಸರಿಯಿಲ್ಲ” ಕಡ್ಡಿ ಎರಡು ತುಂಡು ಮಾಡಿದಂಗೆ ಅಂದ್ಲು.

ರವ್ವಾಟು ಹೊತ್ತು … ಹಂಗೇ ಕೋಳಿ ತೂಗಡಿಸಿದಂಗೆ ತಲೆ ಜೋತ್ಹಾಕಿ ಕುಂತೆ.

“ಸಾರ್ ನನ್ದು ಆಯ್ತು! ಯಿನ್ನು ಹೋಗಾನ್ರೇ ..” ಗೌಡಪ್ಪ ಎದ್ದು ನಿಂತ.

ಲಕ್ಷ್ಮಿ… ನಾ ಬರತೀನಿ … ಬಾಗಿಲು ಹಾಕ್ಕೋ … ಎಂದು ನಾವಿಬ್ಬರೂ ಗಾಡಿಯಲ್ಲಿ ಕುಂತೆವು. ಗಾಡಿಹಗರಿಬೊಮ್ಮನಹಳ್ಳಿಯ ಮಾಲವಿ ಡ್ಯಾಮಿನ ಬಳಿಯಿರುವ ನಮ್ಮ ಕಛೇರಿ ಕಡೆಗೆ ಎಂದಿನಂತೆ ಹೊರಟಿತು.

ಗೌಡಪ್ಪ ಯಾಕೋ ಈವತ್ತು ಸಪ್ಪಗೆ, ತೆಪ್ಪಗೆ ಏನೋ ಕಳಕೊಂಡಂತೆ ಇದ್ದಿಯಾ? ಏನಂತಾ ಹೇಳು ನನಗೂ ಎಂದೆ.

“ಇಲ್ಲ ಸಾರ್! ಏನಿಲ್ಲ ಅಂತಾದೇನಿಲ್ಲ” ಎಂದು ಗೌಡಪ್ಪ ತೆಪ್ಪಗೆ ಗಾಡಿ ನಡೆಸುತಿದ್ದ.

ಜಿಮಿಟಿದ್ರು ಮಕದಲ್ಲಿ ರಕ್ತವಿಲ್ಲ. ನನ್ದು ನನಗಾಗಿರುವಾಗ ಯಿನ್ನು ಗೌಡಪ್ಪನದೇನು ಬಿಡು! ಎಂದು ತೆಪ್ಪಗೆ ಕುಳಿತೆ.

ಕಛೇರಿ ಮುಂದಿನ ಹೋಟೆಲ್ ಮಾಲೀಕ ಕೊಟ್ರಯ್ಯ ಸ್ವಾಮಿ ನಿತ್ಯ ಸಲಾಮು ಹೊಡೆಯುತ್ತಿದ್ದವನು ಈವತ್ತು ನನ್ನ ಕಂಡೂ ಕಾಣದಂಗೇ ಅಲ್ಲೇ ಗಲ್ಲಾಪೆಟ್ಟಿಗೆ ಮೇಲೆ ಕುಂತಲ್ಲೇ ಯಿದ್ದ.

ಕಛೇರಿ ಮುಂದಿದ್ದ ಐದಾರು ನಾಯಿಗಳು ನನ್ನ ಕಂಡೊಡನೆ ನಿತ್ಯ ಬಾಲ ಬಡಿಯುತ್ತಾ ಬರುತಿದ್ದವು ಈವತ್ತು ಹತ್ತಿರ ಸುಳಿಯಲಿಲ್ಲ. ಬೇಲಿ ಮರೆಯ ತೊಂಡಿಕ್ಯಾತ ನನ್ನ ಕಂಡು ತಲೆ ಗುಣಿಕಿಕ್ಕಿ ಮರೆಯಾಯಿತು. ಕಛೇರಿ ತೆರೆದೊಡನೆ ಕರಿಬೆಕ್ಕೊಂದು ಒಳಗಿಂದ ಚೆಂಗನೆ ಹೊರಕ್ಕೆ ಜಿಗಿದು ಬಂತು. ಅಲ್ಲೇ ಇದ್ದ ಕರಿ ಹಲ್ಲಿಯೊಂದು ಲೋಚಗುಟ್ಟುತ್ತಾ ಗೋಡೆ ಮೇಲಿಂದ ಸರ್ರನೇ ಕೆಳಗಿಳಿಯಿತು! ಬಲಗಾಲಿಟ್ಟು ಕೊಠಡಿಗೆ ಹೋಗಿ ಕೆಲಸದಲ್ಲಿ ಮಗ್ನನಾದೆ.

ಎರಡು ತಾಸು ಕಳೆಯಿತು. ಕುರ್ಚಿಯಿಂದ ಯಾಕೋ ಮೇಲೇಳಲು ಮನಸ್ಸಾಗಲಿಲ್ಲ. ಅಷ್ಟರಲ್ಲಿ ಕಛೇರಿ ಗುಮಾಸ್ತ ಮೃತ್ಯುಂಜಯ ಎಂದಿನಂತೆ ತಡವಾಗಿ ಬಂದವನೇ ನನ್ನ ಕೊಠಡಿಗೆ ಮುಳ್ಳು ಹಂದಿಯಂತೆ ನುಗ್ಗಿ ಬಂದು “ಸಾರ್ ನೀವು ಕೇಳುತಿದ್ದ ಹಣ ಎಂದು ಅವಸರದಿ ಎದೆ ಜೇಬಿಗಿಟ್ಟ ಏನು ಎಂದು ಎಡಗೈಲಿ ಸಾವಿರದ ಎರಡು ಐದು ನೂರರ ಆರು ನೋಟುಗಳನ್ನು ಟೇಬಲ್ ಮೇಲಿಟ್ಟೆ! ಅಷ್ಟರಲ್ಲಿ ದೇವಾನು ದೇವತೆಗಳಂತೆ ಐದು ಜನ ಪೊಲೀಸ್ ಅಧಿಕಾರಿಗಳು ನನ್ನ ಸುತ್ತ ಪ್ರತ್ಯಕ್ಷರಾಗಿ ನನ್ನ ಎದ್ದು ನಿಲ್ಲಲು, ಅಲುಗಾಡದಂತೆ ಸೂಚಿಸಿ ನನ್ನ ಜೇಬು, ಡ್ರಾ, ಬೀರು, ಟೇಬಲ್, ಮೊಬೈಲ್‌ನ್ನ ವಶಕ್ಕೆ ಪಡೆದು ತಪಾಸಣೆಗೆ ಮುಂದಾದರು.

ನಾ ಆಕ್ಷಣ ವಾತಾಳ ಕಂಡೆ, ಬಾಯಿಯೆಲ್ಲ ಒಣಗಿ. ಕೇಡು ಧೈರ್‍ಯದಿ… ಸಾರ್ ನಾನೊಬ್ಬ ಬರಹಗಾರ ೪೦ ಪುಸ್ತಕಗಳನ್ನು ಪ್ರಕಟಿಸಿ, ಮಾರಿದ್ದೇನೆ. ಅದರ ಹಣ ನನಗೆ ಇವನು ಅರವತ್ತು ಸಾವಿರ ನೀಡಬೇಕು! ಅದನ್ನು ಕೊಡಲು ಈಗ್ಗೆ ಮೂರು ತಿಂಗಳಿಂದ ನಿತ್ಯ ಕೇಳುತ್ತಾ ಬಂದಿದ್ದೇನೆ. ಅದರಿಂದ ತಪ್ಪಿಸಿಕೊಳ್ಳಲು ಈ ಕುತಂತ್ರ, ನನ್ನ ನಂಬಿ, ಇದು ಸತ್ಯ ಕಥೆ.

“ಐ ಸೇ ಡೋಂಟ್ ಟಾಕ್ ನಿನ್ನ ಮೇಲೆ ದೂರಿದೆ. ನಮ್ ಡ್ಯೂಟಿ ಮಾಡಲು ಬಿಡಿ! ನಾನೊಬ್ಬ ಕಳ್ಳ, ಸುಳ್ಳ, ವ್ಯಭಿಚಾರಿ, ಮೋಸಗಾರ, ಕಪಟಿ, ವಂಚಕ, ಲಂಚಕೋರ, ಮೈಗಳ್ಳ, ಕುಡುಕ ಹಡುಕ ಇತ್ಯಾದಿಯೆಂದು ಯಾರಾದರೊಬ್ಬರು ಈತನಕ ಒಪ್ಪಿಕೊಂಡ ನರಪಿಳ್ಳೆನ ನಾವು ಕಂಡಿಲ್ಲ! ಯೆಲ್ರು ಸತ್ಯ ಹರಿಶ್ಚಂದ್ರರೇ … ಹೀಗೆ ಸಿಕ್ಕಿ ಹಾಕಿಕೊಳ್ಳುವ ತನಕ. ಐ ಸೆ ಕಾಂಟ್ ಟಾಕ್ ..” ಅವರೆಲ್ಲ ಕೂಗಾಡಿ ವದ್ರಾಡಿ ತಳ್ಳಿ ನೂಕಿ ಹೊಡೆಯುಲು ಬಡಿಯಲು ಮೈ ಮೇಲೆ ಏರೀರಿ ಬಂದ್ರು …. ನಾ ಒಬ್ನೇ ಅವರು ಅಷ್ಟು ಜನ್ರು ಅವಕ್ಕಾದೆ.

ನನ್ನ ಕಛೇರಿಯಲ್ಲಿ ಇರಾದೆ ನಾವು ಏಳೆಂಟು ಮಂದಿ! ಅವರೆಲ್ಲ ಹಂದಿಗಳಂಗೇ ಚರಂಡಿಯಲ್ಲಿ ತಂಪಾಗಿ ಸೊಂಪಾಗಿ ಗುಂಪಾಗಿ ನಿಂತು ಮಿಕಿ ಮಿಕಿ ಕಣ್ಣುಕಾಲು ಬಿಡುವಂತೆ ನನ್ನ ನೋಡುತ್ತಾ ನಿಂತರು. ಅರವತ್ತು ಎಕರೆ ಕಾಡಿನ ಮಧ್ಯೆ ಹುಡುಗೋಸಿಯಂಗೆ ತಲೆ‌ಎತ್ತಿ ನಿಂತಿದ್ದ ಕಟ್ಟಡದ ಮಧ್ಯೆ ನೂರಾರು ಮರಗಿಡ ಬಳ್ಳಿ ತರುಲತೆಗಳೂ ಉಸಿರಾಡದೆ ಗರಬಡಿದಂತೆ ನನ್ನ ಕೆಕ್ಕರಿಸಿಗೊಂಡು ನೋಡುತ್ತಾ ನಿಂತವು.

ಸಾರ್ ಮೂರು ತಾಸಿನ ಮೇಲ್ಯಾಗಿದೆ ನಾ ನೇಚರ್ ಕಾಲಿಗೆ ಹೋಗ್ಬೇಕು ಎಂದೆ.

“ರೀ ಇವನ ಶರಟು, ಪ್ಯಾಂಟು ಬಿಚ್ಚಿಸ್ರೀ … ಎಲ್ಲಾ ಚೆಕ್ ಆಫ್ ಮಾಡಿ, ಇವನ್ಹಿಂದೆ ಇಬ್ರು ಹೋಗಿ ನೇಚರ್ ಕಾಲ್ ಮಾಡ್ಸಿಗಂಡು ಬನ್ರೀ” ದೊಡ್ ಸಾಹೇಬ್ರು ಅಂದ್ರು.

ನನ್ನ ಹುಟ್ಟುಬಟ್ಟೆ ಮಾರು ಬಟ್ಟೆಲಿ ನಿಲ್ಸಿ ಖುಷಿಪಟ್ಟು, ಇದಕ್ಕಿಂತ ನರಕ ಇನ್ನಿಲ್ಲ ಸತ್ತು ಹೋಗಿಬಿಡಬೇಕು ಅನಿಸ್ತು. ಕಣ್ಣೀರು ಗಳಗಳನೆ ಹರಿದು ಅಲ್ಲೇ ಇದ್ದ ಮಾಲವಿ ಡ್ಯಾಮಿಗೆ ತುಂಬಿದವು. ಮಟಮಟ ಮಧ್ಯಾಹ್ನದಿಂದ ಹಿಡಿದು ಸಂಜೆಯ ನಸಿಕಿನವರೆಗೆ ಪಂಚನಾಮ ತಯಾರಿಸಿದರು. ಅದಕ್ಕೆ ಪ್ರಬಲ ಸಾಕ್ಷಿದಾರರಾಗಿ ಗೌಡಪ್ಪ, ಈರಣ್ಣ, ವಲೀ, ಶಂಕರಪ್ಪ ನಾಯ್ಕ ರುಜುಮಾಡಿ ಸಂಭ್ರಮಿಸಿದರು. ಅನ್ನ ತಿಂದ ಮನೆಗೆ ಹೆಂಡೆ ಒಗೆದು ಕೈ ತೊಳೆದು ಕುಂತರು.

ಇದು ಪರಮಾನ್ಯಾಯ, ಇವನು ತಾಯ್ಗಿಂಡ ನಂಬಿಕೆ ದ್ರೋಹಿ, ಚಾರಿತ್ರ್ಯಹೀನ, ಕ್ರೂರಿ, ಕಟುಕ, ನನ್ನಂಥವರನು ಹೀಗಾಗ್ಲೆ ಐದಾರು ಜನ್ನ ಹೆಣವನ್ನು ಹಿಂಗೆ ಎತ್ತಿದ್ದಾನೆ! ಯಿವ್ನ ದೂರು ನಂಬಿ ನೀವ್ಹೇಗೆ ಬಂದೀರಿ? ನಾನು ರುಜು ಮಾಡಲ್ಲ. ನೀವು ಯೀಗಾಗ್ಲೆ ಐದಾರು ತಾಸಿಂದ ನನ್ನ, ಕಛೇರಿಯನ್ನ, ಮನೆಯವ್ರನ ಶೋಧಿಸಿದ್ದೀರಿ ಅವನ್ನಿತ್ತ ಪುಸ್ತಕದ ಹಣವನ್ನು ಬಿಟ್ಟರೆ ವಿಷ ಕುಡಿಯಲು ನನ್ನ ಹತ್ತಿರ ಬಿಡಿಕಾಸಿಲ್ಲ … ಎಲ್ಲ ವಿವರಿಸಿ … ಅಲ್ಲೇ ಬರೆದೂ ಕೊಟ್ಟೆ!

ಅಷ್ಟರಲ್ಲಿ – ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬಂದ್ರು, “ಮಿಸ್ಟರ್ ಸತ್ಯಹರಿಶ್ಚಂದ್ರ ನೀವು ಹಳಿಯಾಳ, ಬಾಗಲಕೋಟೆಯಲ್ಲಿ ಡಿಪೋ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುವಾಗ ನಾನಲ್ಲಿ ಠಾಣಾಧಿಕಾರಿಯಾಗಿದ್ದೆ! ನಿಮ್ಮತನ, ಭಾಷಣ, ಜನಪ್ರಿಯತೆ ಗೊತ್ತು! ಇದೆಲ್ಲ ಏನಿಲ್ಲ, ಸುಮ್ಮೆ ಪೆಟ್ಟಿ ಕೇಸಷ್ಟೇ. ದೂರು ಬಂದಿದೆ! ನಮ್ಮ ರೀಯಾಕ್ಷನ್ ಅಷ್ಟೇ … ನೀವು ನಾನ್‌ಕೋರ್ಪೆಶನ್ ಎಂದು ಷರಾ ಬರೆದು, ಪಂಚನಾಮೆ ಡ್ರಾ ಮಾಡಿ .. ಅರೆಸ್ಟ್ ಮಾಡಿ, ಜೈಲಿಗೆ ತಳ್ಬೇಕಾಗುತ್ತದೆ. ಬೀ ಕೇರ್ ಫುಲ್, ಇದೆಲ್ಲ ಸರ್ವಿಸ್ಸಿನಲ್ಲಿ ಕಾಮನ್. ವಿಶಿಷ್ಟ ಅನುಭವ. ಬನ್ನಿ ಪ್ಲೀಜ್ ರುಜು ಮಾಡಿ, ಜಾಸ್ತಿ ರಾದ್ಧಾಂತ ಮಾಡ್ಕೊಬೇಡಿ.”

ವ್ಯವಸ್ಥಿತವಾಗಿ ಖೆಡ್ಡಕ್ಕೆ ಬೀಳಿಸಿದರು. ಯಿನ್ನು ಮೀನ ಮೇಷ ಎಣಿಸುತ್ತಾ ಕುಳಿತಿರುವುದರಲ್ಲಿ ಅರ್ಥವಿಲ್ಲ ಯಿಡೀ ಜಗವೇ ರಣರಂಗ, ನನ್ನೊಂದಿಗೆ ಮೂರು ವರ್ಷದಿಂದ ಹರ್ಷದಿ ಇದ್ದ ಈ ನನ್ನ ಕೈ ಕೆಳಗಿನ ಯೀ ಐದಾರು ಸಿಬ್ಬಂದಿಯೆಲ್ಲ ಅವರ ಪರ ಸಾಕ್ಷಿದಾರರಾಗಿರುವಾಗ … ಆ ದೇವರೂ ನನ್ನ ರಕ್ಷಿಸಲಾರ. ಅಲ್ಲಿದ್ದ ಹತ್ತಾರು ಮಂದಿಯ ಮುಖಗಳಗಿಬರಾಡಿದೆ ಅವರಿಗೆ ಮುಖಗಳೇ ಇರಲಿಲ್ಲ. ಕರುಣೆಯಿಲ್ಲದ ಕಟುಕರಂಗೇ ಕೈಯಲ್ಲಿ ಕತ್ತಿ, ಕುಡುಗೋಲು, ಗುರಾಣಿ, ಕೊಡ್ಲಿ, ಮಚ್ಚು ಹಿಡಿದೇ ನಿಂತಿದ್ದರು. ಯೀ ಚಕ್ರವ್ಯೂಹದಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ನಗುನಗುತ್ತಾ ಕೊರಳೊಡ್ಡಿದೆ.

ಬಲು ಖುಷಿ ಖುಷಿಯಲಿ: ನನ್ನನ್ನು ಪೊಲೀಸ್ ವ್ಯಾನಿನಲ್ಲಿ ಹೇರಿಕೊಂಡು, ನ್ಯಾಯಾಧೀಶರ ಬಳಿ ರಾತ್ರಿ ಹನ್ನೆರಡುವರೆಗೆ ಹಾಜರುಪಡಿಸಿದರು. ಅವರ ಪ್ರಶ್ನೆಗಳಿಗೆಲ್ಲ ಉತ್ತರಿಸುವ ಶಕ್ತಿ ವ್ಯವಧಾನ ನನ್ನಲ್ಲಿರಲಿಲ್ಲ. ಅತ್ತು ಅತ್ತು ಮಾಲವಿ ಡ್ಯಾಂ ತುಂಬಿಸಿ… ತುಂಬಾ ನಿತ್ರಾಣಕ್ಕೆ ಬಿದ್ದಿದ್ದೆ. ನನ್ನ ಪರ ವಕೀಲರೂ ಜನರೂ ಅಲ್ಲಿದ್ದರು. ಅವರ ವಾದ ವಿವಾದ ಫೀ ಇತ್ಯಾದಿಯ ಮಧ್ಯೆ ನನ್ನನ್ನು ಜಿಲ್ಲಾ ಕಾರಾಗೃಹದ ಆಸ್ಪತ್ರೆಗೆ ತಳ್ಳಿದರು. ಅಲ್ಲಿ ಸುಕ್ಕಾಡಿ ಪರದೆ, ಮಂಚ, ತಡಿ, ದಿಂಬು, ಟೀವಿ, ಪೇಪರ್, ಟೇಬಲ್, ಕುರ್ಚಿ, ಇತ್ಯಾದಿ ಸವಲತ್ತುಗಳ ಕಂಡು ಬೆಚ್ಚಿ ಬಿದ್ದೆನಲ್ಲದೆ, ಅಲ್ಲಿ ನಾಲ್ಕು ಜನ್ರು ಆಪ್ತರಾದರು. ನಾ ಯಿಲ್ಲೇ ಸತ್ರೆ ಹೊರಲು ನೀವು ಬೇಕಲ್ಲ ಎಂದು ಅವರ್‍ನ ನಗಿಸಿದೆ.

ಅಂದು – ರಾತ್ರಿ ಎಷ್ಟು ವಿಲವಿಲ ಒದ್ದಾಡಿದರೂ ನಿದ್ರೆ ಹತ್ತಲಿಲ್ಲ. ಒಂದು ಕಡೆಯಿಂದ ಕಛೇರಿಯವರನ ಕತ್ರಿಸಿ ಕತ್ರಿಸಿ ತುಂಡು ತುಂಡು ಕೈಮಾ ಮಾಡಿ ನಾಯಿ, ನರಿ, ಹದ್ದು, ಕಾಗೆ, ಇಲಿ, ಹೆಗ್ಗಣಗಳಿಗೆ ಉಣಬಡಿಸಬೇಕು. ಎಷ್ಟು ಸುಲಭವಾಗಿ ನನ್ನ ಕಥೆ ಬಾಳ ಭವಿಷ್ಯವನ್ನೇ … ಮುಗಿಸಿದವರೆಲ್ಲರೂ ನನ್ನ ಕಣ್ಣ ಮುಂದೆ ದಸರಾ ಮೆರವಣಿಗೆ ಹೊರಟರು. ಇವರೆಲ್ಲ ಕ್ರೂರಿಗಳು, ನಪುಂಸಕರು, ಕಟುಕರು, ಇವರ ಜೊತೆಗೆ ನನ್ನ ಮೇಲಾಧಿಕಾರಿಗಳೂ ವೃತ್ತಿ ಮತ್ಸರ, ಜಾತಿ, ಮತ, ಧರ್ಮ ಸಂಕಟದಿಂದಾಗಿಯೇ ನನ್ನ ಬಲಿಕೊಟ್ಟರು. ನಾನು ಸುಮ್ನೆ ಬಿಡ್ಬಾರದೆಂದು ಹಲ್ಹಲ್ಲು ಕಡಿದೆ. ಕಣ್ಣು ಉರಿ ಬಂದು, ಬಾಯಿ ಒಣಗಿ, ಕೈಕಾಲುಗಳಿಂದ ಒಮ್ಮೆಲೇ ಕೋಪ ರೋಷ ಉಕ್ಕಿ ಬಂತು. ತಡಿಯಾಕಾಗಲಿಲ್ಲ ದಿಢಿಗ್ಗನೇ ಎದ್ದು ಕುಳಿತೆ.

ಕುಳಿತೆ ಕುಳಿತೆ … ಅದೆಷ್ಟು ಹೊತ್ತು ಕುಳಿತೋ …?! ನನಗೇ ರೋಸಿಗೆ ಬಂದು ಹಾಗೆ ದಿಂಬಿನ ಮೇಲೆ ತಲೆಕೊಟ್ಟೆ! ಯಾವಾಗ ನಿದಿರೆ ಬಂತೋ ಗೊತ್ತಾಗಲಿಲ್ಲ.

ಬೆಳಿಗ್ಗೆ ಕಣ್ಣು ಬಿಟ್ಟಾಗ ನನ್ನ ಬಳಿಯಲ್ಲಿ ಕುಳಿತು, ರಾತ್ರಿ ನನ್ನ ಅಕ್ಕಪಕ್ಕ ಮಲಗಿದ್ದ ಆ ನಾಲ್ಕು ಜನ್ನು ನನಗಿಂತಾ ವಯಸ್ಸಲ್ಲಿ ತೀರಾ ಕಿರಿಯರು ಎಂದಿನಂತೆ ಪ್ರಜಾವಾಣಿ, ಕನ್ನಡಪ್ರಭ, ಸಂಯುಕ್ತ ಕರ್ನಾಟಕ ಪತ್ರಿಕೆಗಳ ಓದುತಿದ್ದರು.

ಇಂದು ನನ್ನದೇ ಸುದ್ದಿ ಪ್ರಕಟಗೊಂಡಿದ್ದನ್ನು ಓದಿ ಲೊಚಗುಟ್ಟಿದರು. ಅಂದು ರವಿವಾರ – ನಿತ್ಯ ಕರ್ಮ ಮುಗಿಸಿ ತಣ್ಣೀರ ಜಳಕ ಮಾಡಿ ರೆಡಿಯಾದೆ. ಅಷ್ಟ್ರಾಗ ಆ ನಾಲ್ಕು ಜನ್ರ ಬುತ್ತಿಗಂಟು ಊರಿಂದ ಬಂದಿತ್ತು. ಅದರಲ್ಲಿ ಕರಿಗಡಬು, ಹೋಳಿಗೆ, ತುಪ್ಪ … ಹತ್ತಿಕಾಯಿ, ಚಪಾತಿ, ಬದನೆಕಾಯಿ ಪಲ್ಲೆ, ನುಗ್ಗೆಕಾಯಿ ಸಾರು, ಹಪ್ಪಳ, ಸಂಡಿಗೆ, ಕೋಸಂಬರಿ, ಚಿತ್ರಾನ್ನ, ಮೊಸರನ್ನವನ್ನು ನಾವು ಐದು ಜನ್ನು ಕಿತ್ತು ತಿಂದೆವು.

ಕಣ್ಣಾಗ ನೀರು ಮೆಲ್ಲಗೆ ಹರಿಯತೊಡಗಿತು. “ಛೇ ಯಿದ್ನೇ ನಾವು ಬ್ಯಾಡಾ ಅನ್ನೋದು. ನಾ ಆಸ್ತಿಗಾಗಿ ಅಣ್ಣನನ್ನೇ ಕತ್ರಿಸಿ ಎರಡು ತುಂಡು ಮಾಡೀನಿ ಅಳುತಿಲ್ಲ! ಇವನೋ ತನ್ನ ಅತ್ತಿಗೆ, ಅತ್ತಿಗೆ ಮಗನನ್ನೇ ಕತ್ರಿಸಿ ಒಗದಾನೆ. ಅತ್ತಿಲ್ಲ! ಇನ್ನು ಇವನೋ … ತನ್ನ ಹೆಂಡ್ತಿನೇ ನೇಣ್ಯಾಕೆನೆ ಕಣ್ಣೀರು ತೆಗೆದಿಲ್ಲ! ಇವನೋ ತನ್ನ ಹೆಂಡ್ತಿಗೇ ಸೀಮೆ‌ಎಣ್ಣೆ ಉಗ್ಗಿ ಅಗ್ಗಿ ಪಿಲ್ಲಗೀಸಿ ಬಂದಾನೆ ಅತ್ತಿಲ್ಲ! ಇನ್ನು ನೀನು ಏನು ಮಾಡೀಗಿಯಂಥಾ ಅಳುತ್ತೀಗಿ?! ನಮ್ ಜೊತೆಗಿದ್ದಾಗ ಅಳುವೇ ಇಲ್ಲ. ಬರೀ ನಗುವೇ ಗೆಲುವೆ ಎಲ್ಲಾ … ನಕ್ಕಿದ್ದು ನಿನ್ನದು, ಅತ್ತಿದ್ದು ನಿನ್ನದಲ್ಲ …” ಅಣ್ಣೇಗೌಡ್ರು ನನ್ನ ಕಣ್ಣೀರ ಸೀಟಿದ್ರು, ಅಂದು.

ಕಾರಗೃಹದಲ್ಲಿದ್ದ ಜನರನ್ನು ಇವರೇ ಮುಂದೆ ನಿಂತು ಖುಷಿ ಖುಷಿಲಿ ಒಂದು ಕಡೆಯಿಂದಾ…. ಪರಿಚಯಿಸಿದರು. ಅವರೆಲ್ಲರ ಕಥೆ ವ್ಯಥೆ ಕೇಳಿ ಕಣ್ಣೀರಿಟ್ಟೆ, ನನ್ನ ಕತೆ, ಕೇಳಿ ಅವರೆಲ್ಲ ಮರುಗಿದರು!

ಇಡೀ ದಿನ ಹೀಗೇನೇ ಜಿಗಿದಿದ್ದು … ತಿಳಿಲಿಲ್ಲ. ಹೊರಗಿನ ಊಟ, ತಿಂಡಿ, ಸಾಮಾನು ವಸ್ತು ಒಡೆವೆ… ಬೀಡಿ ಸಿಗರೇಟು, ಸಬ್ಬು ಇತ್ಯಾದಿ ಏನು ಬಂದಿದ್ದರೂ ಅದನ್ನು ಪಡೆಯಲು ನೂರು ಐವತ್ತು ಲಂಚ ಕೊಡದೆ ಸಿಬ್ಬಂದಿ ಮಂಚವೇರಲ್ಲವೆಂದು ಕೇಳಿ ದುಕ್ಕಾಪಟ್ಟೆ … ವ್ಯವಸ್ಥಿತವಾಗಿ ಲಂಚದ ವ್ಯವಸ್ಥೆಯಿಲ್ಲಿಯೂ ಸಾಗಿದೆ. ಆರೋಪಿಗಳನ್ನು ಇನ್ನೂ ಅವಸಾನದ ಅಂಚಿಗೆ ತಳ್ಳುವ ಎಲ್ಲ ತಂತ್ರಗಳಿವೆ. ಪ್ರತಿಭಟನೆ ಇಲ್ಲಿ ಬರೀ ಕನಸಿನ ಮಾತು.

ರಾತ್ರಿ ಊಟಕ್ಕೆ ಆ ನಾಲ್ವರ ನಾಲ್ಕು ಡಬ್ಬಿಗಂಟುಗಳು ವೇಳೆಗೆ ಸರಿಯಾಗಿ ಬಂದವು. ಒಂದರಲ್ಲಿ ಮಟನ್, ಚಿಕನ್, ಫಿಶ್, ರೊಟ್ಟಿ, ರಾಗಿಮುದ್ದೆ, ಚಪಾತಿ, ಅನ್ನ, ಸಾರು, ಬೇಯಿಸಿದ ಮೊಟ್ಟೆ, ಈರುಳ್ಳಿ, ಸೌತೇಕಾಯಿ … ಅಬ್ಬಾ! ಎಂದೆ.

“ಇದೆಲ್ಲ ಏನು? ನೀನು ನನ್ನೊಟ್ಟಿಗೆ ಒಂದು ವಾರವಿರು! ನೀನೂ ಕಿಂಗ್ … ಇಡೀ ಜೈಲಿಗೇ ಬಾದುಶಾಹ! ನಾರಾಯಣಗೌಡ್ರು ನನ್ನ ಹುರುದುಂಬಿಸಿದರು.

ನನ್ನ ಮುಖ ಬಾಡಿಹೋದ ಪುಂಡಿಪಲ್ಲೆಯಾಗಿತ್ತು! ಹಸಿದ ಹೊಟ್ಟೆಗೆ ಆ ಹು ಅನ್ನದೆ ಒಂದಿಷ್ಟು ತುರುಕಿದೆ ಬಾಲ್ಯದಿ ಓದುವಾಗ, ಪದವಿ, ಪ್ರಶಸ್ತಿ ಪಡೆವಾಗ ನನಗಿಂತಾ ದುರ್ಗತಿ ಬರುತ್ತದೆಂದು ನಾ ಎಣಿಸಿರಲಿಲ್ಲ. ಗೋಕಾಕಾ ಚಳುವಳಿಯಲ್ಲಿ ಹೀಗೆ ನಾಲ್ಕು ಬಾರಿ ಜೈಲಿಗೋಗಿದ್ದಾಗಿನ ಖುಷಿನೇ ಬೇರೆ, ಆದರೆ ಈಗಿನ ಅಧೋಗತಿನೇ ಬೇರೇ … ನನ್ನ ನಾ ಹಳಿಯುತ್ತಾ ಕಳೆದ ರಾತ್ರಿಯಂಗೇ ಒಂಟಿ ಪಕ್ಕೆಲಿ ಒದ್ದಾಡುತ್ತಾ ಕೊತಕೊತನೆ ಸುಣ್ಣ ಕುದ್ದಂಗೆ ಕುದಿಯುತ್ತಾ ಬಾಳ ಹೊತ್ತು ನನ್ನ ವಿರುದ್ಧ ಪಿತೂರಿ ನಡೆಸಿದವರ ಕರುಳ ಬಗೆದು ಕೇಕೆ ಹಾಕಿ ಉಗ್ರ ನರಸಿಂಹಾವತಾರ ತಾಳಿದೆ.

ಅದೆಷ್ಟೊತ್ತು ರಾತ್ರಿಯೆಲ್ಲ ಒಬ್ಬನೇ ಗುಮ್ಮನ ಗುಸುಕಿನಂಗಿರಲು ಸಾಧ್ಯ? ನನಗರಿವಿಲ್ಲದೆ ನಿದ್ರೆಗೆ ಜಾರಿದ್ದೆ.

ಬೆಳಿಗ್ಗೆ ಎದ್ದಾಗ ಏನೋ ಲವಲವಿಕೆ, ಹರುಷ, ಈವತ್ತು ಬಿಡುಗಡೆಯ ಭಾಗ್ಯ ದೊರೆವುದೆಂದು ನಾ ಭಲೇ ಖುಷಿಲಿ ಆ ನಾಲ್ವರಿಗೆ ಹೇಳಿದೆ. “ಹೊರಗೆ ಹೋದ ಮೇಲೆ ಕರೆನ್ಸಿ ಹಾಕಿಸು! ನಮ್ಮ ಮರೀಬೇಡ! ನಿನ್ನ ಸಹಾಯಕ್ಕಿದ್ದೇವೆ. ನಮ್ಮಯ ವಿಳಾಸ, ದೂರವಾಣಿ ಸಂಖ್ಯೆ ಎಲ್ಲ ತೆಗೆದುಕೋ! ಜೀವನ ಹೇಗೆ ಬರುತ್ತೋ ಹಾಗೆ ಸ್ವೀಕರಿಸು! ನಾವಂದು ಕೊಂಡಂತಿಲ್ಲ” ಎಂದ ಅಣ್ಣೇಗೌಡ.

“ಕೋರ್‍ಟಿಗೆ ನಮ್ಮ ಫೈಲು ಈವತ್ತೇ ಈಗ್ಲೆ ಹೋಗ್ಟಕೆಂದ್ರೆ ಪ್ರತಿ ಟೇಬಲ್‌ಗೆ ಮಾಮೂಲಿ ಮುಟ್ಲೇಬೇಕಂತೇ …” ಈ ಸುದ್ದಿ ನನಗೆ ಆತಂಕ ತಂತು. ತಲೆಗೆ ಕೈ ಹೊತ್ತೇ! ಅಷ್ಟರಲ್ಲಿ ಸಾಕ್ಷಾತ್ ದೇವ್ರು ಬಂದಂಗೆ ಡಿ.ಎಂ.ಇ, ಜಗದೀಶ್ ನನ್ನ ಹುಡುಕಿ ಬಂದರು. “ನಿಮೀ ಇಂಥಾ ಸ್ಥಿತಿ ಬರುಬಾರ್ದಿತ್ತು ಸಾರ್! ಇದೆಲ್ಲ ಸಂಚು. ನಾನಿದ್ದೇನೆ ನೀವು ಯಾವುದಕ್ಕೂ ಹೆದ್ರಬ್ಯಾಡ್ರಿ, ಹಣ ತಂದೀನಿ, ಹೊರಗೆ ನಿಮ್ಮ ಅಳಿಯನ ಕೈಲಿ ಕೊಟ್ಟು ಹೋಗ್ತಿನಿ, ಇನ್ನೂ ಕೇಳ್ರೀ…”

ಆನೆ ಬಲ ಬಂತು! ಡಿ.ಎಂ.ಇ.ಗೆ ವಂದಿಸಿದೆ. ನನ್ನ ತಮ್ಮಂದಿರಲಿ, ಅಳಿಯಂದಿರಲಿ, ಗೆಳೆಯರಲಿ ಮಾವಂದಿರಲಿ, ಅಕ್ಕತಂಗಿಯರಲಿ, ಇಲ್ಲದ ದೊಡ್ಡ ಗುಣ ನಿನ್ನಲ್ಲಿದೆ. ನಿನಗೆ ಒಳ್ಳೆಯದಾಗಲಿ ಎಂದು ಕಣ್ಣೀರ ಹರಿಸಿದೆ.

ತಾಸಾಗಲಿಲ್ಲ. ಡಿ.ಎಂ.ಇ. ಕೊಟ್ಟ ಹಣ ಕೆಲಸ ಮಾಡಿತು. ನನ್ನ ಹೆಸರು ಕೂಗಿದರು. ನಾನೂ ಕೈದಿಗಳ ಸಾಲಲ್ಲಿ ನಿಂತು ಹಾಜರಾತಿ ಹೇಳಿ, ವ್ಯಾನು ಹತ್ತಿದೆ. ಕಣ್ಣೀರು ಕೋಡಿ ಬಿದ್ದವು. ಹೊಟ್ಟೆಯೊಳಗಿಂದ ಗುದ್ದಿಕೊಂಡು ದುಃಖ ಒತ್ತರಿಸಿ ಬಂತು. ದುಃಖ ದುಃಖಿಸಿ ಅತ್ತೆ. ಅಲ್ಲಿದ್ದವರೆಲ್ಲ ನನ್ನಾ ಸಂತೈಸಲು ಯತ್ನಿಸಿ ಸೋತರು. ನ್ಯಾಯಾಲಯ ತಲುಪಿದಾಗ ಕಣ್ಣೀರು ಹಿಂಗಿದವು. ನನ್ನನ್ನು ಜಾಮೀನಿನ ಮೇಲೆ ಅಂದೇ ಬಿಡುಗಡೆ ಮಾಡಿದರು.

ತಕ್ಷಣ ಕಛೇರಿಗೆ ಹಾಜರಾದೆ. ಕಛೇರಿಯಲ್ಲಿದ್ದ ಐದಾರು ಜನ್ರೂ ದಂಗು ಬಡಿದು ಹೋದರು. ನನ್ನನ್ನು ಕೊಲೆಗಾರನಂತೆ ಕಂಡು ದೂರ ದೂರ ಸರಿದರು. ಎಲ್ಲರನ್ನು ಹತ್ತಿರ ಕರೆದೆ. ಪ್ರೀತಿಯಿಂದ ಯಾಕಿಂಥಾ ಶಿಕ್ಷೆ ನನಗೆ ನೀವೇ ಹೇಳಿ?! ಎಂದೆ.

“ನಿಮ್ಮ ಪುಸ್ತಕದ ಹಣ ಕಬಳಿಸಲು ಈ ರಣತಂತ್ರ” ಶ್ರೀನಿವಾಸ್‌ರಾವ್ ಅಂದ.

ನನ್ಗೆ ಈ ಮಾತು ಮೊದ್ಲೆ ಹೇಳಿದ್ರೆ ಸಾಕಿತ್ತಲ್ವೇ? ಅಂದೆ.

“ಎಲ್ಲಿ ನೀವು ಅರ್ಧ ಭಾಗ ಕೊಡಲು ಒಪ್ಪಲೇ ಇಲ್ಲ! ಈಗ ಫುಲ್ ಆ ಅರವತ್ತು ಸಾವಿರ ನಮ್ಗೆ ಆಯ್ತು” ಮೃತ್ಯುಂಜಯ, ಸೀನ, ವಲ್ಲಿ, ಗೌಡಪ್ಪ ಒಟ್ಟಿಗೇ ಅಂದರು. ನಾ ಕುಸಿದೆ.

“ಸಾರ್ ಈಗ್ಲೂ ನಮ್ ದೂರು ವಾಪಾಸು ಪಡ್ತೀವಿ! ನಿಮಗೊಂದು ಆಫರ್ ಕೊಡ್ತೀವಿ. ನೀವು ಐದು ಲಕ್ಷ ನಮ್ಮೆ ಕೊಡಿ” ಅವರ ಪ್ರಶ್ನೆ ನೇರವಾಗಿತ್ತು.

“ಎಲ್ಲಿದೆ ಕೊಡಲು? ನನ್ನ ಪ್ರಾಮಾಣಿಕತೆನಾ ನೀವು ಇಲ್ಲೇ ಮೂರು ವರ್ಷದಿಂದ ನೋಡ್ತಿದ್ದೀರಲ್ಲಾ? ಎಂದೆ.

“ನಿಮ್ಮ ತಾಯಿನ, ಹೆಂಡ್ರನ, ಮಕ್ಳನ … ಮಾರಿ ನಮ್ಮೆ ಕೊಡಿ! ನೀವೂ ನಿಮ್ ಸಾಹಿತ್ಯ ಎಲ್ಲ ಉಳಿತ್ತೇ ಯೋಚಿಸಿ” ನಾ ಪಾತಾಳಾ ಕಂಡೆ ..! ಯಿದು ಅಗ್ನಿ ಪರೀಕ್ಷೆ. ಕೌರವರ ನಾಡು. ರಾವಣ, ರಕ್ಕಸರ ಬೀಡು, ಶಂಕಿನಿ, ಡಾಕಿಣಿಯರ ಸುಡುಗಾಡು. ನ್ಯಾಯ ಅನ್ಯಾಯ ಸತ್ಯ ಅಸತ್ಯವನ್ನು ಪಾರಮರ್ಶಿಸಲು ಇಲ್ಲಿ ಯಾರಿಗೇ ಪುರುಸೊತ್ತಿಲ್ಲ. ಕೋಣ ಈದೈತೆಂದ್ರೆ, ಕೊಟ್ಟಿಗೆಗೆ … ಕಟ್ಟು ಎಂಬಂತೆ ಮೇಲಾಧಿಕಾರಿಗಳು ಬೇಷ್ ಕಾಸಿ ಬರೆ ಎಳೆದರು ನನಗೇ … ಸಾರ್, ಬಾಳ ಅನ್ಯಾಯ ಸಾರ್! ನಾನು ತಪ್ಪು ಮಾಡಿಲ್ಲ. ನ್ಯಾಯ ಕೊಡ್ರಿ ಸಾರ್ ಗೋಗರದೆ. “ಮಿಸ್ಟರ್‌ ಸತ್ಯಹರಿಶ್ಚಂದ್ರ … ನಿನಗೆ ಎಲ್ಲಿ ಅಪಮಾನವಾಗಿತ್ತೋ ಅಲ್ಲಿಗೇ ಪ್ರಾಂಶುಪಾಲರೆಂದು ಮತ್ತೇ ಕೊಡ್ತೀನಿ. ದೊಡ್ಡ ಸಂಬಳ ಆರು ತಿಂಗ್ಳು ದುಡಿದ್ರೆ ಸಾಕು! ನೀ ನಮ್ಗೆ ಕೊಡ ಮಾಡುವ ಎರಡೂವರೆ ಲಕ್ಷ ಬಂದೇ ಬಿಡುತ್ತೆ … ಏನಂತೀಯಾ?” ಎಂದು ಮೇಲಾಧಿಕಾರಿಗಳ ರಾಗ ಮೊದಲಾಗಿತು. ತಿರಿದು ತಿಂಬಾಳನ ಹಿಡಿದು ಹಡಾದೆಂದ್ರೆ ಇದೆ ಏನೋ … ನಾನೂ ತೆಪ್ಪಗಾದೇ. ವರ್ಷ, ಎರಡು ವರ್ಷ ಜಿಗಿತು. ಒಂದು ದಿನ ಇದ್ದಕ್ಕಿದ್ದಂತೆ ಬೇಕಂತ್ಲೆ ನನ್ನ ಮೈಸೂರಿಗೆ ಪ್ರಾಂಶುಪಾಲರೆಂದು ಎತ್ತಿ ಬಿಸಾಕಿದ್ರು, ಬದುಕಿದೆ ಬಡ ಜೀವವೆಂದು ನಿಟ್ಟೂಸಿರಿಟ್ಟೆ. ಸತತವಾಗಿ ಆರು ವರ್ಷ ಕಾನೂನು ಹೋರಾಟ ನಡೆಸಿದೆ. ಬಹಳಷ್ಟು ಸಲ ಉಪವಾಸ ಉಳಿದೆ. ಅಪಮಾನ ಅನುಭವಿಸಿದೆ. ನ್ಯಾಯಾ ಪಡೆಯಲು ಏಳು ಜೊತೆ ಬೂಟು ಸವೆದವು! ಹರಕು ಅಂಗಿ ಸಾಹುಕಾರನೆನಿಸಿದೆ. ಗಿಡಗಿಡಕೆ ಕಣ್ಣೀರಿಟ್ಟೆ… ಜೋಗಿ ಜಂಗಮನಾದ, ಬಹಳಷ್ಟು ಜನರ ಅವಕೃಪೆಗೆ ಪಾತ್ರನಾದೆ. ತಾಳ್ಮೆ, ಆತ್ಮ ವಿಶ್ವಾಸ, ನಂಬಿಕೆ ಬಲಿಯಿತು. ಸೋತು ಗೆದ್ದೆ. ನ್ಯಾಯಾಲಯದಿಂದ ನಿರ್‍ದೋಷಿ ಎಂದು ತೀರ್‍ಪಿತ್ತರು.

ಜೀವನವೆಂದರೆ – ಬರೀ ಸೋಲೇ ಇಲ್ಲ. ಇದು ಸತ್ಯ, ಧರ್‍ಮ, ನ್ಯಾಯಕ್ಕೆ ಸಂಧ ಗೌರವ. ಕೇರಿಗೆ ಲಭಿಸಿದ ಜಯ! ದೂರುದಾರನೊಬ್ಬ ಬಿಟ್ಟು ಪಂಚರ-ಪೊಲೀಸ್ ಸಾಕ್ಷಿ ಪುರಾವೆಗಳೂ ಸಂತೆಗೆ ತಕ್ಕ ಬೊಂತೆಯಾಗಿವೆ. ಆರೋಪಿತರು ೪೦ ಕ್ಕೂ ಹೆಚ್ಚು ಕೃತಿ ರಚಿಸಿ, ಬೆಳ್ಳಿ ಬಂಗಾರ ನಗದು ಪುರಸ್ಕಾರ ಗಳಿಸಿ ಪ್ರತಿಷ್ಠಿತರೆನಿಸಿರುವರು. ನೂರಾರು ಸನ್ಮಾನಗಳ ಸ್ವೀಕರಿಸಿರುವುದ ಮನಗಂಡು, ಇವರೊಬ್ಬ ರಾಷ್ಟ್ರೀಯ ಸಂಪತ್ತು. ಇವರ ತೇಜೋವಧೆಗೆ ಹೂಡಿದ ಷಡ್ಯಂತ್ರವೆಂದು ನಿರೂಪಿತವಾಗಿದೆಯೆಂದು ತೀರ್‍ಪು ಹೊರಬಿತ್ತು!

ನಾ ಪುಟಕಿಟ್ಟ ಚಿನ್ನವಾದೆ. ಬದುಕಲು ಬದುಕು ಕಲಿಸಿತು. ಶಾಂತಿ ಸಮಾಧಾನ ಬಂತು. ಅಬ್ಬಾ! ಚಿನ್ನಕ್ಕಲ್ಲವೇ ಪರೀಕ್ಷೆ …?! ಕಲಿಯುಗದ ನಡೆದಾಡುವ ದೇವರು ನ್ಯಾಯಾಲಯ ನ್ಯಾಯಾಧೀಶರು… ಕಣ್ಣಿಗೆ ಕಾಣುವ ದೇವರು, ಕೊಲ್ಲುವವರಿಗಿಂತ ಕಾಯುವವರು ದೇವರು! ದೊಡ್ಡವರು.! ಇವರೇ ಸೂರ್‍ಯ ಚಂದ್ರರಿಗೂ ಮಿಗಿಲು. ಬದುಕು ಕಲಿಸಿದ ಪಾಠದ ಮುಂದೆ: ಅನುಭವದ ಅಮೃತ ಇನ್ನೂ ದೊಡ್ಡದು. ದೇವರ ತೀರ್ಪಿನ ಮುಂದೆ ಮನುಶ್ಯರ ಆಟ ಸಾಗದು.
*****

Tagged:

Leave a Reply

Your email address will not be published. Required fields are marked *

ಪೆಟ್ರೋಲ್ ವಾಸ್ತೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...