ಬಸವನ ನಾಡಿನಲಿ

ಬಸವನ ನಾಡಿನಲಿ

೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ ವಿಶಾಲ ಹೃದಯವಿಲ್ಲದ ನೀಚರು ನಿಕೃಷ್ಟರು ಜ್ಞಾನಭಾರತಿ ಬೆಂಗಳೂರು… ವಿಶ್ವವಿದ್ಯಾಲಯ ಕನ್ನಡ ವಿಭಾಗದಲ್ಲಿದ್ದಂತೆ ಇಲ್ಲಿಯೂ ಕೆಲವರು ಇದ್ದರು…!! ಥೂ ಯಿವ್ರ ಜಲ್ಮಕ್ಕಿಷ್ಟುಕೊಳ್ಳಿ…

ನನ್ನ ಕೆಳಗಿನ ಅಧಿಕಾರಿ ನನಗಿಂತ ಮೊದಲೇ ೧೯೮೯ರಲ್ಲಿ ಮುಂಬಡ್ತಿ ಹೊಂದಿದ್ದ! ಇದನ್ನು ಹೋಗಿ ಹೋಗಿ ಈ ಅಧಿಕಾರಿಯನ್ನೇ ಕೇಳಿದೆ. ಕೇಳಬೇಕೆ ? ಕಂಬಿಯಿಲ್ಲದ ರೈಲು ಬಿಡತೊಡಗಿದ.

ಈ ಅಧಿಕಾರಿ ಬಲು ಬುದ್ಧಿವಂತ! ಕೈ ಕೆಸರು ಮಾಡಿಕೊಳ್ಳದೆ ಬಾಯಿಗೆ ಮೊಸರು ಮಾಡಿಕೊಂಡಿದ್ದ! ಐ.ಎ.ಎಸ್.ಗೆ ಬಹಳ ಸೀರಿಯಸ್ಸಾಗಿ ಐದಾರು ವರ್ಷ ಕಷ್ಟಪಟ್ಟು ಇಷ್ಟಪಟ್ಟು ಓದಿಕೊಂಡಿದ್ದ. ಯೀ ಸನ್ಮಿತ್ರನನ್ನೇ ಹಿಂದೆ ಹಾಕಿ ಮೆರಿಟ್‌ನಲ್ಲಿ ಪಾಸಾಗಿ ನಾನೇಟಾಪರ್ ಇದ್ದವನು! ಯೀ ವ್ಯಕ್ತಿ ಪರೀಕ್ಷೆ ಬರೆಯಲೆಂದು ಎರಡು ವರ್ಷದಲ್ಲಿ ನಾಲೈದು ತಿಂಗಳು ಗೈರು ಹಾಜರಿನೂ ಆಗಿದ್ದ. ಮದುವೆನೂ ಆಗದೆ, ಹಠಕ್ಕೆ ಬಿದ್ದು ಗಡ್ಡ ಬಿಟ್ಟು… ಓದಿದ್ದ! ಕಷ್ಟಪಡದಲೆ ಈಗ ನೋಡಿದ್ರೆ ನನಗಿಂತಾ ಮೊದಲೇ ಮುಂಬಡ್ತಿ ಹೊಂದಿದ್ದಾನೆ! ೮ನೆಯ ಅದ್ಭುತವೆನಿಸಿತು. ಹನ್ನೊಂದನೆಯ ಅವತಾರವಾಗಿ ಕಂಡಿತು.

ಹಗಲಿರುಳೆಂಬ ರೆಕ್ಕೆಯ ಬಿಚ್ಚಿ ಡಿಪೋದಲ್ಲಿ ಪ್ರಾಮಾಣಿಕವಾಗಿ ಹಳಿಯಾಳ, ಬಾಗಲಕೋಟೆ ಬಿಟಿಸ್ ಡಿಪೋ ಎರಡರಲ್ಲಿ ದುಡಿದು ದುಡಿದು… ಸೋತು ಸುಣ್ಣವಾಗಿ ಸಣ್ಣಗಾಗಿದ್ದವನಿಗೇ ಬಡ್ತಿ ಕೊಡಲಿಲ್ಲ! ಈ ನೋವು ನನ್ನೆದೆಯಲ್ಲಿ ಈಟಿಯಂತೆ ಚುಚ್ಚುತಿತ್ತು. ನೌಕರಿಯೆಂದರೆ ಹಾವು ಏಣಿಯಾಟವಲ್ಲವೇ?

‘ಎ ನಿನ್ನದು ಈವತ್ತೋ ನಾಳೆನೋ ಬಡ್ತಿ ಆಗುತಿದೆ! ಫೈಲು ಟೇಬಲ್ ಮೇಲೆ ಇದೆ’ ಎಂದು ಬಡ್ತಿ ಹೊಂದಿದ್ದ… ಆತ್ಮೀಯ ಕುಲಬಾಂಧವ ಹೇಳಿದ್ದನ್ನು ನಂಬಿ ನಚ್ಚಿ ಮೂಗು ಬಾಯಿ ಮುಚ್ಚಿ, ರಜೆ ಹಾಕದೆ ದುಡಿಯುತ್ತಿದ್ದೆ. ತಿಂಗಳು, ಎರಡು ತಿಂಗಳಾಗಿತು ‘ತಿರಿಗಾ ಬಡ್ತಿ ಪಡೆದು ತನ್ನೂರಲ್ಲಿ ತನ್ನ ಮನೆಯಲ್ಲಿ ಸುಖ ಶಾಂತಿ ನೆಮ್ಮದಿಯಿಂದ ಇದ್ದವನನ್ನು ಮತ್ತೂ ಕೇಳಿದೆ’

`ಏ ನಾ ಕೇಂದ್ರ ಕಛೇರಿ ಬೆಂಗಳೂರಿಗೆ ಯೇವತ್ತೇ ಯೀಗ ಹೋಗಿದ್ದೆ! ನಿನ್ನದು ಬಡ್ತಿಗೆ ರುಜು ಆಗಿದೆ. ನಾಳೆ ಡಿಸ್‌ಪ್ಯಾಚ್ ಆಗುತ್ತೆ ನೋಡು’ ಎಂದು ನನ್ನ ರೈಲು ಹತ್ತಿಸಿದ. ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಹಿಂಗೆ ಡ್ರಾಮ ಮಾಡಿದ್ದ, ನಾ ಬಲು ಎಬಡ, ಮುಗ್ಧ, ಅಮಾಯಕ! ಬಲು ಬೇಗ ಎಂದಿನಂತೆ ನಂಬಿ ಇನ್ನೂ ಜೋರಾಗಿ ದುಡಿದು ಕೀರ್ತಿ ಗಳಿಸಿದೆ.

ನಾವೆಲ್ಲ ಜೊತೆ ಜೊತೆಗೆ ಆಯ್ಕೆಯಾದವರು, ತರಬೇತಿ ಪಡೆದವರು, ಉಂಡವರು, ತಿಂದವರು, ಮಲಗಿದವರು, ನನಗೇ ರೀಲು ಬಿಟ್ಟ! ನಾ ನಂಬಿ ನಚ್ಚಿ ದುಡಿಯುತ್ತಿದ್ದೆ.

೧೯೯೦ರಲ್ಲಿ ರಜೆ ಹಾಕಿ ಬೆಂಗಳೂರಿಗೆ ಬಂದು ವ್ಯವಸ್ಥಾಪಕ ನಿರ್ದೇಶಕರಿಗೆ ಅರ್ಜಿ ಸಲ್ಲಿಸಿದೆ. ಆ ಅರ್ಜಿಯನ್ನು ಕುಂಡಿ ಕೆಳಕ್ಕೆ ಹಾಕಿ ಕುಳಿತರು. ಇಂಥಾ ನೂರಾರು ಅನ್ಯಾಯಗಳಲ್ಲಿ ನನ್ನದೂ ಒಂದೂ… ಇತ್ತ ನಾ ಮೂಗ ಪ್ರಾಣಿಯಂತೆ ಡಿಪೋದಲ್ಲಿ ದುಡಿಯುತಲಿದ್ದೆ!

೧೯೯೧ರಲ್ಲಿ ಅಜೀಜ್‌ ಸೇಠ ಅವರು ನಮ್ಮ ಸಾರಿಗೆ ಸಚಿವರಾದರು. ಅವರು ನಾನಿರುವಲ್ಲಿಗೆ, ಬಾಗಲಕೋಟೆಗೆ ಬಂದರು. ಅವರ ಕಂಡು ನನ್ನೆಲ್ಲ ಪ್ರಗತಿ, ಶ್ರಮ, ಪ್ರಾಮಾಣಿಕತೆಯನ್ನು ವಿವರಿಸಿದೆ. ಅವರು ಮೆಚ್ಚಿಕೊಂಡು ಅಲ್ಲಿಂದಲೇ ಫೋನು ತೆಗೆದುಕೊಂಡು ವ್ಯವಸ್ಥಾಪಕ ನಿರ್ದೇಶಕರು ಪಿ.ಡಿ. ಶೆಣೈಗೆ ಭೀತಿ ಬಿಡಿಸಿ, ಇವರಿಗೆ ಇವತ್ತೇ ಆರ್ಡರ್ ಆಗಬೇಕೆಂದು ಹೇಳಿದರಲ್ಲದೆ, ನನ್ನನ್ನು ಬೆಂಗಳೂರಿಗೆ ಹೋಗಲು ಅನುಮತಿಸಿದರು.

ನಾ ರಾತ್ರೋ ರಾತ್ರಿ ಬಸ್ಸಿನಲ್ಲಿ ಬೆಂಗಳೂರಿಗೆ ಹೋದೆ. ಕೇಂದ್ರ ಕಛೇರಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರಿಗೆ ಅರ್ಜಿ ಸಲ್ಲಿಸಿದೆ! ನೀನು ಬಾಗಲಕೋಟೆ ಡಿಪೋಕ್ಕೆ ಹೋಗುವುದೊರೊಳಗಾಗಿ ನಿನಗೆ ಬಡ್ತಿ ಆದೇಶ ಕಳಿಸುವೆ ಎಂದರು. ನನ್ನ ಮಿತ್ರನಿಗೆ ಆಗ ಕೊಟ್ಟವರೇ ಇವರು. ಯೀಗ ನನಗೂ ಕೊಡ್ತೀನಿ ಅನ್ನುವವರೂ ಇವರೇ… ಯಿಲ್ಲಿ ಒಂದು ಪವಾಡ ಮಾಡಿದ್ದರು. ಬಡ್ತಿ ಕೊಟ್ಟು ಎರಡು ವರ್ಷ ಆದವನನ್ನು ಹಿಂಬಡ್ತಿಗೊಳಿಸಿ ನನಗೇ ಅಲ್ಲಿಗೇ ಕೊಟ್ಟರು! ಹೇಗಿದೆ ತುಪ್ಪ ಹಾಲು ಮೊಸರು ತಿಂದ ತಲೆ?! ಅಬ್ಬಾ! ನನಗೆ ಸಧ್ಯ… ಬಡ್ತಿ ಸಿಕ್ಕಿತು! ಅದೇ ಮೈಸೂರಿಗೆ ಬಸ್ ನಿಲ್ದಾಣದ ಅಧಿಕಾರಿಯೆಂದು ಎರಡು ವರ್ಷ ಬಡ್ತಿ ಸುಖ ಅನುಭವಿಸಿದ್ದ ಅಧಿಕಾರಿಗೆ ಮುಖ ಮುಲಾಜಿಲ್ಲದೆ ಹಿಂಬಡ್ತಿ ನೀಡಿ, ಹುಬ್ಬಳ್ಳಿಗೆ ವರ್ಗಾಯಿಸಿದ್ದರು!

ಆ ಅಧಿಕಾರಿ ಚಾರ್ಜು ಕೊಡದೆ, ಕಛೇರಿಗೆ ಬೀಗ ಜಡಿದು ರೋಷದಿ ಹೋಗಿದ್ದ! ನಾನೋ ಕೇರಾಫ್ ಫುಟ್‌ಪಾತ್! ಪಾಪಿ ಸಮುದ್ರಕ್ಕೆ ಹೋದರು ಮೊಣಕಾಲುದ್ದ ನೀರು ಎಂಬಂಗೆ, ನಾ ಗೋಡೆಗಳದ್ದು ತಗಂಡು ಕುಂಡ್ಯಾಕೆ ಬಡಕೊಂಡೆ. ನಿತ್ಯ ನನ್ನ ಮೇಲಾಧಿಕಾರಿಗಳಿಗೆ ನಾ ನಿಲ್ದಾಣದ ಸಮಸ್ಯೆ ಅರುಹುತಿದ್ದೆ!

ಹೀಗೆ… ಒಂದು ವಾರ ಕಳೆಯಿತು. ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ವಿವರವಾದ ವರದಿ ಕೊಟ್ಟೆ, ಪಂಚನಾಮೆ ಮಾಡಿ, ಬಸ್ ನಿಲ್ದಾಣದ ಕಛೇರಿಯ ಬೀಗ ಬಳಾರಿಯನ್ನು ಒಡೆಸಿ, ನನಗೆ ಚಾರ್ಜ್ ಕೊಡಿಸಿದರು.

ಅಬ್ಬಾ! ಎರಡು ವರ್ಷ ಕಳೆದರೂ ತಡವಾದರೂ ಸದ್ಯ ಬಡ್ತಿ ಈಗಲಾದರೂ ಸಿಕ್ಕಿತಲ್ಲಾ…. ಎಂದು ನಿಟ್ಟೂಸಿರಿಟ್ಟೆ! ನನಗೆ ನ್ಯಾಯವಾಗಿ ೧೯೮೯ ರಿಂದ ಬಡ್ತಿ ಬರಬೇಕಾಗಿತ್ತೆಂದು ಹಕ್ಕು ಚಲಾಯಿಸಲಿಲ್ಲ. ಒಂದು ಅರ್ಜಿನೂ ಗುಜರಾಯಿಸಲಿಲ್ಲ. ಇದೇನು ಇಂದ್ರ ಚಂದ್ರ ಮಹೇಂದ್ರ ಪದವಿನೇ..?! ಎಂಥೆಂಥಾ ರಾಜ ಮಹಾರಾಜರು ಚಕ್ರವರ್ತಿ ಪ್ರಧಾನಿಗಳೇ ಗಾಳಿಪಟವಾಗಿ ಹೋಗಿರುವಾಗ ನಾನ್ಯಾವ ಲೆಕ್ಕ… ಬುಕ್ಕ… ಮಹಾ…?! ಎಂದು ತೆಪ್ಪಗಾದೆ.

ಮೂರು ತಿಂಗಳು ಕಳೆಯಿತು! ಹೈಕೋರ್ಟಿನಿಂದ ನನಗೆ ಸೀರಿಯಸ್ಸಾಗಿ ನೋಟೀಸ್ ಹಾಗೂ ಕಾಗದ ಪತ್ರಗಳು ಬಂದವು. ರುಜು ಮಾಡಿ ಎಲ್ಲ ಓದಿ, ಶಾಕ್ ಆದೆ!

ನಾ ಮನುಶ್ಯನೇ ಅಲ್ಲ! ಓದಿನೇ ಇಲ್ಲ ನಕಲಿ ಮನುಶ್ಯ ಪದವಿ ಪ್ರಮಾಣ ಪತ್ರಗಳೆಲ್ಲ ಖೊಟ್ಟಿ ಎಂದು ವಕೀಲರು ವಾದಿಸಿ ನನಗೆ ಕಳಿಸಿದ್ದರು! ಇದೆಲ್ಲ ನನ್ನ ಸಹ ಅಧಿಕಾರಿ, ಬಡ್ತಿ ಪಡೆದು ಹಿಂಬಡ್ತಿಯಾದ ಸ್ನೇಹಿತ ನನಗೆ ಕಾನೂನು ಸಮರ ಸಾರಿದ್ದು ನನ್ನ ಎದೆಗುಂಡಿಗೆ ಒಡೆದಂಗಾಗಿತು! ಮುಖ್ಯ ಕಾನೂನು ಅಧಿಕಾರಿ ಕೇಂದ್ರ ಕಛೇರಿ ಬೆಂಗಳೂರಲ್ಲಿಗೆ ಫೋನ್ ಮಾಡಿದೆ.

“ಏನ್ರಿಸ್ಸಾ ಇದೆಲ್ಲಾ?! ಈಗ ನಾನೇನು ಮಾಡ್ಲಿಸಾ…?!” ಎಂದೆ. ನಾನು ದಿಕ್ಕು ತೋಚದೆ, ಮುಗ್ಧವಾಗಿ ಅಮಾಯಕನಂಗೇ….

ಆ ಮನುಶ್ಯನಿಗೆ ಮುಗುಳಾಗೆಲ್ಲ ಕೊಬ್ಬಿರಬೇಕು! ‘ಈಗ ನೇಣು ಹಾಕಿಕೊಳ್ರೀ!’ ಎಂದ್ಹೇಳಿ ಫೋನ್ ಕುಕ್ಕಿದ! ಭಾಗಶಃ ಯೀ ಅಧಿಕಾರಿಯ ಕಾನೂನು ಸಲಹೆ ಮೇರೆಗೆ ಬಡ್ತಿ ಮೊದಲಿನವರಿಗೆ ಸಿಕ್ಕಿರಬೇಕು. ಯೀಗ ಮೀಸೆ ಮಣ್ಣಾಗಿತು. ಇಂಥಾ ಸೊಕ್ಕಿನ ಕುನ್ನಿಗೆ ಏನನ್ನದೆ ಸುಮ್ಮನಾದೆ. ನನಗೆ ವಾಂತಿ ಭೇದಿ ಶುರುವಾಗಿತ್ತು! ಸೀದಾ ವಿಭಾಗೀಯ ಕಾನೂನು ಅಧಿಕಾರಿಯಲ್ಲಿಗೆ ಹೋಗಿ ಕೋರ್ಟಿನ ಎಲ್ಲ ದಾಖಲೆಗಳ ಬಗ್ಗೆ ವಿವರವಾಗಿ ಚರ್ಚಿಸಿದೆ…

‘ನೀವು ರಜೆ ಹಾಕಿ ಹೈಕೋರ್ಟ್‌ಗೆ ಹೋಗಿ ವಕೀಲರನ್ನು ಹಿಡಿದು ಹತ್ತು ಸಾವಿರ ವಕಾಲತ್ತು ಫೀ ನೀಡಿ, ನಿಮ್ಮದು ನೀವು ವಾದ ಮಂಡಿಸಿ! ನ್ಯಾಯ ಸಿಗುತ್ತೆ’ ಅಂದರು.

ಯಾರಾರದೋ ತಪ್ಪು ಒಪ್ಪಿಗೆ ನಾನು ರಕ್ತ ಬಸಿಯಬೇಕಲ್ಲಾ…?! ಎಂದು ತುಂಬಾ ಬೇಸರವಾಗಿತ್ತು! ಅಂದು ಆಡಿದ್ರೆ ನನ್ನ ಸಮಸ್ಯೆ ಬಗೆ ಹರಿಯದೆಂದು ನನ್ನಷ್ಟಕ್ಕೆ ನಾ ನೋವು ನುಂಗಿ ಕೊಂಡೆ.

ನನಗೆ ಸಮಾಧಾನವಾಗಲಿಲ್ಲ! ಕುಂಡಿ ಸುಟ್ಟುಗೊಂಡ ಬೆಕ್ಕಿನಂಗೆ ಮಾರನೆಯ ದಿನ-ಬೆಂಗಳೂರಿನ ಹೈಕೋರ್ಟ್‌ಗೆ ಹೋಗಿ, ಅಲ್ಲಿ ಹಣ ತೆತ್ತು ಕಾಗದ ಪತ್ರವಿತ್ತು, ಪ್ರತಿವಾದಿ ವಕೀಲರನ್ನು ಗೊತ್ತು ಮಾಡಿ ನಿಟ್ಟೂಸಿರಿಟ್ಟೆ! ನಮ್ಮ ವ್ಯವಸ್ಥೆ ಅವವಸ್ಥೆ ಬಗ್ಗೆ ಶಪಿಸುತ್ತಾ ಉಪವಾಸದಿ ಬಾಯಿ ಒಣಗಿಸಿಕೊಂಡು… ಮರಳಿ ಮೈಸೂರು ಸೇರಿದೆ.

ವರ್ಷದ ತನಕ ಕೋರ್ಟಿನಲ್ಲಿ ಹಗ್ಗ ಜಗ್ಗಾಟ ಜರುಗಿತು! ಯಾರೋ ಮಾಡಿದ ತಪ್ಪಿಗೆ ನನಗೆ ವನವಾಸ ಶುರುವಾಗಿತ್ತು! ಬಡ್ತಿಯಿಂದ ನನಗೆ ನಷ್ಟ, ಕಷ್ಟ, ಹೊರೆ ಜಾಸ್ತಿಯಾಗಿತ್ತು! ಖುಷಿ ಬದಲಿಗೆ ಕಸಿವಿಸಿ ಶುರುವಾಗಿತ್ತು. ನನ್ನ ಆರ್ಥಿಕ ಸ್ಥಿತಿ ಸರಿಯಿರಲಿಲ್ಲ. ವಕೀಲರ ಊಟ, ತಿಂಡಿ, ಖರ್ಚು, ವೆಚ್ಚ, ಫೀ ಎಂದು ನನ್ನ ಚರ್ಮ ಸುಲಿದು ಹಸಿ ಹಸಿ ಮಾಂಸ ಕಿತ್ತು ಕಿತ್ತು ತಿನ್ನತೊಡಗಿದರು! ಹಸಿ ಹಸಿ ರಕ್ತ ಹೀರ ತೊಡಗಿದರು.

`ಏನ್ರಿ ನೀನ್ಯಾವ… ಸೀಮೆಯ ಅಧಿಕಾರಿ ರೀ…?! ನಿಮ್ಮ ಡ್ರೈವರ್, ಕಂಡಕ್ಟರ್… ಸಿಬ್ಬಂದಿಗೇ ಬಹಳ ಉದಾರಿಗಳು… ಅವರ ಧೈರ್ಯ ನಿಮಗಿಲ್ಲ! ಕೈ ಬಿಚ್ಚುವಲರಿ ಕೇಸು ಹೇಗೆ ಗೆಲ್ಲಾದು?’ ಎಂದು ನನ್ನ ಪ್ರತಿ ಸಾರಿ ರುಬ್ಬ ತೊಡಗಿದರು. ಅವರಿಗೆ ನನ್ನ ರಕ್ತದ ಮೇಲೆ ಕಣ್ಣು. ನನಗೆ ಕೇಸು ಗೆಲ್ಲೋ ಹಂಬಲ! ಎತ್ತು ಕೋಣಗಳ ಮಧ್ಯೆ ಪ್ರಯಾಣ ಸಾಗಿತು!

ತಡಿಲಾರದೆ… ಒಂದು ದಿನ ಮೆಲ್ಲಗೆ… ‘ಸಾರ್ ನನಗೆ ಅನ್ಯಾಯವಾಗಿದೆ. ಎರಡು ವರ್ಷದ ಹಿಂದೆನೇ ಬಡ್ತಿ ಬರಬೇಕಾಗಿತ್ತು ಅದೂ ಲಾಸು! ಈಗ ಹಿಂಗೆ ಲಾಸು! ಇದೆಲ್ಲ ನನ್ನ ಕರ್ಮ’ ಎಂದು ಗುನಿಗಿದೆ.

`ಸರಿ! ಹಾಗಾದರೆ ಸುಮ್ಮನಿರಿ… ಯಾಕೆ ಹೀಗೆ ಖರ್ಚು ವೆಚ್ಚ ಮಾಡ್ತೀರಿ?’ ಎಂದು ವಕೀಲರು ನನ್ನ ಛೇಡಿಸಿದರು.

ಇತ್ತ ಅಕ್ಕಿ ಮೇಲೆ ಪ್ರೀತಿ! ಅತ್ತ ನೆಂಟರ ಮೇಲೆ ಜೀವ! ನುಂಗಲಾರದ ಬಿಸಿ… ಬಿಸಿ… ತುಪ್ಪವಾಗಿತ್ತು!

ಈ ಪ್ರಕರಣ ವರ್ಷದ ತನಕ ನಡೆಯಿತು! ನನ್ನೆಲ್ಲ ಚಡ್ಡಿ ಬನಿಯನ್ ಬೂಟುಗಳೂ ಹರಿದೋದವು! ಮನೆಯಲ್ಲಿ ಹಾಲು, ಮೊಸರು, ತರಕಾರಿ, ಊಟ, ತಿಂಡಿಗೆ ತೊಂದರೆಯಾಯಿತು! ಮಕ್ಕಳ ಫೀ, ಪುಸ್ತಕ, ಬಟ್ಟೆಗಳಿಗೆ ಅಡ್ಡಿಯಾಯಿತು! ಶಾಲೆಯ ಹೆಡ್ ಮಿಸ್ಸಸ್ ನನ್ನ ಕರೆಸಿ ಛೀ ಮಾರಿ ಹಾಕಿ ಕಳಿಸಿದರು! ಇದೆಲ್ಲ ನನಗೆ ಮಾಮೂಲಿಯಾಗಿ ಹೋಗಿತ್ತು! ನಾ ಓದುವಾಗಲೂ ಹೀಗೆ ನೋವು. ಕಹಿ ಕಹಿ… ಅವಮಾನ ಸಹಿ ಸಹಿ ಅಭ್ಯಾಸವಾಗಿ ಹೋಗಿತ್ತು!

ದಸರಾ ಹಬ್ಬ ಬಂತು! ಬಸ್ ನಿಲ್ದಾಣದ ಕೆಲಸ ಜಾಸ್ತಿಯಾಗಿತ್ತು. ಕಸದ ರಾಶಿ ಜೋರಾಗಿತು! ಸ್ವಚ್ಛತೆಯ ಜೊತೆಗೆ ದಸರಾ ವಿಶೇಷ ವಾಹನಗಳನ್ನು ಬೇರೆ ಬೇರೆ ವಿಭಾಗಗಳಿಂದ, ಡಿಪೋಗಳಿಂದ ತರಿಸಿ ಹೆಚ್ಚೆಚ್ಚು ಜನದಟ್ಟಣೆ ಇರುವ ಕಡೆ ವಾಹನಗಳನ್ನು ಕಳಿಸುವುದನ್ನು ನನ್ನ ಮೇಲೆ ಹೊರಿಸಿದರು. ಮುಂದೆ ನಾ ಡಿ.ಸಿ. ಯಾಗುವನೆಂಬ ಹೊಟ್ಟೆ ಸಂಕಟದ ಜನ ನಮ್ಮಲ್ಲಿ ಬಹಳ ಇದ್ದಾರೆ ಅನಿಸಿತು!

ಮೈಸೂರು ದಸರಾ ಜನದಟ್ಟಣೆಗೆ ಬೆಚ್ಚಿ ಬಿದ್ದೆ. ಕೇಂದ್ರ ಕಛೇರಿ ಬೆಂಗಳೂರಿನಿಂದ ಟಿ.ಪಿ. ವೆಂಕಟರಮಣರವರು ಬಂದಿದ್ದರು! ಅವರು ತುಂಬಾ ಪ್ರಾಮಾಣಿಕರು, ಕೆಲಸಗಾರರು, ಹಿರಿಯ ಅಧಿಕಾರಿಗಳು ನನ್ನ ಕೆಲಸ ಕಾರ್ಯ ಚಟುವಟಿಕೆ ಗಮನಿಸಿ, ಬೆಂಗಳೂರಿಗೆ ಹೋದವರೆ ನವೆಂಬರಿನಲ್ಲಿ ನನ್ನ ಬೆಂಗಳೂರು ಗ್ರಾಮಾಂತರ ವಿಭಾಗದ ಸಾರಿಗೆ ಅಧಿಕಾರಿಯನ್ನಾಗಿ ವರ್ಗಾಯಿಸಿದರು!

ಆಕಾಶ ಕಳಚಿಬಿತ್ತು. ಮಕ್ಕಳಿಗೆ ಡೊನೇಷನ್ಸ್ ಕೊಟ್ಟು ಬನ್ನಿಮಂಟಪ ಹೈಸ್ಕೂಲಿಗೆ ಸೇರಿಸಿದ್ದೆ! ಈಗ ಮತ್ತೆ ಬೆಂಗಳೂರಿಗೆ ಅಂದರೆ ಗತಿ ಏನು? ನುಂಗಲಾರದ ಬಿಸಿ ಬಿಸಿ ತುಪ್ಪವಾಗಿತ್ತು! ನನಗೆ ಮನಃಶಾಂತಿ, ನೆಮ್ಮದಿ, ಸುಖ… ಇಲ್ಲದಂಗಾಗಿತು…!

ಸೀದಾ ಬೆಂಗಳೂರಿಗೆ ಹೋಗಿ ಹಾಜರಾದೆ, ಸುಬ್ರಮ್ಮಣ್ಯನಗರದಲ್ಲಿ ಪುಟ್ಟ ಮನೆಯೊಂದು ಬಾಡಿಗೆಂದು ಗೊತ್ತು ಮಾಡಿ, ಅಲ್ಲೇ ಮಕ್ಕಳನ್ನು ಶಾಲೆಗೆ ಸೇರಿಸಿದೆ. ಆರಂಭ ತುಂಬಾ ಚೆನ್ನಾಗಿತ್ತು. ತುಂಬಾ ಹಳಬರು ವಿಭಾಗೀಯ ನಿಯಂತ್ರಣಾಧಿ ಕಾರಿಗಳೆಂದು ನಾರಾಯಣಸ್ವಾಮಿಯವರು ಇದ್ದರು. ತುಮಕೂರಿನಲ್ಲಿ ಗಂಗಣ್ಣಗೌಡರು ಡಿಪೋ ಮ್ಯಾನೇಜರ್ ಕುಣಿಗಲ್‌ನಲ್ಲಿ ಎಸ್. ಎಂ. ಹಂಪಯ್ಯನವರು ಡಿಪೋ ಮ್ಯಾನೇಜರ್ ಆನೇಕಲ್‌ನಲ್ಲಿ ರಾಮಮೂರ್ತಿಯವರು ಡಿಪೋ ಮ್ಯಾನೇಜರ್ ಅದೇ ಕನಕಪುರದಲ್ಲಿ ವೀರೇಗೌಡರು ಡಿಪೋ ಮ್ಯಾನೇಜರ್ ನನ್ನೊಂದಿಗೆ ಚಂದ್ರ ಶೆಟ್ಟಿಯವರು ಡಿ.ಎಂ.ಇ.

ವಿಭಾಗ ನಂದನವನ, ಹಾಲು ಜೇನು, ಭೂಕೈಲಾಸವಾಗಿತ್ತು. ಅವರವರ ಕೆಲಸ, ಕಾರ್ಯ ಅವರವರಿಗೆ ಸಾಕು ಬೇಕಾಗಿತ್ತು! ಜೇನು ಹುಳುಗಳಂತೆ ಒಟ್ಟಿಗೆ ದುಡಿಯುವುದ ಕಂಡ, ಸಾರಿಗೆ ನಿಗಮಕ್ಕೆ ಇದಲ್ಲವೇ ಬೇಕಾಗಿರುವುದು. ಆಗ ಕೋದಂಡರಾಮಯ್ಯ ವ್ಯವಸ್ಥಾಪಕ ನಿರ್ದೇಶಕರಿದ್ದರು. ಎಲ್ಲರೂ ಗಡ ಗಡ, ಅಧಿಕಾರಿಯೆಂದರೆ ಅವರು. ಹುಲಿ, ಸಿಂಹಗಳನ್ನೇ ಭೇಟೆಯಾಡುತ್ತಿದ್ದರು. ಬರೀ ಮಾತಿನಲ್ಲೇ ಬುಗುರಿಯಾಡಿಸುತ್ತಿದರು. ಖಾಕಿಯಲ್ಲೂ ತಾಯಿ ಹೃದಯವಿತ್ತು. ನಮ್ಮಂಥಾ ಪ್ರಾಮಾಣಿಕರಿಗೆ ಉಪಕಾರಿಗಳಿದ್ದರು. ಅವರೇ ಕರೆದು ಸಂಶೋಧನೆಗೆ, ಬರವಣಿಗೆಗೆ, ಪ್ರಕಟಣೆಗೆ ಇತ್ಯಾದಿಗೆಂದು ಅನುಮತಿಸಿದರು.

ಹೀಗೆ ನಾ ಹಳೆ ಬೇರುಗಳ ಮಧ್ಯೆ ಹೊಸ ಚಿಗುರಿನಂತೆ ಇನ್ನು ಆಗಲೇ ಕಣ್ಣು ಬಿಡತೊಡಗಿದ್ದೆ. ಮೂರು ನಾಲ್ಕು ತಿಂಗಳು ಸುಖಾಂತವಾಗಿ ಉರುಳಿತು ವಿಭಾಗೀಯ ನಿಯಂತ್ರಣಾಧಿಕಾರಿಗಳು ನಿವೃತ್ತಿಯಾದರು! ನಾವೆಲ್ಲ ತುಂಬಾ ನೊಂದುಕೊಂಡೆವು. ರಾಮರಾಜ್ಯ ಮುಕ್ತಯವಾಗಿತಲ್ಲಾ…?! ಎಂದು ಮಮ್ಮಲ ಮರುಗಿದೆವು ! ಮುಂದ್ಯಾರು…?! ಎಂದು ಕಣ್ಣು ಕಣ್ಣು ಬಿಡತೊಡಗಿದ್ದೆವು.

ಅಷ್ಟರಲ್ಲಿ… ಇವರ ಪ್ಲೇಸಿಗೆ ರೆಡ್ ಇಂಡಿಯನ್ ಲಾರ್ಡ್ ಪೊಕ್ಕ ಲ್ಯಾಂಡ್ ಬಂದರು! ಅಬ್ಬಾ… ಫುಲ್ ಅನಾಸಿನ್ ಬ್ರಿಟೀಶ್‌ರು ಟ್ರಾಫಿಕ್‌ನವರನ ಕಂಡ್ರೆ ಅವರಿಗೆ ಆಗಲ್ಲ! ಎಸ್ಸಿ – ಎಸ್ಟಿ ಕಂಡ್ರೆ ಅವರಿಗೆ ಆಗಲ್ಲ! ಹೆಚ್ಚು ಬುದ್ಧಿವಂತರ ಓದಿದವರ ಕಂಡ್ರೆ ಬೆಂಕಿ – ಸಣ್ಣ ವಯಸ್ಸಿನವರ ಕಂಡ್ರೆ ಕಡು ಕೋಪ… ಥೂ… ಥೂ… ಕೊಂಡಾ ಕೋತಿ ಮೂತಿ ಊದ್ಸಿಗೊಂಡು ಮೊಸರಲ್ಲಿ ಕಲ್ಲು ಹುಡುಕುವ ಕೆಟ್ಟ, ದುಷ್ಟ ಮನುಶ್ಯನೊಬ್ಬ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಬಂದ ಚಿತ್ರ ಹಿಂಸೆ! ಕುಂತ್ರು ಕಷ್ಟ – ನಿಂತ್ರೇ ಕಷ್ಟ… ಪ್ರತಿಯೊಂದಕ್ಕೂ ಲೆಕ್ಕ… ಲೆಕ್ಕ… ಹೆದ್ರಾರ್ನ ಕಂಡ್ರೆ ಇನ್ನು ಹೆದ್ರಿಸುವವನು… ಅವರು ಅತ್ತೆ ನಾನೋ ಸೊಸೆ… ಜೀವ ಜಾಲಾಡಿ ಕೈ ಬಿಡುತ್ತಿದ್ದ. ಇದ್ದ ಬದ್ದ ನೆಮ್ಮದಿ, ತೃಪ್ತಿ, ಮನಃ ಶಾಂತಿ, ಪುಡುಗೋಸಿನೂ ಕಿತ್ತು ಕಿತ್ತು ಹೋಗಿತ್ತು. ಮತ್ತೆ ಹೆದ್ರಿ ತಸ್ತಾಗಿ ಸುಸ್ತಾಗಿ ಹೋಗಿದ್ದೆ. ಇಂಥವನ ಮೇಲೆ ಏಳು ಹೆಡೆ ಸರ್ಪ, ಹೆಬ್ಬಾವು ಬಂದು ವಕ್ರಿಸಿಗೊಂಡಿತು…

ಅವರು ಹೇಗಿದ್ದರೆಂದರೆ… ನಾ ಬೆಳಿಗ್ಗೆ ಐದು ಗಂಟೆಗೆಲ್ಲ ಎದ್ದು ಸೀದಾ ಕನಕಪುರ-ಆನೇಕಲ್ ಒಳಗಿಂದಾ ಒಳಗೆ ಕುಣಿಗಲ್-ತುಮಕೂರು ಡಿಪೋಗಳನ್ನು ಸುತ್ತಿಕೊಂಡು ಅಲ್ಲಿಂದ ಫೋನು ಮಾಡಿ ಅವರಿಗೆ ಮಾತಾಡಿ ಡಿಪೋ ಮ್ಯಾನೇಜರ್‌ಗೆ ಜಾಲಾಡ್ಸಿ, ವರದಿಯೊಂದಿಗೆ ಅವರ ಬಳಿ ಬರಬೇಕೆಂದು ಆಗ್ರಹಿಸಿ ಕೆಲಸ ಮಾಡಿಸುತ್ತಿದ್ದರು. ಇಷ್ಟು ಮಾಡಲು ಊಟ ತಿಂಡಿ ನೀರು ಬಿಟ್ಟು ದುಡಿದರೆ ೧೨ ತಾಸು ಸಾಲುತಿರಲಿಲ್ಲ! ನನ್ನ ಕತ್ತೆ ಹೆಸರಕತ್ತೆಯೆಂದು ತಿಳಿದಿದ್ದ! ಅಷ್ಟು ಹೊಟ್ಟೆ ಉರಿ ಮನುಶ್ಯ. ಇಂಥವರ ಕೈಲಿ ಹೇಗೆ ಏಗುವುದೆಂದು ಕಣ್ ಕಣ್ ಬಿಡತೊಡಗಿದೆ.

ಅಷ್ಟರಲ್ಲಿ… ಮುಂದಿನ ವಾರ ತುಮಕೂರು ಡಿಪೋ ಕುಣಿಗಲ್ ಡಿಪೋ – ಆನೇಕಲ್, ಕನಕಪುರ ಡಿಪೋ ಭೇಟಿ ಕೊಟ್ಟು ವರದಿಯೊಂದಿಗೆ ತಮ್ಮ ಬಳಿ ಹಾಜರಾಗಬೇಕೆಂದು ಹಿಂಸಿಸುತ್ತಿದ್ದು ನೌಕರಿ ಬಿಟ್ಟು ಹೋಗಲು ಇಲ್ಲ ಆತ್ಮಹತ್ಯೆ ಮಾಡಿಕೊಳ್ಳಲೆಂಬ ಉದ್ದೇಶದಿಂದ ನನಗೆ ಈ ರೀತಿ ಮಾಡುತ್ತಿದ್ದರು. ಕಾಲಾಂತಕ ಮನುಶ್ಯ ಹಿಂಸ ಪೀಡನಾ ವ್ಯಕ್ತಿ, ಶಕ್ತಿ, ಕುಯುಕ್ತಿ ಮನುಶ್ಯನಾಗಿದ್ದ!

ರಾತ್ರಿ ಹತ್ತು ಗಂಟೆಯಾದರೂ ಕೇಳಿ ಮನೆಗೆ ಹೋಗಲು ನನಗೆ ಜೋರು ಮಾಡುತ್ತಿದ್ದ! ಇಂಥಾ ಮನುಶ್ಯನ ನಾನೆಲ್ಲಿ ನೋಡಿರಲಿಲ್ಲ ! ಕೆಲಸ ಮಾಡಿ ಮಾಡಿ ರೋಸಿ ರೋಸಿ ಹೋದೆ!

`ಸಾರ್… ನಾ ಯೀವತ್ತು ಪರಿವೀಕ್ಷಣೆಗೆಂದು ಆನೆಕಲ್ಲು ಡಿಪೋಗೆ ಹೋಗಿ ಬರುವೆನೆಂದರೆ ಸಾಕು…’

`ರೀ ಯೀವತ್ತು ತುಮಕೂರಿಗೆ ಹೋಗಿ ಬನ್ನಿ!’ ಎನ್ನುತಿದ್ದ.

ನಾ ‘ಸಾರ್ ನಾಳೆ ಕನಕಪುರ ಡಿಪೋಕ್ಕೆ ಹೋಗಿ ಬತ್ತೀನಿ’ ಎಂದರೆ… ‘ಆಯ್ತು! ಅಲ್ಲಿ ಎರಡು ದಿನ ಕ್ಯಾಂಪ್ ಮಾಡಿ ಫೋನ್ ಮಾಡಿ’ ಎಂದು ಒತ್ತಾಯಿಸುತ್ತಿದ್ದ!

ಒಳ್ಳೆ ಹುಚ್ಚರ ಸಹವಾಸವೆನಿಸಿತು! ಫಲಿತಾಂಶ ದೊಡ್ಡ ಸೊನ್ನೆ. ಸುಮ್ನೆ ಸುಮ್ನೆ ಖಾರ ರುಬ್ಬಿಸುತ್ತಿದ್ದ. ಕಂಬ ಸುತ್ತಲು ಹೇಳುತ್ತಿದ್ದ. ತಲೆಕೆಟ್ಟ ಮನುಶ್ಯನ ಸಹವಾಸವಾಗಿತು.

ಥೂ… ಥೂ… ಚಿತ್ರ ವಿಚಿತ್ರ ಹಿಂಸೆ ಎನಿಸಿತು! ಬೆಂಗಳೂರಿನ ಜೀವನ ತುಟ್ಟಿಯೆನಿಸಿತು! ಊಟ ತಿಂಡಿಗೆ ಮನೆ ದೂರ ಭಾರವೆನಿಸಿತು! ಇತ್ತ ಹೆಂಡತಿಯ ಅತೃಪ್ತಿ, ಅಸಮಾಧಾನದ ಹೊಗೆ ಅತ್ತ ವಿಭಾಗೀಯ ನಿಯಂತ್ರಣಾಧಿಕಾರಿಗಳ ಚಿತ್ರ ವಿಚಿತ್ರ ಆದೇಶಗಳು, ತನಿಖೆಗಳು, ಕೆಲಸ-ಕಾರ್ಯಗಳು, ಬಸ್ಸು ಫಾಲೋಗಳು, ರಾತ್ರಿ ಪಾಳಿಯಗಳು, ವಿಚಾರಣೆಗಳು, ವರದಿಗಳು… ಜಾತ್ರೆ ವಿಶೇಷ ಕರ್ತವ್ಯಗಳು ಶನಿವಾರ, ಭಾನುವಾರ ಎಂಬುದಂಗೆ ದುಡಿಸಿ ದುಡಿಸಿ ನನ್ನ ಕಣ್ಣೀರಿಲಿ ಕೈತೊಳೆಸಿದರು…!

ಯಾಕಾಗಿ ಹುಟ್ಟಿದೆನೋ… ಸಾಕು ಸಾಕಾಗಿ ಹೋಗಿತು! ಪ್ರಾಮಾಣಿಕನಿಗೆ ನಕ್ಷತ್ರಿಕ ವಿಶ್ವಾಮಿತ್ರನಂಗೆ ನನ್ನ ಬೆನ್ನು ಹತ್ತಿದ ಬೇತಾಳವಾದರು! ಇಷ್ಟಾದರೂ ಸಹ ಕೊನೆಗೆ ವಾರ್ಷಿಕ ವರದಿ ಕಳಿಸುವಾಗ “ತೃಪ್ತಿಕರವಾದ ಕೆಲಸ ನಿರ್ವಹಿಸಿಲ್ಲ! ಕೆಲಸ ಇನ್ನು ಕಲಿಯಬೇಕು! ಅನುಭವ ಸಾಲದು!” ಎಂದು ಷರಾ ಬರೆದಿದ್ದು ನನ್ನ ಕೈ ಸೇರಿ, ವಿವರಣೆ ಕೋರಿತ್ತು! ಇಂಥವರು ಏನಾಗಿ ಸಾಯುವರೋ…?! ಎಂದು ಶಪಿಸಿದ್ದೆ…

ನಾ ವಿವರವಾಗಿ ಬರೆದು ಅದಕ್ಕೆ ಪೂರಕವಾಗಿ ಪ್ರೇರಕವಾಗಿ, ದಿನಚರಿ, ಸಾರಿಗೆ ಆದಾಯದ ಪ್ರಗತಿ, ಈಪಿಕೆಎಂನ ಪಕ್ಷಿ ನೋಟ ಕಳಿಸಿದ್ದೆ! ಷರಾ ಮಾತ್ರ ಶರಪಂಜರದ ಹಾಗೆ ನನ್ನ ಹೆಸರಿನ ಮುಂದೆ… ಹಾಗೇನೇ ಉಳಿಯಿತು! ಹೀಗೆ ಉಳಿಯುತ್ತಾ ನನ್ನ ಹಳಿಯುತ್ತಾ ಉಳಿಯಂತೆ ಎದೆಯಲ್ಲಿ ಸದಾ ಬುಗುರಿಯಂತೆ ಕೊರೆಯುತ್ತಿತ್ತು… ಇಂಥವರ ಮಧ್ಯೆ ಹೇಗಪ್ಪಾ… ಏಗುವುದೆಂದು ಚಿಂತಿಸಿದೆ.

ಅಷ್ಟರಲ್ಲಿ ನನ್ನನ್ನು ಹುಮನಾಬಾದ್ ಬೀದರ್‌ ವಿಭಾಗಕ್ಕೆ ೧೯೯೨ರಲ್ಲಿ… ವರ್ಗಾಯಿಸಿದರು! ನನಗೆ ಮತ್ತೂ ತೊಂದರೆಯಾಗಿತು! ಮಕ್ಕಳೊಟ್ಟಿಗೆ ಹುಮನಾಬಾದ್‌ಗೆ ಸಾಮಾನು ಹೇರಿಕೊಂಡು ಲಾರಿಯಲ್ಲಿ ಕುಳಿತು ಮಕ್ಕಳೊಂದಿಗೆ ೧೪ ತಾಸು ಪ್ರಯಾಣಿಸಿದೆ! ನಿಜವಾದ ನರಕದ ಜೀವನವೆಂದರೆ ಇದೇ ಅನಿಸಿತು. ಗಾಡ್‌ಫಾದರ್ ವಿಟಮಿನ್ ಎಂ ಇಲ್ಲವೆಂದರೆ ನನ್ನಂಗೆ ಹಗಲೆಲ್ಲ… ಕಾಲ್ಚೆಂಡು ಆಗುವುದು ಗ್ಯಾರಂಟಿ… ಎಂದು… ಕಣ್ಣೀರಿಟ್ಟೆ…

ಹುಮನಾಬಾದ್‌ನಲ್ಲಿ ಬಾಡಿಗೆ ಮನೆ ಪಡೆದು, ಸಾಮಾನು ಜೋಡಿಸಿಗೊಂಡು ಮಕ್ಕಳನ್ನು ಶಾಲೆಗೆ ಸೇರಿ, ಕರ್ತವ್ಯಕ್ಕೆ ಸಿದ್ಧನಾದೆ! ಊರಲ್ಲ ಉದ್ಮಾನಲ್ಲ. ಪಾತಾಳಲೋಕ! ಎಲ್ಲಾ ಹಂದಾಗುಂದಿ. ತೀರಾ ಹಿಂದುಳಿದ ನಾಡು! ಅಣ್ಣ ಬಸವಣ್ಣನ ಬೀಡು! ಅಬ್ಬಾ… ಎಂದೆ. ಎಲ್ಲಾ ಹೊಟ್ಟೆಗಾಗಿ ಬಟ್ಟೆಗಾಗಿ ಹೋರಾಟವೆಂದೆ… ಇದೆಲ್ಲ… ಬಸವನ ನಾಡು! ಅಣ್ಣ ಬಸವಣ್ಣ ಮಹಾ ಮಂತ್ರಿಯಾಗಿ ಸುಧಾರಣೆ ಬಯಸಿದ ಬಸವ ಕಲ್ಯಾಣ ಅಲ್ಲಿಗೆ ತೀರಾ ಸಮೀಪ! ಮೂವತ್ತೈದು ಕಿಲೋಮೀಟರ್ ಅದುವೆ ಅಣ್ಣನ ನೆಲೆ ಬೀಡು ಬಸವ ಕಲ್ಯಾಣ ಡಿಪೋ… ಇಲ್ಲಿ ಎಲ್ಲವೂ ಸರಿಯಿರಲಿಲ್ಲ…! ಇದನ್ನು ಸರಿಪಡಿಸಲು ಮೋಹನ್ ಅಂತಾ ಡಿಪೋ ಮ್ಯಾನೇಜರಿದ್ದರು. ನನಗೆ ಅವರು ಅಪರಿಚಿತರು. ಅದೇ ರೀತಿ ಬೀದರ್ ಡಿಪೋಕ್ಕೆ ನಲವತ್ತು ಕಿಲೋಮೀಟರ್ ಆಗುತ್ತಿತ್ತು. ಅಲ್ಲಿ ಎಂ.ಎಂ. ಪಾಟೀಲ್ ಅಂತಾ ಡಿಪೋ ಮ್ಯಾನೇಜರ್ ಇವರು ತುಂಬಾ ಹಳಬರು. ಟೈಗರ್‌, ಮಾತೆತ್ತಿದರೆ ಸೊಂಟದ ಕೆಳಗಿನ ಮಾತುಗಳೇ… ಇವರು ಲೋಕಲ್, ಗೌಡಿಕಿ ಮನುಶ್ಯ ಕೆಳ ನೌಕರಿಯಿಂದ ಈ ಮೇಲಿನ ನೌಕರಿಗೆ ಬಂದಿದ್ದರೂ ಕೇರ್‌ಲೆಸ್ ಮನಷ್ಯ! ಮಾತು ಮನಾರ ಎಲ್ರನ ಎದುರಿಸುತ್ತಿದ್ದ…

ಇನ್ನು ಅಲ್ಲಿಂದ ನಲವತ್ತು ಕಿಲೋಮೀಟರ್ ಅಂತರದಲ್ಲಿ ಚಿಂಚೋಳ್ಳಿ ಡಿಪೋ…. ಅಲ್ಲಿ ನಂದ್ಯಾಳ ಡಿಪೋ ಮ್ಯಾನೇಜರ್… ಹುಮನಾಬಾದ್‌ನಲ್ಲಿ ಮೊಹಮ್ಮದ್ ಡಿಪೋ ಮ್ಯಾನೇಜರ್ ಇವರೂ ತುಂಬಾ ಹಳಬರು.

ಇಲ್ಲಿನ ಸೊಗಸು ಎಂದರೆ… ಪ್ರತಿ ನಲವತ್ತು ಕಿಲೋ ಮೀಟರ್‌ಗೊಂದರಂತೆ ಒಂದು ಡಿಪೋ ಎನ್ನುವುದಕ್ಕಿಂತಾ ಪ್ರತಿ ನಲವತ್ತು ಕಿಲೋ ಮೀಟರ್‌ಗೊಂದರಂತೆ ತಾಲ್ಲೂಕು ಇತ್ತು! ಕೊನೆ ಮಹಾರಾಷ್ಟ್ರದ ಬಾರ್ಡ್ರಿಗೆ ಔರಾದ್ ತಾಲ್ಲೂಕು ಇತ್ತು! ಸಾಂಗ್ಲಿ, ಮೀರಜ್, ನಾಂದೇಡ್, ಪರಳಿ, ಪಂಡರಾಪುರ, ತುಳಜಾಪುರ…. ಇವೆಲ್ಲ ಬಲು ಹತ್ತಿರ ಇನ್ನು ಹತ್ತಿರ… ತನಿಖೆಗೆಂದು ನಾನಂತೂ ಪ್ರತಿ ಹಳ್ಳಿ – ತಾಲ್ಲೂಕು ಜಿಲ್ಲೆಗೆ ಹಲವು ಸಾರಿ ಭೇಟಿ ಕೊಟ್ಟಿದ್ದೇ ಕೊಟ್ಟಿದ್ದು ಅಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ಎ.ಬಿ. ಪಾಟೀಲ್ ಇದ್ದರು!

ಗುಲ್ಬರ್ಗದವರು! ಟೈಗರ್‌ ಗೌಡಿಕೆ ಮನೆಯಿಂದ ಬಂದವರು ಹುಂಬುತನವಿತ್ತು. ನಾನೇ… ನನ್ನದೇ ನಡೆಬೇಕೆಂಬ ಹುಚ್ಚು ಇತ್ತು! ಹಳಬರು ಬೇರೆ…

ನಾ ವರದಿ ಮಾಡಿಕೊಂಡ ದಿನ ಬೀರಪ್ಪನವರು ವಿಭಾಗೀಯ ಸಾರಿಗೆ ಅಧಿಕಾರಿಯವರನ್ನು ಬೆಂಗಳೂರಿಗೆ ಬಿಡುಗಡೆ ಮಾಡಬೇಕಾಗಿತ್ತು! ದೊಡ್ಡ ಗಲಾಟೆ…. ನೂರಾರು ಚಾಲಕರು, ನಿರ್ವಾಹಕರು, ಸಾರಿಗೆ ನಿಯಂತ್ರಕರು, ಕಿರಿಯ ಸಹಾಯಕರು ಜಮಾಯಿಸಿ ‘ನಮಗೆ ನ್ಯಾಯ ಕೊಡಿಸದೆ, ಡ್ಯೂಟಿಗೆ ಹತ್ತಿಸದೆ, ನಮ್ಮ ಮಾತು ಉಳಿಸಿಕೊಡದೆ… ಹೇಗೆ ಇಲ್ಲಿಂದ ಬಿಡುಗಡೆ ಹೊಂದುವರು? ಅದೆಂಗೆ ಕಾಲು ಕಿತ್ತುವರು? ನಾವೂ ಒಂದು ಕೈನೋಡೇ ಬಿಡ್ತೀವಿ’ ಎಂದು ಅವರನ್ನು ಡಿ.ಎಂ.ಇ. ಯವರನ್ನು ಘರಾವ್ ಮಾಡಿದ್ದರು! ಅದರಲ್ಲಿ ಲೀಡರ್ ಕಲ್ಯಾಣಪ್ಪ, ಮಾಣಿಕ್ಯರಾವ್ ಪಾಟೀಲ್, ಶಾಖಾ ಮಾರುತಿ, ಮುಂತಾದವರಿದ್ದರು! ಇದನ್ನೆಲ್ಲ ಕಂಡು ನಾನಂತೂ ಗಢ ಗಢ ನಡುಗಿ ಬಿಟ್ಟೆ! ಊದಾದನ್ನು ಕೊಟ್ಟು ಒದ್ರಾದು ತಗಾಂಡೆ ಎಂದು! ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂಗೇ..

ನಾನೆಂಗೋ ಬೆಂಗಳೂರಿನಲ್ಲಿ ನನ್ನಷ್ಟಕ್ಕೆ ನಾ ಇದ್ದೆ. ಒಂದು ದಿನ ಇದೇ ಬೀರಪ್ಪನವರು ನನ್ನ ಹತ್ತಿರ ಬಂದು ‘ಯಲ್ಲಪ್ಪನವರೇ ನನಗೆ ಸಹಾಯ ಮಾಡಿ! ನಿಮಗೆ ನಾ ಬೀದರ್‌ಗೆ ಬಂದಾಗ ಸಹಾಯ ಮಾಡುತ್ತೇನೆ. ನನ್ನ ಮಗಳ ಮದುವೆ ಮಾಡಬೇಕು ನಿಮಗೂ ಹೆಣ್ಣು ಮಕ್ಕಳಿದ್ದಾರೆ! ಇಲ್ಲ ಅ೦ಬದಲೇ ಬಿಡುಗಡೆ ಹೊಂದಿ… ಇದು ಛೇರ್ಮನ್ ಆದೇಶ ಅವರಿಗೂ ಕಣ್ಣಿಗೆ ಬೀಳ್ತೀರೀ…’ ಎಂದು ಮೂರು ಸಾರಿ ಗೋಗರೆದಿದ್ದೆ.!!

ನಾನಂತೂ ಫುಟ್‌ಬಾಲ್ ಆಗಿದ್ದೆ ಹತ್ತಾರು ವರ್ಗಾವಣೆಯ ದಾಳಿಗೆ ತುತ್ತಾಗಿದ್ದೆ. ನೊಂದಿದ್ದೆ ಬೆಂದಿದ್ದೆ…. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ… ಡೋನೇಷನ್ಸ್ ಕಷ್ಟ… ಬಾಡಿಗೆ ಮನೆಯ ಹುಡುಕಾಟ… ಹೋದು ಹೋದ ಕಡೆಗಲ್ಲ ಹೊಂದಾಣಿಕೆ… ಛೇ… ಛೇ… ಸುಖ ಶಾಂತಿ ನೆಮ್ಮದಿಯಿಲ್ಲದೆ ಅಲೆಮಾರಿಯ ಬೇವರ್ಸಿಯ ಬದುಕು ಬರಹ ಹಣೇಬರಹವಾಗಿತಲ್ಲಾ… ಎಂದು ಬೇಸರಪಟ್ಟಿದ್ದುಂಟು! ಆಗಲ್ಲ ಅಂದಿದ್ದುಂಟು.

ಬೀರಪ್ಪ ಇಷ್ಟಕ್ಕೆ ಸುಮ್ಮನಾಗಿರಲಿಲ್ಲ! ನಮ್ಮ ಮನೆ ಹುಡುಕಿಕೊಂಡು ಚಾಣಾಕ್ಷ…. ಸುಬ್ರಮ್ಮಣ್ಯನಗರಕ್ಕೆ ಬಂದಿದ್ದ. ನಮ್ಮ ಮನೆಯವರಿಗೆ ಕೈ ಜೋಡಿಸಿದ್ದು ಮಗಳ ಮದುವೆಗೆ, ಧಾರಾವಾಹಿ ನಿರ್ಮಾಣಕ್ಕೆ ಸಹಾಯ ಮಾಡಿ ಎಂದು ಮೊಸಳೆ ಕಣ್ಣೀರಿಟ್ಟಿದ್ದು ನಾವೆಲ್ಲ ಸುಲಭವಾಗಿ ನಂಬಿ ನಚ್ಚಿ… ಕರಗಿ ಕರಗಿ ನೀರಾಗಿದ್ದೆವು. ಬೆಂಗಳೂರು ಬಿಟ್ಟು ಇಲ್ಲಿಗೆ ಧೈರ್ಯದಿ ಬಂದರೆ… ನಾನೇ ಬೀರಪ್ಪನವರಿಗೆ ಒಂದು ಜೀಪು ಕೊಟ್ಟು ಯಾರಿಗೆ ಕಾಣದಂತೆ ಅದರಲ್ಲಿ ಹೈದ್ರಾಬಾದಿನತನಕ ಬಿಟ್ಟು ಬರಲು ಕಳಿಸಿದ್ದಾಗಿತ್ತು! ಇಂಥವರ ಎಂಥೆಂಥಾವರನ ಜೀವನದಲ್ಲಿ ನಂಬಿ ನಚ್ಚಿ ಬಂದರೆ ತಿರುಪತಿ ಚಂಬೇ ಗತಿ! ಮೂರು ನಾಮ. ತಿಪಟೂರು ಚಿಪ್ಪೇಗತಿ! ಓಹೋ… ಇಲ್ಲಿ ಎಲ್ಲವೂ ಸರಿಯಿಲ್ಲ! ನೌಕರಿ ಕಳಕೊಂಡು ಹೋಗಲು ಇಲ್ಲಿಗೆ ಬಂದಿನೆಂದು… ಖೇಧವಾಗತೊಡಗಿತು! ನಿಗಮದ ಆದೇಶ ಪಾಲಿಸಲಿಲ್ಲವೆಂದರೆ… ನನ್ನ ಬಿಡುವುದಿಲ್ಲ. ಬಂದರೆ ಇಲ್ಲಿ ಉಳಿಗಾಲವಿಲ್ಲ… ಅತ್ತ ಬಾವಿ ಇತ್ತ ಪುಲಿ… ದೊಡ್ಡ ಬಹುದೊಡ್ಡ ಚಿಂತೆಯಾಗಿತು ಇಲ್ಲಿನ ಜನ-ನೆಲ ಜಲ-ಭಾಷೆ ನನಗೆ ಭಯ ಹುಟ್ಟಿಸಿತು! ಈ ಜನರ ನಡುವೆ ಹೇಗೆ ಬಾಳುವುದೆಂದು ದೊಡ್ಡ ಯೋಚನೆಯಾಯಿತು!

ಇಲ್ಲಿನ ಕೆಂಪು ನೆಲ, ಕೆಂಪು ಧೂಳು ಧುಮ್ಮು ನನ್ನ ಬಟ್ಟೆಗಳನ್ನೆಲ್ಲ ಕೆಂಪಾಗೆ, ಬೆವರು, ಭಸಿದು ಚಿತ್ರ ವಿಚಿತ್ರ ಆಕಾರ ಬರೆಯುತ್ತಿದ್ದವು. ದಿನಕ್ಕೊಂದು ಉಡುಪು ಕಡ್ಡಾಯವಾಗಿ ಬಿಟ್ಟು ತೊಟ್ಟುಕೊಳ್ಳಬೇಕಾಗಿತ್ತು!

ಬಂದು ಹೊಸತರಲ್ಲಿ ಸಿಬ್ಬಂದಿಗೆ ಸಮವಸ್ತ್ರವನ್ನು ಕಡ್ಡಾಯವಾಗಿ ಹಾಕಿಸುವುದೊಂದು ದೊಡ್ಡ ಸವಾಲು ನನ್ನ ಮುಂದಿತ್ತು. ಬೆಳಗಾದರೆ ಡಿಪೋದಿಂದ ಬಸ್ಸುಗಳು ಹೊರಗೆ ಹೋಗುವುದೇ ಕಷ್ಟವಾಗಿರುವಾಗ, ಇನ್ನು ಡ್ಯೂಟಿರೋಟಾ ಪದ್ಧತಿ ಜಾರಿಗೊಳಿಸಲು ಬಿಗಿಯಾದ ಆದೇಶವಿತ್ತು. ಬೆಂಗಳೂರಿನಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿ, ಡಿಪೋ ಮ್ಯಾನೇಜರ್‌, ಸಾರಿಗೆ ನಿರೀಕ್ಷಕರೊಬ್ಬರು ಕನಕಪುರ ಡಿಪೋದಲ್ಲಿ… ಈಗಾಗಲೇ ಅಮಾನತ್ತುಗೊಂಡು ಭಾರೀ ಭಾರೀ ಸುದ್ದಿಯಾಗಿ ಹೋಗಿತ್ತು!

ನಾನಂತೂ ಪಾತಾಳಕಂಡೆ! ಯಾಕೋ ಗ್ರಹಚಾರ ಸರಿಯಿಲ್ಲವೆಂದು ನನ್ನನ್ನು ನಾ ಹಳಿದುಕೊಂಡೆ. ಏನೋ ಮಾಡಲೋಗಿ ಏನೇನೋ ಓದಿಕೊಂಡು ಈಗ ಏನೇನೂ ಮಾಡುತಿರುವೆನೆಂದು ಬೇಸರವಾಗತೊಡಗಿತು! ಅತ್ತ ಇತ್ತ ಇತ್ತ ಇಲ್ಲ ಎತ್ತೆತ್ತ ಇಲ್ಲವೆಂದು ದುಃಖಿಸತೊಡಗಿದೆ. ಕಣ್ಣೀರ ತೊಡೆವರು ಒಬ್ಬರಿಲ್ಲವಲ್ಲಾ…

ಒಂದು ದಿನ-ವಿಭಾಗೀಯ ನಿಯಂತ್ರಣಾಧಿಕಾರಿಗಳು ಎ.ಬಿ. ಪಾಟೀಲ್ ಯಲ್ಲಪ್ಪ ಮಾಡು ಇಲ್ಲವೆ ಮನೆ ಕಡೆ ನಡೀ ಎನ್ನುತ್ತಿದೆ ಸಾರಿಗೆ ನಿಗಮ! ನೀನು ನೌಕರಿ ಕಳಕೊಳ್ಳಬೇಕು ಇಲ್ಲ…. ನಾ ನೌಕರಿ ಕಳಕೊಳ್ಳಬೇಕು! ಏನ್ ಅಂತಿಯಾ?!’ ಎಂದು ಎಲ್ಲರ ಮುಂದೆ, ತಲೆ ಮಿದ್ಲಿಗೇ ಕೈ ಹಾಕಿದರು.

ಅವರ ಶೈಲಿ, ನಡೆ, ನುಡಿ, ಗತ್ತು ಗಮ್ಮತ್ತು ಹಂಗಿತ್ತು! ರಜಾಕರ ಹಾವಳಿ ಎದುರಿಸಿ ಬಂದವರು! ಆ ಕಾಲಕ್ಕೇ ಎಂಜಿನಿಯರ್ ಮುಗಿಸಿ ಬಂದವರು…

“ಸಾರ್… ಮಾಡಿ, ಮಾಡಿಸಿ ತೋರಿಸ್ತೀನಿ! ಏನ್ ಚಿಂತೆ ಬ್ಯಾಡ ಸಾರ್’ ಎಂದು ಮೀಸೆ ಮೇಲೆ ನಕ್ಕೆ.

`ನೀವು ಇನ್ನು ಸ್ಟ್ರಾಂಗ್ ಆದ್ರೆ ಆಗುತ್ತೇ… ಹಿಂಗೆ ಸಪ್ಪೆ ಆದ್ರೆ ನಿನ್ನ ಇಲ್ಲಿ ಎಲ್ಲರೂ ನುಂಗಿ ಬಿಡ್ತಾರೆ’ ಎಂದರು. ಅವರ ಜೊತೆಗೆ ಉಳಿದ ಅಧಿಕಾರಿಗಳಾದ ಖಾನಪ್ಪನವರು, ಎಂ.ಎಂ. ಪಾಟೀಲ್, ನಂದ್ಯಾಳ, ನಿಂಬರಿಗಿಕ‌ರ್ ಅಂದ್ರು, ಅನ್ನಾರಿಗೇನು ಮುಗಿಳಿ ಒತ್ತೀತು? ನನ್ ಪ್ರಾಮಾಣಿಕತೆ, ಸಾಹಿತ್ಯ, ಕವಿ ಮನಸನ್ನು ಅರ್ಥ ಮಾಡಿಕೊಳ್ಳಬೇಕಲ್ಲಾ….?! ಯಿಲ್ಲಿ ಕತ್ತೆನೂ ಐರಾವತನೇ… ಹಂದಿನೂ ಪಂಚಕಲ್ಯಾಣಿನೇ… ಇಲ್ಲಿ ನಾ ಮತ್ತು ಲೆಕ್ಕಾಧಿಕಾರಿ ಖಾನ್‌ಪ್ಪನವರ್ ತುಂಬಾ ದೋಸ್ತುರು ಆಗಿದ್ದು. ಹಾಗಲಕಾಯಿ, ಬೇವಿನ ಕಾಯಿಂಗೆ ನಾವಿಬ್ಬರು ಕೂಡಿ ಉಂಡು, ತಿಂದು, ಆಡಿ, ಹಾಡಿ ನಲಿದಿದ್ದು!

ಒಂದು ದಿನ – ವಿಭಾಗೀಯ ನಿಯಂತ್ರಣಾಧಿಕಾರಿಗಳು ನನ್ನ ಹೆಸರಿಗೆ ಅಫೆನ್ಸ್ ಮೆಮೋ ಬರೆದು ಅದರಲ್ಲಿ ವಿಭಾಗದ ಡಿಪೋದ ಪ್ರಗತಿ ರದ್ಧತಿ ಕಿಲೋ ಮೀಟರ್, ಸಾರಿಗೆ ಆದಾಯ ಕಡಿಮೆಯಾದ ಬಗ್ಗೆ – ಸಾರಿಗೆ ಕಾರ್ಯಚರಣೆಯ ಕುರಿತಂತೆ ವಿವರಣೆ ಕೇಳಿದ್ದಾರೆ. ನನಗೆ ತೆಗೆದುಕೊಳ್ಳಲು ಒತ್ತಾಯ ಬಂತು!

ನಾನೇನು ಡ್ರೈವರ್, ಕಂಡಕ್ಟರ್ ಕೆಟ್ಟು ಹೋದನೇ? ತ್ರಿಬ್ಬಲ್ ಡಿಗ್ರಿ ಪಾಸು ಮಾಡಿ…. ದೇಶ ದೇಶ ತಿರುಗಿ ನಿಗಮದಲ್ಲಿ-ಎರಡು-ಸಾರಿ.. ಪರೀಕ್ಷೆ ಪಾಸು ಮಾಡಿ, ಎರಡೂ ಸಾರಿ… ನಂಬರ್ ಒನ್ ಎಂದು ಗುರ್ತಿಸಿಕೊಂಡು ಹಿಂಗೆ ಅಫೆನ್ಸ್ ಮೆಮೋ ಪಡೆಯಲಲ್ಲ… ಎಂದು ಖಾನಪ್ಪನವರ ಹತ್ತಿರ ವಿವರಿಸಿದೆ, ಏಕೆಂದರೆ ಇವರಿಗೆ ಡಿ.ಸಿ.ಯವರಿಗೆ ಸಂಬಂಧ ಬಹಳ ಚೆನ್ನಾಗಿತ್ತು! ಯಿವ್ರಿಬ್ರು ಗಳಸ್ಯ ಗಂಟಸ್ಯರಾಗಿದ್ದು, ವ್ಯವಹಾರಿಕವಿದ್ರು… ಗೌಪ್ಯವಾಗಿ ಇವ್ರೇ ಇರುತಿದ್ರು….

‘ನಿನ್ನಂಗಿರುವ ಉಳಿದ ಅಧಿಕಾರಿಗಳಾದ ದುಂಡಪ್ಪ, ವಸಂತಕುಮಾರ್, ಡಿ.ಎಂ.ಇ ಗಳು ಅಫೆನ್ಸ್ ಮೆಮೋ ಸಹಿ ಮಾಡಿ ಪಡೆದಿರುವರು ನೀನು ಪಡೆದುಕೋ…. ಅದರಲ್ಲಿ ಏನಿದೆ? ಡಿಪಾರ್ಟ್‌ಮೆಂಟಿನಲ್ಲಿ ಮೆಮೋ, ಚಾರ್ಜ್‌ಶೀಟ್, ಕಾರಣ ಕೇಳುವ ನೋಟೀಸ್, ಅಮಾನತ್ತು, ಡಿಸ್ಮಿಸ್ ಇವೆಲ್ಲ ಕಾಮನ್!’ ಎಂದು ಖಾನಪ್ಪನವ್ರು ಸಬೂಬು ಹೇಳುತ್ತಾ ನಿಂತರು.

‘ನೋಡ್ರಿ… ನೀವು ಅವರಿಗೆ ಹೇಳಿ! ನಾ ತೆಗೆದುಕೊಂಡರೆ ಮೊದಲು ಎಸ್ಸಿ, ಎಸ್‌ಟಿ ಸೆಲ್‌ಗೆ, ದಲಿತ ಸಂಘರ್ಷ ಸಮಿತಿಯವರಿಗೆ, ನಮ್ಮ ನೋಟೀಸ್ ಬೋರ್ಡಿಗೆ, ಇಲ್ಲಿನ ಎಂ.ಪಿ. ವೀರಪ್ಪ ರಾಮಚಂದ್ರಪ್ಪನವರಿಗೆ, ನಮ್ಮ ಸಂಘ ಸಂಸ್ಥೆಗಳಿಗೆಲ್ಲ ನಕಲು ಪ್ರತಿ ಮಾಡಿ ಹಂಚಿಬಿಡಾನು! ನಾನೇನು ಹಿಂದ್ಲ ಬಾಗ್ಲಿಂದ ಬಂದಾನಲ್ಲ! ರಾಜ್ಯ ಮಟ್ಟದ ಎರಡು ಪರೀಕ್ಷೆ ಬರೆದು, ಎರಡೂ ಸಲ… ಮೊದಲ ಸ್ಥಾನದಲ್ಲಿ ಬಂದು, ಹೇಗೂ…. ಮೊದಲ ಸಾಲಿನಲ್ಲಿ ಇರುವವನು’ ಎಂದು ಇದ್ದದ್ದು ಇದ್ದಂಗೆ ಹೇಳಿದೆ.

`ಆಯ್ತು! ನೀನು ಟೆನ್‌ಷನ್ ಮಾಡ್ಕೊಬೇಡ! ನಾ ಡಿ.ಸಿ. ಯವರಿಗೆ ಹೇಳಿ, ಕ್ಯಾನ್ಸಲ್ ಮಾಡಿಸಲು ಪ್ರಯತ್ನಿಸುತ್ತೇನೆ’ ಎಂದು ಖಾನಪ್ಪನವರು ನನಗೆ ಭರವಸೆ ನೀಡಿದರು.

ಇಲ್ಲಿ ನಾ ಗೆದ್ದೆನೆಂಬುದಕ್ಕಿಂತಾ ಡಿ.ಸಿಯವರು ಹಠಕ್ಕೆ ಬೀಳಲಿಲ್ಲ! ಜಿದ್ದಿಗೆ ಬಿದ್ದು ಅದನ್ನೆ ಟೈಪ್ ಮಾಡಿ ನನಗೆ ಜಾರಿ ಮಾಡಲು ಬರುತಿತ್ತು! ಆದರೆ ಹಂಗೆ ಮಾಡಲಿಲ್ಲ! ದೊಡ್ಡ ಮನುಶ್ಯರು… ಹೃದಯವಂತರು… ಅದನ್ನು ಅಷ್ಟಕ್ಕೆ ಕೈ ಬಿಟ್ಟರು! ಅವರೂ ಮನುಶ್ಯರಲ್ಲವೇ? ಅವರಿಗೂ ಕೆಲವು ನ್ಯೂನ್ಯತೆಗಳಿದ್ದವು! ನಾ ಹಗಲಿರುಳು ರಜೆಯಿಲ್ಲದೆ, ಭಾನುವಾರ ಎಂಬದೆ ಕತ್ತೆಯಂಗೆ ವಿಭಾಗದ ಪ್ರಗತಿಗೆ ಪ್ರಾಮಾಣಿಕತೆಯಿಂದ ದುಡಿಯುತ್ತಿದ್ದೆ. ಯಿಲ್ಲೇ ಮನೆ ಮಠದಲ್ಲಿ ಹೆಂಡ್ತಿ ಮಕ್ಳು ಕಟ್ಟಿಗಂಡು ೨೪ ಗಂಟೆ, ೩೬೫ ದಿನ ರಜೆಯಿಲ್ಲದೆ ಹುರುಪಿಲಿ… ದುಡಿತಿದ್ದೆ… ಅವರಿಗೆ ಮನೆಯಿಲ್ಲ… ಹೋದ್ರೆ ಅತ್ಲೇ ಬಂದ್ರೆ ಇತ್ಲೇ… ನನ್ನದು ವ್ರತ… ತಪಸ್ಸು. ಪ್ರಾಮಾಣಿಕತೆ ಮಾತಿತ್ತು, ಕಚ್ಚೆ ಭದ್ರವಿತ್ತು, ಶ್ರಮ ಹೃದಯ ಶ್ರೀಮಂತಿಕೆಯಿತ್ತು.

ಇದಾದ ಸ್ವಲ್ಪ ದಿನಗಳಲ್ಲಿ ನಾ ಬಸವಕಲ್ಯಾಣ ಡಿಪೋದ ಕಡೆ ಹೊರಟಿದ್ದೆ! ದಾರಿಯಲ್ಲಿ ಒಂದು ಬಸ್ಸಿಗೆ ಕೈ ಮಾಡಿ ತನಿಖೆ ಮಾಡಿದೆ. ಚಾಲಕ ಖಾಕಿ ಉಡುಪು ಧರಿಸದೆ ಡ್ಯೂಟಿಯಲ್ಲಿದ್ದ! ಹಳಬ.

ನಾ ಗೌರವದಿಂದಲೇ ಪ್ರಶ್ನಿಸಿದೆ. ಅಸಡ್ಡೆಯಿಂದ ಉತ್ತರಿಸಿದ ಲಾಗ್ಶೀಟ್ ಕೊಡಲು ಕೇಳಿದೆ ‘ಕೊಡಲ್ಲ!’ ಎಂದ. ಬಿತ್ತು ಯಿಬ್ರಿಗೆ ಜಿದ್ದಾ ಜಿದ್ದು. ಅವನು ಸೇರೆಂದ. ನಾ ಸವಾಸೇರೆಂದೆ… ಎರಡೂ ಕ್ವಾಣಗಳೇ… ಹುಂಬು ಪ್ರತಿಷ್ಠೆ….

ನಾ ಮೆಮೋ ಬರೆದು, ರುಜು ಮಾಡಲು ಹೇಳಿದೆ, ನಿರಾಕರಿಸಿದ. ಸಾಲಿಡ್ ರೆಕಾರ್ಡ್ ಬಿಲ್ಡಪ್ ಮಾಡಿ, ನಾನೇ ಅಮಾನತ್ತು ಮಾಡಿ ಬಿಟ್ಟೆ.

ವಿಭಾಗೀಯ ನಿಯಂತ್ರಣಾಧಿಕಾರಿಗಳು ಎ.ಬಿ. ಪಾಟೀಲ್ ನನ್ನ ಅಂದು ಒಪ್ಪಿಕೊಂಡರು. ಅವರು ಗಂಡು ಮಗ ನನ್ನ ಕೆಲಸ ಮೆಚ್ಚಿದರು! ನನಗೆ ಅವರ ಬಗ್ಗೆ ಗೌರವ ಹಿಮ್ಮಡಿಯಾಗಿತ್ತು. ಅಬ್ಬಾ ಎಂದು ಸಿಬ್ಬಂದಿ ನನ್ನ ಬಗ್ಗೆ ಹೌಹಾರಿದರು. ನಾ ಕಮ್ಯಾಂಡರ್ ಇದ್ದೆ ಡಿಮ್ಯಾಂಡರ್ ಡಿವೈಡರ್ ಇರಲಿಲ್ಲ. ಯೀ ಯಿಡೀ ಬೀದರ್ ವಿಭಾಗಕ್ಕೇನು?! ಯಿಡೀ ಜಗತ್ತಿಗೆ ಪರಿಚಯವಾಗತೊಡಗಿದೆ.

ರಾತ್ರಿ ಹತ್ತರ ನಂತರ ವಾಹನಗಳನ್ನು ತನಿಖೆ ಮಾಡಲು ಕೇಸು ಬರೆಯಲು ಹೋಗುತ್ತಿದ್ದೆವು ಬೆಳಿಗ್ಗೆ ಎಂಟರ ತನಕ ತನಿಖೆ ಮಾಡಿ ಹತ್ತಕ್ಕೆಲ್ಲ ಕಛೇರಿಗೆ ಹಾಜರಾಗುತ್ತಿದ್ದೆ. ಯಿಲ್ಲೇ ನಿಮಗೆಲ್ಲ ಒಂದು ರಸವತ್ತಾದ ಆಸಕ್ತಿದಾಯಕವಾದ ಘಟನೆಯೊಂದನ್ನು ಹೇಳಿ ಬಿಡುತಿದ್ದೇನೆ.

ಬೀದರಿನ ನೌಬಾದಿನಲ್ಲಿ ರಾತ್ರಿ ಎಂಟರ ಸುಮಾರಿಗೆ ನಾ, ಅಲಮೇಲು, ಶಿವಶರಣಪ್ಪ, ಪಾಟೀಲ… ಬಸ್ಸು ಹತ್ತಿ ತನಿಖೆ ಮಾಡುತಿದ್ದೆವು. ರಾತ್ರಿ ವಸ್ತಿಗೆ ಹೋಗುವ ವಾಹನ. ಫುಲ್ ಟೈಟ್ ಎಪ್ಪತ್ತು ಎಂಭತ್ತು ಸೀಟು ಮೇಲೆ ಕೆಳಗೆ ಜನರೂ ಫುಲ್ ಟೈಟ್…. ಒಬ್ಬರ ಬಳಿ ಟಿಕೇಟ್ ಇಲ್ಲ! ಎಲ್ಲ ಅಂದರ್ ಬಾಹರ್ ಲೆಕ್ಕಾಚಾರ. ಅಣ್ಣ ಬಸವಣ್ಣನವರ ಪ್ರತಿಮೆಗಳು ಪ್ರತಿ ಗಲ್ಲಿಗಲ್ಲಿಗೆ ಮೂಲೆ ಮೂಲೆಗೆ ಜನ ಮಾತ್ರ ಕೆಂಪು ಬಸ್ಸನ್ನಲ್ಲ ಸರ್ಕಾರವನ್ನು ಹೇಗೆ ಮಸಾಲೆ ದೋಸೆ ಮಾಡಿ ತಿನ್ನಬೇಕೆಂಬಾ ಲೆಕ್ಕಾಚಾರ. ಮಾತು. ಬಲು ಖಡಕ್! ಕಾಯ್ದೆ ಕಾನೂನು ಜೋರು ಜೋರು… ಎರಡು ವರ್ಷದಿಂದ ಇಂಥಾ ಪ್ರಕರಣಗಳು ನೂರಾರು… ಸಾವಿರಾರು… ಕೇಸು ಬರೆದು ಬರೆದು… ನೂರಾರು ಜನರನ್ನು ಅಮಾನತ್ತು, ವಜಾ ಮಾಡಿಸಿ ಮಾಡಿಸಿ ನನಗಂತೂ ಸಾಕು ಸಾಕಾಗಿ ಹೋಗಿತ್ತು! ಆ ಜನರ ಮಧ್ಯೆ ಕಂಡಕ್ಟರ್‌ನ ಬಲು ಕಷ್ಟಪಟ್ಟು ಇಷ್ಟಪಟ್ಟು ಹುಡುಕಿದರೆ ಜನರ ಮಧ್ಯೆ ಕಾಲ ಕೆಳಗೆ ಕುಂತು ಟಿಕೇಟ್ ಕಿತ್ತು ಕಿತ್ತು ಐವತ್ತು ಅರವತ್ತು ಮನಸ್ಸಿಗೆ ಬಂದಂಗೆ ಜನರ ಕೈಗೆ ತಲುಪಿಸುತ್ತಿರುವವನನ್ನು ಹಿಡಿದು ಗದರಿಸಿದರೆ ಗಢ ಗಢ ನಡುಗುತ್ತಾ….

`ಸಾರ್ ಅಗಾ ಇಗಾ ಅಂಬಾದ್ರಾಗೆ ಸ್ಟೇಜ್ ಬಂದು ಬಿಡು ಸಾರ್, ಜನ್ನು ಫುಲ್ ಟೈಟ್ ಸಾರ್ ಕಾಸು ಬಿಚ್ಚಲ್ಲಾ… ಫಿಕ್ಸ್ ಡ್ಯೂಟಿ ಸಾರ್… ವಸ್ತಿ ಬಸ್ಸು ಇಳಿವಾಗ ಇಸಿದುಕೊಳ್ಳಾನಂತಾ…. ರೈಟ್ ಹೇಳಿದ್ದೆ’ ಎಂದು ಬಾಯಿ ತೊದ್ಲು ಬದ್ಲು ಮಾಡಿದ್ದಾ…

ಅಷ್ಟರಲ್ಲಿ ಕ್ಯಾಂಬಿನ್‌ನಲ್ಲಿ ಇಳಿಯುತ್ತಿದ್ದವರಿಗೆ ಅಲ್ಮೇಲಿಗೆ, ಪಾಟೀಲ್‌ಗೆ ರೆಫಾ ರೆಫಾ ಬಡಿತ, ಕಾಲ್ಮರಿ, ಪಾಪಸಿ ಹಾರಿ ತೂರಿ, ಕನ್ನಡ್ಕ ಕಿತ್ತೋಗಂಗೇ… ಜನರೆಲ್ಲ ರೊಚ್ಚಿಗೆದ್ದು ಹಿಡಿಯಿರಿ… ಬಡಿಯಿರಿ… ಯಾವನೇ… ಚೆಕ್ಕಿಂಗ್ ಮಾಡಾನು…? ಮದ್ಲು ಬಸ್ಸು ಎರಡು ಬಿಡ್ರೀ… ಜೋರಾಗಿ ಗದ್ಲ ಗಲಾಟೆ ಕೂಗಾಟ ಹಾರಾಟ… ನಾವೆಲ್ಲ ಓಡೋಡಿ ಕತ್ತಲ್ಲಿ ಮರೆಯಾಗಿ ಜೀಪು ತರಿಸಿಕೊಂಡು ನಿರ್ವಾಹಕರ ಚಾಲಕರ ಜನರ ಮೇಲೆ ಕೇಸು ಬರೆದು ಬೀದರ್ ಪೊಲೀಸ್ ಠಾಣೆಗೆ ದೂರು ನೀಡಿ, ನಮ್ಮ ಜೊತೆಗಿದ್ದವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ, ಡಿ.ಸಿ. ಯವರಿಗೆ ಘಟಕ ವ್ಯವಸ್ಥಾಪಕರಿಗೆ ಫೋನ್ ಮಾಡಿ ವಾರದ ತನಕ ಆ ಊರಿಗೆ ಬಸ್ಸು ಇಲ್ಲದಂಗೇ ಮಾಡಿ ಐದಾರು ಜನರ ಮೇಲೆ ಕೇಸಾಕಿ ರಾತ್ರಿ ಹನ್ನೆರೆಡು ಘಂಟೆ ವರೆಗೆ ಊಟ ತಿಂಡಿ ನಿದ್ರೆಯಿಲ್ಲದೆ ಜೀವ ಉಳಿಸಿಕೊಂಡು ಬೀದರ್‌ನಲ್ಲಿ ಎರಡು ದಿನ ಈ ಪ್ರಕರಣದ ಬಗ್ಗೆ ಅಡ್ಡಾಡಿದೆವು.

ಯಿಲ್ಲಿ ಯೀಗೀಗ ನಾವೂ ಸೈನಿಕರಂತೆ ಹಗಲು ರಾತ್ರಿ ಜೀವದ ಹಂಗ ತೊರೆದು ಕರ್ತವ್ಯ ನಿರ್ವಹಿಸುವ ಹೊತ್ತು ಬಂದಿತ್ತು. ಹೀಗೆ ಐದಾರು ಸಾರಿ ನನಗೆ ಧರ್ಮದೇಟುಗಳು ಬಿದ್ದಿದ್ದವು! ಹಲ್ಲೆಗಳೂ ಜರುಗಿದ್ದವು. ನಮ್ಮ ಜೊತೆಗಿದ್ದ ಅಧಿಕಾರಿಗಳಿಗೆ ನನ್ನ ಮೇಲೆ ಅಂತಃಕರಣ ಕರುಣೆಯಿರಲಿಲ್ಲ. ಮೇಲಾಧಿಕಾರಿಗಳಿಗೆ ಹೇಳುವ ಹೃದಯ ಹೀನರಿದ್ದರು. ಯಾರು ಹಾಳಾದರೇನು? ತಮ್ಮ ಅಧಿಕಾರವಿದ್ದರೆ ಸಾಕೆಂಬುವವರೇ ನಮ್ಮಲ್ಲಿದ್ದರು….

ಹೀಗೆ ನಮ್ಮ ಪಾಪವೆಲ್ಲ ಆಗಾಗ ಪರಿಹಾರವಾಗುತಿತ್ತು. ಹೀಗಾಗಿ ನಮಗೆಲ್ಲ ಮೋಕ್ಷ ಗ್ಯಾರಂಟಿಯಾಗಿತ್ತು. ಒಂದು ಸಮಸ್ಯೆ ಪರಿಹಾರವಾಗಿತ್ತು! ಅಂಬಾದ್ರೂಳಗಾಗಿ ಇನ್ನೊಂದು ಹನ್ನೊಂದು ಬಂದು ಎರಗುತಿದ್ದವು….

ಒಂದು ದಿನ – ಯಿದ್ದಕಿದ್ದಂತೆ ಬೆಳಗಿನ ಜಾವ ಬಸವ ಕಲ್ಯಾಣ ಬಸ್ ನಿಲ್ದಾಣದಲ್ಲಿ ಹನುಮಾನ್ ವಿಗ್ರಹವನ್ನು ಪ್ರತಿಷ್ಠಾಪಿಸಿ, ಉದ್ಭವವಾಗಿದೆಯೆಂದು ದೇವರು ಪ್ರತ್ಯಕ್ಷನಾಗಿರುವನೆಂದೂ… ಪ್ರಚಾರ ನಡೆಸಿ, ಪೂಜೆ, ನೈವೇದ್ಯ, ಪ್ರಸಾದ, ಅನ್ನ ಸಂತರ್ಪಣೆ… ಕುಣಿತ… ನಾಟಕ… ಆಹಾ.., ಕುಂಭಮೇಳ, ಮೆರವಣಿಗೆ, ಭಾಷಣ, ಹರಿಕಥೆ, ಪುರಾಣ, ಪ್ರವಚನವೆಂದು ನಿತ್ಯ ಜನ ಜಾತ್ರೆಯಿರುವುದನ್ನು ಹಣದ ಹೊಳೆ ಹರಿವುದನ್ನು… ನಾವೆಲ್ಲ ನೋಡಿ ನೋಡಿ ಕಣ್ಣುಗುಡ್ಡೆಗಳು ಒಡೆದು ಹೋದವು. ಯಾರದೋ ಜಾಗೆ, ಯಾರದೋ ವಿಗ್ರಹ ಜನ ಮರುಳೋ…. ಪೂಜೆ ಮರುಳೋ… ನಮಗೆಲ್ಲ ನೌಕರಿ ಹೋಗುವ ಭಯಾ ಭೀತಿ…

ನಾವೆಲ್ಲ ಸೇರಿ ಬಸವ ಕಲ್ಯಾಣದಲ್ಲಿ ಸಭೆ ಸೇರಿ ಹಂತ ಹಂತವಾಗಿ ವಿಗ್ರಹವನ್ನು ಸ್ಥಳಾಂತರಿಸಲು ಮನವಿ ಮಾಡಿಕೊಂಡೆವು. ಜನರು ಮೈ ಮೇಲೆ ಬಂದರು. ನೀವು ನಾಸ್ತಿಕರೇ?! ಸರಿಯಾಗಿ ಬಸ್ಸು ಓಡಿಸಾದು ಗೊತ್ತಿಲ್ಲ. ಪೂಜೆಗೆ ಅವಕಾಶ ಮಾಡಿಕೊಟ್ಟು ಪಾಪಕಳ ಕೊಳ್ಳಿ ಎಂದರು.

ಜಿಲ್ಲೆಯಲ್ಲಿ ಉನ್ನತ ಮಟ್ಟದ ಸಭೆ ಸೇರಿ, ವಿಗ್ರಹ ಸ್ಥಳಾಂತರಿಸಲು ಬೇಡಿಕೊಂಡೆವು. ಜನರು ಕುಸ್ತಿಗೆ ಬಂದರು. ‘ದೇವರು, ಧರ್ಮ, ಜಾತಿ, ಮತನ ಸರ್ಕಾರದವ್ರು ಜೋಪಾನ ಮಾಡ್ತಾರಂತಾ ಹನುಮಾನ್ ವಿಗ್ರಹ ನಿಮ್ಮಲ್ಲಿ ಉದ್ಭವವಾಗಿದೆ. ಕಣ್ಣಲ್ಲಿ ಕಣ್ಣಿಟ್ಟು ಕಾಯಿರಿ’ ಎಂದ್ರು.

ಮಾನ್ಯ ಸಾರಿಗೆ ಸಚಿವರು ಭೀಮಣ್ಣ ಖಂಡ್ರೆಯವರ ಬಳಿಗೆ ಹೋಗಿ ಭಾಲ್ಕಿಯಲ್ಲಿ…. ಉನ್ನತ ಮಾತುಕತೆ… ಗೌಪ್ಯ… ಸಭೆ ನಡೆಸಿ ವಿನಂತಿಸಿದೆವು. ಯಾರೂ ಒಪ್ಪಲಿಲ್ಲ! ಯಾರನ್ನ ಬಲಿ ತೆಗೆದುಕೊಳ್ಳಲು ಯೀ ವಿಗ್ರಹ ತುದಿಗಾಲಲ್ಲಿ ನಿತ್ಯ ಪೂಜೆಗೊಳ್ಳುತ್ತಾ ಇತ್ತು…! ಬಲು ರಾವಿಲಿ ಇತ್ತು. ಜನರನ್ನು ಬಲು ಸೆಳೆಯುತಿತ್ತು…

‘ವಿನಾಕಾರಣವಾಗಿ ನಮ್ಮ ಬಸ್ ನಿಲ್ದಾಣದ ಒಳ್ಳೆ ಜಾಗೆ ಅರ್ಧ ಎಕರೆ ಹನುಮಾನ್ ವಿಗ್ರಹ ಆಕ್ರಮಿಸಿಕೊಂಡು ಅದ್ಭುತವಾದ ಗುಡಿಗೋಪುರ ಕಟ್ಟಲು ಜನರು ಅಮಿತೋತ್ಸಹದಲ್ಲಿ ನಿಂತೇ ಬಿಟ್ಟರಲ್ಲಾ…?! ಇವನು ಡಿಪೋ ಮ್ಯಾನೇಜರ್ ಲಿಂಗರಾಜು ಏನ್ ಮಾಡುತ್ತಿದ್ದಾನೇ?! ಯೂಸ್‌ಲೆಸ್‌ ಫೇಲೋ… ಒಂದು ರಿಪೋರ್ಟ್ ಕೊಡಿ ಯಲ್ಲಪ್ಪ… ನೀ ಓವರ್‌ಸಿಂಗ್ ಆಫೀಸರ್ ಆಗಿ ಏನ್ ಉದ್ದು ಹುರಿತ್ತೀಯಾ?’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎ.ಬಿ. ಪಾಟೀಲ್ ನಿತ್ಯ ಮೂರು ಹೊತ್ತು ಗಢ ಗಢ ಗುಢಾ ಗುಢಾ ಗುಡುಗಿದರು. ಹೌದು… ಯಾರದೋ ಹೊಲದಲ್ಲಿ ಯಾರೋ ಹೋಗಿ ಉತ್ತಿ ಬಿತ್ತಿ ನೀರ್ ಕಟ್ಟಿ ಬೆಳೆ ಬೆಳೆದು ಉಂಬ್ತಿನಿ ಅಂದರೆ… ಹೇಗೆ ಸಾಧ್ಯ?! ಹೋಗಿ ಹೋಗಿ ಸಾರಿಗೆ ನಿಗಮದ ಜಾಗೆ… ಎಲ್ಲರೂ ಶೇಕ್…. ಶೇಕ್…

ಆಹಾ.. ಕೆಲ್ಪವಿಲ್ಲದ ಕೆಲ್ಸಕ್ಕೆ ಬರ್ದ ಜನ್ರು ಯಾರದೋ ಜಾಗದಲ್ಲಿ ಯಾವುದೋ ದೇವ್ರುನ ಪ್ರತಿಷ್ಠಾಪಿಸಿ ಭಕ್ತಿ ತೋರಿದ್ರೆ ಯೆಷ್ಟು ಜನ ನೌಕ್ರಿ ಹೋಗುತ್ತಂತಾ ಯಿವ್ರಿಗೇನು ಗೊತ್ತು? ಯಾರದೋ ಗುಡಿಸ್ಲಿಗೆ ಬೆಂಕಿ ಹಚ್ಚಿ ಛಳಿ ಕಾಯಿಸಿಕೊಳ್ಳುವ ಕೆಟ್ಟ ಛಾಳಿ ಜನ್ರೆಂದು ಬೈದುಕೊಂಡೆ…

ನನಗೆ ನುಂಗಲಾರದ ಬಿಸಿ ತುಪ್ಪಾಗಿತು! ಡಿಪೋ ಮ್ಯಾನೇಜರ್ ಅನ್ಯಾಯವಾಗಿ ಅಮಾನತ್ತಾಗುತ್ತಾನೆ! ನಾ ವರದಿ ಕೊಡ್ಲಿಲ್ಲ ಅಂದರೆ ನನಗೆ ಗ್ರಹಚಾರ ವಕ್ರುಸುತ್ತೆ…. ಎಂದು ನಿತ್ಯ ಚಿಂತಿಸುತ್ತಾ ಇದ್ದೆ! ನೋಡಿ ನೋಡಿ ನನಗೆ ಒಂದು ದಿನ ಟಿಪ್ಪಣಿ ಎಂದು `ನೀವು ಬಸವ ಕಲ್ಯಾಣ ಡಿಪೋದಲ್ಲಿ ವಸತಿ ಮಾಡಿ, ಹಗಲಿರುಳು ಅಲ್ಲಿದ್ದು ಉದ್ಭವ ಮೂರ್ತಿ ಹನುಮಾನ್ ವಿಗ್ರಹವನ್ನು ಅಲ್ಲಿಂದ ಸ್ಥಳಾಂತರಿಸಲು ಕ್ರಮಕೈಗೊಳ್ಳುವುದು’ ಎಂದು ಆದೇಶ ನೀಡಿದರು ನಮ್ಮ ವಿಭಾಗೀಯ ನಿಯಂತ್ರಣಾಧಿಕಾರಿಗಳು.

ನನಗೇ ಗ್ರಹಚಾರ ಒಕ್ಕಿರಿಸಿತು. ಎತ್ತೆತ್ತ ತಿರುಗಿ ಅತ್ತತ್ತ ಬೀಸಿ ಶನಿಮಾತ್ಮ ಬಂದರೂ ನನ್ನತ್ತ ಸುಳಿಯುತ್ತಿತ್ತು ಶನಿ ಮಹಾತ್ಮ… ಡಿಪೋದಲ್ಲಿ ನಾಲ್ಕು ನೂರು ಜನರೂ-ಡಿಪೋ ಮ್ಯಾನೇಜರ್-ಸಂಚಾರಿ ನಿರೀಕ್ಷಕರು, ಸಾರಿಗೆ ನಿಯಂತ್ರಕರೂ, ಭದ್ರತಾ ರಕ್ಷಕರೂ… ಇಷ್ಟೆಲ್ಲ ಇವರೆಲ್ಲ ಇರುವಾಗ ನನ್ನ ಅವಶ್ಯಕತೆ ಏನೈತಿ? ಅಂಥಾದೇನೈತಿ?? ಎಂದು ಡಿ.ಸಿ.ಯವರ ಹತ್ತಿರ ನನ್ನ ವಾದ ವಿವಾದ ಮಂಡಿಸಿದೆ.

ಅವ್ರು ನನ್ ಮಾತಿಗೆ ಸೊಪ್ಪಾಕ್ಲಿಲ್ಲ ನನ್ನನ್ನು ಉಳಿ ಉಳಿ ತಿನ್ನಾರು ನೊಡ್ದಿಂಗೆ ನೋಡಿ ನೋಡಿ…

‘ನಾನೇಳಿದಷ್ಟು ಮಾಡು! ನೀನೂ ಒಂದೇ ಒಂದು ವಾರ ಡಿಪೋದಲ್ಲಿ ಮುಕ್ಕಾಂ ಮಾಡು’ ಎಂದರು.

ಪ್ರತಿ ಸಮಸ್ಯೆಗೆ ನಾನೇ ಪರಿಹಾರ. ನನಗೆ ಗೊತ್ತು ನಾನೇ ಸಮಸ್ಯೆ ಅಂತಾ ಅವರಿಗೆ. ಸಮಸ್ಯೆಗೆ ಸಮಸ್ಯೆ ಪರಿಹಾರವೆಂದು ನಾ ಗಂಟು ಮೂಟೆಕಟ್ಟಿ ಡಿಪೋದಲ್ಲಿ ಉಳಿದೆ. ವಾರ, ಎರಡು ವಾರ, ತಿಂಗಳು ಕಳೆಯಿತು. ಹನುಮಾನ್ ವಿಗ್ರಹ ಮೂರಡಿ ಇದ್ದದ್ದು. ಮೂರವರೆ ಅಡಿ ಎತ್ತರ ಎತ್ತರ ಬೆಳೆದು ಜಿಲ್ಲಾ ದಾಟಿ ಅದರ ಖ್ಯಾತಿ, ಪ್ರಖ್ಯಾತಿ ರಾಜ್ಯ – ಹೊರರಾಜ್ಯ ಮಹಾರಾಷ್ಟ್ರಕ್ಕೂ… ಹಬ್ಬಿತು!

ಆನ ನೋಡಾತನ್ಕಾ ನೋಡಿ… ನೋಡಿ… ಮೈಮರೆತು ನಿಶ್ಚಿಂತೆಯಲಿ ತಣ್ಣಾಗಾದರು!

ಒಂದು ದಿನ-ರಾತ್ರಿ ಎರಡು ಗಂಟೆ ಸಮಯ ಮೊದಲೇ ನಾವೆಲ್ಲ ಯೋಜಿಸಿದಂತೆ, ಯೋಚಿಸಿದಂತೇ… ತನಿಖಾ ಜೀಪು ಬರಲು ಹೇಳಿದ್ದೆವು! ಅದರಲ್ಲಿ ಈ ಹನುಮಾನ್ ಉದ್ಭವ ಮೂರ್ತಿಯನ್ನು ಕೈ ಹಿಡಿದು ಅಲ್ಲಾಡಿಸಿ… ಕಿತ್ತು… ಕಿತ್ತು… ಹೊತ್ತು ಶಕ್ತಿನೆಲ್ಲ ಬಿಟ್ಟು… ನಾಲ್ಕು ಜನ್ನು ಬಲವಾಗಿ… ನಾವೆಲ್ಲ ಸೇರಿ ಜೀಪಿಗೆ ಹಾಕಿ ಗುಲ್ಬರ್ಗದಲ್ಲಿದ್ದ ಪುರಾತತ್ವ ಇಲಾಖೆಗೆ ಒಪ್ಪಿಸಿ ರಸೀದಿ ಪಡೆದಿದ್ದು ಆಗಿತು! ಜನರೆಂಗೆ ಅತೀ ಬುದ್ಧಿವಂತಿಕೆ ಮಾಡಿದರೋ ಮಾಡಿದ್ದರೂ… ನಾವೂ ಹಾಗೇ ಮೂರ್ತಿಯನ್ನು ಮಾಡಿ ಕೈ ತೊಳೆದುಕೊಂಡೆವು..! ಇತಿಹಾಸ, ಸಾಹಿತ್ಯ ಕಲಿತವರು ಏನು ಬಂದರೂ ಜಯಿಸುವರು.

ಮಾರನೆಯ ದಿನ-ಬಸ್ ನಿಲ್ದಾಣದಲ್ಲಿ ಜನ ಜಾತ್ರೆ ಸೇರಿ ಗಲಾಟೆ, ಗದ್ದಲ, ದೊಂಬಿ ಮಾಡಲು ಆರಂಭಿಸಿದರು. ಮೂರ್ತಿ ಮಾಯವಾಗಿದ್ದು ಜನರಿಗೆ ಸೋಜಿಗ ತಂತು. ಮುಸ್ಲಿಂರ ಬಗ್ಗೆ ಗುಮಾನಿಪಟ್ಟರು! ಬೀದರಿನಿಂದ ಡಿಸಿ, ಎಸ್.ಪಿ, ಡಿವೈಎಸ್ಪಿ, ಸಿಪಿಐ, ದಂಡಾಧಿಕಾರಿಗಳು ಆಗಮಿಸಿ ಸಭೆ ಸೇರಿ ಕೊನೆಗೆ ನಮ್ಮ ಇಲಾಖಾಧಿಕಾರಿಗಳೇ ಏನೋ ಮಾಡಿದ್ದಾರೆ, ಎಂದು ಶಂಕೆ ಮಾಡಿದರು… ಉಗ್ರ… ಕ್ರಮ ಕೈಗೊಳ್ಳಲು ಮನವಿ ಮಾಡಿದರು “ಆಯ್ತು” ಎಂದರು! ವಿಗ್ರಹಕ್ಕಾಗಿ ಡಿಪೋದಲ್ಲೆಲ್ಲ ಹುಡುಕಾಡಿದರೂ ಸಿಗಲೇ ಇಲ್ಲ!

ಹೀಗೆ… ವಾರ, ತಿಂಗಳು ಕಳೆಯಿತು. ಜನ ಮರೆತರು.

ನಾವು ನಿಲ್ದಾಣವನ್ನು ಹಗಲು ರಾತ್ರಿ ಕಾದು ಜಾಗ ಉಳಿಸಿದೆವು… ಬಸವನಾಡಿನಲಿ ಬಸವನೇ ಇರಲಿಲ್ಲ. ಪ್ರತಿಮೆಗಳೇ ಎಲ್ಲೆಲ್ಲ! ಬೀದರ್ ಜಿಲ್ಲೆಯ ಪ್ರತಿ ಹಳ್ಳಿ ಹಳ್ಳಿ ತಿರಿಗಿದ್ದೆ. ಎಲ್ಲಿ ನೋಡಿದರಲ್ಲಿ ಬಸವನ ಪ್ರತಿಮೆಗಳು! ಅಂಬೇಡ್ಕರ್ ಪ್ರತಿಮೆಗಳು.

ಬಸವ ಕಲ್ಯಾಣದಲ್ಲಿ ಬಸವಣ್ಣನದು ಕಂಚಿನ ಪ್ರತಿಮೆ, ಗುಡಿ ಗೋಪುರವಿರುವುದ ಕಂಡು ಕೈ ಮುಗಿದು ಅಡ್ಡಬಿದ್ದಿದ್ದೆ! ಅಣ್ಣ ಬಸವಣ್ಣ ನೀನೆನ್ನ ಈವತ್ತು ಬದುಕಿದ್ದರೆ ಶಾಕ್ ಆಗುತಿದ್ದೆ ನಿನ್ನ ತತ್ವ, ಸತ್ವವನ್ನೆಲ್ಲ ನಿನ್ನವರೇ ಗಾಳಿಗೆ ತೂರಿ, ಬರೀ ಬೂಟಾಟಿಕೆಯಲಿ ಕಾಲಹರಣದಲಿ, ಇರುವುದು ಕಂಡೆ! ಇಡೀ ವಿಶ್ವ ಮಾನವನಾಗಿ ಮೆರೆದು ಜಗದ್‌ಜ್ಯೋತಿ ಇಂದು ಗುಡಿ ಗೋಪುರದ ಸಭೆ, ಸಮಾರಂಭದ ಕೂಪವಾಗಿದೆ! ಪಾಪಿಷ್ಠರ ಕೈಯಲ್ಲಿ ನಲುಗುತಿದೆಯೆಂದು ಚಿಂತಿಸತೊಡಗಿದೆ.

ಹೀಗೆ ನಮ್ಮ ಕೆಲಸ ಮೂರಕ್ಕೆ ಇಳಿಯದೆ, ಆರಕ್ಕೆ ಏರದೆ ಸಾಗಿತ್ತು. ಎಬಿ ಪಾಟೀಲರನ್ನು ವರ್ಗಾಯಿಸಿದರು. ಇವರ ಪ್ಲೇಸಿಗೆ ಬೆಂಗಳೂರು ಗ್ರಾಮಾಂತರ ವಿಭಾಗದಲ್ಲಿ ಡಿ.ಸಿ.ಆಗಿದ್ದವರೆ ಈ ಮೊದಲು ನನ್ನೊಂದಿಗಿದ್ದವ್ರೇ ನಮ್ಮಲ್ಲಿಗೆ ಬಂದರು! ನನ್ನದೇ ಗ್ರಹಚಾರ ಸರಿಯಿಲ್ಲವೆಂದು ದುಃಖಿಸಿದೆ.

ಅಬ್ಬಾ! ಗರಗಸ… ನಕ್ಷತ್ರಿಕ… ವಿಶ್ವಾಮಿತ್ರ… ಹೋದೆ ಶನಿಮಹಾತ್ಮ ಎಂದರೆ… ಬಂದೆ ಗವಾಕ್ಷಿಲಿ ಎಂಬಂತೆ ಮತ್ತೆ ಇಲ್ಲಿಗೆ ಬಂದು ಒಕ್ಕರಿಸಿದ್ರು… ನಿತ್ಯ ನರಕ ಶುರುವಾಗಿತ್ತು!

ಬೆಂಕಿಯಿಂದ ಬಾಂಡಲಿಗೆ ಬಿದ್ದೆ! ಏನ್ ಮಾಡಿದರೂ ನಿಗಮದ ಫಲಿತಾಂಶ ಮಾತ್ರ ಶೂನ್ಯ… ಹಿಂಸೆ! ಘನ ಘೋರ ಹಿಂಸೆ… ಗಾಣದೆತ್ತು ಆದೆ. ಉಸಿರುಗಟ್ಟುವ ವಾತಾವರಣದಲ್ಲಿ ನಿತ್ಯ ಕೆಲಸ ಮಾಡುತ್ತಾ ಸಾಗಿದೆ. ಮಳೆಗಾಲ ಹೋಗಿ ಕಡು ಬೇಸಿಗೆ ಕಾಲ ಬಂದಂತೆ… ಎಲ್ಲ ಏನೆಲ್ಲ ಬದಲಾವಣೆ ಶುರುವಾಗಿತ್ತು!

ಇವರು ಬಂದ ತಕ್ಷಣನೇ… ವಾರ್ಷಿಕ ವರದಿಯಲ್ಲಿ ನನ್ನ ಬಗ್ಗೆ ಅತೃಪ್ತಿಕರ ಕೆಲಸ, ಸಾಮಾನ್ಯ ಜ್ಞಾನ ಕಡಿಮೆ. ಮುಂದಾಳತ್ವ ಶೂನ್ಯವೆಂದು ಬರೆದು ಕಳಿಸಿದ್ದು ನನಗೆ ಬಂದು ತಲುಪಿತು ವಿವರಣೆ ಬರೆದು ಕಳಿಸಿದೆ. ಅದು ನನ್ನ ವೈಯಕ್ತಿಕ ಕಡತದಲ್ಲಿ ಹಾಗೆ ಉಳಿಯಿತು! ನನಗೆ ಅಂಗಾಂಗ ಉರಿದು ಹೋಗಿತ್ತು. ಹಗಲಿರುಳು ದುಡಿಸಿಗೊಂಡು ಕೂಡಾ ನನ್ನನ್ನು ಈ ರೀತಿ ಬೆತ್ತಲೆಗೊಳಿಸಿದ್ದು ಅತೃಪ್ತಿಯೆನಿಸಿತ್ತು! ಏನೂ ಮಾಡದೆ, ಹಲ್ಲು ಹಲ್ಲು ಕಡಿದು ತೆಪ್ಪಗಾದೆ.

ಇಲ್ಲಿಯೂ ಹಾವಿಗೆ ಮುಂಗುಷಿಗೆ ಬಿದ್ದಂತೆ, ಅತ್ತೆ ಸೊಸೆಗೆ ಶುರುವಾದ್ದಂಗೇ ಶುರುವಾಗುತ್ತಿತ್ತು. ಅಂಗೆ ಇಂಗೆ ವರ್ಷವಾಗಿತ್ತು! ಹಿಂಗಿದ್ದಾರೆಂದು ದಿನಗಳುರುಳಲು ತಡವಾಗಲಿಲ್ಲ! ಯಿ ಮನುಶ್ಯ ಮಾತ್ರ ಅರಿಯಲಿಲ್ಲ. ಸುಧಾರಿಸುವುದಿಲ್ಲವೆಂದು ಬೇಸರಗೊಂಡೆ.

ಒಂದು ದಿನ ಇದ್ದಕ್ಕಿದ್ದಂತೆ ಇವರಿಗೆ ವರ್ಗಾವಣೆಯಾಗಿತ್ತು! ವರ್ಗಾವಣೆ ದಿನ ಅವರಿಗೊಂದು ಬೀಳ್ಕೊಡ್ಗೆಯ ಸಮಾರಂಭ! ಅಲ್ಲಿ ನೂರಾರು ಜನರು ಡಿಪೋಗಳಿಂದ ಬಂದಿದ್ದರು! ಅವರ ಮುಂದೆ ನಾನು ಡಿ.ಸಿ. ಯವರಿಗೆ ಬಲು ಅವಮಾನ ಮಾಡಿ ಸೊಗಸಾಗಿ ಅರ್ಥಗರ್ಭಿತವಾಗಿ ನೀತಿ ಬೆರಸಿ… ಮಾತಾಡಿದೆ ನನಗೆ ಅಷ್ಟು ಬೇಸರವಾಗಿತ್ತು. ಬಹಳ ಜನ ನನ್ನ ಮಾತಿಗೆ ಖುಷಿಪಟ್ಟರು, ತಲೆದೂಗಿದರು… ನನ್ನ ಮೇಲೆ ಎಲ್ಲರಿಗೆ ಕಣ್ಣು ಬಿತ್ತು ನನಗೆ ತೊಂದರೆ ಮಾಡಲು ಕೆಲವರು ಹೊಂಚು ಹಾಕಿ ಕುಳಿತರು!

ನಾ ನನ್ನ ಮಾತಿನಿಂದಾಗಿ ಹಗೆಗಳನ್ನು ಹೆಚ್ಚು ಮಾಡಿಕೊಳ್ಳುತಿದ್ದೆ. ಬಂದಿದ್ದಲ್ಲ ಭಾರಿಸಿದ್ದಲ್ಲ ಹಾದಿಲಿ ಹೋಗೋ ಮಾರಿಯನ್ನು ಮನೆಗೆ ಕರೆದು ತರುತಿದ್ದೆ! ಮುಂಗೋಪ ಆವೇಶ ಜಾಸ್ತಿ ಇತ್ತು. ಅನ್ಯಾಯ, ಅನೀತಿ, ಅಸಮಾನತೆ ಕಂಡರೆ ಸಿಡಿದು ಬೀಳುತಿದ್ದೆ. ನನ್ನ ಲೈಕು ಮಾಡದೆ, ದ್ವೇಷಿಸುತ್ತಿದ್ದರು.

ಇವರ ಪ್ಲೇಸಿಗೆ ಡಿಪೋ ಮ್ಯಾನೇಜರ್, ಸಾರಿಗೆ ಅಧಿಕಾರಿಯಾಗಿ ಕೆಲಸ ನಿರ್ವಹಿಸದ ಅಧಿಕಾರಿಯನ್ನು ಡಿ.ಸಿ. ಅಂತಾ ಬೇಕಂತಲೇ ಪ್ರಯೋಗಾತ್ಮಕವಾಗಿ ನೀಡಿದ್ದರು…! ಆವಾಗ ಕಾಲನೇ ಹಂಗಿತ್ತು, ತೊಘಲಕ್ ದರ್ಬಾರ್.

ಅವರು ಬಂದರು! ಬಂದವರೇ… ನನ್ನ ಪ್ರತಿಯೊಂದು ಕೆಲಸಕ್ಕೆ ಮುಂದೆ ಕಳಿಸಿ ಕಳಿಸಿ… ನನ್ನ ಕೆಟ್ಟವನನ್ನಾಗಿ ಬಿಂಬಿಸುತ್ತಾ ಹೋದರು ಹೋದವರೇ ಹಿಂದಿನವರೆಲ್ಲ… ಒಳ್ಳೆಯವರಾಗಿ ಕಂಡರು. ಇವರು ತುಂಬಾ ಡಮ್ಮಿಯಾಗಿ… ಕೆಟ್ಟವರಾಗಿ ಕಾಣತೊಡಗಿದರು!

ಹುಮಾನ್‌ಬಾದಿನಲ್ಲಿದ್ದ ವಿಭಾಗೀಯ ಕಛೇರಿಯನ್ನು ಬೀದರ್‌ಗೆ ಸ್ಥಳಾಂತರಿಸಲು ನಾ ಒಪ್ಪಿಕೊಂಡೆ ಅದನ್ನು ನನ್ನ ಮೇಲಾಧಿಕಾರಿಗಳಿಗೆ ನನ್ನದು ವಿರೋಧವಿದೆಯೆಂದು ಒಳ ಒಳಗೆ ಬಿಂಬಿಸಿದರು. ಹೇಗಿದೆ ಅಂದರ್ ಬಾಹರ್ ಆಟ, ಶೀತಲ ಸಮರ, ಒಳಕೊಯಿತಕ್ಕಿಟ್ಟುಕೊಂಡರು. ಬ್ರಿಟೀಶ್ ಪಾಲ್ಸಿ…

ಅಲ್ಲಿ ಬೀದರ್‌ನಲ್ಲಿ ನನಗೆ ಯಾವುದು ಕೊಠಡಿ ಕೊಟ್ಟರೋ ಅದರಲ್ಲಿ ಕೆಲಸ ಮಾಡುತ್ತಿದ್ದ. ಅದನ್ನು ನನ್ನ ಮೇಲಿನವರಿಗೆ ದೂರವಾಣಿಯಲ್ಲಿ ಕೆಟ್ಟದಾಗಿ ತದ್ವಿರುದ್ಧವಾಗಿ ಹೇಳಿರುವುದು ತಿಳಿಯಿತು! ಬೀದರ್ ಹಳೆಯ ಬಸ್ ನಿಲ್ದಾಣವನ್ನು ಹೊಸ ನಿಲ್ದಾಣಕ್ಕೆ ಸ್ಥಳಾಂತರಿಸಲು ನನಗೆ ವಹಿಸಿದರು. ನಾ ಪ್ರಮಾಣಿಕತೆಯಿಂದ, ಎಷ್ಟೋ ವಿರೋಧದ ನಡುವ ಹಂತ ಹಂತವಾಗಿ ಮಾಡಿ… ಮಾಡಿ ಮುಗಿಸಿದೆ! ಇದರಲ್ಲಿ ನನಗೆ ವಿರೋಧಿಗಳು ಬಹಳ ಜನ ಹುಟ್ಟಿಗೊಂಡರು.

ಬರು ಬರುತ್ತಾ ಕೆಟ್ಟ ಬಲು ಕೆಟ್ಟ, ದುರುಳ ದೌರ್ಜನ್ಯದ ಅಧಿಕಾರಿಗಳೇ ನನಗೆ ಸಿಗುತ್ತಾ ಹೋದರು. ನನ್ನ ಸತ್ಯ ನಾಶ ಮಾಡಲು ಇವರೆಲ್ಲ ಮಾತನಾಡಿಕೊಂಡು ಪಣತೊಟ್ಟಂತೆ ಕಂಡು ಬಂದರು.

ಡಿ.ಸಿ. ಯವರಿದ್ದರೂ ಇವರೇ ಅಂದರೆ…. ನಾನೇ ಡಿ.ಸಿ. ಯಂಗೆ ಸರ್ವಜ್ಞನಂಗೆ…. ಆಡುತ್ತಾನೆಂದು ಹಬ್ಬಿಸಿ ನನಗೆ ಡಿ.ಸಿ.ಯವರಿಗೆ ಜಗಳ ತಂದಿಕ್ಕಿದರು. ಇದಕ್ಕೆ ಮೆಯಿನ್ ಕಾರಣ ಡಿ.ಎಂ.ಇ, ಎಂದು ನನಗೆ ನಂತರ ತಿಳಿಯಿತು! ವೃತ್ತಿ ಮತ್ಸರದಿಂದ ಇದೇ ಡಿ.ಎಂ.ಇ. ನನ್ನ ವಾರ್ಷಿಕ ವರದಿಯಲ್ಲಿ ನನ್ನನ್ನು ಸಾಮಾನ್ಯ ದರ್ಜೆಯ ಅಧಿಕಾರಿ, ಅನುಭವ ಸಾಲದವರೆಂದು ಷರಾ ಬರೆದು ರುಜು ಮಾಡಿಸಿ ಕಳಿಸಿದ್ದನ್ನು ನನಗೆ ವಿವರಣೆ ಕೇಳಿದ್ದರು! ನಾ ಸಮಜಾಯಿಷಿ ನೀಡಿದೆ. ಅದನ್ನು ಅಂಗೀಕರಿಸಲಿಲ್ಲ! ನನ್ನ ಮೂಲೆಗುಂಪು ಮಾಡಲು ಬೆಂಗಳೂರಿನಲ್ಲಿ ಇವರ ಮತ ಧರ್ಮಿಯ… ಜಾತಿಯವರಾದ ನಿರ್ದೇಶಕರೊಬ್ಬರಿದ್ದರು. ಅವರ ಸಹಾಯ ಕೋರಿದರು. ಅವರು ಬಲು ಸುಲಭವಾಗಿ ಸ್ಪಂದಿಸಿದರು.

ನನ್ನ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಿ, ವ್ಯವಸ್ಥಾಪಕ ನಿರ್ದೇಶಕರಾದ ಪಿ.ಡಿ. ಶೆಣೈಗೆ ಹೇಳಿಸಿ – ನನ್ನನ್ನು ಬೀದರ್‌ನಿಂದ ಹುಬ್ಬಳ್ಳಿ ಬಸ್ ನಿಲ್ದಾಣದ ನಿತ್ಯ ನರಕಕ್ಕೆ ಬೇಕಂತಲೇ… ಪಾತಾಳಕ್ಕೆ ವರ್ಗಾಯಿಸುವಲ್ಲಿ ಇವೆಲ್ಲ ಕಾಣದ ಕೈಗಳ ಕೈವಾಡವಿರುವುದು ನನ್ನ ಗಮನಕ್ಕೆ ಬಂತು! ಅಣ್ಣ ಬಸವಣ್ಣ ನನ್ನ ಸಂಪೂರ್ಣವಾಗಿ ಕೈ ಬಿಟ್ಟು ಬಲು ನೊಂದು ಬೆಂದು ಬಸವಳಿದು ಪಾತಳಕಂಡೆ! ಆಗಿದ್ದೆಲ್ಲ ಒಳ್ಳೆಯದಕ್ಕೆ ಬಿಡು ಎಂದು ಭಂಡು ಧೈರ್ಯ, ಸಹಾಸದಿ ಹುಬ್ಬಳ್ಳಿಗೆ ಹೆಂಡತಿ, ಮೂರು ಜನ ಮಕ್ಕಳೊಂದಿಗೆ ಭಾರವಾದ ಹೃದಯದಿ ಬಂದು ಬಿದ್ದೆ!

ನನ್ನ ಪುಟ್ಟ… ಕರ್ತವ್ಯದತ್ತ ಗಮನ ಹರಿಸಿದೆ! ಯಿಲ್ಲಿ ಮೂರು ವರ್ಷ ನೂರು ವರ್ಷದಂಗೆ ನಿತ್ಯ… ರಕ್ತ ಕಣ್ಣೀರಿಟ್ಟೆ, ನನಗೆ ಇಡೀ ಜಗತ್ತೇ ಆಗ ಪರಿಚಯವಾಗ ತೊಡಗಿತು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶರಾವತಿ
Next post ಆಶೆ-ಭಾಷೆ

ಸಣ್ಣ ಕತೆ

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…