ಅವಳು ಕಿಟಕಿಯಿಂದ ಹೊರಗಿನ ಕತ್ತಲನ್ನು ನೋಡುತ್ತಿದ್ದಳು. ಮನೆಯ ಲೈಟನ್ನು ಆರಿಸಿ ಕತ್ತಲಲ್ಲಿ ನಿಂತು ಕತ್ತಲನ್ನು ನೋಡುವುದನ್ನು ಅವಳು ಅಭ್ಯಾಸ ಮಾಡಿಕೊಂಡಿದ್ದಳು. ಹೊರಗಿನ ಕತ್ತಲೆಯಿಂದ ಎದ್ದು ಬಂದವನೊಬ್ಬ ಒಳಗಿನ ಕತ್ತಲೆಯನ್ನು ಹೋಗಲಾಡಿಸಬಾರದೇ ಎಂದು ಹಂಬಲಿಸುತ್ತಿದ್ದಳು.
ಮದುವೆಯಾಗಿ ಮೂರು ವರ್ಷಗಳು ಉರುಳಿವೆ. ಎಷ್ಟೊಂದು ಕತ್ತಲರಾತ್ರಿಗಳನ್ನು ಅವಳು ಹಾಗೆ ಕಳೆದಿಲ್ಲ? ಗಂಡ ಸೋಮಯ್ಯ ಬೆಂಗಳೂರಿನಲ್ಲಿರುತ್ತಿದ್ದುದೇ ಹೆಚ್ಚು. ಮುತ್ತಮ್ಮ ಇಲ್ಲಿ ಹಗಲಲ್ಲಿ ಎಸ್ಟೇಟು ನೋಡಿಕೊಳ್ಳಬೇಕು. ರಾತ್ರಿ ಆ ದೊಡ್ಡ ಬಂಗಲೆಯಲ್ಲಿ ಒಬ್ಬಳೇ ಕಾಲ ಕಳೆಯಬೇಕು. ಅವನಿದ್ದಾಗಲೂ ಸೂರ್ಯನ ಬೆಳಕು ಬೀಳದ ಕತ್ತಲೆಯಲ್ಲಿ ಅವನಿಂದ ಮಿಂಚು ಮೂಡಿಸಲು ಆಗುತ್ತಿರಲಿಲ್ಲ.
ಸೋಮಯ್ಯನಿಗೆ ಆ ಬಂಗಲೆ ಬಗ್ಗೆ ಹೇಳಿಕೊಳ್ಳುವುದೆಂದರೆ ಹೆಮ್ಮೆ.
ಇದು ಬ್ರಿಟಿಷರಿಗೆ ಸೇರಿದ್ದು. ಚಿಕ್ಕವೀರ ದೊರೆಗಳ ಬಳಿಕ ವಿಲಾಯತಿಯವರು ಈ ಭಾಗದಲ್ಲಿ ನೆಲೆಯೂರಿ ಎಸ್ಟೇಟು ಮಾಡಿಕೊಂಡರಲ್ಲಾ? ನನ್ನ ಮುತ್ತಜ್ಜ ಇಲ್ಲಿ ಕಾರ್ಯಸ್ಥರಾಗಿದ್ದರು. ವಿಲಾಯತಿ ದೊರೆಗೆ ಅವನೆಂದರೆ ತುಂಬಾ ನಂಬಿಕೆ. ನಮ್ಮ ಮುತ್ತಜ್ಜಿ ಗೌರಮ್ಮ ಸಾಕ್ಷಾತ್ತು ರಂಭೆಯಂತ ಹೆಣ್ಣಂತೆ. ವಿಲಾಯತಿ ದೊರೆ ಇಲ್ಲೇ ಮೂವತ್ತು ವರ್ಷ ಕಳೆದನಂತೆ. ಇಂಗ್ಲೆಂಡಿಗೆ ಹೋಗುವಾಗ ಈ ಬಂಗಲೆ ಈ ಎಸ್ಟೇಟು ಮುತ್ತಜ್ಜಿಗೆ ಕೊಟ್ಟು ಹೋದನಂತೆ. ಆಹಾ ನಮ್ಮ ಮುತ್ತಜ್ಜಿಯ ಭಾಗ್ಯವೇ? ಕೊನೆ ಕೊನೆಗೆ ಅವನು ಇಂಗ್ಲೀಷಲ್ಲೇ ಎಲ್ಲವನ್ನೂ ವಿವರಿಸುತ್ತಿದ್ದ. ಇಂಗ್ಲೀಷರ ಹಾವಭಾವದೊಡನೆ ಉಚ್ಚಾರವನ್ನೂ ಅನುಕರಿಸುತ್ತಿದ್ದ.
ಆ ಬಂಗಲೆಯಲ್ಲಿ ಯಾವುದಕ್ಕೂ ಕಡಿಮೆಯಿರಲಿಲ್ಲ. ಟಿ.ವಿ., ಫೋನು, ಫ್ರಿಜ್ಜು, ಹಗಲು ಕೆಲಸದಾಳುಗಳು, ಎಸ್ಟೇಟು ಕಾವಲಿಗೆ ಗೂರ್ಖಾ, ಹುಲಿಯೆತ್ತರದ ಎರಡು ಆಲ್ಸೇಶಿಯನ್ನು. ಸೋಮಯ್ಯ ಬೆಂಗಳೂರಿಗೆ ಹೋದಾಗ ರಾತ್ರೆ ಅವಳಿಗೆ ಬೇಸರ ನೀಗಲು ಕೆಲಸದ ಮುದುಕಿಯೊಬ್ಬಳು ಬರುತ್ತಾಳೆ. ಅವಳು ಮಾತು ಶುರು ಮಾಡುವುದೇ ನಿನ್ನ ಪ್ರಾಯದಲ್ಲಿ ನಾನು…… ಎಂದು. ಅವಳ ಯವ್ವನದ ಸಾಹಸಗಳನ್ನು ಮುತ್ತಮ್ಮ ಕಣ್ಣರಳಿಸಿ ಕೇಳುತ್ತಾಳೆ. ಅಸಹನೆ ಹೆಚ್ಚಾದಾಗ ಸಾಕು ನಿಲ್ಲಿಸು. ಬೇರೇನಾದರೂ ಮಾತಾಡು ಎನ್ನುತ್ತಾಳೆ. ಮುದುಕಿ ಯಾವ್ಯಾವುದೋ ಕತೆಗಳನ್ನು, ಒಗಟುಗಳನ್ನು ಹೇಳಿ ಮುತ್ತಮ್ಮನನ್ನು ಗೆಲುವಾಗಿರಿಸಲು ಪ್ರಯತ್ನಿಸುತ್ತಾಳೆ.
“ನೀನು ತುಂಬಾ ಓದಿದವಳಲ್ವಾ? ಒಂದು ಒಗಟು ಹೇಳುತ್ತೇನೆ. ಕೇಳಿಸಿಕೋ ನಂದ್ರೊಳಗೆ ಅವಂದು ಅಲ್ಲಾಡುತ್ತದೆ. ಕೇಳಿಸ್ಕೂಂಡೆಯಾಲ ಉತ್ತರ ಹೇಳು.”
ಮುತ್ತಮ್ಮ ಗೊತ್ತಿಲ್ಲವೆಂದು ತಲೆಯಾಡಿಸಿದಳು.
“ಹಾಗಾದರೆ ಇನ್ನೊಂದು ಒಗಟು. ನನ್ನ ಚಡ್ಡಿ ಜಾರಿಸಿದ. ಗಬ್ಬಕ್ಕನೆ ಒಳಕ್ಕೆ ನೂರಿಸಿದ. ಇದಕ್ಕಾದ್ರೂ ಉತ್ತರ ಹೇಳು.”
ಮುತ್ತಮ್ಮನಿಗೆ ಉತ್ತರ ಗೊತ್ತಾಗಲಿಲ್ಲ.
“ಇದು ಕೊನೆಯದ್ದು. ಉತ್ತರ ನಿಂಗೆ ಖಂಡಿತಾ ಗೊತ್ತಿದೆ. ಕೇಳಿಸ್ಕೋ. ಅಳು ಗಿಳು ಯಾವಾಗ? ಅರ್ಧ ಒಳಕ್ಕ್ ಹೋದಾಗ. ನಗು ಗಿಗು ಯಾವಾಗ? ಪೂರ್ತಿ ಒಳಕ್ ಹೋದಾಗ, ಏನದು?”
ಮುತ್ತಮ್ಮನಿಗೆ ಸಿಟ್ಟು ಬಂತು. “ಬರೇ ಬಿಕನಾಸಿ ಮುದುಕಿ ನೀನು. ನಿನ್ನ ಬಾಯಿಂದ ಒಂದೂ ಒಳ್ಳೆಯದು ಬರೋದಿಲ್ಲ.”
ಮುದುಕಿ ನಕ್ಕಿತು. “ನಾನೇನು ನಿನ್ನ ಹಾಗೆ ಓದಿದೋಳಾ? ಅಮ್ಮ ಕಲಿಸಿ ಕೊಟ್ಟ ಒಗಟು ಇವು. ನಂದ್ರೊಳಗೆ ಅವಂದು ಅಲ್ಲಾಡುತ್ತದೆ ಅಂದ್ರೆ ದೇವಸ್ಥಾನದ ಗಂಟೆಯೊಳಗೆ ಅದರ ಕೋಲು ಅಲ್ಲಾಡೋದು. ನನ್ನ ಚಡ್ಡಿ ಜಾರಿಸಿ ಗಬಕ್ಕನೆ ಒಳಕ್ಕೆ ನೂರಿಸೋದು ಅಂದ್ರೆ ಬಾಳೆಹಣ್ಣು ಸುಲಿದು ತಿನ್ನೋದು. ಬಳೆಗಾರ ಬಳೆ ತೊಡಿಸುವಾಗ ಆರಂಭದಲ್ಲಿ ನೋವಾಗಿ ಕಣ್ಣೀರು ಬರುತ್ತಲ್ಲಾ? ಅದು ಅರ್ಧ ಒಳಕ್ಕೋದಾಗಿನ ನೋವು. ತೊಟ್ಟ ಮೇಲೆ ಎಷ್ಟು ಖುಷಿಯಾಗುತ್ತೆ ನೋಡು. ಅದು ಪೂರ್ತಿ ಒಳಕ್ಕೋದಾಗಿನ ಸುಖ. ನಾನೇನು ಕೆಟ್ಟದ್ದು ಹೇಳಿದ್ದೀನಾ?”
ಮುತ್ತಮ್ಮನಿಗೆ ನಗು ಬಂತು. ಈಗ ಮುದುಕಿಯೂ ಗೆಲುವಾದಳು. ನೋಡಮ್ಮಾ, ನೀನಿನ್ನೂ ಎಳೆ ಪ್ರಾಯದೋಳು. ಮೂರು ವರ್ಷವಾದರೂ ಈ ಮನೆಯಲ್ಲಿ ಮಗುವಿನ ಕೇಕೆ ಕೇಳಿಸಿಲ್ಲ. ದಣಿ ಸೋಮಯ್ಯ ಕಂಡಲೆಲ್ಲಾ ಕೈಯಾಡಿಸ್ತಾನೆ. ಸಿಕ್ಕಿದ್ದನ್ನೆಲ್ಲಾ ಮೇಯ್ತಾನೆ. ನೀನು ರಾತ್ರೆಗಳನ್ನು ಸುಮ್ನೆ ಕಳೀತೀಯಾ. ನಾನು ನಿನ್ನ ಹಾಗಿರುವಾಗ….. ಬೇಡ. ನಿನ್ನ ಹೊಟ್ಟೆ ಉರಿಸೋದು ನಂಗಿಷ್ಟವಿಲ್ಲ. ಒಂದು ಮಾತು ನಿಜ. ಯವ್ವನದಲ್ಲಿ ಉಂಡದ್ದೇ ಬಂತು. ಯಾವಾಗ ಅದು ನಿಂತು ಹೋಯ್ತೋ, ಜೀವನಾನೇ ನಿಂತು ಹೋದ ಹಾಗೇ.
ಮುತ್ತಮ್ಮ ಮತ್ತೊಮ್ಮೆ ಕಿಟಕಿಯ ಹೊರಗಿನ ಕತ್ತಲನ್ನು ನೋಡಿದಳು. ಇಂದು ರಾತ್ರೆ ತಾನೊಬ್ಬಳೇ ಬ್ರಿಟಿಷ್ ದೊರೆಯಿಂದ ಸೋಮಯ್ಯನ ಮುತ್ತಜ್ಜಿ ಪಡೆದ ಬಂಗಲೆಯಲ್ಲಿ ಕಳೆಯಬೇಕು. ಮುದುಕಿಯ ಮನೆಯಲ್ಲಿ ಸತ್ತೋರಿಗೆ ಬಡಿಸೋದು. “ನಮ್ಮ ಹಿರಿಯರು ಸತ್ತು ಹೋದೋರೆಲ್ಲಾ ಎಲ್ಲಿಗೂ ಹೋಗೋದಿಲ್ಲ. ಇಲ್ಲೇ ನಂ ಜತೆಯಲ್ಲೇ ಇರ್ತಾರೆ. ಅವ್ರಿಗೆ ವರ್ಷಕ್ಕೊಮ್ಮೆ ಅವರ ಇಷ್ಟದ್ದನ್ನು ಮಾಡಿ ಹಾಕ್ತೇವೆ. ನಾಳೆ ನಾನು ಸತ್ರೆ ನಂಗೂ.”
ಮುದುಕಿ ನಿನ್ನೆ ರಾತ್ರೆ ಹೇಳಿದ್ದಳು. ಅವಳಿದ್ದರೆ ಮಾತಿನಲ್ಲಿ ಹೊತ್ತು ಹೋಗುತ್ತಿತ್ತು. ಒಬ್ಬಳೇ ಊಟ ಮಾಡಲು ಮನಸ್ಸೇ ಬರುತ್ತಿಲ್ಲ. ಒಂದು ವಾರವಾಯ್ತು ಸೋಮಯ್ಯ ಬೆಂಗಳೂರಿಗೆ ಹೋಗಿ. ಪ್ರತಿ ರಾತ್ರಿ ಅವನಿಗೆಂದು ಜೋಪಾನವಾಗಿರಿಸಿದ್ದು ವ್ಯರ್ಥವಾಗುತ್ತದೆ. ಕತ್ತಲಿಂದ ಎದ್ದು ಬರುವವನೊಬ್ಬ ಸೂರ್ಯ ಕಿರಣ ಸೋಂಕದ ಇಲ್ಲಿನ ಕತ್ತಲನ್ನು ದೂರ ಮಾಡಬಾರದೆ?
ಹೊರಗೆ ಜರ್ರೋ ಎಂದು ಮಳೆ ಸುರಿಯತೊಡಗಿತು. ಎಸ್ಟೇಟಿನಿಂದ ಕ್ರಿಮಿಕೀಟಗಳ, ಹುಳ ಹುಪ್ಪಡಿಗಳ, ಜೀರುಂಡೆಗಳ ಸಂಗೀತ. ಅದರ ಮಧ್ಯೆ ಅಸ್ಪಷ್ಟವಾಗಿ ವಾಹನದ ಶಬ್ದ ಕೇಳಿಸಿತು. ಸೋಮಯ್ಯ ಚವರ್‌ಲೈಟು ಕಾರು ಕೊಂಡು ಹೋಗಿದ್ದಾನೆ. ಅದೇ ಬರುತ್ತಿರಬಹುದೇ? ಅದು ವಾಹನದ ಸದ್ದೇ ಅಥವಾ ಕೇವಲ ತನ್ನ ಭ್ರಮೆಯೇ? ಹಾಳಾಗಿ ಹೋಗಲಿ. ಅದು ಭ್ರಮೆಯೇ ಇರಬೇಕು. ಈ ಕತ್ತಲೆ ಇನ್ನು ಸಾಕು ಎಂದು ಗೇಟಿನ ಲೈಟು ಹಾಕಿದಳು. ಮಳೆಗೆ ಒದ್ದೆಯಾಗಿ ಗೂಡು ಸೇರಿದ್ದ ಅಲ್‌ಶೇಷಿಯನ್ನುಗಳು ಒಮ್ಮೆ ಬೊಗಳಿ ಸುಮ್ಮನಾದವು. ಗೂರ್ಖನೆಲ್ಲೋ ಎಸ್ಟೇಟಿನ ಗರ್ಭದಲ್ಲಿದ್ದಾನೆ.
ಮತ್ತೆ ವಾಹನದ ಶಬ್ದ ಕೇಳಿಸಿದಂತಾಯಿತು. ಅವಳು ಮತ್ತೊಮ್ಮೆ ಕಿಟಕಿಯ ಬಳಿಗೆ ಬಂದಳು. ಗೇಟಿನ ಲೈಟ್‌ನಿಂದಾಗಿ ಹೊರಗಿನ ಕತ್ತಲೆ ಭಯ ಹುಟ್ಟಿಸುವಂತಿರಲಿಲ್ಲ. ದೂರದಿಂದ ವಾಹನವೊಂದರ ಹೆಡ್‌ಲೈಟು ಕಾಣಿಸಿತು. ಸೋಮಯ್ಯನ ಕಾರೆ? ಕಾರು ಎಂದಾದರೆ ಎರಡು ಹೆಡ್‌ಲೈಟ್‌ಗಳಿರಬೇಕಿತ್ತು. ದೂರದಿಂದಲೇ ಹಾರನ್ನು ಹಾಕುವುದು ಅವನ ಅಭ್ಯಾಸ. ಇದು ಯಾರದೋ ಬೈಕು ಇರಬೇಕು. ಈ ಕತ್ತಲಲ್ಲಿ, ಮಳೆಯಲ್ಲಿ ಒದ್ದೆಯಾಗಿಕೊಂಡು ಬರುತ್ತಿರುವವರು ಯಾರಿರಬಹುದು? ಅಪ್ಪನಿಗೆ ಏನಾದರೂ ಸಂಭವಿಸಿತೆ?
ವಾಹನ ಗೇಟಿನ ಬಳಿ ನಿಂತಿತು. ಅದೊಂದು ಆಟೋ. ಅದರಿಂದ ಇಳಿದಾತ ಡ್ರೈವರಿಗೆ ಹಣಕೊಟ್ಟು ಮನೆಯತ್ತ ಬರತೊಡಗಿದ. ಯಾರಿರಬಹುದು? ಅವಳು ವರಾಂಡಾದ ಲೈಟು ಹಾಕಿದಳು. ಓ, ಭೀಮಯ್ಯ ಬರುತ್ತಿದ್ದಾನೆ! ಅವಳ ಮನಸ್ಸು ಗರಿಗೆದರಿ ಹಾರಿತು. ಬಾಗಿಲು ತೆಗೆದು ಒಂದೇ ಹಾರಿನಲ್ಲಿ ಅಂಗಳಕ್ಕೆ ಬಂದಳು. ಅಪರಿಚಿತನನ್ನು ಕಂಡು ಬೊಗಳಿದ ನಾಯಿಗಳನ್ನು ಗದರಿ ಸುಮ್ಮನಾಗಿಸಿದಳು.
ಒಂದು ಫೋನಾದ್ರೂ ಮಾಡಿ ಬರ್ಬಾದಿತ್ತೇನೋ ಭೀಮೂ ಎಂದು ಅವನ ಬೆನ್ನಿಗೊಂದು ಗುದ್ದಿದಳು. “ಮಳೆಗೆ ಕಾವೇರಿ ಕಟ್ಟಿಕೊಂಡಿದ್ದಾಳೆ. ರಾತ್ರೆ ದೋಣಿ ಬಿಡೋದಿಲ್ಲ ಎಂದು ಅಂಬಿಗ ಹೇಳಿದ. ಇನ್ನೇನು ಮಾಡೋದು. ನಿನ್ನ ನೆನಪಾಗಿ ಇಲ್ಲಿಗೆ ಬಂದುಬಿಟ್ಟೆ. ಮಲಕೊಳ್ಳೋಕೆ ಜಾಗ ಕೊಟ್ರೆ ಕತ್ತಲೆ ಕಳೆಯುತ್ತದೆ. ಹೇಗೆ, ಇಲ್ಲ ಅನ್ನೋದಿಲ್ವಲ್ಲಾ? ಗಿಣಿ ಮೂತಿ ಹೇಗಿದೆ?” ಎಂದು ಅವಳ ಮೂಗು ಹಿಂಡಿದ.
ಅವಳು ಮುಖ ಸೊಟ್ಟಗೆ ಮಾಡಿ ಅವನನ್ನು ಅಣಕಿಸಿದಾಗ ಮದ್ವೆಯಾಗಿ ಮೂರು ದಾಟಿದ್ರೂ ಬುದ್ಧಿ ಬದಲಾಗಿಲ್ಲ” ಎಂದು ಸುತ್ತ ಕಣ್ಣಾಡಿಸಿ “ಸೋಮಯ್ಯ ಎಲ್ಲೆ?” ಎಂದು ಕೇಳಿದ. ಒಳಕ್ಕೆ ಹೋಗಿ ಮಾತಾಡೋಣವಂತೆ ಎಂದು ಮುತ್ತಮ್ಮ ಗೇಟು ಹಾಕಿ ಮನೆಯೊಳಗೆ ಬಂದಳು. ಬಾಗಿಲಿನ ಬೋಲ್ಟು ಸಿಕ್ಕಿಸಿ ಅವನನ್ನು ಹಜಾರದಲ್ಲಿ ಕೂರಿಸಿ ಅಡುಗೆ ಮನೆಗೆ ನೆಗೆದಳು.
ಹಜಾರದಲ್ಲಿ ಕೂತ ಭೀಮಯ್ಯ ಟೀವಿ ಆನ್ ಮಾಡಿದ. ಚಿತ್ರಹಾರ್ ಬರ್ತಿತ್ತು. ಇಷ್ಟು ದೊಡ್ಡ ಮನೆಯಲ್ಲಿ ಅರಗಿಣಿಯಂತಹಾ ಮುತ್ತಮ್ಮ ಒಬ್ಬಳೇ ಇದ್ದಾಳೆ. ಸೋಮಯ್ಯ ಹಳೇ ಚಾಳಿಗಳನ್ನೆಲ್ಲಾ ಮುಂದುವರಿಸಿಕೊಂಡೇ ಬಂದಿದ್ದಾನೆ. ಅವಳಪ್ಪನ ಬೆಡಿಗೆ ಹೆದರಿ ಮುತ್ತಮ್ಮ ಸೋಮಯ್ಯನ ಹಾರಕ್ಕೆ ಕುತ್ತಿಗೆಯೊಡ್ಡಿದ್ದು. ಒಟ್ಟಿಗೇ ಆಡಿ ಬೆಳೆದ ತನಗೆ ಮುತ್ತಮ್ಮನನ್ನು ಕೊಡಲು ಅವಳಪ್ಪ ಒಪ್ಪಲೇಯಿಲ್ಲ. “ಆ ಭೀಮಯ್ಯನ ಅಪ್ಪ ಇದ್ದದ್ದನ್ನೆಲ್ಲಾ ಜುಗಾರಿಯಲ್ಲಿ ಕಳಕೊಂಡ. ಈಗ ಆ ಬಿಕನಾಸಿ ಭೀಮಯ್ಯ ನಮ್ಮ ಎಸ್ಟೇಟು ಮೇಲೆ ಕಣ್ಣಾಕಿದ್ದಾನೆ. ಅದಕ್ಕೆ ನೀನೊಂದು ನೆಪ. ಸಣ್ಣವರಿದ್ದಾಗ ಎಲ್ಲಾ ಸರಿಯಪ್ಪಾ, ಈಗ ನಿನ್ನ ಪ್ರಾಯ ಎಷ್ಟು ಗೊತ್ತುಂಟಾ? ಆ ಪರ್ದೇಸಿಗೆ ನಿನ್ನನ್ನು ಕೊಡುವ ಬದಲು ಕಡಿದು ಕಾವೇರಿಗೆ ಚೆಲ್ಲಿಯೇನು” ಎಂದು ಅವಳಪ್ಪ ಹೇಳುತ್ತಿದ್ದುದನ್ನು ಮುತ್ತಮ್ಮ ತನಗೆ ತಿಳಿಸಿದ್ದಳು.
ಭೀಮಯ್ಯ ಮಿಲಿಟರಿ ಸೇರಿದ ಮೇಲೂ ಅವಳಪ್ಪ ಬದಲಾಗಿರಲಿಲ್ಲ. ಸೇನೆ ಸೇರಲು ಹೊರಟವನು ಅವಳನ್ನು ನೋಡಲೆಂದು ಬಂದಾಗ ಅಪ್ಪ ಮನೆಯಲ್ಲಿರಲಿಲ್ಲ. ಅವನು ಅವಳ ಕೈಗಳನ್ನು ಎದೆಗೊತ್ತಿಕೊಂಡು ಕಣ್ಣೀರಾಗಿದ್ದ: “ನೋಡ್ತಾಯಿರು ಮುತ್ತೂ, ಒಂದು ದಿನ ನಿನ್ನ ಭೀಮು ಫೀಲ್ಡ್ ಮಾರ್ಷಲ್ ಆಗ್ತಾನೆ. ನನಗಾಗಿ ಕಾಯ್ತಿಯಾ?” ಅವಳು ಗೋಣು ಆಡಿಸಿದ್ದಳು. ಒಂದು ತಿಂಗಳು ಕಳೆದಿರಲಿಲ್ಲ. ಸೋಮಯ್ಯ ಹೆಣ್ಣು ನೋಡಲು ಬಂದು ಒಪ್ಪಿಗೆ ಸೂಚಿಸಿ ಹೋಗಿದ್ದ. ಅವನು ಹೋದ ಮೇಲೆ ಕಣ್ಣೀರು ಹಾಕುತ್ತಾ ಕೂತಿದ್ದ ಅವಳನ್ನು ಅಪ್ಪ ಬೆಡಿಯ ನಳಿಗೆಯಲ್ಲಿ ಸಂತೈಸಿದ್ದ. “ಇದರಲ್ಲಿ ಎರಡು ಗುಂಡುಗಳಿವೆ. ನೀನು ಈ ಮದುವೆಗೆ ಒಪ್ಪದಿದ್ದರೆ ಮೊದಲನೆಯದು ನಿನ್ನ ಎದೆಗೆ, ಉಳಿದದ್ದೊಂದು ನನ್ನ ಎದೆಗೆ. ಅವಳು ಹೂಂ ಅನ್ನಲಿಲ್ಲ. ಊಹುಂ ಅನ್ನಲಿಲ್ಲ. ಮದುವೆ ಭರ್ಜರಿಯಾಗಿ ನಡೆದೇ ಹೋಯಿತು.
ಮುತ್ತಮ್ಮ ಹಬೆಯಾಡುವ ಕಾಫಿ ತಂದು ಭೀಮಯ್ಯನಿಗೆ ಕೊಟ್ಟು ಕುಡಿ ಭೀಮು. ಊಟ ಸಿದ್ಧವಾಗಿದೆ. ಅವರು ಬೆಂಗಳೂರಿಗೆ ಹೋಗಿ ವಾರವಾಯ್ತು. ಅವರಿಗೆಂದು ಜೋಪಾನವಾಗಿರಿಸಿದ್ದು ಇಂದು ನಿನಗೆ ಸಿಗುತ್ತದೆ” ಎಂದಳು.
ಭೀಮಯ್ಯ ಕಾಫಿ ಹೀರುವಾಗ ಅವಳಿಗೆ ಮದುವೆಯ ದಿನ ನೆನಪಿಗೆ ಬಂತು. ಅಂದು ಕೊಡವ ಡ್ರೆಸ್ಸು, ರುಮಾಲು, ಪೀಚಕತ್ತಿಗಳಲ್ಲಿ ಸೋಮಯ್ಯ ಭವ್ಯವಾಗಿ ಕಂಡಿದ್ದ. ಸಾಲಾಗಿ ನಿಲ್ಲಿಸಿದ ಏಳು ಬಾಳೆಗಿಡಗಳನ್ನು ಕಚ್‍ಕಚ್ ಎಂದು ಒಂದೇಟಿಗೆ ಕತ್ತರಿಸುತ್ತಾ ತನ್ನ ಪರಾಕ್ರಮ ಪ್ರದರ್ಶಿಸಿದ್ದ. “ಭರ್ಜರಿಯಾಗಿದ್ದಾನೆ ನಿನ್ನ ಗಂಡ. ನಿನಗೆ ದಿನಾ ಹಬ್ಬ” ಎಂದು ಗೆಳತಿಯರು ಕಿವಿಯಲ್ಲಿ ಪಿಸುಗುಟ್ಟಿ ಕೆನ್ನೆ ಕೆಂಪೇರಿಸಿದ್ದರು. ಮತ್ತಿನ ಎರಡು ವಾರ ಪ್ರೀತಿಯ ಕಾವೇರಿಯಲ್ಲಿ ಸೋಮಯ್ಯ ಅವಳದ್ದೆಲ್ಲವನ್ನೂ ಸೂರೆಗೊಂಡಿದ್ದ. ಮೂರನೆಯ ವಾರ ಇದ್ದಕ್ಕಿದ್ದಂತೆ ಬೆಂಗಳೂರಿಗೆ ಹೋದವ ಒಂದು ವಾರವಾದರೂ ಬಾರದಿರುವಾಗ ರಾತ್ರೆ ಮಲಗಲು ಬರುವ ಮುದುಕಿ ಅವನ ಚಾಳಿಗಳನ್ನೆಲ್ಲಾ ಹೇಳಿದ್ದಳು. ಸಿಕ್ಕಾಗ ನೀನೂ ಅನುಭವಿಸು ಎಂದು ಬೋಧಿಸಿದ್ದಳು. ನಮ್ಮ ದೇವದೇವತೆಗಳೂ ಮಾಡಿದ್ದು ಅದನ್ನೇ ಎಂದು ಧೈರ್ಯ ತುಂಬಿದ್ದಳು.
ಬೆಂಗಳೂರಿನಿಂದ ಬಂದ ಸೋಮಯ್ಯ ಸುಸ್ತಾಗಿದ್ದ. ಮೂರು ದಿನ ಅವಳ ಮೈ ಮುಟ್ಟಿರಲಿಲ್ಲ. ಮತ್ತೆ ಮುಟ್ಟಿದಾಗ ಅವಳು ಕಲ್ಲಾಗಿದ್ದಳು. ಮತ್ತೆಂದೂ ಅವಳು ಅರಳಲಿಲ್ಲ. ಅವನು ಆಕ್ರಮಿಸಿ ಏದುಬ್ಬಸಬಿಟ್ಟು, ಬಹಳ ಬೇಗ ವಿಸರ್ಜಿಸಿ ಎದ್ದು ಬಿಡುತ್ತಿದ್ದ. ಅವಳು ಕಲ್ಲಾಗಿ ಬಿದ್ದುಕೊಳ್ಳುತ್ತಿದ್ದಳು. ಈ ಶಾಪ ಎಂದಿಗೆ ವಿಮೋಚನೆಯೋ ಎಂದು ಕೊರಗುತ್ತಿದ್ದಳು. ಸೋಮಯ್ಯ ತಿಂಗಳಿಗೊಮ್ಮೆ ಬೆಂಗಳೂರಿಗೆ ಹೋಗಿ ವಾರ, ಹತ್ತುದಿನ ಇದ್ದು ಬರುತ್ತಿದ್ದ. ಅವಳು ಕತ್ತಲನ್ನು ದಿಟ್ಟಿಸುತ್ತಾ ಬೆಳಕಿಗಾಗಿ ಕಾಯುತ್ತಿದ್ದಳು. ಸೂರ್ಯರಶ್ಮಿ ಸೋಂಕದಲ್ಲಿನ ಕತ್ತಲನ್ನು ಹೋಗಲಾಡಿಸುವವನಿಗಾಗಿ ಹಾರೈಸುತ್ತಿದ್ದಳು.
ಭೀಮಯ್ಯ ಅವಳನ್ನು ನೋಡುತ್ತಾ ಕಾಫಿ ಹೀರಿ, ವಿಲ್ಸ್ ಹಚ್ಚಿ ಹೊಗೆಯುಗುಳಿದ. ಏನು ಮಾತಾಡಿದರೂ ಕೊನೆಗೆ ಬಾಲ್ಯದ ನೆನಪಾಗುತ್ತದೆ. ತನಗಾಗಿ ಕಾಯಲಾಗದ ಮುತ್ತಮ್ಮನ ಅಸಹಾಯಕತೆಯ ಪ್ರಸ್ತಾಪವಾಗುತ್ತದೆ. ಅಲ್ಲಿ ತಾನು ನಿಯಂತ್ರಣ ರೇಖೆಯಲ್ಲಿ ಕಾಯುವಾಗ ತನ್ನ ಮನೋಬಲ ಕುಗ್ಗದಂತೆ ಕಾಯುತ್ತಿದ್ದುದು ಮುತ್ತಮ್ಮನ ಮುಖ. ಅವಳೊಡನೆ ಆಡಿ ಕಳೆದ ದಿನಗಳ ನೆನಪು. ಕಲ್ಲಾಗಿ ಕಾದವಳು ಇಲ್ಲೀಗ ಅವಳು ತನ್ನೆದುರು ಕೂತಿದ್ದಾಳೆ. ಚಂದನದ ಗೊಂಬೆ. ಮಾತು ಒಂದೂ ಹೊರಬರುತ್ತಿಲ್ಲ. ಅವನು ಎದ್ದು ಬಾತುರೂಮಿಗೆ ಹೋಗಿ ಬಂದ.
ಅವಳು ಸ್ನಾನ ಮಾಡೋ ಭೀಮು. ಟವೆಲ್ಲು ತಂದ್ಕೂಡ್ತೀನಿ ಎಂದು ಬೆಡ್ರೂಮಿಗೆ ಹೋಗಿ ವಾರ್‍ಡ್‍ರೋಬು ತೆರೆದಳು. ಅವಳು ಹಿಂದಕ್ಕೆ ತಿರುಗಿದಾಗ ಭೀಮಯ್ಯ ನಿಂತಿದ್ದ. ಅವಳ ಗುಂಡಿಗೆ ಅದುರಿತು. ಹೇಗೋ ಸಾವರಿಸಿಕೊಂಡು ಬಾತ್‌ಟವೆಲ್ಲು ಅವನ ಕೈಗಿತ್ತಳು. ಅವನು ಅವಳ ಕೈಯನ್ನು ಹಿಡಿದುಕೊಂಡ. ಬಾತು ಟವೆಲ್ಲನ್ನು ಮಂಚಕ್ಕೆ ಬಿಸುಟು ಅವಳ ಕೈಗಳನ್ನು ತನ್ನ ಕೆನ್ನೆಯ ಮೇಲಿರಿಸಿಕೊಂಡ. ಅವಳಿಗೆ ತಾನು ಹಗುರವಾಗಿ ಗಾಳಿಯಲ್ಲಿ ತೇಲುತ್ತಿದ್ದೇನೆ ಎನಿಸಿತು.
ಅವನು ಅವಳ ಕೈ ಬೆರಳುಗಳನ್ನು ಸವರಿದ. ಗುಳ್ಳೆಗಳಿರುವುದನ್ನು ನೋಡಿ ಇದೇನು ಮಾಡಿಕೊಂಡಿದ್ದೀಯಾ ಮುತ್ತೂ? ಅಡುಗೆ ಮಾಡುವಾಗಲೂ ನನ್ನದೇ ಯೋಚನೆಯಾ? ಎಂದು ಬೆರಳುಗಳನ್ನು ತುಟಿಯತ್ತ ತಂದು ಮೃದುವಾಗಿ ಚುಂಬಿಸಿದ. ಅವಳು ಕೈ ಬಿಡಿಸಿ ಕೊಂಡು ಇದೆಲ್ಲಾ ಚೆನ್ನಾಗಿರಲ್ಲ ಭೀಮೂ. ಅವ್ರು ಬರ್ಲಿ ಈ ಮಳೆಗಾಲ ಮುಗ್ದ ಕೂಡ್ಲೇ ನಿಂಗೆ ಒಬ್ಳು ಚಾಯಕಾರ್ತಿ ಮೂಡೀನ ಹುಡುಕಿ ಗಂಟು ಹಾಕಿ ಬಿಡ್ತೀವಿ” ಎಂದಳು.
ಅವನು ಅವಳ ಮುಖವನ್ನು ತನ್ನ ಬೊಗಸೆಗೆ ತೆಗೆದುಕೊಂಡು ಕಣ್ಣಲ್ಲಿ ಕಣ್ಣಿಟ್ಟ. ಅಂಥಾ ಮದ್ವೇ ನಂಗಿಷ್ಟವಿಲ್ಲ ಮುತ್ತೂ. ಹಿರಿಯರೆಲ್ಲಾ ಒಪ್ಪಿ ಮಾಡಿದ ಮದ್ವೇಲಿ ನೀನ್ಯಾವ ಸುಖ ಪಟ್ಟೆ? ನಂಗೆ ಮುತ್ತು ಬಿಟ್ರೆ ಬೇರೆ ಪ್ರಪಂಚ ಇಲ್ಲ. ನನ್ನ ನಿನ್ನ ಮದ್ವೆ ಎಳವೆಯಲ್ಲಿ ಎಷ್ಟು ಸಲ ನಡೆದು ಹೋಗಿಲ್ಲ? ನೀನು ನನಗೆ ಸೇರಬೇಕಾದವಳು. ನನ್ನವಳು”
ಅವಳು ಮುಖವನ್ನು ಬಲಕ್ಕೆ ತಿರುಗಿಸಿ ಕಂಪಿಸುತ್ತಾ ಹೇಳಿದಳು: “ಬೇಡ ಭೀಮೂ. ಕಾಲಚಕ್ರವನ್ನು ಹಿಂದಕ್ಕೆ ತರಲಾಗುವುದಿಲ್ಲ. ನನ್ನ ಹಣೆಬರಹ ಹೀಗಿದೆ, ಅನುಭವಿಸ್ತೇನೆ. ಸುಮ್ಮೆ ಹಿಂದಿನದ್ದೆಲ್ಲಾ ನೆನಪು ಮಾಡಿ ನೋಯಿಸ್ಬೇಡ.”
ಅವಳು ನುಣುಚಿಕೊಳ್ಳಲು ಯತಿನಸುವಾಗ ಅವನು ಅವಳನ್ನು ಬಾಚಿ ಬಲವಾಗಿ ತಬ್ಬಿಕೊಂಡು ನಡುಗುವ ಸ್ವರದಲ್ಲಿ ಪಿಸುಗುಟ್ಟಿದ. ಅಲ್ಲಿ ಅವ್ನು ಸೋಮಯ್ಯ ಎಸ್ಟೇಟಿನ ಗಳಿಕೆಯನ್ನು ಯಾರ್ಯಾರದೋ ಸೆರಗಿಗೆ ಸುರಿಯುತ್ತಿದ್ದಾನೆ. ನೀನು ಕಲ್ಲಾಗಿ ಬೆಳಕು ಬರಲೆಂದು ಕಾಯುತ್ತಿರು. ಇದೊಂದು ರಾತ್ರಿ ನಿನ್ನ ಕತ್ತಲಿಗೆ ಬೆಳಕಾಗುತ್ತೇನೆ. ಒಂದೇ ಒಂದು ರಾತ್ರಿ…..?”
ಅವಳ ಉಸಿರು ಭಾರವಾಗಿ ಮಾತಾಡಲಾಗಲಿಲ್ಲ. ಮೌನವನ್ನು ಸಮ್ಮತಿಯೆಂದು ಕೊಂಡು ಅವನು ಅವಳ ತುಟಿಯನ್ನು ಮೃದುವಾಗಿ ಹೀರಿದ. “ಬೇಡಾ ಬೇಡಾ” ಎಂದು ಉಸಿರಿದರೂ ಅವಳ ನಳಿದೋಳುಗಳು ಅವನನ್ನು ಬಳಸಿದವು. ಸದಾ ಕಾಡುವ ಒಂಟಿತನದ ಕಲ್ಲ ಕತ್ತಲ ಬದುಕಲ್ಲಿ ಸ್ವಲ್ಪ ಬೆಳಕು ಗೋಚರಿಸುವಾಗ ಅವನ ಎದೆಯಲ್ಲಿ ಬಿಸಿನೀರ ಹನಿಗಳು ಅವಳ ಕಣ್ಣಿಂದ ಉರುಳಿದವು.
ಅವನು ಅವಳನ್ನು ಅನಾಮತ್ತಾಗಿ ಎತ್ತಿ ಹಾಸಿಗೆಯ ಮೇಲೆ ಮಲಗಿಸಿ ಅಡೆತಡೆಗಳನ್ನು ಹೋಗಲಾಡಿಸಿ ಉದ್ದಕ್ಕೆ ಆಕ್ರಮಿಸಿಕೊಂಡ. ತೋರಿಕೆಗೂ ಬೇಡವೆನ್ನಲು ಅವಳಿಂದಾಗಲಿಲ್ಲ. ಅವನು ಕಣ್ಣುಗಳಲ್ಲಿ ತುಟಿಯಿಟ್ಟು ಕಣ್ಣೀರನ್ನು ಹೀರಿದ. ತುಟಿ, ಕೆನ್ನೆ, ಹಣೆ, ಬೈತಲೆ, ವಕ್ಷಸ್ಥಳ ಎಂದೆಲ್ಲಾ ಅವನ ತುಟಿಗಳು ಓಡಾಡಿದವು. ಅವಳ ಜಡೆಯನ್ನು ಬಿಚ್ಚಿ ಕೂದಲಲ್ಲಿ ಮುಖ ಹುದುಗಿಸಿಕೊಂಡ. ಅವನು ಅವಳ ಕತ್ತಲಿಗೆ ಬೆಳಕಾಗುತ್ತಾ ಹೋದಂತೆ ಅವಳು ಅರಳುತ್ತಾ ಅರಳುತ್ತಾ ಹೂವಾದಳು. ಪ್ರಕೃತಿ ಆರಾಧನೆಯ ಪರಮ ರಹಸ್ಯ ಎಂದಿಗೂ ಹೊರಬರಕೂಡದೆಂಬಂತೆ ಮಳೆ ದಟೈಸಿ ಹೊಡೆಯತೊಡಗಿತು.
ಕತ್ತಲು ತುಂಬಿದ್ದ ತನ್ನ ಪ್ರತಿಯೊಂದು ಅಂಗದಲ್ಲಿ ಸುಖಾನುಭವದ ಬೆಳಕು ಸರಿಗಮ ನುಡಿಸುತ್ತಿರುವಂತಾಗಿ ಅವಳಿಗೆ ಸಮಯ ಕಳೆದುದರ ಅರಿವೇ ಆಗಲಿಲ್ಲ. ಈ ದೇಹವನ್ನು ಭೀಮಯ್ಯ ಅದು ಹೇಗೆ ಶ್ರುತಿಗೊಳಿಸಿ ಸಪ್ತಸ್ವರವನ್ನು ಹೊರಡಿಸುತ್ತಿದ್ದಾನೆ? ಸೋಮಯ್ಯನಿಗೆ ಒಂದು ಸಲವೂ ಇಂತಹ ಅನುಭವವನ್ನು ಏಕೆ ಕೊಡಲಾಗಿರಲಿಲ್ಲ? ತಾನು ತಪ್ಪು ಮಾಡುತ್ತಿದ್ದೇನೆಯೆ?ತಪ್ಪಾಗಿದ್ದರೆ ತನ್ನ ಮನಸ್ಸೇಕೆ ಇಷ್ಟೊಂದು ಉಲ್ಲಸಿತವಾಗಿದೆ? ಈ ದೇಹ ಹಿಂದೆಂದೂ ಇಲ್ಲದ್ದು ಹೀಗೆ ಅರಳುತ್ತಾ ಹೋಗುತ್ತಿದೆ? ತಾನೇನಾದರೂ ಕಳಕೊಳ್ಳುತ್ತಿದ್ದೇನೆಯೆ? ಇಲ್ಲ, ಪಡೆದುಕೊಳ್ಳುತ್ತಿದ್ದೇನೆ. ತನಗಾಗಿ ಹುಚ್ಚನಂತಾಗಿರುವ ಗಂಡಿನಿಂದ ಅಪೂರ್ವ ಅನುಭೂತಿಯನ್ನು. ಬಂಡೆಯಾಗಿ ಕತ್ತಲಲ್ಲಿದ್ದವಳ ಬರಡು ಬಾಳಿಗೆ ಬೆಳಕೆಂಬ ಚೈತನ್ಯವನ್ನು. ತನಗಾಗಿ ಏನನ್ನು ಬೇಕಾದರೂ ಮಾಡಲು ಸಿದ್ಧನಿರುವ ಈ ಭೀಮಯ್ಯನದು ಪ್ರೀತಿಯ ಹುಚ್ಚು ಹೊಳೆ. ಇವನು ಇಡಿಯಾಗಿ ದ್ರವಿಸಿ ತನ್ನೊಳಗಿನ ಕತ್ತಲೆಯ ಉಬ್ಬುತಗ್ಗುಗಳಲ್ಲಿ ಬೆಳಕು ಮೂಡಿಸಬೇಕು. ಇಂತಹದ್ದು ಇದೇ ಮೊದಲು. ಇದೇ ಕೊನೆಯದ್ದೂ ಆಗಬಹುದು. ಈ ಕ್ಷಣಗಳು ಶಿಲೆಗೆ ಜೀವ ತುಂಬುವ ಅಮೃತ ಗಳಿಗೆಗಳು. ಇದು ತಾನು ಸಾಯುವವರೆಗೂ ನೆನೆಪಲ್ಲಿರಬೇಕು. ಅವಳು ಅವನಿಗೆ ಬೇಕಾದಂತೆ ಒಡ್ಡಿಕೊಳ್ಳುತ್ತಾ ಮನಃಪೂರ್ವಕವಾಗಿ ಅರ್ಪಿಸಿಕೊಳ್ಳುತ್ತಾ ಹಿತವಾದ ನಾದ ಹೊರಡಿಸುತ್ತಾ ಅಪೂರ್ವ ಅನುಭೂತಿಯಲ್ಲಿ ತನ್ನ ಶಾಪವನ್ನು ಕಳಕೊಂಡಳು.
ಮಳೆ ನಿಂತಿತು. ಶಿಲೆಗೆ ಜೀವ ಮೂಡಿತು. ಅವಳು ನಿಧಾನವಾಗಿ ಅವನಿಂದ ಬಿಡಿಸಿ ಕೊಂಡು ಎದ್ದು ಸೀರೆಯುಟ್ಟು, ತುರುಬು ಕಟ್ಟಿ ಬಚ್ಚಲಿಗೆ ಹೋಗಿ ಬಂದಳು. ಇಂಗ್ಲೀಷ್ ನ್ಯೂಸು ಬರುತ್ತಿದ್ದ ಟಿ.ವಿ.ಯನ್ನು ಆಫ್ ಮಾಡಿ, ಡೈನಿಂಗ್ ಹಾಲಲ್ಲಿ ಊಟ ಸಿದ್ಧಪಡಿಸಿ ಭೀಮಯ್ಯನನ್ನು ಕರೆದಳು. ಅವನು ಬೆಡ್‌ರೂಂ ದೀಪ ಹಾಕಿ, ಸುಕ್ಕಾಗಿದ್ದ ಬೆಡ್ಡನ್ನು ಸರಿಪಡಿಸಿ ಲುಂಗಿಯುಟ್ಟು ಬಾತ್ರೂಮಿಗೆ ಹೋಗಿ ಕೈಕಾಲು ತೊಳೆದುಕೊಂಡ. ಪ್ಯಾಂಟು ಶರ್ಟುಗಳನ್ನು ಹ್ಯಾಂಗರಿಗೆ ತೂಗು ಹಾಕಿ ಬ್ಯಾಗನ್ನು ಹಜಾರದ ಮೂಲೆಯಲ್ಲಿರಿಸಿ ಡೈನಿಂಗ್ ಹಾಲಿಗೆ ಬಂದ. ಮಾತಿಲ್ಲದೆ ಊಟ ಮುಗಿಯಿತು. ಅವಳು ಖಾಲಿ ಪಾತ್ರೆಗಳನ್ನು ಬಚ್ಚಲಲ್ಲಿಟ್ಟು ಟೇಬಲ್ಲು ಕ್ಲೀನು ಮಾಡುವಾಗ ಅವನು ಸಿಗರೇಟು ಹಚ್ಚಿದ.
ಆಗ ಕೇಳಿಸಿತು, ಮೊದಲು ಅಸ್ಪಷ್ಟವಾಗಿ ಆಮೇಲೆ ಸ್ಪಷ್ಟವಾಗಿ ಚವರ್‌ಲೇಟು ಕಾರಿನ ಹಾರನ್ನು. ತೋಟದ ಮನೆಯಲ್ಲಿದ್ದ ಗೂರ್ಖಾ ಓಡಿಕೊಂಡು ಬಂದು ಗೇಟು ತೆರೆದ. ಕಾರಿನಿಂದಿಳಿದು ಸೋಮಯ್ಯ ಬರುತ್ತಿರುವಂತೆ ಭೀಮಯ್ಯ ಬಾಗಿಲು ತೆರೆದು ಕೈ ಕುಲುಕಿ “ಸ್ವಲ್ಪ ತಡಮಾಡಿ ಬಿಟ್ಟೆ ಸೋಮಣ್ಣ” ಎಂದು ಉದ್ಗರಿಸಿದ. ಸೋಮಯ್ಯ ಹುಬ್ಬೇರಿಸಿದಾಗ ಆಗಲೇ ಬರುತ್ತಿದ್ದರೆ ನಿನ್ನ ಪಾಲಿದ್ದು ನಿನಗೇ ಸಿಗುತ್ತಿತ್ತು” ಎಂದ. ಸೋಮಯ್ಯ “ಅಷ್ಟೇನಾ? ನಾನು ಅಲ್ಲೇ ಗಡದ್ದಾಗಿ ಉಂಡೇ ಹೊರಟವನು. ಹಸಿವೆಯಾದಾಗ ಸಿಕ್ಕಲ್ಲಿ ಉಣ್ಬೇಕಪ್ಪ” ಎಂದು ಭೀಮಯ್ಯನ ಹೆಗಲಿಗೆ ಒಂದೇಟು ಹಾಕಿದ. ಮುತ್ತಮ್ಮ ಸಂತೃಪ್ತಿಯ ಉಸಿರನ್ನು ಹೊರಚೆಲ್ಲಿದಳು.
*****
೧೯೯೬