ಹೆಣ್ಣಿನ ಭಿನ್ನತೆ – ತಾಯ್ತನ

ಹೆಣ್ಣಿನ ಭಿನ್ನತೆ – ತಾಯ್ತನ

ಅದು ರವಿವಾರ. ಹಾಗಾಗಿ ಸಂತೆ ದಿನ. ಸಂತೆಯಲ್ಲಿ ತರಕಾರಿ ಕೊಳ್ಳುವ ಸಲುವಾಗಿ ಹೊರಟಾಗ ತರಕಾರಿ ಮಂಡಿಯ ಹೊರ ಪ್ರವೇಶದ್ವಾರದಲ್ಲೇ ಆ ಇಬ್ಬರು ದಂಪತಿಗಳು ಹುಣಸೇ ಹಣ್ಣು ಇಟ್ಟು ಮಾರುತ್ತಿದ್ದರು. ತಾಯಿಯ ತೊಡೆಯೇರಿದ ಕಂದನನ್ನು ಸಂಭಾಳಿಸುತ್ತಾ ಆ ಮಹಾತಾಯಿ ಹುಣಸೇ ಹಣ್ಣು ತೂಗಿ ಕೊಡುತ್ತಿದ್ದರೆ, ತಂದೆ ಗಿರಾಕಿಗಳ ಕಡೆ ಗಮನವಿಟ್ಟು ಹಣಪಡೆದು ಜೇಬಿಗಿಳಿಸುತ್ತಿದ್ದ. ಮಗುವಿನ ಕಡೆ ತೂಕದ ಕಡೆ ಸಮ ಪ್ರಮಾಣದ ಗಮನದೊಂದಿಗೆ ಎರಡನ್ನು ನಿಭಾಯಿಸುತ್ತಿದ್ದ ಆಕೆ ನನಗಾಗ ಆತನಿಗಿಂತ ಸಮರ್‍ಥಳಾಗಿ ಕಂಡಿದ್ದಳು.

ಹೌದು. ಏಕಕಾಲಕ್ಕೆ ಅಪಕರ್‍ಷಣೆಗೆ ಒಳಗಾಗದೇ ದ್ವಿಮುಖ ಕಾರ್ಯಗಳನ್ನು ಪುರುಷನಿಗಿಂತ ಸ್ತ್ರೀ ಸಮರ್ಥವಾಗಿ ಮಾಡಬಲ್ಲಳು. ಆದರೆ ಸಾಮಾಜಿಕ ಆರ್ಥಿಕ ಹೊಣೆಗಾರಿಕೆಯ ವಿಷಯದಲ್ಲಿ ಸ್ತ್ರೀಯನ್ನು ದೂರವಿಟ್ಟು ಅಸಮರ್ಥತೆಯ ಪಟ್ಟ ಕಟ್ಟಿದ ಪುರುಷನಿಗೆ ದೃಷ್ಟಾಂತದಂತಿದ್ದ ಆ ತಂದೆ. ಆಕೆಯಾದರೋ ತನ್ನ ಕಂದನನ್ನ ಮುದ್ದಿಸುತ್ತಲೇ ಸಂತಸ ಪಡುತ್ತಲೇ ಆ ಇನ್ನೊಂದು ಕೆಲಸವನ್ನು ಮಾಡುತ್ತಿದ್ದಳು. ತಾಯ್ತನ ತಂದುಕೊಟ್ಟ ಸಬಲತೆ ಅದು ಆಗಿರಬಹುದು.

ಹಾಗಾಗೆ ಸ್ತ್ರೀತ್ವದ ತಾಯಿಬೇರು ತಾಯ್ತನ. ಅದಕ್ಕೆ ಹಾತೊರೆಯದ ಹೆಣ್ಣು ಅಪರೂಪದಲ್ಲಿ ಅಪರೂಪ. ಹೆಣ್ಣು ಮಗು ತಾನು ಕೂಸಿರುವಾಗಲೇ ತನಗೊಂದು ಕೂಸುಮರಿಯ ಕೈಯಲ್ಲಿ ಲಾಲಿಸುವ ಪಾಲಿಸುವ ದೃಶ್ಯ ಸಾಮಾನ್ಯ. ಹಾಗಾಗಿ ಹೆಣ್ಣಿನ ಪಕ್ವತೆ ಆಕೆ ತಾಯಿಯಾದಾಗಲೇ ಪರಿಪೂರ್ಣಗೊಳ್ಳುವುದು ಎಂಬ ಮಾತು ಅಕ್ಷರಶಃ ಸತ್ಯ.. ಸ್ತ್ರೀ ಬದುಕಿನ ಅತಿದೊಡ್ಡ ತಿರುವು ಅದು. ಅದಕ್ಕಾಗಿ ಹಂಬಲಿಸುವ ಪಡೆದಾಗ ಸ್ವರ್ಗದ ಬದುಕಿನ ಸುಖವನ್ನು ಮಗುವಿನ ಲಾಲನೆ ಪಾಲನೆಯಲ್ಲಿ ಕಾಣುವ ಆ ಸುಖ ತಾಯಿಗೆ ಹೆಚ್ಚು. ಅದವಳ ಆದ್ಯತೆಯೂ ಕೂಡ. ಮಗುವಾಗುತ್ತಲೇ ಸಹಜವಾಗಿ ಪತಿಯಿಂದ ಸ್ವಲ್ಪ ಪ್ರಮಾಣದಲ್ಲಿ ಹೆಣ್ಣು ವಿಮುಖಳಾಗುತ್ತಾಳೆ. ಇದು ಕೆಲವೊಮ್ಮೆ ಗಂಡನಾದವನಿಗೆ ಕಿರಿಕಿರಿಯಾಗಲೂಬಹುದು. ತನ್ನ ಬಗ್ಗೆ ಕಾಳಜಿ ಕಡಿಮೆಯಾಯಿತೆಂದು ಮುನಿಸು ತೋರಬಹುದು. ಆದರದು ಅನಿವಾರ್‍ಯ ಕೂಡ ಎಂಬ ಪ್ರಜ್ಞೆ ಇದ್ದಾತ ಅರಿತು ಬಾಳುವ. ಗಂಡ ಒಳ್ಳೆಯವನಾದರೆ ಆಕೆಯ ಬದುಕಿನಲ್ಲಿ ದೊಡ್ಡ ಗಂಡಾಂತರ ಕಳೆದಂತೆ. ಆ ಪ್ರೀತಿಯ ಅಲೆಯಲ್ಲಿ ಆಕೆ ಕೊಚ್ಚಿಹೋಗಬಯಸುತ್ತಾಳೆ. ಪತಿ ಮಕ್ಕಳೊಂದಿಗೆ ಸಂಸಾರವೆಂಬ ಸಾಗರದಲ್ಲಿ ಬಂದ ಅಡೆತಡೆಗಳ ನಿಭಾಯಿಸುವ ತಾಕತ್ತು ಆಕೆಗಿದೆ. ಸ್ತ್ರೀ ಎಂದಿಗೂ ಕುಟುಂಬದ ಸಹಕಾರವಿದ್ದಲ್ಲಿ ಬದುಕಿನಿಂದ ಪಲಾಯನ ಮಾಡಲಾರಳು. ಕುಟುಂಬವನ್ನು ಕಡೆಗಣಿಸಲಾರಳು. ಆಕೆಯಲ್ಲೊಂದು ಅಪೂರ್ವವಾದ ಹೃದಯವಿದೆ.

ದಲಿತ ಬಂಡಾಯ ಸಾಹಿತ್ಯದಲ್ಲಿ ಗುರುತಿಸಿಕೊಂಡ ಮಹಿಳಾ ಸಾಹಿತಿ ಗೀತಾ ನಾಗಭೂಷಣ ಅವರದೊಂದು ಕಥೆ ಅವ್ವ. ಹೆತ್ತಮ್ಮನ ಅಸಹಾಯಕತೆಯನ್ನು ಕರಳು ಕಿತ್ತು ಬರುವಂತೆ ನಿರೂಪಿಸಿದ ಕಣ್ಣೀರಿನ ಕಥೆ. ಒಮ್ಮೆ ಓದಿದರೆ ಸಾಲದೆಂಬಂತೆ ಹಲವು ಸಲ ಓದಿಸಿಕೊಂಡ ಕಥೆ. ನಿಜಕ್ಕೂ ತಾಯಿ ಎಂದರೆ ಹೇಗಿರುತ್ತಾಳೆ, ತಾಯ್ತನ ಎಂದರೇನು? ಆಕೆ ಮಗುವಿಗಾಗಿ ಎಂತಹ ತ್ಯಾಗಕ್ಕೆಲ್ಲಾ ಸಿದ್ಧ ಎಂಬುದನ್ನು ಕಣ್ಣಿಗೆ ಕಟ್ಟುವಂತೆ ಹೇಳಿದ್ದಾರೆ. ಮೇಲ್ಜಾತಿಯ ಪುರುಷ ಸಮುದಾಯದ ಭಂಡತನ, ಶೋಷಣೆ ಕಥೆಯುದ್ದಕ್ಕೂ ಬಿಚ್ಚಿಕೊಂಡಿದೆ. ಕಲಬುರ್ಗಿಯ ಬಿಸಿಲು ನಾಡಿನಲ್ಲಿ ಬಸವಳಿದ ಜೀವವೊಂದು ಜ್ವರದಿಂದ ನರಳುತ್ತಿದ್ದ ತನ್ನ ಕೂಸಿನ ಪ್ರಾಣ ಉಳಿಸಲು ಕಂಡಕಂಡವರ ಕಾಡಿ ಬೇಡುವ
ಕೊನೆಗೆ ಉಪಾಯವಿಲ್ಲದೇ ಆಗಂತುಕನೊಬ್ಬನಿಗೆ ಸೆರಗು ಹಾಸಿ, ಆತ ಕೊಟ್ಟ ಐವತ್ತು ರೂಪಾಯಿಗಳ ಪಡೆದು ಔಷಧಿ ಹಿಡಿದು ಬಂದರೆ ಆಕೆ ಬರುವ ಹೊತ್ತಿಗಾಗಲೇ ಇಹಲೋಕದ ಯಾತ್ರೆ ಮುಗಿಸಿದ ಕಂದ. ಆಕೆಯ ರೋದನ ಎಲ್ಲವೂ ಓದುಗನ ಕರುಣಾ ರಸವನ್ನು ಉದ್ದೀಪಿಸುವ ರೀತಿ ಅನನ್ಯ. ತಾಯಿಯನ್ನು ಯಾವ ದೃಷ್ಟಿಕೋನದಿಂದ ನೋಡಿದರೂ ಅಲ್ಲಿ ಕಾಣುವ ರೂಪ ಅನುಪಮ. ದವಾಖಾನೆ ದುಡ್ಡಿನ ದೆವ್ವದ ಖಾನೆಯಾಗಿರುವ ಚಿತ್ರವನ್ನೂ ಕಥೆ ತೆರೆದಿಟ್ಟಿದೆ. ಹಣವಿದ್ದರೆ ಎಲ್ಲವೂ, ಇಲ್ಲದಿದ್ದರೆ ಜೀವಕ್ಕೆ ಇಲ್ಲಿ ಬೆಲೆ ಇಲ್ಲ ಎಂಬ ಸಾಮಾಜಿಕ ಸಮಸ್ಯೆಯೂ ಕಥೆಯ ತಿರುಳು. ಅದೇನೇ ಇದ್ದರೂ ತಾಯಿಯ ಋಣ ತೀರಿಸಲಾಗದಂತಹುದು.

ತಾಯ್ತನಕ್ಕೆ ಬಡತನ ಸಿರಿತನದ ಬೇಧವಿಲ್ಲ. ಕುಲೀನ ಕುಟುಂಬದ ಮಹಿಳೆ ರಾಜವೈಭೋಗದಲ್ಲಿ ಮಕ್ಕಳನ್ನು ಬೆಳೆಸಿದರೂ ಬಡವಿ ಗುಡಿಸಲಿನಲ್ಲಿ ಗಂಜಿಯುಣಿಸಿ ಬೆಳೆಸಿದರೂ ಅವರಿಬ್ಬರ ಹೃದಯದೊಳಗಣ ಪ್ರೀತಿ ಪರಿಶುದ್ಧ ಮಾತೃಪ್ರೇಮ. ಹೆಣ್ಣು ಮಗುವಾಗಲೀ ಗಂಡೇ ಆಗಲಿ ಅಲ್ಲಿಯೂ ಆಕೆಯ ಪ್ರೀತಿ ಭಿನ್ನವಿಲ್ಲ. ಆದರೆ ಪುರುಷ ಗಂಡಿಗಾಗಿ ಹಾತೊರೆದು ಆಕೆಯ ಹಂಗಿಸುವಾಗ ಮಾತ್ರ ಆಕೆ ವ್ಯಗ್ರಳಾಗುತ್ತಾಳೆ. ಅಸಹಾಯಕಳಾಗಿ ತನ್ನಂತೆ ಹುಟ್ಟಿದ ಹೆಣ್ಣು ನಿಂದನೆ ಒಳಗಾಗುವುದ ತಪ್ಪಿಸಲು ಹೆಣ್ಣು ಬೇಡವೆಂದು ಹೇಳಬಹುದು. ಯಾಕೆಂದರೆ ಹಿಂದಿನಿಂದಲೂ ಆಕೆ ಸದಾ ಇನ್ನೊಬ್ಬರಿಗಾಗಿ ಬದುಕುವ ಹೊರೆಯನ್ನು ಹೊತ್ತವಳು ಎಂಬಂತೆ ಆಕೆಯನ್ನು ಬೆಳೆಸಲಾಗುತ್ತಿದೆ. ಆಕೆಯ ಬದುಕು ಆಕೆಯದು ಎಂಬ ಚಿಂತನೆಯ ಕಾಲವಿನ್ನು ಭಾರತದಲ್ಲಿ ಸಂಪೂರ್ಣವಾಗಿ ಬೇರು ಬಿಟ್ಟಿಲ್ಲ. ದೊಡ್ಡ ದೊಡ್ಡ ಶಹರಗಳಲ್ಲಿ ಸ್ತ್ರೀಯರು ಸ್ವಚ್ಛಂದತೆಯ ಆನಂದ ಪಡೆವ ಪರಿಸ್ಥಿತಿ ಇನ್ನು ಹಳ್ಳಿಗಳಲ್ಲಿ ಕಾಲೂರಿಲ್ಲ.

ತ್ಯಾಗ ಆಕೆಯ ಜನ್ಮತಃ ಬಂದ ಗುಣ ಅದರಿಂದಲೇ ಆಕೆ ಆತನಿಗಿಂತ ಮಿಗಿಲಾಗುತ್ತಾಳೆ. ತಾಯಿ ತ್ಯಾಗ ಗುಣವನ್ನು ಹಂಗಿಸುವ, ಜರೆಯುವ ಒಪ್ಪಿಕೊಳ್ಳದಿರುವ ಮಕ್ಕಳು ಅಪರೂಪ. ಕುಟುಂಬದ ಪ್ರೇಮ ವಾತ್ಸಲ್ಯದ ವಿಚಾರ ಬಂದ ಕೂಡಲೇ ಮೊದಲು ನೆನಪಾಗುವುದು ತಾಯಿ. ಹೆಣ್ಣಿನ ಮನೋಭೂಮಿಕೆ ವಿಚಿತ್ರ. ವಿವಿಧ ಸಂದರ್ಭಗಳಲ್ಲಿ ಪಾತ್ರಗಳಲ್ಲಿ ವಿಭಿನ್ನವಾಗಿ ಕಾಣಬರುವ ಆಕೆ ತಾಯಿಯಾಗಿ ಎಂದಿಗೂ ಕಠಿಣ ಮನಸ್ಕಳಾಗುವುದಿಲ್ಲ ಎಂಬುದು. ಇದಕ್ಕೆ ಕೆಲವೊಂದು ಅಪವಾದಗಳಿರಬಹುದು. ಅದು ಬೆರಳೆಣಿಕೆಯಷ್ಟೇ. ತಾಯ್ತನ ಪವಿತ್ರವಾದ ಮತ್ತು ಮಹತ್ವದ ಘಟ್ಟ.

ಅದಕ್ಕೆಂದೆ ಜಾನಪದ ಗರತಿ ತಾಯಿಯಾಗಲು ಬಯಸುವ ಅದಕ್ಕಾಗಿ ಶಿವನಲ್ಲಿ ಮೊರೆಯಿಡುವ ಈ ಹಾಡು ಬಹುಶಃ ಎಲ್ಲರ ಚಿರಪರಿಚಿತ
“ಬಾಲಕರಿಲ್ಲದ ಬಾಳಿದ್ಯಾತರ ಜನ್ಮ
ಬಾಡಿಗೆ ಎತ್ತು ದುಡಿದಂಗ್ಹ!
ಬಾಳೆಲೆಯ ಹಾಸ್ಯುಂಡು ಬೀಸಿ ಒಗೆದಂಗ್ಹ!!” ಮಕ್ಕಳಿಲ್ಲದೇ ಹೋದರೆ ಅವಳ ಬದುಕು ಬಾಡಿಗೆ ಎತ್ತಿನಂತೆ. ಬದುಕಿದ್ದು ಸತ್ತಂತೆ, ಅವಳತನ ಕಾಣುವುದೇ ಆಕೆ ತಾಯಿಯಾದಾಗ.

ಹಾಗಾಗಿ ಜಾನಪದ ಹೆಣ್ಣು ಮಕ್ಕಳನ್ನು ಕೊಡು ಶಿವನೇ ಎಂದೂ ಹಂಬಲಿಸುತ್ತಾಳೆ. ತಾಯ್ತನ ಅದೊಂದು ಹುದ್ದೆ. ಪಟ್ಟ. ಅದಕ್ಕಾಗಿ ಹಂಬಲಿಸದ, ಬಯಸದ, ಹೆಣ್ಣು ಇರುವಳೇ? ಒಳ್ಳೆಯ ಹೆಣ್ಣಾಗಿ, ಮಗಳಾಗಿ, ಹೆಂಡತಿಯಾಗಿ ಜೊತೆಗೆ ತಾಯಿಯಾದಾಗಲೇ ಪರಿಪೂರ್ಣತೆ.

ಹಾಗಾಗೇ “ತಾಯ್ತನ ಮತ್ತು ಹೆಣು” ಬಹು ವಿಸ್ತೃತ ಆಳ ಅಗಲ ಸಾರ ಸತ್ವವುಳ್ಳ ವಿಚಾರ. ತಾಯ್ತನ ಒಂದು ದೈಹಿಕ ಸಾಮರ್ಥ್ಯ ಮಾತ್ರವಾಗದೇ ಅದೊಂದು ವಿಶಿಷ್ಟ ಸಂವೇದನೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣಿಗೆ ಅಪೂರ್ವವಾದ ಅಂತಃಶಕ್ತಿಯನ್ನು ತಂದುಕೊಡುವ ಹಾಗೂ ಸಾಮಾಜಿಕ ನೆಲಗಟ್ಟಿನಲ್ಲಿ ಆಕೆಗೆ ಗೌರವದ ಗರಿಮೆಯನ್ನು ಮುಡಿಸುವ ಕ್ರಿಯೆ. ತಾಯ್ತನದ ಸಂಪೂರ್ಣ ಆನಂದ ಅಧಿಕಾರ ಕೀರ್ತಿ ಗೌರವ ಬಹುತೇಕ ಹೆಣ್ಣಿಗೆ ಸಲ್ಲುತ್ತದೆ. ಜಗತ್ತಿನ ಸ್ತ್ರೀ ಪುರುಷ ತಾರತಮ್ಯದ ನೆಲೆಯಲ್ಲಿ ವಿವೇಚಿಸಿದಾಗ ಕಾಣುವ ಒಂದೇ ಆಶಾವಾದದ ಸಂಗತಿ ಎಂದರೆ ಪುರುಷ ತನ್ನ ತಾಯಿಯನ್ನು ನೋಡುವ ರೀತಿ. ಆಕೆಯನ್ನು ಆರಾಧಿಸುವ, ಪ್ರೀತಿಸುವ, ಗೌರವಿಸುವ ನೆಲೆಯಲ್ಲಿ ತಾಯಿಯನ್ನು ಎತ್ತರದ ಸ್ಥಾನದಲ್ಲಿಟ್ಟು ನೋಡಬಯಸುತ್ತಾನೆ. ಅದು ತಾಯಿಗೆ ಮಾತ್ರ ಸಿಗುವ ಸ್ಥಾನ.

ಹಾಗೆಂದೆ ಸ್ತ್ರೀ ಜೀವನದ ಮಹತ್ವದ ಪಟ್ಟ ತಾಯ್ತನ. ಅದು ಸ್ತ್ರೀತ್ವದ ಪರಿಕಲ್ಪನೆಯ ಮೂಲತಂತು. ಗರ್ಭಧರಿಸುವ ಸಾಮರ್ಥ್ಯ ಹಾಗೂ ತನ್ನೊಳಗೆ ಇನ್ನೊಂದು ಜೀವವನ್ನು ಹೊತ್ತುಕೊಳ್ಳುವ ಸಾಕುವ ತಾಕತ್ತು ಇರುವುದು ಹೆಣ್ಣಿಗೆ ಮಾತ್ರ. ಸ್ತ್ರೀಗೆ ನಿಸರ್ಗದ ಅಪೂರ್ವವಾದ ಕೊಡುಗೆ. ಹಾಗೂ ಪುರುಷನಿಗೆ ನಿಸರ್ಗ ನಿರಾಕರಿಸಿದ ಕಾರ್ಯವು ಹೌದು. ಹಾಗಾಗಿ ನಿಸರ್ಗ ನಿಯಮದ ಪ್ರಕಾರವೂ ಸ್ತ್ರೀ ಶ್ರೇಷ್ಟಳು. ತನ್ನೊಳಗಿನ ಇನ್ನೊಂದು ಜೀವಕ್ಕೆ ಒಂದಿಷ್ಟು ತಿಂಗಳು ತನ್ನೆಲ್ಲಾ ರಕ್ತಮಾಂಸಗಳನ್ನೇ ಧಾರೆಯೆರೆದು ಪೋಷಿಸುವ ತಾಯಿ ಸರ್ವಾತಿಶ್ರೇಷ್ಟಳು ಎನಿಸಿಕೊಳ್ಳುತ್ತಾಳೆ.

ತಾಯ್ತನದ ವೇಳೆಯಲ್ಲಿ ಗರ್‍ಭವತಿಯಾದ ಹೆಣ್ಣು ಮಾನಸಿಕವಾಗಿಯೂ ದೈಹಿಕವಾಗಿ ಸಶಕ್ತವಾಗಿರಬೇಕು. ಆರೋಗ್ಯವಂತಳಾಗಿರಬೇಕು. ಇನ್ನೊಂದು ಜೀವದ ಹೊಣೆ ಹೊತ್ತ ಆಕೆಯನ್ನು ಪತಿಯಾದವ ಇಲ್ಲವೇ ಕುಟುಂಬಸ್ಥರು ಪ್ರೀತಿಯಿಂದ ಪೊರೆಯಬೇಕು. ಆದರೆ ಈ ಬದುಕು ಎಲ್ಲ ಹೆಣ್ಣುಗಳಿಗೆ ಸಾಧ್ಯವೇ ಎಂದು ಪರಾಂಬರಿಸಿದಾಗ ಮುಕ್ಕಾಲು ಪಾಲು ಗರ್ಭಿಣಿಯರು ಪ್ರಸವದವರೆಗೂ ದೈಹಿಕ ಶ್ರಮ ಮಾನಸಿಕ ಹಿಂಸೆಗಳಿಂದ ತತ್ತರಿಸುತ್ತಾರೆ. ಇದಕ್ಕೆ ಮನೆಯ ಜವಾಬ್ದಾರಿ, ಗಂಡನ ಕಿರುಕುಳ, ಮಕ್ಕಳ ದೇಖರೇಖಿ ಆರ್‍ಥಿಕ ಪರಿಸ್ಥಿತಿ ಸರಿ ಇಲ್ಲದಿರುವುದು ಇತ್ಯಾದಿ ಕಾರಣಗಳಿದ್ದು, ಕೆಲವೊಮ್ಮೆ ಗರ್ಭಿಣಿ ಮರಣ, ಬಾಣಂತಿ ಸಾವು ಸಾಮಾನ್ಯವಾಗಿ ಕಂಡು ಕೇಳುವ ಸಂಗತಿಯಾಗಿದೆ. ಮಗುವಿಗೆ ಜನ್ಮ ನೀಡುವ ಆಕಾಂಕ್ಷೆಯಲ್ಲಿ ತನ್ನ ದೈಹಿಕ ಕ್ಷಮತೆಯನ್ನು ಮರೆಯುವ ಹೆಣ್ಣು ಹಲವಾರು ಸಂದರ್ಭಗಳಲ್ಲಿ ಗಂಡನ ಇಲ್ಲವೇ ಆತನ ಕುಟುಂಬದವರ ಹಠಕ್ಕೆ ಬಲಿಯಾಗುತ್ತಿರುತ್ತಾಳೆ. ಇವೆಲ್ಲವೂ ಹೆಣ್ಣಿನ ನೋವಿನ ಕೇಳಿದವರ ಮೈ ಜುಮ್ಮೆನ್ನಿಸುವ ಕರುಣಾ ಜನಕ ಕಥೆಗಳು. ಇಂತಹ ಸಂಕಟಗಳು ಗಂಡಿಗಿದೆಯೇ? ಎಂದರೆ ಅದರ ಕಾಲು ಭಾಗ ಕಷ್ಟವೂ ಆತನಿಗಿಲ್ಲ.

ತಾಯ್ತನದ ಶ್ರೇಷ್ಠತೆ ಹೀಗಿದ್ದರೂ ಆಕೆ ಅಷ್ಟಕ್ಕೆ ಮಾತ್ರ ಸೀಮಿತವಲ್ಲ. ಹೆಣ್ಣೆಂದರೆ ಬರಿಯ ಗರ್‍ಭಾಶಯ. ಆಕೆ ಏನಿದ್ದರೂ ಮಕ್ಕಳ ಹೆರಲು ಅವರನ್ನು ನೋಡಿಕೊಳ್ಳಲು ಮಾತ್ರ ಯೋಗ್ಯಳೆಂಬ ಗಂಡಿನ ಏಕಮುಖ ನಿರ್‍ಧಾರ ಇಂದಿಗೆ ಹಾಸ್ಯಾಸ್ಪದ. ಆಕೆಗೆ ಸ್ವತಂತ್ರ ನಿರ್ಧಾರದ ಸಾಮರ್ಥ್ಯವಿಲ್ಲ. ಆ ಜ್ಞಾನ ಮತ್ತದರ ಹಕ್ಕು ಸಂಪೂರ್ಣ ಪುರುಷನ ಅಧಿಕಾರ ಎಂಬ ಮನೋಧರ್ಮ ತೀರಾ ಕ್ಷುಲಕ. ಸ್ತ್ರೀ ಸಾಮಾನ್ಯವಾಗಿ ಪುರುಷನೊಂದಿಗೆ ಸ್ಪರ್ಧೆಗಿಳಿಯುವುದಿಲ್ಲ. ಆಕೆಯ ಆಸಕ್ತಿಯು ಅದಲ್ಲ. ಆಕೆ ತನ್ನ ಕಾರ್ಯವನ್ನು ತನ್ನಿಂದಾಗುವಷ್ಟು ಪರಿಪೂರ್ಣತೆಯ ಪ್ರಮಾಣದಲ್ಲಿ ಮಾಡಬಯಸುತ್ತಾಳೆ. ತಾಯ್ತನದ ಆನಂದ ಅದರ ಜವಾಬ್ದಾರಿಗಳನ್ನು ಸಮರ್ಥವಾಗಿ ಶ್ರಧ್ಧೆಯಿಂದ ನಿಭಾಯಿಸುವ ಹೆಣ್ಣು ದಾಂಪತ್ಯದ ಸಾರವನ್ನು ಉಳಿಸಲಿಕ್ಕಾಗಿ ಹೊರದುಡಿಮೆಯಲ್ಲಿ ಬಸವಳಿದು ಬಂದರೂ ಹೊಂದಾಣಿಕೆ ಮಾಡಿಕೊಳ್ಳುತ್ತಾ ಸಾಗುತ್ತಿರುತ್ತಾರೆ.

ವಿದ್ಯಾವಂತ ಜಗತ್ತಿನಲ್ಲಿ ಇನ್ನೊಂದು ರೀತಿಯ ದೌರ್ಜನ್ಯ. ಪತಿ ಪತ್ನಿಯರಿಬ್ಬರೂ ಸುಶಿಕ್ಷಿತರಿದ್ದರೂ ಹಲವು ಕುಟುಂಬಗಳಲ್ಲಿ ಮನೆಯ ಮುಖ್ಯ ನಿರ್ಧಾರದಲ್ಲಿ ಹೆಣ್ಣಿಗೆ ಅವಕಾಶವಿಲ್ಲ. ಆಕೆ ದುಡಿಯುತ್ತಿದ್ದರೂ ಆಕೆಗೆ ತನ್ನ ನಿರ್ಧಾರಗಳನ್ನು ಪಾಲಿಸಲು ಅವಕಾಶ ನೀಡದೇ ಇರುವ ಹಲವು ಕುಟುಂಬಗಳು ಆಲ್ಲಿಯ ಸ್ತ್ರೀಯರ ದಾರುಣ ಬದುಕು ಇಂದಿಗೂ ಹಾಗೆ ಗೋಚರಿಸುತ್ತದೆ. ಇದಕ್ಕೆಲ್ಲ ಪುರುಷನ ಮೇಲುಗಾರಿಕೆ ಎಂಬುದು ಸ್ಪಷ್ಟ. ಅಲ್ಲದೇ ಪುರುಷ ಹೆಣ್ಣು ತನಗಿಂತ ಕೊಂಚ ಮೇಲೇರಿದರೂ ಒಳಗೊಳಗೆ ಉರಿದುಕೊಳ್ಳುತ್ತಾನೆ. ಆಕೆಯನ್ನು ಅವಮಾನಿಸಿ, ಸಂಶಯಿಸಿ ನೋಡುತ್ತಾನೆ. ಆಕೆಯ ಶುಭ್ರ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆಯ ಹಚ್ಚಿ ವ್ಯಂಗ್ಯವಾಡುತ್ತಾನೆ. ತನ್ಮೂಲಕ ತನ್ನ ವ್ಯಕ್ತಿತ್ವದ ಕಪ್ಪುತನವನ್ನು ಪ್ರದರ್‍ಶಿಸುತ್ತಾನೆ. ಆತನ ಈ ಎಲ್ಲ ಪ್ರಯಾಸಗಳು ಹೆಣ್ಣಿನ ಏಳ್ಗೆಯನ್ನು ದಮನಿಸುವ ನಿಟ್ಟಿನಲ್ಲಿಯೇ ನಡೆಯುತ್ತವೆ. ಈ ಪ್ರಯತ್ನದಲ್ಲಿ ಆತನ ಸ್ವಂತ ಕ್ರೀಯಾಶೀಲತೆ ನಾಶವಾಗುವುದು. ಆದರೆ ಅದನ್ನು ಲೆಕ್ಕಿಸದೇ ಹೆಣ್ಣಿನ ಏಳ್ಗೆಗೆ ಕೈಕೈ ಹೊಸೆದುಕೊಳ್ಳುವವರೇ ಹೆಚ್ಚು. ಆದರೆ ಇದಕ್ಕೆ ಅಪವಾದಗಳಿದೆ. ಪ್ರತಿ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುವಂತೆ ಪ್ರತಿ ಯಶಸ್ವಿ ಮಹಿಳೆಯ ಹಿಂದೆ ಕೂಡಾ ಪುರುಷನಿದ್ದೇ ಇರುತ್ತಾನೆ.

ಸ್ತ್ರೀ ಗಂಡಿನಂತೆ ಸ್ವತಂತ್ರ ವ್ಯಕ್ತಿತ್ವ ಹೊಂದುವುದು ಸಂವಿಧಾನವೇ ನೀಡಿದ ಹಕ್ಕು. ಆಕೆಗೆ ಆತನಿಗಿರುವಂತೆ ಎಲ್ಲ ರೀತಿಯ ಸ್ವಾತಂತ್ರ್ಯವೂ ಇದೆ. ಆದರೆ ಸಮಾಜದ ಗೊಡ್ಡು ನಿಯಮಗಳು ಆಕೆಯನ್ನು ಕಟ್ಟಳೆಗಳ ಸರಪಳಿಯಿಂದ ಬಿಗಿದು ಹರಿದಾಡದಂತೆ ಮಾಡುತ್ತಲೇ ಇರುತ್ತವೆ. ಇಂದಿನ ಆಧುನಿಕ ಜಗತ್ತಿನಲ್ಲಿ ಪುರುಷನಂತೆ ಹೆಣ್ಣು ಎಲ್ಲ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುತ್ತಿರುವಳು. ಅದಾಕೆಯ ಕಾರ್ಯಕ್ಷಮತೆ ಮತ್ತು ಹಕ್ಕು. ಹಾಗಿದ್ದು ಸಮಾಜ ಆಕೆಯ ಮೇಲೊಂದು ಬಾಣವನ್ನು ಸದಾ ಎಸೆಯುತ್ತಿರುವುದು. ಗಂಡಿಗೆ ಸಿಗುವ ಗೌರವದ ಸ್ಥಾನಮಾನಗಳು ಕುಟುಂಬದಲ್ಲಿಯೂ ಹೆಣ್ಣಿಗೆ ಸಿಗುವುದಿಲ್ಲ. ಆಕೆ ಆತನ ಬೇಡಿಕೆಗಳನ್ನು ಪೂರೈಸುವ ಸಾಧನವೆಂಬಂತೆ ಬಳಕೆಯಾಗುತ್ತಾಳೆಯೇ ಹೊರತು ಆಕೆಯ ವ್ಯಕ್ತಿಗತ ಹಿತಾಸಕ್ತಿಗಳಿಗೆ ಬೆಲೆ ಇರುವುದಿಲ್ಲ. ಹೆಣ್ಣಿನಲ್ಲಿ ತನ್ನ ಮಕ್ಕಳ ಗಂಡನ ಆಪ್ತರ ಉದ್ಧಾರದಲ್ಲಿ ಸುಖಕಾಣುವ ಮನೋಧರ್ಮವಿರುವುದರಿಂದ ಆಕೆ ಇವುಗಳನ್ನು ಕೀಳಾಗಿ ಭಾವಿಸದೇ ಇರಬಹುದು. ಆದರೂ ವೈಯಕ್ತಿಕ ಹಿನ್ನೆಲೆಯನ್ನು ಪರಿಭಾವಿಸಿದಾಗ ವಿದ್ಯಾವಂತ ಮಹಿಳೆ ಪುರುಷನಿಗೆ ಸಿಗುವ ಸ್ಥಾನಮಾನಗಳ ಕುರಿತು ಚಿಂತಿಸುತ್ತಾಳೆ. ಅಂತಹ ಮಾನ್ಯತೆಯನ್ನು ತಾನು ಪಡೆದುಕೊಳ್ಳುವತ್ತ ಶ್ರಮಿಸುತ್ತಿದ್ದಾಳೆ. ತಾಯ್ತನದ ಜವಾಬ್ದಾರಿಯನ್ನು ಒಬ್ಬ ಸ್ತ್ರೀ ಹೇಗೆ ಸಮರ್ಥವಾಗಿ ನಿಭಾಯಿಸಬಲ್ಲಳೋ ಅಂತೆಯೇ ಆಕೆ ತನ್ನ ಅಧಿಕಾರ ಕ್ಷೇತ್ರದಲ್ಲಿ, ಉದ್ಯೋಗರಂಗಗಳಲ್ಲಿ, ತನ್ನ ವ್ಯಾಪ್ತಿಯ ಎಲ್ಲ ಕಡೆಗಳಲ್ಲಿ ಸಮಂಜಸವಾಗಿ ಕಾರ್ಯನಿರ್ವಹಿಸಬಲ್ಲಳು.

ಇಂದಿನ ಉದ್ಯೋಗಸ್ಥ, ವಿದ್ಯಾವಂಥ ಮಹಿಳೆಯರು ತಾಯ್ತನವನ್ನು ನೇತ್ಯಾತ್ಮಕವಾಗಿ ನೋಡದೇ, ಹೆಣ್ಣಿನ ಸಹಜ ನೈಸರ್ಗಿಕ ಸಾಮರ್ಥ್ಯವಾದ ತಾಯ್ತನವನ್ನು ಆನಂದಿಸುತ್ತಾ ಉತ್ಕಟ ಜೀವನ ಪ್ರೀತಿಯನ್ನು ಬೆಳೆಸಿಕೊಳ್ಳುತ್ತ ಪುರುಷನಿಗೆ ಸರ್ವರೀತಿಯಲ್ಲೂ ಸಮಾನ ಸಾಮರ್ಥ್ಯಗಳ ಪ್ರತಿಬಿಂಬಿಸುತ್ತ ಮುನ್ನಡೆದರೆ ಮಹಿಳಾ ಜಗತ್ತು ಗಟ್ಟಿಗೊಳ್ಳಬಹುದು. ಆ ದಿಟ್ಟ ಹಾಗೂ ಧೃಡ ನಿರ್ಧಾರ ಮಹಿಳೆಯರದಾಗಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಂಜೀಗೆ

ಸಣ್ಣ ಕತೆ

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…